Featured ಅಂಕಣ

ವಿಕ್ರಮ ಮತ್ತು ಬೇತಾಳ (ಒಂದು ಹೊಸಾ ಕಥೆ)

ಛಲ ಬಿಡದ ವಿಕ್ರಮ ದೀಪಾವಳಿ ಅಮಾವಾಸ್ಯೆಯ ಆ ರಾತ್ರಿ ಮತ್ತೆ ಸ್ಮಶಾನಕ್ಕೆ ಹೋಗಿ ಬೇತಾಳವನ್ನು ಹೆಗಲಿಗೇರಿಸಿಕೊಂಡು ಖಡ್ಗವನ್ನು ಕೈಯಲ್ಲಿ ಹಿಡಿದು ನಡೆಯತೊಡಗಿದನು. ವಿಕ್ರಮನ ಬೆನ್ನೇರಿದ ಬೇತಾಳ ಪ್ರತೀ ಸಾರಿಯಂತೆ ಮತ್ತೊಂದು ಹೊಸಾ ಕಥೆ ಹೇಳಲು ಶುರು ಮಾಡಿತು.

ರಾಜಾ ವಿಕ್ರಮಾ,ಒಂದಾನೊಂದು ಕಾಲದಲ್ಲಿ ಮಹೇಶನೂರು ಎನ್ನುವ ರಾಜ್ಯದಲ್ಲಿ ಜನಾನುರಾಗಿಯಾಗಿದ್ದ ರಾಜನ ಆಡಳಿತದಲ್ಲಿ ಪ್ರಜೆಗಳು ಸುಖ ಸಂತೋಷದಿಂದ್ದ ಬಾಳುತ್ತಿದ್ದರು. ಒಂದು ದಿನ ಅಲ್ಲಿಗೆ ಮಾಯನ್ಮಾರು ದೇಶದಿಂದ ಹೊಡೆದಟ್ಟಿಸಿಕೊಂಡು ಬಂದ ನಿರಾಶ್ರಿತನೊಬ್ಬ ಆಶ್ರಯ ಬಯಸಿ ರಾಜನ ಆಸ್ಥಾನಕ್ಕೆ ಬಂದು ಬೇಡಿಕೊಂಡ. ಕರುಣಾಮಯಿಯಾಗಿದ್ದ ಮಹಾರಾಜನು ಆತನಿಗೆ ತನ್ನ ಸೈನ್ಯದಲ್ಲಿ ಒಂದು ಜವಾಬ್ದಾರಿಯುತ ಸ್ಥಾನವನ್ನು ನೀಡಿದ. ಆದರೆ ತನಗೆ ಆಶ್ರಯ ನೀಡಿದ ರಾಜ ಮರಣಹೊಂದಿದ ನಂತರ ತನ್ನ ನಿಜ ಬುದ್ದಿಯನ್ನು ತೋರಿಸಿದ ಆ ನಿರಾಶ್ರಿತ ಆ ರಾಜಕುಟುಂಬದವರಿಂದ ಅಧಿಕಾರವನ್ನು ಕಿತ್ತುಕೊಂಡು ತಾನೇ ಆಡಳಿತ ನಡೆಸತೊಡಗಿದ. ನಂತರ ತನಗೆ ಆಶ್ರಯ ನೀಡಿದ್ದ ರಾಜನ ಕುಟುಂಬದವರನ್ನು ಅತಿ ಹೀನಾಯವಾಗಿ ನಡೆಸಿಕೊಂಡ. ಮಾಯನ್ಮಾರೀ ನಿರಾಶ್ರಿತ ರಾಜನ ಮರಣಾನಂತರ ಆತನ ಮಗ ಅಧಿಕಾರಕ್ಕೇರಿದ.”

ಇಷ್ಟು ಹೇಳಿ ಬೇತಾಳ ವಿಕ್ರಮನ ಇನ್ನೊಂದು ಹೆಗಲಿಗೆ ತನ್ನ ತಲೆಯನ್ನು ಬದಲಾಯಿಸಿ, “ವಿಕ್ರಮಾ, ಕೇಳಿಸಿಕೊಳ್ಳುತ್ತಿರುವೆ ತಾನೇ?ನಾನೊಬ್ಬನೇ ಮಾತನಾಡಿದರೆ ಹೇಗೆ? ಕಥೆ ಹೇಳುತ್ತಿರುವೆ. ಕೊನೆಯ ಪಕ್ಷ ಹೂಮ್ಮ್ ಹೂಮ್ಮ್.. ಅಂತಾದರೂ ಹೇಳಬಾರದೇ?ಎಂದಿತು.

