ಅಂಕಣ

ಪ್ರೇಮ ಹೊಸತಲ್ಲ, ಆದರೆ  ಮತ ವಿಸ್ತಾರಕ್ಕೆ ಪ್ರೇಮದಸ್ತ್ರ ಭಾರತಕ್ಕೆ ಹೊಸತೇ!

ಪ್ರೇಮ ಎನ್ನುವುದು ಭಾರತೀಯ ಪರಂಪರೆಗೆ ಹೊಸದಾದ ಸಂಗತಿಯೇನಲ್ಲ. ಪ್ರೇಮ ಎನ್ನುವುದು ನಮ್ಮ ಪರಂಪರೆಯಲ್ಲಿ ಇರಲೇ ಇಲ್ಲ ಎನ್ನುವುದಕ್ಕೆ ಯಾವ ಮಾನ್ಯತೆಯ ಕಲ್ಪನೆಯೂ ಇಲ್ಲ. ಶಂಕರಾಚಾರ್ಯರ ಕಾಲದವರೆಗೂ ಸಂನ್ಯಾಸತ್ವವೂ ಕೂಡ ಭಾರತದಲ್ಲಿ ಕ್ರಮಸಂನ್ಯಾಸದ ರೂಪದಲ್ಲಿಯೇ ಇದ್ದದ್ದು. ಕ್ರಮಸಂನ್ಯಾಸ ಎಂದರೆ ಬ್ರಹ್ಮಚರ್ಯ, ಗೃಹಸ್ಥ, ವಾನಪ್ರಸ್ಥ ಮತ್ತು ಸಂನ್ಯಾಸ ಹೀಗೆ ನಾಲ್ಕೂ ಆಶ್ರಮಗಳ ಮೂಲಕ ಸಾಗಿ ಬರುವಂಥದ್ದು. ಇಲ್ಲಿ ಪ್ರೇಮ, ವಿವಾಹ, ವಿವಾಹದ ನಂತರದ ಪ್ರೇಮ ಇವೆಲ್ಲವೂ ಸಹಜವಾಗಿಯೇ ಇದ್ದಂಥವು. ಬುದ್ಧನ ನಂತರವೇ ಅದೊಂದು ಭಿನ್ನ ರೂಪ ಪಡೆದಿತಷ್ಟೇ. ಬುದ್ಧ ಪ್ರೇಮದ ವಿಚಾರವಾಗಿ ಬಹಳವಾಗಿ ಹೇಳಿದ. ಆದರೆ, ಪ್ರೇಮ ಎನ್ನುವುದು ದೇಹ ವಾಂಛೆಯಾಗಿ ಬದಲಾಗದೇ ಅದು ಆಧ್ಯಾತ್ಮಿಕ ಔನ್ನತ್ಯವನ್ನು ದೊರಕಿಸಿವ ಸಂಗತಿಯಾಗಿಸಿದ. ಬುದ್ಧನ ಪ್ರೇಮ ಪ್ರವಾಹವೇ ಜಗತ್ತನ್ನು ಆಧ್ಯಾತ್ಮದ ರಸದಲ್ಲಿ ಕೊಚ್ಚಿಹೋಗುವಂತೆ ಮಾಡಿದ್ದು.

ಹಾಗಂತ ಅದಕ್ಕೂ ಮುನ್ನ ಪ್ರೇಮದ ಕಲ್ಪನೆ ಇರಲಿಲ್ಲವೆಂದಲ್ಲ. ರಾಮ ಸೀತೆಗಾಗಿ ಕಾಡಿನಲ್ಲಿ ಪರಿತಪಿಸುವ ವರ್ಣನೆ ಅಲೌಕಿಕ ಭಾವವನ್ನು ಕಟ್ಟಿಕೊಡುತ್ತದೆ. ಅದು ಬರಿಯ ದೇಹದ ರೋದನವಲ್ಲ, ಆತ್ಮದ ಆಕ್ರಂದನ. ಆತ ಸೀತೆಯೊಡನೆ ಆನಂದದಿಂದ ಬದುಕಿದ್ದಕ್ಕಿಂತ ಆಕೆಯಿಂದ ದೂರವಿದ್ದು ದುಃಖಿಸಿದ್ದೇ ಹೆಚ್ಚು. ರಾವಣನ ಮುಷ್ಟಿಯಿಂದ ಸೀತೆಯನ್ನು ಬಿಡುಗಡೆಯಾಗಿಸಿಕೊಂಡು ಬಂದಮೇಲೆ ಅಗ್ನಿ ಪರೀಕ್ಷೆಗೆ ಆಕೆಯನ್ನು ದೂಡುವ ಅವನ ತಪನ ಎಂಥದ್ದಿರಬೇಕು ಯೋಚಿಸಿ. ಇದೊಂದು ಮಹೋನ್ನತ ಪ್ರೇಮಕಾವ್ಯವೇ ಸರಿ. ಆನಂತರವೂ ಆಗಿದ್ದೇನು? ರಾಜಧರ್ಮಕ್ಕಾಗಿ ಸೀತೆಯನ್ನು ತ್ಯಾಗ ಮಾಡಬೇಕಾಗಿ ಬಂದಿತು. ಆತ ಆಕೆಯ ವಿರಹದಲ್ಲಿಯೇ ಜೀವನವನ್ನು ಕಳೆದ, ನೊಂದು-ಬೆಂದ. ಸತಿ-ಪತಿಯರ ಪ್ರೇಮದ ಆದರ್ಶ ಕಲ್ಪನೆ ಅದೇ. ಮಮ್ತಾಜ್‌ಳನ್ನು ಕಳಕೊಂಡ ಮೇಲೆ ಅವಳ ತಂಗಿಯನ್ನು ಮದುವೆಯಾದ ಷಹಜಹಾನ್‌ನಂತೆ ಅಲ್ಲ!

