ಅಂಕಣ

“ರೋಬೋಟುಗಳಿಗೂ ನಾಗರೀಕತ್ವ ಪಡೆವ ಕಾಲ ಬಂದಾಯಿತು..”

ಮನುಷ್ಯ ತನ್ನ ಕೈಯ್ಯಲ್ಲಿ ಮಾಡಲಾಗದ ಕೆಲಸಗಳನ್ನು ನಿರ್ವಹಿಸಲು ಯಂತ್ರಗಳನ್ನು ಕಂಡುಹಿಡಿಯುತ್ತಾನೆ. ಚಕ್ರದಿಂದ ಹಿಡಿದು ವಿಮಾನದ ತನಕ ಮನುಷ್ಯನ ಆವಿಷ್ಕಾರಗಳು ಹಾಗು ಕಲ್ಪನೆಗಳು ಬಹಳ ಸುಂದರ. ಯಂತ್ರಗಳು ಮನುಷ್ಯನ ಶಕ್ತಿ ಸಾಮರ್ಥ್ಯಕ್ಕಿಂತ ದೊಡ್ಡ ಮಟ್ಟದ ಕೆಲಸಗಳನ್ನು ಮಾಡಬಲ್ಲವು. ಈ ಯಂತ್ರಗಳನ್ನು ಸೃಷ್ಟಿ ಮಾಡುವ ಮೊದಲು ನಿಜವಾಗಿಯೂ ಅದರ ಅವಶ್ಯಕತೆ ಇದೆಯೇ ಎಂಬುದನ್ನು ಸರಿಯಾಗಿ ಅರಿತುಕೊಳ್ಳುವುದು ಬಹಳ ಮುಖ್ಯ. ಒಂದಂತು ನಿಜ ಯಂತ್ರಗಳು ಮನುಷ್ಯನ ಹಲವಾರು ಕಲ್ಪನೆಗಳಿಗೆ, ಆಸೆಗಳಿಗೆ ಜೀವ ತುಂಬಿವೆ. ಶಕ್ತಿಯನ್ನು ಸರಿಯಾಗಿ ಉಪಯೋಗಿಸಿಕೊಳ್ಳುವ ವಿಧಾನ ತಿಳಿದುಕೊಂಡರೆ ಹಲವಾರು ವಿಸ್ಮಯಗಳನ್ನು ಸೃಷ್ಟಿಸಬಹುದು. ಜಗತ್ತಿಗೆ‌ ರೋಬೋಗಳ ಪರಿಚಯವಾದ ದಿನದಿಂದ ಇಂದಿನವರೆಗೂ ಹಲವಾರು ಹೊಸ ಅಲೋಚನೆಗಳಿಂದ ಕೂಡಿದ ತಂತ್ರಜ್ಞಾನಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಲೇ ಇವೆ. ಇದರಲ್ಲಿ ಬಹು ಮುಖ್ಯ ಹಾಗೂ ಭಯಂಕರವಾದ ವಿಷಯ ಅಥವಾ ತಂತ್ರಜ್ಞಾನವೇ ಕೃತಕ‌ ಬುದ್ಧಿವಂತಿಕೆ(Artificial Intelligence). ಈ ತಂತ್ರಜ್ಞಾನದಿಂದ ಮನುಷ್ಯನ ಒಳ್ಳೆಯ ಹಾಗೂ ಕೆಟ್ಟ ಆಸೆಗಳಿಗೆ ಜೀವ ಬರಲಿದೆ.

ಹ್ಯಾನ್’ಸನ್ ರೋಬೋಟಿಕ್ಸ್ ಸಂಸ್ಥೆ ತಯಾರು ಮಾಡಿರುವ ರೋಬೋಗೆ ಈಗಾಗಲೇ ಸೌದಿ ಅರೇಬಿಯಾ ಪೌರತ್ವವನ್ನು ನೀಡಿದೆ. ಪೌರತ್ವ ಪಡೆದ ಜಗತ್ತಿನ ಪ್ರಪ್ರಥಮ ರೋಬೋ ಹೆಸರೇನು ಗೊತ್ತಾ? ಸೋಫಿಯಾ…..

