ಹಾಲಿವುಡ್ ಚಿತ್ರರಂಗದ ಪ್ರಸಿದ್ಧ ನಿರ್ದೇಶಕ ಕ್ರಿಸ್ಟೋಫರ್ ನೋಲನ್ ನಿರ್ದೇಶಿಸಿದ ‘ಇಂಟಸ್ಟೆಲ್ಲರ್’ ಸೈನ್ಸ್ ಫಿಕ್ಷನ್ ಥೀಮ್ ಬಳಸಿ ಮಾಡಿದ ಸಿನೆಮಾ. 2014ರಲ್ಲಿ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದ ಸಿನೆಮಾ ಇದು. ಕಥಾನಾಯಕ ನಾಸಾ ಪೈಲಟ್. ಪತ್ನಿಯನ್ನು ಕಳೆದುಕೊಂಡಿದ್ದ ಆತ ತನ್ನ ಮಾವ ಹಾಗೂ ಮಕ್ಕಳೊಡನೆ ಒಂದು ಫಾರ್ಮ್ ಮಾಡಿಕೊಂಡು ಅಲ್ಲಿ ವಾಸಿಸುತ್ತಿರುತ್ತಾನೆ. ಬೆಳೆಗಳಿಗೆ ರೋಗ ಬಂದು ಮಾನವನ ಉಳಿವಿಗೇ ಆತಂಕ ಬಂದಿರುತ್ತದೆ. ಕಥಾನಾಯಕ ಒಮ್ಮೆ ನಗರಕ್ಕೆ ಹೋಗಿ ಹಳ್ಳಿಗೆ ಬರುವ ಹೊತ್ತಿಗೆ ಆತನ ಮನೆಯ ಸುತ್ತಮುತ್ತ ಧೂಳಿನ ಬಿರುಗಾಳಿಯೇ ಎದ್ದಿರುತ್ತದೆ. ಮನೆಯೆಲ್ಲ ಧೂಳಿನಿಂದ ಆವೃತವಾಗಿರುತ್ತದೆ. ಕಥೆ ಮುಂದೆ ಕಥಾನಾಯಕ ಬೇರೆ ಗ್ರಹಕ್ಕೆ ಹೋಗುವ ದಿಕ್ಕಿಗೆ ಸಾಗುತ್ತದೆ. ಈ ಧೂಳಿನ ದೃಶ್ಯಕ್ಕೆ ಸ್ಫೂರ್ತಿ ಎಲ್ಲಿ ದೊರಕಿರಬಹುದು ಎಂದು ಯೋಚಿಸಿದಾಗ ಮನಸ್ಸು ಅದಕ್ಕೂ, ‘ಡಸ್ಟ್’ಬೌಲ್’ ಎನ್ನುವ ಕೃಷಿದುರಂತದ ಇತಿಹಾಸಕ್ಕೂ ತಳುಕು ಹಾಕುತ್ತದೆ.
ಕೃಷಿಯೆಂದರೆ ಪ್ರಕೃತಿಯೊಡನೆ ಪ್ರೀತಿ, ಸೆಣಸಾಟ, ಮಣ್ಣಿನೊಡನೆ ಬಾಂಧವ್ಯ. ಕೃಷಿಕರಿಗೆ ಮಣ್ಣನ್ನೂ, ಪ್ರಕೃತಿಯನ್ನೂ ತಿಳಿದುಕೊಳ್ಳುವುದು ಅನಿವಾರ್ಯ. ಪ್ರಕೃತಿ ತನ್ನನ್ನು ಶೋಷಿಸಿದವರ ವಿರುದ್ಧವೇ ಮುನಿದೆದ್ದು ತೋರಿಸಿದ ಅವತಾರವೆ ಡಸ್ಟ್ ಬೌಲ್.
‘ಡರ್ಟಿ ಥರ್ಟಿಸ್’ ಎಂದೂ ಹೆಸರು ಪಡೆದ ಡಸ್ಟ್ ಬೌಲ್ ಧೂಳಿನ ಬಿರುಗಾಳಿ. 1930ರ ದಶಕದಲ್ಲಿ ಅಮೆರಿಕ ಹಾಗೂ ಕೆನಡಿಯನ್ ಹುಲ್ಲುಗಾವಲಿನ ಪ್ರಕೃತಿಯನ್ನೂ, ಕೃಷಿಯನ್ನೂ ಬುಡಮೇಲು ಮಾಡಿದ ದುರಂತವಿದು. ತೀವ್ರ ಬರಗಾಲದಲ್ಲಿ ಗಾಳಿಯಿಂದ ಉಂಟಾಗುವ ಭೂಸವೆತವನ್ನು ತಡೆಗಟ್ಟಲು ಒಣಭೂಮಿ ಕೃಷಿಯನ್ನು (ಐಯೋಲಿಯನ್ ಪ್ರೊಸೆಸ್) ಬಳಸಲಾಗುತ್ತದೆ. ಅದನ್ನು ಸರಿಯಾದ ಕ್ರಮದಲ್ಲಿ ಬಳಸದ ಕಾರಣ ಸಂಭವಿಸಿದ ದುರ್ಘಟನೆ ಇದಾಗಿದೆ. 30ರ ದಶಕಕ್ಕೂ ಮೊದಲಿನ ದಶಕದಲ್ಲಿ ಗ್ರೇಟ್‍ಪ್ಲೇನ್ ಪ್ರದೇಶದಲ್ಲಿ ಇನ್ನೂ ಕೃಷಿ ಮಾಡಿರದ ಭೂಮಿಯ ಮೇಲ್ಮಣ್ಣನ್ನು ವಿಸ್ತೃತವಾಗಿ, ಆಳವಾಗಿ ಉಳುಮೆ ಮಾಡಿದ ಕಾರಣ ಆ ಪ್ರದೇಶದ ಆಳವಾಗಿ ಬೇರೂರಿದ್ದ ಹುಲ್ಲು ಪಲ್ಲಟನಗೊಂಡಿತ್ತು. ಶುಷ್ಕ ಹುಲ್ಲುಗಾವಲನ್ನು (ವರ್ಷಕ್ಕೆ 10ಇಂಚಿಗಿಂತ ಹೆಚ್ಚು ಮಳೆ ಬೀಳದ ಪ್ರದೇಶವೂ ಅಲ್ಲಿತ್ತು) ಕೃಷಿಭೂಮಿಯನ್ನಾಗಿ ಬದಲಾಯಿಸುವ ಉತ್ಸಾಹದಲ್ಲಿ ಚಿಕ್ಕ ಗ್ಯಾಸೋಲೈನ್ ಟ್ರ್ಯಾಕ್ಟರ್ ಬಳಸಿ ಕೃಷಿಯನ್ನು ವಿಸ್ತ್ರತ ಯಾಂತ್ರೀಕರಣಕ್ಕೊಳಪಡಿಸಲಾಗಿತ್ತು. ಕುಯೊಕ್ಲು ಯಂತ್ರದ ಬಳಕೆಯನ್ನೂ ಮಾಡಲಾಗಿತ್ತು.
1930ರ ದಶಕದ ಬರಗಾಲದ ವೇಳೆಗೆ ಆಧಾರವಿಲ್ಲದೆ ಬುಡಮೇಲಾದ ಮಣ್ಣು ಹರಡಿಕೊಂಡಿತ್ತು. ಆ ಪ್ರದೇಶದಲ್ಲಿ ಬೀಸುವ ಗಾಳಿಯೊಡನೆ ಸೇರಿಕೊಂಡು ಮೋಡದೊಳಗೆ ಸೇರಿ ಆಗಸವನ್ನೇ ಕಪ್ಪುಮಾಡಿತ್ತು. ಈ ಅಲೆಯಲೆಯಾಗಿ ಏಳುವ ಧೂಳಿನ ಗಾಳಿಯನ್ನು ಕರಿಸುರುಳಿ ಎಂದು ಹೆಸರಿಸಲಾಗಿತ್ತು. ಅಲೆಯಲೆಯಾಗಿ ಏಳುವ ಧೂಳಿನ ಗಾಳಿ ನ್ಯೂಯಾರ್ಕ, ವಾಶಿಂಗ್ಟನ್ ಡಿ.ಸಿ.ಯ ಪೂರ್ವ ಕರಾವಳಿಯನ್ನು ತಲಪಿ, ಆ ಭಾಗದಲ್ಲಿ ಮೀಟರಿನಷ್ಟು ದೂರದ ದೃಶ್ಯವನ್ನೂ ನೋಡಲಾರದಷ್ಟು ಧೂಳು ಪಸರಿಸಿಕೊಳ್ಳುತ್ತಿತ್ತು.
