Featured ಅಂಕಣ

ಟಿಪ್ಪು ಜಯಂತಿಯ ಬೆನ್ನಿಗೇ ಶುರುವಾಯಿತು ಜೆಹಾದಿ ಕಗ್ಗೊಲೆಗಳ ಸಾಲು ಸಾಲು! ಯಾಕಿರಬಹುದು ಯೋಚಿಸಿದ್ದೀರಾ?

ಟಿಪ್ಪು ಜಯಂತಿಯಿಂದ ಯಾರಿಗೆ ಉಪಕಾರ ಎಂದು ಕೆಲವರು ಕೇಳುತ್ತಿದ್ದಾರೆ.

ಕಳೆದ ವರ್ಷ ಸರಕಾರ ಪ್ರತಿ ಜಿಲ್ಲಾಡಳಿತಕ್ಕೆ 50,000 ರುಪಾಯಿ, ಪ್ರತಿ ತಾಲೂಕು ಕಚೇರಿಗೆ 25,000 ರುಪಾಯಿ ಕೊಟ್ಟು “ಟಿಪ್ಪು ಸುಲ್ತಾನ್ ಜಯಂತಿಯನ್ನು ಕಡ್ಡಾಯವಾಗಿ ಆಚರಿಸತಕ್ಕದ್ದು” ಎಂಬ ಖಡಕ್ ಸುತ್ತೋಲೆ ಕಳಿಸಿತ್ತು. ನಮ್ಮೂರ ಕಡೆ ಒಂದು ತಾಲೂಕು ಪಂಚಾಯಿತಿಗೂ 25,000 ರುಪಾಯಿಗಳು ಸಂದಾಯವಾಗಿದ್ದವು. ಆ ಕಚೇರಿಯಲ್ಲಿ ನೀರಿನ ವ್ಯವಸ್ಥೆ ಇಲ್ಲ; ಇದ್ದೊಂದು ಕೊಳ ಒಡೆದು ಹೋಗಿ ಆರು ತಿಂಗಳ ಮೇಲಾಯಿತು; ಗೋಡೆಗೆ ಸುಣ್ಣಬಣ್ಣ ಹೊಡೆಸದೆ ನಾಲ್ಕು ವರ್ಷಗಳಾಗುತ್ತ ಬಂತು; ಊರಿನಲ್ಲೊಂದು ಸಣ್ಣ ಸಂಕ ಕಟ್ಟಿಸಬೇಕೆಂದು ಬೇಡಿಕೆ ಇಟ್ಟೂ ಇಟ್ಟೂ ಅರ್ಜಿ ಕೊಟ್ಟೂ ಕೊಟ್ಟೂ ಬೇಸತ್ತು ಕೊನೆಗೆ ಊರವರೇ ಒಂದಷ್ಟು ದುಡ್ಡು ಹಾಕಿ ಏನೋ ತಮ್ಮ ಸಂಕ ತಾವೇ ಕಟ್ಟಿಕೊಂಡಿದ್ದಾರೆ. ಆ ತಾಲೂಕಿನ ಕೆಲವು ರಸ್ತೆಗಳಿಗೆ ಒಂದೊಮ್ಮೆ ಓಬೀರಾಯನ ಕಾಲದಲ್ಲಿ ಜಲ್ಲಿ ಹೊಡೆಸಿದ್ದು, ಅದೀಗ ಡಾಂಬರಿಗೆ ಅನುದಾನ ಸಿಗದೆ ಮತ್ತೆ ಮಣ್ಣಿನ ರಸ್ತೆಯಾಗುವ ಸ್ಥಿತಿಗೆ ಬಂದಿದೆ. ಇಷ್ಟೆಲ್ಲ ಸಮಸ್ಯೆಗಳ ಸುಳಿಯಲ್ಲಿ ಒದ್ದಾಡುತ್ತಿದ್ದ ಆ ಕಚೇರಿಗೆ ಇದುವರೆಗೆ ಯಾವ ಅನುದಾನವೂ ಬೇಡಿಕೆ ಇಡದೆ ಬಂದದ್ದೇ ಇಲ್ಲ. ಅಂಥಾದ್ದರಲ್ಲಿ ಟಿಪ್ಪು ಜಯಂತಿಗೆ ಬೇಕಾದ ದುಡ್ಡು ಮಾತ್ರ ತಪ್ಪದೆ ಬಂತು. ಜೊತೆಗೆ ಸುತ್ತೋಲೆಯ ಎಚ್ಚರಿಕೆಯೂ ಇದ್ದದ್ದರಿಂದ ತಹಸೀಲ್ದಾರರು ಜಯಂತಿಯ ಕಾರ್ಯಕ್ರಮವನ್ನು ಅದ್ದೂರಿಯಲ್ಲವಾದರೂ ತಕ್ಕ ಮಟ್ಟಿಗೆ ಆಚರಿಸಲು ನಿರ್ಧರಿಸಿದರು. ಶಾಲೆಯೊಂದರಲ್ಲಿ ಮೂವತ್ತು ವರ್ಷ ಪಾಠ ಮಾಡಿ ನಿವೃತ್ತರಾಗಿದ್ದ ಇತಿಹಾಸದ ಮೇಷ್ಟ್ರನ್ನು ಸಂಪರ್ಕಿಸಲಾಯಿತು. “ಆ ಟಿಪ್ಪು ಮಹಾ ದಗಲ್ಬಾಜಿಯಲ್ಲವಾ? ಅವನ ವಿಷಯ ಎಂಥ ಮಾತಾಡ್ಲಿಕ್ಕುಂಟು?” ಎಂದು ನಕಾರಾತ್ಮಕವಾಗಿ ಪ್ರತಿಕ್ರಿಯಿಸಿದರು ಮೇಷ್ಟ್ರು. “ಹಾಗಲ್ಲ ಮೇಷ್ಟ್ರೇ. ಟಿಪ್ಪುವಿನ ಹಣೆಬರ ನಿಮಗೆ ಗೊತ್ತುಂಟು, ನಮಗೆ ಗೊತ್ತುಂಟು. ಆದರೆ ಸರಕಾರದ ಲೆಕ್ಕಕ್ಕೆ ಏನಾದರೂ ತೋರಿಸಬೇಕಲ್ಲವಾ? ಹಾಗಾಗಿ ಒಂದು ಕಾರ್ಯಕ್ರಮ ಇಟ್ಟುಕೊಂಡಿದ್ದೇವೆ. ನೀವು ಬಂದು ನಾಲ್ಕು ಮಾತು ಆಡಬೇಕು. ಹೋಗಿ ಬರುವ ವ್ಯವಸ್ಥೆ ಮಾಡುವ. ಮಾತಾಡಿದ್ದಕ್ಕೆ ಸ್ವಲ್ಪ ಕಾಣಿಕೆ, ಸ್ಮರಣಿಕೆಗಳನ್ನೂ ಕೊಡುವ. ಹೇಗೂ ಸರಕಾರದಿಂದ ಅನುದಾನ ಬಂದಿದೆ” ಎಂದರು ತಹಸೀಲ್ದಾರರು. ಕೊನೆಗೂ ಕಾರ್ಯಕ್ರಮ ಅಂದುಕೊಂಡಂತೆ ನಡೆಯಿತು. “ಟಿಪ್ಪು ದೇಶಪ್ರೇಮಿ. ಮಹಾ ಹೋರಾಟಗಾರ. ರಾಜ್ಯಕ್ಕಾಗಿ ಮಕ್ಕಳನ್ನು ಒತ್ತೆ ಇಟ್ಟ ಮಹಾವ್ಯಕ್ತಿ. ಮೈಸೂರು ಹುಲಿ” ಎಂದು ಹೇಳಿ ಮೇಷ್ಟ್ರು ಚಪ್ಪಾಳೆ ಗಿಟ್ಟಿಸಿ ಎರಡು ಸಾವಿರ ರುಪಾಯಿ ಜೇಬಿಗಿಳಿಸಿಕೊಂಡು ಹೋದರು. ಕಾಫಿ-ಪಕೋಡ ಆದ ಮೇಲೆ ಸಭೆ ಬರಖಸ್ತಾಯಿತು. ತಹಸೀಲ್ದಾರರು ಅನುದಾನದಲ್ಲಿ ಕೃಷ್ಣನ ಲೆಕ್ಕ ತೋರಿಸಿ, ಕನಿಷ್ಠ ಹತ್ತು ಸಾವಿರ ರುಪಾಯಿ ಉಳಿಸಿ, ಕಚೇರಿಯ ಮುರಿದ ಕುರ್ಚಿ, ಉರಿಯದ ದೀಪಗಳನ್ನು ವಿಲೇವಾರಿ ಮಾಡಿ ಕೈ ತೊಳೆದುಕೊಂಡರು. ಟಿಪ್ಪುವಿನಿಂದ ಆ ಊರಿಗೆ ಆದ ಉಪಕಾರ ಅಷ್ಟೆ.

