Featured ಅಂಕಣ

ಶುಷ್ಕ ಅರ್ಥಶಾಸ್ತ್ರಕ್ಕೆ ಮಾನವೀಯ ಸ್ಪರ್ಶ : ರಿಚರ್ಡ್ ಥೇಲರ್ ಅವರಿಗೆ ನೊಬೆಲ್ ಪ್ರಶಸ್ತಿ

ಗಾಂಧಿ ಬಜಾರಲ್ಲಿ ತರಕಾರಿಯಂಗಡಿಯ ಮುಂದೆ ನಿಂತುಬೆಂಡೆಕಾಯಿ ಎಷ್ಟಮ್ಮ?” ಎಂದು ಕೇಳುತ್ತೀರಿ. “ಕಾಲು ಕೇಜಿಗೆ ಇಪ್ಪತ್ತೇ ರುಪಾಯಿ ಅಣ್ಣಅನ್ನುತ್ತಾಳೆ ನಿಂಗಮ್ಮ. “ಸರಿ, ಕಾಲು ಕೆಜಿ ಕೊಡಮ್ಮಎಂದು ಚೀಲ ತುಂಬಿಸಿಕೊಳ್ಳುತ್ತೀರಿ. ಅದರ ಮರುವಾರ ಮತ್ತೆ ಬಜಾರಲ್ಲಿಅದೇ ಅಂಗಡಿಯ ಮುಂದೆ ಅದೇ ಪ್ರಶ್ನೆ ಕೇಳಿದಿರೆನ್ನಿ. ಸಲ ನಿಂಗಮ್ಮನ ಮಗಳು ಸಂಗವ್ವ ಕೂತಿದ್ದಾಳೆ. ವಯಸ್ಸು, ಅನುಭವ ಕಡಿಮೆ. “ಸ್ವಾಮಿ, ಕೆಜಿಗೆ 80 ರುಪಾಯಿಎನ್ನುತ್ತಾಳಾಕೆ. “ಅಬ್ಬಬ್ಬ! ಅಷ್ಟೊಂದೆ!” ಎಂದು ಮನಸ್ಸಲ್ಲೇ ಹೌಹಾರಿಬಿದ್ದು ಬೇರೆ ತರಕಾರಿಗಳತ್ತ ಗಮನಹರಿಸುತ್ತೀರಿ.

ಇಂಥ ಸನ್ನಿವೇಶಗಳು ಬಹಳಷ್ಟು ಸಲ ನಿಮ್ಮ ಜೀವನದಲ್ಲಿ ಆಗಿರುವಂಥವೇ ತಾನೆ? ಎರಡು ಸನ್ನಿವೇಶಗಳನ್ನು ಗಣಿತ ಅಥವಾ ಕ್ಲಾಸಿಕಲ್ ಎಕನಾಮಿಕ್ಸ್ ಒಂದೇ ರೀತಿಯಲ್ಲಿ ನೋಡುತ್ತವೆ. ಯಾಕೆಂದರೆ ಕಾಲು ಕೇಜಿಗೆ 20 ರುಪಾಯಿ ಅಂದರೂ ಕೇಜಿಗೆ 80 ರುಪಾಯಿ ಅಂದರೂ,ಅವುಗಳ ಪ್ರಕಾರ, ಬೆಲೆಯಲ್ಲಿ ಫರಕು ಇಲ್ಲ. ಎರಡೂ ಸಂದರ್ಭಗಳಲ್ಲಿ ಗ್ರಾಹಕ ಒಂದೇ ಬಗೆಯಲ್ಲಿ ವ್ಯವಹರಿಸುತ್ತಾನೆ ಎಂಬುದು ಅವುಗಳ ಲೆಕ್ಕಾಚಾರ. ಆದರೆ, ಕ್ಲಾಸಿಕಲ್ ಎಕನಾಮಿಕ್ಸ್ ಯೋಚಿಸುವಂತೆ ಜನಸಾಮಾನ್ಯ ಯೋಚಿಸುವುದಿಲ್ಲ. ಅವನ ಮಿದುಳು ಗಣಿತಕ್ಕೆ ಹೊರತಾಗಿ,ಅತ್ಯಂತ ವಿಚಿತ್ರ ರೀತಿಯಲ್ಲಿ ವರ್ತಿಸುವಂಥಾದ್ದು. ಅವನು ಪ್ರತಿಯೊಂದು ಸಂದರ್ಭದಲ್ಲಿ ಅತ್ಯಂತ ಸಮಚಿತ್ತದಿಂದ ಗಣಿತೀಯವಾಗಿ ಎಲ್ಲವನ್ನೂ ಲೆಕ್ಕ ಹಾಕಿ ತಾಳೆ ನೋಡಿ ನಿರ್ಧಾರ ತೆಗೆದುಕೊಳ್ಳುವವನಲ್ಲ. Real human beings act in predictably irrational ways.  –ಹೀಗೆಂದು ಹೇಳುವ ಶಾಸ್ತ್ರವೇ ಬಿಹೇವಿರಲ್ ಎಕನಾಮಿಕ್ಸ್. ಅರ್ಥಾತ್ ವರ್ತನೆಬದ್ಧ ಅರ್ಥಶಾಸ್ತ್ರ. ಮನಃಶಾಸ್ತ್ರ ಮತ್ತು ಅರ್ಥಶಾಸ್ತ್ರಗಳೆರಡನ್ನೂ ಕಸಿಮಾಡಿ ತೆಗೆದಂತಿರುವ ಹೈಬ್ರಿಡ್ ಕೃಷಿಯಲ್ಲಿ ಮುಂಚೂಣಿಯಲ್ಲಿ ಕೆಲಸ ಮಾಡುತ್ತಿರುವ ಡಾ. ರಿಚರ್ಡ್ ಥೇಲರ್ ಅವರಿಗೆ ಈವರ್ಷದ ಅರ್ಥಶಾಸ್ತ್ರದ ನೊಬೆಲ್ ಪ್ರಶಸ್ತಿ ಸಂದಿದೆ.