ಅಂದು 1935, ಎಪ್ರಿಲ್ 14ರ ರವಿವಾರ. ಸುರುಳಿ ನ್ಯೂಯಾರ್ಕ ನಗರವನ್ನು ತಲಪಿತ್ತು. ಓಕ್ಲಹಾಮಾ ಬೋಸೈ ನಗರದಲ್ಲಿ ‘ಅಸೋಸಿಯೇಟೆಡ್ ಪ್ರೆಸ್’ನ ವರದಿಗಾರ ರಾಬರ್ಟ್ ಈ ಗೈಗರ್ ಈ ದೃಶ್ಯಕ್ಕೆ ಸಾಕ್ಷಿಯಾಗಿದ್ದ. ಈ ಘಟನೆಯನ್ನು ಸಂಪಾದನೆ ಮಾಡಿದವ ಅದೇ ಪತ್ರಿಕೆಯ ಕ್ಯಾನ್ಸಾಸ್ ಸಿಟಿಯ ಸುದ್ದಿ ಸಂಪಾದಕ ಎಡ್ವರ್ಡ್ ಸ್ಟಾನ್ಲೆ ಇದಕ್ಕೆ ‘ಡಸ್ಟ್ ಬೌಲ್’ ಎಂದು ಹೆಸರಿಟ್ಟ.
ಡಸ್ಟ್ ಬೌಲ್ ನಡೆದ ಪ್ರದೇಶದ ಬರಗಾಲ ಹಾಗೂ ಭೂಸವೆತ ಸುಮಾರು 100,000,000 ಎಕರೆ (400,000 ಕಿ.ಮಿ2)ನಷ್ಟು ಪ್ರಾಂತ್ಯಕ್ಕೆ ತನ್ನ ಪ್ರಭಾವ ತೋರಿಸಿತ್ತು. ಟೆಕ್ಸಾಸ್ ಹಾಗೂ ಓಕ್ಲಹಾಮಾದ ಚಾಚಿದ ಪ್ರದೇಶ ಹಾಗು ನ್ಯೂಮೆಕ್ಸಿಕೋ, ಕೊಲರೆಡೋ ಹಾಗೂ ಕ್ಯಾನ್ಸಾಸ್‍ನ ಹೊಂದಿಕೊಂಡ ಪ್ರದೇಶವನ್ನು ಅದು ತಟ್ಟಿತ್ತು. ಡಸ್ಟ್ ಬೌಲ್ ಲಕ್ಷಗಟ್ಟಲೇ ಕುಟುಂಬ ತಮ್ಮ ತಾಯ್ನೆಲವನ್ನು ತೊರೆಯುವಂತೆ ಮಾಡಿತ್ತು. ಈ ರೀತಿ ತಾಯ್ನೆಲ ತೊರೆದವರನ್ನು ‘ಓಕೀಸ್’ ಎಂದೇ ಕರೆಯಲಾಗಿತ್ತು. ಇವರಲ್ಲಿ ಬಹುತೇಕ ಮಂದಿ ಓಕ್ಲಹಾಮಾಕ್ಕಿಂತ ಈ ರಾಜ್ಯದಲ್ಲಿ ತೀವ್ರ ಆರ್ಥಿಕ ಮುಗ್ಗಟ್ಟಿ(ಗ್ರೇಟ್ ಡಿಪ್ರೆಶನ್)ನ ದಿನಗಳಲ್ಲೂ ಆರ್ಥಿಕಪರಿಸ್ಥಿತಿ ಚೆನ್ನಾಗಿದ್ದದ್ದೇ ಇದಕ್ಕೆ ಕಾರಣವಾಗಿತ್ತು. ಲೇಖಕ ಬೌನ್ ಸ್ಟೇನ್‍ಬೆಕ್ ಈ ಜನರ ಮೇಲೆ ‘ಗ್ರೇಪ್ಸ್ ಆಫ್ ವ್ರ್ಯಾಥ್’ ಹಾಗೂ ‘ಆಫ್ ಮೈಸ್ & ಮೆನ್’ ಎಂಬ ಎರಡು ಕೃತಿಗಳನ್ನು ಬರೆದಿದ್ದಾರೆ.

೧೯೩೬ ರಲ್ಲಿ ಸಿಮ್ಮೆರಾನ್ ಕೌಂಟಿ, ಓಕ್ಲಹಾಮಾದಲ್ಲಿನ ಧೂಳಿನ ಬಿರುಗಾಳಿ ಸಂದರ್ಭದಲ್ಲಿ ರೈತ ತನ್ನ ಇಬ್ಬರು ಮಕ್ಕಳೊಂದಿಗೆ.
