ಅಂಕಣ

ಡಸ್ಟ್ ಬೌಲ್ – 2

ಓದಿ: ‘ಡಸ್ಟ್ ಬೌಲ್’ – 1

ಮಾನವ ವಲಸೆ:

1935ರಲ್ಲಿ ಬಹಳಷ್ಟು ಕುಟುಂಬಗಳು ತಮ್ಮ ಕೃಷಿಭೂಮಿಯನ್ನು ತೊರೆದು ಬೇರೆ ಕೆಲಸ ಹುಡುಕಿಕೊಳ್ಳಲಾರಂಭಿಸಿದರು. ಬರಗಾಲ ಅಷ್ಟೇ ತೀವ್ರವಾಗಿತ್ತು. ಡಸ್ಟ್‍ಬೌಲ್‍ನ ತೀವ್ರತೆಯು ಟೆಕ್ಸಾಸ್, ಓಕ್ಲಹಾಮಾ ಹಾಗೂ ಗ್ರೇಟ್‍ಪ್ಲೇನ್ಸ್‍ನಿಂದ ಸುತ್ತಮುತ್ತಲ ಪ್ರದೇಶಕ್ಕೆ ಜನರನ್ನು ಭಾರಿಪ್ರಮಾಣದಲ್ಲಿ ಗುಳೆ ಎಬ್ಬಿಸಿತು. 500,000ಕ್ಕಿಂತ ಹೆಚ್ಚು ಅಮೆರಿಕನ್ನರು ವಸತಿಹೀನರಾದರು. ಒಂದೇ ಒಂದು ಬಿರುಗಾಳಿಯು 350 ಮನೆಗಳನ್ನು ನಾಶಗೊಳಿಸಿತು. ತೀವ್ರ ಬರಗಾಲ ಹಾಗೂ ಧೂಳಿನ ಬಿರುಗಾಳಿಯ ತೀವ್ರತೆಗೆ ಸಿಕ್ಕಿದ ಹಲವಾರು ಕುಟುಂಬಗಳ ಸ್ವತ್ತು ಬ್ಯಾಂಕ್ ಪಾಲಾದವು. ಇನ್ನೆಷ್ಟೋ ಕುಟುಂಬಗಳು ತಮ್ಮ ನಿವಾಸ ಬಿಟ್ಟು ಬೇರೆ ಕೆಲಸ ಹುಡುಕಿಕೊಳ್ಳದೇ ಗತ್ಯಂತರವಿರದ ಸ್ಥಿತಿ ತಲಪಿದ್ದರು. ಬಹುತೇಕ ಅಮೆರಿಕನ್ನರು ಕೆಲಸ ಹುಡುಕಿಕೊಂಡು ಪಶ್ಚಿಮದ ಕಡೆ ಮುಖ ಮಾಡಿದ್ದರು. ತಮ್ಮ ಕೆಲವೇ ಕೆಲವು ಸಾಮಾನುಗಳನ್ನು ಪ್ಯಾಕ್ ಮಾಡಿ ಪಶ್ಚಿಮಕ್ಕೆ ಕೆಲಸ ಹುಡುಕಿ ಹೊರಟ ಕುಟುಂಬಗಳೂ ಇದ್ದವು. ಗ್ರೇಟ್‍ಪ್ಲೇನ್ಸ್‍ನ ಇನ್ನೆಷ್ಟೋ ಕುಟುಂಬಗಳು ವಿಶೇಷವಾಗಿ ಕ್ಯಾನ್ಸಾಸ್ ಹಾಗೂ ಓಕ್ಲಹಾಮಾದವರೂ ಧೂಳಿನ ನ್ಯೂಮೋನಿಯಾ ಹಾಗೂ ಪೋಷಕಾಂಶದ ಕೊರತೆಯಿಂದ ಕಾಯಿಲೆಬಿದ್ದು ಇನ್ನಿಲ್ಲವಾದರು.

