ಅಂಕಣ

ಕಮ್ಯುನಿಸ್ಟರೇ ಪಿಎಫ್‍ಐ ಉಗ್ರರ ಸಂಘಟನೆ ಎನ್ನುತ್ತಿರುವಾಗ…

ಲವ್ ಜಿಹಾದ್.

ಕೇವಲ ತಿಂಗಳ ಹಿಂದೆಯಷ್ಟೇ ಭಾರತದ ಸರ್ವೋಚ್ಚ ನ್ಯಾಯಾಲಯ, ಲವ್ ಜಿಹಾದ್ ಹೆಸರಲ್ಲಿ ದೇಶದೊಳಗೆ ಮತಾಂತರದ ಭಯೋತ್ಪಾದನೆ ನಡೆಯುತ್ತಿರುವುದು ನಿಜ ಎಂದು ಒಪ್ಪಿಕೊಂಡಿದೆ. ಕೇರಳದಲ್ಲಿ ಪ್ರಾರಂಭವಾದ ಈ ಕೃತ್ಯ ಇದೀಗ ಇಡೀ ದೇಶವನ್ನೇ ವಿಷದಂತೆ ವ್ಯಾಪಿಸಿ ಬಿಟ್ಟಿದೆ; ದಿನ ದಿನವೂ ನೂರಾರು ಹಿಂದೂ/ಕ್ರೈಸ್ತ ಹುಡುಗಿಯರು ಲವ್ ಜಿಹಾದ್ ಎಂಬ ಮಾಯೆಯ ಉರುಳಿಗೆ ಕೊರಳೊಡ್ಡುತ್ತಿದ್ದಾರೆ, ಹೀಗೇ ಮುಂದುವರಿದರೆ ಕೆಲವೇ ವರ್ಷಗಳಲ್ಲಿ ಸಮಾಜದಲ್ಲಿ ದೊಡ್ಡದೊಂದು ಶೋಷಿತ ಸಮುದಾಯ ಸೃಷ್ಟಿಯಾಗಬಹುದು. ಅತ್ತ ಮುಸ್ಲಿಂ ಗಂಡನಿಂದ ಪರಿತ್ಯಕ್ತಳಾಗಿ ಇತ್ತ ಮನೆಯವರಿಂದಲೂ ಸೇರಿಸಿಕೊಳ್ಳದೆ ನಡುಬೀದಿಗೆ ಬೀಳುವ ಹೆಣ್ಣುಮಕ್ಕಳ ಸಂಖ್ಯೆ ಹೆಚ್ಚಬಹುದು ಎಂಬ ಆತಂಕ ಕೇರಳದಲ್ಲಿ ಮಾತ್ರವಲ್ಲ, ದೇಶಾದ್ಯಂತ ಅನುರಣಿಸುತ್ತಿದೆ. ಲವ್ ಜಿಹಾದ್ ಎಂದೊಡನೆ ಇಂಗ್ಲೀಷ್‍ನ ಕೆಲವು “ರಾಷ್ಟ್ರೀಯ ಮಾಧ್ಯಮ”ಗಳು ಮೂತಿ ತಿರುವುತ್ತವೆ. ಇದು ಆರೆಸ್ಸೆಸ್ ಅಥವಾ ಸಂಘ ಪರಿವಾರ ಸೃಷ್ಟಿಸಿದ ಅದೃಶ್ಯ ಭೂತ, ಇಂಥದ್ದು ಇಲ್ಲವೇ ಇಲ್ಲ, ಸಮಾಜದಲ್ಲಿ ಸದಾ ಅಶಾಂತಿ ಮನೆ ಮಾಡಿರಬೇಕೆಂದು ಬಯಸುವ ಸಂಘಿಗಳು ಇಂಥದೊಂದು ಅನಗತ್ಯ ಭಯವನ್ನು ಹಬ್ಬಿಸುತ್ತಿದ್ದಾರೆ ಎಂದು ಮಾಧ್ಯಮಗಳೇನು, ಬುದ್ಧಿಜೀವಿಗಳು ಕೂಡ ಕಂಠಶೋಷಣೆ ಮಾಡಿಕೊಳ್ಳುತ್ತಾರೆ. ಆದರೆ, ನಿಜ ವಿಷಯ ಏನು ಗೊತ್ತೆ? ಲವ್ ಜಿಹಾದ್ ಎಂಬ ಪರಿಕಲ್ಪನೆ ಅಥವಾ ಪದವನ್ನು ಸೃಷ್ಟಿಸಿದ್ದು ಸಂಘ ಪರಿವಾರ ಅಲ್ಲ; ವಿಶ್ವ ಹಿಂದೂ ಪರಿಷತ್ ಅಥವಾ ಬಜರಂಗದಳ ಅಲ್ಲ; ಭಾರತೀಯ ಜನತಾ ಪಕ್ಷವೂ ಅಲ್ಲ. ಅಂಥದೊಂದು ಸಂಗತಿ ದೇವರ ನಾಡಾದ ಕೇರಳದಲ್ಲಿ ನಡೆಯುತ್ತಿದೆ ಎಂಬುದನ್ನು ಮೊದಲ ಬಾರಿಗೆ ರಾಷ್ಟ್ರಕ್ಕೆ ತಿಳಿಯಪಡಿಸಿದವರು ಗ್ಲೋಬಲ್ ಕೌನ್ಸಿಲ್ ಆಫ್ ಇಂಡಿಯನ್ ಕ್ರಿಶ್ಚಿಯನ್ಸ್ ಎಂಬ ಕ್ರೈಸ್ತ ಸಂಘಟನೆ. ಕೇರಳ ಕ್ರಿಶ್ಚಿಯನ್ ಬಿಷಪ್ ಕೌನ್ಸಿಲ್‍ನ ಬಿಷಪ್ ಮ್ಯಾಥ್ಯೂ ಅನಿಕುಳಿಕಟ್ಟಿಲ್ ಲವ್ ಜಿಹಾದ್ ಬಗ್ಗೆ ಮೊತ್ತ ಮೊದಲ ವರದಿಯನ್ನು ತಯಾರಿಸಿಕೊಟ್ಟವರು. ಈ ವರದಿಯಲ್ಲಿ, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‍ಐ) ಎಂಬ ಮುಸ್ಲಿಂ ಭಯೋತ್ಪಾದಕ ಸಂಘಟನೆ, ಹಿಂದೂ ಮತ್ತು ಕ್ರೈಸ್ತ ಹುಡುಗಿಯರನ್ನು ಪ್ರೀತಿಯ ಬಲೆಗೆ ಕೆಡವಿ ಮತಾಂತರ ಮಾಡಿ ಬಳಿಕ ಭಯೋತ್ಪಾದಕ ಕೃತ್ಯಗಳಿಗೆ ಬಳಸಿಕೊಳ್ಳುತ್ತಿದೆ ಎಂದು ಅತ್ಯಂತ ಸ್ಪಷ್ಟವಾದ ನೇರವಾದ ಆರೋಪ ಮಾಡಲಾಗಿತ್ತು. ಲವ್ ಜಿಹಾದ್ ಬಗ್ಗೆ ಎಚ್ಚರಿಸುವ ಪೋಸ್ಟರ್‍ಗಳನ್ನು ಕೇರಳದ ಎಲ್ಲ ಕ್ರಿಶ್ಚಿಯನ್ ಶಿಕ್ಷಣ ಸಂಸ್ಥೆಗಳೂ ದೊಡ್ಡದಾಗಿ ಪೋಸ್ಟರ್ ಬರೆದು ಹಾಕಿದವು.