ಕಾರಣಗಳು:
ಅಮೆರಿಕ ಹಾಗೂ ಯೂರೋಪ್ ಗ್ರೇಟ್ ಪ್ಲೇನ್ಸ್ ಶೋಧಿಸಿದ ಆರಂಭದ ದಿನಗಳವು. ಈ ಪ್ರದೇಶವು ಯೂರೋಪಿಯನ್ ಶೈಲಿಯ ಕೃಷಿಗೆ ಹೊಂದುವುದಿಲ್ಲವೆಂದೇ ಭಾವಿಸಲಾಗಿತ್ತು. ಅದಕ್ಕೂ ಹೆಚ್ಚಾಗಿ ಈ ಭಾಗವನ್ನು ಅಮೆರಿಕದ ‘ಮಹಾನ್ ಮರುಭೂಮಿ’ ಎಂದೇ ಕರೆಯಲಾಗಿತ್ತು. ಮೇಲ್ಮೈ ನೀರಿನ, ಮರಗಳ ಕೊರತೆ ತೀವ್ರವಾಗಿದ್ದು, ಈ ಪ್ರದೇಶ ಕೃಷಿ ಹಾಗೂ ಜನವಸತಿಗೆ ಯೋಗ್ಯವಿಲ್ಲ ಎಂದೇ ಭಾವಿಸಲಾಗಿತ್ತು.
1862ರ ‘ಹೋಮ್‍ಸ್ಟೆಡ್ ಆ್ಯಕ್ಟ್’ ಅಡಿಯಲ್ಲಿ ಈ ಭಾಗದ ವಾಸಕ್ಕೆ ಉತ್ತೇಜನ ನೀಡಲಾಯಿತು. ಅದೇವೇಳೆಗೆ, ಅರ್ಥಾತ್ 1865ರಲ್ಲಿ ನಾಗರಿಕ ಯುದ್ಧ ಕೊನೆಗಂಡಿತ್ತು. ಹಾಗೂ 1869ರಲ್ಲಿ ‘ಮೊದಲ ಟ್ರಾನ್ಸ್ ಕಾಂಟಿನೆಂಟಲ್ ರೇಲ್‍ರೋಡ್’ ಪೂರ್ತಿಯಾಗಿತ್ತು. ಪರಿಣಾಮವಾಗಿ ವಲಸೆಗಾರರು ಅಲೆಯಂತೆ ಬಂದು ಈ ಭಾಗದಲ್ಲಿ ನೆಲೆಗೊಂಡರು. ಉಳುಮೆಯೂ ಗಣನೀಯವಾಗಿ ಏರಿತು. ‘ಉಳುಮೆ ಮಳೆಯನ್ನು ಹಿಂಬಾಲಿಸುವುದಂತೆ’. ಹಾಗೆಯೇ ಈ ಭಾಗದಲ್ಲಿ ಕೆಲಕಾಲ ವಾಡಿಕೆ ಮೀರಿ ತೇವ ನೆಲೆಗೊಂಡು ಆ ಭಾಗದಲ್ಲಿ ನೆಲೆಸಿದವರೂ, ಫೆಡರಲ್ ಸರ್ಕಾರವೂ ‘ಪರವಾಗಿಲ್ಲ, ಈ ಪ್ರದೇಶದ ವಾತಾವರಣ ಶಾಶ್ವತವಾಗಿ ಬದಲಾಗಿಬಿಟ್ಟಿದೆ’ ಎಂದೇ ಭಾವಿಸಿದರು. ಆರಂಭದ ಕೃಷಿ ಪ್ರಯತ್ನವಾಗಿ ದನಕರುಗಳನ್ನು ಮೇಯಿಸಲು ಈ ಭಾಗವನ್ನು ಬಳಸಲಾಯಿತು. 1886ರಲ್ಲಿ ಇಲ್ಲಿ ಕಾಡಿದ ತೀವ್ರ ಛಳಿಯು ದನಕರುಗಳ ಮೇಲಾಯಿತು. 1890ರಲ್ಲಿ ಸಣ್ಣ ಬರಗಾಲವೂ ಕಾಡಿತು. ದನಕರುಗಳನ್ನು ಹೆಚ್ಚುಹೆಚ್ಚು ಮೇಯಿಸುವ ಮೂಲಕ ಕೃಷಿಭೂಮಿಯ ವಿಸ್ತಾರವನ್ನು ಹೆಚ್ಚಿಸಲಾಯಿತು.