ಅರ್ಥಶಾಸ್ತ್ರ ಅಂದರೇನೇ ತಲೆನೋವು, ಗಣಿತ ಸೂತ್ರಗಳ ಮುದ್ದೆ. ಇನ್ನು ಅದರಲ್ಲಿ ನೊಬೆಲ್ ಪ್ರಶಸ್ತಿ ಪಡೆದವರ ಸಿದ್ಧಾಂತಗಳು ಎಂದ ಮೇಲೆ ಕೇಳಬೇಕೆ? ಶ್ರೀಸಾಮಾನ್ಯನಿಗೆ ಅರ್ಥವಾಗದ, ಕೆಲವೊಮ್ಮೆ ಪಂಡಿತರ ತಲೆ ಮೇಲಿಂದಲೂ ಹಾರಿಹೋಗುವ ಸಂಕೀರ್ಣ ಲೆಕ್ಕಾಚಾರಗಳಜೇಡರ ಬಲೆ ಅದು. ಅರ್ಥಶಾಸ್ತ್ರಜ್ಞ ಎಂದು ಪರಿಚಯಿಸಿಕೊಂಡವರ ಬಳಿ ಸಾಮಾನ್ಯ ಜನ ಮಾತಿಗಿಳಿಯುವುದಿಲ್ಲ. ಇಳಿದರೂ ಅಪ್ಪಿತಪ್ಪಿಯೂ ಅರ್ಥಶಾಸ್ತ್ರದ ವಿಷಯದಲ್ಲಂತೂ ಚರ್ಚೆಯನ್ನೇ ಮಾಡುವುದಿಲ್ಲ. ಹೆಚ್ಚಾಗಿ ವಿದ್ವನ್ಮಣಿಗಳು ತಮ್ಮ ವಲಯದೊಳಗಿನ ಒಂದಷ್ಟು ಜನಮೇಧಾವಿಗಳಿಗಷ್ಟೇ ಅರ್ಥವಾಗುವ ಭಾಷೆಪರಿಭಾಷೆಯಲ್ಲಿ, ಸ್ತರದಲ್ಲಿ ಮಾತಾಡುತ್ತಿರುತ್ತಾರೆ. ಇದಕ್ಕೊಂದು ದೊಡ್ಡ ಅಪವಾದವೆನ್ನುವಂತೆ ರಿಚರ್ಡ್ ಥೇಲರ್ ನಮನಿಮಗೆ ಅರ್ಥವಾಗುವಂಥ ಭಾಷೆಯಲ್ಲಿ ಅರ್ಥಶಾಸ್ತ್ರದ ಸಂಗತಿಗಳನ್ನು ಹೇಳುತ್ತಾರೆ. ಅವರ ನಡ್ಜ್ ಮತ್ತುಮಿಸ್‍ಬಿಹೇವಿಂಗ್ನಂಥ ಪುಸ್ತಕಗಳು ಯೂನಿವರ್ಸಿಟಿಯ ಲೈಬ್ರರಿ ಕಪಾಟುಗಳಲ್ಲಿ ಮಾತ್ರವಲ್ಲ, ಓದಿನಲ್ಲಿ ಆಸಕ್ತಿಯಿರುವ ಜನಸಾಮಾನ್ಯರ ಮನೆಗಳ ಕಪಾಟುಗಳಲ್ಲೂ ಕಂಡುಬರಬಹುದಾದ ಪುಸ್ತಕಗಳು ಎಂದರೆ ನಿಮಗೆ ಮನುಷ್ಯನ ವಿಶಿಷ್ಟತೆ ಅರ್ಥವಾದೀತು!

ಉಳಿದ ಅರ್ಥಶಾಸ್ತ್ರಿಗಳು ಹೇಳುವ ಕ್ಲಾಸಿಕಲ್ ಥಿಯರಿಗಳಿಗೂ ಥೇಲರ್ ಪ್ರಚುರಪಡಿಸುತ್ತಿರುವ ವರ್ತನೆಬದ್ಧ ಅರ್ಥಶಾಸ್ತ್ರಕ್ಕೂ ಏನು ವ್ಯತ್ಯಾಸ ಎಂಬುದನ್ನು ನಾವು ಮೊದಲು ನೋಡಬೇಕು. ಎರಡು ವಲಯಗಳ ವ್ಯತ್ಯಾಸ ಮುಖ್ಯವಾಗಿ ಕ್ಲಾಸಿಕಲ್ ಫಿಸಿಕ್ಸ್ ಮತ್ತು ಕ್ವಾಂಟಂ ಫಿಸಿಕ್ಸ್ನಡುವಿನ ವ್ಯತ್ಯಾಸದಂತೆಯೇ. ಅದಕ್ಕೆ ಇದು ವಿರೋಧಿಯಲ್ಲ, ಇದಕ್ಕೆ ಅದು ಪ್ರತಿಸ್ಪರ್ಧಿಯಲ್ಲ. ಎರಡೂ ಒಂದಕ್ಕೊಂದು ಪೂರಕ. ಆದರೆ ದೊಡ್ಡ ಜನಸಮೂಹವನ್ನು ತೆಗೆದುಕೊಂಡಾಗ ಸಮೂಹ ಬಹುತೇಕ ಸಂದರ್ಭಗಳಲ್ಲಿ ಹೇಗೆ ವರ್ತಿಸಬಹುದೆಂಬುದನ್ನು ಕ್ಲಾಸಿಕಲ್ ಅರ್ಥಶಾಸ್ತ್ರಊಹಿಸಿದರೆ, ಮನುಷ್ಯ ಕೆಲವೊಂದು ವಿಶೇಷ ಸಂದರ್ಭಗಳಲ್ಲಿ ಗಣಿತ, ತರ್ಕಬದ್ಧ ಲೆಕ್ಕಾಚಾರ ಎಲ್ಲವನ್ನೂ ಬದಿಗಿಟ್ಟು ಅತ್ಯಂತ ಊಹಾತೀತ ರೀತಿಯಲ್ಲಿ ವರ್ತಿಸಿಬಿಡುತ್ತಾನೆ ಎಂದು ಬಿಹೇವಿರಲ್ ಅರ್ಥಶಾಸ್ತ್ರ ಹೇಳುತ್ತದೆ. ವಿಷಯ ಮನದಟ್ಟಾಗಬೇಕಾದರೆ ಎರಡುಉದಾಹರಣೆಗಳನ್ನು ನೋಡಬೇಕು.

