ಅಂಕಣ

ಅಯ್ಯಯ್ಯೋ! ಅಸುರ ದಸರಾವಂತೆ?!!

ನಾಡಹಬ್ಬ ಮೈಸೂರು ದಸರಾದ ಸಂಭ್ರಮ ಎಲ್ಲೆಡೆ ಕಳೆಗಟ್ಟುತ್ತಿದೆ. ಹೊಳೆಯುವ ಹೊನ್ನ ಅಂಬಾರಿ ಜಂಬೂ ಸವಾರಿಗೆ ಸಜ್ಜುಗೊಂಡಿದೆ. ಒಂದಷ್ಟು ದಿನಗಳಿಗಷ್ಟೇ ಸೀಮಿತವಾಗಿ ರಾಜ ಮನೆತನದವರ ವೈಭೋಗ ಮರುಕಳಿಸುತ್ತಿದೆ. ವೈವಿಧ್ಯಮಯ ಕಾರ್ಯಕ್ರಮಗಳಿಗಾಗಿ ಮೈಸೂರು ಸೂರು ಒದಗಿಸುವ ಮೂಲಕ ನೋಡುಗರ ಮನಸೂರೆಗೊಳ್ಳಲು ತವಕಿಸುತ್ತಿದೆ. ಈ ವಿಜ್ರಂಭಣೆಯನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರ ದಂಡು ಸಾಂಸ್ಕೃತಿಕ ನಗರಿಯತ್ತ ದೌಡಾಯಿಸುತ್ತಿದೆ. ಇದೆಲ್ಲಾ ಸಾಮಾನ್ಯವಾಗಿ ವರ್ಷಂಪ್ರತಿಯೂ ನಡೆಯುತ್ತಿರುತ್ತದೆ. ಆದರೆ ಈಗ್ಗೇ ಕೆಲವು ವರ್ಷಗಳಿಂದ ದಸರಾದ ಬಗ್ಗೆಯೂ ಇಲ್ಲ ಸಲ್ಲದ ಮಾತಿನ ವರಸೆ ಕೆಲವರಿಂದ ಹೊರಹೊಮ್ಮುತ್ತಿದೆ. ನವರಾತ್ರಿ, ದಸರಾ ಹಾಗೂ ಚಾಮುಂಡಿ ತಾಯಿಯ ಬಗ್ಗೆ ಇರುವ ಪೌರಾಣಿಕ ಉಲ್ಲೇಖಗಳನ್ನು ಧಿಕ್ಕರಿಸಿ ತಮಗೆ ತೋಚಿದಂತೆ ವ್ಯಾಖ್ಯಾನಿಸುತ್ತಾ ಹುಯಿಲೆಬ್ಬಿಸುವಲ್ಲಿ ಕೆಲವರು ನಿರತರಾಗಿದ್ದಾರೆ.  ಇಂಥ ಭ್ರಮೆಯ ಕೊಕ್ಕೆಗೆ ಸಿಕ್ಕಿ ಹಾಕಿಕೊಂಡು ಕೊಂಕು ಸಾರುತ್ತಿರುವವರಿಗೆ ಯಾಕೊ ದಸರಾದ ಸಂಭ್ರಮ ವಿಭ್ರಮೆಯನ್ನು ಹುಟ್ಟಿಸುತ್ತಿದೆ.