ಪಿಎಫ್‍ಐ ಎಂಬ ಸಂಘಟನೆ ಲವ್ ಜಿಹಾದ್ ಎಂಬ ಹೆಸರಿನಲ್ಲಿ ಹಿಂದೂ, ಕ್ರೈಸ್ತ ಹುಡುಗಿಯರ ಬಾಳು ಹಾಳು ಮಾಡುತ್ತಿದೆಯೆಂದು ಮೊದಲ ಆರೋಪ ಮಾಡಿದ್ದು ಕ್ರಿಶ್ಚಿಯನ್ ಸಂಘಟನೆಗಳಾದರೆ ಆ ಮೇಲೆ ಆ ಸಂಘಟನೆಯ ಮುಖ್ಯ ಉದ್ದೇಶವನ್ನು ಅತ್ಯಂತ ಖಚಿತ ಮಾತುಗಳಲ್ಲಿ ತೆರೆದಿಟ್ಟವರು ಕೇರಳದ ಅಂದಿನ ಕಮ್ಯುನಿಸ್ಟ್ ಸರಕಾರದ ಮುಖ್ಯಮಂತ್ರಿ ಅಚ್ಯುತಾನಂದನ್. ದೆಹಲಿಯಲ್ಲಿ ಪತ್ರಕರ್ತರನ್ನು ಉದ್ದೇಶಿಸಿ ಮಾತಾಡುತ್ತಿದ್ದಾಗ ಅಚ್ಯುತಾನಂದನ್, ಇನ್ನು ಇಪ್ಪತ್ತು ವರ್ಷಗಳಲ್ಲಿ ಕೇರಳವನ್ನು ಸಂಪೂರ್ಣವಾಗಿ ಮುಸ್ಲಿಂ ರಾಜ್ಯವನ್ನಾಗಿಸಬೇಕೆಂಬ ಗುರಿಯೊಂದಿಗೆ ಪಿಎಫ್‍ಐ ಕೆಲಸ ಮಾಡುತ್ತಿದೆ ಎಂದು ನೇರವಾಗಿ ಹೇಳಿದ್ದರು. ಮಾತ್ರವಲ್ಲ, ಲವ್ ಜಿಹಾದ್ ಕಪೋಲಕಲ್ಪಿತ ಕತೆಯಲ್ಲ, ಅದು ನಿಜವಾಗಿಯೂ ಕೇರಳದಲ್ಲಿ ಇದೆ ಎಂಬುದನ್ನು ಅವರೇ ಒಪ್ಪಿಕೊಂಡರು. ಕಮ್ಯುನಿಸ್ಟ್ ಮುಖ್ಯಮಂತ್ರಿ ಒಪ್ಪಿಕೊಂಡ ಸತ್ಯಕ್ಕೆ ಪೂರಕವಾಗುವ ಒಂದಷ್ಟು ಮಾಹಿತಿಯನ್ನು ಕೊಟ್ಟದ್ದು ಅನಂತರ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರಕಾರದ ಮುಖ್ಯಮಂತ್ರಿ ಊಮ್ಮನ್ ಚಾಂಡಿ. 2006ರಿಂದ (ಪಿಎಫ್‍ಐ ಅಸ್ತಿತ್ವಕ್ಕೆ ಬಂದ ವರ್ಷ) 2012ರವರೆಗಿನ ಆರು ವರ್ಷಗಳ ಅವಧಿಯಲ್ಲಿ ಕೇರಳದಲ್ಲಿ ಒಟ್ಟು 7713 ಮಂದಿ ಇಸ್ಲಾಮಿಗೆ ಮತಾಂತರ ಹೊಂದಿದ್ದಾರೆ. ಅದರಲ್ಲೂ 2009 ಮತ್ತು 2012ರ ಮಧ್ಯೆ ಇಸ್ಲಾಮಿಗೆ ಮತಾಂತರ ಹೊಂದಿದವರ ಪೈಕಿ 2665 ಮಂದಿ ಯುವತಿಯರು. ಅವರ ಪೈಕಿ 