ಕೃಷ್ಣನಂತೂ ಪ್ರೇಮದ ಪ್ರತಿರೂಪವೇ. ಆತ ಗೋಪಿಕಾ ಸ್ತ್ರೀಯರೊಂದಿಗೆ ಇದ್ದಂತಹ ರೀತಿ ಸುಂದರವಾದ ಕಲ್ಪನೆಯನ್ನು ಕಟ್ಟಿಕೊಡುವಂಥದ್ದು. ಗೋಪಿಕೆಯರ ಕೃಷ್ಣನ ಮೇಲಿನ ಪ್ರೇಮ ಋಷಿಗಳು ಭಗವಂತನಿಗಾಗಿ ಹಲವು ವರ್ಷಗಳ ಕಾಲ ತಪಸ್ಸನ್ನಾಚರಿಸಿ ಆತನೊಂದಿಗೆ ಒಂದಾಗುತ್ತಿದ್ದ ಪ್ರಕ್ರಿಯೆಗೆ ಸಮವೆನ್ನುತ್ತಾರೆ. ರಾಧಾ-ಕೃಷ್ಣರ ಪ್ರೇಮವಂತೂ ಪರಮ ಪವಿತ್ರವಾದುದು. ಅದು ಶುದ್ಧ ಪ್ರೇಮ. ಭಕ್ತಿಯೇ ಎಲ್ಲವೂ ಆಗಿರುವ ಈ ಪ್ರೇಮದಲ್ಲಿ ಕಾಮದ ವಾಸನೆ ಒಂದು ಚೂರೂ ಇಲ್ಲ. ಅದೊಂದು ಪ್ರೇಮದ ಹೊಸ ಆಯಾಮ. ಈಗಿನ ಸಮಾಜಕ್ಕೆ ಈ ಪ್ರೇಮ ಅರ್ಥವಾಗುವುದಿಲ್ಲ ಆದ್ದರಿಂದ ಅದನ್ನು ಎಲ್ಲರ ಮುಂದೆ ಪ್ರಸ್ತಾಪಿಸುವುದು ಸರಿಯಲ್ಲ ಎಂದು ಸ್ವಾಮಿ ವಿವೇಕಾನಂದರು ಎಚ್ಚರಿಕೆ ಕೊಡುವಷ್ಟರ ಮಟ್ಟಿಗೆ ಕಾಲಕ್ರಮದಲ್ಲಿ ಪ್ರೇಮದ ಕಲ್ಪನೆಗಳು ವ್ಯತ್ಯಾಸ ಹೊಂದುತ್ತ ಬಂದಿತು.

ಇಡಿಯ ಭಾರತದಲ್ಲಿ ಸದಾ ವ್ಯಾಪ್ತಗೊಂಡಿದ್ದಂತಹ ಈ ಪ್ರೇಮದ ಕಲ್ಪನೆಗೆ ಅತ್ಯಂತ ಆಘಾತಕಾರಿ ಹೊಡೆತ ಬಿದ್ದದ್ದು ಇಸ್ಲಾಂನ ಆಕ್ರಮಣದ ನಂತರವೇ. ಇಸ್ಲಾಂನಲ್ಲಿ ಪತಿ-ಪತ್ನಿಯರ ಪ್ರೇಮಕ್ಕೆ ಬಲವಾದ ಮೌಲ್ಯವಿದ್ದಂತಿಲ್ಲ. ಅಲ್ಲಿ ಯಾರು ಯಾವಾಗ ಬೇಕಿದ್ದರೂ ಮದುವೆ ಆಗಬಹುದು, ಯಾವ ಸಂದರ್ಭದಲ್ಲಿಯಾದರೂ ಪತ್ನಿಯನ್ನು ಬಿಡಬಹುದು. ನಾಲ್ಕೆಂಬುದು ಅಪ್ಪರ್ ಲಿಮಿಟ್ ಅಷ್ಟೇ. ಐದನೆಯದು ಬೇಕೆನಿಸಿದಾಗ ನಾಲ್ಕರಲ್ಲಿ ಒಂದನ್ನು ಬಿಟ್ಟರಾಯ್ತು. ಹಾಗಂತ ಬಹು ಪತ್ನಿತ್ವ ಭಾರತದಲ್ಲಿಯೂ ಇತ್ತು. ಆದರೆ ಸಾಮಾನ್ಯ ಜನತೆ ಅದನ್ನು ಪಾಲಿಸುತ್ತಿರಲಿಲ್ಲ. ಅದು ಆಳುವ ವರ್ಗಕ್ಕಷ್ಟೇ ಸೀಮಿತವಾಗಿತ್ತು. ಅನೇಕ ಬಾರಿ ಸಂತಾನಕ್ಕೆಂದೇ ರಾಜರು ಮೂರ‌್ನಾಲ್ಕು ಮದುವೆಯಾಗುತ್ತಿದ್ದ ಉದಾಹರಣೆಗಳಿದ್ದವಾದರೂ ಅಷ್ಟೂ ಪತ್ನಿಯರನ್ನು ಸಮಾನ ಗೌರವದಿಂದ ನಡೆಸಿಕೊಳ್ಳಲಾಗುತ್ತಿತ್ತು. ಆದರೆ, ಮುಸಲ್ಮಾನರು ಬಂದ ನಂತರ ಹೆಣ್ಣುಮಕ್ಕಳಾದವರು ನವಾಬರ ಜನಾನಾಗಳನ್ನು ತುಂಬುವ ವಸ್ತುವಾಗಿಬಿಟ್ಟರು. ಇಲ್ಲಿಂದಾಚೆಗೆ ಈ ಪರಿಕಲ್ಪನೆಯೆ ಅಸಭ್ಯ ರೀತಿಯಲ್ಲಿ ಮುಂದುವರೆಯಿತು. ಜನಾನಾ ಎಂದರೆ ನವಾಬನ ನೂರಾರು ಉಪಪತ್ನಿಯರು ವಾಸಿಸುವ ಮಹಲ್ ಎಂಬುದನ್ನು ನೆನಪಿಸಬೇಕಿಲ್ಲವಷ್ಟೇ.

