ಅಂಕಣ

ಸುಳ್ಳು ಮಾತನಾಡಿದರೆ ನಿಮ್ಮ ಸಾಮಾಜಿಕ ಬದ್ಧತೆಯನ್ನೂ ನಾವು ಪ್ರಶ್ನಿಸಬೇಕಾಗುತ್ತದೆ

ನಟರುಗಳ ಆರ್ಭಟ ಜೋರಾಗಿದೆ. ತೆರೆ ಮೇಲೆ ಯಾರೋ ಬರೆದುಕೊಟ್ಟ ಸಂಭಾಷಣೆಯನ್ನು ಹೇಳುವ ನಟರು ಈಗ ಕೆಲವು ದಿನದ ಹಿಂದೆ ತೆರೆಯಿಂದಾಚೆಗೂ ಬಂದು ಅಪ್ರಬುದ್ಧವಾಗಿ ಒದರುತ್ತಿದ್ದಾರೆ. ತೆರೆ ಮೇಲೆ ಸಂಭಾಷಣೆಯನ್ನು ಯಾರೋ ಬರೆದುಕೊಟ್ಟಂತೆ ಹೇಳುವ ಮೊದಲು ಸ್ವಲ್ಪ ‘ಅನಾಲಿಸಿಸ್’ ಮಾಡುವುದು ನಟನ  ಜವಾಬ್ದಾರಿ. ಎಷ್ಟೋ ನಟರು ಇದನ್ನು ಪಾಲಿಸಬಹುದು. ಈಗ ಕೆಲವು ದಿನಗಳ ಹಿಂದೆ ವಿಜಯ್ ತನ್ನ ಮೆರ್ಸಲ್ ಚಿತ್ರದಲ್ಲಿ ಬಳಸಿದ್ದ ಸಂಭಾಷಣೆ ಚರ್ಚೆಗೆ ಗ್ರಾಸವಾಯಿತು. ಇದಾದ ಸ್ವಲ್ಪ ದಿನದಲ್ಲೇ ನಮ್ಮ ಕನ್ನಡದ ಸುದೀಪ್ ಒಂದಿಷ್ಟು ಮಾತನಾಡಿದರು. ಅದು ಕೂಡ ಜಿ.ಎಸ್.ಟಿ. ವಿರೋಧಿಸಿಯೇ ಆಗಿತ್ತು. ಹಾಗೆಯೇ ಎಂದಿನಂತೆ ನಮ್ಮ ರಾಷ್ಟ್ರಪ್ರಶಸ್ತಿ ವಿಜೇತ ನಟ ಪ್ರಕಾಶ್ ರೈ ಕೂಡ ತಾಜ್ ಮಹಲ್ ಕುರಿತಂತೆ ಬೇಜವಾಬ್ದಾರಿಯ ಟ್ವೀಟ್ ಮಾಡಿದರು. ಇವರುಗಳ ಪ್ರಕಾರ ಕೇಂದ್ರ ಸರಕಾರದ್ದು  ಸರ್ವಾಧಿಕಾರಿ ಧೋರಣೆ ಎಂಬುದು. ಹಾಗಾದರೆ ಇವರುಗಳು ಸಾಚಾ ವ್ಯಕ್ತಿಗಳೇ? ಅಥವಾ ವಿಜಯ್ ಹೇಳಿದ ಸಂಭಾಷಣೆ ಸತ್ಯಕ್ಕೆ ಹತ್ತಿರವಾದದ್ದೇ?

