Featured ಅಂಕಣ

ಸೀತಾರಾಮ ಗೋಯಲ್ – ವ್ಯಕ್ತಿ ಶಕ್ತಿ -3: ಸಿದ್ಧಗಂಗಾ ಶ್ರೀಗಳನ್ನು ಚಿತ್ರನಟ ಆಡಿಕೊಂಡಂತೆ ಗೋಯಲರ ಬೆಲೆಕಟ್ಟಿದರು “ಎಮಿನೆಂಟ್ ಹಿಸ್ಟೋರಿಯನ್ಸ್”!

ರಾಮ್‍ಸ್ವರೂಪ್ ಅವರು ಬರೆದ “ಅಂಡರ್‍ಸ್ಟ್ಯಾಂಡಿಂಗ್ ಇಸ್ಲಾಮ್ ಥ್ರೂ ಹದೀಸ್” ಕೃತಿಯ ಪ್ರಕಾಶಕ ಸೀತಾರಾಮ ಗೋಯಲ್. ಪುಸ್ತಕದ ಮುದ್ರಣದ ಕೆಲಸವಾದ ಮೇಲೆ ಅದನ್ನು ಬೈಂಡಿಂಗ್ ಮಾಡಲೆಂದು ಒಂದು ಪ್ರೆಸ್ಸಿನಲ್ಲಿ ಜೋಡಿಸಿ ಇಡಲಾಗಿತ್ತು. ಬೈಂಡಿಂಗ್ ಮಾಡುವ ಹುಡುಗರಲ್ಲಿ ಮುಸ್ಲಿಮರೂ ಇದ್ದರು. ಪುಸ್ತಕದ ಮುಖಪುಟದಲ್ಲಿದ್ದ ಹದೀಸ್, ಇಸ್ಲಾಮ್ ಎಂಬ ಶಬ್ದಗಳನ್ನು ಕಂಡ ಒಬ್ಬ ಹುಡುಗ ಅಲ್ಲಿದ್ದ ಒಂದು ಪುಸ್ತಕವನ್ನು ತೆಗೆದುಕೊಂಡು ಹೋಗಿ ಇಮಾಮ್ ಒಬ್ಬನ ಕೈಲಿಟ್ಟ. ಬರೆದವನ ಹೆಸರು ರಾಮ್‍ಸ್ವರೂಪ್, ಪ್ರಕಟಿಸಿದವನ ಹೆಸರು ಸೀತಾರಾಮ ಗೋಯಲ್ ಎಂಬುದನ್ನು ಕಂಡ ಆ ಇಮಾಮ್, ಈ ಪುಸ್ತಕ ಇಸ್ಲಾಮ್ ಮೇಲೆ ಹಿಂದೂಗಳು ಬರೆದ ಟಿಪ್ಪಣಿಯೇ ಇರಬೇಕೆಂದು ಭಾವಿಸಿ ಅದನ್ನು ಧರ್ಮನಿಂದನೆ ಎಂದು ಅಲ್ಲಿ ಕೂತಲ್ಲೇ ಘೋಷಣೆ ಮಾಡಿಬಿಟ್ಟ. ಅರ್ಧ ತಾಸಿನಲ್ಲೇ ಒಂದು ದೊಡ್ಡ ಗುಂಪು ಬೈಂಡಿಂಗ್ ಕೆಲಸ ನಡೆಯುತ್ತಿದ್ದಲ್ಲಿಗೆ ಬಂತು. ಗೋಯಲರ ಮನೆಯ ಫೋನ್ ರಿಂಗಣಿಸಿತು. ರಿಸೀವರ್ ಎತ್ತಿದರೆ ಅತ್ತಣಿಂದ ಅಂಗಡಿ ಮಾಲಕನ ಧ್ವನಿ. “ಸಾಬ್! ಇಲ್ಲಿ ಒಂದೈವತ್ತು ಮಂದಿ ಜಮಾವಣೆಯಾಗಿದ್ದಾರೆ. ನನ್ನ ಅಂಗಡಿಯನ್ನೇ ಸುಟ್ಟು ಬಿಡುತ್ತೇವೆಂದು ಹೇಳುತ್ತಿದ್ದಾರೆ. ನಮ್ಮಲ್ಲಿ ಕೆಲಸ ಮಾಡುವ ಮುಸ್ಲಿಮ್ ಹುಡುಗರು ಕೂಡ ಬೆಂಕಿಯ ಕಡ್ಡಿ ಗೀರಲು ತಯಾರಾಗಿ ನಿಂತಿದ್ದಾರೆ. ದಯವಿಟ್ಟು ನಿಮ್ಮ ಪುಸ್ತಕ ತಗೊಂಡು ಹೋಗಿ ಬಿಡಿ ಸಾಬ್!” ಎಂದು ಅಲವತ್ತುಕೊಳ್ಳುತ್ತಿದ್ದನಾತ. ಅವೆಲ್ಲ ಗಲಾಟೆಗಳ ಹೊರತಾಗಿಯೂ ಗೋಯಲ್ ಪುಸ್ತಕ ಪ್ರಕಟಿಸದೆ ಬಿಡಲಿಲ್ಲ. ಮೂಲಭೂತವಾದಿ ಮುಲ್ಲಾಗಳು ಕೋರ್ಟಿನಲ್ಲಿ ಕೇಸು ಹಾಕದೆಯೂ ಬಿಡಲಿಲ್ಲ. ದಶಕಕ್ಕೂ ಹೆಚ್ಚು ಕಾಲ ಅದು ಕೋರ್ಟಿನಲ್ಲಿ ನಡೆಯಿತು. ಕೊನೆಗೆ ಆ ಪುಸ್ತಕದಲ್ಲಿ ಯಾವುದೇ ಮತಕ್ಕೆ ಅವಹೇಳನವಾಗುವಂಥಾದ್ದು ಏನೂ ಇಲ್ಲವೆಂದೂ, ಇಸ್ಲಾಂ ಮತಸ್ಥರು ಪವಿತ್ರವೆಂದು ನಂಬಿರುವ ಹದೀಸ್‍ನ ಸಾಲುಗಳೇ ಅಲ್ಲಿ ಇವೆ ಎಂದೂ ಹೇಳಿ ಕೇಸನ್ನು ಮುಗಿಸಲಾಯಿತು. ಈ ದೇಶದಲ್ಲಿ ಸತ್ಯ ಹೇಳಲು ಹೋಗುವವನು ಕೈಯಲ್ಲಿ ನಿರೀಕ್ಷಣಾ ಜಾಮೀನುಗಳನ್ನು ಹಿಡಿದ ಕ್ಷತ್ರಿಯನೂ ಆಗಬೇಕಾಗುತ್ತದೆ ಎಂಬುದಕ್ಕೆ ಗೋಯಲ್‍ರ ಬದುಕಿನ ಈ ಘಟನೆ ಸಣ್ಣ ಉದಾಹರಣೆ ಅಷ್ಟೆ.

