Featured ಅಂಕಣ

ಸೀತಾರಾಮ ಗೋಯಲ್ – ವ್ಯಕ್ತಿ ಶಕ್ತಿ – 2: 32ರ ಹರೆಯದಲ್ಲೇ ದೇಶದ ಮುಂದಿನ ನೂರು ವರ್ಷಗಳ ಹಣೆಬರಹ ಹೇಳಿಬಿಟ್ಟಿದ್ದರು ಆ ಪುಣ್ಯಾತ್ಮ!

ಭಾರತ ಸ್ವಾತಂತ್ರ್ಯ ಪಡೆದ ಮೇಲೆ ಮೊದಲೆರಡು ದಶಕಗಳಲ್ಲಿ ಸಂಭವಿಸಿದ ದುರಂತಗಳ ಪಟ್ಟಿ ಮಾಡಿ ಎಂದರೆ ನಾವು ಹೇಳುವುದೇನು? ಪಾಕಿಸ್ತಾನದ ಜೊತೆಗೆ ನಡೆದ ಎರಡು ಯುದ್ಧಗಳು ಮತ್ತು ಚೀನಾದೊಂದಿಗೆ ನಡೆದ ಒಂದು ಯುದ್ಧ – ಇಷ್ಟೇ ತಾನೇ? ನೆಹರೂ ಭಕ್ತರು ಯಾರಾದರೂ ಇದ್ದರೆ, “ಹದಿನೇಳು ವರ್ಷಗಳ ರಾಜ್ಯಭಾರ ಮಾಡಿದ ನೆಹರೂ ತೀರಿಕೊಂಡರು. ಎರಡು ದಶಕಗಳಲ್ಲಿ ನಡೆದ ದೊಡ್ಡ ದುರಂತ ಎಂದರೆ ಅದೇ” ಎಂದಾರು. ನೆಹರೂ ವಿರೋಧಿಗಳಿದ್ದರೆ, ಅವರ 17 ವರ್ಷದ ಆಡಳಿತವೇ ದೊಡ್ಡ ದುರಂತ ಎಂದೂ ಹೇಳಿಯಾರು. ಏನೇ ಇರಲಿ, ಯಾರು ಏನೇನು ಸಂಗತಿಗಳ ಪಟ್ಟಿ ಕೊಟ್ಟರೂ ಆ ಪಟ್ಟಿಯಲ್ಲಿ ಟಿಬೆಟ್ ಅನ್ನು ಚೀನಾ ಆಕ್ರಮಿಸಿಕೊಂಡ ವಿಚಾರ ಬರುವುದು ಮಾತ್ರ ಸಂಶಯವೇ. ಭಾರತ ಸ್ವಾತಂತ್ರ್ಯ ಪಡೆದ ಕೇವಲ ಮೂರು ವರ್ಷಗಳಲ್ಲೇ ಚೀನಾ ಟಿಬೆಟ್ ಮೇಲೆ ಆಕ್ರಮಣ ಮಾಡಿ ಅದನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿತು. “ಅದು ಚೀನಾ-ಟಿಬೆಟ್‍ಗಳ ಸಮಸ್ಯೆ ಆಯ್ತು. ಭಾರತದ ಸಮಸ್ಯೆ ಹೇಗಾಗುತ್ತದೆ?” ಎಂದು ಕೇಳುತ್ತೀರೇನೋ ನೀವು. ಆದರೆ, ಆ ಕಾಲಘಟ್ಟದಲ್ಲಿ ನಿಂತು ನೋಡುವುದಾದರೆ, ಟಿಬೆಟ್ ಭಾರತದ ಜೊತೆ – ದಶಕವಲ್ಲ, ಶತಮಾನಗಳಲ್ಲ – ಸಹಸ್ರಮಾನದಿಂದ ಸೋದರ ಸಂಬಂಧ ಹಂಚಿಕೊಂಡಿದ್ದ ದೇಶ. ಭಾರತದ ಜ್ಞಾನಪರಂಪರೆಯ ಋಷಿಗಳೆಲ್ಲ ಟಿಬೆಟಿನಲ್ಲಿದ್ದವರು. ಧ್ಯಾನ, ಯೋಗ ಎಲ್ಲವೂ ಭಾರತದಿಂದ ಟಿಬೆಟಿನ ಮೂಲಕವಾಗಿ ಚೀನಾ, ಜಪಾನ್ ದೇಶಗಳಿಗೆ ಹೋಯಿತು. ಬೌದ್ಧ ದರ್ಶನ ಚೀನಾಕ್ಕೆ ಹೋದದ್ದೇ ಟಿಬೆಟ್ ಮಾರ್ಗವಾಗಿ. ಈಗಿನ ಲಡಾಖ್ ಪರಿಸರದಲ್ಲಿ ಎಷ್ಟು ಬೌದ್ಧಮಠಗಳಿವೆಯೋ ಅವೆಲ್ಲಕ್ಕೂ ಮೂಲಮಠಗಳಿದ್ದದ್ದು ಟಿಬೆಟ್‍ನಲ್ಲಿ. ಬೌದ್ಧಿಕವಾಗಿ, ಧಾರ್ಮಿಕವಾಗಿ, ಸಾಂಸ್ಕತಿಕವಾಗಿ ಟಿಬೆಟ್ ಮತ್ತು ಹಿಮಾಲಯದ ತಪ್ಪಲಿನ ಭಾರತದ ನಡುವಿನ ಅಂತರ ಹೆಚ್ಚೇನಿರಲಿಲ್ಲ. ಎರಡೂ ಪ್ರಾಂತ್ಯಗಳ ನಡುವೆ ವಿಚಾರ ವಿನಿಮಯ, ವಸ್ತು ವಿನಿಮಯ ಎರಡೂ ಅನೂಚಾನವಾಗಿ ನಡೆದುಕೊಂಡು ಬಂದಿತ್ತು. ಭಾರತದಂತೆಯೇ ಟಿಬೆಟ್ ತನ್ನ ಸಾವಿರ ವರ್ಷಗಳ ಇತಿಹಾಸದಲ್ಲಿ ಯಾರ ಮೇಲೂ ವಿನಾಕಾರಣ ಯುದ್ಧ ಮಾಡಿದ ಉದಾಹರಣೆ ಇರಲಿಲ್ಲ. ಅಂಥದೊಂದು ನೆಲದ ಮೇಲೆ ಆಕ್ರಮಣಶೀಲ ಚೀನಾ ಏಕಾಏಕಿ ಎರಗಿದಾಗ ಅದರ ಮೊದಲ ಕಂಪನಗಳು ಅಪ್ಪಳಿಸಬೇಕಿದ್ದದ್ದು ದೆಹಲಿಯನ್ನು. ಟಿಬೆಟ್ ಅನ್ನು ಉಳಿಸಿಕೊಳ್ಳುವ ಸರ್ವಪ್ರಯತ್ನಗಳನ್ನು ಮೊದಲಾಗಿ ಮಾಡಬೇಕಿದ್ದ ದೇಶ ಭಾರತವೇ. ಧೂರ್ತ ಬಲಶಾಲಿಯೊಬ್ಬ ತನ್ನ ಮೇಲೆ ಏರಿ ಬಂದಾಗ ಬಡಪಾಯಿ ಟಿಬೆಟ್ ನೋಡಿದ್ದು ಕೂಡ ಭಾರತದತ್ತಲೇ. ಚೀನಾ ಬಹುತೇಕ ಏಕಕಾಲಕ್ಕೆಂಬಂತೆ ಇತ್ತ ಟಿಬೆಟ್ ಅತ್ತ ಕೊರಿಯಾ ಮೇಲೆ ಯುದ್ಧ ಸಾರಿತು. ಆಗ, ಟಿಬೆಟ್‍ನ ನೆರವಿಗೆ ತಕ್ಷಣ ಧಾವಿಸಬೇಕಿದ್ದ ಭಾರತದ ಪ್ರಧಾನಿಗಳು ಆ ವಿಷಯವನ್ನು ಹಾಗೇ ಬಿಟ್ಟು ಚೀನಾ-ಕೊರಿಯಾ ನಡುವಿನ ಯುದ್ಧದ ಬಗ್ಗೆ ತಲೆಕೆಡಿಸಿಕೊಂಡರು!

ಅಲ್ಲಿಂದ ಶುರುವಾಯಿತು ನೋಡಿ ಭಾರತದ ಕಷ್ಟ ಪರಂಪರೆ. ಹಯವದನ ನಾಟಕದ ಪದ್ಮಿನಿ ಹೇಳುವಂತೆ, ಒಮ್ಮೆ ದಾರಿ ತಪ್ಪಿತು; ನಂತರ ಸಿಕ್ಕವರೆಲ್ಲ ಆ ತಪ್ಪಿದ ದಾರಿ ಮತ್ತೆಂದೂ ಸರಿಯಾಗದಂತೆ ನೊಡಿಕೊಂಡರು! ಚೀನಾದ ವ್ಯಾಮೋಹಿಯಾಗಿದ್ದ ನೆಹರೂ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಚೀನಾಕ್ಕೆ ಸ್ಥಾನ ಸಿಗುವುದಕ್ಕಾಗಿ ಆ ದೇಶದ ಅಧ್ಯಕ್ಷನಿಗಿಂತ ಹೆಚ್ಚಾಗಿ ಹೋರಾಡಿದರು, ಲಾಬಿ ಮಾಡಿದರು. ಗಂಡನಿಗಿಲ್ಲದ ದೃಷ್ಟಿ ತನಗೇಕೆ ಎಂದು ಕಣ್ಣಪಟ್ಟಿ ಕಟ್ಟಿಕೊಂಡ ಪತಿವ್ರತೆಯಂತೆ ಚೀನಾಕ್ಕಿಲ್ಲದ ವಿಶೇಷ ಸ್ಥಾನಮಾನ ತನಗೇಕೆ ಬೇಕು ಎಂದು ಇದೇ ನೆಹರೂ ಭಾರತಕ್ಕೆ ಚಿನ್ನದ ತಟ್ಟೆಯಲ್ಲಿ ಬಂದಿದ್ದ ಭದ್ರತಾ ಮಂಡಳಿಯ ಸದಸ್ಯತ್ವವನ್ನು ಎಡಗಾಲಿನಿಂದ ಒದ್ದು ಬಿಟ್ಟರು! ಆದರೆ ಅತ್ತ, ತನ್ನ ಸುತ್ತಮುತ್ತಲಿನವರ ಭಾವನೆ-ಸಂವೇದನೆಗಳಿಗೆ ಕವಡೆ ಕಾಸಿನ ಕಿಮ್ಮತ್ತು ಕೊಡದ ಚೀನಾ ಟಿಬೆಟ್ ಅನ್ನು ಆಕ್ರಮಿಸಿಕೊಂಡದ್ದಷ್ಟೇ ಅಲ್ಲ, ಅಲ್ಲಿನ ಧರ್ಮಗುರುವನ್ನು ಪೀಠದಿಂದ ಇಳಿಸಿ ಓಡಿಸಿತು. ಚೀನಾದ ಸೈನಿಕರ ಕೈಗೆ ಸಿಕ್ಕರೆ ಜೀವನವೆಲ್ಲ ಕತ್ತಲ ಕೋಣೆಯಲ್ಲಿ ಕಳೆಯಬೇಕಾದ ಅಪಾಯವನ್ನು ಮುಂದಾಗಿ ಅರಿತ ಧರ್ಮಗುರು ದಲಾಯಿ ಲಾಮ ತನ್ನ ಶಿಷ್ಯಕೋಟಿಯೊಂದಿಗೆ ರಾತ್ರೋರಾತ್ರಿ ಟಿಬೆಟ್‍ನಿಂದ ಓಡಿಬಂದು ಗಡಿ ದಾಟಿ ಭಾರತಕ್ಕೆ ಕಾಲಿಟ್ಟರು. ಅಂದು ಇಟ್ಟ ಕಾಲನ್ನು ಇದುವರೆಗೆ ಹಿಂದೆಗೆದು ಮತ್ತೆ ಟಿಬೆಟಿನ ಮೇಲಿಡಲು ಅವರಿಗೆ ಆಗಿಲ್ಲ! ಯಾರನ್ನೂ ದರಕರಿಸದೆ ಒಂದು ಸ್ವತಂತ್ರ ದೇಶವನ್ನು ಚೀನಾ ತನ್ನ ಸುಪರ್ದಿಗೆ ತೆಗೆದುಕೊಳ್ಳುತ್ತಿದ್ದರೆ ಅತ್ತ ವಿಶ್ವಸಂಸ್ಥೆ ಔಪಚಾರಿಕವಾಗಿ ಅಸಮ್ಮತಿಯ ಎರಡು ಮಾತಾಡಿ ಸುಮ್ಮನಾಗಿ ಬಿಟ್ಟಿತು. ಡಾರ್ವಿನ್ನನ “ಸರ್ವೈವಲ್ ಆಫ್ ದ ಫಿಟ್ಟೆಸ್ಟ್” ಸಿದ್ಧಾಂತಕ್ಕೆ ಉದಾಹರಣೆಯಾಗಿ ನಿಂತಿತ್ತು ಚೀನಾ ಟಿಬೆಟನ್ನು ನುಂಗಿ ನೀರು ಕುಡಿದ ದೃಷ್ಟಾಂತ.

