ಒಬ್ಬ ಯಶಸ್ವಿ ರಾಜಕಾರಣಿ ಎನ್ನಿಸಿಕೊಳ್ಳಲು ಮಾನದಂಡ ಯಾವುದು? ಚೆನ್ನಾಗಿ ಓದಿರುವ, ಒಳ್ಳೆಯ ವಾಕ್ಚಾತುರ್ಯತೆಯನ್ನು ಹೊಂದಿರುವ ಮತ್ತು ಸಾಮಾಜಿಕವಾಗಿ ಅತ್ಯಂತ ವಿನಮ್ರನಾಗಿರುವವರನ್ನು ಯಶಸ್ವೀ ರಾಜಕಾರಣಿ ಎನ್ನಬಹುದೇ? ಇಲ್ಲ,ನನ್ನರ್ಥದಲ್ಲಿ ಇವರನ್ನು ‘ಸಭ್ಯ ರಾಜಕಾರಣಿ’ ಎನ್ನಬಹುದು. ಹಾಗಾದರೆ ಒಬ್ಬ ಯಶಸ್ವಿ ರಾಜಕಾರಣಿ ಎನ್ನುವುದು ಆತ ರಾಜಕೀಯದ ಉನ್ನತ ಅಧಿಕಾರವನ್ನು ಅಥವಾ ಗದ್ದುಗೆಯನ್ನು ಏರಿದಾಗ ಮಾತ್ರವಾ? ಈ ಪ್ರಶ್ನೆಗೆ ಉತ್ತರ ಸುಮಾರಿದೆ. ಆದರೆ ಸಭ್ಯರು ಎನ್ನಿಸಿಕೊಂಡವರು ಚುನಾವಣೆ ಗೆದ್ದು ಅಧಿಕಾರ ಅನುಭವಿಸಿದ್ದು ಈ ರಾಜಕೀಯ ಇತಿಹಾಸದಲ್ಲಿ (ಪ್ರಮುಖವಾಗಿ ನಮ್ಮ ರಾಜ್ಯ ರಾಜಕಾರಣದಲ್ಲಿ) ಅಪರೂಪ ಎನ್ನಿಸುವುದಂತೂ ಹೌದು. ಕಾಂಗ್ರೆಸ್’ನಲ್ಲಿ ಸುದರ್ಶನ್, ಬಿ ಎಲ್ ಶಂಕರ್’ರಂತವರು ಜೆಡಿಎಸ್’ನಲ್ಲಿ ಶಶೀಭೂಷಣ ಹೆಗಡೆ, ಎಂ ಸಿ ನಾಣಯ್ಯರಂತವರು ಬಿಜೆಪಿಯಲ್ಲಿ ಬಿ ಶಿವಪ್ಪ, ಪ್ರಮೋದ್ ಹೆಗಡೆ, ಹಾಲಾಡಿ ಶ್ರೀನಿವಾಸ ಶೆಟ್ಟಿ ಯಂತವರು (ಶೆಟ್ಟಿಯವರು ಚುನಾವಣಾ ರಾಜಕಾರಣದಲ್ಲೂ ಅಜಾತ ಶತ್ರು ಎನ್ನಿಸಿಕೊಂಡರು ಆದರೆ ಬಿಜೆಪಿ ಅವರನ್ನು ಪರಿಗಣಿಸಲೇ ಇಲ್ಲ ) ಚುನಾವಣಾ ರಾಜಕಾರಣದಲ್ಲಿ ಸೈ ಎನ್ನಿಸಿಕೊಳ್ಳಲಿಲ್ಲ. ನಾನು ಸದ್ಯದ ರಾಜಕಾರಣದಲ್ಲಿ ಇಷ್ಟಪಟ್ಟ ಇಬ್ಬರು ರಾಜಕಾರಣಿಗಳ ಬಗ್ಗೆ ಬರೆಯಲು ಇಚ್ಚಿಸುತ್ತೇನೆ. ನನ್ನ ಪ್ರಕಾರ ಈ ಇಬ್ಬರೂ ಕೂಡ ಹೊಸ ತಲೆಮಾರಿನ ರಾಜಕಾರಣಕ್ಕೆ ಅತ್ಯಂತ ಅವಶ್ಯವಿರುವ ರಾಜಕಾರಣಿಗಳು. ಇಂತವರು ಸೋಲಬಾರದು!! ಹೌದು, ಸುಳ್ಳಿನ ವಿರುದ್ಧ, ಈ ಕೊಳಕು ವ್ಯವಸ್ಥೆಯ ವಿರುದ್ಧ, ಕೊಂಕು ಹೇಳುವ ಕೆಲವು ವ್ಯಕ್ತಿಗಳ ವಿರುದ್ಧ ಇಂತಹ ಅನೇಕ ವೈರುಧ್ಯಗಳ ಎದಿರು ಇವರು ಗೆಲ್ಲಲೇಬೇಕು ಮತ್ತು ಪ್ರಸ್ತುತ ರಾಜಕಾರಣಕ್ಕೆ ಸಲ್ಲಲೇಬೇಕು.
