ಅಂಕಣ

ರಾಷ್ಟ್ರೀಯತೆ ನಮ್ಮ ನರನಾಡಿಗಳಲ್ಲಿ ಅವ್ಯಾಹತವಾಗಿ ಪಸರಿಸಲಿ

ಕಾಲ ಬದಲಾಗಿದೆ. ಹೌದು, ಇದು ಆಗಲೇಬೇಕಿತ್ತು. 2014ರ ಮೊದಲು ಕೆಲವು ವ್ಯಕ್ತಿಗಳ ಮೇಲಿನ ನನ್ನ ವೈಚಾರಿಕ ದೃಷ್ಟಿಕೋನ ಬೇರೆಯದೇ ಆಗಿತ್ತು ಮತ್ತು ಈಗ ಇವತ್ತಿನ ಸಮಯದಲ್ಲಿ ಆ ದೃಷ್ಟಿಕೋನ ಬದಲಾಗಿದೆ. 2014ರ ಮೊದಲು ಮೇಧಾ ಪಾಟ್ಕರ್ ಎಂದರೆ ಅಪ್ರತಿಮ ಪರಿಸರ ಹೋರಾಟಗಾರ್ತಿ ಎಂದುಕೊಂಡಿದ್ದೆ ನಾನು, 2014ರ ಮೊದಲು ಅರುಂಧತಿ ರಾಯ್ ಎಂದರೆ ಅಪ್ರತಿಮ ದೇಶಭಕ್ತೆ ಎಂದುಕೊಂಡಿದ್ದೆ ನಾನು, 2014ರ ಮೊದಲು ಪ್ರಕಾಶ್ ರೈ ಎಂದರೆ ಒಬ್ಬ ಜಾತ್ಯಾತೀತ ನಟನೆಂದು ನಂಬಿದ್ದೆ ನಾನು, 2014ರ ಮೊದಲು ಕೈಲಾಶ್ ಸತ್ಯಾರ್ಥಿ ಎಂದರೆ ಕೇವಲ ಮಕ್ಕಳಹಕ್ಕಿನ ಹೋರಾಟಗಾರ ಎಂದುಕೊಂಡಿದ್ದೆ ನಾನು, ಆದರೀಗ? ಹೋರಾಟಗಾರರು ಎಂದು ಮುಖವಾಡ ತೊಟ್ಟಿದ್ದ ಅದೆಷ್ಟೋ ಡೋಂಗಿಗಳ ನೈಜ ಚಿತ್ರಣ ನನಗೆ ದೊರಕಿದೆ. ಯಾರು ರಾಷ್ಟ್ರಪ್ರೇಮಿಗಳು ಮತ್ತು ಯಾರು ರಾಷ್ಟ್ರವಿರೋಧಿಗಳು ಎಂಬ ಸೂಕ್ಷ್ಮ ನನ್ನ ಮನಸ್ಸಿಗೆ ನಾಟಿದೆ.  ರಾಷ್ಟ್ರೀಯತೆಯ ವಿಚಾರದಲ್ಲಿ ಭಾರತೀಯರು ಭಯಂಕರವಾಗಿ ಜಾಗೃತರಾಗಿದ್ದಾರಲ್ಲ ಇನ್ನೇನು ಬೇಕು ದೇಶ ಬದಲಾಗಿದೆ ಎಂದು ಹೇಳಲು. ದೇಶದೊಳಗಿನ ಜನರ ರಾಷ್ಟ್ರೀಯತೆ ಜಾಗೃತವಾದರೆ ಸಾಕು ಕೇವಲ ಸಾಮಾನ್ಯ ಜನರುಗಳು ಆಂತರಿಕ ದೇಶವಿರೋಧಿಗಳಿಂದ ಈ ದೇಶವನ್ನು ರಕ್ಷಿಸಿಬಿಡುತ್ತಾರೆ ಅಥವಾ ದೇಶ ಕಾಯುವ ಸೈನಿಕರಿಗೆ ಬೇಕಾದ ಆತ್ಮಸ್ಥೈರ್ಯವನ್ನು ತುಂಬಿಬಿಡುತ್ತಾರೆ. ಈಗ ಆಗುತ್ತಿರುವುದು ಕೂಡ ಅದೇ ಅಲ್ಲವಾ?.