ಟಿಬೆಟ್ ಚೀನಾದ ಹೊಟ್ಟೆಯೊಳಗೆ ಬಿದ್ದದ್ದರಿಂದ ಆದ ದೊಡ್ಡ ಬದಲಾವಣೆಯೆಂದರೆ ಚೀನಾದ ಗಡಿರೇಖೆ ಭಾರತದವರೆಗೆ ವಿಸ್ತರಿಸಿತು. ಕೆಲವೇ ಕೆಲವು ಭಾಗಗಳಲ್ಲಷ್ಟೇ ಭಾರತದ ಸಂಪರ್ಕಕ್ಕೆ ಬರುತ್ತಿದ್ದ ಚೀನಾ ಈಗ ಟಿಬೆಟ್ ಅನ್ನು ತನ್ನೊಳಗೆ ನುಂಗಿಕೊಂಡು ಭಾರತದ ಹೆಗಲಿಗೆ ಹೆಗಲುಜ್ಜಿ ನಿಂತಿತು. ಅದರ ಜೊತೆಗೇ ಭಾರತದೊಡನೆ ಅದರ ಗಡಿತಂಟೆಗಳು ಒಂದೊಂದಾಗಿ ಪ್ರಾರಂಭವಾದವು. ಟಿಬೆಟ್ ಪ್ರಸ್ತಭೂಮಿಯಲ್ಲಿ ಹುಟ್ಟಿ ಪೂರ್ವಾಭಿಮುಖ ಹರಿದು ಅರುಣಾಚಲದಲ್ಲಿ ಭಾರತದೊಳಗೆ ಸೇರಿಕೊಳ್ಳುತ್ತಿದ್ದ ಬ್ರಹ್ಮಪುತ್ರ ಮೊದಲು, ಭಾರತಕ್ಕೆ ಸೇರುವವರೆಗೂ ಹರಿಯುತ್ತಿದ್ದದ್ದು ಪೂರ್ಣವಾಗಿ ಟಿಬೆಟ್ ದೇಶದೊಳಗೆ. ಆದರೆ ಆ ದೇಶವೇ ಭೂಪಟದಿಂದ ಅಳಿಸಿ ಹೋದ ಮೇಲೆ ಆ ನದಿಗೆ ಅಲ್ಲಲ್ಲಿ ಅಣೆಕಟ್ಟುಗಳನ್ನು ಕಟ್ಟುವ ಕೆಲಸಕ್ಕೆ ಚೀನಾ ಕೈ ಹಾಕಿತು. ನದಿ ಭಾರತಕ್ಕೆ ಪ್ರವೇಶಿಸುವ ಭಾಗದಲ್ಲಿ ಒಂದಷ್ಟು ಉಪನದಿಗಳೂ ಅದನ್ನು ಕೂಡಿಕೊಳ್ಳುತ್ತವೆ. ಅಂಥ ಉಪನದಿಗಳ ನೀರನ್ನೂ ತಾನೊಂದೇ ನುಂಗಿ ನೊಣೆಯಬೇಕೆಂದು ಹಂಚಿಕೆ ಹಾಕಿದ ಚೀನಾ, ಅರುಣಾಚಲ ಪ್ರದೇಶವನ್ನೂ ತನ್ನದೇ ಎನ್ನಲು ಪ್ರಾರಂಭಿಸಿತು. ಮಾತ್ರವಲ್ಲ ನೇಪಾಳದಲ್ಲಿ ಕಮ್ಯುನಿಸಂನ ಮಲಯಮಾರುತವನ್ನು ಹದವಾಗಿ ಬೀಸಿತು. ಭೂತಾನ್ ಜೊತೆಗೂ ಅದರ ಗಡಿ ಗಲಾಟೆ ಶುರುವಾಯಿತು. ಕಾಶ್ಮೀರದ ಸಿಯಾಚಿನ್‍ನಲ್ಲಿ ಅದು ಕಾಲು ಕೆರೆದು ಜಗಳಕ್ಕೆ ಬಂತು. ಅಕಸಾಯ್ ಚಿನ್ ತನಗೇ ಬೇಕೆಂದಿತು. ಭಾರತದ ಪರಮಶತ್ರುವಾದ ಪಾಕಿಸ್ತಾನ ಕಾಶ್ಮೀರದಲ್ಲಿ ತನ್ನ ಕೈ ಬೆರಳನ್ನು ಚೀನಾದ ಕೈ ಬೆರಳಿಗೆ ತಾಗಿಸಲು ಸಾಧ್ಯವಾಗಿದ್ದು ಟಿಬೆಟ್ ಅನ್ನು ಚೀನಾ ತನ್ನೊಳಗೆ ಸೇರಿಸಿಕೊಂಡಿದ್ದರಿಂದಾಗಿಯೇ. ಟಿಬೆಟ್ ಭಾಗದಲ್ಲಿ ತನ್ನ ದೇಶದ ಒಟ್ಟು ಜನಸಂಖ್ಯೆಯ ಶೇಕಡಾ ಹತ್ತರಷ್ಟು ಜನರೂ ಇಲ್ಲವೆಂಬ ಕಾರಣಕ್ಕೇ ಆ ಭಾಗವನ್ನು ಪಾಳು ಬಿಟ್ಟಿದ್ದ ಚೀನಾ ಯಾವಾಗ ಪಾಕಿಸ್ತಾನ ತನಗೆ ಹತ್ತಿರವಾಯಿತೋ ಅಂದಿನಿಂದಲೇ ಟಿಬೆಟ್ ಭಾಗದಲ್ಲಿ ಚೀನೀಯರನ್ನು ತುಂಬಿಸತೊಡಗಿತು. ಯಾಕೆಂದರೆ ಪಾಕಿಸ್ತಾನವನ್ನು ಬಳಸಿಕೊಂಡು ಕರಾಚಿವರೆಗೆ ಕಾರಿಡಾರ್ ನಿರ್ಮಿಸಿ ಅರಬ್ಬಿ ಸಮುದ್ರದಲ್ಲಿ ಬಂದರು ಎಬ್ಬಿಸುವ ಯೋಚನೆ ಅದಾಗಲೇ ಚೀನಾಕ್ಕೆ ಬಂದಿತ್ತು. ಹಾಗೇನಾದರೂ ಆದರೆ ತನ್ನ ಪೂರ್ವ ಕರಾವಳಿಯಂತೆ ಪಶ್ಚಿಮದ ಭಾಗದಲ್ಲೂ ಕೈಗಾರಿಕೆಗಳನ್ನು ಬೆಳೆಸಬಹುದೆಂಬ ದೂರದ ಆಲೋಚನೆ ಅದರದ್ದು! ಪೂರ್ವ ಚೀನಾದಲ್ಲಿ ಬೃಹತ್ ಯೋಜನೆಗಳ ಕಾರಣದಿಂದ ನಿರ್ವಸಿತರಾದವರಿಗೆಲ್ಲ ಅದು ಪಶ್ಚಿಮ ಭಾಗದಲ್ಲಿ ವಸತಿ ಕಲ್ಪಿಸಿತು. ಟಿಬೆಟ್‍ನ ಭೌತಿಕ ಸ್ವರೂಪವನ್ನು ಹದಗೆಡಿಸಿ ಅದೂ ಚೀನಾದ ಉಳಿದೆಲ್ಲ ಭಾಗಗಳಂತೆ ಕಾಣಿಸುವಂತೆ ಮಾಡಬೇಕೆಂಬುದು ಕೂಡ ಚೀನಾದ ಇಂಗಿತವಾಗಿತ್ತು. ಭವಿಷ್ಯದಲ್ಲೇನಾದರೂ ಒಂದು ದಿನ ನಿರಾಶ್ರಿತ ಟಿಬೆಟನ್ನರು ಮತ್ತೆ ತಮ್ಮ ತಾಯ್ನಾಡಿಗೆ ಮರಳುವಂತಾದರೂ ಅವರಿಗೆ ಅದು ತಮ್ಮ ದೇಶ ಅನ್ನಿಸಬಾರದು; ಚೀನಾದ ಭಾಗದಲ್ಲೇ ಬಂದು ನಿಂತಿದ್ದೇವೆ ಅನ್ನಿಸಬೇಕು; ತಮ್ಮ ನೆಲದಲ್ಲಿ ತಮಗೇ ಪರಕೀಯತೆಯ ಭಾವನೆ ಬರಬೇಕು – ಅದಕ್ಕೆ ಏನೇನು ಮಾಡಬೇಕೋ ಅದೆಲ್ಲವನ್ನೂ ಉದ್ದೇಶಪೂರ್ವಕ ಚೀನಾ ಮಾಡಿತು. ಈ ಎಲ್ಲ ಬೆಳವಣಿಗೆಗಳ ಫಲಶ್ರುತಿಯೆಂದರೆ ಭಾರತ ಟಿಬೆಟ್ ಎಂಬ ತನ್ನ ಬಹುದೊಡ್ಡ ಸಾಂಸ್ಕತಿಕ ಕೊಂಡಿಯಿಂದ ಕಳಚಿಕೊಂಡದ್ದು.

