Featured ಅಂಕಣ

ಕರ್ನಾಟಕದ ಇತಿಹಾಸದಲ್ಲಿ ಅಳಿಸಲಾರದ ಕಪ್ಪುಚುಕ್ಕಿ: ಶ್ರೀರಂಗಪಟ್ಟಣದ ಯಾತನಾಶಿಬಿರ

ಟಿಪ್ಪು ಮತಾಂಧನಾಗಿದ್ದ ಎಂಬುದಕ್ಕೆ ಸಾಕ್ಷಿ ಏನಿದೆ ಎಂದು ಮೈಸೂರಿನ ಮಾಜಿ ಸಂಸದ ಎಚ್. ವಿಶ್ವನಾಥ್ ಕೇಳಿದ್ದಾರೆ. ಹಿಟ್ಲರ್‍ನ ಬಗ್ಗೆ ಇಂಥದ್ದೇ ಒಂದು ಜೋಕ್ ಇದೆ. ಹಿಟ್ಲರ್‍ನಿಗೆ ವೈರಿಗಳಿರಲಿಲ್ಲ. ಯಾಕೆಂದರೆ ಅವರೆಲ್ಲರನ್ನೂ ಆತ ಪರಿಹರಿಸಿಬಿಟ್ಟಿದ್ದ – ಎಂದು. ವಿಶ್ವನಾಥ್ ಅವರು ಎತ್ತಿರುವ ಪ್ರಶ್ನೆ ಈ ನಗೆಹನಿಗೆ ಬಹು ಹತ್ತಿರದ್ದು. ತನ್ನ ವಿರೋಧಿಗಳನ್ನೂ ಅವರ ಧಾರ್ಮಿಕ ಪ್ರಾರ್ಥನಾ ಮಂದಿರಗಳನ್ನೂ ಸಂಪೂರ್ಣವಾಗಿ ನಾಮಾವಶೇಷ ಮಾಡಿದ ಟಿಪ್ಪು, ತಾನು ಕೊಂದು ಹಾಕಿದ ಜನರ ಸಂಖ್ಯೆಯನ್ನೂ, ಕೆಡವಿದ ದೇವಸ್ಥಾನ ಮತ್ತು ಇಗರ್ಜಿಗಳ ಪಟ್ಟಿಯನ್ನೂ ತನ್ನವರಿಂದಲೇ ಬರೆಸಿಟ್ಟಿದ್ದಾನೆ. ಸಾಕ್ಷಿ ಏನಿದೆ ಎಂದು ಕೇಳುವವರು ಆ ದಾಖಲೆಗಳನ್ನಾದರೂ ಒಮ್ಮೆ ಕಣ್ಣಾಡಿಸಿ ನೋಡಬೇಕಲ್ಲವೆ? ಟಿಪ್ಪು ಮಲಬಾರ್ ಕ್ರೈಸ್ತರು, ನಂಬೂದಿರಿಗಳು, ಮಂಡಯಂ ಅಯ್ಯಂಗಾರರು, ಮದಕರಿ ನಾಯಕರು – ಹೀಗೆ ಒಂದೊಂದು ಸಮುದಾಯದ ಮೇಲೂ ನಡೆಸಿದ ಹಿಂಸಾಚಾರಗಳನ್ನು ಇಟ್ಟುಕೊಂಡು ಒಂದೊಂದು ದೀರ್ಘ ಅಧ್ಯಾಯಗಳನ್ನೇ ಬರೆಯಬಹುದು. ಪ್ರಸ್ತುತ ಲೇಖನದಲ್ಲಿ ಆತ ಮಂಗಳೂರು ಕ್ರೈಸ್ತರ ಮೇಲೆ ನಡೆಸಿದ ದಬ್ಬಾಳಿಕೆಯ ವಿವರಗಳನ್ನು ಮಾತ್ರ ಚರ್ಚಿಸಲಾಗಿದೆ.

ಮಂಗಳೂರು ಕ್ರಿಸ್ತಪೂರ್ವದಿಂದಲೂ ಭಾರತ ಮತ್ತು ವಿದೇಶಗಳ ನಡುವಿನ ಪ್ರಮುಖ ವ್ಯಾಪಾರೀಕೇಂದ್ರವಾಗಿತ್ತು ಎಂಬುದು ಇತಿಹಾಸದಿಂದ ತಿಳಿದು ಬರುತ್ತದೆ. ಇಲ್ಲಿಗೆ ಮೊತ್ತಮೊದಲ ಬಾರಿಗೆ ಬಂದಿಳಿದು ವ್ಯವಹಾರ ಕುದುರಿಸಿಕೊಂಡವರು ಯಹೂದ್ಯರು. ಅವರು ಇಲ್ಲಿ ವ್ಯಾಪಾರ ವಹಿವಾಟು ನೋಡಿಕೊಂಡದ್ದಷ್ಟೇ ಅಲ್ಲ, ಇಲ್ಲಿನ ಸ್ಥಳೀಯ ಹೆಂಗಸರನ್ನು ಮದುವೆಯೂ ಆಗಿ ವೈವಾಹಿಕ ಸಂಬಂಧಗಳನ್ನು ಬೆಳೆಸಿಕೊಂಡರು ಎಂದು ಇತಿಹಾಸ ಹೇಳುತ್ತದೆ. ಕ್ರಿಸ್ತನ ನೇರಶಿಷ್ಯರಲ್ಲೊಬ್ಬನಾದ ಥಾಮಸ್ ಕ್ರಿಸ್ತಶಕ 52ರಷ್ಟು ಹಿಂದೆಯೇ ಕೇರಳಕ್ಕೆ ಬಂದಿಳಿದು ಮತಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡ. ಕೇರಳದ 32 ನಂಬೂದಿರಿ ಬ್ರಾಹ್ಮಣ ಕುಟುಂಬಗಳನ್ನು ಕ್ರೈಸ್ತಮತಕ್ಕೆ ತಂದ ಥಾಮಸ್ ತನ್ನ ಜೀವಿತಾವಧಿಯಲ್ಲಿ 8,000 ಬ್ರಾಹ್ಮಣರನ್ನೂ 10,000 ಅನ್ಯಜಾತಿಯ ಜನರನ್ನೂ ಕ್ರೈಸ್ತರನ್ನಾಗಿ ಪರಿವರ್ತಿಸಿದನೆಂದು ಹೇಳುತ್ತಾರೆ. ಈತ ಪ್ರಚಾರ ಮಾಡಿದ ಸಿರಿಯನ್ ಕ್ರಿಶ್ಚಿಯಾನಿಟಿ ಕಾಲಕ್ರಮೇಣ ಮಂಗಳೂರಿಗೂ ಹಬ್ಬಿತು. ಅಂದರೆ ಕಡಿಮೆಯೆಂದರೂ 2000 ವರ್ಷಗಳಿಂದ ಮಂಗಳೂರಿನಲ್ಲಿ ಕ್ರೈಸ್ತಮತ ಅಸ್ತಿತ್ವದಲ್ಲಿದೆ ಎಂದು ಹೇಳಬಹುದು. ಈ ಎರಡು ಸಹಸ್ರಮಾನಗಳ ದೀರ್ಘಾವಧಿಯಲ್ಲಿ ಒಮ್ಮೆಯೂ ಒಂದೇ ಒಂದು ಕ್ರೈಸ್ತ ಪ್ರಾರ್ಥನಾ ಮಂದಿರ ಹಿಂದೂ ರಾಜರಿಂದ ದಾಳಿಗೊಳಗಾದ ಉದಾಹರಣೆ ಇಲ್ಲ ಎಂದರೆ ಇಲ್ಲಿನ ಹಿಂದೂಗಳ ಮತಸಹಿಷ್ಣುತೆಯನ್ನು ನಾವು ನೆನೆಯಬಹುದು.

