ಅಂಕಣ

ಬೊಮ್ಮನ ಬೇಸರಕೆ ಜೊತೆ, ಈ ಸೃಷ್ಟಿಯಾಯ್ತಂತೆ !

ಮಂಕುತಿಮ್ಮನ ಕಗ್ಗ ೦೭೪

ಸುಮ್ಮನೊಬ್ಬಂಟಿಯೆಂತಿಹುದು? ಬೇಸರವಹುದು |
ಹೊಮ್ಮುವೆನು ಕೋಟಿರೂಪದಲಿ ನಾನೆಂದು ||
ಬೊಮ್ಮನೆಳಸಿದನಂತೆ. ಆಯೆಳಸಿಕೆಯೆ ಮಾಯೆ |
ನಮ್ಮಿರವು ಮಾಯೆಯಲಿ – ಮಂಕುತಿಮ್ಮ || ೦೭೪ ||

ಎಳಸು – ಆಸೆಪಡು;
ಎಳಸಿಕೆ – ಆಸೆ, ಬಯಕೆ;
ಇರವು – ಸ್ಥಿತಿ;

ಪರಬ್ರಹ್ಮ ಸೃಷ್ಟಿಯನ್ನು ಹೇಗೆ ಮತ್ತು ಏಕೆ ಸೃಜಿಸಿದ ಎಂಬ ಪ್ರಶ್ನೆ ಕವಿಯನ್ನು ಕಾಡಿರುವ ಬಗೆ ಅನನ್ಯ. ಅದು ಊಹೆಯಾಗಿಯೊ, ಸಿದ್ಧಾಂತವಾಗಿಯೊ, ತತ್ತ್ವವಾಗಿಯೊ – ಒಂದಲ್ಲ ಒಂದು ಅನುಮಾನದ ರೂಪದಲ್ಲಿ ಮಂಕುತಿಮ್ಮನ ಮೂಲಕ ಪದೇ ಪದೇ ವ್ಯಕ್ತವಾಗುತ್ತದೆ. ಇದೂ ಕೂಡ ಅಂತದ್ದೆ ಒಂದು ಕಗ್ಗ. ಇದರಲ್ಲಿರುವ ಸೃಷ್ಟಿಯ ಊಹೆ ಕೂಡ ಕುತೂಹಲಕಾರಿಯಾಗಿದೆ. ಇದು ಕೂಡ ನಮ್ಮ ಪುರಾತನ ನಂಬಿಕೆಗಳ ಬೇರಿನ ಮೇಲೆ ನಿಷ್ಪತ್ತಿಸಿದ ಕಗ್ಗವಾದ ಕಾರಣ ಆ ಹಿನ್ನಲೆಯ ಮೇಲೆ ತುಸು ಗಮನ ಹರಿಸಿ ನಂತರ ವಿವರಣೆಗಿಳಿಯೋಣ.

ಇಲ್ಲಿನ ಮುಖ್ಯ ಭೂಮಿಕೆಯ ಹಿನ್ನಲೆ ಎಂದರೆ – ಮೊದಲಿಗೆ ಇದ್ದದ್ದು ಪರಬ್ರಹ್ಮವೊಂದು ಮಾತ್ರವೆ. ಇದು ದೇವರು ಒಬ್ಬನೆ, ಪ್ರಕಟವಾಗುವ ರೂಪಗಳಷ್ಟೆ ಬೇರೆ ಎನ್ನುವ ಮಾತಿಗು ಇಂಬು ಕೊಡುವಂತದ್ದು. ಕೊನೆಯದಾಗಿ ಸೃಷ್ಟಿಯ ಪ್ರತಿಯೊಂದು ಜೀವಿಯಲ್ಲಿ ಭಗವಂತನ ಅಂಶವಿದೆಯೆನ್ನುವುದು ಮತ್ತೊಂದು ಆಳವಾದ ನಂಬಿಕೆ. ಇದೆಲ್ಲಾ ಹಿನ್ನಲೆಯನ್ನಿಟ್ಟುಕೊಂಡು ಈ ಕಗ್ಗವನ್ನು ಅರ್ಥೈಸಬೇಕು.

ಸುಮ್ಮನೊಬ್ಬಂಟಿಯೆಂತಿಹುದು? ಬೇಸರವಹುದು |
ಹೊಮ್ಮುವೆನು ಕೋಟಿರೂಪದಲಿ ನಾನೆಂದು ||
ಬೊಮ್ಮನೆಳಸಿದನಂತೆ.