ಟಿಪ್ಪು ಜಯಂತಿಯಿಂದ ಆತನ ಕುಲಬಾಂಧವರಾದ ಮುಸ್ಲಿಮರಿಗೇನಾದರೂ ಉಪಯೋಗವಾಗಿದೆಯೆ? ಮುಸ್ಲಿಮರಲ್ಲಿ ಯಾವುದೇ ವ್ಯಕ್ತಿಯ ಜನ್ಮದಿನವನ್ನು ಆಚರಿಸುವ ಕ್ರಮ ಇಲ್ಲ. ಆಚರಿಸಿದರೂ ಅದನ್ನು ಜಯಂತಿ ಎಂದು ಕರೆಯುವ ಕ್ರಮವಂತೂ ಇಲ್ಲವೇ ಇಲ್ಲ. ಆದರೂ ನಮ್ಮ ರಾಜ್ಯದ ಕಾಂಗ್ರೆಸ್ ಸರಕಾರ ಟಿಪ್ಪು ಹೆಸರಲ್ಲಿ ಜಯಂತಿ ನಡೆಸಲು ಮುಂದಾಗಿದೆ. ತಮ್ಮ ಮತಕ್ಕೆ ವಿರುದ್ಧವಾದ ಏನೇ ಇದ್ದರೂ ಅದನ್ನು ಉಗ್ರವಾಗಿ ಖಂಡಿಸುವ, ವಿರೋಧಿಸುವ ಮುಸ್ಲಿಮರು ಸಿದ್ದರಾಮಯ್ಯನವರ ನೇತೃತ್ವದಲ್ಲಿ ನಡೆಯುತ್ತಿರುವ ಟಿಪ್ಪು ಜಯಂತಿಯ ವಿಷಯದಲ್ಲಿ ಮಗುಮ್ಮಾಗಿದ್ದಾರೆ. ಒಂದು ಮಾಹಿತಿಯ ಪ್ರಕಾರ, ಈ ವಿಷಯದಲ್ಲಿ ಯಾವ ವಿರೋಧವನ್ನೂ ಮಾಡಬಾರದೆಂಬ ಸೂಚನೆ ಮುಸ್ಲಿಮರಿಗೆ ರವಾನೆಯಾಗಿದೆ. ಮೊದಲ ವರ್ಷದ ಜಯಂತಿ ಆಚರಣೆಯ ಸಮಯದಲ್ಲಿ ಇಡೀ ಕೊಡಗು ಹೊತ್ತಿ ಉರಿಯಿತು. ಐದು ಸಾವಿರಕ್ಕೂ ಹೆಚ್ಚು ಮಾಪಿಳ್ಳೆಗಳು ಕೇರಳದಿಂದ ಕೈಗಳಲ್ಲಿ ಜಲ್ಲಿಕಲ್ಲುಗಳನ್ನು ಹಿಡಿದೇ ಬಂದಿಳಿದಿದ್ದರು. ಗಲಭೆಗೆ ಎರಡು ಹೆಣ ಬಿತ್ತು. ಕುಟ್ಟಪ್ಪನವರು ಕಂಪೌಂಡ್ ಹತ್ತಿ ಜಾರಿ ಕೆಳಗಿದ್ದ ಕಾಂಕ್ರೀಟ್ ಕಾಲುವೆಗೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಸತ್ತರು ಎಂದು ಸ್ವತಃ ಮುಖ್ಯಮಂತ್ರಿಗಳೇ ಹೇಳಿಕೆ ಕೊಟ್ಟು ಪೊಲೀಸ್ ತನಿಖೆ ಯಾವ ದಾರಿಯಲ್ಲಿ ಸಾಗಬೇಕೆಂಬ ಸ್ಪಷ್ಟ ನಿರ್ದೇಶನ ಕೊಟ್ಟರು. ಕುಟ್ಟಪ್ಪನವರ ಸಾವನ್ನು ಆಕಸ್ಮಿಕವೆಂದು ದಾಖಲಿಸಿ, ಅವರನ್ನು ಕೊಲ್ಲಲು ಬಂದಿದ್ದ ಎಲ್ಲ ಕಿಡಿಗೇಡಿಗಳ ಮೇಲಿದ್ದ ಪ್ರಕರಣಗಳನ್ನೂ ಕೈ ಬಿಡಲಾಯಿತು. ಇತ್ತ ಬೆಂಗಳೂರಲ್ಲಿ ಟಿಪ್ಪು ಜಯಂತಿಯ ಕಾರ್ಯಕ್ರಮದಲ್ಲಿ ಮಾತಾಡುತ್ತ ಗಿರೀಶ್ ಕಾರ್ನಾಡ್ ಎಂಬ ಬುದ್ಧಿಜೀವಿಗಳು ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೂ ಟಿಪ್ಪು ಹೆಸರನ್ನೇ ಇಡಬೇಕಿತ್ತೆಂಬ ಎಡವಟ್ಟು ಹೇಳಿಕೆ ಕೊಟ್ಟು ಒಕ್ಕಲಿಗರ ದ್ವೇಷ ಕಟ್ಟಿಕೊಂಡರು. ಒಟ್ಟಾರೆಯಾಗಿ ಹೇಳುವುದಾದರೆ ಕಳೆದ ವರ್ಷ ಇಡೀ ಕರ್ನಾಟಕದ ಎಲ್ಲ ಪ್ರಜ್ಞಾವಂತರ ವಿರೋಧದ ನಡುವೆಯೂ ಟಿಪ್ಪು ಜಯಂತಿಯನ್ನು ಮಾಡಲು ಹೋಗಿ, ಮಾಡಿ ರಾಜ್ಯ ಸರಕಾರ ಹಲವರ ಅಸಮಾಧಾನವನ್ನು ಬೆನ್ನಿಗೆ ಕಟ್ಟಿಕೊಂಡಿತು.