ಮುಸಲ್ಮಾನ ರಾಜರು ಇರುವೆಡೆಗೆ ಹಿಂದೂ ಹೆಣ್ಣುಮಕ್ಕಳ ಅಪಹರಣ ಅವ್ಯಾಹತವಾಗಿ ನಡೆಯಿತು. ಅಕ್ಬರ್‌ನ ಕಾಲಕ್ಕೆ ಸಂಡೇ ಬಜಾರ್ ನಡೆಯುತ್ತಿತ್ತು. ಈ ಬಜಾರ್‌ಗಳಲ್ಲಿ ಅಕ್ಬರ್ ಆನೆಯ ಮೇಲೆ ಕುಳಿತು ಬಜಾರ್‌ನಲ್ಲಿ ಬರುತ್ತಿದ್ದ. ಅಕ್ಕಪಕ್ಕದಲ್ಲಿ ನಿಂತಿದ್ದ ಹೆಣ್ಣುಮಕ್ಕಳನ್ನೊಮ್ಮೆ ಕಣ್ಣಾಡಿಸಿ ನೋಡುತ್ತಿದ್ದ. ಅವನಿಗೆ ಬೇಕೆನಿಸಿದ ಹೆಣ್ಣುಮಕ್ಕಳನ್ನು ಅಕ್ಬರನ ಬಳಿ ಕರೆದೊಯ್ಯಬೇಕಾದ ಪರಿಸ್ಥಿತಿ ಇತ್ತು ಎನ್ನುವ ಉಲ್ಲೇಖಗಳು ಹಲವು ಕಡೆಗಳಲ್ಲಿ ಕಾಣುತ್ತದೆ. ಕಾಲಕ್ರಮದಲ್ಲಿ ಇದು ಇನ್ನೂ ವ್ಯಾಪಕಗೊಂಡಿತು. ಕನ್ಯೆಯಾಗಿರುವ ಎಲ್ಲ ಹಿಂದು ಹೆಣ್ಣುಮಕ್ಕಳನ್ನು ಅಪಹರಿಸಿಕೊಂಡು ಹೋಗಬೇಕು ಎನ್ನುವ ಮಟ್ಟಿಗೆ ಬಂದು ನಿಂತಿತು. ಈ ಕಾರಣದಿಂದಾಗಿಯೇ ಉತ್ತರ ಭಾರತದಲ್ಲಿನ ಹಿಂದುಗಳ ಆಚಾರ-ವಿಚಾರಗಳಲ್ಲಿ ಬಹಳ ಬದಲಾವಣೆಗಳು ಕಂಡುಬಂದವು. ನಾವೀಗ ರಾಜಸ್ಥಾನ-ಗುಜರಾತ್‌ನಲ್ಲಿ ನೋಡುವಂತಹ ಹೆಣ್ಣುಮಕ್ಕಳು ಬುರ್ಖಾವನ್ನು ತೊಡುವ ಪದ್ಧತಿ, ಅವರನ್ನು ಹೊರಬಿಡದೇ ಒಳಗೆಯೇ ಕೂಡಿ ಹಾಕುವುದು… ಹೀಗೆ ಅನೇಕ ಕಟ್ಟರ್ ಪಂಥಿ ಆಚರಣೆಗಳು ಆನಂತರ ಇಣುಕಿದಂತಹ ಅತ್ಯಂತ ಕೆಟ್ಟ ಪದ್ಧತಿಗಳು ಎನ್ನುವುದರಲ್ಲಿ ಯಾವ ಸಂಶಯವೂ ಇಲ್ಲ. ಹೆಣ್ಣು ತನ್ನ ಗಂಡ ತೀರಿಕೊಂಡ ನಂತರ ಈ ರೀತಿ ಯಾರದ್ದೋ ಸ್ವತ್ತಾಗುವುದನ್ನು ಬಯಸದೇ ತನ್ನ ಗಂಡನೊಂದಿಗೆ ಚಿತೆಯೇರಿ ಜೌಹರ್‌ನ್ನು ಪಾಲಿಸುವುದನ್ನು ನಾವು ರಜಪೂತರ ಇತಿಹಾಸದಲ್ಲಿ ಕಾಣುತ್ತೇವೆ.


