ಮಂಕುತಿಮ್ಮನ ಕಗ್ಗ ಟಿಪ್ಪಣಿ ೦೭೧.
ತರಣಿ ಕಿರಣದ ನಂಟು ಗಗನ ಸಲಿಲದ ನಂಟು |
ಧರಣಿ ಚಲನೆಯ ನಂಟು ಮರುತನೊಳ್ನಂಟು ||
ಪರಿಪರಿಯ ನಂಟುಗಳಿನೊಂದು ಗಂಟೀ ವಿಶ್ವ |
ಕಿರಿದು ಪಿರಿದೊಂದಂಟು – ಮಂಕುತಿಮ್ಮ || ೦೭೧ ||
ತರಣಿ = ಸೂರ್ಯ; ಸಲಿಲ = ನೀರು
ವಿಶ್ವದ ಸಕಲವು ಹೇಗೆ ಒಂದಕ್ಕೊಂದು ಬಂಧಿತವಾಗಿದೆ, ಅವಲಂಬಿತವಾಗಿದೆ ಮತ್ತು ಅವು ಹೇಗೆ ಪೂರಕ ಸಮತೋಲನದಲ್ಲಿ ಅಸ್ತಿತ್ವದಲ್ಲಿವೆ ಎನ್ನುವುದನ್ನು ಸಾಂಕೇತಿಕವಾಗಿ ಬಿಂಬಿಸುತ್ತಿದೆ ಈ ಕಗ್ಗ. ದೊಡ್ಡದಿರಲಿ, ಚಿಕ್ಕದಿರಲಿ ಸೃಷ್ಟಿಯ ಪ್ರತಿಯೊಂದು ವಸ್ತುವು ಯಾವುದೋ ಉದ್ದೇಶದಿಂದ ಸೃಜಿಸಲ್ಪಟ್ಟಿದೆ ಮತ್ತು ಒಂದು ಮತ್ತೊಂದಕ್ಕೆ ನಿರ್ದಿಷ್ಠ ಅವಲಂಬನೆಯ ಕೊಂಡಿಯ ರೂಪಲ್ಲಿ ಜೋಡಿಸಲ್ಪಟ್ಟಿದೆ. ಉದಾಹರಣೆಗೆ ಪ್ರಾಣಿ ಮತ್ತು ಸಸ್ಯ ಜಗದ ನಡುವೆ ಇರುವ ನಂಟು: ಪ್ರಾಣಿ ಜಗಕ್ಕೆ ಉಸಿರಾಡಲು ಆಮ್ಲಜನಕ ಬೇಕು; ಅದನ್ನು ಕೊಡುವ ಕೆಲಸವನ್ನು ಸಸ್ಯಗಳು ಮಾಡುತ್ತವೆ. ಅದೇ ರೀತಿ ಸಸ್ಯಗಳ ಆಹಾರ ತಯಾರಿಕೆಗೆ ಇಂಗಾಲದ ಡೈ ಆಕ್ಸೈಡ್ ಬೇಕು; ಪ್ರಾಣಿಗಳು ಉಸಿರಾಟದ ಮೂಲಕ ಅದನ್ನು ಸಸ್ಯ ಜಗತ್ತಿಗೆ ನೀಡುತ್ತವೆ. ಇಂತಹ ಅಸಂಖ್ಯಾತ ನಂಟುಗಳ ಗಂಟು ಹಾಕಿದ ಗಂಟೆ ಈ ವಿಶ್ವ ಎನ್ನುವುದು ಈ ಕಗ್ಗದ ಸಾರ. ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ವಿಷಯವೆಂದರೆ ಹೊರನೋಟಕ್ಕೆ ಜಟಿಲವಾಗಿ, ಸಂಕೀರ್ಣವಾಗಿ ಕಾಣುವ ವಿಶ್ವವು ವಾಸ್ತವವಾಗಿ ಹಂತಹಂತದ ಸೂಕ್ಷ್ಮ ಮಟ್ಟದಿಂದ ಸ್ಥೂಲ ಮಟ್ಟದವರೆಗಿನ ಶಿಸ್ತುಬದ್ಧ ಕೊಂಡಿಗಳಿಂದ ಸರಪಳಿಯ ಹಾಗೆ ಬಂಧಿಸಲ್ಪಟ್ಟಿದೆ ಎನ್ನುವುದು.
