Featured ಅಂಕಣ

ಹಬ್ಬಕ್ಕೆ ಪಟಾಕಿ ಹೊಡೆಯಬಾರದು ಅಂದಾಗ ಬರೋ ಕೋಪದಲ್ಲಿ ಮುಖ್ಯ ವಿಷಯಾನೇ ಮರೆತುಬಿಡ್ತೀವಲ್ಲ!

ಗಣೇಶ ಚತುರ್ಥಿ ಮಾಡ್ತಿದ್ದೀರಾ? ಮಣ್ಣಿನ ಗಣಪತಿ ಮಾಡಿ. ಬಣ್ಣದ ಮಂಟಪ ಮಾಡಬೇಡಿ. ಸಂಗೀತ ಹಾಕಬೇಡಿ. ನವರಾತ್ರಿ ಪೂಜೆ ಮಾಡುವಾಗ ಹೂ ಹಾಕೋದು ಬೇಡ. ದುರ್ಗಾಮಾತೆಯ ಮೂರ್ತಿ ಇಡ್ತೀರಾ? ಅದೂ ಬೇಡ, ಸಾಂಕೇತಿಕವಾಗಿ ಆಚರಿಸಬಹುದಲ್ಲ? ಏನು? ದೀಪಾವಳಿಗೆ ಪಟಾಕೀನೇ? ಪರಿಸರನಾಶ ಮಾಡ್ತೀರಲ್ಲ ಸ್ವಾಮಿ! ಸಂಕ್ರಾಂತಿಗೆ ಹೋರಿಗಳನ್ನು ಕಿಚ್ಚು ಹಾಯಿಸ್ತೀರಾ? ಅದು ನೋಡಿ ಪ್ರಾಣಿಹಿಂಸೆಯ ಕಾನೂನಿನಡಿ ಬರುತ್ತೆ. ಯಾವುದೂ ರಗಳೆ ಬೇಡಾ ಅಂತ ತಪ್ತಮುದ್ರಾಧಾರಣೆ ಮಾಡಿಸ್ಕೊಳ್ತಿದ್ದೀರಾ? ಅದು ನಿಮ್ಮ ಚರ್ಮ ಸುಡಲ್ವೇ? ಮೌಢ್ಯ ನಿಷೇಧ ವಿಧೇಯಕದಲ್ಲಿ ನಿಮ್ಮದು ಶಿಕ್ಷಾರ್ಹ ಅಪರಾಧ ಅನ್ನೋದು ಗೊತ್ತಿಲ್ಲವೇ ನಿಮಗೆ?

ಪಟ್ಟಿ ಬೆಳೆಯುತ್ತದೆ. ಹಿಂದೂಗಳು ಮಾಡುವ ಯಾವುದೂ ಸರಿಯಿಲ್ಲ, ಎಲ್ಲವೂ ಅವೈಜ್ಞಾನಿಕ, ಯಾವುದಕ್ಕೂ ಅರ್ಥವಿಲ್ಲ, ಎಲ್ಲದರಲ್ಲೂ ಪರಿಸರ ನಾಶವಾಗುತ್ತೆ ಎಂಬ ಮಾತುಗಳನ್ನು ಮತ್ತೆ ಮತ್ತೆ ಕೇಳುತ್ತಿದ್ದೇವೆ. ಸ್ವಾರಸ್ಯವೆಂದರೆ ಹಿಂದೂಗಳ ಹಬ್ಬಗಳ ವಿಷಯದಲ್ಲಿ ಧುತ್ತನೆ ಎದ್ದುಬರುವ ಪರಿಸರ ಮಾಲಿನ್ಯ, ಪ್ರಾಣಿಹಿಂಸೆ, ದೈಹಿಕ ಯಾತನೆಯಂಥ ವಿಷಯಗಳು ದೇಶದೊಳಗಿರುವ ಬೇರಾವುದೇ ರಿಲಿಜನ್ ವಿಷಯದಲ್ಲಿ ಕಾಣಿಸಿಕೊಳ್ಳುವುದಿಲ್ಲ. ಹಬ್ಬವೊಂದರಲ್ಲಿ ಈ ದೇಶದಲ್ಲಿ ಕೋಟ್ಯಂತರ ಕುರಿ-ಮೇಕೆ-ಹಸುಗಳನ್ನು ಕಡಿಯಲಾಗುತ್ತದೆ. ಆದರೆ ಯಾವ ಎನ್‍ಜಿಓ, ಪ್ರಾಣಿ ದಯಾ ಸಂಘಗಳೂ ತುಟಿ ಪಿಟಿಕ್ ಅನ್ನದೆ ಬಕಧ್ಯಾನ ಮಾಡುತ್ತಿರುತ್ತವೆ. ಹಬ್ಬವೊಂದರಲ್ಲಿ ಜನ ಮೈಯೊಳಗೆ ದೆವ್ವ ಹೊಕ್ಕಂತೆ ಮೈ ಬಡಿದುಕೊಂಡು ನೆತ್ತರು ಚಿಮ್ಮಿಸಿಕೊಳ್ಳುತ್ತಾರೆ. ಮಾನವ ಹಕ್ಕು ಸಂಘಟನೆಗಳು ಆ ವಿಷಯದಲ್ಲಿ ಉಸಿರೆತ್ತದೆ ಗುಹೆಯೊಳಗೆ ಅಡಗಿಕೊಂಡಿರುತ್ತದೆ. 365 ದಿನಗಳ ಪೈಕಿ ಕೇವಲ 3 ದಿನ ಆಚರಿಸಲ್ಪಡುವ ಹಬ್ಬದಲ್ಲಿ ಒಂದೋ ಎರಡೋ ರಾತ್ರಿ ಪಟಾಕಿ ಹೊಡೆಯುವುದರಿಂದ ವಾಯುಮಾಲಿನ್ಯ ಆಗುತ್ತೆ ಎನ್ನುವವರು ವರ್ಷದ ಮುನ್ನೂರಾ ಅರವತ್ತೈದು ದಿನವೂ ದಿನಕ್ಕೆ ಐದು ಸಲದಂತೆ ಧ್ವನಿವರ್ಧಕದ ಮೂಲಕ ಕೂಗಾಡುವುದರಿಂದ ಶಬ್ದಮಾಲಿನ್ಯ ಆಗುತ್ತದೆ ಎಂಬುದನ್ನು ಯಾಕೋ ಜಾಣತನದಿಂದ ಮರೆತೇ ಬಿಟ್ಟಿದ್ದಾರೆ! ಅದು ಸರಿಯಲ್ಲ ಎನ್ನುವುದಾದರೆ ಇದು ಹೇಗೆ ಸರಿ ಎಂದು ಕೇಳಲು ಹೋದ ಸಂದರ್ಭದಲ್ಲೆಲ್ಲ ನ್ಯಾಯಾಲಯಗಳು ಕರಡಿಗಳಂತೆ ಹೈಬರ್‍ನೇಶನ್‍ಗೆ ಜಾರಿರುತ್ತವೆ. ಪತ್ರಕರ್ತರು ಗಾಢವಾದ ಕೋಮಾ ಸ್ಥಿತಿಯಲ್ಲಿ ಮಲಗಿರುತ್ತಾರೆ. ಅವರ ಪೆನ್ನುಗಳಿಗೆ ಆ ಸಂದರ್ಭದಲ್ಲಿ ಗಟ್ಟಿಯಾಗಿ ಮುಚ್ಚಳ ಬಿಗಿದಿರಲಾಗಿರುತ್ತದೆ.