ವಿಕ್ರಮ, ಕೇಳಿಸಿಕೊಳ್ಳುತ್ತಿರುವೆ ಎನ್ನುವಂತೆ ತಲೆಯಾಡಿಸಿ, ಸಣ್ಣಗೆ ನಗುತ್ತಾ ಮುಂದೆ ನಡೆಯತೊಡಗಿದ.

ಬೇತಾಳಕ್ಕೆ ವಿಕ್ರಮನ ಬಾಯಿಯಿಂದ ಅಷ್ಟು ಸುಲಭದಲ್ಲಿ ಮಾತು ಹೊರಡಿಸಲಾಗದು ಎನ್ನುವುದು ಈ ಮೊದಲೇ ತಿಳಿದಿದ್ದರಿಂದಸರಿ ರಾಜನ್, ಮಾತನಾಡಲು ಇಷ್ಟವಿಲ್ಲದಿದ್ದಲ್ಲಿ ಬೇಡ, ಕಥೆಯನ್ನಾದರೂ ಪೂರ್ತಿಯಾಗಿ ಕೇಳಿಸಿಕೋಎಂದುಹೇಳಿ ತಾನು ಹೇಳುತ್ತಿದ್ದ ಕಥೆಯನ್ನು ಮುಂದುವರಿಸಿತು.

“ಆತನ ಮಗ ಅಧಿಕಾರಕ್ಕೆ ಬಂದ ನಂತರ ತನ್ನ ತಂದೆಗೆ ಆಶ್ರಯ ನೀಡಿದ್ದ ರಾಜನ ಕುಟುಂಬಕ್ಕೆ ಆಪ್ತರಾಗಿದ್ದವರನ್ನೆಲ್ಲಾ ಬೀದಿಬೀದಿಯಲ್ಲಿ ಕಡಿದು ರಕ್ತ ಹರಿಸಿದ. ಅಕ್ಕ ಪಕ್ಕದ ರಾಜ್ಯಗಳನ್ನೆಲ್ಲಾ ಆಕ್ರಮಿಸತೊಡಗಿದ. ತನಗಾಗದವರನ್ನೆಲ್ಲಾ ಆನೆಯ ಕಾಲಿಗೆ ಕಟ್ಟಿ ನೂರಾರು ಮೈಲಿಗಳವರೆಗೆ ಎಳೆಸಿಕೊಂಡು ಬಂದು ಕೊಂದು ಹಾಕಿದ. ತನ್ನ ಧರ್ಮದವರಲ್ಲದವರೆಲ್ಲರನ್ನೂ ಕೊಲ್ಲುವೆನೆಂದು ತನ್ನ ಖಡ್ಗದ ಮೇಲೇ ಬರೆಸಿಕೊಂಡ ಆತ ಜೀವಭಯದಿಂದ ಒಪ್ಪಿದವರನ್ನು ಮತಾಂತರಿಸಿದ,ಒಪ್ಪದವರ ರುಂಡಗಳನ್ನು ಭೀಕರವಾಗಿ ಕಡಿದು ಚೆಲ್ಲಿದ.

ಹೀಗಿರುವಾಗ ಆತನ ರಾಜ್ಯದ ಮೇಲೆ ಬ್ರಿಟೇಶ್ ಕಳ್ಳಪ್ಪ ಎನ್ನುವ ಪರದೇಶೀ ರಾಜ ಕಣ್ಣು ಹಾಕಿದ. ಇದೇ ಸಮಯದಲ್ಲಿ ತನ್ನದೇ ರಾಜ್ಯದ ಗಡಿಯಲ್ಲಿ ತನ್ನದೇ ರಾಜ್ಯದೊಳಕ್ಕೆ ನುಗ್ಗಿ ಮೆಣಸಿನ ಕಾಳು ಕದಿಯಲು ಹೊಂಚು ಹಾಕಿ ಕುಳಿತಿದ್ದ ಫ್ರೆಂಚಪ್ಪನೆನ್ನುವ ಕಳ್ಳನ ಸ್ನೇಹ ಬೆಳೆಸಿ ಆತನೊಂದಿಗೆ ಸೇರಿ ಬ್ರಿಟೇಶ್ ಕಳ್ಳಪ್ಪನನ್ನು ಸೋಲಿಸಲು ಪ್ರಯತ್ನಪಟ್ಟು ಕೊನೆಗೆ ತಾನೇ ಹೆಣವಾದ.”

