ಅಂಕಣ

ತಲೆಮಾರುಗಳ  ತಲೆಬಿಸಿ

ಈ ಜಗತ್ತಿನಲ್ಲಿ ಅಥವಾ ನಮ್ಮ ಜೀವನದಲ್ಲಿ ನಮ್ಮ ನಿಯಂತ್ರಣಕ್ಕೆ ಮೀರಿದ ಸಂಗತಿ ಯಾವುದು? ನನ್ನ ಈ ಯಕ್ಷಪ್ರಶ್ನೆಗೆ ನಿಮ್ಮ ತಲೆ ಉಪಯೋಗಿಸಿ ಉತ್ತರಿಸಿ . ನಿಮ್ಮ ಉತ್ತರ ಬೆಲೆಯೇರಿಕೆ, ಹವಾಮಾನ, ಹುಟ್ಟು- ಸಾವು, ಸುಖ-ದು:ಖ…. . ಹೌದು ಒಪ್ಪಿದೆ.. ಹಾಗಿದ್ದರೂ ನನ್ನ ಪ್ರಕಾರ ಇವುಗಳಲ್ಲಿ ಕೆಲವನ್ನು ದುಡ್ಡಿದ್ದರೆ, ಇಚ್ಛಾಶಕ್ತಿ ಇದ್ದರೆ ನಿಯಂತ್ರಿಸಬಹುದು.  ಆದರೆ ನಮ್ಮ ನಿತ್ಯಜೀವನದಲ್ಲಿ ನಮ್ಮ ಸಂಬಂಧಗಳಿಗೆ ಹುಳಿ ಹಿಂಡುವ, ನಮಗೆ ತಲೆಚಿಟ್ಟು ಹಿಡಿಸುವ ’ಜನರೇಶನ್ ಗ್ಯಾಪ್ ’ ಅನ್ನೋದು ನಿರಂತರವಾದದ್ದು, ನಿಯಂತ್ರಣಕ್ಕೆ ಮೀರಿದ್ದು ಅಂತ ಹೇಳಿದರೆ ನೀವು ಒಪ್ಪುತ್ತೀರಿ ಅನ್ನುವ ದೃಢವಿಶ್ವಾಸ ನನ್ನದು. ಜನರೇಶನ್ ಗ್ಯಾಪ್ ಅಥವಾ ತಲೆಮಾರುಗಳ ಅಂತರ ಎಂದರೆ ಯಾವುದೇ ವಿಚಾರದ ಬಗ್ಗೆ ವಿವಿಧ ವಯೋಮಾನದ ವ್ಯಕ್ತಿಗಳಲ್ಲಿ ಕಾಣುವ ಅಭಿಪ್ರಾಯಭೇದ. ಸುಲಭವಾಗಿ ಹೇಳುವುದಾದರೆ ಅಪ್ಪ-ಅಮ್ಮನ ಅಭಿಪ್ರಾಯ ಮಕ್ಕಳಿಗೆ ಸರಿಬರಲ್ಲ. ಟೀಚರ್ ಹೇಳಿದ್ದು ವಿದ್ಯಾರ್ಥಿಗಳಿಗೆ ಆಗಲ್ಲ. ವಯಸ್ಸಾದ ಬಾಸ್’ನ ಮಾತು ಯುವಉದ್ಯೋಗಿಗಳಿಗೆ ನಗು ತರಿಸುತ್ತದೆ.