ಎಷ್ಟೋ ಸಲ ಈ ವಿಚಿತ್ರ ಪರಿಸ್ಥಿತಿಯನ್ನು ಕಂಡು ನಿಜಕ್ಕೂ ಅಚ್ಚರಿಪಡುತ್ತೇನೆ. ಒಂದು ವೇಳೆ ಈಗಿನ ಕಲಿಯುಗದಲ್ಲಿ ಧರ್ಮರಾಯನೂ ಯಕ್ಷನೂ ಇದ್ದಿದ್ದರೆ, ಯಕ್ಷ “ಈ ಜಗತ್ತಿನಲ್ಲಿ ಅತ್ಯಂತ ವಿಚಿತ್ರವಾದ ಸಂಗತಿ ಯಾವುದು?” ಎಂದೇನಾದರೂ ಕೇಳಿದ್ದರೆ ಧರ್ಮರಾಯ “ಭಾರತದಲ್ಲಿ ನೂರಕ್ಕೆ ಎಂಬತ್ತೈದು ಮಂದಿ ಹಿಂದೂಗಳೇ ಆದರೂ ಅವರು ಬೆರಳೆಣಿಕೆಯಷ್ಟು ಮಂದಿ ಮಾಡುವ ಕಾನೂನುಗಳಿಗೆ ತಲೆಬಾಗಿ ತಮ್ಮ ಸಂಸ್ಕೃತಿಯನ್ನು ಬಿಟ್ಟು ಕೊಡಲು ತಯಾರಿದ್ದಾರೆ. ತಮ್ಮ ಧರ್ಮವನ್ನು ಹೀನಾಯವಾಗಿ ತುಚ್ಛೀಕರಿಸಿ ಥೂ ಛೀ ಎಂದು ಬಯ್ಯಲು ಉಳಿದವರಿಗೆ ಅವರು ವರ್ಷವಲ್ಲ, ಶತಮಾನಗಳಿಂದ ಅವಕಾಶ ಮಾಡಿಕೊಟ್ಟಿದ್ದಾರೆ. ಹಿಂದೂಗಳನ್ನು ಬಯ್ಯುತ್ತ ಹೀನಾಯಿಸುತ್ತ ಬಂದಿರುವ ಪಕ್ಷವನ್ನು ಅದೇ ಹಿಂದೂಗಳಲ್ಲೇ ಕೆಲವರು ಆರಿಸಿ ಚುನಾಯಿಸಿ ಗೆಲ್ಲಿಸುತ್ತಿದ್ದಾರೆ. ತಮ್ಮ ತಲೆ ಮೇಲೆ ಬೂಟುಗಾಲಿಟ್ಟವರ ಬೂಟುಗಳನ್ನೇ ಈ ಅಕಶೇರುಕ ಹಿಂದೂ ಗುಲಾಮರು ನೆಕ್ಕಿ ಶುಚಿಗೊಳಿಸುವ ಕರ್ತವ್ಯ ವಹಿಸಿಕೊಂಡಿದ್ದಾರೆ. ತಮ್ಮನ್ನು ಇತರರು ಅಥವಾ ತಮ್ಮವರೇ ತುಳಿದರೂ ಇವರಿಗೆ ಬೇಸರವಿಲ್ಲ. ತಮ್ಮನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉಳಿದವರು ಹರಾಜು ಹಾಕಿದರೂ ತಾವು ಮಾರಿಹೋದ ಬಗ್ಗೆ ಇವರಿಗೆ ನಾಚಿಕೆಯಿಲ್ಲ. ತಾನೇ ಬಹುಸಂಖ್ಯಾತನಾಗಿದ್ದೇನೆಂದು ಗೊತ್ತಿದ್ದೂ ಆತ್ಮಗೌರವ ಕಳೆದುಕೊಂಡ ಇಂಥ ನಿರ್ವೀರ್ಯ ಸಮುದಾಯವನ್ನು ಜಗತ್ತಿನ ಬೇರೆಲ್ಲೂ ಕಾಣಲಾರೆವು. ಇದಕ್ಕಿಂತ ವಿಚಿತ್ರ ಇನ್ನೊಂದುಂಟೆ?” ಎಂದು ಉತ್ತರಿಸುತ್ತಿದ್ದನೋ ಏನೋ.