ಮೊದಲನೆಯದ್ದುಒಂದು ಪಿಝಾ ಅಂಗಡಿಯಲ್ಲಿ ಕೇವಲ 60 ರುಪಾಯಿಗೆ ಪಿಝಾ ಸಿಗುತ್ತದೆ ಎಂದು ಭಾವಿಸೋಣ. ಈಗ ಅಸ್ತಿತ್ವದಲ್ಲಿರುವ ಎಲ್ಲ ಅಂಗಡಿಗಳಲ್ಲೂ ಪಿಝಾಗಳ ಬೆಲೆ 250ರಿಂದ 400 ರುಪಾಯಿಗಳವರೆಗೆ ಇದೆ. ಹಾಗಿರುವಾಗ 60 ರುಪಾಯಿಗೆ ಪಿಝಾ ಕೊಡುವವನಅಂಗಡಿ ಜನಪ್ರಿಯವಾಗುವುದರಲ್ಲಿ ಯಾವ ಆಶ್ಚರ್ಯವೂ ಇಲ್ಲ. ಕ್ಲಾಸಿಕಲ್ ಎಕನಾಮಿಕ್ಸ್ ಸಂದರ್ಭದಲ್ಲಿ, “ಕಡಿಮೆ ಬೆಲೆಗೆ ಪಿಝಾ ಮಾರುವವನ ಗ್ರಾಹಕರ ಸಂಖ್ಯೆ ಹೆಚ್ಚಾಗುತ್ತದೆಎಂದು ಊಹಿಸುತ್ತದೆ. ಆದರೆ, ಅಂಗಡಿಯನ್ನು ಆತ ಬೆಂಗಳೂರಿನ ಎಂಜಿ ರಸ್ತೆ ಅಥವಾಇಂದಿರಾನಗರದ 80 ಅಡಿ ರಸ್ತೆಯಲ್ಲಿ ತೆಗೆದಿದ್ದರೆ ಅವನಿಗೆ ಬೆರಳೆಣಿಕೆಯಷ್ಟೂ ಗ್ರಾಹಕರು ಹುಟ್ಟದಿರುವ ಸಂದರ್ಭವೂ ಉಂಟು! ನಂಬಲಸಾಧ್ಯವಾದ ಕಡಿಮೆ ದರಕ್ಕೆ ಅವನಲ್ಲಿ ಸರಕು ಸಿಗುತ್ತದೆ ಎಂದಾದರೆ ಅದರ ಗುಣಮಟ್ಟ ಚೆನ್ನಾಗಿಲ್ಲ ಎಂದು ಜನ ಅಂಗಡಿಗೆ ಪ್ರವೇಶಿಸದೇನೇಅಂತಿಮ ನಿರ್ಣಯ ಎಳೆದುಬಿಡುತ್ತಾರೆ. ಕ್ಲಾಸಿಕಲ್ ಸಿದ್ಧಾಂತ ಮಕಾಡೆ ಮಲಗುತ್ತದೆ.

ಎರಡನೆಯ ಉದಾಹರಣೆಸ್ವತಃ ಥೇಲರ್ ರೂಪಿಸಿದ್ದ ಅಲ್ಟಿಮೇಟಮ್ ಗೇಮ್‍ನದ್ದು. ಒಂದು ಆಟದಲ್ಲಿ ಇಬ್ಬರು ಆಟಗಾರರು. ಮತ್ತು ಬಿ ಎನ್ನೋಣ. ಇವರಲ್ಲಿ ಗೆ ಆಟದ ನಿರೂಪಕ 100 ಡಾಲರ್ ಕೊಡುತ್ತಾನೆ. ದುಡ್ಡನ್ನು ಹೇಗೆ ಬೇಕಾದರೂ ವಿಭಾಗಿಸಿ ಅದರಲ್ಲೊಂದುಪಾಲನ್ನು ಬಿಗೆ ಕೊಡಬಹುದು. ಆದರೆ ತನಗೆ ಸಿಕ್ಕ ಪಾಲಿನಲ್ಲಿ ತೃಪ್ತಿಯಾಗಿಲ್ಲವೆಂದರೆ ಆತ ತನ್ನ ಅಸಮ್ಮತಿ ತೋರಿಸಬಹುದು. ಆಗ ಮತ್ತು ಬಿ ಇಬ್ಬರಿಗೂ ದುಡ್ಡನ್ನು (100 ಡಾಲರ್) ನಿರಾಕರಿಸಲಾಗುತ್ತದೆ. ಹಾಗಾದರೆ , ದುಡ್ಡನ್ನು ಹೇಗೆ ವಿಭಾಗಿಸಬೇಕುಎಂಬುದುಗಣಿತ ಮತ್ತು ಕ್ಲಾಸಿಕಲ್ ಎಕನಾಮಿಕ್ಸ್‍ನ ಒಂದು ಪ್ರಶ್ನೆ. ಗಣಿತ ಹೇಳುವ ಪ್ರಕಾರ, ದುಡ್ಡಲ್ಲಿ 99 ಡಾಲರುಗಳನ್ನು ತಾನಿಟ್ಟುಕೊಂಡು 1 ಡಾಲರ್ ಅನ್ನು ಬಿಗೆ ಕೊಟ್ಟರೆ ಸಾಕು. ಯಾಕೆಂದರೆ ಬಿಗೆ ದುಡ್ಡನ್ನು ವಿಭಾಗಿಸುವ ಅಧಿಕಾರ ಹೇಗೂ ಇಲ್ಲ. ಆದರೆ ವಿಭಾಗಿಸಿ ಕೊಟ್ಟದುಡ್ಡಲ್ಲಿ ಎಷ್ಟು ಬಂದರೂ ಅದು ಬಿಗೆ ಲಾಭವೇ. ಅಸಮ್ಮತಿ ಸೂಚಿಸಿದ್ದೇ ಆದರೆ ಆತನಿಗೆ ಬರುವ ದುಡ್ಡೂ ಬರದೆ ಹೋಗುತ್ತದಲ್ಲ? ಹಾಗಾಗಿ ಸಿಗುವ 1 ಡಾಲರ್ ಅನ್ನು ಆತ ಲಾಭ ಎಂದೇ ಭಾವಿಸಿ ಸಮ್ಮತಿ ಸೂಚಿಸುತ್ತಾನೆ. ಗಣಿತದಲ್ಲೇನೋ ಸಮಸ್ಯೆ ಪರಿಹಾರವಾಯಿತು. ಆದರೆನಿಜ ಜೀವನದಲ್ಲಿ ಹೀಗಾಗುತ್ತದೆಯೇ? ದುಡ್ಡು 50-50 ಎಂದು ಭಾಗವಾಗದೆ ಹೋದರೆ ಉಳಿದ ಯಾವ ಬಗೆಯ (ಹೆಚ್ಚಿನ ಭಾಗವನ್ನು ತನ್ನಲ್ಲಿ ಉಳಿಸಿಕೊಂಡು ಕಡಿಮೆ ದುಡ್ಡನ್ನು ಬಿಗೆ ಹಂಚುವ) ಹಂಚಿಕೆಗೂ ಬಿ ಒಪ್ಪುವವನಲ್ಲ. ಥೇಲರ್ ಇದನ್ನು ಪ್ರಾತ್ಯಕ್ಷಿಕೆಯ ಮೂಲಕನಿಜವೆಂದು ಸಾಬೀತುಪಡಿಸಿದರು.