ಮಂಗಳೂರನ್ನು ಹದಿನಾಲ್ಕನೇ ಶತಮಾನದವರೆಗೆ ಆಳುಪರು ಆಳಿದರು. 15ನೇ ಶತಮಾನದ ಮಧ್ಯಭಾಗದ ಹೊತ್ತಿಗೆ ಮಂಗಳೂರು ಮೈಸೂರು ಅರಸರ ಸುಪರ್ದಿಗೆ ಬಂತು. ವಿಜಯನಗರದ ರಾಜ ಎರಡನೇ ವೀರ ದೇವರಾಯನ ಪ್ರತಿನಿಧಿಯಾಗಿ ಮೈಸೂರಿನ ದೇವರಾಜ ಒಡೆಯರ್ ಮಂಗಳೂರನ್ನು ಆಳಿದರು. 1498ರಲ್ಲಿ ಭಾರತಕ್ಕೆ ಜಲಮಾರ್ಗ ಹುಡುಕಿಕೊಂಡ ಪೋರ್ಚುಗೀಸ್ ನಾವಿಕ ವಾಸ್ಕೋಡಗಾಮ, ಉಡುಪಿಯ ಮಲ್ಪೆಯ ಸಮೀಪದ ದ್ವೀಪವೊಂದರಲ್ಲಿ ತಂಗಿ ಅದನ್ನು ಸೈಂಟ್ ಮೇರೀಸ್ ದ್ವೀಪವೆಂದು ಕರೆದ. ಅಲ್ಲೊಂದು ಶಿಲುಬೆ ನೆಟ್ಟು ಮುಂದೆ ಹೋದ. ಅಂದಿನಿಂದಲೂ ಉಡುಪಿ-ಮಂಗಳೂರು ಭಾಗಗಳ ಮೇಲೆ ಕಣ್ಣು ನೆಟ್ಟಿದ್ದ ಪೋರ್ಚುಗೀಸರು ನಿರಂತರ ಪ್ರಯತ್ನ ಮುಂದುವರಿಸಿ 1520ರಲ್ಲಿ ಮಂಗಳೂರನ್ನು ವಶಪಡಿಸಿಕೊಂಡರು. ಆದರೆ ಮಂಗಳೂರಿನಲ್ಲಿ ಒಂದು ಗಟ್ಟಿಯಾದ ಹೆಜ್ಜೆಗುರುತನ್ನು ಮೂಡಿಸಲು ಪೋರ್ಚುಗೀಸರಿಗೆ ಸಾಧ್ಯವಾಗಲಿಲ್ಲ. 16ನೇ ಶತಮಾನವಿಡೀ ಅವರು ಚೌಟವಂಶದ ವೀರರಾಣಿ ಅಬ್ಬಕ್ಕನೊಡನೆ ಬಿಟ್ಟೂಬಿಡದೆ ಯುದ್ಧಗಳನ್ನು ಮಾಡಬೇಕಾಗಿ ಬಂತು. ಸುಮಾರು ನಲವತ್ತು ವರ್ಷಗಳಷ್ಟು ದೀರ್ಘಕಾಲ ಅಬ್ಬಕ್ಕ ಪೋರ್ಚುಗೀಸರು ಮಂಗಳೂರಿನ ನೆಲದ ಮೇಲೆ ಕಾಲಿಡದಂತೆ ತಡೆದಳು. ಆಕೆಯ ಕಾಲ ಮುಗಿಯುತ್ತಲೇ ಮಂಗಳೂರು ಅದಾಗಷ್ಟೇ ಭಾರತಕ್ಕೆ ಕಾಲಿಟ್ಟಿದ್ದ ಬ್ರಿಟಿಷರ ಕೈಯೊಳಗೆ ಬಂತು. ಪಾಶ್ಚಾತ್ಯರಿಗೆ ಭಾರತದ ಪಶ್ಚಿಮದ ಹೆಬ್ಬಾಗಿಲಿನಂತಿದ್ದ, ಆಯಕಟ್ಟಿನ ಸರ್ವಋತು ಬಂದರಾಗಿದ್ದ ಮಂಗಳೂರಿನ ಮೇಲೆ ಮೇಲುಗೈ ಸಾಧಿಸಲು ಪೋರ್ಚುಗೀಸರು, ಬ್ರಿಟಿಷರು, ಮೈಸೂರಿನ ಅರಸರು ಪ್ರಯತ್ನಿಸಿದರೆ ಅದನ್ನು ತಮ್ಮ ಕೈಯಲ್ಲೇ ಉಳಿಸಿಕೊಳ್ಳಲು ಚೌಟರು ಮೇಲಿಂದ ಮೇಲೆ ಯುದ್ಧಗಳನ್ನು ಮಾಡಬೇಕಾಗಿ ಬಂತು. ಮೈಸೂರು ಅರಸರನ್ನು ಒತ್ತೆಯಾಳುಗಳಂತೆ ನಡೆಸಿಕೊಂಡು ರಾಜ್ಯಾಡಳಿತವನ್ನು ತನ್ನ ಕೈಗೆ ತೆಗೆದುಕೊಂಡ ಹೈದರಾಲಿ ಮೈಸೂರು ಸಂಸ್ಥಾನವನ್ನು ವಿಸ್ತರಿಸುತ್ತ ಅತ್ತ ಸಿರಾ ಇತ್ತ ಬಿದನೂರುಗಳನ್ನು ಗೆದ್ದು, ಬಿದನೂರಿನ ಕೈಕೆಳಗಿದ್ದ ಮಂಗಳೂರು ಮತ್ತು ಮಲಬಾರ್‍ಗಳನ್ನು ವಶಕ್ಕೆ ಪಡೆದ. ಕ್ರಿಸ್ತಶಕ 1763ರಲ್ಲಿ ಮಂಗಳೂರು ಕೊನೆಗೂ ಹೈದರಾಲಿಯ ಉಡಿಗೆ ಬಿತ್ತು. ಅದಾಗಿ ಐದೇ ವರ್ಷಗಳಲ್ಲಿ ಮಂಗಳೂರನ್ನು ಬ್ರಿಟಿಷರು ಗೆದ್ದುಕೊಂಡರು. ಆ ವರ್ಷದ ಅಂತ್ಯಕ್ಕೆ ಹೈದರಾಲಿ ಮತ್ತು ಅವನ ಮಗ ಟಿಪ್ಪು ಬ್ರಿಟಿಷರೊಂದಿಗೆ ವೀರಾವೇಶದಿಂದ ಕಾದಾಡಿ ಮಂಗಳೂರನ್ನು ಮತ್ತೆ ತಮ್ಮ ಅಂಕೆಗೆ ತೆಗೆದುಕೊಂಡರು.

ಟಿಪ್ಪು ಧರ್ಮಸಹಿಷ್ಣುವಾಗಿದ್ದ; ಎಲ್ಲಾ ಮತ-ಪಂಥಗಳನ್ನೂ ಗೌರವಿಸುತ್ತಿದ್ದ ಎಂಬ ವಾದ ಮುಂದಿಡುವವರು ಮಂಗಳೂರಿನಲ್ಲಿ ಆತ ಕ್ರೈಸ್ತರ ಮೇಲೆ ನಡೆಸಿದ ದೌರ್ಜನ್ಯಕ್ಕೆ ಕೊಡುವ ಕಾರಣ: “ಅದು ಮತೀಯ ಕಾರಣಕ್ಕಾಗಿ ಟಿಪ್ಪು ಮಾಡಿದ ದೌರ್ಜನ್ಯ ಅಲ್ಲ. ಮಂಗಳೂರಿನ ಕ್ರೈಸ್ತರು ಬ್ರಿಟಿಷರಿಗೆ ಸಹಾಯ ಮಾಡುತ್ತಿದ್ದರು. ಬ್ರಿಟಿಷರಿಗೆ ಬೇಕಾದ ಆರ್ಥಿಕ ನೆರವು ನೀಡುತ್ತಿದ್ದರು. ಒಂದೆರಡಲ್ಲ; ಬರೋಬ್ಬರಿ 3,30,000 ರುಪಾಯಿಗಳನ್ನು ಬ್ರಿಟಿಷರಿಗೆ ಸಾಲವಾಗಿ ನೀಡಿದರು. ಹೀಗೆ ಭಾರತದೊಳಗಿದ್ದೂ ಬ್ರಿಟಿಷರಿಗೆ ಸಹಾಯ ಮಾಡಿದರೆಂಬ ಕಾರಣಕ್ಕೆ ಟಿಪ್ಪು ಕ್ರೈಸ್ತರಿಗೆ ಶಿಕ್ಷೆ ಕೊಟ್ಟ. ಇದು ಮತೀಯ ಎಂಬುದಕ್ಕಿಂತ ಹೆಚ್ಚಾಗಿ ರಾಜಕೀಯ ಕಾರಣವಿದ್ದ ಘಟನೆ”. ಹಾಗಾದರೆ, ಟಿಪ್ಪು ಕೇವಲ ಅಂತಹ ರಾಜಕೀಯ ವಿರೋಧಿಗಳನ್ನಷ್ಟೇ ಶಿಕ್ಷೆಗೆ ಗುರಿಪಡಿಸಬಹುದಿತ್ತು. ಅವರಿಗೆ ಕಠಿಣ ಶಿಕ್ಷೆ ವಿಧಿಸಬಹುದಾಗಿತ್ತು. ಯಾಕೆ ಇಡೀ ಪ್ರಾಂತ್ಯದ ಎಲ್ಲಾ ಕ್ರೈಸ್ತರನ್ನೂ ತನ್ನ ಗುರಿಯಾಗಿಸಿಕೊಂಡ? ಮಂಗಳೂರಿನ ಒಬ್ಬನೇ ಒಬ್ಬ ಕ್ರೈಸ್ತನೂ ತಪ್ಪಿಸಿಕೊಳ್ಳಲು ಅವಕಾಶವಾಗದಂತೆ ಯಾಕೆ ಭಸ್ಮ ಬುಧವಾರದಂತಹ ಧಾರ್ಮಿಕ ದಿನವನ್ನು ಆರಿಸಿಕೊಂಡ? ಯಾಕೆ 80,000ದಷ್ಟು ಸಂಖ್ಯೆಯ ಕ್ರೈಸ್ತರನ್ನು ಬಂಧಿಸಿದ? ಆ ಗುಂಪಿನಲ್ಲಿ ಹೆಂಗಸರು, ಮಕ್ಕಳು, ಅಶಕ್ತರು, ವೃದ್ಧರು ಎಲ್ಲರೂ ಇದ್ದರಲ್ಲ? ಈ ದೌರ್ಜನ್ಯವನ್ನು ರಾಜಕೀಯ ಕಾರಣಕ್ಕಾಗಿ ಎಂದು ಹೇಳಿ ತೇಲಿಸಿಬಿಡುವುದು ಸಾಧ್ಯವೇ? ಕ್ರೈಸ್ತ ಹೆಂಗಸರನ್ನು ಮನಸೋಇಚ್ಛೆ ಭೋಗಿಸಿದರಲ್ಲ? ತಮ್ಮ ಜನಾನಾಕ್ಕೆ ಸೇರಿಸಿಕೊಂಡರಲ್ಲ? ಅಧಿಕಾರಿಗಳ ಮಧ್ಯೆ ಆ ಹೆಂಗಸರನ್ನು ಭೋಗವಸ್ತುವಿನಂತೆ ಹಂಚಲಾಯಿತಲ್ಲ? ಈ ದೌರ್ಜನ್ಯಕ್ಕೂ ಸಿರಿಯಾದಲ್ಲಿ ಐಸಿಸ್, ಬೋಕೋ ಹರಾಮ್ ಮುಂತಾದ ಉಗ್ರಸಂಘಟನೆಗಳು ಮಾಡುತ್ತಿರುವ ಹಿಂಸಾಚಾರಕ್ಕೂ ಏನು ವ್ಯತ್ಯಾಸ ಇದೆ?

ಮೊದಮೊದಲು ಪೋರ್ಚುಗೀಸರನ್ನು ಶತ್ರುಗಳೆಂದು ಪರಿಗಣಿಸಿದ್ದ ಮೈಸೂರು ಸಂಸ್ಥಾನ ಬ್ರಿಟಿಷರ ಆಗಮನವಾದ ಮೇಲೆ, ಶತ್ರುವಿನ ಶತ್ರು ಮಿತ್ರ ಎಂಬ ಸೂತ್ರದಂತೆ ಬ್ರಿಟಿಷರ ಶತ್ರುಗಳಾದ ಪೋರ್ಚುಗೀಸರನ್ನು ಗೆಳೆತನದ ವಲಯಕ್ಕೆ ಬಿಟ್ಟುಕೊಂಡಿತು. ಹೈದರಾಲಿ ಮಂಗಳೂರು, ಮಲಬಾರ್ ಪ್ರಾಂತ್ಯಗಳಲ್ಲಿ ಬೀಡು ಬಿಟ್ಟಿದ್ದ ಪೋರ್ಚುಗೀಸರನ್ನೂ ಅವರ ನೂರಾರು ಇಗರ್ಜಿಗಳನ್ನೂ ಸಹಿಷ್ಣುತೆಯಿಂದ ಕಂಡ. ಬಿಷಪ್ ನೊರೋನ್ಹಾ ಮತ್ತು ಫಾದರ್ ಮಿರಾಂಡಾ ಎಂಬ ಇಬ್ಬರು ಧರ್ಮಗುರುಗಳಿಗೆ ಗೌರವ ಸಲ್ಲಿಸಿದ. ಫ್ರೆಂಚ್, ಪೋರ್ಚುಗೀಸ್ ಅಧಿಕಾರಿಗಳು ಬಂದಾಗ ಪ್ರಾರ್ಥನೆಗೆ ಅನುಕೂಲವಾಗುವಂತೆ ಶ್ರೀರಂಗಪಟ್ಟಣದಲ್ಲಿ ಒಂದು ಇಗರ್ಜಿ ಕಟ್ಟಿಸಿಕೊಳ್ಳಲು ಕ್ರೈಸ್ತರಿಗೆ ಅವಕಾಶ ಕಲ್ಪಿಸಿದ. ಹೈದರಾಲಿಯ ಆಡಳಿತಯಂತ್ರದಲ್ಲಿ ಹಲವು ಕ್ರೈಸ್ತಮತೀಯರಿದ್ದರು. ಕ್ರೈಸ್ತರ ನಡುವೆ ಜಾಗ, ದುಡ್ಡು, ಆಸ್ತಿಗಳ ವಿಚಾರದಲ್ಲಿ ವಾದ-ಜಗಳಗಳೆಲ್ಲ ಎದ್ದಾಗ ಅವನ್ನು ಕ್ರೈಸ್ತ ಧರ್ಮಗುರುಗಳು ಪರಿಹರಿಸುವುದಕ್ಕೂ ಹೈದರಾಲಿ ಅವಕಾಶ ಮಾಡಿಕೊಟ್ಟಿದ್ದ. ಹೈದರಾಲಿಯ ಸೇನೆಯಲ್ಲಿ ಕ್ರಿಶ್ಚಿಯನ್ ಸೈನಿಕರಿದ್ದರು. 1767ರಲ್ಲಿ ಗಣತಿ ಮಾಡಿದಂತೆ ಆಗ ಮಂಗಳೂರಲ್ಲಿ 80 ಸಾವಿರ ಕ್ಯಾಥೊಲಿಕ್ ಕ್ರೈಸ್ತರಿದ್ದರು.