ಇಷ್ಟು ಹೇಳಿ ಬೇತಾಳ, ವಿಕ್ರಮನೆಡೆ ತಿರುಗಿ,”ನೋಡಿದೆಯಾ ವಿಕ್ರಮಾ..ತಾನೇ ಪರದೇಶಿಯಾಗಿದ್ದರೂ ಆಶ್ರಯ ನೀಡಿದ ರಾಜ್ಯವನ್ನೇ ಆಕ್ರಮಿಸಿ ಅಲ್ಲಿನ ಪ್ರಜೆಗಳನ್ನೇ ಹಿಂಸಿಸಿದ್ದಕ್ಕೆ ಆತನಿಗೆ ಸಿಕ್ಕ ಪ್ರತಿಫಲ? ಅಷ್ಟಕ್ಕೂ ಕಳ್ಳನೊಬ್ಬ ಕಳ್ಳನೊಬ್ಬನನ್ನು ಸೋಲಿಸಲು ಇನ್ನೊಬ್ಬ ಕಳ್ಳನನ್ನು ಆಶ್ರಯಿಸಿದ್ದು ತಪ್ಪಲ್ಲವೇ?

ಅಷ್ಟೇ ಆಗಿದ್ದರೆ ಪರವಾಗಿಲ್ಲ. ಆದರೆ ಅದಾದ ಕೆಲವು ತಲೆಮಾರಿನ ನಂತರ ಅದೇ ಮಹೇಶನೂರು ರಾಜ್ಯದಲ್ಲಿ ಎಲ್ಲವನ್ನೂ ಮರೆತು ಇನ್ನೇನು ನೆಮ್ಮದಿಯಿಂದ ಬದುಕಬಹುದು ಎಂದು ಪ್ರಜೆಗಳೆಲ್ಲಾ ಯೋಚಿಸುತ್ತಿದ್ದಾಗ ಮಾಯನ್ಮಾರೀ ನಿರಾಶ್ರಿತ ಮಹೇಶನೂರು ರಾಜನ ದೂರದ ಸಂಬಂಧಿಯೊಬ್ಬ ಅದೇ ರಾಜ್ಯದಲ್ಲಿ ನಾಡ ದೊರೆಯಾಗಿ ಪಟ್ಟಕ್ಕೇರಿದ. ಯಾವ ರಾಜ್ಯದ ಜನಯಾರಿಗೆ ಹೆದರಿ ಮತಾಂತರಗೊಂಡಿದ್ದರೋ, ಯಾವ ರಾಜ್ಯದ ಜನ ಯಾರ ಕತ್ತಿಗೆ ಬಲಿಯಾಗಿದ್ದರೋ, ಯಾವ ರಾಜ್ಯದ ಜನ ಯಾರಿಂದಾಗಿ ತಮ್ಮ ಸರ್ವಸ್ವವನ್ನೂ ಕಳೆದುಕೊಂಡಿದ್ದರೋ ಅದೇ ವ್ಯಕ್ತಿಯನ್ನು ತಮ್ಮದೇ ದುಡ್ಡು ಖರ್ಚು ಮಾಡಿ ವರ್ಷಕ್ಕೊಮ್ಮೆ ಪೂಜಿಸಿ ಹಾಡಿ ಹೊಗಳಬೇಕೆಂದೂ, ಆತನ ಹೋರಾಟದ ಫಲದಿಂದಲೇ ನಾವಿಂದು ಸ್ವತಂತ್ರವಾಗಿ ಸಂತೋಷದಿಂದ ಬದುಕುತ್ತಿದ್ದೇವೆಂದು ಭಾಷಣ ಮಾಡಬೇಕೆಂದೂ, ಆತ ನಿಮ್ಮ ಪೂರ್ವಜರನ್ನು ಕೊಂದ ಹಬ್ಬದ ದಿನದಂದೇ ಆತನ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಿ ಆತನ ಗುಣಗಾನ ಮಾಡಬೇಕೆಂದೂ ನಾಡದೊರೆ ಸುತ್ತೋಲೆ ಹೊರಡಿಸಿದ.