ಅಷ್ಟೆಲ್ಲ ಆದರೂ ಈ ರಾಜ್ಯದಲ್ಲಿ ಒಬ್ಬನೇ ಒಬ್ಬ ಪ್ರಜ್ಞಾವಂತ ಮುಸ್ಲಿಮ್ ಮುಂದೆ ಬಂದು “ಹೀಗೆ ಯಾರಿಗೂ ಇಷ್ಟವಾಗದ ವ್ಯಕ್ತಿತ್ವವನ್ನು ಮುಂದಿಟ್ಟುಕೊಂಡು ಯಾಕೆ ಉತ್ಸವ ನಡೆಸುತ್ತೀರಿ? ಈ ಜಯಂತಿ ಯಾರಿಗೆ ಬೇಕಾಗಿದೆ? ಇತಿಹಾಸದಲ್ಲಿ ಮುಚ್ಚಿ ಹೋಗಿದ್ದ ಸತ್ಯಗಳನ್ನು ಈ ನೆಪದಲ್ಲಿ ಹಲವರು ಹೆಕ್ಕಿ ಗೆಬರಿ ತೆಗೆದಿಡುತ್ತಿದ್ದಾರಲ್ಲ, ಇದೆಲ್ಲ ಉಪದ್ವ್ಯಾಪ ಸರಕಾರಕ್ಕೆ ಬೇಕಾಗಿತ್ತೆ?” ಎಂದು ಕೇಳಲಿಲ್ಲ. ರಾಜ್ಯದಲ್ಲಿ ಮುಸ್ಲಿಮ್ ಬರಹಗಾರರು, ಚಿಂತಕರಿಗೇನು ಕಡಿಮೆಯೇ? ಸಾರಾ ಅಬೂಬಕ್ಕರ್, ಬಾನು ಮುಷ್ತಾಕ್, ಬೊಳುವಾರು ಮಹಮದ್ ಕುಂಞ, ರಹಮತ್ ತರೀಕೆರೆ, ರಂಜಾನ್ ದರ್ಗಾ ಎನ್ನುತ್ತ ಹಲವು ತಲೆಗಳು ನಮಗೆ ಗೋಚರಿಸುತ್ತವೆ. ಆದರೆ ಈ ಗುಂಪಿನ ಯಾರೊಬ್ಬರೂ ಸರಕಾರದ ಕಿವಿ ಹಿಂಡುವ ಕೆಲಸ ಮಾಡಲಿಲ್ಲ. ಮಂಗಳೂರಿನ ಕ್ರೈಸ್ತರು, ಕೇರಳದ ನಂಬೂದರಿಗಳು, ವಯನಾಡಿನ ನಾಯರ್‍ಗಳು, ಮೇಲುಕೋಟೆಯ ಅಯ್ಯಂಗಾರರು, ಚಿತ್ರದುರ್ಗದ ಬೇಡರು, ಮಡಿಕೇರಿಯ ಕೊಡವರು, ಕರಾವಳಿಯ ಕೊಂಕಣಿಗರು – ಈ ಎಲ್ಲಾ ಸಮುದಾಯಗಳ ದ್ವೇಷ ಕಟ್ಟಿಕೊಂಡ ಒಬ್ಬ ಧೂರ್ತನ ಜಯಂತಿ ಬೇಡ ಸ್ವಾಮೀ, ಕೈಬಿಡಿ ಎಂದು ರಾಜ್ಯದ ಒಂದಾದರೂ ಮುಸ್ಲಿಮ್ ಬುದ್ಧಿಜೀವಿ ಸಿದ್ದರಾಮಯ್ಯನವರಿಗೆ ಹಿತವಚನ ಹೇಳಲು ಮುಂದೆ ಬರಲಿಲ್ಲ. ಈ ಟಿಪ್ಪು ನಮ್ಮ ಆದರ್ಶ ಅಲ್ಲ; ನಮ್ಮ ಸಮುದಾಯದ ಪ್ರತಿನಿಧಿ ಅಲ್ಲ ಎಂದು ಯಾವ ಮುಸ್ಲಿಮನೂ ಜೋರುದನಿಯಲ್ಲಿ ಘೋಷಿಸಲಿಲ್ಲ. ಒಂದು ರೀತಿಯಲ್ಲಿ ಇವರೆಲ್ಲ ಟಿಪ್ಪುವನ್ನು ತಮ್ಮ ಆದರ್ಶ ಎಂದು ಒಪ್ಪಿಕೊಂಡಂತಿತ್ತು. ರಾಜ್ಯ ಸರಕಾರ ಟಿಪ್ಪುವನ್ನು ವೈಭವೀಕರಿಸುವ ಮೂಲಕ ತಮ್ಮ ಸಮುದಾಯಕ್ಕೆ ಒಳ್ಳೆಯದು ಮಾಡುತ್ತಿದೆ ಎಂದೇ ಮುಸ್ಲಿಮ್ ಬುದ್ಧಿಜೀವಿಗಳು ಕೂಡ ಭಾವಿಸಿದಂತಿತ್ತು.  