ತೇಜಸ್ವಿ ಸೂರ್ಯ:
ಪ್ರಸ್ತುತ ರಾಜ್ಯ ರಾಜಕಾರಣದಲ್ಲಿ ನನ್ನನ್ನು ಸೆಳೆದ ವ್ಯಕ್ತಿತ್ವ ಎಂದರೆ ಅದು ‘ತೇಜಸ್ವಿ ಸೂರ್ಯ’. ನಮಗೆ ಹಳೇ ತಲೆಗಳ ಸಹವಾಸ ಸಾಕು ಹೊಸಬರು ಬರಲಿ ಎನ್ನುವುದು ಬಿಜೆಪಿ ಕಾರ್ಯಕರ್ತರ ಸದ್ಯದ ಬೇಡಿಕೆ ಅಥವಾ ಒಂದು ನಿರೀಕ್ಷೆ. ಇಂತಹ ನಿರೀಕ್ಷೆಗಳ ನಡುವೆ ಸಣ್ಣ ಕಿರಣವೊಂದು ತೂರಿಬಂದಿದೆ ಅದೇ ಈ ತೇಜಸ್ವಿ ಸೂರ್ಯ. ಪ್ರಸ್ತುತ ರಾಜ್ಯ ರಾಜಕಾರಣದಲ್ಲಿ ಒಬ್ಬ ಪ್ರಬುದ್ಧ ಯುವರಾಜಕಾರಣಿ ಯಾರಾದರೂ ಇದ್ದರೆ ಅದು ತೇಜಸ್ವೀಸೂರ್ಯ ಅನ್ನಿಸುತ್ತಿದೆ. ಉತ್ತಮ ಶಿಕ್ಷಣ ಪಡೆದಿರುವ, ವೃತ್ತಿಯಲ್ಲಿ ಯಶಸ್ಸನ್ನು ಸಾಧಿಸುತ್ತಿರುವ, ವೈಚಾರಿಕ ನೆಲೆಗಟ್ಟಿನ ಅಡಿಯಲ್ಲಿ ಉತ್ತಮ ಬೌಧ್ಧಿಕ ಮಟ್ಟವನ್ನು ಹೊಂದಿರುವ, ಭಾಷಣ ಹಾಗೂ ಟಿ.ವಿ ಡಿಬೇಟ್‌ಗಳ ಮೂಲಕ ಸಮಾಜದ ಮೇಲೆ ಪರಿಣಾಮ ಬೀರುತ್ತಿರುವ ಯುವ ರಾಜಕಾರಣಿ ತೇಜಸ್ವಿ. ಬಿಜೆಪಿಯಲ್ಲಿ ಹೊಸ ತಲೆಮಾರಿನ ಅನೇಕ ಯುವ ನಾಯಕರು ಇದ್ದಾರೆ ಆದರೆ ಅವರೆಲ್ಲರಿಗೂ ಮಾದರಿ ಮತ್ತು ಒಬ್ಬ ಯಶಸ್ವಿ ನಾಯಕನಾಗುವ ಸರ್ವ ಅರ್ಹತೆ ತೇಜಸ್ವಿ ಸೂರ್ಯರಲ್ಲಿ ಕಾಣಿಸುತ್ತಿದೆ.
