ಅಂಕಣ

ಸೃಷ್ಟಿಯೆ ವೃತ್ತಿ, ಬ್ರಹ್ಮಗೆ ಸೃಷ್ಟಿಯೇ ಪ್ರವೃತ್ತಿ !

ಮಂಕುತಿಮ್ಮನ ಕಗ್ಗ ೦೭೭:

ತನ್ನ ಹೊಳಹೊಳಪುಗಳ ನೆನೆನೆನೆದು ಮೈಮರೆತ |
ರನ್ನವೋ ಬ್ರಹ್ಮ; ನೋಡವನು ನಿಜಪಿಂಛ ||
ವರ್ಣದೆಣಿಕೆಯಲಿ ತನ್ನನೆ ಮರೆತ ನವಿಲವೊಲು |
ತನ್ಮಯನೊ ಸೃಷ್ಟಿಯಲಿ – ಮಂಕುತಿಮ್ಮ || ೦೭೭ ||

ನಾವು ಮಾಡುವ ಕೆಲಸದಲ್ಲಿ ನಮಗೆ ಆನಂದ, ಸಂತೃಪ್ತಿ ಸಿಗುವಂತಿದ್ದರೆ ಆ ಕೆಲಸ ಮಾಡಲು ಉತ್ಸಾಹ ತಂತಾನೆ ಒದಗಿಬರುತ್ತದೆ – ನಿರಂತರವಾಗಿ. ಆ ಕಾರ್ಯದ ಯಶಸ್ಸಿಗೆ ಬೇಕಾದ ತಲ್ಲೀನತೆ, ಬದ್ಧತೆ, ಪರವಶತೆ, ಆಪ್ಯಾಯತೆಗಳು ತಾವಾಗಿಯೆ ಉದ್ಭವಿಸಿ ಆ ಕಾರ್ಯದ ಮುನ್ನಡೆಗೆ ಸಹಕರಿಸುತ್ತವೆ. ಅಂತಾದ್ದೊಂದು ಬೃಹತ್ಕಾರ್ಯವಾದ ಸೃಷ್ಟಿಕ್ರಿಯೆಯ ರೂವಾರಿಯಾದ ಬ್ರಹ್ಮನೂ ಕೂಡ ಅದೇ ಮನೋಭಾವದಲ್ಲಿ ತನ್ನ ಕರ್ತವ್ಯವನ್ನು ಸಂತೃಪ್ತಿಯಿಂದ ನಿಭಾಯಿಸುತ್ತಿದ್ದಾನೆನ್ನುವುದು ಈ ಕಗ್ಗದ ಸಾರ. ನಾವು ಮಾಡುವ ಯಾವುದೇ ಕೆಲಸ ಕಾರ್ಯಗಳನ್ನು ಅದೇ ರೀತಿಯಲ್ಲಿ ನಿಭಾಯಿಸಿದರೆ ನಮಗೂ ಅವನದೇ ರೀತಿಯ ಸಂತೃಪ್ತಿ, ಯಶಸ್ಸು ಸಿಗುವುದೆನ್ನುವುದು ಇಲ್ಲಿನ ಮುಖ್ಯ ಸಂದೇಶ.

