Featured ಅಂಕಣ

ಒಂದು ಕೆಟ್ಟ ವಿಜ್ಞಾನ ಲೇಖನ ಹೇಗಿರುತ್ತದೆಂದರೆ…

ಅಕ್ಟೋಬರ್ 5, 2017ರಂದು ಪ್ರಜಾವಾಣಿಯ “ವಿಜ್ಞಾನ ವಿಶೇಷ” ಅಂಕಣದಲ್ಲಿ “ನಿಸರ್ಗ ಪ್ರಕೋಪಗಳು ನೈಸರ್ಗಿಕವೇ ಅಲ್ಲ!” ಎಂಬ ಶೀರ್ಷಿಕೆಯ ಲೇಖನ ಪ್ರಕಟವಾಗಿತ್ತು. ಅದನ್ನು ಓದುತ್ತ ಹೋದಾಗ ನನಗನ್ನಿಸಿದ್ದು “ಒಂದು ಕೆಟ್ಟ ವಿಜ್ಞಾನ ಲೇಖನ ಹೇಗಿರುತ್ತದೆ” ಎಂದು ತೋರಿಸಲಿಕ್ಕಾದರೂ ಈ ಲೇಖನ ಉಪಯೋಗಕ್ಕೆ ಬರುವ ಸಾಧ್ಯತೆ ಇದೆ; ಬೇರಾವುದಕ್ಕೂ ಅಲ್ಲವಾದರೂ! ನಿಂತ ಗಡಿಯಾರ ದಿನಕ್ಕೆರಡು ಬಾರಿ ಸರಿಯಾದ ಸಮಯ ತೋರಿಸುತ್ತದೆ ಎಂದ ಹಾಗೆ, ಅಥವಾ ಕೆಟ್ಟ ವ್ಯಕ್ತಿ ಕೆಟ್ಟ ವ್ಯಕ್ತಿ ಹೇಗಿರುತ್ತಾನೆಂಬುದಕ್ಕೆ ಉದಾಹರಣೆಯಾಗಿ ಉಪಯೋಗಕ್ಕೆ ಬರುತ್ತಾನೆ ಎಂದ ಹಾಗೆ, ಈ ಲೇಖನದ ಮೂಲಕ ನಾವು ಒಂದು ವಿಜ್ಞಾನ ಲೇಖನವನ್ನು ಅತ್ಯಂತ ಕೆಟ್ಟ ರೀತಿಯಲ್ಲಿ ಹೇಗೆ ಬರೆಯಬಹುದು ಎಂಬುದನ್ನು ಕಲಿಯಬಹುದು.

ಅಂದ ಹಾಗೆ, ಲೇಖನ ಬರೆದವರು ಸನ್ಮಿತ್ರರೂ ಹಿರಿಯರೂ ಆದ ನಾಗೇಶ್ ಹೆಗಡೆಯವರು. ಇವರ ಜೊತೆ ನನಗೆ ವೈಯಕ್ತಿಕ ದ್ವೇಷವಾಗಲೀ ಹಗೆಯಾಗಲೀ ಇಲ್ಲವೆಂಬುದು ಅವರಿಗೂ ಗೊತ್ತು, ಉಳಿದವರಿಗೂ ಗೊತ್ತು. ಪ್ರಸ್ತುತ ಲೇಖನದಲ್ಲಿ ನಾನು ಅವರ ಲೇಖನವನ್ನು ಎದುರಿಟ್ಟುಕೊಂಡು ವಿಶ್ಲೇಷಣೆಗೆ ತೊಡಗಿದ್ದೇನೆಂದ ಮಾತ್ರಕ್ಕೆ ನಮ್ಮಿಬ್ಬರ ವೈಯಕ್ತಿಕ ಸ್ನೇಹಸಂಬಂಧ ಹಾಳಾಗಿದೆಯೆಂದು ಯಾರೂ ಭಾವಿಸಬಾರದು, ಹಾಳು ಮಾಡುವ ಕೆಲಸಕ್ಕೂ ಕೈ ಹಾಕಬಾರದು. ಆ ಎಚ್ಚರವನ್ನಿಟ್ಟುಕೊಂಡು ನಾನು ಅವರ ಲೇಖನದ ವಿಶ್ಲೇಷಣೆಗೆ ಇಳಿಯುತ್ತಿದ್ದೇನೆ. ವಿಜ್ಞಾನವನ್ನು ವಿಜ್ಞಾನದ ವಿದ್ಯಾರ್ಥಿಗಳಾಗಿ ಓದುವವರಿಗೂ ವಿಜ್ಞಾನದ ಹಿನ್ನೆಲೆಯಿಲ್ಲದೆ ಹೋದರೂ ಕುತೂಹಲಕ್ಕಾಗಿ ಓದುವವರಿಗೂ ಒಂದಷ್ಟು ಒಳನೋಟಗಳನ್ನು ಕೊಡುವುದಷ್ಟೇ ಇಲ್ಲಿ ನನ್ನ ಉದ್ದೇಶ.

ನಾಗೇಶ್ ಹೆಗಡೆಯವರ ಲೇಖನ ಅಮೆರಿಕಾದ ಫ್ಲೋರಿಡಾ ತೀರಕ್ಕೆ ಇತ್ತೀಚೆಗೆ ಹೊಡೆದ ಇರ್ಮಾ ಚಂಡಮಾರುತದ ಭೀಕರ ಸ್ವರೂಪ ಹೇಗಿತ್ತೆಂಬುದರ ವಿವರಣೆಯೊಂದಿಗೆ ಶುರುವಾಗುತ್ತದೆ. ಮೊದಲ ಒಂದೆರಡು ವಾಕ್ಯವೃಂದಗಳಲ್ಲಿ ಅದರ ರುದ್ರಸ್ವರೂಪವನ್ನು ವರ್ಣಿಸಿ ಹೆಗಡೆಯವರು ರಿಚರ್ಡ್ ಬ್ರಾನ್ಸನ್ ಎಂಬ ಉದ್ಯಮಿಯ ವಿವರಣೆಗೆ ಬರುತ್ತಾರೆ. ಆತನ ಒಡೆತನದ ದ್ವೀಪವೂ ಇರ್ಮಾ ದಾಳಿಗೆ ಒಳಗಾಯಿತು; ಆದರೆ ಆತ ನೆಲಮಾಳಿಗೆಯಲ್ಲಿ ಕೂತು ಚಂಡಮಾರುತದಿಂದ ತಪ್ಪಿಸಿಕೊಂಡ ಎಂಬುದು ಇದಕ್ಕೆ ಕಾರಣ. ಬ್ರಾನ್ಸನ್‍ನ ಬಗ್ಗೆ ಒಂದೆರಡು ವಾಕ್ಯವೃಂದಗಳಲ್ಲಿ ಬರೆದುಕೊಂಡ ಮೇಲೆ ಹೆಗಡೆಯವರು ಮುಂದೆ ವಿಶ್ವ ಆವಾಸ ದಿನದ ಬಗ್ಗೆ ಬರೆಯುತ್ತಾರೆ. ಜಗತ್ತಿನಲ್ಲಿ ಶ್ರೀಮಂತರು ಮತ್ತು ಬಡವರ ನಡುವೆ ಹೇಗೆ ಕಂದರ ನಿರ್ಮಾಣವಾಗಿದೆ ಎಂಬುದನ್ನು ವಿವರಿಸುತ್ತಾರೆ. ಅಲ್ಲಿಂದ ಗಾಂಧಿಯ ವಿವರಣೆ ಬರುತ್ತದೆ. ವಿಶ್ವ ಆವಾಸ ದಿನ ಮತ್ತು ಗಾಂಧೀಜಯಂತಿ ಎರಡೂ ಒಂದೇ ದಿನ ಬಂದಿದ್ದವು ಎಂಬುದು ಗಾಂಧಿ ಇಲ್ಲಿ ಇಣುಕಲು ಕಾರಣ. ಅದಾಗಿ ನೈಸರ್ಗಿಕ ವಿಕೋಪ ತಗ್ಗಿಸುವ ದಿನದ ವಿವರಣೆಗೆ ಬರುವಷ್ಟು ಹೊತ್ತಿಗೆ ಅಂಕಣದ ಶಬ್ದಮಿತಿ ಮುಗಿದಿದೆ. ಹಾಗಾಗಿ ಆ ವಿಷಯದ ಬಗ್ಗೆ ಒಂದು ವಾಕ್ಯದಲ್ಲಿ ಹೇಳಿ ಕೊನೆಗೆ ವಿಜಯ್ ಮಲ್ಯನ ಬಗ್ಗೆ ಬರೆಯುತ್ತಾರೆ. ಮಲ್ಯನ ಬಂಧನ – ಬಿಡುಗಡೆ ವಿಚಾರಗಳು ಭಾರತದ ಮಟ್ಟಿಗೆ “ಸುದ್ದಿ ಸುಂಟರಗಾಳಿ” ಆಗಿದ್ದವು ಎಂಬುದಷ್ಟೇ ಮಲ್ಯ ಈ ಲೇಖನದಲ್ಲಿ ಕಾಣಸಿಕೊಳ್ಳಲು ಕಾರಣ. ಇಷ್ಟು ವಿಷಯಗಳನ್ನು ಹೇಳುತ್ತ ಲೇಖನ ಮುಗಿಯುತ್ತದೆ. ಇನ್ನು ಮುಂದೆ ನಾನು ಹೇಳಲಿರುವ ವಿಷಯಗಳನ್ನು ಓದುಗರು ಚೆನ್ನಾಗಿ ಅರ್ಥ ಮಾಡಿಕೊಳ್ಳಬೇಕಾದರೆ ಮೊದಲು ನಾಗೇಶ್ ಹೆಗಡೆಯವರ ಆ ಮೂಲ ಲೇಖನವನ್ನು ಓದಬೇಕು. ಅದರ ಆನ್‍ಲೈನ್ ಕೊಂಡಿ ಇಲ್ಲಿದೆ: ನಿಸರ್ಗ ಪ್ರಕೋಪಗಳು ನೈಸರ್ಗಿಕವೇ ಅಲ್ಲ!