‘ಅಭಿವ್ಯಕ್ತಿ ಸ್ವಾತಂತ್ರ್ಯ’. ಇದು ರಾಷ್ಟ್ರ ವಿರೋಧಿಗಳ ಆಯುಧ. ಕನ್ಹಯ್ಯಾ ಕುಮಾರ್ ‘ಭಾರತ್ ತೆರೆ ಟುಕಡೇ ಹೋಂಗೆ …’ ಅಂದಾಗಿನಿಂದ ಇತ್ತೀಚಿಗೆ ಜಮ್ಮುವಿನಲ್ಲಿ ಸೈನಿಕರ ಮೇಲೆ ಕಲ್ಲು ಎಸೆಯುವ ತಂಡದ ಮುಂದಾಳುವನ್ನು ಪೋಲೀಸ್ ಅಧಿಕಾರಿಯೊಬ್ಬ  ತನ್ನ ಜೀಪಿನ ಮುಂದೆ ಕಟ್ಟಿದಾಗಿನವರೆಗಿನ ಎಲ್ಲ ಘಟನೆಗಳನ್ನು ಒಮ್ಮೆ ಮೆಲುಕು ಹಾಕಿ ಆಗೆಲ್ಲ ಈ ಡೋಂಗಿ ವಿಚಾರವಾದಿಗಳ ಅಸ್ತ್ರವಾಗಿದ್ದು ಇದೆ ‘ಅಭಿವ್ಯಕ್ತಿ ಸ್ವಾತಂತ್ರ್ಯ’ ಎಂಬ ಶಬ್ಧ. ‘ಈ ದೇಶದ ಜ್ಞಾನ ಪರಂಪರೆಯು ಕೇವಲ ಓದು-ಬರಹದ್ದಲ್ಲ ಅಥವಾ ಕೇವಲ ಮಾಹಿತಿಯೂ ಅಲ್ಲ. ಇಲ್ಲಿ ಜ್ಞಾನವೆಂದರೆ ಮನುಷ್ಯತ್ವ ಮತ್ತು ಅದರ ಬಗ್ಗೆ ಸಂಸ್ಕಾರ ನೀಡುವುದಾಗಿದೆ. ಅದಿಲ್ಲವಾದರೆ ಮನುಷ್ಯ ಸಾಕ್ಷರ ರಾಕ್ಷಸನಾಗುತ್ತಾನೆ. ಭಾರತದ ಜ್ಞಾನವನ್ನು ಎಲ್ಲ ಕಡೆಯಿಂದಲೂ ಸ್ವೀಕರಿಸುವ ವ್ಯಾಪಕ ದೃಷ್ಟಿ ನಮಗೆಲ್ಲ ಇರಬೇಕು. ಇದು ಸತ್ಯಾನ್ವೇಷಣೆಯ ಪರಂಪರೆ. ಹೀಗಿರುವಾಗ ಈ ದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ಅಗುತ್ತದೆ ಎನ್ನುವುದು ಅಸಂಬದ್ಧ ಮತ್ತು ಹಾಸ್ಯಾಸ್ಪದ. ಇಲ್ಲಿ ಜಾತ್ಯಾತೀತತೆಗೆ ಧಕ್ಕೆಯಾಗಿದೆ ಎಂಬ ಮಾತು ಕೂಡ ಅವಮಾನಕಾರಿ; ಏಕೆಂದರೆ ಇಲ್ಲಿ ಸರ್ವಪಂಥಗಳ ಸಮಭಾವವಿತ್ತು ಮತ್ತು ಈಗಲೂ ಇದೆ. ವಿವಿಧ ದೇಶಗಳಲ್ಲಿ ಚದುರಿ ಹೋಗಿದ್ದ ಯಹೂದಿಗಳು ಇಸ್ರೇಲಿನಲ್ಲಿ ಒಟ್ಟು ಸೇರಿದಾಗ ಹಿಂದೆ ತಾವು ಬೇರೆ ಬೇರೆ ದೇಶಗಳಲ್ಲಿ ಪಡೆದ ಅನುಭವಗಳನ್ನು ಹಂಚಿಕೊಂಡರು. ಭಾರತದಿಂದ ಹೋದವರು ತಾವು ಈ ದೇಶದಲ್ಲಿ ಗೌರವದಿಂದ ಬದುಕಿದೆವು ಎಂದು ಹೇಳಿಕೊಂಡರು. ಇಂತಹ ನಮಗೆ ನೀವು ಧರ್ಮದಿಂದ ನಿರಪೇಕ್ಷತೆಯನ್ನು ಕಲಿಸುತ್ತೀರಾ ?’ ಹೀಗೆಂದು ಸಂಘದ ಹಿರಿಯರೊಬ್ಬರು ಒಮ್ಮೆ ಹೇಳಿದ್ದರು. ಸತ್ಯವಲ್ಲವ ಈ ಮಾತು?

