ಹೇಗೆ ಮಾತನಾಡಿಸುವುದು? ಏನು ಹೇಳುವುದು ಅಂತ ಅಳುಕಿನಿಂದಲೇ ನನ್ನತ್ತ ನೋಡುತ್ತಾ ಒಳ ಬರುತ್ತಿದ್ದ ಕಸಿನ್’ನ್ನು ನೋಡಿ, “ಹೇಗೆ ಕಾಣುತ್ತಾ ಇದ್ದೀನಿ ನಾನು?” ಎಂದೆ, ಅವಳು ಮುಗುಳ್ನಕ್ಕು “ಸೂಪರ್” ಎಂದಳು. ಬಲಗೈಯ್ಯಲ್ಲೊಂದು ಸಣ್ಣ ಬ್ಯಾಂಡೇಜ್, ಎಡಗೈಗೆ ಸ್ವಲ್ಪ ದೊಡ್ಡದು, ಎಡಭಾಗದ ಮುಖ ಪೂರ್ತಿ ಬ್ಯಾಂಡೇಜ್ ಹಾಕಿ ಕುಳಿತವಳು “ಥ್ಯಾಂಕ್ಯೂ.. ಥ್ಯಾಂಕ್ಯೂ” ಎಂದು ನಕ್ಕೆ. ಅಣ್ಣನ ಮದುವೆಗೆಂದು ಹೊರಟ ನಮ್ಮ ಕಾರು ಅಪಘಾತಕ್ಕೀಡಾಗಿತ್ತು. ಮದುವೆಯ ಬದಲು ಆಸ್ಪತ್ರೆಯಲ್ಲಿ ಕಾಲಕಳೆದು ಮನೆಗೆ ವಾಪಾಸ್ಸಾಗಿದ್ದೆವು. ನೆಂಟರಿಷ್ಟರೆಲ್ಲರಿಗೂ ಗಾಬರಿಯಾಗಿದ್ದರೆ, ಕೆಲವರಿಗೆ ಒಂದು ರೀತಿ ಸೆನ್ಸೇಶನಲ್ ನ್ಯೂಸ್ ಆಗಿತ್ತು. ತಂಗಿಗೆ ಇದೆಲ್ಲ ನೋಡಿ ವೈರಾಗ್ಯ ಬಂದಿದ್ದರೆ, ನನಗೆ ಒಂದು ಹೊಸ ಅನುಭವವಾಗಿತ್ತು!
ನಾನು ಪ್ರತಿದಿನ ಬೆಳಿಗ್ಗೆ ಎದ್ದಾಗ ಮೊದಲು ಹೇಳಿಕೊಳ್ಳುವುದು, “ಟುಡೇ ಈಸ್ ದ ಬೆಸ್ಟ್ ಡೇ ಎವರ್” ಎಂದು. ನಿನ್ನೆ ಎನ್ನುವುದು ಕಳೆದು ಹೋಗಿದೆ, ನಾಳೆ ಎನ್ನುವುದು ಬರುವುದೋ ಇಲ್ಲವೋ ಗೊತ್ತಿಲ್ಲ. ಹಾಗಾಗಿ ನಮ್ಮ ಬಳಿ ಏನೇ ಇದ್ದರೂ ಅದು ‘ಇಂದು’ ಎನ್ನುವುದು ಮಾತ್ರ. ಅದು ಹೇಗೆ ಇರಲಿ, ಅದು ಬೆಸ್ಟ್ ಡೇ ಆಗಿರುತ್ತದೆ. ಇದು ನನಗೆ ಶಾನ್ ಹೇಳಿಕೊಟ್ಟಿದ್ದು! ಹಾಗೆ ರಾತ್ರಿ ಮಲಗುವ ಮುನ್ನ, ‘ಇಂದು’ ಎನ್ನುವುದು ಯಾಕೆ ವಿಶೇಷವಾಗಿತ್ತು ಎನ್ನುವಂತಹ ಐದು ವಿಷಯಗಳನ್ನು ನೆನಪಿಸಿಕೊಳ್ಳುತ್ತೇನೆ. ಈಗ ಅದು ಒಂದು ಹವ್ಯಾಸ ಆಗಿಬಿಟ್ಟಿದೆ. ಅಂದು ಅಪಘಾತವಾದ ದಿನ ಕೂಡ ಅದೇ ಪ್ರಯತ್ನದಲ್ಲಿದ್ದೆ.
