ಅಂಕಣ

ಇಂಟರ್ನೆಟ್ ಪ್ರಪಂಚದೊಳಗೆ ತಿಳುವಳಿಕೆಯ ಅಗತ್ಯವಿದೆ

ದೇವರು ಭೂಮಿಗಿಳಿದು ನಿಮಗೆ ಒಂದು ಕೋಟಿ ಹಣವನ್ನು ಕೊಟ್ಟ ಅಂದುಕೊಳ್ಳಿ. ನೀವು ಆ ಹಣವನ್ನು ಹೇಗೆ ಮತ್ತು ಯಾವುದಕ್ಕೆ ಬಳಸಿಕೊಳ್ಳುತ್ತೀರಿ ?

ಇಂತದ್ದೊಂದು ಪ್ರಶ್ನೆ ನಿಮಗೆ ಹಲವಾರು ಮಂದಿ ಕೇಳಿರಬಹುದು. ಅಥವಾ ನೀವೇ ಇನ್ನೊಬ್ಬರಿಗೆ ಕೇಳಿರಬಹುದು. ಈ ಪ್ರಶ್ನೆಗೆ ಒಬ್ಬೊಬ್ಬರು ಒಂದೊಂದು ರೀತಿಯಾಗಿ ಉತ್ತರಿಸಬಹುದು. ಆದರೆ ನಿಜವಾಗಿಯೂ ನಿಮಗೆ ಅಷ್ಟು ಹಣದ ಅವಶ್ಯಕತೆ ಇತ್ತೇ ? ಅಯ್ಯೋ, ದೇವರು ಕೊಟ್ಟಿದ್ದಾನಲ್ಲಾ ಹಾಗಾಗಿ ಬಳಸಲೇಬೇಕು ಅಂದುಕೊಂಡು ಹಣ ಖಾಲಿ ಮಾಡುತ್ತೀರಾ ? ಖಂಡಿತ ಗೊತ್ತಿಲ್ಲ. ಕೆಲವರು ತಮಗೆ ಸಿಕ್ಕ ಈ ದೊಡ್ಡ ಮೊತ್ತದ ಹಣವನ್ನು ಒಳ್ಳೆಯದಕ್ಕೆ ಬಳಸಬಹುದು. ಸಮಾಜ ಕಲ್ಯಾಣಕ್ಕೋ, ಅಥವಾ ತಮ್ಮ ಅಭಿವೃದ್ದಿಗೋ ಬಳಸಿಕೊಳ್ಳಬಹುದು. ಇನ್ನು ಕೆಲವರು ಕೆಟ್ಟ ಕೆಲಸಕ್ಕೆ ಬಳಸಿಕೊಳ್ಳಬಹುದು. ಒಂದು ಕೋಟಿ ಇಲ್ಲಿ ಕೇವಲ ಸಾಂಧರ್ಭಿಕ ಉದಾಹರಣೆ ಅಷ್ಟೇ. ಬರೀ ದುಡ್ಡು ಅಷ್ಟೇ ಅಲ್ಲ. ಯಾವುದನ್ನ ಹೇಗೆ ಮತ್ತು ಯಾವುದಕ್ಕೆ ಬಳಸಬೇಕು ಎಂಬುದನ್ನ ತಿಳಿಯದಿದ್ದರೆ ಅದೇನೋ ಹೇಳ್ತಾರಲ್ಲ ಗಾದೆ, ಮಂಗನ ಕೈಗೆ ಮಾಣಿಕ್ಯ ಕೊಟ್ಟಂತಾಯಿತು ಅಂತ, ಹಾಗೆ ಅಗೋದರಲ್ಲಿ ಸಂಶಯವೇ ಇಲ್ಲ ಬಿಡಿ.

ಯಾಕೆ ಈ ಉದಾಹರಣೆ ಕೊಟ್ಟೆ ಅನ್ನುವುದು ನಿಮಗೆ ಮುಂದೆ ಗೊತ್ತಾಗುತ್ತಾ ಹೋಗುತ್ತದೆ.

