ಅಂಕಣ

೭೦. ರಸ ವಾಸನೆ ಸರಕಿನ ನಿರಂತರತೇ, ಸಮತೋಲನ !

ಮಂಕುತಿಮ್ಮನ ಕಗ್ಗ ಟಿಪ್ಪಣಿ :

 

ಭೂವಿಷಯದಲಿ ಪುದಿದ ರಸವಾಸನೆಗಳೆಲ್ಲ |

ಆವಿಯಾಗೇಳ್ದು ಮುಗಿಲಾಗಿ ಮಳೆಗರೆದು ||

ಬಾವಿಗೂಟೆಯನಿತ್ತು ನರರೊಡಲ ಸೇರುವುದು |

ದೈವ ರಸತಂತ್ರವಿದು – ಮಂಕುತಿಮ್ಮ ||

 

(ಪುದಿದ = ತುಂಬಿಸಿಟ್ಟ; ಊಟೆ = ಬುಗ್ಗೆ, ಚಿಲುಮೆ)

 

ಭೂವಿಷಯದಲಿ ಪುದಿದ ರಸವಾಸನೆಗಳೆಲ್ಲ |

ಆವಿಯಾಗೇಳ್ದು ಮುಗಿಲಾಗಿ ಮಳೆಗರೆದು ||

 

ಇಲ್ಲಿ ನಿಸರ್ಗದಲ್ಲಿ ನಿರಂತರ ನಡೆಯುವ ಜಲಚಕ್ರದ ಸಾಂಕೇತಿಕ ವರ್ಣನೆಯನ್ನು ಕಾಣಬಹುದು. ಈ ಭೂಮಿ ತನ್ನ ಸುತ್ತಲ ಪರಿಸರದಲ್ಲಿ ನಡೆಯುವ ದ್ಯುತಿ ಸಂಶ್ಲೇಷಣೆಯಂತಹ ಅನೇಕ ನಿಸರ್ಗ ಸಹಜ ಪ್ರಕ್ರಿಯೆಗಳಿಂದ ಉತ್ಪನ್ನವಾದ ಫಲಿತವನ್ನು (ಉದಾಹರಣೆಗೆ ಪ್ರಾಣವಾಯುವಿನ ಜತೆ ನೀರು) ತನ್ನೊಡಲಲ್ಲಿ ಸೇರಿಸಿಟ್ಟುಕೊಂಡಿರುವುದು ಗೊತ್ತಿರುವ ವಿಷಯವೇ (ಮಳೆಯ ನೀರಿನ ಶೇಖರಣೆ ಇದರ ಮತ್ತೊಂದು ಉದಾಹರಣೆ). ಹೀಗೆ ಯಾವಾವುದೊ ರಸವಾಸನೆಗಳನ್ನೆಲ್ಲ (ತ್ಯಾಜ್ಯ, ಗ್ರಾಹ್ಯ ಎನ್ನುವ ಬೇಧಭಾವ ತೋರದೆ) ತನ್ನಲ್ಲಿ ಶೇಖರಿಸಿಡುತ್ತಿರುತ್ತದೆ ಭೂಮಿ. ವಿಸ್ಮಯವೆಂದರೆ ಒಂದೆಡೆ ನಿಸರ್ಗದ ಭಾಗವಾದ ಸೂರ್ಯನ ಬೆಳಕು ಈ ಕಾರ್ಯದ ಪ್ರೇರಕ ಶಕ್ತಿಯಾದರೆ ಮತ್ತೊಂದೆಡೆ ಅದೇ ಸೂರ್ಯನ ಶಾಖ, ಪ್ರಖರ ಬಿಸಿಲಾಗಿ ಈ ಅವನಿಯನ್ನು ಬಿಸಿಯಾಗಿಸಿ ಕಾಡುವುದು. ಆದರೆ ಅಲ್ಲಿಯೂ ಒಂದು ನಿರ್ದಿಷ್ಠ ಉದ್ದೇಶವಿರುವುದು ಸೂಕ್ಷ್ಮವಾಗಿ ಗಮನಿಸಿದರಷ್ಟೇ ಗೊತ್ತಾಗುತ್ತದೆ. ಕಾದು ಬಿಸಿಯಾದ ಧರಣಿ ‘ಪುದಿದ ರಸವಾಸನೆಗಳನ್ನೆಲ್ಲ’ ಸೋಸಿ, ಆವಿಯ ರೂಪದಲ್ಲಿ ಒಳಗಿಂದ ಹೊರಗೆಳೆದುಕೊಂಡುಬರುತ್ತದೆ. ಆವಿ ಅನಿಲ ರೂಪಾದ ಕಾರಣ ಹಗುರಾಗಿ ಮೇಲೇರುತ್ತಾ ಮುಗಿಲನ್ನು ಸೇರಿ ಅಲ್ಲಿ ಮೋಡದ ರೂಪ ಧಾರಣೆ ಮಾಡಿಕೊಳ್ಳುತ್ತದೆ. ಅಲ್ಲಿನ ತಂಪಿನಿಂದ ಸಾಂದ್ರಗೊಂಡ ಮೋಡಗಳು ಮಳೆಯಾಗಿ ಮತ್ತೆ ಅದೇ ಭುವಿಗೆ ವಾಪಸ್ಸು ಸುರಿಯುತ್ತವೆ – ಮಳೆ ನೀರಿನ ರೂಪದಲ್ಲಿ. ಹೀಗೇ ಮತ್ತೆ ಇಳೆಗೆ ಮರಳಿದ ಜಲ ಭುವಿಯೊಡಲನ್ನು ತುಂಬಿಕೊಳ್ಳುತ್ತದೆ ಒಂದಲ್ಲ ಒಂದು ತರದ ರಸವಾಸನೆಯಾಗಿ. ಸಂದುಗೊಂದು ಸಿಕ್ಕಲ್ಲೆಲ್ಲ ಹರಿದು, ಸಿಕ್ಕಿದ್ದನ್ನೆಲ್ಲ ಬಾಚಿಕೊಂಡು ಆಳದ ಬಂಡೆಗಳಡಿಯಲ್ಲೆಲ್ಲೋ ನುಸುಳಿ ನೀರಿನ ಆಕರವಾಗಿ ಸಂಗ್ರಹವಾಗುತ್ತದೆ.