ಮೋದಿ ಯಾವತ್ತು ಅಧಿಕಾರ ಸ್ವೀಕರಿಸಿದರೋ ಆವತ್ತಿನಿಂದ ಈ ಸೋಗಲಾಡಿ ಅಭಿವ್ಯಕ್ತಿ ಸ್ವಾತಂತ್ರ್ಯದ ಹೋರಾಟಗಾರರು ಬೆಳಕಿಗೆ ಬಂದರು. ಯಾವ ಕಾಂಗ್ರೆಸ್ ಸರಕಾರ ಹಣವನ್ನು ನೀಡಿ ಒಂದಿಷ್ಟು ಬುದ್ದಿಜೀವಿಗಳನ್ನು ಪರೋಕ್ಷವಾಗಿ ಬೆಳೆಸುತ್ತಿತ್ತೋ ಅವರೆಲ್ಲರಿಗೂ ಬೇಕಾದ ಸಮಯದಲ್ಲಿ ಸರಕಾರ ನೀಡುವ ಹಣ ಸಿಗಲೇ ಇಲ್ಲ. ಹಣದ ಮಾತು ಆಮೇಲೆ ಆದರೆ ಅವರನ್ನು ಕನಿಷ್ಟ ಮಾತನಾಡುವ ಕೆಲಸವನ್ನೂ ಮೋದಿ ಮಾಡಲಿಲ್ಲ. ಮೋದಿ ಇಂತವರ ಆಂತರ್ಯವನ್ನು ಸ್ಪಷ್ಟವಾಗಿ ಅರಿತವರಾಗಿದ್ದರು. ಮಾಧ್ಯಮ ಎನ್ನುವ ಬಣ್ಣ ಬಣ್ಣದ ಬಟ್ಟೆ ತೊಟ್ಟು ಅಮ್ಮ ಮಗನ ಎದಿರು ನಡು ಬಗ್ಗಿಸಿ ಕೈ ಚಾಚುತ್ತಿದ್ದ ಈ ಸೊ ಕಾಲ್ಡ್ ಬುದ್ದಿಜೀವಿಗಳನ್ನು ಮೋದಿ ಹತ್ತಿರಕ್ಕೂ ಬಿಟ್ಟುಕೊಳ್ಳಲಿಲ್ಲ. ಇದು ಅವರೆಲ್ಲರಿಗೂ ನುಂಗಲಾರದ ತುತ್ತಾಗಿತ್ತು. ಭಾರತವೆಂಬ ಸಮೃದ್ಧ ರಾಷ್ಟ್ರವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಳಪೆಯಾಗಿ ಚಿತ್ರಿಸಿ ಹಣ ಪೀಕುತ್ತಿದ್ದ ಅದೆಷ್ಟೋ ಬಕೆಟ್ ಪತ್ರಕರ್ತರು ಸರಕಾರದ ಬಂಗಲೆಗಳಲ್ಲಿ ತಿಂದುಂಡುಕೊಂಡು ಹಾಯಾಗಿದ್ದರು ಯಾವಾಗ  ಮೋದಿ ಅವರೆಲ್ಲರ ಅಂಡಿಗೆ ಜಾಡಿಸಿ ಒದ್ದು ಸರಕಾರಿ ಬಂಗಲೆಯಿಂದ ಓಡಿಸಿದರೋ ಆಗ ಈ ಎಲ್ಲರಿಗೂ ದಾರಿ ತೋರಿಸಿದ್ದು ಕಮ್ಯುನಿಸ್ಟರ ಚಿಂತನೆಗಳು, ಅದರಲ್ಲೂ ಪ್ರಮುಖವಾಗಿ ರಾಷ್ಟ್ರ ವಿರೋಧಿ ಚಿಂತನೆಗಳು. ಈ ಚಿಂತನೆಗಳನ್ನು ಜೀವಂತವಾಗಿರಿಸಲು ಬಳಸಿಕೊಂಡಿದ್ದು ‘ಅಭಿವ್ಯಕ್ತಿ ಸ್ವಾತಂತ್ರ್ಯ’ ಎನ್ನುವ ಮಾನವ ಹಕ್ಕಿನ ಪಾಠ.  

