ಅಂಕಣ

ಭಾರತೀಯ ಸನಾತನ ಸಂಸ್ಕಾರ ಮತ್ತು ಪರಂಪರೆಯ ಪ್ರತಿನಿಧಿ ‘ನಮ್ಮ ಜಬ್ಬಾರರು’

ಕೆಳಮಧ್ಯಮ ವರ್ಗದ ಕುಟುಂಬದ ಮೈದಿನ್ ಕುಂಞ್ ಮತ್ತು ಪಾತಿಮಾ ದಂಪತಿಗೆ 1963 ರಲ್ಲಿ ಜನ್ಮತಾಳಿದ ಐದನೆಯ ಮತ್ತು ಕೊನೆಯ ಮಗ ಸ್ವಲ್ಪ ಭಿನ್ನವಾಗಿ ಬೆಳೆಯುತ್ತಾ ಬಂದ. ಎಳೆಯ ವಯಸ್ಸಲ್ಲೇ ಚಂದಮಾಮದ ಕಥೆಗಳನ್ನು ಅದಮ್ಯ ಉತ್ಸಾಹದಿಂದ ಓದಿ ಪೌರಾಣಿಕ ಪಾತ್ರಗಳಿಂದ ಪಡೆದ ಸ್ಪೂರ್ತಿ,  ಪ್ರಹ್ಲಾದ ಚರಿತ್ರೆಯಲ್ಲಿ ಸಿಕ್ಕ ಅವಕಾಶ, ಶೈಕ್ಷಣಿಕ ಹಂತದಲ್ಲಿಯೂ ಆ ಹುಡುಗನಿಗೆ ಯಕ್ಷಗಾನದತ್ತ ಒಲವನ್ನು ಹೆಚ್ಚಿಸಿದವು. ಆ ಹುಡುಗನನ್ನು ಹತ್ತುತಲೆ ರಾವಣ, ಹಾರುವ ಹನುಮಂತ, ಬಂಡಿತುಂಬಾ ಉಣ್ಣುವ ಬಕಾಸುರ, ವಿಶ್ವರೂಪಿ ಕೃಷ್ಣ, ಜಟಾಯು  ಹೀಗೆ ಎಲ್ಲ ಪುರಾಣದ ಪಾತ್ರಗಳು ಸೆಳೆದಿದ್ದವು. ಮೊದಲ ಬಾರಿಗೆ ಕಟೀಲು ಮೇಳದ ಯಕ್ಷಗಾನ ನೋಡಿದ ಆತನಿಗೆ ಅದೇನೋ ರೋಮಾಂಚನವಾಗಿತ್ತು. ತನ್ನ ಕನಸಿನ ಲೋಕ ಅನಾವರಣ ಗೊಳ್ಳುತ್ತಿದೆ ಎಂಬ ಖುಷಿ ಆ ಹುಡುಗನಿಗೆ. ಹೀಗೆ ಪುರಾಣದ ಓದು ಹೆಚ್ಚಿಸಿಕೊಂಡ ಹುಡುಗ ತನ್ನದೇ ಯಕ್ಷ ಲೋಕದಲ್ಲಿ ವಿಹರಿಸುತ್ತಿದ್ದ. ಬಾಲ್ಯದಲ್ಲಿ ಯಕ್ಷಗಾನದ ಟೆಕೆಟ್ ತೆಗೆದುಕೊಳ್ಳುತ್ತ ಗೇಟ್’ಕೀಪರ್ ಆಗಿದ್ದ ಹುಡುಗ ಇಂದು ಯಕ್ಷ ಪ್ರೇಮಿಗಳ ಮನಸ್ಸು ಗೆದ್ದವ. ಇಂದು ಯಕ್ಷಗಾನ ತಾಳಮದ್ದಳೆಯಲ್ಲಿ ತನ್ನದೇ ಒಂದು ಶೈಲಿಯನ್ನು ನಿರ್ಮಿಸಿ ಕಲಾಸಕ್ತರಿಗೆ ಬೆರಗುಂಟುಮಾಡುವ, ಅವರೇ ‘ಜಬ್ಬಾರ್ ಸಮೋ ಸಂಪಾಜೆ’. ಈಗ ಅವರೆಂದರೆ ಬೆರಗು, ಶಿಸ್ತು, ನಿಷ್ಠೆ ಮತ್ತು ಎಲ್ಲಕ್ಕಿಂತಲೂ ಮುಖ್ಯವಾಗಿ ಸರಳತೆ. ಜಬ್ಬಾರರು  ಸುರತ್ಕಲ್ ಮೇಳದ ಅಗ್ರಗಣ್ಯ ಕಲಾವಿದರಾದ ” ತೆಕ್ಕಟ್ಟೆ ಆನಂದ ಮಾಸ್ತರ್ ” ಅವರ ಕಟ್ಟಾ ಅಭಿಮಾನಿಯಾಗಿ ಯಕ್ಷಗಾನದ ಗೀಳು ಹಚ್ಚಿಕೊಂಡವರು. ಸುರತ್ಕಲ್ ಮೇಳದವರ ಆಟ ಸುತ್ತಮುತ್ತ ಎಲ್ಲೇ ಜರಗಿದರೂ ಜಬ್ಬಾರರು, ಆ ಆಟದ ಖಾಯಂ ಪ್ರೇಕ್ಷಕರಾಗಿದ್ದರು. ಜಬ್ಬಾರರು ತೆಕ್ಕಟ್ಟೆಯವರ ಅಭಿಮಾನಿಯಾಗಿದ್ದರು. ಜಬ್ಬಾರರ ಅರ್ಥಗಾರಿಕೆಯಲ್ಲಿ ತೆಕ್ಕಟ್ಟೆಯವರ ಛಾಯೆಯನ್ನು ಗುರುತಿಸಬಹುದು.