ಬಾವಿಗೂಟೆಯನಿತ್ತು ನರರೊಡಲ ಸೇರುವುದು |

ದೈವ ರಸತಂತ್ರವಿದು – ಮಂಕುತಿಮ್ಮ ||

ಹೀಗೆ ಸಂಗ್ರಹವಾದ ನೀರೇ ಅಂತರ್ಜಲವಾಗಿ ಪ್ರವಹಿಸಿಕೊಂಡು ಬಾವಿಯೊಳಗಿನ ಚಿಲುಮೆಯಾಗಿ ಚಿಮ್ಮಿ ನೀರಿನ ಗ್ರಾಹ್ಯ ಮೂಲವಾಗಿಬಿಡುತ್ತದೆ.  ಕೊನೆಗೆ ಕುಡಿಯಲೆಂದು ಜನ ಅದೇ ಬಾವಿ ನೀರು ಸೇದಿಕೊಂಡಾಗ  ನರರೊಡಲಿಗೆ ಸೇರಿಕೊಳ್ಳುವುದು. ಅಲ್ಲಿ ಒಂದಷ್ಟು ದೇಹದಲ್ಲೇ ರೂಪಾಂತರವಾಗಿ ನಾನಾ ಭಾಗ ಸೇರಿಕೊಂಡರೆ ಮಿಕ್ಕಿದ್ದು ತ್ಯಾಜ್ಯದ ರೂಪದಲ್ಲಿ ದೇಹದಿಂದ ಹೊರದೂಡಲ್ಪಡುತ್ತದೆ. ಮತ್ತೆ ಯಾವುದೋ ಬಗೆಯ ರಸವಾಸನೆಯ ರೂಪಾಗಿ  ಭೂಮಿಗೆ ಸೇರಿಕೊಂಡು, ಇಡೀ ಜಲಚಕ್ರ ಪುನರಾವರ್ತನೆಗೊಳ್ಳುತ್ತದೆ ಕಾಲಚಕ್ರದ ಚೌಕಟ್ಟಿನಲ್ಲಿ.

ಈ ಕ್ರಿಯೆ ಯಾರ ನೇತೃತ್ವದ ಸಹಕಾರವಿಲ್ಲದೆ ತನ್ನಂತಾನೆ ನಿರಂತರವಾಗಿ ನಡೆದುಕೊಂಡು ಹೋಗುತ್ತಿರುವುದು ಮಾತ್ರ ದೊಡ್ಡ ವಿಸ್ಮಯವೇ ಸರಿ. ಒಂದೆಡೆ ಅದು ಸಮತೋಲನದಲ್ಲಿ ಸಾಗುವ ಪರಿ, ಇನ್ನೊಂದೆಡೆ ಸ್ವಯಂಭುವಿನಂತೆ ತಂತಾನೇ  ನಿಭಾಯಿಸುವ ಪರಿ – ಇವೆರಡನ್ನೂ ನೋಡಿದರೆ ‘ಇವನ್ನೆಲ್ಲ ಸೃಜಿಸಿತ್ತ ದೈವದ ರಸತಂತ್ರಕ್ಕೆ ಎಣೆಯುಂಟೆ? ಸಮನುಂಟೆ?’ ಎಂದು ವಿಸ್ಮಯಿಸುತ್ತಾನೆ ಮಂಕುತಿಮ್ಮ .

