ಅಂಕಣ

ಕೃಷಿವಿಮೆ: ಕಂಡದ್ದಿಷ್ಟು, ಕಾಣದ್ದು ಇನ್ನೆಷ್ಟೋ – 2

ಕೃಷಿವಿಮೆ: ಕಂಡದ್ದಿಷ್ಟು, ಕಾಣದ್ದು ಇನ್ನೆಷ್ಟೋ – ೧

ಸತ್ಯವೇನು?

ಬಹುತೇಕ ಎಲ್ಲ ರೈತರೂ ತಮ್ಮ ಮುಂಗಾರು ಬೆಳೆಯನ್ನು ಜುಲೈ ಕೊನೆಯ ವೇಳೆಗೂ, ಹಿಂಗಾರನ್ನು ಡಿಸೆಂಬರ್ ಕೊನೆಯ ವೇಳೆಗೂ ಬಿತ್ತಿದ್ದರು. ಇಲ್ಲಿ ಬಂದಿರುವ ಪ್ರಶ್ನೆ ಎಂದರೆ ಬೀಜ ಬಿತ್ತುವ ಅವಧಿ ಮುಗಿದ ಮೇಲೆ ಜಾರಿಗೊಳ್ಳಬಹುದಾದ ವಿಮೆ, ಬೀಜ ಬಿತ್ತುವ ಮೊದಲಿನ ಅವಧಿಯ ಸಂಕಷ್ಟವನ್ನು ಹೇಗೆ ಕವರ್ ಮಾಡುತ್ತದೆ? ಒಬ್ಬ ರೈತನಿಗೆ ಬೀಜ ಬಿತ್ತುವುದಕ್ಕೇ ಸಾಧ್ಯವಾಗದಿದ್ದರೆ, ಅಂತಹ ಸಂದರ್ಭದಲ್ಲಿ ವಿಮೆಯನ್ನು ಪ್ರಾರಂಭಿಸದಿದ್ದಾಗ ರೈತ ವಿಮಾ ಕಂಪೆನಿಯವರಲ್ಲಿ ಹೋಗಿ ಕೇಳುವುದಾದರೂ ಹೇಗೆ? ಕಾರ್ಯಾಚರಣೆಯ ನಿರ್ದೇಶನ ಸೂಚಿಸುವ ಹಾಗೆ “ಈ ಪ್ರೊವಿಸಿನ್ ಅಡಿಯಲ್ಲಿ ರಾಜ್ಯ ಸರ್ಕಾರದ ಸೂಚನೆಗಿಂತ ಮೊದಲು ಆಹ್ವಾನಿಸಲ್ಪಟ್ಟು ಯಾವ ರೈತರು ಪ್ರೀಮಿಯಂ ತುಂಬಿರುತ್ತಾರೋ ಅಥವಾ ಯಾವ ರೈತರ ಅಕೌಂಟ್‍ನಿಂದ ಪ್ರೀಮಿಯಂ ಮೊತ್ತವನ್ನು ಕಡಿತಗೊಳಿಸಲಾಗಿದೆಯೋ ಅಂತಹ ರೈತರು ಮಾತ್ರ ಈ ವಿಮಾ ನೆರವಿನಡಿಯಲ್ಲಿ ಹಣಕಾಸಿನ ಬೆಂಬಲಕ್ಕೆ ಅರ್ಹರಾಗುತ್ತಾರೆ” ಎಂದಿದೆ. ಈ ಹಂತದ ಇನ್ನೊಂದು ಕರಾರು ನಿಬಂಧನೆಗಳೇನೆಂದರೆ “ಸೂಚಿಸಿದ ಬೆಳೆಯನ್ನು ಯಾವ ರೈತನು ಶೇ. 75ರಷ್ಟು ಬೆಳೆ ಬೆಳೆಯುವ ಪ್ರದೇಶದಲ್ಲಿ ಬೆಳೆಯದೇ ಹಾಗೇ ಬಿಟ್ಟಿರುತ್ತಾನೋ, ಅಂತಹ ರೈತನು ‘ಬಿತ್ತನೆ/ ನೆಡುವಿಕೆಯಿಂದ ವಿಫಲ’ನೆಂದು ಪರಿಗಣ ಸಲ್ಪಟ್ಟು ಪರಿಹಾರಕ್ಕೆ ಅರ್ಹನಾಗುತ್ತಾನೆ” ಎಂದು ಹೇಳುತ್ತದೆ. ಸರ್ಕಾರಕ್ಕೆ ತೃಪ್ತಿಯಾಗಿ ನೆರವು ಪ್ರಕಟಿಸಲಿಕ್ಕೆ ಮೊದಲ ಹಂತದ ವಿಮೆಯಲ್ಲಿ ಯಾವುದೇ ಅಂಶವೂ ಇರುವುದಿಲ್ಲವೆಂದಾಯಿತು.

ಎರಡನೇ ಹಂತದ ನಷ್ಟದ ವಿಮೆ ಕವರ್ ಗಮನಿಸಿದಾಗ ಇದು ಹರಿಯಾಣದಲ್ಲಿ ಸಮಗ್ರವಾಗಿ ತೋರುತ್ತದೆ. ಗಮನಿಸಬೇಕಾದ ಸಂಗತಿಯೆಂದರೆ ಹರಿಯಾಣದಲ್ಲಿ ಶೇ. 80ರಷ್ಟು ಕೃಷಿಭೂಮಿ ನೀರಾವರಿಗೆ ಒಳಪಟ್ಟಿದೆ. ಇಲ್ಲಿ ಪ್ರಾಕೃತಿಕ ವಿಕೋಪಗಳಾದ ಬರ ಮತ್ತು ಶುಷ್ಕವಾಗುವಿಕೆಯ ಸನ್ನಿವೇಶಗಳೂ ಅಪರೂಪವೇ ಎನ್ನಬಹುದು. ಮಳೆ ಕೊರತೆ ಎದುರಿಸಿದಾಗ್ಯೂ, ಇಲ್ಲಿ ಬರವೆಂದು ಘೋಷಿಸಲಾಗದ್ದಕ್ಕೆ ಇದೂ ಸಹ ಒಂದು ಕಾರಣವಿರಬಹುದು. ಸುಮಾರು 1990ರ ಮಧ್ಯಭಾಗದ ನಂತರ ಯಾವತ್ತೂ ಪ್ರವಾಹವನ್ನು ಈ ಭಾಗದ ಕೃಷಿಭೂಮಿ ಕಂಡಿಲ್ಲ. ಭೂಕುಸಿತ, ಬಿರುಗಾಳಿ, ಸುಂಟರಗಾಳಿ, ಚಂಡಮಾರುತ ಇವುಗಳೆಲ್ಲ ಈ ರಾಜ್ಯಕ್ಕೆ ಅನ್ವಯಿಸುವುದಿಲ್ಲ. ಬೆಂಕಿ ಹಾಗೂ ಸಿಡಿಲು ಪ್ರಕರಣಗಳು ಈ ರಾಜ್ಯದಲ್ಲಿ ಅಪರೂಪವಾಗಿ ಕಂಡುಬರುವ ನೈಸರ್ಗಿಕ ವಿಕೋಪಗಳಾದ್ದರಿಂದ ಇಂತಹ ಪ್ರಕರಣಗಳ ಮೇಲೆ ಪ್ರೀಮಿಯಂ ಮಾಡಿಸುವುದೇ ಅಪರೂಪ. ಇನ್ನು ಕೀಟಗಳ ಹಾವಳಿ ಹಾಗೂ ರೋಗದಿಂದ ಬೆಳೆ ಹಾನಿಯಲ್ಲಿ ‘ಮಿತಿ ನಿರ್ಧರಿಸಲ್ಪಟ್ಟಿರದ ತಡೆಯಬಹುದಾದ ಕಾರಣಗಳ’ ಅಡಿಯಲ್ಲಿ ತುಂಬ ಇಳಿಕೆ ಕಂಡುಬಂದಿದೆ; ಹಾಗೂ ಇದೂ ಸಹ ಹೊರಗಿಡಲ್ಪಟ್ಟಿದೆ. ಹರಿಯಾಣದಲ್ಲಿ ಮುಳುಗಡೆಯೆನ್ನುವ ಸ್ಥಳೀಯ ವಿಕೋಪ ಮಾತ್ರ ವಿಮೆಗೆ ಒಳಪಡಬಹುದಾಗಿದೆ.

ಮೂರನೇ ಹಂತವನ್ನು ಗಮನಿಸಬಹುದಾದರೆ ಸುಗ್ಗಿಯ ನಂತರ ಕತ್ತರಿಸಿ, ಹರಡುವಂತಹ ಬೆಳೆಗೆ ಮಾತ್ರ ನಷ್ಟ ಭರ್ತಿ ಮಾಡುವುದಕ್ಕೆ ಅವಕಾಶ ನೀಡಲಾಗುವುದು; ಆದರೆ ಹರಿಯಾಣದಲ್ಲಿ ಸಾಸಿವೆಯ ಹೊರತಾಗಿ ಇನ್ಯಾವ ಬೆಳೆಗೂ ಈ ಪದ್ಧತಿ ಅನುಸರಿಸುವುದಿಲ್ಲ. ಈಗ ಏಳುವ ಪ್ರಶ್ನೆ ಎಂದರೆ, ಹೆಚ್ಚು ರಿಸ್ಕ್ ಇರುವ ರಾಜ್ಯಗಳಿಗಿಂತ ಹರಿಯಾಣದಲ್ಲಿ ಪ್ರೀಮಿಯಂ ದರ ಕಡಮೆ ಇರಬೇಕಲ್ಲವೇ?

ನಾಲ್ಕನೇ ಹಂತದಲ್ಲಿ ‘ಸ್ಥಳೀಯ ರಿಸ್ಕ್ ಆದ ಆಲಿಕಲ್ಲು ಮಳೆ, ಭೂಕುಸಿತ, ಜಲಾವರಣ, ಮೊದಲಾದ ವಿಕೋಪಗಳಿಂದ ಪ್ರತ್ಯೇಕ ಕೃಷಿಭೂಮಿ ನಷ್ಟಕ್ಕೆ ಒಳಗಾದರೆ’  ಇದು ನಿಜವಾದ ಒಪ್ಪಂದವೆನ್ನಬಹುದು. ಇದು ರಾಜ್ಯದ ಮಟ್ಟಿಗೆ ಹೇಳಬಹುದಾದರೆ ಪ್ರಸ್ತುತವೆನ್ನಬಹುದಾದದ್ದಾಗಿದೆ. ಈ ಸಂಪೂರ್ಣ ಯೋಜನೆಗೆ ಸಂಬಂಧಿಸಿದ ಹಂತಕ್ಕೆ ಬರಬಹುದಾದರೆ ಬೆಳೆ ನಷ್ಟ ಹಾಗೂ ಸರಾಸರಿಗಿಂತ ಕಡಮೆ ಬೆಳೆ ಬಂದರೆ ಪಾವತಿ ಮಾಡಲಾಗುವುದು. ಪ್ರಧಾನ್‍ಮಂತ್ರಿ ಫಸಲ್ ಬಿಮಾ ಯೋಜನೆಯ ಇನ್ನಿತರ ಅಂಶಗಳನ್ನು ಗಮನಿಸಬಹುದಾದರೆ ಇಲ್ಲಿಯೂ ಪರಿಪಕ್ವವಲ್ಲದ ವ್ಯವಹಾರ ಕ್ರಮವೇ ರೈತರನ್ನು ಕಾಡುವುದು ಕಂಡುಬರುತ್ತದೆ.

