ಅಂಕಣ

ನಮ್ಮ ದೇಶದ ಇತಿಹಾಸ ಓದಿ ಹೆಮ್ಮೆ ಎನಿಸಲಿಲ್ಲ

ಸುಮಾರು ಮೂರು ನಾಲ್ಕು ವರ್ಷಗಳ ಹಿಂದೆ ನಮ್ಮ ಪ್ರೊಫೆಸರ್ ಇಂಡಿಯನ್ ಸೈಕಾಲಜಿಯ ಬಗ್ಗೆ ಪಾಠ ಮಾಡುತ್ತಿದ್ದರು. ಸೈಕಾಲಜಿ ಅಂದ ಮೇಲೆ ಮುಗಿಯಿತು ಮತ್ತೆ ಅದರಲ್ಲಿ ಇಂಡಿಯನ್ ಸೈಕಾಲಜಿ ಅನ್ನುವುದು ಯಾಕೆ ಬೇಕು ಎನ್ನುವುದರ ಕುರಿತು ಹೇಳುತ್ತಾ ತಮ್ಮ ಅನುಭವವೊಂದನ್ನ ನಮ್ಮೊಂದಿಗೆ ಹಂಚಿಕೊಂಡರು. ಅವರು ಆಗ ತಾನೆ ತಮ್ಮ ಓದು ಮುಗಿಸಿ, ‘ಆಲ್ಟರ್ಡ್ ಸ್ಟೇಟ್ ಆಫ್ ಕಾನ್ಶಿಯಸ್’ನೆಸ್’ ಎಂಬ ವಿಷಯದ ಮೇಲೆ ಪ್ರಾಜೆಕ್ಟ್ ಒಂದನ್ನು ಮಾಡುತ್ತಿದ್ದರು. ಅದರ ಮೇಲೆ ಸಾಕಷ್ಟು ಮಾಹಿತಿಯನ್ನು ಕಲೆ ಹಾಕುತ್ತ ಮುಂದುವರೆದಿದ್ದರು ಕೂಡ. ಇದೇ ನಿಟ್ಟಿನಲ್ಲಿ ‘ತುರಿಯಾ’ಅವಸ್ಥೆಯ ಬಗ್ಗೆ ಮಾಹಿತಿಯನ್ನು ಪಡೆಯಲು ಒಬ್ಬ ಸಂತರ ಬಳಿ ಹೋಗಿದ್ದರಂತೆ. ಅವರ ಬಳಿ ಆ ಸಾಕಷ್ಟು ವಿಷಯ ತಿಳಿದುಕೊಂಡ ನಂತರ, ಕೊನೆಯಲ್ಲಿ ಆ ಸಂತರು “ಏನಿದು ಆಲ್ಟರ್ಡ್ ಸ್ಟೇಟ್ ಆಫ್ ಕಾನ್ಶಿಯಸ್’ನೆಸ್?” ಎಂದು ಕೇಳಿದರಂತೆ. ಅದಕ್ಕೆ ಇವರು, “ಸ್ವಾಭಾವಿಕವಾಗಿ ನಮ್ಮ ಜಾಗೃತಾವಸ್ಥೆಯಿಂದ ಯಾವುದು ಭಿನ್ನವಾಗಿರುತ್ತದೋ ಅದು, ನಾವು ಜಾಗೃತರಾಗಿದ್ದಾಗಿನ ಅನುಭವಕ್ಕಿಂತ ಭಿನ್ನವಾದ ಅನುಭವದಲ್ಲಿ ಕೆಲಕಾಲ ಇರುವಂಥದ್ದು” ಎಂದರಂತೆ. ಇದನ್ನು ಕೇಳಿ ಆ ಸಂತರು, “ಅಂದ ಮೇಲೆ ಆಲ್ಟರ್ಡ್ ಸ್ಟೇಟ್ ಆಫ್ ಕಾನ್ಶಿಯಸ್’ನಲ್ಲಿ ನಿಜವಾಗಿಯೂ ಇರುವುದು ನೀವುಗಳು” ಎಂದು ಹೇಳಿಬಿಟ್ಟರಂತೆ. ಒಂದೇ ಕ್ಷಣದಲ್ಲಿ ಇವರ ಪ್ರಾಜೆಕ್ಟ್ ತಲೆ ಕೆಳಗಾಗಿತ್ತು. ನಮ್ಮಲ್ಲಿ ‘ಪ್ರಜ್ಞೆ’ ‘ಜಾಗೃತ’ ಇವೆಲ್ಲದರ ವ್ಯಾಖ್ಯಾನವೇ ಬದಲು.!! ಭಾರತೀಯ ಸಂಸ್ಕೃತಿ, ಇಲ್ಲಿನ ಪರಂಪರೆ, ಮನಶ್ಶಾಸ್ತ್ರ ಇವೆಲ್ಲ ಬಹಳ ಭಿನ್ನವಾಗಿದ್ದವು. ಹಾಗಾಗಿ ಈ ಕುರಿತು ಅಧ್ಯಯನ ನಾವು ಮಾತ್ರವಲ್ಲ, ಉಳಿದವರು ಕೂಡ ಮಾಡಬೇಕಾಗಿದೆ ಎಂದಿದ್ದರು.