ಬಹುಶಃ ಆರಂಭದ ದಿನಗಳಲ್ಲಿ ಇದಕ್ಕೆ ಬಲವಾದ ಪ್ರತಿರೋಧವೆ ಕಂಡಿರಬೇಕು. ಎದುರಿಸುವುದು ಕಷ್ಟವಾದಾಗ ಮುಸಲ್ಮಾನರ ಕಂಗಳಿಗೆ ಕಾಣದಂತೆ ಮಕ್ಕಳನ್ನು ಮುಚ್ಚಿಡುವ ಪ್ರಕ್ರಿಯೆ ಆರಂಭವಾಗಿರಬೇಕು. ಇಲ್ಲವಾದಲ್ಲಿ ಗಾರ್ಗಿ, ಮೈತ್ರೇಯಿಯಂತಹ ಮಹಾಮಹಿಮ ಸ್ತ್ರೀ ಸಾಧಕರು ಹುಟ್ಟಿದ ನಾಡಿನಲ್ಲಿ ಸ್ತ್ರೀಯರ ಸ್ಥಿತಿ ಗತಿ ಹೀಗಾಗಲು ಹೇಗೆ ಸಾಧ್ಯ? ಇಸ್ಲಾಂ ಭಾರತೀಯ ಸ್ತ್ರೀಯರ ಮೇಲೆ ಬಲವಾದ ಆಘಾತವನ್ನು ಮಾಡಿತು. ಸ್ವಾತಂತ್ರ್ಯದ ಹೊಸ್ತಿಲಲ್ಲಿ ಇದು ಇನ್ನೂ ಪ್ರಬಲವಾಯಿತು. ಬ್ರಿಟೀಷರು ಢಾಕಾದ ನವಾಬ ಸಲೀಮುಲ್ಲಾರಂಥವರಿಗೆ ದೊಡ್ಡ ಮೊತ್ತದ ಹಣಕೊಟ್ಟು ಹಿಂದೂ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ನಡೆಸುವಂತೆ ಆದೇಶಿಸಿದ್ದು ಇದು ಉಲ್ಲೇಖಿಸಬಹುದಾದ ಒಂದು ಘಟನೆಯಷ್ಟೇ. ಅವರ ಒಡೆದು ಆಳುವ ನೀತಿಗೆ ಗೂಂಡಾ ಸಂತಾನಗಳು ಹಿಂದೂ ಹೆಣ್ಣು ಮಕ್ಕಳನ್ನು ಆಹಾರವಾಗಿಸಿಕೊಂಡುಬಿಟ್ಟವು. ಹೀಗಾಗಿಯೇ ದೇಶ ವಿಭಜನೆಯಾದರೂ ಸರಿಯೇ, ಇವರಿಂದ ಮುಕ್ತಿ ಸಿಕ್ಕಿದರೆ ಸಾಕು ಎಂದು ಬಹುತೇಕರು ಭಾವಿಸಿದ್ದರಲ್ಲಿ ಅಚ್ಚರಿಯಿಲ್ಲ. ದೇಶ ತುಂಡಾದಾಗ ಹಿಂದೂಸ್ತಾನದಲ್ಲಿದ್ದ ಮುಸಲ್ಮಾನರ ಸಂಖ್ಯೆ ಒಂಭತ್ತು ಪರ್ಸೆಂಟ್‌ನಷ್ಟಿತ್ತು. ಅದನ್ನು ಹೆಚ್ಚಳ ಮಾಡದಿದ್ದರೆ ಇಲ್ಲಿನ ಬಹುಸಂಖ್ಯಾತರು ತಮ್ಮನ್ನು ನುಂಗಿಯೇಬಿಡುವರೆಂಬ ಹೆದರಿಕೆಯನ್ನು ಅವರಲ್ಲಿ ಹುಟ್ಟು ಹಾಕಲಾಯ್ತು. ಇಲ್ಲಿಯೇ ಉಳಿದು ಮೆದುವಾಗಿದ್ದ ಮುಸಲ್ಮಾನರನ್ನು ಕಟ್ಟರ್‌ಗಳಾಗಿಸುವ ಪ್ರಯತ್ನ ಶುರುವಾಯಿತು. ಸಲಫಿ, ವಹಾಬಿಗಳ ಸಂತಾನಗಳು ವೃದ್ಧಿಯಾಗುತ್ತಿದ್ದಂತೆ ಮತಾಂತರದ ಪ್ರಕ್ರಿಯೆ ಜೋರಾಯಿತು. ಕಟ್ಟರ್‌ಪಂಥಿಗಳು ಬಗೆಬಗೆಯ ಮಾರ್ಗಗಳನ್ನು ಅರಸಿದರು. ಅದಕ್ಕೆ ಜಿಹಾದ್‌ನ ಬಣ್ಣ ಬಳಿಯಲಾಯಿತು.

 ಜಿಹಾದ್ ಅನ್ನೋದು ಧರ್ಮಯುದ್ಧ. ಧರ್ಮದ ಹರಡುವಿಕೆಗಾಗಿ ಎಂತಹ ಪರಿಸ್ಥಿತಿಗೂ ಹೋಗಬಲ್ಲಂತಹ ಮನಸ್ಥಿತಿಯನ್ನು ನಿರ್ಮಾಣ ಮಾಡಿಬಿಡಬಲ್ಲ ಪದ ಅದು. ಸಹಜವಾಗಿ ಹೇಳಬೇಕೆಂದರೆ ಇಸ್ಲಾಂನ ವಿಸ್ತಾರದ ಅಫೀಮು ಅದು. ಅದನ್ನೊಮ್ಮೆ ಸೇವಿಸಿದವ ಪರಿಪೂರ್ಣವಾಗಿ ಅಮಲಿನಲ್ಲಿ ತೇಲಾಡುವಂಥಾಗಿಬಿಡುತ್ತಾನೆ. ಇತರರನ್ನು ಕೊಲ್ಲುವುದಕ್ಕೂ ತನ್ನನ್ನು ತಾನು ಕೊಂದುಕೊಳ್ಳುವುದಕ್ಕೂ ಸಿದ್ಧನಾಗುತ್ತಾನೆ. ಪ್ರತಿಯೊಂದು ಮತದ ದೌರ್ಭಾಗ್ಯ ಅದು. ವಿಶೇಷವಾಗಿ ಇಸ್ಲಾಂನದ್ದು. ಇಸ್ಲಾಂನ ಹುಟ್ಟಿನ ಕಾಲದಿಂದಲೂ ಈ ಜಿಹಾದಿ ಸಂಘರ್ಷ ಇದ್ದಿದ್ದೇ. ಯುದ್ಧವನ್ನು ಗೆಲ್ಲೋದು. ಗೆದ್ದ ನಂತರ ಅಲ್ಲಿನ ಸ್ತ್ರೀಯರನ್ನು ಹಂಚಿಕೊಳ್ಳೋದು ಭೋಗ ವಾಸನೆ ತೀರಿಸಿಕೊಂಡ ಮೇಲೆ ಅವರನ್ನು ಕಾಲ್ಕಸವಾಗಿ ಕಾಣುವುದು ಇದ್ಯಾವುದೂ ಇಸ್ಲಾಮಿಗೆ ಹೊಸತಾಗಿ ಬಂದಿರುವುದಲ್ಲ. ಸೆಮೆಟಿಕ್ ಮತಗಳ ಮೂಲ ಸಿದ್ಧಾಂತದಲ್ಲೇ ತೊಡಕಿದೆ. ಹೆಣ್ಣು ಗಂಡಿನ ಪಕ್ಕೆಲುಬುಗಳಿಂದ ನಿರ್ಮಾಣವಾದವಳಾದ್ದರಿಂದ ಅವಳು ಗಂಡಿನ ಆಶ್ರಯದಲ್ಲಿಯೇ ಇರಬೇಕು. ಇಸ್ಲಾಂ ಅಂತೂ ಹೆಣ್ಣನ್ನು ಭಗವಂತ ಉಳಲು ಕೊಟ್ಟ ಭೂಮಿ ಎಂದೇ ಭಾವಿಸುತ್ತದೆ. ಈ ಎಲ್ಲ ಹಿನ್ನೆಲೆಯಲ್ಲಿಯೇ ಭಾರತದಲ್ಲಿ ಜಿಹಾದಿಗೆ ಪ್ರೇಮದ ಭಿನ್ನರೂಪವನ್ನು ಕೊಟ್ಟಿದ್ದು. ಕಳೆದ ಸುಮಾರು ಎರಡು ದಶಕಗಳಿಂದ ಈ ಬಗೆಯ ಒಂದು ಪ್ರಯತ್ನ ಹಬ್ಬಲಾರಂಭಿಸಿತು. ಅದರಲ್ಲೂ ಹಿಂದೂ ಸಮಾಜ ಹೆಣ್ಣು ಮಕ್ಕಳನ್ನು ಆಧುನಿಕಗೊಳಿಸುವ ಧಾವಂತದಲ್ಲಿ ಪರಂಪರೆಯಿಂದ ದೂರ ಮಾಡಿಬಿಟ್ಟೆವಲ್ಲ ಅದರ ಲಾಭವನ್ನು ಪಡೆಯಲೆಂದೇ ಕೆಲವು ಕಟ್ಟರ್ ಪಂಥಿ ಮುಸಲ್ಮಾನರು ಲವ್ ಜಿಹಾದ್ ಅನ್ನು ರೂಪಿಸಿದರು. ದೃಷ್ಟಿಕೋನ ಬಹಳ ಸರಳವಾಗಿದೆ. ಹಿಂದೂಗಳಲ್ಲಿ ಮನೆಗೆ ಒಂದು ಗಂಡೋ ಒಂದು ಹೆಣ್ಣೋ ಇದ್ದರೆ ಹೆಚ್ಚು. ಹುಡುಗಿಯನ್ನು ಪ್ರೀತಿಯ ಬಲೆಗೆ ಬೀಳಿಸಿ ಮತಾಂತರಗೊಳಿಸಿದರೆ ಆ ಇಡಿಯ ಹಿಂದೂ ಪರಿವಾರವೇ ಮುಗಿದಂತೆ. ಅಲ್ಲಿಗೆ ಮುಸಲ್ಮಾನರ ಸಂಖ್ಯೆ ಗಣಿತದ ಎಲ್ಲ ಶ್ರೇಣಿಗಳನ್ನು ಮೀರಿ ಓಡುತ್ತದೆ. ಕೋನ್‌ರಾಡ್ ಎಲ್ಸ್ಟ್ ಹೇಳುವಂತೆ 2050 ರ ವೇಳೆಗೆ ಹಿಂದುವೆನ್ನುವವನೇ ಇಲ್ಲವಾಗುತ್ತಾನೆ.