ಇಂದು ಟಿಪ್ಪು ಜಯಂತಿ ಬೇಕಾಗಿರುವುದು ಸರಕಾರದೊಳಗಿರುವ, ಖಜಾನೆ ಕೊರೆವ ಕೆಲವು ಹೆಗ್ಗಣಗಳಿಗೆ ಮಾತ್ರ. ಒಂದು ಮಾಹಿತಿಯ ಪ್ರಕಾರ ಕರ್ನಾಟಕ ಸರಕಾರ ಜಿಲ್ಲೆ-ತಾಲೂಕುಗಳಿಗೆ ಹೇಗೆ 70 ಲಕ್ಷ ರುಪಾಯಿ ಹಂಚಿದೆಯೋ ಹಾಗೆಯೇ ಬೆಂಗಳೂರು ಮತ್ತು ಮೈಸೂರುಗಳಲ್ಲಿ ನಡೆಸಿರುವ 2-3 ಕಾರ್ಯಕ್ರಮಗಳಿಗೇ ಒಂದು ಕೋಟಿ ರುಪಾಯಿ ಖರ್ಚು ಮಾಡಿದೆ. ಕಾರ್ಯಕ್ರಮ ನಡೆಸಿದ್ದಕ್ಕಿಂತ ಹೆಚ್ಚಾಗಿ ಕೊಡಗಿನಲ್ಲಿ ನಡೆದ ಗಲಭೆಯನ್ನು ನಿಯಂತ್ರಿಸುವುದಕ್ಕೇ ಸರಕಾರ ಹೆಚ್ಚು ಬುದ್ಧಿ, ದುಡ್ಡು ಮತ್ತು ಪೊಲೀಸ್ ಬಲವನ್ನು ಖರ್ಚು ಮಾಡಬೇಕಾಯಿತು. ಜೊತೆಗೆ ಈ ಜಯಂತಿಯನ್ನು ಸಮರ್ಥಿಸಿಕೊಳ್ಳಲು ಒಂದಷ್ಟು ಬುದ್ಧಿಜೀವಿಗಳನ್ನೂ ಸಾಕಿಕೊಳ್ಳಬೇಕಾದ ಅನಿವಾರ್ಯತೆ ಬಂದಿದೆ. ನಮಗೆಲ್ಲ ಗೊತ್ತಿರುವಂತೆ ಸರಕಾರದಿಂದ ಜೇನು ಇಳಿಯದಿದ್ದರೆ ಈ ಬುದ್ಧಿಜೀವಿಗಳು ಮನೆಯ ಹೊಸಿಲು ದಾಟಿ ಹೊರಗಿಳಿಯುವವರಲ್ಲ. ಹಾಗಿರುವಾಗ ಮೇಲಿಂದ ಮೇಲೆ ಟಿಪ್ಪು ಬಗ್ಗೆ ಲೇಖನಗಳನ್ನೂ ಭಾಷಣಗಳನ್ನೂ ಟೌನ್‍ಹಾಲ್ ಹೋರಾಟಗಳನ್ನೂ ಆಯೋಜಿಸುತ್ತಿರುವ ಬುದ್ಧಿಗೇಡಿ ಬುದ್ಧಿಜೀವಿಗಳಿಗೆ ಸರಕಾರದ ಎಷ್ಟು ದೊಡ್ಡ ಇಡುಗಂಟು ಹೋಗಿರಬಹುದು? ಮುಖ್ಯವಾಗಿ ಟಿಪ್ಪು ಜಯಂತಿ ಬೇಕಿರುವುದು ತನ್ನ ಸ್ವಕ್ಷೇತ್ರ ವರುಣಾದಲ್ಲಿ ಗೆಲ್ಲಲು ಮುಸ್ಲಿಮ್ ಓಟುಗಳನ್ನು ನೆಚ್ಚಿಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ, ಅವರ ಕ್ಯಾಬಿನೆಟ್‍ನಲ್ಲಿರುವ ಒಂದಿಬ್ಬರು ಮುಸ್ಲಿಮ್ ಸಚಿವರಿಗೆ, ಕಾಂಗ್ರೆಸ್‍ನಲ್ಲಿರುವ ಮುಸ್ಲಿಮ್ ಶಾಸಕರಿಗೆ ಮತ್ತು ಟಿಪ್ಪು ಹೆಸರು ಹೇಳಿಕೊಂಡು ಒಂದೆರಡು ಪುಸ್ತಕ ಬರೆದು ಬದುಕು ರೂಪಿಸಿಕೊಂಡಿರುವ ಕೆಲವು ಬುದ್ಧಿಜೀವಿಗಳಿಗೆ ಮಾತ್ರ. ರಾಜ್ಯದ ಜನಸಂಖ್ಯೆಯಲ್ಲಿ ಈ ವ್ಯಕ್ತಿಗಳ ಶೇಕಡಾವಾರು 0.001% ಕೂಡ ಇಲ್ಲ. ಬೆರಳೆಣಿಕೆಯಷ್ಟು ಜನರ ವೈಯಕ್ತಿಕ ಹಿತಾಸಕ್ತಿಗಳಿಗಾಗಿ ಮುಖ್ಯಮಂತ್ರಿಗಳು ಒಬ್ಬ ಮುಟ್ಟಾಳನ ಜಯಂತಿ ಮಾಡುವುದು ಎಷ್ಟು ಸರಿ?

ನಮಗೆಲ್ಲ ಗೊತ್ತಿರುವಂತೆ ಟಿಪ್ಪು ಮತಾಂಧನಾಗಿದ್ದ. ತನ್ನ ಮತಕ್ಕೆ ಸೇರದ ಲಕ್ಷಾಂತರ ಜನರನ್ನು ಕೊಲ್ಲಿಸಿದ, ವರ್ಷಗಳಷ್ಟು ಕಾಲ ಹಿಂಸಿಸಿದ. ಮಂಗಳೂರಿಂದ 80,000 ಕ್ರೈಸ್ತರನ್ನು ಕೈಕಾಲುಗಳಿಗೆ ಸಂಕೋಲೆ ಬಿಗಿದು ಶ್ರೀರಂಗಪಟ್ಟಣದವರೆಗೆ ನಡೆಸಿದ ಟಿಪ್ಪು ಅವರನ್ನೆಲ್ಲ ಹದಿನೈದು ವರ್ಷ ಸೆರೆಯಲ್ಲಿಟ್ಟ. ಸೆರೆಯಿಂದ ಹೊರ ಬಂದ ಕೆಲವರಿಗೆ ಕೈಯಲ್ಲಿ ಚಮಚ ಹಿಡಿಯುವುದಕ್ಕೂ ಆಗುತ್ತಿರಲಿಲ್ಲ. ಕ್ರೈಸ್ತರು ವಾಪಸು ಮಂಗಳೂರಿಗೆ ಹೋದಾಗ ಅವರದ್ದೆನ್ನುವ ಯಾವ ಆಸ್ತಿಪಾಸ್ತಿಗಳೂ ಇರಲಿಲ್ಲ. ಕ್ರೈಸ್ತರ ಮನೆ, ಜಮೀನು, ಚರ್ಚುಗಳು – ಎಲ್ಲವನ್ನೂ ಟಿಪ್ಪುವಿನ ಸೈನಿಕರು ದುಗ್ಗಾಣಿಯುಳಿಸದೆ ದೋಚಿಕೊಂಡು ಹೋಗಿದ್ದರು. ಭಸ್ಮ ಬುಧವಾರವೆಂಬ ಪವಿತ್ರದಿನದಂದು ನಡೆಸಿದ ದಾಳಿಯಲ್ಲಿ ಟಿಪ್ಪುವಿನ ಸೈನಿಕರು ಇಡೀ ಮಂಗಳೂರು ಪ್ರಾಂತ್ಯದಲ್ಲಿ ಒಬ್ಬನೇ ಒಬ್ಬ ಕ್ರೈಸ್ತ ತಪ್ಪಿಸಿಕೊಳ್ಳಲು ಅವಕಾಶವಾಗದಂತೆ ನೋಡಿಕೊಂಡರು. ಹದಿನೈದು ವರ್ಷಗಳ ಹಿಂಸಾತ್ಮಕ ಯಾತನಾಶಿಬಿರವನ್ನು ಮುಗಿಸಿ ಮತ್ತೆ ಮಂಗಳೂರು ಸೇರಿಕೊಳ್ಳುವಂತಾದದ್ದು 11,000 ಜನರಿಗೆ ಮಾತ್ರ. ಉಳಿದ 70,000 ಅಮಾಯಕರು ಟಿಪ್ಪುವಿನ ಹಿಂಸಾಚಾರದಲ್ಲಿ ಅಸುನೀಗಿದರು. ತನ್ನದು ಅಲ್ಪಸಂಖ್ಯಾತರ ಸರಕಾರ ಎಂದು ರಾಜಾರೋಷವಾಗಿ ಹೇಳಿಕೊಳ್ಳುತ್ತಿರುವ ಸಿದ್ದರಾಮಯ್ಯನವರು ಅದನ್ನು “ಮುಸ್ಲಿಮರ ಸರಕಾರ” ಎಂದು ತಿದ್ದಿ ಘೋಷಿಸುವುದು ಒಳ್ಳೆಯದು. ಬಹಳ ನೇರವಾಗಿ ಹೇಳುವುದಾದರೆ ಈ ದೇಶದಲ್ಲಿ ಮುಸ್ಲಿಮರನ್ನು ಇಂದಿಗೂ ಸಂಶಯದಿಂದ ನೋಡಲಾಗುತ್ತದೆ. ಧರ್ಮಾಂಧ, ಮತಾಂಧ ಎಂಬ ಶಬ್ದಗಳು ಕಾಣಿಸಿಕೊಂಡಾಗ ಹೆಚ್ಚಿನವರ ಮನಸ್ಸಿನಲ್ಲಿ ಮೂಡುವ ಚಿತ್ರ ಒಬ್ಬ ಮುಸ್ಲಿಮನದ್ದೇ ಆಗಿರುತ್ತದೆ. ಯಾಕೆಂದರೆ ಒಟ್ಟು ಮುಸ್ಲಿಂ ಜನಸಂಖ್ಯೆಯಲ್ಲಿ 2% ಕೂಡ ಇಲ್ಲದ ಭಯೋತ್ಪಾದಕರಿಂದಾಗಿ ಇಡೀ ಮುಸ್ಲಿಮ್ ಸಮುದಾಯದ ಮೇಲೆ ಕರಿಮುಸುಕು ಬಿದ್ದಿದೆ. ಬೆಂಗಳೂರಂಥ ನಗರಗಳಲ್ಲಿ ಮುಸ್ಲಿಮರಿಗೆ ಗೇಟೆಡ್ ಕಮ್ಯುನಿಟಿಗಳಲ್ಲಿ ಮನೆಗಳು ಸಿಗುವುದಿಲ್ಲ. ಮುಸ್ಲಿಮರ ಜೊತೆ ಮುಸ್ಲಿಮರಲ್ಲದವರು ವ್ಯವಹಾರ ಇಟ್ಟುಕೊಳ್ಳುವುದಿಲ್ಲ; ಬ್ಯುಸಿನೆಸ್ಸಿಗೆ ಇಳಿಯುವುದಿಲ್ಲ. ಒಟ್ಟಾರೆ ಹೇಳುವುದಾದರೆ ಪ್ರತಿಯೊಬ್ಬ ಮುಸ್ಲಿಮನನ್ನೂ ಈ ದೇಶದ ಇತರ ಜನ ಭಯೋತ್ಪಾದಕನೆಂದು, ಅಥವಾ ಭಯೋತ್ಪಾದಕ ಮತದ ಪ್ರತಿನಿಧಿಯೆಂದು ಭಾವಿಸುತ್ತಾರೆ. ಹಾಗಿರುವಾಗ ನಮ್ಮ ರಾಜ್ಯದ ಮುಖ್ಯಮಂತ್ರಿಗಳು ಮಾಡಿದ್ದೇನು? ಜನ ಯಾವ ಚಾರಿತ್ರಿಕ ನೋವನ್ನು ಮರೆಯಲು ಬಯಸುತ್ತಿದ್ದಾರೋ ಅಂತಹ ಗತಕಾಲದ ಹುಣ್ಣುಗಳನ್ನು ಮತ್ತೆ ಕೆರೆದು ದೊಡ್ಡದು ಮಾಡಿ “ನನ್ನ ಮರ್ಜಿಯೇ ಹೀಗೆ” ಎಂಬ ಸಂದೇಶ ಕೊಡಲು ಹೊರಟಿದ್ದಾರೆ. ಯಾವ ಮುಸ್ಲಿಮ್ ಸಮುದಾಯವನ್ನು ಉಳಿದವರು ಭಯೋತ್ಪಾದಕರ ಅಪರಾವತಾರ ಎಂಬ ಉತ್ಪ್ರೇಕ್ಷಿತ ಭಾವನೆಯಿಂದ ದೂರವಿಟ್ಟಿದ್ದಾರೋ, ಅಂತಹ ಮುಸ್ಲಿಮ್ ಸಮುದಾಯದ ನಾಯಕನೆಂದು ಟಿಪ್ಪುವನ್ನು ಬಿಂಬಿಸಲು ನಮ್ಮ ಮುಖ್ಯಮಂತ್ರಿಗಳು ಹೊರಟಿದ್ದಾರೆ. ಮಾತ್ರವಲ್ಲ; ಕರ್ನಾಟಕದ ಮುಸ್ಲಿಮರಿಗೆ ಟಿಪ್ಪುವನ್ನು ಬಿಟ್ಟರೆ ಬೇರೆ ನಾಯಕ ಚರಿತ್ರೆಯಲ್ಲಿ ಸಿಗಲು ಸಾಧ್ಯವಿಲ್ಲ ಎಂಬ ಸಂದೇಶವನ್ನು ಕೂಡ ರವಾನಿಸುತ್ತಿದ್ದಾರೆ. ಇದು ನಿಜಕ್ಕೂ ಗಂಭೀರವಾದ ಪರಿಣಾಮಗಳನ್ನು ಭವಿಷ್ಯದಲ್ಲಿ ತಂದೊಡ್ಡುವ ನಡೆ.