2195 ಮಂದಿ ಹಿಂದೂಗಳಾದರೆ ಉಳಿದ 470 ಮಂದಿ ಕ್ರಿಶ್ಚಿಯನ್ ಸಮುದಾಯದವರು ಎಂಬ ಅಂಕಿ-ಅಂಶಗಳನ್ನು ಊಮ್ಮನ್ ಚಾಂಡಿ ಅಸೆಂಬ್ಲಿಯಲ್ಲಿ ಮಂಡಿಸಿದರು. ಮತಾಂತರಗೊಂಡ ಹಿಂದೂ/ಕ್ರಿಶ್ಚಿಯನ್ ಯುವತಿಯರನ್ನು ಭಯೋತ್ಪಾದನೆಗೆ ಬಳಸಿಕೊಳ್ಳಲಾಗುತ್ತಿದೆ ಎಂಬ ದೂರಿಗೆ ಸಮರ್ಥನೆ ಎಂಬಂತೆ ಕೇರಳದಲ್ಲಿ 2012ರ ಜುಲೈ ತಿಂಗಳಲ್ಲಿ ದೀಪಾ ಚೆರಿಯನ್ ಪ್ರಕರಣ ನಡೆಯಿತು. ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದ ಈಕೆಯನ್ನು ಮುಸ್ಲಿಂ ಯುವಕನೊಬ್ಬ ಮರುಳು ಮಾಡಿ ಮತಾಂತರ ಮಾಡಿ ಮದುವೆಯಾಗಿದ್ದ. ದೀಪಾ, ಜೈಲಿನಲ್ಲಿರುವ ಉಗ್ರನೊಬ್ಬನಿಗೆ ಎರಡು ಸಿಮ್ ಕಾರ್ಡ್ ಪೂರೈಸಿದ ಪ್ರಕರಣವೊಂದರಲ್ಲಿ ಸಿಕ್ಕಿಕೊಂಡಾಗ ಆಕೆಯ ಮತಾಂತರ, ಮದುವೆ, ಲವ್ ಜಿಹಾದ್ ಇತ್ಯಾದಿ ಆಯಾಮಗಳು ತೆರೆದುಕೊಂಡವು. ಈ ಪ್ರಕರಣವನ್ನು ಮುಂದಿಟ್ಟುಕೊಂಡು ಬೀದಿಯಲ್ಲಿ ಕ್ರಿಶ್ಚಿಯನ್ ಸಮುದಾಯ ಹೋರಾಟ ರೂಪಿಸಿದರೆ ಅಸೆಂಬ್ಲಿಯೊಳಗೆ ಕಮ್ಯುನಿಸ್ಟ್ ಪಕ್ಷದ ಸದಸ್ಯರು ಕಾಂಗ್ರೆಸ್ ಪಕ್ಷವನ್ನು ತರಾಟೆಗೆ ತೆಗೆದುಕೊಂಡು ಹಣ್ಣುಗಾಯಿ ನೀರುಗಾಯಿ ಮಾಡಿದರು.

ಇಷ್ಟೆಲ್ಲ ಆದರೂ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯ ಕೃತ್ಯಗಳಿಗೆ ಕಡಿವಾಣ ಬೀಳಲಿಲ್ಲ. ಈ ಸಂಘಟನೆಯ ಕ್ರೂರತೆ ಎಷ್ಟು ಎಂಬುದು ಪೂರ್ಣ ಪ್ರಮಾಣದಲ್ಲಿ ದೇಶದ ಕಣ್ಣಿಗೆ ರಾಚಿದ್ದು ಪ್ರೊಫೆಸರ್ ಜೋಸೆಫ್ ಎಂಬವರು ತಮ್ಮ ಪ್ರವಾದಿಯನ್ನು ದೂಷಿಸಿದರು ಎಂಬ ಕಾರಣವೊಡ್ಡಿ ಪಾಪ್ಯುಲರ್ ಫ್ರಂಟ್ ಕಾರ್ಯಕರ್ತರು ಹಾಡುಹಗಲಲ್ಲೆ ಜೋಸೆಫ್ ಕುಟುಂಬದವರ ಕಣ್ಣೆದುರಿಗೇ ಅವರ ಕೈಗಳನ್ನು ಕತ್ತರಿಸಿ ಹಾಕಿದಾಗ. ಆಗ ಕೇರಳದಲ್ಲಿ ಅಧಿಕಾರದಲ್ಲಿದ್ದದ್ದು ಕಮ್ಯುನಿಸ್ಟ್ ಸರಕಾರ. ಜೋಸೆಫ್ ಪ್ರಕರಣದಲ್ಲಿ ಅತ್ಯಂತ ಶೀಘ್ರವಾಗಿ ಕಾರ್ಯಾಚರಿಸುವಂತೆ ಸರಕಾರದಿಂದ ಪೊಲೀಸ್ ಇಲಾಖೆಗೆ ಸೂಚನೆ ಹೋಯಿತು. ಕೃತ್ಯ ಎಸಗಿದ್ದ ಪಾಪಿಗಳನ್ನು ಕೆಲವೇ ದಿನಗಳಲ್ಲಿ ಪೊಲೀಸರು ಹಿಡಿದದ್ದೂ ಆಯಿತು. ಆಗ ಅವರಿಗೆ ಪಿಎಫ್‍ಐ ಕಾರ್ಯಕರ್ತರಿಗೂ ಹಿಜ್‍ಬುಲ್ ಮುಜಾಹಿದ್ದೀನ್, ಲಷ್ಕರ್ ಎ ತಯ್ಬಾ ಮತ್ತು ಅಲ್ ಖೈದಾ ಮುಂತಾದ ಅಂತಾರಾಷ್ಟ್ರೀಯ ಭಯೋತ್ಪಾದಕ ಸಂಘಟನೆಗಳಿಗೂ ಅತ್ಯಂತ ನಿಕಟ ಸಂಬಂಧ ಇದ್ದದ್ದು ಗೊತ್ತಾಯಿತು. ಸಂಬಂದಪಟ್ಟ ಬಲವಾದ ಸಾಕ್ಷ್ಯಗಳು ಲಭ್ಯವಾದವು. ಕೇರಳ ಸರಕಾರದ ಗೃಹ ಇಲಾಖೆಯ ಉಪಕಾರ್ಯದರ್ಶಿ ಆರ್. ರಾಜಶೇಖರನ್ ಕೇರಳದ ಉಚ್ಚ ನ್ಯಾಯಾಲಯಕ್ಕೆ ಈ ಕುರಿತು ಒಂದು ಅಫಿಡವಿಟ್ ಸಲ್ಲಿಸಿದರು. ಅಂದರೆ ಕೇರಳ ಸರಕಾರ ಅಧಿಕೃತವಾಗಿ, ಪಿಎಫ್‍ಐ ಒಂದು ಉಗ್ರವಾದಿ ಸಂಘಟನೆ; ಅದಕ್ಕೆ ಮೇಲೆ ಹೇಳಿದ ಬೇರೆ ಉಗ್ರಸಂಘಟನೆಗಳ ಜೊತೆ ಗಳಸ್ಯ ಕಂಠಸ್ಯ ಸಂಬಂಧವಿದೆ ಎಂದು ಹೇಳಿದ ಹಾಗಾಯಿತು. ಆದರೂ “ರಾಷ್ಟ್ರೀಯ ಸುದ್ದಿವಾಹಿನಿಗಳು” ಎಂದು ಹೇಳಿಕೊಳ್ಳುವ ಇಂಗ್ಲೀಷ್ ಸುದ್ದಿವಾಹಿನಿಗಳು, ಪಿಎಫ್‍ಐ ಮೇಲೆ ಬೆಂಕಿ ಕಾರುತ್ತಿರುವುದು ಸಂಘ ಪರಿವಾರ ಮಾತ್ರ ಎಂಬಂತೆ ಬಿಂಬಿಸುತ್ತಿರುವುದು ಜನರನ್ನು ದಾರಿ ತಪ್ಪಿಸುವ ಯತ್ನವಲ್ಲದೆ ಬೇರೇನೂ ಅಲ್ಲ.