ಲವ್ ಜಿಹಾದ್ ಮಾಡುವುದು ಬಲು ಕಷ್ಟವೇನಲ್ಲ. ಅಂಗಡಿಗೆ ಸಿಮ್ ಕಾರ್ಡ್ ರಿಚಾರ್ಜ್ ಮಾಡಲೆಂದು ಬಂದ ಹುಡುಗಿಯ ನಂಬರ್ ಇಟ್ಟುಕೊಂಡರೆ ಸಾಕು. ಆಗಾಗ ಕರೆ ಮಾಡಿ ಮಾತನಾಡುತ್ತ ಅವಳು ಕೇಳದೆಯೇ ಮೊಬೈಲ್ ರಿಚಾರ್ಜ್ ಮಾಡಿಸುತ್ತಿದ್ದರೆ ಸಾಕು ಹುಡುಗಿ ಬಿದ್ದಂತೆ. ಯೌವ್ವನದ ಹುಚ್ಚು ಹೊಳೆ ಅದೆಂಥದ್ದೆಂದರೆ ಹುಡುಗ ಬೈಕ್ ತೆಗೆದುಕೊಂಡು ಬಂದಿದ್ದಾನೆಂಬ ಕಾರಣಕ್ಕೆ ಅವನನ್ನು ಪ್ರೀತಿಸುವ ಅನೇಕ ಘಟನೆಗಳು ನಡೆದುಹೋಗಿದ್ದವು. ಪ್ರೇಮ ಕುರುಡು ಹೌದೋ ಅಲ್ಲವೋ ಆದರೆ ಜಿಹಾದಿಗಳ ಮೇಲಿನ ಹೆಣ್ಣುಮಕ್ಕಳ ಪ್ರೇಮವಂತೂ ನಿಜಕ್ಕೂ ಕುರುಡೇ! ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್‌ನಲ್ಲಿ ಓದುತ್ತಿದ್ದ ಹಿಂದೂ ಹೆಣ್ಣುಮಗಳೊಬ್ಬಳು ಮುಸಲ್ಮಾನ ಹುಡುಗನೊಬ್ಬನನ್ನು ಪ್ರೀತಿಸಿ ಓಡಿಹೋದಳು. ಆಮೆಲೆ ಗೊತ್ತಾಗಿದ್ದು ಆತ ಶಿವಾಜಿ ನಗರದ ಚಪ್ಪಲಿ ಅಂಗಡಿಯಲ್ಲಿ ಕೆಲಸಕ್ಕಿದ್ದ ಅಂತ. ಸಂಶೋಧನೆಯಲ್ಲಿ ತನ್ನ ತಾನು ತೊಡಗಿಸಿಕೊಂಡಿದ್ದ ಪ್ರಜ್ಞಾವಂತ ಹೆಣ್ಣುಮಗಳೊಬ್ಬಳು ಯಾವ ದೃಷ್ಟಿಯಿಂದಲೂ ತನಗೆ ಅನುರೂಪನಲ್ಲದ ಹುಡುಗನ ಹಿಂದೆ ಓಡಿ ಹೋಗುತ್ತಾಳೆಂದರೆ ಅದು ಬರಿಯ ಪ್ರೇಮವೇನಾ ಅಥವಾ ಅದರ ಹಿಂದೆ ಗಂಭೀರವಾದುದೇನಾದರು ಇದೆಯಾ ಎನ್ನುವ ಪ್ರಶ್ನೆ ಕಾಡದಿರಲಾರದು.