ಮೆರ್ಸಲ್ ಅನ್ನೋ ಸಿನಿಮಾದಲ್ಲಿ ನಟ ವಿಜಯ್ ಒಂದಿಷ್ಟು ಡೈಲಾಗ್ ಹೊಡೆಯುತ್ತಾರೆ. ಅಬ್ಬಬ್ಬಾ! ಅದೇನ್ ಡೈಲಾಗ್. ಇದಕ್ಕೆ ಚಪ್ಪಾಳೆ ಬಾರಿಸುವವರು ಒಂದಿಷ್ಟು ಜನ. ಆದರೆ ಆತ  ಹೇಳಿದ ಸಂಭಾಷಣೆಯೇ ಒಂದು ದೊಡ್ಡ ಡಂಬ್!!. ಅದು ಸುಳ್ಳಿನ ಕಂತೆ. ಹೀಗೆಂದು ಬಿಜೆಪಿ ವಾದಿಸಿತು. ಸಾಮಾನ್ಯರಲ್ಲಿ ಸಾಮಾನ್ಯರನ್ನು ತಲುಪುವ ಈ ಸಿನಿಮಾ ಎಂಬ ಮಾಧ್ಯಮದ ಮೂಲಕ ವಿಜಯ್ ಎಂಬ ಸರಿಯಾಗಿ ತೆರಿಗೆ ಕಟ್ಟದ ‘ತೆರಿಗೆ ಕಳ್ಳ’ ಸರಕಾರವನ್ನು ಪ್ರಶ್ನಿಸಿ ಉದ್ದುದ್ದ ಡೈಲಾಗ್ ಭಾರಿಸುತ್ತಾರೆ. ಆದರೆ ಅದಕ್ಕೂ  ಮುಂಚೆ ವಿಜಯ್ ಆ ಡೈಲಾಗ್ ಅನ್ನು ವಿಮರ್ಶಿಸಿದರಾ? ಏನೋ ಗೊತ್ತಿಲ್ಲ. ವಿಜಯ್ ನಮ್ಮ ಜಿ.ಎಸ್.ಟಿ.ಯನ್ನು ಅಲ್ಲಗಳೆಯುತ್ತಾರೆ, ಡಿಜಿಟಲೈಸೇಷನ್ ಅನ್ನು ಹೀಯಾಳಿಸುತ್ತಾರೆ, ಭಾರತದ ಅರ್ಥವ್ಯವಸ್ಥೆಯನ್ನು ಸಿಂಗಾಪುರದೊಂದಿಗೆ ಹೋಲಿಸುತ್ತಾರೆ.  