ನಾಡಿನ ಪ್ರಜೆಗಳಿಗೆ ಪೀಕಲಾಟ ಶುರುವಾಯಿತು. ನಮ್ಮ ಬದುಕನ್ನು ಹಾಳು ಮಾಡಿದವನನ್ನೇ ನಾವು ಪೂಜಿಸುವುದಾದರೂ ಏಕೆ? ನಮ್ಮ ಪೂರ್ವಜರನ್ನು ಅತ್ಯಂತ ಕ್ರೂರವಾಗಿ ಕೊಂದವನನ್ನೇ ನಾವು ಹೊಗಳಬೇಕಾದರೂ ಏಕೆ ಎಂದು ಬಹಿರಂಗವಾಗಿ ಪ್ರಶ್ನಿಸತೊಡಗಿದರು. ಆದರೆ ಸರ್ವಾಧಿಕಾರಿಯಾಗಿದ್ದ ರಾಜ ಪ್ರಜೆಗಳ ಯಾವ ಮಾತಿಗೂ ಸೊಪ್ಪು ಹಾಕಲಿಲ್ಲ. ರಾಜ್ಯದಲ್ಲಿ ಆ ಮಾಯನ್ಮಾರೀ ನಿರಾಶ್ರಿತ ರಾಜನ ವಂಶಸ್ಥರನ್ನು ಹೊರತುಪಡಿಸಿ ಉಳಿದ ಯಾರಿಗೂ ಆತನ ಹುಟ್ಟು ಹಬ್ಬದ ಸಂಭ್ರಮ ಬೇಡದ ವಿಷಯವಾಗಿತ್ತು. ಆದ್ದರಿಂದ ರಾಜನ ಆ ಸುತ್ತೋಲೆಯನ್ನು ಬಹಿರಂಗವಾಗಿಯೇ ವಿರೋಧಿಸತೊಡಗಿದರು. ಆ ಮಾಯನ್ಮಾರೀ ನಿರಾಶ್ರಿತ ಮಹೇಶನೂರು ರಾಜನನ್ನು ಹಾಡಿ ಹೊಗಳುವ ಬದಲು ಆತ ಇತಿಹಾಸದಲ್ಲಿ ಎಸಗಿದ್ದ ಘೋರ ಪಾತಕಗಳನ್ನು ಒಂದೊಂದಾಗಿ ಹೊರಗೆಳೆಯತೊಡಗಿದರು. ಅದುವರೆಗೂ ಮುಚ್ಚಿಟ್ಟಿದ್ದ ಆತನ ಕರಾಳ ಇತಿಹಾಸವನ್ನು ಒಂದೊಂದಾಗಿ ಬಿಚ್ಚಿಡತೊಡಗಿದರು.

ರಾಜಾ ವಿಕ್ರಮಾ, ಈಗ ನೀನೇ ಹೇಳು. ಆ ಮಾಯನ್ಮಾರೀ ನಿರಾಶ್ರಿತ ಮಹೇಶನೂರು ರಾಜನ ಸಂಬಂಧಿಯೊಬ್ಬ ತಾನು ಅಧಿಕಾರಕ್ಕೇರಿದಾಗ ತನ್ನ ಪೂರ್ವಜರೊಬ್ಬನನ್ನು ಇಡೀ ರಾಜ್ಯ ಸ್ಮರಿಸಲಿ ಎಂದು ಆಶಿಸಿದ್ದು ತಪ್ಪೇ? ತನ್ನ ಪೂರ್ವಜನ ಶಕ್ತಿ ಪರಾಕ್ರಮಗಳನ್ನು ನನ್ನ ಪ್ರಜೆಗಳು ಹಾಡಿ ಹೊಗಳಬೇಕೆಂದು ನಿರೀಕ್ಷಿಸಿದ್ದು ತಪ್ಪೇ? ತನ್ನ ಪೂರ್ವಜನೊಬ್ಬನ ಹೆಸರಿನಲ್ಲಿ ಹಬ್ಬವನ್ನಾಚರಿಸಲು ತನ್ನದೇ ಪ್ರಜೆಗಳಿಂದ ಪಡೆದ ತೆರಿಗೆ ಹಣವನ್ನು ಬಳಸಿದ್ದು ತಪ್ಪೇ ಅಥವಾ ರಾಜಾ ಪ್ರತ್ಯಕ್ಷ ದೇವತಾ ಎನ್ನುವುದು ತಿಳಿದಿದ್ದೂ ಪ್ರಜೆಗಳು ನಾಡ ದೊರೆಯ ಆದೇಶದ ವಿರುದ್ಧ ತಿರುಗಿ ಬಿದ್ದಿದ್ದು ತಪ್ಪೇ?