ಅಮೆರಿಕದ ಇತಿಹಾಸದಲ್ಲೇ ಅತಿಚಿಕ್ಕ ಅವಧಿಯಲ್ಲಿ ಅತಿಹೆಚ್ಚು ವಲಸೆ ಆದದ್ದು ಡಸ್ಟ್‍ಬೌಲ್ ಅವಧಿಯಲ್ಲಿ. 1930-40ರ ಅವಧಿಯಲ್ಲಿ ಸರಿಸುಮಾರು 3.5 ಮಿಲಿಯನ್ ಜನರು ಗ್ರೇಟ್‍ಪ್ಲೇನ್ಸ್‍ನ ರಾಜ್ಯಗಳಿಂದ ಗುಳೆ ಹೋದರು. ಇದರಲ್ಲಿ ಕ್ಯಾಲಿಫೋರ್ನಿಯಾಗೆ ಎಷ್ಟು ಮಂದಿ ಹೋದರೆನ್ನುವ ಲೆಕ್ಕ ಇಲ್ಲ. ಊಹೆ ಪ್ರಕಾರ ಸುಮಾರು 86,000 ಜನರು ಕ್ಯಾಲಿಫೋರ್ನಿಯಾಗೆ ಹೋದರು. ಈ ಸಂಖ್ಯೆಯು 1849ರಲ್ಲಿನ ‘ಗೋಲ್ಡ್‍ರಶ್’ ವೇಳೆಗೆ ಆದ ವಲಸೆಸಂಖ್ಯೆಗಿಂತ ಹೆಚ್ಚು ಎನ್ನುತ್ತದೆ ವರದಿ. ತಮ್ಮ ಸ್ವತ್ತಿನ ಸ್ವ-ಭಾರೆ ಹಕ್ಕು ರದ್ದಾಗಿ ಸ್ವತ್ತು ಕಳೆದುಕೊಂಡವರು ಹಾಗೂ ಕೃಷಿಭೂಮಿ ಬಂಜರಾದ ಕುಟುಂಬಗಳು ಗುಳೆ ಹೋಗಲೇಬೇಕಾದ ಅನಿವಾರ್ಯತೆ ಎದುರಾಗಿತ್ತು. ಓಕ್ಲಹಾಮಾ, ಅರ್ಕನ್‍ಸಾಸ್, ಮಿಸ್ಸೋರಿ, ಲೋವಾ, ನೆಬ್ರಾಸ್ಕಾ, ಕ್ಯಾನ್‍ಸಾಸ್, ಟೆಕ್ಸಾಸ್, ಕೊಲರೆಡೋ ಹಾಗೂ ನ್ಯೂ ಮೆಕ್ಸಿಕೋದಲ್ಲಿ ನೆಲೆಸಿದ ಕೃಷಿಕುಟುಂಬಗಳಿಂದ ವಲಸೆ ಬಂದವರನ್ನು ‘ಓಕೀಸ್’ ‘ಆರ್ಕಿಸ್’ ‘ಟೆಕ್ಸಿಸ್’ ಎಂದೇ ಹೆಸರು ಪಡೆದರು. ‘ಓಕೀಸ್’ ‘ಆರ್ಕಿಸ್’ ಈ ಪದಗಳು 30ರ ದಶಕದಲ್ಲಿ ಎಲ್ಲವನ್ನೂ ಕಳೆದುಕೊಂಡು ತೀವ್ರ ಆರ್ಥಿಕ ಮುಗ್ಗಟ್ಟಿನ ವೇಳೆಗೆ ಬದುಕಲು ಹರಸಾಹಸ ಪಟ್ಟವರಿಗಾಗಿ ಇದ್ದ ಮಾದರಿಪದವೆನಿಸಿಬಿಟ್ಟಿತ್ತು. ಆದ್ದಾಗ್ಯೂ ವಲಸೆಗಾರರು ತುಂಬಾ ದೂರ ವಲಸೆ ಹೋಗಲಿಲ್ಲ. ತಮ್ಮ ಕೃಷಿ ನೆಲೆಯ ಅಕ್ಕಪಕ್ಕದ ನಗರ, ರಾಜ್ಯಗಳಿಗೆ ಮಾತ್ರ ವಲಸೆಗೊಂಡರು. ದೂರ ಎಷ್ಟೇ ಇರಲಿ, ಡಸ್ಟ್ ಬೌಲ್ ಒಂದು ನಗರಪ್ರದೇಶದಲ್ಲಿ ವಲಸೆಗಾರರ ಮತ್ತು ಸ್ಥಳೀಯ ನಿವಾಸಿಗಳ ಸಮಸಂಖ್ಯೆಯ ಅನುಪಾತವನ್ನು ಸೃಷ್ಟಿಸಿತ್ತು. ಅಷ್ಟೇ ಸಂಖ್ಯೆಯ ಕೃಷಿಕರು ತಮ್ಮ ಕೃಷಿಭೂಮಿಯನ್ನು ತೊರೆಯುವಂತೆ ಮಾಡಿತ್ತು.

ವಲಸೆ ವೈಶಿಷ್ಟ್ಯಗಳು:

ಜೇಮ್ಸ್. ಎನ್. ಗ್ರೆಗೋರಿ ಸೆನ್ಸಸ್ ಬ್ಯೂರೋ ಸ್ಟೇಟನಿಕ್ಸ್ ಹಾಗೂ ಸರ್ವೆ ಇವೆರಡನ್ನೂ ಪರೀಕ್ಷಿಸಿ ನೋಡಿದಾಗ ಅಂಕಿಅಂಶಗಳಲ್ಲಿ ಅಚ್ಚರಿಯ ವಿಚಾರ ಬೆಳಕಿಗೆ ಬಂದಿತು. ಉದಾಹರಣೆಗೆ 1939ರಲ್ಲಿ ಬ್ಯೂರೋ ಆಫ್ ಅಗ್ರಿಕಲ್ಚರ್ ಇಕನಾಮಿಕ್ಸ್ ಸರ್ವೆ ನಡೆಸಿದ ಸಮೀಕ್ಷೆಯಲ್ಲಿ 1939ರ ದಶಕದಲ್ಲಿ ಕ್ಯಾಲಿಫೋರ್ನಿಯಾಗೆ ವಲಸೆ ಬಂದ 116,000 ಕುಟುಂಬದ ಸರ್ವೆ ನಡೆಸಿತು. ಶೇ. 43ರಷ್ಟು ನೈಋತ್ಯ ಭಾಗದವರು ಮಾತ್ರ ವಲಸೆ ಬರುವುದಕ್ಕೆ ಪೂರ್ವ ಕೃಷಿ ಕೆಲಸ ಮಾಡುತ್ತಿದ್ದರು. ವಲಸೆಗಾರರಲ್ಲಿ ಮೂರರಲ್ಲಿ ಒಂದರಷ್ಟು ಭಾಗದ ಜನ ವೃತ್ತಿಪರರು ಇಲ್ಲವೇ ಬಿಳಿಕಾಲರ್ ನೌಕರಿಯವರು. ನಿರಾಶಾದಾಯಕ ಆರ್ಥಿಕ ಸನ್ನಿವೇಶ ಕೇವಲ ರೈತರನ್ನು ಮಾತ್ರ ವಲಸೆಗೆ ಈಡುಮಾಡಿರಲಿಲ್ಲ. ಉಳಿದವರೂ ಕ್ಯಾಲಿಫೋರ್ನಿಯಾಗೆ ವಲಸೆ ಬಂದಿದ್ದರು. ಈ ವೇಳೆಯಲ್ಲೇ ಬಹಳಷ್ಟು ಶಿಕ್ಷಕರು, ವಕೀಲರು ಹಾಗೂ ಸಣ್ಣಪುಟ್ಟ ಉದ್ದಿಮೆ ಮಾಡಿಕೊಂಡವರೂ ಸಹ ಪಶ್ಚಿಮಕ್ಕೆ ತಮ್ಮ ಕುಟುಂಬದೊಡನೆ ವಲಸೆ ಬಂದಿದ್ದರು. ತೀವ್ರ ಆರ್ಥಿಕ ಮುಗ್ಗಟ್ಟಿನ (ಗ್ರೇಟ್ ಡಿಪ್ರೆಶನ್) ಬಳಿಕ ಹಲವು ಕುಟುಂಬಗಳು ತಮ್ಮ ಮೂಲನೆಲೆಗೆ ವಾಪಸ್ಸಾದವು. ಆದರೆ ಇನ್ನೂ ಎಷ್ಟೋ ಕುಟುಂಬಗಳು ಹೊಸಬದುಕಿಗೆ ಒಗ್ಗಿಕೊಂಡರು. ವಾಸ್ತವದಲ್ಲಿ ಕ್ಯಾಲಿಫೋರ್ನಿಯಾದ ಜನಸಂಖ್ಯೆಯ 8ರಲ್ಲಿ ಒಂದು ಕುಟುಂಬ ‘ಒಕಿ’ ವಂಶದವರಾಗಿದ್ದಾರೆ.