ಭಾರತದಂತ ರಾಷ್ಟ್ರವನ್ನು ಡಿಜಿಟಲೈಸೇಷನ್’ಗೆ ತೆರೆದುಕೊಳ್ಳುವಂತೆ ಮಾಡಲು ಹೊರಟಿದ್ದು ದೊಡ್ಡ ತಪ್ಪೇ? ಸಿಂಗಪುರ ಅಮೆರಿಕಾದ ಜೊತೆ ಭಾರತವನ್ನು ಹೋಲಿಸುವ ನೀವು ಅಲ್ಲಿ ಅಳವಡಿಸಿಕೊಂಡಿರುವ ಡಿಜಿಟಲೈಸೇಷನ್ ಬಗ್ಗೆ ಮಾತನಾಡೋದಿಲ್ಲ ಅಲ್ಲವಾ? ಮೇಕ್ ಇನ್ ಇಂಡಿಯಾ ಮತ್ತು ಡಿಜಿಟಲ್ ಇಂಡಿಯಾದಂತಹ ಪರಿಕಲ್ಪನೆ ಜನರ ಮನಸ್ಸಿಗೆ ಹತ್ತಿರವಾಗಿದ್ದು ಮೋದಿ ಸರಕಾರ ಬಂದಮೇಲೆ. ಬದಲಾವಣೆಯ ಹಾದಿ ಅತ್ಯಂತ ಕಠಿಣವಾದದ್ದು ಆದರೆ ಆ ನಿಟ್ಟಿನಲ್ಲಿ ಪ್ರಯತ್ನವಂತೂ ಆಗುತ್ತಿದೆಯಲ್ಲ ಅದು ಈ ನಟರಿಗೆ ಪರಿಣಾಮಕಾರಿ ಅನ್ನಿಸುವುದಿಲ್ಲ. ‘ಸಿಂಗಪುರದಲ್ಲಿ ಜಿ.ಎಸ್.ಟಿ. 7% ಆದರೆ ನಮ್ಮ ದೇಶದಲ್ಲೇಕೆ 28%? ಜೊತೆಗೆ ಆಲ್ಕೋಹಾಲ್ ಅನ್ನು ಯಾಕೆ ಜಿ.ಎಸ್.ಟಿ. ಅಡಿಯಲ್ಲಿ ತಂದಿಲ್ಲ ?’  ಇದು ಜಿ.ಎಸ್.ಟಿ. ಬಗ್ಗೆ ವಿಜಯ್ ಹೇಳುವ ಡೈಲಾಗ್. ಸಿಂಗಾಪುರವನ್ನು ಭಾರತದ ಜೊತೆ ಹೋಲಿಸುವುದೇ ಒಂದು ದೊಡ್ಡ ಜೋಕ್. ಭಾರತದ ಜನಸಂಖ್ಯೆ ಎಷ್ಟು ಮತ್ತು ಸಿಂಗಾಪುರದ್ದೆಷ್ಟು? ಅಲ್ಲಿನ ಜನರ ತಲಾ ಆದಾಯವನ್ನು ಭಾರತದ ಜನರ ತಲಾ ಆದಾಯಕ್ಕೆ ಹೋಲಿಸಿದರೆ ಅಲ್ಲಿಯದು ಸುಮಾರು ಹನ್ನೆರಡು ಪಟ್ಟು ಜಾಸ್ತಿ ಇದೆ. ಜೊತೆಗೆ ಸರಕಾರ ನಡೆಸಲು ಬೇಕಾಗುವ ಹಣ ಕೂಡ ಕಮ್ಮಿಯೇ ಆಗಿರುತ್ತದೆ. ಇನ್ನು ಅಲ್ಲಿನ ಜನರ ಟ್ಯಾಕ್ಸ್ ಕಂಪ್ಲೈಯೆನ್ಸ್ ರೇಶಿಯೋ ಕೂಡ ತುಂಬಾ ಜಾಸ್ತಿ ಇದೆ. ಇನ್ನೊಂದು ದೇಶದ ಆರ್ಥಿಕತೆಯ ಜೊತೆಗೆ ಹೋಲಿಕೆ ಮಾಡುವ ಮೊದಲು ಸ್ವಲ್ಪ ಯೋಚಿಸಬೇಕಲ್ಲವೇ? ಅಷ್ಟು ಸಾಮಾನ್ಯ ಜ್ಞಾನವೂ ಇಲ್ಲವಾ ಹಾಗಾದರೆ? ಇನ್ನೂ ಆಲ್ಕೋಹಾಲ್ ವಿಷಯ. ಭಾರತದಲ್ಲಿ ಈಗ ಆಲ್ಕೋಹಾಲ್ ಮೇಲೆ ಬೀಳುತ್ತಿರುವ ತೆರಿಗೆ ಸುಮಾರು 56% ಇಂದ 75% ಆದರೆ ಜಿ.ಎಸ್.ಟಿ. ಯಲ್ಲಿ ಹೈಯೆಸ್ಟ್ ಟ್ಯಾಕ್ಸ್ ರೇಟ್ ಇರುವುದು 28%. ಅಂದರೆ ವಿಜಯ್’ಗೆ ಆಲ್ಕೋಹಾಲ್ ಮೇಲೆ 28% ಟ್ಯಾಕ್ಸ್ ಹಾಕೋ ಆಸೆನಾ? ಒಂದು ಮಾತು ಹೇಳುವ ಮೊದಲು ನೂರುಬಾರಿ ಯೋಚಿಸಬೇಕು ಎನ್ನುವ ಸಾಮಾನ್ಯ ಜ್ಞಾನ ಇಲ್ಲದವನು ಆರ್ಥಿಕ ವ್ಯವಸ್ಥೆಯ ಬಗ್ಗೆ ಇಲ್ಲಸಲ್ಲದ ಆರೋಪ ಮಾಡುತ್ತಿರುವುದನ್ನು ಬಾಲಿಶ ಎನ್ನಬಹುದು. ಸಿಂಗಾಪುರದಂತಹ ರಾಷ್ಟ್ರದಲ್ಲಿ ಶೇಕಡಾ 98% ಜನ ಆದಾಯ ತೆರಿಗೆ ಸಲ್ಲಿಸುತ್ತಾರೆ. ಆದರೆ ನಮ್ಮ ಭಾರತದಲ್ಲಿ ಆದಾಯ ತೆರಿಗೆ ಸಲ್ಲಿಸುವವರ ಸಂಖ್ಯೆ ಕೇವಲ 2%. ನಿಯತ್ತಾಗಿ ತೆರಿಗೆ ಕಟ್ಟದೆ ವ್ಯವಸ್ಥೆಯ ಹೀಯಾಳಿಸುವುದು ಯಾವ ಸೀಮೆಯ ಸಾಮಾಜಿಕ ಬದ್ಧತೆ? ಇನ್ನು ಇದೇ ವಿಜಯ್ ಮನೆ ಮೇಲೆ ಸೆಪ್ಟೆಂಬರ್ 30, 2015ರಂದು ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿ ಎರಡು ಕೋಟಿ ಹಣ ಮತ್ತು ಸುಮಾರು ಎರಡು ಕೋಟಿ ಬೆಲೆಬಾಳುವ ಆಭರಣವನ್ನು ವಶಪಡಿಸಿಕೊಳ್ಳುತ್ತದೆ. ಅಂದರೆ ಈ ನಟ ‘ತೆರಿಗೆ ಕಳ್ಳ’ ಎಂದಾಯ್ತಲ್ಲವೇ? ಸರಕಾರಕ್ಕೆ ಸರಿಯಾಗಿ ತೆರಿಗೆ ಪಾವತಿಸದ ವಿಜಯ್ ತಾನು ಸಾಚಾ ಎನ್ನುವಂತೆ ಡೈಲಾಗ್ ಹೊಡಿಯುತ್ತಾನೆ ಎಂದರೆ ಮೆಚ್ಚಬೇಕಾದದ್ದೆ. ಈಗ ಪ್ರಶ್ನಿಸಬೇಕಾದದ್ದು ವಿಜಯ್ ಎಂಬ ನಟನ ಸಾಚಾತನವನ್ನಲ್ಲವೇ?   