ಹಾಗಾದರೆ ನೀವು ಹೇಳೋದೇನು? ದೀಪಾವಳಿಗೆ ಪಟಾಕಿ ಹೊಡೆಯಬೇಕು ಅನ್ನುವವರೇನು ನೀವು – ಎನ್ನುತ್ತೀರಾ? ಖಂಡಿತವಾಗಿ ನಾನು ಪಟಾಕಿಯ ಪರವಾದವನಲ್ಲ. ಕೆಲವು ದಶಕಗಳ ಹಿಂದೆ ಅತ್ಯಂತ ಸಭ್ಯ ರೀತಿಯಲ್ಲಿದ್ದ ಪಟಾಕಿ ಹೊಡೆಯುವ ಕಾರ್ಯಕ್ರಮಗಳು ಇಂದು ಸಿರಿವಂತಿಕೆಯ ಶೋಕಿಗೊಂದು ಸಾಧನವಾಗಿವೆ ಎನ್ನುವುದನ್ನು ನೀವಾದರೂ ಒಪ್ಪುತ್ತೀರಿ. ಬೆಂಗಳೂರಂಥ ನಗರದಲ್ಲಿ ದೀಪಾವಳಿಯ ಮೂರು ದಿನದಲ್ಲಿ ಅದೆಷ್ಟು ಕೋಟಿ ರುಪಾಯಿ ಕೇವಲ ಸುರುಸುರು ಬತ್ತಿಯಾಗಿ, ಲಕ್ಷ್ಮೀ ಪಟಾಕಿಯಾಗಿ, ನೆಲಚಕ್ರವಾಗಿ, ರಾಕೆಟ್ಟಾಗಿ, ಹೂಕುಂಡವಾಗಿ ಕ್ಷಣಮಾತ್ರದಲ್ಲಿ ಆವಿಯಾಗಿ ಹೋಗುತ್ತದೋ ಲೆಕ್ಕವಿಟ್ಟವರಿಲ್ಲ. ಅಂಥ ಶೋಕಿ ಯಾಕಾದರೂ ಬೇಕು ಎಂದು ಅವೆಲ್ಲ ಪಟಾಕಿಯ ಬೆಟ್ಟ ಕ್ಷಣಾರ್ಧದಲ್ಲಿ ಬೂದಿಯ ರಾಶಿಯಾದಾಗ ಖಂಡಿತ ಅನ್ನಿಸುತ್ತದೆ. ಹಾಗೆಯೇ ಪ್ಲಾಸ್ಟರ್ ಆಫ್ ಪ್ಯಾರಿಸ್ಸಿನ ಗಣಪ, ವಿಸರ್ಜನೆಯಾದ ನಾಲ್ಕನೆ ದಿನಕ್ಕೆ ಅತ್ತ ಕರಗದೆ ಇತ್ತ ಕೊಳೆಯದೆ ನೀರಿನ ನಡುವೆ ಅಸಹ್ಯ ಮುದ್ದೆಯಾಗಿ ನಿಲ್ಲುವ ವಿಕೃತಿಯನ್ನು ಎಷ್ಟು ಮಾತ್ರಕ್ಕೂ ಸಹಿಸಲು ಸಾಧ್ಯವಿಲ್ಲ. ಅವನ್ನೆಲ್ಲ ವಿರೋಧಿಸಲೇಬೇಕು. ಇನ್ಯಾವುದೋ ರಿಲಿಜನ್ನಲ್ಲಿ ಎದೆ ಬಡಿದುಕೊಂಡರೆಂದೋ ಲಕ್ಷಾಂತರ ಕುರಿಗಳನ್ನು ಹತ್ಯೆ ಮಾಡಿದರೆಂದೋ ದಿನಕ್ಕೈದು ಬಾರಿ ಕೂಗಿಕೊಂಡರೆಂದೋ ಹಿಂದೂಗಳು ತಾವೂ ಅಂಥ ಅರ್ಥವಿಲ್ಲದ ಆಚರಣೆಗಳನ್ನು ಮಾಡಲು ಇಳಿಯಬಾರದು. ಬೇರೆ ರಿಲಿಜನ್ನುಗಳ ಬಗ್ಗೆ ಒಂದಕ್ಷರ ವಿರೋಧದ ಮಾತಾಡದೆ ಹಿಂದೂಗಳ ಆಚರಣೆಗಳ ಬಗ್ಗೆ ಮಾತ್ರ ಕೊಂಕೆತ್ತುವ ಪ್ರಗತಿಪರ ಗಂಜಿಗಳನ್ನು ವಿರೋಧಿಸುತ್ತಲೇ ಹಿಂದೂಗಳು ತಮ್ಮ ಆಚರಣೆಗಳ ಅರ್ಥಹೀನ ಭಾಗಗಳನ್ನು ಕಿತ್ತಿಡುವ ಕೆಲಸವನ್ನು ಕೂಡ ಧೈರ್ಯದಿಂದಲೇ ಮಾಡಬೇಕು. ಗಣೇಶನ ಹಬ್ಬಕ್ಕೆ ಯಾವುದೇ ರಾಸಾಯನಿಕ ಬಣ್ಣಗಳಿಲ್ಲದ ಶುದ್ಧ ಮಣ್ಣಿನ ಮೂರ್ತಿಗಳನ್ನೇ ಮಾಡುತ್ತೇವೆ ಇಲ್ಲವೇ ಕೊಳ್ಳುತ್ತೇವೆ ಎಂಬ ಪ್ರತಿಜ್ಞೆಯನ್ನು ಇವೊತ್ತು ಸರ್ವೋಚ್ಚ ನ್ಯಾಯಾಲಯ ಹಿಂದೂಗಳಿಗೆ ಮಾಡಿಸುವುದಲ್ಲ; ಅವರಿಗೆ ಅವರೇ ಮಾಡಿಕೊಳ್ಳಬೇಕಾಗಿದೆ. ಹಾಗೆಯೇ ದೀಪಾವಳಿಯ ಸಂದರ್ಭದಲ್ಲಿ ನಾವು ಚಿಕ್ಕವರಿದ್ದಾಗ ಪೇಟ್ಲ ಹೊಡೆಯುತ್ತಿದ್ದೆವು. ಬಿದಿರಿನ ಬೊಂಬಿನಲ್ಲಿ ಪೇಟ್ಲದ ಕಾಯಿ ಎಂಬ ಗುಲಗಂಜಿಯಷ್ಟು ದೊಡ್ಡ ಕಾಯಿ ಹಾಕಿ ಢಂ ಎಂದು ಹೊಡೆಯುವುದು ಆಗಿನ ಕಾಲದ ಮನರಂಜನೆಯಾಗಿತ್ತು. ಅಂಥ ಪರಿಸರಸ್ನೇಹಿ ಪಟಾಕಿಗಳು ಯಾವುದೆಲ್ಲ ಇವೆ ಎಂಬುದನ್ನು ಶೋಧಿಸಿ ಮರುಜನ್ಮ ಕೊಡಬೇಕಾದ ಕೆಲಸ ಆಗಬೇಕಿರುವುದು ಹಿಂದೂಗಳಿಂದಲೇ. ದಯಾನಂದ ಸರಸ್ವತಿಗಳು ಕರೆ ಕೊಟ್ಟಿದ್ದಂತೆ ನಾವು ನಮ್ಮ ಸಂಸ್ಕತಿಯ ಬೇರುಗಳತ್ತ ಹೊರಳಬೇಕಾಗಿದೆ. ಅವನ್ನು ಸರಿಯಾದ ರೀತಿಯಲ್ಲಿ ಅರ್ಥ ಮಾಡಿಕೊಳ್ಳಬೇಕಾಗಿದೆ. ಯಾವ ಬಗೆಯಲ್ಲೂ ಪರಿಸರಕ್ಕೆ ಹಾನಿ ಮಾಡದ ಹಬ್ಬಗಳನ್ನು ಆಚರಿಸುವ ಮೂಲಕ ಹಿಂದೂ ಧರ್ಮ ಉಳಿದೆಲ್ಲಕ್ಕೆ ಮೇಲ್ಪಂಕ್ತಿ ಹಾಕಿಕೊಡಬೇಕಾಗಿದೆ.