ಅತಿ ಹೆಚ್ಚು ಶುಷ್ಕಭೂಮಿಯನ್ನು ಉಳುಮೆ ಮಾಡುವ ಸವಾಲು ಮುಂದಿರುವುದನ್ನು ಗಮನಿಸಿದ ಯುನೈಟೆಡ್‍ಸ್ಟೇಟ್ಸ್ ಸರಕಾರವು ‘ಹೋಮ್ ಸ್ಟೆಡ್ ಆ್ಯಕ್ಟ್’ ಅಡಿಯಲ್ಲಿ 160 ಎಕರೆ ಭೂಮಿಯನ್ನು ಮಾರಾಟಕ್ಕೆ ನೀಡಿತು. ಮತ್ತು ಕಿಂಕೆಡ್ ಆ್ಯಡ್ 1904ರ ಅಡಿಯಲ್ಲಿ ಪಶ್ಚಿಮ ನೆಬ್ರಾಸ್ಕಾದಲ್ಲಿನ 604 ಎಕರೆ ಭೂಮಿಗೆ ಗೃಹನಿವೇಶನಕ್ಕೆ ಸಮ್ಮತಿಸಿತು. 1909ರ ‘ಎನ್‍ಲಾಜ್ರ್ಡ್ ಹೋಮ್‍ಸ್ಟೆಡ್ ಆಕ್ಟ್’ ಅಡಿಯಲ್ಲಿ ಗ್ರೇಟ್ ಪ್ಲೇನ್ಸ್‍ನಲ್ಲಿನ ಯಾವುದೇ 320 ಪ್ರದೇಶಕ್ಕೆ ಸಮ್ಮತಿಸಿತು. ಯೂರೋಪಿಯನ್ ವಲಸೆಗಾರರು 20ನೇ ಶತಮಾನದ ಆರಂಭದಲ್ಲಿ ಅಲೆಯಂತೆ ಬಂದು ಈ ಪ್ರದೇಶದಲ್ಲಿ ನೆಲೆಗೊಂಡರು.
ಇದೇ ಸಂದರ್ಭದಲ್ಲೇ ಅಲ್ಲಿನ ವಾತಾವರಣ ಮೊದಲಿನಂತಿರದೇ, ತೇವಗೊಂಡು, ಶಾಶ್ವತ ಕೃಷಿ ಮಾಡಬಹುದು ಎನ್ನುವ ನಂಬಿಕೆಯನ್ನು ಹುಟ್ಟಿಸಿತ್ತು. ಅರೆಶುಷ್ಕ ಭೂಮಿ ಕೃಷಿಗೆ ಯೋಗ್ಯವೆನ್ನುವ ಪೂರ್ವಪ್ರಚಲಿತ ನಂಬಿಕೆಯ ಜೊತೆ, ಯಾಂತ್ರಿಕ ಉಳುಮೆ ಹಾಗೂ ಕಟಾವಿನಂತಹ ತಾಂತ್ರಿಕ ಅಭಿವೃದ್ಧಿ ಕೃಷಿಗೆ ಉತ್ತೇಜನ ನೀಡಿತು.
ರಷ್ಯಾ ಕ್ರಾಂತಿ ಹಾಗೂ ಮೊದಲ ವಿಶ್ವಯುದ್ಧ ಕೃಷಿಉತ್ಪನ್ನದ ಬೆಲೆಯನ್ನು ಹೆಚ್ಚಿಸಿತ್ತು. ಇದು ರೈತರು ಹೆಚ್ಚು ಭೂಮಿಯನ್ನು ಕೃಷಿಗೆ ಒಳಪಡಿಸುವುದಕ್ಕೆ ಪ್ರಚೋದನೆಯಾಯ್ತು. ಉದಾಹರಣೆಗೆ ಪೂರ್ವ ನ್ಯೂ ಮೆಕ್ಸಿಕೋ ಹಾಗೂ ವಾಯುವ್ಯ ಟೆಕ್ಸಾಸ್ ಪ್ರದೇಶದ ಎಲ್‍ಲ್ಯಾನೋ ಈಸ್ಟಕಾಡೋದಲ್ಲಿ 1900ರಿಂದ 1920ರ ನಡುವೆ ಕೃಷಿಭೂಮಿ ದ್ವಿಗುಣಗೊಂಡರೆ, ಮುಂದೆ 1925-30ರ ನಡುವೆ ಮೂರುಪಟ್ಟು ಹೆಚ್ಚಳವಾಗಿತ್ತು. ರೈತರು ಆಗ ಬಳಸುತ್ತಿದ್ದ ಕೃಷಿಪದ್ಧತಿ ಪ್ರಕೃತಿವಿರುದ್ಧವಾಗಿದ್ದು, ದೊಡ್ಡ ಪ್ರಮಾಣದಲ್ಲಿ ಭೂಸವೆತಕ್ಕೆ ಕಾರಣವಾಗುತ್ತಿತ್ತು. ಮಣ್ಣನ್ನು ಕೃಷಿಗೆ ಯೋಗ್ಯವಾಗುವಂತೆ ಮಾಡಲು ಬಳಸಿದ ವಿಧಾನ ಹಾಗೂ ಆಳ ಉಳುಮೆಯಿಂದಾಗಿ ಮಣ್ಣು ಹಾಗೂ ತೇವವನ್ನು ಹಿಡಿದಿಟ್ಟುಕೊಂಡು ಬರಗಾಲದ ವೇಳೆಗೆ ನೆರವಾಗುವ ಹುಲ್ಲು ಸ್ಥಾನಪಲ್ಲಟಗೊಂಡಿತ್ತು.
