“ಪ್ರಧಾನಿಯವರ ಡಿಜಿಟಲ್ ಇಂಡಿಯಾ ಯೋಜನೆಯ ಅಪೂರ್ವ ಕೊಡುಗೆ. ಬೇಕೇ ಕ್ಷಣದಲ್ಲಿ ಹಣ? ಹಾಗಾದರೆಈ ಸಂದೇಶವನ್ನು ಐದು ಗ್ರೂಪ್ ಗಳಿಗೆ ಫಾರ್ವರ್ಡ್ ಮಾಡಿ. ತಕ್ಷಣವೇ ನಿಮ್ಮ ಮೊಬೈಲ್ ಬಾಲೆನ್ಸ್ ನ್ನು ಪರೀಕ್ಷಿಸಿ. ಐನೂರು ರೂಪಾಯಿಗಳನ್ನು ಪಡೆದು ಆನಂದಿಸಿ. ಇದು ಸತ್ಯ. ನಾನು ಅದರ ಲಾಭ ಪಡೆದೇ ನಿಮಗೆ ಹೇಳುತ್ತಿದ್ದೇನೆ.ತಡ ಮಾಡಬೇಡಿ…” ನೀವು ವಾಟ್ಸಾಪ್ ಭಕ್ತರೆಂದಾಗಿದ್ದಲ್ಲಿ ಇಂಥ ಸಂದೇಶವನ್ನು ಖಂಡಿತ ಓದಿರುತ್ತೀರಿ. ಹಾಗೆಯೇ ಈ ಸಂದೇಶವನ್ನು ಐದು ಗ್ರೂಪ್ ಗಳಿಗೆ ಫಾರ್ವರ್ಡ್ ಮಾಡಿ ಎಷ್ಟು ಹೊತ್ತಾದರೂ ಐನೂರು ರೂಪಾಯಿ ಇರಲಿ ಐದು ಪೈಸೆ ಕೂಡಾ ಬಾರದೇ ಪೆಚ್ಚುಮೋರೆ ಹಾಕಿದ ಆದಿನ ಕೂಡಾ ಇಷ್ಟು ಹೊತ್ತಿಗೆ ನೆನಪಿಗೆ ಬಂದಿರುತ್ತದೆ! ಹಣ ಕಂಡ್ರೆ ಹೆಣ ಕೂಡಾ ಬಾಯಿಬಿಡುತ್ತದೆ ಎಂದಾದಲ್ಲಿ ನಾವು ಯಾವಲೆಕ್ಕ ಬಿಡಿ. ಕಷ್ಟಪಡದೇ ದುಡ್ಡುಬರುವುದಾದರೆ ಬರಲಿ ಎಂಬ ಸದುದ್ದೇಶ[!] ನಿಮ್ಮದು. ಯಾಕೆ ಮಾಡಬಾರದು?