ಈಗ ಸುದೀಪ್ ಹೇಳಿರೋ ವಿಷಯಕ್ಕೆ ಬರೋಣ. ‘ಹೊಸ ಕೇಂದ್ರಸರಕಾರ ಬಂದ ಮೇಲೆ ಜನ ಭಯಬೀತರಾಗಿದ್ದಾರೆ ಮತ್ತು ಸರಕಾರವನ್ನು ಪ್ರಶ್ನಿಸಲು ಹೆದರುತ್ತಿದ್ದಾರೆ’ ಹೀಗೆ ಹೇಳಿದ್ದು ಸುದೀಪ್. ಹೌದು ಭಯಭೀತರಾಗಿದ್ದಾರೆ, ಆದರೆ ಜನಸಾಮಾನ್ಯರಿಗೆ ಭಯವಿಲ್ಲ. ನನ್ನಂತಹ ಸಾಮಾನ್ಯನಿಗೆ ಭಯವಿಲ್ಲ. ಭಯ ಶುರುಆಗಿರುವುದು ಅಕ್ರಮ ಹಣ ಸಂಪಾದಿಸಿರುವವರಿಗೆ ಮತ್ತು ಸಮಯಕ್ಕೆ ಸರಿಯಾಗಿ ತೆರಿಗೆ ಪಾವತಿಸದೇ ಇರುವವರಿಗೆ. ವ್ಯವ್ಯಸ್ಥೆ ಬದಲಾಗಬೇಕೆಂದರೆ ಕೆಲವೊಂದನ್ನು ಒಪ್ಪಿಕೊಳ್ಳಬೇಕು. ಅದು ಬಿಟ್ಟು ಸಮಯಾವಕಾಶವನ್ನೇ ನೀಡದೆ ‘ಭಯ ಶುರುವಾಗಿದೆ’ ಎನ್ನುವುದು ಅದೆಷ್ಟು ಸರಿ? 2010-11 ರಿಂದ ವ್ರತ್ತಿ ತೆರಿಗೆ ಪಾವತಿಸದ ಸುದೀಪ್ ಇಲಾಖೆಯಿಂದ ನೋಟೀಸ್ ಬರುವವರೆಗೂ ಯಾಕೆ ಕಾದರು? ಹಾಗಾದರೆ ಸುದೀಪ್ ಉದ್ದೇಶವಾದರೂ ಏನು?  ಮೊನ್ನೆ ಅಕ್ಟೋಬರ್ 20ರವರೆಗೂ ನಮ್ಮ ಕನ್ನಡ ಸಿನಿಮಾ ರಂಗದ ಯಾರೊಬ್ಬರೂ ಜಿ.ಎಸ್.ಟಿ. ಪಾವತಿಸಿಲ್ಲ ಯಾಕೆ? ಪಾವತಿಸಿಲ್ಲ ಎಂದು ನಾನು ಹೇಳುತ್ತಿಲ್ಲ,ಬದಲಾಗಿ ಹೇಳಿರುವುದು ವಾಣಿಜ್ಯ ತೆರಿಗೆ ಇಲಾಖೆಯ ಜಂಟಿ ಆಯುಕ್ತರಾಗಿರುವ ಶ್ರೀ ಕೆ ರಾಮನ್ ಅವರು. ಹಾಗಾದರೆ ಸಮಾಜಕ್ಕೆ ಯಾವ ಸಂದೇಶ ಕೊಡಲು ನೀವು ಹೊರಟಿದ್ದೀರಿ ಮಿಸ್ಟರ್ ಸುದೀಪ್?