1995ರಲ್ಲಿ ಕಿನ್ನಿಗೋಳಿಯ ಯಕ್ಷಲಹರಿಯಲ್ಲಿ ತಾಳಮದ್ದಳೆ ಸ್ಪರ್ಧೆಯಲ್ಲಿ ಶೂರ್ಪನಖಿಯಾಗಿ ಗುರುತಿಸಿಕೊಂಡಿದ್ದ ಜಬ್ಬಾರರ  ತಂಡ ಆ ಯಕ್ಷ ಲಹರಿಯನ್ನು ಗೆಲ್ಲುತ್ತದೆ.ಇದು ಜಬ್ಬಾರರ ಬದುಕಿನ ಬಹಳ ಮುಖ್ಯ ಘಟ್ಟವಾಯಿತು. ಈಗಲೂ ಆ ಕಾರ್ಯಕ್ರಮವ ನೆನೆಸಿಕೊಳ್ಳುವ ಜಬ್ಬಾರರು  ‘ಯಕ್ಷಲಹರಿ ಕಲಾಕೂಸೊಂದನ್ನು ಜಗತ್ತಿನ ಹೆಬ್ಬಾಲಿಗೆ ತಂದು ಬಿಟ್ಟದ್ದೆಂದು’ ಅಭಿಮಾನ ವ್ಯಕ್ತಪಡಿಸುತ್ತಾರೆ. ಸುಳ್ಯದ ಸಂಪಾಜೆಯ ಜಬ್ಬಾರ್ ಸಮೋ ಇಂದು ಯಕ್ಷಗಾನ ತಾಳಮದ್ದಲೆಯಲ್ಲಿ ಮೇರು ವ್ಯಕ್ತಿತ್ವ. ಇದು ಸುಮ್ಮನೆ ಬಂದಿದ್ದಲ್ಲ. ಯಾವ ಶಾಸ್ತ್ರೀಯ ಹಿನ್ನೆಲೆಯೂ ಇಲ್ಲದೆ ಈ ಕಲಾಪ್ರಕಾರವನ್ನು ಸ್ವೀಕರಿಸಿ, ಜ್ಞಾನ ಸಂಪಾದಿಸಿ, ಅದ್ಭುತವಾದ ಕೃಷಿ ಮಾಡಿ ತನ್ನನ್ನು ತಾನು ತೆರೆದುಕೊಂಡ ಬಗೆ ನಿಜಕ್ಕೂ ಪ್ರೇರಣಾದಾಯಕ ಎನ್ನಬಹುದು.

ಜಬ್ಬಾರರ ಬಾಲ್ಯದಲ್ಲಿ ಸಂಪಾಜೆಯಲ್ಲಿ ಆಸ್ಪತ್ರೆಯಿರಲಿಲ್ಲ. ಆಗ ಹುಷಾರಿಲ್ಲದಿದ್ದಾಗ ನೆರವಾಗುತ್ತಿದ್ದವರು ನಾಟಿವೈದ್ಯ ಮಾಲಿಂಗ ಭಟ್ಟರು. ಭಟ್ಟರು ಕೊಡುವ ಸೊಪ್ಪಿನ ಮದ್ದು, ಮಂತ್ರಿಸಿದ ಭಸ್ಮವೇ ಎಲ್ಲರ ಔಷದಿಯಾಗಿತ್ತು. ಹಾಗಾಗಿಯೇ ಜಬ್ಬಾರರು ಈಗಲೂ ತಮ್ಮೂರಿನ ಜನರ ಸಂಸ್ಕೃತಿಯ ಬಗ್ಗೆ ಹೆಮ್ಮೆ ಪಡುತ್ತಾರೆ. ಜಾತಿ, ಮತಗಳ ಸೋಂಕು ತಗುಲದೆ ಬದುಕಿದ ಜಬ್ಬಾರರು ಪುರಾಣಗಳ ಹೊಕ್ಕಿ ಅದರಾಳವ ಅರಿಯುವ ಪ್ರಯತ್ನ ಮಾಡಿದರು. ಊರಲ್ಲಿ ಯಕ್ಷ ಮಿತ್ರ ಬಳಗ ಎನ್ನುವ ಸಂಘಟನೆ ಕಟ್ಟಿಕೊಂಡರು. ಈ ಮೂಲಕ ಯಕ್ಷ ದಿಗ್ಗಜರಾ ಸಂಪರ್ಕ ದೊರಕಿತು. ಹೀಗೆ ಜಬ್ಬಾರರು ಯಕ್ಷಗಾನ ತಾಳಮದ್ದಳೆಯ ಲೋಕದ ಒಂದೊಂದೇ ಮೆಟ್ಟಿಲೇರುತ್ತ ಜೀವನ ಸಾಗಿಸಿದರು.

ಇವರು ನಮ್ಮ ಪರಂಪರೆಯನ್ನು ಜಗತ್ತಿಗೆ ಸಾರುತ್ತಿರುವ ‘ಬ್ರ್ಯಾಂಡ್ ಅಂಬಾಸಿಡರ್’ ಎಂದು ನಾನು ನಂಬಿದ್ದೇನೆ. ಪುರಾಣವೆಂದರೆ ಇವರಿಗೆ ಅದೊಂದು ದರ್ಶನ, ಜಿಜ್ಞಾಸೆ ಮತ್ತು ಒಂದು ಚಂದದ ಲೋಕ. ಪರಿಪೂರ್ಣವಾಗಿ ತನ್ನ ವಾದ ಮಾಡಿಸುವವ ಮಾತ್ರ ತಾಳಮದ್ದಳೆಯಂತಹ ಕಲಾಪ್ರಕಾರದಲ್ಲಿ  ದೀರ್ಘಕಾಲ ನಿಲ್ಲಲು ಸಾಧ್ಯ. ಜಬ್ಬಾರರು ಕೇವಲ ನಿಲ್ಲಲಿಲ್ಲ ಬದಲಾಗಿ ತಮ್ಮನ್ನು ತಾವು ತರ್ಕಕ್ಕೆ ತಳ್ಳಿಕೊಂಡು ವಿಭಿನ್ನವಾಗಿ ನಿಂತರು. ಜನ್ಮದಿಂದ ಮುಸ್ಲಿಮನಾಗಿ ಹಿಂದೂಗಳ  ರಾಮಾಯಣ ಮಹಾಭಾರತವನ್ನು ಅಚುಕಟ್ಟಾಗಿ ವ್ಯಾಖ್ಯಾನಿಸುವ ಸಾಮರ್ಥ್ಯವಿದೆ ಎಂದರೆ ಇವರ ಯಕ್ಷಕೃಷಿ ನಿಜಕ್ಕೂ ಅದ್ಭುತವೇ ಸೈ.