ಅಮೆರಿಕ ಸರ್ಕಾರ ಕೈಗೊಂಡ ಕ್ರಮಗಳು:

1933ರಲ್ಲಿ ಅಧ್ಯಕ್ಷ ಫ್ರಾಂಕ್ಲಿನ್. ಡಿ. ರೂಸ್‍ವೆಲ್ಟ್ ಅವರ ಅವಧಿಯ ಮೊದಲ 100 ದಿನಗಳಲ್ಲಿ ಮಣ್ಣಿನ ಸಂರಕ್ಷಣೆಗೂ, ಪ್ರಾಕೃತಿಕ ಸಮತೋಲನವನ್ನು ಪುನಃ ಸ್ಥಾಪಿಸುವ ನಿಟ್ಟಿನಲ್ಲಿ ಸರಕಾರದ ಕಾರ್ಯಯೋಜನೆಗಳು ರೂಪುಗೊಂಡವು. ಇಂಟೀರಿಯರ್ ಸೆಕ್ರೆಟರಿ ಹೆರಾಲ್ಡ್ ಎಲ್ ಈಕ್ಸ್ ಅವರು 1933ರಲ್ಲಿ ಹೆಗ್ ಹಮ್ಮಂಡ್ ಬೆನ್ನೆಟ್ ಇವರಡಿಯಲ್ಲಿ ‘Soil Erosion Services ಸ್ಥಾಪಿಸಿ ಇದನ್ನೂ 1935ರಲ್ಲಿ ಕೃಷಿ ಇಲಾಖೆಗೆ ವರ್ಗಾಯಿಸಿ, ‘ಮಣ್ಣು ಸಂರಕ್ಷಣಾ ಸೇವೆ’ (Soil Conservation Service) ಎಂದು ಮರುನಾಮಕರಣ ಮಾಡಲಾಯಿತು. ಇತ್ತೀಚೆಗೆ ಇದನ್ನು ‘ನೈಸರ್ಗಿಕ ಸಂಪನ್ಮೂಲ ಸಂರಕ್ಷಣಾ ಸೇವೆ’ (Natural Resources Conservation Services (NRCS)) ಎಂದು ಪುನರ್ ನಾಮಕರಣ ಮಾಡಲಾಗಿದೆ.

ನ್ಯೂಡೀಲ್ ಕಾರ್ಯಕ್ರಮದ ಒಂದು ಭಾಗವಾಗಿ ಕಾಂಗ್ರೆಸ್ 1936ರಲ್ಲಿ Soil Conservation & Domestic Allotment Act’  ಜಾರಿಮಾಡಿತು. ಇದರ ಪ್ರಕಾರ ಕೃಷಿಭೂಮಿಯ ಮಾಲೀಕರು ಸರಕಾರದ ಸಬ್ಸಿಡಿಯನ್ನು ತಮ್ಮಲ್ಲಿ ಕೆಲಸಮಾಡುವ ಕಾರ್ಮಿಕರಿಗೂ ಹಂಚಬೇಕಾಯ್ತು. ಈ ಕಾಯದೆಯಡಿ ಉತ್ಪಾದನೆಯ ನಿರ್ವಹಣೆ ಹಾಗೂ ಆದಾಯ ಬೆಂಬಲದ ಕ್ರಮವಾಗಿ ಲಾಭಪಾವತಿ ಮುಂದುವರಿಸಲ್ಪಟ್ಟಿತು. ಆದರೆ ಈಗ ನೇರವಾಗಿ ಕಾಂಗ್ರೆಸ್ ವಿತರಣೆ ವ್ಯವಸ್ಥೆಯಡಿ ಹಣಕಾಸು ವಿತರಣೆ ಆಗಲ್ಪಟ್ಟಿತು. ಹಾಗೂ ಇದಕ್ಕೆ ಮಣ್ಣು ಸಂರಕ್ಷಣಾ ಕ್ರಮ ಎಂದು ಸಮರ್ಥನೆ ಒದಗಿತು. ಈ ಕಾಯದೆಯಿಂದ ಸಮಾನತೆಯ ಗುರಿ ಕೃಷಿ ಉತ್ಪನ್ನದ ಹಾಗೂ ರೈತರು ಕೊಂಡುಕೊಳ್ಳುವ ವಸ್ತುಗಳ ಸಮಾನತೆಯ ಬೆಲೆಯಿಂದ ಕೃಷಿ ಹಾಗೂ ಕೃಷಿಯೇತರ ಜನಸಂಖ್ಯೆಯ ಆದಾಯ ಸಮಾನತೆಗೆ ರೂಪಾಂತರಗೊಂಡಿತು. 1900-1940ರ ಅವಧಿಯ ಕೃಷಿಯ ಮೇಲೆ ಅವಲಂಬಿಸಿದ ಕುಟುಂಬದ ತಲಾ ಆದಾಯದ ಕೊಳ್ಳುವ ಸಾಮಥ್ರ್ಯವು ಕೃಷಿಯ ಮೇಲೆ ಅವಲಂಬಿಸದೆ ವ್ಯಕ್ತಿಯ ತಲಾ ಆದಾಯದ ಕೊಳ್ಳುವ ಸಾಮಥ್ರ್ಯವು ಹೇಗೆ ಇತ್ತೋ ಅದೇ ಸಮಾನತೆಯ ಗುರಿಯನ್ನು ಪುನಃ ಸ್ಥಾಪಿಸುವುದು ಈ ಕಾಯದೆಯ ಗುರಿಯಾಗಿತ್ತು.