ಹಾಗೆ ನೋಡಿದರೆ ಪ್ರಪಂಚದ ಪ್ರತಿ ವಸ್ತು ವಿಷಯವೂ  ಇಂತದ್ದೊಂದು ನಿರಂತರ ಸಮತೋಲಿತ ಚಕ್ರದಲ್ಲಿ ಬಂಧಿಯಾಗಿರುತ್ತದೆ. ಪ್ರೀತಿ-ಪ್ರೇಮ-ಕೋಪ-ದ್ವೇಷಗಳೆಂಬ ಭಾವಾಲಾಪಗಳಾಗಲಿ, ಭೌತಿಕ ಸ್ವರೂಪದ ಅಚರ ವಸ್ತುಗಳಾಗಲಿ – ಎಲ್ಲಕ್ಕೂ ಇದು ಸಂಗತ.

ಭೂಮಿಯ ವಿಷಯವನ್ನೆ ಪರಿಗಣಿಸಿ ನೋಡಿದಾಗ ಹಲವು ಕುತೂಹಲಕಾರಿ ವಿಷಯಗಳು ಕಾಣುತ್ತವೆ.  ಮೊಟ್ಟ ಮೊದಲಿಗೆ ಅದರ ಗರ್ಭದಲ್ಲಿರುವ ಅಗಾಧ ಮತ್ತು ಅಪಾರ ಐಶ್ವರ್ಯ. ಕೃಷಿಗೆ ಬೇಕಾದ ಮಣ್ಣಿನಿಂದ ಆರಂಭಿಸಿ ಖನಿಜಗಳು, ನಿಕ್ಷೇಪಗಳು, ಬೆಲೆಬಾಳುವ ಕಲ್ಲುಗಳು, ಗಿಡ, ಮರ, ಜೀವರಾಶಿ – ಅಷ್ಟೇಕೆ ಅವನಿಯ ಬಹುಪಾಲನ್ನು ಆವರಿಸಿಕೊಂಡ ಸಮುದ್ರವಿರುವುದು ಕೂಡ ಈ ಭುವಿಯ ಮೇಲೆ. ಹೀಗಾಗಿ ಆ ವಸ್ತು ವಿಷಯಗಳ ರಸವಾಸನೆಗಳೆಲ್ಲದರಿಂದ ತುಂಬಿಹೋಗಿದೆ ಭೂಮಿಯ ಒಡಲು. ಇಲ್ಲಿ ವಿಷಯ, ರಸ, ವಾಸನೆ ಈ ಪದಗಳ ಬಳಕೆ ಗಮನಾರ್ಹ. ಮೇಲೆ ಕಸದಂತೆ ಕಂಡರೂ ಒಳಗೆ ರಸ ತುಂಬಿಕೊಂಡ ಈ ವಸ್ತು ವಿಷಯಗಳೆಲ್ಲವೂ ಕೇವಲ ಭೌತಿಕ ಅಸ್ತಿತ್ವ ಮಾತ್ರವಲ್ಲ ಅಲೌಕಿಕ ಗಹನತೆಯನ್ನು ಒಳಗೊಂಡಿರುವುದು ಇಲ್ಲಿನ ವಿಶೇಷ. ಆ ಕಾರಣದಿಂದಲೇ ಏನೋ ಇಂಗಾಲ ಭುವಿಯಲ್ಲಿ ಸಾಧಾರಣ ಇದ್ದಿಲಾಗಿಯೂ ಇರಬಹುದು, ಅಸಾಮಾನ್ಯ ಒತ್ತಡದ ನಡುವೆ ರೂಪುಗೊಳ್ಳುವ ವಜ್ರದ ಕಲ್ಲೂ ಆಗಿರಬಹುದು.