ಇಂಟರ್ನೆಟ್ , ಒಂತರ 21ನೇ ಶತಮಾನದ ನಾಗರೀಕರ ಸರ್ವಸ್ವ ಇದ್ದಂತೆ. ಊಟವಿಲ್ಲದಿದ್ದರೂ ತೊಂದರೆ ಇಲ್ಲ, ಮೊಬೈಲ್ ಡಾಟ ಇರಲೇಬೇಕು. ಯಾವಾಗಲೂ ಅಂತರ್ಜಾಲದಲ್ಲಿ ಕನೆಕ್ಟ್ ಆಗಿರಬೇಕು. ಏನೂ ಮುಖ್ಯವಾದ ಕೆಲಸ ಇಲ್ಲದಿದ್ದರೂ ಸುಮ್ಮನೆ ಡಾಟಾ ಇದೆಯಲ್ಲ ಅಂತ ಬ್ರೌಸಿಂಗ್ ಮಾಡುತ್ತ ಕಾಲ ಕಳೆಯಬೇಕು. ಅದೂ ಅಲ್ಲದೆ ಈಗಂತೂ ನಮ್ಮ ದೇಶದಲ್ಲಿ ಇಂಟರ್ನೆಟ್ ಸೇವೆಯನ್ನು ಫ್ರೀ ಆಗಿ ಕೊಡೊ ಸರ್ವಿಸ್ ಪ್ರೊವೈಡರ್’ಗಳು ತುಂಬಾನೇ ಇದ್ದಾರೆ. ಇತ್ತೀಚಿಗೆ ನಮ್ಮ ಸ್ಮಾರ್ಟ್’ಫೋನ್’ಗಳಲ್ಲಿ ಕೂತು ನಮ್ಮನ್ನು ಕುಣಿಸುತ್ತಿರುವುದು ಜಿಯೋ ಎಂಬ ಮಾಯಗಾರ. ಉಚಿತವಾಗಿ ಕರೆ, ಇಂಟರ್ನೆಟ್ ಡಾಟಾ ಹಾಗೂ ಮೆಸೇಜ್’ಗಳನ್ನು ಭಾರತೀಯರಿಗೆ ಉಣಬಡಿಸಿದೆ ಜಿಯೋ. ಇನ್ನು ಮುಂದೆಯೂ ಬೇಕಾದಷ್ಟು ಹೊಸ ಔತಣಗಳನ್ನು ಉಣಬಡಿಸಲಿದೆಯಂತೆ. ದೇವರೇ, ಅತಿಯಾಗಿ ತಿಂದು ಯಾರಿಗೂ ಏನೂ ಆಗದಂತೆ ನೋಡಿಕೊಳ್ಳಪ್ಪ. ಎಲ್ಲೆಲ್ಲೂ ಅಯೋಮಯ. ಎಲ್ಲೆಲ್ಲೂ ಜಿಯೋಮಯ.  