ಇತಿಹಾಸದ ಘಟನೆಗಳನ್ನು ತಿರುಚಿ ತಮ್ಮ ಬರಹಗಳಲ್ಲಿ ಕಕ್ಕುವ ಹಾಗೂ ಅವುಗಳನ್ನೇ ವ್ಯವಸ್ಥಿತವಾಗಿ ವಿಶ್ವವಿದ್ಯಾನಿಲಯಗಳ ಪುಸ್ತಕಗಳೊಳಗೂ ತುರುಕಿಸುವಲ್ಲಿ ಇವರು ಲಾಗಾಯ್ತಿನಿಂದಲೂ ಸಿದ್ಧಹಸ್ತರು. ಆದರೆ ಇತ್ತೀಚಿಗೆ ಅದೆಷ್ಟೇ ಲಾಗಾ ಹೊಡೆದರೂ ಜನರನ್ನು ರೀಚ್ ಆಗಲಾಗುತ್ತಿಲ್ಲ ಎನ್ನುವುದೂ ಅಷ್ಟೇ ಸತ್ಯ. ಆದಾಗ್ಯೂ ಪುರಾಣದ ಅರ್ಥಹೀನ ಮರು ವ್ಯಾಖ್ಯಾನಕ್ಕೆ ಕೈ ಹಾಕಿರುವುದರ ಬಗ್ಗೆ ಪ್ರಜ್ಞಾವಂತರು ಮರುಕ ಹೊರಹಾಕುತ್ತಿದ್ದಾರೆ. ಇಲ್ಲಾಂದ್ರೆ ಅತ್ತ ಸಂಭ್ರಮದಿಂದ ದಸರಾ ನಡೆಯುತ್ತಿದ್ದರೆ ಇವರು ಇತ್ತ ಮಹಿಷಾಸುರ ದಸರಾ ಮಾಡುತ್ತೇವೆಂದು ಊಳಿಡುತ್ತಿದ್ದರೇ? ಇದು ಇವರ ಉಳಿಗಾಲಕ್ಕೋ ಕೇಡುಗಾಲಕ್ಕೋ ಆ ಮಹಿಷಾಸುರನೇ ಬಲ್ಲ!!

ಹೌದು, ಇವರಿಗೆ ಆರಂಭದಿಂದಲೂ ಸಂಹರಿಸಿದವರಿಗಿಂತಲೂ ಸಂಹಾರಗೊಂಡವರ ಬಗ್ಗೆಯೇ ಮಮಕಾರ ಹೆಚ್ಚು. ದುಷ್ಟರೋ ಶಿಷ್ಟರೋ ಎನ್ನುವುದು ಬೇಕಾಗಿಲ್ಲ. ಉಗ್ರರ ಮೇಲೆ ದಾಳಿ ಮಾಡುವ ಸೈನಿಕರನ್ನು ಕಂಡರೆ ಇವರಿಗೆ ಕೆಂಡದಂಥ ಕೋಪ. ಅದೇ ಉಗ್ರರ ಕ್ರೌರ್ಯ ಇವರನ್ನು ಕೆಣಕದು. ಪೋಲಿಸರು ನಕ್ಸಲರ ಮೇಲೆ ಗುಂಡು ಹಾರಿಸಿದರೆ ಇವರ ಗುಂಡಿಗೆಯಲ್ಲೇನೋ ತಲ್ಲಣ! ಇದು ಒಂಥರಾ ಅದರದೇ ಮುಂದುವರಿದ ಭಾಗವೆನಿಸದೇ? ಇಲ್ಲವಾದರೆ ಮಹಿಷಾಸುರ ಅಮಾಯಕ, ಆತನನ್ನು ಮರ್ಧಿಸಿದ ದೇವತೆ ಕ್ರೌರ್ಯದ ಸಂಕೇತ, ಆಕೆ ಪೂಜೆಗೆ ಅರ್ಹಳಲ್ಲ, ಇದು ವೈದಿಕರ ಕಟ್ಟುಕಥೆ ಎಂದೆಲ್ಲ ರೋಧಿಸುತ್ತಿರಲಿಲ್ಲ! ಏನೇ ಆಗಲಿ ತಮ್ಮ ಕಲ್ಪನೆಯ ದಸರಾ ಬೇರೆಯೇ, ಅಲ್ಲಿ ಮಹಿಷನಿಗೆ ಪ್ರಾಧಾನ್ಯತೆ ಎನ್ನುವ ಮೂಲಕ ತಮಗೆ ಮಹಿಷನಂತಹ ಅಸುರ ಮನಃಪ್ರವೃತ್ತಿಯವರೇ ಮಾದರಿ ಎನ್ನುವುದನ್ನು ಒಪ್ಪಿಕೊಂಡಂತಾಗಿದೆ.