ಮೋದಿ ಎಂಬ ವ್ಯಕ್ತಿಯನ್ನು ಹಣಿಯಲು ಅವರು ಬಳಸಿದ ಈ ಮಾರ್ಗ ತಕ್ಕ ಮಟ್ಟಕ್ಕೆ ಯಶಸ್ಸನ್ನೂ ನೀಡಿತು. ಆದರೆ ಮೋದಿಯೆಂಬ ವ್ಯಕ್ತಿಗಿಂತ ಬಹುಮುಖ್ಯವಾದದ್ದು ದೇಶ ಅಥವಾ ‘ರಾಷ್ಟ್ರೀಯತೆ’ ಎಂಬ ಚಿಂತನೆ ಎಂಬುದನ್ನು ಜನಸಾಮಾನ್ಯರೂ ಅರಿತಿದ್ದರು. ಪರಿಣಾಮ ಮೋದಿಯ ಜೊತೆ ಅನ್ನುವುದಕ್ಕಿಂತ ದೇಶಕ್ಕಾಗಿ ಜನ ಒಂದಾದರು. ಒಕ್ಕೊರಲ ಭಾರತ್ ಮಾತಾ ಕೀ ಜೈ ಘೋಷ ಕಮ್ಮಿಗಳ ಬುಡ ಅಲ್ಲಾಡಿಸಿತು.

ಪಾಠ ಮಾಡಿದಂತೆ ನಾಟಕ ಮಾಡಿ ಸತ್ಯವನ್ನು ಮತ್ತು  ನಮ್ಮವರ ಸಾಹಸಗಾಥೆಗಳನ್ನು ಮುಚ್ಚಿಡುತ್ತಾ ಸುಳ್ಳು ಇತಿಹಾಸವ ಬೋಧಿಸಿದ್ದೇ ಅರವತ್ತು ವರ್ಷದ ಇವರ ಸಾಧನೆ. ಬ್ರಿಟೀಷರು ಮತ್ತು ಕಮ್ಮುನಿಸ್ಟರು ರೂಪಿಸಿರುವ ಈ ಪಠ್ಯಕ್ರಮ ಹೇಗಿದೆಯೆಂದರೆ ಕಳೆದ ಎರಡೂವರೆ ದಶಕಗಳಿಂದಲೂ ನಮ್ಮ ಮೇಲೆ ವಿದೇಶೀ ದಾಳಿಕೋರರಿಂದ ಆಕ್ರಮಣ ಆಗುತ್ತಲೇ ಇದೆ ಮತ್ತು ನಮ್ಮ ದೇಶ ಸೋಲುತ್ತಲೇ ಇದೆ, ನಮ್ಮಲ್ಲಿ ಅವರಿಗೆ ಎದಿರೇಟು ನೀಡಿದ ಹೋರಾಟಗಾರರೇ ಇಲ್ಲ ಎನ್ನುವಂತಿದೆ . ಈಗೀಗ ಏನು ನಡೆಯುತ್ತಿದೆ ಅಂದರೆ ನಮ್ಮ ಮೇಲೆ ಆಕ್ರಮಣ ಮಾಡಿದವರನ್ನೇ ‘ಭಾರತ ಭಾಗ್ಯವಿಧಾತರು’, ‘ಇಲ್ಲಿಗೆ ಸಂಸ್ಕೃತಿ ಮತ್ತು ಸಮಾನತೆಗಳನ್ನು ಹೊತ್ತು ತಂದವರು’ ಎಂದು  ವೈಭವೀಕರಿಸುವ ಕೆಲಸ ನಡೆದಿದೆ . ಆದರೆ ಭಾರತವನ್ನು ಈ ದಾಳಿಗಳಿಂದ ರಕ್ಷಿಸಿದ ಸಾವಿರಾರು ಹೋರಾಟಗಾರರ ಕಥೆ ಹೇಳಿದರೆ ‘ಕೋಮುವಾದ ಬಿತ್ತುವ ಕೆಲಸ’ ಎನ್ನುತ್ತಾರೆ ಎಂದರೆ ಇದು ಬೌದ್ಧಿಕ ದಾರಿದ್ರ್ಯವಲ್ಲದೆ ಇನ್ನೇನು?