ಅದು ಒಂದು ಮುಖವಾಯಿತು. ಆದರೆ ಇನ್ನೊಂದು – ಬಹಳ ಮುಖ್ಯವಾದ ಮುಖ. ಭಾರತ ಆಚರಣೆ, ಸಂಭ್ರಮ, ಸಂಪ್ರದಾಯಗಳ ದೇಶ. ನಮ್ಮ ಹಬ್ಬಗಳು ನಮ್ಮ ಹೆಮ್ಮೆ. ವರ್ಷದ ಅರ್ಧ ಭಾಗ ಪೂರ್ತಿ ಇಲ್ಲಿ ಹಬ್ಬಗಳದ್ದೇ ಸಂತೆ. ಈ ದೇಶದಲ್ಲಿ ಇಷ್ಟೊಂದು ಹಬ್ಬಗಳು ಯಾಕಿವೆ? ಪಾಶ್ಚಾತ್ಯರಂತೆ ನಮಗೆ ಒಂದೇ ಹಬ್ಬ ಇದ್ದರೆ ಏನು ತೊಂದರೆ? ಯೋಚಿಸಲು ಕಲಿತ ಎಳೆ-ಯುವ ಮನಸ್ಸುಗಳಿಗೆ ಇಂಥದೊಂದು ಪ್ರಶ್ನೆ ಕಾಡುವುದು ತೀರ ಸಹಜ. ಆದರೆ, ಈ ಹಬ್ಬಗಳೇ ಈ ದೇಶವನ್ನು ಸಾವಿರಾರು ವರ್ಷಗಳಿಂದ ಕಾಪಾಡಿಕೊಂಡು ಬಂದಿವೆ ಎಂದರೆ ನಂಬುತ್ತೀರಾ? ಹಬ್ಬಗಳಿಗೆ ಸಂಪ್ರದಾಯ, ಧರ್ಮರಕ್ಷಣೆಯ ಒಂದು ಮುಖ ಇರುವಂತೆಯೇ ಆರ್ಥಿಕತೆಯನ್ನು ದೃಢವಾಗಿಸುವುದು ಎಂಬ ಇನ್ನೊಂದು ಮಗ್ಗುಲೂ ಇದೆ. ಇಲ್ಲಿ ಪ್ರತಿ ಹಬ್ಬದಲ್ಲೂ ದುಡ್ಡು ಕೈ ಬದಲಾಯಿಸುತ್ತದೆ. ಸಮಾಜದಲ್ಲಿ ದುಡ್ಡಿನ ಓಡಾಟ ಇದೆ ಎಂದರೆ ಅಲ್ಲಿನ ಆರ್ಥಿಕತೆ ಆರೋಗ್ಯಕರವಾಗಿದೆ ಎಂದು ಅರ್ಥ. ಸುಮ್ಮನೆ ಒಮ್ಮೆ ಯೋಚಿಸಿ ನೋಡಿ. ಇಲ್ಲಿ ನಾವು ಸಂಕ್ರಾಂತಿಗೆ ಎಳ್ಳು, ಬೆಲ್ಲ ತಿನ್ನುತ್ತೇವೆ. ಕಬ್ಬಿನ ಜಲ್ಲೆಯಿಂದ ಮನೆ ಅಲಂಕರಿಸುತ್ತೇವೆ. ನೇರವಾಗಿ ಇಲ್ಲಿ ಕಬ್ಬು ಬೆಳೆಗಾರನಿಗೆ, ಅದನ್ನು ಪೇಟೆಗೆ ಸಾಗಿಸಿ ತಂದು ಮಾರುವವನಿಗೆ ಲಾಭ. ಗಣೇಶನ ಹಬ್ಬಕ್ಕೆ ಗಣೇಶನ ಮೂರ್ತಿ ಮಾಡುವವನ ಆರ್ಥಿಕತೆಗೆ ಕೊಂಚ ಸಮಾಧಾನ. ಹಬ್ಬಕ್ಕೆ ಹೊಸ ಬಟ್ಟೆ ಖರೀದಿಸಿದೆವೆಂದರೆ ಹತ್ತಿ ಬೆಳೆಯುವ ರೈತ, ರೇಷ್ಮೆ ಬೆಳೆಗಾರ, ನೇಕಾರ, ಬಟ್ಟೆ ಹೊಲಿವ ದರ್ಜಿ – ಎಷ್ಟೊಂದು ಮಂದಿಗೆ ಸಂಪಾದನೆ! ದೀಪಾವಳಿಗೆ ಗೂಡುದೀಪ ಕೊಳ್ಳುವ ಕ್ರಮ ಹಿಂದೆ ಇರಲಿಲ್ಲ; ಆದರೆ ಆಮೇಲಾಮೇಲೆ ಅವನ್ನು ಅಂಗಡಿಯಲ್ಲಿ ಕೊಳ್ಳುವ ಸನ್ನಿವೇಶ ಬಂದ ಮೇಲೆ ಅದನ್ನು ತಯಾರಿಸಿ ಮಾರಿದ ಕಲಾವಿದನಿಗೂ ಕಮಾಯಿ. ಹಣತೆಗಳು ಎಷ್ಟು ಮಾರಿ ಹೋದವೋ ಅಷ್ಟು ಕುಂಬಾರನಿಗೆ ನಿಟ್ಟುಸಿರು. ಇನ್ನು ಹಬ್ಬಗಳೆಂದ ಮೇಲೆ ಹೂವಿನ ರಾಶಿ ಇರಲೇಬೇಕಲ್ಲ? ಅದೆಷ್ಟು ಹೂವು ಬೆಳೆಗಾರರಿಗೆ ಅದರಿಂದ ಅನುಕೂಲ ಲೆಕ್ಕ ಹಾಕಿ. ಹಬ್ಬ ಎಂದ ಮೇಲೆ ದೇವಸ್ಥಾನಕ್ಕೆ ಹೋಗಬೇಕು. ಕಾಯಿ-ಹಣ್ಣು ಕೊಳ್ಳಬೇಕು. ಹತ್ತಿಯ ಬತ್ತಿ ಹೊಸೆವವನಿಂದ ಹಿಡಿದು ಅಗರಬತ್ತಿ ಮಾರುವವನು, ಎಣ್ಣೆ ತೆಗೆವ ಗಾಣಿಗ, ಅರ್ಚಕ, ದೇವಸ್ಥಾನದಲ್ಲಿ ಪ್ರಸಾದ ತಯಾರಿಸುವ ಅಡುಗೆಯವ, ಅಕ್ಕಿ ಹಿಟ್ಟು ತಂಬಿಟ್ಟು ಬೆಲ್ಲ ಸಕ್ಕರೆ ತುಪ್ಪ ಮಾರುವ ಅಂಗಡಿಯಾತ, ಹಾಲು ಮಾರುವ ಗೌಳಿಗಿತ್ತಿ… ಹೇಳುತ್ತ ಹೋದರೆ ಹೀಗೆ ಅನುಕೂಲ, ಲಾಭ ಪಡೆವ ಮಂದಿ ಇಷ್ಟೇ ಎಂದು ಹೇಳಲು ಸಾಧ್ಯವೇ?

