ಅಂಕಣ

ಏಕಾಂತ

‘ಏಕಾಂತ’ ಪ್ರತಿಯೊಬ್ಬನ ಬದುಕಿಗೆ ಶಾಶ್ವತ ಸಂಗಾತಿ. ಅದೊಂದು ಅಮೂರ್ತವಾದ ಸಾಂತ್ವನ. ಸಂತಸದ ಕ್ಷಣಗಳಲ್ಲಿ ಜೊತೆಯಿದ್ದೂ ನಮ್ಮ ಸಂಭ್ರಮವನ್ನು ದೂರವೇ ನಿಂತು ನೋಡಿ ಖುಷಿಪಡುತ್ತದೆ. ಅದೇ ನೋವಿನ ಕ್ಷಣಗಳಲ್ಲಿ ಕರೆಯುವ ಮುನ್ನವೇ ಬಂದು ಆಲಂಗಿಸಿ ಸಂತೈಸುತ್ತದೆ. ಅದೊಂದು ನಿಸ್ವಾರ್ಥ ಭಾವಗಳ ಸಮ್ಮೇಳನ.

ತನ್ನವರೆನಿಸಿದವರೆಲ್ಲ ತೊರೆದು ದೂರವಾದಾಗ ನಮ್ಮನ್ನಾವರಿಸುವ ಈ ಏಕಾಂತಕ್ಕೆ ಬಹುಷಃ ಬಯ್ಯುವವರೇ ಜಾಸ್ತಿ. ಆದರೆ ನಿಜವಾಗಿಯೂ ಏಕಾಂತ ಎಲ್ಲವನ್ನ ಅಥವಾ ಎಲ್ಲರನ್ನ ಕಳೆದ ಸ್ಥಿತಿಯಲ್ಲ. ಅದು ಕಳೆದ ಎಲ್ಲವನ್ನ ಮತ್ತೆ ನಮಗೆ ಮರಳಿಸುವ ರಸಾನುಭವ. ಎಲ್ಲದಕ್ಕಿಂತ ಹೆಚ್ಚಾಗಿ ನಮ್ಮನ್ನು ನಮಗೆ ಮರಳಿಸುವ ಅನುಭವ. ಏಕಾಂತದ ರಾಯಭಾರಿಯಾಗಿ ಮನಸ್ಸನ್ನು ಆವರಿಸುವುದು ಮೌನ. ಈ ರಾಯಭಾರಿ ನಡೆಸುವ ಸಫಲ ಸಂಧಾನಗಳಿಗೆ ಲೆಕ್ಕವಿಲ್ಲ. ಅದೆಷ್ಟೋ ಬಗೆಹರಿಯದ ಸಮಸ್ಯೆಗಳು ಹಾಗೂ ನಿರ್ಧಾರಗಳ ನಡುವಿನ ಜಿದ್ದಾಜಿದ್ದಿಗಳ ನಡುವೆ ರಾಯಭಾರ ನಡೆಸುವ ಈ ಮೌನ ಖಂಡಿತ ಒಂದು ಧನಾತ್ಮಕ ನಿರ್ಧಾರಕ್ಕೆ ಮನಸ್ಸನ್ನು ಒಪ್ಪಿಸುತ್ತದೆ. ಕೆಲವೊಮ್ಮೆ ಯಾವ ಸ್ನೇಹಿತನಿಂದಾಗಲಿ, ಹಿತೈಷಿಗಳಿಂದಾಗಲಿ, ಕೊನೆಗೆ ಅಪ್ಪ ಅಮ್ಮನಿಂದಲೂ ಒಪ್ಪಿಸಲಾಗದೇ ಹೋದ ನಿರ್ಧಾರಗಳಿಗೆ ಈ ಮೌನಸಂಧಾನ ಮಣಿಯುವಂತೆ ಮಾಡಿಬಿಡುತ್ತದೆ. ನಮ್ಮೊಳಗೆ ನಮ್ಮೊಂದಿಗೆ ನಮಗಾಗಿ ನಡೆಯುವ ವಿಚಾರ ಸಂಕೀರ್ಣ ಈ ಏಕಾಂತ.

