ಅಂಕಣ

ಗಾಂಧಿ ನಗುತ್ತಿದ್ದಾರೆ, ನೋಟಿನ ಚಿತ್ರದಲ್ಲಷ್ಟೇ!

ಸಾಮಾಜಿಕ, ರಾಜಕೀಯ ಹಾಗೂ ಸಾಂಸ್ಕೃತಿಕವಾಗಿ ಗಾಂಧಿಯ ಹೆಸರು ಅಜರಾಮರ. ಅವರ ತತ್ವ ಸಿದ್ಧಾಂತಗಳು ಅನುಕರಣೀಯ, ಆದರೆ ಅವುಗಳ ಅಳವಡಿಕೆಗೆ ಬೇಕಾದ ಮನಃಸ್ಥಿತಿಯಾಗಲಿ, ಅಗತ್ಯ ನಡವಳಿಕೆಯಾಗಲೀ ನಮ್ಮ ಇಂದಿನ ಜನನಾಯಕರಲ್ಲಿ ಕಾಣದಾಗಿದೆ. ತಮ್ಮ ಭಾಷಣಗಳಲ್ಲಿ ಬಿಡುಬೀಸಾಗಿ ಗಾಂಧೀಜಿಯವರ ಬಗ್ಗೆ ಪ್ರಸ್ತಾಪಿಸುವ ಬಹುತೇಕ ಜನನಾಯಕರು ಅದರ ಕಿಂಚಿತ್ತನ್ನೂ ತಮ್ಮ ನಿತ್ಯ ಜೀವನದಲ್ಲಾಗಲೀ, ತಮಗೆ ಸಿಕ್ಕ ಅಧಿಕಾರದ ಇತಿಮಿತಿಯಲ್ಲಾಗಲೀ ಪಾಲಿಸುತ್ತಿಲ್ಲ. ಗಾಂಧೀ ಜಯಂತಿಯ ಸಂದರ್ಭದಲ್ಲಷ್ಟೇ ಜಯಕಾರ ಕೂಗಿ ಮತ್ತೆ ನಿತ್ಯದ ಹಾಹಾಕಾರ ಸೃಷ್ಟಿಸುವ ರಾಜಕಾರಣಿಗಳ ನಡುವೆ ಗಾಂಧೀಜಿಯೇ ಮಂಕಾಗಿ ಕುಳಿತಂತಿದೆ.

ತಮ್ಮ ಹೆಸರಿನ ಮುಂದೆ ಗಾಂಧಿ ಎಂಬ ಉಪನಾಮವನ್ನು ಸೇರಿಸಿಕೊಳ್ಳುವುದಷ್ಟೇ, ಗಾಂಧೀಜಿಯವರ ಹೆಸರನ್ನು ಉಳಿಸುವ ಮಹಾನ್ ಕಾರ್ಯವೆಂದು, ದೇಶದ ರಾಜಕೀಯ ವ್ಯವಸ್ಥೆಯಲ್ಲಿ ತೊಡಗಿಸಿಕೊಂಡಿರುವ ಕುಟುಂಬವೊಂದು ಭಾವಿಸಿದಂತಿದೆ. ಆ ಮೂಲಕ ತಾವು ಗಾಂಧಿ ವಂಶಸ್ಥರು ಎಂದು ಸಾರಿಕೊಳ್ಳುವ ಅನಿವಾರ್ಯತೆ ಅವರದ್ದು. ಆದರೆ ತಮ್ಮ ಕೃತಿಯಲ್ಲಿ ಮಾತ್ರ ಗಾಂಧಿ ತತ್ವದ ಛಾಯೆ ಒಂದಿನಿತೂ ಕಾಣದೇ ಇರುವುದರಿಂದಲೇ ಅದು ಇಂದು ಸಸಾರದ ಸಂಗತಿಯಾಗಿದೆ. ಪ್ರತೀ ಚುನಾವಣೆಯ ಸಂದರ್ಭದಲ್ಲೂ ಇದೇ ನೇಮ್ ಕಾರ್ಡ್ ಬಳಸಿಕೊಂಡು ಅಧಿಕಾರದ ಫೇಮ್ ಗಿಟ್ಟಿಸುವ ಪ್ರಯತ್ನವನ್ನಂತೂ ಮಾಡುತ್ತಲೇ ಇದ್ದಾರೆ. ಪರ್ಯಾಯ ರಾಜಕೀಯ ವ್ಯವಸ್ಥೆಯನ್ನೇ ನಿರ್ಮಾಣ ಮಾಡುತ್ತೇವೆಂದು ಗಾಂಧಿ ಟೋಪಿ ಧರಿಸಿಕೊಂಡು ಆಟಾಟೋಪಗೈದವರು ಕೊನೆಗೆ ಆ ಸಿದ್ಧಾಂತಗಳಿಗೇ ಎಳ್ಳುನೀರು ಬಿಟ್ಟು ಜನರ ತಲೆಗೇ ಮಕ್ಮಲ್ ಟೋಪಿ ಧರಿಸಿದ ಉದಾಹರಣೆಯೂ ನಮ್ಮ ಕಣ್ಣ ಮುಂದಿದೆ.