ಹಾಗಂತ ಅವರೇನೂ ಸುಮ್ಮನಿರುವ ಅಥವಾ ತೆಪ್ಪಗಾಗುವ ವ್ಯಕ್ತಿಯಾಗಿರಲಿಲ್ಲ. ಕ್ರಿಶ್ಚಿಯಾನಿಟಿ ಮತ್ತು ಇಸ್ಲಾಂ ಎರಡೂ ರಿಲಿಜನ್‍ಗಳ ಮೇಲೆ ಅವರು ಧೈರ್ಯದಿಂದಲೇ ತಮ್ಮ ಟೀಕಾಪ್ರಹಾರ ಮಾಡುತ್ತಿದ್ದರು. ಇತ್ತೀಚೆಗೆ ಬಲಪಂಥೀಯರೆನ್ನಿಸಿಕೊಂಡ ಚಿಂತಕರಲ್ಲಿ ಈ ಬಗೆಯ ಪ್ರಾಮಾಣಿಕತೆಯನ್ನು ನಾವು ಕಾಣಲಾರೆವು. ಹೆಚ್ಚಿನವರು ಕ್ರಿಶ್ಚಿಯಾನಿಟಿಯ ಮೇಲೆ ವಸ್ತುನಿಷ್ಠ ವಿಶ್ಲೇಷಣೆಯಾದರೂ ಮಾಡುತ್ತಾರೆ; ಆದರೆ ಇಸ್ಲಾಮ್ ಅನ್ನು ಎಡಗಣ್ಣಿನಿಂದಲೂ ನೋಡುವುದಿಲ್ಲ; ಎಡಗೈಯ ಕಿರುಬೆರಳಿಂದ ಕೂಡ ಮುಟ್ಟುವ, ಕೆದಕುವ ಸಾಹಸವನ್ನು ಮಾಡುವುದಿಲ್ಲ. ಇದಕ್ಕೆ ಕಾರಣ ಇಲ್ಲದಿಲ್ಲ. ಓಲೈಕೆಯ ಮೂಲಕ ತನ್ನ ಸಾಮ್ರಾಜ್ಯ ವಿಸ್ತರಣೆಯ ಕೆಲಸದಲ್ಲಿ ತೊಡಗಿಕೊಂಡ ಕ್ರಿಶ್ಚಿಯಾನಿಟಿ ತನ್ನನ್ನು ವಿಶ್ಲೇಷಣೆ ಮಾಡಲು ಇತರರಿಗೆ ಸ್ವಲ್ಪ ಅವಕಾಶವನ್ನೂ ಸ್ವಾತಂತ್ರ್ಯವನ್ನೂ ಕೊಡುತ್ತದೆ. ಯಾಕೆಂದರೆ ಹಿಂದೂ ದೇವರುಗಳ ಕತೆಗಳನ್ನು ತಿರುಚಿ ಅದು ತನ್ನ ಗಿರಾಕಿಗಳಿಗೆ ತೋರಿಸಿ ಹಿಂದೂ ಧರ್ಮದ ಮೇಲೆ ವ್ಯತಿರಿಕ್ತ ಅಭಿಪ್ರಾಯ ಮೂಡುವಂತೆ ಮಾಡುವ ಕೆಲಸದಲ್ಲಿ ನಿರತವಾಗಿರುತ್ತದೆ. ತಾನೇ ಅಂಥ ಕೆಲಸದಲ್ಲಿ ತೊಡಗಿಕೊಂಡಿರುವಾಗ ಹಿಂದೂ ಸಮಾಜ ಪ್ರತಿರೋಧ ಒಡ್ಡಿದರೆ, ಅಥವಾ ತನ್ನನ್ನು ಸ್ವಲ್ಪ ಮಟ್ಟಿಗೆ ಹಂಗಿಸಿದರೆ, ಭಂಗಿಸಿದರೆ ಅದಕ್ಕೇನೂ ಅಷ್ಟೊಂದು ಬೇಸರವಾಗುವುದಿಲ್ಲ; ಸಿಟ್ಟೂ ಬರುವುದಿಲ್ಲ. ಹಾಗಾಗಿ ಕ್ರಿಶ್ಚಿಯಾನಿಟಿಯನ್ನು ಒಂದು ಹಂತದವರೆಗೆ ಅತ್ಯಂತ ಚಿಕಿತ್ಸಕವಾಗಿ ನೋಡುವ ಸ್ವಾತಂತ್ರ್ಯ ಹಿಂದೂ ಚಿಂತಕರಿಗೆ ಇದೆ. ಆದರೆ, ಕತ್ತಿಯ ಮೊನೆಯನ್ನೇ ಮತಪ್ರಸಾರದ ಠಸ್ಸೆಯಾಗಿ ಬಳಸುವ ಇಸ್ಲಾಂಗೆ ಅಂಥ ನಯನಾಜೂಕುಗಳಿಲ್ಲ. ಯೇಸುವಿಗೆ ಕೇಸರಿ ಶಾಲು ಹೊದೆಸಿ ಜನಿವಾರ ತೊಡಿಸಿ ಆತನ ಬಾಯಿಂದ ಒಂದಷ್ಟು ಶ್ಲೋಕ ಹೇಳಿಸುವಷ್ಟು ಉದಾರವಾಗಿರುವ ಕ್ರಿಶ್ಚಿಯಾನಿಟಿಗೂ ಹಿಂದೂ ದೇವತೆಗಳನ್ನು ಕಂಡಕಂಡಲ್ಲಿ ವಿರೂಪಗೊಳಿಸಿ ಕೈಕಾಲು ಕತ್ತರಿಸಿ ಹಾಕುವ ಇಸ್ಲಾಮ್ ಮತಕ್ಕೂ ಇರುವ ವ್ಯತ್ಯಾಸ ಅವುಗಳ ಈ ಎರಡು ಕೃತ್ಯಗಳಲ್ಲೇ ಅತ್ಯಂತ ಸ್ಪಷ್ಟ. ಹಾಗಾಗಿ ಹಿಂದೂತ್ವವಾದಿ ಚಿಂತಕರೆಂದು ಕರೆಸಿಕೊಳ್ಳಲು ಇಷ್ಟ ಪಡುವ ಯಾರೂ ಇಸ್ಲಾಂ ವಿರೋಧಿ ಚಿಂತಕರೆಂದು ಬ್ರ್ಯಾಂಡ್ ಆಗಲು ಬಯಸುವುದಿಲ್ಲ. ಆ ಮಟ್ಟಿಗೆ ಗೋಯಲ್ ನಮ್ಮೆಲ್ಲ ಸೋಕಾಲ್ಡ್ ಚಿಂತಕರಿಗಿಂತಲೂ ಭಿನ್ನರಾಗಿದ್ದರು.

ಇಸ್ಲಾಂನಲ್ಲಿ ಯಾರೊಬ್ಬರೂ ತಮ್ಮ ವಿರೋಧಿಗಳನ್ನು ತರ್ಕ-ವಾದಗಳ ಮೂಲಕ ಸೋಲಿಸಲು ಬಯಸುವುದಿಲ್ಲ ಎಂಬುದು ನಮಗೆ ಗೊತ್ತೇ ಇದೆ. ಅವರು ಒಂದೋ ಕತ್ತಿಯ ಮಾರ್ಗ ಹಿಡಿಯುತ್ತಾರೆ; ಇಲ್ಲವಾದರೆ ತಮ್ಮ ವಿರೋಧಿಗಳನ್ನು ಕಾನೂನಿನ ಕುಣಿಕೆಯಲ್ಲಿ ಸುತ್ತಿ ಕಟ್ಟಿ ಮಿಸುಕಾಡದಂತೆ ಮಾಡಲು ಯತ್ನಿಸುತ್ತಾರೆ. ಗೋಯಲರ ವಿಷಯದಲ್ಲಿ ಎರಡನೆಯ ಅಸ್ತ್ರ ಬಹುಬೇಗನೇ ಅವರ ಮೇಲೆ ಪ್ರಯೋಗವಾಯಿತು. ಗೋಯಲ್ ತಮ್ಮದೇ ಪುಸ್ತಕ ಪ್ರಕಾಶನ ತೆರೆದು ಅಲ್ಲಿ ಇಸ್ಲಾಂ ಅನ್ನು ಅತ್ಯಂತ ವಸ್ತುನಿಷ್ಠವಾಗಿ ಪರಿಶೀಲನೆಗೊಡ್ಡುವ ಕೃತಿಗಳನ್ನು ಹೊರತರಲು ಪ್ರಾರಂಭಿಸಿದ್ದಾರೆ ಎಂಬುದು ಗೊತ್ತಾಗುತ್ತಲೇ ಇಸ್ಲಾಂ ಮೂಲಭೂತವಾದಿ ಶಕ್ತಿಗಳು ಜಾಗೃತವಾಗಿ ಬಿಟ್ಟವು. “ಅಂಡರ್‍ಸ್ಟ್ಯಾಂಡಿಂಗ್ ಇಸ್ಲಾಮ್ ಥ್ರೂ ಹದೀಸ್” ಪುಸ್ತಕಕ್ಕೆ ನ್ಯಾಯಾಲಯದಲ್ಲಿ ಕೊನೆಗೂ ಜಯ ಸಿಕ್ಕಿದಾಗ ಮೂಲಭೂತವಾದಿಗಳಿಗೆ ಅದನ್ನು ತಡೆದುಕೊಳ್ಳಲು ಆಗಲಿಲ್ಲ. ನ್ಯಾಯಾಲಯದ ತೀರ್ಪು ಹೊರಬಿದ್ದ ಕೆಲವೇ ತಿಂಗಳಲ್ಲಿ ಕೇಂದ್ರ ಸರಕಾರದ ಗೃಹ ಇಲಾಖೆ ಆ ಪುಸ್ತಕದ ಇಂಗ್ಲೀಷ್ ಮತ್ತು ಹಿಂದೀ ಎರಡೂ ಭಾಷೆಯ ಆವೃತ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವುದಾಗಿ ಗೋಯಲ್‍ರಿಗೆ ಪತ್ರ ಬರೆಯಿತು. ಹಾಗೆ ಪತ್ರ ಬರೆದವರು ಇಲಾಖೆಯ ಉಪಕಾರ್ಯದರ್ಶಿಯಾಗಿದ್ದ ಎಂ.ಯು. ಸಿದ್ದಿಕಿ ಅವರು. ಅಲ್ಲದೆ ಅವರು ಗೋಯಲ್ 1986ರಲ್ಲಿ ಪ್ರಕಟಿಸಿದ್ದ ಒಂದು ಸಣ್ಣ ಪುಸ್ತಕ “ದ ಡೆಡ್ ಹ್ಯಾಂಡ್ ಆಫ್ ಇಸ್ಲಾಮ್” ವಿಚಾರದಲ್ಲಿಯೂ ಗೋಯಲ್ ಮೇಲೆ ಕಿಡಿ ಕಾರುವುದಕ್ಕೆ ಶುರು ಮಾಡಿಬಿಟ್ಟರು. ನಂಬಿದರೆ ನಂಬಿ, ಕೇವಲ 16 ಪುಟಗಳಷ್ಟೇ ಇದ್ದ ಆ ಸಣ್ಣ ಬುಕ್‍ಲೆಟ್ ವಿಚಾರವನ್ನೇ ಮುಂದಿಟ್ಟುಕೊಂಡು ಕೇಂದ್ರ ಸರಕಾರ, ಪೊಲೀಸ್ ಇಲಾಖೆ ಮತ್ತು ನ್ಯಾಯಾಲಯ ವ್ಯವಸ್ಥೆ ಗೋಯಲ್‍ರನ್ನು ಬರೋಬ್ಬರಿ 11 ವರ್ಷಗಳ ಕಾಲ ಗೋಳಾಡಿಸಿತು! ಗೋಯಲ್ ತಮ್ಮ ಜೀವನದ ಅರ್ಧಕ್ಕೂ ಹೆಚ್ಚು ಆಯುಷ್ಯವನ್ನು ಹೀಗೆ ವ್ಯವಸ್ಥೆಯ ಜೊತೆ ಗುದ್ದಾಡುವುದರಲ್ಲಿ ಕಳೆದರು. ಅವರು ತಮ್ಮ ವಿಚಾರಮಂಡನೆಗಾಗಿ ಅನ್ಯ ಮತಗಳ ಜೊತೆ ಗುದ್ದಾಡಿದ್ದು ಹೆಚ್ಚೋ ಅಥವಾ ತನ್ನನ್ನು ಸಮರ್ಥನೆ ಮಾಡಿಕೊಳ್ಳಲೋಸುಗ ತನ್ನದೇ ದೇಶದ ಪ್ರಜಾಪ್ರಭುತ್ವವಾದಿ ವ್ಯವಸ್ಥೆಯೊಂದಿಗೆ ಗುದ್ದಾಡಿದ್ದು ಹೆಚ್ಚೋ ಎಂದು ನೋಡಿದರೆ ಎರಡನೇ ವಿಷಯದಲ್ಲೇ ಅವರ ಜೀವನದ ಹೆಚ್ಚಿನ ಸಮಯ, ಹಣ, ವ್ಯವಧಾನ ಕಳೆದು ಹೋಯಿತು ಎನ್ನಬೇಕು. ಗೋಯಲರ ಜೀವನದಲ್ಲಿ ನಡೆಸಬೇಕಾಗಿ ಬಂದ ಯಾವ ದೊಡ್ಡ ನ್ಯಾಯಾಂಗ ಸಮರದಲ್ಲೂ ಅವರಿಗೆ ಬಲಪಂಥೀಯರೆನ್ನಿಸಿಕೊಂಡ ವ್ಯಕ್ತಿಗಳಾಗಲೀ ಬಲಪಂಥೀಯರ ಸಂರಕ್ಷಕರೆನ್ನಿಸಿಕೊಂಡ ಸಂಘಟನೆಗಳಾಗಲೀ ಅಭಯ ನೀಡಲಿಲ್ಲ. ಮಾಡಿದ್ದನ್ನು ಅನುಭವಿಸು ಎನ್ನುವುದೇ ಅವರೆಲ್ಲರ ಅಭಿಪ್ರಾಯವಾಗಿತ್ತು. ಒಮ್ಮೆ ನ್ಯಾಯಾಲಯದಲ್ಲಿ ದೀರ್ಘವಾದ ವಿಚಾರಣೆ ಮುಗಿಸಿ ಹೊರ ಬರುತ್ತಿದ್ದಾಗ ಅವರಿಗೆ ಹಿಂದೂತ್ವವಾದಿ ನಾಯಕರೊಬ್ಬರು ಸಿಕ್ಕಿದರಂತೆ. ಏನು ವಿಷಯ? ಇಲ್ಲೇಕಿದ್ದೀರಿ? ಎಂದು ಕೇಳಿದರಂತೆ. “ಮುಸ್ಲಿಮ್ ಜನರ ಧಾರ್ಮಿಕ ಭಾವನೆಗಳಿಗೆ ನೋವಾಗುವಂಥ ವಿಚಾರಗಳನ್ನು ಮಂಡಿಸಿದ್ದೇನೆಂದು ಆ ಸಮುದಾಯದವರು ಭಾವಿಸಿದ್ದಾರೆ. ಹಾಗಾಗಿ ನನ್ನ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಅದರ ವಿಚಾರಣೆ ಇತ್ತು” ಎಂದು ಗೋಯಲ್ ಹೇಳಿದಾಗ ಆ ಹಿಂದೂತ್ವವಾದಿಗಳು “ಛೆ! ಇದೆಲ್ಲ ನಿಮಗೇಕೆ ಬೇಕು? ಯಾಕೆ ಅನಗತ್ಯವಾಗಿ ಇವನ್ನೆಲ್ಲ ನೀವು ಮೈಮೇಲೆಳೆದುಕೊಳ್ಳಬೇಕು? ನಾಳೆಯ ದಿನ ಮುಸ್ಲಿಮರ ಆಡಳಿತವೇ ಈ ದೇಶದಲ್ಲಿ ಬಂತೂ ಅಂತಿಟ್ಟುಕೊಳ್ಳಿ. ನಾವೆಲ್ಲ ಮುಸ್ಲಿಮರಾಗಿಬಿಡೋಣ ಅಷ್ಟೆ. ಇಂಥ ಸಣ್ಣ ಸಂಗತಿಗೆಲ್ಲ ನೀವು ಪ್ರಾಣ ಒತ್ತೆಯಿಟ್ಟು ಹೋರಾಡಲು ಹೋಗಬೇಡಿ” ಎಂಬ ಹಿತವಚನ ನೀಡಿದರಂತೆ. ಸೀತಾರಾಮ ಗೋಯಲರು ಇಂಥ ಸನ್ನಿವೇಶಗಳನ್ನು ದಿನಕ್ಕೆ ಹತ್ತರಂತೆ ದಾಟಿಕೊಂಡು ಬರಬೇಕಾಗಿತ್ತು.