ಬದುಕನ್ನು ಒಂಟಿಯಾಗಿ ಎದುರಿಸಲು ಏಕಾಂತ ನಮ್ಮನ್ನು ಅಣಿಗೊಳಿಸುತ್ತದೆ. ನಮ್ಮ ಗೋಳುಗಳನ್ನು ಕೇಳಲು ಖಂಡಿತ ನಮ್ಮೊಳಗೇ ಒಬ್ಬ ಆತ್ಮೀಯ ಸ್ನೇಹಿತ ಸದಾಕಾಲ ಕಾದಿದ್ದಾನೆ ಎಂಬ ಭರವಸೆಯನ್ನ ಮೂಡಿಸುತ್ತದೆ. ನಮ್ಮನ್ನೇ ನಾವು ಆಳವಾಗಿ ಅಭ್ಯಸಿಸಲು ಈ ಏಕಾಂತ ಅನುವು ಮಾಡಿಕೊಡುತ್ತದೆ “ಎಲ್ಲ ಹೇಳುವ ಹಾಗೆ ನೀನು ಬದುಕುವುದಲ್ಲ, ನಿನಗೆ ಬೇಕಾದಂತೆ ಭವಿಷ್ಯ ರೂಪಿಸಿಕೊ” ಎಂದು ಮನಸ್ಸಿಗೆ ನಾಟುವಂತೆ ಹೇಳಬಲ್ಲ ಹಿತೈಷಿ ಈ ಏಕಾಂತ.

ಏಕಾಂತದ ಜೊತೆಯಿದ್ದಾಗ ನಾವು ನಮ್ಮ ಸುತ್ತಲಿನ ಸಣ್ಣ ಸಣ್ಣ ಸಂಗತಿಗಳನ್ನ ಆನಂದಿಸುತ್ತೇವೆ. ಉದಾಹರಣೆಗೆ ಎಲ್ಲೋ ಜಲಪಾತ ನೋಡಲು ಹೋಗಿದ್ದೀರಿ ಎಂದುಕೊಳ್ಳಿ, ಎಲ್ಲರ ಜೊತೆ ಹೋದರೆ ಬಹುಶಃ ಪ್ರಕೃತಿ ಸೌಂದರ್ಯವನ್ನು ಅಷ್ಟಾಗಿ ನೀವು ಅನುಭವಿಸಲಾರಿರಿ. ಮಾತುಕತೆ, ಹರಟೆ, ತಮಾಷೆಗಳಲ್ಲೇ ಕಾಲಹರಣವಾಗಬಹುದು. ಈಗಂತೂ ಸೆಲ್ಫಿ ಕ್ಲಿಕ್ಕಿಸುವುದರಲ್ಲೇ ಮುಕ್ಕಾಲು ಭಾಗ ಸಮಯ ಮುಗಿದುಹೋಗಿರುತ್ತದೆ. ಹಾಗೆಂದು ಅದು ತಪ್ಪೆಂದು ಹೇಳುತ್ತಿಲ್ಲ ನಾನು. ಏಕಾಂಗಿಯಾಗಿ ಹೋದರೆ ನಾವು ಪ್ರಕೃತಿಯ ಸನಿಹವನ್ನ ಹೆಚ್ಚಾಗಿ ಆನಂದಿಸುವ ಅವಕಾಶಗಳು ಜಾಸ್ತಿ. ಏಕಾಂತ ನಮ್ಮ ಹಾಗೂ ನಿಸರ್ಗದ ನಡುವಿನ ಬಾಂಧವ್ಯವನ್ನ ಗಟ್ಟಿಗೊಳಿಸುತ್ತದೆ. ಹಾಗೆಯೇ ಏಕಾಂತದಲ್ಲಿ ಹಾಡುಗಳನ್ನು ಕೇಳುವುದೇ ಒಂದು ಆನಂದ. ಹಾಡೆಂಬ ರಸಪಾಕವನ್ನ ಅತಿಯಾಗಿ ಆಸ್ವಾದಿಸಲು ಏಕಾಂತದಲ್ಲಿ ಮಾತ್ರ ಸಾಧ್ಯ ಎಂದು ನನಗನಿಸುತ್ತದೆ. ನನ್ನಂಥ ಸಾಹಿತ್ಯ ಪ್ರೇಮಿಗಳಿಗಂತೂ ಏಕಾಂತದಲ್ಲಿ ಕೆಲವೊಂದು ಹಾಡಿನ ಸಾಹಿತ್ಯವನ್ನ ಪದೇ ಪದೇ ಕೇಳುತ್ತ ಅನುಭವಿಸುವ ಆಹ್ಲಾದಕ್ಕೆ ಪಾರವಿಲ್ಲ.

