Featured ಅಂಕಣ

ಬಿಜೆಪಿ ಮೆಗಾ ಆಫರ್: ಮೋದಿಯನ್ನು ಬಯ್ದು ಪ್ರಶಸ್ತಿ ಗೆಲ್ಲಿ!

ಕಾರಂತರೆಂದರೆ ಯಾರಂತ ತಿಳಿದಿರಿ ಎಂದು ಹೊಗಳಿಸಿಕೊಂಡ, ಖಾರಂತ ಎಂದೂ ಕರೆಸಿಕೊಂಡ ಕಡಲತಡಿಯ ಭಾರ್ಗವ, ನಡೆದಾಡುವ ವಿಶ್ವಕೋಶವಾಗಿದ್ದ ಕೋಟ ಶಿವರಾಮ ಕಾರಂತರ ಬಗ್ಗೆ ಯಾರಿಗೆ ತಿಳಿದಿಲ್ಲ? ಜಗತ್ತಿಗೆ ಸುತ್ತು ಹಾಕಿ ಬಾ ಎಂದಾಗ ಗಣೇಶ ತನ್ನ ತಂದೆ ತಾಯಿಗೇ ಒಂದು ಪ್ರದಕ್ಷಿಣೆ ಬಂದು ಬುದ್ಧಿವಂತಿಕೆ ಮೆರೆದಿದ್ದನಂತೆ. ಹಾಗೆ ಕಾರಂತರು ಕೋಟ ಮತ್ತು ಪುತ್ತೂರು ಎಂಬ ಎರಡು, ಕರಾವಳಿಯ ಪುಟ್ಟ ಹಳ್ಳಿಗಳನ್ನು ತನ್ನ ಜೀವನದ ಬಹುಭಾಗವನ್ನು ಕಳೆಯುವುದಕ್ಕೆಂದು ಆರಿಸಿ, ಆ ಹಳ್ಳಿಗಳೆಂಬ ಕಿಟಕಿಗಳ ಮೂಲಕವೇ ವಿಶಾಲ ಜಗತ್ತನ್ನು ನೋಡಿದರು. ಮಾತ್ರವಲ್ಲ; ಇಡೀ ಜಗತ್ತನ್ನು ಆ ಹಳ್ಳಿಗಳಿಗೆ ತಂದರು. ಕಾರಂತರ ವ್ಯಕ್ತಿತ್ವವನ್ನು ಅರ್ಥ ಮಾಡಿಕೊಳ್ಳುವುದೆಂದರೆ ಬೊಗಸೆಯಲ್ಲಿ ತುಂಬುವಷ್ಟು ನೀರನ್ನು ಹಿಡಿದು ಸಮುದ್ರದ ಬಗ್ಗೆ ಅರ್ಥೈಸಿಕೊಳ್ಳಲು ಹೊರಟ ಹಾಗೆ.

ಕಾರಂತರು ಹೆಸರಾದದ್ದು ನಿಷ್ಠುರವಾದಿ ಎಂದು. ಯಾವುದೇ ವಿಷಯದ ಬಗ್ಗೆ ಅತ್ಯಂತ ಆಳವಾದ ಅಧ್ಯಯನ ಮಾಡುತ್ತಿದ್ದ, ತನಗೆ ಸರಿಕಂಡ ವಿಷಯಗಳನ್ನು ನಿರ್ಭೀತಿಯಿಂದ ಹೇಳುತ್ತಿದ್ದ ಕಾರಂತರು ಯಾರ ಮುಲಾಜಿಗೆ ಒಳಗಾದವರಲ್ಲ. ಮುಖಸ್ತುತಿ ಮಾಡಿದವರಲ್ಲ. ಪೊಲಿಟಿಕಲಿ ಕರೆಕ್ಟ್ ಆಗಿರಬೇಕಾದ ದರ್ದು ಅವರ ಇಡೀ ಜೀವನದಲ್ಲೇ ಎಂದೂ ಬರಲಿಲ್ಲ. ಹಾಗೆಂದ ಮಾತ್ರಕ್ಕೆ ಅವರು ಮಾನವ ಸಂವೇದನೆಗಳಿಲ್ಲದ ರೋಬೋಟ್‍ನಂತಿದ್ದರು ಎಂದು ಹೇಳಲಾಗದು. ಕಾರಂತರು ನಾಸ್ತಿಕರಾಗಿದ್ದರು, ಆದರೆ ಅವರ ಮನೆಯಲ್ಲಿ ನಿತ್ಯವೂ ಪೂಜೆ ಪುನಸ್ಕಾರ ಇತ್ತು! ತಮ್ಮ ಪತ್ನಿಯ ಧಾರ್ಮಿಕ ಆಚರಣೆಗಳಿಗೆ ಕಾರಂತರು ಎಂದೂ ಅಡ್ಡಬರಲಿಲ್ಲ, ಮಾತ್ರವಲ್ಲ, ಆಕೆಯೊಂದಿಗೆ ದೇವಸ್ಥಾನಕ್ಕೆ ಹೋಗಿ ಪ್ರದಕ್ಷಿಣೆ ಹಾಕುವುದನ್ನೂ ಮಾಡುತ್ತಿದ್ದರು! ನನ್ನ ನಂಬಿಕೆ ನನ್ನದು, ಆದರೆ ನನ್ನಾಕೆಯ ನಂಬಿಕೆಗಳಿಗೆ ಘಾಸಿ ಮಾಡುವ ಕೆಲಸ ಯಾಕೆ ಮಾಡಬೇಕು ಎಂದು ಹೇಳುವಷ್ಟು ಹೃದಯ ವೈಶಾಲ್ಯತೆ, ಮಾನವೀಯ ದೃಷ್ಟಿ ಅವರಿಗಿತ್ತು. ಅಯೋಧ್ಯೆಯಲ್ಲಿ ಪಂಚಕೋಶಿ ಪರಿಕ್ರಮದಲ್ಲಿ ರಾಮಮಂದಿರ ನಿರ್ಮಾಣ ಆಗಬೇಕು ಎಂದು ಸಹಿ ಸಂಗ್ರಹ ಅಭಿಯಾನ ಆರಂಭವಾದಾಗ ಕಾರಂತರು ಹೇಳಿದ್ದೇನು ಗೊತ್ತೆ? “ರಾಮನ ಅರಮನೆ ಇದ್ದದ್ದು ಎಲ್ಲಿ? ಈಗ ಬಾಬರಿ ಮಸೀದಿ ಇರುವ ಜಾಗದಲ್ಲಿ. ನಿಮಗೆ ನಿಜವಾಗಿ ರಾಮಮಂದಿರ ನಿರ್ಮಾಣ ಮಾಡಬೇಕಿದ್ದರೆ ನೀವು ಆ ಮಸೀದಿಯ ಜಾಗದಲ್ಲಿ ನಿರ್ಮಾಣ ಕಾರ್ಯ ಶುರು ಮಾಡಬೇಕು. ಅದು ಬಿಟ್ಟು ಬೇರ್ಯಾವುದೋ ಜಾಗದಲ್ಲಿ ಅವಕಾಶ ಸಿಕ್ಕರೆ ಸಾಕು ಅಂತೀರಲ್ಲ? ಬಾಬರಿ ಮಸೀದಿಯ ಜಾಗದಲ್ಲಿ ರಾಮಮಂದಿರ ನಿರ್ಮಾಣ ಆಗಬೇಕೆಂದು ಸಂಕಲ್ಪ ಬದಲಾಯಿಸಿಕೊಂಡರೆ ಮಾತ್ರ ಸಹಿ ಮಾಡುತ್ತೇನೆ!” ಇಂಥ ಕೆಚ್ಚೆದೆ ಯಾರಿಗಿದ್ದೀತು!

ಕರ್ನಾಟಕ ಸರಕಾರಕ್ಕೆ ಒಮ್ಮೆ ಅದ್ಭುತವಾದ ಐಡಿಯಾ ಒಂದು ಹೊಳೆಯಿತು. ಅದೇನೆಂದರೆ ಹಂಪಿಯಲ್ಲಿ ಅರ್ಧ ಭಗ್ನವಾಗಿ ನಿಂತಿರುವ ಮೂರ್ತಿಗಳನ್ನು, ಕಟ್ಟಡಗಳನ್ನು ಖಜಾನೆ ಖರ್ಚಿನಲ್ಲಿ ದುರಸ್ಥಿ ಮಾಡಿಸುವುದು. ಪತ್ರಿಕೆಯ ಮೂಲಕ ವಿಷಯ ತಿಳಿದ ಕಾರಂತರು ಕೆಂಡಾಮಂಡಲರಾದರು. “ನಿಮಗೆ ಇತಿಹಾಸ ಪ್ರಜ್ಞೆ ಇದೆಯೇನ್ರೀ? ಹಂಪೆಯಲ್ಲಿ ಅರ್ಧ ತುಂಡಾಗಿ ನಿಂತ ಒಂದೊಂದು ಕಲ್ಲೂ, ಒಂದೊಂದು ವಿಗ್ರಹವೂ ಇತಿಹಾಸದಲ್ಲಿ ಈ ನೆಲದ ಮೇಲೆ ನಡೆದ ಯುದ್ಧಗಳ ಕತೆ ಹೇಳುತ್ತದೆ. ಪರದೇಶಿಗಳ ಆಕ್ರಮಣದ ಕ್ರೌರ್ಯವನ್ನು ಇಂದಿನ ನಮ್ಮ ಮುಖಕ್ಕೆ ಹಿಡಿಯುತ್ತದೆ. ಅಂಥವನ್ನೆಲ್ಲ ಸರಕಾರೀ ಖರ್ಚಿನಲ್ಲಿ ಸರಿ ಮಾಡಿಸಿ ಇತಿಹಾಸದ ರಕ್ತದ ಕಲೆಗಳನ್ನು ಅಳಿಸಿಹಾಕುತ್ತೇವೆ ಎಂದು ಹೊರಟಿದ್ದೀರಲ್ಲಾ, ಇತಿಹಾಸಕ್ಕೆ ನೀವು ಎಂಥ ಅಪಚಾರ ಮಾಡಲು ಹೊರಟಿದ್ದೀರೆಂಬ ಎಚ್ಚರವಾದರೂ ನಿಮಗೆ ಇದೆಯಾ?” ಎಂದು ಸರಕಾರವನ್ನು ತರಾಟೆಗೆ ತೆಗೆದುಕೊಂಡು ಮುಖ್ಯಮಂತ್ರಿಯಾಗಿದ್ದ ವೀರಪ್ಪ ಮೊಯಿಲಿಯವರ ಬೆವರಿಳಿಸಿದ್ದವರು ಕಾರಂತರು.

