ಅಂಕಣ

ತನಿಖೆಯೇ ಇಲ್ಲದೆ ತೀರ್ಪು ನೀಡುವ ಪ್ರಗತಿಪರರು

ನಮ್ಮ ಪೋಲಿಸ್ ಇಲಾಖೆಯ ಕಾರ್ಯನಿರ್ವಹಣೆಯಲ್ಲಿನ ವಿಳಂಬ ನೀತಿಯ ಬಗ್ಗೆ ಸಾಮಾನ್ಯವಾಗಿ ಬಹುತೇಕ ಸಾರ್ವಜನಿಕರಿಗೆ ತೀವ್ರ ಅಸಮಾಧಾನವಿದೆ. ನ್ಯಾಯಾಲಯದ ವಿಚಾರಣೆ ಪ್ರಕ್ರಿಯೆ ಹಾಗೂ ತೀರ್ಪಿನ ಬಗ್ಗೆಯೂ ಇದೇ ಅಭಿಪ್ರಾಯವಿದೆ. ಯೌವನದಲ್ಲಿ ಲಿಂಬೆಹಣ್ಣು ಕದ್ದವನಿಗೆ ವೃದ್ಧಾಪ್ಯದಲ್ಲಿ ಶಿಕ್ಷೆಯಾದ ಪ್ರಕರಣವೊಂದು ಸದ್ದು ಮಾಡಿದ್ದು ನಿಮಗೂ ಗೊತ್ತಿರಬಹುದು. ಇದರಿಂದಲೇ ಎಷ್ಟೋ ಬಾರಿ ಆರೋಪಿಗಳು ಪ್ರಾಯಶ್ಚಿತಪಟ್ಟುಕೊಳ್ಳುವುದಿದೆ. ಇವುಗಳನ್ನು ಸಹಿಸಿಕೊಳ್ಳಲು ನಿಜಕ್ಕೂ  ದುಷ್ಕೃತ್ಯ ಎಸಗುವುದಕ್ಕಿಂತಲೂ ಒಂದೈದು ಪಟ್ಟು ಹೆಚ್ಚೇ ಧೈರ್ಯ ಬೇಕಾಗಬಹುದು!

ಆದರೆ ಇದಕ್ಕೆ ಅಪವಾದವೆಂಬಂತೆ ಯಾವುದೇ ದುರ್ಘಟನೆ ನಡೆದಾಗಲೂ ಅತ್ಯಂತ ವೇಗವಾಗಿ ತೀರ್ಪು ನೀಡುವ ವಿಶೇಷ ತಂಡವೊಂದು ನಮ್ಮಲ್ಲಿ ಈಗೀಗ ಪ್ರವರ್ಧಮಾನಕ್ಕೆ ಬರುತ್ತಿದೆ. ಅದುವೇ ನಮ್ಮ ಪ್ರಗತಿಪರ ಹಾಗೂ ಬುದ್ಧಿಜೀವಿಗಳ ಪಟಾಲಂ.  ಈ ತಂಡ ದೇಶಾದ್ಯಂತ ಕಾರ್ಯನಿರ್ವಹಿಸುತ್ತಿದ್ದರೂ ಕರ್ನಾಟಕದಲ್ಲಿ ಅದರ ಪ್ರಾಬಲ್ಯ ಇನ್ನೂ ಹೆಚ್ಚು. ಏಕೆಂದರೆ ಇಲ್ಲಿ ಅಧಿಕಾರರೂಢರೂ ಅವರ ಸಹಕಾರಕ್ಕೆ ಹಾಗೂ ಆದ್ಯ ಬೆಂಬಲಕ್ಕಿದ್ದಾರೆ. ಒಮ್ಮೊಮ್ಮೆ ಈ ತಂಡದ ಸದಸ್ಯರನ್ನೂ ಹಿಂದಿಕ್ಕಿ ಇಲ್ಲಿನ ರಾಜಕೀಯ ನಾಯಕರೇ ತೀರ್ಪು ನೀಡಿಬಿಡುತ್ತಾರೆ. ಹತ್ಯೆಗಳು ನಡೆದಾಗಲಂತೂ ಗುಂಡು ಸಿಡಿದ ಸದ್ದು ಕರಗುವ ಮುನ್ನವೇ ಆರೋಪಿಗಳ್ಯಾರು, ಯಾವ ಸಂಘಟನೆಗೆ ಸೇರಿದವರು, ಹತ್ಯೆಯ ಹಿಂದಿನ ಕಾರಣವೇನು ಎಂಬಿತ್ಯಾದಿ ಅಂಶಗಳನ್ನು ಅವರು ಹೊರಗೆಡಹುತ್ತಾರೆ. ಮತ್ತೆ ಹೆಚ್ಚಿನ ವಿಚಾರಣೆಯ ಅಗತ್ಯವೇ ಇಲ್ಲವೇನೋ ಎಂಬಂತೆ ಯಾರು ಅಪರಾಧಿಗಳು ಎಂದು ತೀರ್ಪು ನೀಡುತ್ತಾರೆ. ಆತ್ಮಹತ್ಯೆಯಾದಾಗ ಆತ್ಮವು ದೇಹವನ್ನು ತೊರೆಯುವ ಮುನ್ನವೇ ಅದರ ಹಿಂದಿನ ಎಲ್ಲಾ details ಇವರಿಗೆ ತಿಳಿದಿರುತ್ತದೆ.  ಅಂದ ಮೇಲೆ ಇವರ ಕಾರ್ಯಶೈಲಿ ವಿಶ್ವದ ಅತ್ಯಂತ ಬಲಿಷ್ಠ ತನಿಖಾ ಸಂಸ್ಥೆ ಮತ್ತು ಗುಪ್ತಚರ ದಳಗಳಾದ RAW, CIA, ISI ಗಳನ್ನೇ ಮೀರಿಸುವಂತಿದೆ ಎಂದರೆ ನೀವು ನಂಬಲೇಬೇಕು!