ರಾಷ್ಟ್ರೀಯ ತನಿಖಾ ದಳ, ಕೇರಳದಲ್ಲಿ ತೀರಾ ಇತ್ತೀಚೆಗೆ ನಡೆದ 94 ಮತಾಂತರದ ಮದುವೆ ಪ್ರಕರಣಗಳನ್ನು ವಿಶ್ಲೇಷಿಸಿದಾಗ ಅದರಲ್ಲಿ 23 ಮದುವೆಗಳಲ್ಲಿ ಪಿಎಫ್‍ಐ ಸಂಘಟನೆಯ ನೇರ ಕೈವಾಡ ಇದ್ದದ್ದನ್ನು ಪತ್ತೆ ಹಚ್ಚಿದೆ. ಅನೇಕ ಮದುವೆಗಳನ್ನು ಪಿಎಫ್‍ಐನ ಮಹಿಳಾ ಘಟಕವಾದ ನ್ಯಾಷನಲ್ ವಿಮೆನ್ಸ್ ಫ್ರಂಟ್‍ನ ಅಧ್ಯಕ್ಷೆ ಸೈನಾಬಾ ಖುದ್ದು ಹಾಜರಿದ್ದು ನಡೆಸಿರುವುದನ್ನು ಎನ್‍ಐಎ ಗುರುತಿಸಿದೆ. ಇನ್ನು ಅನೇಕ ಮತಾಂತರದ ಮದುವೆಗಳಲ್ಲಿ ಪಿಎಫ್‍ಐ ಕಾರ್ಯಕರ್ತ ಮೊಹಮ್ಮದ್ ಕುಟ್ಟಿ ಪ್ರಮುಖ ಪಾತ್ರ ವಹಿಸಿದ್ದಾನೆ. ಈ ಇಷ್ಟೂ ಮದುವೆಗಳಲ್ಲಿ ಮತಾಂತರವಾದದ್ದು ಹಿಂದೂ ಅಥವಾ ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದ ಯುವತಿ. ಮದುವೆಯ ಗಂಡು ಮಾತ್ರ ಮುಸ್ಲಿಂ ಯುವಕ. ಯಾವ ಪ್ರಕರಣದಲ್ಲೂ ಮುಸ್ಲಿಂ ಯುವಕ ಅಥವಾ ಯುವತಿ ಬೇರೆ ಧರ್ಮಕ್ಕೆ ಮತಾಂತರವಾದ ಉಲ್ಲೇಖ ಇಲ್ಲ. ಇದು ಏನನ್ನು ಸೂಚಿಸುತ್ತದೆ ಎಂಬುದನ್ನು ಪ್ರತ್ಯೇಕ ಹೇಳಬೇಕಿಲ್ಲ.

ಇಡುಕ್ಕಿಯ ಪ್ರೊಫೆಸರ್ ಅವರ ಕೈ ಕಡಿದ ಪ್ರಕರಣ, ಬೆಂಗಳೂರಿನ ಶಿವಾಜಿನಗರದಲ್ಲಿ ರುದ್ರೇಶ್ ಅವರ ತಲೆ ಕಡಿದು ಭೀಕರವಾಗಿ ಹತ್ಯೆ ಮಾಡಿದ ಪ್ರಕರಣ, ಕಣ್ಣೂರಿನಲ್ಲಿ ಭಯೋತ್ಪಾದನಾ ತರಬೇತಿ ಶಿಬಿರ ಆಯೋಜಿಸಿದ್ದು, ಇಸ್ಲಾಮಿಕ್ ಸ್ಟೇಟ್ ಅಲ್-ಹಿಂದಿ ಎಂಬ ಮತ್ತೊಂದು ಉಗ್ರ ಸಂಘಟನೆಯ ಜೊತೆ ಸೇರಿಕೊಂಡು ಇಡೀ ದಕ್ಷಿಣ ಭಾರತದಲ್ಲಿ ಸರಣಿ ಭಯೋತ್ಪಾದನಾ ಕೃತ್ಯಗಳನ್ನು ನಡೆಸಿ ಒಟ್ಟಾರೆ ಭಯದ ವಾತಾವರಣ ಸೃಷ್ಟಿಸುವ ಸಂಚು ಹಾಕಿದ್ದು – ಈ ಪ್ರಕರಣಗಳನ್ನೆಲ್ಲ ಪರಿಗಣಿಸಿದ ರಾಷ್ಟ್ರೀಯ ತನಿಖಾ ದಳ, ಪಿಎಫ್‍ಐ ಅನ್ನು ಉಗ್ರ ಸಂಘಟನೆ ಎಂದೇ ಪರಿಗಣಿಸಿ ಅದರ ಮೇಲೆ ಶಿಸ್ತುಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ಗೃಹ ಸಚಿವಾಲಯಕ್ಕೆ ಮನವಿ ಮಾಡಿದೆ. ಸಿಮಿ ಎಂಬ ಉಗ್ರ ಸಂಘಟನೆಯನ್ನು ಕೇಂದ್ರದ ಯುಪಿಎ ಸರಕಾರ ನಿಷೇಧಿಸಿದಾಗ, ಸಿಮಿಯಲ್ಲಿದ್ದ ಉಗ್ರರೆಲ್ಲ ಹೊರಬಂದು ಪಿಎಫ್‍ಐ ಕಟ್ಟಿಕೊಂಡರು. ಪಿಎಫ್‍ಐ ಅನ್ನು ನಿಷೇಧಿಸಿದರೆ ಅಲ್ಲಿಂದ ಹೊರಬಂದು ಮತ್ತೊಂದು ಸಂಘಟನೆಯ ಹೆಸರಲ್ಲಿ ಬೋರ್ಡು ಬರೆಸಿಕೊಳ್ಳುವುದು ಆ ಉಗ್ರರಿಗೆ ಅರ್ಧ ದಿನದ ಕೆಲಸ. ಹಾಗಾಗಿ, ಪಿಎಫ್‍ಐ ಅನ್ನು ನಿಷೇಧಿಸುವ ಜೊತೆಗೆ ಅಲ್ಲಿರುವ ಎಲ್ಲ ಪದಾಧಿಕಾರಿಗಳನ್ನು ಕಪ್ಪು ಪಟ್ಟಿಗೆ ಹಾಕಿ ಅವರನ್ನು ನಿರಂತರವಾದ ಪರಿಶೀಲನೆಗೆ ಒಳಪಡಿಸಿದರೆ ಮಾತ್ರ ನಿಷೇಧಕ್ಕೂ ಒಂದು ಅರ್ಥ.

Facebook ಕಾಮೆಂಟ್ಸ್

ಲೇಖಕರ ಕುರಿತು

Rohith Chakratheertha

ಓದಿದ್ದು ವಿಜ್ಞಾನ, ಮುಖ್ಯವಾಗಿ ಗಣಿತ. ಬೆಂಗಳೂರಿನಲ್ಲಿ ನಾಲ್ಕು ವರ್ಷ ಉಪನ್ಯಾಸಕನಾಗಿ ಕಾಲೇಜುಗಳಲ್ಲಿ ಪಾಠ ಮಾಡಿದ್ದ ಇವರು ಈಗ ಒಂದು ಬಹುರಾಷ್ಟ್ರೀಯ ಕಂಪೆನಿಯಲ್ಲಿ ಉದ್ಯೋಗಿ. ಹವ್ಯಾಸವಾಗಿ ಬೆಳೆಸಿಕೊಂಡದ್ದು ಬರವಣಿಗೆ. ಐದು ಪತ್ರಿಕೆಗಳಲ್ಲಿ ಸದ್ಯಕ್ಕೆ ಅಂಕಣಗಳನ್ನು ಬರೆಯುತ್ತಿದ್ದು ವಿಜ್ಞಾನ, ಗಣಿತ, ವ್ಯಕ್ತಿಚಿತ್ರ, ಮಕ್ಕಳ ಕತೆ ಇತ್ಯಾದಿ ಪ್ರಕಾರಗಳಲ್ಲಿ ಇದುವರೆಗೆ ೧೩ ಪುಸ್ತಕಗಳ ಪ್ರಕಟಣೆಯಾಗಿವೆ. ಉದ್ಯೋಗ ಮತ್ತು ಬರವಣಿಗೆಯಿಂದ ಬಿಡುವು ಸಿಕ್ಕಾಗ ತಿರುಗಾಟ, ಪ್ರವಾಸ ಇವರ ಖಯಾಲಿ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!