ಅಂಕಣ ಎವರ್'ಗ್ರೀನ್

ಪರಮಾಣುಬಾಂಬುಗಳಿಗಿಂತಲೂ ಅಪಾಯಕಾರಿಯಾಗಬಹುದೇ ಈ ಟೆಕ್ನಾಲಜಿ!!

ಮಾನವನ ಅಳಿವು ಉಳಿವಿನ ಬಗೆಗಿನ ವಾದ-ಸಂವಾದಗಳು ಇಂದು ನೆನ್ನೆಯದಲ್ಲ. ಪ್ರತಿಯೊಂದು ಹೊಸ ಆವಿಷ್ಕಾರಗಳ ಸಾಧಕಗಳನ್ನು ಹೊರತುಪಡಿಸಿ ಅವುಗಳ ಬಾಧಕಗಳನಷ್ಟೇ ನೋಡಿದಾಗ ಭಾಗಶಃ ಹೆಚ್ಚಿನ ಅವಿಷ್ಕಾರಗಳು ಆತನ ಉಳಿವಿಗೇ ಕುತ್ತು ತರವಂತಿರುತ್ತವೆ ಎಂಬುದು ಜಗಜ್ಜನಿತ ವಿಚಾರ. ಅದು ನ್ಯೂಕ್ಲಿಯರ್ ಬಾಂಬಿನಿಂದ ಹಿಡಿದು ಇಂದಿನ ಮೊಬೈಲ್ ಫೋನುಗಳವರೆಗೂ ಪ್ರಸ್ತುತ. ನೈಸರ್ಗಿಕವಾಗಿ ಬಳುವಳಿಯಾಗಿ ಬಂದಂತಹ ದೇಹಸಿರಿಯನ್ನು ಆದಷ್ಟೂ ಸೋಮಾರಿಯನ್ನಾಗಿ ಮಾಡಲು ಟೆಕ್ನಾಲಜಿ ಎಂಬೊಂದು ಹೆಸರನ್ನು ಕೊಟ್ಟು ಸೃಷ್ಠಿಗೆ ಸವಾಲೆಸೆಯುವ ಕಾರ್ಯವನ್ನು ಮಾನವ ತನ್ನ ಮೊದಲೆನೆ ದಿನದಿಂದಲೇ ಹಮ್ಮಿಕೊಳ್ಳುತ್ತಾನೆ. ಟೆಕ್ನಾಲಜಿಯ ಮರದ ನೆರಳಲ್ಲೇ ನಿಂತು ಮರವನ್ನೇ ಶಪಿಸುವಂತಹ ಮಾತು ಇದಾದರೂ ಪ್ರಶ್ನಿಸುವ ಗುಣವೇ ಅದರ ಬೆನ್ನೆಲುಬು  ಎಂಬ ನಿಯಮವನ್ನು ಇಲ್ಲಿ ಆಧಾರವಾಗಿಟ್ಟುಕೊಳ್ಳೋಣ!  ಇಂತಹ ಅದೆಷ್ಟೋ ಟೆಕ್ನಾಲಜಿಗಳು ಇಂದು ಮಾನವನ ಊಹೆಗೂ ಮೀರಿ ಬೆಳೆಯುತ್ತಿವೆ. ಅಂತಹದೊಂದು ಟೆಕ್ನಾಲಜಿಗಳಲ್ಲಿ ಕೃತಕ ಬುದ್ದಿವಂತಿಕೆಯೂ  (ಆರ್ಟಿಫಿಷಿಯಲ್ ಇಂಟೆಲಿಜೆನ್ಸ್) ಸಹ ಒಂದು.

ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಆಧರಿಸಿದ ಅದೆಷ್ಟೋ ಚಲಚಿತ್ರಗಳು ಇಂದು ಪರದೆಯ ಮೇಲೆ ಮೂಡಿ ಅದರ ಬಗೆಗಿನ ಒಂದು ಪಕ್ಷಿನೋಟವನ್ನು ಜನಮಾದ್ಯಮಕ್ಕೆ ತೋರಿಸಿವೆ. ಇಲ್ಲಿ ತನ್ನ ಸುತ್ತಲಿನ ಆಗುಹೋಗುಗಳನ್ನು ಒಂದು ಸಾಮಾನ್ಯ ಜೀವಿಯಂತೆಯೇ ಗ್ರಹಿಸಬಲ್ಲ ಯುಕ್ತಿಯ ಆ ರೋಬೋಟ್/ ಯಂತ್ರಗಳು ಮುಂದೊಂದು ದಿನ ತನ್ನನ್ನು ಸೃಷ್ಟಿಸಿದ ಮಾನವನನ್ನೇ ಎದುರು ಹಾಕಿಕೊಳ್ಳುತ್ತವೆ. ಅಪ್ಪನ ಕೊರಳುಪಟ್ಟಿಯನ್ನು ಮಗ ಬಿಗಿಮುಷ್ಟಿಯಲ್ಲಿ ಹಿಡಿದುಕೊಂಡಂತೆ! ಅಂದು ಮಾನವನ ಹಾಗು ಅವನ ಸೃಷ್ಟಿಯ ಯಂತ್ರಗಳ ನಡುವಿನ ತಾಕತ್ತಿನ ಪರೀಕ್ಷೆಯಾಗುತ್ತದೆ. ಯಂತ್ರಗಳೇನಾದರೂ ಸೋತರೆ ಅದು ಮಾನವನ ಸೋಲೇ ಆಗಿರುತ್ತದೆ ಇಲ್ಲವಾದರೆ ಭೂಗೋಳ ಒಂದು ಯಂತ್ರಗಳ ಬೃಹತ್ ಉಂಡೆಯಾಗಿಬಿಡುತ್ತದೆ! ಸದ್ಯಕ್ಕಂತೂ ಇವೆಲ್ಲ ವಿಚಾರಗಳು ಪಾಪ್ಕಾರ್ನ್ ಅನ್ನು ತಿನ್ನುತ್ತಾ ಸಿನಿಮಾ ಮಂದಿರದಲ್ಲಿ ಕೂತು ನೋಡಲು ಮುದವೆನಿಸಿದರೂ ಮುಂದೊಂದು ದಿನ ಇಂತಹ ಸಾಧ್ಯತೆಯನ್ನು ಅಲ್ಲಗೆಳೆಯಲಾಗುವುದಿಲ್ಲ. ಪರಮಾಣು ಬಾಂಬ್’ಗಳಿಗಿಂತಲೂ  ಕೃತಕ ಬುದ್ದಿವಂತಿಕೆ ಅತಿ ಅಪಾಯಕಾರಿ ವಿಷಯವೆಂಬುದು ಆಗಲೇ ಅದೆಷ್ಟೋ ವಿಜ್ಞಾನಿಗಳ ದಿಟ್ಟ ಅಭಿಪ್ರಾಯವಾಗಿದೆ.