ಗೋಯಲ್ ಮನಸ್ಸು ಮಾಡಿದ್ದರೆ ಯಾವುದಾದರೂ ವಿಶ್ವವಿದ್ಯಾಲಯದಲ್ಲಿ ಇತಿಹಾಸದ ಪ್ರಾಧ್ಯಾಪಕನಾಗಿ ಜೀವನ ಕಳೆಯಬಹುದಿತ್ತು. ಹತ್ತಾರು ಭಾಷೆಗಳಲ್ಲಿ ಆಳವಾದ ಪರಿಣತಿ ಪಡೆದಿದ್ದ ಈ ಪಂಡಿತ ಸರಕಾರಕ್ಕೆ ಇಷ್ಟೇ ಇಷ್ಟು ಬಕೆಟ್ ಹಿಡಿದಿದ್ದರೆ ಜೀವನವೆಲ್ಲ ಸುಖವಾಗಿ ಉಂಡುಟ್ಟು ಕಾಲ ಕಳೆಯಲು ಬೇಕಾದ ವ್ಯವಸ್ಥೆ ಮಾಡಿಕೊಳ್ಳಬಹುದಿತ್ತು. ಆದರೆ ಸತ್ಯ ಹೇಳುವ, ಪ್ರಾಮಾಣಿಕನಾಗಿ ಬದುಕುವ ದಾರಿಯನ್ನು ಆರಿಸಿಕೊಂಡದ್ದರಿಂದ ಸತ್ಯಹರಿಶ್ಚಂದ್ರನಂತೆ ಪಡಬಾರದ ಪಾಡುಗಳನ್ನೆಲ್ಲ ಗೋಯಲ್ ಅನುಭವಿಸಬೇಕಾಗಿಬಂತು. ಅವರ ಆರ್ಥಿಕ ಪರಿಸ್ಥಿತಿಯೂ ಆರಕ್ಕೇರದ ಮೂರಕ್ಕಿಳಿದ ಸ್ಥಿತಿಯಲ್ಲೇ ಇತ್ತು. ಬದುಕಿನ ಇಳಿಗಾಲದವರೆಗೂ. ಸತ್ಯ ಹೇಳಿಕೊಂಡು ಬದುಕುವುದು ಕಷ್ಟ; ಇಸ್ಲಾಂ ಕ್ರಿಶ್ಚಿಯಾನಿಟಿ ಕಮ್ಯುನಿಸಂ ನೆಹ್ರುವಿಸಮ್ ಮುಂತಾದ ವಿಷಯಗಳ ಮೇಲೆ ನಿರಂತರವಾಗಿ ಬರೆಯುತ್ತ ಕೂತರೂ ಸಂಸಾರ ಸಾಗಿಸಲು ಸಾಧ್ಯವಾಗುವಷ್ಟು ಸಂಪಾದನೆಯೇನೂ ಆಗುವಂತಿಲ್ಲ ಎಂಬ ವಾಸ್ತವ ಅವರ ಹೆಗಲು ಜಗ್ಗತೊಡಗಿದಾಗ ಅವರು 1964ರಲ್ಲಿ ಬಿಬ್ಲಿಯಾ ಇಂಪೆಕ್ಸ್ ಎಂಬ ಪುಸ್ತಕ ಆಮದು-ರಫ್ತಿನ ವಹಿವಾಟನ್ನು ಪ್ರಾರಂಭಿಸಿದರು. ಅದು ತಕ್ಕಮಟ್ಟಿನ ಲಾಭಾಂಶವನ್ನು ಅವರಿಗೆ ತಂದು ಕೊಡುತ್ತಿತ್ತು. ಭಾರತದಿಂದ ಪುಸ್ತಕಗಳನ್ನು ಪರದೇಶಗಳ ಗ್ರಾಹಕರಿಗೆ ಮಾರುವ ಸಮಯದಲ್ಲಿ ಅವರು ಎಂದೂ ಮುಂಗಡ ಹಣಕ್ಕಾಗಿ ಬೇಡಿಕೆ ಇಡುತ್ತಿರಲಿಲ್ಲ. ಉಳಿದೆಲ್ಲ ಅಂಗಡಿಗಳವರು ಮೊದಲು ದುಡ್ಡು ಪಡೆದು ನಂತರ ಪುಸ್ತಕ ಕಳಿಸುತ್ತಿದ್ದರೆ ಗೋಯಲ್ ಮಾತ್ರ ಪುಸ್ತಕ ಕೊಟ್ಟು ನಂತರ ದುಡ್ಡು ಪಡೆಯುತ್ತಿದ್ದರು. ಹೊರದೇಶದ ಗ್ರಾಹಕರನ್ನು ಇಂಥ ವಿಷಯಗಳಲ್ಲಿ ನಂಬಬಹುದು; ಅವರಿಂದ ಎಂದೂ ಮೋಸವಾಗುವ ಪ್ರಮೇಯ ಇಲ್ಲ ಎನ್ನುತ್ತಿದ್ದರು ಗೋಯಲ್. ಅವರ ನಂಬಿಕೆ ಸುಳ್ಳಾಗುವಂಥ ಪ್ರಕರಣ ಎಂದೂ ಜರುಗಲಿಲ್ಲ ಎನ್ನುವುದು ವಿಶೇಷ.

