Featured ಅಂಕಣ

ಕಾರಂತರು ಸಮತಾವಾದಿಯಲ್ಲವೆಂಬ ಹಳಹಳಿಕೆ

ತನಗೆ ಕಂಡುದನ್ನು ಅಥವಾ ಅನಿಸಿದ್ದನ್ನು ಸ್ಪಷ್ಟವಾಗಿ, ನಿರ್ದಾಕ್ಷಿಣ್ಯವಾಗಿ ಮತ್ತು ಪ್ರಾಮಾಣಿಕವಾಗಿ ಹೇಳುವವರು ಎಂಬರ್ಥದಲ್ಲಿ ಶಿವರಾಮ ಕಾರಂತರನ್ನು ಕವಿ ಕಯ್ಯಾರ ಕಿಞ್ಞಣ್ಣ ರೈಯವರು ಸ್ಪಷ್ಟವಾದಿ ಎಂದು ಕರೆಯುತ್ತಾರೆ. ಶಿವರಾಮ ಕಾರಂತರನ್ನು ಪರಿಚಯಿಸುವುದೂ ಒಂದೇ, ನೇಸರನನ್ನು ಸೊಡರಿನಿಂದ ತೋರಿಸುವುದೂ ಒಂದೇ ಎಂದು ಗೋಪಾಲಕೃಷ್ಣ ಅಡಿಗರು ಹೇಳಿದುದನ್ನು ನೆನಪಿಸಿಕೊಂಢಾಗಲೂ ಕಾರಂತರ ವ್ಯಕ್ತಿತ್ವ ಎಷ್ಟು ದೊಡ್ಡದು ಎಂಬುದರ ಜೊತೆಗೇ ಅವರಲ್ಲಿ ಸೂರ್ಯಸ್ಪಷ್ಟತೆ ಇದ್ದುದೂ ನಮಗೆ ನೆನಪಾಗಬೇಕು. “ಕಾರಂತರ ಕೃತಿಗಳನ್ನು ಟೀಕಿಸಬಹುದು; ಆದರೆ ಅವರ ಪ್ರಾಮಾಣಿಕ ಅಭಿವ್ಯಕ್ತಿಯ ಬಗ್ಗೆ ಟೀಕಿಸಲು ಸಾಧ್ಯವಿಲ್ಲ….ತಮ್ಮ ವಿವೇಕಕ್ಕೆ ಸರಿಯೆಂದು ಕಂಡದ್ದನ್ನಲ್ಲದೆ ಬೇರೆ ಏನನ್ನೂ ಸ್ವಂತ ಲಾಭಕ್ಕಾಗಿಯಾಗಲೀ ಜನರಂಜನೆಗಾಗಿಯಾಗಲೀ ಹೇಳುವುದಿಲ್ಲ ಎಂಬ ಶಪಥ, ಆ ಶಪಥಕ್ಕೆ ಅನುಸಾರವಾಗಿ ಗಂಭೀರವಾಗಿ ನಿರ್ದುಷ್ಟವಾಗಿ ಪ್ರಾಮಾಣಿಕವಾಗಿ ಅವರು ನಡೆದು ಬಂದ ರೀತಿ-ಅವರ ಮಹತ್ವಕ್ಕೆ ಮೂಲ ಕಾರಣ” ಎಂದೂ ಅಡಿಗರು ಹೇಳಿದ್ದಾರೆ.

ಒಬ್ಬ ಲೇಖಕನ ವಿಚಾರಗಳನ್ನು ಸಾಮಾನ್ಯವಾಗಿ ಎರಡು ನೆಲೆಗಳಲ್ಲಿ ಓದುಗರು ಅಥವಾ ವಿಮರ್ಶಕರು ಗ್ರಹಿಸುತ್ತಾರೆ. ಒಂದು: ಕಥೆ, ಕವನ, ಕಾದಂಬರಿಯಂಥ ರಚನೆಗಳಲ್ಲಿ ಸೂಚಿತವಾಗುವ ಅಥವಾ ಧ್ವನಿತವಾಗುವ ವೈಚಾರಿಕತೆ. ಎರಡನೆಯದು: ವೈಚಾರಿಕ ಲೇಖನಗಳು, ಭಾಷಣಗಳು ಮುಂತಾದವುಗಳ ಮೂಲಕ ವಾಚ್ಯವಾಗಿ ವ್ಯಕ್ತವಾಗುವ ನಿಲುವುಗಳು.