ಮಿತ್ರರೇ ಕಾಲಕ್ಕೆ ತಕ್ಕಂತೆ ಎಲ್ಲರೂ ಬದಲಾಗಲೇಬೇಕು. ಇಲ್ಲದಿದ್ದರೆ ಬದುಕಲು ಕಷ್ಟವಾದೀತು. ಈ ಶತಮಾನ ಹಲವಾರು ದೊಡ್ಡ ಬದಲಾವಣೆಗಳನ್ನು ಕಂಡುಕೊಂಡಿದೆ. ಏನಿಲ್ಲದಿದ್ದರೂ ತಂತ್ರಜ್ಞಾನ ಕಾಲಿಗೆ ಹೈ ಸ್ಪೀಡ್ ಚಕ್ರಗಳನ್ನು ಕಟ್ಟಿಕೊಂಡು ಓಡುತ್ತಲೇ ಇದೇ. ಈ ಅತಿಯಾದ ವೇಗಕ್ಕೆ ಸಿಕ್ಕಿ ಯಾರಿಗೂ ಏನೂ ಆಗಬಾರದು ಅಷ್ಟೇ. ನೀವು ಬಡವರೋ , ಶ್ರೀಮಂತರೋ, ಒಳ್ಳೆಯವರೋ ಅಥವಾ ಕೆಟ್ಟವರೋ ಬೇಕಾಗಿಲ್ಲ. ನಿಮ್ಮ ಕೈಯಲ್ಲಿ ಸ್ಮಾರ್ಟ್’ಫೋನ್ ಇರಲೇಬೇಕು. ಇನ್ನೂ ಲೇಟೆಸ್ಟ್ ಆಗಿ ಹೇಳಬೇಕೆಂದರೆ. ನಿಮ್ಮ ಬಳಿ ಕಡೇಪಕ್ಷ ಒಂದಾದರೂ ಜಿಯೋ ಸಿಮ್ ಇರಲೇಬೇಕು. ಒಂದುವೇಳೆ ಇವೆರಡೂ ಇಲ್ಲದಿದ್ದರೆ ನೀವು ಭೂಮಿಯಲ್ಲಿ ಅದೂ ಭಾರತದಲ್ಲಿ ಬದುಕುತ್ತಿಲ್ಲ ಎಂದರ್ಥ. ಅಥವಾ ನೀವು ಕಲಿಯುಗದ ಮಾನವರಲ್ಲ ಎಂದೇ ಅರ್ಥ. ಅಯ್ಯೋ ಅದು ಹೇಗೆ ಎಂದು ಕೆಲವರಲ್ಲಿ ಪ್ರಶ್ನೆ ಹುಟ್ಟಬಹುದು. ಹಾಗಾದರೆ ನೀವು ಮನೆಯಿಂದ ಹೊರ ಬಂದು ಒಂದು ಸ್ಮಾರ್ಟ್’ಫೋನ್ ಜೊತೆಗೆ ಜಿಯೋ ಸಿಮ್ ಖರೀದಿ ಮಾಡುವ ಅಗತ್ಯವಿದೆ.

ಜಿಯೋ ಪ್ರಾರಂಭವಾದ ಹೊಸತರಲ್ಲಿ ನಮ್ಮ ದೇಶದ ಜನತೆಗೆ ಅದೇನೋ ವೆಲ್ಕಮ್ ಆಫರ್ ಅಂತ ಕೊಟ್ಟಿತ್ತು. ಫ್ರೀ ಇಂಟರ್ನೆಟ್. ಅದೂ ಅನ್ಲಿಮಿಟೆಡ್.

ಜನ ಮುಗಿಬಿದ್ದು ಜಿಯೋ ಸಿಮ್ ಖರೀದಿಸಿದ್ದರು. ಫ್ರೀಯಾಗಿ ಸಿಗತ್ತೆ ಅಂದ್ರೆ ಯಾರು ಬಿಡ್ತಾರೆ ಹೇಳಿ. ಮುಕೇಶ್ ಅಂಬಾನಿ ತನ್ನಲ್ಲಿದ್ದ ಕಪ್ಪು ಹಣವನ್ನು ಬಿಳಿ ಮಾಡುವುದಕ್ಕೋ, ಜನರನ್ನು ತನ್ನ ಹೊಸ ನೆಟ್ವರ್ಕ್ ಕಡೆ ಸೆಳೆಯುವುದಕ್ಕೋ ಅಥವಾ ಉದಾರ ಮನಸ್ಸಿಂದ ಪಾಪ ಭಾರತೀಯರು ಬಳಸಲಿ ಅಂತ ಫ್ರೀಯಾಗಿ ಕೊಟ್ಟರೋ ಎಂಬುದು ನನಗೆ ಗೊತ್ತಿಲ್ಲ. ನ್ಯೂಸ್ ಚಾನೆಲ್’ಗಳಿಗೆ ಗೊತ್ತಿರಬಹುದು. ಅವರನ್ನೇ ಕೇಳಬೇಕು. ಅದರ ಅವಶ್ಯಕತೆ ನಮಗಿಲ್ಲ ಬಿಡಿ

