Featured ಅಂಕಣ

ಖರ್ಚಿಲ್ಲದೆ ಕೊಡಬಹುದಾದ ಬಹು ದೊಡ್ಡ ಪ್ರಶಸ್ತಿ ಯಾವುದು ಗೊತ್ತಾ?

 

ಗ್ರಾಚೋ ಅಮೆರಿಕದ ಜೋಕುಮಾರ. ಹಾಲಿವುಡ್ಡಿನ ನರಸಿಂಹರಾಜು. ಒಂದು ಕಾಲದಲ್ಲಿ ಇಡೀ ಅಮೆರಿಕವನ್ನೆ ಉರುಳಾಡಿಸಿ ಹೊರಳಾಡಿಸಿ ನಗಿಸಿದವನು. ಕೈಕಾಲುಗಳಲ್ಲಿ ಕಸುವಿಳಿದು ಕಣ್ಣು ಮಂಜಾದ ಮೇಲೆ ಸಿನೆಮ, ನಾಟಕರಂಗಗಳಿಂದ ದೂರ ಉಳಿದಿದ್ದ. ಆದರೆ, ನಿಮಗೆಷ್ಟು ವಯಸ್ಸಾದರೂ ಪರವಾಯಿಲ್ಲ ಗ್ರಾಚೋ ಅವರೇ, ನಮಗೊಂದು ಶೋ ಕೊಡಲೇಬೇಕು ಎಂದು ಈ 81ರ ಇಳಿವಯಸ್ಸಿನ ಅಜ್ಜನನ್ನು ಕಾಡಿಬೇಡಿ ಒಪ್ಪಿಸಿ ಪ್ರತಿಷ್ಠಿತ ಕಾರ್ನೆಗಿ ಸಭಾಂಗಣಕ್ಕೆ ತಂದು ನಿಲ್ಲಿಸಿದ್ದರು ಅಭಿಮಾನಿಗಳು. ಗ್ರಾಚೋನಿಗೆ ಅದೆಲ್ಲಿತ್ತೋ ಆ ಅದಮ್ಯ ಶಕ್ತಿ, ಯುವಕರನ್ನೂ ನಾಚಿಸುವಂತೆ ರಂಗದ ತುಂಬ ಕುಣ ಯುತ್ತ ಹಾಡು-ಹಸೆ-ಕತೆ-ಜೋಕುಗಳನ್ನು ಸಿಡಿಗುಂಡಿನಂತೆ ಬಿಡುವಿಲ್ಲದೆ ಬಿತ್ತರಿಸುತ್ತ ತನ್ನ ಹಳೆ ವೈಭವವನ್ನು ಮತ್ತೆ ಕಣ್ಣೆದುರು ತಂದಿಟ್ಟು ಪ್ರೇಕ್ಷಕರನ್ನು ಹುಚ್ಚೆಬ್ಬಿಸಿಬಿಟ್ಟ. ಎರಡೂವರೆ ತಾಸುಗಳ ಬ್ರೇಕ್ ರಹಿತ ಕಾರ್ಯಕ್ರಮ, ಕುಂಭದ್ರೋಣದಂತೆ ಜಡಿದು ನಿಂತಾಗ; ಪ್ರೇಕ್ಷಕರು ಎದ್ದು ತಮ್ಮ ಪಾಲಿನ ಕರ್ತವ್ಯವನ್ನು ನಿಷ್ಠೆಯಿಂದ ಮಾಡಿದರು. ಐದು ನಿಮಿಷ ತಮ್ಮ ತಡೆಯಿಲ್ಲದ ಕರತಾಡನದಲ್ಲಿ ಗ್ರಾಚೋನನ್ನು ಮುಳುಗೇಳಿಸಿದರು!