ನಮ್ಮ ಸಂಸ್ಕೃತಿ ಇಷ್ಟೊಂದು ಭಿನ್ನವಾಗಿ, ವಿಶಿಷ್ಟವಾಗಿ ಇದ್ದರೂ ಕೂಡ ನಾವು ಎಲ್ಲದಕ್ಕೂ ಮುಖ ಮಾಡುವುದು ಪಶ್ಚಿಮದ ಕಡೆಗೆ. ‘ಶಂಖದಿಂದ ಬಿದ್ದರೇನೇ ತೀರ್ಥ’ ಎನ್ನುವಂತೆ ನಮಗೆ ಎಲ್ಲವೂ ಅಲ್ಲಿಂದಲೇ ಬರಬೇಕು, ಅವರು ಹೇಳಿದ್ದೇ ಸತ್ಯ. ಎಷ್ಟರ ಮಟ್ಟಿಗೆ ಎಂದರೆ ನಮ್ಮ ಇತಿಹಾಸ ಕೂಡ ಅವರು ನಮಗೆ ಕೊಟ್ಟಿದ್ದು! ಶಾಲೆಯಲ್ಲಿ ಇತಿಹಾಸವನ್ನು ಓದುವಾಗ ಎಂದೂ ಕೂಡ ನಮ್ಮ ದೇಶದ ಇತಿಹಾಸದ ಬಗ್ಗೆ ಹೆಮ್ಮೆ ಎನಿಸಲಿಲ್ಲ. ಆಗೆಲ್ಲ ಇತಿಹಾಸವೆಂದರೆ ಯಾರು ಯಾವಾಗ ಹುಟ್ಟಿದ್ದು, ಯಾವಾಗ ಯಾವ ಕದನ ನಡೆಯಿತು, ಯಾವಾಗ ಯಾವ ಒಪ್ಪಂದಗಳಾದವು, ಅದರ ಪರಿಣಾಮ, ಯಾವ ರಾಜ ಏನನ್ನು ಕಟ್ಟಿಸಿದ ಎಂದು ಓದುವುದರಲ್ಲೆ ಮುಗಿದಿತ್ತು. ತುಂಬಾ ಕುತೂಹಲಕಾರಿ ಎನ್ನುವಂತಾಗಲಿ, ನಮ್ಮ ದೇಶದ ಬಗ್ಗೆ ಹೆಮ್ಮೆ ಪಡುವಂತಹ ಯಾವ ವಿಷಯವೂ ಸಿಗುತ್ತಲೇ ಇರಲಿಲ್ಲ. ಆದರೆ ಆಗಾಗ ಮಾವ ಶಿವಾಜಿಯ ಜೀವನದ ರೋಚಕ ಕಥೆಗಳನ್ನ ಹೇಳಿದಾಗ, ಇದೆಲ್ಲ ನಮ್ಮ ಪಠ್ಯಗಳಲ್ಲಿ ಏಕಿಲ್ಲ ಅನಿಸುತ್ತಿದ್ದುದು ನಿಜ. ಹತ್ತನೇ ತರಗತಿಯಲ್ಲಿ ೧೮೫೭ರ ‘ಸಿಪಾಯಿ ದಂಗೆ’ ವಿಫಲವಾಗಲು ಕಾರಣಗಳೇನು ಎಂದು ಕಲಿಯುತ್ತಿದ್ದಾಗ, ಇಷ್ಟೆಲ್ಲ ಮಾಡಿದರೂ ವಿಫಲವೇ ಆಯಿತಲ್ಲ ಅಂತಲೇ ಅನಿಸಿದ್ದು. ನಂತರ ಚಕ್ರವರ್ತಿ ಸೂಲಿಬೆಲೆಯವರ ‘೧೮೫೭ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ’ ಎನ್ನುವ ಪುಸ್ತಕ ಓದಿದಾಗಲೇ ಗೊತ್ತಾಗಿದ್ದು ಆ ಸಂಗ್ರಾಮ ಎಷ್ಟು ದೊಡ್ಡ ಮಟ್ಟಿಗೆ ನಡೆದಿತ್ತು ಹಾಗೂ ಮುಂದಿನ ಚಳುವಳಿಗಳಿಗೆ ಎಂತಹ ಪ್ರೇರಣೆ ನೀಡಿತ್ತು ಎಂದು. ಆದರೆ ಇದೆಲ್ಲ ಪಠ್ಯಪುಸ್ತಕಗಳಲ್ಲಿ ಸಿಗಲೇ ಇಲ್ಲ. ಐ.ಸಿ.ಎಚ್.ಆರ್ (ICHR – Indian Council of Historical Research) ಚೇರ್’ಮನ್ ಆಗಿರುವ ಸುದರ್ಶನ್ ರಾವ್ ಅವರು ನಮ್ಮ ದೇಶದ ಇತಿಹಾಸದ ಕುರಿತು ಮಾತನಾಡುತ್ತ, “ನಮ್ಮ ಇತಿಹಾಸದ ಮೇಲೆ ಪಾಶ್ಚಾತ್ಯರ ಪ್ರಭಾವ ಸಾಕಷ್ಟಿದೆ. ಇನ್ನಾದರೂ ನಮ್ಮ ಇತಿಹಾಸ ಪಾಶ್ಚಾತ್ಯರ ದೃಷ್ಟಿಕೋನದಲ್ಲಿ ಅಲ್ಲದೇ, ಭಾರತೀಯ ದೃಷ್ಟಿಕೋನದಲ್ಲಿರಬೇಕು” ಎಂದಿದ್ದಾರೆ.  

ಬಹುಶಃ ಆ ಪ್ರಭಾವದ ಕಾರಣವೇ ಇರಬೇಕು ರಾಮಾಯಣ ಮಹಾಭಾರತಗಳು ಎಂದಿಗೂ ನಮ್ಮ ಇತಿಹಾಸವಾಗಲಿಲ್ಲ. ಕೇವಲ ಕಾವ್ಯಗಳಾಗಿ ಉಳಿದಿವೆ. ಪಾಶ್ಚಾತ್ಯರು ‘ಮಿಥ್(Myth)’ ಎಂದರೆ ನಾವೂ ಕೂಡ ಅದನ್ನೇ ಹಾಗೆ ಕರೆಯುತ್ತಾ ಮುಂದುವರೆದಿದ್ದೇವೆ.  ಅವುಗಳು ಇತಿಹಾಸ ಎನ್ನುವಂತಹ ಸಾಕಷ್ಟು ಪುರಾವೆಗಳು ದೊರಕಿದ್ದರೂ ಕೂಡ ಅವಿನ್ನೂ ಕೇವಲ ‘ಮಹಾಕಾವ್ಯ’ ಎಂತಲೇ ಕರೆಸಿಕೊಳ್ಳುತ್ತಿದೆ. ಅವೆರಡು ಕೇವಲ ಕಾವ್ಯಗಳಾಗಿದ್ದಿದ್ದರೆ, ಭಾರತೀಯರ ಜೀವನದಲ್ಲಿ ಇಷ್ಟು ಮಹತ್ವ ಪಡೆದುಕೊಳ್ಳತ್ತಿರಲಿಲ್ಲವೇನೋ?! ಇತಿಹಾಸಜ್ಞ ಸುದರ್ಶನ್ ರಾವ್ ಕೂಡ ಇದನ್ನೇ ಹೇಳುತ್ತಾರಲ್ಲದೇ, ತಾವು ನೀಡಿದ ಸಂದರ್ಶನವೊಂದರಲ್ಲಿ. “ಭಾರತದ ನಿಜವಾದ ಇತಿಹಾಸ ಹೊರ ಬರಬೇಕು, ಐ.