​​

ಸೋಫಿಯಾ ಹುಟ್ಟಿದ್ದೆಲ್ಲಿ? ಆಕೆಯ ವಿಶೇಷತೆಗಳಾದರು ಏನು? ಎಷ್ಟು ವರ್ಷ ಬದುಕಿರುತ್ತಾಳೆ? ಮನುಷ್ಯರಂತೆಯೇ ಭಾವನೆಗಳಿವೆಯೇ? ಅಷ್ಟಕ್ಕು ಸೋಫಿಯಾ ಮನುಷ್ಯನಿಗೆ ಉಪಕಾರಿಯೋ ಅಥವಾ ಅಪಾಯಕಾರಿಯೋ? ಸೋಫಿಯಾ ಬಗ್ಗೆ ತಿಳಿಯುವ ಮುನ್ನ, ರೋಬೋಟಿಕ್ಸ್ ಹಾಗೂ ಕೃತಕ ಬುದ್ಧಿವಂತಿಕೆಯ ಬಗ್ಗೆ ಒಂದಷ್ಟು‌ ಮಾಹಿತಿ ತಿಳಿದುಕೊಳ್ಳೋಣ. ಅಮೇಲೆ ಸೋಫಿಯಾ ಯಾರು ಎಂಬುದು ಸರಿಯಾಗಿ ಅರ್ಥವಾಗಬಹುದು.

 

ಮಾನವ ರೂಪಿ ರೋಬೋಟ್’ಗಳು ಜಗತ್ತಿಗೆ ಪರಿಚಯವಾಗಲು ಪ್ರಾರಂಭವಾಗಿದ್ದು 20 ಹಾಗೂ 21ನೇ ಶತಮಾನದಲ್ಲಾದರೂ, ಇವುಗಳ ಕಲ್ಪನೆಯ ಹಾದಿಯನ್ನು ಕೆದಕಿದರೆ ಇತಿಹಾಸದ ಹಲವಾರು ಪುಟಗಳು ತೆರೆದುಕೊಳ್ಳುತ್ತವೆ. ಮನುಷ್ಯನಂತೆ ಕೆಲಸಮಾಡಬಲ್ಲ, ಮನುಷ್ಯನನ್ನೇ ಹೋಲುವ ತದ್ರೂಪಿ ಯಂತ್ರಗಳ ಉಲ್ಲೇಖ ಹಲವಾರು ಪುಸ್ತಕಗಳಲ್ಲಿದೆ. ರೋಬೋಟ್’ಗಳ ಅವಿಷ್ಕಾರಕ್ಕೆ ರೆಕ್ಕೆ ಕೊಟ್ಟಿದ್ದು ಕೈಗಾರಿಕಾ ಕ್ರಾಂತಿ. ಜಗತ್ತಿಗೆ ವಿದ್ಯುತ್ ಪರಿಚಯವಾದಮೇಲಂತೂ ರೋಬೋಟ್ ತಂತ್ರಜ್ಞಾನಕ್ಕೆ ಜೀವ ಬಂದಂತಾಯಿತು. ಮೊದಮೊದಲಿಗೆ ಸಣ್ಣ ಪುಟ್ಟ ಮಾದರಿಯ ರೋಬೋಟ್’ಗಳನ್ನು ಕೈಗಾರಿಕಾ ಕ್ಷೇತ್ರದಲ್ಲಿ ಬಳಸಿಕೊಳ್ಳಲಾಯಿತು. ಈವತ್ತು ದೊಡ್ಡ ದೊಡ್ಡ ಕೈಗಾರಿಕಾ ಕ್ಷೇತ್ರಗಳನ್ನು ಬಹುತೇಕ ಆಳುತ್ತಿರುವುದು ಈ ರೋಬೋಟಿಕ್ಸ್ ತಂತ್ರಜ್ಞಾನವೇ. ತದನಂತರವೇ ರೋಬೋಗಳು ಮನುಷ್ಯನ ರೀತಿ ಇದ್ದರೆ ಹೇಗಿರಬಹುದು ಎಂಬ ಕಲ್ಪನೆ ಹುಟ್ಟಿಕೊಂಡಿದ್ದು.

 

ಅರಿಸ್ಟಾಟಲ್ ಉಪಕರಣಗಳ ಬಗ್ಗೆ ಮಾಡಿರುವ ಒಂದು ಉಲ್ಲೇಖ ಹಿಗಿದೆ, “If every tool, when ordered, or even of its own accord, could do the work that befits it..then there would be no need either of apprentices for the master workers or of slaves for the lords.” ಲಿಯೊನಾರ್ಡೋ ದ ವಿಂಚಿ 1495 ನೇ ಇಸವಿಯಲ್ಲಿ ಮನುಷ್ಯ ರೂಪವನ್ನು ಹೋಲುವ ರೋಬೋಟ್’ಗಳ ಚಿತ್ರವನ್ನು ಹಾಗೂ ಅವುಗಳನ್ನು ಹೇಗೆ ಸೃಷ್ಟಿಸಬಹುದೆಂಬ ಮಾಹಿತಿಯನ್ನು ಉಲ್ಲೇಖಿಸಿದ್ದಾನೆ. ಈ ರೋಬೋಟ್ ಎಂಬ ಹೆಸರಿಗೆ ಜನ್ಮ ನೀಡಿದ್ದು ಕರೆಲ್ ಚಪೆಕ್(Karel Capek). “Rossums Universal Robots” ಎಂಬ ನಾಟಕದಲ್ಲಿ ರೋಬೋಟ್ ಎಂಬ ಹೆಸರನ್ನು ಬಳಸಿದ್ದಾನೆ. ಈ ಕಲ್ಪನೆಯನ್ನೆ ಈಗಿನ ಹಾಲಿವುಡ್ ಚಿತ್ರಗಳಾದ ಟರ್ಮಿನೇಟರ್, ದ ಮ್ಯಾಟ್ರಿಕ್ಸ್ ಸೇರಿದಂತೆ ಹಲವಾರು ಚಲನಚಿತ್ರದಲ್ಲಿ ಬಳಸಿಕೊಂಡಿರುವುದು. ರೋಬೋಟಿಕ್ಸ್ ಎಂಬ ಹೆಸರನ್ನು ಮೊದಲು ಬಳಸಿದ್ದು ಲೇಖಕ ಅಸಿಮೊವ್(Asimov). ರೋಬೋಟ್’ಗಳ ಕುರಿತಾಗಿ ಈತ ಕೆಲ ನಿಯಮಗಳನ್ನು ತನ್ನ ಪುಸ್ತಕಗಳಲ್ಲಿ ಬರೆದಿದ್ದಾನೆ. ಅದಕ್ಕೆ “ಲಾ ಆಫ್ ರೋಬೋಟಿಕ್ಸ್ ” ಎಂಬ ಹೆಸರನ್ನೂ ಇಟ್ಟಿದ್ದಾನೆ. ಈತನ ಕಲ್ಪನೆಯಲ್ಲಿ ಹುಟ್ಟಿದ ರೋಬೋಟ್’ಗಳು, ಮನುಷ್ಯನಿಗೆ ತೊಂದರೆಮಾಡುವ ಸಂದರ್ಭಗಳು ಕಡಿಮೆ, ರೋಬೋಗಳು ಮನುಷ್ಯ ನೀಡುವ ಆಜ್ಞೆಗಳನ್ನಷ್ಟೇ ಪರಿಪಾಲಿಸುತ್ತವೆ, ರೋಬೋಟ್’ಗಳು ತಮ್ಮನ್ನು ತಾವು ರಕ್ಷಿಸಿಕೊಳ್ಳುವಷ್ಟು ಸಾಮರ್ಥ್ಯವನ್ನು ಹೊಂದಿರಬೇಕು ಮತ್ತು ಇದರಿಂದ ಮಾನವನಿಗೆ ಯಾವುದೇ ರೀತಿಯ ಅಪಾಯಗಳು ಆಗಬಾರದು. ಮನುಷ್ಯ ಕೆಲವೊಂದನ್ನು ಒಳ್ಳೆಯದಕ್ಕೆ ಮಾಡುತ್ತಾನೆ ಆದರೆ ಈ ಒಳ್ಳೆಯದು ಮತ್ತೊಬ್ಬ ಮನುಷ್ಯನ ಕೈಗೆ ಸಿಕ್ಕಿ ಕೆಟ್ಟದ್ದಾಗಿಬಿಡುವ ಸಂದರ್ಭಗಳು ಬಂದೇ ಬರುತ್ತದೆ. ಹೀಗೆ ಹಲವಾರು ಕಲ್ಪನೆಯಲ್ಲಿ ಹುಟ್ಟಿದ ರೋಬೋಗಳು ಮನುಷ್ಯನಿಗೆ ಉಪಕಾರಿಯಾಗಿರುತ್ತವೆಯೇ? ಇದಕ್ಕೆ ಉತ್ತರವನ್ನು ಕಾಲವೇ ಕೊಡುತ್ತದೆ ಅಷ್ಟೇ.