ರಾಜಕೀಯ ಸಾಮಾಜಿಕ ವಿಶ್ಲೇಷಕ ಬರಹಗಾರರಲ್ಲಿ ಎರಡು ಬಗೆಯವರಿರುತ್ತಾರೆ. ಸದ್ಯದ ಪರಿಸ್ಥಿತಿಗಳ ಬಗ್ಗೆ ಬರೆಯುವವರು; ಮುಂದಿನ ಮೂರ್ನಾಲ್ಕು ದಶಕಗಳಲ್ಲಿ ಆಗಬಹುದಾದ ಸಂಗತಿಗಳನ್ನೂ ಮೊದಲೇ ಊಹಿಸಿ ಬರೆದು ಸಮಾಜವನ್ನು ಎಚ್ಚರಿಸುವವರು. ಮೊದಲ ವರ್ಗದ ಜನ ಎಲ್ಲೆಲ್ಲೂ ಸಿಗುತ್ತಾರೆ. ಅಂಥ ಬರವಣಿಗೆಗೆ ಹೆಚ್ಚಿನ ಪರಿಶ್ರಮವೂ ಬೇಕಾಗಿಲ್ಲ. ಪೆನ್ನಿಗೆ ಇಂಕು ತುಂಬಿಸಿಕೊಂಡು ಹಾಳೆಯ ಮೇಲೆ ಗೀಚಲು ಬರುವ ಯಾವುದೇ ಅಕ್ಷರಸ್ಥ, ಸ್ವಲ್ಪ ಪ್ರಯತ್ನಪಟ್ಟರೆ ಅಂಥ ವಿಶ್ಲೇಷಣಾ ಬರಹಗಾರನಾಗಲು ಸಾಧ್ಯವಿದೆ. ಆದರೆ ಹಿಂದಿನ ಚರಿತ್ರೆಯನ್ನೂ ಈಗಿನ ವರ್ತಮಾನವನ್ನೂ ಅಕ್ಕಪಕ್ಕ ಇಟ್ಟು ಭವಿಷ್ಯದ ದುರಂತಗಳ ಬಗ್ಗೆ, ಭವಿಷ್ಯದ ಆಶೋತ್ತರಗಳ ಬಗ್ಗೆ ಖಚಿತ ನಿಲುವಿನಿಂದ ಬರೆಯಲು ಅಷ್ಟೇ ಪ್ರಬುದ್ಧವಾದ ತಾರ್ಕಿಕಶಕ್ತಿ ಬೇಕಾಗುತ್ತದೆ. 1960ರ ದಶಕದಲ್ಲಿ ಕೋಲ್ಕತ್ತಾದಲ್ಲಿ ಮದರ್ ತೆರೆಸಾರನ್ನು ಕೇವಲ ಹತ್ತು-ಹದಿನೈದು ನಿಮಿಷಗಳಲ್ಲಿ ಕಂಡಾಗಲೇ ಆಕೆಯದ್ದು ನಿಷ್ಕಾಮಕರ್ಮ ಅಲ್ಲ; ಅದರಲ್ಲಿ ಮತಾಂತರದ ಛಾಯೆ ಢಾಳಾಗಿ ಕಾಣಿಸುತ್ತಿದೆ ಎಂದು ಹೇಳಿದವರು ಗೋಯಲ್! ತೆರೆಸಾ ಸೇವೆಯನ್ನು ಗೋಯಲ್ ತನ್ನ ಜೀವಿತದುದ್ದಕ್ಕೂ ಖಂಡಿಸುತ್ತಲೇ ಬಂದರು. ಆಕೆ ಯಾವ್ಯಾವ ಮೂಲಗಳಿಂದ ಧನಸಂಪನ್ಮೂಲ ಕ್ರೋಡೀಕರಿಸುತ್ತಿದ್ದಾರೆ; ಅದಕ್ಕೆ ಭಾರತದ ಜನರ ಬಡತನವನ್ನೂ ಅನಾರೋಗ್ಯವನ್ನೂ ಹೇಗೆ ಬಳಸಿಕೊಳ್ಳುತ್ತಿದ್ದಾರೆ ಎಂಬುದನ್ನು ಗೋಯಲ್ ಕಟುವಾದ ಶಬ್ದಗಳಲ್ಲಿ ಬರೆದು ಸಮಾಜವನ್ನು ಎಚ್ಚರಿಸಲು ಪ್ರಯತ್ನಿಸಿದರು. ಮಿಷನರಿಗಳ ಕಾರ್ಯತಂತ್ರದ ಬಗ್ಗೆ ಡಾಕ್ಟರೇಟ್ ಡಿಗ್ರಿ ಪಡೆಯುವಷ್ಟು ಆಳವಾಗಿ ತಿಳಿದುಕೊಂಡಿದ್ದ ಅವರಿಗೆ ತೆರೆಸಾ ಕಣ್ಕಟ್ಟು ಖುಲ್ಲಂಖುಲ್ಲಾ ತಿಳಿದಿದ್ದರೂ ಏನೂ ಮಾಡಲಾಗಲಿಲ್ಲ. ಆಳುವ ಪಕ್ಷ ಅವರ ಪರವಾಗಿರಲಿಲ್ಲ; ಅವರು ನೆಚ್ಚಿಕೊಳ್ಳಬಹುದಾಗಿದ್ದ ಹಿಂದೂತ್ವ ಪ್ರತಿಪಾದಕ ಸಂಘಟನೆಗೆ ತೆರೆಸಾರನ್ನು ಎದುರು ಹಾಕಿಕೊಳ್ಳುವ ಗಟ್ಟಿತನ ಇರಲಿಲ್ಲ. ಗೋಯಲ್ ಮಹಾತ್ಮಾಗಾಂಧಿಯನ್ನು ಕೂಡ ಅತ್ಯಂತ ಖಚಿತ ಶಬ್ದಗಳಲ್ಲಿ ವಿಶ್ಲೇಷಣೆಗೆ ಒಳಪಡಿಸಿದರು. ಗಾಂಧಿ ಸರ್ವಧರ್ಮ ಸಮನ್ವತೆಯ ಭಜನೆ ಮಾಡುತ್ತ ಹೇಗೆ ದೇಶದ ದಿಕ್ಕು ತಪ್ಪಿಸಿದರು ಎಂಬುದನ್ನು ಗೋಯಲ್ ಎಳೆಎಳೆಯಾಗಿ ಬಿಡಿಸಿಟ್ಟರು. ಪ್ರವಾದಿಯ ಕತೆಯ ಗುಜರಾತಿ ಅನುವಾದವನ್ನು ಪತ್ರಿಕೆಯಲ್ಲಿ ಪ್ರಕಟಿಸುತ್ತಿದ್ದ ಗಾಂಧಿ ಒಂದಷ್ಟು ಮುಸ್ಲಿಮರ ವಿರೋಧ ವ್ಯಕ್ತವಾದ ಕೂಡಲೇ ಹೇಗೆ ಆ ಧಾರಾವಾಹಿಯನ್ನು ತಕ್ಷಣ ನಿಲ್ಲಿಸಿದರು, ಹೇಗೆ ತಮ್ಮ ಮೇಲೆ ಮುಸ್ಲಿಮರು ವಾಚಾಮಗೋಚರ ಬಯ್ಗುಳದ ಸುರಿಮಳೆ ಹರಿಸಲು ಸಮ್ಮತಿಸೂಚಕ ಮೌನ ಧರಿಸಿದರು, ಕೇರಳದಲ್ಲಿ ಹಿಂದೂಗಳನ್ನು ಬರ್ಬರವಾಗಿ ಹತ್ಯೆ ಮಾಡಿದ ಮೋಪ್ಲಾಗಳನ್ನು ಹೇಗೆ ಬೆಂಬಲಿಸಿದರು, ಆ ಮೋಪ್ಲಾಗಳನ್ನು ಬ್ರಿಟಿಷರು ಕೊಂದು ಹಾಕಿದಾಗ ಹೇಗೆ ಸಿಡಿದೆದ್ದು ಪ್ರತಿಭಟಿಸಿದರು, ಹೇಗೆ ಖಿಲಾಫತ್ ಎಂಬ ಅರ್ಥವಿಲ್ಲದ ಚಳವಳಿಯ ನೇತೃತ್ವ ವಹಿಸಿದರು, ಹೇಗೆ ಗಾಂಧಿ ತನ್ನ ಸಾವಿರಾರು ಪುಟಗಳ ಬರವಣಿಗೆಯಲ್ಲಿ ಒಂದೇ ಒಂದು ಕಡೆಯಲ್ಲಿ ಕೂಡ ಇಸ್ಲಾಂನ ತಪ್ಪು/ದೌರ್ಬಲ್ಯಗಳ ಬಗ್ಗೆ ಒಂದೇ ಒಂದು ಸಾಲೂ ಬರೆಯಲಿಲ್ಲ ಎಂಬುದನ್ನು ಅಷ್ಟೊಂದು ವಿವರವಾಗಿ ಬರೆದವರು ಗೋಯಲ್ ಬಿಟ್ಟರೆ ಮತ್ತೊಬ್ಬರಿಲ್ಲ. ತಮ್ಮ ಯಾವ ವಿಶ್ಲೇಷಣೆಯಲ್ಲೂ ಅವರು ಕಾಗಕ್ಕ ಗುಬ್ಬಕ್ಕನ ಕತೆಗಳನ್ನು ಅವಲಂಬಿಸಲಿಲ್ಲ. ರೋಮಿಲಾ ಥಾಪರ್ ಆರ್ಯರ ಆಗಮನದ ಕತೆ ಕಟ್ಟಿದಂತೆ ಅಥವಾ ಭಗವಾನ್ ಶಂಕರಾಚಾರ್ಯರ ಕುರಿತು ಕಪೋಲಕಲ್ಪಿತ ಕತೆ ಬರೆದು ಹಾಕಿದಂತೆ ಗೋಯಲ್ ಯಾವತ್ತೂ ಬೆಂಕಿಪೆಟ್ಟಿಗೆಯ ಗೋಪುರ ಕಟ್ಟುತ್ತ ಹೋಗಲಿಲ್ಲ. ತನ್ನ ಪ್ರತಿಯೊಂದು ಮಾತಿಗೂ ಇತಿಹಾಸದಲ್ಲಿ ದಾಖಲಾದ ಸತ್ಯಗಳನ್ನು ಎತ್ತಿ ತೋರಿಸಿದರು. ಯಾರ್ಯಾರು ಯಾವ್ಯಾವ ಹೇಳಿಕೆಗಳನ್ನು ಕೊಟ್ಟಿದ್ದರೋ ಅವವನ್ನೇ ಬಳಸಿಕೊಂಡು ಇತಿಹಾಸದ ದಾಖಲಾತಿಯ ಕೆಲಸ ಮಾಡಿದರು.