ಪ್ರಜೆಗಳ ಆಯ್ಕೆ ಏನಿರಬೇಕು? ತಮ್ಮ ಪೂರ್ವಜರನ್ನು ಕ್ರೂರವಾಗಿ ನಡೆಸಿಕೊಂಡು ಕೊಂದು ಹಾಕಿದ ವ್ಯಕ್ತಿಯನ್ನು ಆರಾಧಿಸಿ ಪಿತಾಮಹರಿಂದ ಶಾಪ ಪಡೆಯಬೇಕೆ ಅಥವಾ ನಾಡ ದೊರೆಯ ಆದೇಶವನ್ನು ಧಿಕ್ಕರಿಸಿ ರಾಜದ್ರೋಹದ ಆಪಾದನೆ ಎದುರಿಸಿ ರಾಜ್ಯಭ್ರಷ್ಟರಾಗಬೇಕೇ? ಅಷ್ಟಕ್ಕೂ ರಾಜನೊಬ್ಬ ಹಿಂದೆಂದೂ ಇರದ ಒಂದು ಹೊಸಾ ಸಂಪ್ರದಾಯವನ್ನು ತನ್ನ ಬಹುಸಂಖ್ಯಾತ ಪ್ರಜೆಗಳ ವಿರೋಧದ ನಡುವೆಯೂ ಹುಟ್ಟು ಹಾಕುವ ಅವಶ್ಯಕತೆಯಾದರೂ ಏನಿದ್ದಿತ್ತು? ರಾಜನಿಗೆ ತನ್ನ ರಾಜ್ಯದಲ್ಲಿ ಏನೇನು ಮಾಡಬೇಕೆನ್ನುವ ಸಂಪೂರ್ಣ ಅಧಿಕಾರ ಇದ್ದಾಗಿಯೂ ಅದನ್ನು ವಿರೋಧಿಸಲು ಪ್ರಜೆಗಳಿಗೆ ಹಕ್ಕಿದೆಯೇ? ಇಲ್ಲಿ ರಾಜನದ್ದು ಉದ್ಧಟತನವೇ ಅಥವಾ ಪ್ರಜೆಗಳದ್ದೇ? ಈಗ ಇದೊಂದು ಬಿಡಿಸಲಾಗದ ಸಮಸ್ಯೆಯಾಗಿ ಕುಳಿತಿದೆ. ಈ ಸಮಸ್ಯೆಯನ್ನು ಆದಷ್ಟು ಶೀಘ್ರವಾಗಿ ಪರಿಹರಿಸದಿದ್ದರೆ ಮುಂದೆ ಆ ರಾಜ್ಯದಲ್ಲಿ ಅರಾಜಕತೆ ತಲೆದೋರಿಬಿಡಬಹುದು!”

ಬೇತಾಳ ವಿಕ್ರಮನ ಇನ್ನೊಂದು ಹೆಗಲ ಮೇಲೆ ತನ್ನ ತಲೆ ಬದಲಾಯಿಸಿ, “ರಾಜಾ, ನೀನು ಬಹಳ ಬುದ್ದಿವಂತ ಎಂದು ಕೇಳಿದ್ದೇನೆ. ನಿಮ್ಮ ರಾಜ್ಯದ ಜನರ ಸಮಸ್ಯೆಗಳನ್ನು ಅತ್ಯಂತ ಸುಲಭದಲ್ಲಿ ನಿವಾರಿಸುತ್ತಿರುವೆ ಎನ್ನುವುದನ್ನೂ ಕೇಳಿದ್ದೇನೆ. ಆ ರಾಜ್ಯದ ರಾಜ ಅಥವಾ ಆ ರಾಜ್ಯದ ಒಬ್ಬ ಪ್ರಜೆಯಲ್ಲದೇ ಮೂರನೇ ವ್ಯಕ್ತಿಯಾಗಿ ಇಂತಹದ್ದೊಂದು ಸಮಸ್ಯೆಗೆ ನಿನ್ನ ಅಭಿಪ್ರಾಯವೇನು? ಮಹೇಶನೂರು ನಾಡಿನ ದೊರೆ ಮಾಡಿದ್ದು ಸರಿಯೇ ಅಥವಾ ಮಹೇಶನೂರು ಪ್ರಜೆಗಳು ಮಾಡುತ್ತಿರುವುದು ಸರಿಯೇ? ಪ್ರಜೆಗಳು ತಮ್ಮ ನಿರ್ಧಾರದಲ್ಲಿ ಏನಾದರೂ ಬದಲಾಯಿಸಿಕೊಳ್ಳಬೇಕೇ ಅಥವಾ ನಾಡ ದೊರೆ ತನ್ನ ನಿರ್ಧಾರದಲ್ಲಿ ಏನಾದರೂ ಬದಲಾಯಿಸಿಕೊಳ್ಳಬೇಕೇ? ನೀನು ಸಮಸ್ಯೆಗೆ ಸಮಾಧಾನಕರ ಉತ್ತರ ನೀಡಬೇಕು.” ಎಂದಿತು.