ಇದೆಲ್ಲ ಆದದ್ದು ನೆಹರೂ ಎಂಬ ಧೃತರಾಷ್ಟ್ರನ ದೂರದೃಷ್ಟಿಯಿಲ್ಲದ ತಪ್ಪು ನಿರ್ಧಾರಗಳಿಂದ. ಶತ್ರುವಿನ ಎದೆಗೆ ಎದೆ ಒಡ್ಡಿ ನಿಲ್ಲಲಾಗದೆ ಆತ ತೋರಿಸಿದ ಹೇಡಿತನದಿಂದ. ನೆಹರೂ ತನ್ನ ವೈಯಕ್ತಿಕ ರಾಜಕೀಯಾಸಕ್ತಿಯನ್ನು ಮುಂದೆ ಮಾಡಿಕೊಂಡು ರಾಷ್ಟ್ರದ ಹಿತಾಸಕ್ತಿಯನ್ನು ಹಿಂದಿಕ್ಕಿದ ಫಲವೇ ಇಂದಿಗೂ ಚೀನಾ ಎಂಬ ಡ್ರ್ಯಾಗನ್ ನಮಗೆ ತಲೆನೋವಾಗಿ ತಲೆ ಮೇಲೆ ಕೂತಿದೆ. ಇದೆಲ್ಲ ಹೀಗೆಯೇ ಆಗುತ್ತದೆ ಎಂದು, ಚೀನಾ ಯಾವತ್ತು ಟಿಬೆಟ್ ಅನ್ನು ಬಲಾತ್ಕಾರದಿಂದ ಆಕ್ರಮಿಸಿಕೊಂಡಿತೋ ಅವತ್ತೇ ದೃಷ್ಟಾರನ ಖಚಿತತೆಯಿಂದ ಮುಂದಾಲೋಚಿಸಿ ಕಂಡವರು, ಕಂಡು ಬರೆದಿಟ್ಟವರು ಇಬ್ಬರು: ರಾಮ್‍ಸ್ವರೂಪ್ ಮತ್ತು ಸೀತಾರಾಮ ಗೋಯಲ್. ಗೋಯಲ್ ಅವರು ಒಂದೇ ವರ್ಷದಲ್ಲಿ ಬರೆದು ಪ್ರಕಟಿಸಿದ ಕೆಲವು ಪುಸ್ತಕಗಳ ಹೆಸರು ನೋಡಿ: “ದ ಚೈನಾ ಡಿಬೇಟ್ – ಹೂಮ್ ಷಲ್ ವಿ ಬಿಲೀವ್”, “ಮೈಂಡ್ ಮರ್ಡರ್ ಇನ್ ಮಾವೋ ಲ್ಯಾಂಡ್”, “ಚೈನಾ ಈಸ್ ರೆಡ್ ವಿದ್ ಪೆಸೆಂಟ್ಸ್ ಬ್ಲಡ್”, “ರೆಡ್ ಬ್ರದರ್ ಆರ್ ಯೆಲ್ಲೋ ಸ್ಲೇವ್?”, “ಕಮ್ಯುನಿಸ್ಟ್ ಪಾರ್ಟಿ ಇನ್ ಚೈನಾ – ಎ ಸ್ಟಡಿ ಇನ್ ಟ್ರೀಸನ್”. ಇವಿಷ್ಟನ್ನು ಅವರು ಬರೆದದ್ದು 1953ರಲ್ಲಿ; ತನ್ನ 32ನೇ ವಯಸ್ಸಿನಲ್ಲಿ! ಭಾರತಕ್ಕೆ ಮುಂದಿನ ನೂರು ವರ್ಷಗಳ ಕಾಲ ತಲೆನೋವಾಗಿ ಕಾಡಲಿರುವ ದೊಡ್ಡ ಸಮಸ್ಯೆ ಇದೊಂದೇ ಎಂಬುದನ್ನು ಅವರು ಆ ಪುಸ್ತಕಗಳಲ್ಲಿ ಅತ್ಯಂತ ಖಚಿತ ಧ್ವನಿಯಲ್ಲಿ ಹೇಳಿದರು. ಕಮ್ಯುನಿಸಂ ಎಂಬುದು ಮಿದುಳು, ಹೃದಯಗಳಿಲ್ಲದ ರಾಕ್ಷಸ. ಅದಕ್ಕೂ ರಿಲಿಜನ್‍ಗೂ ಯಾವ ವ್ಯತ್ಯಾಸವೂ ಇಲ್ಲ. ರಿಲಿಜನ್‍ಗಳ ಅತ್ಯಂತ ಆಳದಲ್ಲಿರುವ ಮೂಲಭೂತ ಗುರಿ ಒಂದೇ – ವಿಸ್ತರಣೆ. ಚೀನಾದಲ್ಲಿ ಕಮ್ಯುನಿಸ್ಟ್ ಸರಕಾರ ಮಾಡುತ್ತಿರುವುದೂ ಅದನ್ನೇ. ಎಷ್ಟೇ ಇದ್ದರೂ ಏನೆಲ್ಲ ಸಂಪತ್ತು ತನ್ನ ಕಾಲಬುಡದಲ್ಲಿ ಬಿದ್ದಿದ್ದರೂ ತೀರದ ಹಸಿವು ಅದಕ್ಕೆ. ಕಮ್ಯುನಿಸಂ ಗೆಳೆಯನಂತೆ ವರ್ತಿಸಬಹುದು, ಆದರೆ ಗೆಳೆಯನಲ್ಲ. ನೀವು ಯಾವ ರೀತಿಯಲ್ಲಿ ವ್ಯವಹರಿಸುತ್ತಿದ್ದೀರಿ, ಅದರ ಜೊತೆ ಎಷ್ಟು ಪ್ರೀತಿ ತೋರಿಸುತ್ತಿದ್ದೀರಿ ಎಂಬುದು ಅದಕ್ಕೆ ಮುಖ್ಯವಾಗುವುದೇ ಇಲ್ಲ. ಅದರ ಅಂತಿಮ ಗುರಿ ನಿಮ್ಮನ್ನು ಕಮ್ಯುನಿಸ್ಟ್ ಮಾಡುವುದು, ತನ್ನ ಸಿದ್ಧಾಂತವನ್ನು ಇನ್ನಷ್ಟು ಜನರಿಗೆ, ಇನ್ನಷ್ಟು ಜಾಗಕ್ಕೆ ಹರಡುವುದು ಅಷ್ಟೇ – ಎಂಬುದನ್ನು ಅತ್ಯಂತ ಖಚಿತ ಮತ್ತು ನೇರಾನೇರ ಶಬ್ದಗಳಲ್ಲಿ ಹೇಳಿದವರು ಸೀತಾರಾಮ ಗೋಯಲ್. ಅವರು ಅಷ್ಟೆಲ್ಲ ಹೇಳಿದ ಒಂಬತ್ತು ವರ್ಷಗಳ ಮೇಲೆ ಭಾರತ ಚೀನಾದ ಪದತಲದಲ್ಲಿ ತಲೆಯಿಟ್ಟು ಕಡಿಸಿಕೊಳ್ಳುವುದಕ್ಕೆ ತಯಾರಾಗಿತ್ತು. ಹಿಂದೀ ಚೀನೀ ಭಾಯಿ ಭಾಯಿ ಎಂದು ರೋಮ್ಯಾಂಟಿಕ್ ಹಾಡು ಹೇಳುತ್ತ, ಪಂಚಶೀಲದ ಪುಂಗಿ ಊದುತ್ತ, ಡ್ರ್ಯಾಗನ್ ಅನ್ನು ಅಪ್ಪಿಕೊಳ್ಳಲು ಹೋಗಿದ್ದ ನೆಹರೂ ಮೈಯೆಲ್ಲ ಕಲ್ಲೇಟು ಹೊಡೆಸಿಕೊಂಡು ದಯನೀಯವಾಗಿ ಮಲಗಿ ಬಿಟ್ಟಿದ್ದರು. ದೇಶವನ್ನೂ ಮಲಗಿಸಿ ಬಿಟ್ಟಿದ್ದರು!

ನೆಹರೂ ಮೊದಲ ಬಾರಿಗೆ ಸೋವಿಯೆಟ್ ರಷ್ಯಕ್ಕೆ ಭೇಟಿ ಕೊಟ್ಟದ್ದು 1927ರಲ್ಲಿ. ಆ ಹೊತ್ತಿಗಾಗಲೇ ಅವರೊಳಗಿನ ಕಮ್ಯುನಿಸ್ಟ್ ಜಾಗ್ರತನಾಗಿ ಬಿಟ್ಟಿದ್ದ. ಆದರೆ ಭಾರತದಲ್ಲಿ ಗಾಂಧಿಯ ಜೊತೆಗಿದ್ದಷ್ಟೂ ಕಾಲ ಆತ ಸೋಷಲಿಸ್ಟನಾಗಿ ಛದ್ಮವೇಷ ಹಾಕಿಕೊಂಡಿದ್ದ. ಮೊದಮೊದಲು ಅಪ್ಪಟ ರಾಷ್ಟ್ರೀಯತೆಯ ಚಿಂತನೆಯೊಂದಿಗೆ ಹೊರಟ ಮಹಾತ್ಮಾಗಾಂಧಿ ಕೂಡ ತನ್ನ ಬದುಕಿನ ಇಳಿಗಾಲದಲ್ಲಿ ಸೋಷಲಿಸಮ್ಮಿನ ಭಜನೆ ಮಾಡುವುದಕ್ಕೆ ಶುರು ಮಾಡಿದ್ದರು. ಅತ್ಯಂತ ಸ್ಪಷ್ಟವಾಗಿ ಹಿಂದೂ ತತ್ತ್ವಾದರ್ಶಗಳ ಪ್ರಚಾರ ಮಾಡುತ್ತಿದ್ದ ಗಾಂಧಿ ತನ್ನ ರಾಜಕೀಯ ಬದುಕಿನ ಉತ್ತರಾರ್ಧದಲ್ಲಿ ಖಿಲಾಫತ್ ಚಳವಳಿ ಮಾಡಿ ಮುಸ್ಲಿಮರನ್ನು ಓಲೈಸಲು ಹೋದರು. ಎಲ್ಲ ಧರ್ಮಗಳ ಸಾರ ಒಂದೇ ಎಂಬ ಲೋಕೋತ್ತರ ಸಂದೇಶ ನೀಡಲು ಹೋದ ಗಾಂಧಿಯವರಿಗೆ ಅಂಥ ಹೇಳಿಕೆಗಳ ಮೂಲಕ ತಾನೊಬ್ಬ ಸಂತನಾಗಿ ಗುರುತಿಸಿಕೊಳ್ಳಬೇಕೆಂಬ ಆಸೆ ಇದ್ದಿರಬೇಕು. ಬರಬರುತ್ತ ಅವರು ಹಿಂದೂ ಧರ್ಮದಿಂದ ದೂರ ಹೋಗಿ ಎಲ್ಲ ಮತಧರ್ಮಗಳಿಂದ ಸಮಾನದೂರ ಕಾಯ್ದುಕೊಳ್ಳುವ ಅಪ್ಪಟ ರಾಜಕಾರಣಿಯಾಗಿ ಬದಲಾದರು. ಸೋಷಲಿಸಮ್ಮಿಗೆ ಹತ್ತಿರವಾದರು. ಸೋಷಲಿಸಮ್ ಕಮ್ಯುನಿಸಮ್ಮಿನ ರೂಪಾಂತರ ಅಷ್ಟೇ. ನಾಸ್ತಿಕವಾದವನ್ನು ಪ್ರಚಾರ ಮಾಡುವ ಕಮ್ಯುನಿಸಮ್ಮಿನಿಂದ ಹೊರಟ ಸೋಷಲಿಸಮ್ ಅನ್ನು ಅಪ್ಪಿಕೊಂಡೂ ರಾಮ-ಅಲ್ಲಾರ ಭಜನೆ ಮಾಡುವ ಗಾಂಧಿ ಮೂಲದಲ್ಲಿ ಸೋಷಲಿಸಮ್ ಅನ್ನು ಕೂಡ ಅರ್ಥ ಮಾಡಿಕೊಂಡಿಲ್ಲ ಎಂದು ಗೋಯಲ್ ಅವರಿಗೆ ಭ್ರಮನಿರಸನವಾಯಿತು. ಒಂದು ಕಾಲದಲ್ಲಿ ಗಾಂಧೀವಾದಿಯಾಗಿ, ಅಸ್ಪಶ್ಯರಿಗಾಗಿ ಆಶ್ರಮ ನಡೆಸಿದ್ದ ಗೋಯಲ್ ಗಾಂಧಿಯನ್ನು ಕೂಡ ತನ್ನ ಚಿಕಿತ್ಸಕ ಬುದ್ಧಿಯಿಂದ ಪರೀಕ್ಷೆಗೊಳಪಡಿಸಿದರು. ಗಾಂಧಿಯನ್ನು ಅರ್ಥ ಮಾಡಿಕೊಂಡು ಹೋದಷ್ಟೂ ಅವರಿಗೆ ಗಾಂಧಿಯ ಶಿಷ್ಯ ನೆಹರೂ ಅರ್ಥವಾಗುತ್ತ ಹೋದರು!