ನೀವು ಯಾವ ಕ್ಷೇತ್ರದ ಹೆಸರೇ ಹೇಳಿ, ಅಲ್ಲಿ ಕಾರಂತರ ಒಂದು ಛಾಪು ಕಾಣುತ್ತದೆ. ಸಾಹಿತ್ಯ, ಚಿತ್ರಕಲೆ, ಫೋಟೋಗ್ರಫಿ, ಯಕ್ಷಗಾನ, ಪರಿಸರ ಕಾಳಜಿ, ಪ್ರಾಣಿಪ್ರಪಂಚ, ಯಂತ್ರಪ್ರಪಂಚ, ವಿಜ್ಞಾನ, ತಂತ್ರಜ್ಞಾನ, ನಾಟಕ, ಸಿನೆಮಾ, ಪ್ರವಾಸ, ಶಿಕ್ಷಣ… ಯಾವುದು ಹೇಳೋದು, ಯಾವುದು ಬಿಡೋದು! ಅಲ್ಲೆಲ್ಲ ಕಾರಂತರು ಒಂದಷ್ಟು ಗಟ್ಟಿಯಾದ, ಸ್ಪಷ್ಟವಾದ, ನಿಚ್ಚಳವಾದ ಕೆಲಸ ಮಾಡಿಹೋಗಿದ್ದಾರೆ. ತನ್ನ ತೊಂಬತ್ತನೆ ವಯಸ್ಸಿನಲ್ಲಿ ಹಕ್ಕಿಗಳ ಬಗ್ಗೆ ಪುಸ್ತಕ ಬರೆಯುತ್ತಿದ್ದಾಗ, ಫೋಟೋ ತೆಗೆದರೆ ಹಕ್ಕಿಗಳ ದೇಹದ ವಿವರಗಳು ಅಷ್ಟು ಸರಿಯಾಗಿ ಕಾಣಿಸುವುದಿಲ್ಲ ಎಂಬ ಕಾರಣಕ್ಕೆ ತಾನೇ ಕುಂಚ ಹಿಡಿದು ಚಿತ್ರ ಬರೆಯುತ್ತಿದ್ದ ವ್ಯಕ್ತಿ-ಶಕ್ತಿ ಇವರು! ಕಾರಂತರನ್ನು ಒಂದು ವಿಶ್ವವಿದ್ಯಾಲಯ ಎಂದರೂ ಕಡಿಮೆಯೇ. ಎರಡು ಮೂರು ವಿಶ್ವವಿದ್ಯಾಲಯಗಳು ದಶಕಗಳ ಕಾಲ ತಂಡ ಕಟ್ಟಿಕೊಂಡು ಮಾಡಬಹುದಾದ ಕೆಲಸಗಳನ್ನೆಲ್ಲ ಇವರು ಏಕಾಂಗಿಯಾಗಿ ಮಾಡಿಹೋದರಲ್ಲ, ಎಂಥ ಅದ್ಭುತ ಚೈತನ್ಯವನ್ನು ಪ್ರಕೃತಿ ಅವರೊಳಗೆ ಇಟ್ಟಿತ್ತು ಎಂದು ಅಚ್ಚರಿಯಾಗುತ್ತದೆ.

ಕಾರಂತರು ರಾಷ್ಟ್ರವಾದಿಗಳಾಗಿದ್ದರು. ಅವರ ಎಲ್ಲ ಚಿಂತನೆಗಳಲ್ಲೂ ಮುಪ್ಪುರಿಗೊಂಡದ್ದು ರಾಷ್ಟ್ರಪ್ರೇಮವೇ. ವಿಧವಾ ವಿವಾಹದ ವಿಚಾರದಲ್ಲಿ ಗಾಂಧಿಯವರ ಚಿಂತನೆ ತೀರಾ ಸಾಂಪ್ರದಾಯಿಕವಾಗಿದ್ದುದರಿಂದ ಕಾರಂತರು ತಾನು ಅಷ್ಟು ವರ್ಷ ಆರಾಧಿಸಿದ್ದ ಗಾಂಧಿಯನ್ನೇ ಬದಿಗಿಟ್ಟು ಸಮಾಜ ಸುಧಾರಣೆಯ ಕೆಲಸವನ್ನು ಕೈಗೆತ್ತಿಕೊಂಡರು. ವಿಧವೆಯರು ಮರುಮದುವೆಯಾಗಬೇಕು, ಎಲ್ಲರಂತೆ ಸಹಜ ಜೀವನ ನಡೆಸಬೇಕು ಎಂಬುದು ಕಾರಂತರ ನಿಲುವಾಗಿತ್ತು, ಆ ಕಾಲಕ್ಕೆ ಅದು ಎಷ್ಟೊಂದು ಕ್ರಾಂತಿಕಾರಕವಾಗಿತ್ತೆಂಬುದು ಈಗಿನ ನಮಗೆ ಊಹೆಗೆ ದಕ್ಕುವಂಥದಲ್ಲ. ವಿಧವೆಯರು ಮಾತ್ರ ಏಕೆ, ವೇಶ್ಯೆಯರಾಗಿ ಬಾಳು ಸಾಗಿಸಿದವರು ಕೂಡ ಆ ನರಕ ಕೂಪದಿಂದ ಹೊರಬಂದು ಎಲ್ಲರಂತೆ ಬಾಳಲು ಕಾರಂತರು ನೆರವು ಮಾಡಿದರು. ಅಂತರ್ಜಾತೀಯ ವಿವಾಹ, ವಿಧವಾ ಮರುವಿವಾಹ, ದಲಿತರ ದೇವಾಲಯ ಪ್ರವೇಶ ಮುಂತಾದ ಯಾವ ಸಾಮಾಜಿಕ ಕ್ರಾಂತಿಯನ್ನು ಕೈಗೆತ್ತಿಕೊಂಡರೂ ಕಾರಂತರು ಎಂದೂ ತಮ್ಮ ಅನಿಸಿಕೆಯನ್ನು ಇಡೀ ಸಮಾಜದ ಮೇಲೆ ಹೇರಲಿಲ್ಲ. ಸಮಾಜವನ್ನು