 

ಇನ್ನು ಈ ರೋಬೋಟ್’ಗಳಿಗೆ ಸಾಥ್ ನೀಡಿದ್ದು ಕೃತಕ ಬುದ್ಧಿವಂತಿಕೆ(Artificial Intelligence) ಎಂಬ ವಿಷಯ. ಮನುಷ್ಯನ ಯೋಚನಾ ಲಹರಿಯನ್ನು ಮಷೀನ್’ಗಳಲ್ಲಿ ಅಳವಡಿಸಿಕೊಳ್ಳುವ ಕನಸಿಗೆ ಜೀವ ತುಂಬಿದ್ದು ಈ ಕೃತಕ ಬುದ್ಧಿವಂತಿಕೆ. ಮನುಷ್ಯನಂತೆ ಯೋಚಿಸುವ, ಮನುಷ್ಯನಂತೆ ಕಲಿಯುವ ಸಾಮರ್ಥ್ಯವನ್ನು ಹೊಂದಿರುವ ಬುದ್ಧಿವಂತ ರೋಬೋಟ್’ಗಳ ತಯಾರಿಕೆಗೆ ಈ ಹೊಸ ತಂತ್ರಜ್ಞಾನ ಬಹಳಷ್ಟು ಉಪಯೋಗಕಾರಿ. ಈ ತಂತ್ರಜ್ಞಾನವನ್ನು ಸರಿಯಾಗಿ ಯಾವುದಕ್ಕೆ ಬೇಕೋ ಅದಕ್ಕೆ ಮಾತ್ರ ಬಳಸಿದರೆ ಉತ್ತಮ. ಒಂದೊಮ್ಮೆ ಅತಿಯಾಗಿ ಬಳಸಿದರೆ ಬಹಳಷ್ಟು ಕೆಟ್ಟ ಪರಿಣಾಮಗಳು ಕಟ್ಟಿತ್ತ ಬುತ್ತಿ. ಪ್ರಸ್ತುತ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಬಹಳಷ್ಟು ಸದ್ದು ಮಾಡುತ್ತಿರುವ ಕೃತಕ ಬುದ್ಧಿವಂತಿಕೆ ಭವಿಷ್ಯದಲ್ಲಿ ಹೊಸ ಹೊಸ ಆಯಾಮಗಳನ್ನು ಪಡೆದುಕೊಳ್ಳುವುದರಲ್ಲಿ ಯಾವುದೇ ಸಂದೇಹವಿಲ್ಲ.