ಹೌದು ಮತ್ತೆ…ನಮ್ಮಂತೆಯೇ ರಕ್ತ-ಮಾಂಸ-ಮೆದುಳಿರುವ ಇನ್ನೊಬ್ಬ ಜೀವಿಯನ್ನು ಕೇವಲ ಹುಟ್ಟಿನಜಾತಿಯ ನೆಪದಿಂದ ಮುಟ್ಟಿಸಿಕೊಳ್ಳಬಾರದು, ಮನೆಯೊಳಗೆ ಸೇರಿಸಬಾರದು, ಜೊತೆಗೆ ಕೂತು ಊಟಮಾಡಬಾರದು, ಅಕ್ಷರ ಕಲಿಸಬಾರದು ಎಂಬ ಸಂದೇಶವನ್ನು ಶತಶತಮಾನಗಳಿಂದ ನಮ್ಮಹಿರಿಯರು ಫಾರ್ವರ್ಡ್ ಮಾಡಿಲ್ಲವೇ? ಗುರು ಹಿರಿಯರನ್ನು ಗೌರವಿಸುವುದು ನಮ್ಮ ಸಂಸ್ಕೃತಿ. ಆದ್ದರಿಂದ ಹಾಗೇ ನಾವೂ ಅವರನ್ನು ಅನುಸರಿಸುತ್ತಿದ್ದೇವೆ. ಯಾವುದೋ ಒಂದು ಕಾಲಘಟ್ಟದಲ್ಲಿ ಸಮಾಜದ ರೀತಿ ರಿವಾಜುಗಳಿಗೆ ಜಾತಿಗಳಿಂದ ಅನುಕೂಲವಿತ್ತೇನೋ.. ಅಥವಾ ಕುಲಕಸುಬುಗಳ ಉಳಿವಿಗೆ ಅದು ಅವಶ್ಯವೂ ಆಗಿತ್ತೇನೋ.. ಆದರೆ ಮನುಷ್ಯನಿರ್ಮಿತ ಜಾತಿಗಳು ಬಿಡಿ, ಗಂಡು-ಹೆಣ್ಣೆಂಬ ನಿಸರ್ಗನಿರ್ಮಿತ ಜಾತಿಗಳು ಕೂಡಾ ತಮ್ಮ ಭೇದ ಮರೆತು ಒಂದೇ ರೀತಿಯ ಕೆಲಸ, ಜೀವನಶೈಲಿಯನ್ನು ಅನುಸರಿಸುತ್ತಿರುವ ಇಂದಿನ ಆಧುನಿಕ ಯುಗದಲ್ಲೂ ಈ ಹಳೆಯ ಸಂದೇಶವನ್ನು ಪಾಲಿಸುವ ಜೊತೆಗೆ ಮುಂದಿನ ಜನಾಂಗಕ್ಕೂ ಕ್ರಮಬದ್ಧವಾಗಿ ಹೇಗೆ ಫಾರ್ವರ್ಡ್ ಮಾಡುತ್ತಿದ್ದೇವೆ ? ಹೇಗೆಂದರೆ ಪ್ರಧಾನಿಯವರು ಹಾಗೇ ಸುಮ್ಮನೆ ಐನೂರು ರೂಪಾಯಿಗಳನ್ನು ಕೊಡುತ್ತಾರೆ ಎಂದು ನಂಬಿ ಫಾರ್ವರ್ಡ್ ಮಾಡಿದ ಹಾಗೆ!
ಅದಿರಲಿ, ವಾಟ್ಸಾಪ್ಪಿನಲ್ಲಿ ಇನ್ನೊಂದು ಸಂದೇಶವನ್ನು ಓದಿದ್ದೀರಾ? “ಅದ್ಭುತವಾದ ಪವಾಡವನ್ನು ಅನುಭವಿಸಬೇಕೆ?ಈ ಸಂದೇಶವನ್ನು ಹತ್ತು ಗ್ರೂಪ್’ಗಳಿಗೆ ಫಾರ್ವರ್ಡ್ ಮಾಡಿ. ಮರುಕ್ಷಣವೇ ನಿಮ್ಮ ಮೊಬೈಲ್ ಬ್ಯಾಟರಿ ಪೂರ್ತಿಯಾಗಿ ಚಾರ್ಜ್ ಆಗುವುದನ್ನು ಕಣ್ಣಾರೆ ನೋಡಿ. ಇದು ವಾಟ್ಸಾಪ್ ಕಂಪನಿಯಿಂದ ಪ್ರಮಾಣೀಕೃತವಾದುದು. ನಾನು ಪರೀಕ್ಷಿಸಿಯೇ ನಿಮಗೆ ಹೇಳುತ್ತಿದ್ದೇನೆ. ನನ್ನನ್ನು ನಂಬಿ…” ಆಹಾ… ಕೆಲಸದ ಗಡಿಬಿಡಿಯಲ್ಲಿ ನಿನ್ನೆ ಚಾರ್ಜ್ ಮಾಡಲು ಮರೆತು ನಿಮ್ಮ ಮೊಬೈಲ್ನಲ್ಲಿ ಬ್ಯಾಟರಿ ಕನಿಷ್ಠಮಟ್ಟ ತಲುಪಿರುವ ಆ ಕ್ಷಣದಲ್ಲಿ ಇದು ದೇವರ ಸಂದೇಶವೇನೋ ಎಂದೆನಿಸಿ ಬೆರಳುಗಳು ಫಾರ್ವರ್ಡ್ ಕೆಲಸ ಆರಂಭಿಸುತ್ತವೆ. ಖಂಡಿತ ಈ ಮೆಸೇಜ್ ನಂಬಬೇಕಾದ್ದೇ… ಏಕೆಂದರೆ ಹೆಣ್ಣು ತಿಂಗಳ ಋತುಸ್ರಾವದ ಮೂರು ದಿನಗಳಲ್ಲಿ ಅಸ್ಪೃಶ್ಯಳು .. ಆ ಮೂರುದಿನ ಅವಳು ಮನೆಯ ಮೂಲೆಬಿಟ್ಟುಕದಲುವಂತಿಲ್ಲ, ಸ್ನಾನ ನಿಷಿದ್ಧ, ಪೂಜಾಸ್ಥಳಗಳಲ್ಲಿ ಅವಳ ನೆರಳು ಬಿದ್ದರೂ ಬ್ರಹ್ಮಹತ್ಯಾದೋಷವು ಕಟ್ಟಿಟ್ಟ ಬುತ್ತಿ ಎಂಬ ಶತಮಾನಗಳ ಫಾರ್ವರ್ಡ್ ಮೆಸೆಜನ್ನು ನಂಬಿದವರು- ಈಗಲೂ ಚಾಚೂತಪ್ಪದೆ ಮುಂದುವರೆಸುತ್ತಿರುವವರು ನಾವು. ಅಲ್ಲ.. ಸ್ವಾಮೀ.. ಜೀವಿಯೊಂದು ಹೆಣ್ಣು ಎನಿಸಿಕೊಳ್ಳುವುದೇ ಋತುಸ್ರಾವವೆಂಬ ದೈಹಿಕ ಅನೈಚ್ಛಿಕಕ್ರಿಯೆಯಿಂದ. ಊಟ-ನಿದ್ದೆ-ಆಕಳಿಕೆ-ತೇಗು-ಮಲಮೂತ್ರ ವಿಸರ್ಜನೆಯಂತೆಯೇ ಇದು ಕೂಡಾ ಒಂದು ಸಹಜಕ್ರಿಯೆ. ಆದರೆ ಹೆಣ್ಣಿಗೆ ಮಾತ್ರ ಎಂಬುದು ಪ್ರಕೃತಿನಿಯಮ. ಉಳಿದ ಕ್ರಿಯೆಗಳು ನಡೆಯಲು ಸೂಕ್ತವ್ಯವಸ್ಥೆ ಇರುವಂತೆಯೇ ಇದಕ್ಕೂ ಸರಿಯಾದ ಅನುಕೂಲ ಕಲ್ಪಿಸಿದರೆ ಆ ಮೂರುದಿನಗಳಲ್ಲೇನೂ ವಿಶೇಷವಿಲ್ಲ. ಆದರೆ ವಿದ್ಯಾವಂತರಾಗಿಯೂ, ಋತುಸ್ರಾವವೊಂದು ಹೆಣ್ಣಿಗಿರುವ ಶಾಪವೆಂಬ ಸಂದೇಶವನ್ನು ವ್ಯವಸ್ಥಿತವಾಗಿ ಫಾರ್ವರ್ಡ್ ಮಾಡುವ ನಾವು ಶಕ್ತಿಯ ಮೂಲದ ಸಹಾಯವಿಲ್ಲದೇ ಬ್ಯಾಟರಿ ಚಾರ್ಜ್ ಆಗುತ್ತದೆ ಎಂದು ಬಾಲಿಶವಾಗಿ ನಂಬಿ, ಫಾರ್ವರ್ಡ್ ಮಾಡಿಮಾಡಿ, ಇರುವ ಸ್ವಲ್ಪ ಬ್ಯಾಟರಿ ಚಾರ್ಚ್ ಕೂಡಾ ಖಾಲಿಯಾಗಿ ಕಣ್ ಕಣ್ ಬಿಡುವುದರಲ್ಲಿ ಅಚ್ಚರಿಯೇನಿಲ್ಲ ಬಿಡಿ.