ಧಿಕ್ಕರಿಸಿ ಹೋಗಲಿಲ್ಲ. ಸಮಾಜಮುಖಿಯಾಗಿದ್ದೇ, ಸಮಾಜದ ಒಳಗಿದ್ದೇ ಜನರನ್ನು ತಿದ್ದುವ ಕೆಲಸ ಮಾಡಿದವರು ಅವರು. ಹಾಗಾಗಿಯೇ, ಆ ಕಾಲದ ನಿಜವಾದ ಬುದ್ಧಿಜೀವಿಯಾಗಿದ್ದ ಕಾರಂತರನ್ನು ಸಮಾಜ ಬಹಿಷ್ಕರಿಸಲಿಲ್ಲ. ನಿಮ್ಮ ಮಾತು ಕೇಳುವುದಿಲ್ಲ ಎಂದು ಯಾರೂ ಹಠ ಹಿಡಿಯಲಿಲ್ಲ. ತನ್ನ ಕೊನೆಯ ಉಸಿರಿನವರೆಗೂ ಕಾರಂತರು ಸಮಾಜದೊಳಗಿದ್ದೇ, ಸಮಾಜದ ಜನರ ಪ್ರೀತಿಯ ಗಳಿಸಿಯೇ ಬದುಕಿದರು. ಪರಿಸರದ ಬಗ್ಗೆ ಅವರು ಒಂದು ಘೋಷಣೆ ಮಾಡಿದರೆ ಸಾಕು, ಸಾವಿರಾರು ಜನ ಅವರೊಂದಿಗೆ ಹೋರಾಟ ಮಾಡಲು, ಸತ್ಯಾಗ್ರಹ ಕೂರಲು ಸಿದ್ಧರಾಗಿದ್ದರು. ಇಂದಿರಾಗಾಂಧಿಯ ಎಮರ್ಜೆನ್ಸಿಯ ಸಂದರ್ಭದಲ್ಲಿ ಅದನ್ನು ವಿರೋಧಿಸುವುದೋ ಬೆಂಬಲಿಸುವುದೋ ತಿಳಿಯದೆ, ಯಾವ ಕಡೆಯಿಂದ ಹೆಚ್ಚು ರಾಜಕೀಯ ಲಾಭಗಳನ್ನು ಮಾಡಿಕೊಳ್ಳಬಹುದು ಎಂದು ಲೆಕ್ಕಾಚಾರ ಹಾಕುತ್ತ ಸುಮ್ಮನಿದ್ದ; ಕೆಲವೊಮ್ಮೆ ಒಳಗೊಳಗೇ ಬೆಂಬಲವನ್ನೂ ವ್ಯಕ್ತಪಡಿಸಿದ್ದ ವ್ಯಕ್ತಿಗಳ ಮೂತಿಗೆ ಬಾರಿಸುವಂತೆ ಕಾರಂತರು ಎಮರ್ಜೆನ್ಸಿ ಎಂದರೆ ಸ್ವಾತಂತ್ರ್ಯ ಹರಣ ಎಂದು ಗುಡುಗಿ ಪ್ರಧಾನಿಯಾಗಿದ್ದ ಇಂದಿರಾಗಾಂಧಿಗೆ ಪತ್ರ ಬರೆದು ತನಗೆ ಸಿಕ್ಕಿದ್ದ ಪದ್ಮಭೂಷಣವನ್ನು ಕೇಂದ್ರಕ್ಕೆ ವಾಪಸು ಮಾಡಿದರು. ಬಹುಶಃ ಕಾರಂತರಿಂದ ನಮ್ಮ ಈಗಿನ ಬುದ್ಧಿಜೀವಿಗಳು ಕಲಿತ ಏಕೈಕ ಪಾಠ ಎಂದರೆ ಈ ಪ್ರಶಸ್ತಿ ವಾಪಸಾತಿ! ಆದರೆ ಅದನ್ನು ಕೂಡ ಸರಿಯಾಗಿ ಕಲಿಯಲಿಲ್ಲ. ರಾಜ್ಯ ಸರಕಾರದ ವೈಫಲ್ಯಗಳಿಗೆ ಇವರು ಕೇಂದ್ರದ ವಿರುದ್ಧ ಪ್ರತಿಭಟನೆ ಮಾಡುತ್ತಾರೆ. ಸಿದ್ದರಾಮಯ್ಯನವರ ರಾಜ್ಯದಲ್ಲಿ ಪ್ರೊಫೆಸರ್ ಒಬ್ಬರ ಕೊಲೆ ನಡೆದರೆ ಇದಕ್ಕೆಲ್ಲ ಪ್ರಧಾನಿ ನರೇಂದ್ರ ಮೋದಿಯವರೇ ಕಾರಣ ಎಂದು ಇವರು ತಮ್ಮ ಪ್ರಶಸ್ತಿಗಳನ್ನು ವಾಪಸು ಕೊಟ್ಟದ್ದು ಕೇಂದ್ರಕ್ಕೆ. ಆದರೆ ಆ ಪ್ರತಿಭಟನೆಯನ್ನು ಕೂಡ ಅವರು ಹೃದಯಾಂತರಾಳದಿಂದ ಮಾಡಲಿಲ್ಲ. ಪ್ರಶಸ್ತಿ ವಾಪಸು ಎಂಬ ಪ್ರಚಾರ ಗಿಟ್ಟಿಸಿಕೊಂಡು ಅವರು ವಾಪಸು ಮಾಡಿದ್ದು ಪ್ರಶಸ್ತಿ ಫಲಕಗಳನ್ನು ಮಾತ್ರ! ಕನ್ನಡದ ಉದ್ದಾಮ ಸಾಹಿತಿ, ಅಂತ್ಯಕವಿ ಎಂದೇ ಹೆಸರಾದ ಚಂದ್ರಶೇಖರ ಪಾಟೀಲರು ಪ್ರಶಸ್ತಿ ಫಲಕ ವಾಪಸು ಕೊಟ್ಟು ಪ್ರಶಸ್ತಿಯ ದುಡ್ಡನ್ನು ತನ್ನಲ್ಲೇ ಉಳಿಸಿಕೊಂಡರು! ಹೇಗಿದೆ ಜಾಣ್ಮೆ!