ಬಿಹೇವಿರಲ್ ಎಕನಾಮಿಕ್ಸ್ ಎಂದರೇನು? ಹೆಸರೇ ಹೇಳುವಂತೆ ಅದು ಎಕಾನ್‍ಗಳನ್ನು ಗುರಿಯಾಗಿಸಿಕೊಂಡು ಬೆಳೆಸಿದ ಶಾಸ್ತ್ರವಲ್ಲ (ಎಕಾನ್ ಎಂದರೆ ಎಲ್ಲ ಸಂದರ್ಭಗಳಲ್ಲೂ ಅತ್ಯಂತ ತರ್ಕಬದ್ಧವಾಗಿ, ಗಣಿತೀಯವಾಗಿ ಯೋಚಿಸುವ ಜನ. ಕ್ಲಾಸಿಕಲ್ ಅರ್ಥಶಾಸ್ತ್ರ ಪರಿಗಣಿಸುವುದುಇವರನ್ನೇ). ಬಿಹೇವಿರಲ್ ಅರ್ಥಶಾಸ್ತ್ರದಲ್ಲಿ ಎಕಾನ್‍ಗಳಲ್ಲ, ರಕ್ತಮಾಂಸಗಳಿಂದ ತುಂಬಿದ ಜೀವಂತ ಮನುಷ್ಯರೇ ಪಾತ್ರಧಾರಿಗಳು. ಮನುಷ್ಯನೆಂಬ ವಿಚಿತ್ರ ಪ್ರಾಣಿ ಯಾವ ಕ್ಷಣದಲ್ಲಿ ಹೇಗೆ ಯೋಚಿಸುತ್ತಾನೆ, ವರ್ತಿಸುತ್ತಾನೆ ಎಂದು ಹೇಳಲು ಸಾಧ್ಯವಿಲ್ಲ. ಆದರೂ ಆತ ಗಣಿತವನ್ನುಬದಿಗಿಟ್ಟು ಹೇಗೆ ತಪ್ಪುತಪ್ಪಾಗಿ ಯೋಚಿಸಬಲ್ಲ ಎಂಬುದನ್ನು ಕೂಡ ಸರಿಯಾಗಿ ಗ್ರಹಿಸಬಹುದು! (ಉದಾಹರಣೆಗೆ, ಒಂದು ಕಾರು ಬೆಂಗಳೂರಿಂದ ಮೈಸೂರಿಗೆ ಗಂಟೆಗೆ 80 ಕಿಮೀ ವೇಗದಲ್ಲಿ ಹೋಗಿ ಗಂಟೆಗೆ 120 ಕಿಮೀ ವೇಗದಲ್ಲಿ ವಾಪಸು ಬಂತು. ಅದರ ಸರಾಸರಿ ವೇಗ ಎಷ್ಟುಎಂಬ ಪ್ರಶ್ನೆಗೆ ನೂರರಲ್ಲಿ 99 ಮಂದಿ 100 ಕಿಮೀ/ಗಂ ಎಂಬ ತಪ್ಪು ಉತ್ತರ ಕೊಡುತ್ತಾರೆ. ಇದನ್ನು ಮೊದಲೇ ಊಹಿಸಲು ಸಾಧ್ಯ) ಹೀಗೆ ಮನುಷ್ಯ ಯಾವ ಸಂದರ್ಭದಲ್ಲಿ ಹೇಗೆ ವರ್ತಿಸುತ್ತಾನೆ? ಯಾವ ಸನ್ನಿವೇಶಕ್ಕೆ ಹೇಗೆ ಪ್ರತಿಕ್ರಿಯಿಸುತ್ತಾನೆ? ಎಂಬುದನ್ನು ಮೊದಲಾಗಿಊಹಿಸುವ ಶಾಸ್ತ್ರ ಬಿಹೇವಿರಲ್ ಅರ್ಥಶಾಸ್ತ್ರ. ಹಾಗೆಂದ ಮಾತ್ರಕ್ಕೆ ಇದು ನಿನ್ನೆಮೊನ್ನೆ ಧುತ್ತನೆ ಸೃಷ್ಟಿಯಾದ ಹೊಚ್ಚಹೊಸ ಸಂಗತಿಯೇನಲ್ಲ. ಆಧುನಿಕ ಅರ್ಥಶಾಸ್ತ್ರದ ಪಿತಾಮಹನೆಂದೇ ಖ್ಯಾತನಾದ ಆಡಮ್ ಸ್ಮಿತ್ 1759ರಲ್ಲೇ ತನ್ನಥಿಯರಿ ಆಫ್ ಮೋರಲ್ ಸೆಂಟಿಮೆಂಟ್ಸ್ಎಂಬ ಪ್ರಬಂಧದಲ್ಲಿ ಕುರಿತು ಸಣ್ಣ ಸುಳಿವೊಂದನ್ನು ಕೊಟ್ಟಿದ್ದಾನೆ. ಎಳೆಯನ್ನು ಹಿಡಿದೆಳೆದು ಹೊಸದಾಗಿ ನೇಯ್ದ ಕೀರ್ತಿ ಮಾತ್ರ ಥೇಲರ್ ಮತ್ತು ಅವರ ಹಿಂದಿನ ಹಿರಿಯರಿಗೆ ಸಲ್ಲಬೇಕು. ಹೊಸ ಶಾಸ್ತ್ರ ಹಳೆಯ ಸಾಂಪ್ರದಾಯಿಕ ಅರ್ಥಶಾಸ್ತ್ರವನ್ನು ತಿರಸ್ಕರಿಸುತ್ತದೆಯೇ?ಹಾಗೇನಿಲ್ಲ. ಮೇಲೆ ಹೇಳಿದಂತೆ, ಅದು ಸಾಂಪ್ರದಾಯಿಕ ಅರ್ಥಶಾಸ್ತ್ರಕ್ಕೆ ಮನುಷ್ಯನ ವರ್ತನೆ ಎಂಬ ಹೊಸ ಪದರವೊಂದನ್ನು ಹೊದೆಸುತ್ತದೆ ಅಷ್ಟೆ. ಶಾಸ್ತ್ರ ಸಂಕೀರ್ಣವಾಗುತ್ತದೆಯೇ ಹೊರತು ವಿರೋಧಾಭಾಸಗಳು ಏಳುವುದಿಲ್ಲ.