ಮಾಗಧ, ಕರ್ಣ, ಶಲ್ಯ, ವಾಲಿ, ಕೌರವ, ಭೀಷ್ಮ, ರಾವಣ ಹೀಗೆ ಅನೇಕ ಪುರಾಣದ ಪಾತ್ರಗಳಿಗೆ ಚಂದದ ವ್ಯಾಖ್ಯಾನ ನೀಡುತ್ತಾ ಅವರು ಅಭಿನಯಿಸಿದ ಮತ್ತು ಅನುಭವಿಸಿದ ಅದೆಷ್ಟೋ ಪಾತ್ರಗಳು ಕಲಾರಸಿಕರ ಮನದಲ್ಲಿ ಯಾವತ್ತೂ ಜೀವಂತ ಇರುತ್ತದೆ. ಕಲೆ ಕೇವಲ ಯಾವುದೇ ಜಾತಿ ಮತ್ತು ಧರ್ಮಕ್ಕೆ ಮಾತ್ರ ಸೀಮಿತಗೊಂಡಿಲ್ಲ ಬದಲಾಗಿ ಒಬ್ಬ ಅದು ಒಬ್ಬ ಪ್ರತಿಭಾನ್ವಿತನ ಸ್ವತ್ತು ಎಂದು ಹೇಳಬಹುದು. ಜಬ್ಬಾರರು ಕೂಡ ಇದನ್ನು ನಂಬಿದವರು. ಯಕ್ಷಗಾನ ತಾಳಮದ್ದಲೆಯಲ್ಲಿ ಈಗ ಜಬ್ಬಾರರು ಬರುತ್ತಾರೆ ಎಂದರೆ ಜನ ಮುಗಿಬೀಳುತ್ತಾರೆ. ತನ್ನದೇ ಒಂದು ಪ್ರೇಕ್ಷಕವರ್ಗವನ್ನು ನಿರ್ಮಿಸಿಕೊಂಡು ತಾಳಮದ್ದಲೆಯ ಪ್ರಮುಖ ಆಕರ್ಷಣೆ ಆಗಿರುವ ಜಬ್ಬಾರರು ಭಾರತೀಯ ಪರಂಪರೆಯ ಪ್ರತಿನಿಧಿಸುವ ಮೇರು ವ್ಯಕ್ತಿತ್ವ ಎನ್ನಬಹುದು.

ಜಬ್ಬಾರರನ್ನು ನಮ್ಮೂರಿಗೆ ಕರೆಸುವ ದೊಡ್ಡ ಆಸೆ ಮೊನ್ನೆ ದಶಮಿಯಂದು ಈಡೇರಿತು. ನನಗೆ ಅವರ ಸರಳತೆಯನ್ನು ನೋಡಿ ಆಶ್ಚರ್ಯದ ಜೊತೆ ಅತೀವ ಖುಷಿಯಾಯಿತು. ‘ಶಿವಭಕ್ತ ವೀರಮಣಿ’ ಪ್ರಸಂಗದ ಜಬ್ಬಾರರ ಈಶ್ವರ ಮತ್ತು ತಾಳಮದ್ದಲೆಯ ಇನ್ನೊಬ್ಬ ಮೇರು ಕಲಾವಿದ ಸಂಕದಗುಂಡಿಯವರ ಹನುಮಂತನ ಪಾತ್ರ ನೋಡಿ ನಮಗೆ ಹೊಗಳಲು ಶಬ್ಧವೇ ಸಿಗಲಿಲ್ಲ. ಈ ಕಲಾವಿದರುಗಳಿಗೆ ಕೇವಲ ಇವರು ಮಾತ್ರ ಸಾಟಿ. ತಾಳಮದ್ದಲೆಯಂತಹ ಅದ್ಭುತ ಕಲಾಪ್ರಕಾರ ಬೆಳೆಸಬೇಕಾದವರು ನಾವು. ಹಾಗಾಗಿ ಆ ನಿಟ್ಟಿನಲ್ಲಿ ನಾವುಗಳು ಯೋಚಿಸಬೇಕು.