ಈಗಿನ ಸಾಹಿತಿಗಳನ್ನು, ಅವರ ಎಡಬಿಡಂಗಿತನಗಳನ್ನು ಕಂಡಾಗೆಲ್ಲ “ಕಾರಂತರು ಬದುಕಿದ್ದಿದ್ದರೆ..” ಎಂಬ ಯೋಚನೆಯೊಂದು ಮನಸ್ಸಲ್ಲಿ ಹಾದುಹೋಗುತ್ತದೆ. ಕಾರಂತರು ಬದುಕಿದ್ದಿದ್ದರೆ ಈ ಸಾಹಿತಿಗಳಂತೆ ದಿನಬೆಳಗಾದರೆ ಎದ್ದು ಟೌನ್‍ಹಾಲ್‍ನಿಗೆ ಪ್ರದಕ್ಷಿಣೆ ಹೊಡೆಯುತ್ತಿದ್ದರೇ? ಖಂಡಿತಾ ಇಲ್ಲ. ಟೌನಾಲ್ ಗಂಜಿಗಿರಾಕಿಗಳಿಗೆ ಕಾರಂತರು ಲಾತಾ ಹೊಡೆಯುತ್ತಿದ್ದರು ಎಂದು ಹೇಳಬಹುದು! ಇಂಥ ಗಂಜಿಪಡೆಯಲ್ಲಿ ಇತ್ತೀಚೆಗೆ ಗುರುತಿಸಿಕೊಂಡಿರುವ ಪ್ರಕಾಶ್ ರಾಜ್ ಅಲಿಯಾಸ್ ಪ್ರಕಾಶ್ ರೈ, ದುರ್ದೈವವಶಾತ್, ನಾಡಿದ್ದು ಅಕ್ಟೋಬರ್ 10ನೇ ತಾರೀಖು ಕೋಟದಲ್ಲಿ ನಡೆವ ಸಮಾರಂಭವೊಂದರಲ್ಲಿ ಕಾರಂತರ ಹೆಸರಿನಲ್ಲಿರುವ “ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ”ಯನ್ನು ಪಡೆಯುತ್ತಿದ್ದಾರೆ! ಈ ಪ್ರಕಾಶ್ ರೈ ಯಾರು? ಕಾವೇರಿ ವಿಚಾರದಲ್ಲಿ ಟಿವಿ ಚಾನೆಲ್ ಒಂದು ಪ್ರಶ್ನಿಸಿದಾಗ ಚಾನೆಲ್‍ನವರಿಗೆ ಹಿಗ್ಗಾಮುಗ್ಗಾ ಬೈಯ್ದು ಟಿಆರ್‍ಪಿ ಗಿಟ್ಟಿಸಿಕೊಂಡ ವ್ಯಕ್ತಿ. ಯಾವ ಕಾರಂತರು ತನ್ನ ನಾಡಿನ, ತನ್ನ ಊರಿನ ನೆಲ-ಜಲಕ್ಕಾಗಿ ನಿರಂತರವಾಗಿ ಹೋರಾಡಿದ್ದರೋ ಅಂಥವರಿಗೆ ವಿರುದ್ಧವೆನ್ನುವಂತೆ, ಕಾವೇರಿ ವಿಚಾರದಲ್ಲಿ ಯಾವ ಅಭಿಪ್ರಾಯವನ್ನೂ ಹೇಳದೆ ನುಣುಚಿಕೊಂಡು, ಕೊನೆಗೆ ತಮಿಳುನಾಡಿನ ರೈತರ ಪರವಾಗಿ ಹೋರಾಟ ಮಾಡಿದ ವ್ಯಕ್ತಿ ಪ್ರಕಾಶ್. ನಾಸ್ತಿಕನಾಗಿಯೂ ತನ್ನ ಪತ್ನಿಯೊಂದಿಗೆ ದೇವಸ್ಥಾನಕ್ಕೆ ಹೋಗುತ್ತಿದ್ದ; ಸಾಲಿಗ್ರಾಮದ ದೇವಸ್ಥಾನದ ಜೀರ್ಣೋದ್ಧಾರದ ಕೆಲಸದಲ್ಲಿ ತೊಡಗಿಸಿಕೊಂಡಿದ್ದ; ಅಯೋಧ್ಯೆಯ ರಾಮಮಂದಿರ ನಿರ್ಮಾಣದ ಪರವಾಗಿ ಮಾತಾಡಿದ್ದ ಕಾರಂತರೆಲ್ಲಿ? ಉತ್ತರ ಪ್ರದೇಶದ ಮುಖ್ಯಮಂತ್ರಿಗಳು ಮಾಡುವ ಕನ್ಯಾಪೂಜೆ ದೊಡ್ಡ ನಾಟಕ; ಅದಕ್ಕೇ ತಾನು