ಇವೆಲ್ಲವೂ ಹಬ್ಬದ ಲಾಭಗಳಾಗಿದ್ದವು. ವರ್ಷಪೂರ್ತಿ ನೆರವೇರುತ್ತಿದ್ದ ಈ ಹಬ್ಬಗಳಿಂದಾಗಿ ಸಮಾಜದ ಪ್ರತಿಯೊಬ್ಬರೂ ಒಂದಿಲ್ಲೊಂದು ಬಗೆಯಲ್ಲಿ ಒಂದಷ್ಟು ಕಾಸು ಮಾಡಿಕೊಳ್ಳುತ್ತಿದ್ದರು. ದುಡ್ಡು ಮಾಡಬೇಕೆಂಬಾತನಿಗೆ ಬಹಳಷ್ಟು ಅವಕಾಶವನ್ನು ಈ ಹಬ್ಬಗಳೇ ಒದಗಿಸಿಕೊಡುತ್ತಿದ್ದವು. ಕಾಸು ಕೈಯಿಂದ ಕೈಗೆ ಹರಿದಾಡುತ್ತಿತ್ತು. ಆರ್ಥಿಕವಾಗಿ ಸಮಾಜ ಸುಭದ್ರವಾಗಿತ್ತು, ಸುಭಿಕ್ಷವಾಗಿತ್ತು.

ಈಗ ಮಾತ್ರ ನಾವು ಇವನ್ನೆಲ್ಲ ಒಂದೋ ಮರೆತು ಬಿಟ್ಟಿದ್ದೇವೆ; ಅಥವಾ ಹಬ್ಬವನ್ನು ಇಷ್ಟೆಲ್ಲ ಸಂಭ್ರಮದಿಂದ ಆಚರಿಸುತ್ತಿದ್ದೆವು ಎಂಬ ತಿಳಿವಳಿಕೆಯೇ ನಮಗೆ ಇಲ್ಲವಾಗಿದೆ. ಬದುಕು ಯಾಂತ್ರಿಕವಾಗುತ್ತ ಹೋದಂತೆ ನಮಗೆ ಹಬ್ಬಗಳ ಅರ್ಥಪೂರ್ಣತೆ ಕೂಡ ಅರಿವಾಗದ ಸ್ಥಿತಿ ಬಂದಿದೆ. ಹಿಂದಿನಂತೆ ಇಂದೂ ಹಬ್ಬಗಳ ಸಮಯದಲ್ಲಿ ಬಹಳಷ್ಟು ದುಡ್ಡನ್ನು ನಮ್ಮ ಕೈಯಿಂದ ಚೆಲ್ಲುತ್ತೇವಾದರೂ ಆ ಹಣ ಹೋಗುತ್ತಿರುವುದೆಲ್ಲಿಗೆ ಎಂಬುದು ಮಾತ್ರ ನಮಗೆ ಗೊತ್ತಿಲ್ಲ. ಇವೊತ್ತು ನಮಗೆ ಗಣೇಶನ ಬಣ್ಣ ಬಣ್ಣದ ವಿಗ್ರಹಗಳು ಬರುತ್ತಿರುವುದು ಚೀನಾದಿಂದ. ಬೆಂಗಳೂರಿನ ಕೆಲವೊಂದು ಬೀದಿಗಳಲ್ಲಂತೂ ಒಂದೇ ಆಕೃತಿ, ಒಂದೇ ಭಂಗಿಯ ಸಾವಿರದೆಂಟು ಗಣಪರು ಶಿಸ್ತಿನಿಂದ ಸಾಲಾಗಿ ಕೂತಿರುತ್ತಾರೆ. ಇವರೆಲ್ಲ ಬಂದದ್ದು ಚೀನಾದ ಫ್ಯಾಕ್ಟರಿಗಳ ಮೌಲ್ಡ್’ಗಳಲ್ಲಿ ಪಾಕ ಸುರುವಿಕೊಂಡು. ಇನ್ನು ಹಬ್ಬಕ್ಕೆ ಬಟ್ಟೆ ಕೊಳ್ಳಬೇಕಾದರೆ ನಮ್ಮ ಜನ ಹೋಗುವುದೆಲ್ಲಿಗೆ? ಝಗಮಗಿಸುವ ಮಾಲ್‍ಗಳಿಗೆ. ಅಲ್ಲಿರುವ ಹತ್ತಾರು ಬಟ್ಟೆಯಂಗಡಿಗಳೆಲ್ಲ ತಮ್ಮ ಸಂಗ್ರಹದ ಹಣವನ್ನು ಅಂತಿಮವಾಗಿ ಕಳಿಸುವುದು ಅಮೆರಿಕದಲ್ಲಿರುವ ಬ್ಯಾಂಕುಗಳಿಗೆ, ಡಾಲರುಗಳ ರೂಪದಲ್ಲಿ. ಹಬ್ಬಕ್ಕೆ ಬಟ್ಟೆ ಹೊಲಿದುಕೊಡುತ್ತಿದ್ದ ಸಿಂಪಿಗ ಬೀದಿಗೆ ಬಿದ್ದಿದ್ದಾನೆ. ದೀಪಾವಳಿಗೆ ಸ್ವೀಟ್ ಬಾಕ್ಸ್ ಬೇಕು ಎಂದು ಮತ್ತದೇ ಮಾಲ್‍ಗಳಿಗೋ ಸೂಪರ್ ಮಾರ್ಕೆಟ್‍ಗಳಿಗೋ ನುಗ್ಗಿ ಮತ್ತೆ ಒಂದಷ್ಟು ವಿದೇಶೀ ಕಂಪೆನಿಗಳಿಗೆ ಲಾಭ ಮಾಡಿ ಬರುತ್ತೇವೆ. ಈಗಂತೂ ದೀಪಾವಳಿಗೆ ಚೀನಾದ ಹಣತೆ ಬಂದಿದೆ. ಚೀನಾದ ಗೂಡುದೀಪ ಬಂದಿವೆ. ಸಂಕ್ರಾಂತಿ ಹಬ್ಬಕ್ಕೆ ಚೀನಾದ ಪ್ಲಾಸ್ಟಿಕ್ ಗಾಳಿಪಟಗಳು ಕೂಡ ಬರುತ್ತಿವೆ. ಇವನ್ನೆಲ್ಲ ಮುಗಿಬಿದ್ದು ಕೊಂಡೂ ಕೊಂಡು, ಕೊಳ್ಳುವುದೇ ಹಬ್ಬದ ಪ್ರಮುಖ ಭಾಗ ಎಂದು ಭಾವಿಸುತ್ತ ಮುಗಿಬಿದ್ದು ಕೊಂಡು ಹಬ್ಬವನ್ನು “ಅರ್ಥಪೂರ್ಣ”ವಾಗಿ ಆಚರಿಸಿ ಸಂಭ್ರಮ ಪಡುತ್ತೇವೆ.