ಇಪ್ಪತ್ತಾರು ವರ್ಷದ ಈ ತರುಣ ಮುಂಚಿನಿಂದಲೂ ಬೇರೆ ಬೇರೆ ಹೋರಾಟದಲ್ಲಿ ಬಾಗಿಯಾಗುತ್ತಲೆ ಬಂದವರು. 2008 ರಲ್ಲಿ ಅರೈಸ್ ಇಂಡಿಯಾ ಎಂಬ ಸ್ವಯಂ ಸೇವಾ ಸಂಸ್ಥೆಯನ್ನು ಸ್ಥಾಪನೆ ಮಾಡಿದ ತೇಜಸ್ವಿಯವರ ಮತ್ತು ಆ ಸಂಸ್ಥೆಯ ಉದ್ದೇಶ ‘ರಾಷ್ಟ್ರೀಯ ವಿಚಾರಧಾರೆಗಳ’ ವಿಚಾರದಲ್ಲಿ ಯುವಕರನ್ನು ಜಾಗೃತಗೊಳಿಸುವುದಾಗಿತ್ತು. ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಾ ಮತ್ತು ಜೊತೆ ಜೊತೆಯಲ್ಲಿಯೇ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನಲ್ಲಿ ಸಕ್ರೀಯ ಕಾರ್ಯಕರ್ತನಾಗಿ ಕೆಲಸ ಮಾಡುತ್ತಾ ತಮ್ಮ ವಿದ್ಯಾರ್ಥಿ ಜೀವನವನ್ನು ಕಳೆದವರು ತೇಜಸ್ವಿ. ಆರನೇ ತರಗತಿಯಲ್ಲಿಯೇ ರಾಷ್ಟ್ರೀಯ ಬಾಲಾಶ್ರೀ ಪ್ರಶಸ್ತಿ ಪಡೆದ ಈ ಬಾಲಕ 2010ರಲ್ಲಿ ಗ್ರೀನ್ ಇಂಡಿಯಾ ಮಿಶನ್ ಅನ್ನೋ ಅದ್ಭುತ ಕಾರ್ಯಕ್ರಮವನ್ನು ಆಯೋಜಿಸಿ ಎಲ್ಲರಿಂದ ಮೆಚ್ಚುಗೆಗೆ ಪಾತ್ರರಾಗಿದ್ದರು. ಈತನ ಚಾಣಾಕ್ಷ ಸಂಘಟನಾ ಚತುರತೆಗೆ ಈಗ ನಮ್ಮೆದುರಿಗಿರುವ ನಿದರ್ಶನ ಅಂದರೆ ‘ಮಂಗಳೂರು ಚಲೋ’ ರ್ಯಾಲಿ. ಸಿದ್ದರಾಮಯ್ಯ ಸರಕಾರದ ನಿದ್ದೆಗೆಡಿಸಿದ ಹೋರಾಟ ಇದು. ಈ ಹೋರಾಟದಲ್ಲಿ ನನಗೆ ಪ್ರತಾಪ್ ಸಿಂಹ ಪ್ರಮುಖ ಅನ್ನಿಸುವುದಿಲ್ಲ ಆದರೆ ತೇಜಸ್ವಿ ಪ್ರಮುಖನಾಗಿ ಕಾಣುತ್ತಾನೆ.