ಇಂದು ಈ ರಾಜ್ಯದ ಪ್ರಜ್ಞಾವಂತ ಜನರಿಗೆ ಟಿಪ್ಪುವಿನ ಮೇಲೆ ದ್ವೇಷವಿರುವುದು ಆತ ಮುಸ್ಲಿಮ್ ಎಂಬ ಕಾರಣಕ್ಕಲ್ಲ. ಬದಲಿಗೆ ಆತ ರಾಜ್ಯದಲ್ಲಿ ಶಾಂತಿಯುತವಾಗಿ ಬಾಳಿ ಬದುಕುತ್ತಿದ್ದ ಹತ್ತಾರು ಸಮುದಾಯಗಳನ್ನು ಬಲವಂತವಾಗಿ ಮತಾಂತರಿಸಿದ ಎಂಬ ಕಾರಣಕ್ಕೆ ಮಾತ್ರ. ಆದರೆ ಸರಕಾರಕ್ಕೂ ಮುಸ್ಲಿಮ್ ಸಮುದಾಯಕ್ಕೂ ಟಿಪ್ಪುವಿನ ಮೇಲೆ ಪ್ರೀತಿಯಿರುವುದು ಆತ ಮಹಾನ್ ಆಡಳಿತಗಾರ, ಸುಧಾರಣಾವಾದಿ ಅಥವಾ ಮುತ್ಸದ್ದಿಯಾಗಿದ್ದ ಎಂಬ ಕಾರಣಕ್ಕಲ್ಲ; ಬದಲಿಗೆ ಮುಸ್ಲಿಮ್ ಆಗಿದ್ದ ಮತ್ತು ಸಾವಿರಾರು ಜನರನ್ನು ಇಸ್ಲಾಮ್ ಮತಕ್ಕೆ ಮತಾಂತರಿಸಿದ ಎಂಬ ಕಾರಣಕ್ಕೆ ಮಾತ್ರ. ಈ ಎರಡು ವೈರುಧ್ಯಗಳನ್ನು ನಾವು ಅರ್ಥ ಮಾಡಿಕೊಳ್ಳಬೇಕು. ತನ್ನ ಕರ್ಮಠ ಆಚರಣೆ, ಸಂಪ್ರದಾಯ, ಮೂಲಭೂತವಾದಗಳಿಂದ ಹೊರಬಂದು ಸಮಾಜದ ಉಳಿದವರ ಅನುರಾಗ ಗಳಿಸಬೇಕಿದ್ದ ಮುಸ್ಲಿಮ್ ಸಮುದಾಯವನ್ನು ಮತ್ತೆ ಹಿಂದಕ್ಕೆಳೆದು ಮತ್ತಷ್ಟು ಉಗ್ರವಾಗುವಂತೆ ಮಾಡಲು ಟಿಪ್ಪು ಈಗ ನೆಪವಾಗಿ ಬಂದಿದ್ದಾನೆ ಎಂಬುದನ್ನು ನಾವು ನೆನಪಿಡಬೇಕು. 2015ರಲ್ಲಿ ಟಿಪ್ಪು ಜಯಂತಿಯ ಹೆಸರಲ್ಲಿ ಕೊಡಗಿನಲ್ಲಿ ಕಾಣಿಸಿಕೊಂಡ ಐದು ಸಾವಿರಕ್ಕೂ ಹೆಚ್ಚು ಮಾಪಿಳ್ಳೆ ಮುಸ್ಲಿಮರು ಕತ್ತಿ, ಕಲ್ಲು, ಕುಡಗೋಲು ಹಿಡಿದು ಇಡೀ ಜಿಲ್ಲೆಯಲ್ಲಿ ಭೀತಿಯ ವಾತಾವರಣ ಸೃಷ್ಟಿಸಿದ್ದೇ ಇದಕ್ಕೊಂದು ಜ್ವಲಂತ ದೃಷ್ಟಾಂತ. ಅಂದರೆ ರಾಜ್ಯದಲ್ಲಿ ಇದುವರೆಗೆ ಕಾಣಿಸಿಕೊಳ್ಳದ ಮುಸ್ಲಿಮ್ ಮೂಲಭೂತವಾದ ಹುಟ್ಟಿಕೊಳ್ಳಲು ಟಿಪ್ಪು ಜಯಂತಿ ಪ್ರೇರಣೆಯಾಗಿದೆ. ಹಿಂಸಾತ್ಮಕ ಮನೋಭಾವದ ಕೆಲವರಿಗೆ ಟಿಪ್ಪು ಒಬ್ಬ ಆದರ್ಶವಾಗಿ ಒದಗಿ ಬಂದಿದ್ದಾನೆ. ಟಿಪ್ಪು ಜಯಂತಿಯ ಮೂಲಕ ಸಿದ್ದರಾಮಯ್ಯನವರು ಕೇವಲ ಒಂದು ಆಚರಣೆಯನ್ನಷ್ಟೇ ಪ್ರಾರಂಭಿಸುತ್ತಿರುವುದಲ್ಲ; ಬದಲು, ನಕ್ಸಲ್‍ನಂತಹ ಹೊಸ ಹಿಂಸಾಚಾರಿಗಳ ಚಳವಳಿ ಕರ್ನಾಟಕದಲ್ಲಿ ಹುಟ್ಟಿಕೊಳ್ಳುವುದಕ್ಕೂ ಕಾರಣರಾಗುತ್ತಿದ್ದಾರೆ. ಗಮನಿಸಿ ನೋಡಿ: ಕರ್ನಾಟಕದಲ್ಲಿ ಸಿದ್ದರಾಮಯ್ಯನವರ ಸರಕಾರ ಬಂದ ಬಳಿಕದ ಮೊತ್ತಮೊದಲ ದೊಡ್ಡ ಮಟ್ಟದ ಕೋಮುಗಲಭೆ ಸುರುವಾಗಿದ್ದು, ಕೊಲೆ ನಡೆದು ಹೋದದ್ದು ಟಿಪ್ಪು ಜಯಂತಿ ಪ್ರಾರಂಭವಾದ ಮೇಲೆ. ಕುಟ್ಟಪ್ಪನವರ ಕೊಲೆಯಾಗುವುದಕ್ಕೆ ಒಂದೇ ಒಂದು ತಿಂಗಳ ಹಿಂದೆ ಪ್ರಶಾಂತ್ ಪೂಜಾರಿಯನ್ನು ಮತಾಂಧ ಕುನ್ನಿಗಳು ಬರ್ಬರವಾಗಿ ಕೊಚ್ಚಿ ಕೊಲೆಗೈದು ಹೋಗಿದ್ದವು. ಕುಟ್ಟಪ್ಪನವರ ಕೊಲೆಯೊಂದಿಗೆ ಈ ರಾಜ್ಯದಲ್ಲಿ ಮತಾಂಧ ಶಕ್ತಿಗಳ ವಿಜೃಂಭಣೆ ಪ್ರಾರಂಭವಾಯಿತು. ಮೈಸೂರು ರಾಜು, ಪ್ರವೀಣ್ ಪೂಜಾರಿ, ರುದ್ರೇಶ್, ಮಾಗಳಿ ರವಿ, ಯೋಗೇಶ್ ಗೌಡರ್, ಕಿತಗಾನಹಳ್ಳಿ ವಾಸು, ಬೆಂಗಳೂರು ಹರೀಶ್, ಬಂಡಿ ರಮೇಶ್, ಶರತ್ ಮಡಿವಾಳ ಮತ್ತು ಮೊನ್ನೆ ಮೊನ್ನೆಯಷ್ಟೇ ಹೆಣವಾಗಿ ಮಲಗಿದ ಜುಬೈರ್.. ಈ ಎಲ್ಲ ಕೊಲೆಗಳ ಹಿಂದಿರುವುದೂ ಒಂದು ಮತಾಂಧ ಮನಸ್ಥಿತಿಯಷ್ಟೇ. ಅಂಥ ಮತಾಂಧ ಶಕ್ತಿಗಳನ್ನು ಈ ರಾಜ್ಯದಲ್ಲಿ ವಿಜೃಂಭಿಸಲು ಬಿಟ್ಟು ಹಿಂದೂಗಳನ್ನು ತುಳಿಯುವ ಏಕೈಕ ಉದ್ದೇಶದಿಂದ ಟಿಪ್ಪು ಜಯಂತಿಯನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಅದಕ್ಕೇ ನೋಡಿ, ಇವರಿಗೆ ಸಂತ ಶಿಶುನಾಳ ಷರೀಫರ ಜಯಂತಿ ಮಾಡಬೇಕು ಅನ್ನಿಸುವುದಿಲ್ಲ. ಯಾಕೆಂದರೆ ಷರೀಫಜ್ಜನ ವ್ಯಕ್ತಿತ್ವ ಜೆಹಾದಿ ಮನಸ್ಸುಗಳನ್ನು ಪ್ರೇರೇಪಿಸುವಂಥದ್ದಲ್ಲ. ಅದು ಎಲ್ಲ ಮತ-ಧರ್ಮಗಳ ಸಾಮರಸ್ಯ ಬಯಸುವ ವ್ಯಕ್ತಿತ್ವ ತಾನೇ? ಸಿದ್ದರಾಮಯ್ಯನವರ ಸರಕಾರಕ್ಕೆ ಬೇಕಿರುವುದು ರಾಜ್ಯದಲ್ಲಿ ಹಿಂದೂಗಳನ್ನು, ಸಂಘ ಪರಿವಾರದ ಕಾರ್ಯಕರ್ತರನ್ನು ಟಾರ್ಗೆಟ್ ಮಾಡಿ ಕೊಲೆ ಮಾಡುವಂಥ ಮನೋವೇದಿಕೆಯನ್ನು ನಿರ್ಮಿಸಬಲ್ಲ, ಹಿಂಸೆಗೆ ಪ್ರಚೋದಿಸಬಲ್ಲ ರಕ್ತಪಿಪಾಸು ಜೆಹಾದಿ ನಾಯಕನ ಜಯಂತಿ. ಹಾಗಾಗಿ, ಟಿಪ್ಪುವಲ್ಲದೆ ಬೇರಾರು?