ಲವ್ ಜಿಹಾದ್ ಇಂದು ದೇಶದ ಮೂಲೆ-ಮೂಲೆಗೂ ವ್ಯಾಪಿಸಿಕೊಂಡಿದೆ. ಆರಂಭದಲ್ಲಿ ಹೆಣ್ಣುಮಕ್ಕಳ ಅಪಹರಣ ಎಂದಷ್ಟೇ ಶುರುವಾದ ಈ ಕಲ್ಪನೆ ಬರು ಬರುತ್ತಾ ವ್ಯವಸ್ಥಿತ ಧಂಧೆಯಾಯ್ತು. ಇಂಥ ಜಾತಿಯ ಹೆಣ್ಣುಮಕ್ಕಳನ್ನು ಪ್ರೀತಿಸಿ ಕರೆದುಕೊಂಡು ಬಂದರೆ ಇಷ್ಟಿಷ್ಟು ಹಣವೆಂದು ನಿಗದಿಪಡಿಸಲಾಯ್ತು. ಸಹಜವಾಗಿಯೇ ಬ್ರಾಹ್ಮಣ ವರ್ಣದ ಹೆಣ್ಣುಮಕ್ಕಳಿಗೆ ಹೆಚ್ಚಿನ ಬೆಲೆ ನಿಗದಿಪಡಿಸಲಾಗಿತ್ತು. ಇದರಲ್ಲಿ ಆಶ್ಚರ್ಯ ಪಡಬೇಕಾದ ಸಂಗತಿಯೇನಿರಲಿಲ್ಲ. ಶತ-ಶತಮಾನಗಳಿಂದ ಬೌದ್ಧಿಕ ಶ್ರೀಮಂತಿಕೆಯನ್ನು ಹೊಂದಿದ್ದ ಬ್ರಾಹ್ಮಣ ಹೆಣ್ಣುಮಕ್ಕಳು ಈ ಮುಸಲ್ಮಾನ ತರುಣರನ್ನು ಮದುವೆಯಾದರೆ ಬುದ್ಧಿವಂತ ಜಿಹಾದಿಗಳು ಹುಟ್ಟುವ ಎಲ್ಲ ಸಾಧ್ಯತೆಗಳಿದ್ದವು. ಬ್ರಾಹ್ಮಣ ಜೀನ್ಸ್‌ನೊಂದಿಗೆ ವರ್ಣ ಸಂಕರವಾಗಿಸುವುದು ಪ್ರಯತ್ನವಾಗಿದ್ದಿರಲೂಬಹುದು.

 ಕಾಲಕ್ರಮದಲ್ಲಿ ಈ ಬಗೆಯ ಲವ್ ಜಿಹಾದಿನ ಸಮಸ್ಯೆ ಮುಸಲ್ಮಾನರಿಗೂ ಅರಿವಾಗುತ್ತಾ ಬಂತು. ಹುಡುಗಿಯೊಂದನ್ನು ಪಟಾಯಿಸಿ ಅವಳೊಡನೆ ಸುತ್ತಾಡಿ ಅವಳನ್ನು ಒಲಿಸಿಕೊಂಡು ಮದುವೆಯಾಗುವುದಕ್ಕೆ ಒಪ್ಪಿಸಲು ಕನಿಷ್ಠ ಎರಡು ವರ್ಷವಾದರೂ ಬೇಕಿತ್ತು. ಇಷ್ಟಾಗಿಯೂ ಮದುವೆಯ ಹೊತ್ತಿನ ಕಿರಿ ಕಿರಿ ರಾದ್ಧಾಂತಗಳು ಬೇರೆ. ಇವೆಲ್ಲವುಗಳಿಂದ ಮುಕ್ತಿ ಪಡೆಯಲು ಆನಂತರ ಅವರು ಬಳಸಿಕೊಂಡ ಮಾರ್ಗವೇ ಬೌದ್ಧಿಕ ಜಿಹಾದಿನದ್ದು. ಲವ್ ಜಿಹಾದ್‌ನಲ್ಲಿ ಮುಸಲ್ಮಾನ ಹುಡುಗನೊಂದಿಗೆ ಓಡಿಹೋದ ಹಿಂದೂ ಹೆಣ್ಣುಮಗಳು ಅಲ್ಲಿನ ಆಚರಣೆಗಳು ಸಂಸ್ಕೃತಿ ಇಷ್ಟವಾಗದೇ ಹೋದಾಗ ಮರಳಿ ಬಂದುಬಿಡುವ ಸಾಧ್ಯತೆ ಇದ್ದೇ ಇತ್ತು. ಹೀಗೆ ಒಮ್ಮೆ ಈ ಮರಣ ಕೂಪವನ್ನು ನೋಡಿಬಂದ ಹೆಣ್ಣುಮಗಳು ಮರಳಿ ಬಂದರೆಂದರೆ ಹಿಂದೂ ಸಮಾಜದ ಪಾಲಿಗೆ ಬಲು ದೊಡ್ಡ ಅಸ್ತ್ರವಾಗಿಬಿಡುತ್ತಿದ್ದರು. ಇದನ್ನು ತಡೆಯಲು ಇದ್ದದ್ದು ಒಂದೇ ಮಾರ್ಗ. ಬೌದ್ಧಿಕ ಜಿಹಾದಿನದ್ದು ಮಾತ್ರ.