ಸ್ವಾತಂತ್ರ್ಯಾನಂತರದ ಭಾರತದಲ್ಲಿ ಸರ್ವಧರ್ಮ ಸಮಭಾವ ಎಂಬ ಪದಪುಂಜವನ್ನು ನಮ್ಮ ಸರಕಾರಗಳು ನಿರಂತರವಾಗಿ ಭಜಿಸುತ್ತ ಬಂದವು. ಪಠ್ಯಪುಸ್ತಕಗಳು ಕೂಡ ಅದನ್ನೇ ರಾಗವಾಗಿ ಹಾಡಿದವು. ಇದು ಮುಖ್ಯವಾಗಿ ಹಿಂದೂ ಧರ್ಮ, ಕ್ರಿಶ್ಚಿಯನ್ ಇಸ್ಲಾಂ ರಿಲಿಜನ್ನುಗಳು, ಬೌದ್ಧ ಜೈನ ಮತಗಳು – ಈ ಯಾವುದನ್ನೂ ಸರಿಯಾಗಿ ತಿಳಿದುಕೊಳ್ಳದ ಗಾಂಧಿ ಕೊಟ್ಟ ಕೊಡುಗೆ. ಅಥವಾ ಅದಕ್ಕೂ ಹಿಂದೆ ರಾಜಾರಾಮ್ ಮೋಹನ್‍ರಾಯ್ ಸನಾತನ ಧರ್ಮದ ಬ್ರಹ್ಮೈಕ್ಯವಾದಕ್ಕೂ ಕ್ರಿಶ್ಚಿಯಾನಿಟಿಯ ಏಕದೇವತಾವಾದಕ್ಕೂ ಅಭೇದ ಕಲ್ಪಿಸಿ ಮಾಡಿದ ಯಡವಟ್ಟು ಇದು. ಇಂದಿಗೂ ನಮ್ಮ ರಾಜಕೀಯ ನಾಯಕರು “ಏಕಂ ಸತ್, ವಿಪ್ರಾಃ ಬಹುಧಾ ವದಂತಿ. ಅಂದರೆ ಸತ್ಯ ಅಥವಾ ದೇವರು ಒಂದೇ. ಅದನ್ನೇ/ಅವನನ್ನೇ ಜನ ಬಗೆಬಗೆಯ ಹೆಸರುಗಳಿಂದ ಕರೆಯುತ್ತಾರೆ. ಹಾಗಾಗಿ ಕೃಷ್ಣ, ಅಲ್ಲಾ, ಜೀಸಸ್ ಎಲ್ಲ ಒಂದೇ” ಎಂದು ಷರಾ ಬರೆದು ಬಿಡುತ್ತಾರೆ. ವೇದಮಂತ್ರದ ಪಾರಮಾರ್ಥಿಕ ಅರ್ಥವ್ಯಾಪ್ತಿಗೆ ಇದಕ್ಕಿಂತ ಕೆಟ್ಟ ಅರ್ಥಮಿತಿಯ ಬೇಲಿ ಕಲ್ಪಿಸುವುದು ಬಹುಶಃ ಸಾಧ್ಯವಿಲ್ಲವೇನೋ. ಇವೆಲ್ಲವೂ ಇಂದು ಸರ್ವಧರ್ಮ ಸಮಭಾವ ಎಂಬ ಸರಕಾರೀ ಘೋಷಣೆಯ ವಿವಿಧ ಆಧಾರಗಳಾಗಿ ಬಳಕೆಯಾಗುತ್ತಿವೆ. ಆದರೆ ಸರಕಾರವೇ ಹೀಗೆ ಎಲ್ಲ ಮತಧರ್ಮಗಳೂ ಒಂದೇ ಎಂಬ ಪಾರುಪತ್ಯೆ ಮಾಡಲು ಪ್ರಾರಂಭಿಸಿದಾಗ ಏನೇನು ಅನಾಹುತಗಳು ಸಂಭವಿಸುತ್ತವೆ ಎಂಬುದನ್ನು ಗೋಯಲ್ ವಿಸ್ತಾರವಾಗಿ ಬಿಡಿಸಿಟ್ಟಿದ್ದಾರೆ. ದುರಂತವೆಂದರೆ ಈ ಸರ್ವಧರ್ಮ ಸಮಭಾವದ ಭಜನೆಯನ್ನು ಸಂಘಪರಿವಾರ ಕೂಡ ಮಾಡುತ್ತಿದೆ. ಭಾಜಪಾಕ್ಕೆ ಇದೊಂದು ವೋಟು ತರಬಲ್ಲ ಉದ್ಘೋಷಣೆಯಾಗಿ ಬೇಕಾಗಿದೆ. ಸರ್ವಧರ್ಮ ಸಮಭಾವ ಎಂಬ ಮಾತು ಈಗಿನ ಕಾಲದಲ್ಲಿ ಸರಕಾರಕ್ಕೆ ಸೆಕ್ಯುಲರಿಸಮ್ ಎಂಬ ಬೀಜಾಕ್ಷರ ಮಂತ್ರದ ವಿಸ್ತರಣೆಯಾಗಿದೆ. ಭಾಜಪಾಕ್ಕೆ ಈ ಸರ್ವಧರ್ಮ ಸಮಭಾವವೇ “ಪಾಸಿಟಿವ್ ಸೆಕ್ಯುಲರಿಸಮ್”ಅನ್ನು ಹರಡಲು ಬೇಕಾದ ಹಿನ್ನೆಲೆ ವಾಕ್ಯವಾಗಿದೆ. ಆದರೆ ಎಲ್ಲ ಧರ್ಮ-ಮತ-ರಿಲಿಜನ್‍ಗಳು ಒಂದೇ ಎಂಬ ವಾದವೇ ಅತ್ಯಂತ ಪೇಲವವಾಗಿರುವಾಗ ಅದರ ಮೇಲೆ ಕಟ್ಟಿದ ಸೌಧ ಇನ್ನೆಷ್ಟು ಗಟ್ಟಿಯಾಗಿರಬಹುದು? ಗೋಯಲ್ ತಮ್ಮ ವಿಶ್ಲೇಷಣೆಯ ದಾರಿಯಲ್ಲಿ ಯಾವ ಸಂಸ್ಥೆ ಅಥವಾ ರಾಜಕೀಯ ಪಕ್ಷಕ್ಕೂ ಸಹಾನುಭೂತಿ ತೋರಿವುದಿಲ್ಲ. ಭಾಜಪಾ ಸೆಕ್ಯುಲರಿಸಮ್‍ನ ಅರ್ಥವನ್ನು ಸರಿಯಾಗಿ ಬುದ್ಧಿಗತಗೊಳಿಸಿಕೊಳ್ಳಬೇಕು. ತಾನೂ ಸೆಕ್ಯುಲರ್ ಎಂದು ಹೇಳಿಕೊಳ್ಳುವ ತೆವಲಿಗೆ ಬಿದ್ದು “ಪಾಸಿಟಿವ್ ಸೆಕ್ಯುಲರ್” ಎಂಬ ಹೊಸ ಪರಿಭಾಷೆ ಟಂಕಿಸಲು ಹೋಗಬಾರದು. ಹಾಗೆ ಮಾಡಿದಾಗ “ಕಮ್ಯುನಲ್” ಎಂಬ ಪದಕ್ಕೆ ನೀಚಾರ್ಥ ಕಲ್ಪಿಸಿದ ವಾಮಪಂಥೀಯರ ಬೋನಲ್ಲಿ ಭಾಜಪಾ ತಾನಾಗಿ ಹೋಗಿಬಿದ್ದಂತಾಗುತ್ತದೆ ಎಂದು ಗೋಯಲ್ ಎಚ್ಚರಿಸಿದರು. ಮುಸ್ಲಿಮರನ್ನು ಸೆಳೆದು ತಾನೊಂದು ಸೆಕ್ಯುಲರ್ ಪಕ್ಷವೆಂದು ತೋರಿಸಿಕೊಳ್ಳುವ ತೆವಲು ಭಾಜಪಾಕ್ಕೆ ಮೊದಲಿಂದಲೂ ಇದೆ; ಆದರೆ ಮುಸ್ಲಿಮರು ಯಾವತ್ತಿಗೂ ಈ ಪಕ್ಷದ ಕುರಿತ ತಮ್ಮ ಗುಮಾನಿಗಳನ್ನು ಜೀವಂತವಿಟ್ಟೇ ಇರುತ್ತಾರೆ ಎಂಬುದು ಗೋಯಲ್ ಯಾವ ಮುಲಾಜಿಲ್ಲದೆ ಕೊಡುವ ನಿರ್ಣಯ.

