ಅಂಕಣ

ಬೊಂಬಾಯಿಯ ಬಿಂಬಗಳು!

ನಮ್ಮ ದೇಶದ ಹಲವಾರು ಮಹಾನಗರಗಳ ಪೈಕಿ ಮುಂಬೈಯೂ ಒಂದು. ಪಟ್ಟಣಗಳ ಉಡಿಯೊಳಗೆ ಸೇರಿಕೊಂಡು ಬಿಡುವುದೆಂದರೆ ಜನರಿಗೋ ಒಂಥರಹದ ಮೋಹ. ಹೀಗೆ ತನ್ನೊಳಗೆ ಎಲ್ಲರನ್ನೂ ಬರಸೆಳೆದುಕೊಂಡು ಬೆಳೆಯುತ್ತಿರುವ ನಗರದ ಉದರದೊಳಗೆ ಅಡಗಿರುವ ಕಥೆಗಳು, ಹರಡಿಕೊಂಡಿರುವ ಬಿಂಬಗಳಂತೂ ಒಂದಕ್ಕಿಂತ ಒಂದು ಭಿನ್ನ ಹಾಗೂ ವೈಶಿಷ್ಟ್ಯಪೂರ್ಣ. ಮುಂಬೈಯೆಂದರೆ ಕೌತುಕಗಳ ಆಗರ, ಜನರನ್ನು ಸೆಳೆಯುವ ಮಾಯಕದಂಥ ತಾಣ ಎಂಬ ಅಭಿಪ್ರಾಯಕ್ಕಷ್ಟೇ ಪಕ್ಕಾಗುವವರ ನಡುವೆಯೇ ಮುಂಬೈಯ ಹೀಗೊಂದಷ್ಟು ಕಥೆಗಳು ನಮ್ಮನ್ನು ತಟ್ಟದೇ ಇರಲಾರದು.

ಮನುಷ್ಯನ ಆಸೆಗಂತೂ ಯಾವುದೇ ಇತಿಮಿತಿ ಇಲ್ಲವೇ ಇಲ್ಲ. ಎಲ್ಲ ಎಚ್ಚರಿಕೆಗಳನ್ನೂ ಮೀರಿ ತಮ್ಮ ಆಸ್ತಿ ಪಾಸ್ತಿಯನ್ನು ಹೆಚ್ಚಿಸಿಕೊಳ್ಳುವ ಪರಿಯ ಬಗ್ಗೆ ಯೋಚಿಸುತ್ತಲೇ ಇರುತ್ತಾರೆ. ಅದಕ್ಕಾಗಿಯೇ ಅಲ್ಲವೇ ಹಾಸಿಗೆ ಇದ್ದಷ್ಟೇ ಕಾಲು ಚಾಚು ಎಂಬ ಮಾತೊಂದು ಜನಜನಿತವಾಗಿದ್ದು. ಆದರೆ ಅದನ್ನು ಮುಂಬೈಯ ಮಟ್ಟಿಗೆ ಕೊಠಡಿಯಲ್ಲಿ ಜಾಗ ಇರುವಷ್ಟೇ ಹಾಸಿಗೆ ಹಾಸು ಎಂದು ಬದಲಿಸಬಹುದೇ ಹೆಚ್ಚು ಸೂಕ್ತ! ಆಕಾಶಮುಖಿಯಾದ ಬೆಳವಣಿಗೆಯ ಪ್ರತೀಕವೋ ಎಂಬಂತೆ ಬಹುಮಹಡಿಯ ಕಟ್ಟಡಗಳು ಗಗನವನ್ನು ಚುಂಬಿಸಲು ಹಾತೊರೆಯುತ್ತಿರುವ ನಡುವೆಯೂ ಚಾಲಿನ ಪುಟ್ಟ ಪುಟ್ಟ ಕೋಣೆಗಳಲ್ಲೂ ಒತ್ತೊತ್ತಾಗಿ ವಾಸಿಸುವ ಜನರು ಬದುಕಿನ ಪಟ್ಟುಗಳನ್ನು ಅರಗಿಸಿಕೊಂಡಂತೆ ವಾಸಿಸುತ್ತಿರುವುದು, ಅದರಲ್ಲೇ ತಕ್ಕ ಮಟ್ಟಿಗೆ ತೃಪ್ತರಾಗುತ್ತಿರುವುದು ನಿಜಕ್ಕೂ ಸೋಜಿಗವೆನಿಸುತ್ತದೆ. ವಿಶಾಲ ಅವಕಾಶದಲ್ಲಿ ಬದುಕು ಸಾಗಿಸುತ್ತಾ ಎಲ್ಲದರಲ್ಲೂ ಕೊರತೆಯಷ್ಟೇ ಕೊರೈಸುವವ ಅತೃಪ್ತರಿಗೆ ಇಲ್ಲಿನ ಬದುಕು ಕಲಿಸುವ ಪಾಠ ಬಲು ಪರಿಣಾಮಕಾರಿಯೇ ಸರಿ.