ಜಜ್ಜರ್ ಜಿಲ್ಲೆಯ ಅಖೇರಿ ಮದಾಂಪುರ್ ಎಂಬ ಹಳ್ಳಿಯ ಮೂವರು ರೈತರಾದ ಜೈ ಭಗವಾನ್, ಭೀಮ್ ಸಿಂಗ್, ಓಂಪ್ರಕಾಶ್ ಎನ್ನುವವರ 2016ರ ಮುಂಗಾರಿಗೆ ಪ್ರಿಮಿಯಂ ಕಡಿತವನ್ನು ಕಳೆದ ವರ್ಷದ ಆಗಸ್ಟ್ 1ಕ್ಕೆ ಮಾಡಲಾಗಿತ್ತು. ಇದರಲ್ಲಿ ಭೀಮ್ ಸಿಂಗ್ ಹಾಗೂ ಓಂಪ್ರಕಾಶ್ ಅವರ ಹೊಲವನ್ನು ಸೆಪ್ಟೆಂಬರ್ 18ರಂದು ಪರಿಶೀಲಿಸಲಾಯಿತು. ಸಾಲ ಮೌಲ್ಯಮಾಪನವನ್ನು ಜಜ್ಜರ್ ಜಿಲ್ಲೆಯ ಗೊತ್ತುಪಡಿಸಿದ ಬ್ಯಾಂಕ್ ಐಸಿಐಸಿಐ ಲೊಂಬಾರ್ಡನಿಂದ ಹಾಗೂ ರಾಜ್ಯ ಕೃಷಿ ಇಲಾಖೆಯ ಅಧಿಕಾರಿಗಳಿಂದ ಮಾಡಲ್ಪಟ್ಟಿತು. ಇದಾಗಿ ಒಂಬತ್ತು ತಿಂಗಳೇ ಕಳೆದುಹೋದರೂ ಆ ರೈತರಿಗೆ ಇನ್ನೂ ಹಣ ಕೈಗೆ ಬಂದಿಲ್ಲ.

ಪ್ರತಿ ರೈತನೂ ಅಧಿಕೃತ ಅಧಿಕಾರಶಾಹಿ ಪ್ರಕ್ರಿಯೆಯನ್ನು ನಿಖರವಾಗಿ ಅನುಸರಿಸುವ ರೀತಿ ನಿಜಕ್ಕೂ ಅಚ್ಚರಿ ತರುವಂತಿದೆ. ಯಾವ ಯಾವ ಸರ್ಕಾರೀ ಅಧಿಕಾರಿಗಳಿಗೆ ಮಾತನಾಡಬೇಕೆಂದು ಅವರು ಸೂಚಿಸಲ್ಪಟ್ಟಿದ್ದಾರೋ, ಆ ಎಲ್ಲ ಕರೆಗಳನ್ನೂ ಅವರು ದಾಖಲಿಸಿಕೊಂಡಿದ್ದಾರೆ. ತಂಡವು ಭೇಟಿ ಮಾಡಿದ ಜಜ್ಜರ್‍ನ ಬ್ಯಾಂಕ್ ಮ್ಯಾನೇಜರ್ ಅವರು ‘ತಮ್ಮ ಬ್ರಾಂಚ್‍ನಲ್ಲಿ ಅಕೌಂಟ್ ಇರುವ ಬಹಳಷ್ಟು ರೈತರು ಇನ್ನೂ ಹಣ ಪಾವತಿ ಆಗಿಲ್ಲವೆಂದು ದೂರುತ್ತಿದ್ದಾರೆ’ ಎಂದು ಪರಿಸ್ಥಿತಿಯನ್ನು ವಿವರಿಸಿದರು. ಕಳೆದ ತಿಂಗಳಷ್ಟೇ ಬಹಳಷ್ಟು ರೈತರು ತಮ್ಮ ಬಾಕಿ ಹಣ ಪಡೆದಿದ್ದಾರೆ ಎಂದು ಮಾಹಿತಿ ನೀಡಿದರು. ಈ ಸಂಪೂರ್ಣ ಯೋಜನೆ ಎಷ್ಟರ ಮಟ್ಟಿಗೆ ಸರಿ ಇದೆ? ಇದರ ಹಿಂದಿನ ನಿಜ ಉದ್ದೇಶವೇನು ಎಂದು ರೈತರು ಪ್ರಶ್ನಿಸುತ್ತಿದ್ದಾರೆ. ಪ್ರೀಮಿಯಂ ಕಡಿತವನ್ನು ರೈತನ ಒಪ್ಪಿಗೆಗೂ ಕಾಯದೆ ಕ್ಷಣಾರ್ಧದಲ್ಲಿ ಮಾಡಿಬಿಡುತ್ತಾರೆ; ಅದೇ ವಿಮಾ ಕಂಪೆನಿಗೆ ರೈತರಿಗೆ ಹಣ ಪಾವತಿಸಲು ಒಂಬತ್ತು ತಿಂಗಳು ಬೇಕು. ತಡವಾಗಿ ಪರಿಹಾರ ಪಡೆದರೆ ರೈತರಿಗೆ ಉಪಯೋಗವೇನು?

ರೈತರು ನಷ್ಟವಾದ 48 ಗಂಟೆಯೊಳಗೆ ತಿಳಿಸಬೇಕು ಎನ್ನುತ್ತಾರೆ. ಆದರೆ ಬಹಳಷ್ಟು ಬೆಳೆಯ ವಿಚಾರದಲ್ಲಿ ನಷ್ಟದ ಕೆಲ ಅಂಶಗಳು ದಿನ ಕಳೆದರೂ ಅರಿವಿಗೆ ಬರುವುದೇ ಇಲ್ಲ.

ವಿಮಾ ಕಂಪೆನಿಯ ವ್ಯವಹಾರದ ರೀತಿನೀತಿಗಳನ್ನು ಗಮನಿಸಿದರೆ ಕೋಟಿಕೋಟಿ ಸಂಖ್ಯೆಯ ರೈತರನ್ನೂ, ಹಾಗೆಯೇ ತೆರಿಗೆದಾರರ ಹಣವನ್ನು ಮೂಲೆಗುಂಪು ಮಾಡುತ್ತಿದೆಯೇ ಎನ್ನುವ ಸಂಶಯ ಹುಟ್ಟುತ್ತದೆ. ಬೆಳೆ ನಷ್ಟಾಚಾರ ನಿರ್ಣಯಿಸಲಿಕ್ಕೆ ತೀರಾ ಅಗತ್ಯವೆನಿಸಿರುವ ಸಿಬ್ಬಂದಿಯನ್ನು ನೇಮಕ ಮಾಡುವುದಕ್ಕೇ ಆಸಕ್ತಿ ತೋರುತ್ತಿಲ್ಲ. ಇರುವ ಸೀಮಿತ ಸಿಬ್ಬಂದಿವರ್ಗಕ್ಕೇ ಎಲ್ಲ ಕೆಲಸದ ಹೊರೆಯನ್ನು ಹೊರಿಸುತ್ತಿದೆ. ಈ ಸಿಬ್ಬಂದಿವರ್ಗವೂ ಈ ಕ್ಷೇತ್ರದಲ್ಲಿ ಹೆಚ್ಚಿನ ಪರಿಣ ತರಲ್ಲದವರೇ ಇದ್ದಾರೆ. ಸರ್ಕಾರದ ಸೂಚನೆ ಈ ವಿಚಾರದಲ್ಲಿ ಸ್ಪಷ್ಟವಾಗಿಯೇ ಇದೆ. ಅದರ ಪ್ರಕಾರ ಬೆಳೆವಿಮೆಗೆ ಸಂಬಂಧಪಟ್ಟ ವಿಮಾ ಎಜೆನ್ಸಿಯು ಎಲ್ಲ ಜಿಲ್ಲಾ ಮುಖ್ಯಕಛೇರಿಯಲ್ಲಿ ಒಂದು ಕಛೇರಿ ತೆರೆಯಬೇಕು (ಅಲ್ಲಿ ಕಛೇರಿ ಇಲ್ಲದಿದ್ದರೆ); ಆ ಕಛೇರಿಗೆ ದೂರವಾಣ , ಒಂದು ಮೊಬೈಲ್ ಫೋನ್ ಇರಬೇಕು. ಇಂತಹ ಕಛೇರಿಗಳು ತಮ್ಮ ಸ್ಥಳೀಯ ಹಾಗೂ ಪ್ರಾದೇಶಿಕ ಕಛೇರಿಗಳಿಂದ ಸುಮಾರು ಶೇ. 5ರಷ್ಟು ಫಲಾನುಭವಿಗಳನ್ನು ಪರಿಶೀಲಿಸುತ್ತದೆ ಎಂದು ಊಹಿಸಿಕೊಳ್ಳಿ. ಅದರ ವರದಿಯು ಜಿಲ್ಲಾಮಟ್ಟದ ಉಸ್ತುವಾರಿ ಸಮಿತಿ(ಆಐಒಅ)ಗೆ ಕಳುಹಿಸಲ್ಪಡುತ್ತದೆ; ಬಳಿಕ ಅಲ್ಲಿ ಶೇ. 10ರಷ್ಟು ಫಲಾನುಭವಿಗಳು ಪರಿಶೀಲಿಸಲ್ಪಟ್ಟು ಅದರ ವರದಿ ಮೇಲಿನ ಕಛೇರಿಗೆ ಕಳುಹಿಸಲ್ಪಡುತ್ತದೆ. ಇಷ್ಟೆಲ್ಲ ದೀರ್ಘ ಪ್ರಕ್ರಿಯೆ ವಿಮೆಯನ್ನು ಫಲಾನುಭವಿಗಳಿಗೆ ತಲಪಿಸುವುದರಲ್ಲಿ ಇದೆ; ಇದೆಲ್ಲ ಗಮನಿಸಿದರೆ ಈ ವಿಮಾ ಕಂಪೆನಿಗಳಿಗೆ ರೈತರ ಪ್ರೀಮಿಯಂನ್ನು ತಮ್ಮ ಜೇಬಿಗೆ ಹಾಕಿಕೊಳ್ಳುವುದರ ಬಿಟ್ಟು ಅದರಾಚೆಗೆ ಆಸಕ್ತಿ ಇದ್ದಂತಿಲ್ಲ.

ಆದರೂ ಬ್ಯಾಂಕ್‍ನವರು ಸಾಲ ಮಾಡಿದ ರೈತರ ಪ್ರೀಮಿಯಂನ್ನು ಅವರ ಅಕೌಂಟ್‍ನಿಂದ ಕಡಿತಗೊಳಿಸಬೇಕೆಂಬ ಕಡ್ಡಾಯ ನಿಯಮವನ್ನು ಮೀರಿ ಎಷ್ಟೋ ರೈತರನ್ನು ಹಾಗೇ ಬಿಟ್ಟುಬಿಡುತ್ತಾರೆ.