ರಾತ್ರಿ ಸುಮಾರು ಹತ್ತೂವರೆಯಾಗಿತ್ತು, ಹೊರಗಡೆ ಧೋ ಎಂದು ಮಳೆ ಸುರಿಯುತ್ತಿತ್ತು. ಮುಖ ಮತ್ತು ಕೈಯ್ಯಲ್ಲೆಲ್ಲಾ ಚುಚ್ಚಿಕೊಂಡಿದ್ದ ಗಾಜಿನ ಚೂರುಗಳನ್ನು ತೆಗೆದು ಹೊಲಿಗೆ ಹಾಕಿ ಆಗಷ್ಟೆ ವಾರ್ಡ್’ಗೆ ಶಿಫ಼್ಟ್ ಮಾಡಿದ್ದರು. ದೇಹದಲ್ಲಿ ಶಕ್ತಿಯೇ ಇಲ್ಲವೇನೋ ಎನ್ನುವಷ್ಟು ಸುಸ್ತಾಗಿತ್ತು ಆದರೆ ನಿದ್ರೆ ಇನ್ನೂ ಸುಳಿದಿರಲಿಲ್ಲ. ನನ್ನ ಪಕ್ಕದ ಬೆಡ್’ನಲ್ಲಿ ಅಜ್ಜಿ ಹಾಗೂ ಅದರ ಪಕ್ಕ ತಂಗಿ ಅನಸ್ತೇಶಿಯಾ ನೀಡಿದ್ದರ ಕಾರಣ ಪ್ರಜ್ಞೆಯಿಲ್ಲದೆ ಮಲಗಿದ್ದರು. ಇಂದು ನಿಜವಾಗಿಯೂ ‘ಬೆಸ್ಟ್ ಡೇ’ ಎನ್ನುವಂತಿತ್ತ ಎಂದು ಯೋಚಿಸುತ್ತಿದ್ದೆ. “ಇಷ್ಟೆಲ್ಲಾ ಆದಮೇಲೂ ಇನ್ನು ಬದುಕಿದ್ದೀನಲ್ಲಾ.. ಬೆಸ್ಟ್ ಡೇ ಅಲ್ಲದೇ ಮತ್ತಿನ್ನೇನು” ಎನಿಸಿತು. ನಗು ಬಂದಿತು ಆದರೆ ಮುಖದಲ್ಲಾಗಿದ್ದ ಗಾಯಗಳು ಆರಾಮಾಗಿ ನಗುವುದಕ್ಕೂ ಬಿಡುತ್ತಿರಲಿಲ್ಲ. ಅಂದು ಕೂಡ ಆ ದಿನ ಯಾಕೆ ವಿಶೇಷವಾಗಿತ್ತು ಎಂದು ಯೋಚಿಸುತ್ತಿದ್ದೆ. ಮೊದಲನೆಯದಾಗಿ ಬದುಕು ಬಾರಿ ಬಾರಿ ಅವಕಾಶವನ್ನು ಎಲ್ಲರಿಗೂ ಕೊಡುವುದಿಲ್ಲವೇನೋ. ಆದರೆ ಅಂದು ರಾತ್ರಿ ಅಸ್ಪತ್ರೆಯಲ್ಲಿ ಮಲಗಿದ್ದ ನಾನು ಸಿಕ್ಕ ಮತ್ತೊಂದು ಅವಕಾಶಕ್ಕೆ ಕೃತಜ್ಞಳಾಗಿದ್ದೆ. ಎರಡನೆಯದಾಗಿ ಅಂದು ನನ್ನ ಮನೆಯವರೂ ಕೂಡ ಸಾವಿನ ದವಡೆಯಿಂದ ಪಾರಾಗಿದ್ದರು. ಹಾಗಂತ ಪೆಟ್ಟಾಗಿರಲಿಲ್ಲ ಎಂದೇನಲ್ಲ. ಆದರೆ ಸುಮಾರು ಒಂದೂವರೆ ತಿಂಗಳಿನಲ್ಲಿ ಎಲ್ಲರೂ ಸರಿಹೋಗುತ್ತೀವಿ ಎನ್ನುವುದಂತು ಗೊತ್ತಿತ್ತು. ಆ ದಿನ ನನ್ನವರನ್ನ ಕಳೆದುಕೊಳ್ಳುವಂತೆ ಮಾಡಿರಲಿಲ್ಲ.