ಮೊದಲಿಗೆ ಇಡೀ ಅಸ್ತಿತ್ವದಲ್ಲಿ ಪರಬ್ರಹ್ಮನೊಬ್ಬನೆ ಇದ್ದದ್ದು ಎಂದೆವಲ್ಲ? ಒಬ್ಬರೆ ಇದ್ದರೆ ಯಾರಿಗೆ ತಾನೆ ಬೇಸರವಾಗುವುದಿಲ್ಲ? ತಾನೆಷ್ಟೆ ಸ್ವಯಂಭುವಾದರು, ಏನೆಲ್ಲ ಮಾಡಬಲ್ಲ ಸಾಮರ್ಥ್ಯವಿದ್ದರು, ಚಲನೆಯಿಲ್ಲದ ಜಡಶಕ್ತಿಯಲ್ಲಿ ವಿನೋದವಿರದು. ಅದು ಸೂಕ್ಷ್ಮ ಅಥವ ಸ್ಥೂಲರೂಪದಲ್ಲಿ ಅಸ್ತಿತ್ವದಲ್ಲಿರಬಹುದೆ ಹೊರತು ಚಲನೆಯಿಲ್ಲದ ಹೊರತು ಅದರ ಮತ್ತಾವ ಹೊಳಹುಗಳು ಪ್ರಕಟವಾಗುವುದಿಲ್ಲ. ಇದನ್ನೆಲ್ಲ ಯೋಚಿಸಿದ ಬೊಮ್ಮನು ತಾನೇಕೆ ತನ್ನನ್ನೆ ಕೋಟಿಕೋಟಿರೂಪದಲ್ಲಿ ಸೃಜಿಸಿಕೊಂಡು ಏಕವನ್ನು ಅನೇಕವಾಗಿಸಬಾರದು ? ಎಂದು ಆಸೆ ಪಟ್ಟನಂತೆ (ಚಿಂತಿಸಿದನಂತೆ). ಆದರೆ ಎಲ್ಲವೂ ತನ್ನದೇ ಪ್ರತಿರೂಪು, ತದ್ರೂಪಿಗಳಾದರೆ ವೈವಿಧ್ಯಮಯವಿಲ್ಲದ, ಮತ್ತಷ್ಟು ಬೇಸರವುಣಿಸುವ ಅದೇ ಸರಕನ್ನು ಸೃಜಿಸಿದಂತಾಗುವುದಿಲ್ಲವೆ? ಅದಕ್ಕೂ ಏನಾದರೂ ಮಾಡಬೇಕಲ್ಲವೆ ? ಆ ಚಿಂತನೆಯಲ್ಲಿ ಮೂಡಿಬಂದ ಕಲ್ಪನೆಯೆ ಮಾಯೆ (ಚಂಚಲ ಮತ್ತು ಚಲನಶೀಲ ಸಂವೇದನೆ). ಬೊಮ್ಮ ಸ್ಥಿರ ಮತ್ತು ಜಡಸ್ಥಿತಿಯ ಪ್ರತೀಕವಾದ ಪುರುಷ ರೂಪಾದ ಕಾರಣ, ಅದಕ್ಕೆ ಸಂವಾದಿಯಾಗಿ ಪ್ರಕೃತಿ ಸ್ವರೂಪಿ ಮಾಯೆಯನ್ನು ಸೃಜಿಸಲು ಅನುವು ಮಾಡಿಕೊಟ್ಟಿತಂತೆ. (ಆ ಪ್ರಕ್ರಿಯೆ ನಿರಂತರವಾಗಿರಬೇಕೆಂದು ಬಯಸಿದಾಗ ಅದು ಸ್ತ್ರೀ ಪುರುಷ ರೂಪಾಗಿ ಅವನ ಕಾರ್ಯವನ್ನು ಮುಂದುವರೆಸಿತೆನ್ನುವುದು ನಾವು ನಿಷ್ಪತ್ತಿಸಬಹುದಾದ ತರ್ಕ) . ಈ ಮಾಯೆಯ ಚಿತ್ರಣವನ್ನು ತೋರಿಸುವುದು ಮುಂದಿನ ಸಾಲುಗಳಾದರು ನಡುವಿನ ವಿವರಗಳೆಲ್ಲವನ್ನು ನಮ್ಮರಿವಿಗೆ ಬಿಡುತ್ತಾನೆ ಮಂಕುತಿಮ್ಮ – ಯಾಕೆಂದರೆ ಬೊಮ್ಮ-ಪ್ರಕೃತಿ-ಪುರುಷ-ಮಾಯೆ ಇವೆಲ್ಲವು ನಮ್ಮ ಆಧ್ಯಾತ್ಮಿಕ ಪರಿಕಲ್ಪನೆಯ ಸಾಮಾನ್ಯ ಅಂಶಗಳು. ಹೀಗಾಗಿ ಅವನ್ನು ಊಹಿಸಿಕೊಳ್ಳುವುದು ನಮಗೆ ಸುಲಭ.

