ಮಂಕುತಿಮ್ಮನ ಕಗ್ಗ ಟಿಪ್ಪಣಿ ೦೭೫:
ಮರ ತನ್ನ ಹೆತ್ತ ಬೀಜವನಿಲ್ಲವೆನಿಸಿ ವಿ-|
ಸ್ತರಿಸುವಂದದಿ, ಸೃಷ್ಟಿ ತನ್ನ ಮೂಲವನು ||
ಮರೆಮಾಚಿ ತಾನೆ ಮೆರೆಯುತ್ತಿಹುದು ಕಣ್ಗಳಿಗೆ |
ನೊರೆ ಸೃಷ್ಟಿ ಪಾಲ್ ಬ್ರಹ್ಮ – ಮಂಕುತಿಮ್ಮ || ೦೭೫ ||
ಸೃಷ್ಟಿಯೆನ್ನುವುದು ನಮ್ಮ ಜೀವ ಜಗದಲ್ಲಾಗುತ್ತಿರುವ ನಿಶ್ಚಿತ, ನಿರಂತರ ಪ್ರಕ್ರಿಯೆ. ಪ್ರಾಣಿಜಗದಲ್ಲಾಗಲಿ ಸಸ್ಯಜಗದಲ್ಲಾಗಲಿ ಇದು ತನ್ನದೇ ಆದ ವಿಧಾನದಲ್ಲಿ ನಡೆದುಕೊಂಡು ಹೋಗುತ್ತಿದೆ. ಅದರಲ್ಲಡಗಿರುವ ಸೋಜಿಗ ಮತ್ತು ಮೂಲ ಸೃಷ್ಟಿಕರ್ತನಾದ ಬ್ರಹ್ಮನ ಸೃಷ್ಟಿ ವೈಖರಿಗೂ ಇರುವ ಸಾಮ್ಯತೆಯನ್ನು ಚಿತ್ರಿಸುತ್ತದೆ ಈ ಕಗ್ಗ.
ಮರ ಹೇಗೆ ತನ್ನ ವಂಶಾಭಿವೃದ್ಧಿ ಮಾಡಿಕೊಂಡು, ತನ್ನ ಸಂತತಿಯನ್ನು ವಿಸ್ತರಿಸುತ್ತದೆ ಎನ್ನುವುದನ್ನು ಗಮನಿಸಿದ್ದೀರಾ? ಅದು ಬೀಜದ ಮೂಲಕ; ಮೊದಲಿಗೆ ತನ್ನ ವಂಶವಾಹಿಯ ಗುಟ್ಟನ್ನೆಲ್ಲ ಅದರೊಳಗೆ ಬೀಜಾಕ್ಷರ ರೂಪಲಿ ಹಿಡಿದಿಟ್ಟುಕೊಳ್ಳುತ್ತದೆ. ತದನಂತರ ಯಾವುದಾದರೊಂದು ನೈಸರ್ಗಿಕ ವಿಧಾನದಲ್ಲಿ ಅದನ್ನು ಬೇರೆಡೆಗೆ ಪಸರಿಸಿಬಿಡುತ್ತದೆ (ಉದಾಹರಣೆಗೆ ಮರದಿಂದುರಿ ಗಾಳಿಯಲ್ಲಿ ಹಾರಿಹೋಗುವುದು, ಹಕ್ಕಿಯ ಅಥವಾ ಪ್ರಾಣಿಗಳು ತಿಂದು ಎಲ್ಲೋ ಬಿಸಾಡಿದ ಬೀಜವಾಗಿಯೊ, ನೀರಿನ ಮೂಲಕವೊ). ಹಾಗೆ ಎಲ್ಲೋ ಹೋಗಿ ಬಿದ್ದ ಬೀಜ ಮಣ್ಣೊಳಗೆ ಹೂತು, ಬೇರೂರಿ ಮತ್ತೊಂದು ಮರವಾಗಿ ಅದೇ ಕಾರ್ಯವನ್ನು ಮುಂದುವರೆಸುತ್ತದೆ. ಆದರೆ ಈ ನೈಸರ್ಗಿಕ ಪ್ರಕ್ರಿಯೆ ನಡೆಯುವಾಗ, ಆ ಕಾರ್ಯಕ್ಕೆ ಅಸ್ತಿಭಾರ ಹಾಕುವ ಮೂಲ ಬೀಜರೂಪ ತನ್ನನ್ನೆ ‘ಇಲ್ಲವಾಗಿಸಿಕೊಂಡು’ ಬೇರು, ಕಾಂಡ, ಹೂ, ಎಲೆ, ಹಣ್ಣುಗಳನ್ನು ಬಿಡುವ ಸಸಿ/ಮರವಾದರೆ ಮಾತ್ರ ಈ ಸೃಷ್ಟಿ ಕ್ರಿಯೆ ನಡೆಯಲು ಸಾಧ್ಯ. ಬೀಜ ತನ್ನ ಮೂಲರೂಪದಲ್ಲೆ ಬಿದ್ದುಕೊಂಡಿದ್ದರೆ ಇದು ಅಸಾಧ್ಯ. ಒಟ್ಟಾರೆ ತನ್ನನ್ನೆ ಇಲ್ಲವಾಗಿಸಿಕೊಂಡು ಬೇರೆ ರೀತಿಯಲ್ಲಿ ಪ್ರಕಟವಾಗುವುದು ಇಲ್ಲಿ ಅನಿವಾರ್ಯ. ಒಂದೆಡೆ ಇದು ಸೃಷ್ಟಿಯ ಗುಟ್ಟಿನ ಸಂಕೇತವಾದರೆ ಮತ್ತೊಂದೆಡೆ ಅದಕ್ಕಾಗಿ ನಿಸ್ವಾರ್ಥ, ನಿರ್ಲಿಪ್ತತೆಯಿಂದ ತನ್ನನ್ನೆ ಇಲ್ಲವಾಗಿಸಿಕೊಳ್ಳುವ ಉದಾತ್ತತೆಯೂ ಅಡಗಿದೆ.
ಹೀಗೆ ನೋಡುವವರಿಗೆ ಕಾಣುವುದು ಬೆಳೆದ ಗಿಡ, ಮರವೆ ಹೊರತು ಅದರ ಮೂಲವಾದ ಬೀಜವಲ್ಲ. ಬೆಳೆವ ಪ್ರಕ್ರಿಯೆಯೂ ಕಣ್ಣಿಗೆ ಕಾಣಿಸದಂತೆ ಅದು ಮಣ್ಣೊಳಗೆ ಸೇರಿ ತನ್ನ ಕೆಲಸ ಮಾಡುತ್ತದೆ. ಸೃಷ್ಟಿಯೂ ಕೂಡ ಈ ಬೀಜ-ಮರದ ಹಾಗೆ ಎನ್ನುತ್ತಿದ್ದಾನಿಲ್ಲಿ ಮಂಕುತಿಮ್ಮ. ಯಾಕೆಂದರೆ ಸೃಷ್ಟಿ ಕೂಡ ತನ್ನ ಫಲಿತಾಂಶವನ್ನು ಎಲ್ಲರ ಕಣ್ಣಿಗೂ ಕಾಣುವಂತೆ (ಮರದ ಹಾಗೆ) ತೆರೆದಿಟ್ಟರೂ, ಅದರ ಮೂಲ ಬೀಜರೂಪಿ ಸ್ವರೂಪವನ್ನು ಮಾತ್ರ ಗುಟ್ಟಾಗಿಸಿ, ಎದ್ದು ಕಾಣದಂತೆ ಬಚ್ಚಿಟ್ಟುಕೊಂಡಿದೆ. ನಾವು ಕಣ್ಣಿಂದ ಕಾಣಬಲ್ಲ ಸೃಷ್ಟಿಯ ಮೆರೆದಾಟವೆಲ್ಲ ಕೇವಲ ಅದರ ಪ್ರಕಟ ರೂಪವೇ ಹೊರತು ಬೀಜರೂಪಲ್ಲ (ಉದಾಹರಣೆಗೆ ಪ್ರಾಣಿ ಅಥವ ಮಾನವ ಜಗದಲ್ಲಿ ಸೃಷ್ಟಿಯ ಪ್ರಕಟರೂಪ ಆ ಪ್ರಾಣಿಯ ಮರಿ ಅಥವಾ ಮನುಜ ಶಿಶುವಿರುವ ಹಾಗೆ). ಅದರ ಮೂಲಸ್ವರೂಪ, ಬೀಜದ ಹಾಗೆ ತನ್ನ ಮೂಲರೂಪನ್ನೆ ಇಲ್ಲವಾಗುವ ಹಾಗೆ ಪರಿವರ್ತಿಸಿಕೊಂಡು ಪ್ರಕಟವಾಗಿರುತ್ತದೆ. ಅದರ ಜಾಡು ಹಿಡಿದು ಶೋಧಿಸಹೊರಟರು ಮೂಲಸ್ವರೂಪ ಪ್ರಕಟ ಅಸ್ತಿತ್ವದಲ್ಲಿರದ ಕಾರಣ ಎಲ್ಲಾ ತರ್ಕಗಳನ್ನು ಪ್ರಕಟ ರೂಪದ ಹಿನ್ನಲೆಯಲ್ಲಿಯೆ ವಿಶ್ಲೇಷಿಸಬೇಕಾಗುತ್ತದೆ.