ಇಪ್ಪತ್ತನೆಯ ಶತಮಾನದ ಆದಿಯಲ್ಲಿಯೇ ಕೃತಕ ಬುದ್ಧಿವಂತಿಕೆಯ ಬಗ್ಗೆ ಅದೆಷ್ಟೋ ಊಹಾಪೋಹಗಳಿದ್ದರೂ ಅದಕ್ಕೊಂದು ಸದೃಶ್ಯ ರೂಪ ದೊರೆತದ್ದು 1955 ರಲ್ಲಿ ಜಾನ್ ಮೆಕಾರ್ತಿ ಎಂಬ ಅಮೆರಿಕಾದ ವಿಜ್ಞಾನಿಯಿಂದ. ಮೆಕಾರ್ತಿ ಹಾಗು ತಂಡ ಅಂದು LISP ಎಂಬ ಕಂಪ್ಯೂಟರ್  ಭಾಷೆಯೊಂದನ್ನು ಆವಿಷ್ಕರಿಸಿ ಅದನ್ನು ಯಂತ್ರಗಳಿಗೆ ಅಳವಡಿಡಿಸಿ  ಕೃತಕ ಬುದ್ಧಿವಂತಿಕೆ ಎಂಬುದು ಕನಸಿನ ಮಾಯಾಜಿಂಕೆಯಂತಲ್ಲ ಎನ್ನುವುದನ್ನು ಸಾಬೀತುಪಡಿಸಿದರು. ಕೂಡಲೇ ವಿಶ್ವದಾದ್ಯಂತ ಈ ಒಂದು ವಿಷಯದ ಬಗ್ಗೆ ವ್ಯಾಪಕ ಸಂಶೋಧನೆಗಳಾದವು. ಆದರೆ ಗೊತ್ತು ಗುರಿಯಿಲ್ಲದ, ಅಲ್ಲಿಯವರೆಗೂ ಕೇವಲ ಕಲ್ಪನೆಗಷ್ಟೇ ಸೀಮಿತವಾಗಿದ್ದ ವಿಷಯವೊಂದಕ್ಕೆ ಕೋಟ್ಯಾನುಕೋಟಿ ಸುರಿದರೂ ಹೇಳಿಕೊಳ್ಳುವ ಮಟ್ಟಿನ ಪ್ರತಿಫಲ ಮುಂದೆ ಸಿಗದೇ ಇದ್ದ ಕಾರಣ ಸಂಶೋಧನೆಯ ಸದ್ದು ಮಂಕಾಗತೊಡಗಿತು. ಆದರೆ ಕೆಲದಶಕಗಳ ನಂತರ ಚೆಸ್ ಆಟದ ದಿಗ್ಗಜ ಗ್ಯಾರಿ ಕಾಸ್ಪೋರೊವ್’ನನ್ನು ಕೃತಕ ಬುದ್ಧಿವಂತಿಕೆಯ ‘ಡೀಪ್ ಬ್ಲೂ’ ಎಂಬ ಯಂತ್ರ ಸೋಲಿಸಿದಾಗಲೇ ಜಗತ್ತಿಗೆ ಕೃತಕ ಬುದ್ಧಿವಂತಿಕೆಯ ನಿಜದರ್ಶನವಾದದ್ದು. ಮುಂದೆ IBN ಕಂಪನಿ ವಿಕಾಸಗೊಳಿಸಿದ್ದ ‘ವ್ಯಾಟ್ಸನ್’ ಎಂಬ ಪ್ರೋಗ್ರಾಮ್ ಅಮೇರಿಕಾದ ರಸಪ್ರಶ್ನೆ ಕಾರ್ಯಕ್ರಮದ ವಿಜೇತರಿಬ್ಬರಿಗೆ ಸೋಲಿನ ರುಚಿಯನ್ನು ಕಾಣಿಸಿದಾಗಲಂತೂ ಕೃತಕ ಬುದ್ಧಿವಂತಿಕೆಯ ಮೇಲಿದ್ದ ಎಳ್ಳಷ್ಟೂ ಸಂಶಯಗಳು ದೂರವಾಗತೊಡಗಿದವು.