ಮೂರನೆ ಅಂಶವೆಂದರೆ, ಆ ದಿನ ಅಪಘಾತದ ನಂತರ ನನಗೆ ಎಚ್ಚರವಾದಾಗ ಆಸ್ಪತ್ರೆ ತಲುಪಿದ್ದೆವು. ಒಂದು ಕ್ಷಣಕ್ಕೆ ಯಾವುದೋ ಕನಸಿನಿಂದ ಎದ್ದೆನೇನೋ ಎನಿಸಿದರೂ ನಂತರ ಪರಿಸ್ಥಿತಿಯ ಅರಿವಾಗಿತ್ತು. ಮುಖಕ್ಕೆ ಬಟ್ಟೆ ಒತ್ತಿ ಹಿಡಿದು ಕುಳಿತಿದ್ದೆ. ಬಟ್ಟೆಯೆಲ್ಲಾ ರಕ್ತಮಯ. ಕೈಯನ್ನೊಮ್ಮೆ ನೋಡಿಕೊಂಡೆ ಕೊಚ್ಚಿ ಹಾಕಿದಂತಾಗಿತ್ತು. ಇವೆಲ್ಲದನ್ನು ನೋಡಿಕೊಳ್ಳುವ ಭರದಲ್ಲಿ ಒಂದು ಮುಖ್ಯವಾದ ವಿಷಯ ಮರೆತಿದ್ದೆ.! ಸ್ವಲ್ಪ ಹೊತ್ತಿನ ನಂತರ ವಾಶ್’ರೂಮ್’ಗೆಂದು ಹೊರಟವಳು ಕುಡಿದವರಂತೆ ಓಲಾಡುತ್ತಾ ನಡೆಯುತ್ತಿದ್ದೆ. ಪಕ್ಕದಲ್ಲಿ ಯಾರೋ, “ಹಿಡಿದುಕೊಳ್ಳಬೇಕಾ?” ಎಂದರು. “ತೊಂದರೆ ಇಲ್ಲ.. ನಾನೆ ನಡೆದುಕೊಂಡು ಹೋಗ್ತೀನಿ” ಎಂದಾಗಲೇ ಅರಿವಾಗಿದ್ದು ನಾನು ನಡೆಯುವ ಸ್ಥಿತಿಯಲ್ಲಿದ್ದೀನಿ. ನನ್ನ ಕಾಲಿಗೆ ಏನೂ ಆಗಿಲ್ಲ ಎಂದು. ಕ್ಯಾನ್ಸರ್’ನ ನಂತರ ಕಾಲಿನ ಬಗ್ಗೆ ಸ್ವಲ್ಪ ಜಾಸ್ತಿಯೇ ಕಾನ್ಶಿಯಸ್ ಆಗಿರುತ್ತೇನೆ. ಆ ದಿನ ಅಷ್ಟು ದೊಡ್ಡ ಅಪಘಾತದ ನಂತರವೂ ನಾನು ನಡೆಯಬಲ್ಲೆ ಎನ್ನುವುದು ನನ್ನ ಪಾಲಿಗೆ ಅತಿದೊಡ್ಡ ರಿಲೀಫ್ ಆಗಿತ್ತು!
ಇನ್ನು ನಾಲ್ಕನೆಯದಾಗಿ ಅಂದು ಹೊಸ ವಿಷಯ ಅರಿವಿಗೆ ಬಂದಿತ್ತು. ಧೈರ್ಯ ಎನ್ನುವುದು ಯಾರದೇ ಸ್ವತ್ತಲ್ಲ ಎಂದು! ಅಮ್ಮ ಆ ದಿನ ಆ ಪರಿಸ್ಥಿತಿಯನ್ನ ತೆಗೆದುಕೊಂಡ ರೀತಿ ಎಲ್ಲರಿಗೂ ಆಶ್ಚರ್ಯವನ್ನುಂಟುಮಾಡಿತ್ತು. ಮೊದಲು ಒಂದು ಕ್ಷಣ ತನ್ನ ಮಕ್ಕಳನ್ನ, ತನ್ನ ತಾಯಿಯನ್ನ ಆ ಸ್ಥಿತಿಯಲ್ಲಿ ನೋಡಿ ಗಾಬರಿಯಾಗಿದ್ದು ನಿಜ. ಆದರೆ ಆಸ್ಪತ್ರೆಯಲ್ಲಿ ಎಲ್ಲರ ಹಿಂದೆ ಓಡಾಡುತ್ತಾ, ಡಾಕ್ಟರ್ ಜೊತೆ ಮಾತಾನಾಡುತ್ತಾ, ಯಾರಿಗೆ ಏನು ಮಾಡಿಸಬೇಕು ಎಂದು ಕೇಳಿಕೊಳ್ಳುತ್ತಾ ಓಡಾಡುತ್ತಿದ್ದರು. ನಂತರ ಕೇಳಿದರೆ, “ಅದೇನೋ ಗೊತ್ತಿಲ್ಲ.. ಆ ಸಮಯದಲ್ಲಿ ಆ ಧೈರ್ಯ ಎಲ್ಲಿಂದ ಬಂತೋ ಏನೋ” ಎಂದಿದ್ದರು. ಅದೆಲ್ಲ ಯಾರೋ ಒಬ್ಬಿಬ್ಬರಲ್ಲಿ ಇರುತ್ತದೆ ಎಂದು ಅಂದುಕೊಂಡಿರುತ್ತೇವೆ, ಅದರೆ ಅದು ಎಲ್ಲರಲ್ಲೂ ಇರುವಂತದ್ದೆ, ಪರಿಸ್ಥಿತಿಗನುಗುಣವಾಗಿ ಹೊರ ಬರುತ್ತದೆ ಅಷ್ಟೇ!