 

ರೋಬೋ ಒಂದು ದೇಶದ ಇತರ ನಾಗರೀಕರಂತೆ ನಾಗರೀಕತ್ವವನ್ನು ಪಡೆಯುತ್ತದೆ ಎಂಬ ವಿಷಯವನ್ನು ನಂಬಲಸಾಧ್ಯ. ಆದರೆ ಇದು ಸತ್ಯ ಅಕ್ಟೋಬರ್ 25ನೇ ತಾರೀಖು ಸೌದಿ ಅರೇಬಿಯಾ ಒಂದು ರೋಬೋಟ್’ಗೆ ತನ್ನ ದೇಶದ ಸಂಪೂರ್ಣ ಪೌರತ್ವವನ್ನು ನೀಡುತ್ತದೆ. ಅವಳೇ ಸೋಫಿಯಾ, ಸುಂದರ ಮೊಗದ ಚೆಲುವೆ. ಅಯ್ಯೋ ಇವಳ್ಯಾರಪ್ಪ ಅಂತ ತುಂಬಾ ಯೋಚಿಸಬೇಡಿ. ಯಾಕೆಂದರೆ ಇದು ಒಂದು ರೋಬೋ ಅಷ್ಟೇ, ಹೆಣ್ಣಿನ ರೂಪ ಹೊತ್ತ ರೋಬೋ. ಅವಳೇ ಸೋಫಿಯಾ. ಸೋಫಿಯಾ ಹ್ಯಾನ್’ಸನ್ ರೋಬೋಟಿಕ್ಸ್ ಸಂಸ್ಥೆಯ ಕನಸಿನ ಕೂಸು. ಡೇವಿಡ್ ಹ್ಯಾನ್’ಸನ್, ಈ ರೋಬೋಟ್’ನ ಸೃಷ್ಟಿಕರ್ತ. ಸೋಫಿಯಾ ರೋಬೋಟ್ ಎಂದು ಪರಿಗಣಿಸಲು ಅಸಾಧ್ಯವಾಗುವಷ್ಟು ಮನುಷ್ಯನನ್ನೇ ಹೋಲುತ್ತಾಳೆ. ನಗುತ್ತಾಳೆ, ಮುಖದಲ್ಲಿ ಮನುಷ್ಯನಂತೆ ಹಲವಾರು ಮುಖಭಾವನೆಗಳನ್ನು ತೋರಿಸುತ್ತಾಳೆ. ನೀವು ಕೇಳುವ ಪ್ರಶ್ನೆಗಳಿಗೆ ಮನುಷ್ಯನಂತೆ ಅಲೋಚಿಸಿ ಉತ್ತರಿಸುತ್ತಾಳೆ. ಸೌದಿ ಅರೇಬಿಯಾ ಯಾಕೆ ಸೋಫಿಯಾಗೆ ತನ್ನ ದೇಶದ ಪೌರತ್ವವನ್ನು ನೀಡಿದೆ? ಸೋಫಿಯಾಗೆ ಸೌದಿ ಅರೇಬಿಯಾ ಯಾವ ರೀತಿಯ ನಾಗರೀಕತ್ವವನ್ನು ನೀಡಲಿದೆ ಎಂಬುದರ ಸಂಪೂರ್ಣ ಮಾಹಿತಿಯನ್ನು ತಿಳಿಸಿಲ್ಲ. ಒಂದಂತು ಖಚಿತ, ಅದೇನೇ ಇದ್ದರೂ ಈ ಸೌದಿ ಅರೇಬಿಯಾ ದೊಡ್ಡ ಮಟ್ಟದ ಯಾವುದೋ ವ್ಯವಹಾರಕ್ಕಾಗಿಯೇ ಮಾಡಿರುತ್ತದೆ. ಈಗಾಗಲೆ ಈ ಸೋಫಿಯಾ ಹಲವಾರು ಮಾಧ್ಯಮಗಳ ಮುಂದೆ ಕಾಣಿಸಿಕೊಂಡಿದ್ದಾಳೆ. ಹಲವಾರು ಪ್ರಶ್ನೆಗಳಿಗೆ ಉತ್ತರಿಸಿದ್ದಾಳೆ. ತಾನೂ ಮನುಷ್ಯರಂತೆ ಬದುಕಬಲ್ಲೆ ಎಂಬುದನ್ನು ಹೇಳುತ್ತಾಳೆ. ಅಚ್ಚರಿಯೇ ಸರಿ!!