ಅದಾಗಲೇ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ನ ಹಲವು ಉತ್ಪನ್ನಗಳು ನಮ್ಮನ್ನು ಸುತ್ತುವರೆದಿವೆ ಅಥವಾ ಸುತ್ತುವರೆಯುತ್ತಿವೆ. ನೀವು ಆಪಲ್ ಐ-ಫೋನ್ ಬಳಕೆದಾರರಾದರೆ ಅದರಲ್ಲಿ ನಾವು ಕೇಳುವ ಪ್ರತಿಯೊಂದು ಉಲ್ಟಾಸೀದಾ ಪ್ರಶ್ನೆಗಳಿಗೂ ಮಾನವರಂತೆಯೇ ಉತ್ತರಿಸುವ ‘ಸಿರಿ’ ಅಪ್ಲಿಕೇಶನ್ ಸಹ ಈ ಕೃತಕ ಬುದ್ಧಿವಂತಿಕೆಯ ಉಪಉತ್ಪನ್ನವೇ ಆಗಿದೆ. ಗೂಗಲ್ ಸರ್ಚ್’ನಿಂದಿಡಿದು ‘Go’ ಆಟದಲ್ಲೂ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ತನ್ನ ಛಾಪನ್ನು ಮೂಡಿಸಿದೆ. ‘Go’ ಪುರಾತನ ಚೀನಾದ ಆಟಗಳಲ್ಲೋದು. ಚೆಸ್ನಂತೆಯೇ  ಈ ಆಟದಲ್ಲಿಯೂ ಸಹ ಪ್ರತಿ ಹೆಜ್ಜೆಗೂ ನೂರಾರು ಸಾವಿರಾರು ದಾರಿಗಳಿರುತ್ತವೆ. ಡೀಪ್ ಮೈಂಡ್ ಟೆಕ್ನಾಲಜೀಸ್ ಲಿಮಿಟೆಡ್ ಎಂಬ ಲಂಡನ್ ಮೂಲದ ಕಂಪನಿಯೊಂದು ಅಭಿವೃದ್ಧಿ ಪಡಿಸಿದ ‘ಅಲ್ಫಾಗೊ’ ಎಂಬ ಕೃತಕ ಬುದ್ಧಿವಂತಿಕೆಯ ಪ್ರೋಗ್ರಾಮ್ ಮೊದಲ ಬಾರಿಗೆ 2015 ರಲ್ಲಿ Go  ಆಟದ ವಿಶ್ವದ ನಂಬರ್ ಒನ್ ಆಟಗಾರನನ್ನುಸೋಲಿಸಿ, ಇತಿಹಾಸ ಸೃಷ್ಟಿಸಿ ಎಲ್ಲೆಡೆ ವಿಸ್ಮಯವನ್ನು ಮೂಡಿಸಿತ್ತು. ಅಲ್ಲಿಂದ ಮುಂದೆ ಈ ವಿಷಯದ ಬಗೆಗಿನ ಸಂಶೋಧನೆ, ಅಭಿವೃದ್ಧಿ ಹಾಗು ಒಳಹೊರಗುಗಳ ಬಗ್ಗೆ ಆಳವಾದ ಚರ್ಚೆಗಳು ಶುರುವಾಗಿ ಖಾಸಗಿ ಕಂಪನಿಗಳೂ ಸಹ ನೂರಾರು ಕೋಟಿ ಹಣವನ್ನು ಈ ವಿಷಯದ ಅಧ್ಯಯನಕ್ಕಾಗೆ ಮುಡಿಪಾಗಿಡಲು ಮುಂದೆ ಬಂದವು.