ಬೇತಾಳನ ಪ್ರಶ್ನೆ ಕೇಳಿಯೂ,ವಿಕ್ರಮಾದಿತ್ಯ ಏನೊಂದೂ ಮಾತನಾಡದೆ ಮೌನವಾಗಿ ನಡೆಯುತ್ತಲೇ ಇದ್ದ. ಬೆನ್ನು ಹತ್ತಿ ಕುಳಿತ ಬೇತಾಳ ಪಟ್ಟು ಬಿಡದೆ ಕೋಪಗೊಂಡಂತೆ ನಟಿಸುತ್ತಾ ವಿಕ್ರಮನೆಡೆ ತಿರುಗಿ, “ರಾಜಾ, ನನ್ನ ಪ್ರಶ್ನೆಗೆ ನೀನು ಉತ್ತರ ನೀಡಿಲ್ಲ. ಉತ್ತರ ತಿಳಿದಿಲ್ಲವೇ? ಅಥವಾ ತಿಳಿದೂ ಹೇಳುತ್ತಿಲ್ಲವೆ? ಉತ್ತರ ತಿಳಿಯದಿದ್ದಲ್ಲಿ ಸೋತೆನೆಂದು ಒಪ್ಪಿಕೊ. ತಿಳಿದೂ ನೀನು ಹೇಳದಿದ್ದಲ್ಲಿ ನಿನ್ನ ತಲೆ ಸಿಡಿದು ನೂರು ಹೋಳಾಗುವುದು ಜಾಗ್ರತೆ.ಎಂದು ಬೆದರಿಸಿತು.

ಆಗ ರಾಜಾ ವಿಕ್ರಮನು ತನ್ನ ಮೌನ ಮುರಿದು,”ಎಲೈ ಬೇತಾಳವೆ,ನಿನ್ನ ಪ್ರಶ್ನೆಗಳು ಉತ್ತರಿಸಲಾರದಷ್ಟು ಕಷ್ಟಕರವಾದದ್ದೇನೂ ಅಲ್ಲ. ನನ್ನ ತಲೆ ನೂರು ಹೋಳಾಗಲಿದೆ ಎಂಬ ಭಯದಿಂದ ಅಲ್ಲ, ಒಬ್ಬ ರಾಜನಾಗಿ ನ್ಯಾಯಯುತವಾದ ಉತ್ತರ ನೀಡುವುದು ಧರ್ಮವೆಂದು ತಿಳಿದು ಉತ್ತರ ಕೊಡುತ್ತೇನೆ ಕೇಳು“ಎಂದು ತನ್ನ ಅಭಿಪ್ರಾಯವನ್ನು ಹೇಳತೊಡಗಿದನು.

“ಒಬ್ಬ ನಾಡ ದೊರೆಯಾಗಿ ಆತನಿಗೆ ಸರಿ ಕಂಡ ನಿರ್ಧಾರವನ್ನು ಆತ ತೆಗೆದುಕೊಳ್ಳುವುದರಲ್ಲಿ ತಪ್ಪಿಲ್ಲ. ಅಲ್ಲದೆ ಆತ ಅದೇ ಮಾಯನ್ಮಾರೀ ನಿರಾಶ್ರಿತ ಮಹೇಶನೂರು ರಾಜನ ಕುಟುಂಬದೊಂದಿಗೆ ಕರುಳುಬಳ್ಳಿ ಸಂಬಂಧ ಹೊಂದಿದವನಾದ್ದರಿಂದ ತನ್ನ ಪೂರ್ವಜನನ್ನು ತನ್ನ ರಾಜ್ಯದ ಪ್ರಜೆಗಳೆಲ್ಲಾ ನೆನೆಯಲಿ, ಹಾಡಿ ಹೊಗಳಲಿ ಎಂದು ಆಶಿಸುವುದರಲ್ಲೂ ತಪ್ಪಿಲ್ಲ. ಇಡೀ ರಾಜ್ಯದ ಆಡಳಿತವೇ ಆತನ ಕೈಯಲ್ಲಿರುವುದರಿಂದ ಖಜಾನೆಯ ಹಣವನ್ನು ಆತ ತನ್ನ ಪೂರ್ವಜನ ನೆನಪಿನ ಹಬ್ಬವನ್ನಾಚರಿಸಲು ಖರ್ಚು ಮಾಡುವುದರಲ್ಲೂ ಏನೇನೂ ತಪ್ಪಿಲ್ಲ.