ಕಾರಂತರ ಕಾದಂಬರಿಗಳ ಬಗ್ಗೆ ಕನ್ನಡ ವಿಮರ್ಶೆ ಬೇಕಾದಷ್ಟು ಗಮನ ನೀಡಿದೆ. ಆದರೆ ಕಾರಂತರ ವಿಚಾರಗಳನ್ನು ಕನ್ನಡ ವಿಮರ್ಶೆ ಹೇಗೆ ಪರಿಭಾವಿಸಿದೆ ಎನ್ನುವುದನ್ನು ನಾವು ಈ ಹೊತ್ತು ಗಮನಿಸಬೇಕು. ಆಗ ಒಂದೆರಡು ಅಂಶಗಳು ನಮ್ಮ ಗಮನ ಸೆಳೆಯುತ್ತವೆ. ಕಾರಂತರ ಕಾದಂಬರಿಗಳು ಮೆಚ್ಚಿಗೆಯಾದ ಬಗೆಯಲ್ಲಿ ಅವರ ವಾಚ್ಯ ಧೋರಣೆಗೆಳು ವಿಮರ್ಶಕರಿಂದ ಸ್ವೀಕೃತವಾಗಲಿಲ್ಲ. ಉದಾಹರಣೆಗೆ, ಕಾರಂತರು ಕನ್ನಡದ ಅತ್ಯಂತ ಮಹತ್ವದ ಒಬ್ಬ ಲೇಖಕರು ಎಂಬುದನ್ನು ಎಲ್ಲ ವಿಮರ್ಶಕರೂ ಒಪ್ಪುತ್ತಾರೆ. ಕನ್ನಡ ಕಾದಂಬರಿಕಾರರಲ್ಲೇ ಅವರಷ್ಟು ಶ್ರೇಷ್ಠರು ಬೇರೆ ಇಲ್ಲ ಎಂದು ಹೇಳಿದ ವಿಮರ್ಶಕರೂ ಇದ್ದಾರೆ. ಆದರೆ ಕಾರಂತರ ಕಲಾಮೀಮಾಂಸೆ ಮತ್ತು ಸಾಹಿತ್ಯಮೀಮಾಂಸೆಯ ಬಗ್ಗೆ ಕನ್ನಡದ ಚಿಂತಕರು ಅಷ್ಟಾಗಿ ಮೆಚ್ಚುಗೆಯಿಂದ ಚರ್ಚಿಸಿದಂತೆ ಕಾಣುವುದಿಲ್ಲ.

ಕಾರಂತರ ಪ್ರಕಾರ ಕಲೆಯ ಅಸ್ತಿತ್ವ ಇರುವುದು ಸೌಂದರ್ಯದ ಅಭಿವ್ಯಕ್ತಿಯಾಗಿ. ಸೌಂದರ್ಯಪ್ರಜ್ಞೆಯು ಕಾರಂತರು ನಂಬಿದ್ದ ಮೌಲ್ಯಗಳಲ್ಲಿ ಒಂದು. ಸಮಾಜಸುಧಾರಣೆಗಾಗಿ ಕಲೆ ಎಂಬುದು ಅವರ ನಿಲುವಾಗಿರಲಿಲ್ಲ. ಸಾಹಿತಿ ಅಥವಾ ಕಲಾವಿದ ತಾನು ಕಂಡ, ಅನುಭವಿಸಿದ ಸತ್ಯಗಳನ್ನು ತನ್ನದೇ ಆದ ರೀತಿಯಲ್ಲಿ ಪ್ರಸ್ತುತಪಡಿಸುತ್ತಾನೆ. ಹೀಗಿರುವಾಗ ಸಾಹಿತಿ ಇಂಥಾ ವಸ್ತುವಿನ ಕುರಿತೇ ಬರೆಯಬೇಕು, ಹೀಗೆಯೆ ಬರೆಯಬೇಕು ಎಂದು ನಿರ್ದೇಶಿಸುವ ಅಧಿಕಾರ ಯಾರಿಗೂ ಇಲ್ಲ ಎಂದು ಕಾರಂತರು ನಂಬಿದ್ದರು. ಹೀಗಾಗಿ ಅವರು ಸಾಹಿತ್ಯಕ ಧೋರಣೆಯಲ್ಲಿ ಸಮಾಜವಾದಿಯೂ ಆಗಿರಲಿಲ್ಲ, ಸಮತಾವಾದಿಯೂ ಆಗಿರಲಿಲ್ಲ.