ಹತ್ತಿ ಬೆಳೆಗಾರರು ಚಳಿಗಾಲದಲ್ಲಿ ಹೈ ಪ್ಲೇನ್ಸ್ ಪ್ರದೇಶದಲ್ಲಿ ತೀವ್ರ ಗಾಳಿಯ ವೇಳೆಗೆ ಭೂಮಿಯನ್ನು ಹಾಗೆ ಬಿಟ್ಟು ಬಿಡುತ್ತಿದ್ದರು. ಹತ್ತಿಗಿಡ ನೆಡುವುದಕ್ಕೂ ಪೂರ್ವದಲ್ಲಿ ಕಳೆಯನ್ನು ನಿಯಂತ್ರಿಸಲು ಕೊಯ್ದ ಪೈರಿನ ಕೂಳೆಗಳನ್ನು ಸುಡುತ್ತಿದ್ದರು. ತನ್ಮೂಲಕ ಮಣ್ಣಿನ ಮೇಲ್ಮೈನ ಹಸಿರು ಹಾಗೂ ಜೈವಿಕ ಪೋಷಕಾಂಶಗಳು ನಾಶವಾಗುತ್ತಿತ್ತು.
30ರ ದಶಕದಲ್ಲಿ ಗ್ರೇಟ್‍ಪ್ಲೇನ್ಸ್ ಪ್ರದೇಶದಲ್ಲಿ ತೀವ್ರ ಬರಗಾಲ ಕಾಣ ಸಿಕೊಂಡಾಗ ಆ ವೇಳೆಗೆ ರೂಢಿಯಲ್ಲಿದ್ದ ಕೃಷಿಪದ್ಧತಿಯಿಂದಾಗಿ ಉಂಟಾಗುತ್ತಿದ್ದ ಭೂಸವೆತದ ಅಪಾಯದ ಪರಿಣಾಮ ತಲೆದೋರಿತು. ಬರಗಾಲದಿಂದ ಮೇಲ್ಮೈನ ಮಣ್ಣು ಒಣಗಿತು. ದಿನಗಳೆದಂತೆ ಇದು ಪುಡಿಯ ರೂಪ ತಾಳಿತು. ಅದಾಗಲೇ ಆ ಭಾಗದಲ್ಲಿ ಸಾಕಷ್ಟು ಹುಲ್ಲು ಇಲ್ಲದಿರುವುದು ದುರಂತಕ್ಕೆ ನಾಂದಿಯಾಯ್ತು. ಬಯಲಿನಲ್ಲಿ ಎದ್ದ ತೀವ್ರ ಗಾಳಿಯು ಧೂಳಿನ ಬಿರುಗಾಳಿಯಾಗಿ ಪರಿವರ್ತಿತವಾಗಿ ಡಸ್ಟ್ ಬೌಲ್ ಅವಧಿಗೆ ನಾಂದಿಯಾಯ್ತು.