ಕಲೆಗೆ ಜಾತಿ-ಧರ್ಮದ ಕೊಳಕನ್ನು ಅಂಟಿಸುವ ಅನೇಕರು ನಮ್ಮಲ್ಲಿದ್ದಾರೆ ಆದರೆ ಇದಾಗಬಾರದು. ಜಬ್ಬಾರರಂತಹ ಕಲಾವಿದರು ‘ಸದ್ಭಾವನೆ’ ಎಂಬ ದೊಡ್ಡ ಶಬ್ಧವನ್ನು ಪ್ರತಿನಿಧಿಸುವ ವ್ಯಕ್ತಿ. ಕಲಾಕೌಸ್ತುಭನಿಗೆ ದೇವರು ಆಯುಷ್ಯ ಆರೋಗ್ಯ ನೀಡಿ ಕಾಪಾಡಲಿ ಎಂಬುದೇ ನಮ್ಮ ಹಾರೈಕೆ.

ಚಿತ್ರಕೃಪೆ: ರಾಮ್ ನರೇಶ್ ಮಂಚಿ

Facebook ಕಾಮೆಂಟ್ಸ್

ಲೇಖಕರ ಕುರಿತು

Prasanna Hegde

ಹೆಸರು ಪ್ರಸನ್ನ ಹೆಗಡೆ.ಹುಟ್ಟಿದ್ದು,ಬೆಳೆದಿದ್ದು ಬದುಕನ್ನ ಅನುಭವಿಸಿದ್ದು ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಸಮೀಪದ ಹಳ್ಳಿಯೊಂದರಲ್ಲಿ.ನನ್ನ camera,ಪ್ರೀತಿಯ ನನ್ನ ನಾಯಿ ಜೊತೆಗಿದ್ದರೆ ನನ್ನನ್ನೂ ನಾ ಮರೆಯುತ್ತೇನೆ.ಹಾಗಾಗಿ ಪಕ್ಕಾ ಮಲೆನಾಡಿನ ಹುಡುಗ.ಅವಶ್ಯಕತೆ,ಅನಿವಾರ್ಯತೆಯ ಕಾರಣ ಬದುಕುತ್ತಿರುವುದು ಮೈಸೂರಿನಲ್ಲಿ.Chartered Accountancy ಯ ಭಾಗವಾದ Articleship ಅನ್ನು ಮಾಡುತ್ತಿದ್ದೇನೆ.ಬರೆಯುವುದು ಕೇವಲ ಹವ್ಯಾಸವಲ್ಲ ನನ್ನ ಜೀವನದ ಅವಿಭಾಜ್ಯ ಅಂಗ.ರಾಜಕೀಯವನ್ನ ನಾನು ಇಷ್ಟಪಡುತ್ತೇನೆ...ಆಸೆಯಿದೆ ಸಮಾಜಕ್ಕೆ ನನ್ನ ಕೈಲಾದಷ್ಟು ನೀಡಬೇಕೆಂಬುದು.. ಮತ್ತೇನು ನನ್ನ ಬಗ್ಗೆ ಹೇಳಿಕೊಳ್ಳುವಂತದ್ದಿಲ್ಲ

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!