1927ರಲ್ಲಿ ರಷ್ಯಕ್ಕೆ ಭೇಟಿ ಕೊಟ್ಟ ಸಮಯದಿಂದಲೂ ಕಮ್ಯುನಿಸಮ್‍ನತ್ತ ಗಾಢವಾಗಿ ವಾಲಿದ್ದ ನೆಹರೂ ಆ ಸಿದ್ಧಾಂತವನ್ನು ಕೂಡ ಸರಿಯಾಗಿ ಅರ್ಥೈಸಿಕೊಂಡವರಲ್ಲ ಎಂಬುದು ಗೋಯಲ್ ಅವರಿಗೆ ಸ್ವಾತಂತ್ರ್ಯಾನಂತರ ಖಚಿತವಾಗುತ್ತ ಹೋಯಿತು. ರಷ್ಯ ಮತ್ತು ಚೀನಾಗಳ ಕಮ್ಯುನಿಸ್ಟ್ ಸರಕಾರಗಳನ್ನು ಕಣ್ಮುಚ್ಚಿ ನಂಬಿದ್ದ ನೆಹರೂ ಅವರನ್ನು ಎಚ್ಚರಿಸಲು ಗೋಯಲ್ ಸರಣಿ ಲೇಖನಗಳನ್ನು ಬರೆದರೂ ಪ್ರಯೋಜನವಾಗಲಿಲ್ಲ. ಚೀನಾದ ಜೊತೆ ಯುದ್ಧ ಸೋತು ಅಕಸಾಯ್ ಚಿನ್ ಎಂಬ ಭೂಭಾಗವನ್ನು ಕಳೆದುಕೊಂಡ ಮೇಲೆ ಪ್ರಧಾನಿ ನೆಹರೂ ಸಂಸತ್ತಿನಲ್ಲಿ ಚರ್ಚೆಯ ನಡುವೆ ಹೇಳಿದರಂತೆ: “ಅದು ಒಂದು ಹುಲ್ಲುಗರಿಕೆಯೂ ಬೆಳೆಯದ ಜಾಗ. ಅದನ್ನು ಚೀನಾ ಕಸಿದುಕೊಂಡರೆ ಅಂಥ ನಷ್ಟವೇನಿಲ್ಲ!”. ಆ ಮಾತಿಗೆ ಉರಿದುಬಿದ್ದ ಮಹಾವೀರ ತ್ಯಾಗಿ ಎಂಬ ಬಿಸಿರಕ್ತದ ಸಂಸದರು “ನೋಡಿ, ನನ್ನ ತಲೆ ಕೂಡ ಬೋಳಾಗಿದೆ. ಇಲ್ಲಿ ಒಂದು ಕೂದಲೂ ಬೆಳೆಯುತ್ತಿಲ್ಲ. ಇದನ್ನು ಬೇರೆಯವರಿಗೆ ಕತ್ತರಿಸಿ ಕೊಡಬೇಕೇ?” ಎಂದು ಕೇಳಿದ್ದರಂತೆ. ಇನ್ನೊಂದು ತಮಾಷೆ ನೋಡಿ: 1962ರಲ್ಲಿ ಚೀನಾ ಜೊತೆ ಯುದ್ಧ ನಡೆಯುತ್ತಿದ್ದಾಗ ಇಡೀ ದೇಶವೇ ಒಂದಾಗಿ ಚೀನಾವನ್ನು ವಿರೋಧಿಸುತ್ತಿದ್ದಾಗ, ಭಾರತದೊಳಗಿದ್ದ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ, ಚೀನಾಕ್ಕೆ ಬೆಂಬಲ ಕೊಟ್ಟಿತು! ಯುದ್ಧ ಮುಗಿದು ಭಾರತ ತನ್ನ ಬಹಳಷ್ಟು ಭೂಭಾಗವನ್ನು ಚೀನಾಕ್ಕೆ ಬಿಟ್ಟು ಕೊಟ್ಟು ಸೋತು ತಲೆ ಕೆಳ ಹಾಕಿದಾಗ ಇಡೀ ದೇಶವೇ ನೆಹರೂ ಅವರ ರಾಜೀನಾಮೆ ಕೇಳಿತು. “ನಿಮಗೆ ಈ ದೇಶ ಆಳುವ ಯೋಗ್ಯತೆ ಇಲ್ಲ. ದಯವಿಟ್ಟು ಗೌರವಪೂರ್ವಕ ರಾಜೀನಾಮೆ ಕೊಟ್ಟು ಹೊರ ನಡೆಯಿರಿ” ಎಂದು ಪತ್ರಿಕೆಗಳು ಕೂಡ ಬರೆದವು. ಆಗ ನೆಹರೂ ಜತೆ ನಿಂತದ್ದು ಕಾಂಗ್ರೆಸ್ ಭಟ್ಟಂಗಿಗಳ ಹೊರತಾಗಿ ಒಂದೇ ಒಂದು ಪಕ್ಷ. ಅದು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ! “ಈ ವಿಷಮ ಕಾಲದಲ್ಲಿ ನಾವೆಲ್ಲ ನೆಹರೂ ಅವರಿಗೆ ಬೆಂಬಲ ಸೂಚಿಸಬೇಕಾಗಿದೆ. ಈ ಕ್ಷಣದಲ್ಲಿ ಅವರು ರಾಜೀನಾಮೆ ಇತ್ತು ಹೊರ ನಡೆದರೆ ಅವರ ಸ್ಥಾನ ಆಕ್ರಮಿಸಲು ಅವಕಾಶವಾದಿಗಳು ಕಾಯುತ್ತಿದ್ದಾರೆ. ಯಾವ ಕಾರಣಕ್ಕೂ ಹಾಗಾಗಲು ಬಿಡಬಾರದು” ಎಂದು ಹೇಳಿಕೆ ಬಿಡುಗಡೆ ಮಾಡಿತು ಕಮ್ಯುನಿಸ್ಟ್ ಪಕ್ಷ. ಅದು ಹೇಳಿದ “ಅವಕಾಶವಾದಿ” ಯಾರೆಂದರೆ ಮೊರಾರ್ಜಿ ದೇಸಾಯಿ. ದೇಸಾಯಿಯವರು ಹಿಂದುತ್ವವಾದಿಗಳಾಗಿದ್ದವರು. ಅವರ ಕೈಗೆ ದೇಶದ ಚುಕ್ಕಾಣಿ ಹೋದದ್ದೇ ಆದರೆ ತಾವೆಲ್ಲ ಬಿಡ್ಕುಬಿಡಾರ ಕಟ್ಟಿಕೊಂಡು ಚೀನಾಕ್ಕೋ ರಷ್ಯಾಕ್ಕೋ ಹೋಗಬೇಕೆಂಬುದು ಭಾರತದ ಕಮ್ಯುನಿಸ್ಟರಿಗೆ ಸ್ಪಷ್ಟವಿತ್ತು.

ಆಂತರ್ಯದಲ್ಲಿ ಕಮ್ಯುನಿಸ್ಟ್ ಆಗಿದ್ದ ನೆಹರೂ ಎಂದೆಂದೂ ಅದನ್ನು ಮುಕ್ತವಾಗಿ ಹೇಳಿಕೊಳ್ಳಲಿಲ್ಲ. ಆದರೆ ತನ್ನ ಸುತ್ತಮುತ್ತ ಕಮ್ಯುನಿಸ್ಟ್ ಮನಸ್ಥಿತಿಯವರನ್ನಷ್ಟೇ ಇಟ್ಟರು, ಪೋಷಿಸಿದರು. ಪಕ್ಕಾ ಕಮ್ಯುನಿಸ್ಟ್ ಆಗಿದ್ದ ಕೃಷ್ಣ ಮೆನನ್ ನೆಹರೂ ಬಲಗೈ ಬಂಟರಾಗಿದ್ದರು. ನೆಹರೂ ಹತ್ತಾರು ಶಿಕ್ಷಣ ಸಂಸ್ಥೆಗಳಲ್ಲಿ ಕಮ್ಯುನಿಸ್ಟರನ್ನು ಪ್ರತಿಷ್ಠಾಪಿಸಿ ಅವರಿಗೆ ಬೇಕುಬೇಕಾದ ಸೌಲಭ್ಯ ಕೊಟ್ಟು ಬೆಳೆಸಿದರು. ಚೀನಾದಿಂದ ಆಗಬಹುದಾದ ಅಪಾಯಗಳ ಬಗ್ಗೆ ಮುಂಚಿತವಾಗಿ ಸೂಚನೆ ಕೊಟ್ಟಿದ್ದ ಜನರಲ್ ತಿಮ್ಮಯ್ಯನವರನ್ನು ಕೂಡ ನೆಹರೂ ಗಂಭೀರವಾಗಿ ಪರಿಗಣಿಸಲಿಲ್ಲ. ತಿಮ್ಮಯ್ಯನವರು ನಿವೃತ್ತಿಯಾದಾಗ, ಅವರು ಸೂಚಿಸಿದ ತೋರಾಟ್ ಅವರ ಬದಲಿಗೆ ಪ್ರಾಣನಾಥ ಥಾಪರ್ ಅನ್ನು ತಂದು ಆರ್ಮಿಯ ಮುಖ್ಯಸ್ಥನಾಗಿ ಕೂರಿಸಿದರು. ನೆಹರೂ ಸಂಬಂಧಿ ಮತ್ತು ಕಮ್ಯುನಿಸ್ಟ್ ಒಲವುಳ್ಳ ವ್ಯಕ್ತಿ ಎಂಬುದೇ ಥಾಪರ್ ಆಯ್ಕೆಯ ಮಾನದಂಡಗಳಾಗಿದ್ದವು. ಇದೇ ಥಾಪರ್‍ನ ಸೊಸೆ ರೋಮಿಲಾ ಥಾಪರ್, ಭಾರತದ ಇತಿಹಾಸವನ್ನೇ ತಲೆ ಕೆಳಗು ಕಾಲು ಮೇಲೆ ಮಾಡಿ ಪಠ್ಯದ ಹೆಸರಲ್ಲಿ ದೇಶದ ಕೋಟ್ಯಂತರ ಮಕ್ಕಳಿಗೆ ಬಲವಂತವಾಗಿ ಓದಿಸಿ ಒಂದು ಕುರಿಗಳ ಪರಂಪರೆಯನ್ನೇ ಬೆಳೆಸಿದಳು. ಸಂಸ್ಕತದ ಗಂಧಗಾಳಿ ಇಲ್ಲದಿದ್ದ ಈಕೆ ಸಂಸ್ಕತ ಸಾಹಿತ್ಯದ ಬಗ್ಗೆ, ವೇದ ಉಪನಿಷತ್ತುಗಳ ಬಗ್ಗೆ, ಆರ್ಯ ದಸ್ಯು ದ್ರಾವಿಡರ ಬಗ್ಗೆ ಪುಂಖಾನುಪುಂಖವಾಗಿ ಬರೆದದ್ದೇ ಬರೆದದ್ದು! ಆರ್ಯರ ಆಗಮನದ ಸುಳ್ಳುಬೊಂತೆಯನ್ನು ಈಕೆ ಈ ದೇಶದಲ್ಲಿ ಹರಡಿ ಅರವತ್ತು ವರ್ಷ ಕಳೆವಷ್ಟರಲ್ಲಿ ಅದನ್ನು ವೈಜ್ಞಾನಿಕವಾಗಿ ತಪ್ಪೆಂದು ಸಾಬೀತುಪಡಿಸಿದರೆ ಈಕೆ ಆ ವಿಜ್ಞಾನವೇ ಬೊಗಳೆ ಎಂದು ಬಿಟ್ಟಳು! ರೋಮಿಲಾ ಮತ್ತು ಆಕೆಯ ಜೊತೆಗೂಡಿ ಹುಲುಸಾಗಿ ಬೆಳೆದ ಕಮ್ಯುನಿಸ್ಟ್ ಚಿಂತಕರ ಪಡೆಯ ಗದ್ದಲ ಅದೆಷ್ಟು ದೊಡ್ಡದಿತ್ತೆಂದರೆ ಆರ್ಯರ ಆಗಮನ ಮತ್ತು ಆಕ್ರಮಣ – ಎರಡು ಸಿದ್ಧಾಂತಗಳೂ ತಪ್ಪು ಎಂದು ಪುಸ್ತಕ ಬರೆದು ತೋರಿಸಿದ ಗೋಯಲ್‍ರ ಕೂಗು ಅರಣ್ಯರೋದನವಾಯಿತು. ಗೋಯಲ್ ಅವರ ಪುಸ್ತಕಗಳಿಗೆ ಪ್ರಕಾಶಕರು ಸಿಗಲಿಲ್ಲ. ಅವರ ಪುಸ್ತಕಗಳನ್ನು ಕೇಂದ್ರ ಗ್ರಂಥಾಲಯ ಖರೀದಿಸಲಿಲ್ಲ. ಪತ್ರಿಕೆಗಳು ಪ್ರಕಟವಾದ ಪುಸ್ತಕಗಳ ಪಟ್ಟಿಯಲ್ಲಿ ಕೂಡ ಗೋಯಲ್‍ರ ಪುಸ್ತಕವನ್ನು ನಮೂದಿಸಲಿಲ್ಲ. ಪ್ರಕಟಿಸಿದ ತಪ್ಪಿಗೆ ತನ್ನ ಪುಸ್ತಕಗಳನ್ನು ಗಳಗನಾಥರಂತೆ ಮನೆಮನೆಗೆ ಒಯ್ದು ಮಾರಬೇಕಾದಂಥ ಪರಿಸ್ಥಿತಿ ಗೋಯಲ್‍ರ ಎದುರಿತ್ತು.