ಲೇಖನ ಓದಿಯಾದರೆ ಈಗ ಅದನ್ನು ಮುಚ್ಚಿ ಒಂದು ಕ್ಷಣ ಯೋಚಿಸಿ. ಇಡೀ ಲೇಖನಕ್ಕೆ ಒಂದು ಕೇಂದ್ರಬಿಂದು ಎಂಬುದು ಇದೆಯೇ? ಇರ್ಮಾ ಚಂಡಮಾರುತಕ್ಕೂ ಬ್ರಾನ್ಸನ್‍ಗೂ ಏನು ಸಂಬಂಧ? ಆತ ತನ್ನ ವೈನ್ ಇಡುವ ನೆಲಮಾಳಿಗೆಯಲ್ಲಿ ಕೂತು ಚಂಡಮಾರುತದಿಂದ ತಪ್ಪಿಸಿಕೊಳ್ಳದೆ ಮತ್ತೇನು ಮಾಡಬೇಕಿತ್ತು? ಆ ಸುಂಟರಗಾಳಿಗೆ ಎದುರಾಗಿ ಹೋಗಬೇಕಿತ್ತೇ? ಇಷ್ಟಕ್ಕೂ ಆತ ಅಡಗಿಕೂತ ನೆಲಮಾಳಿಗೆ ಕೂಡ ಆ ಸುಂಟರಗಾಳಿಯಲ್ಲಿ ಸುರಕ್ಷಿತವಾಗಿರಲಿಲ್ಲ. ಇದೇ ಬ್ರಾನ್ಸನ್ ಅದೇ ಹೊತ್ತಿಗೆ “ಇಂಥದೊಂದು ರುದ್ರ ಭೀಕರ ಸುಂಟರಗಾಳಿಯನ್ನು ಹಿಂದೆಂದೂ ಕಂಡಿರಲಿಲ್ಲ. ಈಗ ಬೇಗ ಸುರಕ್ಷಿತ ತಾಣವೊಂದನ್ನು ಸೇರಿಕೊಳ್ಳಬೇಕಾಗಿದೆ. ಈ ಬಿರುಗಾಳಿ ಇದ್ದದ್ದನ್ನೆಲ್ಲ ಎತ್ತೆತ್ತಿ ಎಸೆಯುತ್ತಿದೆ” ಎಂದು ಟ್ವೀಟ್ ಮಾಡಿದ್ದ. ಸುಂಟರಗಾಳಿಯ ಪ್ರತಾಪವೆಲ್ಲ ತಣ್ಣಗಾದ ಮೇಲೆ ಆತ ನೆಲಮಾಳಿಗೆಯಿಂದ ಹೊರಬಂದರೆ ಆ ಮನೆಯ ಬಾಗಿಲೂ ತಾರಸಿಯ ಮಾಡೂ ನಲವತ್ತು ಅಡಿ ದೂರಕ್ಕೆ ಹಾರಿ ಬಿದ್ದಿದ್ದವು. ಉಳಿದ ಎಲ್ಲರಂತೆ ಆತನ ಜಮೀನೂ ಹಾಳಾಗಿತ್ತು. ಆದರೆ ತನಗೆ ಬೇಕಾದ್ದನ್ನು ಮಾತ್ರ ಆರಿಸಿ ತೆಗೆಯಲು ಹೊರಟಿದ್ದ ನಾಗೇಶ್ ಹೆಗಡೆಯವರಿಗೆ ಆ ವಿವರಗಳಲ್ಲಿ ಆಸಕ್ತಿ ಇರಲಿಲ್ಲ. ಸುಂಟರಗಾಳಿ ಬಂದಾಗ ಬ್ರಾನ್ಸನ್ ಅಡಗಿ ಕೂತದ್ದೇ ಒಂದು ಮಹಾಪರಾಧ ಎನ್ನುವಂತೆ ಬರೆಯುವ ಅವರು ಮುಂದೆ ಆತನ ವ್ಯಕ್ತಿತ್ವವನ್ನು ಕಿಚಾಯಿಸುವುದಕ್ಕೆ ಕೂತು ಬಿಡುತ್ತಾರೆ. ಅವರ ಮುಂದಿನ ಸಾಲುಗಳು ಹೀಗಿವೆ: “ಈತನ ಕಾರ್ಪೊರೇಟ್ ದುಸ್ಸಾಹಸಗಳಿಂದಾಗಿಯೇ ಶ್ರಮಿಕರ ಹಣವೆಲ್ಲ ಶ್ರೀಮಂತರತ್ತ ಹರಿದಿದ್ದು, ಸಾರ್ವಜನಿಕ ಸೊತ್ತುಗಳು ಈತನ ಖಾಸಗಿ ಕಂಪನಿಗಳ ಪಾಲಾಗಿದ್ದು, ಈತನ ವರ್ಜಿನ್ ಗೆಲಾಕ್ಟಿಕ್ ವಿಮಾನ ಕಂಪೆನಿಗಳ ಏರು ಭರಾಟೆಯಿಂದಾಗಿಯೇ (ತನ್ನ ಐದನೆಯ ವಿಮಾನ ಕಂಪೆನಿಯ ಉದ್ಘಾಟನೆಯ ಸಂದರ್ಭದಲ್ಲಿ ಈತ ತನ್ನ ಅಂಡರ್‍ವೇರ್ ಮೇಲೆ ಖಡಕ್ ಸ್ಪರ್ಧೆ ಎಂದು ಬರೆದು ಮಾಧ್ಯಮಗಳೆದುರು ಪ್ರದರ್ಶಿಸಿದ್ದ) ವಾಯುಮಂಡಲದ ಮಾಲಿನ್ಯ ಅತಿಯಾಗಿ, ಈಗಿನ ಈ ಚಂಡಮಾರುತಗಳ ಹಾವಳಿಗೆ ಈತನ ಕೊಡುಗೆ ಗಣನೀಯವಾಗಿದ್ದು ಮತ್ತೆ ಮುನ್ನೆಲೆಗೆ ಬಂತು”. ಇಲ್ಲಿ ಬಂದಿರುವ ಒಂದೊಂದು ವಾಕ್ಯವನ್ನೂ ವಿಶ್ಲೇಷಿಸಿ. ಈತನ ಕಾರ್ಪೊರೇಟ್ ದುಸ್ಸಾಹಸಗಳಿಂದ ಶ್ರಮಿಕರ ಹಣವೆಲ್ಲ ಶ್ರೀಮಂತರತ್ತ ಹರಿಯಿತು. ಪುರಾವೆ? ದೇವರೇ ಬಲ್ಲ! ಲಕ್ಷಗಟ್ಟಲೆ ಲಾಭ ಮಾಡಿಕೊಳ್ಳುವ ಯಾವುದೇ ವ್ಯವಹಾರಸ್ಥನಾದರೂ ಆರ್ಥಿಕ ಅಸಮಾನತೆಗೆ ಕಾರಣನಾಗಿಯೇ ಆಗುತ್ತಾನೆ. ಆತನ ಬಳಿ ದುಡ್ಡು ಹರಿದು ಬಂತು ಎಂದರೆ ಉಳಿದ ಯಾರದ್ದೋ ದುಡ್ಡು ಕರಗಿತು ಎಂದೇ ಅರ್ಥ ಅಲ್ಲವೇ? ಹಾಗಿರುವಾಗ ಈ ಬ್ರಾನ್ಸನ್ ಮಾತ್ರ ಹೆಗಡೆಯವರ ಕಣ್ಣಲ್ಲಿ ಖಳನಾಯಕನಾಗಲು ಏನು ಕಾರಣ? ಇನ್ನು ಈತನ ವರ್ಜಿನ್ ಗೆಲಾಕ್ಟಿಕ್ ಕಂಪೆನಿಯ ಭರಾಟೆಯಿಂದಾಗಿ ಚಂಡಮಾರುತದ ಆರ್ಭಟ ಹೆಚ್ಚಾಗಿದೆ ಎಂದು ವಿಜ್ಞಾನ ಲೇಖಕರಾದ ಹೆಗಡೆಯವರು ಬರೆದಿದ್ದಾರೆ. ಎಲಾನ್ ಮಸ್ಕ್‍ನ ಹೈಪರ್‍ಲೂಪ್‍ನಂತೆ ವರ್ಜಿನ್ ಗೆಲಾಕ್ಟಿಕ್ ಇನ್ನೂ ಪ್ರಾಯೋಗಿಕ ಹಂತದಲ್ಲಿದೆ. ಅದು ಸುಂಟರಗಾಳಿಯನ್ನು ಸೃಷ್ಟಿಸುವುದು ಹೇಗೆ? ಒಂದು ವೇಳೆ ಆಕಾಶದಲ್ಲಿ ವಿಮಾನಗಳನ್ನು ಹಾರಿಸಿಯೇ ಸುಂಟರಗಾಳಿಯನ್ನು ಸೃಷ್ಟಿ ಮಾಡಬಹುದಾದರೆ ನಮ್ಮ ವೈರಿ ದೇಶಗಳ ಮೇಲೆ ಅಂಥ ತಂತ್ರವನ್ನು ಪ್ರಯೋಗಿಸಬಹುದಲ್ಲ? ಮೀನುಗಳು ಮೂತ್ರ ವಿಸರ್ಜಿಸಿ ಸಮುದ್ರದ ನೀರು ಉಪ್ಪಾಯಿತು ಎಂದರೆ ಹೇಗೋ ಹಾಗಿದೆ ಹೆಗಡೆಯವರ ತರ್ಕ! (ಇನ್ನು ಬ್ರಾನ್ಸನ್‍ನ ಚಡ್ಡಿಯ ವಿವರ ಅವರ ಲೇಖನದಲ್ಲಿ ಯಾಕೆ ಬಂತೋ ಗೊತ್ತಿಲ್ಲ. ಬಹುಶಃ ಸ್ಯಾಡಿಸ್ಟಿಕ್ ಸಂತೋಷ ಅನುಭವಿಸಲು ಇದ್ದೀತೇನೋ)