ಇತಿಹಾಸವೊಂದು ವಾಸ್ತವ. ವಾಸ್ತವವೂ ಇತಿಹಾಸವೇ. ವಾಸ್ತವವನ್ನು ಮತ್ತು ಸತ್ಯಸಂಗತಿಗಳನ್ನು ಎದುರಿಸಲು ವಿಫಲವಾಗುವ ಜನಾಂಗಗಳಿಗೆ ವಿನಾಶ ಕಟ್ಟಿಟ್ಟ ಬುತ್ತಿ. ನಮ್ಮ ಪರಂಪರೆ, ನಮ್ಮ ಸಂಸ್ಕೃತಿಗಳಿಗೆ ಅನೇಕ ಸಹಸ್ರವರ್ಷಗಳ ಇತಿಹಾಸವಿದೆ. ನಾವು ಶತ್ರುಗಳನ್ನು ಅರಿಯಲು ವಿಫಲರಾದೆವು. ನಮ್ಮಲ್ಲಿ ಶೌರ್ಯ – ಶಕ್ತಿಗಳಿದ್ದರೂ ಅಪಾತ್ರರಿಗೆ ಕ್ಷಮೆ ನೀಡಿ ಪೆಟ್ಟು ತಿಂದೆವು. ಅಕ್ಬರನನ್ನು ಗೌರವಿಸುವ ನಮ್ಮ ಇತಿಹಾಸ ರಾಣಾ ಪ್ರತಾಪನನ್ನು ಕೀಳಾಗಿ ಕಾಣುತ್ತದೆ. ದೇಶಭಕ್ತಿಯ ಪಾಠ ಹೇಳಿದರೆ ಸಾಂಪ್ರದಾಯಿಕತೆ(ಕೋಮುವಾದ) ಎನ್ನುತ್ತಾರೆ.  ಭಾರತ ಋಷಿ ಸಂದೇಶದ ದೇಶ. ಇದು ಜನರ ಕಲ್ಯಾಣವಷ್ಟೇ ಅಲ್ಲ. ಗಿಡ-ಮರ, ಪಶು-ಪಕ್ಷಿ ಎಲ್ಲದರ ಹಿತ ಬಯಸಿದ ದೇಶ. ಇಂತಹ ವಿಚಾರ ಭಾರತದಲ್ಲಿ ಮಾತ್ರ ಕಾಣಲು ಸಾಧ್ಯ. ಆದರೆ ಅದರ ತಪ್ಪು ವ್ಯಾಖ್ಯಾನ ಮಾಡುತ್ತಾರೆ. ಸ್ವಾತಂತ್ರ್ಯಕ್ಕಾಗಿ ಪ್ರಾಣಾರ್ಪಣೆ ಮಾಡಿದ ಕ್ರಾಂತಿಕಾರಿಗಳನ್ನು ಭಯೋತ್ಪಾದಕರೆಂದು ಕರೆಯುತ್ತಾರೆ. ಇವೆಲ್ಲವನ್ನೂ ಮಾಡುತ್ತಿರುವುದು ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ತೇಲಾಡುತ್ತಿರುವ  ಸೋಗಲಾಡಿಗಳು  ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ .

ನಮ್ಮಿಂದ ದೂರವಿಡಲ್ಪಟ್ಟ ಇತಿಹಾಸವ ಮತ್ತೆ ನಾವು ಓದಬೇಕು. ಭವ್ಯ ಭಾರತದ ಅಖಂಡ ಇತಿಹಾಸ ನಮ್ಮ ಮನವನ್ನು ಆವರಿಸಿ ನರನಾಡಿಯಲ್ಲಿ ಅವ್ಯಾಹತವಾಗಬೇಕು. ರಾಷ್ಟ್ರ ಪ್ರೇಮಿಗಳು ಜಾಗೃತವಾದರೆ ಮಾತ್ರ ದೇಶವಿರೋಧಿ ಚಿಂತನೆಗಳಿಂದ ಭಾರತವನ್ನು ರಕ್ಷಿಸಿಕೊಳ್ಳಲು ಸಾಧ್ಯ. ಇಲ್ಲವಾದರೆ ಕೆಂಪು ಉಗ್ರರು ತಮ್ಮ ರಕ್ತಸಿಕ್ತ  ರಾಕ್ಷಾಸೀಯ ಅಧ್ಯಾಯವನ್ನೇ ದಿವ್ಯಗ್ರಂಥ ಎನ್ನುತ್ತಾರೆ ಅದರಲ್ಲಿ ಯಾವುದೇ ಅನುಮಾನ ಬೇಡ. ಮೋದಿಯನ್ನು ಆತನೀಡುವ ಪ್ರತಿ ಹೆಜ್ಜೆಯಲ್ಲೂ ಹೀಯಾಳಿಸುತ್ತ, ಛೇಡಿಸುತ್ತಾ ಸುಖ ಪಡೆಯುತ್ತಿರುವ ಈ ಲಾಪಳ್ಳರಿಗೆ ಉತ್ತರ ಕೊಡಬೇಕಾದದ್ದು ನಾವು ಜನಸಾಮಾನ್ಯರೇ ಹೊರತು ದೇಶಕ್ಕಾಗಿಯೇ ಬದುಕುತ್ತಿರುವ ಮೋದಿಯಲ್ಲ.

ಬಹಳ ವರ್ಷಗಳ ನಂತರ ಒಬ್ಬ ಕೆಲಸ ಮಾಡುವ ಪ್ರಧಾನಿ ಸಿಕ್ಕಿದ್ದಾನೆ. ಆತ ಅಧಿಕಾರ ವಹಿಸಿಕೊಂಡ ನಂತರ ಆಡಳಿತಾತ್ಮಕವಾಗಿ ಭಾರತ ‘ಅದ್ಭುತ’ ಎನ್ನುವಷ್ಟು ಬದಲಾಯಿತು. ಮೋದಿ ಸರಕಾರ ಕೆಲವೊಂದು ವಿಚಾರಗಳಲ್ಲಿ ತೆಗೆದುಕೊಂಡ ನಿರ್ಣಯಗಳು ನಿಜಕ್ಕೂ ಅಶ್ಚರ್ಯಕರವಾದದ್ದು ಮತ್ತು ಅವಶ್ಯಕವಾದದ್ದು. ಯಾವತ್ತು ಒಂದು ಸರಕಾರ ನಿರ್ಧಾರಗಳನ್ನು ಬಹಳ ವೇಗವಾಗಿ ಹಾಗೂ ಸೂಕ್ಷ್ಮವಾಗಿ ಅವಲೋಕಿಸಿ ತೆಗೆದುಕೊಳ್ಳುತ್ತದೋ ಆಗ ಆ ನಿರ್ಧಾರಗಳು ದೇಶಕ್ಕೆ ತುಂಬಾ ಸಹಾಯಕವಾಗುತ್ತದೆ. ಮೋದಿ ಸರಕಾರ ಒಂದರ್ಥದಲ್ಲಿ ‘ಡಿಸಿಸಿವ್’ ಎಂದು ಹೇಳಬಹುದು. ಇನ್ನೊಂದು ಬಹಳ ಮುಖ್ಯವಾದ ವಿಶೇಷ ಸಂಗತಿ ಏನೆಂದರೆ ಸಾಮಾನ್ಯ ಜನರೂ ಕೂಡ ಸರಕಾರದ ಪ್ರತೀ ನಿಲುವನ್ನು ಸೂಕ್ಷ್ಮವಾಗಿ ಗಮನಿಸುತ್ತಾ, ಅದರ ಒಳಿತು ಕೆಡುಕುಗಳ ಬಗ್ಗೆ ಚರ್ಚಿಸುವುದು. ಇದು ಒಂದು ರಾಷ್ಟ್ರದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಭಾರತ ಜನ ಮೋದಿಯ ಪ್ರತೀ ನಿಲುವುಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವುದು ಒಳ್ಳೆಯ ಬೆಳವಣಿಗೆ ಎನ್ನಬಹುದಲ್ಲವೇ?