ಇಂದು ಸಾಹಿತ್ಯದಲ್ಲೂ ರಾಜಕೀಯ ಸರಿತನದ ಒಂದು ದೃಷ್ಟಿಯಿದೆ. ಸಮಾಜವಾದಿ ಅಥವಾ ಮಾರ್ಕ್ಸ್’ವಾದಿಯಲ್ಲದವನು ಸಾಹಿತಿ, ಕಲಾವಿದನಾಗಲಾರ ಎಂಬ ಹೇಳಿಕೆಯನ್ನೂ ಯಾರೋ ಹರಿಯಬಿಟ್ಟಿದ್ದಾರೆ. ಹೀಗಾಗಿ ಸಾಹಿತಿಯು ಸಮಾಜವನ್ನು ಬದಲಾಯಿಸುವ ನಿಟ್ಟಿನಲ್ಲಿ ಮತ್ತು ಅದೇ ಘೋಷಿತ ಉದ್ದೇಶದೊಂದಿಗೆ ಸಾಹಿತ್ಯ ರಚನೆಗೆ ತೊಡಗಬೇಕು ಎಂಬುದೇ ಸಾಹಿತ್ಯ ರಾಜಕೀಯದಲ್ಲಿ ಸರಿತನದ ನಿಲುವಾಗಿರುವಾಗ, ಸಾಹಿತಿಯು ಅನುಭವಕ್ಕಷ್ಟೇ ಪ್ರಾಮಾಣಿಕನಾಗಿದ್ದರೆ ಸಾಕು ಎಂಬ ಕಾರಂತರ ನಿಲುವು ಕನ್ನಡ ವಿಮರ್ಶಕರಿಗೆ ಒಪ್ಪಿತವಾಗಲು ಹೇಗೆ ಸಾಧ್ಯ? ಹಾಗೆಂದು ಈ ಬಗ್ಗೆ ಕಾರಂತರನ್ನು ವಿಶೇಷವಾಗಿ ಟೀಕಿಸಲೂ ಸಾಧ್ಯವಾಗಲಿಲ್ಲ. ಯಾಕೆಂದರೆ ಕಾರಂತರ ಸಾಹಿತ್ಯ ಮೀಮಾಂಸೆಯನ್ನು ಸಮರ್ಥಿಸಲು ಅವರ ಕೃತಿಗಳೇ ಇವೆಯಲ್ಲ? ಸ್ವಾತಂತ್ರ್ಯ ಹೋರಾಟ, ವಿಧವಾವಿವಾಹ, ಅಸ್ಪಶ್ಯತೆಯ ಖಂಡನೆ, ಅಂತರಜಾತಿ ವಿವಾಹ ಮುಂತಾದವುಗಳಿಂದ ತೊಡಗಿ ವೃದ್ಧಾಪ್ಯ ಕಾಲದ ಪರಿಸರ ಹೋರಾಟದವರೆಗೆ ಸಾಮಾಜಿಕ ಜಾಗೃತಿಯ ಕೆಲಸಗಳನ್ನು ಕಾರಂತರು ನೇರವಾಗಿಯೇ ಕ್ಷೇತ್ರಕ್ಕಿಳಿದೇ ಮಾಡಿದವರು. ಹಾಗೆಂದು ಅವರ ಕಾದಂಬರಿಗಳು ಅಂಥ ಕೆಲಸವನ್ನು ಪರೋಕ್ಷವಾಗಿ ಮಾಡಿಲ್ಲವೆಂದಲ್ಲ.

ಕಾರಂತರು ಧಾರ್ಮಿಕತೆ ಬಗ್ಗೆ, ಮಠ-ಪೀಠಗಳ ಬಗ್ಗೆ ಹೊಂದಿದ್ದ ನಿಲುವುಗಳು ಕನ್ನಡ ವಿಮರ್ಶಾಲೋಕದಲ್ಲಿ ಸಾಕಷ್ಟು ಸಂಭ್ರಮದಿಂದಲೇ ಚರ್ಚಿತವಾಗಿವೆ. ಇದಕ್ಕೆ ಕಾರಣವೇನೆಂದರೆ, ಅವರ ಕಾದಂಬರಿಗಳು ಡಾಂಭಿಕತೆಯನ್ನು ಮತ್ತು ತೋರಿಕೆಯ ದೇವಮಾನವರುಗಳನ್ನು ವಿಡಂಬಿಸುತ್ತವೆ. ಅಲ್ಲದೆ ಬಾಳ್ವೆಯೇ ಬೆಳಕು ಎಂದೂ ನಾವು ಪೂಜಿಸುವ ದೇವರು ನಮ್ಮ ಅಳತೆಯನ್ನು ಮೀರಲಾರ ಎಂದೂ ಕಾರಂತರು ತಮ್ಮ ವೈಚಾರಿಕ ಲೇಖನಗಳ ಮೂಲಕ ಪ್ರತಿಪಾದಿಸಿದುದು ಕೂಡ ಪ್ರಗತಿಪರರು ಎಂದು ಕರೆದುಕೊಳ್ಳುವವರಿಗೆ ಸಂತೋಷದ ಸಂಗತಿಯೇ ಹೌದು.

ಕಳೆದ ಸುಮಾರು ನಲವತ್ತು ವರ್ಷಗಳಿಂದೀಚೆಗೆ, ಒಂದು ವಿಮರ್ಶೆಯು ಕನ್ನಡದ ಮುಖ್ಯವಾಹಿನಿಯಲ್ಲಿ ಗೌರವಾರ್ಹ ಸ್ಥಾನದೊಂದಿಗೆ ಗುರುತಿಸಿಕೊಳ್ಳಬೇಕಾದರೆ ಅದು ಎಡಪಂಥೀಯ ಧೋರಣೆಯನ್ನು ಹೇಗಾದರೂ ತೋರಿಸಿಕೊಳ್ಳಬೇಕಾದದ್ದು ಅನಿವಾರ್ಯ. ಈ ಕಾರಣದಿಂದ ಕನ್ನಡ ವಿಮರ್ಶಕರು ಕಾರಂತರ ಕಾದಂಬರಿಗಳನ್ನು ಮತ್ತು ಅವರ ಧಾರ್ಮಿಕ ನಿಲುವುಗಳನ್ನು ಹೊಗಳುತ್ತಲೇ ಅವರ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಧೋರಣೆಗಳು ಪ್ರತಿಗಾಮಿ ಎಂದು ಹೇಳದೆ ಬಿಡುವುದಿಲ್ಲ. “ಕಾರಂತರಿಗೆ ಸಮುದಾಯದ ಬಗ್ಗೆ ಪ್ರೀತಿ ಮತ್ತು ಸಮತೆಯ ಬಗ್ಗೆ ನಿಜವಾದ ಪ್ರಜ್ಞೆ ಇಲ್ಲ” ಎಂದು ಲಂಕೇಶ್ ಹೇಳಿದ್ದರು.  

ಈ ತಥಾಕಥಿತ ಪ್ರಗತಿಪರರ ನಿಜವಾದ ಸಮಸ್ಯೆ ಏನೆಂದರೆ, ಕಾರಂತರು ತಮ್ಮ ಅನುಭವಕ್ಕೆ ವಿರುದ್ಧವಾಗಿ ಶೋಷಕಜಾತಿ, ಶೋಷಿತಜಾತಿ ಎಂಬ ರೀತಿಯ ವರ್ಗಗಳನ್ನು  ಕಾದಂಬರಿಗಳಲ್ಲಿ ಸೃಷ್ಟಿಸುವುದಿಲ್ಲ. ಅವರು ತಮ್ಮ ಹಲವಾರು ಕಾದಂಬರಿಗಳಲ್ಲಿ ಮಾನವ ಬದುಕಿನ ದಾರ್ಶನಿಕ ಸತ್ಯಗಳನ್ನು ಕಾಣಿಸಿದಾಗ ಅಂಥ ಕಾದಂಬರಿಗಳು ಯಶಸ್ವೀ ಕಾದಂಬರಿಗಳಾದುದನ್ನು ಕಾಣುತ್ತೇವೆ.