ತೇಜಸ್ವಿ ಭಾರತೀಯ ಜನತಾ ಪಕ್ಷದ ಆಶಾಕಿರಣದಂತೆ ಗೋಚರಿಸಲು ಇನ್ನೊಂದು ಕಾರಣವೇನೆಂದರೆ ಅವರ ಕ್ಲೀನ್ ಇಮೇಜ್. ಈ ಕ್ಲೀನ್ ಇಮೇಜ್ ಅನ್ನು ಮಾಪನ ಮಾಡಲು ಅವರಿನ್ನೂ ಚುನಾವಣಾ ರಾಜಕೀಯಕ್ಕೆ ಧುಮುಕಿಲ್ಲ ಎನ್ನುವವರು ಇದ್ದಾರೆ ಆದರೆ ಹೋರಾಟದ ಹಾದಿ ಮತ್ತು ಕಳೆದ ಒಂದೂವರೆ ವರ್ಷದಿಂದ ಅವರ ಸಾಮಾಜಿಕ ಹೋರಾಟದ ಹಾದಿ ನೋಡಿದರೆ ಖಂಡಿತ ಅವರನ್ನು ಕ್ಲೀನ್ ಇಮೇಜ್ ಯುವ ನಾಯಕ ಎನ್ನಬಹುದು.ಇನ್ನು ಕೆಲವೊಂದು ವಿಷಯದಲ್ಲಿ ಅದರಲ್ಲೂ ಪ್ರಮುಖವಾಗಿ ರಾಷ್ಟ್ರೀಯತೆಯ ಬಗ್ಗೆ ಮತ್ತು ಎಲ್ಲ ಸಾಮಾಜಿಕ ವಿಷಯಗಳ ಬಗ್ಗೆ ಪರಿಪಕ್ವವಾಗಿ ವಾದಿಸಬಲ್ಲ ಮತ್ತು ವಿಷಯ ಮಂಡಿಸಬಲ್ಲ ಹೊಸ ತಲೆಮಾರಿನ ಹುಡುಗ ತೇಜಸ್ವಿ. ಹಾಗಾಗಿಯೇ ಅವರು ಯುವಕರಿಗೆ ಇಷ್ಟವಾಗುವುದು. ನರೇಂದ್ರ ಮೋದಿಯವರ ವಿಚಾರಧಾರೆಯನ್ನು ಅತ್ಯಂತ ಶುದ್ಧವಾಗಿ ಅಳವಡಿಸಿಕೊಂಡು ರಾಜ್ಯ ಬಿಜೆಪಿಯ ಹೊಸ ಆಶಾ’ಕಿರಣ’ವಾಗಿ ಕಾಣಿಸುತ್ತಿರುವುದು ತೇಜಸ್ವಿ’ಸೂರ್ಯ’. ಅವರು ಚುನಾವಣಾ ರಾಜಕಾರಣಕ್ಕೆ ಧುಮುಕಲಿ ಮತ್ತು ಯಶಸಿಗಲಿ ಎಂಬ ಆಸೆ ನನ್ನದು.
ಶಶಿಭೂಷಣ ಹೆಗಡೆ:
ಶಶಿಭೂಷಣ ಹೆಗಡೆಯವರು ಓದಿದ್ದು ಬಿಎಸ್ಸಿ(ಅಗ್ರಿ),ಎಲ್ಎಲ್ಬಿ,ಎಂಬಿಎ ಮತ್ತು ಎಲ್ಲಕಿಂತ ಪ್ರಮುಖವಾಗಿ ಕೃಷಿಕ. ರಾಮಕೃಷ್ಣ ಹೆಗಡೆ ಮನೆತನದ ಶಶಿಭೂಷಣ ಹೆಗಡೆಯವರು ಮೂರು ಬಾರಿ ಚುನಾವಣಾ ರಾಜಕಾರಣದಲ್ಲಿ ಸೋಲನುಭವಿಸಿದವರು. ಕುಮಟಾದಲ್ಲಿ ಎರಡು ಬಾರಿ ಮತ್ತು ಶಿರಸಿ ಸಿದ್ದಾಪುರ ಕ್ಷೇತ್ರದಲ್ಲಿ ಒಮ್ಮೆ ಸೋಲನುಭವಿಸಿ ಈ ಬಾರಿ ಮತ್ತೆ ಅದೃಷ್ಟ ಪರೀಕ್ಷೆಗೆ ತಯಾರಾಗಿದ್ದಾರೆ. ಎರಡು ಬಾರಿ ಕುಮಟಾ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಮತ್ತು ಕಳೆದ ಬಾರಿ ಜೆಡಿಎಸ್ ನಿಂದ ಸ್ಪರ್ದಿಸಿದ್ದ ಶಶಿಭೂಷಣ ಹೆಗಡೆ ಅತ್ಯಂತ ಕಡಿಮೆ ಅಂತರದಲ್ಲಿ ಸೋಲನ್ನು ಅಭವಿಸುತ್ತಿದ್ದಾರೆ. ಆದರೆ ಅವರ ಸಾಮಾಜಿಕ ಬದ್ಧತೆ, ಜನರೆಡೆಗಿನ ಪ್ರೀತಿ ಮತ್ತು ಕಾಳಜಿ ಯಾವುದೂ ಕಮ್ಮಿಯಾಗಲಿಲ್ಲ.