ಈ ವಿಷಯದ ಬಗ್ಗೆ ಅತ್ಯಂತ ನಿಖರವಾಗಿ ಹೇಳುವ ಯೋಗ್ಯತೆ ಇರುವ ಕೆಲವು ವ್ಯಕ್ತಿಗಳಲ್ಲಿ ನಾನೂ ಒಬ್ಬಳು ಅಂತ ಆತ್ಮವಿಶ್ವಾಸದಿಂದ ಹೇಳಬಲ್ಲೆ. ಏನಪ್ಪಾ… ಇವಳಿಗೆ ಇಷ್ಟೊಂದು ದುರಹಂಕಾರ/ ಕೊಬ್ಬು… ಅಂತೆಲ್ಲಾ ತಪ್ಪು ತಿಳೀಬೇಡಿ. ನನ್ನ ತಂದೆ-ತಾಯಿ ’ಮಕ್ಕಳಿರಲವ್ವ ಮನೆತುಂಬ ’ ಅಂತ ನಂಬಿದವರು. ಅದಕ್ಕೆ ಕಾರಣ  ಸಾಂಪ್ರದಾಯಿಕ ಮನೋಭಾವವೋ, ಅಜ್ಞಾನವೋ, ಉಪೇಕ್ಷೆಯೋ ನನಗೆ ಗೊತ್ತಿಲ್ಲ. ನನ್ನ ತಂದೆ ನಾನು ಹುಟ್ಟಿದ ವರ್ಷದೊಳಗೆ ಕಾಲವಾದರು.ಆದ್ದರಿಂದ ನನ್ನ ಸಂಘರ್ಷ ತಾಯಿಯೊಡನೆ ಮಾತ್ರ. ಮನೆಯಲ್ಲಿ ಊಟ-ತಿಂಡಿ, ಪ್ರೀತಿ-ವಾತ್ಸಲ್ಯಗಳಿಗೆ ಕೊರತೆಯಿಲ್ಲದಿದ್ದರೂ ನನಗೆ ಬುದ್ಧಿ ಬರುತ್ತಿದ್ದಂತೆಯೇ, ನನ್ನ ಗೆಳತಿಯರು ಅವರ ತಂದೆ-ತಾಯಂದರ ಬಗ್ಗೆ , ಚಿಕ್ಕ-ಸುಖೀ ಕುಟುಂಬದ ಬಗ್ಗೆ ಹೆಮ್ಮೆಯಿಂದ ಹೇಳುತ್ತಿದ್ದರೆ’ನಂದ್ಯಾಕೋ ಸ್ವಲ್ಪ ಸರಿಯಿಲ್ಲ’ ಅಂತ ಅನಿಸುತ್ತಿತ್ತು.ನಾವಿಬ್ಬರೂ ಜೊತೆಗೆ ಹೋಗುತ್ತಿದ್ದರೆ “ ಓ ನಿಮ್ಮ ಮೊಮ್ಮಗಳಾ?”  ಎಂಬ ಪ್ರಶ್ನೆ ತಾಯಿಗೆ ಎದುರಾಗುತ್ತಿತ್ತು. ಅದೇನೂ ಅಂಥ ದೊಡ್ಡ ವಿಚಾರವಲ್ಲ, ನಾವು ಬದುಕುವುದು ನಮಗೋಸ್ಕರ-ಜನರನ್ನು ಮೆಚ್ಚಿಸಲು ಅಲ್ಲವಲ್ಲ. ಆದರೆ ನನ್ನ ಹಾಗೂ ನನ್ನ ತಾಯಿಯ ವಿಚಾರಗಳಲ್ಲಿ,ನಂಬಿಕೆಗಳಲ್ಲಿ ಅಗಾಧ ವ್ಯತ್ಯಾಸ ಸಮಸ್ಯೆಯಾಗಿ ಕಾಡುತ್ತಿತ್ತು. ನನ್ನ ಉಡುಗ-ತೊಡುಗೆ,ಓದು,ಮನೆಕೆಲಸ, ಹವ್ಯಾಸಗಳು,ಭವಿಷ್ಯದ ಗುರಿಗಳು, ಕನಸುಗಳು ಯಾವುದೂ ಅವರಿಗೆ ಇಷ್ಟವಾಗುತ್ತಿರಲಿಲ್ಲ. ಅವರು ಮಾತುಗಳನ್ನು ಕೇಳಿದರೆ ನನಗೆ ಕೋಪ ಬರುತ್ತಿತ್ತು.

ಮುಂದೆ ನಾನು ತಾಯಿಯಾದಾಗ ನಿರ್ಧಾರ ಮಾಡಿಬಿಟ್ಟೆ. ನನಗೂ ನನ್ನ ಮಕ್ಕಳಿಗೂ ಈ ಸಮಸ್ಯೆ ಬರಬಾರದು… ಬರಲು ಸಾಧ್ಯವೇ ಇಲ್ಲ… ಏಕೆಂದರೆ ನಾನೊಬ್ಬ ಬುದ್ಧಿವಂತ ತಾಯಿ ಎಂಬ ಅಹಂಕಾರವೂ ಇತ್ತೆನ್ನಿ . ಅದಕ್ಕಾಗಿ ಆದಷ್ಟು ಮಟ್ಟಿಗೆ ನನ್ನನ್ನು ಅಪ್ ಡೇಟ್ ಮಾಡಿಕೊಂಡೆ. ಆದರೆ ವರ್ಷಗಳು ಉರುಳುತ್ತಿದ್ದಂತೆಯೇ ಯಾಕೋ

 ಆಗಾಗ –

“ಅಮ್ಮಾ  ….., ಅಷ್ಟೂ ಗೊತ್ತಾಗಲ್ವ?”