ಡಸ್ಟ್ ಬೌಲ್ ಹೆಚ್ಚಾಗಿ ಕೇಂದ್ರಿತವಾದದ್ದು ಹೈ ಪ್ಲೇನ್ಸ್‍ನ 100ನೇ ಮೆರಿಡಿಯನ್‍ನ ಪಶ್ಚಿಮದಲ್ಲಿ. ಸಮತಟ್ಟಾದ ಮೈದಾನದ ರೀತಿಯಲ್ಲಿ ಇದ್ದ ಧೂಳಿನಗಾಳಿ ಮುಂದೆ ಉತ್ತರದಲ್ಲಿ ಉರುಳುವ ರೂಪಕ್ಕೆ ಬದಲಾಗಿ ಚಪ್ಪಟೆಯಾಗಿ ಸಾಗಿತು. ಧೂಳಿನ ಗಾಳಿಯು ಪೂರ್ವದಲ್ಲಿ ಎಲ್‍ಲ್ಯಾನೋ ಈಸ್ಟಕಾಡೋ ಪ್ರದೇಶದಲ್ಲಿ 2500 ಅಡಿ ವಿಸ್ತ್ರೀರ್ಣದಲ್ಲಿದ್ದು, ರಾಕಿ ಪರ್ವತದ ತಳದಲ್ಲಿ 6000 ಅಡಿಗೆ ಅದರ ಉನ್ನತ ಸ್ಥಿತಿ ಇತ್ತು. ಆ ಪ್ರದೇಶವು ಅರೆಶುಷ್ಕವಾಗಿದ್ದು ವಾರ್ಷಿಕವಾಗಿ 20 ಇಂಚಿ(510 ಮಿ.ಮಿ.)ನಷ್ಟು ಕಡಮೆ ಮಳೆ ಬೀಳುವ ಪ್ರದೇಶ. ಇಂತಹ ಪ್ರದೇಶದಲ್ಲಿ ಅತಿಚಿಕ್ಕ ಹುಲ್ಲನ್ನು ಬೆಳೆಯಬಹುದಾಗಿತ್ತು. ಈ ಪ್ರದೇಶವೂ ವಿಸ್ತೃತವಾದ ಬರಗಾಲವನ್ನು ಎದುರಿಸುತ್ತಿದ್ದು, ಅದೇ ವೇಳೆಗೆ ತೇವವನ್ನು ಹೊಂದಿದ್ದರೂ ಆ ಸ್ಥಿತಿ ಒಂದೇ ರೀತಿ ಇರುತ್ತಿರಲಿಲ್ಲ. ತೇವ ಇದ್ದ ವರ್ಷ ಫಲವತ್ತಾದ ಮಣ್ಣಿನಿಂದ ಮಡಿಲ ತುಂಬ ಕೃಷಿ ಉತ್ಪನ್ನ ದೊರೆತರೆ, ಬರಗಾಲ ಇದ್ದ ವರ್ಷ ಇಡೀ ಬೆಳೆಯೇ ನಾಶವಾಗಿ ಹೋಗುತ್ತಿತ್ತು. ತೀವ್ರ ಗಾಳಿಯೂ ಈ ಪ್ರದೇಶವನ್ನು ಬಾಧಿಸುತ್ತಿತ್ತು.
ಬರಗಾಲ ಮತ್ತು ಧೂಳಿನ ಬಿರುಗಾಳಿ:
ಗ್ರೇಟ್‍ಪ್ಲೇನ್ಸ್‍ನ ನಿರಂತರ ವಸತಿಗೆ ಹಾಗೂ ಕೃಷಿಗೆ ಪ್ರೇರೇಪಿಸಿದ ತೇವದ ಅವಧಿ 1930ರ ವೇಳೆಗೆ ಅಂತ್ಯಗೊಂಡಿತು. 1930ನೇ ವರುಷ ನಿರಂತರ ತೀವ್ರ ಬರಗಾಲ ಕಾಡಲಾರಂಭಿಸಿತು. ಬೆಳೆ ವಿಫಲಗೊಂಡಿತು. ಉಳುಮೆ ಮಾಡಿದ ಭೂಮಿ ಗಾಳಿಯಿಂದಾಗುವ ಸವೆತಕ್ಕೂ ತೆರೆದುಕೊಂಡಿತು. ಗ್ರೇಟ್ ಪ್ಲೇನ್ಸ್‍ನ ನುಣ್ಣಗಿನ ಮಣ್ಣು ಸುಲಭವಾಗಿ ಸವೆತಕ್ಕೆ ಒಳಗಾಗಿ ಭೂಖಂಡದ ಗಾಳಿಗೆ ಸಿಕ್ಕು ಪೂರ್ವ ದಿಕ್ಕಿಗೆ ರವಾನೆ ಆಗಲ್ಪಟ್ಟಿತು.