ಆದರೆ ನಾವು ಮಾಡಿದ್ದು ಏನು? ಬೇರಾವುದೋ ದೇಶಕ್ಕೆ ಲಾಭ ಮಾಡಿಕೊಟ್ಟು ಅದೇ ನಮ್ಮ ಹಬ್ಬದ ಆಚರಣೆ ಎಂದು ಭಾವಿಸಿದ್ದು, ಮೋಸ ಹೋದದ್ದು! ಇದು ಹೀಗೇ ಮುಂದುವರಿಯುತ್ತ ಹೋದರೆ ಭಾರತದಲ್ಲಿ ಹಬ್ಬಗಳ ಭರಾಟೆ ಜಾಸ್ತಿಯಾದಷ್ಟೂ ಅಕ್ಕಪಕ್ಕದ ದೇಶಗಳು ಆರ್ಥಿಕವಾಗಿ ಸದೃಢವಾಗುತ್ತಾ ಹೋಗುತ್ತವೆ. ನಿಜವಾದ ಹಿಂದೂ ಎಚ್ಚೆತ್ತುಕೊಂಡು ಕಿರುಚಬೇಕಾದದ್ದು ಸರ್ವೋಚ್ಚ ನ್ಯಾಯಾಲಯ ಹಾಗೆ ಮಾಡಬೇಡಿ, ಹೀಗೆ ಮಾಡಿ ಎಂದು ಹೇಳಿದಾಗ ಅಲ್ಲ. ಆತ ಎಚ್ಚೆತ್ತು ಕಣ್ಣುಜ್ಜಿ ಎದ್ದು ನಿಲ್ಲಬೇಕಾದ್ದು ತನ್ನ ಹಬ್ಬದ ಹೆಸರಲ್ಲಿ ಬೇರೆ ರಿಲಿಜನ್ನುಗಳು, ಬೇರೆ ದೇಶಗಳು ದುಡ್ಡು ಮಾಡಿಕೊಂಡು ಸಾಮ್ರಾಜ್ಯ ವಿಸ್ತರಿಸಿಕೊಳ್ಳುತ್ತಿವೆ ಎನ್ನುವುದು ಗಮನಕ್ಕೆ ಬಂದಾಗ. ಹಿಂದೂಗಳು ಹಬ್ಬಗಳನ್ನು ಮಾಡಬೇಕಾದ್ದು ತಮ್ಮದೇ ಸಮುದಾಯದ, ತಮ್ಮದೇ ಧರ್ಮದ, ತಮ್ಮದೇ ದೇಶದ ಇತರರನ್ನು ಆರ್ಥಿಕವಾಗಿ ಬೆಳೆಸುವ ಮೂಲಕ. ಹಿಂದೂಗಳು ಹಬ್ಬಕ್ಕೆ ತಮ್ಮದೇ ಬಾಂಧವರ ಕೈಯಿಂದ ಹೂಗಳನ್ನು ಕೊಳ್ಳಬೇಕಿದೆ. ಭಾರತೀಯತೆಯನ್ನು ಪ್ರತಿಬಿಂಬಿಸುವಂಥ ಬಟ್ಟೆಗಳನ್ನು ತಮ್ಮವರದ್ದೇ ಅಂಗಡಿಗಳಿಂದ ಕೊಳ್ಳಬೇಕಾಗಿದೆ. ಸಿಹಿತಿನಿಸುಗಳನ್ನು ತಮ್ಮವರಿಂದ ಖರೀದಿಸಿ ದುಡ್ಡಿನ ಚಲಾವಣೆ ಸಮಾಜದ ಒಳಗೇ ಇರುವಂತೆ ನೋಡಿಕೊಳ್ಳಬೇಕಾಗಿದೆ. ದೀಪಾವಳಿಯ ಆಚರಣೆಗೆ ಚೀನಾದ ಒರಟು ಮಾದರಿಯ ಗೂಡುದೀಪ ಬೇಡ, ಅಪ್ಪಟ ಭಾರತೀಯ ಶೈಲಿಯ ಗೂಡುದೀಪ, ತಮ್ಮವರೇ ಮಾಡಿದ ಗೂಡುದೀಪ ಬೇಕು ಎಂದು ಹಿಂದೂ ಹೇಳಬೇಕಾಗಿದೆ. ಭಾರತದ ಹಬ್ಬಗಳು ಎಂದರೆ ಹಿಂದೂಗಳ ಆರ್ಥಿಕತೆಯ ಉತ್ಥಾನ. ಅವರ ಆರ್ಥಿಕತೆಯ ಉದ್ಧಾರ. ಇನ್ನಾವುದೋ ಸಮುದಾಯಕ್ಕೆ, ದೇಶಕ್ಕೆ ಲಾಭ ಮಾಡಿಕೊಟ್ಟು ಆಚರಿಸುವ ಹಬ್ಬ ಅರ್ಥಹೀನ. ನಂಬಿದರೆ ನಂಬಿ, 2016ರ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಭಾರತದಲ್ಲಿ ಆನ್‍ಲೈನ್ ಮಳಿಗೆಗಳು 7000 ಕೋಟಿ ರುಪಾಯಿ ಮೌಲ್ಯದ ಬ್ಯುಸಿನೆಸ್ ಮಾಡಿದವು. ಅಮೆಝಾನ್ ಎಂಬ ಅಮೆರಿಕ ಮೂಲದ ಕಂಪೆನಿ ಹಬ್ಬದ ಐದು ದಿನಗಳಲ್ಲಿ ಒಟ್ಟು ಒಂದೂವರೆ ಕೋಟಿ ಉತ್ಪನ್ನಗಳನ್ನು ಗ್ರಾಹಕರಿಗೆ ತಲುಪಿಸಿತು. ಭಾರತೀಯರೇನೋ ಹಬ್ಬದ ಖುಷಿಯಲ್ಲಿ ಮುಗಿಬಿದ್ದು ಶಾಪಿಂಗ್ ಮಾಡಿದರು; ಆದರೆ ಅವರ ದುಡ್ಡಿನ ಲಾಭಾಂಶ ಹೀರಿ ನಿಜಕ್ಕೂ ಹಬ್ಬದ ಸಂತಸ ಅನುಭವಿಸಿದ್ದು ಮಾತ್ರ ಅಮೆರಿಕ, ಚೀನಾದಂಥ ವಿದೇಶಗಳು.