“ನಿನ್ನದು ಬ್ರಿಟಿಷ್ ಇಂಗ್ಲೀಷ್ ಆಕ್ಸೆಂಟ್ ನಮ್ಮದು ಅಮೇರಿಕನ್ ಆಕ್ಸೆಂಟ್…”

“ನನ್ನನ್ನು ಯಾಕೆ ಕೇಳೋದು ಗೂಗಲ್’ನಲ್ಲಿ ನೋಡು ನಿನಗೇ ತಿಳಿಯುತ್ತದೆ….”

“ಕಮ್ ಆನ್ …ಅಮ್ಮ… .. ಲೆಟ್ಸ್ ಹಾವ್ ಫನ್…”

“ಸೋ..ವಾಟ್… ಚೇಂಜ್ ಯುವರ್ ಔಟ್ ಲುಕ್ ”

ಇತ್ಯಾದಿ ವಾಕ್ಯಗಳು ನನ್ನ ಕಿವಿಯನ್ನು ಅಪ್ಪಳಿಸಲಾರಂಭಿಸಿದವು. ನಾನೂ ಒಂದು ಕಾಲದಲ್ಲಿ ಇಂಥದೇ ಅರ್ಥಬರುವ ವಾಕ್ಯಗಳನ್ನು ಉಪಯೋಗಿಸಿದ ನೆನಪು ಕಾಡಲಾರಂಭಿಸಿದಾಗ ನನ್ನ ತಾಯಿ ನೆನಪಾದಳು. ಅದರೆ ನನಗೂ ನನ್ನ ಮಕ್ಕಳಿಗೂ ವಯಸ್ಸಿನ ಅಂತರ ಜಾಸ್ತಿಯೇನಿಲ್ಲವಲ್ಲ… ಈ ಜಾಣೆತಾಯಿಗೆ ಯಾಕೆ ಸೋಲು ಎದುರಾಯಿತು?ಎಂದೆಲ್ಲ ಯೋಚಿಸಿದಾಗ  ನನಗೆ ಜೀವನ ಅರ್ಥವಾಯಿತು. ನನ್ನ ತಾಯಿಯ ಬಗ್ಗೆ ಇನ್ನಿಲ್ಲದ ಗೌರವ ಹುಟ್ಟಿತು.

ಹೌದು ಜನರೇಶನ್ ಗ್ಯಾಪ್ ಆನ್ನುವುದು ಶಾಶ್ವತ. ಅದನ್ನು ಇಲ್ಲವಾಗಿಸಲು ಅಸಾಧ್ಯ ಡಯಾಬಿಟೀಸ್’ನಂತೆ, ಆದರೆ ಹದ್ದುಬಸ್ತಿನಲ್ಲಿ ಇಡಬಹುದು. ಹದಿಹರೆಯದ, ಅತ್ಯಾಧುನಿಕ ಮಕ್ಕಳ ಜೊತೆ ದಿನವೂ ಏಗುತ್ತಾ, ಪ್ರಾಚೀನತೆಯ ಪ್ರತೀಕವಾದ ಸಂಸ್ಕೃತದ ಶಿಕ್ಷಕಿಯ ಕೆಲಸ ಮಾಡುವ ನನಗೆ ಜನರೇಶನ್ ಗ್ಯಾಪ್’ನ ಉರಿ ಆಗಾಗ ತಟ್ಟುತ್ತಿರುತ್ತದೆ. ಹಾಗಾಗಿ ಈ ತಲೆಮಾರುಗಳ ತಲೆಬಿಸಿಯನ್ನು ಕಡಿಮೆ ಮಾಡುವ ಕೆಲ ವಿಧಾನಗಳನ್ನು ಕಂಡುಕೊಂಡು ನೆಮ್ಮದಿಯಾಗಿರಲು ಪ್ರಯತ್ನಿಸುತ್ತಿರುತ್ತೇನೆ. ಓದಿ, ನಿಮಗೂ ಸರಿಯೆನಿಸಿದರೆ ಪಾಲಿಸಬಹುದು.