ಹೇಗೆ ಕೊಟ್ಟರು, ಯಾಕೆ ಕೊಟ್ಟರು ಅನ್ನೋದು ನಮಗ್ಯಾಕೆ. ಫ್ರೀಯಾಗಿ ಕೊಟ್ಟರಲ್ಲ ಬಳಸೋಣ ಅಷ್ಟೇ ಅನ್ನೋದು ಜನ ಸಾಮಾನ್ಯರ ಮನದಾಳದ ಮಾತು. ಆದರೆ ಅನ್ಲಿಮಿಟೆಡ್ ಆಗಿ ಕೊಟ್ಟ ದೊಡ್ಡ ಮಟ್ಟದ ಇಂಟರ್ನೆಟ್ ಸೌಲಭ್ಯವನ್ನು ನಮ್ಮ ಭಾರತೀಯರು ಯಾವುದಕ್ಕೆ ಬಳಸಿಕೊಂಡರು ಗೊತ್ತ. ಅದಕ್ಕೇ ನಾನು ಒಂದು ಕೋಟಿಯ ಉದಾಹರಣೆ ಕೊಟ್ಟಿದ್ದು. ಇಂಟರ್ನೆಟ್ ಡಾಟಾ ಬೇಕಾದಷ್ಟು ಸಿಕ್ಕಿದೆ. ಆದರೆ ನಾವು ಅದನ್ನು ಹೇಗೆ ಮತ್ತು ಯಾವುದಕ್ಕೆ ಒಳ್ಳೆಯ ರೀತಿಯಲ್ಲಿ ಬಳಸಿಕೊಂಡಿದ್ದೇವೆ ಅನ್ನೋದು ಬಹಳ ಮುಖ್ಯ.

ಇಂಟರ್ನೆಟ್ ಒಂದು ಬಹಳಾ ಚೂಪಾದ ಚಾಕು. ಚಾಪಾಗಿರೋದರಿಂದ ಸ್ವಲ್ಪ ಜಾಸ್ತೀನೇ ಹುಷಾರಾಗಿ ಬಳಸಬೇಕು. ಮಕ್ಕಳ ಕೈಗೆ ಸಿಗದಂತೆ ನೋಡಿಕೊಳ್ಳಬೇಕು. ಸಿಕ್ಕರೂ ಸರಿಯಾಗಿ ಬಳಸುತ್ತಿದ್ದಾರೆಯೇ ಎಂಬುದನ್ನ ಖಾತ್ರಿ ಪಡಿಸಿಕೊಳ್ಳಬೇಕು. ಇಲ್ಲವಾದಲ್ಲಿ ದೊಡ್ಡ ಅವಗಡಗಳೇ ಸಂಭವಿಸಬಹುದು. ಇದಕ್ಕೆ ಸಾಕ್ಷಿ ಇತ್ತೀಚೆಗೆ ಹರಡುತ್ತಿರುವ ಸುಯಿಸೈಡ್ ಗೇಮ್, ಅಥವಾ ಡೆಡ್ಲಿ ಗೇಮ್ ಎಂದೇ ಪರಿಗಣಿಸಲಾಗಿರುವ ಬ್ಲೂ ವ್ಹೇಲ್ ಚಾಲೆಂಜ್ ಉತ್ತಮ ಉದಾಹರಣೆ. ಈಗಾಗಲೇ ಹಲವಾರು ಮಕ್ಕಳು ಈ ಡೆಡ್ಲಿ ಚಾಲೆಂಜ್’ಗೆ ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಬರೀ ಮಕ್ಕಳಲ್ಲ ಇಂಟರ್ನೆಟ್ ಬಳಸುವ ವಿಧಾನ ತಪ್ಪಾದರೆ, ಎಂತವರೂ ಹಾದಿ ತಪ್ಪುವುದರಲ್ಲಿ ಸಂದೇಹವಿಲ್ಲ. ಹಾಗಾದರೆ ಭಾರತೀಯರು ಇಂಟರ್ನೆಟ್ ಯಾವುದಕ್ಕೆ ಜಾಸ್ತಿ ಹಾಗೂ ಯಾವುದಕ್ಕೆ ಕಮ್ಮಿ ಬಳುತ್ತಾರೆ ? ಭಾರತೀಯರು ಯಾವ ಅವಶ್ಯಕತೆಗೆ ಇಂಟರ್ನೆಟ್ ಬಳಸುತ್ತಾರೆ ? ಫ್ರೀ ಇಂಟರ್ನೆಟ್ ಕೊಟ್ಟರೆ ನಿಜವಾಗಿಯೂ ನಮ್ಮ ಜನಗಳಿಗೆ ಅದನ್ನು ಸರಿಯಾಗಿ, ಒಳ್ಳೆಯದಕ್ಕೆ ಬಳಸಿಕೊಳ್ಳುವ ಕಲೆ ತಿಳಿದಿದೆಯೇ ? ಅಥವಾ ಈ ವಿಷಯವಾಗಿ ತಿಳುವಳಿಕೆ ನೀಡುವ ಅವಶ್ಯಕತೆ ಇದೆಯೇ ?