ಸಿ.ಎಚ್. ಆರ್. ಕೂಡ ಅಂತಹ ನಿಟ್ಟಿನಲ್ಲಿ ಖಂಡಿತವಾಗಿ ಕೆಲಸ ಮಾಡುತ್ತದೆ ಇನ್ನು ಮುಂದೆ” ಎಂದು ತಾವು ಚೇರ್’ಮನ್ ಹುದ್ದೆ ಸ್ವೀಕರಿಸಿದ ಸಂದರ್ಭದಲ್ಲಿ ಹೇಳಿದ್ದರು. ಆದರೆ ನಮ್ಮ ದೇಶದಲ್ಲಿ ಇಂದು ಯಾರಾದರೂ ‘ರಾಮ’ ಎಂದರೆ ಆತ ಆರ್.ಎಸ್.ಎಸ್ ಅಥವಾ ಬಿ.ಜೆ.ಪಿ. ಏಜೆಂಟ್ ಆಗಿ ಬಿಡುತ್ತಾನೆ. “ನಿಮ್ಮನ್ನ ಬಿ.ಜೆ.ಪಿ. ಸರ್ಕಾರ ತಾನೆ ಅಪಾಯಿಂಟ್ ಮಾಡಿದ್ದು. ಅಂದ ಮೇಲೆ ರಾಮನನ್ನು ಇತಿಹಾಸಕ್ಕೆ ಸೇರಿಸುತ್ತೀರಿ ಬಿಡಿ” ಎನ್ನುವಂತಹ ಕುಹಕಗಳು ಕೂಡ ಬಂದವು. ಅವೆಲ್ಲವನ್ನು ಮೀರಿ ಯೋಚಿಸುವ ಕ್ಷಮತೆಯೂ ಇಲ್ಲವಾಗಿದೆ.! ಇಂತಹ ಪರಿಸ್ಥಿತಿಯನ್ನ ನೋಡಿಯೇ ದೇವದತ್ತ ಪಟ್ನಾಯಕ್ ಅವರು  ಹೇಳಿದ್ದು,“ಇಂದು ನಮ್ಮ ವಿಶ್ವವಿದ್ಯಾಲಯಗಳಲ್ಲಿ ರಾಮಾಯಣ ಮಹಾಭಾರತದ ರೆಫರೆನ್ಸ್ ಕೊಟ್ಟು ಪಾಠ ಮಾಡುವುದಕ್ಕೂ ಮುಜುಗರ ಪಡುತ್ತಾರೆ” ಎಂದು.  ಪಾಶ್ಚಾತ್ಯರ ಹೇಳಿಕೆಯನ್ನೇ ನಂಬಿಕೊಂಡು ಇವೆಲ್ಲ ಮಿಥ್ ಎನ್ನುವವರಿಗೆ ದೇವದತ್ತ ಅವರು ಕೇಳುವುದು, “ಎಕ್ಸೊಡಸ್ ಸತ್ಯ ಅಂತಾದರೆ ಕುರುಕ್ಷೇತ್ರ ಯಾಕಾಗಬಾರದು?” ಎಂದು.

೨೦ನೇ ಶತಮಾನದಲ್ಲಿ ಬಂದ ಸಿಗ್ಮಂಡ್ ಫ್ರಾಯ್ಡ್, ಕಾರ್ಲ್ ಯೂಂಗ್ ಎಂಬ ಮನಶಾಸ್ತ್ರಜ್ಞರು ಭಾರತೀಯ ಸಂಸ್ಕೃತಿ, ಜ್ಞಾನ, ಮನಃಸ್ಥಿತಿಯನ್ನು ಕುರಿತು “ಪುರಾತನ ಭಾರತೀಯರು ಪ್ರಾಪಂಚಿಕ, ರಾಜಕೀಯ ವಿಷಯಗಳಿಗಿಂತ ಹೆಚ್ಚಾಗಿ ಮಾನವನ ಇತಿಹಾಸವನ್ನು ರೂಪಿಸಿದ ಮನೋವೈಜ್ಞಾನಿಕ ವಿಷಯಗಳಲ್ಲಿ ಹೆಚ್ಚು ಆಸಕ್ತರಾಗಿದ್ದರು” ಎಂದಿದ್ದಾರೆ. ಆದರೆ ಈ ವಿಷಯ ಎಂದೂ ಕೂಡ ನಮ್ಮ ಪಠ್ಯ ಪುಸ್ತಕಗಳನ್ನು ಸೇರಲೇ ಇಲ್ಲ ಎಂದು ದೇವದತ್ತ ಅವರು ವಿಷಾದ ವ್ಯಕ್ತಪಡಿಸುತ್ತಾರೆ. ನಮ್ಮಲ್ಲಿನ ಬುದ್ಧಿಜೀವಿಗಳಿಗೆ ‘ಲಿಬರಲ್’ ಎಂದರೆ ಅದು ಪಾಶ್ಚಾತ್ಯರು. ಪಾಶ್ಚಾತ್ಯರು ನಮ್ಮಲ್ಲಿಗೆ ಬರದಿದ್ದರೆ ಭಾರತ ಉದ್ಧಾರವೇ ಆಗುತ್ತಿರಲಿಲ್ಲ ಎಂಬ ಧೋರಣೆ. ಸ್ತ್ರೀಸಮಾನತೆ, ಜಾತ್ಯಾತೀತತೆ, ಅಭಿವ್ಯಕ್ತಿ ಸ್ವಾತಂತ್ರ್ಯ ಇದೆಲ್ಲ ಭಾರತೀಯ ಸಂಸ್ಕೃತಿಯ ಭಾಗವೇ ಅಲ್ಲ, ಭಾರತೀಯರು ಈ ವಿಷಯಗಳಲ್ಲಿ ಬೇರೆ ದೇಶಗಳಿಂದ ಕಲಿಯಬೇಕಿದೆ ಎನ್ನುವಂತೆ ಮಾತನಾಡುತ್ತಾರೆ. ಭಾರತೀಯ ಇತಿಹಾಸ, ಇಲ್ಲಿನ ಸಂಸ್ಕೃತಿಯ ಬಗ್ಗೆ ಗೌರವವೇ ಇಲ್ಲದವರು, ಅದನ್ನು ನೋಡುವ ಗೋಜಿಗಾದರು ಯಾಕೆ ಹೋಗುತ್ತಾರೆ? ಈಗ ಕೆಲ ತಿಂಗಳುಗಳ ಹಿಂದೆ ಅಮಿಶ್ ತ್ರಿಪಾಠಿಯವರು ಒಂದು ಲೇಖನವನ್ನು ಬರೆದಿದ್ದರು. ಅದರಲ್ಲಿ ಅವರು, “ Being liberal is being more Indian” ಎಂದಿದ್ದರು. ಅಭಿವ್ಯಕ್ತಿ ಸ್ವಾತಂತ್ರ್ಯ, ಸ್ತ್ರೀ ಸಮಾನತೆ, ವರ್ಣಾಶ್ರಮ ಇವೆಲ್ಲ ಹೇಗಿತ್ತು ಎಂದು ಉದಾಹರಣೆ ಸಹಿತ ವಿವರಿಸುತ್ತಾರೆ. ಇದನ್ನೆಲ್ಲ ಕಲಿಯುವುದಕ್ಕೆ ನಾವು ಬೇರೆ ಯಾರನ್ನೋ ನೋಡುವ ಅವಶ್ಯಕತೆ ಇಲ್ಲ. ನಮ್ಮ ಸಂಸ್ಕೃತಿಯನ್ನ, ನಮ್ಮ ಇತಿಹಾಸವನ್ನೇ ಸರಿಯಾಗಿ ನೋಡಿದರೆ ಸಾಕು.