  • ದಿನವೂ ತಪ್ಪದೇ ದಿನಪತ್ರಿಕೆಯನ್ನು ಓದಿ. ಆಗಾಗ ಸಿನಿಮಾ ನೋಡಿ. ಪ್ರಪಂಚದ ಆಗುಹೋಗುಗಳು ನಿಮಗೆ ತಿಳಿದಾಗ ಯುವಜನರ ನಡವಳಿಕೆಗಳು ವಿಚಿತ್ರ ಅನಿಸುವುದಿಲ್ಲ.
  • ಮಕ್ಕಳು ಏನಾದರೂ ಸಲಹೆ ನೀಡಿದಾಗ ತಕ್ಷಣ ನಿರಾಕರಿಸಬೇಡಿ. ನೋಡೋಣ.. ಯೋಚನೆ ಮಾಡುತ್ತೇನೆ.. ಅನ್ನಿ. ಸಂದರ್ಭ, ಅವಕಾಶಗಳನ್ನು ನೋಡಿಕೊಂಡು ಚುಟುಕಾಗಿ ಆದರೆ ದೃಢವಾಗಿ ನಿಮ್ಮ ಅಭಿಪ್ರಾಯವನ್ನು ಸೂಚಿಸಿ.
  • ನಮ್ಮ ಕಾಲದಲ್ಲಿ ಐದು ರೂಪಾಯಿಗೆ ಒಂದು ಕೆ.ಜಿ ಅಕ್ಕಿ ಸಿಗುತ್ತಿತ್ತು. ಈಗ ಏನ್ ಕಾಲ ಬಂತಪ್ಪಾ…. ಎನ್ನುತ್ತಾ ಹಳೆಯ ಕಾಲದ ಬೆಲೆಗಳನ್ನು ಇಂದಿನ ಬೆಲೆಗಳಿಗೆ ಹೋಲಿಸುವ ಅಸಂಬದ್ಧ ಪ್ರಲಾಪವನ್ನು ನಿಲ್ಲಿಸಿ. ಅದರಿಂದ ಏನೂ ಉಪಯೋಗವಿಲ್ಲ.
  • ಸಂಪ್ರದಾಯ, ಜಾತಿ, ಮದುವೆಯ ಬಗ್ಗೆ ಮಕ್ಕಳ ಅಭಿಪ್ರಾಯಗಳು ಶಾಲಾಶಿಕ್ಷಣದ ಪ್ರಭಾವದಿಂದ ರೂಪುಗೊಂಡಿವೆ. ಮನೆಯಿಂದ ಹೊರಗೆ ಕಾಲಿಡುತ್ತಿದ್ದಂತೆಯೇ ’ಎಲ್ಲರೂ ಸಮಾನರು ’ ಎಂಬ ತತ್ವ ಅನುಸರಿಸುವ ಮಕ್ಕಳು ಮನೆಯೊಳಗೆ  `ನಾವು ಮಾತ್ರ ಶ್ರೇಷ್ಠರು’ ಎಂಬುದನ್ನು ಒಪ್ಪಲಾರರು. ಅಲ್ಲದೆ ಕೆಲವು ಸಾಂಪ್ರದಾಯಿಕ ಆಚರಣೆಗಳನ್ನು ಇಂದಿನ ಜೀವನಶೈಲಿಯಲ್ಲಿ ಅನುಸರಿಸುವುದು ಕಷ್ಟಸಾಧ್ಯ. ಆದ್ದರಿಂದ ನಿಮ್ಮ ನಿಲುವುಗಳನ್ನು ಮಕ್ಕಳು ಗೌರವಿಸದಿದ್ದರೆ ಕೂಗಾಡುವುದರಿಂದ ಪ್ರಯೋಜನವಿಲ್ಲ. ಶಾಂತಚಿತ್ತದಿಂದ ತಿಳಿಹೇಳಲು ಪ್ರಯತ್ನಿಸಿ.ಅವರು ಕೇಳದಿದ್ದರೆ ಸಾಧ್ಯವಾದಷ್ಟು ಮಟ್ಟಿಗೆ ಅಡ್ಜಸ್ಟ್ ಮಾಡಿಕೊಳ್ಳಿ. ಮನ:ಶಾಂತಿಯ, ಪ್ರೀತಿ-ವಿಶ್ವಾಸದ ಸಂಬಂಧಗಳ ಮುಂದೆ ಸಂಪ್ರದಾಯ, ಜಾತಿಗಳು ಅಮುಖ್ಯ.
  • “ಈಗಿನ ಮಕ್ಕಳು ತಂದೆತಾಯಿಯರನ್ನು ಎಲ್ಲಿ ನೋಡ್ಕೋತಾರೆ? ”ಎಂದು ಮೂಗು ಮುರಿಯುತ್ತಾ ವೃದ್ಧಾಶ್ರಮದ ಬಗ್ಗೆ ಮಕ್ಕಳ ಮುಂದೆ ಮಾತನಾಡಬೇಡಿ. ನಮ್ಮ ಆಧುನಿಕ ಜೀವನ ನಮಗೆ ಅನೇಕ ಸುಖಗಳನ್ನು ಕೊಟ್ಟಿದೆ. ಹಾಗೆಯೇ ಕೆಲ ಸವಾಲುಗಳನ್ನು ಕೂಡಾ. ಏಕಾಂಗಿಯಾಗಿ ವೃದ್ಧಾಪ್ಯವನ್ನು ಎದುರಿಸುವ ಅನಿವಾರ್ಯತೆ ಬರಬಹುದು. ಅದಕ್ಕಾಗಿ ಒಳ್ಳೆಯ ಆರೋಗ್ಯ,ಸಾಕಷ್ಟು ಹಣದ ಜೊತೆ ತಯಾರಾಗೋಣ. ಗೊಣಗಾಟ ಬೇಡ.
  • ಯುವಕರ ಜೊತೆ ಮಾತನಾಡುವಾಗ ನಿಮ್ಮ ಹಳೆಯ ಕಠಿಣ ಜೀವನಶೈಲಿಯನ್ನು, ನಿಮ್ಮ ಆದರ್ಶ ಜೀವನಧ್ಯೇಯಗಳನ್ನು ಅತಿಯಾಗಿ ಹೇಳಬೇಡಿ. ಅವರಿಗೆ ಅದು “ ಬೋರಿಂಗ್” ಅನಿಸುತ್ತದೆ. ಯಾಕೆಂದರೆ ಅಂಥ ಜೀವನದ ಕಲ್ಪನೆ ಕೂಡಾ ಅವರಿಗೆ ಇರುವುದಿಲ್ಲ. ಅವರಿಗದು ಬೇಕಾಗೂ ಇಲ್ಲ. ಅವರು ಬೇರೊಂದು ಕಾಲಘಟ್ಟದಲ್ಲಿ ಬದುಕುತ್ತಿದ್ದಾರೆ.
  • “ನನಗದು ಬರುವುದಿಲ್ಲ… ಕಲಿಯಲು ಇಷ್ಟವಿಲ್ಲ… ನನ್ನ ಜೀವನ ಮುಗಿಯುತ್ತಾ ಬಂತು ನಾನ್ಯಾಕೆ ಕಲೀಬೇಕು…. ಅನ್ನುವ ಪಲಾಯನವಾದವನ್ನು ಬಿಡಿ. ಇದು ತಂತ್ರಜ್ಞಾನದ ಯುಗ. ಸಾಯುವ ಗಳಿಗೆಯವರೆಗೂ ಕಲಿಯದೇ ವಿಧಿಯಿಲ್ಲ.