ಹೇಗೆ ಆರೆಸ್ಸೆಸ್ ಬಗ್ಗೆ ಗೋಯಲ್‍ರಿಗೆ ವೈಚಾರಿಕ ಭಿನ್ನಾಭಿಪ್ರಾಯಗಳಿದ್ದವೋ ಅದೇ ಬಗೆಯ ಮುನಿಸು-ಮನಸ್ತಾಪಗಳು ಆರೆಸ್ಸೆಸ್‍ಗೂ ಗೋಯಲ್ ಜೊತೆ ಇದ್ದವು. ಅರವತ್ತರ ದಶಕದಲ್ಲಿ ನೆಹರೂ ಬಗ್ಗೆ ಗೋಯಲ್ ಬರೆದಾಗ ಅದನ್ನು ಆರ್ಗನೈಸರ್ ಪ್ರಕಟಿಸಿದ್ದು ಸಂಘ ಪರಿವಾರಕ್ಕೆ ಇಷ್ಟವಾಗಲಿಲ್ಲ. ಇಂಥ ಪ್ರಚೋದನಕಾರೀ ಬರಹಗಳಿಂದ ನೆಹರೂ ಜೀವಕ್ಕೆ ಕುತ್ತು ಬಂದರೆ? ಎಂದು ಹೆದರಿದ ಅದರ ಮುಖಂಡರು ಗೋಯಲ್‍ರನ್ನು ಸಂಘ ಪರಿವಾರದ ಬೌದ್ಧಿಕ ವೃತ್ತದಿಂದ ಗಡೀಪಾರು ಮಾಡಿದರು. 1980ರ ದಶಕದಲ್ಲಿ ಅದಾಗಲೇ ಹಿಂದೂ ಚಿಂತನೆಯ ಕ್ಷೇತ್ರದಲ್ಲಿ ದೊಡ್ಡ ಹೆಸರಾಗಿದ್ದ ಅವರನ್ನು ಆರ್ಗನೈಸರ್ ಪತ್ರಿಕೆ ಮತ್ತೊಮ್ಮೆ ಲೇಖನ ಬರೆದುಕೊಡುವಂತೆ ಕೇಳಿಕೊಂಡಿತು. ಆಗ ಅವರು ಇಸ್ಲಾಂ ರಿಲಿಜನ್ ಒಳಗಿನ ಸಮಸ್ಯೆಗಳ ಬಗ್ಗೆ ಗಂಭೀರವಾದ ಲೇಖನಗಳನ್ನು ಬರೆಯತೊಡಗಿದರು. ಆದರೆ ಅದು ಕೂಡ ಸಂಘ ಪರಿವಾರದ ಹಿರಿಯರಿಗೆ ರುಚಿಸಲಿಲ್ಲ. “ಗೋಯಲ್ ಅವರು ಪ್ರತಿ ವಾರ ನಮ್ಮ ಪತ್ರಿಕೆಗಳಲ್ಲಿ ಬರೆಯಲು ಅವರೇನೂ ಗಾಂಧಿಯಲ್ಲ; ನಮ್ಮ ಪತ್ರಿಕೆ “ಹರಿಜನ”ವೂ ಅಲ್ಲ. ಅವರ ಲೇಖನ ಸರಣಿ ನಿಲ್ಲಿಸಿ!” ಎಂಬ ಆದೇಶ ಮೇಲಿನಿಂದ ಬಂತು. ಹಾಗೆ ಓರ್ವ ಹಿರಿಯ ಚಿಂತಕನ ಬರಹಗಳನ್ನು ಏಕಾಏಕಿ ಸೂಕ್ತ ಕಾರಣವಿಲ್ಲದೆ ನಿಲ್ಲಿಸುವುದು ಸರಿಯಲ್ಲ ಎಂದು ಮಾತಾಡಿದ ಆರ್ಗನೈಸರ್ ಪತ್ರಿಕೆಯ ಸಂಪಾದಕ ಮಲ್ಕಾನಿಯವರನ್ನು ಸಂಘ ಉಚ್ಚಾಟಿಸಿಬಿಟ್ಟಿತು! ತನ್ನ ಐವತ್ತು ವರ್ಷಗಳ ಬರವಣಿಗೆಯ ಯಾತ್ರೆಯಲ್ಲಿ ಗೋಯಲ್ ಹೆಚ್ಚು ಕಡಿಮೆ ಭಾಜಪಾ ಮತ್ತು ಅದರ ಅಂಗಸಂಸ್ಥೆಗಳಿಗೆ ರುಚಿಸಲಿಲ್ಲ. ಯಾವುದೇ ರಾಜಕೀಯ ಹಿತಾಸಕ್ತಿ ಇಲ್ಲದೆ ಬರೆಯುತ್ತಿದ್ದ ಅವರ ಮಾತುಗಳು ಬಹುಶಃ ಭಾಜಪಾ ಮತ್ತು ಪರಿವಾರಕ್ಕೆ ಸಿಡಿಗುಂಡಿನಂತೆ ಕಾಣಿಸುತ್ತಿದ್ದವೋ ಏನೋ. ತಮಷೆಯೆಂದರೆ ಆಗ ಅವರನ್ನು ದೂರ ಇಟ್ಟಿದ್ದ ಅದೇ ಪರಿವಾರ ಇಂದು ಅವರ ವಿಚಾರಗಳ ಪುನರ್‍ಪರಿಶೀಲನೆ ಮಾಡುತ್ತಿದೆ. ನೆಹರೂರನ್ನು ನಿಂದಿಸಲು ಹಿಂದೆ ಮುಂದೆ ನೋಡುತ್ತಿದ್ದ ಕೇಸರಿ ನಾಯಕರು ಇಂದು ಮಾತೆತ್ತಿದರೆ “ಇದೆಲ್ಲ ಅನಿಷ್ಟಕ್ಕೂ ನೆಹರೂ ಅವರ ಸೋಷಲಿಸಮ್ಮೇ ಕಾರಣ” ಎನ್ನುತ್ತಾರೆ. 1990ರ ನಂತರ ಕೇಸರಿಪಡೆ ಕ್ರಿಶ್ಚಿಯನ್ನರ ಮತಾಂತರ ಪಿಡುಗಿನ ಬಗ್ಗೆ ಎಚ್ಚೆತ್ತು ದೊಡ್ಡದಾಗಿ ಅದರ ವಿರುದ್ಧ ಹೋರಾಡಲು ಪ್ರಾರಂಭಿಸಿತು. ಕಮ್ಯುನಿಸಮ್ ಅನ್ನು ಮಾತ್ರ ಅದಿನ್ನೂ ಪೂರ್ತಿಯಾಗಿ ಹೊಡೆದೋಡಿಸುವ ಮನಸ್ಸು ಮಾಡಿಲ್ಲ. ಕೇರಳ ಬಂಗಾಳದಂತಹ ರಾಜ್ಯಗಳಲ್ಲಿ ಕೇಸರಿ ಸಂಘಟನೆಗಳು ಕಮ್ಯುನಿಸಮ್ಮಿನ ಜೊತೆ ಹೊಯ್‍ಕೈ ಮಾದರಿಯ ಹೋರಾಟದಲ್ಲಿ ತೊಡಗಿವೆಯೇ ಹೊರತು ಆ ಸಿದ್ಧಾಂತವನ್ನು ಬೌದ್ಧಿಕವಾಗಿ ಎದುರಿಸುವ; ಪಟ್ಟಿಗೆ ಪ್ರತಿಪಟ್ಟು, ತಂತ್ರಕ್ಕೆ ಪ್ರತಿತಂತ್ರ ಹೂಡುವ ಕೆಲಸ ಹಿಂದೂತ್ವವಾದಿಗಳಿಂದ ಆಗಿಲ್ಲ. ಇನ್ನು, ಗೋಯಲ್‍ರು 1950ರ ದಶಕದಲ್ಲಿ ಈ ದೇಶವನ್ನು ಚೀನಾದ ಪ್ರಾಬಲ್ಯದ ಬಗ್ಗೆ ಎಚ್ಚರಿಸಿದ್ದರು. ಚೀನಾವೇ ನಮ್ಮ ನಿಜ ಶತ್ರು ಎಂದು ಈಗ ನಾವು ಅರ್ಥ ಮಾಡಿಕೊಂಡಿದ್ದೇವೆ. ಗೋಯಲ್ ಅವರು ಮುಂದುವರಿದು “ಸರ್ವಧರ್ಮ ಸಮಭಾವ” ಎಂಬುದು ನಮ್ಮ ನಾಲ್ಕನೇ ಸಮಸ್ಯೆ (ಕ್ರಿಶ್ಚಿಯಾನಿಟಿ, ಇಸ್ಲಾಂ, ಕಮ್ಯುನಿಸಮ್ – ಇವು ಮೊದಲ ಮೂರು). ಇದು ಮುಂದಿನ ದಿನಗಳಲ್ಲಿ ಹಿಂದೂಗಳ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹೆಜ್ಜೆಹೆಜ್ಜೆಗೆ ನಿಯಂತ್ರಿಸುತ್ತದೆ; ಬಹುತೇಕ ಸಂದರ್ಭಗಳಲ್ಲಿ ಹಿಂದೂಗಳ ಅಭಿವ್ಯಕ್ತಿಯ ಸ್ವಾತಂತ್ರ್ಯವನ್ನು ಮುಚ್ಚಿಯೇ ಹಾಕುತ್ತದೆ – ಎಂಬ ಎಚ್ಚರಿಕೆಯನ್ನೂ ನೀಡಿದ್ದಾರೆ. ಅವರು ಹೇಳಿರುವ ಮಿಕ್ಕೆಲ್ಲ ಸಂಗತಿಗಳು ನಿಜವಾಗಿರುವುದರಿಂದ ಇದು ಕೂಡ ಇನ್ನು ಕೆಲ ವರ್ಷಗಳಲ್ಲಿ ಸಮಸ್ಯೆ ಎಂಬುದು ನಮಗೆ ಅರಿವಿಗೆ ಬರಬಹುದೇನೋ.