ಬೆಲೆ ನಿಯಂತ್ರಣಕ್ಕಾಗಿ 6 ಮಿಲಿಯನ್ ಹಂದಿಗಳನ್ನು ಕಡಿದ ಬಳಿಕ ಹೆಚ್ಚುವರಿಯಾಗಿ ‘ಫೆಡರಲ್ ಸರ್‍ಪ್ಲಸ್ ರಿಲೀಫ್ ಕಾರ್ಪೋರೇಶನ್’ ರೂಪಿಸಲಾಯಿತು. ಹಂದಿ ಕಡಿದ ಕಾರಣ ಇಷ್ಟೆ; ಹಂದಿಗಳನ್ನು ಕಡಿದು ಮಾಂಸವನ್ನು ಪ್ಯಾಕ್ ಮಾಡಿ ಹಸಿದವರಿಗೂ, ಬಡವರಿಗೂ ಹಂಚಲಾಯಿತು. ಅಧ್ಯಕ್ಷ ರೂಸ್‍ವೆಲ್ಟ್ ಆ ಸಂದರ್ಭದಲ್ಲಿ ಹೇಳಿದ ಹಾಗೆ “ಮಾಂಸವನ್ನು ಖರೀದಿಸಿದ ಮಿಲಿಯನ್‍ಗಟ್ಟಲೇ ನಾಗರಿಕರಿಗೆ ನಾನು ಒಂದು ಸಂಗತಿಯನ್ನು ಸ್ಪಷ್ಟಪಡಿಸಬೇಕಾಗಿದೆ. ಕಳೆದ ವರುಷ ದೇಶ ತೀವ್ರ ಬರಗಾಲದಿಂದ ತತ್ತರಿಸಿತು. ಸರ್ಕಾರದ ಕಾರ್ಯಕ್ರಮ ಇಲ್ಲದಿದ್ದರೆ, 1933-34ರಲ್ಲೂ ಹಳೆಯ ಆದೇಶವನ್ನೇ ಪಾಲಿಸಿದರೆ, ಅಮೆರಿಕದ ಜಾನುವಾರು ಪ್ರದೇಶಗಳ ಹಾಗೂ ಬೆಳೆ ಪ್ರದೇಶಗಳ ಬರಗಾಲದ ಪರಿಣಾಮವು ಮಾರುಕಟ್ಟೆಯಲ್ಲಿ ಕಾಣ ಸಿ, ಅದು ಬಡಕಲು ದೇಹದ ಜಾನುವಾರುಗಳು, ಎಳೆಯ ಹಂದಿಗಳ ಸಾವಿನಿಂದ ತುಂಬಿರುತ್ತಿತ್ತು. ಅದೇ ಹಳೆಯ ಆದೇಶವೇ ಇದ್ದಿದ್ದರೆ ಇಂದು ನಾವು ಯಾವ ಕೊರತೆ ಅನುಭವಿಸಿರುವೆವೋ, ಅದಕ್ಕಿಂತ ಹೆಚ್ಚಿನ ಕೊರತೆಯನ್ನು ಕಾಣಬೇಕಾಗಿತ್ತು. ನಮ್ಮ ಕಾರ್ಯಕ್ರಮದಿಂದ ಮಿಲಿಯನ್‍ಗಟ್ಟಲೇ ಜಾನುವಾರುಗಳನ್ನು ಉಳಿಸಲಾಗಿದೆ. ಅವುಗಳು ಇನ್ನೂ ಅದೇ ಮಿತಿಯಲ್ಲಿವೆ. ಉಳಿದ ಮಿಲಿಯನ್‍ಗಟ್ಟಲೆ ಜನರನ್ನು ರಕ್ಷಿಸಲು ತಮ್ಮನ್ನೂ ಈ ದೇಶಕ್ಕಾಗಿ ಒಪ್ಪಿಸಿಕೊಳ್ಳುವುದಕ್ಕೆ ಸಿದ್ಧವಾಗಿವೆ.”

ಈ  ಕೃಷಿ ಉತ್ಪನ್ನವನ್ನು ಪರಿಹಾರದ ಸಂಘಟನೆಯ ಕಡೆ ತಿರುಗಿಸಿತು. ಸೇಬು, ಅವರೆ, ಸಂರಕ್ಷಿಸಿದ ದನದ ಮಾಂಸ, ಹಿಟ್ಟು, ಹಂದಿಮಾಂಸ ಉತ್ಪನ್ನಗಳನ್ನು ಸ್ಥಳೀಯ ಪರಿಹಾರದ ವಾಹಿನಿಗಳ ಮೂಲಕ ವಿತರಿಸಿತು. ಹತ್ತಿ ಸರಕುಗಳು ಸಿದ್ಧ ಉಡುಪುಗಳ ರೂಪದಲ್ಲಿ ಆ ಬಳಿಕ ಸೇರಿಸಲ್ಪಟ್ಟಿತು.