ತರಣಿ ಕಿರಣದ ನಂಟು ಗಗನ ಸಲಿಲದ ನಂಟು |
ಧರಣಿ ಚಲನೆಯ ನಂಟು ಮರುತನೊಳ್ನಂಟು ||
ತರಣಿಯೆಂದರೆ ಸೂರ್ಯ. ಅಗಾಧ ಶಾಖದ ಮೂಲವಾದ ಸೂರ್ಯ ವಿಶ್ವದೊಡನೆ ತನ್ನ ನಂಟನ್ನಿಟ್ಟುಕೊಂಡಿರುವುದು ತನ್ನ ಬೆಳಕಿನ ಕಿರಣಗಳ ಮೂಲಕ. ತನ್ನ ಸ್ಥಾನದಿಂದ ಚಲಿಸದೆಯೆ ತನ್ನ ಕಿರಣಗಳನ್ನು ಹಾಯಿಸುವುದರ ಮೂಲಕ ತನಗೆ ಬೇಕಾದ ಕಡೆ ಸಾಗಿ ತನ್ನ ಕಾರ್ಯ ನಿಭಾಯಿಸುತ್ತಾನೆ ಸೂರ್ಯ. ಹೀಗಾಗಿ ಸೂರ್ಯನಿಗು ಬೆಳಕಿನ ಕಿರಣಗಳಿಗು ಒಂದು ಬಗೆಯ ಅವಿನಾಭಾವ ಸಂಬಂಧ.
ಹೀಗೆ ಗಗನದ ವಿಷಯಕ್ಕೆ ಬಂದರೆ ಗಗನ ತಾನು ಇದ್ದಲ್ಲಿಯೆ ಇದ್ದರು ವಿಶ್ವದೊಡನೆ ತನ್ನ ನಂಟಿರಿಸಿಕೊಂಡಿರುವುದು ಜಲದ ಮೂಲಕ. ಗಗನದ ಖಾಲಿ ಬಯಲಲಿ ಮೋಡದ ರೂಪಲ್ಲಿಯೊ, ತೇವಾಂಶದ ರೂಪಲ್ಲಿಯೊ ನೀರು ಶೇಖರವಾಗಿರುತ್ತದೆ. ಆ ನೀರು ಮಳೆಯ ರೂಪದಲ್ಲಿಯೊ ಅಥವಾ ವಾತಾವರಣದ ತೇವಾಂಶದ ರೂಪದಲ್ಲಿಯೊ ಭೂಮಿ ಮತ್ತಿತರ ವಿಶ್ವದ ಅಂಗಗಳೊಡನೆ ಸಂಪರ್ಕವನ್ನೇರ್ಪಡಿಸಿಕೊಂಡಿರುತ್ತದೆ. ಸೂರ್ಯನ ಬಿಸಿಲಿನ ಸಹಾಯದಿಂದ ಅದೇ ನೀರು ಮತ್ತೆ ಆವಿಯಾಗಿ ನಿರಂತರ ಜಲಚಕ್ರವಾಗುದು ಸಹ ಈ ನಂಟಿನ ಮೂಲಕವೆ. ಇಲ್ಲಿ ಗಗನ – ನೀರಿನ ಹತ್ತಿರದ ಸಂಬಂಧದ ಜತೆಗೆ ಸೂರ್ಯನ ಜತೆಗಿನ ಮತ್ತೊಂದು ನಂಟಿನ ಕೊಂಡಿ ವ್ಯವಸ್ಥೆಯ ಸಮತೋಲನತೆಯನ್ನು ನಿಭಾಯಿಸುತ್ತಿರುವುದನ್ನು ಗಮನಿಸಬಹುದು.
ಹೀಗೆ ಮುಂದುವರೆದರೆ ಧರಣಿಗು ಮತ್ತದರ ಚಲನೆಗು ಇರುವ ನಂಟು ಕಾಣಿಸುತ್ತದೆ. ಭೂಮಿ ತನ್ನ ಕಕ್ಷೆಯಲ್ಲಿ ನಿಯಮಬದ್ಧವಾಗಿ ಚಲಿಸುತ್ತಿರುವುದರಿಂದಲೇ ಹಗಲು, ರಾತ್ರಿ, ದಿನಗಳ ಜತೆಗೆ ಋತುಗಳು, ವರ್ಷಗಳೂ ಆಗುತ್ತಿರುವುದು. ಅದೇ ಭೂಮಿ ಸೂರ್ಯನಿಂದಿರುವ ದೂರದನುಸಾರ ಬೇಸಿಗೆ ಕಾಲ, ಮಳೆಗಾಲ, ಚಳಿಗಾಲವಾಗುವುದು – ಸೂರ್ಯನೊಡನಿರುವ ಅದರ ನಂಟಿನಿಂದಾಗಿ.