ನೆಹರೂ ಈ ದೇಶಕ್ಕೆ ಮಾಡಿದ ಇನ್ನೊಂದು ಮಹದುಪಕಾರ ಏನೆಂದರೆ ಸೆಕ್ಯುಲರಿಸಂ ಎಂಬ ಶಬ್ದಕ್ಕೆ ಹೊಸ ವ್ಯಾಖ್ಯೆ ಕೊಟ್ಟಿದ್ದು. ಯುರೋಪಿನಲ್ಲಿ ಕಮ್ಯುನಲ್ ಶಕ್ತಿಗಳಿಗೆ ವಿರುದ್ಧವಾಗಿ ಬೆಳೆದುಬಂದ ಚಿಂತಕರ ಪರಂಪರೆಯೇ ಸೆಕ್ಯುಲರಿಸಮ್. ಆದರೆ ಅಲ್ಲಿ ಕಮ್ಯುನಲ್ ಎಂದರೆ ಕ್ರಿಶ್ಚಿಯಾನಿಟಿ ಎಂದು ಅರ್ಥ. ಒಬ್ಬನೇ ದೇವರು, ಒಬ್ಬನೇ ಪ್ರವಾದಿ, ಒಂದೇ ಮತಗ್ರಂಥ, ಒಂದೇ ಧರ್ಮಸಂಸ್ಥಾನ, ಅವನ್ನೆಲ್ಲ ಒಪ್ಪಿಕೊಂಡ ಏಕ ಸಮುದಾಯ – ಇದು ಕಮ್ಯುನಲ್ ಎಂಬ ಪದದ ಅರ್ಥವ್ಯಾಪ್ತಿ. ಯುರೋಪ್, ಅರಬ್ ದೇಶಗಳಲ್ಲಿ ಹುಟ್ಟಿ ಹಬ್ಬಿದ ಕ್ರಿಶ್ಚಿಯಾನಿಟಿ, ಜುದಾಯಿಸಂ, ಇಸ್ಲಾಂ – ಇವೆಲ್ಲ ಕಮ್ಯುನಲ್‍ಗಳು. ನಮಗೆ ಈ ರಿಲಿಜನ್‍ಗಳ ಕಟ್ಟುಪಾಡು ಬೇಡ. ಒಬ್ಬ ದೇವರನ್ನೇ ಪೂಜಿಸಬೇಕು; ಆತನೊಬ್ಬನೇ ಈ ಜಗತ್ತಿನ ಸರ್ವಶಕ್ತ ಎಂದು ನಂಬೇಕು ಎಂದೆಲ್ಲ ಕಟ್ಟುಪಾಡು ಹಾಕುವ ವ್ಯವಸ್ಥೆಯನ್ನು ನಾವು ಒಪ್ಪುವುದಿಲ್ಲ. ಮತಗ್ರಂಥಗಳಲ್ಲಿ ನಮಗೆ ನಂಬಿಕೆ ಇಲ್ಲ ಎಂದು ಹೇಳುವವರು ಸೆಕ್ಯುಲರ್‍ಗಳು. ಈ ವ್ಯಾಖ್ಯೆ ಭಾರತಕ್ಕೆ ಬರುವಷ್ಟರಲ್ಲಿ ಅದರ ಅರ್ಥವ್ಯಾಪ್ತಿಯೇ ಬದಲಾಗಿ ಹೋಯಿತು. ಕ್ರಿಶ್ಚಿಯನ್ನರು, ಮುಸ್ಲಿಮರು, ಯಹೂದಿಗಳು ಸೆಕ್ಯುಲರ್ ಆದರು. ಅವರನ್ನು ವಿರೋಧಿಸುವವರು ಕಮ್ಯುನಲ್ ಆದರು! ನೆಹರೂ ಸೃಷ್ಟಿಸಿದ ಮತ್ತು ಅವರ ಭಟ್ಟಂಗಿಗಳು ಸಾವಿರಾರು ಸಲ ಹೇಳೀ ಹೇಳೀ ಬರೆದೂ ಬರೆದೂ ಹರಡಿದ ಈ ಮಿಥ್ಯೆಯನ್ನು ಈ ದೇಶದ ಕುರಿಮಂದೆ ನಂಬಿ ಬಿಟ್ಟಿತು! ನಿಮಗೆ ಆಶ್ಚರ್ಯವಾಗಬಹುದು – ಬಾಬ್ರಿ ಮಸೀದಿಯ ಪರವಾಗಿ ವಾದ ಮಾಡಿದ, ಶಾ ಬಾನೋ ಪ್ರಕರಣದಲ್ಲಿ ತ್ರಿವಳಿ ತಲ್ಲಾಖ್‍ನ ಪರವಾಗಿ ತೀರ್ಪು ಬರುವಂತೆ ಮಾಡಿದ, ಸಲ್ಮಾನ್ ರಷ್ದಿಯ “ಸೆಟಾನಿಕ್ ವರ್ಸಸ್” ಪುಸ್ತಕ ಭಾರತದಲ್ಲಿ ನಿಷೇಧಕ್ಕೊಳಗಾಗುವಂತೆ ಮಾಡಿದ ಸೈಯದ್ ಶಹಾಬುದ್ದೀನ್ ಎಂಬ ಮತೀಯವಾದಿ ಈ ದೇಶದಲ್ಲಿ ಸೆಕ್ಯುಲರ್! ಆತನ “ಮುಸ್ಲಿಂ ಇಂಡಿಯಾ” ಪತ್ರಿಕೆಯ ಪುಟಪುಟವೂ ಸೆಕ್ಯುಲರಿಸಮ್ಮಿನ ಭಜನೆ ಮಾಡುತ್ತದೆ. ಈ ದೇಶದಲ್ಲಿ ಮುಸ್ಲಿಮರು ಭಯದಲ್ಲಿ ಬದುಕುತ್ತಿದ್ದಾರೆ, ಅವರು ಸಂಘಟಿತರಾಗಬೇಕು, ಕಾಫಿರರನ್ನು ಮಟ್ಟ ಹಾಕಬೇಕು ಎಂದು ತನ್ನ ಪ್ರತಿ ಸಂಚಿಕೆಯಲ್ಲೂ ಕಂತೆ ಕಂತೆ ಉಪದೇಶ ಮಾಡುವ “ರೇಡಿಯನ್ಸ್” ಪತ್ರಿಕೆ ಮತ್ತು ಅದನ್ನು ಹೊರತರುವ ಜಮಾತೆ-ಇ-ಇಸ್ಲಾಮಿ ಸಂಘಟನೆ ಸೆಕ್ಯುಲರ್! ಈ ಸಂಘಟನೆಯ ಪ್ರಕಟಣೆಗಳಲ್ಲಿ ಸಂಪಾದಕರಾಗಿ ದುಡಿದ ಐ.ಕೆ. ಗುಜ್ರಾಲ್, ಖುಷ್‍ವಂತ್ ಸಿಂಗ್, ಪಿ.ಎನ್. ಹಕ್ಸರ್ ಎಲ್ಲರೂ ಸೆಕ್ಯುಲರ್! ಮುಸ್ಲಿಮರಿಗೆ ಪ್ರತ್ಯೇಕ ದೇಶ ಬೇಕು ಎಂದು ಕರೆ ಕೊಟ್ಟ, ಅದಕ್ಕಾಗಿ ಬಂಗಾಳದಲ್ಲಿ ಹತ್ಯಾಕಾಂಡ ಮಾಡಿ 4,000 ಜನ ಅಮಾಯಕ ಹಿಂದೂಗಳನ್ನು 72 ಗಂಟೆಯಲ್ಲಿ ಮುಗಿಸಿದ, ಶತಾಯಗತಾಯ ಹೋರಾಡಿ ಪಾಕಿಸ್ತಾನವೆಂಬ ಮತೀಯ ರಾಷ್ಟ್ರವನ್ನು ಕೊನೆಗೂ ಸ್ಥಾಪಿಸಿಕೊಂಡ ಮುಸ್ಲಿಮ್ ಲೀಗ್‍ನ ಮರಿ ಸಂಘಟನೆ ಆಲ್ ಇಂಡಿಯಾ ಮುಸ್ಲಿಮ್ ಲೀಗ್, ಈ ದೇಶದಲ್ಲಿ ಸೆಕ್ಯುಲರ್! ಈ ಸಂಘಟನೆಯೊಂದಿಗೆ ಕಾಂಗ್ರೆಸ್ ಮತ್ತು ಕಮ್ಯುನಿಸ್ಟ್ ಪಾರ್ಟಿ ಎರಡೂ, ಕೇರಳದಲ್ಲಿ ಹಾಸಿಗೆ ಹಂಚಿಕೊಂಡವು. ಹಾಗಾಗಿ, ಈ ಎರಡು ಪಕ್ಷಗಳು ಕೂಡ ನಮ್ಮ ದೇಶದಲ್ಲಿ ಸೆಕ್ಯುಲರ್! ಸೆಕ್ಯುಲರ್ ಯಾರು ಅಲ್ಲ ಎಂದರೆ, ಹಿಂದೂಗಳು ಕೂಡ ಮನುಷ್ಯರೇ ಎನ್ನುವವರು! ಯುರೋಪ್‍ನಲ್ಲಾದಂತೆ ಕ್ರಿಶ್ಚಿಯಾನಿಟಿ, ಇಸ್ಲಾಂ ಮುಂತಾದ ಮೂಲಭೂತವಾದಿ ಮತಗಳನ್ನು ಅತ್ಯಂತ ಲಾಜಿಕಲ್ ಆಗಿ ಪ್ರಶ್ನೆ ಮಾಡಿದ ಮತ್ತು ವಿರೋಧಿಸಿದ ವ್ಯಕ್ತಿ ಸೀತಾರಾಮ ಗೋಯಲ್ ಈ ದೇಶದಲ್ಲಿ ಕಮ್ಯುನಲ್ ಆದರು. ಆರೆಸ್ಸೆಸ್ ಮ್ಯಾನ್ ಆದರು. ಪುರೋಹಿತಶಾಹಿ, ಮನುವಾದಿ, ಜೀವವಿರೋಧಿ, ಚೆಡ್ಡಿ, ಎಟ್‍ಸೆಟ್ರಾ ಎಟ್‍ಸೆಟ್ರಾ ಆದರು.