ಕೃಷಿ ಅಭಿವೃದ್ಧಿ ಅಧಿಕಾರಿಗಳು ಮುಂಚಿನ ಇಳುವರಿ ನಿರ್ಧರಿಸಲು ಬೆಳೆ ಕಟಾವು ಪರೀಕ್ಷೆಯನ್ನು ಕೈಗೊಳ್ಳಬೇಕೆಂದು ಹೇಳಲಾಗುತ್ತದೆ. ಹಳ್ಳಿಯೊಂದಕ್ಕೆ ವಿಮಾ ಘಟಕವಿದೆ ಎಂದು ಭಾವಿಸಿದರೆ ಅಂತಹ ಸ್ಥಳದಲ್ಲೇ ಬೆಳೆಕಟಾವು ಪರೀಕ್ಷೆ ಕೈಗೊಳ್ಳಬೇಕಾದ ಅಗತ್ಯವಿರುತ್ತದೆ. ಹರಿಯಾಣದಲ್ಲಿ ಸೂಚಿತ ನಾಲ್ಕು ಬೆಳೆಗಳಿದ್ದು, 6,841 ಹಳ್ಳಿಗಳಿವೆ. ಬೆಳೆಯು ಕಟಾವಿಗೆ ಸಿದ್ಧಗೊಂಡಿರುವ ವೇಳೆಗೆ 1,09,456 (ಪ್ರತಿ ಬೆಳೆಗೆ ನಾಲ್ಕು ಬೆಳೆ ಕಟಾವು ಪರೀಕ್ಷೆ ಸ್ಯಾಂಪಲ್) ಪರೀಕ್ಷೆಗಳನ್ನು 15-20 ದಿನಗಳ ಅತಿ ಕಡಮೆ ಅವಧಿಯಲ್ಲಿ ನಡೆಸುವ ಅಗತ್ಯವಿರುತ್ತದೆ. ಸ್ವರಾಜ್ಯ ತಂಡಕ್ಕೆ ಇರುವ ಮಾಹಿತಿಯ ಪ್ರಕಾರ ಹರಿಯಾಣದಲ್ಲಿ ಒಟ್ಟು 1,000 ಕೃಷಿ ಅಭಿವೃದ್ಧಿ ಅಧಿಕಾರಿಗಳಿದ್ದಾರೆ. ಪ್ರತಿ ಅಧಿಕಾರಿಯು 100ಕ್ಕಿಂತ ಹೆಚ್ಚು ಪರೀಕ್ಷೆಯನ್ನು ಅನುವಾದಿಸುವುದು ಮಾನವನಿಂದಾಗದ್ದು. ಆದರೆ ಕಾರ್ಯಾಚರಣಾ ನಿರ್ದೇಶನ ಮಾತ್ರ ಹಾಗೆ ಹೇಳುತ್ತದೆ. ಇಲ್ಲೊಂದು ತಮಾಷೆಯೆಂದರೆ ಹರಿಯಾಣ ಸರ್ಕಾರವು ತನ್ನ ಅದಕ್ಷತೆಯನ್ನು ತೋರಿಸಿಕೊಳ್ಳದೆ, ಅದನ್ನು ಇನ್ನೊಂದು ಬಗೆಯಲ್ಲಿ ನಿವಾರಿಸಿಕೊಳ್ಳಲು ಪ್ರಯತ್ನಿಸಿ ಅದಕ್ಕೊಂದು ದಾರಿ ಸೂಚಿಸಿದೆ. ಹೇಗೆಂದರೆ, ‘ಗ್ರಾಮಮಟ್ಟದಲ್ಲಿ ಇನ್ಸೂರೆನ್ಸ್ ಯೂನಿಟ್‍ನ ಇಳುವರಿ ಅಂದಾಜು ಕೈಗೊಳ್ಳಲು ಸಾಧ್ಯವಾಗದಿದ್ದರೆ, ಆಗ ಬ್ಲಾಕ್‍ಮಟ್ಟವನ್ನು ಪರಿಗಣಿಸಿ. ಬ್ಲಾಕ್‍ಮಟ್ಟದಲ್ಲೂ ಆಗದಿದ್ದರೆ ಜಿಲ್ಲಾಮಟ್ಟವನ್ನು ಪರಿಗಣಿಸಿ. ಅದೂ ಆಗದಿದ್ದರೆ ಪಕ್ಕದ ಜಿಲ್ಲೆಯನ್ನು ಪರಿಗಣಿಸಿ.’ ಸದ್ಯ ಇಲ್ಲಿಗೇ ನಿಂತಿದೆ; ಪಕ್ಕದ ರಾಜ್ಯವನ್ನು ಪರಿಗಣ ಸಿದರೂ ಆದೀತು ಎಂದು ಹೇಳಲಿಲ್ಲವಲ್ಲ.  