ಇನ್ನು ನಮ್ಮ ರಾಷ್ಟ್ರಪ್ರಶಸ್ತಿ ವಿಜೇತ ನಟ ಪ್ರಕಾಶ ರೈ ಅವರ ವಿಷಯಕ್ಕೆ ಬರೋಣ. ಮೊನ್ನೆ ಈ ಮನುಷ್ಯ ಒಂದು ಟ್ವೀಟ್ ಮಾಡಿದ್ದರು. ‘ತಾಜ್ ಮಹಲ್ ಯಾವಾಗ ಕೆಡವುತ್ತೀರಿ ಹೇಳಿ ನನ್ನ ಮಕ್ಕಳಿಗೆ ಕೊನೆಯಬಾರಿ ಒಮ್ಮೆ ತೋರಿಸಿಕೊಂಡು ಬರುತ್ತೇನೆ’ ಎಂಬುದೇ ಆ ಟ್ವೀಟ್. ಪ್ರಕಾಶ್ ರೈ ಅವರಿಗೆ ಯಾರು ಹೇಳಿದರು ತಾಜ್ ಮಹಲ್ ಕೆಡವುತ್ತಾರೆ ಎಂದು? ಅಂದರೆ ನೀವು ಯಾರನ್ನೂ ಪ್ರಚೋದಿಸಲು ಹೊರಟಿದ್ದೀರಿ. ಡಿ.ವೈ.ಎಫ್.ಐ. ಸಮಾವೇಶದಲ್ಲಿ ನಿಂತು ಏನೇನೋ ಹೇಳಿ ಕೊನೆಗೆ ನಾನು ಯಾವುದೇ ಸಿದ್ಧಾಂತ ಅಥವಾ ಪಕ್ಷದ ಬೆಂಬಲಿಗನಲ್ಲ ಎನ್ನುವ ನಿಮ್ಮ ಡಬಲ್ ಸ್ಟ್ಯಾಂಡರ್ಡ್ ಬಗ್ಗೆ ಜನರಿಗೆ ಯಾರೂ ಹೇಳಬೇಕಿಲ್ಲ. ಕಾವೇರಿ ವಿಷಯ ಪ್ರಶ್ನಿಸಿದ್ದಕ್ಕೆ ನೇರ ಪ್ರಸಾರದ ಸಂದರ್ಶನವನ್ನು ಧಿಕ್ಕರಿಸಿ ಹೋರಾಟ ನೀವು ಕನ್ನಡಿಗರಿಗೆ ‘ಸಾಮರಸ್ಯದ ಪಾಠ’ ಹೇಳುತ್ತೀರಾ? ಕಾವೇರಿ ಹೋರಾಟದ ಸಮಯದಲ್ಲಿ ಎಲ್ಲಿಗೆ ಹೋಗುತ್ತೀರಿ ನೀವು? ಅದೇ ತಮಿಳುನಾಡಿನ ರೈತರ ಹೋರಾಟವ ಬೆಂಬಲಿಸಿ ದೆಹಲಿಗೆ ಓಡುವ ನಿಮಗೆ ಕರ್ನಾಟಕದ ರೈತರ ಬಗ್ಗೆ ಇರುವ ಕಾಳಜಿಯನ್ನು ಪ್ರಶ್ನಿಸಿದರೆ ಉರಿಯುತ್ತದೆ ಅಲ್ಲವಾ? ಇದನ್ನೇ ನಾವು ಡಬಲ್ ಸ್ಟ್ಯಾಂಡರ್ಡ್ ಎನ್ನುವುದು.