ಇವರ ಸಾಮರ್ಥ್ಯದ ಅರಿವಾಗಲು ಈ ಒಂದು ಸಣ್ಣ ಉದಾಹರಣೆ ಸಹಾಯಕವಾಗಬಹುದು. ಈ ಹಿಂದೆ ದಕ್ಷ ಅಧಿಕಾರಿಯೊಬ್ಬರು ಆತ್ಮಹತ್ಯೆಗೆ ಶರಣಾದ ಶಂಕಾಸ್ಪದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿ.ಬಿ.ಐ ದೀರ್ಘ ತನಿಖೆ ನಡೆಸಿ, ಆತ್ಮಹತ್ಯೆಗೆ ಶರಣಾದ ವ್ಯಕ್ತಿಯು ಮಹಿಳೆಯೊಬ್ಬರಿಗೆ ನಾಲ್ಕು ಸಲ ಕರೆ ಮಾಡಿದ್ದರು ಎನ್ನುವುದನ್ನು ಪತ್ತೆಹಚ್ಚುವ ಮೊದಲೇ ಪ್ರಗತಿಪರರ ತಂಡ ಮಾತ್ರ ಅಲ್ಲಾ ಅದು 44 ಬಾರಿ ಎಂದು ಪತ್ತೆಹಚ್ಚುವ ಮೂಲಕ ಜನರಿಂದ ಭಾರೀ ಹೊ(ತೆ)ಗಳಿಕೆಗೆ ಪಾತ್ರವಾಗಿತ್ತು. ಅವರು ಸತ್ತ ವ್ಯಕ್ತಿಯ ಕಾಲ್ ಡೀಟೈಲ್ ಕೊಟ್ಟಿದ್ದರೋ ಅಥವಾ ಅದು ಅವರೇ ಯಾರ ಜೊತೆಗೋ ಮಾತನಾಡಿದ್ದರ ಕಾಲ್ ಡೀಟೈಲ್ ಆಗಿತ್ತೋ ಯಾರಿಗ್  ಗೊತ್ತು? ಕರ್ನಾಟಕದಲ್ಲಿ ನಡೆದ ವಿಚಾರವಾದಿಯೊಬ್ಬರ ಹತ್ಯೆಯನ್ನು ಮಾಡಿದವರಾರು ಎಂದು ಕಳೆದೆರಡು ವರುಷಗಳಿಂದ ಈ ಗುಂಪಿನವರು ಹೇಳಿಕೊಂಡು ಬರುತ್ತಲೇ ಇದ್ದಾರೆ. ಅದರ ಇಂಚಿಂಚು ಮಾಹಿತಿ ಇರುವಂತೆಯೇ ಮಾತನಾಡುತ್ತಿದ್ದಾರೆ. ಆದರೆ ನಮ್ಮ  ಪೊಲೀಸ್ ಇಲಾಖೆಗೆ ಮಾತ್ರ ಇನ್ನೂ ಅಪರಾಧಿಗಳನ್ನು ಪತ್ತೆಹಚ್ಚಲಾಗಿಲ್ಲವೆಂದರೆ ಇವರ ಸಾಮರ್ಥ್ಯ ಅರಿವಾಗದೇ ಹೇಳಿ?