ಕಾರಂತರಲ್ಲಿ ಸಮತಾವಾದ ಕಡಿಮೆಯಾದ ಬಗ್ಗೆ ಕೆಲವರು ಅಸಮಾಧಾನ ತೋರಿಸಿದ್ದಿದೆ. ಚೋಮನ ದುಡಿ ಕಾದಂಬರಿಯ ಜಮೀನ್ದಾರನ ಪಾತ್ರ ಚಿತ್ರಣದ ಬಗ್ಗೆ ಒಂದು ಆಕ್ಷೇಪ ವಿಶಿಷ್ಟವಾದದ್ದು. ಚೋಮನಿಗೆ ಗೇಣಿ ಭೂಮಿ ಕೊಡಲು ಆ ಭೂಮಾಲೀಕನಿಗೆ ಮನಸ್ಸಿತ್ತು; ಆದರೆ ತನ್ನ ತಾಯಿಯ ಒತ್ತಡದಿಂದಾಗಿ ಅದು ಸಾಧ್ಯವಾಗಲಿಲ್ಲ ಎಂಬ ಚಿತ್ರಣ ಕಾದಂಬರಿಯಲ್ಲಿದೆ.  ಹೀಗೆ ಚಿತ್ರಿಸಿದರೆ ಈ ಭೂಮಾಲೀಕವರ್ಗದ ಕ್ರೂರ ಸ್ವಭಾವವನ್ನು ಚಿತ್ರಿಸಿದಂತೆ ಆಗುವುದಿಲ್ಲ ಎಂಬುದೇ ಆಕ್ಷೇಪ. ವ್ಯಕ್ತಿ ಬದಲಾಗಬಲ್ಲ ಎಂಬ ಯಾವ ಆಶಾವಾದವೂ ಇಲ್ಲದ ತಾತ್ವಿಕತೆ ಮಾತ್ರ ಇಂಥ ಆಕ್ಷೇಪ ಎತ್ತಬಲ್ಲುದು. ಆದರೆ ಕಾರಂತರಿಗೆ ವ್ಯಕ್ತಿಯೆಂದರೆ ಸಮಾಜದ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗುವವನು ಮಾತ್ರ ಅಲ್ಲ. ವ್ಯಕ್ತಿಗೊಂದು ಸಾಮರ್ಥ್ಯವೂ ಇದೆ. ಸಮಾಜದಲ್ಲಿರುವ ವಿವಿಧ ಪ್ರತ್ಯೇಕ ಸಮುದಾಯಗಳ ನಡುವಿನ ಸಂಘರ್ಷವನ್ನು ಕಾರಂತರು ತಮ್ಮ ಕೃತಿಗಳಲ್ಲಿ ಚಿತ್ರಿಸಲಿಲ್ಲ ಎಂದು ಆಕ್ಷೇಪ ಮಾಡಿದವರಿದ್ದಾರೆ. ತಾವು ಸಮಾಜದಲ್ಲಿ ಕಾಣದ ವರ್ಗಸಂಘರ್ಷವನ್ನ ಅವರು ಕಾದಂಬರಿಗಳಲ್ಲಿ ಕೃತಕವಾಗಿ ಕಾಣಿಸಲಿಲ್ಲ್ಲ ಎಂದಷ್ಟೇ ಹೇಳಬೇಕು.  

ಒಬ್ಬನದನ್ನು ಕಿತ್ತು ಇನ್ನೊಬ್ಬನಿಗೆ ಕೊಡಬೇಕು ಎಂಬ ಆರ್ಥಿಕ ನೀತಿ ಕಾರಂತರಿಗೆ ಒಪ್ಪಿಗೆಯಿಲ್ಲ. ಇದನ್ನು ಪ್ರತಿಗಾಮಿ ಆರ್ಥಿಕ ನೀತಿಯೆಂದು ಗುರುತಿಸುವ ಸಾಹಿತಿಗಳು ತಮ್ಮಿಂದೇನಾದರೂ ಕಿತ್ತು ಇನ್ನೊಬ್ಬರಿಗೆ ಕೊಟ್ಟಾಗ ಎಷ್ಟು ಸಹಿಷ್ಣುಗಳಾಗಿ ಉಳಿದಾರು ಎನ್ನುವುದು ಕುತೂಹಲದ ಪ್ರಶ್ನೆ. ತಮ್ಮೊಳಗಿನ ಸಾಹಿತ್ಯ, ಕಲೆ ಖಾಲಿಯಾಗುತ್ತ ಬಂದಂತೆ ಚಲಾವಣೆಯಲ್ಲಿರಲಿಕ್ಕಾಗಿಯೇ ದಿನಕ್ಕೊಂದು ಹೇಳಿಕೆ ನೀಡುವ ಸಾಹಿತಿ ಕಲಾವಿದರ ಸಂಖ್ಯೆ ಹೆಚ್ಚುತ್ತ ಹೋದಂತೆ ಸ್ಪಷ್ಟವಾದಿಯಾಗಿದ್ದ ಕಾರಂತರ ಮೂರ್ತಿ ಬೆಳೆಯುತ್ತ ಹೋಗುತ್ತದೆ!

ಅವರು ನಂಬಿದ್ದ ಮೌಲ್ಯಗಳಾದ ಪ್ರಾಮಾಣಿಕತೆ, ದುಡಿಮೆ, ವ್ಯಕ್ತಿಗತ ಹೊಣೆಗಾರಿಕೆ ಇವುಗಳಿಗೆಲ್ಲ ಬೆಲೆಯಿಲ್ಲದ ಸ್ವಾತಂತ್ರ್ಯಪೂರ್ವ ಮತ್ತು ಸ್ವಾತಂತ್ರ್ಯೋತ್ತರ ಭಾರತದ ಬಗ್ಗೆ ಅವರಿಗೆ ಸಿಟ್ಟು ಇದ್ದುದು ತುಂಬ ಸಹಜ. ಯಾವುದೋ ಒಂದು ಕಾರ್ಯಕ್ರಮಕ್ಕಾಗಿ ಸರಕಾರದ ಇಲಾಖೆ ತಮಗೆ ಕೊಟ್ಟ ಗೌರವಧನವು ನಿರೀಕ್ಷೆಗಿಂತ ಹೆಚ್ಚ್ಚು ಇದ್ದುದರಿಂದ ಪ್ರತ್ಯೇಕ ಪ್ರಯಾಣಭತ್ಯೆ ಬೇಡವೆಂದು ತಿರಸ್ಕರಿಸಿದ ಕಾರಂತರ ಮನೋಭಾವವನ್ನು, ಇಂದು ಮಾತೆತ್ತಿದರೆ ಪ್ರಶಸ್ತಿ ಹಿಂತಿರುಗಿಸುತ್ತೇನೆಂದು ಬೆದರಿಸುವ ಯಾವ ಸಾಹಿತಿಯಲ್ಲಿ ಕಾಣಲು ಸಾಧ್ಯ?