ಬೆಳೆ ಕಟಾವು ಪರೀಕ್ಷೆಗಾಗಿ (ಅಅಇ) ಅಧಿಕಾರಿಗಳು ಎಲ್ಲೆಲ್ಲೋ ಅಲೆದಾಡಬೇಕಾಗಿಲ್ಲ. ಅಧಿಸೂಚನೆಯ ಅನುಬಂಧದಲ್ಲಿ ಬ್ಲಾಕ್ ಹಾಗೂ ಜಿಲ್ಲೆಗೋಸ್ಕರ ಆಗಲೇ ನೀಡಿರುತ್ತಾರೆ. ಅಧಿಕಾರಿಗಳು ಕಛೇರಿಯಲ್ಲಿ ಕುರ್ಚಿಯಲ್ಲಿ ಕೂತೇ ಸಿಸ್ಟಂನಿಂದ ದತ್ತಾಂಶವನ್ನು ಇನ್ಸೂರೆನ್ಸ್ ಕಂಪೆನಿಗೆ ಫಾರ್ವರ್ಡ ಮಾಡಿದರಾಯ್ತು. ಆ ಮಾಹಿತಿ ದೋಷಪೂರಿತ ಮಾಹಿತಿ ಆಧರಿಸಿದ್ದರೂ ಸರಿ, ಒಬ್ಬ ರೈತನ ಬೆಳೆಗೆ ವಿಮೆಯ ಆಧಾರ ಬೇಕೆ ಬೇಡವೇ ಎಂದು ನಿರ್ಧರಿಸಿದರಾಯ್ತು. ರಾಜ್ಯ/ಯೂನಿಟ್ ಟ್ರಸ್ಟ್ ಕೆಲಸವೆಂದರೆ ಒಂದು ಇನ್ಸೂರೆನ್ಸ್ ಯೂನಿಟ್ ಏರಿಯಾದಲ್ಲಿ ನಷ್ಟ ಪರಿಹಾರ ಮಿತಿಯ ಲೆಕ್ಕಾಚಾರ, ಮುಂಚಿನ ಇಳುವರಿ ಲೆಕ್ಕಾಚಾರ, ಪ್ರೀಮಿಯಂ ದರದ ಲೆಕ್ಕಾಚಾರ ಇವುಗಳ 10 ವರ್ಷದ ಐತಿಹಾಸಿಕ ಇಳುವರಿ ದತ್ತಾಂಶವನ್ನು ಇನ್ಸೂರೆನ್ಸ್ ಕಂಪೆನಿಗೆ ನೀಡಿದರಾಯ್ತು. ಬೆಳೆ ಕಟಾವು ಪರೀಕ್ಷೆ ಸ್ಯಾಂಪಲ್‍ಗಳನ್ನು ಶೇ. 30-40ಕ್ಕೆ ಇಳಿಸಲು ರಾಜ್ಯವು ರೀಮೂಟ್ ಸೆನ್ಸಿಂಗ್ ತಂತ್ರವನ್ನು, ಡ್ರೋನ್, ಉಪಗ್ರಹ ಚಿತ್ರಣ, ಇಳುವರಿ ಅಂದಾಜು ರೂಪಿಸುವುದಕ್ಕೆ ಬೆಳೆ ಕಟಾವು ಪರೀಕ್ಷೆ ಯೋಜನೆಗಾಗಿ ಭೂದಾಖಲೆಯ ಡಿಜಿಟಲೀಕರಣದಂತಹ ತಾಂತ್ರಿಕತೆಯನ್ನು ಅಳವಡಿಸಿಕೊಂಡರಾಯಿತು. ಆದರೆ ರಾಜ್ಯವು ಸ್ಮಾರ್ಟ್ ಸ್ಯಾಂಪಲ್ ವಿಧಾನಕ್ಕಾಗಿ ಹಣಹಾಕುವುದಕ್ಕೇ ಹಿಂದುಮುಂದು ನೋಡುತ್ತದೆ.

ದೋಷ ದೂರವಾಗಬೇಕಾದರೆ,

ದೋಷವಿರುವುದು ಯೋಜನೆಯಲ್ಲಿ ಅಲ್ಲ. ಪ್ರತಿಬಾರಿ ಮಳೆ ಹಾಗೂ ಬೆಳೆ ವಿಫಲವಾದಾಗ ಅದನ್ನು ಹೇಗೆ ನಿರ್ವಹಿಸುವುದೆಂದು ಯೋಚನೆ ಮಾಡುವುದು ಸಮರ್ಥನೀಯವೂ ಅಲ್ಲ. ಬದಲಾಗಿ ವಿಮೆ ಮಾಡಿಸುವುದು ಉತ್ತಮ ಕ್ರಮ. ದೋಷ ಮೂಲಮಾದರಿಯದ್ದಲ್ಲ; ಯೋಜನೆಯನ್ನು ರೂಪಿಸಿದ್ದರಲ್ಲಿ ಹಾಗೂ ಅದನ್ನು ಜಾರಿಗೊಳಿಸುವುದರಲ್ಲಿದೆ, ಅಷ್ಟೆ. ರೈತರಿಗೆ ವಿಮೆ ಕಂಪನಿ ಒಳ್ಳೆಯದನ್ನೇ ಮಾಡುತ್ತದೆ ಎಂದು ತುಂಬಾ ನಂಬಿದ್ದು ತಪ್ಪು. ಇಲ್ಲಿ ಈ ಏಜೆನ್ಸಿಗಳು ಪಡೆಯುತ್ತಿರುವ ಒಟ್ಟಾರೆ ಪ್ರೀಮಿಯಂನ ಬಹುದೊಡ್ಡ ಕೊಡುಗೆದಾರ ಸರ್ಕಾರ. ಈ ಏಜೆನ್ಸಿಗಳಲ್ಲಿ ಬಹುತೇಕವು ಖಾಸಗಿಯವು. ಕೆಲವು ತಜ್ಞರು ಈ ವಿಷಯವನ್ನು ಗಂಭೀರವಾಗಿ ಪರಿಗಣ ಸಿ, ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯನ್ನು ನಿರ್ವಹಿಸಲು ಸರ್ಕಾರವೇ ನಡೆಸುವಂತಹ ವಿಮಾ ಕಂಪನಿಯೇ ಇರಲಿ ಎಂದು ಸಲಹೆ ನೀಡಿದ್ದಾರೆ. ಆದರೆ ದುರದೃಷ್ಟವಶಾತ್ ಸರ್ಕಾರವೇ ನಿರ್ವಹಿಸುವ ಅಂತಹ ಏಜೆನ್ಸಿಗಳ ಕಾರ್ಯನಿರ್ವಹಣೆಯಲ್ಲಿ ಹಿಂದೆ ಆದ ಕಹಿಅನುಭವಗಳಿಂದಾಗಿ ಅಂತಹ ಸಲಹೆಗಳನ್ನು ಪುರಸ್ಕರಿಸುವಂತಿಲ್ಲ.