ಈಗಾಗಲೇ ಭಾರತದಲ್ಲಿ ಸುಮಾರು 460 ಮಿಲಿಯನ್ ಜನರು ಇಂಟರ್ನೆಟ್ ಬಳಸುತ್ತಿದ್ದಾರಂತೆ. TRAI (Telecom Regulatory Authority of India) ತನ್ನ ಕಳೆದ ತ್ರೈಮಾಸಿಕ ವರಿದಿಯಲ್ಲಿ ಹೊರ ಹಾಕಿರುವಾ ಅಂಕಿ ಅಂಶದ ಪ್ರಕಾರ ಕಳೆದ ವರ್ಷ ಸೆಪ್ಟೆಂಬರ್ ಹೊತ್ತಿಗೆ ಭಾರತದಲ್ಲಿ ಇಂಟರ್ನೆಟ್ ಬಳಸುವವರ ಸಂಖೆ ಸುಮಾರು 367 ಮಿಲಿಯನ್. ಇದರಲ್ಲೀ ಸುಮಾರು 230 ಮಿಲಿಯನ್ ಜನರು ಮೊಬೈಲ್ ಇಂಟರ್ನೆಟ್ ಬಳಸುತ್ತಿದ್ದಾರೆ. ಅಂಕಿ ಅಂಶಗಳ ಪ್ರಕಾರ 2021 ರ ಹೊತ್ತಿಗೆ ಭಾರತದಲ್ಲಿ ಇಂಟರ್ನೆಟ್ ಬಳಕೆದಾರರ ಸಂಖೆ 600 ಮಿಲಿಯನ್ ದಾಟಲಿದೆ. ಭಾರತೀಯರು ಇಂಟರ್ನೆಟ್ ಬಳಸುವುದಾದರೆ ಯಾವುದಕ್ಕೆ ಅಂತ ಕೇಳಿದರೆ ಈ ಅಂಕಿ ಅಂಶಗಳು ಹೇಳುವುದು ಒಂದೇ, ಅದು ಆನ್ಲೈನ್ ಶಾಪಿಂಗ್. ಹೌದು ಬಹುತೇಕ ಭಾರತೀಯರು ಇಂಟರ್ನೆಟ್ ಬಳಸುವುದು ಆನ್ಲೈನ್ ಶಾಪಿಂಗ್’ಗಾಗಿ. ಹಾಗಾಗಿ ಈವತ್ತು ಇ – ಕಾಮರ್ಸ್ ಬಿಸಿನೆಸ್ ಬಹಳ ಜಾಸ್ತಿ ಆಗಿರೋದು. ಇಂಟರ್ನೆಟ್ ಬಳಸುವುದರಲ್ಲಿ ಪುರುಷರೇ ಎತ್ತಿದ ಕೈಯಂತೆ. ಇನ್ನು ಭಾರತದ ಯುವಜನತೆ ಇಂಟರ್ನೆಟ್ ಬಳಸುವುದು ಸಾಮಾಜಿಕ ಜಾಲತಾಣದಲ್ಲಿ ಸಮಯ ಕಳೆಯುವುದಕ್ಕಾಗಿ. ಯುವ ಜನತೆ ಹೆಚ್ಚಿನ ಸಮಯ ಕಳೆಯೋದು ಫೇಸ್ಬುಕ್, ವ್ಹಾಟ್ಸ್’ಅಪ್, ಟ್ವಿಟ್ಟರ್ ಹಾಗೂ ಇನ್ನಿತರ ಜಾಲತಾಣಗಳಲ್ಲಿ. ಈ ಹುಚ್ಚು ಈಗ ಎಲ್ಲ ವರ್ಗದವರನ್ನು ಆಕರ್ಷಿಸುತ್ತಿದೆ ಹಾಗು ಆವರಿಸುತ್ತಿದೆ. ಜಿಯೋ ಸಿಮ್ ಹೊಂದಿರುವವರನ್ನು ಸರಿಯಾಗಿ ಗಮನಿಸಿ ನೋಡಿ. ದಿನದ ಹೆಚ್ಚು ಸಮಯ ಯೂಟುಬ್’ನಲ್ಲೇ ಕಳೆಯುತ್ತಾರೆ. ಯಾವ ತೆರೆನಾದ ವೀಡಿಯೊಗಳನ್ನ ನೋಡುತ್ತಾರೆ ಅಂತ ಮಾತ್ರ ಕೇಳಬೇಡಿ.