ಕಳೆದ ಸುಮಾರು ಮೂವತ್ತು ವರ್ಷಗಳಿಂದೀಚೆಗೆ ಅನಂತಮೂರ್ತಿಯವರ ಹಾಗೂ ಇತರ ಕೆಲವು ಲೇಖಕರ ಪ್ರಭಾವದಿಂದ ರಾಷ್ಟ್ರೀಯವಾದವೆಂದರೆ ಅದೇನೋ ಘೋರ ಪಾಪವೆಂಬ ಭಾವನೆ ಕನ್ನಡ ವಿಮರ್ಶಕರಲ್ಲಿದೆ. ಭಾರತೀಯ ರಾಷ್ಟ್ರವಾದದ ವಿಶಿಷ್ಟ ಸ್ವರೂಪವನ್ನು ಅರ್ಥ ಮಾಡಿಕೊಳ್ಳದವರು ಮಾತ್ರ ಹೀಗೆ ಭಾವಿಸಬಲ್ಲರು. ರಾಷ್ಟ್ಟವಾದವೆಂದರೆ, ಜಿನ್ನಾ, ಹಿಟ್ಲರನಂಥವರದ್ದು ಎಂಬ ಸಂಕುಚಿತ ದೃಷ್ಟಿಯೇ ಇದರ ಹಿಂದಿರುವುದು. ಪ್ರಭುತ್ವ ಮತ್ತು ರಾಷ್ಟ್ರವನ್ನು ಮಿಶ್ರ ಮಾಡಿ ಗೊಂದಲ ಮಾಡಿಕೊಳ್ಳುವವರೂ ಇದರಲ್ಲಿ ಸೇರಿದ್ದಾರೆ. ಕಾರಂತರು ರಾಷ್ಟ್ರ ಎಂಬ ಪ್ರಜ್ಞೆಯನ್ನು ಎಂದೂ ವಿರೋಧಿಸಲಿಲ್ಲ. ಆದರೆ ಸ್ವಹಿತಕ್ಕಾಗಿ, ಅಧಿಕಾರಕ್ಕಾಗಿ ಅಥವಾ ಪ್ರಚಾರಕ್ಕಾಗಿ ಎಂದೂ ಪ್ರಭುತ್ವದೊಂದಿಗೆ ರಾಜಿ ಮಾಡಿಕೊಳ್ಳಲಿಲ್ಲ. ಈಚಿನ ಸಾಹಿತಿಗಳನ್ನು ನೋಡಿದರೆ ಇದಕ್ಕೆ ವಿರುದ್ಧವಾಗಿ ರಾಷ್ಟ್ರವಾದವನ್ನು ಬೈಯುತ್ತಲೇ ಅಧಿಕಾರಕ್ಕಾಗಿಯೋ, ಪ್ರಶಸ್ತಿಗಾಗಿಯೋ ಪ್ರಭುತ್ವದೊಂದಿಗೆ ರಾಜಿ ಮಾಡಿಕೊಂಡವರನ್ನು ಕಾಣುತ್ತೇವೆ.