ರಾಮರಾಜ್ಯದ ಕನಸನ್ನು ಬಿತ್ತಿದವರೂ ಇದೇ ಮಹಾತ್ಮ. ಸದ್ಯ ಆ ಕಾಲದಲ್ಲಿ ಈಗಿನಂತೆ ಸೆಕ್ಯುಲರಿಸ್ಟ್ ಬುದ್ಧಿಜೀವಿಗಳ ಉಪಟಳ ಇರಲಿಲ್ಲವೆನಿಸುತ್ತದೆ. ಇಲ್ಲದಿದ್ದರೆ ಅದಕ್ಕೂ ಕ್ಯಾತೆ ತೆಗೆದು, “ಅದೇಕೆ ರಾಮರಾಜ್ಯ? ನಮಗೆ ರಾವಣ ರಾಜ್ಯವೇ ಆಗಬೇಕು” ಎಂದು ಅದರ ಹೆಸರಲ್ಲೂ ಒಂದಷ್ಟು ‘ಚಲೋ’ವಳಿಗಳನ್ನೇ ಮಾಡುತ್ತಿದ್ದರೇನೋ! ಅದು ಒತ್ತಟ್ಟಿಗಿರಲಿ. ಈ ರಾಮರಾಜ್ಯದ ಕನಸನ್ನು ನನಸು ಮಾಡಬೇಕಾಗಿದ್ದ, ಸ್ವಾತಂತ್ರ್ಯ ನಂತರದಲ್ಲಿ ಆಡಳಿತ ನಡೆಸಿದ ರಾಜಕೀಯ ಪಕ್ಷಗಳು ಅದನ್ನೆಲ್ಲಾ ತಮ್ಮ ಕುರ್ಚಿಯ ಕೆಳಗೆ ತಳ್ಳಿಕೊಂಡು ಆರಾಮವಾಗಿ ಕಾಲ ಕಳೆದಿದ್ದೇ ಬಂತು. ರಾಮನ ಹೆಸರಲ್ಲಿ ಆಡಳಿತ ನಡೆಸುತ್ತೇವೆಂದು ಅಧಿಕಾರದ ಗದ್ದುಗೆಯೇರಿದವರಿಂದಲೂ ರಾಮರಾಜ್ಯ ಮಾತ್ರ ನಿರ್ಮಾಣವಾಗಲೇ ಇಲ್ಲ. ಅಷ್ಟೇ ಏಕೆ ಇನ್ನೂ ರಾಮನಿಗೊಂದು ಮಂದಿರವೇ ನಿರ್ಮಿಸಲೇ ಆಗಲಿಲ್ಲ ಅಂದಮೇಲೆ ರಾಮರಾಜ್ಯದ ಕನಸು ಈಡೇರಿತೇ ಎಂಬ ಸಂಶಯ ಜನಸಾಮಾನ್ಯನದ್ದು.