1768ರ ಯುದ್ಧದ ನಂತರ ಹೈದರಾಲಿ ಮತ್ತು ಮಂಗಳೂರು ಕಿರಿಸ್ತಾನರ ನಡುವಿನ ಸಂಬಂಧಗಳು ನಿಧಾನವಾಗಿ ಹಳಸುವುದಕ್ಕೆ ಶುರುವಾದವು. ಮಂಗಳೂರಿನ ಮೇಲೆ ಬ್ರಿಟಿಷರು ಪ್ರಾಬಲ್ಯ ಮೆರೆಯಲು ಅಲ್ಲಿನ ಸ್ಥಳೀಯ ಕ್ರೈಸ್ತರೂ ಬಹಳಷ್ಟು ಸಹಾಯ ಮಾಡಿದರೆಂದು ಹೈದರಾಲಿ ಭಾವಿಸಿದ. ಬ್ರಿಟಿಷ್ ಸೇನೆಯ ಬ್ರಿಗೇಡಿಯರ್ ಜನರಲ್ ಆಗಿದ್ದ ರಿಚರ್ಡ್ ಮ್ಯಾಥ್ಯೂಸ್‍ಗೆ ಮಂಗಳೂರಿನ ಕ್ಯಾಥೊಲಿಕ್ಕರು 3,30,000 ರುಪಾಯಿಗಳ ಸಾಲ ಕೊಟ್ಟರೆಂಬ ವಾರ್ತೆಯನ್ನು ಪೋರ್ಚುಗೀಸರು ಹೈದರಾಲಿಯ ಕಿವಿಗೆ ಹಾಕಿದರು. ತಾನು ಕೊಟ್ಟ ಸ್ವಾತಂತ್ರ್ಯವೆಲ್ಲ ಹೀಗೆ ದುರುಪಯೋಗವಾಗುತ್ತಿದೆಯೆಂದು ಸಿಟ್ಟಿಗೆದ್ದ ಹೈದರಾಲಿ ರಿಚರ್ಡ್ ಮ್ಯಾಥ್ಯೂಸ್ ಅನ್ನು ಬಂಧಿಸುವುದೇ ತನ್ನ ಜೀವನದ ಪರಮೋದ್ದೇಶ ಎಂಬಂತೆ ವರ್ತಿಸತೊಡಗಿದ. ಬ್ರಿಟಿಷರಿಗೂ ಹೈದರಾಲಿಯ ಸೇನೆಗೂ ಮೇಲಿಂದ ಮೇಲೆ ಯುದ್ಧಗಳಾದವು. ಈ ಯುದ್ಧಗಳಲ್ಲಿ ಪೋರ್ಚುಗೀಸರು ಹೈದರಾಲಿಯ ಪರವಾಗಿ ನಿಂತರು. ಒಂದು ವೇಳೆ ಆತ ಗೆದ್ದದ್ದೇ ಆದರೆ ಮಂಗಳೂರು ಅನಾಯಾಸವಾಗಿ ತಮ್ಮ ತಟ್ಟೆಗೆ ಬೆಣ್ಣೆಯಂತೆ ಜಾರಿ ಬೀಳುತ್ತದೆ ಎಂಬುದು ಅವರ ಲೆಕ್ಕಾಚಾರವಾಗಿತ್ತು. ಆರೋಗ್ಯದ ಸಮಸ್ಯೆ ಉಲ್ಬಣಗೊಂಡು, 1782ರ ಡಿಸೆಂಬರ್ 6ರಂದು ಹೈದರಾಲಿ ಚಿತ್ತೂರಿನಲ್ಲಿ ತೀರಿಕೊಂಡ. ತಂದೆಯ ಸಾವಿನ ನಂತರ ಸೇನೆಯ ಸಂಪೂರ್ಣ ನಿಯಂತ್ರಣವನ್ನು ತನ್ನ ಕೈಗೆ ತೆಗೆದುಕೊಂಡ ಟಿಪ್ಪು ಮರುವರ್ಷವೇ ಬ್ರಿಟಿಷ್ ಸೈನ್ಯದೊಡನೆ ಉಗ್ರವಾಗಿ ಕಾದಾಡಿ ರಿಚರ್ಡ್ ಮ್ಯಾಥ್ಯೂಸ್‍ನನ್ನು ಬಂಧಿಸಿ ಶ್ರೀರಂಗಪಟ್ಟಣದ ಸೆರೆಯಲ್ಲಿಟ್ಟ. ಟಿಪ್ಪು ಕೊಟ್ಟ ಚಿತ್ರಹಿಂಸೆ ತಾಳಲಾರದೆ ಒಂದೇ ವರ್ಷದಲ್ಲಿ ಮ್ಯಾಥ್ಯೂಸ್ ಇಹಲೋಕ ತ್ಯಜಿಸುವಂತಾಯಿತು. ಮುಂದೆ ಟಿಪ್ಪುವನ್ನು ಗೆದ್ದು, ಕೊಂದು, ಶ್ರೀರಂಗಪಟ್ಟಣವನ್ನು ವಶಪಡಿಸಿಕೊಂಡ ಬ್ರಿಟಿಷರಿಗೆ ಮ್ಯಾಥ್ಯೂಸ್ ಸಾಯುವ ಮುನ್ನ ಬರೆದಿಟ್ಟಿದ್ದ ನಾಲ್ಕು ಡೈರಿಗಳು ಸಿಕ್ಕವು. ಅಲ್ಲಿ ಆತ, ಮಂಗಳೂರಿನ ಕ್ಯಾಥೊಲಿಕ್ ಸಮುದಾಯ ಅತ್ಯಂತ ತೀವ್ರವಾದ ಅಪಾಯದಲ್ಲಿದೆ. ಮತಾಂಧ ಟಿಪ್ಪು ಆ ಇಡೀ ಸಮುದಾಯವನ್ನೇ ಸಂಪೂರ್ಣವಾಗಿ ಅಳಿಸಿ ಹಾಕುವ ಮಟ್ಟಕ್ಕೂ ಹೋಗಬಹುದು. ಅವರನ್ನು ಉಳಿಸುವ ತುರ್ತು ಅಗತ್ಯವಿದೆ ಎಂದು ಅಲವತ್ತುಕೊಂಡಿದ್ದ. ದುರ್ದೈವವೆಂದರೆ ಬ್ರಿಟಿಷರಿಗೆ ಆ ಡೈರಿಗಳು ಸಿಗುವ ಹೊತ್ತಿಗಾಗಲೇ ಮಂಗಳೂರಿನ ಕ್ರೈಸ್ತ ಸಮುದಾಯದ 92% ಜನರನ್ನು ಟಿಪ್ಪು ಯಮಲೋಕಕ್ಕೆ ಕಳಿಸಿಯಾಗಿತ್ತು.

ಟಿಪ್ಪುವಿನ ದಾಳಿ, ದರೋಡೆಗಳು ಪ್ರಾರಂಭವಾದದ್ದು 1784ರ ಫೆಬ್ರವರಿ 24ರಂದು. ಇದೇ ದಿನ ಯಾಕೆ ಎಂಬುದಕ್ಕೂ ಕಾರಣವಿದೆ. 1784ರ ಫೆಬ್ರವರಿ 24, ಕ್ಯಾಥೊಲಿಕ್ ಸಮುದಾಯಕ್ಕೆ ಅತ್ಯಂತ ಪವಿತ್ರವಾದ ಆಷ್ ವೆಡ್‍ನೆಸ್‍ಡೇ ಅಥವಾ ಭಸ್ಮ ಬುಧವಾರ ಎಂಬ ಹಬ್ಬದ ದಿನ. ಅಂದು ಮಂಗಳೂರಿನ ಎಲ್ಲಾ ಕ್ಯಾಥೊಲಿಕ್ ಮತಸ್ಥರೂ ಚರ್ಚುಗಳಿಗೆ ತೆರಳಿ ವಿಶೇಷ ಪ್ರಾರ್ಥನೆ ಸಲ್ಲಿಸುವರೆಂಬುದು ಟಿಪ್ಪುವಿಗೆ ಮಾಹಿತಿ ಇತ್ತು. ಹಾಗಾಗಿ, ಎಲ್ಲ ಕ್ರೈಸ್ತರನ್ನೂ ಒಂದೇ ಸಲಕ್ಕೆ ಅತ್ಯಂತ ಸುಲಭವಾಗಿ ಹಿಡಿದು ಹಾಕಲು ಟಿಪ್ಪು ಆ ದಿನವನ್ನು ಆಯ್ದುಕೊಂಡ. ಮೇಲುಕೋಟೆಯಲ್ಲಿ ಮಂಡಯಂ ಅಯ್ಯಂಗಾರರ ಸಮುದಾಯವನ್ನು ನಿರ್ಮೂಲ ಮಾಡುವುದಕ್ಕೂ ಟಿಪ್ಪು ಆರಿಸಿದ್ದು ಇದೇ ವಿಧಾನವನ್ನೇ. ದೀಪಾವಳಿ ಹಬ್ಬದಂದು ಅಯ್ಯಂಗಾರರೆಲ್ಲ ಒಂದೇ ಕಡೆ ಸೇರಿ ಹಬ್ಬ ಆಚರಿಸಿಕೊಳ್ಳುತ್ತಾರೆಂದು ಬಗೆದು ನರಕ ಚತುರ್ದಶಿಯನ್ನು ತನ್ನ ಹತ್ಯಾಕಾಂಡಕ್ಕೆ ಆಯ್ದುಕೊಂಡ. ಕೊಡಗಿನಲ್ಲೂ ಅಷ್ಟೇ, ಕೊಡವ ಸೈನಿಕರಿಗೆ ಔತಣ ಕೊಡುತ್ತೇನೆಂದು ಹೇಳಿ, ಎಲ್ಲರನ್ನೂ ಒಂದೇ ಮೈದಾನದಲ್ಲಿ ಸೇರಿಸಿ, ಅವರೆಲ್ಲರೂ ನಿಶ್ಶಸ್ತ್ರಧಾರಿಗಳಾಗಿದ್ದಾಗ ನಾಲ್ಕೂ ಕಡೆಯಿಂದ ಸೈನ್ಯ ನುಗ್ಗಿಸಿ ಕೊಡವರನ್ನು ಅತ್ಯಂತ ಹೇಡಿ ವಿಧಾನದಲ್ಲಿ ಕೊಲ್ಲಿಸಿದ. ಭಸ್ಮ ಬುಧವಾರದ ವಿಶೇಷ ಪ್ರಾರ್ಥನೆಗಾಗಿ ಚರ್ಚುಗಳಲ್ಲಿ ಜಮಾಯಿಸಿದ್ದ ಕ್ರೈಸ್ತರಿಗೆ ಟಿಪ್ಪುವಿನ ದಾಳಿಯ ಯಾವ ಪೂರ್ವಸೂಚನೆಯೂ ಇರಲಿಲ್ಲ. ಮಂಗಳೂರಿನ ಅಷ್ಟೂ ಚರ್ಚುಗಳ ಆಸುಪಾಸಿನಲ್ಲಿ ಸೇನೆಯ ತುಕಡಿಗಳನ್ನು ನಿಲ್ಲಿಸಿದ್ದ ಟಿಪ್ಪು, ಚರ್ಚುಗಳಲ್ಲಿ ಪ್ರಾರ್ಥನೆಗಳು ಪ್ರಾರಂಭವಾಗುತ್ತಲೇ ಏಕಾಏಕಿ ದಾಳಿ ನಡೆಸಿದ. ಒಬ್ಬನೇ ಒಬ್ಬ ಕ್ರೈಸ್ತನೂ ತಪ್ಪಿಸಿಕೊಂಡು ಹೋಗಲಾರದಂತೆ ದಿಗ್ಬಂಧನ ಹಾಕಿ, ಎಲ್ಲರನ್ನೂ ಸರಪಳಿ ಬಿಗಿದು ಸೈನಿಕರು ಬಂಧಿಸಿದರು. ಪ್ರಾರ್ಥನೆಗೆಂದು ದೇವರ ನೆಲೆಗಳಿಗೆ ಹೋಗಿದ್ದವರು ಹೀಗೆ ಅಚಾನಕ್ಕಾಗಿ ಸೈತಾನನ ಕೈಗೆ ಸಿಕ್ಕಿ ಬೀಳಬೇಕಾಯಿತು.