ತನ್ನ ಹೊಳಹೊಳಪುಗಳ ನೆನೆನೆನೆದು ಮೈಮರೆತ |
ರನ್ನವೋ ಬ್ರಹ್ಮ; …

ರನ್ನವೆಂದರೆ ರತ್ನ . ಮಂಕುತಿಮ್ಮ ಬೊಮ್ಮನನ್ನು ಅಮೂಲ್ಯವಾದ ರತ್ನಕ್ಕೆ ಹೋಲಿಸುತಿದ್ದಾನೆ. ತನ್ನ ಸೃಷ್ಟಿ ಕ್ರಿಯೆಯಲ್ಲಿ ಕಾಣಬರುತ್ತಿರುವ ವೈವಿಧ್ಯತೆ, ಅಗಾಧ ಸಾಧ್ಯತೆ ಮತ್ತದರ ಫಲಿತ ರೂಪುಗೊಳ್ಳುತ್ತಿರುವ ಬಗೆ ಕಂಡು ಪ್ರಯೋಗ ನಿರತ ವಿಜ್ಞಾನಿಯ ಹಾಗೆ ಮುದದಿಂದ ಪುಳಕಿತವಾಗಿಬಿಟ್ಟಿದೆಯಂತೆ ಬ್ರಹ್ಮನ ಮನಸು. ಇಲ್ಲಿ ಹೊಳಹೊಳಪು ಎನ್ನುವುದು ಯಶಸ್ವಿ ಫಲಿತಾಂಶ ನೀಡಿದವುಗಳೆಲ್ಲದರ ಸಮಷ್ಟಿತ ಸಂಕೇತ. ಅದರ ಹಾದಿಯಲ್ಲಿ ಅದೆಷ್ಟೊ ಸೋಲುಗಳು, ಅಡೆತಡೆಗಳು, ನಿರೀಕ್ಷೆಗನುಗುಣವಾಗಿಲ್ಲದ ಋಣಾತ್ಮಕ ಫಲಿತಗಳು ಕಾಡಿರಬಹುದಾದರು ಅಂತಿಮ ಫಲಿತದ ಒಟ್ಟಾರೆ ಧನಾತ್ಮಕ ಅಂಶಗಳು ಅವನಲ್ಲಿ ಸಂತೃಪ್ತಿಯ ಭಾವ ಮೂಡಿಸಿದೆಯಂತೆ. ತಲ್ಲೀನತೆಯಿಂದ ತನ್ನ ಕರ್ತವ್ಯದಲ್ಲಿ ಮುಳುಗಿದವನಿಗೆ ಅದು ಹೇಗೆ ಮೂಡಿಬರುತ್ತಿದೆಯೆಂದು ನೋಡಲೂ ಬಿಡುವಿರಲಿಲ್ಲವೇನೊ? ಆದರೀಗ ಅವನ್ನೆಲ್ಲ ಒಟ್ಟಾಗಿ ಅವಲೋಕಿಸುತ್ತಾ ‘ಇದು ತಾನೇ ಸೃಜಿಸಿದ ಅದ್ಭುತ, ವಿಸ್ಮಯವೇ? ತನ್ನ ಗಾರುಡಿಯ ಪ್ರತಿಫಲವೆ ?’ ಎಂಬ ಸೋಜಿಗದಲ್ಲಿ ಮೈಮರೆತುಬಿಟ್ಟಿದ್ದಾನಂತೆ – ತನ್ನ ಮನೋಹರ ಸೃಷ್ಟಿಗೆ ತಾನೇ ಪರವಶನಾಗುತ್ತ. ಅಗಾಧ ಕಾರ್ಯದ ಮಹಾನ್ ಶಿಲ್ಪಿಯಾಗಿದ್ದೂ , ಆ ಮುಗ್ದ ಮಗುವಿನ ಮನದ ಬ್ರಹ್ಮ ನಿಜಕ್ಕೂ ಅನರ್ಘ್ಯ ರತ್ನವೆ ಸರಿ ಎನ್ನುತ್ತ ಅವನ ಕಾರ್ಯಶ್ರದ್ಧೆ, ತಲ್ಲೀನತೆ, ಪರವಶತೆಯನ್ನು ಕೊಂಡಾಡುತ್ತಿದ್ದಾನಿಲ್ಲಿ ಮಂಕುತಿಮ್ಮ.

…………………ನೋಡವನು ನಿಜಪಿಂಛ ||
ವರ್ಣದೆಣಿಕೆಯಲಿ ತನ್ನನೆ ಮರೆತ ನವಿಲವೊಲು |
ತನ್ಮಯನೊ ಸೃಷ್ಟಿಯಲಿ – ಮಂಕುತಿಮ್ಮ ||