ಪ್ರಸ್ತುತ ಭಾರತದಲ್ಲಿ 20 ಶೇಕಡಕ್ಕಿಂತ ಹೆಚ್ಚು ಜನರು ಸ್ಮಾರ್ಟ್ ಬಳಸುತ್ತಿದ್ದಾರೆ ಎಂದುಕೊಳ್ಳಿ, ಅದರಲ್ಲಿ 80 ಶೇಖಡ ಬಳಕೆದಾರರು ಇಂಟರ್ನೆಟ್ ಬಳಸುವುದು ಆನ್ಲೈನ್’ನಲ್ಲಿ ಶಾಪಿಂಗ್ ಮಾಡಲು ಹಾಗೂ ಸಾಮಾಜಿಕ ಜಾಲತಾಣದಲ್ಲಿ ಕೆಲಸಕ್ಕೆ ಬಾರದ ಮೆಸೇಜ್ಗಳನ್ನು ಫಾರ್ವರ್ಡ್ ಮಾಡಿ ಎಲ್ಲರ ಸಮಯ ಹಾಳುಮಾಡುವುದಕ್ಕೆ. ಬೆರಳ ತುದಿಯಲ್ಲಿ ಬೇಕಾಗಿರೋದು, ಬೇಡದ್ದು ವಿಷಯಗಳು ನಮಗೆ ಈ ಇಂಟರ್ನೆಟ್ ಎಂಬ ದೊಡ್ಡ ಶರಧಿಯಿಂದ ಕ್ಷಣ ಮಾತ್ರದಲ್ಲಿ ದೊರೆಯುತ್ತದೆ. ನಮಗೆ ಯಾವುದಾದರೂ ವಿಷಯಗಳನ್ನು ಕಲಿಯಬೇಕೆಂಬ ಸಂಕಲ್ಪ ಇದ್ದಲ್ಲಿ ಇಂಟರ್ನೆಟ್ ಎಂಬ ಮಹಾಗುರು ಬೇಕಾದಷ್ಟು ಸಹಾಯ ಮಾಡುತ್ತಾನೆ. ಆದರೆ ನಮಗೆ ಕಲಿಯುವ ಉತ್ಸಾಹ ಇರಬೇಕು ಅಷ್ಟೇ. ಬೆರಳ ತುದಿಯಲ್ಲೇ ಬೇಕಾದ್ದೆಲ್ಲ ಮಾಹಿತಿ ಸಿಗುತ್ತಿದ್ದರೂ ಬಹಳಷ್ಟು ಮಂದಿಗೆ ಇಂಟರ್ನೆಟ್ ಹೇಗೆ ಬಳಸಿಕೊಳ್ಳಬೇಕು ಎಂಬ ಸರಿಯಾದ ಅರಿವು ಇಲ್ಲ. ಕೈಯಲ್ಲಿ ಅಮೃತ ಮತ್ತು ವಿಷ ಎರಡನ್ನೂ ಕೊಟ್ಟು ನಿನಗೆ ಅವಶ್ಯಕೆ ಇರುವುದನ್ನು ಆರಿಸಿಕೋ ಎಂದಾಗ ನಮಗೆ ಅಮೃತ ಮತ್ತು ವಿಷ ಎಂದರೆ ಏನು ಎಂಬ ಅರಿವಿದ್ದರೆ ಮಾತ್ರ ನಾವು ಸರಿಯಾದ ಆಯ್ಕೆ ಮಾಡುತ್ತೇವೆ. ಇಲ್ಲದಿದ್ದರೆ ತಪ್ಪಿ ವಿಷವನ್ನು ಆರಿಸಿಕೊಂದರೆ ಹೇಗಿರುತ್ತದೆ ಹೇಳಿ ? ಇನ್ನು ಈ ಇಂಟರ್ನೆಟ್ ನಿಮಗೆ ನೀಡುವ ಮಹಿತಿಗಳು ಎಲ್ಲವೂ ಸತ್ಯ ಹಾಗೂ ನಿಖರವಾದದ್ದಲ್ಲ. ಸರಿಯಾದ ಮಾಹಿತಿಯನ್ನು ಪಡೆದುಕೊಳ್ಳುವ ವಿಧಾನವನ್ನು ತಿಳಿದಿರಬೇಕು. ಗೂಗಲ್ ಮಾಡುವುದು ಹೇಗೆ ಎಂಬುದನ್ನ ಸ್ವತಹ ಗೂಗಲ್ ನಿಮಗೆ ಹೇಳಿಕೊಡುತ್ತದೆ.  