ಟಿಪ್ಪು ಧರ್ಮಸಹಿಷ್ಣುವಾಗಿದ್ದ ಎಂದು ಹೇಳುವವರು ಆತನ ಆಸ್ಥಾನದಲ್ಲಿ ಮಂತ್ರಿಗಳಾಗಿದ್ದ ಪೂರ್ಣಯ್ಯನವರ ಉದಾಹರಣೆ ಕೊಡುತ್ತಾರೆ. ಬಿಜೆಪಿಯಲ್ಲಿ ಮುಸ್ಲಿಮ್ ನಾಯಕರಿದ್ದಾರೆ. ಮುಸ್ಲಿಮರೇ ಒಬ್ಬರು ಈ ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷರೂ ಆಗಿದ್ದರು. ಆದರೂ ವಿರೋಧಿಗಳು ಬಿಜೆಪಿಯನ್ನು ಸರ್ವಮತ, ಸರ್ವಧರ್ಮ ಸಹಿಷ್ಣು ಪಕ್ಷ ಎಂದು ಒಪ್ಪಿಕೊಳ್ಳುವುದಿಲ್ಲ! ಲಾಲ್ ಕೃಷ್ಣ ಅದ್ವಾನಿಯವರು ಭಾರತದಾದ್ಯಂತ ರಥಯಾತ್ರೆ ಮಾಡಿ ಕೋಮುವಾದಿ ಭಾವನೆಗಳನ್ನು ಬಡಿದೆಬ್ಬಿಸಿದರು ಎಂದು ಹೇಳುವವರು, ರಥಯಾತ್ರೆಯ ಸಂದರ್ಭದಲ್ಲಿ ಅದ್ವಾನಿಯವರ ಕಾರ್ ಚಾಲಕನಾಗಿದ್ದವನು ಓರ್ವ ಮುಸ್ಲಿಮ್ ಎಂಬುದನ್ನು ಮಾತ್ರ ಉಪಾಯದಿಂದ ಮರೆತೇ ಬಿಡುತ್ತಾರೆ! ಭಾರತೀಯ ಜನತಾ ಪಕ್ಷ, ಡಾ. ಅಬ್ದುಲ್ ಕಲಾಂ ಅವರನ್ನು ರಾಷ್ಟ್ರಪತಿಯಂತಹ ದೇಶದ ಅತ್ಯುನ್ನತ ಹುದ್ದೆಗೆ ಆರಿಸಿತು. ಆದರೂ ಅದೊಂದು ಮತೀಯ ಭಾವನೆಯುಳ್ಳ, ಧರ್ಮಾಂಧರ ಪಕ್ಷ! ಪೂರ್ಣಯ್ಯನವರನ್ನು ಮಂತ್ರಿಯಾಗಿ ಹೊಂದಿದ್ದ ಟಿಪ್ಪು ಮಾತ್ರ ಧರ್ಮಸಹಿಷ್ಣು!

ತನ್ನನ್ನು ಸೋಲಿಸಲೆಂದು ಕತ್ತಿ ಮಸೆಯುತ್ತಿದ್ದ ಬ್ರಿಟಿಷರಿಗೆ ಮಂಗಳೂರಿನ ಕ್ರೈಸ್ತರು ಸಹಾಯ ಮಾಡಿದರು ಎಂಬುದೇ ಟಿಪ್ಪುವಿಗೆ ಮೊದಲ ನೆಪ. 1784ರಿಂದ 1799ರವರೆಗೆ ಹದಿನೈದು ವರ್ಷಗಳಲ್ಲಿ ಟಿಪ್ಪು ಮಂಗಳೂರಿಂದ ಸ್ಥಳಾಂತರಿಸಿದ ಕ್ರೈಸ್ತರ ಸಂಖ್ಯೆ 60,000ರಿಂದ 80,000. ಅವರೆಲ್ಲರನ್ನೂ ಕೈಕಾಲುಗಳಿಗೆ ಸರಪಳಿ ಬಿಗಿದು ಮಂಗಳೂರಿಂದ ಕಾಲುನಡಿಗೆಯಲ್ಲಿ ಶ್ರೀರಂಗಪಟ್ಟಣಕ್ಕೆ ಕರೆತರಲಾಯಿತು. ಒಂದು ಗುಂಪು ಬಂಟ್ವಾಳ – ಬೆಳ್ತಂಗಡಿ – ವಿರಾಜಪೇಟೆ – ಕೊಡಗು – ಮೈಸೂರು ಮಾರ್ಗವಾಗಿ ಹೋದರೆ ಇನ್ನೊಂದು ಶಿವಮೊಗ್ಗ – ಗೆರುಸೊಪ್ಪೆ – ಚಾರ್ಮಾಡಿ – ಸಕಲೇಶಪುರ ಮಾರ್ಗವಾಗಿ ಶ್ರೀರಂಗಪಟ್ಟಣ ತಲುಪಿತು. ಕರಾವಳಿಯನ್ನು ಮೈಸೂರಿಗೆ ಬೆಸೆಯುವ ರಸ್ತೆಮಾರ್ಗಗಳಿಲ್ಲದ್ದರಿಂದ, ಕೈದಿಗಳನ್ನು ಮಾರ್ಗಮಧ್ಯೆ 4,000 ಅಡಿಗಳಷ್ಟು ಎತ್ತರದ ಬೆಟ್ಟಗಳಿಗೆ ಹತ್ತಿಸಿ ಇಳಿಸಿ ಕರೆತರಬೇಕಾಯಿತು. ಈ ಯಾತನಾಯಾತ್ರೆಯಲ್ಲಿ ಚಿಕ್ಕಮಕ್ಕಳಿದ್ದರು, ಗರ್ಭಿಣಿ ಹೆಂಗಸರಿದ್ದರು, ಅಶಕ್ತ ವೃದ್ಧರಿದ್ದರು, ಅಂಗವಿಕಲರಿದ್ದರು, ನಿಲ್ಲುವುದಕ್ಕೂ ಅಸಮರ್ಥರಾದ ರೋಗಿಗಳಿದ್ದರು. ಯಾವ ಮುಲಾಜು, ಮಮಕಾರಗಳಿಲ್ಲದೆ ಅವರೆಲ್ಲರನ್ನೂ ಒಂದೇ ಗುಕ್ಕಿನಲ್ಲಿ ಅಲ್ಲಿಂದ ಇಲ್ಲಿಗೆ 350 ಕಿಲೋಮೀಟರ್ ದೂರಕ್ಕೆ ನಡೆಸಿಕೊಂಡು ಬಂದರು ಸೈನಿಕರು. ಶ್ರೀರಂಗಪಟ್ಟಣಕ್ಕೆ ಕರೆತಂದ ಮೇಲೆ ಆ ಎಲ್ಲರನ್ನೂ ಸೆರೆಗೆ ಹಾಕಲಾಯಿತು. ಚಾಟಿಯೇಟು, ಕುದುರೆಯ ಕಾಲಿಗೆ ಕಟ್ಟಿ ಎಳೆಸುವುದು, ಬಿಸಿ ಮಾಡಿದ ಕಬ್ಬಿಣದ ಸರಳುಗಳಿಂದ ಬರೆ ಹಾಕುವುದು, ಕಿವಿ ಮೂಗು ಮೇಲ್ದುಟಿಗಳನ್ನು ಕಿತ್ತು ತೆಗೆಯುವುದು ಮುಂತಾದ ಹಲವು ಅಮಾನವೀಯ ಶಿಕ್ಷೆಗಳನ್ನು ಈ ಕೈದಿಗಳಿಗೆ ನೀಡಲಾಗುತ್ತಿತ್ತು. ಮತಾಂತರವಾಗಲು ಒಪ್ಪದವರನ್ನು ಬಲವಂತವಾಗಿ ಹಿಡಿದು ತಂದು ಕಂಬಗಳಿಗೆ ಕಟ್ಟಿ ಮರ್ಮಾಂಗದ ಮುಂದೊಗಲು ಕಿತ್ತು ಸುನ್ನತ್ ಮಾಡಲಾಗುತ್ತಿತ್ತು. ಮುಸ್ಲಿಮರಾದೆವೆಂದು ಒಪ್ಪಿಕೊಳ್ಳದವರ ಮೂಗು, ಕಿವಿ, ಮೇಲ್ದುಟಿಗಳನ್ನು ಕತ್ತರಿಸಿ ಕತ್ತೆಗಳ ಮೇಲೆ ಹಿಂದುಮುಂದಾಗಿ ಕೂಡಿಸಿ ಮೆರವಣಿಗೆ ಮಾಡುತ್ತಿದ್ದರು. ಈ ಕಷ್ಟಪರಂಪರೆಯನ್ನು ಸಹಿಸಲಾಗದೆ ಸುಮಾರು 7,000 ಮಂದಿ ಜೈಲಿನಿಂದ ಹೇಗೋ ತಪ್ಪಿಸಿಕೊಂಡು ಪರಾರಿಯಾದರಂತೆ. ಹಾಗೆ ತಪ್ಪಿಸಿಕೊಂಡವರು ಮೈಸೂರಿನ ಸುತ್ತಮುತ್ತಲಿನ ದಟ್ಟಕಾಡುಗಳಲ್ಲಿ ವರ್ಷಾನುಗಟ್ಟಲೆ ಕಾಡುಮನುಷ್ಯರಂತೆ ಜೀವನ ನಡೆಸಬೇಕಾಯಿತು. ಟಿಪ್ಪು ಸೈನ್ಯದ ಹಿಂಸಾಚಾರಗಳಿಗೆ ಗುರಿಯಾಗಿ ದೇಹದ ಒಂದಿಲ್ಲೊಂದು ಭಾಗವನ್ನು ಕಳೆದುಕೊಂಡಿದ್ದ ಈ ನತದೃಷ್ಟರು ಹಳ್ಳಿಗಳಿಗೆ ಬಂದು ಎಲ್ಲರಂತೆ ಸಹಜವಾಗಿ ಬದುಕುವುದಕ್ಕೂ ಸಾಧ್ಯವಿರಲಿಲ್ಲ. ಮಂಗಳೂರಿನಲ್ಲಿ ಸೆರೆ ಹಿಡಿದ ಮಹಿಳೆಯರಲ್ಲಿ ಆಕರ್ಷಕ ರೂಪದ ಮುನ್ನೂರು ಯುವತಿಯರನ್ನು ಪ್ರತ್ಯೇಕವಾಗಿ ತೆಗೆದಿರಿಸಿ ಟಿಪ್ಪು ತನ್ನ ಜನಾನಾಕ್ಕೆ ಸೇರಿಸಿಕೊಂಡ. ಇನ್ನುಳಿದವರಲ್ಲಿ ನೂರಿನ್ನೂರು ಜನರನ್ನು ಸೈನ್ಯದ ಮೇಲ್‍ಸ್ತರದಲ್ಲಿದ್ದ ಅಧಿಕಾರಿಗಳಿಗೆ ಗಣಿಕೆಯರಾಗಿ ಹಂಚಲಾಯಿತು. ಇವಿಷ್ಟೂ ವಿವರಗಳು ನಮಗೆ ಸಿಗುವುದು ಟಿಪ್ಪುವಿನ ಪುತ್ರ ಗುಲಾಂ ಮೊಹಮ್ಮದ್ ಬರೆದಿಟ್ಟ ಟಿಪ್ಪಣಿ ಪುಸ್ತಕದಿಂದ.