ತನ್ನ ನಟನೆಯ ಪ್ರಶಸ್ತಿಗಳನ್ನೆಲ್ಲ ಕೊಟ್ಟುಬಿಡುತ್ತೇನೆ ಎಂದು ಅಣಕಿಸುವ ಪ್ರಕಾಶ್ ರಾಜ್ ಎಲ್ಲಿ? ಲೋಕಸಂಚಾರಿಯಾಗಿದ್ದರೂ ಕನ್ನಡದಲ್ಲಿ ಬರೆದ, ಕನ್ನಡವನ್ನು ಉಸಿರಾಡಿದ, ಕರ್ನಾಟಕವನ್ನೇ ತನ್ನ ಕರ್ಮಭೂಮಿಯಾಗಿ ಮಾಡಿಕೊಂಡ ಕಾರಂತರೆಲ್ಲಿ? ಗಾಳಿ ಬಂದ ಕಡೆ ತೂರಿಕೋ ಎನ್ನುತ್ತ ಅನ್ಯಭಾಷೆಗಳಲ್ಲಿ ರಾಜ್ ಆಗುತ್ತ ಕನ್ನಡಕ್ಕೆ ಬಂದಾಗ ರೈ ಆಗುತ್ತ, ಯಾವ ಭಾಷೆಯ ನಾಡಿನಲ್ಲೂ ವಿರೋಧ ಕಟ್ಟಿಕೊಳ್ಳದೆ ಬ್ಯುಸಿನೆಸ್ ಮಾಡುತ್ತಿರುವ ಪ್ರಕಾಶ್ ರಾಜ್ ಎಲ್ಲಿ? ಒಂದು ವಿಶ್ವವಿದ್ಯಾಲಯವೇ ಆಗಿದ್ದ ಕಾರಂತರೆಲ್ಲಿ? ಬೇರೆಯವರು ಬರೆದುಕೊಟ್ಟ ಡಯಲಾಗ್‍ಗಳನ್ನಷ್ಟೇ ಕ್ಯಾಮರಾ ಮುಂದೆ ಹೊಡೆಯಲು ಲಾಯಕ್ಕು ಎಂಬುದನ್ನು ಪ್ರೂವ್ ಮಾಡಿರುವ ಪ್ರಕಾಶ್ ರಾಜ್ ಎಲ್ಲಿ? ದಾಖಲೆ ಇಲ್ಲದೆ ಯಾವುದನ್ನೂ ಮಾಡದ, ತಾನು ಬರೆದ ಪ್ರತಿಯೊಂದೂ ಸತ್ಯಸ್ಯಸತ್ಯವಾಗಿರಬೇಕೆಂಬ ವಿಚಾರದಲ್ಲಿ ಅಪಾರ ಎಚ್ಚರ, ಬದ್ಧತೆ ಕಾಯ್ದುಕೊಂಡಿದ್ದ ಕಾರಂತರೆಲ್ಲಿ? ಗೌರಿಯ ಕೊಲೆಯ ವಿಚಾರದಲ್ಲಿ ಯಾವ ಪುರಾವೆ, ಸಾಕ್ಷ್ಯಗಳೂ ಇಲ್ಲದೆ ಸಿಕ್ಕಸಿಕ್ಕವರ ಮೇಲೆ ಗೂಬೆ ಕೂರಿಸುತ್ತಿರುವ ಪ್ರಕಾಶ್ ರಾಜ್ ಎಲ್ಲಿ?

ಇಲ್ಲಿ ನಾವು ಎರಡು ಸಂಗತಿಗಳನ್ನು ಹೇಳಬೇಕಾಗಿದೆ.

ಒಂದು – ಪ್ರಕಾಶ್ ರಾಜ್ ಕಾರಂತರ ಹೆಸರಿನ ಪ್ರಶಸ್ತಿಯನ್ನು ಪಡೆಯಲು ಎಷ್ಟು ಮಾತ್ರಕ್ಕೂ ಅರ್ಹರಲ್ಲ. ಅವರ ಇತ್ತೀಚಿನ ಎಡಬಿಡಂಗಿ ಹೇಳಿಕೆಗಳನ್ನು ನೋಡಿದರೆ ಎಡಬಿಡಂಗಿ ಬ್ರಿಗೇಡ್‍ನ ತದ್ವಿರುದ್ಧವಾಗಿದ್ದ ಕಾರಂತರಿಗೂ ಇವರಿಗೂ ಅಜಗಜಾಂತರ ಎನ್ನುವುದು ಸ್ಪಷ್ಟ. ಕಾರಂತರ ಹೆಸರಿನ ಪ್ರಶಸ್ತಿಯನ್ನು ಉಡುಪಿ ಜಿಲ್ಲೆಯ ಕೋಟತಟ್ಟು ಗ್ರಾಮಪಂಚಾಯತ್ ನೀಡುತ್ತಿದೆ. ಪ್ರಶಸ್ತಿ ಘೋಷಣೆ ಮಾಡಿದ ಸಂದರ್ಭದಲ್ಲಿ ಅವರಿಗೆ ಪ್ರಕಾಶ್ ರಾಜ್ ಅವರ ವ್ಯಕ್ತಿತ್ವದ ನಿಜಬಣ್ಣ ಗೊತ್ತಿರಲಿಲ್ಲ ಎನ್ನುವುದು ಕ್ಷಮಾರ್ಹ ಸಂಗತಿ. ಪ್ರಶಸ್ತಿಯನ್ನು ಘೋಷಣೆ ಮಾಡಿದರು, ಸರಿ. ಆದರೆ ಇತ್ತೀಚೆಗೆ ನಡೆದಿರುವ ಬೆಳವಣಿಗೆಗಳಿಂದ ಪ್ರಕಾಶ್ ರಾಜ್ ಎಂಥವರು, ಅವರ ವ್ಯಕ್ತಿತ್ವ ಎಷ್ಟು ಲೊಳಲೊಟ್ಟೆ ಎಂಬುದು ಜಗಜ್ಜಾಹೀರಾಗಿದೆ. ಇಷ್ಟಾದ ಮೇಲೂ ಅದೇ ವ್ಯಕ್ತಿಗೆ ಪ್ರಶಸ್ತಿ ಕೊಡಲು ಹೋದರೆ ಈ ಗ್ರಾಮಪಂಚಾಯತಿಗೆ ಹಗಲುಗುರುಡೆ? ಜಗತ್ತಿನ ವ್ಯವಹಾರಗಳು ಯಾವುದೂ ತಿಳಿಯುತ್ತಿಲ್ಲವೇ? ಎಂದು ಪ್ರಶ್ನಿಸಬೇಕಾಗುತ್ತದೆ. ಗ್ರಾಮಪಂಚಾಯತ್ ತನ್ನ ಮತ್ತು ಕಾರಂತರ ಹೆಸರಿನ ಘನತೆಯನ್ನು ಉಳಿಸಬೇಕಾದರೆ ಈ ಕೂಡಲೇ ಪ್ರಶಸ್ತಿಪಟ್ಟಿಯಿಂದ ಪ್ರಕಾಶ್ ಅನ್ನು ಕೈ ಬಿಡಬೇಕು. ಕೋಟ ಶ್ರೀನಿವಾಸ ಪೂಜಾರಿಯವರ ಬಗ್ಗೆ ರಾಜ್ಯದ ಜನರಿಗೆ ಅಭಿಮಾನವಿದೆ. ಅವರು ಎಡ-ಬಲ ಎನ್ನದೆ ರಾಜ್ಯದ ಎಲ್ಲ ವರ್ಗ-ಪಕ್ಷಗಳ ಜತೆಯೂ ಒಳ್ಳೆಯ ಸಂಬಂಧ ಇರುವ ವ್ಯಕ್ತಿ. ಕಾಂಗ್ರೆಸ್‍ನ ಪಡಸಾಲೆಯಲ್ಲಿ ಅವರಿಗೆ ಮುಕ್ತ ಪ್ರವೇಶ ಇದೆ. ಕಾಂಗ್ರೆಸ್‍ನ ಹಲವು ಪ್ರಮುಖ ಧುರೀಣರ ಜೊತೆ ಅವರಿಗೆ ಒಳ್ಳೆಯ ಸಂಬಂಧ ಇದೆ. ಅದೇ ಕಾರಣಕ್ಕೆ ಬುದ್ಧಿಜೀವಿಗಳು, ಪ್ರಗತಿಪರರು, ಎಡಬಿಡಂಗಿಗಳು ಕೂಡ ಪೂಜಾರಿಯವರಿಗೆ ಹತ್ತಿರದವರೇ. ಇದೇ ಕಾರಣವಾಗಿ ಅವರೀಗ ಪ್ರಕಾಶ್ ರಾಜ್ ಹೆಸರನ್ನು ಪ್ರಶಸ್ತಿಗೆ ಅಂತಿಮಗೊಳಿಸಿದ್ದರೆ ಅದಕ್ಕಿಂತ ದುರಂತ ಇನ್ನೊಂದಿಲ್ಲ. ಪಂಚಾಯತಿನ ಹೆಸರಲ್ಲಿ ಪೂಜಾರಿಯವರು ತನ್ನ ಅಜೆಂಡಾವನ್ನು ಹೇರುತ್ತಿದ್ದಾರೆ ಎಂದು ಹೇಳಬೇಕಾಗುತ್ತದೆ. ಅವರೀಗ ಸ್ವಪ್ರತಿಷ್ಠೆಯ ಜಿದ್ದಿಗೆ ಬಿದ್ದು ಪ್ರಕಾಶ್ ರಾಜ್‍ಗೇ ಪ್ರಶಸ್ತಿ ಕೊಡೋದು ಎಂದು ಹಠ ಹಿಡಿದರೆ ಕಾರಂತರ ಹೆಸರಿಗೆ ಮಸಿ ಬಳಿಯುವುದು ಮಾತ್ರವಲ್ಲ; ಇಡೀ ಕರ್ನಾಟಕದ ಪ್ರಜ್ಞಾವಂತರ ಗೌರವ ಕಳೆದುಕೊಳ್ಳುತ್ತಾರೆ.