ಇಂತಿದ್ದ ಗೋಯಲ್ ಜೀ ಬಲಪಂಥೀಯ ಅಥವಾ ಹಿಂದೂತ್ವವಾದಿ ಸಂಘಟನೆ ಎಂದೇ ಜಗತ್ತಿನಾದ್ಯಂತ ಹೆಸರಾದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪೋಸ್ಟರ್ ಬಾಯ್ ಆಗಬೇಕಾಗಿತ್ತು. ಆದರೆ ಅದು ಕೂಡ ಆಗಲಿಲ್ಲ ಎನ್ನುವುದೇ ವಿಶೇಷ! ಮೊದಮೊದಲಿಗೆ ಗೋಯಲ್ ಅವರು ಸಂಘ ಪರಿವಾರದ ಪತ್ರಿಕೆ ಆರ್ಗನೈಸರ್‍ನಲ್ಲಿ ಲೇಖನಗಳನ್ನು ಬರೆಯುತ್ತಿದ್ದರು. ನೆಹರೂ ಅವರ ಚೀನಾ ಪ್ರೀತಿ, ರಷ್ಯಾ ಮೋಹ, ಅವರ ತಪ್ಪು ಆರ್ಥಿಕ ನೀತಿಗಳು, ಕೈಗೊಂಡ ತಪ್ಪು ನಿರ್ಧಾರಗಳು, ಪಾಕಿಸ್ತಾನದ ಜೊತೆಗಿನ ಅವರ ರಾಜತಾಂತ್ರಿಕ ವೈಫಲ್ಯ, ಚೀನಾದ ಮುನ್ನುಗ್ಗುವ ಛಲವನ್ನು ಅರ್ಥೈಸಿಕೊಳ್ಳುವಲ್ಲಿ ನೆಹರೂ ತೋರಿಸಿದ ಅಸಡ್ಡೆ ಮತ್ತು ಅದರಿಂದಾಗಿ ದೇಶ ಅನುಭವಿಸಬೇಕಾದ ಸಂಕಟ – ಈ ಎಲ್ಲ ವಿಷಯಗಳ ಸುತ್ತ ಗೋಯಲ್ ಆರ್ಗನೈಸರ್ ಪತ್ರಿಕೆಯಲ್ಲಿ ಸರಣಿ ಲೇಖನಗಳನ್ನು ಬರೆದರು. ಅವರ ಲೇಖನಗಳು ಸಂಚಿಕೆಯಿಂದ ಸಂಚಿಕೆಗೆ ಜನಪ್ರಿಯವಾಗುತ್ತ ನಡೆದವು. ಆದರೆ, ಆ ಲೇಖನಗಳಿಂದ ದೊಡ್ಡ ಚಿಂತೆಗೆ ಬಿದ್ದವರು ಯಾರೆಂದರೆ ಅಟಲ್ ಬಿಹಾರಿ ವಾಜಪೇಯಿ ಮತ್ತು ಆರೆಸ್ಸೆಸ್‍ನ ಸೆಕ್ರೆಟರಿ ಜನರಲ್ ಆಗಿದ್ದ ಏಕನಾಥ ರಾನಡೆಯವರು. ಗೋಯಲ್‍ರ ಲೇಖನಗಳನ್ನು ಓದಿ ಉತ್ತೇಜಿತರಾಗಿ ಯಾರಾದರೂ ನೆಹರೂರನ್ನೂ ಕೊಲೆ ಮಾಡಿ ಬಿಟ್ಟರೆ ಗಾಂಧಿಹತ್ಯೆಯ ಕಲೆ ತಮಗೆ ಮೆತ್ತಿಕೊಂಡಂತೆ ಮತ್ತೊಂದು ರಗಳೆಯೂ ತಲೆಗೆ ಸುತ್ತಿಕೊಳ್ಳುತ್ತದೆ ಎಂದು ಬಗೆದ ಇಬ್ಬರೂ ಗೋಯಲ್‍ರ ಲೇಖನಗಳನ್ನು ಆರ್ಗನೈಸರ್ ಪತ್ರಿಕೆಯಲ್ಲಿ ನಿಲ್ಲಿಸಿ ಬಿಟ್ಟರು. ಅಲ್ಲಿಗೆ ಅವರಿಗೆ ತನ್ನ ವಿಚಾರಗಳನ್ನು ಹಂಚಿಕೊಳ್ಳಲು ಇದ್ದ ಏಕೈಕ ವೇದಿಕೆ ಕೂಡ ಮುಚ್ಚಿ ಹೋದಂತಾಯಿತು.

ಸರಿಸುಮಾರು ಅದೇ ಸಮಯದಲ್ಲಿ ಏಕನಾಥ ರಾನಡೆಯವರು ಗೋಯಲ್‍ರಲ್ಲಿ ಮಾತಾಡುತ್ತ ಆರೆಸ್ಸೆಸ್‍ನ ಯುವಕರಿಗೆ ಒಂದಷ್ಟು ಚಿಂತನಶೀಲ ವಿಚಾರಗಳನ್ನು ಓದಿಸಬೇಕು; ಆ ಯುವಕರಿಗೆ ಕೊಡಬಹುದಾದಂಥ ವಿಚಾರಗಳನ್ನು ಹಿಂದಿಯಲ್ಲಿ ಬರೆದುಕೊಡಲು ಸಾಧ್ಯವೇ ಎಂದೂ ಕೇಳಿದ್ದುಂಟು. ಗೋಯಲ್ ಒಪ್ಪಿದ್ದರು ಕೂಡ. ಶಿವಾಜಿಯ ಮೇಲೆ ಆರೆಸ್ಸೆಸ್‍ನಲ್ಲಿ ಮೊದಲ ಬಾರಿಗೆ ಒಂದು ಎಚ್ಚರವನ್ನು ಮೂಡಿಸಿದವರು, ಶಿವಾಜಿಯ ಹೆಸರನ್ನು ದೇಶಭಕ್ತಿ, ರಾಷ್ಟ್ರೀಯತೆಯ ವಿಚಾರಗಳಿಗೆ ಜೋಡಿಸಿದವರು ಗೋಯಲ್. ಯಾಕೆಂದರೆ ಆ ಸಮಯದಲ್ಲೇ ಅವರು ಶಿವಾಜಿಯ ಕುರಿತ ಕೃತಿಯನ್ನು ಹಿಂದಿಯಲ್ಲಿ ಬರೆದದ್ದು. ಮಾತ್ರವಲ್ಲ, ಭಾರತದ ಆಗಿನ ಹಲವು ಸಮಸ್ಯೆಗಳ ಬಗ್ಗೆ, ರಿಲಿಜನ್‍ಗಳಿಂದ ಎದುರಾಗುವ ತೊಂದರೆಗಳ ಬಗ್ಗೆ, ಕಮ್ಯುನಿಸಮ್ ಅನ್ನು ಅರ್ಥೈಸಿಕೊಳ್ಳುವ ಬಗ್ಗೆ ಗೋಯಲ್ ಸರಣಿಯಂತೆ ಪುಸ್ತಕಗಳನ್ನು ಬರೆದು ಪ್ರಕಟಪಡಿಸತೊಡಗಿದರು. ಅವುಗಳ ಮಾರಾಟಕ್ಕೆ ಸಂಘದೊಳಗೆ ಒಂದು ವ್ಯವಸ್ಥಿತ ಯೋಜನೆ ರೂಪಿಸಿಕೊಳ್ಳಬೇಕು ಎಂದು ಮಾತಾಡಿಕೊಳ್ಳಲಾಗಿತ್ತು. ಅದರಂತೆ ಪುಸ್ತಕಗಳ ಮುದ್ರಣ, ಮಾರಾಟ ಎಲ್ಲವೂ ಸುಸೂತ್ರವಾಗಿ ನಡೆಯುತ್ತಿದ್ದಾಗಲೇ ಒಂದು ದಿನ ರಾನಡೆಯವರಿಂದ ಒಂದು ಮಾತು ತೇಲಿಬಂತು. “ಆರೆಸ್ಸೆಸ್ ಅನ್ನು ನಿಮ್ಮ ಪುಸ್ತಕ ಮಾರಾಟಕ್ಕೆಂದು ಸ್ಥಾಪಿಸಲಾಗಿದೆಯೆಂದು ಭಾವಿಸಿದ್ದೀರೇನು?” ಎಂದು ಕೇಳಿಬಿಟ್ಟರು ರಾನಡೆ! ಹಲವು ದಿನ-ವಾರಗಳ ಸಮಾಲೋಚನೆಯ ನಂತರ ಪ್ರಾರಂಭವಾಗಿದ್ದ ಯೋಜನೆ ಹೀಗೆ ಇದ್ದಕ್ಕಿದ್ದಂತೆ ನಿಂತು ಹೋಯಿತು. ತಾನಾಗಿ ತೆರೆದು ಬಂದಿದ್ದ ಅವಕಾಶ ಈಗ ತಾನಾಗಿ ಮುಚ್ಚಿ ಹೋದಾಗ ಗೋಯಲ್ ಎದೆಗುಂದಲಿಲ್ಲ. ತನ್ನ ಗೆಳೆಯರೊಬ್ಬರ ನೆರವಿನಿಂದ ಭಾರತಿ ಸಾಹಿತ್ಯ ಸದನ ಎಂಬ ಪ್ರಕಾಶನ ಸಂಸ್ಥೆಯನ್ನು ಸ್ಥಾಪಿಸಿ ಅದರ ಮೂಲಕ ತನ್ನ ಪುಸ್ತಕಗಳನ್ನು ಪ್ರಕಟಿಸಿ ಮಾರತೊಡಗಿದರು. ಸಂಘ ಪರಿವಾರದ ಕಟ್ಟುಪಾಡುಗಳಿಗೆ ತನ್ನನ್ನು ಬಗ್ಗಿಸಿಕೊಳ್ಳಬಲ್ಲ ಸ್ನಿಗ್ಧತೆ ಗೋಯಲ್ ಅವರಿಗಿರಲಿಲ್ಲ ಎಂದು ಖಚಿತವಾಗಿ ಹೇಳಬಹುದು. ಮುಂದೊಮ್ಮೆ ವಿಶ್ವ ಹಿಂದೂ ಪರಿಷತ್ ಸ್ಥಾಪನೆಯಾದಾಗ, ಅದರ ನೇತೃತ್ವ ವಹಿಸಿಕೊಳ್ಳುತ್ತೀರಾ ಎಂಬ ಆಮಂತ್ರಣ ಗೋಯಲ್ ಅವರಿಗೆ ಬಂತು. ಹಿಂದಿನ ಅನುಭವಗಳಿಂದ ಪಾಠ ಕಲಿತಿದ್ದ ಅವರು “ನಾನು ಸ್ವತಂತ್ರವಾಗಿ ವ್ಯವಹರಿಸಬಹುದಾದರೆ, ನನ್ನ ಯೋಚನೆಗಳನ್ನು ನಿರ್ಭೀತಿಯಿಂದ ಹೇಳುವ ಸ್ವಾತಂತ್ರ್ಯ ಇದೆಯಾದರೆ ಜವಾಬ್ದಾರಿ ವಹಿಸಿಕೊಳ್ಳುತ್ತೇನೆ. ಆದರೆ ಅಧಿಕಾರದಲ್ಲಿ ಕೂತಿದ್ದು ಕೇವಲ ಸಂಘ ಪರಿವಾರದ ಮುಖವಾಣಿಯಾಗಿ ಮಾತ್ರ ಮಾತಾಡಬೇಕು ಎಂದರೆ ಅದು ನನಗೆ ಹೇಳಿಸಿದ ಹುದ್ದೆಯಲ್ಲ” ಎಂದರು. ಅವರು ಊಹಿಸಿದ್ದಂತೆಯೇ ಆಮಂತ್ರಣ ಹಿಂದೆ ಹೋಯಿತು!