ಕ್ಷಮಿಸಿ, ನಾನು ಹೇಳಹೊರಟಿದ್ದು ಗ್ರಾಚೋನ ಬಗ್ಗೆ ಅಲ್ಲ; ಕರತಾಡನದ ಶಕ್ತಿಯ ಬಗ್ಗೆ! ನಮ್ಮಲ್ಲೇ ನೋಡಿ, ಒಂದೊಂದು ಚಪ್ಪಾಳೆಯೂ ಒಂದೊಂದು ಗುಲಾಬಿ ಹೂ ಆಗಿದ್ದರೆ, “ಮುಖ್ಯಮಂತ್ರಿ” ನಾಟಕ ಮುಗಿಯುವ ಹೊತ್ತಿಗೆ ವೇದಿಕೆ ಹೂಗಳಿಂದ ಮುಚ್ಚಿಹೋಗಿ ಚಂದ್ರು ಅವರನ್ನು ಮುಳುಗಿಸಿಹಾಕುತ್ತಿರಲಿಲ್ಲವೆ? ಒಂದೊಂದು ಚಪ್ಪಾಳೆಯೂ ಒಂದೊಂದು ಲೋಟ ಹಾಲಾಗಿದ್ದರೆ “ಗತಿ” ನಾಟಕದ ಕೊನೆಗೆ ಸೇತುರಾಂ ಪಾಲ್ಗಡಲಲ್ಲಿ ಕೊಚ್ಚಿಹೋಗ್ತಿರಲಿಲ್ಲವೆ? ಒಂದೊಂದು ಚಪ್ಪಾಳೆಯನ್ನೂ ಒಂದೊಂದು ರುಪಾಯಿ ಅಂದುಕೊಂಡರೂ ಮಾಸ್ಟರ್ ಹಿರಣ್ಣಯ್ಯ ಇಷ್ಟು ಹೊತ್ತಿಗೆ ಬಿಲ್‍ಗೇಟ್ಸ್ ಪಕ್ಕ ನಿಲ್ಲುತ್ತಿದ್ದರು! ಹಾಗೆಂದ ಮಾತ್ರಕ್ಕೆ ಚಪ್ಪಾಳೆ ಗಿಟ್ಟಿಸುವವರು ಕಾರ್ಯಕ್ರಮದ ಮುಖ್ಯ ಕಲಾವಿದರಷ್ಟೇ ಆಗಿರಬೇಕೆಂದೇನಿಲ್ಲ. ಯಾವುದೋ ನಾಟಕದಲ್ಲಿ ಒಮ್ಮೆ ಒಂದೇ ಒಂದು ದೃಶ್ಯದಲ್ಲಿ ಒಂದೇ ಒಂದು ಸಲ – ಕೇವಲ ಒಂದು ನಿಮಿಷ ಬಂದು ಹೋಗುವ ಪಾತ್ರಧಾರಿ ತನ್ನ ಅಭಿನಯಕ್ಕಾಗಿ ಮೂರ್ನಾಲ್ಕು ನಿಮಿಷಗಳ ದೀರ್ಘ ಚಪ್ಪಾಳೆಯ ಬಿರುಮಳೆಗೆ ನೆನೆದಿದ್ದನಂತೆ! “ನೆನೆ ನೆನೆ ಆ ದಿನವ” ಅನ್ನುವ ಹಾಗೆ ಜೀವನಪೂರ್ತಿ ಆತ ಆ ಚಪ್ಪಾಳೆಯ ಸುಖವನ್ನು ನೆನೆದು ಖುಷಿಪಟ್ಟಿರಬಹುದು! ಚಪ್ಪಾಳೆ ಅನ್ನುವುದು ನಾಟಕದವರ ಸೊತ್ತಲ್ಲ; ಸಂಗೀತ ಕಛೇರಿಗಳಲ್ಲೂ ಅದಕ್ಕೆ ತಕ್ಕ ಪ್ರಾಶಸ್ತ್ಯ ಉಂಟು. ಹಾಡುಗಾರಿಕೆಯ ನಡುವಲ್ಲಿ ಚಪ್ಪಾಳೆ ಹೊಡೆಯುವುದು ರಸಭಂಗ; ಅರಸಿಕರ ಲಕ್ಷಣ. ಆದರೆ, ಒಂದೊಳ್ಳೆಯ ಹಾಡು ಮುಗಿದ ಮೇಲೆ ಎಷ್ಟು ಸಾಧ್ಯವೋ ಅಷ್ಟು