ಒಟ್ಟಾರೆ ನೋಡಿದಾಗ, ಇರ್ಮಾ ಸುಂಟರಗಾಳಿಯ ವಿವರಗಳಿಗೂ ಬ್ರಾನ್ಸನ್ ತನ್ನ ದ್ವೀಪದಲ್ಲಿ ಹೇಗೆ ಅಡಗಿ ಕೂತ ಎಂಬ ಮಾಹಿತಿಗೂ ಯಾವ ಬಾದರಾಯಣ ಸಂಬಂಧವೂ ಕಾಣಿಸುತ್ತಿಲ್ಲ. ಆದರೆ ಅವೆರಡರ ಸಂಬಂಧವನ್ನು ಸ್ಥಾಪಿಸದೆಯೇ ಹೆಗಡೆಯವರು ಅಲ್ಲಿಂದ ಮುಂದಕ್ಕೆ ಶ್ರೀಮಂತ – ಬಡವರ ನಡುವಿನ ಕತೆ ಹೇಳಲು ಶುರು ಮಾಡುತ್ತಾರೆ. ನಗರ ಪ್ರದೇಶಗಳಲ್ಲಿ ಇವರಿಬ್ಬರ ನಡುವೆ ಅಂತರ ಹೆಚ್ಚುತ್ತಿದೆ ಎನ್ನುತ್ತಾರೆ. ನೈಸರ್ಗಿಕ ಪ್ರಕೋಪಗಳಾದಾಗ ಬಡವರೇ ಹೆಚ್ಚು ಸಂಕಷ್ಟಕ್ಕೆ ಈಡಾಗುವವರು, ಶ್ರೀಮಂತರು ವಿಮಾನ ಏರಿ ಪಾರಾಗಿ ಬಿಡುತ್ತಾರೆ ಎಂಬುದು ಅವರ ತರ್ಕ. ಕೆರೆಬಿಯನ್ ದ್ವೀಪಗಳಲ್ಲಿ ಚಂಡಮಾರುತದ ಸಂದರ್ಭದಲ್ಲಿ ಬಡವರು ಮಾತ್ರ ಕಷ್ಟ ಪಟ್ಟರು ಎಂಬ ಮಾತೂ ಹೆಗಡೆಯವರ ಲೇಖನದಲ್ಲಿ ಬಂದಿದೆ. ಹೀಗೆ ಕೇವಲ ಬಡವರು ಮಾತ್ರ ಇರುವ ನಗರಗಳು ಜಗತ್ತಿನ ಎಲ್ಲಾದರೂ ಇದೆಯೇ? ಉದಾಹರಣೆಗೆ ಬೆಂಗಳೂರಲ್ಲಿ ಕಳೆದ ಮೂರು ವಾರಗಳಿಂದ ಬಿಟ್ಟೂ ಬಿಡದೆ ಮಳೆ ಸುರಿಯುತ್ತಿದೆ; ಬಡವರು ಮಾತ್ರ ತೊಂದರೆಪಟ್ಟಿದ್ದಾರೆ ಎಂದು ಹೇಳಬಹುದೆ? ಬಡವರು ಮತ್ತು ಶ್ರೀಮಂತರು ಎದುರಿಸುವ ತೊಂದರೆಗಳು ಭಿನ್ನ ಸ್ವರೂಪದ್ದಾಗಿರುವ ಸಾಧ್ಯತೆ ಇಲ್ಲವೇ? ಇನ್ನು ಹೆಗಡೆಯವರು “ಬೆಂಗಳೂರಲ್ಲಿ ಪ್ರವಾಹದ ರಗಳೆಗಳು ಅಪಾರ್ಟ್‍ಮೆಂಟ್ ಮತ್ತು ಕೊಳೆಗೇರಿ ನಿವಾಸಿಗಳಿಗೆ ಏಕರೂಪವಾಗಿ ಅಡಚಣೆ ಉಂಟು ಮಾಡಿದರೂ ದೃಶ್ಯಮಾಧ್ಯಮದಲ್ಲಿ ಯಾರ ಸಂಕಷ್ಟಗಳು ಮುಂಬೆಳಕಿಗೆ ಬಂದುವೆಂದು ನಮಗೆ ಗೊತ್ತೇ ಇದೆ” ಎಂದು ಬರೆದಿದ್ದಾರೆ. ಟಿವಿ, ಪತ್ರಿಕೆಯಂಥ ಮಾಧ್ಯಮಗಳು ಎಲ್ಲಿ ಕರುಳು ಕಿತ್ತು ಬರುವಂಥ, ಪರಿಣಾಮಕಾರೀ “ದೃಶ್ಯವೈಭವ”ಗಳು ಸಿಗುತ್ತವೋ ಅಂಥವನ್ನೇ ಹೆಚ್ಚು ವೈಭವೀಕರಿಸಿ ಬಿತ್ತರಿಸುತ್ತವೆ ಎಂಬುದು ನಮಗೆಲ್ಲ ಗೊತ್ತೇ ಇರುವ ವಿಷಯ. ಉದಾಹರಣೆಗೆ ಬೆಂಗಳೂರಲ್ಲಿ ಮಳೆ ಬಂತು ಎಂದಿಟ್ಟುಕೊಳ್ಳಿ. ಎಲ್ಲಿ ಹೆಚ್ಚು ನೀರು ನಿಂತಿದೆಯೋ, ಎಲ್ಲಿ ರಸ್ತೆಗಳು ಕೆರೆಗಳಂತೆ ಕಾಣುತ್ತವೆಯೋ ಅಂಥವನ್ನೇ ಅವು ಗುರಿಯಾಗಿಟ್ಟು ತೋರಿಸುತ್ತವೆ. ಅಂದ ಮಾತ್ರಕ್ಕೆ ಒಂದು ನಿರ್ದಿಷ್ಟ ಗುಂಪು ಮಾತ್ರ ತೊಂದರೆಪಡುತ್ತಿದೆ ಎಂದು ಹೇಳುವುದು ಹಾಸ್ಯಾಸ್ಪದ ವಾದವಾಗುತ್ತದೆ. ಹೆಗಡೆಯವರು ಮುಂದುವರಿದು “ರಾಜಾಕಾಲುವೆ ಒತ್ತುವರಿ ಮಾಡಿಕೊಂಡು ಸಹಜ ಹರಿವಿಗೆ ಅಡೆತಡೆ ಮಾಡಿ ಎತ್ತರದ ಕಟ್ಟಡ ನಿರ್ಮಿಸಿ, ಪ್ರವಾಹ ಸಮಸ್ಯೆಗೆ ಕಾರಣರಾದವರು ಯಾರೆಂಬುದೂ ನಮಗೆ ಗೊತ್ತಿದೆ. ಅವರ ಆ ತಪ್ಪಿಗಾಗಿ ಯಾರು ಶಿಕ್ಷೆಗೊಳಗಾದರು ಎಂಬುದೂ ಗೊತ್ತಿದೆ” ಎಂದು ಬರೆಯುತ್ತಾರೆ. ಅಂದರೆ ನಗರಗಳಲ್ಲಿ ಕೃತಕ ಪ್ರವಾಹ ಸೃಷ್ಟಿಯಾಗುತ್ತಿರುವುದು ರಾಜಾಕಾಲುವೆಯ ಮೇಲೆ ಅಕ್ರಮ ಕಟ್ಟಡ ಕಟ್ಟಿದ ಶ್ರೀಮಂತರಿಂದ ಮಾತ್ರ ಎಂಬುದು ಅವರ ವಾದ. ನೇರಾನೇರ ಸರಳರೇಖೆಯಂಥ ವಾದ ಇದು. ಕೆರೆಗಳನ್ನು ನಿಧಾನವಾಗಿ ಒತ್ತುವರಿ ಮಾಡುತ್ತ ಬಂದು ಅದರ ಮೇಲೆ ಗುಡಿಸಲು ಕಟ್ಟಿಕೊಂಡು ನಂತರ ಆ ಇಡೀ ಜಾಗವನ್ನೇ ಆಕ್ರಮಿಸಿಕೊಂಡವರು ಬೆಂಗಳೂರಲ್ಲಿ ಎಷ್ಟು ಸಾವಿರ ಇದ್ದಾರೆಂದು ಬೇಕಾದರೆ ನಾನೇ ಕರೆದುಕೊಂಡು  ಹೋಗಿ ತೋರಿಸುತ್ತೇನೆ. ಒಂದು ನಗರ ಎಂದ ಮೇಲೆ ಅಲ್ಲಿ ಬಡವ, ಶ್ರೀಮಂತ ಇಬ್ಬರೂ ಇರುತ್ತಾರೆ. ಮತ್ತು ಇಬ್ಬರೂ ತಮಗೆ ಸಾಧ್ಯವಾದಷ್ಟು ಅಕ್ರಮದ ದಾರಿಗಳಲ್ಲಿ ತಮ್ಮ ಸೂರು ಕಟ್ಟಿಕೊಳ್ಳಲು, ಬೇಳೆ ಬೇಯಿಸಿಕೊಳ್ಳಲು ಪ್ರಯತ್ನ ಪಡುತ್ತಲೇ ಇರುತ್ತಾರೆ. ಬಡವನೆಂದ ಮಾತ್ರಕ್ಕೆ ಆತ ಪ್ರಾಮಾಣಿಕ, ಸತ್ಯಸಂಧ, ಏನೂ ಅರಿಯದ ಮುಗ್ಧ; ಶ್ರೀಮಂತನಾದ ಮಾತ್ರಕ್ಕೆ ಆತ ಕುಳ, ಖಳ, ಫಟಿಂಗ ಎಂಬ ನಿರ್ಣಯ ಬರೆಯುವುದು ತೀರಾ ಎಳಸಾಗುತ್ತದೆ. ವಿಜ್ಞಾನ ಲೇಖಕರು ಸಮಸ್ಯೆಗಳನ್ನು ವಿಶ್ಲೇಷಿಸಬೇಕಾದ ರೀತಿ ಇದು ಖಂಡಿತ ಅಲ್ಲ.