ಖಾಸಗಿ ವಿಮಾ ಏಜೆನ್ಸಿಗಳು ಈ ವಿಚಾರದಲ್ಲಿ ಮುಂದುವರಿಯಬಹುದಾದರೂ, ಅವು ಇನ್ನಷ್ಟು ಜವಾಬ್ದಾರಿಯುತವಾಗಿ ನಿರ್ವಹಿಸುವ ಅಗತ್ಯವಿದೆ. ಅಧಿಸೂಚನೆಯಲ್ಲಿ ಸ್ಥಳೀಯ/ಜಿಲ್ಲಾಮಟ್ಟದ ಕಛೇರಿಗಳನ್ನು ತೆರೆಯಬೇಕೆಂಬ ಸ್ಪಷ್ಟ ನಿರ್ದೆಶನವಿದ್ದಾಗ್ಯೂ, ತಳಮಟ್ಟದಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ ನೇಮಕದಲ್ಲಿ ಹಾಗೂ ಇನ್ಸೂರೆನ್ಸ್ ಕ್ಲೇಮ್‍ಗಳನ್ನು ನಿರ್ಣಯಿಸುವುದಕ್ಕೆ ಅಗತ್ಯವಿರುವ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವುದಕ್ಕೆ ಅವರು ತುಂಬ ಕಡಮೆ ಹಣ ವೆಚ್ಚ ಮಾಡುತ್ತಿದ್ದು, ಅವುಗಳಿಗೆ ಹಿಂದೇಟು ಹಾಕುತ್ತಿದ್ದಾರೆ. ವಿಮೆ ಏಜೆನ್ಸಿಗಳು ರೈತರ ಹಣವನ್ನು ಜೇಬಿಗೆ ಹಾಕಿಕೊಂಡು ಬಳಿಕ ಯೋಜನೆಯ ಬಗ್ಗೆ ಮರೆತುಬಿಡುವುದಕ್ಕೆ ಸಾಧ್ಯವಿಲ್ಲ. ರೈತರಿಗೆ ಮುಂದಿನ ಬೆಳೆ ಶುರುವಾಗುವುದರೊಳಗೆ ಅವರ ಬ್ಯಾಂಕ್ ಅಕೌಂಟಿಗೆ ಕ್ಲೇಮ್ ಮಾಡಿದ ಹಣ ಬರುವಂತಾಗಬೇಕು. ಏನೂ ಇಲ್ಲ ಎನ್ನುವುದಕ್ಕಿಂತ ವರುಷದ ಬಳಿಕ ಪರಿಹಾರದ ಹಣ ಬಂದರೆ ಉತ್ತಮ.

ಇದೆಲ್ಲಕ್ಕಿಂತ ಮೊದಲು ಆಗಬೇಕಾದ್ದು ಬ್ಯಾಂಕಿನವರಿಂದ. ಅವರು ಯಾವ ರೈತ ಯಾವ ಬೆಳೆ ಬೆಳೆಯುತ್ತಿದ್ದಾನೆ ಎನ್ನುವ ಬಗ್ಗೆ ಸ್ಪಷ್ಟವಾಗಿ ರೈತರಿಂದ ಮಾಹಿತಿ ಸಂಗ್ರಹಿಸಿಕೊಳ್ಳಬೇಕು. ಇದೊಂದು ಬಗೆಯಲ್ಲಿ ಪ್ರೀಮಿಯಂ ಹಣ ಪಾವತಿಯಾಗಿದ್ದಕ್ಕೆ ರಸೀತಿ ಪಡೆದಂತೆ. ಒಬ್ಬ ಬಡ ರೈತನ ಅಕೌಂಟಿನಿಂದ ಪ್ರೀಮಿಯಂ ಹಣವನ್ನು ಅವನಿಗೇ ಅರಿವಿಲ್ಲದಂತೆ ಕಡಿತ ಮಾಡಿಕೊಳ್ಳುವ ಈಗಿನ ಕ್ರಮ ಒಂದು ಬಗೆಯಲ್ಲಿ ಪೈಶಾಚಿಕವೆನಿಸುತ್ತದೆ; ಪ್ರಜಾಪ್ರಭುತ್ವ ಸರ್ಕಾರದ ಜವಾಬ್ದಾರಿಯುತ ವರ್ತನೆಯಾಗಿ ತೋರುವುದಿಲ್ಲ; ರಾಜಕೀಯವಾಗಿಯೂ ಹುಡುಗಾಟದ, ಅವಿವೇಕದ ಅತಿರೇಕವೆನಿಸುತ್ತದೆ. ಅಚ್ಚರಿಯೆಂದರೆ ಇಂತಹ ಕ್ರೂರವೆನಿಸುವ ವಿಧಾನಕ್ಕೆ ಪ್ರಧಾನಿಯವರನ್ನು ಒಪ್ಪಿಸಿದವರ್ಯಾರು ಎನ್ನುವುದು. ಸಾಲಗಾರ ರೈತನಿಗೆ ಎದುರಾಗುವ ಕೆಲವು ಕಂಟಕಗಳನ್ನು ದೂರಮಾಡುವ ಬಗ್ಗೆ ಲಕ್ಷ್ಯವಹಿಸಿದಲ್ಲಿ ಆತನಿಂದ ಕಡ್ಡಾಯ ವಿಮೆ ಮಾಡಿಸುವುದು ಕಷ್ಟದ ಕೆಲಸವೇನೂ ಅಲ್ಲ. ಸರ್ಕಾರ ಮಧ್ಯಸ್ಥಗಾರನಾಗಿದ್ದು ಹಣ ಜನರಿಂದ ಖಾಸಗಿ ಕಂಪೆನಿಗೆ ಹರಿಯುವ ಸಂದರ್ಭದಲ್ಲಿ ಸಂಪೂರ್ಣ ಪಾರದರ್ಶಕವಾಗಿ ಇರಬೇಕಾದ್ದು ಅವಶ್ಯ.