ಕ್ಲಾಸಿಕಲ್ ಅರ್ಥಶಾಸ್ತ್ರದ ಎಕಾನ್‍ಗಳಿಗೂ ಬಿಹೇವಿರಲ್ ಅರ್ಥಶಾಸ್ತ್ರದ ಮನುಷ್ಯರಿಗೂ ಇರುವ ಮೂಲಭೂತ ವ್ಯತ್ಯಾಸ ಎಂದರೆ ಎಕಾನ್ ಯಾವುದೇ ಸನ್ನಿವೇಶಕ್ಕೆ ಪ್ರತಿಕ್ರಿಯಿಸುವಾಗ ಆತನಿಗೆ ತಾನು ಪರಿಗಣಿಸಬೇಕಾದ ಎಲ್ಲ ಅಂಶಗಳೂ ಅತ್ಯಂತ ಸ್ಪಷ್ಟವಾಗಿರುತ್ತವೆ ಎಂದುನಂಬಲಾಗುತ್ತದೆ. ಆದರೆ ವಾಸ್ತವದಲ್ಲಿ ಎಷ್ಟೋ ಸಂದರ್ಭಗಳಲ್ಲಿ ನಮಗೆ ಗಣಿತ ಅಥವಾ ತರ್ಕ ಅನ್ವಯಿಸಲು ಬೇಕಾದಷ್ಟು ಡೇಟಾ/ಮಾಹಿತಿ ಇರುವುದಿಲ್ಲ. ಉದಾಹರಣೆಗೆ, ಅಂಗಡಿಯೊಂದಕ್ಕೆ ಹೋಗಿ ಕಲ್ಲಂಗಡಿ ತೆಗೆದುಕೊಳ್ಳಬೇಕು ಎನ್ನೋಣ. ಅಂಗಡಿಯಾತ ಹಣ್ಣೊಂದಕ್ಕೆ 30ರುಪಾಯಿ ಎಂದ. ಕ್ಷಣದಲ್ಲಿ ಗ್ರಾಹಕನಿಗೆ, ಮಾರುಕಟ್ಟೆಯಲ್ಲಿ ಕಲ್ಲಂಗಡಿ ಬೆಲೆ ಹೇಗಿದೆ, ಹೋದ ವಾರ ಹೇಗಿತ್ತು ಎಂಬೆಲ್ಲ ಮಾಹಿತಿ ಇರುತ್ತವೆಯೇ? ಹೆಚ್ಚಿನ ಸಂದರ್ಭಗಳಲ್ಲಿಇಲ್ಲ. ಹಾಗಾಗಿ ಸಹಜ ಮನುಷ್ಯರು ಎಷ್ಟೋ ಸಂದರ್ಭಗಳಲ್ಲಿ ತೆಗೆದುಕೊಳ್ಳುವ ನಿರ್ಧಾರಗಳುಗಣಿತೀಯವಾಗಿರುವುದಿಲ್ಲ. ತರ್ಕಬದ್ಧವೂ ಆಗಿರುವುದಿಲ್ಲ. ಎಷ್ಟೋ ಸಂದರ್ಭಗಳಲ್ಲಿ ಮನುಷ್ಯರು ತಪ್ಪು ನಿರ್ಧಾರಗಳಿಂದ ನಷ್ಟ ಮಾಡಿಕೊಳ್ಳುತ್ತಾರೆ. ಮನುಷ್ಯರ ಅರ್ಥ ಅಧ್ಯಯನ ಎಂದರೆ ಹೀಗೆ ಅವರು ಮಾಡುವ ತಪ್ಪು ನಿರ್ಧಾರಗಳನ್ನು ಕೂಡ ಪರಿಗಣಿಸಿ ಮಾಡುವ ಅಧ್ಯಯನಎಂದು ಥೇಲರ್ ಹೇಳುತ್ತಾರೆ. ಮನುಷ್ಯನ ಸ್ವಭಾವ, ವರ್ತನೆಗಳನ್ನು ಅರ್ಥ ಮಾಡಿಕೊಳ್ಳುತ್ತ ಹೋದಂತೆ ಆತನನ್ನು ಬಳಸಿಕೊಂಡು ನಮ್ಮ ಮಾದರಿಗಳನ್ನು ಉತ್ತಮಪಡಿಸಿಕೊಳ್ಳಬಹುದು ಎಂಬುದು ಅವರ ದೃಷ್ಟಿಕೋನ.