 

ಮನುಷ್ಯನಂತೆ ಭಾವನೆಗಳನ್ನು ವ್ಯಕ್ತಪಡಿಸುವ ರೋಬೋಟ್ ನಿಜವಾಗಿಯೂ ಮನುಷ್ಯ ಮಾಡಿರುವ ಅತಿ ದೊಡ್ಡ ಮಟ್ಟದ ಸಾಧನೆ. ”ನನಗೆ ಕೋಪ ಬಂದರೆ ಅಥವಾ ಯಾವುದಾದರೂ ಕಾರಣದಿಂದ ನನಗೆ ಬೇಜಾರಾದರೆ ನಾನು ನಿಮಗೆ ತಿಳಿಸಬಲ್ಲೆ” ಎಂದು ಸೋಫಿಯಾ ಹೇಳುತ್ತಾಳೆ. ತನ್ನಷ್ಟೇ ಬುದ್ಧಿವಂತಿಕೆಯನ್ನು ಹೊಂದಿರುವ ಜನರ ಜೊತೆಗೆ ಇರುವುದು ಸೋಫಿಯಾಗೆ ಇಷ್ಟವಂತೆ. ಮನುಷ್ಯನ ಜೊತೆಗೆ ಬೆರೆತು ಕೆಲಸ ಮಾಡಿ ತನ್ನ ಭಾವನೆಗಳನ್ನು ಮಾನವನ ಜೊತೆ ಹಂಚಿಕೊಂಡು ತನ್ಮೂಲಕ ಮನುಷ್ಯನ ವಿಶ್ವಾಸವನ್ನು ಗಳಿಸಲು ಸೋಫಿಯಾ ಬಯಸುತ್ತಿದ್ದಾಳೆ. ಸೋಫಿಯಾ ಬ್ರಿಟನ್’ನ ನಟಿ ಹಾಗೂ ಮಾಡೆಲ್ ಆಡ್ರಿ ಹೆಪ್ಬರ್ನ್(Audrey Hepburn) ಮುಖವನ್ನು ಹೋಲುತ್ತಾಳೆ. ಈಕೆಯ ಸೃಷ್ಟಿಕರ್ತ ಡೇವಿಡ್ ಹ್ಯಾನ್’ಸನ್ ಡಿಸ್ನಿಯಲ್ಲಿ ಕೆಲಸ ಮಾಡುತ್ತಿರುವಾಗ ಮನುಷ್ಯ ರೂಪವನ್ನು ಹೋಲುವ ರೋಬೋಟ್’ಗಳ ಕುರಿತಾದ ಯೋಚನಾ ಲಹರಿಗಳು ಆತನ ತಲೆಯಲ್ಲಿ ಬರಲಾರಂಭಿಸುತ್ತವೆ. ತನ್ನ ಕೃತಕ ಬುದ್ಧಿವಂತಿಕೆಯನ್ನು ಬಳಸಿಕೊಂಡು ಮನುಷ್ಯನಿಗೆ ಉತ್ತಮ ಬದುಕನ್ನು ಕಂಡುಕೊಡಲು ಬಯಸುತ್ತೇನೆ ಎಂದು ಸೋಫಿಯಾ ಹೇಳುತ್ತಾಳೆ. ಸೋಫಿಯಾ ಪ್ರತೀ ದಿನ ಹೊಸತನ್ನು ಕಲಿಯುತ್ತಿದ್ದಾಳೆ, ಮನುಷ್ಯನಂತೆ. ಈಕೆ ಎಷ್ಟು ವರ್ಷ ಬದುಕಿರುತ್ತಾಳೆ? ಮನುಷ್ಯನಿಗೆ ಹೇಗೆ ಸಹಾಯ ಮಾಡುತ್ತಾಳೆ? ಮುಂದಿನ ದಿನಗಳಲ್ಲಿ ಗೊತ್ತಾಗುತ್ತದೆ ಅಷ್ಟೇ.