ಅಸಲಿಗೆ ಕೃತಕ ಬುದ್ದಿವಂತಿಕೆ ಎಂಬುದು ತಾಯಿಯ ಗರ್ಭದಿಂದ ಆಗಷ್ಟೇ ಹೊರಬಂದ ಮಗುವಿನಂತೆ. ಮಗು ಬೆಳೆಯುತ್ತ ತನ್ನ ಸುತ್ತಲಿನ ಆಗುಹೋಗುಗಳಿಂದ, ಪರಿವರ್ತನೆಗಳಿಂದ ಹೇಗೆ ಒಂದೊಂದೇ ಅಂಶಗಳನ್ನು ತನ್ನ ಮಸ್ತಿಷ್ಕದೊಳಗೆ ಸೇರಿಸಿಕೊಂಡು ವಿಕಾಸಗೊಳ್ಳುತ್ತದೆಯೋ ಹಾಗೆಯೆ ಕೃತಕ ಬುದ್ದಿವಂತಿಕೆ ಇರುವೆಯ ಗಾತ್ರದಿಂದ ಶುರುವಾಗಿ ಆನೆಯ ಗಾತ್ರದ ಬುದ್ಧಿಯನ್ನು ಗಳಿಸಿಕೊಳ್ಳುತ್ತದೆ. ಹುಟ್ಟಿದ ಕೆಲವರ್ಷಗಳಲ್ಲೇ ನಡೆಯುವುದ ಕಲಿಯುವ ಮಗುವೊಂದಕ್ಕೆ ಇಪ್ಪತ್ತು ವರ್ಷಗಳ ನಂತರ ಹೇಗೆ ಪುನಃ ಅದಕ್ಕೆ ರಿವಿಶನ್ನಿನ್ನ ಆಗತ್ಯವಿರುವುದಿಲ್ಲವೊ ಅಂತೆಯೇ ಕೃತಕ ಬುದ್ಧಿವಂತಿಕೆಯ ಕಲಿಕೆಯೂ ಸಹ ದಿನದಿಂದ ದಿನಕ್ಕೆ ಹೊಸ ವಿಷಯಗಳ ಬಗ್ಗೆಯೇ ವಿನಃ ಹಾದುಹೊದ ವಿಷಯಗಳ ಬಗ್ಗೆಯಾಗಿರುವುದಿಲ್ಲ. ಆದರೆ ಹತ್ತೊಂಬಂತ್ತರ ಮಗ್ಗಿಯೊಂದನ್ನು ಕಲಿಯುವ ಮಗು ಮುಂದೊಂದು ದಿನ ಅದನ್ನು ಮರೆಯಲೂಬಹುದು. ಆದರೆ ಕೃತಕ ಬುದ್ದಿವಂತಿಕೆಯಲ್ಲಿ ಈ ಮರೆಯುವ ಚಾಳಿಗೆ ಆಸ್ಪದವೇ ಇರುವುದಿಲ್ಲ.ಅಂದ ಮಾತ್ರಕ್ಕೆ ಕೃತಕ ಬುದ್ದಿವಂತಿಕೆ ಎಂಬುದು ನಮ್ಮ ದಿನನಿತ್ಯದ ಸಹವರ್ತಿಗಳಾದ ವಾಷಿಂಗ್ ಮಷೀನ್ ಅಥವಾ ಫ್ರಿಡ್ಜ್’ಗಳಂತೆ ಹೇಳಿದ ಕೆಲಸವನ್ನಷ್ಟೇ ಮಾಡಿ ಸುಮ್ಮನಿರುವ ಯಂತ್ರಗಳಲ್ಲ. ಬದಲಾಗಿ ಇವುಗಳಲ್ಲಿ ಸ್ವಚಿಂತನೆ, ಸರಿತಪ್ಪು ನಿರ್ಧರಿಸುವ ತಾರ್ಕಿಕ ಗುಣ ಒಟ್ಟುಗೂಡುತ್ತಾ ಸಾಗುತ್ತದೆ. ಅರ್ತಾಥ್ ಅಕ್ಷರಶಃ ಯಾಂತ್ರಿಕ ಮಾನವನನ್ನು ಅಥವಾ ಅದಕ್ಕಿಂತಲೂ ಮಿಗಿಲಾದ ಮಾಯೆಯೊಂದನ್ನು ಸೃಷ್ಟಿಸುವ ಗುರಿ ಈ ವಲಯದ್ದಾಗಿರುತ್ತದೆ. ಒಟ್ಟಿನಲ್ಲಿ ಇಡೀ ಭೂಮಿಯನ್ನೇ ತನ್ನ ಮುಷ್ಟಿಯಲ್ಲಿ  ಹಿಡಿಯಲೆತ್ನಿಸುತ್ತಿರುವ ಮಾನವ ಜೀವಿ ತನ್ನಂತೆಯೇ ಜೀವಭಾವದಿಂದ ಕೂಡಿದ ಯಾಂತ್ರಿಕ ವಿಸ್ಮಯವನ್ನು ಸೃಷ್ಟಿಸುವ ಸನಿಹದಲ್ಲಿದ್ದಾನೆ.