ಗಟ್ಟಿಯಾಗಿ, ದೀರ್ಘವಾಗಿ ಚಪ್ಪಾಳೆ ಹೊಡೆದು ಹುರಿದುಂಬಿಸುವುದು ಕಲಾವಂತಿಕೆಯ ಕುರುಹು. ಹಾಸ್ಯಗೋಷ್ಠಿಯಲ್ಲಿ ಅಂತಹ ಕಟ್ಟುಪಾಡುಗಳೇನೂ ಇಲ್ಲ. ನಿಲ್ಲದೆ ಹೊಡೆಯುವ ಚಪ್ಪಾಳೆಯೇ ಅಂಥ ಕಾರ್ಯಕ್ರಮಗಳಿಗೆ ಭೂಷಣ. ಗಂಗಾವತಿ ಪ್ರಾಣೇಶರ ಭಾಷಣ ಕೇಳಲು ಹೋದವರು ಗಂಟೆಗೆ ನೂರು ರೊಟ್ಟಿ ತಟ್ಟುವ ಸ್ಪರ್ಧೆಗೆ ಇಳಿದವರಂತೆ ಕ್ಲಾಪ್ ಹೊಡೆದು ಒಂದು ವಾರ ಅಂಗೈ ಊದಿಸಿಕೊಂಡು ತೆಂಗಿನೆಣ್ಣೆಯ ಉಪಚಾರ ಮಾಡಿಸಿಕೊಳ್ಳುತ್ತಾರೆ. ಹಾಸ್ಯಗೋಷ್ಠಿಗೆ ಸರಿ; ಆದರೆ ಭಾಷಣಕ್ಕೂ ಹಾಗೆ ಜಿದ್ದಿಗೆ ಬಿದ್ದವರಂತೆ ಚಪ್ಪಾಳೆ ತಟ್ಟಿದರೆ “ನಿಮ್ಮ ಕೊರೆತ ಸಾಕು, ಬೇಗ ಮುಗಿಸಿ ಕೂತುಕೊಳ್ಳಿ” ಎಂಬ ಸಂದೇಶವನ್ನು ಭಾಷಣಕೋರನಿಗೆ ರವಾನಿಸಿದಂತೆ!

ಮನುಷ್ಯ, ಇನ್ನೊಬ್ಬರಿಗೆ ಕೇಳಲಿ ಎಂದು ಬಯಸಿ ಉದ್ದೇಶಪೂರ್ವಕವಾಗಿ ಹೊರಡಿಸುವ ಧ್ವನಿ ಚಪ್ಪಾಳೆ. ನಮ್ಮ ಖುಷಿಯ ತಹತಹ, ಉದ್ವೇಗದ ಆವೇಗಗಳನ್ನು ಆದಷ್ಟು ಶೀಘ್ರವಾಗಿ ಹೊರಹಾಕಿಬಿಡಬೇಕೆನ್ನಿಸಿ ಹುಟ್ಟುವ ಚಡಪಡಿಕೆಯೇ ಚಪ್ಪಾಳೆ. ಸೇವಂತಿ ಪ್ರಸಂಗದಲ್ಲಿ ಸೇವಂತಿ, ಕುದುರೆ ರೇಸಿಗೆ ಹೋಗಿ, ನಾಗಾಲೋಟ ಕೀಳುವ ಕುದುರೆಗಳನ್ನು ನೋಡನೋಡುತ್ತ ಉತ್ಸಾಹ ತಡೆಯಲಾರದೆ “ಬಡ್ಡಿಮರೀ ಬಡ್ಡಿಮರೀ ಜೋರಾಗಿ ಓಡ್ತೀಯೋ ಮುಕುಳಿಗೊಂದು ಬಾರಿಸಲೋ?” ಎಂದು ಕಿರುಚಿ ಜೋರಾಗಿ ಚಪ್ಪಾಳೆ ತಟ್ಟುತ್ತಾಳಲ್ಲ; ಆ ಚಪ್ಪಾಳೆಯಲ್ಲೇ ಅವಳ ಆನಂದಾತಿರೇಕದ ಸರ್ವಸ್ವವೂ ಇದೆ. ಕ್ರಿಕೆಟ್ಟಿನಲ್ಲಿ ಧೋನಿ ಒಂದು ಸಿಕ್ಸರ್ ಹೊಡೆದರೆ, ಫುಟ್‍ಬಾಲಿನಲ್ಲಿ ನಮ್ಮಿಷ್ಟದ ತಂಡ ಅಮೋಘ ಗೋಲು