ಕಾರಂತರನ್ನು ಉದಾರ ಮಾನವತಾವಾದಿ ಎಂದೂ ವ್ಯಕ್ತಿಪಾರಮ್ಯವಾದಿ ಎಂದೂ ಕನ್ನಡ ವಿಮರ್ಶಕರು ಗುರುತಿಸುತ್ತಾರೆ. ಇದೇನೂ ಹೊಗಳಿಕೆಯಾಗಿ ಅಲ್ಲ. ಅವರು ಸಮತಾವಾದಿಯಲ್ಲವೆಂಬ ಹಳಹಳಿಕೆಯೇ ಇಲ್ಲಿ ಇರುವುದು! ಕಲಾಸೃಷ್ಟಿ ಮಾಡಬೇಕಾದರೆ ವ್ಯಕ್ತಿಗೆ ಮುಕ್ತಸ್ವಾತಂತ್ರ್ಯ ಇರಬೇಕು ಎನ್ನುವುದು ಕಾರಂತರ ಧೋರಣೆ. ಮನುಷ್ಯನ ಸಕಲ ಸಂಕಷ್ಟಗಳಿಗೂ ಸಮಾಜವನ್ನೇ ಹೊಣೆ ಮಾಡಲು ಕಾರಂತರು ತಯಾರಿಲ್ಲ. ಮತ್ತೆ ಚೋಮನದುಡಿಯ ಉದಾಹರಣೆ ನೀಡುವುದಾದರೆ, ಚೋಮನ ಸಂಕಷ್ಟಕ್ಕೆ ಸಮಾಜದಲ್ಲಿರುವ ಜಾತಿ ಕಟ್ಟುಕಟ್ಟಲೆಗಳೇ ಕಾರಣವಾದರೂ ಕುಡಿತದ ಚಟವನ್ನು ಬಿಡುತ್ತಿದ್ದರೆ ಅವನಿಗೆ ತನ್ನ ಆಸೆ ಈಡೇರಿಸಿಕೊಳ್ಳುವುದು ಸಾಧ್ಯವಾಗುತ್ತಿತ್ತು ಎಂಬ ಸೂಚನೆ ನೀಡಿದ್ದಾರೆ. ವ್ಯಕ್ತಿ ಪ್ರಯತ್ನವಿಲ್ಲದೆ, ದುಡಿಮೆಯಿಲ್ಲದೆ ಸಮಾಜವೇ ಎಲ್ಲವನ್ನೂ ಮಾಡಬೇಕು ಎಂಬ ನೀತಿಯಲ್ಲಿ ಕಾರಂತರಿಗೆ ನಂಬಿಕೆಯಿಲ್ಲ. ಅವರ ದೃಷ್ಟಿಯಲ್ಲಿ ವ್ಯಕ್ತಿಸ್ವಾತಂತ್ರ್ಯ ತುಂಬ ಮುಖ್ಯವಾದುದು. ಸಮಾಜವಾದ ಅಥವಾ ಸಮತಾವಾದಕ್ಕಾಗಿ ವ್ಯಕ್ತಿಸ್ವಾತಂತ್ರ್ಯವನ್ನು ಬಲಿ ಕೊಡುವುದನ್ನು ಕಾರಂತರು ಒಪ್ಪಲಾರರು.  

ಕನ್ನಡ ವಿಮರ್ಶಕರ ದೃಷ್ಟಿಯಲ್ಲಿ ಕಾರಂತರ ರಾಜಕೀಯ ಧೋರಣೆಯು ಪ್ರತಿಗಾಮಿ ಎನಿಸಿಕೊಳ್ಳಲು ಏನು ಕಾರಣ? ಉತ್ತರ ಸರಳ. ಅವರು ‘ಸಾಹಿತ್ಯ ರಾಜಕೀಯಕ್ಕೆ’ ಬೇಕಾದಂತೆ ರಾಜಕೀಯದ ಬಗ್ಗೆ ಮಾತನಾಡುತ್ತಿರಲಿಲ್ಲ.  ಕಾರಂತರು ಯಾರದ್ದೋ ಮರ್ಜಿಗೆ ಒಳಗಾಗಿ ಅಥವಾ ರಾಜಕೀಯ ಸರಿತನದ ದೃಷ್ಟಿಯಿಂದ ಮಾತನಾಡುತ್ತಿರಲಿಲ್ಲ ಎನ್ನುವುದಕ್ಕೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಅವರು ಬೆಂಬಲ ಸೂಚಿಸಿದ್ದೇ ಸಾಕ್ಷಿ. “ಛೆ! ಇಷ್ಟು ದೊಡ್ಡ ಚಿಂತಕರಾದ ಕಾರಂತರೂ ಹೀಗೆ ಹೇಳುವುದೇ” ಎಂದೆಲ್ಲಾ ಹಲವರು ಪರಿತಪಿಸಿದರು. ಕಾರಂತರೂ ಬ್ಯಾಡ್ ಫೈತ್(ತುಂಬ ಸರಳಗೊಳಿಸಿ ಹೇಳುವುದಾದರೆ, ಸರಿಯಲ್ಲದ, ಆದರೆ ಸರಿಯೆಂದು ಪ್ರಾಮಾಣಿಕವಾಗಿಯೇ ನಂಬಿದ್ದು ಬ್ಯಾಡ್ ಫೈತ್) ಹೊಂದಿದ್ದಾರೆಯೇ  ಎಂಬ ಪ್ರಶ್ನೆ ಬಂತು. ಭಾರತೀಯ ಮಾದರಿಯ ಸೆಕ್ಯುಲರಿಸಮ್ಮಿನ ವಿಕೃತರೂಪ ಕಣ್ಣಿಗೆ ರಾಚುತ್ತಿದ್ದುದರಿಂದಲೇ ಕಾರಂತರು ಯಾವ ಬ್ಯಾಡ್ ಫೈತ್ ಕೂಡ ಇಲ್ಲದೇ ಪ್ರಜ್ಞಾಪೂರ್ವಕವಾಗಿಯೇ ಅಂಥ ಹೇಳಿಕೆ ಕೊಟ್ಟರೇನೋ ಎನಿಸುತ್ತದೆ.  