ಹಿಂದೂಗಳು ಒಂದನ್ನು ಅರ್ಥ ಮಾಡಿಕೊಳ್ಳಬೇಕಿದೆ. ಈ ದೇಶ ಹಬ್ಬಗಳ ದೇಶ. ಹಬ್ಬ ಎಂದರೆ ಹೊಸ ಬಟ್ಟೆ ತೊಟ್ಟು ದೇವಸ್ಥಾನದಲ್ಲಿ ಮೂರು ಸುತ್ತು ಹಾಕಿ ಮನೆಯಲ್ಲಿ ಜಿಲೇಬಿ, ಹೋಳಿಗೆ ತಿಂದು ನಿದ್ದೆ ಹೊಡೆಯುವುದಲ್ಲ. ಹಬ್ಬ ಎಂದರೆ ದೇಶದೊಳಗಿನ ಪ್ರತಿಯೊಬ್ಬ ಹಿಂದೂ ತನ್ನ ಆರ್ಥಿಕ ಸ್ಥಿತಿಯನ್ನು ಉತ್ತಮಪಡಿಸಿಕೊಳ್ಳಲು ಸಿಗುವ ಅವಕಾಶ. ಹಬ್ಬಗಳು ಎಂದರೆ ದೇಶಕ್ಕೆ ತನ್ನ ಆರ್ಥಿಕತೆಯನ್ನು ಉತ್ತಮಪಡಿಸಿಕೊಳ್ಳಲು ಸಿಗುವ ಸುವರ್ಣಾವಕಾಶ. ಹಿಂದೂಗಳು ಇದನ್ನು ಅರ್ಥ ಮಾಡಿಕೊಂಡು ಕೇವಲ ಹಿಂದೂಗಳಲ್ಲೇ ತಮ್ಮ ವ್ಯವಹಾರ ಮಾಡಿ ಹಬ್ಬಗಳ ಅರ್ಥವನ್ನು ಸಾರ್ಥಕಪಡಿಸಿಕೊಂಡರೆ ಬುದ್ಧಿಜೀವಿಗಳ ಗೊಣಗಾಟ ತನ್ನಷ್ಟಕ್ಕೇ ಕೊನೆಗೊಂಡು ಹಬ್ಬಕ್ಕೆ ಪಟಾಕಿ ಹೊಡೀರಿ ಪ್ಲೀಸ್, ನಿಮ್ಮ-ನಿಮ್ಮೊಳಗಿನ ವ್ಯವಹಾರ ಬಿಟ್ಟು ಉಳಿದವರಿಗೂ ಸ್ವಲ್ಪ ಬ್ಯುಸಿನೆಸ್ ಆಗೋ ಹಾಗೆ ಮಾಡಿ ಪ್ಲೀಸ್ ಎನ್ನುವಲ್ಲಿಗೆ ಬಂದು ನಿಲ್ಲುತ್ತಾರೆ.