ಎರಡನೆ ಸಂಗತಿ ಏನೆಂದರೆ ಕೋಟತಟ್ಟು ಗ್ರಾಮಪಂಚಾಯತು ಬಿಜೆಪಿಯ ಕೈಯಲ್ಲಿರುವ ಗ್ರಾಮಪಂಚಾಯತು. ಅಲ್ಲಿರುವ 80%ಕ್ಕೂ ಹೆಚ್ಚು ಮಂದಿ ಸದಸ್ಯರು ಬಿಜೆಪಿಗೆ ಸೇರಿದವರು. ಕಳೆದ 15 ವರ್ಷಗಳಿಂದ ಬಿಜೆಪಿಯ ಹಿಡಿತದಲ್ಲಿರುವ ಗ್ರಾಮಪಂಚಾಯತು ಅದು. ಈಗ ಕಾರ್ಯಕ್ರಮಕ್ಕೆ ಬರುತ್ತಿರುವ ಮುಖ್ಯ ಅಭ್ಯಾಗತರು ಕೂಡ ಬಿಜೆಪಿಯವರೇ. ಹಾಲಾಡಿ ಶ್ರೀನಿವಾಸ ಶೆಟ್ಟರು ಮತ್ತು ಶೋಭಾ ಕರಂದ್ಲಾಜೆ ಕಾರ್ಯಕ್ರಮದಲ್ಲಿ ವೇದಿಕೆ ಮೇಲಿರುತ್ತಾರೆ. ಶೋಭಾ ಕರಂದ್ಲಾಜೆಯವರು ಮೊನ್ನೆ ಪ್ರಕಾಶ್ ರಾಜ್ ಮೋದಿ ಮತ್ತು ಯೋಗಿಯವರ ವಿರುದ್ಧ ಹೇಳಿಕೆ ಕೊಟ್ಟಾಗ ಉಗ್ರವಾಗಿ ಪ್ರತಿಭಟಿಸಿದ್ದರು. ಈಗ ಅದೇ ಶೋಭಕ್ಕ ಕೋಟದಲ್ಲಿ ಅದೇ ಪ್ರಕಾಶ್ ರಾಜ್‍ಗೆ ಹಾರ-ತುರಾಯಿ ಹಾಕಿ ಪ್ರಶಸ್ತಿ ಕೊಟ್ಟು ಸನ್ಮಾನ ಮಾಡುತ್ತಾರೆಯೇ? ಬಿಜೆಪಿ ಯಾರ ಕಿವಿಗೆ ಹೂವಿಡಲು ಯತ್ನಿಸುತ್ತಿದೆ? ರಾಜ್ಯದ ಜನ ಅಷ್ಟೊಂದು ಕುರುಡರಾಗಿದ್ದಾರೆಯೇ? ಶೋಭಾ ಮತ್ತು ಹಾಲಾಡಿಯವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಖಳನಟನಿಗೆ ಪ್ರಶಸ್ತಿ ಕೊಟ್ಟದ್ದೇ ಆದರೆ ಇವರ ಸಿದ್ಧಾಂತ ಒಂದು, ಅನುಕೂಲಸಿಂಧು ರಾಜಕೀಯ ಇನ್ನೊಂದು ಎಂದು ಜನ ಮಾತಾಡಿಕೊಳ್ಳುವಂತಾಗುತ್ತದೆ ಅಲ್ಲವೆ?

ಕೊನೆಯದಾಗಿ ಹೇಳುವುದು ಇಷ್ಟೆ. ಪ್ರಶಸ್ತಿ ಘೋಷಣೆ ಮಾಡಿದಿರಿ, ತಪ್ಪಲ್ಲ. ಆದರೆ ಈಗ ಪ್ರಶಸ್ತಿ ಪ್ರದಾನ ಮಾಡುವ ಮುನ್ನವೇ ಪ್ರಶಸ್ತಿ ಪುರಸ್ಕತನ ಹಣೆಬರಹ ಎಲ್ಲರಿಗೂ ತಿಳಿದು ಹೋಗಿದೆ. ಈಗ ಅವನಿಗೇ ಕೊಡುವ ಹಠಮಾರಿತನ ಬೇಡ. ಪ್ರಶಸ್ತಿಯ ಘೋಷಣೆಯನ್ನು ಹಿಂಪಡೆದುಕೊಳ್ಳಿ. ನಾಲ್ಕು ದಿನ ತಡವಾದರೂ ಪರವಾಯಿಲ್ಲ; ಅರ್ಹರನ್ನೇ ಹುಡುಕಿ ಪ್ರಶಸ್ತಿ ಕೊಡಿ. ಡಾ. ಬಿ.ಎಂ. ಹೆಗ್ಡೆ, ಸಾಲುಮರದ ತಿಮ್ಮಕ್ಕ, ಚಿಟ್ಟಾಣಿ, ಮೋಹನ್ ಆಳ್ವ, ಜಯಂತ್ ಕಾಯ್ಕಿಣಿ ಮುಂತಾದ ಗೌರವಯುತ ವ್ಯಕ್ತಿತ್ವಗಳಿಗೆ ಸಿಕ್ಕಿದ್ದ ಪ್ರಶಸ್ತಿ ಅದು. ಅದರ ಮರ್ಯಾದೆಯನ್ನೀಗ ಮಣ್ಣಿಗುಜ್ಜಿ ಹಾಳು ಮಾಡಬೇಡಿ. ಇಷ್ಟೆಲ್ಲ ವಿರೋಧ ಬರುತ್ತಿರುವುದರಿಂದ ಪ್ರಶಸ್ತಿ ಬೇಡ ಎಂದು ಪುರಸ್ಕತನಾಗಲಿರುವವನಂತೂ ಹೇಳಿಲ್ಲ; ನೀವಾದರೂ ಅದನ್ನು ಅನರ್ಹನ ಕೈ ಸೇರುವುದನ್ನು ತಪ್ಪಿಸಿ ಕಾರಂತರ ಹೆಸರಿನ ಮರ್ಯಾದೆಯನ್ನು ಉಳಿಸಬೇಕಾಗಿದೆ.

-ಶೇಖರ್ ಪೂಜಾರಿ
ಉಡುಪಿ

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!