ನಾಗೇಶ ಹೆಗಡೆಯವರು ತಮ್ಮ ಲೇಖನದಲ್ಲಿ ಮೂವರು “ವಿಜ್ಞಾನಿಗಳ” ಉಲ್ಲೇಖ ಮಾಡಿದ್ದಾರೆ. ಅವರಲ್ಲಿ ಒಬ್ಬ ಹೇಳಿದನಂತೆ “ವರ್ಜಿನ್ ಗ್ಯಾಲಕ್ಟಿಕ್ ಎಂಬ ಆ ಎರಡು ಶಬ್ದಗಳೇ ಸಾಕು. ವಿಕೋಪವನ್ನು ಧ್ವನಿಸುತ್ತವೆ!” ಆತ ಆ ಮಾತನ್ನು ಯಾಕೆ ಹೇಳಿದ, ಯಾವ ಆಧಾರದಲ್ಲಿ ಹೇಳಿದ ಎಂಬುದನ್ನು ಲೇಖನ ವಿವರಿಸುವುದಿಲ್ಲ. ಎರಡು ವರ್ಷದ ಹಿಂದೆ ಬೆಂಗಳೂರಲ್ಲಿ ಓರ್ವ ವಿಜ್ಞಾನ ಲೇಖಕಿ “ಆ ಮೋದಿಯ ಮುಖ ನೋಡಿದರೇನೇ ಆತ ಸ್ತ್ರೀಪೀಡಕ ಎಂಬುದು ಗೊತ್ತಾಗುತ್ತದೆ” ಎಂದು ಹೇಳಿದ್ದರು. ನೀವು ಎಡಪಂಥೀಯ ಬ್ರಿಗೇಡ್‍ನಲ್ಲಿದ್ದರೆ ಇದೊಂದು ಅನುಕೂಲ; ನೀವು ಇಂಥ ತಲೆಬುಡವಿಲ್ಲದ, ಯಾವುದೇ ಆಧಾರವಿಲ್ಲದ ಅರ್ಥಹೀನ ಮಾತುಗಳನ್ನು ಹೇಳುತ್ತಾ ಹೋಗಬಹುದು. ನಿಮ್ಮ ಮಾತಿಗೆ ಅರ್ಥ ಕಟ್ಟುವ, ಅತ್ಯದ್ಭುತ ಮಾತು ಎಂದು ತಲೆಯಾಡಿಸುವ ಬಹುದೊಡ್ಡ ಪ್ರೇಕ್ಷಕ ವರ್ಗ ಅಂತಾರಾಷ್ಟ್ರೀಯ ಮಟ್ಟದಲ್ಲೂ ಸಿಗುತ್ತದೆ. ವಾಪಸ್ ಹೆಗಡೆಯವರ ಲೇಖನಕ್ಕೆ ಮರಳುವುದಾದರೆ, ಅವರು ಉಲ್ಲೇಖಿಸಿದ ಎರಡನೆ ವ್ಯಕ್ತಿ, ಓರ್ವ ಲೇಖಕಿ, ರಿಚರ್ಡ್ ಬ್ರಾನ್ಸನ್‍ನ ಅವ್ಯವಹಾರಗಳನ್ನು ಕುರಿತು ಪುಸ್ತಕವನ್ನೇ ಬರೆದಿದ್ದಾಳಂತೆ. ಗೌರಿ ಲಂಕೇಶ್ ಸತ್ತ ಎರಡೇ ದಿನಕ್ಕೆ ಆಕೆಯ ಹೆಸರಲ್ಲಿ ನೂರಾರು ಪುಟಗಳ ಪುಸ್ತಕ ಹೊರತಂದ ಎಡಬಿಡಂಗಿಗಳ ಬರೆಯುವ ಕೆಪ್ಯಾಸಿಟಿ ಗೊತ್ತಿರುವವರಿಗೆ, ಹೀಗೆ ಬ್ರಾನ್ಸನ್ ಮೇಲೆಯೋ ಅಂಬಾನಿ/ಅದಾನಿ ಮೇಲೆಯೋ ಅವರು ಪುಸ್ತಕ ಬರೆಯುವುದು ಮತ್ತು ಅದರಲ್ಲಿ “ಸತ್ಯದ ಅನಾವರಣ” ಮಾಡುವುದು ಆಶ್ಚರ್ಯ ತರದು. ಇನ್ನು ಹೆಗಡೆಯವರು ಉಲ್ಲೇಖಿಸಿದ ಮೂರನೇ ವ್ಯಕ್ತಿ “ಚಂಡಮಾರುತಗಳು ಪಕ್ಷಪಾತ ತೋರುವುದಿಲ್ಲ. ಆದರೆ ಪಕ್ಷಪಾತ ತೋರುವ ಸಮುದಾಯದ ನೆಲಕ್ಕೇ ಅವು ಅಪ್ಪಳಿಸುತ್ತವೆ” ಎಂಬ ಕಾವ್ಯಾತ್ಮಕ ಮಾತು ಹೇಳಿದ್ದಾನಂತೆ. ಈ ಮಾತಿನ ಅರ್ಥ ಏನು ಎಂಬುದು ನನಗಂತೂ ಹೊಳೆಯಲಿಲ್ಲ. ಚಂಡಮಾರುತಗಳು ಪಕ್ಷಪಾತ ತೋರುವುದಿಲ್ಲ ಎಂಬುದೇನೋ ನಿಜವೇ. ಅವಕ್ಕೆ ಎಲ್ಲವೂ ಒಂದೇ. ದೊಡ್ಡ ಕಟ್ಟಡವನ್ನೂ ಅಡ್ಡ ಮಲಗಿಸುತ್ತವೆ; ಬಡವನ ಗುಡಿಸಲನ್ನೂ ಹಾರಿಸುತ್ತವೆ. ಇಂಥಾದ್ದರ ಮೇಲೆ ಮಾತ್ರ ತನ್ನ ಪ್ರತಾಪ ತೋರಿಸಬೇಕು ಎಂಬ ಮೀಸಲಾತಿಯನ್ನು ಅವು ತೋರಿಸವು. ಆದರೆ “ಪಕ್ಷಪಾತ ತೋರುವ ಸಮುದಾಯದ ನೆಲಕ್ಕೇ ಅವು ಅಪ್ಪಳಿಸುತ್ತವೆ” ಎಂಬುದರ ಅರ್ಥ ಏನು? ನಿಜಕ್ಕೂ ಆ ಮಾತಿಗೆ ಅರ್ಥ ಇದೆಯೇ? ಲೇಖನ ಪ್ರಕಟಿಸಿದ ಸಂಪಾದಕರಿಗಾದರೂ ಆ ಮಾತು ಅರ್ಥವಾಗಿದೆಯೇ? ಅಥವಾ ಅರ್ಥವಾಗದ ಮಾತುಗಳಲ್ಲಿ ಗಹನವಾದ ಏನೋ ಇರುತ್ತದೆ ಎಂಬ ನಂಬಿಕೆಯಿಂದ ಆ ಮಾತುಗಳನ್ನು ಪ್ರಕಟಿಸಲಾಗಿದೆಯೇ? ಈ ಮಾತುಗಳನ್ನು ಹೇಳಿದ್ದಾನೆಂದು ಹೆಗಡೆಯವರು ಯಾರ ಹೆಸರನ್ನು ಬರೆದಿದ್ದಾರೋ ಆ ಡೇನಿಯಲ್ ವೋಸ್ಕೊಬೊಯ್ನಿಕ್ “ನ್ಯೂ ಇಂಟನ್ರ್ಯಾಷನಲ್” ಎಂಬ ಪತ್ರಿಕೆಯಲ್ಲಿ “Why natural disasters are not natural” ಎಂಬ ಹೆಸರಲ್ಲಿ ಲೇಖನ ಬರೆದಿದ್ದಾನೆ. ಹೆಗಡೆಯವರ ಲೇಖನದ ಹೆಸರು “ನಿಸರ್ಗ ಪ್ರಕೋಪಗಳು ನೈಸರ್ಗಿಕವೇ ಅಲ್ಲ!”. ಡೇನಿಯಲ್ ಮತ್ತು ಹೆಗಡೆಯವರ ಲೇಖನಗಳ ಶೀರ್ಷಿಕೆಯಲ್ಲಿರುವ ವ್ಯತ್ಯಾಸ ಒಂದು “!” ಮಾತ್ರ! ಅಂದರೆ ಇವರು ತನ್ನ ಲೇಖನದ ಪೂರ್ತಿ ಹೂರಣವನ್ನು ಎಲ್ಲಿಂದ ಎತ್ತಿ ತಂದಿದ್ದಾರೆ ಎಂದು ನಾನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.

ಕಮ್ಯುನಿಸ್ಟ್ ಲೇಖಕರ ಕೆಲವೊಂದು ವರಸೆಗಳು ಎಂದೆಂದೂ ಒಂದೇ ಆಗಿರುತ್ತವೆ. ಇವರು ಅಮೆರಿಕಾ ವಿರೋಧಿಗಳು. ಶ್ರಮಿಕರು “ಅನಾದಿಕಾಲ”ದಿಂದ ತೊಂದರೆ ಅನುಭವಿಸುತ್ತಿದ್ದಾರೆಂದು ಒಂದೇ ಕಣ್ಣಲ್ಲಿ ಅಳುವವರು ಇವರು. ಶ್ರೀಮಂತ ಬ್ಯುಸಿನೆಸ್‍ಮ್ಯಾನ್ ಎಂದೊಡನೆ ಇವರಿಗೆ ಕಾಣುವುದು ಕೆಲವೇ ಕೆಲವು ಉದ್ಯಮಿಗಳು ಮಾತ್ರ. ಅದರಲ್ಲೂ ಅಂತಾರಾಷ್ಟ್ರೀಯ ಕಮ್ಯುನಿಸ್ಟ್ ಚಿಂತಕರಿಗೆ ಕಾಣಿಸುವುದು ಅಮೆರಿಕಾದ ಉದ್ಯಮಿಗಳು ಮಾತ್ರ. ರಷ್ಯಾ ಅಥವಾ ಚೀನಾದ ಶತಕೋಟಿ ಡಾಲರ್ ಬಾಳುವ ಉದ್ಯಮಿಗಳ ಬಗೆಗೆ ಇವರು ಅಪ್ಪಿತಪ್ಪಿಯೂ ಮಾತಾಡುವುದಿಲ್ಲ. ಭಾರತದಲ್ಲೂ ಅಷ್ಟೇ, ಅಂಬಾನಿ, ಅದಾನಿ ಇತ್ಯಾದಿ ವ್ಯಕ್ತಿಗಳ ಬಗ್ಗೆ ಮಾತಾಡುವ ಇವರು ಅಪ್ಪಿತಪ್ಪಿಯೂ ಸೋಷಲಿಸ್ಟ್ ನಾರಾಯಣ ಮೂರ್ತಿಗಳ ವಿರುದ್ಧ; ಅವರು ಮಾಡಿಟ್ಟ ಸಂಪತ್ತಿನ ಕ್ರೋಢೀಕರಣದ ಬಗ್ಗೆ ಮಾತಾಡುವುದಿಲ್ಲ. ಇನ್ನು ಎರಡನೆಯದಾಗಿ, ಯಾವುದಾದರೂ ಸಮಸ್ಯೆಯನ್ನು ವಿಶ್ಲೇಷಿಸಿ ಇವರು ಕೊಡುವ ಅಂತಿಮ ನಿರ್ಣಯಗಳು ಅತ್ಯಂತ ಸರಳವಾಗಿರುತ್ತವೆ. ಬ್ರಾನ್ಸನ್ ವಿಮಾನ ಓಡಿಸಿ ಸುಂಟರಗಾಳಿ ಎಬ್ಬಿಸಿದ – ಎಂಬಂತೆ! ಹೆಗಡೆಯವರು, ಹಳ್ಳಿಗಳಿಂದ ನಗರಕ್ಕೆ ಜನ ಏಕೆ ವಲಸೆ ಬರುತ್ತಿದ್ದಾರೆಂಬುದಕ್ಕೆ ಕೊಡುವ ಕಾರಣವೂ ಹಾಗೆಯೇ. ಅವರು ಹೇಳುತ್ತಾರೆ: “ನಮ್ಮ ದೇಶದಲ್ಲಿ ಗ್ರಾಮೀಣ ಭಾಗದಿಂದ ವಲಸೆ ಬಂದು ಪಟ್ಟಣಗಳಲ್ಲಿ ಕೊಳೆಗೇರಿಗಳಲ್ಲಿ ಹೇಗೋ ಮುದುರಿ ನೆಲೆಸುವವರ ಸಂಖ್ಯೆ ಮೇರೆ ಮೀರಿ ಬೆಳೆಯುತ್ತಿದೆ. ಹಾಗೆ ಬರುತ್ತಿರುವವರಲ್ಲಿ ಬಹುಪಾಲು ಜನರು ನೈಸರ್ಗಿಕ ಪ್ರಕೋಪ ತಾಳಲಾರದೆ ಬರುತ್ತಿದ್ದಾರೆ”. ಹಳ್ಳಿಯಲ್ಲಿ ನೆರೆ ಬಂತು ಎಂದು ಹೇಳಿ ನಗರಕ್ಕೆ ಬರುವವರನ್ನು ಎಂದಾದರೂ ನೋಡಿದ್ದೀರಾ? ಒಂದು ವೇಳೆ ಬರಗಾಲ ಬಿತ್ತು ಎಂದು ಹೇಳಿ ನಗರಕ್ಕೆ ಬಂದವರಿದ್ದರೂ ಹಳ್ಳಿಯಲ್ಲಿ ನಾಲ್ಕು ಹನಿ ಮಳೆಯಾಯಿತಂತೆ ಎಂದು ತಿಳಿದೊಡನೆ ಹಳ್ಳಿಗೆ ದೌಡಾಯಿಸುವವರೇ ಎಲ್ಲರೂ. ಹಾಗಿರುವಾಗ ಹಳ್ಳಿಯಿಂದ ಜನ ನಗರಕ್ಕೆ ಬರುತ್ತಿರುವುದು ನೈಸರ್ಗಿಕ ಪ್ರಕೋಪ ಎಂದು ಹೇಳುವುದು ಹೇಗೆ? ಹೆಗಡೆಯವರ ಉತ್ತರ ಕನ್ನಡ ಜಿಲ್ಲೆಯಲ್ಲೇ ಅದೆಷ್ಟೋ ಹವ್ಯಕ ಮನೆಗಳಲ್ಲಿ ಎಕರೆಗಟ್ಟಲೆ ಜಮೀನು, ಅಡಕೆ ತೋಟ ನೋಡಿಕೊಳ್ಳುವವರಿಲ್ಲದೆ ಪಾಳು ಬೀಳುತ್ತಿವೆ. ಉದ್ಯೋಗಕ್ಕಾಗಿ ನಗರ ಸೇರಿದ ಮಕ್ಕಳು ಊರಿಗೆ ಮರಳುತ್ತಿಲ್ಲ ಎಂದು ಅಲ್ಲಿ ವೃದ್ಧರು ಕಣ್ಣೀರು ಹಾಕುತ್ತಿದ್ದಾರೆ. ಪರಿಸ್ಥಿತಿ ಹೀಗಿರುವಾಗ ನಿಸರ್ಗ ಪ್ರಕೋಪಕ್ಕೆ ಬೆದರಿ ಜನ ಹಳ್ಳಿಯಿಂದ ನಗರಕ್ಕೆ ಬಂದರು ಎಂದು ಹೇಳುವುದು, ಮತ್ತೊಮ್ಮೆ, ಬಾಲಿಶ ವಾದ.