ಬಾರಿಸಿದರೆ, ಒಲಿಂಪಿಕ್ಸ್’ನ ನೂರು ಮೀಟರ್ ಓಟದಲ್ಲಿ ಆಟಗಾರ ದಾಖಲೆಯ ವೇಗದಲ್ಲಿ ಓಡಿ ಚಿನ್ನ ಗೆದ್ದರೆ ನಮಗರಿವಿಲ್ಲದಂತೆಯೇ ನಮ್ಮ ಅಂಗೈಗಳು ಜೊತೆಯಾಗುತ್ತವೆ. ಚಪ್ಪಾಳೆ ಓದುಬರಹದಂತೆ ಕಲಿತು ಬರಬೇಕಾದ ವಿದ್ಯೆ ಅಲ್ಲ; ಮನುಷ್ಯನೊಳಗೆ ಸಹಜವಾಗಿ ಮೂಡಿಬರಬಲ್ಲ ಭಾವನೆ ಎಂದು ಕೆಲವು ಮನೋವಿಜ್ಞಾನಿಗಳ ಅಭಿಪ್ರಾಯ. ಹುಟ್ಟಿ ಐದಾರು ತಿಂಗಳು ಕಳೆದ ಮೇಲೆ ಮಗುವಿಗೆ ತನ್ನ ಅಂಗೈಗಳನ್ನು ಪರಸ್ಪರ ಬಡಿದು ಬೇರೆಯವರ ಗಮನ ಸೆಳೆಯಬಹುದೆನ್ನುವ ತಿಳಿವಳಿಕೆ ಮೂಡುತ್ತದೆ. ತುಂಬ ಸಂತೋಷವಾದಾಗ ಮಕ್ಕಳು ಪಟಪಟವೆನ್ನುತ್ತ ಅಂಗೈಗಳನ್ನು ತಟ್ಟಿಕೊಳ್ಳುವುದು ಕೂಡ ಸಹಜವಂತೆ. ಅರಗ ಲಕ್ಷ್ಮಣರಾಯರು (“ಹೊಯಿಸಳ” ಕಾವ್ಯನಾಮದಲ್ಲಿ) ಬರೆದ ಪದ್ಯವೇ ಇಲ್ಲವೆ “ತಟ್ಟು ತಟ್ಟು ಚಪ್ಪಾಳೆ ಪುಟ್ಟ ಮಗು ಇಕೋ ಕೈ ತಕೋ ಕೈ!” ಅಂತ!

ಕಾಲಿಂಗ್ ಬೆಲ್ ಇಲ್ಲದ ಕಾಲದಲ್ಲಿ ಬದುಕಿದ್ದ ರಾಜ ಚಪ್ಪಾಳೆ ತಟ್ಟಿ “ಯಾರಲ್ಲಿ” ಎಂದು ದೂತನನ್ನು ಕರೆಯುತ್ತಿದ್ದದ್ದನ್ನು ಸಿನೆಮದಲ್ಲಿ ನೋಡಿದ್ದೀರಿ. ಆದರೆ, ಕ್ರಿಪೂ ಆರನೇ ಶತಮಾನದಲ್ಲಿ ರೋಮ್ ಸಾಮ್ರಾಜ್ಯವನ್ನು ಆಳಿದ ಕ್ಲೆಸ್ತೆನೆಸ್ ಎಂಬ ರಾಜ, ಚಪ್ಪಾಳೆಯನ್ನು ನಾಗರಿಕರ ಆದ್ಯ ಕರ್ತವ್ಯಗಳ ಪಟ್ಟಿಗೇ ಸೇರಿಸಿದ್ದನಂತೆ! ರಾಜ ಅಥವಾ ಅವನ ಅಧಿಕಾರಿಗಳು ಸಾರ್ವಜನಿಕವಾಗಿ ಸಭೆಗಳಲ್ಲಿ ಮಾತಾಡಿದರೆ ಪ್ರಜೆಗಳು ಮಾತಿನ ಕೊನೆಯಲ್ಲಿ ಚಪ್ಪಾಳೆ ತಟ್ಟಿ ಗೌರವ ಸೂಚಿಸಬೇಕು ಎಂಬ ಕಾನೂನು ಬೇರೆ ಇತ್ತಂತೆ. ಎಲ್ಲ ಪ್ರಜೆಗಳಿಗೂ ಭಾಷಣಕಾರನ ಹತ್ತಿರ ಬಂದು ಕೈಗಳನ್ನು