ಐದನೆಯದಾಗಿ, ಅಪ್ಪ ಅಮ್ಮ ಸುರಕ್ಷಿತವಾಗಿದ್ದರು. ಎಕ್ಸ್’ರೇ ಮುಗಿಸಿ ಬಂದ ತಂಗಿ ನನ್ನ ಪಕ್ಕ ಕುಳಿತಳು. ಅಜ್ಜಿಯ ಎಕ್ಸ್’ರೇ ನಡೆಯುತ್ತಿತ್ತು, ನಾವಿಬ್ಬರು ಅದೇ ಕಾರಿಡಾರ್’ನ ತುದಿಯಲ್ಲಿ ಎಕ್ಸ್’ರೇ ಮುಗಿಯಲಿ ಎಂದು ಕಾಯುತ್ತಾ ನಿಂತಿದ್ದ ಅಪ್ಪ ಅಮ್ಮನ ಕಡೆ ನೋಡುತ್ತಿದ್ದೆವು. ತಕ್ಷಣ ತಂಗಿ, “ಅಕ್ಕ.. ನಮಗೇನೋ ಹೀಗಾಯ್ತು ಪರವಾಗಿಲ್ಲ. ಒಂದು ವೇಳೆ ನಾವಿಬ್ಬರು ಸರಿ ಇದ್ದು ಅಪ್ಪ ಅಮ್ಮನಿಗೇನೋ ಆಗಿದ್ದರೆ, ನಾವಿದನ್ನೆಲ್ಲಾ ಹೇಗೆ ನಿಭಾಯಿಸಬೇಕಿತ್ತು?” ಎಂದಳು. ಅಕ್ಷರಶಃ ನಿಜ ಆಕೆ ಹೇಳಿದ್ದು. ಹಾಗೆ ಅದೊಂದು ರೀತಿಯ ಸಮಾಧಾನವೂ ಆಗಿತ್ತು. ನಮ್ಮ ದೊಡ್ಡ ಸಪೋರ್ಟ್ ಸಿಸ್ಟಮ್ ಎಂದರೆ ನಮ್ಮ ತಂದೆ ತಾಯಿ. ನಮ್ಮ ಸಪೋರ್ಟ್ ಸಿಸ್ಟಮ್ ಅರಾಮಾಗಿದ್ದಾರೆ ಎಂದಾಗ, ನಮಗಿನ್ನು ಏನೂ ಆಗುವುದಿಲ್ಲ, ಅವರು ಎಲ್ಲದನ್ನ ಹ್ಯಾಂಡಲ್ ಮಡುತ್ತಾರೆ, ನಾವಿನ್ನು ಯೋಚಿಸುವ ಅಗತ್ಯ ಇಲ್ಲ ಎನ್ನುವ ಭಾವ ಸ್ವಾಭಾವಿಕವಾಗಿ ಬಂದುಬಿಡುತ್ತದೆ. ಹಾಗಾಗಿ ಇವೆಲ್ಲದಕ್ಕೂ ಅಂದು ನಾನು ಕೃತಜ್ಞತೆ ಸಲ್ಲಿಸುತ್ತಿದ್ದೆ.