1935ರಲ್ಲಿ ಫೆಡರಲ್ ಸರ್ಕಾರವು ಬರಗಾಲ ಪರಿಹಾರಸೇವೆಯನ್ನು ಪರಿಹಾರ ಚಟುವಟಿಕೆಗಳನ್ನು ಒಗ್ಗೂಡಿಸಲು ರೂಪಿಸಿತು. ತುರ್ತುಪರಿಸ್ಥಿತಿ ಎಂದು ಗುರುತಿಸಿದ ಪ್ರದೇಶದಿಂದ 14ರಿಂದ 20 ಡಾಲರ್ ಕೊಟ್ಟು ದೇಶದ ಉಳಿದ ಕಡೆಯ ಬರ ಪರಿಹಾರ ಸೇವೆ (Drought relief service)ಗೆ ಜಾನುವಾರುಗಳನ್ನು ಖರೀದಿಸಿ ತರಲಾಯಿತು. ಶೇ. 50ಕ್ಕಿಂತಲೂ ಹೆಚ್ಚಿನ ಜಾನುವಾರುಗಳು ಮಾನವ ಬಳಕೆಗೆ ಯೋಗ್ಯವಲ್ಲದ್ದೆಂದು ಪರಿಗಣ ಸಲ್ಪಟ್ಟದನ್ನು ಕೊಲ್ಲಲಾಯಿತು. ಉಳಿದ ಜಾನುವಾರುಗಳನ್ನು ಫೆಡರಲ್ ಸರ್‍ಪ್ಲಸ್ ರಿಲೀಫ್ ಕಾರ್ಪೊರೇಶನ್‍ಗೆ ರಾಷ್ಟ್ರದಾದ್ಯಂತ ಕುಟುಂಬಗಳಿಗೆ ಆಹಾರದ ರೂಪದಲ್ಲಿ ವಿತರಿಸಲಾಯಿತು. ರೈತರಿಗೆ ತಮ್ಮ ಜಾನುವಾರುಗಳನ್ನು ನೀಡುವದು ಕಷ್ಟವೆನಿಸಿದರೂ ಈ ರೀತಿ ಜಾನುವಾರುಗಳನ್ನು ಕಡಿಯುವ ಕಾರ್ಯಕ್ರಮದಿಂದ ದಿವಾಳಿಕೋರತನದಿಂದ ಅವರನ್ನು ರಕ್ಷಿಸಿಕೊಳ್ಳಲು ಸಾಧ್ಯವಾಯಿತು. “ಸರಕಾರದ ಜಾನುವಾರು ಖರೀದಿ ಕಾರ್ಯಕ್ರಮವು ಹಲವಾರು ರೈತರಿಗೆ ವರದಾನವಾಯಿತು. ಯಾಕೆಂದರೆ ತಮ್ಮ ಜಾನುವಾರುಗಳನ್ನು ಸಾಕುವುದಕ್ಕೂ ಅವರಿಗೆ ಸಾಧ್ಯವಿರಲಿಲ್ಲ. ಸರಕಾರವು ಸ್ಥಳೀಯ ಮಾರುಕಟ್ಟೆಗಿಂತಲೂ ಹೆಚ್ಚಿನ ಬೆಲೆಯನ್ನು ಅವರಿಗೆ ನೀಡುತ್ತಿತ್ತು.”

ಅಧ್ಯಕ್ಷ ರೂಸ್‍ವೆಲ್ಟ್ ಆಡಳಿತವು ಸಿವಿಲಿಯನ್ ಕನ್ಸ್‍ರ್ವೇಶನ್ ಕಾರ್ಪ್‍ಗೆ, ಕೆನಡಾದಿಂದ ಅಬಿಲೇನ್, ಟೆಕ್ಸಾಸ್‍ಗೆ ಗಾಳಿಯನ್ನು, ಮಣ್ಣಿನ ತೇವವನ್ನು ಹಿಡಿದಿಡಲು ಹಾಗೂ ಮಣ್ಣನ್ನು ಹಿಡಿದಿಡಲು 200 ಮಿಲಿಯನ್‍ಗಿಂತಲೂ ಹೆಚ್ಚಿನ ಮರವನ್ನು ನೆಡುವಂತೆ ಸೂಚಿಸಿತು. ಆಡಳಿತಯಂತ್ರವು ಮಣ್ಣಿನ ಸಂರಕ್ಷಣೆ ಹಾಗೂ ಜಾಗೃತಿಯ (ಸವಕಳಿ ತಡೆಗಟ್ಟುವ ತಂತ್ರ) ಜೊತೆಯಲ್ಲೇ ಬೆಳೆಸರದಿ (crop rotation) ಪದ್ಧತಿ, ಪಟ್ಟಿ ಕೃಷಿ ಪದ್ಧತಿ (strip farming) ಬಾಹ್ಯ ಉಳುಮೆ (contour plowing) ಟೆರೇಸ್ ಪದ್ಧತಿ ಹಾಗೂ ಇನ್ನೂ ಇತರೆ ಸುಧಾರಿತ ಕೃಷಿಪದ್ಧತಿಗಳನ್ನು ಜಾರಿಗೊಳಿಸಿತು.