ಚುಂಬಿಸಿ ಗೌರವ ಸೂಚಿಸುವುದು ಸಾಧ್ಯವಾಗಲಿಕ್ಕಿಲ್ಲ. ಅಷ್ಟು ಹೊತ್ತು ಕೈಯನ್ನು ಪ್ರಜೆಗಳ ಚುಂಬನಕ್ಕಾಗಿ ಅರ್ಪಿಸಿ ನಿಲ್ಲುವುದು ರಾಜನಿಗೂ ಸಾಧ್ಯವಿಲ್ಲದ ಮಾತು. ಹಾಗಾಗಿ, ಇಂಥದೊಂದು ಹೋಲ್‍ಸೇಲ್ ಗೌರವಾರ್ಪಣೆಯನ್ನು ಪ್ರಾರಂಭಿಸುತ್ತಿದ್ದೇನೆಂದು ಆತ ಹೇಳಿಕೊಂಡಿದ್ದ. ಪ್ರಾಚೀನ ರೋಮ್‍ನಲ್ಲಿ ಗೌರವ ಸಲ್ಲಿಸಲು ಚಿಟಿಕೆ ಹೊಡೆಯುವುದು, ಅಂಗೈಗಳನ್ನು ಚಪ್ಪಟೆ ಹಿಡಿದು ಚಪ್ಪಾಳೆ ತಟ್ಟುವುದು, ಬೊಗಸೆಯಂತೆ ಗುಳಿಯಾಗಿಸಿ ಕರತಾಡನ ಮಾಡುವುದು, ಯಾವುದಾದರೂ ಹಗುರ ವಸ್ತುವನ್ನು ಎತ್ತಿ ಗಾಳಿಯಲ್ಲಿ ಬೀಸುವುದು – ಹೀಗೆ ಇನ್ನೂ ಕೆಲವು ಪದ್ಧತಿಗಳು ಜಾರಿಯಲ್ಲಿದ್ದವು. ಆರೇಲಿಯನ್ ಎಂಬ ದೊರೆ, ಗಾಳಿಯಲ್ಲಿ ಬೀಸಿಕೊಳ್ಳಲಿಕ್ಕಾಗಿ ಪ್ರಜೆಗಳಿಗೆ ಉಚಿತವಾಗಿ ಕರ್ಚೀಫನ್ನು ವಿತರಿಸುತ್ತಿದ್ದನಂತೆ. ನಮ್ಮ ಈಗಿನ ರಾಜಕಾರಣಿಗಳು ಹಂಚುವ ಕಾರ್ಯಕ್ರಮಗಳನ್ನು ಎಲ್ಲೆಲ್ಲಿಂದ ಎರವಲು ತಂದಿದ್ದಾರೆ ನೋಡಿ!

ಹದಿನೆಂಟು – ಹತ್ತೊಂಬತ್ತನೇ ಶತಮಾನದಲ್ಲಿ ಫ್ರಾನ್ಸಿನಲ್ಲಿ ಒಪೆರಾ ಆಯೋಜಕರು ಕ್ಲಾಕರ್‍ಗಳನ್ನು ನೇಮಿಸಿಕೊಳ್ಳುತ್ತಿದ್ದರು. ಈ ಗುತ್ತಿಗೆ ಪ್ರೇಕ್ಷಕರು, ಸಾಮಾನ್ಯ ಜನರಂತೆಯೇ ಒಪೆರಾಗೃಹ ಪ್ರವೇಶಿಸಿ ಅಲ್ಲಲ್ಲಿ ಚದುರಿಕೂತು, ಕಥನನಾಟ್ಯ ನಡೆಯುತ್ತಿರುವಾಗ ಎಲ್ಲೆಲ್ಲಿ ಅಳಬೇಕೋ ಅಲ್ಲಿ ಜೋರಾಗಿ ಬಿಕ್ಕಳಿಸಿ ಕಣ ್ಣೀರು ಹಾಕುತ್ತಿದ್ದರು; ಕಾಮಿಡಿ ಸೀನ್ ಬಂದಾಗ ಜೋರಾಗಿ ನಗುತ್ತಿದ್ದರು; ಪ್ರಮುಖ ದೃಶ್ಯಗಳ ಸಂದರ್ಭದಲ್ಲಿ ಹಿಗ್ಗಾಮುಗ್ಗಾ ಚಪ್ಪಾಳೆ ತಟ್ಟುತ್ತಿದ್ದರು. ನವಜೋತ್ ಸಿದ್ದುವನ್ನು ದುಡ್ಡು ಕೊಟ್ಟು ಕರೆಸಿ ನಗಿಸಿ ಕಾಮಿಡಿ ಕಾರ್ಯಕ್ರಮದ ಕಳೆ ಹೆಚ್ಚಿಸುವ ಹಾಗೆ ಆ ಕಾಲದಲ್ಲೂ ಈ ಬಾಡಿಗೆ ರಸಿಕರು ದುಡ್ಡು ಪಡೆದು ಪ್ರೇಕ್ಷಕಾಂಗಣದಲ್ಲಿ ಕೂತು ಒಪೆರಾ ಕಾರ್ಯಕ್ರಮದ ಜನಪ್ರಿಯತೆ ಹೆಚ್ಚಿಸಲು ಹೆಣಗಬೇಕಾಗಿತ್ತು. ಸಭಾಂಗಣದಲ್ಲಿ ಕೂತ ಒಂದಿಬ್ಬರು ಚಪ್ಪಾಳೆ ತಟ್ಟಿದರೂ ಸಾಕು, ಅದು ಸಾಂಕ್ರಾಮಿಕವಾಗಿ ಹರಡಿಕೊಳ್ಳುತ್ತದೆ; ಜನರಿಗೆ ಅದೊಂದು ಅದ್ಭುತ ಕಾರ್ಯಕ್ರಮವೆಂಬ ಭಾವನೆ ಹುಟ್ಟುತ್ತದೆ ಎನ್ನುವುದು ಆಯೋಜಕರ ಯೋಚನೆ. ಅದಕ್ಕಾಗಿ ಇವೆಲ್ಲ ರಣತಂತ್ರ! ಪ್ರಾಚೀನ ರೋಮನ್ ರಂಗಭೂಮಿಯಲ್ಲಿ, ನಾಟಕ ಮುಗಿದ ಮೇಲೆ ಮುಖ್ಯನಟ ವೇದಿಕೆಯ ನಡುವಿಗೆ ಬಂದು ನಿಂತು “Valete et plaudite!” ಎಂದು ಉದ್ಘೋಷಿಸಿ ಬರಬೇಕಿದ್ದ ಚಪ್ಪಾಳೆಗಳನ್ನೆಲ್ಲ ಬಡ್ಡಿ ಸಮೇತ ವಸೂಲು ಮಾಡುತ್ತಿದ್ದನಂತೆ. ಕಿರುತೆರೆಯ ಸುನೇತ್ರಾ ಪಂಡಿತರು ಆಗಾಗ “ಚಪ್ಪಾಳೆ” ಅಂತ ಹೇಳಿ ಕನ್ನಡಿಗರ ಕರತಾಡನ ಗಿಟ್ಟಿಸುತ್ತಿರಲಿಲ್ಲವೇ?

ಚಪ್ಪಾಳೆ ಹೊಡೆದು ಬಲ್ಬ್ ಉರಿಸುವ ಇಲ್ಲವೇ ಫ್ಯಾನು ತಿರುಗಿಸುವ ಚಮತ್ಕಾರವನ್ನು ಹೈಸ್ಕೂಲ್ ಹುಡುಗರ ವಿಜ್ಞಾನ ಪ್ರಾತ್ಯಕ್ಷಿಕೆಗಳಲ್ಲಿ ನೋಡಿರುತ್ತೀರಿ. ಇದರ ಹಿಂದಿರುವ ತತ್ವ ತುಂಬಾ ಸರಳ. ಅಂಗೈಗಳನ್ನು ತಾಡಿಸಿದಾಗ ಅವುಗಳ ಚಲನಶಕ್ತಿ ಶಬ್ದಶಕ್ತಿಯಾಗಿ ಪರಿವರ್ತನೆಯಾಗುತ್ತದೆ. ಪ್ರತಿ ಚಪ್ಪಾಳೆಯ ಶಕ್ತಿ ಸಾಮಾನ್ಯವಾಗಿ 2200ರಿಂದ 2800 ಹಟ್ರ್ಸ್‍ನಷ್ಟು ಇರುತ್ತದೆ. ಹಾಗಾಗಿ ಈ ಮಿತಿಯಲ್ಲಿ ಅಪ್ಪಳಿಸುವ ಶಬ್ದತರಂಗಗಳಿಗೆ ಪ್ರತಿಕ್ರಯಿಸುವಂತೆ ಉಪಕರಣಗಳನ್ನು ಸೆಟ್ ಮಾಡಿಟ್ಟರಾಯಿತು. ಪ್ರಯೋಗಾಲಯದಲ್ಲಿ ನೋಡಲು ಖುಷಿಕೊಟ್ಟರೂ ಇಂಥವನ್ನು ಮನೆಯಲ್ಲಿ ಅಳವಡಿಸಿಕೊಳ್ಳುವುದು ಕಷ್ಟವೇ. ಜಗತ್ತಿನೆಲ್ಲ ಮನೆಗಳಲ್ಲೂ ಚಪ್ಪಾಳೆ ತಟ್ಟಿಯೇ ದೀಪ ಉರಿಸುವ ವ್ಯವಸ್ಥೆ ಬಂದರೆ, ಹುಟ್ಟುವ ಶಬ್ದಮಾಲಿನ್ಯದ ಪ್ರಮಾಣ ಎಷ್ಟಿರಬಹುದು ಲೆಕ್ಕ ಹಾಕಿ! ಇನ್ನು, ಚಪ್ಪಾಳೆ ತಟ್ಟಿಯೇ ಗಿನ್ನೆಸ್ ದಾಖಲೆ ಬರೆದವರು ಕೂಡ ಇದ್ದಾರೆ! ಬ್ರ್ಯಾನ್ ಎಂಬ ಅಮೆರಿಕದ ಹುಡುಗ ಒಂದು ನಿಮಿಷದಲ್ಲಿ ಹತ್ತಲ್ಲ, ಇಪ್ಪತ್ತಲ್ಲ, ಬರೋಬ್ಬರಿ 804 ಚಪ್ಪಾಳೆಗಳನ್ನು ಮೆಷಿನ್ ಗನ್ನಿನಂತೆ ತಟ್ಟಿ ಗಿನ್ನೆಸ್ ದಾಖಲೆ ಮಾಡಿದ್ದಾನೆ. ಹಾಗೆಯೇ, ಎಲಾಸ್ಟೇರ್ ಗ್ಯಾಲ್ಪಿನ್ ಎಂಬಾತ 113 ಡೆಸಿಬಲ್‍ಗಳಷ್ಟು ದೊಡ್ಡ ಚಪ್ಪಾಳೆ ಹೊಡೆದು, ಕೇವಲ ಎರಡು ಕೈಗಳ ಮೂಲಕ ಜಗತ್ತಿನಲ್ಲೇ ಅತ್ಯಂತ ದೊಡ್ಡ ಸದ್ದು ಹುಟ್ಟಿಸಿದವನು ಎಂಬ ಹೆಸರು ಗಿಟ್ಟಿಸಿದ್ದಾನೆ. ಹತ್ತಿರದಲ್ಲಿ ನಿಂತರೆ ಕಿವಿ ಕೆಪ್ಪಾಗಬಹುದಾದಷ್ಟು ಕರ್ಕಶವಾದ ಹೈ ವೋಲ್ಟೇಜಿನ ರಾಕ್ ಸಂಗೀತ ಹೆಚ್ಚೆಂದರೆ 110 ಡೆಸಿಬಲ್ ಇದ್ದೀತು. ಹಾಗಿರುವಾಗ ಈ ಪುಣ್ಯಾತ್ಮನ ಕೈಯಲ್ಲಿ ಹುಟ್ಟಿದ ಕರ್ಣಪಿಶಾಚಿ ಅದೆಷ್ಟು ಘೋರವಾಗಿರಬೇಕು! ಪಿಶಾಚಿ ಅಂದಾಗ ನೆನಪಾಯಿತು; ನಮ್ಮ ಪ್ರಾಚೀನರು ಭೂತಪ್ರೇತಗಳನ್ನು ಓಡಿಸಲಿಕ್ಕೂ ಚಪ್ಪಾಳೆ ಹೊಡೆಯುತ್ತಿದ್ದರಂತೆ. ಬ್ರಾಹ್ಮಣ ಮಾಣ ಗಳು ಸಂಧ್ಯಾವಂದನೆಯ ಸಮಯದಲ್ಲಿ ಗಾಯತ್ರೀ ಮಂತ್ರದ ಕೊನೆಗೆ ಅಸ್ತ್ರಾಯ ಫಟ್ ಎನ್ನುತ್ತ ಚಪ್ಪಾಳೆ ತಟ್ಟುವುದನ್ನು ನೀವು ನೋಡಿರಬಹುದು.