ಅಂದು 1933ರ ನವೆಂಬರ್ 11. ಶುಷ್ಕಗೊಂಡ ಸೌತ್ ಡಕೋಟಾ ಫಾರ್ಮಲ್ಯಾಂಡ್‍ನಿಂದ ತೀವ್ರ ಧೂಳಿನ ಬಿರುಗಾಳಿಯು ಮೇಲ್ಮಣ್ಣನ್ನು ತುಂಡರಿಸಿತು. ಇದು ಆ ವರುಷದ ಧೂಳಿನ ಬಿರುಗಾಳಿಯಲ್ಲೇ ಅತಿಕೆಟ್ಟ ಸರಣ ಯೆಂದು ಪರಿಗಣ ಸಲ್ಪಟ್ಟಿತು. ಬಳಿಕ, 1934ರ ಮೇ 9ರ ಆರಂಭದ ವೇಳೆಗೆ 2 ದಿನಗಳ ಅತಿತೀವ್ರ ಧೂಳಿನ ಬಿರುಗಾಳಿಯು ಗ್ರೇಟ್‍ಪ್ಲೇನ್ಸ್‍ನ ಮೇಲ್ಮಣ್ಣನ್ನು ದೊಡ್ಡಪ್ರಮಾಣದಲ್ಲೇ ತೆಗೆದುಹಾಕಿದ್ದು, ಇದು ಡಸ್ಟ್ ಬೌಲ್‍ನ ಅತಿಕೆಟ್ಟ ಬಿರುಗಾಳಿಯಲ್ಲೇ ಒಂದಾಗಿತ್ತು. ಧೂಳಿನ ಮೋಡವು ಚಿಕಾಗೋದ ದಾರಿಗುಂಟ ಸಾಗಿತು. ಇಲ್ಲಿ 12 ಮಿಲಿಯನ್ ಪೌಂಡ್‍ನಷ್ಟು ಧೂಳು ಶೇಖರಗೊಂಡಿತು. ಪುನಃ 2 ದಿನಗಳ ಬಳಿಕ ಅದೇ ಬಗೆಯ ಬಿರುಗಾಳಿ ಪೂರ್ವದ ನಗರಗಳಾದ ಬಫೆಲೋ, ಬೋಸ್ಟನ್, ಕ್ಲೀವ್‍ಲ್ಯಾಂಡ್, ನ್ಯೂಯಾರ್ಕ್, ವಾಶಿಂಗ್ಟನ್ ಡಿ.ಸಿ.ಯನ್ನು ತಲಪಿತು. ಆ ವರುಷದ ಚಳಿಗಾಲದಲ್ಲಿ (1934-35) ನ್ಯೂ ಇಂಗ್ಲೆಂಡ್‍ನಲ್ಲಿ ಕೆಂಪು ಹಿಮ ಸುರಿದಿತ್ತಂತೆ.
1935ರ ಏಪ್ರಿಲ್ 14. ಆದಿನ ‘ಬ್ಲ್ಯಾಕ್ ಸಂಡೆ’ ಎಂದೇ ಕರೆಯಲಾಗುತ್ತದೆ. ದಕ್ಷಿಣದಿಂದ ಟೆಕ್ಸಾಸ್‍ವರೆಗೆ ಸಂಪೂರ್ಣ ಗ್ರೇಟ್‍ಪ್ಲೇನ್ಸ್‍ನ ಪ್ರದೇಶದುದ್ದಕ್ಕೂ 20 ಅತಿಕೆಟ್ಟದಾದ ಕರಿಬಿರುಗಾಳಿ ಬೀಸಿತು. ಧೂಳಿನ ಬಿರುಗಾಳಿಯು ತೀವ್ರಹಾನಿಯನ್ನು ಉಂಟುಮಾಡಿದ್ದಲ್ಲದೇ, ಹಗಲನ್ನೇ ರಾತ್ರಿಯನ್ನಾಗಿ ಪರಿವರ್ತಿಸಿಬಿಟ್ಟಿತ್ತು. ವರದಿಗಳು ಹೇಳುವ ಪ್ರಕಾರ, 5 ಅಡಿಗಿಂತ ಮುಂದೆ ಏನೂ ಕಾಣಲಾಗದ, ನೋಡಲಾಗದ ಸನ್ನಿವೇಶ ಉಂಟಾಗಿತ್ತು. ಈ ಗಳಿಗೆಯನ್ನೇ ಪತ್ರಿಕೆಯು ಡಸ್ಟ್ ಬೌಲ್ ಎಂದು ಹೆಸರಿಸಿತ್ತು.

ಧೂಳೀನ ಬಿರುಗಾಳಿ 1935ರಲ್ಲಿ ಸ್ಟ್ರ್ಯಾಟ್‌ಫೋರ್ಡ, ಟೆಕ್ಸಾಸ್ ತಲಪಿದ್ದು
ಮುಂದುವರಿಯುವುದು…