ಇಷ್ಟೆಲ್ಲ ಅನಿಸುವುದಕ್ಕೆ ಕಾರಣಗಳಿವೆ. ಈಗ ಸದ್ಯ ಅಮಿಶ್ ಅವರ ‘ಸೀತಾ- ವಾರಿಯರ್ ಆಫ್ ಮಿಥಿಲ” ಎಂಬ ಪುಸ್ತಕವನ್ನು ಓದುತ್ತಿದ್ದೇನೆ. ಅದರಲ್ಲಿ ಸೀತೆ ಒಬ್ಬ ಸಶಕ್ತ ಭಾರತೀಯ ಸ್ತ್ರೀಯಾಗಿ ಕಾಣಿಸಿಕೊಳ್ಳುತ್ತಾಳೆ. ಟ್ವಿಟ್ಟರ್’ನಲ್ಲಿ ಅಮಿಶ್ ಅಭಿಮಾನಿಯೊಬ್ಬರು ಈ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಅದಕ್ಕೆ ಉತ್ತರಿಸುತ್ತ ಅಮಿಶ್, “ಸೀತೆ ನಿಜವಾಗಿಯೂ ಸಶಕ್ತಳೇ ಆಗಿದ್ದಳು, ಬೇಕಿದ್ದರೆ ವಾಲ್ಮೀಕಿ ರಾಮಾಯಣವನ್ನು ಓದಿ” ಎಂದಿದ್ದರು. ವಾಲ್ಮೀಕಿಯವರ ರಾಮಾಯಣ ಕಾವ್ಯವಲ್ಲ ಇತಿಹಾಸ ಎನ್ನುವಂತೆ. ಅಮಿಶ್ ಅವರು ರಾಮಾಯಣದ ಪಾತ್ರ, ಕಥೆಯನ್ನೇ ಇಟ್ಟುಕೊಂಡು ಅದಕ್ಕೊಂದಿಷ್ಟು ತಮ್ಮದೇ ಆದ ಕಲ್ಪನೆಗಳನ್ನು ಸೇರಿಸಿರುವುದಂತು ನಿಜ, ಈ ಬಗ್ಗೆ ಸಾಕಷ್ಟು ಜನರಿಗೆ ಅಸಮಾಧಾನವೂ ಇದೆ. ಆದರೆ ಅಲ್ಲಿ ಪ್ರಸ್ತಾಪವಾಗುವ ಅಂದಿನ ಕಾಲದ ಆಡಳಿತ, ಸ್ತ್ರೀಸಮಾನತೆ, ಜ್ಞಾನಾರ್ಜನೆಗೆ ಅಂದು ನೀಡುತ್ತಿದ್ದ ಮಹತ್ವ, ಅಂದಿನ ಕಾಲದ ಮೌಲ್ಯಗಳು ಇವೆಲ್ಲ ಇತಿಹಾಸವೇ. ಅದು ಆ ಕಾಲದ ಸಂಸ್ಕೃತಿ, ಹಾಗೂ ಮನಸ್ಥಿತಿಯನ್ನು ವಿವರಿಸುತ್ತದೆ.  ಭಾರತೀಯ ಸಂಸ್ಕೃತಿ, ಇತಿಹಾಸದ ಬಗ್ಗೆ ಅನನ್ಯ ಗೌರವ ಇಟ್ಟಿರುವ, ಹಾಗೂ ಅದರ ಅಧ್ಯಯನ ನಡೆಸಿ ಬರೆಯುವ ಅಮಿಶ್ ಅವರ ಬರಹಗಳನ್ನ ಓದಿದಾಗ ಇವೆಲ್ಲ ನಮ್ಮ ಇತಿಹಾಸದ ಪುಸ್ತಕಗಳಲ್ಲಿ ಇನ್ನೂ ಸವಿವರವಾಗಿ ಸಿಗುವಂತಿದ್ದರೆ ಎನಿಸದೆ ಇರದು..! ನಾವು ಹೆಮ್ಮೆ ಪಡುವಂತಹ ಇಂತಹ ವಿಷಯಗಳು ನಮ್ಮ ಪಠ್ಯ ಪುಸ್ತಕಗಳನ್ನು ಸೇರುವುದು ಯಾವ ಕಾಲಕ್ಕೋ ಗೊತ್ತಿಲ್ಲ. ಅಲ್ಲಿಯ ತನಕ ಭಾರತೀಯರು ಯಾವುದರಲ್ಲೂ ಸಶಕ್ತರಾಗಿರಲಿಲ್ಲ, ವಿದೇಶಿಯರು ಬಂದ ಮೇಲೆಯೇ ಇಲ್ಲಿ ಸುಧಾರಣೆಯಾಗಿದ್ದು, ಅವರ ಮಿಶನರಿಗಳು ಬಂದ ಮೇಲೆಯೇ ಇಲ್ಲಿನವರು ವಿದ್ಯಾವಂತರಾಗಿದ್ದು ಎನ್ನುವಂತಹ ಇತಿಹಾಸವನ್ನೇ ಓದುತ್ತಿರಬೇಕು.!!

Facebook ಕಾಮೆಂಟ್ಸ್

ಲೇಖಕರ ಕುರಿತು

Shruthi Rao

A cancer survivor dwells in a village of hosanagara. Author of Kannada book 'Baduku dikku badalisida osteosarcoma', and recepient of Karnataka sahitya academy award.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!