ಇತ್ತೀಚೆಗೆ ಕಮ್ಯುನಿಸ್ಟ್ ವಿಜ್ಞಾನ ಲೇಖಕರಲ್ಲಿ ಒಂದು ಟ್ರೆಂಡ್ ಬೆಳೆಯುತ್ತಿದೆ. ಅದೇನೆಂದರೆ ವರ್ಷ ವರ್ಷ ಈ ಭೂಮಿ ಪ್ರಳಯಕ್ಕೆ ಹತ್ತಿರವಾಗುತ್ತಿದೆ ಎಂಬುದು. ಈ ಭೂಮಿಯಲ್ಲಿ ಹಿಂದೆ ಇಷ್ಟೊಂದು ಚಂಡಮಾರುತ, ಮಳೆ, ಬೇಸಿಗೆ, ಚಳಿ ಎಲ್ಲ ಇರಲಿಲ್ಲ. ಈಗ ಅವೆಲ್ಲ ಹೆಚ್ಚುತ್ತಿವೆ ಎನ್ನುತ್ತಾರೆ ಇವರು. ಈ ಮಾತನ್ನು ಸುಮ್ಮನೆ ಒಪ್ಪೋಣ. ಹಿಂದೆ ಇದ್ದದ್ದಕ್ಕಿಂತ ಈಗ ನಿಸರ್ಗ ಪ್ರಕೋಪಗಳು ಹೆಚ್ಚಾಗಿವೆ ಎಂದೇ ಹೇಳೋಣ. ಆದರೆ ಅದಕ್ಕೆ ಕಾರಣ? ಇವರು ಕೂಡಲೇ ಬಂಡವಾಳಶಾಹಿ ಎಂಬ, ತಾವೇ ಸೃಷ್ಟಿಸಿಕೊಂಡ ಭೂತದತ್ತ ಕೈ ತೋರುತ್ತಾರೆ. ಅದನ್ನೂ ಬೇಕಾದರೆ ಸರಿ ಎಂದೇ ಒಪ್ಪೋಣ. ಬಂಡವಾಳಶಾಹಿಗಳು ಸ್ಥಾಪನೆ ಮಾಡಿರುವ ಕಾರ್ಖಾನೆಗಳು ಹೊಗೆ ಉಗುಳಿ, ಭೂಮಿಯ ವಾತಾವರಣ ಬಿಸಿಯಾಗಿ ಇವೆಲ್ಲ ವಿಕೋಪಗಳು ಆಗುತ್ತಿವೆ ಎಂದೇ ಹೇಳೋಣ. ಅದರ ನಂತರದ ಎಡಪಂಥೀಯರ ವಾದ ಚೆನ್ನಾಗಿರುತ್ತದೆ. ಅವರ ಪ್ರಕಾರ ಹೀಗೆ ಕಾರ್ಖಾನೆ ಇಟ್ಟು ಆಕಾಶಕ್ಕೆ ಹೊಗೆಯನ್ನೂ ಬಿಸಿಯನ್ನೂ ಉಗುಳುತ್ತಿರುವುದು ಅಮೆರಿಕಾದ ಕಂಪೆನಿಗಳು ಮಾತ್ರ! ರಷ್ಯ, ಚೀನಾ, ಕೊರಿಯಾ, ಕ್ಯೂಬಾದಂಥ ದೇಶಗಳ ಕಾರ್ಖಾನೆಗಳಿಂದ ಬಿಸಿ ಹೊಗೆ ಹಾರುವುದಿಲ್ಲ; ಆ ಕಾರ್ಖಾನೆಗಳಿಂದ ಕಶ್ಮಲ ನೀರು ಹೊರಗೆ ಬರುವುದಿಲ್ಲ! ಅವರಿಂದ ಯಾವ ಪರಿಸರ ಮಾಲಿನ್ಯವೂ ಇಲ್ಲ. ಗ್ಲೋಬಲ್ ವಾರ್ಮಿಂಗ್ ಆಗುತ್ತಿರುವುದಕ್ಕೆ ಅಮೆರಿಕಾದವರೇ ಕಾರಣ, ಮತ್ಯಾರೂ ಅಲ್ಲ! ನಾಗೇಶ್ ಹೆಗಡೆಯವರು ನಿಜವಾಗಿಯೂ ಇರ್ಮಾ ಚಂಡಮಾರುತದ ವಿಶ್ಲೇಷಣೆಗೆ ಕೂತಿದ್ದರೆ ಅದೇಕೆ ಪ್ರತಿ ಸಲ ಅಮೆರಿಕಾ ಚಂಡಮಾರುತಗಳ ಸುಳಿಗೆ ಸಿಗುತ್ತದೆ ಎಂಬುದನ್ನು ಬರೆಯಬಹುದಿತ್ತು. ಬೇರೆ ಬೇಡ, ಕೇವಲ ಗೂಗಲ್‍ನಲ್ಲಿ ತಡಕಾಡಿದರೂ ಸಾಕು, ಅಮೆರಿಕಾ ಕಳೆದ ಎರಡು ಶತಮಾನಗಳಲ್ಲಿ ಬಹುತೇಕ ಪ್ರತಿ ವರ್ಷ ಚಂಡಮಾರುತಗಳಿಗೆ ಸಿಕ್ಕಿದ ದೇಶ. ವಿಸ್ತೀರ್ಣದಲ್ಲಿ ಭಾರತದ ನಾಲ್ಕು ಪಟ್ಟು ವಿಸ್ತಾರವಾಗಿರುವ ಈ ದೇಶದಲ್ಲಿ ನಿಸರ್ಗ ಪ್ರಕೋಪಗಳು ಕೂಡ ನಮಗಿಂತ ನಾಲ್ಕು ಪಟ್ಟು ಇರಬಹುದು ಎಂಬುದು ಜಸ್ಟ್ ಕಾಮನ್‍ಸೆನ್ಸ್. ತನ್ನ ಅಕ್ಕಪಕ್ಕದಲ್ಲಿ ಎರಡು ವಿಶಾಲ ಮಹಾಸಾಗರಗಳನ್ನು ಕಟ್ಟಿಕೊಂಡಿರುವ ಅಮೆರಿಕಾಕ್ಕೆ ಸುಂಟರಗಾಳಿಯೆಂಬುದು ಅನಿವಾರ್ಯ ಕರ್ಮ. ಅಮೆರಿಕಾ ಒಂದೇ ಏಕೆ, ಪ್ರತಿವರ್ಷ ಭಾರತದ ಪೂರ್ವ ಕರಾವಳಿ ಕೂಡ ಬಿರುಗಾಳಿಗೆ ತುತ್ತಾಗುವುದಿಲ್ಲವೆ? ಗಣಿತದಲ್ಲಿ “ಹೇರಿ ಬಾಲ್ ಥಿಯರಮ್” (ಕೂದಲುಳ್ಳ ಚೆಂಡಿನ ಪ್ರಮೇಯ!) ಎಂಬುದೊಂದು ಪ್ರಮೇಯವಿದೆ. ದಿನದ ಯಾವುದೇ ಕ್ಷಣದಲ್ಲಿ ಪ್ರಪಂಚದ ಒಂದಲ್ಲಾ ಒಂದು ಭಾಗದಲ್ಲಿ ಒಂದು ಚಂಡಮಾರುತ್ತ ಹುಟ್ಟುತ್ತಲೇ ಇರುತ್ತದೆ ಎಂಬುದನ್ನು ಗಣಿತೀಯವಾಗಿ ಸಾಧಿಸುವ ಪ್ರಮೇಯ ಅದು. ಆದರೆ ಈ ಸಮಯದಲ್ಲಿ ಇಲ್ಲೇ ಇದೇ ವೇಗದಲ್ಲೇ ಬಿರುಗಾಳಿಯೊಂದು ಹುಟ್ಟಿ ಹರಿಯುತ್ತದೆ ಎಂಬುದನ್ನು ಮಾತ್ರ ಹೇಳಲು ಸಾಧ್ಯವೇ ಇಲ್ಲ. ವಾತಾವರಣದಲ್ಲಿ ಈಗ ಯಾಕೆ 30 ಡಿಗ್ರಿ ಸೆಲ್ಸಿಯಸ್ ಇದೆ; ಅರ್ಧ ತಾಸಿನ ಹಿಂದೆ ಯಾಕೆ 35 ಡಿಗ್ರಿ ಇತ್ತು ಎಂಬುದನ್ನು ಯಾವ ವಿಜ್ಞಾನಬ್ರಹ್ಮನಿಂದಲೂ ವಿವರಿಸಲು ಸಾಧ್ಯವಿಲ್ಲ. ಯಾಕೆಂದರೆ ಹವಾಮಾನದ ವೈಪರೀತ್ಯಗಳಿಗೆ ಸಾವಿರದೆಂಟು ಕಾರಣಗಳಿರುತ್ತವೆ. ಗಣಿತದಲ್ಲಿ ಬರುವ “ಬಟರ್‍ಫ್ಲೈ ಎಫೆಕ್ಟ್” (ಪತಂಗ ಪರಿಣಾಮ) ಕೂಡ ಹೇಳುವುದು ಇದನ್ನೇ. ಸುಂಟರಗಾಳಿಯ ಬಗ್ಗೆ ಬರೆಯಹೊರಡುವಾಗ ನಾವು ಇಂಥ ಕೆಲವೊಂದು ಮೂಲಭೂತ ವಿಷಯಗಳನ್ನು ಇಟ್ಟುಕೊಂಡು ಬರೆಯುವುದು ಒಳ್ಳೆಯದು.