ಆದರೆ ಅದೇ ರೀತಿ ಪ್ರಜೆಗಳೆಲ್ಲರೂ ತಮ್ಮ ಪೂರ್ವಜರು ಆತನಿಂದಾಗಿ ಅನುಭವಿಸಿದ ಕಷ್ಟಗಳನ್ನು ನೆನೆದು ರಾಜನು ರಾಜ್ಯದಲ್ಲಿ ಪ್ರಾರಂಭಿಸಿದ ಆ ಹೊಸಾ ಆಚರಣೆಯನ್ನು ಅಹಿಂಸಾತ್ಮಕವಾಗಿ ವಿರೋಧಿಸುವುದರಲ್ಲೂ ತಪ್ಪಿಲ್ಲ. ತಂದೆಯ ಆಜ್ಞಾಪಾಲಕನಾಗಿದ್ದೂ ಸಹಾ ಪ್ರಹ್ಲಾದನು ಹಿರಣ್ಯಕಶಿಪುವಿನ ಎದುರೇ ಶ್ರೀಮನ್ನಾರಾಯಣನ ಭಜನೆ ಮಾಡಿದ್ದು ಹೇಗೆ ಸರಿಯೋ ಹಾಗೆಯೇ ಆ ಮಾಯನ್ಮಾರೀ ನಿರಾಶ್ರಿತ ಮಹೇಶನೂರು ರಾಜನ ದೌರ್ಜನ್ಯಗಳನ್ನು ತಮ್ಮ ನಾಡ ದೊರೆಯ ಎದುರೇ ಬಿಚ್ಚಿಡುವುದರಲ್ಲೂ ತಪ್ಪಿಲ್ಲ.

ಹಾಗೆ ನೋಡಿದರೆ ಹಲವು ತಲೆಮಾರುಗಳ ನಂತರ ಆತ ನಡೆಸಿದ್ದ ದೌರ್ಜನ್ಯಗಳೆಲ್ಲವೂ ಮರೆತು ಆತನೊಬ್ಬ ಶೂರ, ಧೀರ ಎನ್ನುವ ಇತಿಹಾಸವನ್ನಷ್ಟೇ ಓದಿ ಕಲ್ಪನಾ ಲೋಕದಲ್ಲಿ ವಿಹರಿಸುತ್ತಿದ್ದ ಆ ರಾಜ್ಯದ ಯುವ ಜನತೆಗೆ ಆತ ನಿಜಕ್ಕೂ ಯಾರು, ತಮ್ಮ ಪೂರ್ವಜರನ್ನೆಲ್ಲಾ ಹೇಗೆ ನಡೆಸಿಕೊಂಡಿದ್ದ ಎನ್ನುವುದೆಲ್ಲವನ್ನೂ ಮತ್ತೊಮ್ಮೆ ತಿಳಿಯುವಂತೆ ಮಾಡಿದ ತಮ್ಮ ನಾಡ ದೊರೆಯನ್ನು ರಾಜ್ಯದ ಪ್ರತಿಯೊಬ್ಬ ಪ್ರಜೆಯೂ ಅಭಿನಂದಿಸಬೇಕು.ಪ್ರತೀ ವರ್ಷವೂ ಆ ಮಾಯನ್ಮಾರೀ ನಿರಾಶ್ರಿತ ಮಹೇಶನೂರು ರಾಜನ ಹೆಸರಿನಲ್ಲಿ ನಡೆಯುವ ಹಬ್ಬಕ್ಕೆ ಯಾವುದೇ ತಡೆಯೊಡ್ಡದೇ ಆ ಸಮಯದಲ್ಲಿ ಆತನ ಎಲ್ಲಾ ಬಗೆಯ ಒಳ್ಳೆಯ ಹಾಗೂ ದುಷ್ಟ ಕಾರ್ಯಗಳನ್ನು ವ್ಯಾಪಕವಾಗಿ ಚರ್ಚೆಯಾಗುವಂತೆ ನೋಡಿಕೊಳ್ಳಬೇಕು.ಆ ಹೊಸಾ ಹಬ್ಬದಾಚರಣೆಯ ಮೂಲಕ ತಮ್ಮ ಮುಂದಿನ ಪೀಳಿಗೆಗೆ ಮುಚ್ಚಿಟ್ಟ ಇತಿಹಾಸದ ಸತ್ಯವನ್ನು ತಿಳಿಯುವಂತೆ ಮಾಡಿ ನಿರ್ಗಮಿಸಬೇಕಾದ ಹೊಣೆ ಆ ರಾಜ್ಯದ ರಾಜ ಹಾಗೂ ಪ್ರಜೆಗಳಿಬ್ಬರೂ ಹೊತ್ತುಕೊಳ್ಳಬೇಕು.ನನ್ನ ಅಭಿಪ್ರಾಯದ ಪ್ರಕಾರ ನಾಡ ದೊರೆಯೂ ತನ್ನ ನಿರ್ಧಾರವನ್ನು ಬದಲಾಯಿಸಬೇಕಿಲ್ಲ, ನಾಡಿನ ಪ್ರಜೆಗಳೂ ತಮ್ಮ ತಮ್ಮ ಕಾರ್ಯದಿಂದ ಹಿಂದೆ ಸರಿಯಬೇಕಿಲ್ಲ.ನಾಡ ದೊರೆಯು ಪ್ರಾರಂಭಿಸಿದ ಆ ಹೊಸಾ ಸಂಪ್ರದಾಯ ಮುಂದುವರಿಯುತ್ತಲೇ ಇರಬೇಕು,ಇತಿಹಾಸದ ಮತ್ತಷ್ಟು ಕರಾಳ ಸತ್ಯಗಳು ಹೊರಗೆ ಬರುತ್ತಲೇ ಇರಬೇಕು” ಎಂದು ಉತ್ತರಿಸಿ ಬೇತಾಳನ ಕಡೆ ತಿರುಗಿ ಗೆದ್ದೆನೆನ್ನುವಂತೆ ಮೀಸೆ ತಿರುವಿ ಮುಗುಳ್ನಕ್ಕ.