ಮುಂಬೈಯಿಗರ ಬದುಕು ಹೊರಳುವುದೇ ಹಳಿಗಳ ಮೇಲೆ. ಹಳ್ಳಿ ಹಳ್ಳಿಗಳಿಂದ ಬಂದು ಈ ನಗರದಲ್ಲಿ ಬದುಕು ಕಟ್ಟಿಕೊಳ್ಳಬೇಕೆಂದರೆ ಮತ್ತು ಅದು ಹಳ್ಳಹಿಡಿಯದಂತೆ ಕಾಯ್ದುಕೊಳ್ಳಬೇಕೆಂದರೆ ಹಳಿಯ ಮೇಲೆ ಸಾಗಲೇಬೇಕು. ಬಹುತೇಕರ ಪಾಲಿಗೆ ಅದು ದಿನ ನಿತ್ಯದ ಗೋಳಾಟವೇ ಸರಿ. ತಮ್ಮ ಜೀವನ ಹಳಿತಪ್ಪದಂತೆ ನಿತ್ಯ ಏಗುವವರ ಇವರಿಗೆ ಹಳಿಯಲ್ಲಿ ಉಂಟಾಗುವ ಸಣ್ಣ ವ್ಯತ್ಯಯವೂ ದೊಡ್ಡ ಹಳಹಳಿಕೆಗೆ ಕಾರಣವಾಗಿ ಬಿಡುತ್ತದೆ. ಅಲ್ಲಿ ರೈಲು ಬಂಡಿ ಓಡದೇ ನಿಂತು ಬಿಟ್ಟರೆ ಜನರ ಜೀವನದ ಚಕ್ರವೂ ನಿಶ್ಚಲವಾಗಿಬಿಡುತ್ತದೆ. ಮಳೆಗೆ ಮುನಿಸಿಕೊಂಡು ಉಗಿಬಂಡಿ ಹೊಗೆಯುಗುಳದೆ ನಿಂತುಬಿಟ್ಟರೆ ಜನರು ಎದುರಿಸುವ ಗೋಳಾಟ ಹೇಳತೀರದು.  ರೈಲಿನ ಶಬ್ಧವಿಲ್ಲದಿದ್ದರೆ ಅಲ್ಲಿ ಎಲ್ಲವೂ ಸ್ತಬ್ಧವೆಂದರೆ ಅತಿಶಯದ ಮಾತಾಗದು.

‘ಡಬ್ಬಾ’ ಎಂದರೆ ಕಾರ್ಯಕ್ಕೆಬಾರದ್ದು ಎಂದು ಷರಾ ಬರೆದುಬಿಡುತ್ತೇವೆ. ಆದರೆ ಇಲ್ಲಿ ಡಬ್ಬಾಕ್ಕೂ ಪ್ರಾಧಾನ್ಯತೆಯಿದೆ. ಅದಕ್ಕೆ ಅಂತಹದ್ದೊಂದು ಮಾನ್ಯತೆ ತಂದುಕೊಟ್ಟಿದ್ದು ಡಬ್ಬಾವಾಲಾಗಳು. ಎಲ್ಲರೂ ತಮ್ಮ ತಮ್ಮ ಊಟದ ಡಬ್ಬಿಗಳ ಬಗ್ಗೆಯೇ ಎಚ್ಚರಿಕೆವಹಿಸಿದರೆ ಇವರು ಮಾತ್ರ ನಿತ್ಯ ಬೇರೆಯವರ ಊಟದ ಡಬ್ಬಿಗಳನ್ನು ಹೊರುವವರು. ಇತರರ ಹೊಟ್ಟೆ ಮೇಲೆ ತಣ್ಣೀರು ಬಟ್ಟೆ ಎಳೆದು ಹೊಟ್ಟೆತುಂಬಿಸಿಕೊಳ್ಳುವವರ ನಡುವೆ ಇವರು ಇನ್ನೊಬ್ಬರ ಹೊಟ್ಟೆತುಂಬಿಸಿ ತಮ್ಮ ಹೊಟ್ಟೆಗೆ ಬೇಕಾದ ತುತ್ತನ್ನು ನ್ಯಾಯಯುತವಾಗಿ ಗಳಿಸಿಕೊಳ್ಳುವವರು.