ಎಲ್ಲದರಲ್ಲೂ ಪರ್ಯಾಯ ಹುಡುಕುವ ಈ ಮಂದಿಗಳಿಗೆ ಅದೇಕೋ ಇದ್ದ ವ್ಯವಸ್ಥೆಯಲ್ಲಂತೂ ಒಂದಿನಿತೂ ಸಮಾಧಾನವಿಲ್ಲ. ಅಸುರ ಮಹಿಷನ ಹೆಸರಲ್ಲಿ ದಸರಾ ಆಚರಿಸುತ್ತೇವೆ ಎನ್ನುವ ಮೂಲಕ ಮುಂದೊಂದು ದಿನ ಈ ದಸರಾಕ್ಕೂ  ಅನುದಾನ ಬಿಡುಗಡೆ ಮಾಡಬೇಕೆಂದು ಟೌನ್ ಹಾಲ್ ಮುಂದೆ ಧರಣಿ ಕೂತಾರು! ಅದಕ್ಕೊಂದು ಪ್ರತ್ಯೇಕ ಪ್ರಾಧಿಕಾರಬೇಕೆಂದು ಹಕ್ಕೊತ್ತಾಯ ಮುಂದಿಟ್ಟಾರು. ಆ ದಸರಾ ಒಡೆಯರ್ ಮನೆತನದ ಮುಂದಾಳತ್ವದಲ್ಲಿ ನಡೆದರೆ ಇದಕ್ಕೆ ಎಡಪಂಥೀಯ ವಿಚಾರವಾದಿಗಳದ್ದೇ ನಾಯಕತ್ವ. ಮೆರವಣಿಗೆಗೆ ಆನೆಯನ್ನೇ ಬಳಸುತ್ತಾರೋ ಅಥವಾ ಅದಕ್ಕೂ ಇಂಥದ್ಧೇ ಕಥೆ ಹೇಳಿ ನಮ್ಮದು ಬೇರೆಯೇ ಪ್ರಾಣಿ ಎಂದು ಒಂಟೆ, ಕೋಣ ಅಥವಾ ಎಮ್ಮೆಗಳನ್ನು ಬಳಸಿಕೊಂಡು ಸವಾರಿಯನ್ನೇ ಮಾಡಿಯಾರೋ ಗೊತ್ತಿಲ್ಲ!

ಇದು ಇಷ್ಟಕ್ಕೇ ನಿಲ್ಲದೆ ಮುಂದೆ ಎಲ್ಲಾ ದೇವಸ್ಥಾನಗಳ ಪಕ್ಕದಲ್ಲೂ ದೇವರಿಂದ ಹತರಾದ ಅಸುರರ ಮಂದಿರಗಳೂ ಎದ್ದು ನಿಂತರೂ ನಿಲ್ಲಬಹುದು. ಅದಕ್ಕೆಲ್ಲಾ ಇವರದ್ದೇ ಪುರಾಣಗಳ ಪೋಷಾಕನ್ನೂ  ತೊಡಿಸಿಯಾರು ಬಿಡಿ. ಇನ್ನು ಈ ಎಲ್ಲಾ ದೇವಾಲಯಗಳನ್ನೇ ಸೇರಿಸಿ ಅವುಗಳಿಗೆ ಅನುಕೂಲವಾಗುವಂತೆ ಒಂದು ಹೊಸ ಇಲಾಖೆಯನ್ನೇ ಪ್ರಾರಂಭಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರಿದರೂ ಅಚ್ಚರಿಯಿಲ್ಲ. ಆಗ ಇದು ಮುಜರಾಯಿ ಖಾತೆಯಾದರೆ ಅದನ್ನು ‘ಮಜಾ’ರಾಯಿ ಖಾತೆ ಎಂದು ನಾಮಕರಣ ಮಾಡಬಹುದು.

ಓವರ್ ಡೋಸ್: ಚಾಮುಂಡೇಶ್ವರಿ ದಸರಾ ರಾಜಮನೆತನದ ನೇತೃತ್ವದಲ್ಲಿ ನಡೆಯುವ ನಾಡಹಬ್ಬ, ಅಸುರ ದಸರಾ ಅರಾಜಕ ಮನಃಸ್ಥಿತಿಯವರ ‘ಮೊಂಡಾ’ಳತ್ವದಲ್ಲಿ ನಡೆಯುವ ಎಡಹಬ್ಬ!!

Facebook ಕಾಮೆಂಟ್ಸ್

ಲೇಖಕರ ಕುರಿತು

Sandesh H Naik

ಉಡುಪಿ ಜಿಲ್ಲೆ, ಕುಂದಾಪುರ ತಾಲೂಕಿನ ಹಕ್ಲಾಡಿ ಹುಟ್ಟೂರು. ಪ್ರಸ್ತುತ ಶಿಕ್ಷಕರಾಗಿ ಕಾರ್ಯನಿರ್ವಹಣೆ.  ಬರವಣಿಗೆ ಮೆಚ್ಚಿನ ಪ್ರವೃತ್ತಿಗಳಲ್ಲೊಂದು.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!