ಥೇಲರ್ ಬರೆದಿರುವ ಪುಸ್ತಕಗಳಲ್ಲಿ ಜನಪ್ರಿಯವಾಗಿರುವ ಒಂದು ಪುಸ್ತಕದ ಹೆಸರು ನಡ್ಜ್. ಇಂಗ್ಲೀಷಿನಲ್ಲಿ ಹೀಗೆಂದರೆ, ಯಾವುದೋ ಸಂಗತಿಯ ಕಡೆಗೆ ಗಮನ ಸೆಳೆಯಲು ಒಬ್ಬ ಇನ್ನೊಬ್ಬನ ಪಕ್ಕೆಗೆ ಮೆಲ್ಲನೆ ತಿವಿಯುವುದು ಎಂದು ಅರ್ಥ. ಜನರನ್ನು ಸ್ವಲ್ಪ ಮಟ್ಟಿಗೆ ತಿವಿದು ಎಚ್ಚರಿಸುವಮೂಲಕ ನಮಗೆ ಬೇಕಾದ ಕಾರ್ಯ ಸಾಧಿಸಿಕೊಳ್ಳಬಹುದು ಎಂಬುದನ್ನು ಹಲವು ಆಸಕ್ತಿದಾಯಕ ಉದಾಹರಣೆಗಳ ಮೂಲಕ ವಿವರಿಸುವ ಪುಸ್ತಕ ಇದು. ಪುಸ್ತಕ ಪ್ರಾರಂಭವಾಗುವುದೇ ಒಂದು ಉದಾಹರಣೆಯೊಂದಿಗೆ. ಒಂದು ಶಾಲೆಯ ಕೆಫೆಟೇರಿಯಾದಲ್ಲಿ ಹಣ್ಣು, ಬ್ರೆಡ್ಡು, ಬಿಸ್ಕತ್ತು,ಚಾಕೊಲೇಟು, ಬ್ರೌನೀ ಮುಂತಾದ ಹಲವು ತಿಂಡಿ ತಿನಿಸುಗಳು ಮಾರಾಟಕ್ಕಿದ್ದವಂತೆ. ಮಕ್ಕಳು ವಯೋಸಹಜ ಆಸಕ್ತಿಯಿಂದ ಚಾಕೊಲೇಟ್, ಬ್ರೌನೀ, ಬಿಸ್ಕತ್ತುಗಳಿಗೇ ಮುಗಿಬೀಳುತ್ತಿದ್ದರಂತೆ. ಅವರನ್ನು ಜಂಕ್ ಆಹಾರದಿಂದ ಈಚೆಗೆಳೆದು ಹಣ್ಣುಗಳತ್ತ ಸೆಳೆಯುವುದು ಹೇಗೆ ಎಂದುಒಬ್ಬ ಶಿಕ್ಷಕಿ ತಲೆಕೆಡಿಸಿಕೊಂಡರು. ಕೊನೆಗೆ ಹಣ್ಣುಹಂಪಲು ಮಕ್ಕಳ ಕಣ್ಣಳತೆಗೆ ಕಾಣುವಂತೆಯೂ ಚಾಕೊಲೇಟ್ ಐಟಮ್ಮುಗಳು ಸ್ವಲ್ಪ ದೂರದಲ್ಲಿ, ಇರುವಂತೆಯೂ ವ್ಯವಸ್ಥೆ ಮಾಡಿದರು. ನೋಡನೋಡುತ್ತಿದ್ದಂತೆ ಮಕ್ಕಳು ಬ್ರೌನಿ, ಚಾಕೊಲೇಟ್ ಮೇಲಿನ ಮೋಹ ಇಳಿಸಿಕೊಂಡುಹಣ್ಣುಹಂಪಲಿನಂಥ ಆರೋಗ್ಯಕರ ಆಹಾರದ ಅಭ್ಯಾಸ ಬೆಳೆಸಿಕೊಂಡರು. ಇದನ್ನು ಥೇಲರ್, ನಡ್ಜಿಂಗ್ ಎನ್ನುತ್ತಾರೆ. ಏನನ್ನೂ ನೇರವಾಗಿ ಹೇಳದೆ ಸಣ್ಣ ಸಣ್ಣ ಬದಲಾವಣೆಗಳ ಮೂಲಕ ದೊಡ್ಡದೊಂದು ವ್ಯತ್ಯಾಸ ತರುವಂಥ ಕೆಲಸ ಅದು. ಸೂಪರ್ ಮಾರ್ಕೆಟ್ ಅಥವಾ ಶಾಪಿಂಗ್ಮಾಲ್‍ಗಳಲ್ಲಿ ಇರುವ ಸರಕನ್ನೇ ಅತ್ತಿತ್ತ ಮರುಜೋಡಿಸಿ ಗ್ರಾಹಕರ ಕಣ್ಣು ಸೆಳೆವ ವಸ್ತುಗಳನ್ನು ಮುಂದಿಟ್ಟು ಲಾಭ ಹೆಚ್ಚಿಸಿಕೊಳ್ಳಬಹುದು ಎಂಬುದು ಇಲ್ಲಿ ಕೇವಲ ಪುಸ್ತಕದ ಬದನೆಕಾಯಿ ಅಲ್ಲ. ಅದನ್ನು ಅನುಸರಿಸಿ ಹಲವು ಮಾಲ್‍ಗಳು ಮಿಲಿಯನ್ ಡಾಲರ್ ಲಾಭಗಳನ್ನೂ ಎತ್ತಿದವು!

ಥೇಲರ್ ಸಿದ್ಧಾಂತಗಳನ್ನು ತನ್ನ ಆಡಳಿತದಲ್ಲಿ ಹೇಗೆಲ್ಲ ಬಳಸಿಕೊಳ್ಳಬಹುದು ಎಂದು ಕುತೂಹಲದಿಂದ ಯತ್ನಿಸಿದವರು ಬ್ರಿಟನ್ ಪ್ರಧಾನಿ ಡೇವಿಡ್ ಕ್ಯಾಮರೂನ್. ಬ್ರಿಟನ್‍ನಲ್ಲಿ ಹಿಂದೆ, ನಿವೃತ್ತಿ ವೇತನಕ್ಕಾಗಿ ಸಂಬಳದಿಂದಲೇ ಒಂದು ಭಾಗವನ್ನು ಎತ್ತಿಡಬಹುದು ಎಂಬುದನ್ನು ಹೇಳಲುಉದ್ಯೋಗಿಗಳು ಅರ್ಜಿ ತುಂಬಬೇಕಾಗಿತ್ತು. ಅಂದರೆ ಉದ್ಯೋಗಿಯ ಸಮ್ಮತಿ ಇಲ್ಲದೆ ಆತನ ನಿವೃತ್ತಿ ವೇತನಕ್ಕೆ ಉದ್ಯೋಗದಾತ ಸಂಸ್ಥೆ ದುಡ್ಡು ತುಂಬುತ್ತಿರಲಿಲ್ಲ. ಹಾಗೆ, ಉದ್ಯೋಗ ಮಾಡುತ್ತಿದ್ದ ಸಂದರ್ಭದಲ್ಲಿ ನಿವೃತ್ತಿ ವೇತನದ ಬಗ್ಗೆ ಯೋಚಿಸದ ಕೆಲವು ಉದ್ಯೋಗಿಗಳುನಿವೃತ್ತಿಯಾದ ಮೇಲೆ ನಿಜಕ್ಕೂ ಆರ್ಥಿಕ ಸಂಕಷ್ಟಕ್ಕೆ ಬೀಳುತ್ತಿದ್ದರು. “ಇಲ್ಲೊಂದು ಬದಲಾವಣೆ ಮಾಡಿ. ಉದ್ಯೋಗಕ್ಕೆ ಸೇರಿದ ಪ್ರತಿಯೊಬ್ಬನಿಗೂ ಅವನ ಸಂಬಳದ ಒಂದು ಭಾಗ ನಿವೃತ್ತಿ ವೇತನಕ್ಕೆಂದು ಹೋಗುತ್ತದೆ; ಅಂಥ ಸೌಲಭ್ಯ ಬೇಡವೆನ್ನುವವರು ಅರ್ಜಿ ತುಂಬಿ ಎನ್ನಿ” –ಎಂದು ಥೇಲರ್ ಹೇಳಿದರು. ಒಂದು ಪುಟ್ಟ ಬದಲಾವಣೆಯಿಂದಾಗಿ ದೇಶದಲ್ಲಿ ನಿವೃತ್ತಿ ವೇತನಕ್ಕಾಗಿ ತಾವು ದುಡಿಯುತ್ತಿರುವಾಗ ದುಡ್ಡು ತುಂಬುವವರ ಸಂಖ್ಯೆ ಹೆಚ್ಚಿತು. ಕೇವಲ 4 ವರ್ಷಗಳಲ್ಲಿ ನಿವೃತ್ತಿ ವೇತನಕ್ಕಾಗಿ ಯೋಜಿತ ತಯಾರಿ ಮಾಡಿಕೊಳ್ಳುವವರ ಸಂಖ್ಯೆಯಲ್ಲಿ31% ಏರಿಕೆಯಾಯಿತು! ಅರ್ಜಿಯಲ್ಲಿ ಮಾಡಿದ ಸಣ್ಣದೊಂದು ಸಾಲಿನ ಬದಲಾವಣೆಯಿಂದ ಇದೆಲ್ಲ ಸಾಧ್ಯವಾಯಿತು ಎಂಬುದು ನಂಬಲು ಅಸಾಧ್ಯವಾದರೂ ಸತ್ಯ.