ಶ್ರೀರಂಗಪಟ್ಟಣದಲ್ಲಿ ಸ್ಥಾಪಿಸಲು ಉದ್ದೇಶಿಸಿದ್ದ ಅಲ್ಪಸಂಖ್ಯಾತರ ವಿಶ್ವವಿದ್ಯಾಲಯಕ್ಕೆ ಸಿದ್ದರಾಮಯ್ಯನವರ ಕಾಂಗ್ರೆಸ್ ಸರಕಾರ ಟಿಪ್ಪು ಹೆಸರಿಡಲು ಉದ್ದೇಶಿಸಿತ್ತು. ಮೊತ್ತಮೊದಲನೆಯದಾಗಿ ಒಂದು ವಿಶ್ವವಿದ್ಯಾಲಯವನ್ನು ಅಲ್ಪಸಂಖ್ಯಾತರಿಗೆಂದು ಸ್ಥಾಪಿಸುವುದೇ ತಪ್ಪು. ಜ್ಞಾನದೇಗುಲಗಳನ್ನು ಹೀಗೆ ಒಂದೊಂದು ಜಾತಿ, ಸಮುದಾಯಗಳಿಗೆ ಸೀಮಿತಗೊಳಿಸಲೇಬಾರದು. ಸರಿ, ಸ್ಥಾಪಿಸ ಹೊರಟರು ಎಂದೇ ಇಟ್ಟುಕೊಳ್ಳೋಣ. ಅಲ್ಪಸಂಖ್ಯಾತರು ಎಂದರೆ ಮುಸ್ಲಿಮರು ಮಾತ್ರವೇ? ಮುಸ್ಲಿಮರಲ್ಲಿ ಸರಕಾರಕ್ಕೆ ಟಿಪ್ಪುವಿಗಿಂತ ಒಳ್ಳೆಯ ಯಾವ ವ್ಯಕ್ತಿತ್ವವೂ ಕಣ್ಣಿಗೆ ಬೀಳಲಿಲ್ಲವೇ? ರಾಷ್ಟ್ರಪತಿಗಳಾಗಿದ್ದ ಡಾ. ಅಬ್ದುಲ್ ಕಲಾಂ ಅಥವಾ ಡಾ. ಝಾಕಿರ್ ಹುಸೇನ್ ಇವರ ಕಣ್ಣಿಗೆ ಬೀಳಲಿಲ್ಲವೇ? ಅಥವಾ ಕರ್ನಾಟಕದವರೇ ಬೇಕೆಂದರೆ ಮೈಸೂರಿನ ದಿವಾನರಾಗಿದ್ದ ಸರ್ ಮಿರ್ಜಾ ಇಸ್ಮಾಯಿಲ್ ಇದ್ದರಲ್ಲವೇ? ಕನ್ನಡಕ್ಕಾಗಿ ತನ್ನ ಬದುಕನ್ನೇ ಸಮರ್ಪಿಸಿದ ರೆವರೆಂಡ್ ಫರ್ಡಿನಾಂಡ್ ಕಿಟ್ಟೆಲ್ ಅವರಿಗಿಂತ ಸೂಕ್ತವಾದ ಹೆಸರು ವಿಶ್ವವಿದ್ಯಾಲಯಕ್ಕೆ ಇಡಲು ಬೇರಾವುದು ಸಿಕ್ಕೀತು?