ದೇಶ ಒಡೆಯುವ ಸಂಚಿಗೆ ನೂರಾರು ಮುಖವಿದೆ. ಈ ದೇಶದ ಜವಾಬ್ದಾರಿಯುತ ನಾಗರೀಕರಾಗಿ ಈ ಮುಖವಾಡ ಧರಿಸಿರುವವರನ್ನು ಪತ್ತೆಹಚ್ಚುವ ಕೆಲಸ ಮಾಡದಿದ್ದರೆ ಮುಂದೊಂದು ದಿನ ‘ನಮ್ಮತನ’ ನಾಶವಾಗಬಹುದು. ಈ ನಿಟ್ಟಿನಲ್ಲಿ  ಯೋಚಿಸೋಣ ಅಲ್ಲವೇ?.

 

Facebook ಕಾಮೆಂಟ್ಸ್

ಲೇಖಕರ ಕುರಿತು

Prasanna Hegde

ಹೆಸರು ಪ್ರಸನ್ನ ಹೆಗಡೆ.ಹುಟ್ಟಿದ್ದು,ಬೆಳೆದಿದ್ದು ಬದುಕನ್ನ ಅನುಭವಿಸಿದ್ದು ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಸಮೀಪದ ಹಳ್ಳಿಯೊಂದರಲ್ಲಿ.ನನ್ನ camera,ಪ್ರೀತಿಯ ನನ್ನ ನಾಯಿ ಜೊತೆಗಿದ್ದರೆ ನನ್ನನ್ನೂ ನಾ ಮರೆಯುತ್ತೇನೆ.ಹಾಗಾಗಿ ಪಕ್ಕಾ ಮಲೆನಾಡಿನ ಹುಡುಗ.ಅವಶ್ಯಕತೆ,ಅನಿವಾರ್ಯತೆಯ ಕಾರಣ ಬದುಕುತ್ತಿರುವುದು ಮೈಸೂರಿನಲ್ಲಿ.Chartered Accountancy ಯ ಭಾಗವಾದ Articleship ಅನ್ನು ಮಾಡುತ್ತಿದ್ದೇನೆ.ಬರೆಯುವುದು ಕೇವಲ ಹವ್ಯಾಸವಲ್ಲ ನನ್ನ ಜೀವನದ ಅವಿಭಾಜ್ಯ ಅಂಗ.ರಾಜಕೀಯವನ್ನ ನಾನು ಇಷ್ಟಪಡುತ್ತೇನೆ...ಆಸೆಯಿದೆ ಸಮಾಜಕ್ಕೆ ನನ್ನ ಕೈಲಾದಷ್ಟು ನೀಡಬೇಕೆಂಬುದು.. ಮತ್ತೇನು ನನ್ನ ಬಗ್ಗೆ ಹೇಳಿಕೊಳ್ಳುವಂತದ್ದಿಲ್ಲ

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!