ನಿಜಪಿಂಛವೆಂದರೆ ತನ್ನ ನವಿಲುಗರಿ. ಇಲ್ಲಿ ಬ್ರಹ್ಮನ ಪರವಶತೆಯನ್ನು , ತಲ್ಲೀನತೆಯನ್ನು ತನ್ನದೇ ನವಿಲು ಗರಿಯ ಸೊಬಗಿಗೆ ಮೋಹಗೊಂಡು ಮೈಮರೆತು , ಗರಿ ಬಿಚ್ಚಿ ಅದರೆಲ್ಲಾ ವರ್ಣ ವೈವಿಧ್ಯ ವೈಭವವನ್ನು ನೋಡುತ್ತ, ಎಣಿಸುತ್ತ, ವಿಮರ್ಶಿಸುತ್ತ ಆನಂದದಲಿ ಕುಣಿದಾಡುವ ನವಿಲುಗೆ ಹೋಲಿಸಲಾಗಿದೆ. ನವಿಲು ಯಾರದೊ ಸಂತೃಪ್ತಿಗೆ ಗರಿಬಿಚ್ಚಿ ನರ್ತಿಸುವುದಿಲ್ಲ; ತನ್ನ ಮನಸಿಗೆ ಬೇಕಾದಾಗ, ತನ್ನದೇ ತೃಪ್ತಿಗೆ ತನ್ನ ಮನಸಾರೆ ಗರಿಗೆದರಿ ಕುಣಿದಾಡುತ್ತದೆ ಅಥವಾ ಗರಿ ಬೀಸಣಿಗೆಯನು ಬಿಚ್ಚಿ ತನ್ನದೇ ಸೌಂದರ್ಯಾಸ್ವಾದನೆಯಲ್ಲಿ ಮಗ್ನವಾಗಿ ಆನಂದಿಸುತ್ತದೆ. ಆಗ ತನ್ನ ವರ್ಣ ವೈವಿಧ್ಯತೆ, ರೂಪಾಡಂಭರ, ಸೊಗಸಿನ ವಿನ್ಯಾಸದ ಚಿತ್ತಾರಕ್ಕೆ ತಾನೇ ಹೆಮ್ಮೆಪಡುತ್ತ ಖುಷಿಯ ಅನುಭೂತಿಯಲ್ಲಿ ಮುಳುಗಿಹೋಗುತ್ತದೆ.

ಬ್ರಹ್ಮನ ಸೃಷ್ಟಿಕಾರ್ಯದ ಫಲಿತವೂ ಆ ನಿಜಪಿಂಛದ ಹಾಗೆ ವರ್ಣಮಯ, ವೈವಿಧ್ಯಮಯ ಅದ್ಭುತ ಲೋಕ. ಆ ನವಿಲಿನ ಹಾಗೆ ತನ್ನ ಸೃಷ್ಟಿಯ ಸೊಬಗಲ್ಲಿ ಕಳುವಾಗಿ ಅದರಲ್ಲೆ ಮುಳುಗಿಹೋದ ಬ್ರಹ್ಮನಿಗೆ ಅದರ ನಿರಂತರತೆಯನ್ನು ಕಾಪಾಡುವ, ಅಂತಿಮ ಅನಂತದತ್ತ ಮುನ್ನಡೆಸುವ ಹೊಣೆಯೂ ಇದೆಯಲ್ಲ? ಆ ಕಾರ್ಯವನ್ನು ಆಸ್ವಾದನೆಯ ನಡುವಲ್ಲೆ ಮುಂದುವರೆಸಿಕೊಂಡು ಹೋಗುತ್ತಿದ್ದಾನೆ. ಅಲ್ಲಿ ಎಷ್ಟರಮಟ್ಟಿಗಿನ ತಲ್ಲೀನತೆ, ಪರವಶತೆ ಇದೆಯೆಂದರೆ – ಅವನು ಯಾವಾಗ ಸೃಜಿಸುತ್ತಿದ್ದಾನೆ, ಯಾವಾಗ ಆಸ್ವಾದಿಸುತ್ತಿದ್ದಾನೆ ಎಂದು ಬೇರ್ಪಡಿಸಲೇ ಆಗದ ತಾದಾತ್ಮ್ಯಕ ಭಾವದಲ್ಲಿ. ತನ್ನ ಕೆಲಸದಲ್ಲಿ ತೃಪ್ತಿ, ಖುಷಿ ಕಂಡುಕೊಂಡಾಗ ವೃತ್ತಿಯೆ ಪ್ರವೃತ್ತಿಯಂತಾಗಿ ಹೊತ್ತುಗೊತ್ತಿಲ್ಲದ ಅಸಾಧಾರಣ ತಲ್ಲೀನತೆ, ತನ್ಮಯತೆ ಬಂದುಬಿಡುವುದು ಸಹಜ ತಾನೆ? ಬ್ರಹ್ಮನ ಸೃಷ್ಟಿ ಕಾರ್ಯವೈಖರಿಯೂ ಆ ಮಾದರಿಗೊಂದು ಉತ್ತಮ ನಿದರ್ಶನ ಎನ್ನಬಹುದು.