1937ರ ಹೊತ್ತಿಗೆ ಫೆಡರಲ್ ಸರ್ಕಾರವು ‘ಡಸ್ಟ್ ಬೌಲ್’ಗೆ ಸಿಲುಕಿದ್ದ ರೈತರಿಗೆ ಮಣ್ಣು ಸಂರಕ್ಷಣೆ ಮಾಡುವುದಕ್ಕೆ ಸಾಧ್ಯವಾಗುವಂತಹ ಉಳುಮೆ ಹಾಗೂ ನಾಟಿ ಪದ್ಧತಿಯನ್ನೇ ಬಳಸಲು ತೀವ್ರವಾದ ಪ್ರಚಾರವನ್ನು ಮಾಡತೊಡಗಿತು. ಹೀಗೆ ಸೂಚಿಸಿದ ಪದ್ಧತಿಯಲ್ಲಿ ಒಂದನ್ನಾದರೂ ರೂಢಿಗೆ ತರಲು ಪ್ರೋತ್ಸಾಹದ ರೂಪದಲ್ಲಿ ಎಕರೆಗೆ ಎಂದಷ್ಟು ಡಾಲರನ್ನು ರೈತರಿಗೆ ನೀಡಿತು. 1938ರ ವೇಳೆಗೆ ಮಣ್ಣು ಸಂರಕ್ಷಣೆಗಾಗಿ ಮಾಡಿದ ಪ್ರಯತ್ನಗಳಿಂದ ಮಣ್ಣು ಗಾಳಿಗೆ ಹಾರಿಹೋಗುವುದು ಶೇ. 65ರಷ್ಟು ನಿಂತಿತು. ಆದರೂ ಬೆಳೆ ಚೆನ್ನಾಗಿ ಒದಗಿ ಬರಲಿಲ್ಲ. 1939 ಅಂದರೆ ಧೂಳು ಹಾಗೂ ಕೆಸರಿನ ದಶಕದ ಬಳಿಕ ಬರಗಾಲ ಅಂತ್ಯ ಕಂಡಿತು. ಆ ಪ್ರದೇಶದಲ್ಲಿ ಮಳೆ ಪುನಃ ಆರಂಭಗೊಂಡಿತು.

ಬರಗಾಲದ ಕೊನೆಯಲ್ಲಿ ಕಠಿಣದಿನಗಳಲ್ಲಿ ತೆಗೆದುಕೊಂಡ ಕ್ರಮಗಳು ಅಮೆರಿಕದ ರೈತರು ಹಾಗೂ ಫೆಡರಲ್ ಸರ್ಕಾರದ ನಡುವೆ ಉತ್ತಮ ಬಾಂಧವ್ಯವನ್ನು ರೂಪಿಸಿತು. 1935ರ ಪ್ರೆಸಿಡೆಂಟ್‍ರವರ ಬರ ಸಮಿತಿ (Drought Committee) ವರದಿಯು ಸರಕಾರವು ಕೃಷಿಗೆ 1934ರಿಂದ 1935ರ ನಡುವಿನ ಅವಧಿಯಲ್ಲಿ ನೀಡಿದ ನೆರವಿನ ಕ್ರಮವನ್ನು ಆಗಿನ ಸನ್ನಿವೇಶದ ಬಗ್ಗೆ ಚರ್ಚೆ, ಪರಿಹಾರಕ್ರಮ, ಸಂಘಟನೆ, ಹಣಕಾಸು ನೆರವು, ಕಾರ್ಯಾಚರಣೆ ಹಾಗೂ ಸರಕಾರದ ನೆರವಿನ ಪರಿಣಾಮಗಳನ್ನು ಒಳಗೊಂಡಿತ್ತು. ಅಂಕಿ-ಅಂಶಗಳು ಸಹ ಈ ವರದಿಯಲ್ಲಿ ಇತ್ತು.

ಸಾಹಿತ್ಯ-ಕಲೆಗಳಿಗೆ ಪ್ರೇರಕವಾದ ಡಸ್ಟ್ ಬೌಲ್:

ಡಸ್ಟ ಬೌಲ್ ಕಲೆ ಹಾಗೂ ಸಾಹಿತ್ಯ ಸೃಷ್ಟಿಗೂ ಪ್ರೇರಣೆ ನೀಡಿತು. ಫೋಟೋಗ್ರಾಫರ್‍ಗಳು, ಸಂಗೀತಗಾರರು, ಲೇಖಕರು ಡಸ್ಟಬೌಲ್ ಘಟನೆಯನ್ನು ದಾಖಲಿಸಿದರು. ಗ್ರೇಟ್ ಡಿಪ್ರೆಶನ್ ವೇಳೆಗೆ ಅಮೆರಿಕದ ಫೆಡರಲ್ ಎಜೆನ್ಸಿಗಳು ಇವರನ್ನೆಲ್ಲ ಬಾಡಿಗೆ ಪಡೆದರು. ಫಾರ್ಮ ಸೆಕ್ಯುರಿಟಿ ಅಡ್‍ಮಿನಿಸ್ಟ್ರೇಶನ್ ಈ ಸಂದರ್ಭವನ್ನು ದಾಖಲಿಸಲು ಬಹಳಷ್ಟು ಫೋಟೊಗ್ರಾಫರ್‍ಗಳನ್ನು ಬಾಡಿಗೆ ಪಡೆದರು. ಇದರಿಂದ ಕಲಾವಿದರಿಗೆ ತುಂಬ ಅನುಕೂಲವಾಯ್ತು. ಡೊರೊಥೆಲ್ ರೇಂಜ್ ಇವರಲ್ಲೊಬ್ಬರು. ಈಕೆ ಧೂಳಿನ ಬಿರುಗಾಳಿಯ ವಲಸೆ ಕುಟುಂಬದವರ ವಿಶಿಷ್ಟ ಫೋಟೊ ಸೆರೆಹಿಡಿದರು. ‘ಡಿಸ್ಟಿಟ್ಯೂಟ್ ಪಿಕ್ಚರ್ ಇನ್ ಕ್ಯಾಲಿಫೋರ್ನಿಯಾ’ ಅವರ ಪ್ರಸಿದ್ಧ ಫೋಟೋ. ಇದು ‘ಡಸ್ಟ ಬೌಲ್’ನ ಭೀಕರತೆಯ ಬಗ್ಗೆ ದೇಶದ ತುಂಬ ಎಚ್ಚರಿಸುವಂತಿತ್ತು.