ಗೋಯಲ್ ಕ್ರಿಶ್ಚಿಯಾನಿಟಿ ಮತ್ತು ಇಸ್ಲಾಂ ರಿಲಿಜನ್‍ಗಳ ಕುರಿತು ಅತ್ಯಂತ ಸೂಕ್ಷ್ಮವಾದ ಒಳನೋಟಗಳನ್ನು ಕೊಟ್ಟರು. ಆದರೆ ಆರೆಸ್ಸೆಸ್ ಆಗಲೀ ಅದರ ಇತರ ಅಂಗಸಂಸ್ಥೆಗಳಾಗಲೀ ಆ ಒಳನೋಟಗಳನ್ನು ಪಡೆಯಲಿಲ್ಲ, ಸೂಕ್ತ ರೀತಿಯಲ್ಲಿ ಬಳಸಲೂ ಇಲ್ಲ ಎನ್ನುತ್ತಾರೆ ಗೋಯಲರ ಶಿಷ್ಯ ಕಾನ್ರಾಡ್ ಎಲ್ಸ್ಟ್. ಉದಾಹರಣೆಗೆ, ಸಂಘದ ಅತ್ಯುನ್ನತ ಹುದ್ದೆಯಲ್ಲಿದ್ದ ವ್ಯಕ್ತಿಯೊಬ್ಬರು “ಇಸ್ಲಾಂ ಒಂದು ಶ್ರೇಷ್ಠ ಧರ್ಮ. ಅದರ ಪ್ರವಾದಿ ಮಹಾನ್ ಪುರುಷ. ಆದರೆ ಮುಸ್ಲಿಮರು ಮಾತ್ರ ಮೂರ್ಖರು” ಎಂಬ ಹೇಳಿಕೆ ಕೊಟ್ಟರಂತೆ. ಆದರೆ ಗೋಯಲ್‍ರ ಅಭಿಪ್ರಾಯ ಅದಕ್ಕೆ ತದ್ವಿರುದ್ಧವಾಗಿತ್ತು. ಇಸ್ಲಾಂನೊಳಗಿನ ಮತಗ್ರಂಥದ ಬೋಧನೆಯನ್ನು ಓದಿಕೊಂಡ ಯಾರೇ ಆಗಲಿ ಅದೊಂದು ಶ್ರೇಷ್ಠ ಧರ್ಮ ಎಂದು ಒಪ್ಪಲು ಸಾಧ್ಯವೇ ಇಲ್ಲ. ಮುಸ್ಲಿಮರು ಅಮಾಯಕರು; ತಮ್ಮ ಮತಗ್ರಂಥ ಹೇಳಿದಂತೆ ನಡೆದುಕೊಂಡು ಹೋಗುತ್ತಿದ್ದಾರಷ್ಟೇ – ಎಂಬುದು ಗೋಯಲ್ ಅಭಿಪ್ರಾಯವಾಗಿತ್ತು. ಹಾಗೆಯೇ, ಬಾಬರಿ ಮಸೀದಿ – ರಾಮ ಜನ್ಮಭೂಮಿ ವಿವಾದ ಅತ್ಯಂತ ಸರಳವಾಗಿ ಪರಿಹಾರವಾಗುವಂಥಾದ್ದು. ಯಾವುದೇ ವಿವಾದಿತ ಜಾಗದಲ್ಲಿ ಮಸೀದಿ ಕಟ್ಟಬಾರದು ಎಂದು ಕುರಾನೇ ಹೇಳುತ್ತದೆ. ಹಾಗಾಗಿ ಬಾಬರಿ ಮಸೀದಿಯನ್ನು ಬೇರೆಲ್ಲಾದರೂ ಕಟ್ಟಿಕೊಳ್ಳಿ; ಆ ಜಾಗವನ್ನು ರಾಮನ ಮಂದಿರಕ್ಕೆ ಬಿಟ್ಟುಕೊಡಿ – ಎಂಬುದು ಸಂಘ ಪರಿವಾರದ ಪ್ರಮುಖರ ವಾದವಾಗಿತ್ತು. ಆದರೆ, ಗೋಯಲ್ ಅವರು, “ಪರಿವಾರದವರ ವಾದ ತಪ್ಪು. ಮುಸ್ಲಿಮರೊಳಗೇ ಎರಡು ಗುಂಪುಗಳಲ್ಲಿ ಜಾಗದ ಕುರಿತು ವಿವಾದ ಇದ್ದರೆ ಅವರು ಅದನ್ನು ಸೌಹಾರ್ದಯುತವಾಗಿ ಪರಿಹರಿಸಿಕೊಂಡು ಮಸೀದಿಯನ್ನು ಬೇರೆಡೆ ಕಟ್ಟಿಕೊಳ್ಳಬಹುದು ಎಂದು ಕುರಾನ್ ಹೇಳುತ್ತದೆ. ಆದರೆ ಬೇರೊಂದು ಮತ/ಧರ್ಮದವನ ಶ್ರದ್ಧಾಕೇಂದ್ರವನ್ನು ಒಡೆದು ಕಟ್ಟಿದ ಮಸೀದಿಯನ್ನು ಸ್ಥಳಾಂತರಿಸಬೇಕು ಎಂದು ಕುರಾನ್ ಹೇಳುವುದಿಲ್ಲ” – ಎಂಬುದನ್ನು ದಾಖಲೆ ಸಮೇತ ತೋರಿಸಿಕೊಟ್ಟರು. “ನೀವು ನಿಮಗೆ ಬೇಕಾದಂತೆ ಅವರು ಬಗ್ಗುತ್ತಾರೆ ಎಂದು ತಿಳಿಯಬೇಡಿ. ಅವರ ಅಂತಿಮ ಸಮ್ಮತಿ ಏನಿದ್ದರೂ ಅವರ ಮತಗ್ರಂಥದಲ್ಲಿ ಹೇಳಿರುವ ವಿಚಾರಕ್ಕೆ ಮಾತ್ರ. ಹಾಗಾಗಿ ಅವರ ನಡೆಯನ್ನು ಅರ್ಥ ಮಾಡಿಕೊಳ್ಳಬೇಕಾದರೆ ಅವರ ಮತಗ್ರಂಥಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು” ಎಂಬುದು ಗೋಯಲ್ ಅವರ ವಾದವಾಗಿತ್ತು.

ಸೀತಾರಾಮ ಗೋಯಲ್ ಅವರು ಮಾಡಿದ ಎಲ್ಲ ಕೆಲಸಗಳೂ ಒಂದಕ್ಕಿಂತ ಒಂದು ಶ್ರೇಷ್ಠ ಎಂಬಂತೆ ನಿಲ್ಲುತ್ತವಾದರೂ ಅವುಗಳೆಲ್ಲಲ್ಲ ಎದ್ದುನಿಲ್ಲುವ ಕೃತಿ ಎಂದರೆ ಎರಡು ಸಂಪುಟಗಳಲ್ಲಿ ಪ್ರಕಟಿಸಿದ “ಹಿಂದೂ ಟೆಂಪಲ್ಸ್ – ವಾಟ್ ಹ್ಯಾಪನ್ಡ್ ಟು ದೆಮ್?” ಎಂಬುದು. ಬಹುಶಃ ಇದೇ ಕೃತಿಯನ್ನು ಹಿಂದೂ ಟೆಂಪಲ್ಸ್ ಎಂಬ ಬದಲಿಗೆ “ಕ್ರಿಶ್ಚಿಯನ್ ಚರ್ಚ್” ಎಂದೋ “ಮುಸಲ್ಮಾನ್ ಮಸೀದಿಗಳು” ಎಂದೋ ಬರೆದು ಪ್ರಕಟಿಸಿದ್ದರೆ ಅದಕ್ಕೆ ಒಂದಲ್ಲ ಎರಡು ಪಿಎಚ್‍ಡಿ ಪದವಿಗಳು ಭಾರತದ ಯಾವುದೇ ವಿಶ್ವವಿದ್ಯಾಲಯದಿಂದ ಬರುತ್ತದ್ದವೋ ಏನೋ. “ಇಲ್ಲಿ ಹಿಂದೆ ಒಂದು ಮಸೀದಿ ಇತ್ತು. ಆದರೆ ಅದನ್ನು ಒಡೆದು ಈಗ ಹಿಂದೂ ದೇವಸ್ಥಾನ ಕಟ್ಟಿದ್ದಾರೆ” ಎಂದು ಹೇಳಿ ಕೇವಲ ಒಂದೇ ಒಂದು ಪ್ರಕರಣವನ್ನು ಮುಂದಿಟ್ಟುಕೊಂಡು ಬರೆದಿದ್ದರೂ ಅದು ಭಾರತದಲ್ಲಿ ಇಂದಿಗೂ ಚರ್ಚೆಯ ವಿಷಯವಾಗಿ ಉಳಿದಿರುತ್ತಿತ್ತು. ಕೇಂದ್ರ ಸರಕಾರವೇ ಮುಂದಾಗಿ ಕ್ರೇನು ತರಿಸಿ ಆ ದೇವಸ್ಥಾನವನ್ನು ಒಡೆದು ಹಾಕಿ ತನ್ನದೇ ಖರ್ಚಿನಲ್ಲಿ ಭವ್ಯ ಮಸೀದಿ ನಿರ್ಮಿಸಿಕೊಡುತ್ತಿತ್ತು. ಶಾಲೆ ಕಲಿಯುವ ಪ್ರತಿ ಮಗುವೂ ತನ್ನ ಸಮಾಜ ಪಠ್ಯದಲ್ಲಿ ಆ ಪ್ರಕರಣದ ಕತೆಯನ್ನು ಓದಿ, ಮಸೀದಿ ಕೆಡವಿ ಮಂದಿರ ಕಟ್ಟಿದ ಹಿಂದೂಗಳು ಅದೆಷ್ಟು ಕ್ರೂರಿಗಳು ಎಂಬುದನ್ನು ಉರುಹೊಡೆಯಬೇಕಿತ್ತು. ಆದರೆ ಗೋಯಲ್ ಅವರು ಒಂದಲ್ಲ ಎರಡಲ್ಲ ಬರೋಬ್ಬರಿ ಎರಡು ಸಾವಿರ ದೇವಸ್ಥಾನಗಳನ್ನು ಒಡೆದು ಹಾಕಿ ಅವುಗಳ ಅಡಿಪಾಯದ ಮೇಲೆ ಮಸೀದಿ ಕಟ್ಟಿದ ಉದಾಹರಣೆಗಳನ್ನು ತಮ್ಮ ಮೊದಲ ಸಂಪುಟದಲ್ಲಿ ಕೊಟ್ಟರು. ಸುಮ್ಮನೇ ಗಾಳಿಯಲ್ಲಿ ಗುದ್ದಿದಂಥ ಹೇಳಿಕೆಯಲ್ಲ ಅದು. ಆ 2000ದ ಪೈಕಿ ಪ್ರತಿಯೊಂದನ್ನೂ, ಅಲ್ಲಿ ಯಾವ ದೇವಸ್ಥಾನ ಇತ್ತು, ಯಾರು ಕಟ್ಟಿಸಿದ್ದರು, ಒಡೆದ ಮುಸ್ಲಿಂ ರಾಜ/ದಾಳಿಕೋರ ಯಾರು, ಯಾವಾಗ ಒಡೆದ, ಯಾವಾಗ ಮಸೀದಿ ಕಟ್ಟಿದ, ಅದರ ಈಗಿನ ಹೆಸರೇನು ಎಂಬ ವಿವರಗಳನ್ನು ಕೊಡುತ್ತಾ ಹೋದರು.