ಇವೆಲ್ಲವು ಒಂದಲ್ಲ ಒಂದು ರೀತಿಯಲ್ಲಿ ಗಾಳಿಯೊಡನೆ (ಮಾರುತ) ನಂಟು ಹಾಕಿಕೊಂಡಿವೆ. ಗಾಳಿಯ ಚಲನೆ, ವರ್ತನೆಯನುಸಾರ ಮಳೆ ಬೀಳುವ ದಿಕ್ಕು ದೆಸೆ ನಿರ್ಧಾರಿತವಾಗುವುದು, ಬಿಸಿಲಿನ ಪ್ರಖರತೆ ಏರಿಳಿಯುವುದು. ಹೀಗೆ ಎಲ್ಲವೂ ತಮ್ಮತಮ್ಮಲ್ಲೆ ಮತ್ತು ಪರಸ್ಪರರಲ್ಲೆ ನಂಟು ಹಾಕಿಕೊಂಡು ಈ ವಿಶ್ವದ ಅಸ್ತಿತ್ವಕ್ಕೆ ತಮ್ಮ ಪಾತ್ರದ ಮೂಲಕ ನ್ಯಾಯ ಸಲ್ಲಿಸುತ್ತಿವೆ.
ಪರಿಪರಿಯ ನಂಟುಗಳಿನೊಂದು ಗಂಟೀ ವಿಶ್ವ |
ಕಿರಿದು ಪಿರಿದೊಂದಂಟು – ಮಂಕುತಿಮ್ಮ ||
ಹೀಗೆ ಚರಾಚರಗಳೇನೆ ಇರಲಿ ಎಲ್ಲವು ಪರಿಪರಿಯ, ಬಗೆಬಗೆಯ ನಂಟುಗಳಿಂದ ಪರಸ್ಪರ ಅಂಟಿಸಲ್ಪಟ್ಟಿವೆ. ಸಮಷ್ಟಿಯ ದೃಷ್ಟಿಯಿಂದ ಇವೆಲ್ಲವೂ ಒಂದೇ ವಿಶ್ವದ ಭಾಗವಾದ ಕಾರಣ ಈ ಒಟ್ಟುಗೂಡಿದ ನಂಟುಗಳೆಲ್ಲ ಒಟ್ಟಾಗಿ ಸೇರಿಕೊಂಡ ಒಂದು ದೊಡ್ಡ ಗಂಟಿನ ಹಾಗೆ ಕಾಣಿಸಿಕೊಳ್ಳುತ್ತವೆ. ಈ ಸಂಕಿರ್ಣ ಗಂಟಿನಲ್ಲಿ ಕೆಲವು ಚಿಕ್ಕದಿದ್ದರೆ (ಕಿರಿದು), ಕೆಲವು ದೊಡ್ಡವು (ಪಿರಿದು). ಈ ನಂಟಿನ ವಿಷಯಕ್ಕೆ ಬಂದಾಗ ನಂಟಿಗೆ ಇಂತದ್ದೆ ಗಾತ್ರದ್ದೇ ಇರಬೇಕೆಂದಿಲ್ಲ. ಚಿಕ್ಕದೊಂದು ದೊಡ್ಡದೊಂದರ ಜತೆ ತಳುಕು ಹಾಕಿಕೊಂಡಿರಬಹುದು. ದೊಡ್ಡದು ದೊಡ್ಡದರ ಜತೆ, ಚಿಕ್ಕದು ಚಿಕ್ಕದ್ದರ ಜತೆಯೂ ನಂಟು ಬೆಸೆದುಕೊಂಡಿರಬಹುದು. ಅದೇನೇ ಇದ್ದರು ಅವೆಲ್ಲದರ ಹಿಂದೆ ಒಂದು ನಿರ್ದಿಷ್ಠ ಕಾರ್ಯಕಾರಣ ವ್ಯವಸ್ಥೆ ಶಿಸ್ತುಬದ್ಧವಾಗಿ ಕೆಲಸ ಮಾಡುತ್ತಿದೆ. ಪ್ರತಿಯೊಂದೂ ತಾವೇ ಒಂದು ಸ್ವತಂತ್ರ ವ್ಯವಸ್ಥೆ ಎನ್ನುವ ಹಾಗೆ ಕಾರ್ಯ ನಿರ್ವಹಿಸುತಿದ್ದರು , ನೈಜದಲ್ಲಿ ಅವೆಲ್ಲದರ ಸಮಷ್ಟಿ ಮೊತ್ತ ಕೂಡ ಶಿಸ್ತುಬದ್ಧವಾಗಿ ನಡೆಯುತ್ತಿರುವ ವಿಶ್ವದ ಏಕರೂಪಿ ಮೊತ್ತವಾಗಿ ಕಾರ್ಯ ನಿರ್ವಹಿಸುತ್ತಿದೆ. ಹೀಗೆ ಅನೇಕ ಸಣ್ಣ-ದೊಡ್ಡ ‘ಸಂತುಲಿತ ವ್ಯವಸ್ಥೆಗಳ ನಂಟಿನ ಸಂತುಲಿತ ವ್ಯವಸ್ಥೆ’ ಈ ವಿಶ್ವ ಎನ್ನುತ್ತಿದ್ದಾನೆ ಮಂಕುತಿಮ್ಮ.
#ಕಗ್ಗಕ್ಕೆ_ಹಗ್ಗ
#ಕಗ್ಗ_ಟಿಪ್ಪಣಿ