ಇದಲ್ಲದೇ, ಸ್ವತಂತ್ರ ಕಲಾವಿದರೂ ಸಾಕಷ್ಟು ವಿಚಾರ ದಾಖಲಿಸಿದರು. ಇದರಲ್ಲಿ ಅಮೆರಿಕದ ಕಾದಂಬರಿಕಾರ ಜಾನ್ ಸ್ಟೆನ್‍ಬೆಕ್‍ರವರ ಕಾದಂಬರಿ ‘ಆಫ್ ಮೈಸ್ & ಮೆನ್’ (1937), ‘ದ ಗ್ರೇಫ್ಸ್ ಆಫ್ ವ್ರ್ಯಾಥ್’ (1939) ಪ್ರಸಿದ್ಧವಾದದ್ದು. ಜಾನಪದ ಸಂಗೀತಗಾರ ವೂಡಿಗೂಥ್ರಿ ಕೂಡ ಈ ಘಟನೆಯಿಂದ ಪ್ರೇರಿತನಾದವನೆ.

ಡೆಸ್ಟಿಟ್ಯೂಟ್ಸ್ ಪೀ ಪಿಕ್ಕರ‍್ಸ್ ಇನ್ ಕ್ಯಾಲಿಫೋರ್ನಿಯಾ,  ಮದರ್ ಆಫ್ ಸೆವೆನ್ ಚಿಲ್ಡ್ರನ್ಸ್’ನಲ್ಲಿ  ಫ್ಲೋರೆನ್ಸ್ ಓನ್ಸ್ ಥಾಂಪ್‌ಸನ್, ಫೋಟೊ: ಡೊರೋಥಿಯಾ ಲಂಗೆ.

ವಲಸೆ ಬಂದವರು ತಮ್ಮೊಡನೆ ಆ ಪ್ರದೇಶದ ಸಂಗೀತವನ್ನೂ ತಂದರು. ಓಕ್ಲಹಾಮಾದ ವಲಸೆಗಾರರು ದಕ್ಷಿಣದ ಗ್ರಾಮೀಣಭಾಗದವರಾಗಿದ್ದು ಕ್ಯಾಲಿಫೋರ್ನಿಯಾದಲ್ಲಿ ಹಳ್ಳಿಯ ಸಂಗೀತವನ್ನು ಬಿತ್ತಿದರು. ಇಂದಿನ “ಬೇಕರ್ಸ್ ಫೀಲ್ಡ್ ಸೌಂಡ್”  ಈ ಸಂಗೀತವನ್ನು  ಹೋಲುತ್ತದೆ. ವಲಸೆಗಾರರು ಬಿತ್ತಿದ ಸಂಗೀತವೇ ಮುಂದೆ ನವೀಕರಣಗೊಂಡಿತು. ಇವರ ಸಂಗೀತ ಡಾನ್ಸ್ ಹಾಲ್‍ನ್ನು ಹಾಗೂ ಲಾಸ್‍ಎಂಜಲಿಸ್‍ಅನ್ನು ಸ್ಫೂರ್ತಿಗೊಳಿಸಿತು. ಬೆಳಗಿಸಿತು.

ದೀರ್ಘಕಾಲೀನ ಆರ್ಥಿಕ ಪರಿಣಾಮಗಳು :

ಬಹಳಷ್ಟು ಪ್ರದೇಶದಲ್ಲಿ 75%ಕ್ಕೂ ಹೆಚ್ಚು ಮೇಲ್ಮಣ್ಣು 1930ರ ದಶಕದಲ್ಲಿ ಹಾರಿಹೋಗಿತ್ತು. ಭೂಮಿಯ ಸವಕಳಿಯ ಪರಿಮಾಣದಲ್ಲಿ ವ್ಯತ್ಯಾಸವಿತ್ತು. ಭೂಸವೆತದಿಂದ ಆರ್ಥಿಕ ಪರಿಸ್ಥಿತಿಯ ಮೇಲೆ ಚಿಕ್ಕ ಅವಧಿಗೆ ಆದ ಪರಿಣಾಮದ ಜೊತೆಯಲ್ಲೇ ಡಸ್ಟ ಬೌಲ್‍ನಿಂದ ದೀರ್ಘಅವಧಿ ಪರಿಣಾಮವೂ ಉಂಟಾಯಿತು.

1940ರ ಹೊತ್ತಿಗೆ ದೊಡ್ಡ ಪ್ರಮಾಣದಲ್ಲಿ ಉಂಟಾದ ಮಣ್ಣಿನ ಸವಕಳಿ ದೇಶದ ಕೃಷಿಭೂಮಿಯ ಬೆಲೆಯಲ್ಲಿ ದೊಡ್ಡಮಟ್ಟದ ಇಳಿತ ಕಂಡಿತು. ಕೃಷಿಭೂಮಿಯ ಪ್ರತಿಎಕರೆಯ ಬೆಲೆ ಅತಿಹೆಚ್ಚು ಸವಕಳಿ ಪ್ರದೇಶದಲ್ಲಿ ಶೇ. 28 ಹಾಗೂ ಮಧ್ಯಮಟ್ಟದ ಸವಕಳಿ ಪ್ರದೇಶದಲ್ಲಿ ಶೇ. 17ರಷ್ಟು ಇಳಿತ ಕಂಡಿತು. ಅತಿಹೆಚ್ಚು ಸವಕಳಿ ಇರುವ ಭೂಮಿಯ ಬೆಲೆ ತುಂಬಾ ಬದಲಾಗಿತ್ತು. ದೀರ್ಘಅವಧಿಗೂ ಸಹ ಕೃಷಿಭೂಮಿಯ ಬೆಲೆಯಲ್ಲಿ ಚೇತರಿಕೆ ಕಾಣಲಿಲ್ಲ. ಶೇ. 25ಕ್ಕಿಂತ ಕಡಮೆ ಮೂಲಕೃಷಿ ನಷ್ಟ ಭರ್ತಿಯಾಯ್ತಷ್ಟೆ. ಹೆಚ್ಚು ಸವಕಳಿ ಆದ ಪ್ರದೇಶದಲ್ಲಿ ಜನಸಂಖ್ಯೆ ಕಡಮೆಯಾಗುವುದರ ಮೂಲಕ ಆರ್ಥಿಕನಷ್ಟ ಹೊಂದಿಕೊಂಡಿತು. 1930 ಹಾಗೂ 1950ರ ದಶಕದುದ್ದಕ್ಕೂ ಅದೇ ಪುನರಾವರ್ತನೆಯಾಯ್ತು.