ಹೀಗೆ ಮುಂದೊಂದು ದಿನ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಎಂಬುದು ಮನೆಯ ಅಡುಗೆಯವರಾಗಿ, ಪ್ರೀತಿಯ ಪೋಷಕರರಾಗಿ, ಬಾಡಿಗಾರ್ಡ್’ಗಳಾಗಿ, ಚಾಲಕ ರಹಿತ ವಾಹನಗಳ ಚಾಲಕನಾಗಿ, ಗಡಿ ಕಾಯುವ ಸೈನಿಕರಾಗಿ, ವೈಜ್ಞಾನಿಕ ಗೊಂದಲಗಳ ನಿವಾರಕನಾಗಿ ಅಲ್ಲದೆ ಇಡೀ ಬ್ರಹ್ಮಾಂಡದ ಅನಂತತೆಯ ಉತ್ತರದಾಯಕನೂ ಆದರೆ ಸಂಶಯಪಡಬೇಕಿಲ್ಲ. ಆದರೆ ಇವೆಲ್ಲ ಮಾನವನ ಬಿಗಿಹಿಡಿತದ ಅಧೀನದಲ್ಲಿಯೇ ಜರುಗುವ ಕ್ರಿಯೆಗಳು ಎಂದುಕೊಂಡು ಯೋಚಿಸಿದರೆ ಮಾತ್ರ ನಮಗೆ ರೋಮಾಂಚನವೆನಿಸಬಹುದು, ಕೂತುಹಲಕಾರಿಯಾಗಬಹುದು. But there is a Catch! ಮೊದಲೇ ಹೇಳಿದಂತೆ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಎಂಬುದು ಎಂದಿಗೂ ಮಾನವನ ಅಧೀನದಲ್ಲೇ ಇರುವ ಯಂತ್ರಗಳು ಎಂದರೆ ಅದು ನಮ್ಮ ದಿನನಿತ್ಯ ಬಳಕೆಯ ಮಷೀನ್ ನಂತಾಗಿಬಿಡುತ್ತವೆ. ಬದಲಾಗಿ ಗಳಿಸಿಕೊಳ್ಳುವ ಕೃತಕ ಬುದ್ದಿಯ ಸಹಾಯದಿಂದ ಅವುಗಳಿಗೆ ಮಾನವನ ಬಿಗಿ ನಿಯಂತ್ರಣದ ಸರಪಳಿಯಿಂದ ಕಳಚಿಕೊಳ್ಳುವುದು ಕಷ್ಟದ ವಿಷಯವಾಗುವುದಿಲ್ಲ. ಆಗ ಉದ್ಭವಗೊಳ್ಳುವ ಯಾಂತ್ರಿಕ ಮಾನವ ನಿಜ ಮಾನವಂತೆಯೇ ಅರಿಷಡ್ವರ್ಗ ಗಳ ದಾಸನಾದರೂ ಚಕಿತರಾಗಬೇಕಿಲ್ಲ. Infact ನಿಜ ಮಾನವನಿಗಿಂತಲೂ ಮಿಗಿಲಾದ ಭಾವಗಳು ಅವುಗಳಲ್ಲಿ ಮೂಡಬಹುದು! ಆಸೆಯೇ ದುಃಖಕ್ಕೆ ಮೂಲ ಎಂಬುದು ಅಸಲಿ ಮಾನವನ ಗಾದೆಯಾದರೆ, ನಿರಾಸೆಯೇ ದುಃಖಕ್ಕೆ ಮೂಲ ಎಂಬುದು ಆ ಯಾಂತ್ರಿಕ ಮಾನವನ ಜೀವನ ಮಂತ್ರವಾಗಬಹುದು. ಹೀಗೆ ಮುಂದುವರೆದು ಈ ಭೂಮಿಯೇ ನನ್ನದು, ನಾನೇ ರಾಜ ಎಂಬ ಹೊಸತೊಂದು ಸಾಮ್ರಾಜ್ಯವೇ ಶುರುವಾಗುವ ಸಾಧ್ಯತೆಯನ್ನೂ ಅಲ್ಲಗೆಳೆಯಲಾಗುವುದಿಲ್ಲ. ಮೊದಲಬಾರಿ ಕೇಳುವವರಿಗೆ ಇದು ಹಾಸ್ಯಾಸ್ಪದ ವಾದವೆನಿಸಿದರೂ ಸಂಶೋಧಿಸುತ್ತಾ ಹೊರಟರೆ ಇಂತಹ ವಿಷಯಗಳೇ ಹೆಚ್ಚು ಹೆಚ್ಚಾಗಿ ನಮಗೆ ಕಾಣಸಿಗುತ್ತವೆ. ವಿಜ್ಞಾನಿ ಸ್ಟೀಫನ್ ಹಾಕಿಂಗ್, ಟೆಸ್ಲಾ ಕಂಪನಿಯ ಒಡೆಯ ಇಲೊನ್ ಮುಸ್ಕ್ ಅಲ್ಲದೆ ಮೈಕ್ರೋಸಾಫ್ಟ್ ದಿಗ್ಗಜ ಬಿಲ್ ಗೇಟ್ಸ್ ಕೂಡ ಹೇಳುವ ಮಾತುಗಳು ಅಂತಹದ್ದೇ. ಅದಾಗಲೇ ನ್ಯೂಕ್ಲಿಯರ್ ಬಾಂಬುಗಳ ತಯಾರಿಯ ನಿಯಂತ್ರಣದಂತೆಯೇ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್’ನಿಂದ ಮುಂಬರುವ ಅದೆಷ್ಟೋ ಕಂಟಕಗಳ ನಿವಾರಣೆಗೆ ಇಂದೇ ಕಾಯಿದೆ ಹಾಗು ವಿದೇಯಕಗಳನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೂಡಲೇ ಜಾರಿ ಮಾಡಬೇಕೆಂಬ ಕೂಗು ಸಹ ದೊಡ್ಡದಾಗುತ್ತಿದೆ. ಇಲ್ಲದಿದ್ದರೆ ಇಂದು ಗನ್ನು ಬಾಂಬುಗಳಿಂದ ಹೊಡೆದಾಡುವ ದೇಶಗಳು ಮುಂದೊಂದು ದಿನ ನಶಿಸಲಾಗದೆ ಇರುವ ಇಂತಹ ಹಲವಾರು ಯಂತ್ರಗಳ ದಾಳಿಗಳಿಗೆ ತುತ್ತಾಗಿ ಅಸ್ತಿತ್ವವೇ ಇಲ್ಲದ ಬರಡು ಭೂಮಿಗಳಾಗಬಹುದು ಎಂಬುದು ಸದ್ಯಕ್ಕೆ ಬಹುಜನರ ಅಭಿಮತ.

 

Facebook ಕಾಮೆಂಟ್ಸ್

ಲೇಖಕರ ಕುರಿತು

Sujith Kumar

ಹವ್ಯಾಸಿ ಬರಹಗಾರ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!