ಟಿಪ್ಪು ನಡೆಸಿದ ಘೋರ ಯಾತನಾಯಾತ್ರೆಯಲ್ಲಿ ಕನಿಷ್ಠ ಹದಿನೈದು ಸಾವಿರ ಜನ ದಾರಿಮಧ್ಯದಲ್ಲೇ ಪ್ರಾಣತ್ಯಾಗ ಮಾಡಿದರು ಎಂದು ಹೇಳುತ್ತಾರೆ. ಟಿಪ್ಪು ಕಾರವಾರದಿಂದ ಕಾಸರಗೋಡಿನವರೆಗಿನ ಒಟ್ಟು 80,000 ಸಾವಿರ ಜನರನ್ನು ಕೈದಿಗಳಾಗಿ ಹಿಡಿದು ಶ್ರೀರಂಗಪಟ್ಟಣಕ್ಕೆ ಯಾತನಾಯಾತ್ರೆಯಲ್ಲಿ ನಡೆಸಿದ. ಅವರಲ್ಲಿ ಇಪ್ಪತ್ತು ಸಾವಿರ ಮಂದಿ ದಾರಿಯಲ್ಲಿ ಅಸುನೀಗಿದರು. 60,000 ಮಂದಿ ಶ್ರೀರಂಗಪಟ್ಟಣ ತಲುಪಿ ಸೆರೆವಾಸಕ್ಕೊಳಗಾದರು ಎಂದು ಕೆಲವು ಇತಿಹಾಸತಜ್ಞರು ದಾಖಲಿಸಿದ್ದಾರೆ. ಅದೇನೇ ಇರಲಿ, ಹದಿನೈದರಿಂದ ಇಪ್ಪತ್ತು ಸಾವಿರ ಜನ ಈ ದುರಂತ ನಡಿಗೆಯಲ್ಲಿ ಪಡಬಾರದ ಯಾತನೆ ಪಟ್ಟು ತೀರಿಕೊಂಡದ್ದಂತೂ ನಿಜ. ಹಾಗೆಯೇ, ಹದಿನೈದು ವರ್ಷಗಳ ನಿತ್ಯ ನಿರಂತರ ಯಾತನೆ ಉಂಡು ಅವರೆಲ್ಲ 1799ರಲ್ಲಿ ಟಿಪ್ಪುವಿನ ಮರಣದ ನಂತರ ಬ್ರಿಟಿಷರಿಂದ ಬಿಡುಗಡೆಗೊಂಡಾಗ ಕೆಲವರು ನಡೆಯುವುದಕ್ಕೂ ಕಷ್ಟ ಪಡುತ್ತಿದ್ದರಂತೆ. ಒಬ್ಬನ ಕೈಯಲ್ಲಿ ಚಮಚ ಮತ್ತು ಫೋರ್ಕ್ ಅನ್ನು ಕೊಟ್ಟಾಗ ಅದನ್ನು ಸರಿಯಾಗಿ ಹಿಡಿಯುವುದಕ್ಕೂ ಅವನಿಗೆ ಸಾಧ್ಯವಾಗಲಿಲ್ಲವಂತೆ. ನಾಲ್ಕನೇ ಆಂಗ್ಲೋ-ಮೈಸೂರು ಯುದ್ಧದ ನಂತರ ಶ್ರೀರಂಗಪಟ್ಟಣದ ಸೆರೆಮನೆಗಳನ್ನು ತೆರೆದಾಗ ಅಲ್ಲಿಂದ ಹೊರ ಬಂದವರು ಕೇವಲ 15,000 ಕ್ರೈಸ್ತರು ಮಾತ್ರ. ಅಂದರೆ ಆ ಹದಿನೈದು ವರ್ಷಗಳ ಅವಧಿಯಲ್ಲಿ 65,000ಕ್ಕೂ ಹೆಚ್ಚು ಕ್ರೈಸ್ತರನ್ನು ಟಿಪ್ಪು ಅಮಾನುಷವಾಗಿ ಕೊಂದು ಹಾಕಿದ. ಆ ಸಮಯದಲ್ಲಿ ಶ್ರೀರಂಗಪಟ್ಟಣದಲ್ಲಿ ಪ್ರತಿದಿನ ಅದೆಷ್ಟೊಂದು ಹೆಣಗಳು ಬೀಳುತ್ತಿದ್ದವೆಂದರೆ ಮಂಡ್ಯ-ಮೈಸೂರು ಭಾಗದಲ್ಲಿ ಸೋಮಾರಿಗಳಿಗೆ “ಗಂಜಾಮ್‍ಗೆ ಹೆಣ ಹೊರೋದಕ್ಕೆ ಹೋಗು” ಎಂಬ ಮಾತೇ ನಿಂತು ಬಿಟ್ಟಿತ್ತು. ಬೇರಾವ ಕೆಲಸವನ್ನೂ ಮಾಡಲೊಲ್ಲದವನು ಶ್ರೀರಂಗಪಟ್ಟಣದ ಪಕ್ಕದಲ್ಲಿದ್ದ ಗಂಜಾಮ್‍ನಲ್ಲಿ ಹೂಳುವ ಹೊಂಡಗಳಿಗೆ ಹೆಣ ಹೊತ್ತು ಹಾಕುವ ಉದ್ಯೋಗ ಮಾಡಿ ಭರ್ಜರಿಯಾಗಿ ಸಂಪಾದಿಸಬಹುದಿತ್ತು. ಲುಡ್ವಿಗ್ ಫಾನ್ ಪಾಸ್ತರ್ ಎಂಬ ಜರ್ಮನ್ ಇತಿಹಾಸಕಾರ, “ಬಂಧಿಗಳಾಗಿ ಸಿಕ್ಕ ಕ್ಯಾಥೊಲಿಕ್ ಕ್ರೈಸ್ತರನ್ನು ಟಿಪ್ಪು ನಡೆಸಿಕೊಂಡ ರೀತಿಯನ್ನು ಯಾವ ಸೈತಾನನೂ ಕ್ಷಮಿಸಲು ಸಾಧ್ಯವಿಲ್ಲ. ಬಾಣಂತಿ ಹೆಂಗಸರ ಕೊರಳಿಗೆ ಅವರ ಮಕ್ಕಳನ್ನು ಸುತ್ತಿ ಟಿಪ್ಪು ಒಂದೇ ಹಗ್ಗದ ಮೂಲಕ ಅವರಿಬ್ಬರನ್ನೂ ನೇಣಿಗೆ ಹಾಕಿ ಕತೆ ಮುಗಿಸುತ್ತಿದ್ದ. ಮಕ್ಕಳು ಮರಿಯೆನ್ನದೆ ಎಲ್ಲ ಅಶಕ್ತರನ್ನೂ ಆನೆಗಳ ಕಾಲಿಗೆ ಕಟ್ಟಿ ಎಳೆಸಲಾಗುತ್ತಿತ್ತು. ದೈಹಿಕವಾಗಿ ಸಮರ್ಥರಿದ್ದ ಯುವಕರನ್ನು ಬಲವಂತವಾಗಿ ಸುನ್ನತ್ ಮಾಡಿಸಿ ಸೇನೆಗೆ ಸೇರಿಸಿಕೊಳ್ಳಲಾಗುತ್ತಿತ್ತು. ಹೆಂಗಸರನ್ನೂ ಎಳೆ ಹುಡುಗಿಯರನ್ನೂ ಕರೆತಂದು ಟಿಪ್ಪುವಿನ ಕೈಕೆಳಗಿನ ಅಧಿಕಾರಿಗಳಿಗೆ ಭೋಗಕ್ಕಾಗಿ ಹಂಚಲಾಗುತ್ತಿತ್ತು. ಶ್ರೀರಂಗಪಟ್ಟಣದ ಸೆರೆಯಿಂದ ಯಾರಾದರೂ ಕೈದಿ ತಪ್ಪಿಸಿಕೊಳ್ಳಲು ಯತ್ನಿಸಿ ಸೈನಿಕರ ಕೈಗೆ ಸಿಕ್ಕಿಬಿದ್ದರೆ ಅವರ ಕಿವಿಗಳು, ಮೂಗು, ಕಾಲು ಮತ್ತು ಒಂದು ಕೈ ಕತ್ತರಿಸಿ ರಸ್ತೆಯಲ್ಲಿ ಭಿಕ್ಷೆ ಬೇಡಲು ಬಿಡಲಾಗುತ್ತಿತ್ತು” ಎಂದು ತನ್ನ “ದ ಹಿಸ್ಟರಿ ಆಫ್ ಪೋಪ್ಸ್” ಎಂಬ ಕೃತಿಯಲ್ಲಿ ದಾಖಲಿಸಿದ್ದಾನೆ. ಇದೆಲ್ಲವನ್ನು ನೋಡಿದಾಗ ಟಿಪ್ಪು, ಇತಿಹಾಸದಲ್ಲಿ ಆಗಿ ಹೋಗಿರುವ ಹಿಟ್ಲರ್, ಈದಿ ಅಮೀನ್, ಪೋಲ್‍ಪಾಟ್, ಸ್ಟಾಲಿನ್ ಮುಂತಾದ ಸರ್ವಾಧಿಕಾರಿಗಳ ಸಾಲಿನಲ್ಲಿ ಗತ್ತಿನಿಂದ ನಿಲ್ಲಲು ಸರ್ವ ರೀತಿಯಲ್ಲೂ ಸಮರ್ಥ ಎನ್ನಬಹುದು!

ಶ್ರೀರಂಗಪಟ್ಟಣದ ಯಾತನಾಶಿಬಿರದಿಂದ ಅದು ಹೇಗೋ ಬದುಕಿ ಹೊರಬಂದ ಕನ್ನಡಿಗ ಕ್ರೈಸ್ತರೊಬ್ಬರು ಬರೆದಿರುವ ಬಾರ್ಕೂರು ಹಸ್ತಪ್ರತಿ ಎಂಬ ದಾಖಲೆಯಲ್ಲಿ ಟಿಪ್ಪುವಿನ ಹಿಂಸಾಚಾರದ ಕೆಲವು ವಿವರಗಳು ಸಿಗುತ್ತವೆ. ಮಂಗಳೂರಿಂದ ಶ್ರೀರಂಗಪಟ್ಟಣಕ್ಕೆ ಹೊರಟ ಯಾತನಾಯಾತ್ರೆಯಲ್ಲಿ ದಾರಿಮಧ್ಯೆ ಅಸುನೀಗಿದವರ ಸಂಖ್ಯೆ, ಈ ಟಿಪ್ಪಣಿ ಪುಸ್ತಕದ ಪ್ರಕಾರ, 20,000. ಇವರೆಲ್ಲ ಸತ್ತದ್ದು ನಿಶ್ಶಕ್ತಿ, ಹಸಿವೆ, ರೋಗ ಮತ್ತು ಸೈನಿಕರ ಹಿಂಸೆಯಿಂದ. ಮಂಗಳೂರಿಂದ ಹೊರಟ ಯಾತ್ರೆ ಮೊದಲಿಗೆ ಜಮಲಾಬಾದ್ ಕೋಟೆಗೆ ಬಂತು. ಕ್ಯಾಥೊಲಿಕ್ ಸಮುದಾಯವನ್ನು ಮುನ್ನಡೆಸುತ್ತಿದ್ದ ನಾಯಕರು ಎಂದು ಟಿಪ್ಪು ಗುರುತಿಸಿದ ನೂರಾರು ಮಂದಿಯನ್ನು ಇಲ್ಲಿ ಕೋಟೆಯ ಮೇಲಿಂದ ಕೆಳಗಿನ ಪ್ರಪಾತಕ್ಕೆ ನೂಕಲಾಯಿತು. ಇನ್ನುಳಿದ ಕೆಲವು ಧರ್ಮಗುರುಗಳನ್ನು ಒಟ್ಟುಗೂಡಿಸಿ ಅವರಿಂದ 2 ಲಕ್ಷ ರುಪಾಯಿಗಳ ದಂಡ ವಸೂಲಿ ಮಾಡಿ, ಮುಚ್ಚಳಿಕೆ ಪತ್ರ ಬರೆಸಿಕೊಂಡು, ಗೋವಾಕ್ಕೆ ಓಡಿಸಲಾಯಿತು. ಹೀಗೆ ಟಿಪ್ಪುವಿನಿಂದ ಮರಳಿ ಮಂಗಳೂರಿಗೆ ಕಾಲಿಡಕೂಡದೆಂದು ಆಜ್ಞೆ ಹೇಳಿಸಿಕೊಂಡು ಗೋವಾಕ್ಕೆ ಹೋದ 21 ಧರ್ಮಗುರುಗಳ ಪೈಕಿ ಕ್ರೈಸ್ತರ ಮಂಗಳೂರು ಧರ್ಮಪ್ರಾಂತ್ಯದ ಗುರುಗಳಾದ ಫಾದರ್ ಮಿರಾಂಡ ಕೂಡ ಇದ್ದರು. ಟಿಪ್ಪು ಕೊಂದು ಹಾಕಿದ ಕ್ರೈಸ್ತರದ್ದು ಒಂದು ರಕ್ತಸಿಕ್ತ ಕತೆಯಾದರೆ, ಇತ್ತ ಆತ ಹೊಡೆದುರುಳಿಸಿ ನೆಲಸಮವಾಗಿಸಿದ ಇಗರ್ಜಿಗಳದ್ದೇ ಒಂದು ದಾರುಣ ಚರಿತ್ರೆ. ಜಮಲಾಬಾದ್ ಕೋಟೆಯಲ್ಲಿ ಕೂತು ಟಿಪ್ಪು ಮಂಗಳೂರಿನ ಪ್ರಮುಖ 27 ಚರ್ಚುಗಳ ನಾಶಕ್ಕೆ ಆದೇಶ ಮಾಡಿದ. ಮಾಂತೆ ಮಾರಿಯಾನೋದಲ್ಲಿದ್ದ ಫಾದರ್ ಮಿರಾಂಡರ ಸೆಮಿನರಿ, ಜೆಸು ಮೇರಿ ಚರ್ಚ್, ಬೋಳಾರಿನಲ್ಲಿದ್ದ ಚಾಪೆಲ್, ಉಳ್ಳಾಲದ ಚರ್ಚ್ ಆಫ್ ಮರ್ಸೀಸ್, ಮುಲ್ಕಿಯ ಚರ್ಚ್ ಆಫ್ ಇಮ್ಯಾಕ್ಯುಲೇಟ್ ಕಾನ್ಸೆಪ್ಷನ್, ಕಿರೆಂ ಚರ್ಚ್, ಬಾರ್ಕೂರಿನ ರೊಸಾರಿಯೋ ಚರ್ಚ್, ಬೈಂದೂರಿನ ಇಗರ್ಜಿ – ಹೀಗೆ ಈ ಪಟ್ಟಿಯಲ್ಲಿ ಆ ಕಾಲದ ದೊಡ್ಡ ಇಗರ್ಜಿಗಳೆಲ್ಲವೂ ಸ್ಥಾನ ಪಡೆದವು. ಕ್ರಿಸ್ತಶಕ 1680ರಲ್ಲಿ ನಿರ್ಮಾಣವಾಗಿದ್ದ ಮಂಗಳೂರಿನ ಪ್ರಸಿದ್ಧ ಮಿಲಾಗ್ರಿಸ್ ಚರ್ಚ್ ಅನ್ನು ಟಿಪ್ಪು 1784ರಲ್ಲಿ ನೆಲಸಮವಾಗಿಸಿದ. 1759ರಲ್ಲಿ ನಿರ್ಮಾಣಗೊಂಡಿದ್ದ, ಅತ್ಯಂತ ಪ್ರಸಿದ್ಧ ಅತ್ತೂರು ಸೈಂಟ್ ಲಾರೆನ್ಸ್ ಚರ್ಚ್ ಅನ್ನು ಕೂಡ ಟಿಪ್ಪು ಸಂಪೂರ್ಣವಾಗಿ ನಾಶಗೊಳಿಸಿದ. 1568ರಲ್ಲಿ ಕಟ್ಟಲ್ಪಟ್ಟ, ಅತ್ಯಂತ ಭವ್ಯವಾದ ರೋಮನ್ ವಿನ್ಯಾಸದ ವಾಸ್ತುಶಿಲ್ಪವಿದ್ದ ಮಂಗಳೂರಿನ ರೊಸಾರಿಯೋ ಕೆಥೆಡ್ರಲ್, ಟಿಪ್ಪು ಕೈಯಲ್ಲಿ ಸಂಪೂರ್ಣವಾಗಿ ಧರಾಶಾಯಿಯಾಯಿತು. ಹೀಗೆ ಮಂಗಳೂರಿಂದ ಶ್ರೀರಂಗಪಟ್ಟಣದವರೆಗೆ ಮಾರ್ಗ ಮಧ್ಯದಲ್ಲಿ ಸಿಕ್ಕ ಐನೂರಕ್ಕೂ ಹೆಚ್ಚು ಸಣ್ಣ-ದೊಡ್ಡ ಚರ್ಚುಗಳನ್ನು ಟಿಪ್ಪು ಒಂದು ಕಂಬವೂ ಉಳಿಯದಂತೆ ಸಂಪೂರ್ಣವಾಗಿ ಕೆಡವುತ್ತಾ ಬಂದ. 1784ರಿಂದ 99ರವರೆಗೆ ಹದಿನೈದು ವರ್ಷಗಳ ಕಾಲ ಮಂಗಳೂರಲ್ಲಿ ಚರ್ಚಿನ ಕರೆಗಂಟೆ ಕೇಳಿಸಲಿಲ್ಲ. ಯಾವ ಇಗರ್ಜಿ ಉತ್ಸವಗಳೂ ನಡೆಯಲಿಲ್ಲ.