ಇನ್ನು, ಹಳೆಯ ಗೆಳೆಯರ ನೆನಪಿಸುವ, ಅಟ್ಟದ ಮೇಲಿನ ಹಳೆ ಪಾಠಿಚೀಲದಲ್ಲಿ ಭದ್ರವಾಗಿರುವ, ಆದರೂ ಒಂದಿಷ್ಟು ಧೂಳು ಹಿಡಿದಿರುವ ಆಟೋಗ್ರಾಫ್ ಬುಕ್ ಬಿಡಿಸಿ ಓದುವ ನೆನಪಾಗುವುದು ಏಕಾಂತದಲ್ಲಿರುವಾಗಲೇ. ಶಾಲೆಯಲ್ಲಿ ಮೊದಲ ಬಾರಿ ಗೆಳತಿಯೊಬ್ಬಳ ಬಗೆಗೆ ಉಂಟಾದ ನಲುಮೆಯ ನೆನಪಿಗೆ ಇನ್ನೂ ಕಾಯ್ದಿರಿಸಿರುವ ಅವಳು ನೀಡಿದ ಗ್ರೀಟಿಂಗ್ ಕಾರ್ಡ್ ನೋಡುತ್ತ ಒಬ್ಬೊಬ್ಬನೇ ನಗುವ ಬಡಪಾಯಿ ಮಿಡಿತಕ್ಕೂ ಏಕಾಂತದ್ದೇ ಜೊತೆ. ಎಲ್ಲರೊಂದಿಗಿದ್ದಾಗ ಅಗಲಿದ ಆತ್ಮೀಯ ಜೀವಗಳ ಇಲ್ಲದಿರುವಿಕೆ ಕಾಡುತ್ತದೆ. ಆದರೆ ಏಕಾಂತದಲ್ಲಿರುವಾಗ ಅವರ ಅಮೂರ್ತ ಅಸ್ತಿತ್ವ ನಮ್ಮ ಜೊತೆಗೇ ಇರುವಂತೆ ಅನಿಸಿ ಮನಸಿಗೊಂದು ನೆಮ್ಮದಿ ಸಿಗುತ್ತದೆ. ನನಗೆ ಈ ಹೊರಜಗತ್ತು ಬರೆಯಲು ಬೇಕಾದ ಅನುಭವ ಕೊಡುವ ಮೂಲವಾದರೆ, ಏಕಾಂತ ಆ ಅನುಭವಗಳಿಗೆ ಪದಗಳ ರೂಪ ಕೊಟ್ಟು ಹಾಳೆಗಿಳಿಸಲು ನನ್ನೊಳಗೆ ನನಗಾಗೇ ರೂಪಿತವಾದ ಒಂದು ಖಾಸಗಿ ಪ್ರಪಂಚದಂತೆ ಭಾಸವಾಗುತ್ತದೆ. ಏಕಾಂತದಲ್ಲಿ ಕೆಲವೊಮ್ಮೆ ಯೋಚನೆಗಳೆಲ್ಲ ಖಾಲಿಯಾಗಿ ಎಲ್ಲೋ ಕಳೆದುಹೋದಂತೆ ಕುಳಿತಿರುವಾಗ ಅದೇನೋ ಒಂದು ಹಳೆಯ ಹುಚ್ಚಾಟಿಕೆಯ ನೆನಪಾಗಿ ಇದ್ದಕ್ಕಿದ್ದಂತೆ ನಮ್ಮಷ್ಟಕ್ಕೆ ನಾವೇ ನಗುವ ಆ ನಗು ಅತ್ಯಂತ ಪರಿಶುದ್ಧವಾದದ್ದು ಅನಿಸುತ್ತದೆ ನನಗೆ. ಇನ್ನು ಬದುಕಿನ ಅನಿವಾರ್ಯತೆಗಳಿಗೆ ಸಿಲುಕಿ ಎಲ್ಲರಂತೆ ಕೇವಲ ಹಣಗಳಿಸುವ ಓಟದಲ್ಲಿರುವಾಗ, ನಿನ್ನ ನಿಜವಾದ ಬದುಕು ಎಲ್ಲೋ ಕಳೆದುಹೋಗುತ್ತಿದೆ ಅದರತ್ತ ಗಮನ ಹರಿಸು ಎಂದು ಎಚ್ಚರಿಸುವ ಪ್ರೇರಕ ಶಕ್ತಿ ಈ ಏಕಾಂತ. ಕೆಲವೊಮ್ಮೆ ಎಷ್ಟೆಷ್ಟೋ ದೇವಸ್ಥಾನಗಳನ್ನು ಸುತ್ತಿ ಸುತ್ತಿ, ಕೈಮುಗಿದು, ಸಾಷ್ಟಾಂಗ ನಮಸ್ಕಾರ ಮಾಡಿ, ಮಂತ್ರ ಹೇಳಿ, ಅರ್ಚನೆ ಮಾಡಿಸಿ, ಹರಕೆ ತೀರಿಸಿ ಬೇಡಿಕೊಂಡಾಗಲೂ ಸಿಗದ ನೆಮ್ಮದಿ, ಒಬ್ಬನೇ ಕೂತು ಏಕಾಂತದಲ್ಲಿ ಆ ಆತ್ಮಬಂಧುವಿನಲ್ಲಿ ನನ್ನೆಲ್ಲ ಸಮಸ್ಯೆಗಳನ್ನು ನಿವೇದಿಸಿಕೊಂಡಾಗ ಸಿಗುತ್ತದೆ. ಈ ಏಕಾಂತದಲ್ಲಿ ಬೇಡಿಕೊಳ್ಳುವಾಗ ಆ ದೇವರು, ನನ್ನ ಅಹವಾಲುಗಳನ್ನ ಮಾತ್ರ ಕೇಳುತ್ತಿದ್ದಾನೆ ಎಂಬ ಭ್ರಮೆಯೋ, ನಿಜವೋ ಎಂದು ಅರಿಯಲಾಗದ, ಆದರೂ ಹಿತ ನೀಡುವ ಭಾವ ಆವರಿಸಿ ಆಲಂಗಿಸಿ ಸಂತೈಸುತ್ತದೆ.