ಭಾರತ ಇನ್ನೂ ಡಿಜಿಟಲ್ ಕ್ರಾಂತಿಗೆ ಸರಿಯಾಗಿ ತಯಾರಾಗಿಲ್ಲ. ನಮ್ಮ ದೇಶದ ಎಲ್ಲ ಮೂಲೆಗಳಿಗೂ ಇಂಟರ್ನೆಟ್ ಸೇವೆ ಸಿಗುವಂತೆ ಮಾಡಲು ಇನ್ನೂ ಹಲವಾರು ವರ್ಷಗಳು ಬೇಕಾಗಬಹುದು. ಜೊತೆಗೆ ಇಂಟರ್ನೆಟ್ ಬಳಕೆಯ ಬಗ್ಗೆ ಹಲವಾರೂ ವರ್ಗದ ಜನರಿಗೆ ಸರಿಯಾದ ಅರಿವು ಮೂಡಿಸುವ ಅಗತ್ಯವಿದೆ.

ಎಲ್ಲವನ್ನೂ ಡಿಜಿಟಲ್ ಮಾಡುವ ಮೊದಲು ಇಂಟರ್ನೆಟ್ ಕುರಿತಾಗಿ ಸಮಾಜದ ಪ್ರತಿಯೊಂದು ವರ್ಗದ ಜನತೆಗೆ ಅರಿವು ಮೂಡಿಸುವ ಅಗತ್ಯವಿದೆ.

 

Facebook ಕಾಮೆಂಟ್ಸ್

ಲೇಖಕರ ಕುರಿತು

Manjunath Madhyasta

ಹೆಸರು ಮಂಜುನಾಥ್ ಮಧ್ಯಸ್ಥ. ಓದಿದ್ದು ವಿಜ್ಞಾನ. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ವೃತ್ತಿ. ಸಾಹಿತ್ಯ ಹಾಗೂ ಅಧ್ಯಾತ್ಮದಲ್ಲಿ ಬಹಳ ಆಸಕ್ತಿ. ಬರೆಯೋದು ನೆಚ್ಚಿನ ಹವ್ಯಾಸ. ಭೌತಶಾಸ್ತ್ರ ಹಾಗೂ ಖಗೋಳ ಶಾಸ್ತ್ರ ನನ್ನ ನೆಚ್ಚಿನ ವಿಷಯಗಳು.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!