ಟಿಪ್ಪು ಧರ್ಮಸಹಿಷ್ಣುವಾಗಿದ್ದ ಎನ್ನುವವರು ಮರೆಯದೆ ಉಲ್ಲೇಖಿಸುವ ಒಂದು ಉದಾಹರಣೆ ಮಂಡ್ಯ-ಮೈಸೂರು ಭಾಗದಲ್ಲಿ ಪ್ರಚಲಿತವಿರುವ ಲಾವಣಿಗಳು. ಲಾವಣಿ ಎಂಬುದು ಮೌಖಿಕ ಸಾಹಿತ್ಯ. ಅದನ್ನೇ ನಾವು ಇತಿಹಾಸದ ಅಧಿಕೃತ ವಕ್ತಾರ ಎಂದು ಹೇಳಲು ಬಾರದು. ಇತಿಹಾಸವನ್ನು ಸಾಮಾನ್ಯ ಜನರು ಹೇಗೆ ಅರ್ಥೈಸಿಕೊಂಡಿದ್ದಾರೋ ಹಾಗೆ ಲಾವಣಿಗಳು ರಚನೆಯಾಗುತ್ತವೆ. ಅವುಗಳಲ್ಲಿ ರಾಜಕೀಯ ನಾಯಕರ, ಅಥವಾ ರಾಜ ಮಹಾರಾಜರ ರಾಜತಾಂತ್ರಿಕ ಸೂಕ್ಷ್ಮಚಿಂತನೆಯನ್ನು ಹುಡುಕಲು ಅವಕಾಶವಿಲ್ಲ. ಹಾಗಿದ್ದರೂ ನಮ್ಮ ಬುದ್ಧಿಜೀವಿಗಳು ಲಾವಣಿಗಳು ಟಿಪ್ಪುವಿನ ಪರವಾಗಿ ಮಾತಾಡುತ್ತವೆಂಬ ಏಕೈಕ ಕಾರಣಕ್ಕೆ ಅವನ್ನೇ ಅಧಿಕೃತ ಇತಿಹಾಸ ಎಂಬಂತೆ ವೈಭವೀಕರಿಸಿ ಉಲ್ಲೇಖಿಸುತ್ತಾರೆ.ತಮಾಷೆಯೆಂದರೆ, ಈ ಬುದ್ಧಿಜೀವಿಗಳು ಟಿಪ್ಪುವನ್ನು ಹೊಗಳುವ ಲಾವಣಿಗಳನ್ನು ಮಾತ್ರ ಅತ್ಯಂತ ನಾಜೂಕಾಗಿ ಆರಿಸಿ ಉಲ್ಲೇಖಿಸುತ್ತಾರೆಯೇ ಹೊರತು ಆತನ ದೌರ್ಜನ್ಯವನ್ನು ವಿವರಿಸುವ ಸಾಹಿತ್ಯವನ್ನಲ್ಲ! ಚಿತ್ರದುರ್ಗದಲ್ಲಿ ಹೈದರಾಲಿ, ಟಿಪ್ಪು ಮಾಡಿರುವ ದೌರ್ಜನ್ಯ, ಹಿಂಸೆ; ಮದಕರಿ ನಾಯಕರನ್ನು ಹೇಗೆ ಇವರಿಬ್ಬರು ಮೋಸದಿಂದ ಕೊಲ್ಲಿಸಿದರು ಎಂಬ ವಿವರಗಳುಳ್ಳ ಹಾಡುಗಳನ್ನೂ ಲಾವಣಿಗಳನ್ನೂ ಹಾಡಲಾಗುತ್ತದೆ. ಆದರೆ ಬುದ್ಧಿಜೀವಿಗಳಿಗೆ ಅವು ಬೇಕಾಗಿಲ್ಲ! ಹಾಗೆಯೇ, ಕಾಸರಗೋಡು ಸಮೀಪ ಇರುವ ಅಡೂರು ಮಹಾಲಿಂಗೇಶ್ವರ ದೇವಸ್ಥಾನವನ್ನು ನಿರ್ನಾಮ ಮಾಡಲು ಬಂದ ಟಿಪ್ಪು ಹೇಗೆ ಅಲ್ಲಿನ ಬಾವಿಯ ನೀರು ಕುಡಿದು ಮನಃಪರಿವರ್ತನೆ ಹೊಂದಿದ ಎಂಬುದನ್ನು ಅಲ್ಲಿನ ಸ್ಥಳೀಯರು ಕತೆಯ ರೂಪದಲ್ಲಿ ಹೇಳುತ್ತಾರೆ. ದೇವಸ್ಥಾನವನ್ನು ಪುಡಿಗಟ್ಟಲು ಬಂದಿದ್ದಾತ ಕೊನೆಗೆ ಆ ದೇವಸ್ಥಾನದ ಛಾವಣಿಗೆ ತನ್ನ ಕತ್ತಿಯಿಂದ ಹೊಡೆದು ಹೋದನಂತೆ. ಆ ಹೊಡೆತದ ಗುರುತನ್ನು ನಾವು ಇಂದಿಗೂ ಅಲ್ಲಿ ನೋಡಬಹುದು. ಮೌಖಿಕ ಪರಂಪರೆಯ ಜೊತೆ ನೋಡಬಹುದಾದ ಸಾಕ್ಷಿಯೂ ಇರುವ ಈ ಉದಾಹರಣೆ ಯಾಕೋ ಬುದ್ಧಿಜೀವಿಗಳಿಗೆ ರುಚಿಸುವುದಿಲ್ಲ!

1799ರ ಮೇ 4ರಂದು ನಾಲ್ಕನೇ ಆಂಗ್ಲೋ-ಮೈಸೂರು ಯುದ್ಧದಲ್ಲಿ ಅಂತೂ ಟಿಪ್ಪುವನ್ನು ಶ್ರೀರಂಗಪಟ್ಟಣದ ಕೋಟೆಯಲ್ಲಿ ಕೊಲ್ಲಲಾಯಿತು. ಯುದ್ಧ ಮುಗಿದ ಮೇಲೆ ಬ್ರಿಟಿಷ್ ಸೇನೆಯ ಜನರಲ್ ಆರ್ಥರ್ ವೆಲ್ಲೆಸ್ಲಿ, ಶ್ರೀರಂಗಪಟ್ಟಣದ ಕಾರಾಗೃಹದಲ್ಲಿ ನರಕಯಾತನೆ ಅನುಭವಿಸುತ್ತ ಕೂತಿದ್ದ 11,000 ಕ್ರೈಸ್ತರನ್ನು ಬಿಡುಗಡೆಗೊಳಿಸಿದ. 80,000 ಕ್ರೈಸ್ತರಲ್ಲಿ ಕೊನೆಗೂ ಉಳಿದಿದ್ದವರು ಈ 11,000 ಜನ ಮಾತ್ರ. ಈ ಮಂದಿ ತಾವು ಮತ್ತೆ ಸೆರೆಯಿಂದ ಮುಕ್ತರಾಗಿ ಹೊರಜಗತ್ತು ನೋಡುತ್ತೇವೆಂಬ ಆಸೆಯನ್ನು ಬಿಟ್ಟೇ ಹಲವು ವರ್ಷಗಳಾಗಿತ್ತು. ಜರ್ಮನಿಯಲ್ಲಿ ಹಿಟ್ಲರ್‍ನ ಮರಣದ ನಂತರ ಯಾತನಾಶಿಬಿರಗಳಲ್ಲಿದ್ದ ಯಹೂದಿಗಳನ್ನು ಬಿಡುಗಡೆಗೊಳಿಸಿ ಅವರಿಗೆಲ್ಲ ಬ್ರೆಡ್ ತುಣುಕುಗಳನ್ನು ಕೊಟ್ಟಾಗ ಎಷ್ಟೋ ಮಂದಿಗೆ ಅವು ಗಂಟಲಲ್ಲೇ ಇಳಿಯಲಿಲ್ಲವಂತೆ. ಶ್ರೀರಂಗಪಟ್ಟಣದಲ್ಲಿ ಬಿಡುಗಡೆಗೊಂಡ ಜೀವಚ್ಛವವಾಗಿದ್ದ ಕೈದಿಗಳ ಪರಿಸ್ಥಿತಿ ಅದಕ್ಕಿಂತ ಭಿನ್ನವಾಗೇನೂ ಇರಲಿಲ್ಲ. ಅವರನ್ನೆಲ್ಲ ಮತ್ತೆ ಮಂಗಳೂರಿಗೆ ತಂದು ಬಿಟ್ಟಾಗ, ಅಲ್ಲಿ ಕಂಡದ್ದೇನು? ಅವರ ಜಮೀನನ್ನು ಇನ್ಯಾರೋ ಬಳಸಿಕೊಂಡಿದ್ದರು. ತಾವು ಒಂದಾನೊಂದು ಕಾಲದಲ್ಲಿ ಬಿಟ್ಟು ಹೋದ ಮನೆಗಳೆಲ್ಲ ಪಾಳುಬಿದ್ದು ನರಿನಾಯಿಗಳ ಪಾಲಾಗಿದ್ದವು. ಇಗರ್ಜಿಗಳು ನೆಲಸಮವಾಗಿ ಅಲ್ಲೆಲ್ಲ ಮರಗಿಡಗಳು ಬೆಳೆದು ಬಿಟ್ಟಿದ್ದವು. ಕ್ರೈಸ್ತರಿಗೆ ತಮ್ಮದೆಂದು ಹೇಳಿಕೊಳ್ಳಲು ಯಾವೊಂದು ಆಸ್ತಿಪಾಸ್ತಿಯೂ ಇರಲಿಲ್ಲ. ಅವರೆಲ್ಲ ಮತ್ತೆ ಹೊಸದಾಗಿ ತಮ್ಮ ಜೀವನವನ್ನು ಶೂನ್ಯದಿಂದ ಕಟ್ಟಿಕೊಳ್ಳಬೇಕಾಗಿತ್ತು. ಆಗ ಆ ಕ್ರೈಸ್ತರ ನೆರವಿಗೆ ಬಂದವರು ಮಂಗಳೂರಿನ ಹಿಂದೂ ಜನರು.