ಇನ್ನು ಇವರನ್ನು ಗಂಜಿ ಗಿರಾಕಿಗಳು ಹಾಗೆ ಹೀಗೆ ಎಂದು ಮೂದಲಿಸುವುದು ತರವಲ್ಲ. ಬದಲಾಗಿ ಅವರಿಗೆ ಹಣದ ಆಸೆ ಇಲ್ಲವೇ ಇಲ್ಲ. ಏಕೆಂದರೆಕೆಲವೊಂದು ಗಂಭೀರ ಪ್ರಕರಣಗಳಿಗೆ ಸಂಬಂಧಿಸಿದಂತೆ ಆರೋಪಿಗಳ ಸುಳಿವು ನೀಡಿದವರಿಗೆ ಲಕ್ಷಾಂತರ ರುಪಾಯಿ ಬಹುಮಾನ ಘೋಷಿಸಲಾಗಿರುತ್ತದೆ. ಆದರೆ ಅಂಥ ಹೆಚ್ಚಿನ ಪ್ರಕರಣಗಳಲ್ಲಿ ಆರೋಪಿಗಳ ಬಗ್ಗೆ  ಮಾಹಿತಿಯಿದ್ದ ಹೊರತಾಗಿಯೂ ಅವರೆಂದೂ ಆ ಮಾಹಿತಿಯನ್ನು ಸಂಬಂಧಪಟ್ಟವರಿಗೆ ನೀಡಿ ಬಹುಮಾನದ ಹಣವನ್ನು ಕ್ಲೈಮ್ ಮಾಡಿಕೊಳ್ಳಲು ಪ್ರಯತ್ನಿಸಿಲ್ಲ. ಅಂದಮೇಲೆ ಪ್ರಕರಣದ ತನಿಖೆಗೋಸುಗ CID, SIT, CBI ಎಂದು ಕೋಟ್ಯಂತರ ರುಪಾಯಿಗಳನ್ನು ವ್ಯಯಿಸುವುದಕ್ಕಿಂತ ಅದರ ಹೊಣೆಯನ್ನು ಈ ಪ್ರಗತಿಪರರ ಹೆಗಲಿಗೆ ಹಾಕುವುದೇ ಒಳಿತಲ್ಲವೇ? ಹಾಗಾದರೆ ಬನ್ನಿ, ಸಂಬಂಧಪಟ್ಟವರಿಗೆ ತಲುಪುವ ತನಕ ಇದನ್ನು ಶೇರ್ ಮಾಡೋಣ.
ಓವರ್ ಡೋಸ್: “ಪ್ರತಿರೋಧ” ಸರಿಯೇ, ಆದರೆ ಅದು ಮತ್ತೊಂದು ವ್ಯರ್ಥ ರೋದನೆ ಆಗಬಾರದಿತ್ತಷ್ಟೇ!!

 

 

Facebook ಕಾಮೆಂಟ್ಸ್

ಲೇಖಕರ ಕುರಿತು

Sandesh H Naik

ಉಡುಪಿ ಜಿಲ್ಲೆ, ಕುಂದಾಪುರ ತಾಲೂಕಿನ ಹಕ್ಲಾಡಿ ಹುಟ್ಟೂರು. ಪ್ರಸ್ತುತ ಶಿಕ್ಷಕರಾಗಿ ಕಾರ್ಯನಿರ್ವಹಣೆ.  ಬರವಣಿಗೆ ಮೆಚ್ಚಿನ ಪ್ರವೃತ್ತಿಗಳಲ್ಲೊಂದು.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!