ಅದು ಬಿಡಿ.. ಈ ಥರದ ಮೆಸೇಜ್ ನಿಮ್ಮ್ ವಾಟ್ಸಾಪ್ಪಿಗೆ ಬಂದಿದೆಯೇ? “ಇಂದು ರಾತ್ರಿ ೯ ಗಂಟೆಗೆ ಕ್ಷುದ್ರಗ್ರಹವೊಂದು ಭೂಮಿಯ ಸಮೀಪ ಹಾದು ಹೋಗಲಿದೆ. ಅದರ ಕಾಂತಕ್ಷೇತ್ರದ ಪ್ರಭಾವದಿಂದ ವಿದ್ಯುತ್ ಉಪಕರಣಗಳಿಗೆ, ಮುಖ್ಯವಾಗಿ ಮೊಬೈಲ್’ಗಳಿಗೆ ಹಾನಿಯಾಗುವ ಸಾಧ್ಯತೆ ಇದೆ. ಆದ್ದರಿಂದ ೯ ರಿಂದ ೩ ಗಂಟೆಯವರೆಗೆ ಯಾವುದೇ ಕಾರಣಕ್ಕೂ ಮೊಬೈಲ್ ಬಳಸಬೇಡಿ. ಇದು ಅಮೇರಿಕಾದ ನಾಸಾ ಸಂಸ್ಥೆಯ ಪ್ರಕಟಣೆ” ಅಯ್ಯೋ.. ಇದಂತೂ ಆಪದ್ಬಾಂಧವನಂಥ ಫಾರ್ವರ್ಡ್… ನಾಸಾ ಹೇಳಿದೆ ಅಂದ್ರೆ ಸುಮ್ನೆನಾ ಮತ್ತೆ, ಚಂದ್ರನ ಮೇಲೆ ನಡೆದು ಬಂದವರು ಅವರು!! ಎಂದು ನಿರ್ಧರಿಸಿ ಈ ಸಂದೇಶವನ್ನು ನಿಮ್ಮ ಪ್ರೀತಿಪಾತ್ರರಿಗೆ ಫಾರ್ವರ್ಡ್ ಮಾಡಲು ಸಿದ್ಧರಾದಿರಲ್ಲವೇ? ಹೌದು ಸ್ವಾಮೀ, ತನ್ನ ಪಾಡಿಗೆ ತಾನು ನೆಲದ ಮೇಲೆ ತೆವಳಿಕೊಂಡು ಓಡುವ, ಯಕಶ್ಚಿತ್ ಹೆಜ್ಜೆಸಪ್ಪಳಕ್ಕೆ ಹೆದರುವ ಹಾವು ನಮ್ಮ ಅನಾರೋಗ್ಯಕ್ಕೆ , ಸಂತಾನಹೀನತೆಗೆ, ಕಷ್ಟ-ನಷ್ಟಗಳಿಗೆ ಕಾರಣವೆಂಬ ತಲೆಮಾರುಗಳ ಫಾರ್ವರ್ಡಮೆಸೇಜನ್ನು ನಂಬಿ ಸರ್ಪದೋಷ ನಿವಾರಣೆಗಾಗಿ ತಿಪ್ಪರಲಾಗ ಹಾಕುವ ಮಹನೀಯರು ನಾವು. ನಿಜ, ಹಾವು ಪ್ರಕೃತಿಯ ಆಹಾರಸರಪಳಿಯ ಮಹತ್ತ್ವದ ಕೊಂಡಿ.