ರೈತರು ಹೆಚ್ಚು ಸವಕಳಿ ಆದ ಪ್ರದೇಶಕ್ಕೆ ಹೊಂದಿಕೊಳ್ಳುವ ಬೆಳೆಯನ್ನು ಬೆಳೆಯುವುದಕ್ಕೆ ವಿಫಲರಾದ ಕಾರಣ ಆರ್ಥಿಕ ಪರಿಣಾಮ ಹಾಗೇ ಮುಂದುವರಿಯಿತು. ಮೇಲ್ಮಣ್ಣಿನ ಪ್ರಮಾಣ ಕಡಮೆಯಾಗಿತ್ತು. ಭೂಮಿ ಬೆಳೆ ಬೆಳೆಯುವದಕ್ಕಿಂತ ಪಶುಸಂಗೋಪನೆಗೇ ಅನುಕೂಲವಾಗಿತ್ತು. ತೀವ್ರ ಆರ್ಥಿಕ ಮುಗ್ಗಟ್ಟು ಹಾಗೂ 50ರ ದಶಕದಲ್ಲಿ ಹೆಚ್ಚು ಸವಕಳಿ ಆದ ಪ್ರದೇಶವು ಕೃಷಿ ಚಟುವಟಿಕೆಯಿಂದ ದೂರವಿರುವ ಕಾರಣ ಉತ್ಪಾದನೆ ಕಡಮೆಯಾಯ್ತು.

ಹೆಚ್ಚು ಉತ್ಪಾದಕ ಕೃಷಿಉತ್ಪನ್ನದ ಕೆಲವು ವೈಫಲ್ಯವು ಒಂದೋ ಭೂಮಿ ಬಳಕೆಯ ಬದಲಾವಣೆಯ ಲಾಭವನ್ನು ನಿರ್ಲಕ್ಷಿಸಿದ್ದೂ ಕಾರಣವಿರಬಹುದು. ಇನ್ನೊಂದು ಆಭಾಗದ ಬ್ಯಾಂಕ್‍ಗಳು ದೇಶದ ಇತರ ಭಾಗದ ಬ್ಯಾಂಕ್‍ಗಳಿಗಿಂತ ಹೆಚ್ಚು ನಷ್ಟ ಅನುಭವಿಸಿದ್ದು, ರೈತರಿಗೆ ಕೃಷಿ ಉತ್ಪಾದನೆಗೆ ಬೇಕಾದ ವಸ್ತು ಕೊಂಡುಕೊಳ್ಳುವುದಕ್ಕೂ ನಗದಿನ ಕೊರತೆ ಎದುರಾಯ್ತು. ಹಾಗೆಯೇ ಭೂಮಿಯನ್ನು ಕೃಷಿಗಿಂತ ಪಶುಸಂಗೋಪನೆಗೆ ಬಳಸುವುದರಿಂದ ಬರುವ ಲಾಭದ ಪ್ರಮಾಣ ಕಡಮೆ ಇದ್ದು, ಆ ವೇಳೆಗೆ ಅಂತಹ ನಿರ್ಧಾರಕ್ಕೆ ಬರುವುದು ರೈತರಿಗೆ ಅಸಾಧ್ಯವಾಗಿದ್ದೂ ಕಾರಣವಿರಬಹುದು.

ಇತಿಹಾಸವೆಂದರೆ ಯಶಸ್ಸು, ದುರಂತ ಇವೆರಡರ ದಾಖಲೆ; ಯಶಸ್ಸು ಸ್ಫೂರ್ತಿಯನ್ನು ನೀಡಿದರೆ, ದುರಂತ ಪಾಠವನ್ನು ಕಲಿಸುತ್ತದೆ. ಈ ದುರಂತ ಏನಾದರೂ ಪಾಠ ಕಲಿಸಬಹುದೇ? ಯಾಕೆಂದರೆ ‘ಇತಿಹಾಸ ಮರುಕಳಿಸುತ್ತದೆ’ ಎನ್ನುತ್ತಾರೆ. ಅದು ಏನೇ ಇರಲಿ, ನಮ್ಮಲ್ಲೂ ಸತತ ಬರಗಾಲ ಕಾಡುತ್ತಿದೆ. ಗುಳೆ ಹೋಗುವುದು ಸಾಮಾನ್ಯ ದೃಶ್ಯವಾಗಿದೆ. ಬಹುಷಃ ಅಮೆರಿಕದ ಈ ಇತಿಹಾಸ ನಮಗೊಂದು ಪಾಠ ಕಲಿಸಬಹುದೆ? ಪಾಠ ಕಲಿಸಿದರೆ, ನಾವು ಕಲಿತರೆ ಆಗುವ ಅನಾಹುತದಿಂದ ತಪ್ಪಿಸಿಕೊಳ್ಳಬಹುದು.

Facebook ಕಾಮೆಂಟ್ಸ್

ಲೇಖಕರ ಕುರಿತು

Saroja Prabhakar

‘ಉತ್ಥಾನ ‘ಪತ್ರಿಕೆಯ ಕಾರ್ಯಕರ್ತೆ. ಓದು, ಬರವಣಿಗೆ, ಸಂಗೀತ ಹವ್ಯಾಸ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!