ಹಿಂದೂ ಹೆಣ್ಣುಮಕ್ಕಳಾಗಲಿ ಗಂಡು ಮಕ್ಕಳಾಗಲಿ ಧಾರ್ಮಿಕವಾದ ನಾಲ್ಕಾರು ಪ್ರಶ್ನೆಗಳನ್ನು ಕೇಳಿದೊಡನೆ ಅವರು ದಂಗಾಗುತ್ತಾರೆ. ಕಲ್ಲಲ್ಲಿ ದೇವರಿದ್ದಾನಾ? 33 ಕೋಟಿ ದೇವತೆಗಳು ಇರುವುದಾದರೂ ಹೇಗೆ? ಮಗನ ತಲೆ ಕತ್ತರಿಸಿದವನು ದೇವರಾಗಬಹುದಾ? ಹೆಣ್ಣುಮಕ್ಕಳ ಸೀರೆ ಕದ್ದವನನ್ನು ಆರಾಧಿಸುವುದಾದರೂ ಹೇಗೆ? ಹೀಗೆಲ್ಲಾ ಪ್ರಶ್ನೆ ಕೇಳಿಬಿಟ್ಟರೆ ನಮ್ಮವರು ದಂಗುಬಡೆದು ಹೋಗುತ್ತಾರೆ. ಆಗಲೇ ತಡಬಡಾಯಿಸಿದವರಿಗೆ ಕುರಾನ್ ಆಪ್ಯಾಯವಾಗೋದು. ಹೀಗೆ ಇಸ್ಲಾಂ ಅನ್ನು ಪ್ರೀತಿಸಿ ಬಂದವರನ್ನು ಒಲಿಸಿಕೊಳ್ಳಲಿಕ್ಕಾಗಿಯೇ ವ್ಯವಸ್ಥಿತವಾದ ಪ್ರಚಾರ ಮಾಡಲಾಗುತ್ತದೆ. ಸೌದಿಯಿಂದ ಬರುವ ಝಕಾತ್‌ನ ದೊಡ್ಡ ಮೊತ್ತವನ್ನು ಇದಕ್ಕಾಗಿ ಬಳಸಲಾಗುತ್ತದೆ. ಬೆಂಗಳೂರಿನಲ್ಲಿ, ಕೇರಳದ ಮಲಪ್ಪುರಂಗಳಲ್ಲೆಲ್ಲಾ ಈ ರೀತಿಯ ತಲೆ ಕೆಡಿಸುವ ವಿದ್ಯಾ ಸಂಸ್ಥೆಗಳೇ ಇವೆ. ಅಲ್ಲಿ ವಿಶೇಷ ಕುರಾನಿನ ಅಧ್ಯಯನ ಮಾಡಿಸಲಾಗುವುದಲ್ಲದೇ ಹೀಗೆ ಅಧ್ಯಯನ ಮಾಡಿದ ಹಿಂದೂಗಳನ್ನು ಹಿಂದೂಗಳ ನಡುವೆಯೇ ಕಳಿಸಿ ಅವರ ಮೂಲಕ ಮತಾಂತರಿಸುವ ಪ್ರಯಾಸ ಶುರುವಾಗುತ್ತದೆ. ಬೆಂಗಳೂರಿನಲ್ಲಿರುವಂತಹ ಬ್ಯಾಚುಲರ್ ಆಪ್ ಇಸ್ಲಾಮಿಕ್ ಸ್ಟಡೀಸ್ ಕಾಲೇಜಿಗೆ ನೇರ ಸೌದಿಯಿಂದ ಹಣ ಹರಿದು ಬರುವುದಲ್ಲದೇ ಇಲ್ಲಿ ಅಧ್ಯಯನ ಮಾಡಿದ ವಿದ್ಯಾರ್ಥಿಗಳನ್ನು ಸೌದಿ ರಾಷ್ಟ್ರಗಳಿಗೆ ಕಳಿಸಿ ರಾಜಾತಿಥ್ಯ ನೀಡಲಾಗುತ್ತದೆ. ವ್ಯಕ್ತಿಯೊಬ್ಬ ಒಳಬಂದರೆ ನಿಧಾನವಾಗಿ ಅವನ ಪರಿವಾರವನ್ನು ತೆಕ್ಕೆಗೆ ಸೆಳೆದೆಕೊಳ್ಳಲಾಗುತ್ತದೆ. ಹಣದ ಪ್ರಮಾಣವಂತೂ ಅವ್ಯಾಹತವೇ ಸರಿ. ಒಮ್ಮೆ ಈ ಕಪಿಮುಷ್ಠಿಗೆ ಸಿಲುಕಿದವ ಮರಳಿ ಬರುವುದು ಹೆಚ್ಚು ಕಡಿಮೆ ಗಗನ ಕುಸುಮವೇ.

ಹಾಗಂತ ಪರಿಹಾರ ಇಲ್ಲವೇನು?
ಖಂಡಿತ ಇದೆ.

ಎಲ್ಲಕ್ಕೂ ಮೊದಲನೆಯದು ಧರ್ಮ ಶ್ರದ್ಧೆಯನ್ನು ಸಮಾಜದಲ್ಲಿ ಉಂಟುಮಾಡುವುದು. ಹಿಂದೂ ಧರ್ಮದ ಆಚರಣೆಗಳ ಕುರಿತಂತೆ ನಾವೀಗ ಪ್ರತಿಯೊಬ್ಬರಿಗೂ ತಿಳಿಸಬೇಕಾದ ಅಗತ್ಯವಿದೆ. ಒಮ್ಮೆ ಧರ್ಮಶ್ರದ್ಧೆ ಬೆಳೆಯಿತೆಂದರೆ ಎಲ್ಲ ಸಮಸ್ಯೆಗಳಿಗೂ ಪರಿಹಾರ ಸಿಕ್ಕಂತೆಯೇ. ಮನೆಯಲ್ಲಿ ಹೆಣ್ಣುಮಗುವೊಬ್ಬಳು ಇಸ್ಲಾಂನ ಮೇಲೆ ಆಸಕ್ತಿ ವ್ಯಕ್ತಪಡಿಸುತ್ತಿದ್ದಾಳೆಂದರೆ ಕೋಪಕ್ಕೆ ಕೂಗಾಡಿ ಅರಚಾಡುವುದು ಸಮಸ್ಯೆಯನ್ನು ಮತ್ತಷ್ಟು ಹಾಳು ಮಾಡಬಲ್ಲುದೇ ಹೊರತು ಪರಿಹಾರ ಕೊಡಲಾರದು. ಎಲ್ಲಕ್ಕೂ ಮಿಗಿಲಾಗಿ ಅಧ್ಯಯನ ಮಾಡುತ್ತೇನೆಂದು ಹೊರಟ ಹುಡುಗ ಅಥವಾ ಹುಡುಗಿಯೇ ಇರಲಿ ಆಕೆಗೆ ಕಿವಿಮಾತೊಂದನ್ನು ಹೇಳಲು ಮರೆಯುವಂತಿಲ್ಲ, ಇಸ್ಲಾಂ ಸಾಕೆನಿಸಿದಾಗ ಅಥವಾ ಅದು ಅನರ್ಥಕಾರಿ ಎನಿಸಿದಾಗ ಮರಳಿ ಬಂದರೂ ನಾವು ನಿನ್ನೊಂದಿಗಿದ್ದೇವೆ ಅಂತ. ನಮ್ಮಲ್ಲಿರುವ ಬಲುದೊಡ್ಡ ಸಮಸ್ಯೆಯೇ ಅದು. ಮುಸಲ್ಮಾನ ಹುಡುಗನೊಂದಿಗೆ ಹುಡುಗಿಯೊಬ್ಬಳು ಹೊರಟು ನಿಂತರೆ ಮನೆಯವರೆಲ್ಲ ಕರುಳ ಸಂಬಂಧವೇ ಕಳಚಿ ಹೋಯ್ತೆಂದು ಬೊಬ್ಬಿಟ್ಟು ಅರಚಾಡಿಬಿಡುತ್ತಾರೆ. ಅಲ್ಲಿಗೆ ಆ ಹುಡುಗಿಗೆ ಮುಂದೊಮ್ಮೆ ಮರಳಿ ಬರುವ ದ್ವಾರವೂ ಮುಚ್ಚಿ ಹೋದಂತೆಯೇ. ಅವಳೀಗ ಗಂಡನ ಮನೆಯಲ್ಲಿ ಎಲ್ಲ ಸಹಿಸಿಕೊಂಡು ಬಿದ್ದಿರಬೇಕು ಅಥವಾ ಉಗ್ರಗಾಮಿ ಸಂಘಟನೆಗಳಿಗೆ ಮಾರಾಟವಾಗಿ ಹೋಗಿಬಿಡಬೇಕು.