ಅದನ್ನು ವಿನಾಕಾರಣ ಕೊಂದರೆ ಆಗುವ ಪ್ರಾಕೃತಿಕ ಅಸಮತೋಲನದಿಂದ ನಮಗೇ ಅಪಾರ ಹಾನಿ. ಆದರೆ ಪಾಪ! ಕೈ-ಕಾಲು-ಕಣ್ಣುಗಳಿಲ್ಲದೆ ಹುಟ್ಟಿ ,ಮನುಷ್ಯನ ದಬ್ಬಾಳಿಕೆಯಿಂದ ತನ್ನ ನೆಲೆಯನ್ನೂ ಕಳಕೊಂಡು, ಹೇಗೋ ಕಷ್ಟಪಟ್ಟು ಹೊಟ್ಟೆ ಹೊರೆದುಕೊಂಡು ಬದುಕುವ ಈ ಬಡಪಾಯಿ ಸುರಕ್ಷಿತವಾಗಿ ಇರಲು ಪಡುವ ಪಾಡು ಅದಕ್ಕೇ ಗೊತ್ತು. ನಮ್ಮ ಸಮಸ್ಯೆಗಳಿಗೆ ನಮ್ಮ ದಿನಚರಿ, ಜೀವನಶೈಲಿ,ಆಹಾರ, ಚಿಂತನೆಗಳೇ ಕಾರಣವೇ ವಿನ: ನಮ್ಮ ಆಹಾರವನ್ನು ತಿನ್ನುವ ಇಲಿಗಳನ್ನು ನುಂಗುವ ಈ ಉಪಕಾರಿ ಜೀವಿ ಅಲ್ಲವೇ ಅಲ್ಲ. ಹಾಗೆಯೇ ಭೂಮಿಯ ಸಮೀಪ ದಿನವೂ ಅನೇಕ ಕ್ಷುದ್ರಗ್ರಹಗಳು ಬರುತ್ತವೆ.ಹತ್ತಿರ ಬಂದೊಡನೇ ಉರಿದು ಭಸ್ಮವಾಗುತ್ತವೆ. ಹಾಗೊಂದು ವೇಳೆ ಭಯಾನಕವಾದ ಗ್ರಹ ಬಂದು ಭೂಮಿಯನ್ನಪ್ಪಳಿಸಿದರೆ ಮೊಬೈಲ್ ಮಾತ್ರವಲ್ಲ ಎಲ್ಲವೂ ನಾಶವಾಗುತ್ತದೆ ಎಂದು ವಿಚಾರ ಮಾಡಲೂ ಸಿದ್ಧರಿಲ್ಲ ನಾವು . ಅಲ್ಲವೇ ಮತ್ತೆ.. ಹಾವಿನಿಂದ ನಮ್ಮ ಜೀವನವೇ ಅಲ್ಲೋಲಕಲ್ಲೋಲವಾಗಬಹುದಾದರೆ ನಾಸಾದವರನ್ನೇ ಹೆದರಿಸುವ ಕ್ಷುದ್ರಗ್ರಹದಿಂದ ಮೊಬೈಲ್ ಹಾಳಾಗಬಾರದೇಕೆ?