ಆ ಭಾವವನ್ನು ನಮ್ಮ ಕಾರ್ಯಗಳಲ್ಲಿ, ಯೋಜನೆಗಳಲ್ಲಿ (ಅದರಲ್ಲು ಪ್ರಾಜೆಕ್ಟಿನಂತಹ ಮಹಾತ್ಕಾರ್ಯಗಳಲ್ಲಿ) ಅಳವಡಿಸಿಕೊಂಡರೆ ನಾವೂ ಸಹ ಬ್ರಹ್ಮನ ರೀತಿಯ ಯಶಸ್ಸು, ಸಂತೃಪ್ತಿಯನ್ನು ಕಾಣಲು ಸಾಧ್ಯ. ಸೃಷ್ಟಿಯಂತಹ ಸಂಕೀರ್ಣ ಕಾರ್ಯದಲ್ಲೆ ಇದು ಸಾಧ್ಯವಾಗುವುದಾದರೆ ಮಿಕ್ಕೆಲ್ಲ ಕಾರ್ಯವೂ ಅದರ ಮುಂದೆ ಸಣ್ಣದೆ ಸರಿ. ಒಟ್ಟಾರೆ ಆ ತಲ್ಲೀನತೆ, ತನ್ಮಯತೆ, ಪರವಶತೆಯ ಮನೋಭಾವದ ಭೂಮಿಕೆ ಯಶಸ್ಸಿನ ಹಾದಿಗಿಟ್ಟ ಮೊದಲ ಮೆಟ್ಟಿಲೆನ್ನಲಡ್ಡಿಯಿಲ್ಲ. ಆ ಸಾರ ಸಂದೇಶವೆ ಈ ಕಗ್ಗದಲ್ಲಿದೆಯೆಂದು ನನ್ನ ಗ್ರಹಿಕೆ.

#ಕಗ್ಗಕೊಂದು_ಹಗ್ಗ
#ಕಗ್ಗ_ಟಿಪ್ಪಣಿ

Facebook ಕಾಮೆಂಟ್ಸ್

ಲೇಖಕರ ಕುರಿತು

Nagesha MN

ನಾಗೇಶ ಮೈಸೂರು : ಓದಿದ್ದು ಇಂಜಿನಿಯರಿಂಗ್ , ವೃತ್ತಿ - ಬಹುರಾಷ್ಟ್ರೀಯ ಸಂಸ್ಥೆಯೊಂದರಲ್ಲಿ.  ಪ್ರವೃತ್ತಿ - ಪ್ರಾಜೆಕ್ಟ್ ಗಳ ಸಾಂಗತ್ಯದಲ್ಲೆ ಕನ್ನಡದಲ್ಲಿ ಕಥೆ, ಕವನ, ಲೇಖನ, ಹರಟೆ ಮುಂತಾಗಿ ಬರೆಯುವ ಹವ್ಯಾಸ - ಹೆಚ್ಚಾಗಿ 'ಮನದಿಂಗಿತಗಳ ಸ್ವಗತ' ಬ್ಲಾಗಿನ ಅಖಾಡದಲ್ಲಿ . 'ಥಿಯರಿ ಆಫ್ ಕನ್ಸ್ ಟ್ರೈಂಟ್ಸ್' ನೆಚ್ಚಿನ ಸಿದ್ದಾಂತಗಳಲ್ಲೊಂದು. ಮ್ಯಾನೇಜ್ಮೆಂಟ್ ಸಂಬಂಧಿ ವಿಷಯಗಳಲ್ಲಿ ಹೆಚ್ಚು ಆಸಕ್ತಿ. 'ಗುಬ್ಬಣ್ಣ' ಹೆಸರಿನ ಪಾತ್ರ ಸೃಜಿಸಿದ್ದು ಲಘು ಹರಟೆಗಳ ಉದ್ದೇಶಕ್ಕಾಗಿ. ವೈಜ್ಞಾನಿಕ, ಆಧ್ಯಾತ್ಮಿಕ ಮತ್ತು ಸೈದ್ದಾಂತಿಕ ವಿಷಯಗಳಲ್ಲಿ ಆಸ್ಥೆ. ಸದ್ಯದ ಠಿಕಾಣೆ ವಿದೇಶದಲ್ಲಿ. ಮಿಕ್ಕಂತೆ ಸರಳ, ಸಾಧಾರಣ ಕನ್ನಡಿಗ

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!