ಚಪ್ಪಾಳೆ ಸಮಾನತೆಯ ಪ್ರತಿಪಾದಕ. ಯಾಕೆ ಗೊತ್ತಾ? ಒಂದೊಳ್ಳೆಯ ಸಂಗೀತ, ಭಾಷಣ, ಅಥವಾ ಮೆಚ್ಚುವಂಥ ಯಾವುದೇ ಕೆಲಸವನ್ನು ನೋಡಿದರೂ, ಬೌದ್ಧಿಕವಾದ ಮೇಲುಕೀಳಿನ ವ್ಯತ್ಯಾಸಗಳಿಲ್ಲದೆ ಎಲ್ಲರೂ ಕೊಡಬಹುದಾದ ಏಕಪ್ರಕಾರದ ಮೆಚ್ಚುಗೆ ಯಾ ಗೌರವವೆಂದರೆ ಚಪ್ಪಾಳೆಯೇ. ಚಪ್ಪಾಳೆಯಲ್ಲಿ ಭಾಷೆಯ ಆಟ ಇಲ್ಲ; ತಾತ್ಸಾರದ ಸ್ಪರ್ಶವಿಲ್ಲ; ವ್ಯಂಗ್ಯದ ಸೋಂಕಿಲ್ಲ, ಘನ ವಿಮರ್ಶೆಯ ತೇಗು ಇಲ್ಲ. ಅದೊಂದು ಪರಿಶುದ್ಧ ಹೊಗಳಿಕೆ. ವೇದಿಕೆಯಲ್ಲಿ ನಿಂತವನಿಗೆ ಸಭಾಂಗಣದಲ್ಲಿ ಕೂತ ಪ್ರೇಕ್ಷಕ ಗಾಳಿಯಲ್ಲೆ ಹಗುರಾಗಿ ರವಾನಿಸುವ ಹಿತವಾದ ಕಚಗುಳಿ. ಚಪ್ಪಾಳೆಗೆ ಉಬ್ಬದವನು, ಕರಗದವನು ಜಗತ್ತಿನಲ್ಲಿ ಯಾರಿದ್ದಾನೆ! ಎರಡು ಕೈಗಳ ಮೂಲಕ ಎರಡು ಮನಸ್ಸುಗಳನ್ನು ಬೆಸೆಯಬಲ್ಲ ದಿವ್ಯೌಷಧ ಅದು. “ಎರಡು ಕೈಗಳಿಂದ ತಟ್ಟಿದ ಚಪ್ಪಾಳೆಯ ಸದ್ದು ಗೊತ್ತು ನಿನಗೆ; ಹೇಳೆನಗೆ ಒಂದು ಕೈಯ ಚಪ್ಪಾಳೆಯ ಧ್ವನಿಯ” ಎಂದು ಕೇಳಿದ್ದಾನೆ ಹಕುಯಿನ್ ಎಕಾಕು ಎಂಬ ಜಪಾನಿ ಕವಿ. ಅವನ ಪ್ರಶ್ನೆಗೆ ಮೌನವೇ ಉತ್ತರ!

 

Facebook ಕಾಮೆಂಟ್ಸ್

ಲೇಖಕರ ಕುರಿತು

Rohith Chakratheertha

ಓದಿದ್ದು ವಿಜ್ಞಾನ, ಮುಖ್ಯವಾಗಿ ಗಣಿತ. ಬೆಂಗಳೂರಿನಲ್ಲಿ ನಾಲ್ಕು ವರ್ಷ ಉಪನ್ಯಾಸಕನಾಗಿ ಕಾಲೇಜುಗಳಲ್ಲಿ ಪಾಠ ಮಾಡಿದ್ದ ಇವರು ಈಗ ಒಂದು ಬಹುರಾಷ್ಟ್ರೀಯ ಕಂಪೆನಿಯಲ್ಲಿ ಉದ್ಯೋಗಿ. ಹವ್ಯಾಸವಾಗಿ ಬೆಳೆಸಿಕೊಂಡದ್ದು ಬರವಣಿಗೆ. ಐದು ಪತ್ರಿಕೆಗಳಲ್ಲಿ ಸದ್ಯಕ್ಕೆ ಅಂಕಣಗಳನ್ನು ಬರೆಯುತ್ತಿದ್ದು ವಿಜ್ಞಾನ, ಗಣಿತ, ವ್ಯಕ್ತಿಚಿತ್ರ, ಮಕ್ಕಳ ಕತೆ ಇತ್ಯಾದಿ ಪ್ರಕಾರಗಳಲ್ಲಿ ಇದುವರೆಗೆ ೧೩ ಪುಸ್ತಕಗಳ ಪ್ರಕಟಣೆಯಾಗಿವೆ. ಉದ್ಯೋಗ ಮತ್ತು ಬರವಣಿಗೆಯಿಂದ ಬಿಡುವು ಸಿಕ್ಕಾಗ ತಿರುಗಾಟ, ಪ್ರವಾಸ ಇವರ ಖಯಾಲಿ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!