ಟಿಪ್ಪುವಿನ ದಾಳಿಯಿಂದ ನೆಲಸಮವಾದ ಐನೂರಕ್ಕೂ ಹೆಚ್ಚಿನ ಚರ್ಚುಗಳ ನಡುನಡುವೆ ಅಲ್ಲಿ ಇಲ್ಲಿ ಒಂದೆರಡು ಚರ್ಚುಗಳು ಉಳಿದುಕೊಂಡದ್ದೂ ಉಂಟು. ಅದಕ್ಕೆ ಮುಖ್ಯ ಕಾರಣ, ಕ್ರೈಸ್ತರನ್ನು ರಕ್ಷಿಸಲೆಂದು ತಮ್ಮ ಜೀವವನ್ನೇ ಪಣವಾಗಿಟ್ಟು ನಿಂತ ಹಿಂದೂಗಳು; ಮುಖ್ಯವಾಗಿ ಬಂಟ ಸಮುದಾಯದ ಗಟ್ಟಿಗರು. ಉದಾಹರಣೆಗೆ, ಪೋರ್ಚುಗೀಸರಿಂದ ಸ್ಥಾಪಿತವಾದ, ಕಿನ್ನಿಗೋಳಿಯಲ್ಲಿರುವ ಕಿರೆಂ ರೆಮಿದಿ ಅಮ್ಮನವರ ಚರ್ಚ್ ಟಿಪ್ಪುವಿನ ಕಿರಾತಕ ಕಣ್ಣುಗಳಿಗೆ ಬೀಳದೆ ತಪ್ಪಿಸಿಕೊಂಡ ಒಂದು ಇಗರ್ಜಿ. ಇದನ್ನು ಕುಟ್ಟಿ ಪುಡಿ ಮಾಡಲು ಬಂದ ಟಿಪ್ಪು ಸೈನಿಕರನ್ನು ಇಲ್ಲಿನ ಬಂಟ ಸಮುದಾಯದ ಮಂದಿ ಹೊಡೆದು ಓಡಿಸಿದರಂತೆ. ಅಲ್ಲದೆ ಟಿಪ್ಪುಸೇನೆ ಕಿನ್ನಿಗೋಳಿಯ ಕ್ರೈಸ್ತರನ್ನು ಬಲವಂತವಾಗಿ ಸೆರೆ ಹಿಡಿದು ಕರೆದೊಯ್ದಾಗ, ಅವರ ಮಕ್ಕಳನ್ನೆಲ್ಲ ತಮ್ಮ ಮನೆಯಲ್ಲಿ ಬಚ್ಚಿಟ್ಟು ಸಾಕಿಕೊಂಡವರು ಈ ಬಂಟರೇ. ಆ ಕ್ರೈಸ್ತ ಮಕ್ಕಳಿಗೆ ತಮ್ಮ ಸಂಪ್ರದಾಯದಂತೆ ಕಿವಿಗೆ ಚಿನ್ನದ ಓಲೆ ಹಾಕಿ, ಬಂಟಮಕ್ಕಳೆಂದು ಬಿಂಬಿಸಿ, ಟಿಪ್ಪು ಸೈನಿಕರಿಂದ ಅವರನ್ನು ರಕ್ಷಿಸಿದರು. ಹದಿನೈದು ವರ್ಷಗಳ ನಂತರ ಕ್ರೈಸ್ತರು ಮತ್ತೆ ಕಿನ್ನಿಗೋಳಿಗೆ ಬಂದಿಳಿದಾಗ, ಅವರ ಕೈಗೆ ಈ ಮಕ್ಕಳನ್ನು ಒಪ್ಪಿಸಿ ಭ್ರಾತೃತ್ವ ಮೆರೆದ ಬಂಟರನ್ನು ಕಿರೆಂ ರೆಮಿದಿ ಚರ್ಚಿನವರು ಇಂದಿಗೂ ನೆನೆಸಿಕೊಳ್ಳುತ್ತಾರೆ. ವರ್ಷಂಪ್ರತಿ ಬಂಟರ ಮನೆಗಳಿಗೆ ಈ ಚರ್ಚು ವೀಳ್ಯ, ಅಡಿಕೆ, ಬಾಳೆಹಣ್ಣು ಕೊಟ್ಟು ಸನ್ಮಾನಿಸಿ ಕೃತಜ್ಞತೆ ಅರ್ಪಿಸುತ್ತಾ ಬಂದಿದೆ.

ಟಿಪ್ಪುವಿನ ಮರಣಾನಂತರ ಮಂಗಳೂರು ಬ್ರಿಟಿಷರ ಆಳ್ವಿಕೆಗೆ ಒಳಪಟ್ಟಿತು. ಕ್ರಿಸ್ತಶಕ 1800ರಲ್ಲಿ ಬ್ರಿಟಿಷರು ಮಂಗಳೂರಿನ ಜನಗಣತಿ ಮಾಡಿ, ಅಲ್ಲಿ 3,96,672 ಮಂದಿ ವಾಸಿಸುತ್ತಿದ್ದರೆಂದು ದಾಖಲಿಸಿದ್ದಾರೆ. ಅವರಲ್ಲಿ 10,877 ಮಂದಿ ಕ್ರೈಸ್ತರು. 1799ರ ಜೂನ್ ತಿಂಗಳಲ್ಲಿ ಮಂಗಳೂರಿನ ಕಲೆಕ್ಟರ್ ಆಗಿ ಬಂದ ಥಾಮಸ್ ಮನ್ರೋ ಮುಂದೆ ಮಂಗಳೂರಿನ ಕ್ರೈಸ್ತರ ಅಭಿವೃದ್ಧಿ ವಿಷಯದಲ್ಲಿ ವಿಶೇಷ ಆಸ್ಥೆ ವಹಿಸಿದ. ಕ್ರೈಸ್ತರ ಕೈ ತಪ್ಪಿ ಹೋಗಿದ್ದ ಜಮೀನನ್ನು ಮರಳಿ ದೊರಕಿಸಿಕೊಡುವುದರಲ್ಲಿ ಮಹತ್ತರ ಪಾತ್ರ ನಿರ್ವಹಿಸಿದ. ಮುಂದೆ ಜಾನ್ ಗೋಲ್ಡ್ಸ್‍ಬಾರೋ ರಾವೆನ್‍ಷಾ ಎಂಬ ಬ್ರಿಟಿಷ್ ಅಧಿಕಾರಿ ಕೂಡ ಮಂಗಳೂರಿನ ಕ್ರೈಸ್ತರ ಅಭಿವೃದ್ಧಿಗೆ ಮಹತ್ತರ ಕೊಡುಗೆ ಸಲ್ಲಿಸಿದ. ಟಿಪ್ಪು ನಾಶಪಡಿಸಿದ ನೂರಾರು ಚರ್ಚುಗಳನ್ನು ಮತ್ತೆ ಕಟ್ಟಿ ನಿಲ್ಲಿಸುವ ಕೆಲಸ ಹತ್ತೊಂಬತ್ತನೇ ಶತಮಾನದ ಪೂರ್ವಾರ್ಧದಲ್ಲಿ ಸಮರೋಪಾದಿಯಲ್ಲಿ ನಡೆಯಿತು. ಮಂಗಳೂರಿನ ಕ್ರೈಸ್ತರು ಅನುಭವಿಸಿದ ಆ ಯಾತನಾಯಾತ್ರೆ ಮತ್ತು ಮರಣ ಶಿಬಿರದ ನೆನಪಿನ ಗಾಯವೇನೋ ಮಾಗಿದೆ; ಆದರೆ ನೋವು ಮಾಯಲು ಇನ್ನೂ ಕೆಲ ದಶಕಗಳು ಬೇಕು.

Facebook ಕಾಮೆಂಟ್ಸ್

ಲೇಖಕರ ಕುರಿತು

Rohith Chakratheertha

ಓದಿದ್ದು ವಿಜ್ಞಾನ, ಮುಖ್ಯವಾಗಿ ಗಣಿತ. ಬೆಂಗಳೂರಿನಲ್ಲಿ ನಾಲ್ಕು ವರ್ಷ ಉಪನ್ಯಾಸಕನಾಗಿ ಕಾಲೇಜುಗಳಲ್ಲಿ ಪಾಠ ಮಾಡಿದ್ದ ಇವರು ಈಗ ಒಂದು ಬಹುರಾಷ್ಟ್ರೀಯ ಕಂಪೆನಿಯಲ್ಲಿ ಉದ್ಯೋಗಿ. ಹವ್ಯಾಸವಾಗಿ ಬೆಳೆಸಿಕೊಂಡದ್ದು ಬರವಣಿಗೆ. ಐದು ಪತ್ರಿಕೆಗಳಲ್ಲಿ ಸದ್ಯಕ್ಕೆ ಅಂಕಣಗಳನ್ನು ಬರೆಯುತ್ತಿದ್ದು ವಿಜ್ಞಾನ, ಗಣಿತ, ವ್ಯಕ್ತಿಚಿತ್ರ, ಮಕ್ಕಳ ಕತೆ ಇತ್ಯಾದಿ ಪ್ರಕಾರಗಳಲ್ಲಿ ಇದುವರೆಗೆ ೧೩ ಪುಸ್ತಕಗಳ ಪ್ರಕಟಣೆಯಾಗಿವೆ. ಉದ್ಯೋಗ ಮತ್ತು ಬರವಣಿಗೆಯಿಂದ ಬಿಡುವು ಸಿಕ್ಕಾಗ ತಿರುಗಾಟ, ಪ್ರವಾಸ ಇವರ ಖಯಾಲಿ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!