ಈ ಯೋಜನೆಯಲ್ಲಿ ಇರುವ ಅತ್ಯಂತ ದೊಡ್ಡ ಕಂಟಕವೆಂದರೆ ಯೋಜನೆಯ ಕೇಂದ್ರೀಕರಣ. ಕೃಷಿಗಾಗಿ ಇರುವಂತಹ ಇಷ್ಟು ದೊಡ್ಡ ಯೋಜನೆಯೊಂದನ್ನು ದೆಹಲಿಯಲ್ಲೇ ಕುಳಿತು ನಿರ್ವಹಿಸಲಿಕ್ಕಾಗುವುದಿಲ್ಲ. ಕೇಂದ್ರದ ಕಾರ್ಯಾಚರಣೆಯ ನಿರ್ದೆಶನವೂ ಸಹ ತುಂಬ ವಿಸ್ತಾರವಾಗಿದೆ. ಕೃಷಿ ರಾಜ್ಯಕ್ಕೆ ಸೀಮಿತವಾದ ವಿಷಯವಾಗಿರುವಾಗ ರಾಜ್ಯವೇ ಈ ವಿಚಾರದಲ್ಲಿ ತಮಗೆ ಸರಿ ಎನಿಸಿದ ರೀತಿಯಲ್ಲಿ ನಿರ್ವಹಿಸಬಹುದಲ್ಲವೇ? ಪಂಜಾಬ, ಹರಿಯಾಣದಲ್ಲಿ ಕೃಷಿಕ ಎದುರಿಸುವ ಸಂಕಷ್ಟಗಳಿಗಿಂತ ಕರಾವಳಿಯ ಅಥವಾ ಘಾಟಿ ಪ್ರದೇಶದ ಅಥವಾ ರಾಜಸ್ಥಾನದಂತಹ ಅರೆಶುಷ್ಕ ಭೂಮಿ ಹೊಂದಿರುವ ರಾಜ್ಯದ ಒಬ್ಬ ರೈತ ಎದುರಿಸುವ ಸಂಕಷ್ಟ ತೀರಾ ಭಿನ್ನವಾಗಿರುತ್ತದೆ. ಕೆಲವರಿಗೆ ನೀರಾವರಿ ಸೌಲಭ್ಯವಿದ್ದರೆ, ಇನ್ನು ಕೆಲ ರೈತರಿಗೆ ನೀರಾವರಿ ಸೌಲಭ್ಯವಿರುವುದಿಲ್ಲ. ವೈವಿಧ್ಯವೇ ವೈಶಿಷ್ಟ್ಯವಾಗಿರುವ ನಮ್ಮ ದೇಶದಲ್ಲಿ ವಿಮೆಯ ಬಗ್ಗೆ ಹೇಳುವುದಾದರೆ “ಒಂದು ಅಳತೆ ಎಲ್ಲರಿಗೂ ಸರಿಹೊಂದುತ್ತದೆ” ಎನ್ನುವುದಕ್ಕೆ ಸಾಧ್ಯವಿಲ್ಲ. ಮೊದಲು ವಿಮೆ ದೆಹಲಿಯ ಆಡಳಿತ ನಿಯಂತ್ರಣದಿಂದ ಹೊರಗೆ ಬರಬೇಕು. ರೈತರಿಗೆ ನಿರಾಳತೆ ನೀಡಬೇಕಾದ ಅಗತ್ಯವಿದ್ದಷ್ಟೇ, ಅದಕ್ಕೆ ಸ್ವಲ್ಪ ಸ್ಮಾರ್ಟ್ ಆಗಿರುವ ದಾರಿಯನ್ನು ಅನುಸರಿಸಬೇಕಾದ ಅಗತ್ಯವೂ ಇದೆ.

ನಮ್ಮ ಕೇಂದ್ರಸರ್ಕಾರವು ಮೊದಲು ವಿಮಾಯೋಜನೆಯಲ್ಲಿನ ತೊಡಕಿನ ನಿವಾರಣೆಗೆ ಆದ್ಯತೆ ನೀಡುವುದೊಳಿತು; ಇಲ್ಲವಾದರೆ ಯೋಜನೆ ನಿರೀಕ್ಷಿಸಿದ ಫಲ ನೀಡದೆ, ಹತ್ತರಲ್ಲಿ ಹನ್ನೊಂದಾಗಿ ಯೋಜನೆಯೇ ತೊಡಕಾಗಬಹುದು.  
ಮೂಲ ಲೇಖನ: ಅರಿಹಂತ್ ಪವಾರಿಯಾ

ಅನುವಾದ: ಸರೋಜಾ ಪ್ರಭಾಕರ್

        

Facebook ಕಾಮೆಂಟ್ಸ್

ಲೇಖಕರ ಕುರಿತು

Saroja Prabhakar

‘ಉತ್ಥಾನ ‘ಪತ್ರಿಕೆಯ ಕಾರ್ಯಕರ್ತೆ. ಓದು, ಬರವಣಿಗೆ, ಸಂಗೀತ ಹವ್ಯಾಸ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!