ನಾವು ಗಲ್ಲಿ ಗಲ್ಲಿಗಳಲ್ಲಿ ಗಾಂಧಿ ಪ್ರತಿಮೆಯನ್ನು ಸ್ಥಾಪಿಸಿದ್ದಷ್ಟೇ ಅಲ್ಲಾ ಗಾಂಧಿ ತತ್ವವನ್ನೂ ಅಕ್ಷರಶಃ ಬೀದಿಗೆ ತಂದು ನಿಲ್ಲಿಸಿ ಬಿಟ್ಟಿದ್ದೇವೆ. ಗಾಂಧಿ ಪ್ರತಿಮೆಯ ಕೆಳಗೆ ನಡೆಯುವ ಕೆಲವು ಪ್ರತಿಭಟನೆಗಳಂತೂ ಖುದ್ದು ಗಾಂಧೀಜಿಗೆ ಇರುಸುಮುರುಸು ಉಂಟುಮಾಡುವಂತಿವೆ. ಅಲ್ಲಿ ನೆಟ್ಟ ಪ್ರತಿಮೆಗೇನಾದರೂ ಜೀವ ಬರುವಂತಿದ್ದರೆ ಎದ್ದು ಬಂದು ತಮ್ಮ ಕೋಲಿನಿಂದಲೇ ಆ ಪ್ರತಿಭಟನಾ ನಿರತರನ್ನು ಹಣ್ಣುಗಾಯಿ ನೀರುಗಾಯಿ ಮಾಡಿಬಿಡುತ್ತಿದ್ದರೇನೋ!! ಇಲ್ಲವಾದರೆ ನೀವೆ ನೋಡಿ, ಬೀಫ್ ಬ್ಯಾನ್ ಆಯಿತೆಂದು ಪ್ರಾಣಿ ಹಿಂಸೆಯನ್ನು ನಖಶಿಖಾಂತ ವಿರೋಧಿಸುವ ಮಹಾತ್ಮನ ಪ್ರತಿಮೆ ಮುಂದೆ ಪ್ರತಿಭಟನೆಗೆ ಕುಳಿತುಕೊಳ್ಳುವುದೇ? ಭ್ರಷ್ಟಾಚಾರದಲ್ಲಿ ತೊಡಗಿ ಕಾನೂನಿಗೆ ಬಲಿ ಬಿದ್ದವರ ಪರವಾಗಿಯೂ ಅಲ್ಲಿಯೇ ಪ್ರತಿಭಟನೆ ಮಾಡುವುದೇ?

ಕೆಟ್ಟದ್ದನ್ನು ಕೇಳಬೇಡ, ನೋಡಬೇಡ ಹಾಗೂ ಮಾಡಬೇಡ ಎಂದ ಆ ಮೂರು ಕೋತಿಗಳ ಕತ್ತು ಹಿಸುಕಿ ಕೆಟ್ಟದ್ದನ್ನೇ ಕಟ್ಟಿಕೊಂಡು ಅಧಿಕಾರ ನಡೆಸುವವರ ಮುಂದೆ ಗಾಂಧಿ ತತ್ವಕ್ಕೆಲ್ಲಿಯ ಉಳಿಗಾಲ? ಬಡಪಾಯಿಗಳ ಹೊಟ್ಟೆ ಮೇಲೆಯೇ ಹೊಡೆಯುವವರ ನಡುವೆ ಒಂದು ಕೆನ್ನೆಗೆ ಹೊಡೆದರೆ ಇನ್ನೊಂದನ್ನು ತೋರಿಸಿ ಎಂಬ ಅಹಿಂಸಾ ತತ್ವ ನೆಲೆಯಾಗುವುದೆಂತು? ಹಳ್ಳಿಗಳನ್ನೇ ಕೊಳ್ಳೆ ಹೊಡೆಯುವ ಕೊಳ್ಳುಬಾಕರ ನಡುವೆ ದೇಶದ ಬೆನ್ನೆಲುಬು ನೆಟ್ಟಗಾಗುವುದಾದರೂ ಹೇಗೆ? ಐಷರಾಮವನ್ನೇ ಹಾಸಿ ಹೊದ್ದವರೇ ಇರುವಾಗ ಖಾದಿಗೆಯಲ್ಲಿದೆ ಖಾಯಸ್ಸು, ಆಯಸ್ಸು? ಇಷ್ಟೆಲ್ಲಾ ಆಗಿಯೂ ಗಾಂಧೀಜಿ ನಗುತ್ತಿದ್ದಾರೆ, ನೋಟಿನ ಮೇಲಿನ ಚಿತ್ರದಲ್ಲಷ್ಟೇ!!

ಓವರ್ ಡೋಸ್: ಗಾಂಧಿ ರಾಮರಾಜ್ಯದ ಕನಸು ಕಂಡರು ದುರಂತವೆಂದರೆ ಅದನ್ನು ಈಡೇರಿಸಬೇಕಾದ ಬಹುತೇಕ ರಾಜಕಾರಣಿಗಳು ಗಾಂಧಿ ನೋಟಿನ ಕನಸನ್ನಷ್ಟೇ ಕಾಣುತ್ತಿದ್ದಾರೆ.

Facebook ಕಾಮೆಂಟ್ಸ್

ಲೇಖಕರ ಕುರಿತು

Sandesh H Naik

ಉಡುಪಿ ಜಿಲ್ಲೆ, ಕುಂದಾಪುರ ತಾಲೂಕಿನ ಹಕ್ಲಾಡಿ ಹುಟ್ಟೂರು. ಪ್ರಸ್ತುತ ಶಿಕ್ಷಕರಾಗಿ ಕಾರ್ಯನಿರ್ವಹಣೆ.  ಬರವಣಿಗೆ ಮೆಚ್ಚಿನ ಪ್ರವೃತ್ತಿಗಳಲ್ಲೊಂದು.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!