ಆದರೆ… ಪ್ರಕಟವಾದ ದಿನವೇ ಇಡೀ ದೇಶದಲ್ಲಿ ಸಂಚಲನ ಎಬ್ಬಿಸಬೇಕಿದ್ದ ಕೃತಿ ಮಳೆ ನೀರಲ್ಲಿಟ್ಟ ನೆಲಚಕ್ರದಂತೆ ಸದ್ದೇ ಮಾಡಲಿಲ್ಲ. ಯಾಕೆಂದರೆ ಆ ಕೃತಿಯ ಬಗ್ಗೆ ನಿಜವಾಗಿ ಮಾತಾಡಬೇಕಿದ್ದವರೇ ಏನೊಂದೂ ಮಾತನ್ನು ಆಡದೆ ಮೌನ ವಹಿಸಿದರು. ಹಿಂದೂ ಸಂಘಟನೆಯಾಗಿ ಹುಟ್ಟಿ ನಿಧಾನವಾಗಿ ಇಸ್ಲಾಂ ಬಗ್ಗೆ ಮೃದುಧೋರಣೆ ಅನುಸರಿಸುವ ಸ್ಟ್ರಾಟೆಜಿಯನ್ನು ಒಪ್ಪಿಕೊಂಡಿದ್ದವರಿಗೆ ಈ ಬಾಂಬಿನಂಥ ಪುಸ್ತಕದ ಬಗ್ಗೆ ಮಾತಾಡಿ ತಾವು ಅದುವರೆಗೆ ಕಟ್ಟಿಕೊಂಡು ಬಂದ ಇಮೇಜ್‍ ಅನ್ನು ಹಾಳು ಮಾಡಿಕೊಳ್ಳಲು ಇಷ್ಟವಾಗಲಿಲ್ಲ. ತಮಾಷೆಯೆಂದರೆ ಗೋಯಲ್‍ರ ಪುಸ್ತಕದ ಬಗ್ಗೆ ಯಾವೊಂದು ಚರ್ಚೆ-ವಿಚಾರ ಸಂಕಿರಣಗಳೂ ಈ ದೇಶದ ಯಾವುದೇ ವಿಶ್ವವಿದ್ಯಾಲಯದಲ್ಲಿ ನಡೆಯಲಿಲ್ಲ. ಅಕಡೆಮಿಕ್ ವಲಯ ಎಂದು ಹೇಳಿಕೊಳ್ಳುವ ಯಾರೂ ಆ ಕೃತಿಯ ಬಗ್ಗೆ ಚಕಾರ ಎತ್ತಲಿಲ್ಲ. ಹಿಂದೂಗಳಿಗಂತೂ ಆ ಪುಸ್ತಕದ ಮಹತ್ವವೇ ತಿಳಿಯಲಿಲ್ಲ. ಅಯೋಧ್ಯೆಯನ್ನು ರಾಜಕೀಯ ವಿಷಯವಾಗಿಟ್ಟುಕೊಂಡು ಅಧಿಕಾರ ಹಿಡಿವ ಕನಸು ಕಾಣುತ್ತಿದ್ದ ಭಾರತೀಯ ಜನತಾ ಪಕ್ಷಕ್ಕೆ ಈ ಪುಸ್ತಕದ ಬಗ್ಗೆ ಚರ್ಚೆ ಕೈಗೆತ್ತಿಕೊಂಡರೆ ಎಲ್ಲಿ ತನ್ನ ಅಯೋಧ್ಯಾ ವಿಷಯದ ಮೇಲಿನ ಸಾರ್ವಜನಿಕರ ಚರ್ಚೆಯ ಕೇಂದ್ರ ತಪ್ಪಿ ಹೋದೀತೋ ಎಂಬ ಭಯವೂ ಹುಟ್ಟಿರಬೇಕು. ವಿಶ್ವ ಹಿಂದೂ ಪರಿಷತ್ತು ಮೊದಲು ಅಯೋಧ್ಯಾ, ಮಥುರಾ, ಕಾಶಿ ಎಂದು ಮೂರು ಸ್ಥಳಗಳ ಕುರಿತು ಮಾತಾಡುತ್ತಿದ್ದರೆ ಬರಬರುತ್ತ ಕಾಶಿ ಮಥುರೆಗಳನ್ನು ಬಿಟ್ಟು ಅಯೋಧ್ಯೆಯನ್ನಷ್ಟೇ ತನ್ನ ಭಾಷಣಗಳಲ್ಲಿ ತರತೊಡಗಿತು. ಮುಸ್ಲಿಮ್ ಓಟುಗಳಿಗೆ ಗಾಳ ಹಾಕುತ್ತಿದ್ದ ಭಾಜಪಾ, ಗೋಯಲ್‍ರ ಪುಸ್ತಕದ ಬಿಸಿಕೆಂಡದಂಥ ವಿಷಯಗಳನ್ನು ಚರ್ಚೆಗೆತ್ತಿಕೊಳ್ಳದೆ ಜಾಣ್ಮೆ ಮೆರೆಯಿತು.

ಇತ್ತೀಚೆಗಷ್ಟೇ ಸುಬ್ರಹ್ಮಣ್ಯನ್ ಸ್ವಾಮಿಯವರ ಒಂದು ಸಂದರ್ಶನದ ವಿಡಿಯೋ ನೋಡುತ್ತಿದ್ದೆ. ಅಲ್ಲಿ ಅವರು ಹೇಳುತ್ತಿದ್ದರು: “ಮುಸ್ಲಿಮರು ಭಾರತದ 2000 ದೇವಸ್ಥಾನಗಳನ್ನು ಒಡೆದು ಅಲ್ಲಿ ಮಸೀದಿ ಕಟ್ಟಿಕೊಂಡಿದ್ದಾರೆ. ನಾವು ಆ ಎಲ್ಲವನ್ನೂ ನಮಗೆ ವಾಪಸು ಕೊಡಿ ಎಂದು ಕೇಳುವುದಿಲ್ಲ. ಆದರೆ, ಕಾಶಿ, ಮಥುರಾ ಮತ್ತು ಅಯೋಧ್ಯಾ – ಈ ಮೂರು ಜಾಗಗಳನ್ನು ಮಾತ್ರ ನಮಗೆ ಬಿಟ್ಟುಕೊಡಿ ಎಂದು ಕೇಳುತ್ತಿದ್ದೇವೆ”. ಹಿಂದೂಗಳೇ ಬಹುಸಂಖ್ಯಾತರಿರುವ ದೇಶದಲ್ಲಿ, ಹಿಂದೂಗಳ ಶ್ರದ್ಧಾಕೇಂದ್ರಗಳನ್ನು ಅನ್ಯಾಯಮಾರ್ಗದಿಂದ ಒಡೆದು ಮಸೀದಿ ಎಬ್ಬಿಸಿರುವಲ್ಲಿ, ಈಗ ಹಿಂದೂಗಳೇ “ಕೇವಲ ಮೂರೇ ಮೂರು… ಮೂರಲ್ಲವಾದರೆ ಒಂದಾದರೂ… ಜಾಗ ಬಿಟ್ಟುಕೊಡಿ” ಎಂದು ಗೋಗರೆಯಬೇಕಾದ ಪರಿಸ್ಥಿತಿ! ಈಗ ಪರಿಸ್ಥಿತಿ ಇಲ್ಲಿಗೆ ಬಂದು ನಿಂತಿರುವಾಗ, ಆಗಿನ ಕಾಲದಲ್ಲೇ ಗೋಯಲ್ ಅವರು 2000 ಮಸೀದಿಗಳ ಜಾತಕ ಬಿಚ್ಚಿಟ್ಟಿದ್ದರೆಂದರೆ ಅವರ ಧೈರ್ಯ ಎಂಥದ್ದಿರಬೇಕು ಎಂದು ನಿಜವಾಗಿಯೂ ಆಶ್ಚರ್ಯವಾಗುತ್ತದೆ. “ಇಸ್ಲಾಂ ಪ್ರತ್ಯೇಕತಾವಾದ” ಎಂಬ ಪುಸ್ತಕದಲ್ಲಿ ಗೋಯಲ್ ಅವರು ಈ ದೇಶ ಈಗ ಅನುಭವಿಸುತ್ತಿರುವ ಮತ್ತು ಇನ್ನು ಮುಂದಿನ ಮೂರ್ನಾಲ್ಕು ದಶಕಗಳಲ್ಲಿ ಹೆಚ್ಚು ಹೆಚ್ಚಾಗಿ ಅನುಭವಿಸಲಿರುವ ಎಲ್ಲ ತಾಪತ್ರಯಗಳನ್ನು ಮೂವತ್ತು ವರ್ಷಗಳ ಹಿಂದೆಯೇ ಬರೆದಿಟ್ಟಿದ್ದಾರೆ. ಅದು ಹೀಗಿದೆ: If the Hindus sang Vande Mãtaram in a public meeting, it was a ‘conspiracy’ to convert Muslims into kãfirs. If the Hindus blew a conch, or broke a coconut, or garlanded the portrait of a revered patriot, it was an attempt to ‘force’ Muslims into ‘idolatry’. If the Hindus spoke in any of their native languages, it was an ‘affront’ to the culture of Islam. If the Hindus took pride in their pre-Islamic heroes, it was a ‘devaluation’ of Islamic history. And so on, there were many more objections, major and minor, to every national self-expression. In short, it was a demand that Hindus should cease to be Hindus and become instead a faceless conglomeration of rootless individuals. On the other hand, the ‘minority community’ was not prepared to make the slightest concession in what they regarded as their religious and cultural rights. If the Hindus requested that cow-killing should stop, it was a demand for renouncing an ‘established Islamic practice’. If the Hindus objected to an open sale of beef in the bazars, it was an ‘encroachment’ on the ‘civil rights’ of the Muslims. If the Hindus demanded that cows meant for ritual slaughter should not be decorated and marched through Hindu localities, it was ‘trampling upon time-honoured Islamic traditions’. If the Hindus appealed that Hindu religious processions passing through a public thoroughfare should not be obstructed, it was an attempt to ‘disturb the peace of Muslim prayers’. If the Hindus wanted their native languages to attain an equal status with Urdu in the courts and the administration, it was an ‘assault on Muslim culture’. If the Hindus taught to their children the true history of Muslim tyrants, it was a ‘hate campaign against Islamic heroes’. And the ‘minority community’ was always ready to ‘defend’ its ‘religion and culture’ by taking recourse to street riots.

(ಮುಂದುವರಿಯುತ್ತದೆ)

Facebook ಕಾಮೆಂಟ್ಸ್

ಲೇಖಕರ ಕುರಿತು

Rohith Chakratheertha

ಓದಿದ್ದು ವಿಜ್ಞಾನ, ಮುಖ್ಯವಾಗಿ ಗಣಿತ. ಬೆಂಗಳೂರಿನಲ್ಲಿ ನಾಲ್ಕು ವರ್ಷ ಉಪನ್ಯಾಸಕನಾಗಿ ಕಾಲೇಜುಗಳಲ್ಲಿ ಪಾಠ ಮಾಡಿದ್ದ ಇವರು ಈಗ ಒಂದು ಬಹುರಾಷ್ಟ್ರೀಯ ಕಂಪೆನಿಯಲ್ಲಿ ಉದ್ಯೋಗಿ. ಹವ್ಯಾಸವಾಗಿ ಬೆಳೆಸಿಕೊಂಡದ್ದು ಬರವಣಿಗೆ. ಐದು ಪತ್ರಿಕೆಗಳಲ್ಲಿ ಸದ್ಯಕ್ಕೆ ಅಂಕಣಗಳನ್ನು ಬರೆಯುತ್ತಿದ್ದು ವಿಜ್ಞಾನ, ಗಣಿತ, ವ್ಯಕ್ತಿಚಿತ್ರ, ಮಕ್ಕಳ ಕತೆ ಇತ್ಯಾದಿ ಪ್ರಕಾರಗಳಲ್ಲಿ ಇದುವರೆಗೆ ೧೩ ಪುಸ್ತಕಗಳ ಪ್ರಕಟಣೆಯಾಗಿವೆ. ಉದ್ಯೋಗ ಮತ್ತು ಬರವಣಿಗೆಯಿಂದ ಬಿಡುವು ಸಿಕ್ಕಾಗ ತಿರುಗಾಟ, ಪ್ರವಾಸ ಇವರ ಖಯಾಲಿ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!