ಸಾಮಾನ್ಯವಾಗಿ ಇಂತಹ ಸಂದರ್ಭಗಳಲ್ಲೇ ನಾವು ಒಬ್ಬರನ್ನೊಬ್ಬರು ಎಷ್ಟು ಪ್ರೀತಿಸುತ್ತೇವೆ ಎನ್ನುವುದನ್ನ ತೋರಿಸುವುದಾಗಿರುತ್ತದೆ. ಅಂದು ರಕ್ತಸಿಕ್ತವಾಗಿ, ಪ್ರಜ್ಞೆ ಇಲ್ಲದ ನನ್ನನ್ನ ನೋಡಿ ಅಮ್ಮ ಗಾಬರಿಯಾಗಿದ್ದರು. ಆಸ್ಪತ್ರೆಯಲ್ಲಿದ್ದಾಗ ಅಮ್ಮ ಬಳಿ ಬಂದು, “ನಿನ್ನನ್ನ ಕಳೆದುಕೊಂಡೇಬಿಟ್ಟೆ ಎಂದುಕೊಂಡಿದ್ದೆ” ಎಂದರು. ಆ ಕ್ಷಣ ಇದೆಯಲ್ಲ ಅದಕ್ಕೆ ಬೆಲೆ ಕಟ್ಟಲಾಗುವುದಿಲ್ಲ. ನಮ್ಮ ಬದುಕನ್ನ ತುಂಬಾ ಸುಂದರವಾಗಿಸುವುದು ಇಂತಹ ಕ್ಷಣಗಳೇ ಆಗಿರುತ್ತದೆ. ಅಂತಹ ಕ್ಷಣಗಳು ನನ್ನ ಬದುಕಿನಲ್ಲಿ ಮೂಟೆಗಟ್ಟಲೇ ಇವೆ. ನನ್ನ ಬದುಕನ್ನ ಶ್ರೀಮಂತಗೊಳಿಸಿರುವುದು ಕೂಡ ಅಂತಹ ಕ್ಷಣಗಳೇ!
ಡಾಕ್ಟರ್’ಗಳ ವಿಷಯ ಬಂದಾಗ ನಾವು ತುಂಬಾ ಅದೃಷ್ಟವಂತರು ಅನ್ನುವುದಕ್ಕೆ ಎರಡು ಮಾತಿಲ್ಲ. ಅಂದು ಕೂಡ ಕೊಪ್ಪದ ಪ್ರಶಮನಿ ಆಸ್ಪತ್ರೆಯ ಡಾಕ್ಟರ್ ಉದಯ್ ಶಂಕರ್ ನಮ್ಮನ್ನ ಎಷ್ಟು ಕಾಳಜಿಯಿಂದ ನೋಡಿಕೊಂಡರೆಂದರೆ ‘ಧನ್ಯವಾದ’ ಎಂಬ ಶಬ್ದ ತುಂಬಾ ಚಿಕ್ಕದಾಗುತ್ತದೆ. ಅದರಲ್ಲೂ ನನ್ನನ್ನ! “ಮುಖಕ್ಕೆ ಗಾಯಗಳಾಗಿರೋದಲ್ವ.. ತುಂಬಾ ಕೇರ್’ಫುಲ್ ಆಗಿ ಹೊಲಿಗೆ ಹಾಕೋಣ.” ಎನ್ನುತ್ತಾ ತುಂಬಾ ನಾಜೂಕಿನಿಂದ ಸುಮಾರು ಒಂದೂವರೆ ಗಂಟೆ ತೆಗೆದುಕೊಂಡು ಮುಖ ಮತ್ತು ಕೈಗಳಿಗೆ ಹೊಲಿಗೆ ಹಾಕಿ ಪೂರೈಸಿದ್ದರು.