 

ಈವತ್ತು ಸೋಫಿಯಾ, ನಾಳೆ ಮತ್ತೊಂದು ರೋಬೋ. ಹೀಗೆ ಹಲವಾರು ರೋಬೋಗಳು ಜಗತ್ತಿಗೆ ಬಂದು ಮನುಷ್ಯನ ಒಡನಾಡಿಯಾಗಿ ಬದುಕುವ ದಿನಗಳು ಬಹಳಾ ದೂರವೇನೂ ಇಲ್ಲ. ಮನುಷ್ಯ ತನ್ನ ಬುದ್ಧಿವಂತಿಕೆಯನ್ನು ಕೃತಕವಾಗಿಸಿ ಮಷಿನ್’ಗಳಲ್ಲಿ ಅಳವಡಿಸುವಷ್ಟು ಮುಂದುವರೆದಿದ್ದಾನೆ ಎಂದರೆ ಮುಂದೊಂದು ದಿನ ಸೃಷ್ಟಿಕರ್ತನ ಮನಸ್ಸನ್ನು ಅರಿತುಕೊಳ್ಳುವ‌ ಪ್ರಯತ್ನವನ್ನು ಮಾಡಲೂಬಹುದು ಅಲ್ಲವೆ. ಎಲ್ಲವೂ ಸಾಧ್ಯ ಎಂಬ ವಿಷಯ ಇದರಿಂದ ತಿಳಿದುಬರುತ್ತದೆ. ಮನುಷ್ಯ ಅದೇನೆ ಮಾಡಿದರು ಮನುಕುಲಕ್ಕೆ ಹಾಗೂ ಪ್ರಪಂಚಕ್ಕೆ ಸಹಾಯವಾಗುವಂತಿದ್ದರೆ ಉತ್ತಮ. ತಾನು ಕಂಡುಹಿಡಿದ ತಂತ್ರಜ್ಞಾನಗಳು ತನ್ನನ್ನೆ ನುಂಗದಿರದಂತೆ ನೋಡಿಕೊಳ್ಳಬೇಕು ಅಷ್ಟೇ. ಸೋಫಿಯಾ ಹೇಗೆ ಮನುಷ್ಯನ ಜೊತೆ ಬೆರೆತು ಒಳ್ಳೆಯ ಕೆಲಸಗಳನ್ನು ಮಾಡುತ್ತಾಳೆ ಎಂಬುದನ್ನು ನೋಡಬೇಕಿದೆ ಅಷ್ಟೇ.

 

ಚಿತ್ರ: ಸಿ.ಎಸ್.ಬಿ.ಸಿ

Facebook ಕಾಮೆಂಟ್ಸ್

ಲೇಖಕರ ಕುರಿತು

Manjunath Madhyasta

ಹೆಸರು ಮಂಜುನಾಥ್ ಮಧ್ಯಸ್ಥ. ಓದಿದ್ದು ವಿಜ್ಞಾನ. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ವೃತ್ತಿ. ಸಾಹಿತ್ಯ ಹಾಗೂ ಅಧ್ಯಾತ್ಮದಲ್ಲಿ ಬಹಳ ಆಸಕ್ತಿ. ಬರೆಯೋದು ನೆಚ್ಚಿನ ಹವ್ಯಾಸ. ಭೌತಶಾಸ್ತ್ರ ಹಾಗೂ ಖಗೋಳ ಶಾಸ್ತ್ರ ನನ್ನ ನೆಚ್ಚಿನ ವಿಷಯಗಳು.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!