ಇನ್ನೊಂದು ಭೀಕರಸಂದೇಶ ನನಗೊಮ್ಮೆ ಬಂದಿತ್ತು. ಅಲ್ಲೆಲ್ಲೋ, ಯಾರೋ, ಗೋಭಿಮಂಚೂರಿ ತಿಂದರಂತೆ.. ಅದರಲ್ಲಿದ್ದ ಹುಳವೊಂದು ತಿಂದವನ ಮೆದುಳಿಗೆ ಪ್ರವೇಶಿಸಿ ಆ ವ್ಯಕ್ತಿ ಸತ್ತೇ ಹೋದನಂತೆ.. ಆದ್ದರಿಂದ ಗೋಬಿಮಂಚೂರಿ ತಿನ್ನಬೇಡಿ ಹುಷಾರ್… .ಗೋಬಿ ಅಥವಾ ಹೂಕೋಸಿನಲ್ಲಿ ಹಸುರುಹುಳಗಳು ಇರುವುದು ನಿಜ. ಆದರೆ ಗೋಬಿಮಂಚೂರಿ ತಯಾರಿಸುವಾಗ ಗೋಬಿಯ ತುಂಡುಗಳನ್ನು ಹಿಟ್ಟಿನಲ್ಲಿ ಅದ್ದಿ, ಕುದಿಯುವ ಎಣ್ಣೆಯಲ್ಲಿ ಕರಿದು, ಒಗ್ಗರಣೆಯಲ್ಲಿ ಹುರಿದು, ಬಾಯೊಳಗಿಟ್ಟು ಕರುಮ್-ಕುರುಮ್ ಎಂದು ಮೆಲ್ಲಿದ ಮೇಲೂ ಆ ಹುಳ ಜೀವಂತವಾಗಿರಲು ಸಾಧ್ಯವೇ ಮಹಾಸ್ವಾಮೀ? ಹಾಗೊಂದು ವೇಳೆ ಬದುಕುಳಿದರೂ ಹೊಟ್ಟೆಯಿಂದ ಮೆದುಳಿಗೆ ಹೋಗಲು ನಮ್ಮ ದೇಹದಲ್ಲೇನಾದರೂ ಚತುಷ್ಪಥ ಹೆದ್ದಾರಿಯಿದೆಯೇ? ಏ… ಹಾಗೆಲ್ಲಾ ವಿಚಾರವಾದಿಗಳ ಥರ ಮಾತಾಡಬೇಡಿ. ಅದು ವಾಟ್ಸಪ್ಪಿನಲ್ಲಿ ಬಂದ ಶುದ್ಧಸತ್ಯ!
ಇವಳೇನಪ್ಪಾ… ಹೀಗೆ… ನಮ್ಮನ್ನು ಆಡಿಕೊಳ್ಳುತ್ತಿದ್ದಾಳಲ್ಲಾ.. ಎಂದು ಕಣ್ಣುಕೆಂಪು ಮಾಡಿಕೊಳ್ಳಬೇಡಿ. ಹೌದು, ಈ ವಾಟ್ಸಾಪ್ ಪ್ರಪಂಚವೆಂದರೆ ಹೀಗೆ ಮಾಹಿತಿಯ ಮಹಾಪೂರ. ಶೀಘ್ರಸಂವಹನ, ಫೋಟೋ-ವಿಡಿಯೋಗಳನ್ನು ಕಡಿಮೆ ಖರ್ಚಿನಲ್ಲಿ ಇನ್ನೊಬ್ಬರಿಗೆ ತಲುಪಿಸುವುದು, ಬಂಧುಗಳು-ಸ್ನೇಹಿತರ ಜೊತೆ ಭಾಂಧವ್ಯವೃದ್ಧಿ ಹೀಗೆ ಅದರಿಂದ ನಮಗೆ ಲೆಕ್ಕವಿಲ್ಲದಷ್ಟು ಉಪಯೋಗಗಳಿವೆ. ಅಲ್ಲದೆ ಮೊಬೈಲ್ ಈಗ ನಮ್ಮ ದೇಹದ ಭಾಗವೇ ಆಗುವಷ್ಟು ಸರಳವಿನ್ಯಾಸದಲ್ಲಿರುವುದರಿಂದ ಹೆಚ್ಚು ವಿದ್ಯಾಭ್ಯಾಸ ಪಡೆಯದವರೂ ಕೂಡಾ ತಮ್ಮ ಮೊಬೈಲ್’ಗಳಲ್ಲಿ ವಾಟ್ಸಾಪ್ ಅಳವಡಿಸಿಕೊಂಡು ಪ್ರಯೋಜನ ಪಡೆಯುವಂತಾಗಿದೆ. ಆದರೆ ಇಂಥ ಅದ್ಭುತ ವ್ಯವಸ್ಥೆಯನ್ನು ಅವೈಚಾರಿಕ ಚಿಂತನೆಗಳನ್ನು ಹರಡಲು, ಧಾರ್ಮಿಕ ಭಾವನೆಗಳನ್ನು ತಪ್ಪುಹಾದಿಯಲ್ಲಿ ಪ್ರಚೋದಿಸಲು, ಸುಳ್ಳುವದಂತಿಗಳನ್ನು ಹರಡಿಸಲು ಬಳಸುವುದು ಅಕ್ಷಮ್ಯ ಅಪರಾಧವಲ್ಲದೇ ಮತ್ತೇನು?