ಥೇಲರ್ ಪ್ರತಿಪಾದಿಸಿದ ಇನ್ನೊಂದು ಸಂಗತಿಹಾಟ್ ಹ್ಯಾಂಡ್ ಫಾಲಸಿಅಥವಾಸರಣಿ ಗೆಲುವಿನ ಮಿಥ್ಯೆಎಂಬುದು. ಕ್ರೀಡೆಗಳಲ್ಲಿ, ಹೆಚ್ಚಾಗಿ ಬಾಸ್ಕೆಟ್‍ಬಾಲ್ ಆಟದಲ್ಲಿ ಯಾರು ಹೆಚ್ಚು ಸಲ ಚೆಂಡನ್ನು ಬಾಸ್ಕೆಟ್ ಒಳಕ್ಕೆ ಹಾಕಿ ಅಂಕ ಗಳಿಸುತ್ತಾನೋ ಅವನೇ ಮತ್ತೂ ಒಂದಷ್ಟುಸಲ ಯಶಸ್ವಿಯಾಗಿ ಚೆಂಡನ್ನು ಬಾಸ್ಕೆಟ್‍ನೊಳಕ್ಕೆ ಕಳಿಸುವ ಸಾಧ್ಯತೆ ಇರುತ್ತದೆ ಎಂದು ಪ್ರೇಕ್ಷಕರು ನಂಬುತ್ತಾರೆ. ಸರಳವಾಗಿ ಹೇಳಬೇಕೆಂದರೆ, ನಾಲ್ಕು ಸಲ ವಿರಾಟ್ ಕೊಹ್ಲಿ ಸೆಂಚುರಿ ಬಾರಿಸಿಬಿಟ್ಟರೆ ಸಾಕು, ಐದನೇ ಬಾರಿ ಆತ ಸೆಂಚುರಿ ಬಾರಿಸುತ್ತಾನೆಂಬ ನಂಬಿಕೆ ಆತನಅಭಿಮಾನಿಗಳಲ್ಲಿ ಮಾತ್ರವಲ್ಲ ಎಲ್ಲ ಪ್ರೇಕ್ಷಕರಲ್ಲಿ ಹೆಚ್ಚಿರುತ್ತದೆ. ಹಿಂದೆ ನಾಲ್ಕೈದು ಬಾರಿ ಗೆದ್ದವನಿಗೆ ಈಗ ಆತ್ಮವಿಶ್ವಾಸ ಹೆಚ್ಚಿರುವುದರಿಂದ ಗೆಲ್ಲುವ ಸಾಧ್ಯತೆ ಹೆಚ್ಚಿರುವುದು ಅಸಹಜವಲ್ಲ ಎಂದು ಸಾಂಪ್ರದಾಯಿಕ ಎಕನಾಮಿಕ್ಸ್ ಕೂಡ ನಂಬುತ್ತದೆ. ಆದರೆ ಇಂಥ ನಂಬಿಕೆಗಳುಕೇವಲ ನಂಬಿಕೆಗಳಷ್ಟೇ; ಅವು ನಿಜವಲ್ಲ ಎಂಬುದನ್ನು ಥೇಲರ್ ಸಾಧಿಸಿ ತೋರಿಸಿದರು. ಒಂದೊಮ್ಮೆ ಮೊಬೈಲ್ ಫೋನ್ ಕ್ಷೇತ್ರವನ್ನಾಳಿದ ನೋಕಿಯಾ ಈಗ ಕುಂಟುತ್ತಿರುವುದು, ಜನಪ್ರಿಯ ನಾಯಕರೆನಿಸಿದವರು ಕೆಲವೇ ವರ್ಷಗಳಲ್ಲಿ ಮೂಲೆಗುಂಪಾಗುವುದು ಮುಂತಾದಪರಿಸ್ಥಿತಿಗಳನ್ನೆಲ್ಲ ಸರಣಿ ಗೆಲುವಿನ ಮಿಥ್ಯೆಯ ಮೂಲಕ ವಿವರಿಸಬಹುದು. ಚಿಕಾಗೋ ವಿಶ್ವವಿದ್ಯಾಲಯದಲ್ಲಿ ಕ್ಲಾಸ್‍ರೂಮ್ ಒಳಗೆ ಪಾಠ ಮಾಡುವ ಥೇಲರ್ ಮಿಥ್ಯೆಯನ್ನು ವಿವರಿಸಲೆಂದು ಬಿಗ್ ಶಾರ್ಟ್ಎಂಬ ಹಾಲಿವುಡ್ ಸಿನೆಮಾದಲ್ಲಿಯೂ ಕಾಣಿಸಿಕೊಂಡದ್ದುಂಟು!