“ಸಮಯ ಹಾಗೂ ಸಮುದ್ರದ ಅಲೆ ಯಾರಿಗೂ ಕಾಯುವುದಿಲ್ಲ” ಎನ್ನುವುದೊಂದು ಸುಪ್ರಸಿದ್ಧ ನಾಣ್ಣುಡಿ. ಅದೇ ಕೆಟಗರಿಗೆ ಸೇರುವ ಇನ್ನೊಂದು ಅಂಶವೆಂದರೆ ಮುಂಬೈಯ ಲೋಕಲ್ ಟ್ರೈನ್. ಇವುಗಳೂ ಅಷ್ಟೇ ಯಾರಿಗೂ ಕಾಯುವುದಿಲ್ಲ. ಅವುಗಳ ನಿರ್ಧರಿತ ಸಮಯದಂತೆ ಅವು ಚಲಿಸುತ್ತಲೇ ಇರುತ್ತಲೆ. ತಪ್ಪಿದರೆ, ಟ್ರೈನ್ ಹೋದ ಮೇಲೆ ಟಿಕೆಟ್ ತೆಗೆದುಕೊಂಡ ಪೆದ್ದರಾಗುವುದಂತೂ ಶತಃಸಿದ್ಧ. ಬಲಶಾಲಿಯಷ್ಟೇ ಬದುಕಬಲ್ಲ (survival of the fittest) ಎಂಬ ನಿಯಮ ಇಲ್ಲೂ ಲಾಗೂ ಆಗುತ್ತದೆ.  ಮಾತಿನಂತೆಯೇ ಜನಜಂಗುಳಿಯಲ್ಲಿ ತೂರಿಕೊಂಡವನಷ್ಟೇ ರೈಲಿನೊಳಗೆ ಸೇರಿಕೊಂಡು ಪ್ರಯಾಣ ಮುಂದುವರಿಸಬಹುದು ಇಲ್ಲವಾದರೆ ಮುಂದಿನ ಟ್ರೈನ್ ಹಿಡಿಯಬೇಕಷ್ಟೇ!! ಅಲ್ಲೂ ಮತ್ತೆ ಇದೇ ನಿಯಮ ಅನ್ವಯ.

ಮುಂಬೈಗೂ ಬೆಂಗಳೂರಿಗೂ ಇರುವ ಒಂದು ಮುಖ್ಯ ವ್ಯತ್ಯಾಸವೆಂದರೆ ಮುಂಬೈಯಲ್ಲಿ ಎಲ್ಲೇ ಹೋದರೂ ಬಹುಪಾಲು ಹಿಂದಿ ಮಾತನಾಡುವವರೇ ಸಿಗುತ್ತಾರೆ ಆದರೆ ಅದೇ ಬೆಂಗಳೂರಿನಲ್ಲಿ ಕನ್ನಡವೊಂದನ್ನು ಬಿಟ್ಟು ಉಳಿದೆಲ್ಲ ಭಾಷೆಗಳೂ ಕಿವಿಗೆ ಬೀಳುತ್ತವೆ.

ಓವರ್ ಡೋಸ್: ಮಾತು ಮಾತಿಗೂ ಬೈಯ್ಯಾ ಬೈಯ್ಯಾ ಎಂದು ಸಂಭೋದಿಸುವುದಕ್ಕೇ ಇರಬೇಕು ಅದು ಮುಂಬೈ ಎಂದು ಕರೆಸಿಕೊಳ್ಳುತ್ತಿರುವುದು.

 

Facebook ಕಾಮೆಂಟ್ಸ್

ಲೇಖಕರ ಕುರಿತು

Sandesh H Naik

ಉಡುಪಿ ಜಿಲ್ಲೆ, ಕುಂದಾಪುರ ತಾಲೂಕಿನ ಹಕ್ಲಾಡಿ ಹುಟ್ಟೂರು. ಪ್ರಸ್ತುತ ಶಿಕ್ಷಕರಾಗಿ ಕಾರ್ಯನಿರ್ವಹಣೆ.  ಬರವಣಿಗೆ ಮೆಚ್ಚಿನ ಪ್ರವೃತ್ತಿಗಳಲ್ಲೊಂದು.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!