ನಮ್ಮ ಸಂಸ್ಕೃತಿ-ಸಂಪ್ರದಾಯಗಳು ಕೂಡಾ ಹಾಗೇ ಅಲ್ಲವೇ? ನಮ್ಮ ಜೀವನಕ್ಕೊಂದು ಸುಂದರಚೌಕಟ್ಟನ್ನು ಬರೆಯುವ, ನಮ್ಮ ದಿನಚರಿಗೊಂದು ಶಿಸ್ತನ್ನು ತರುವ, ಸದಾ ಸನ್ಮಾರ್ಗದಲ್ಲೇ ನಡೆಯುವಂತೆ ಕಿವಿಹಿಂಡಿ ಹೇಳುವ ನಮ್ಮ ಆಚರಣೆಗಳು ನಮ್ಮ ಹಿರಿಯರಿಂದ ನಮಗೆ ಬರುವ, ನಮ್ಮಿಂದ ಮುಂದಿನ ಜನಾಂಗಕ್ಕೆ ಹೋಗಲೇಬೇಕಾದ ಫಾರ್ವರ್ಡ್ ಮೆಸೇಜ್’ಗಳು. ಆದರೆ ನಮಗೆ ಹಿರಿಯರಿಂದ ಬಂದಿದೆ ಎಂಬ ಒಂದೇ ಕಾರಣಕ್ಕೆ ಅದನ್ನು ಅನುಕರಿಸುವ ವಾಟ್ಸಪ್ ಮನೋಸ್ಥಿತಿ ಸರಿಯಲ್ಲ. ಸಾಧ್ಯವಿದ್ದರೆ ಕಾಲಧರ್ಮಕ್ಕೆ, ಜೀವನಶೈಲಿಗೆ ಅನುಗುಣವಾಗಿ ನಮ್ಮ ನಂಬಿಕೆಗಳನ್ನು ಮಾರ್ಪಡಿಸೋಣ. ಇಲ್ಲ, ಈ ಆಚರಣೆಗಳಲ್ಲಿ ಸತ್ತ್ವವಿಲ್ಲ ಎಂದೆನಿಸಿದರೆ ನಿರ್ದಾಕ್ಷಿಣ್ಯವಾಗಿ ಅವುಗಳನ್ನು ಕೈಬಿಡುವ ಧೈರ್ಯ ತೋರಿಸೋಣ. ನಮ್ಮ ಜೀವನವೆಂಬ ಬೆಲೆಬಾಳುವ ಮೊಬೈಲನ್ನು ಅಸಂಬದ್ಧ ಆಚರಣೆಗಳೆಂಬ ಫಾರ್ವರ್ಡ್ ಮೆಸೇಜ್ ಗಳಿಂದ ರಕ್ಷಿಸೋಣ. ನೀವು ಈ ಸಂದೇಶವನ್ನು ನೂರು ಜನರಿಗೆ ಫಾರ್ವರ್ಡ್ ಮಾಡಿದರೆ ವಾಟ್ಸಪ್ಪನು ನಿಮಗೆ ಸಕಲ ಸನ್ಮಂಗಳಗಳನ್ನು ಕರುಣಿಸುವುದರಲ್ಲಿ ಅನುಮಾನವೇ ಇಲ್ಲ.