ಸೀತಾರಾಮ ಗೋಯಲ್ ಅತ್ಯಂತ ಸರಳವಾಗಿ ಬದುಕಿದರು. ಅಗತ್ಯಕ್ಕಿಂತ ಹೆಚ್ಚಿನದೇನನ್ನೂ ಕೂಡಿಡಬೇಡ ಎಂದು ಮಗನಿಗೂ ಉಪದೇಶ ಮಾಡಿದ್ದರಂತೆ. ಆ ಮಾತಿಗೆ ಬೆಲೆಕೊಟ್ಟ ಮಗ ಅತಿ ಕಡಿಮೆ ಬೆಲೆಗೆ ಒಂದು ಜಮೀನು ಖರೀದಿಸುವ ಅವಕಾಶ ಬಂದರೂ, ಅದು ತನ್ನ ಅಗತ್ಯವನ್ನು ಮೀರಿದ ಲಕ್ಸುರಿಯಾದೀತೆಂದು ಕೈ ಚೆಲ್ಲಿದರಂತೆ. ಬರಹದಲ್ಲಿ ತನ್ನ ಅನಿಸಿಕೆಗಳನ್ನು ಉಗ್ರವಾಗಿ ಪ್ರತಿಪಾದಿಸುತ್ತಿದ್ದ ಗೋಯಲ್‍ಜಿ, ವೈಯಕ್ತಿಕ ಮಾತುಕತೆಗಳಲ್ಲಿ ಹಾಸ್ಯಚಟಾಕಿಗಳನ್ನು ಹಾರಿಸುತ್ತ ಖುಷಿಯಾಗಿ ನಗುತ್ತ ಯಾರ ಜೊತೆಗೂ ಆರಾಮಾಗಿ ವ್ಯವಹರಿಸಬಲ್ಲವರಾಗಿದ್ದರು. ಯಾರನ್ನಾದರೂ ಭೇಟಿಯಾಗಬೇಕಿದ್ದರೆ ಅವರಿದ್ದಲ್ಲಿಗೆ ಹೋಗಿ ಮಾತಾಡಿಸಿ ಕುಶಲೋಪರಿ ವಿಚಾರಿಸಿ ಕೆಲಸ ಪೂರೈಸಿಕೊಂಡು ಬರುವ ಸರಳತೆ ಅವರಿಗಿತ್ತು. ತನ್ನ ಅರವತ್ತರ ಇಳಿವಯಸ್ಸಿನಲ್ಲಿ ಮಗನಿಂದ ಕಾರು ಉಡುಗೊರೆಯಾಗಿ ಪಡೆದಾಗ ಅವರು ಡ್ರೈವರ್ ಅನ್ನು ಇಟ್ಟುಕೊಳ್ಳದೆ ತಾನಾಗಿ ಕಾರು ಚಲಾಯಿಸಲು ಇಷ್ಟಪಡುತ್ತಿದ್ದರು. ಡ್ರೈವರ್ ಇದ್ದರೆ ಆತನ ಸಮಯವೂ ಹಾಳು. ದಿನವೆಲ್ಲ ಈ ವಿಐಪಿಯ ಹಿಂದೆ ಮುಂದೆ ಸುಳಿದಾಡಬೇಕು. ಅದಕ್ಕೆಲ್ಲ ಅವಕಾಶ ಕೊಡದೆ ನಾನಾಗಿಯೇ ಎಲ್ಲವನ್ನೂ ನಿಭಾಯಿಸುವುದು ಒಳ್ಳೆಯದಲ್ಲ ಎನ್ನುತ್ತಿದ್ದರು ಗೋಯಲ್. ವಯಸ್ಸು ಅರವತ್ತು ತುಂಬಿದಾಗ ಒಂದು ದಿನವೂ ಹೆಚ್ಚುವರಿಯಾಗಿ ತನ್ನ ಸಂಸ್ಥೆಯಲ್ಲಿ ಮುಂದುವರಿಯಲು ಕೇಳದೆ ಮಗನನ್ನು ಉತ್ತರಾಧಿಕಾರಿಯಾಗಿ ಕೂರಿಸಿ ತಾನು ಋಷಿಋಣ ಪೂರೈಸುವ ಸಲುವಾಗಿ ಬರವಣಿಗೆಯ ಕೆಲಸಕ್ಕೆ ಕೂತು ಬಿಟ್ಟರು. ರಾಮ್‍ಸ್ವರೂಪ್ ಅವರ ಜೊತೆ ಸೇರಿಕೊಂಡು ಅವರು ಹುಟ್ಟು ಹಾಕಿದ “ವಾಯ್ಸ್ ಆಫ್ ಇಂಡಿಯಾ” ಎಂಬ ಲಾಭರಹಿತ ಪ್ರಕಾಶನ ಸಂಸ್ಥೆ ಅವರದಷ್ಟೇ ಅಲ್ಲದೆ ಹಲವು ತರುಣ ಬರಹಗಾರರ ಪುಸ್ತಕಗಳನ್ನೂ ಹೊರ ತಂದಿತು. ದೇಶದಲ್ಲಿ ಎಂಥ ಬದಲಾವಣೆಯಾಗಬೇಕಿದ್ದರೂ ಮೊದಲು ಜನರಲ್ಲಿ ಬೌದ್ಧಿಕ ಎಚ್ಚರ ಮೂಡಬೇಕು; ತಮ್ಮ ಅಸ್ಮಿತೆಯ ಜಾಗೃತಿಯಾಗಬೇಕು; ತಾವು ಎಂಥ ದೇಶಕ್ಕೆ ಎಂಥ ಪರಂಪರೆಗೆ ಸೇರಿದವರು ಎಂಬ ತಿಳಿವಳಿಕೆ ಮೂಡಬೇಕು. ಅದುವೇ ಕ್ರಾಂತಿಯ ಪ್ರಾರಂಭಬಿಂದು ಎಂದು ನಂಬಿದ ಗೋಯಲ್ ತನ್ನ ವಾಯ್ಸ್ ಸಂಸ್ಥೆಯ ಮೂಲಕ ಪ್ರಕಟಿಸಿದ್ದು 90ಕ್ಕೂ ಹೆಚ್ಚು ಶೀರ್ಷಿಕೆಗಳನ್ನು. 29 ಪುಸ್ತಕಗಳು ಅವರವೇ.

“ಮಹಾನ್ ಇತಿಹಾಸಕಾರ” ಎಂದು ರೋಮಿಲಾ, ಇರ್ಫಾನ್, ಗುಹಾ ರೀತಿಯಲ್ಲಿ ಹಣೆಪಟ್ಟಿ ಹಚ್ಚಿಕೊಳ್ಳದೇ ಇದ್ದ ಗೋಯಲ್‍ರು ಬಹುಶಃ ಅದೇ ಕಾರಣಕ್ಕೆ ಸರಕಾರಕ್ಕೆ ಬಿಡಿ, ವಿಶ್ವವಿದ್ಯಾಲಯಗಳಿಗೂ ಸ್ವೀಕೃತರು ಅನ್ನಿಸಲಿಲ್ಲ. ಬದುಕಿದ್ದಷ್ಟು ಕಾಲ ಅವರನ್ನು ಪುರೋಹಿತಶಾಹಿ, ಕೇಸರಿ ಲೇಖಕ, ಮನುವಾದಿ, ಉಗ್ರಚಿಂತಕ, ಹಿಂದೂತ್ವವಾದಿ ಲೇಖಕ, ಹಿಂದೂ ಇತಿಹಾಸಕಾರ, ಆರೆಸ್ಸೆಸ್ ಪಂಡಿತ, ಮೂಲಭೂತವಾದಿ, ಕಮ್ಯುನಲ್ ಮನಸ್ಥಿತಿಯವನು, ಪೂರ್ವಗ್ರಹಪೀಡಿತ, ಪುರೋಗಾಮಿ… ಅಬ್ಬಬ್ಬ ಅದೆಷ್ಟು ಹೆಸರಿಂದ ಚುಚ್ಚಲಾಯಿತು ಎಂದರೆ ಅವರ ಸ್ಥಾನದಲ್ಲಿ ದುರ್ಬಲ ಹೃದಯರೇನಾದರೂ ಇದ್ದರೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೇನೋ! ಎಡಪಂಥೀಯರು ಬರೆದುಕೊಳ್ಳುವ ಒಂದೊಂದು ಲೇಖನವೂ ಅಕಡೆಮಿಕ್ ವಲಯದಲ್ಲಿ ವಾಹ್ ವಾಹ್ ಅನ್ನಿಸಿಕೊಳ್ಳುತ್ತಿದ್ದರೆ ಗೋಯಲ್ ಅತ್ಯಂತ ಆಳವಾದ ಅಧ್ಯಯನದ ಬಲದಿಂದ ಬರೆಯುತ್ತಿದ್ದ ಗ್ರಂಥಗಳು ಶಿಕ್ಷಣ ಸಂಸ್ಥೆಗಳ ಲೈಬ್ರರಿ ಕಪಾಟುಗಳನ್ನು ಕೂಡ ಸೇರುತ್ತಿರಲಿಲ್ಲ.