ಕಾರಂತರು ಆಧುನಿಕರು ಹೌದು. ಆದರೆ ಭಾರತೀಯ ಪರಂಪರೆ ಮತ್ತು ಸಂಸ್ಕತಿ ಬಗ್ಗೆ ಅವರಿಗೆ ತುಂಬ ಗೌರವವಿತ್ತು. “ನಮ್ಮ ಸಂಸ್ಕತಿಯ ಹೆಮ್ಮೆ ಸಾಲದು” ಎಂಬ ಅವರ ಲೇಖನ ಈ ನಿಟ್ಟಿನಲ್ಲಿ ಮುಖ್ಯವಾದುದು. ಭಾರತೀಯವಾದದ್ದು ಮತ್ತು ಸ್ಥಳೀಯವಾದದ್ದರ ಬಗ್ಗೆ, ನಾಡಿನ ಸಾಹಿತ್ಯ, ಕಲೆ, ತತ್ವಜ್ಞಾನ ಇವುಗಳ ಬಗ್ಗೆ ತಿಳಿದುಕೊಂಡು ಯೋಗ್ಯವಾದುದನ್ನು ನಮ್ಮದಾಗಿಸಿಕೊಳ್ಳಬೇಕು ಎಂದು ಅವರು ಹೇಳುತ್ತಾರೆ.

ಯುರೋಪಿನ ಸಂಸ್ಕತಿಯ ಪ್ರಭಾವಕ್ಕೆ ಬಿದ್ದು ನಮ್ಮ ಬದುಕಿನ ಚೆಲುವು, ಕೆಡುಕು, ಸಿಹಿ, ಕಹಿಗಳನ್ನು ತೂಗುವ ಬಗೆ, ಅಳೆಯುವ ಕಣ್ಣುಗಳೆಲ್ಲ ಗೊಂದಲಕ್ಕೆ ಸಿಕ್ಕಿಕೊಂಡಿವೆ ಅಂತ ಕಾರಂತರು ಎಂದೋ ಹೇಳಿದ್ದ ಮಾತನ್ನು ಸುಳ್ಳು ಮಾಡಲು ನಮಗೆ ಇಂದಿಗೂ ಸಾಧ್ಯವಾಗಿಲ್ಲ. ಪಶ್ಚಿಮದ ಚಿಂತನೆಯು ನಮ್ಮ ಮೇಲೆ ಮಾಡಿದ ಜ್ಞಾನರೂಪೀ ಹಿಂಸೆಯನ್ನು ಕಾರಂತರು ಸರಿಯಾಗಿಯೇ ಗುರುತಿಸಿದ್ದಾರೆ. ಕಾರಂತರ ಇಂಥ ಮಾತುಗಳನ್ನು ಕನ್ನಡ ವಿಮರ್ಶಾಲೋಕ ಗಂಭೀರವಾಗಿ ತೆಗೆದುಕೊಳ್ಳದೇ ಇರುವುದರಿಂದ ಇಲ್ಲಿಯ ಮತಧರ್ಮ, ಆಚರಣೆ ಇವನ್ನೆಲ್ಲ ವಿಮರ್ಶಿಸುವ ಮಾನದಂಡಗಳೇ ಸರಿಯಿಲ್ಲ ಎಂದು ಕಾರಂತರು ಅಂದೇ ಹೇಳಿದ್ದ ಮಾತು ನಮಗೆ ಇನ್ನೂ ಅರ್ಥವಾಗಿಲ್ಲ.

 

ಇದನ್ನೂ ಓದಿ: ಬಿಜೆಪಿ ಮೆಗಾ ಆಫರ್: ಮೋದಿಯನ್ನು ಬಯ್ದು ಪ್ರಶಸ್ತಿ ಗೆಲ್ಲಿ!

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!