ಜಯಂತಿಗಳನ್ನು ಆಚರಿಸುವ ಉದ್ದೇಶ ಏನು? ಮರೆತು ಹೋಗುತ್ತಿರುವ ಮೌಲ್ಯಗಳನ್ನು ನೆನಪಿಸಿಕೊಳ್ಳುವುದು, ಹಳೆಯದರ ಪರಿಚಯವಿಲ್ಲದ ಹೊಸ ತಲೆಮಾರಿಗೆ ಹಿಂದಿನ ಮೌಲ್ಯ, ಸಂಸ್ಕೃತಿ, ಸಂಪ್ರದಾಯಗಳನ್ನು ದಾಟಿಸುವುದು. ಆ ನಿಟ್ಟಿನಲ್ಲಿ ಯೋಚಿಸಿದರೆ ಸದ್ಯದ ಪರಿಸ್ಥಿತಿಯಲ್ಲಿ ನಮಗೆ ಬೇಕಿರುವುದು ಈ ನೆಲದಲ್ಲಿ ನೂರಾರು ವರ್ಷಗಳ ಹಿಂದೆ ಆಗಿ ಹೋದ ಸಾಧುಸಂತರ ಜಯಂತಿಗಳು ಮಾತ್ರ ಎಂದು ನನಗನ್ನಿಸುತ್ತದೆ. ಯಾಕೆಂದರೆ ಕಾಲಾತೀತವಾಗಿ ಉಳಿಯುವಂಥ ಕೆಲವಾದರೂ ಸಂಗತಿಗಳನ್ನು ಕೊಟ್ಟಿರುವವರು ಈ ದೇಶದ ಸಾಧುಸಂತರು, ಕವಿಗಳು, ಕಲಾವಿದರು ಮಾತ್ರ. ರಾಜಕೀಯ ನಾಯಕರು, ಅದೆಷ್ಟೇ ಪ್ರಭಾವಶಾಲಿಗಳಾಗಿರಲಿ, ಕಾಲ ಬದಲಾದಂತೆ ಅವರ ರಾಜಕೀಯ ಚಿಂತನೆಗಳು ಬದಲಾಗಬೇಕಾಗುತ್ತದೆ. ಹಾಗಾಗಿ ಯಾವ ರಾಜ ಅಥವಾ ರಾಜಕೀಯ ನಾಯಕನನ್ನೂ ಹೇಗಿದ್ದನೋ ಹಾಗೆ ಈಗ ಒಪ್ಪಿಕೊಳ್ಳುವುದು ಸಾಧ್ಯವೇ ಇಲ್ಲ. ಟಿಪ್ಪು ಮಾತ್ರವಲ್ಲ, ಶಿವಾಜಿ, ಅಶೋಕ, ಸಾವರ್ಕರ್, ಅಂಬೇಡ್ಕರ್ ಈ ಯಾರ ಜಯಂತಿಯೂ ಈಗಿನ ಕಾಲಘಟ್ಟದಲ್ಲಿ ಮಹತ್ತರವಾದ ಮೌಲ್ಯವನ್ನು ನಮಗೆ ಮತ್ತು ನಮ್ಮ ಮುಂದಿನ ತಲೆಮಾರಿಗೆ ದಾಟಿಸುತ್ತದೆ ಎಂದು ಭಾವಿಸುವಂತಿಲ್ಲ. ಹಾಗಾಗಿ ನಮ್ಮ ರಾಜಕೀಯ ನಾಯಕರನ್ನು ಅವರ ಪಾಡಿಗೆ ಬಿಟ್ಟು ನಾವು ಸಂತ ಶಿಶುನಾಳ ಷರೀಫ, ಕನಕದಾಸ, ವಾಲ್ಮೀಕಿ, ಅಲ್ಲಮ ಪ್ರಭು, ಸರ್ವಜ್ಞ, ಕುಮಾರವ್ಯಾಸ, ಕುವೆಂಪು, ಕೆ.ಎಸ್. ನರಸಿಂಹಸ್ವಾಮಿ ಮುಂತಾದವರ ಜಯಂತಿಗಳನ್ನು ಹೆಚ್ಚು ಹೆಚ್ಚು ಆಚರಿಸಬೇಕಾಗಿದೆ. ಮತ್ತು ಈ ಯಾವ ಜಯಂತಿಯೂ ಸರಕಾರದ ಬಣ್ಣಬಣ್ಣದ, ಲಕ್ಷಾಂತರ ರುಪಾಯಿ ತಿನ್ನುವ ಕಾರ್ಯಕ್ರಮಗಳಿಗೆ ಸೀಮಿತವಾಗಬಾರದು. ಜಯಂತಿಗಳು ಜನರ ಉತ್ಸವಗಳಾಗಬೇಕು. ಜನರೇ ಇಷ್ಟಪಟ್ಟು ತಮ್ಮ ಮನೆಮನೆಗಳಲ್ಲಿ, ಬೀದಿ-ಕೇರಿಗಳಲ್ಲಿ ಆಚರಿಸುವ ಕಾರ್ಯಕ್ರಮಗಳಾಗಬೇಕು. ಸರಕಾರ ನಡೆಸುವ ಜಯಂತಿ, ಅದು ನಡೆಸುವಷ್ಟು ಕಾಲ ಮಾತ್ರ ನಡೆದು ಆಮೇಲೆ ಅಂತರ್ಧಾನವಾಗಿಬಿಡುತ್ತದೆ. ಗಾಂಧಿ ಜಯಂತಿಯನ್ನು ಸರಕಾರ ಯಾವ ಸರಕಾರೀ ಪ್ರಕಟಣೆ ಕೊಡದೆ ಮೌನವಾಗಿ ನಿಲ್ಲಿಸಿ ಬಿಟ್ಟರೆ ನಮಗ್ಯಾರಿಗೂ ಗೊತ್ತೇ ಆಗುವುದಿಲ್ಲವೆನ್ನುವಷ್ಟರ ಮಟ್ಟಿಗೆ ಸರಕಾರೀ ಜಯಂತಿಗಳು ಪ್ರಸ್ತುತತೆ ಕಳೆದುಕೊಂಡಿವೆ. ಸಿದ್ದರಾಮಯ್ಯನವರ ಸರಕಾರ ಟಿಪ್ಪು ಜಯಂತಿಯನ್ನು ಇನ್ನೆಷ್ಟು ವರ್ಷ ಆಚರಿಸಬಹುದು? ಈ ವರ್ಷದವರೆಗೆ ಆಚರಿಸಬಹುದು ಅಷ್ಟೆ. ಹೊಸ ಸರಕಾರ ಬಂದು, ಅದು ಈ ಜಯಂತಿ ಅಸಂಬದ್ಧ ಮತ್ತು ಅನಗತ್ಯ ಎಂದು ಭಾವಿಸಿದರೆ ಟಿಪ್ಪು ಕಾಲನ ದಫ್ತರಕ್ಕೆ ಸೇರಿ ಹೋಗುತ್ತಾನೆ. ಟಿಪ್ಪು ಜಯಂತಿಯಿಂದ ಯಾವ ದೀರ್ಘಕಾಲೀನ ಲಾಭಗಳೂ ಇಲ್ಲ ಎಂಬುದಕ್ಕೆ ಇದಕ್ಕಿಂತ ದೊಡ್ಡ ಉದಾಹರಣೆ ಬೇಕಿಲ್ಲ.