ಶಶಿಭೂಷಣ ಹೆಗಡೆಯವರು ವಿಧಾನಸಭೆಗೆ ಒಬ್ಬ ಮೋಸ್ಟ್ ಎಲಿಜಿಬಲ್ ಸಂಸದೀಯ ಪಟು. ಅವರಲ್ಲಿ ಆಳವಾದ ಅಧ್ಯಯನವಿದೆ, ವ್ಯಾಪಾರ ವ್ಯವಹಾರ ಮಾಡಿರುವುದರಿಂದ ಅದರ ಸಂಪೂರ್ಣ ಜ್ಞಾನವಿದೆ,ಮಲೆನಾಡಿನ ಕೃಷಿಕರ ನೋವಿನ ಸಂಪೂರ್ಣ ಪರಿಚಯವಿದೆ ಜೊತೆಗೆ ಅತ್ಯಂತ ವಿನಮೃತೆಯ ವ್ಯಕ್ತಿತ್ವವಿದೆ ಆದರೂ ಚುನಾವಣಾ ರಾಜಕಾರಣ ಅವರನ್ನು ಸೋಲಿಸುತ್ತಿದೆ.2007ನೇ ಇಸ್ವಿಯಲ್ಲಿ CSIR ಇನ್ಸ್ಟಿಟ್ಯೂಶನ್ ನೀಡುವ ‘ಬೆಸ್ಟ್ ಎಂಟೆರ್‌ಪ್ರೇನೆರ್’ ಪ್ರಶಸ್ತಿಯನ್ನು ಶಶಿಭೂಷಣ ಹೆಗಡೆ ಅವರಿಗೆ ನೀಡಲಾಗಿತ್ತು. ಅದಲ್ಲದೆ ಸಿದ್ದಾಪುರದ ‘ಶಿಕ್ಷಣ ಪ್ರಸಾರಕ ಸಮೀತಿಯ’ ವೈಸ್ ಚೇರ್ಮನ್ ಆಗಿ ಹೆಗಡೆ ಕಾರ್ಯನಿವಹಿಸುತ್ತಿದ್ದಾರೆ. ಅತ್ಯಂತ ಶುದ್ಧವಾದ ಭಾಷಣದ ಕಲೆ ಹೆಗಡೆಯವರಿಗೆ ಒಲಿದು ಬಂದಿದೆ. ಇಷ್ಟೆಲ್ಲ ಕಾರಣಗಳಿದ್ದೂ ಶಶಿಭೂಷಣ ಹೆಗಡೆ ಸೋಲುತ್ತಿರುವುದು ವಿಪರ್ಯಾಸ ಎನ್ನಬಹುದು. ಇಲ್ಲ ಅವರು ಕೆಲವರಂತೆ ತೆರೆಮೆರೆಗೆ ಸರಿಯಬಾರದು.
ಎಲ್ಲರೂ ಶಶಿಭೂಷಣ ಹೆಗಡೆಯವರನ್ನು ಇಷ್ಟ ಪಡುತ್ತಾರೆ ಆದರೆ ಅವರಿಗೆ ಮತ ಚಲಾಯಿಸಲು ಹಿಂದೆ ಸರಿಯುತ್ತಿದ್ದಾರೆ ಕಾರಣ ಅವರು ಜೆಡಿಎಸ್ ಎಂಬ ಪಕ್ಷದಲ್ಲಿದ್ದಾರೆ ಎಂದು. ಯಾವ ಪಕ್ಷ ರಾಮಕೃಷ್ಣ ಹೆಗಡೆಯವರನ್ನು ಅತ್ಯಂತ ಕೀಳಾಗಿ ನೋಡಿತೋ ಅಥವಾ ಅವರ ಮಾನಸಿಕ ನೋವಿಗೆ ಕಾರಣವಾಯಿತೋ ಆ ಪಕ್ಷಕ್ಕೆ ಮತ ಚಲಾಯಿಸಲು ಉತ್ತರಕನ್ನಡದ ಅದರಲ್ಲೂ ಪ್ರಮುಖವಾಗಿ ಶಿರಸಿ ಸಿದ್ಧಾಪುರದ ಜನ ಹಿಂಜರಿಯುತ್ತಾರೆ. ಶಶಿಭೂಷಣ ಹೆಗಡೆಯವರಿಗೆ ಮತವೇ ಬೀಳಲಿಲ್ಲ ಎಂದೇನೂ ಅಲ್ಲ ಆದರೆ ಆ ಬೀಳದೆ ಇರುವ ಮತದ ಕಾರಣ ಇದು ಕೂಡ ಹೌದು. ನನಗನ್ನಿಸುವುದು ‘He is a Right Man in Wrong Party’. ಶಿರಸಿಯಲ್ಲಿ ಈಗ ಸೋಶಿಯಲ್ ಮಾಬ್ ಹೆಂಗಿದೆ ಅಂದ್ರೆ (ನನ್ನನ್ನು ಸೇರಿ) ‘ನಾನು ಕಾಗೇರಿಗೆ ವೋಟ್ ಹಾಕೊಲ್ಲ. ’ಶಶಿಭೂಷಣಂಗೆ ವೋಟ್ ಹಾಕನ ಅಂದ್ರೆ ಅವ ಜೆಡಿಎಸ್ ಅಲ್ಲಿ ಇದ್ದ’. ಅಂದರೆ ಶಶಿಯನ್ನು ಜನ ಜೆಡಿಎಸ್ ನಲ್ಲಿ ಒಪ್ಪಿಕೊಳ್ಳಲು ತಯಾರಿಲ್ಲ.
ಶಶಿಭೂಷಣ ಹೆಗಡೆಯಂತಹ ಪಕ್ವ ರಾಜಕಾರಣಿಯನ್ನು ಬಿಜೆಪಿ ಉಳಿಸಿಕೊಳ್ಳಲಿಲ್ಲವಲ್ಲ ಎನ್ನುವುದು ಯಾವತ್ತಿಗೂ ಬೇಸರದ ಸಂಗತಿ. ಪ್ರಸ್ತುತ ಮಲೆನಾಡ ರಾಜಕಾರಣ ಗಬ್ಬೆದ್ದು ನಾರುತ್ತಿದೆ ಅದನ್ನು ಸ್ವಚ್ಛಗೊಳಿಸುವಂತ ನಾಯಕ ಇನ್ನೂ ಬರಲೇ ಇಲ್ಲ. ಅದೇ ವಿಪರ್ಯಾಸ . ಚುನಾವಣಾ ರಾಜಕಾರಣ ‘ಶಶಿ’ಗೆ ಆದಷ್ಟು ಬೇಗ ದಕ್ಕಲಿ ಎನ್ನುವುದೇ ನನ್ನ ಆಶಯ ಕೂಡ.
ಸೂರ್ಯ ಮತ್ತು ಶಶಿ ಇಬ್ಬರೂ ಗೆಲ್ಲಲಿ.