ಮನೆಗೆ ಬಂದು ಸ್ವಲ್ಪ ದಿನಗಳ ನಂತರ ನನ್ನ ಚಿಕ್ಕಪ್ಪ ನಮ್ಮನ್ನೆಲ್ಲ ನೋಡಿಕೊಂಡು ಹೋಗಲು ಬಂದಿದ್ದರು. ಅವರು ಒಳ ಬರುತ್ತಿದ್ದ ಹಾಗೆ, “ ಪೇಷಂಟ್’ನ ನೋಡೋಕೆ ಬಂದಿದೀನಿ. ಎಲ್ಲ ಬನ್ನಿ ಒಂದ್ಸಲ ಕ್ಯಾಟ್ ವಾಕ್ ಮಾಡಿ” ಎಂದಿದ್ದರು. ನಿಜ ಹೇಳುತ್ತೀನಿ ನನಗೆ ಈ ತರಹದ ಜನ ಬಹಳ ಇಷ್ಟ! ಈ ತರಹದವರು ನಮ್ಮ ತಲೆಬಿಸಿ ಜಾಸ್ತಿ ಮಾಡದೇ ಬದಲಾಗಿ ನಮ್ಮನ್ನ ಇನಷ್ಟು ರಿಲಾಕ್ಸ್ ಆಗುವುಂತೆ ಮಾಡಿಹೋಗುತ್ತಾರೆ. ಇನ್ನು ಕೆಲವರು ಬಂದು ನಮಗೆ ಯಾರ್ಯಾರಿಗೆ ಏನೇನು ‘ಊನ’ ಆಗಿದೆ ಅಂತ ಹೇಳಿಹೋಗುತ್ತಾರೆ, ಅವರು ಹೇಳದಿದ್ದರೆ ನಮಗೆ ಗೊತ್ತೇ ಆಗುವುದಿಲ್ಲವೇನೋ ಎನ್ನುವಂತೆ, ಇನ್ನು ಸಾಂತ್ವಾನ ಹೇಳೋದಿಕ್ಕೆ ಅಂತ ಬಂದವರು ನಮ್ಮ ಅಪ್ಪ ಅಮ್ಮನ ಬಳಿ “ನಿಮಗೆ ಇಬ್ಬರೂ ಹೆಣ್ಣುಮಕ್ಕಳಾ.. ಗಂಡಿಲ್ಲವಾ?” ಎಂದು ಸಂತಾಪ ಸೂಚಿಸಿ ಹೋದವರೂ ಇದ್ದಾರೆ. ಅಂತವರಲ್ಲಿ ನಮ್ಮ ಕಳಕಳಿಯ ವಿನಂತಿ ಇಷ್ಟೇ, ‘ದಯವಿಟ್ಟು ದೊಡ್ಡವರಾಗಿ’!!!
ಕೊನೆಯದಾಗಿ, ಆ ದಿನ ರಾತ್ರಿ ಆಸ್ಪತ್ರೆಯಲ್ಲಿ ಮಲಗಿದ್ದಾಗ ಸದ್ಗುರು ಹೇಳಿದ ಮಾತೊಂದು ಸುಳಿದಾಡಿತ್ತು. “ನೇಚರ್ ಡಸ್ ಊಫ್.. ಅಂಡ್ ಯೂ ಆರ್ ಗಾನ್” ಎಂಬ ಮಾತು. ಪ್ರಕೃತಿ ಯಾವಾಗ ಊಫ್ ಎನ್ನುವುದೋ ಗೊತ್ತಿಲ್ಲ ಅಷ್ಟರೊಳಗೆ ಒಂದಿಷ್ಟು ಬದುಕಿಬಿಡಬೇಕು ಎನಿಸಿತ್ತು. ಎಲ್ಲರಿಗೂ ಇದು ಅನ್ವಯವಾಗುವಂತದ್ದೆ. ನಿನ್ನೆ ಇಲ್ಲ, ನಾಳೆ ಬರುವುದೋ ಗೊತ್ತಿಲ್ಲ. ಇರುವುದು ‘ಇಂದು’ ಮಾತ್ರ. ಆ ‘ಇಂದು’ ಎನ್ನುವುದೇ ಬೆಸ್ಟ್ ಡೇ ಎವರ್ ಎನ್ನುತ್ತಾ ಬದುಕುತ್ತಿರುವುದು. ಆ ದಿನ ಅಕ್ಷರಶಃ ಅದು ಅನುಭವಕ್ಕೆ ಬಂದಿತ್ತು. ಕ್ಯಾನ್ಸರ್’ನಲ್ಲಿ ಇಷ್ಟು ದಿನ, ಇಷ್ಟು ತಿಂಗಳು ಎನ್ನುವಂತಿರುತ್ತದೆ. ಆದರೆ ಇಲ್ಲಿ ಹಾಗಲ್ಲ, ಯಾವ ಕ್ಷಣ ಬೇಕಾದರೂ ನಮ್ಮ ಕೊನೆಯ ಕ್ಷಣವಾಗಬಹುದು. ಬದುಕು ಯಾವ ಕ್ಷಣದಲ್ಲಾದರೂ ಬದಲಾಗಬಹುದು. ಹಾಗಾಗಿಯೇ, ಪ್ರಕೃತಿ ಊಫ್ ಎನ್ನುವ ಮೊದಲು ಒಂದಿಷ್ಟು ಬದುಕಿಬಿಡಿ!