ಒಟ್ಟಿನಲ್ಲಿ ಹೇಳುವುದಿಷ್ಟೆ: ನ್ಯಾಯಾಲಯ ಹೇಳಿತೆಂಬ ಕಾರಣಕ್ಕೆ ವಿರೋಧಿಸಬೇಡಿ. ಯಾರೋ ಬುದ್ಧಿಜೀವಿ ಗೊಣಗಿಕೊಂಡನೆಂಬ ಕಾರಣಕ್ಕೆ ಕೋಪವೂ ಬೇಡ, ವಿರೋಧವೂ ಬೇಡ. ನಾವೇ ಸ್ವಲ್ಪ ಹೊತ್ತು ಕೂಲ್ ಆಗಿ ಕೂತು ಯೋಚಿಸೋಣ. ಹಬ್ಬಗಳನ್ನು ಅವುಗಳ ಮೂಲ ಸ್ವರೂಪಕ್ಕೆ ತರೋಣ. ಕಡೇಪಕ್ಷ ಮೂಲದ ಹತ್ತಿರದ ರೂಪದಲ್ಲಿ ಆಚರಿಸೋಣ. ಮೃಣ್ಮಯ ಗಣಪತಿಗಳನ್ನು ಕೊಳ್ಳುವುದರಲ್ಲಿ, ಮಾಲಿನ್ಯ ಮಾಡದ ಪಟಾಕಿಗಳನ್ನಷ್ಟೇ ಹೊಡೆಯುವುದರಲ್ಲಿ ಯಾವ ಮುಜುಗರವೂ ಬೇಡ. ಹಬ್ಬ ಎಂಬುದು ಪರಿಸರಕ್ಕೆ ಒಂದಷ್ಟು ವಿಷ ಬೆರೆಸುವ ಆಚರಣೆ ಖಂಡಿತ ಆಗಬಾರದು. ಪ್ರಕೃತಿಯಿಂದ ಬಂದದ್ದನ್ನು ಮತ್ತೆ ಪ್ರಕೃತಿಗೆ ಯಾವ ಮಾಲಿನ್ಯದ ಸೋಂಕಿಲ್ಲದೆ ಸೇರಿಸುವ ಅರ್ಥಪೂರ್ಣತೆ ನಮ್ಮ ಹಬ್ಬಗಳಿಗೆ ಬರಬೇಕಾಗಿದೆ. ಈ ಒಂದು ಎಚ್ಚರವನ್ನು ಇಟ್ಟುಕೊಂಡೇ ಹಬ್ಬಗಳ ಆರ್ಥಿಕತೆಯ ಲಾಭವನ್ನು ಕೂಡ ನಾವು ಎತ್ತಬೇಕು. ಯಾಕೆಂದರೆ ಹಬ್ಬಗಳು ಯಾವ ಕಾರಣಕ್ಕೆ ಶುರುವಾದವೋ ನಮಗೆ ಗೊತ್ತಿಲ್ಲದೆ ಇರಬಹುದು; ಆದರೆ ಶುರುವಾದ ಮೇಲೆ ನಮ್ಮ ಈ ನೆಲದ ಆರ್ಥಿಕ ಮಟ್ಟವನ್ನು ಅವು ಸುಧಾರಿಸಿದ್ದು ಮಾತ್ರ ಸತ್ಯಸ್ಯಸತ್ಯ. ಹಬ್ಬಗಳ ಸಮಯದಲ್ಲಿ ಶಾಪಿಂಗ್ ಹೆಸರಲ್ಲಿ ಪರದೇಶೀ ಸರಕನ್ನು ಮನೆ ತುಂಬಿಸಿಕೊಳ್ಳುವ ಮುನ್ನ ಎಚ್ಚರಾಗೋಣ. ಹಬ್ಬಕ್ಕೆ ಬೇಕಾದ ಎಲ್ಲ ಸರಕನ್ನೂ ನಮ್ಮದೇ ದೇಶದ ನಮ್ಮದೇ ಧರ್ಮದ ವರ್ತಕರಿಂದ ಖರೀದಿಸಿ ಅವರ ಆರ್ಥಿಕತೆಗೆ ಬಲ ಕೊಡೋಣ. ಈ ನೆಲದಲ್ಲಿ ನಾವು ಆಚರಿಸುವ ಒಂದೊಂದು ಹಬ್ಬವೂ ಈ ನೆಲದ ಹಿಂದೂಗಳನ್ನು ಬಲಪಡಿಸಬೇಕು. ಅವರ ಕೈಯಲ್ಲಿ ನಾಲ್ಕು ಕಾಸು ಹೆಚ್ಚು ಓಡಾಡುವಂತೆ ಮಾಡಬೇಕು. ಹಬ್ಬ ಎಂದರೇನೇ ಖುಷಿ ಅಂತ ಅಲ್ವೇ? ಅಂಥ ಖುಷಿ ಪ್ರತಿ ಹಬ್ಬದಲ್ಲೂ ನಮ್ಮ ಮುಖದಲ್ಲಿ, ನಮ್ಮ ಜೇಬುಗಳಲ್ಲಿ ಪ್ರಕಾಶಿಸಬೇಕು. ಯಾವತ್ತು ನಮಗೆ ನಮ್ಮ ಹಬ್ಬಗಳ ಮೇಲೆ ಪ್ರೀತಿ ಬೆಳೆಯುತ್ತದೋ, ಅವುಗಳ ಆಳ-ಅಗಲಗಳ ಪರಿಚಯವಾಗುತ್ತದೋ, ಅವುಗಳು ಸಮಾಜದ ಅರ್ಥವ್ಯವಸ್ಥೆಗೆ ಕೊಡುವ ಕೊಡುಗೆಯ ಅರ್ಥವಾಗುತ್ತದೋ ಅವತ್ತು ನಾವು ಬುದ್ಧಿಜೀವಿಗಳ ಖೊಟ್ಟಿ ಕತೆಗಳಿಗೆ ತಿಲಾಂಜಲಿ ಇಡುವ ಧೈರ್ಯ ಬೆಳೆಸಿಕೊಳ್ಳುತ್ತೇವೆ. ಪ್ರಗತಿಪರ ಗಂಜಿಗಳು ಬೆದರಿಸಿದ ಮಾತ್ರಕ್ಕೆ ಹಬ್ಬಕ್ಕೆ ಪೂರ್ಣ ವಿರಾಮ ಇಡುವಾತ ಹಿಂದೂ ಅಲ್ಲ. ಯಾರೇನೇ ಹೇಳಲಿ ಜಗತ್ತೇ ಬೇಕಾದರೆ ನಗಲಿ, ಹಬ್ಬವನ್ನು ಈ ನೆಲ ನನಗೆ ಕಲಿಸಿಕೊಟ್ಟ ರೀತಿಯಲ್ಲಿ ಅರ್ಥಪೂರ್ಣವಾಗಿ ಆಚರಿಸುವೆ ಎನ್ನುವಾತನೇ ನಿಜವಾದ ಹಿಂದೂ. ಅಲ್ಲಿಯವರೆಗೆ ಆತ ಕುರಿಮಂದೆಯ ಒಂದು ಕುರಿ, ಅಷ್ಟೆ.

Facebook ಕಾಮೆಂಟ್ಸ್

ಲೇಖಕರ ಕುರಿತು

Rohith Chakratheertha

ಓದಿದ್ದು ವಿಜ್ಞಾನ, ಮುಖ್ಯವಾಗಿ ಗಣಿತ. ಬೆಂಗಳೂರಿನಲ್ಲಿ ನಾಲ್ಕು ವರ್ಷ ಉಪನ್ಯಾಸಕನಾಗಿ ಕಾಲೇಜುಗಳಲ್ಲಿ ಪಾಠ ಮಾಡಿದ್ದ ಇವರು ಈಗ ಒಂದು ಬಹುರಾಷ್ಟ್ರೀಯ ಕಂಪೆನಿಯಲ್ಲಿ ಉದ್ಯೋಗಿ. ಹವ್ಯಾಸವಾಗಿ ಬೆಳೆಸಿಕೊಂಡದ್ದು ಬರವಣಿಗೆ. ಐದು ಪತ್ರಿಕೆಗಳಲ್ಲಿ ಸದ್ಯಕ್ಕೆ ಅಂಕಣಗಳನ್ನು ಬರೆಯುತ್ತಿದ್ದು ವಿಜ್ಞಾನ, ಗಣಿತ, ವ್ಯಕ್ತಿಚಿತ್ರ, ಮಕ್ಕಳ ಕತೆ ಇತ್ಯಾದಿ ಪ್ರಕಾರಗಳಲ್ಲಿ ಇದುವರೆಗೆ ೧೩ ಪುಸ್ತಕಗಳ ಪ್ರಕಟಣೆಯಾಗಿವೆ. ಉದ್ಯೋಗ ಮತ್ತು ಬರವಣಿಗೆಯಿಂದ ಬಿಡುವು ಸಿಕ್ಕಾಗ ತಿರುಗಾಟ, ಪ್ರವಾಸ ಇವರ ಖಯಾಲಿ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!