ಜಟಿಲವಾದ ಸಮಸ್ಯೆಗೆ ಅತ್ಯಂತ ಸುಲಭವಾಗಿ ಸಮರ್ಥ ಉತ್ತರ ನೀಡಿದ ವಿಕ್ರಮನ ಜಾಣ್ಮೆಗೆ ಮೆಚ್ಚುಗೆ ಸೂಚಿಸುತ್ತಾ ಬೇತಾಳ: ಭಲೇ ವಿಕ್ರಮಾ ಭಲೇ, ಅದ್ಭುತವಾದ ಉತ್ತರ ನೀಡಿದೆ. ನಿಜಕ್ಕೂ ನಿನ್ನ ಜಾಣ್ಮೆಗೆ ಮೆಚ್ಚಿದೆ. ಆದರೆ ನೀನು ನಿನ್ನ ಮೌನ ಮೀರುವ ಮೂಲಕ ನಮ್ಮ ಕರಾರನ್ನು ಮುರಿದುಬಿಟ್ಟೆ. ಹಹ್ಹ್ ಹಹ್ಹ್ ಹಹ್ಹ್ ಹಹ್ಹ್ ಹಹ್ಹ್ ಹಹ್ಹ್ ಹಹ್ಹ್ ಹಹ್ಹಾ… ನಿನಗೆನಾನು ಸಿಕ್ಕಲಾರೆ, ನಾನಿದೋ ಹೊರಟೆಎನ್ನುತ್ತಾ ವಿಕ್ರಮನ ಹೆಗಲ ಮೇಲಿನಿಂದ ನೇರವಾಗಿ ಮೇಲಕ್ಕೇರಿ ಗಾಳಿಯಲ್ಲಿ ತೇಲುತ್ತಾ ತಾನು ಮೊದಲಿದ್ದ ಮರದ ಮೇಲೆ ಹೋಗಿ ತಲೆ ಕೆಳಗಾಗಿ ನೇತಾಡುತ್ತಾ ಟಿಪ್ಪು ಟಿಪ್ಪು ಬರುಸಾ ಪಾನೀ….ಎಂದು ತನಗಿಷ್ಟವಾದ ಹಿಂದಿ ಹಾಡೊಂದನ್ನು ಗುನುಗುತ್ತಾ ಜೀಕಾಡತೊಡಗಿತು.

 

Facebook ಕಾಮೆಂಟ್ಸ್

ಲೇಖಕರ ಕುರಿತು

Praven Kumar Mavinakadu

ಮೂಲತಃ ಪರಿಸರಪ್ರೇಮಿ.ಹವ್ಯಾಸೀ ಬರಹಗಾರ.
ನೈಸರ್ಗಿಕ ಸಂಪನ್ಮೂಲಗಳನ್ನು ಉಳಿಸಿಕೊಳ್ಳುವ ಮಹತ್ವಾಕಾಂಕ್ಷೆಯಿಂದ ಪರಿಸರ ಸ್ನೇಹಿ ಸೋಲಾರ್ ಅಡುಗೆ ಉಪಕರಣಗಳ ತಂತ್ರಜ್ಞಾನ ಅಭಿವೃದ್ಧಿಯಲ್ಲಿ ತೊಡಗಿಕೊಂಡಿದ್ದು ಮುಂದೆ ಅವುಗಳನ್ನು ದೇಶದ ಮನೆಮನೆಗೂ ಮುಟ್ಟಿಸಬೇಕೆನ್ನುವ ಕನಸಿದೆ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!