ಮತ್ತೊಂದು ಒಳನೋಟದಲ್ಲಿ ‘ಭೂವಿಷಯ’ ಎನ್ನುವುದು ವಿಷಯಾಸಕ್ತತೆ ಅಥವಾ ಇಹ ಜಗದ ವ್ಯಾಮೋಹದ ಸಂಕೇತವಾಗಿ ಪ್ರಕ್ಷೇಪಿತವಾದರೆ ‘ರಸ ವಾಸನೆಗಳು’ ಆ ವ್ಯಾಮೋಹದಲ್ಲಿ ಬಂಧಿಸಿಡಲು ಬಳಸುವ ಸಾಮಾಗ್ರಿ/ಪರಿಕರಗಳಾಗಿಬಿಡುತ್ತವೆ. ಬಿಟ್ಟರೂ ಬಿಡದ ಮಾಯೆಯ ಸ್ವರೂಪವೂ ಇದೇ ತರಹದ್ದು. ಬದುಕಿನ ಜಂಜಡ , ವಿಷಯಾಸಕ್ತಿಯಿಂದ ಬೇಸತ್ತು, ಸಾಕಾಗಿ ದೂರವಿರಲೆಣಿಸಿದಷ್ಟೂ – ಅದರ ಮತ್ತಷ್ಟು ಬಲವತ್ತರ ಪ್ರಲೋಭನೆಯ ರೂಪಾಗಿ ಮತ್ತದೇ ಚಕ್ರದಲ್ಲಿ ಬಂಧಿಸಿಡುವ ರಸವಾಸನೆಗಳು ಚಕ್ರದ ನಿರಂತರತೆಯನ್ನು  ಕಾಪಾಡಿಕೊಳ್ಳುತ್ತಿರುತ್ತವೆ. ಬಹುಶಃ ಆ ನಿರಂತರತೆಯೇ ಹಂತಹಂತವಾಗಿ (ಅನುಭವದ ರೂಪದಲ್ಲಿ) ಪಕ್ವತೆಯನ್ನು ಪ್ರಬುದ್ಧಗೊಳಿಸುವ ಪಾಕವೆನ್ನಬಹುದು.

ಹೀಗೆ ಮೇಲ್ನೋಟದಲ್ಲಿ ಪೃಥ್ವಿಯ ಸಾಮಾನ್ಯ ಪ್ರಕ್ರಿಯೆಯನ್ನು ವರ್ಣಿಸಿದಂತೆ ಕಂಡರೂ ಆಳವಾದ ನೋಟದಲ್ಲಿ ಅದರ ಮತ್ತಷ್ಟು ಆಯಾಮಗಳನ್ನೂ ಊಹಿಸಿಕೊಳ್ಳಬಹುದು.

# ಕಗ್ಗ_ಟಿಪ್ಪಣಿ

# ಕಗ್ಗಕೊಂಡು_ಹಗ್ಗ

Facebook ಕಾಮೆಂಟ್ಸ್

ಲೇಖಕರ ಕುರಿತು

Nagesha MN

ನಾಗೇಶ ಮೈಸೂರು : ಓದಿದ್ದು ಇಂಜಿನಿಯರಿಂಗ್ , ವೃತ್ತಿ - ಬಹುರಾಷ್ಟ್ರೀಯ ಸಂಸ್ಥೆಯೊಂದರಲ್ಲಿ.  ಪ್ರವೃತ್ತಿ - ಪ್ರಾಜೆಕ್ಟ್ ಗಳ ಸಾಂಗತ್ಯದಲ್ಲೆ ಕನ್ನಡದಲ್ಲಿ ಕಥೆ, ಕವನ, ಲೇಖನ, ಹರಟೆ ಮುಂತಾಗಿ ಬರೆಯುವ ಹವ್ಯಾಸ - ಹೆಚ್ಚಾಗಿ 'ಮನದಿಂಗಿತಗಳ ಸ್ವಗತ' ಬ್ಲಾಗಿನ ಅಖಾಡದಲ್ಲಿ . 'ಥಿಯರಿ ಆಫ್ ಕನ್ಸ್ ಟ್ರೈಂಟ್ಸ್' ನೆಚ್ಚಿನ ಸಿದ್ದಾಂತಗಳಲ್ಲೊಂದು. ಮ್ಯಾನೇಜ್ಮೆಂಟ್ ಸಂಬಂಧಿ ವಿಷಯಗಳಲ್ಲಿ ಹೆಚ್ಚು ಆಸಕ್ತಿ. 'ಗುಬ್ಬಣ್ಣ' ಹೆಸರಿನ ಪಾತ್ರ ಸೃಜಿಸಿದ್ದು ಲಘು ಹರಟೆಗಳ ಉದ್ದೇಶಕ್ಕಾಗಿ. ವೈಜ್ಞಾನಿಕ, ಆಧ್ಯಾತ್ಮಿಕ ಮತ್ತು ಸೈದ್ದಾಂತಿಕ ವಿಷಯಗಳಲ್ಲಿ ಆಸ್ಥೆ. ಸದ್ಯದ ಠಿಕಾಣೆ ವಿದೇಶದಲ್ಲಿ. ಮಿಕ್ಕಂತೆ ಸರಳ, ಸಾಧಾರಣ ಕನ್ನಡಿಗ

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!