ಯುವಜನರ ಜೊತೆ ಮನಸ್ತಾಪವಿಲ್ಲದೆ ಬದುಕಲು ನಾವು ಎರಡು ಹೆಜ್ಜೆ ಮುಂದಿಡುವುದು ಅತ್ಯಗತ್ಯ. ಆಗ ಅವರು ಕೂಡಾ ನಮ್ಮೊಡನೆ ನಡೆಯಲು ಮನಸ್ಸು ಮಾಡುತ್ತಾರೆ. ಜೊತೆ ಜೊತೆಗೆ ಎರಡು ಜನರೇಶನ್ ಗಳು ನಡೆಯುವಾಗ ಗ್ಯಾಪ್ ಇರಲು ಹೇಗೆ ಸಾಧ್ಯ ಅಲ್ಲವೇ?

 

Facebook ಕಾಮೆಂಟ್ಸ್

ಲೇಖಕರ ಕುರಿತು

ವೇದಾ ಅಠವಳೆ

ಪರಿಚಯ: ನಾನೊಬ್ಬ‌ ಮಧ್ಯಮವರ್ಗದ‌ ಮಹಿಳೆ. ಖಾಸಗಿ ಶಾಲೆಯಲ್ಲಿ ಅಧ್ಯಾಪಕಿ. ಏನಾದ್ರೂ ಹೊಸದನ್ನು ಕಲಿಯುವುದೆಂದರೆ ನನಗಿಷ್ಟ‌. ಜನರ‌ ಅಪ್ರಾಮಾಣಿಕತೆ , ಕೃತಕತೆ ಕಂಡರೆ ಕಷ್ಟ‌. ನನ್ನ‌ ಬ್ಲಾಗ್ ವಿಳಾಸ‌ antardrushti.blogspot.in
ಹುಟ್ಟೂರು : ಮಾಳ‌ ಗ್ರಾಮ‌ , ಉಡುಪಿ ಜಿಲ್ಲೆಯ‌ ಕಾರ್ಕಳ‌ ತಾಲೂಕು
ವಾಸವಾಗಿರುವ ಊರು: ಬೆಂಗಳೂರು

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!