ನಮಗೆ ಬೇಕಿರುವುದು ಜಯಂತಿಗಳೋ ಅಭಿವೃದ್ಧಿ ಕೆಲಸಗಳೋ? ಅಧಿಕಾರದಲ್ಲಿರುವಷ್ಟು ಕಾಲ ಮಾತ್ರ ನಡೆಯುವ ಅನ್ನಭಾಗ್ಯ, ಶಾದಿಭಾಗ್ಯ, ಟಿಪ್ಪು ಜಯಂತಿಯಂತಹ ಸಂಗತಿಗಳೋ ಅಥವಾ ಹತ್ತಾರು ವರ್ಷ ಜನರ ನಡುವೆ ಉಳಿಯುವ ದೀರ್ಘಕಾಲೀನ ಸಾಧನೆಗಳೋ? ರಾಜಮಹಾರಾಜರಾಗಿ ಮೆರೆದವರು ಕೂಡ ಅಧಿಕಾರದಿಂದ ಕೆಳಗಿಳಿದೊಡನೆ ಅವರನ್ನು ಮೂಲೆಯಲ್ಲಿ ಕೂರಿಸಿ ಮರೆಯುವ ಸಂಸ್ಕೃತಿ ನಮ್ಮದು. ಕರ್ನಾಟಕವನ್ನು ಎರಡು ವರ್ಷ ಆಳಿದ ಧರಂಸಿಂಗ್ ಇಂದು ಅಪ್ರಸ್ತುತರಾಗಿದ್ದಾರೆ. ಬಂಗಾಳವನ್ನು ಇಪ್ಪತ್ತೈದು ವರ್ಷ ಆಳಿದ ಜ್ಯೋತಿ ಬಸು ಇಂದು ಬಂಗಾಳಿಗಳಿಗೆ ಬಹುತೇಕ ಮರೆತೇ ಹೋಗಿದ್ದಾರೆ. ಆದರೆ ಈ ದೇಶದಲ್ಲಿ ಎಲ್ಲವನ್ನೂ ಕೈಬಿಟ್ಟು ಅಪ್ಪಟ ಪರದೇಸಿಗಳಂತೆ ಬರಿಗಾಲಲ್ಲಿ ಓಡಾಡಿದ ತುಲಸೀದಾಸ, ಪುರಂದರದಾಸ, ಕಬೀರ, ಮೀರಾಬಾಯಿಯರನ್ನು ನಾವು ಇಂದೂ ಪ್ರತಿನಿತ್ಯ ನೆನೆಯುತ್ತಿದ್ದೇವೆ. ಅದಕ್ಕೇ ಇರಬೇಕು ಓಶೋ ಒಮ್ಮೆ ಹೇಳಿದ್ದರು, ಇದು ರಾಜರ ದೇಶವಲ್ಲ; ಸಂತ-ಫಕೀರರ ದೇಶ ಅಂತ. ಸಿದ್ದರಾಮಯ್ಯನವರು ಅದೆಷ್ಟೇ ವಿಜೃಂಭಣೆಯಿಂದ ಟಿಪ್ಪುವನ್ನು ಆರಾಧಿಸಿದರೂ ಆತನನ್ನೂ ಸಿದ್ದರಾಮಯ್ಯನವರನ್ನೂ ಕನ್ನಡಿಗ ಇನ್ನು ಕೆಲ ವರ್ಷಗಳಲ್ಲಿ ಮರೆಯುವುದನ್ನು ಯಾರೂ ತಡೆಯಲಾರರು.

Facebook ಕಾಮೆಂಟ್ಸ್

ಲೇಖಕರ ಕುರಿತು

Rohith Chakratheertha

ಓದಿದ್ದು ವಿಜ್ಞಾನ, ಮುಖ್ಯವಾಗಿ ಗಣಿತ. ಬೆಂಗಳೂರಿನಲ್ಲಿ ನಾಲ್ಕು ವರ್ಷ ಉಪನ್ಯಾಸಕನಾಗಿ ಕಾಲೇಜುಗಳಲ್ಲಿ ಪಾಠ ಮಾಡಿದ್ದ ಇವರು ಈಗ ಒಂದು ಬಹುರಾಷ್ಟ್ರೀಯ ಕಂಪೆನಿಯಲ್ಲಿ ಉದ್ಯೋಗಿ. ಹವ್ಯಾಸವಾಗಿ ಬೆಳೆಸಿಕೊಂಡದ್ದು ಬರವಣಿಗೆ. ಐದು ಪತ್ರಿಕೆಗಳಲ್ಲಿ ಸದ್ಯಕ್ಕೆ ಅಂಕಣಗಳನ್ನು ಬರೆಯುತ್ತಿದ್ದು ವಿಜ್ಞಾನ, ಗಣಿತ, ವ್ಯಕ್ತಿಚಿತ್ರ, ಮಕ್ಕಳ ಕತೆ ಇತ್ಯಾದಿ ಪ್ರಕಾರಗಳಲ್ಲಿ ಇದುವರೆಗೆ ೧೩ ಪುಸ್ತಕಗಳ ಪ್ರಕಟಣೆಯಾಗಿವೆ. ಉದ್ಯೋಗ ಮತ್ತು ಬರವಣಿಗೆಯಿಂದ ಬಿಡುವು ಸಿಕ್ಕಾಗ ತಿರುಗಾಟ, ಪ್ರವಾಸ ಇವರ ಖಯಾಲಿ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!