….ಆಯೆಳಸಿಕೆಯೆ ಮಾಯೆ |
ನಮ್ಮಿರವು ಮಾಯೆಯಲಿ – ಮಂಕುತಿಮ್ಮ ||

ಇಲ್ಲೊಂದು ವಿಶಿಷ್ಠ ಅಂಶವಿದೆ – ಬೊಮ್ಮನೇನೊ ಆಸೆಪಟ್ಟರು ಅದನ್ನು ತನ್ನ ಪುರುಷರೂಪಿ ತದ್ರೂಪಾಗಿಸದೆ ಅದನ್ನು ವಿಭಿನ್ನವಾಗಿಸಲು ‘ವಿನ್ಯಾಸ’ ದ (ಡಿಸೈನ್) ಹಂತದಲ್ಲೆ ನಿರ್ಧರಿಸಿಬಿಟ್ಟನಂತೆ. ತನಗೆ ಬೇಸರವಾಯ್ತೆಂದು ತಾನೆ ಅವನೀ ಕಾರ್ಯಕೆಳೆಸಿದ್ದು? ಅದೇ ಸ್ಥಿತಿ ಮತ್ತವನ ಸೃಷ್ಟಿಗೂ ಬರಬಾರದಲ್ಲ? ಅದಕ್ಕೆ ತನ್ನ ಮೂಲ ಪ್ರವೃತ್ತಿಯಾದ ಜಡಶಕ್ತಿಗೆ ವಿರುದ್ಧವಾದ ಚಂಚಲ, ಚಲನಶೀಲ ಮಾಯೆಯನ್ನು ಆಯೋಜಿಸಿದ್ದು. ಹೀಗಾಗಿ, ಸೃಜಿಸುವ ಪ್ರತಿ ಸೃಷ್ಟಿಯೂ ಒಂದೇ ಆದರು ಅದರ ಜೊತೆಗೂಡುವ ಮಾಯೆಯ ಅಂಶ ಅದನ್ನು ವಿಭಿನ್ನವಾಗಿಸುತ್ತದೆ. ಆಗ ಎಲ್ಲವೂ ಒಂದೇ ರೀತಿ ಎನ್ನುವ ತೊಡಕು, ಬೇಸರ ಮಾಯವಾಗಿ ಅದರ ಜಾಗದಲ್ಲಿ ವೈವಿಧ್ಯತೆ ಬರುತ್ತದೆ. ಆ ವೈವಿಧ್ಯತೆ ಹೊಸ ಸಂಕೀರ್ಣತೆ, ಸಮಸ್ಯೆಗಳನ್ನು ಹುಟ್ಟು ಹಾಕಿದರೂ ಅದನ್ನೆ ಬೇಸರ ನಿವಾರಿಸುವ ಕಾರ್ಯತಂತ್ರವಾಗಿ ಬಳಸಬಹುದು. ಹೀಗೆಂದು ಮಾಯೆಯ ದೊಡ್ಡ ಅದೃಶ್ಯ ಗೋಲದಲ್ಲಿ ತನ್ನ ಕೋಟಿಕೋಟೀ ಸಾದೃಶ್ಯ ಸಮರೂಪಿನಲ್ಲಿ ಹೊಮ್ಮಿಕೊಂಡನಂತೆ. ಹೀಗಿರುವ ವ್ಯವಸ್ಥೆಯಲ್ಲಿ, ಇರುವ ಜೀವಿಗಳು ಕೂಡ ಅವನ ರೀತಿಯಲ್ಲೆ ಸೃಷ್ಟಿ ಪುನರಾವರ್ತನೆಯಲ್ಲಿ , ಅದೇ ಮಾಯಾಗೋಲದಲ್ಲಿ ತೊಡಗಿಕೊಳ್ಳುವುದರಿಂದ ಇಡಿ ಸೃಷ್ಟಿಯೆ ಅದೇ ಮಾಯೆಯ ಪ್ರಭಾವದಡಿ ನಡೆಯುವ ಚಮತ್ಕಾರವಾಗಿಬಿಡುತ್ತದೆ. ಹೀಗಾಗಿ ನಾವೆಲ್ಲ ಆ ಮಾಯೆಯಡಿ ಬಂಧಿತರಾದವರೆ ಮತ್ತು ನಮ್ಮಾ-ಬೊಮ್ಮನ ಸಂಪರ್ಕ ಆ ಮಾಯೆಯ ಮೂಲಕ ಮಾತ್ರವೇನೆ. ನಮಗೆ ಕಣ್ಣಿಗೆ ಗೋಚರವಾಗುವುದು ಈ ಮಾಯೆ ಮಾತ್ರವಾದ ಕಾರಣ ಅದರ ಇಚ್ಚೆಯಂತೆ ಕುಣಿಯುತ್ತಾ ಸಾಂಸಾರಿಕ ಮತ್ತು ಐಹಿಕ ಬಂಧನದಲ್ಲಿ ತಲ್ಲೀನರಾಗಿಬಿಡುತ್ತೇವೆ. ಕೆಲವರಷ್ಟೇ ಅದನ್ನು ಮೀರಬಲ್ಲವರಾದರು ನಮ್ಮಂತಹ ಸಾಮಾನ್ಯರು ಮಾತ್ರ ಈ ಮಾಯೆಯಡಿಯೆ ಬದುಕಬೇಕು . ನಮ್ಮಿರವು ಮಾತ್ರ ಈ ಮಾಯೆಯಲ್ಲಿಯೆ ಎನ್ನುತ್ತಾನೆ ಮಂಕುತಿಮ್ಮ..