ಬಂಡವಾಳಶಾಹಿಯನ್ನು ವಿರೋಧಿಸುವ ಲೆಫ್ಟಿಸ್ಟ್ ಚಿಂತಕರು ವಿಶ್ವವಿದ್ಯಾಲಯಗಳಲ್ಲಿ ಗೂಟ ಬಡಿದು ದಶಕಗಳ ಕಾಲ ಸಂಬಳ ಪಡೆದು, ಫೋರ್ಡ್ ಫೌಂಡೇಶನ್‍ನಂಥ ಬಿಲಿಯನೇರ್ ಬಂಡವಾಳಶಾಹಿಗಳ ಕೈಯಲ್ಲಿ ಫೆಲೋಶಿಪ್ ಗಿಟ್ಟಿಸಿಕೊಂಡು ವರ್ಷಕ್ಕೊಂದೋ ಎರಡೋ ಫಾರಿನ್ ಟ್ರಿಪ್ ಹಾಕುತ್ತಿದ್ದರೆ ಗೋಯಲ್‍ರು ಸತ್ಯ ಬರೆದ ತಪ್ಪಿಗೆ ಕೇಸಿನ ಮೇಲೆ ಕೇಸು ಹಾಕಿಸಿಕೊಂಡು ಯಾವೊಂದು ರಾಜಕೀಯ ಪಕ್ಷದ ಬೆಂಬಲವಿಲ್ಲದೆ ಅವೆಲ್ಲವನ್ನೂ ತಾನೊಬ್ಬನೇ ಹೋರಾಡುತ್ತ ದೆಹಲಿಯ ಬಿಸಿಲ ಬೀದಿಗಳಲ್ಲಿ ಚಪ್ಪಲಿ ಸವೆಸುತ್ತಿದ್ದರು. ಅದಲ್ಲವೇ ದುರಂತ ಎಂದರೆ?

ಗೋಯಲ್‍ಜಿ ದೆಹಲಿಯಲ್ಲಿ, ದೀರ್ಘಕಾಲೀನ ಅಸೌಖ್ಯದ ನಂತರ 2003ರ ಒಂದು ದಿನ ನಿದ್ರೆಯಲ್ಲಿದ್ದಾಗಲೇ ಇಹಲೋಕದ ವ್ಯಾಪಾರ ಮುಗಿಸಿ ಮೌನವಾಗಿ ಎದ್ದು ಹೊರಟರು. ಅವರು ಮಂಡಿಸಿದ ವಿಚಾರಗಳು ಅವರಿದ್ದ ಕಾಲಕ್ಕಿಂತಲೂ ಈ 21ನೇ ಶತಮಾನದಲ್ಲಿ ಹೆಚ್ಚು ಪ್ರಸ್ತುತವಾಗಿವೆ. ಹಿಂದೂ ಧರ್ಮದ ಬಗ್ಗೆ ಹೆಚ್ಚು ತಿಳಿಯುತ್ತ ಹೋದಂತೆಲ್ಲ ಅದು ಜಗತ್ತಿನ ಉಳಿದ ರಿಲಿಜನ್‍ಗಳಿಗಿಂತ ಹೇಗೆ ಸಾವಿರ ಮೆಟ್ಟಿಲು ಮೇಲಿದೆ ಎಂಬುದು ತಿಳಿಯುತ್ತದೆ. ಕ್ರಿಶ್ಚಿಯಾನಿಟಿ, ಜುದಾಯಿಸಂ, ಇಸ್ಲಾಂ ಮುಂತಾದ ರಿಲಿಜನ್‍ಗಳಲ್ಲಿ ಅತ್ಯಂತ ಬಾಲಿಶವಾದ ಮಾತುಗಳನ್ನು ಪ್ರವಾದಿಗಳ ಬಾಯಿಯಿಂದ ಹೇಳಿಸಿ ಅವೆಲ್ಲ ದೇವರಿಂದ ಉಕ್ತವಾದವೆಂಬ ಸುಳ್ಳು ಹಂಚಲಾಗಿದೆ; ಮಾತ್ರವಲ್ಲ ಆ ರಿಲಿಜನ್‍ಗಳ ಮತಗ್ರಂಥಗಳು ಅದೇನೋ ಮಹತ್ತರವಾದ ಸಂದೇಶ ಸಾರುತ್ತಿವೆಯೆನ್ನುತ್ತ ಅವುಗಳಿಗೆ ಅನಗತ್ಯ ಘನತೆಯ ಮೌಲ್ಯ ಹೊದೆಸಲಾಗಿದೆ ಎಂದು ಗೋಯಲ್ ಹೇಳಿದ್ದನ್ನು ಹಿನ್ನೆಲೆಯಾಗಿಟ್ಟುಕೊಂಡು ನಾವಿಂದು ಜಗತ್ತಿನ ಎಲ್ಲ ರಿಲಿಜನ್‍ಗಳನ್ನು ಅಭ್ಯಾಸ ಮಾಡಬೇಕಾಗಿದೆ. ಯಾಕೆಂದರೆ ಜಗತ್ತು ಆಧುನಿಕವಾದಂತೆ ರಿಲಿಜನ್‍ಗಳು ಮಾತ್ರ ಹಿಮ್ಮುಖ ಚಲನೆ ತೋರಿಸುತ್ತಿರುವುದು ಆತಂಕದ ಬೆಳವಣಿಗೆ. ಇಂದು ಯುರೋಪ್‍ನಲ್ಲಾಗುತ್ತಿರುವುದು ನಾಳೆ ಭಾರತದಲ್ಲಿ ಆಗಬಹುದು. ಅಂಥ ಅಪಾಯವನ್ನು ಮುಂದಾಗಿ ಊಹಿಸಿ ದೇಶವನ್ನು ಎಚ್ಚರಿಸಲು ನಮಗೆ ಗೋಯಲ್‍ರಂಥ ದೃಷ್ಟಾರರು, ಬ್ರಹ್ಮಕ್ಷತ್ರಿಯರು ಬೇಕು. ಹಿಂದೂತ್ವದ ಆತ್ಮವನ್ನೂ ಭಾರತೀಯತೆಯ ತೊಗಲನ್ನೂ ಹಾಕಿಕೊಂಡಿರುವ ಶಕ್ತಿ ತಾನು ಎಂದು ಭಾವಿಸುವ ಆರೆಸ್ಸೆಸ್ ಮತ್ತು ಅದರ ಅಂಗಸಂಸ್ಥೆಗಳಿಗೆ ಗೋಯಲ್‍ರ ಚಿಂತನೆಯ ಬೆಳಕು ಖಂಡಿತಾ ಬೇಕು. ಹಾಗೆಯೇ ಅವರ ಚಿಂತನೆಯ ದಾರಿಯಲ್ಲಿ ಇನ್ನಷ್ಟು ಪ್ರಖರ, ಪೂರ್ವಗ್ರಹರಹಿತ, ಆತ್ಮನಿಷ್ಠ, ಪ್ರಾಮಾಣಿಕ ಚಿಂತಕರನ್ನು ಬೆಳೆಸುವ ಸಂಸ್ಕತಿಯನ್ನು ಅದು ಪ್ರಾರಂಭಿಸಬೇಕು.   

(ಮುಗಿಯಿತು)

[ಸೀತಾರಾಮ ಗೋಯಲ್ ಅವರು ಸಂಕಲಿಸಿದ “ಫ್ರೀಡಮ್ ಆಫ್ ಎಕ್ಸ್‍ಪ್ರೆಶನ್” ಕೃತಿಯ ಕನ್ನಡಾನುವಾದ “ಅಭಿವ್ಯಕ್ತಿ ಸ್ವಾತಂತ್ರ್ಯ” ಕೃತಿ ಇಂದು ಗೋಖಲೆ ಸಾರ್ವಜನಿಕ ಸಂಸ್ಥೆಯಲ್ಲಿ ಬೆಳಿಗ್ಗೆ 10 ಗಂಟೆಗೆ ಲೋಕಾರ್ಪಣೆಗೊಳ್ಳುತ್ತಿದೆ. ಪುಸ್ತಕವನ್ನು ಕನ್ನಡಕ್ಕೆ ತಂದವರು ನಿಘಂಟುತಜ್ಞ ವಿ. ಕೃಷ್ಣ ಅವರು. – ರೀಡೂ ಸಂ.]

Facebook ಕಾಮೆಂಟ್ಸ್

ಲೇಖಕರ ಕುರಿತು

Rohith Chakratheertha

ಓದಿದ್ದು ವಿಜ್ಞಾನ, ಮುಖ್ಯವಾಗಿ ಗಣಿತ. ಬೆಂಗಳೂರಿನಲ್ಲಿ ನಾಲ್ಕು ವರ್ಷ ಉಪನ್ಯಾಸಕನಾಗಿ ಕಾಲೇಜುಗಳಲ್ಲಿ ಪಾಠ ಮಾಡಿದ್ದ ಇವರು ಈಗ ಒಂದು ಬಹುರಾಷ್ಟ್ರೀಯ ಕಂಪೆನಿಯಲ್ಲಿ ಉದ್ಯೋಗಿ. ಹವ್ಯಾಸವಾಗಿ ಬೆಳೆಸಿಕೊಂಡದ್ದು ಬರವಣಿಗೆ. ಐದು ಪತ್ರಿಕೆಗಳಲ್ಲಿ ಸದ್ಯಕ್ಕೆ ಅಂಕಣಗಳನ್ನು ಬರೆಯುತ್ತಿದ್ದು ವಿಜ್ಞಾನ, ಗಣಿತ, ವ್ಯಕ್ತಿಚಿತ್ರ, ಮಕ್ಕಳ ಕತೆ ಇತ್ಯಾದಿ ಪ್ರಕಾರಗಳಲ್ಲಿ ಇದುವರೆಗೆ ೧೩ ಪುಸ್ತಕಗಳ ಪ್ರಕಟಣೆಯಾಗಿವೆ. ಉದ್ಯೋಗ ಮತ್ತು ಬರವಣಿಗೆಯಿಂದ ಬಿಡುವು ಸಿಕ್ಕಾಗ ತಿರುಗಾಟ, ಪ್ರವಾಸ ಇವರ ಖಯಾಲಿ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!