ಅನೇಕರು ಈ ಕೂಪದಲ್ಲಿ ಹೀಗೆಯೇ ಸಿಕ್ಕಿಹಾಕಿಕೊಂಡಿದ್ದಾರೆ. ಹೊರಬರಲಾಗದೇ ಚಡಪಡಿಸುತ್ತಿದ್ದಾರೆ. ನಮ್ಮೆದುರಿಗೆ ದೊಡ್ಡ ಸವಾಲಿದೆ. ಧರ್ಮ ರಕ್ಷಣೆಗಾಗಿ ಧರ್ಮಶ್ರದ್ಧೆಯನ್ನು ಬೆಳೆಸಬೇಕಾಗಿದೆ. ಇಷ್ಟಕ್ಕೂ ಸುಪ್ರೀಂಕೋರ್ಟ್ ಈಗ ಲವ್ ಜಿಹಾದ್ ಇರುವುದು ಸತ್ಯ ಎಂದು ಒಪ್ಪಿಕೊಂಡಿರುವುದು ತಾತ್ವಿಕವಾದ ವಿಜಯವಷ್ಟೇ. ಮಾಡಬೇಕಾದ ಕೆಲಸ ಬೆಟ್ಟದಷ್ಟಿದೆ. ಯಾವ ಹಿಂದೂಧರ್ಮ ಪ್ರೇಮದ ಶ್ರೇಷ್ಠಮಟ್ಟದ ಆದರ್ಶವನ್ನು ಕೊಟ್ಟಿತೋ, ಸ್ವತಃ ತನ್ನ ಪತ್ನಿಯನ್ನೇ ಸಂಘಕ್ಕೆ ಸೇರಿಸಿಕೊಂಡು ಬುದ್ಧ ಶ್ರೇಷ್ಠ ಆದರ್ಶವನ್ನು ಬಿಂಬಿಸಿದನೋ, ರಾಮಕೃಷ್ಣ ಪರಮಹಂಸರು ಸತಿಯನ್ನೇ ಕಾಳಿಯೆಂದರಿತು ಪೂಜಿಸಿದರೋ ಅದೇ ನಾಡಿನಲ್ಲಿ ಹೆಣ್ಣು ಪ್ರೇಮದ ಬೆಳಕಿನಲ್ಲಿ ಧರ್ಮದ ಹೆಸರಿನ ರಾಜಕಾರಣ ಮಾಡಲು ವಸ್ತುವಾಗಿಬಿಟ್ಟಿದ್ದಾಳೆ. ಎಚ್ಚೆತ್ತುಕೊಳ್ಳಲಿಲ್ಲವೆಂದರೆ ಬರಲಿರುವ ದಿನಗಳು ಭಯಾನಕ. ಏಕೆಂದರೆ ನಿರಂತರ ಹದಿನೈದಿಪ್ಪತ್ತು ವರ್ಷಗಳ ನಂತರ ಈಗ ಸುಪ್ರೀಂಕೋರ್ಟ್ ಲವ್ ಜಿಹಾದ್‌ನ ಇರುವಿಕೆಯನ್ನು ಒಪ್ಪಿಕೊಂಡಿದೆ. ಆದರೆ ವಾಸ್ತವವಾಗಿ ಅದಾಗಲೇ ಮನಿ ಜಿಹಾದ್, ಲ್ಯಾಂಡ್ ಜಿಹಾದ್ ಮತ್ತು ಇಂಟಲೆಕ್ಚುಯಲ್ ಜಿಹಾದ್‌ಗಳು ಭರಾಟೆಯಿಂದ ನಡೆಯುತ್ತಿವೆ.
ಜಾಗೃತರಾಗೋಣ.

ಕೃಪೆ : ವಿಕ್ರಮ ವಾರಪತ್ರಿಕೆ

Facebook ಕಾಮೆಂಟ್ಸ್

ಲೇಖಕರ ಕುರಿತು

Chakravarthy Sulibele

ನಾಡಿನ ಖ್ಯಾತ ಚಿಂತಕರೂ, ವಾಗ್ಮಿಗಳೂ, ಬರಹಗಾರರೂ ಆಗಿರುವ ಶ್ರೀ ಚಕ್ರವರ್ತಿ ಸೂಲಿಬೆಲೆಯವರು, ನಿತ್ಯ ನಿರಂತರವಾಗಿ ದೇಶದ ಜನರಲ್ಲಿ ರಾಷ್ಟ್ರ ಭಕ್ತಿಯನ್ನು ಉಕ್ಕಿಸುತ್ತಾ ದೇಶಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!