ನಾಗೇಶ್ ಹೆಗಡೆಯವರ ಲೇಖನ ಯಾಕೆ ಕೆಟ್ಟದಾಗಿದೆ ಎಂದರೆ, ಅಲ್ಲಿ ವಿಜ್ಞಾನ ಎಂದು ಹೇಳಬಹುದಾದದ್ದು, ವಿಶೇಷ ಎಂದು ಹೇಳಬಹುದಾದದ್ದು ಎರಡೂ ಸೊನ್ನೆ. ಇಡೀ ಲೇಖನದ ಮೂಲೋದ್ದೇಶ ಇದ್ದದ್ದು ರಿಚರ್ಡ್ ಬ್ರಾನ್ಸನ್‍ನಂಥ ಉದ್ಯಮಿಗಳನ್ನು ಹಳಿಯುವುದು ಮತ್ತು ಆ ಸಂಗತಿಯನ್ನು ಹೇಗಾದರೂ ಮಾಡಿ ವಿಶ್ವ ಆವಾಸ ದಿನಕ್ಕೆ ತಳುಕು ಹಾಕುವುದು. (ರಿಚರ್ಡ್ ಬ್ರಾನ್ಸನ್ ಬಗ್ಗೆ ಬರೆಯುವಾಗ ಹೆಗಡೆಯವರು, ಈ ಹಿಂದೆ ಐದಾರು ಸಲ ಚಂಡಮಾರುತ ಆತನ ದ್ವೀಪದ ಮೇಲಿಂದ ಹಾದು ಹೋದಾಗಲೂ ಆತ ಅದೇ ದ್ವೀಪದಲ್ಲೇ ಇದ್ದ ಎಂಬುದನ್ನು ಮರೆತಂತಿದೆ!) ಲೇಖನಕ್ಕೆ ಒಂದು ಕೇಂದ್ರ ಇಲ್ಲ; ಲೇಖಕರು ಸುಂಟರಗಾಳಿಯ ಬಗ್ಗೆ ಹೇಳುತ್ತಿದ್ದಾರೋ ನಗರ ಜೀವನದ ಕಷ್ಟಗಳ ಬಗ್ಗೆ ಹೇಳುತ್ತಿದ್ದಾರೋ ತಿಳಿಯುವುದಿಲ್ಲ. ಈ ಎಲ್ಲ ಚದುರಿದ ಚಿತ್ರಗಳನ್ನು ಇಟ್ಟುಕೊಂಡು ಕೊನೆಗೊಂದು ಪರಿಪೂರ್ಣತೆಯ ಪರಿಣಾಮ ಉಂಟುಮಾಡುವುದು ಅವರ ಉದ್ದೇಶ ಆಗಿದ್ದರೂ ಅದರಲ್ಲಿ ಅವರು ಸೋತಿದ್ದಾರೆ ಎಂದು ಹೇಳಬೇಕಾಗುತ್ತದೆ. ಲೇಖನದಲ್ಲಿ ಕೊಳೆಗೇರಿ ಮಂಡಳಿಯ ಅಧ್ಯಕ್ಷರಿಗೆ ಧಮಕಿ ಹಾಕುವುದು, ವಿಜಯ್ ಮಲ್ಯನನ್ನು ಎಳೆದು ತರುವುದು ಇವೆಲ್ಲ ಅನಗತ್ಯವಾಗಿತ್ತು. ಈ ಲೇಖನವನ್ನು ಫೇಸ್‍ಬುಕ್ ಜಾಲತಾಣದಲ್ಲಿ ಹಂಚಿಕೊಳ್ಳುವಾಗ ಹೆಗಡೆಯವರು “ರಿಚರ್ಡ್ ಬ್ರಾನ್ಸನ್ ಎಂಬ ವಿಜಯ್ ಮಲ್ಯ” ಎಂದು ಶೀರ್ಷಿಕೆ ಕೊಟ್ಟಿದ್ದಾರೆ. ಅವರಿಬ್ಬರ ನಡುವಿನ ಹೋಲಿಕೆ ಸರಿಯೇ? ವಿಜಯ್ ಮಲ್ಯ ಇದುವರೆಗೆ ಪರಿಸರದ ಬಗ್ಗೆ ಎಂದಾದರೂ ಹೇಳಿಕೆ ಕೊಟ್ಟಿದ್ದನೆ? ಇಬ್ಬರೂ ವಿಮಾನಯಾನದ ಬ್ಯುಸಿನೆಸ್ ನಡೆಸಿದರು ಎಂಬುದರ ಹೊರತಾಗಿ ಅವರಿಬ್ಬರಿಗೆ ಏನು ಸಾಮ್ಯತೆ ಇದೆ? ವಿಮಾನ ಹಾರಾಡಿಸಿದರೆ ಸುಂಟರಗಾಳಿ ಏಳುತ್ತದೆ ಎಂಬ ವಾದವನ್ನು ಒಪ್ಪುವುದಾದರೆ ಮಲ್ಯನ ಕಿಂಗ್’ಫಿಶರ್ ಹಾರಾಟ ನಿಲ್ಲಿಸಿ ಸುಂಟರಗಾಳಿಗಳ ಬಾಹುಳ್ಯವನ್ನು ತಗ್ಗಿಸಿದೆ ಎನ್ನಬೇಕಲ್ಲ? ಆ ಕಾರಣಕ್ಕಾಗಿ ಮಲ್ಯ ಪ್ರಶಂಸಾರ್ಹ ವ್ಯಕ್ತಿಯೇ ಆಗುತ್ತಾನೆ! ಇಡೀ ಲೇಖನವನ್ನು ಓದಿದಾಗ ನನಗೆ ಕಂಡದ್ದು ಎಂದಿನಂತೆ ಒಬ್ಬ ಕಮ್ಯುನಿಸ್ಟರ ಹಳಹಳಿಕೆ ಅಷ್ಟೆ. ನಿಮಗೇನು ಕಂಡಿತು, ಹೇಳತೀರಲ್ಲ?