ಒಂದು ವ್ಯವಸ್ಥೆಯನ್ನು ಮತ್ತು ಸಮಾಜವನ್ನು ಪ್ರಶ್ನಿಸುವುದು ತಪ್ಪಲ್ಲ. ಆದರೆ ಅದಕ್ಕೊಂದು ರೀತಿ ನೀತಿಯಿರುತ್ತದೆ. ನಾವು ನಟರುಗಳು ಭಯಂಕರ ಸಾಧಕರು ಎಂಬ ಹುಂಬತನದಿಂದಲೇ ನಿಮ್ಮ ಗೆದ್ದಲು ಹಿಡಿದ ಬುದ್ಧಿಯ ಪ್ರದರ್ಶನ ಮಾಡುತ್ತಿದ್ದೀರಿ ಅಷ್ಟೇ. ಕಾಶ್ಮೀರಿ ಪಂಡಿತರ ಮೇಲಾದ ದಾಳಿಯ ಬಗ್ಗೆ ಮಾತನಾಡದ ನೀವುಗಳು ಇದ್ದಕ್ಕಿದ್ದ ಹಾಗೆಯೇ ತಾಜ್ ಮಹಲ್ ಕೆಡವೋ ವಿಷಯದ ಬಗ್ಗೆ ಮಾತನಾಡುತ್ತೀರಿ ಎಂದರೆ ನಿಮ್ಮ ಮನಸ್ಥಿತಿಯ ಅನಾವರಣ ಆಯಿತು ಅಷ್ಟೇ. ನೀವು ಹೇಳುವಷ್ಟು ಕೆಟ್ಟದಾಗಿ ಜಿ.ಎಸ್.ಟಿ.ಯಂತೂ ಇಲ್ಲ. ಜಿ.ಎಸ್.ಟಿ. ಭಾರತದ ಅರ್ಥವ್ಯವಸ್ಥೆಯ ಬೆಳವಣಿಗೆಗೆ ಸಹಾಯಕವಾಗುವುದಂತೂ ಹೌದು ಆದರೆ ಈ ಆಮೂಲಾಗ್ರ ಬದಲಾವಣೆಗೆ ಸ್ವಲ್ಪ ಸಮಯ ಹಿಡಿಯುತ್ತದೆ. ಇದು ಜನಕ್ಕೂ ಗೊತ್ತು. ಆದರೆ ಒಂದಿಷ್ಟು ಜನ ಜಿ.ಎಸ್.ಟಿ. ಬಗ್ಗೆ ಕೆಟ್ಟ ಅಭಿಪ್ರಾಯ ಬರುವಂತೆ ಮಾಡುತ್ತಿದ್ದಾರೆ.