ಬಿಹೇವಿರಲ್ ಅರ್ಥಶಾಸ್ತ್ರ ಕಳೆದ ಹದಿನೈದು ವರ್ಷಗಳಿಂದ ಜೋರಾಗಿ ಸದ್ದುಮಾಡುತ್ತಿದೆ. ನಾವು ಮಾಡುವ ಎಲ್ಲ ಸಮಾಜಶಾಸ್ತ್ರೀಯ ಅಧ್ಯಯನಗಳೂ ಮನುಷ್ಯನ ಮರ್ಕಟ ಮನಸ್ಸಿನ ಹತ್ತು ಮುಖಗಳನ್ನು ಗಣನೆಗೆ ತೆಗೆದುಕೊಳ್ಳಬೇಕು. ಆತನೊಬ್ಬ ಪರಿಪೂರ್ಣ ಪ್ರತಿಭಾವಂತತರ್ಕಶುದ್ಧ ಮೇಧಾವಿ ಎಂಬ ಪೂರ್ವಗ್ರಹದಿಂದ ಹೊರಡದೆ ಆತನೂ ತಪ್ಪು ಮಾಡಬಲ್ಲ; ತಪ್ಪು ನಿರ್ಧಾರಗಳನ್ನು ಕೈಗೊಳ್ಳಬಲ್ಲ; ಅಥವಾ ಕೆಲವೊಮ್ಮೆ ಗಣಿತ, ತರ್ಕ ಎಲ್ಲವನ್ನು ಬದಿಗಿಟ್ಟು ತನ್ನ ಮನಸ್ಸಿಗೆ ಬಂದಂತೆ ವರ್ತಿಸಬಲ್ಲ ಎಂಬುದನ್ನು ಪರಿಗಣಿಸಬೇಕು ಎಂದು ವರ್ತನೆಬದ್ಧಅರ್ಥಶಾಸ್ತ್ರ ನಮ್ಮನ್ನು ಒತ್ತಾಯಿಸುತ್ತದೆ. ಕ್ಷೇತ್ರದಲ್ಲಿ ಸದ್ಯಕ್ಕಂತೂ ಥೇಲರ್ ದೊಡ್ಡ ಹೆಸರು. “ಥಿಂಕಿಂಗ್ ಫಾಸ್ಟ್ ಆಂಡ್ ಸ್ಲೋಎಂಬ ಪ್ರಸಿದ್ಧ, ಜನಪ್ರಿಯ ಕೃತಿ ಬರೆದ ಡೇನಿಯಲ್ ಕೆಹನ್ಮನ್ 2002ರಲ್ಲಿ ಅರ್ಥಶಾಸ್ತ್ರದಲ್ಲಿ ನೊಬೆಲ್ ಪಡೆದಿದ್ದರು. ಅವರ ಕೃತಿ ಬಿಹೇವಿರಲ್ಅರ್ಥಶಾಸ್ತ್ರದ ಪ್ರಾಥಮಿಕ ಪರಿಚಯ ಮಾಡುವ ಮೊದಲ ಕೃತಿ ಎಂದು ಕರೆಸಿಕೊಂಡಿತ್ತು. 2013ರಲ್ಲಿ ರಾಬರ್ಟ್ ಶಿಲರ್ ಇದೇ ಕ್ಷೇತ್ರದಲ್ಲಿ ಎರಡನೇ ನೊಬೆಲ್ ಪಡೆದರು. ಅದಾಗಿ ನಾಲ್ಕು ವರ್ಷಗಳಲ್ಲಿ ಇದೀಗ ಥೇಲರ್ ಮೂರನೆಯವರಾಗಿ ನೊಬೆಲ್ ಪುರಸ್ಕೃತರಾಗಿದ್ದಾರೆ. ಥೇಲರ್ಅವರ ಶಿಷ್ಯನೊಬ್ಬ ಹೀಗೆ ಉದ್ಗರಿಸಿದ್ದಾನೆ: ಮನುಷ್ಯರು ತಪ್ಪು ಮಾಡುತ್ತಾರೆ ಎಂದು ಪ್ರತಿಪಾದಿಸಿದ ಥೇಲರ್ ಅವರಿಗೆ ನೊಬೆಲ್! ವಿಷಯದಲ್ಲಿ ಪ್ರಶಸ್ತಿ ಸಮಿತಿಯವರು ತಪ್ಪು ಆಯ್ಕೆ ಮಾಡಲಿಲ್ಲ ಎಂಬುದು ಮಾತ್ರ ಸಂತೋಷದ ಸಂಗತಿ!

 

Facebook ಕಾಮೆಂಟ್ಸ್

ಲೇಖಕರ ಕುರಿತು

Rohith Chakratheertha

ಓದಿದ್ದು ವಿಜ್ಞಾನ, ಮುಖ್ಯವಾಗಿ ಗಣಿತ. ಬೆಂಗಳೂರಿನಲ್ಲಿ ನಾಲ್ಕು ವರ್ಷ ಉಪನ್ಯಾಸಕನಾಗಿ ಕಾಲೇಜುಗಳಲ್ಲಿ ಪಾಠ ಮಾಡಿದ್ದ ಇವರು ಈಗ ಒಂದು ಬಹುರಾಷ್ಟ್ರೀಯ ಕಂಪೆನಿಯಲ್ಲಿ ಉದ್ಯೋಗಿ. ಹವ್ಯಾಸವಾಗಿ ಬೆಳೆಸಿಕೊಂಡದ್ದು ಬರವಣಿಗೆ. ಐದು ಪತ್ರಿಕೆಗಳಲ್ಲಿ ಸದ್ಯಕ್ಕೆ ಅಂಕಣಗಳನ್ನು ಬರೆಯುತ್ತಿದ್ದು ವಿಜ್ಞಾನ, ಗಣಿತ, ವ್ಯಕ್ತಿಚಿತ್ರ, ಮಕ್ಕಳ ಕತೆ ಇತ್ಯಾದಿ ಪ್ರಕಾರಗಳಲ್ಲಿ ಇದುವರೆಗೆ ೧೩ ಪುಸ್ತಕಗಳ ಪ್ರಕಟಣೆಯಾಗಿವೆ. ಉದ್ಯೋಗ ಮತ್ತು ಬರವಣಿಗೆಯಿಂದ ಬಿಡುವು ಸಿಕ್ಕಾಗ ತಿರುಗಾಟ, ಪ್ರವಾಸ ಇವರ ಖಯಾಲಿ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!