ಒಟ್ಟಾರೆ ಸರಳವಾಗಿ ಹೇಳುವುದಾದರೆ, ಇದೊಂದು ರೀತಿ ನೊರೆ ತುಂಬಿದ ಹಾಲಿನ ಲೋಟದ ಹಾಗೆ. ಮೇಲ್ನೋಟಕ್ಕೆ ಕಾಣುವುದು ಅದರ ಪ್ರಕಟ ರೂಪವಾದ ನೊರೆ. ಮೂಲದಲ್ಲಿರುವ ಹಾಲು ತನ್ನ ನಿಜ ಸ್ವರೂಪವನ್ನು ನೊರೆಯಡಿಯಲ್ಲಿ ಬಚ್ಚಿಟ್ಟುಕೊಂಡಿರುತ್ತದೆ. ನಾವು ಕಾಣುವ ಸೃಷ್ಟಿಯ ಪ್ರಕಟರೂಪ ಆ ನೊರೆಯ ಹಾಗೆ. ಅದನ್ನು ಸರಿಸದೆ, ಅದರೊಳಗೆ ಮರೆಮಾಚಿಕೊಂಡಿರುವ ಹಾಲಿನ ರೂಪ ಕಾಣಿಸಿಕೊಳ್ಳುವುದಿಲ್ಲ.
ನಮ್ಮ ಸೃಷ್ಟಿಯನ್ನು ಸೃಜಿಸಿದ್ದು ಪರಬ್ರಹ್ಮನೆಂಬ ಆಸ್ತಿಕ ನಂಬಿಕೆ ನಮ್ಮದು. ಆ ಬ್ರಹ್ಮ ಕೂಡ ತನ್ನ ಮೂಲಸ್ವರೂಪವನ್ನೆ ಹಲವಾಗಿಸಿಕೊಂಡು ಸೃಷ್ಟಿಯನ್ನು ವಿಸ್ತರಿಸಿದ್ದು. ಅಲ್ಲೂ ಕೂಡ ಮೂಲರೂಪಿಯಾದ ಬ್ರಹ್ಮ ಮೇಲ್ನೋಟಕ್ಕೆ ಕಾಣಿಸಿಕೊಳ್ಳದ ಹಾಲಿನಂತಿದ್ದಾನೆ. ನಾವು ಕಾಣುವುದು ಫಲಿತ ನೊರೆಯನ್ನು ಮಾತ್ರ. ಹೀಗಾಗಿಯೆ ಸೃಷ್ಟಿಕರ್ತನನ್ನು ನಾವು ನೇರವಾಗಿ ನೋಡಲು ಸುಲಭದಲ್ಲಿ ಸಾಧ್ಯವಾಗದು.
ಹೀಗೆ ಸೃಷ್ಟಿ ಕ್ರಿಯೆಯಲ್ಲಿ ಅಡಕವಾಗಿರುವ ನಿಗೂಢತೆ, ನಿಸ್ವಾರ್ಥತೆ, ತಂತಾನೆ ನಿಭಾಯಿಸಿಕೊಳ್ಳುವ ಸ್ವಯಂಭುತ್ವಗಳೆಲ್ಲದರ ಮೇಲೆ ಬೆಳಕು ಚೆಲ್ಲುವ ಕಗ್ಗವಿದು. ಹಾಗೆ ಹೇಳುತ್ತಲೆ ನಮ್ಮ ಪುರಾತನ ನಂಬಿಕೆಗಳ ಒಳನೋಟವನ್ನು ಬಿಚ್ಚಿಡುವುದು ಇದರ ವಿಶೇಷ.
#ಕಗ್ಗ_ಟಿಪ್ಪಣಿ
#ಕಗ್ಗಕೊಂದು_ಹಗ್ಗ