ಹೋದಲ್ಲಿ ಬಂದಲ್ಲಿ ಮೋದಿಯನ್ನು ವಿರೋಧಿಸುತ್ತಾ, ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಲ್ಲಿ ಕಳ್ಳಾಟಗಳ ಆಡುತ್ತಾ ನಾನು ಯಾವುದೇ ಪಕ್ಷದ ಬೆಂಬಲಿಗನಲ್ಲ ಎನ್ನುವವ ನಿಜ ಜೀವನದಲ್ಲಿಯೂ ನಾನು ದೊಡ್ಡ ನಾಟಕಕಾರ ಎನ್ನುವುದನ್ನು ಸಾಬೀತುಮಾಡುತ್ತಿದ್ದಾನೆ. ಭಾರತೀಯ ಸಂಸ್ಕೃತಿಯನ್ನು ಪ್ರಶ್ನಿಸುವ ಕೆಲವರಿಗೆ ಕಮ್ಮುನಿಸ್ಟರ ದೇಶವಿರೋಧಿ ಚಟುವಟಿಕೆಗಳನ್ನು ಪ್ರಶ್ನಿಸಲು ದಮ್ಮಿಲ್ಲವೇ? ಕೇರಳದಲ್ಲಿ ಹಿಂದೂಗಳ ಮೇಲಾಗುತ್ತಿರುವ ದೌರ್ಜನ ಇವರುಗಳಿಗೆ ಚರ್ಚಿಸುವ ವಿಷಯವೇ ಅಲ್ಲ. ಆದರೆ ಕೋಮುಗಲಭೆಗೆ ಆರ್.ಎಸ್.ಎಸ್. ಕಾರಣ ಎನ್ನಲು ಯಾವುದೇ ಪುರಾವೆ ಬೇಕಾಗುವುದಿಲ್ಲ. ಹೀಗಿರುವವರ ಸಾಮಾಜಿಕ ಬದ್ಧತೆಯನ್ನು ನಾವು ಪ್ರಶ್ನಿಸಬೇಕಲ್ಲವೇ?. ಬಹುಶಃ ಬದಲಾವಣೆಯ ಹಾದಿಯಲ್ಲಿರುವ ಭಾರತ ಇವರುಗಳಿಗೆ ಬೇಕಿಲ್ಲವೇನೋ. ಹೌದು! ಭಾರತ ಬದಲಾಗುತ್ತಿದೆ, ನಮ್ಮೊಳಗಿನವರ ಬೌದ್ಧಿಕ ದಾರಿದ್ರ್ಯತನ ಸ್ಪಷ್ಟವಾಗಿ ಗೋಚರವಾಗುತ್ತಿದೆ. ಇಷ್ಟು ಸಾಕು ಮೋದಿಯನ್ನು ಪ್ರೀತಿಸಲು .   

 

Facebook ಕಾಮೆಂಟ್ಸ್

ಲೇಖಕರ ಕುರಿತು

Prasanna Hegde

ಹೆಸರು ಪ್ರಸನ್ನ ಹೆಗಡೆ.ಹುಟ್ಟಿದ್ದು,ಬೆಳೆದಿದ್ದು ಬದುಕನ್ನ ಅನುಭವಿಸಿದ್ದು ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಸಮೀಪದ ಹಳ್ಳಿಯೊಂದರಲ್ಲಿ.ನನ್ನ camera,ಪ್ರೀತಿಯ ನನ್ನ ನಾಯಿ ಜೊತೆಗಿದ್ದರೆ ನನ್ನನ್ನೂ ನಾ ಮರೆಯುತ್ತೇನೆ.ಹಾಗಾಗಿ ಪಕ್ಕಾ ಮಲೆನಾಡಿನ ಹುಡುಗ.ಅವಶ್ಯಕತೆ,ಅನಿವಾರ್ಯತೆಯ ಕಾರಣ ಬದುಕುತ್ತಿರುವುದು ಮೈಸೂರಿನಲ್ಲಿ.Chartered Accountancy ಯ ಭಾಗವಾದ Articleship ಅನ್ನು ಮಾಡುತ್ತಿದ್ದೇನೆ.ಬರೆಯುವುದು ಕೇವಲ ಹವ್ಯಾಸವಲ್ಲ ನನ್ನ ಜೀವನದ ಅವಿಭಾಜ್ಯ ಅಂಗ.ರಾಜಕೀಯವನ್ನ ನಾನು ಇಷ್ಟಪಡುತ್ತೇನೆ...ಆಸೆಯಿದೆ ಸಮಾಜಕ್ಕೆ ನನ್ನ ಕೈಲಾದಷ್ಟು ನೀಡಬೇಕೆಂಬುದು.. ಮತ್ತೇನು ನನ್ನ ಬಗ್ಗೆ ಹೇಳಿಕೊಳ್ಳುವಂತದ್ದಿಲ್ಲ

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!