ಈ ಏಕಾಂತಕ್ಕೂ, ಮಳೆಗೂ ಏನೋ ಒಂದು ಬಿಡಿಸಲಾಗದ ನಂಟು. ಏಕಾಂತದಲ್ಲಿ ನಿರಂತರವಾಗಿ ಮಿಡಿಯುವ ಮೌನ ರಾಗಕ್ಕೆ ‘ಧೋ’ ಎಂದು ಸುರಿಯುವ ಮಳೆ ಶೃತಿಪೆಟ್ಟಿಗೆಯಂತೆ ಭಾಸವಾಗುತ್ತದೆ. ಏಕಾಂತದ ಇನ್ನೊಂದು ಸಂಗಾತಿ ಕಿಟಕಿ. ಅದೇಕೆ ಆ ಕಿಟಕಿ ಪಕ್ಕ ಕೂತಾಗ ಏಕಾಂತ ಅಷ್ಟು ಮೋಹಕವೋ ನನಗೂ ಅರಿಯದು. ಬಹುಶಃ ನನ್ನ ಏಕಾಂಗಿಯಾಗಿಸಿದ ಎಲ್ಲರೂ ಕಿಟಕಿಯಾಚೆಗೇ ಇರುವರೆಂಬ ನಂಬಿಕೆ ಕಾರಣ ಇರಬಹುದೋ ಏನೋ! ಹಾಗೆಯೇ ಕಡಲ ತೀರದಲ್ಲಿ ಕೂತು ಅಲೆಗಳ ಭೋರ್ಗರೆತದ ನಡುವೆ ಏಕಾಂತವನ್ನನುಭವಿಸುವ ಚಂದವೇ ಬೇರೆ. ಅದನ್ನು ಅನುಭವಿಸಿದವರಿಗಷ್ಟೇ ಗೊತ್ತು. ಕಡಲ‌ ಮಡಿಲಲ್ಲಿ ತಂಪಾಗಿ ಬೀಸುವ ಗಾಳಿಗೆ ಮೈಯನ್ನೊಡ್ಡಿ ಬಾನು – ಭೂಮಿಗಳ ಸಮಾಗಮವಾಗುವ ಅನಂತ ಬಿಂದುವಿನತ್ತ ದೃಷ್ಟಿಯಿಟ್ಟು ಜಗತ್ತನ್ನೇ ಮರೆಯುವ ಭಾವೋನ್ಮಾದಕ್ಕೆ ಸರಿಸಾಟಿ ಯಾವುದೂ ಇಲ್ಲ.