Facebook ಕಾಮೆಂಟ್ಸ್

ಲೇಖಕರ ಕುರಿತು

Nagesha MN

ನಾಗೇಶ ಮೈಸೂರು : ಓದಿದ್ದು ಇಂಜಿನಿಯರಿಂಗ್ , ವೃತ್ತಿ - ಬಹುರಾಷ್ಟ್ರೀಯ ಸಂಸ್ಥೆಯೊಂದರಲ್ಲಿ.  ಪ್ರವೃತ್ತಿ - ಪ್ರಾಜೆಕ್ಟ್ ಗಳ ಸಾಂಗತ್ಯದಲ್ಲೆ ಕನ್ನಡದಲ್ಲಿ ಕಥೆ, ಕವನ, ಲೇಖನ, ಹರಟೆ ಮುಂತಾಗಿ ಬರೆಯುವ ಹವ್ಯಾಸ - ಹೆಚ್ಚಾಗಿ 'ಮನದಿಂಗಿತಗಳ ಸ್ವಗತ' ಬ್ಲಾಗಿನ ಅಖಾಡದಲ್ಲಿ . 'ಥಿಯರಿ ಆಫ್ ಕನ್ಸ್ ಟ್ರೈಂಟ್ಸ್' ನೆಚ್ಚಿನ ಸಿದ್ದಾಂತಗಳಲ್ಲೊಂದು. ಮ್ಯಾನೇಜ್ಮೆಂಟ್ ಸಂಬಂಧಿ ವಿಷಯಗಳಲ್ಲಿ ಹೆಚ್ಚು ಆಸಕ್ತಿ. 'ಗುಬ್ಬಣ್ಣ' ಹೆಸರಿನ ಪಾತ್ರ ಸೃಜಿಸಿದ್ದು ಲಘು ಹರಟೆಗಳ ಉದ್ದೇಶಕ್ಕಾಗಿ. ವೈಜ್ಞಾನಿಕ, ಆಧ್ಯಾತ್ಮಿಕ ಮತ್ತು ಸೈದ್ದಾಂತಿಕ ವಿಷಯಗಳಲ್ಲಿ ಆಸ್ಥೆ. ಸದ್ಯದ ಠಿಕಾಣೆ ವಿದೇಶದಲ್ಲಿ. ಮಿಕ್ಕಂತೆ ಸರಳ, ಸಾಧಾರಣ ಕನ್ನಡಿಗ

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!