 

Facebook ಕಾಮೆಂಟ್ಸ್

ಲೇಖಕರ ಕುರಿತು

Rohith Chakratheertha

ಓದಿದ್ದು ವಿಜ್ಞಾನ, ಮುಖ್ಯವಾಗಿ ಗಣಿತ. ಬೆಂಗಳೂರಿನಲ್ಲಿ ನಾಲ್ಕು ವರ್ಷ ಉಪನ್ಯಾಸಕನಾಗಿ ಕಾಲೇಜುಗಳಲ್ಲಿ ಪಾಠ ಮಾಡಿದ್ದ ಇವರು ಈಗ ಒಂದು ಬಹುರಾಷ್ಟ್ರೀಯ ಕಂಪೆನಿಯಲ್ಲಿ ಉದ್ಯೋಗಿ. ಹವ್ಯಾಸವಾಗಿ ಬೆಳೆಸಿಕೊಂಡದ್ದು ಬರವಣಿಗೆ. ಐದು ಪತ್ರಿಕೆಗಳಲ್ಲಿ ಸದ್ಯಕ್ಕೆ ಅಂಕಣಗಳನ್ನು ಬರೆಯುತ್ತಿದ್ದು ವಿಜ್ಞಾನ, ಗಣಿತ, ವ್ಯಕ್ತಿಚಿತ್ರ, ಮಕ್ಕಳ ಕತೆ ಇತ್ಯಾದಿ ಪ್ರಕಾರಗಳಲ್ಲಿ ಇದುವರೆಗೆ ೧೩ ಪುಸ್ತಕಗಳ ಪ್ರಕಟಣೆಯಾಗಿವೆ. ಉದ್ಯೋಗ ಮತ್ತು ಬರವಣಿಗೆಯಿಂದ ಬಿಡುವು ಸಿಕ್ಕಾಗ ತಿರುಗಾಟ, ಪ್ರವಾಸ ಇವರ ಖಯಾಲಿ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!