ಜೊತೆಗೇ ಇದ್ದು ಇಲ್ಲದಂತಿರುವ, ಅಗತ್ಯ ಬಿದ್ದಾಗ ತಕ್ಷಣ ಆವರಿಸುವ, ಸಂತೈಸುವ, ಕಾಡುವ, ಸಿಹಿಯಾದ ಯಾತನೆ ನೀಡಿ ಪೀಡಿಸುವ, ಪದೇ ಪದೇ ಬೇಕೆನಿಸುವ ಭಾವಗಳ ಗುಚ್ಛ ಈ ಏಕಾಂತ. ಇಂದಿನ ಆಧುನಿಕ ಯುಗದಲ್ಲಿ “ಆಲ್ವೇಸ್ ಆನ್’ಲೈನ್” ಆಗಿರಬೇಕಾದ ಅನಿವಾರ್ಯತೆಯ ನಡುವೆ ಏಕಾಂತವನ್ನು ಅನುಭವಿಸುವ ಭಾಗ್ಯವೂ ಕೈತಪ್ಪುತ್ತಿದೆಯೋ ಅನಿಸುತ್ತದೆ ನನಗೆ. ಬೇರೆಯವರ ಜೀವನದ ಆಗುಹೋಗುಗಳಿಗೆ ‘ಲೈಕ್’, ‘ಕಮೆಂಟ್’ ಮಾಡುತ್ತ ಮಾಡುತ್ತ ನಮ್ಮನ್ನೇ ನಾವು ಮರೆತು ಹೋಗುತ್ತಿದ್ದೇವೇನೋ ಎಂಬ ಭಯ ಕಾಡುತ್ತಿದೆ. ಇಡೀ ದಿನ ಯಾವುದೋ ಜಾಲತಾಣಗಳೊಳಗೆ ಮುಳುಗಿಯೋ ಅಥವಾ ಕೆಲಸದ ಒತ್ತಡಗಳಲ್ಲೋ ಕಾಲಕಳೆಯುವ ನಮಗೆ, ನಮ್ಮ ಜೊತೆಯೇ ಒಂದಷ್ಟು ಹೊತ್ತು ಆತ್ಮಾವಲೋಕನ ಮಾಡಿಕೊಳ್ಳಲು ಸಹ “ಅಪಾಯಿಂಟ್’ಮೆಂಟ್ ಫಿಕ್ಸ್” ಮಾಡಿಕೊಳ್ಳಬೇಕಾದಂತಹ ಸ್ಥಿತಿ ಇದೆ. “ಹಾತೊರೆವೆವು ನಾವು ನಮಗೇನೆ ಮತ್ತೆ ಸಿಗಲು” ಎಂಬ ಯೋಗರಾಜ್ ಭಟ್ಟರ ಸಾಲುಗಳು ಮತ್ತೆ ಮತ್ತೆ ಕಾಡುತ್ತಿದೆ.

 

Facebook ಕಾಮೆಂಟ್ಸ್

ಲೇಖಕರ ಕುರಿತು

Anoop Gunaga

ಪ್ರಸ್ತುತ ಕೋಟೇಶ್ವರದ ನಿವಾಸಿ. ಸಾಫ್ಟ್ ವೇರ್ ಇಂಜಿನಿಯರಿಂಗ್ ಉದ್ಯೋಗ. ಬರವಣಿಗೆ ಮನಸಿಗೆ ಮೆಚ್ಚು. ಯಕ್ಷಗಾನ, ಸಿನಿಮಾ, ಕನ್ನಡ ಸಾಹಿತ್ಯಾಧ್ಯಯನದ ಹುಚ್ಚು. ಪೆನ್ಸಿಲ್ ಸ್ಕೆಚ್-ಹವ್ಯಾಸ.
ಶಿವರಾಮ ಕಾರಂತರ ಕೃತಿಗಳಿಂದ ಪ್ರಭಾವಿತ, ಜಯಂತ ಕಾಯ್ಕಿಣಿಯವರ ಸಾಹಿತ್ಯದೆಡೆಗೆ ಮೋಹಿತ. ಮೌನರಾಗಕ್ಕೆ ಶಬ್ದಗಳ ಪೋಣಿಸುವ, ಕನಸುಗಳನ್ನು ಕಾವ್ಯವಾಗಿಸುವ, ಭಾವಗಳಿಗೆ ಬಣ್ಣ ಬಳಿಯುವ ಒಬ್ಬ ಸಂಭಾವಿತ

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!