Featured ಅಂಕಣ

ಸೀತಾರಾಮ ಗೋಯಲ್ – ವ್ಯಕ್ತಿ ಶಕ್ತಿ – 1 : ಚೀನಾ ಜೊತೆ ಸೋತು ಮಣ್ಣು ಮುಕ್ಕಿದ ಕೋಪಕ್ಕೆ ಪ್ರಧಾನಿ ನೆಹರೂ ಬಂಧಿಸಿದ್ದು ನಿಷ್ಪಾಪಿ ಗೋಯಲ್‍ರನ್ನು!

ನಾವು ಚಿಕ್ಕವರಿದ್ದಾಗ ಸ್ಕೌಟ್ ಕ್ಯಾಂಪ್‍ಗಳಲ್ಲಿ ಸರ್ವಧರ್ಮ ಪ್ರಾರ್ಥನೆಯಲ್ಲಿ ಪಾಲ್ಗೊಳ್ಳುತ್ತಿದ್ದೆವು. ಕ್ಯಾಂಪ್ ನಡೆಯುವ ಅಷ್ಟೂ ದಿನ ಮುಂಜಾನೆ ಆರಕ್ಕೆ ನಾವೆಲ್ಲ ಒಂದೆಡೆ ಸೇರಿ ಎಲ್ಲ ಧರ್ಮಗ್ರಂಥಗಳ ಒಂದೋ ಎರಡೋ ಚರಣಗಳನ್ನು ಹೇಳಬೇಕಾಗಿತ್ತು. ಮುಸ್ಲಿಮ್ ಹುಡುಗನೊಬ್ಬ ಕುರಾನ್‍ನ ಯಾವುದೋ ನಾಲ್ಕು ಸಾಲು ಹೇಳಿದರೆ, ಕ್ರಿಶ್ಚಿಯನ್ ಹುಡುಗನೊಬ್ಬ ಬೈಬಲ್‍ನ ಹಳೆಯ ಅಥವಾ ಹೊಸ ಒಡಂಬಡಿಕೆಯಲ್ಲಿರುವ ನಾಲ್ಕು ಸಾಲುಗಳನ್ನು ಉದ್ಧರಿಸುತ್ತಿದ್ದ. ಅವುಗಳ ಅರ್ಥಗಳೇನು ಎಂಬುದು ಅವರಿಗೂ ಗೊತ್ತಿರಲಿಲ್ಲ. ಹಿಂದೂಗಳ ಪಾಲಿನ ಕರ್ತವ್ಯ ನನಗೆ ಬರುತ್ತಿದ್ದುದರಿಂದ ನಾನು ಭಗವದ್ಗೀತೆಯ ಹದಿನೈದನೆ ಅಧ್ಯಾಯದ ಮೂರೋ ನಾಲ್ಕೋ ಶ್ಲೋಕಗಳನ್ನು ರಾಗವಾಗಿ ಹಾಡುತ್ತಿದ್ದೆ. ನಮ್ಮ ಬಳಗದಲ್ಲಿ ಒಬ್ಬ ಜೈನ ವಿದ್ಯಾರ್ಥಿಯೂ ಇದ್ದದ್ದರಿಂದ ಆತ “ಓಂ ಣಮೋ ಅರಿಹಂತಾಣಮ್, ಓಂ ಣಮೋ ಸಿದ್ಧಾಣಂ” ಎಂಬ ಮಂತ್ರವನ್ನು ಹಾಡುತ್ತಿದ್ದ. ಆ ಮಂತ್ರದ ಗುಂಗು ನನಗೆ ಹಿಡಿಸಿದ್ದರಿಂದ ಆ ಹುಡುಗ – ನನ್ನ ಎರಡು ವರ್ಷದ ಸೀನಿಯರ್ ಆಗಿದ್ದವನು – ಶಾಲೆಯಿಂದ ಪಾಸಾಗಿಹೋದ ಮೇಲೆ, ಆತನ ಪಾಲಿನ ಜೈನಭಜನೆಯನ್ನು ನಾನೇ ಮಾಡುತ್ತಿದ್ದೆ! ಒಟ್ಟಾರೆ ಅರ್ಧ-ಮುಕ್ಕಾಲು ಗಂಟೆ ನಡೆಯುತ್ತಿದ್ದ ಈ ಮುಂಜಾನೆಯ ಭಜನೆಯ ಕಾರ್ಯಕ್ರಮವನ್ನು ಶಾಲೆಯಲ್ಲಿದ್ದಷ್ಟೂ ದಿನ ಬಹಳ ಸಂಭ್ರಮದಿಂದ ನಡೆಸಿಕೊಡುತ್ತಿದ್ದೆವು.

ಸರ್ವಧರ್ಮ ಸಮಭಾವ – ಇದು ನಾವು ಆ ಕಾಲದಲ್ಲಿ ಸದಾ ಕೇಳುತ್ತಿದ್ದ ಪದಪುಂಜ. ಸಾರ್ವಜನಿಕರಿಗೆ ಮುಕ್ತವಾದ ಧಾರ್ಮಿಕ ಕಾರ್ಯಕ್ರಮವಾದರೆ ಅಲ್ಲಿ ಒಬ್ಬರು ಹಿಂದೂ ಅರ್ಚಕರು, ಮುಸ್ಲಿಂ ಮೌಲ್ವಿ ಮತ್ತು ಕ್ರಿಶ್ಚಿಯನ್ ಪಾದ್ರಿ ಇರುವುದು ಕಡ್ಡಾಯ ಎಂಬಷ್ಟರ ಮಟ್ಟಿಗೆ ಸಂಪ್ರದಾಯದಂತೆ ಆ ಕ್ರಮ ನಡೆದುಬರುತ್ತಿತ್ತು. ಅಂಥ ಕಾರ್ಯಕ್ರಮದಲ್ಲಿ ಭಾಗವಹಿಸಿದ ಒಂದಿಲ್ಲೊಂದು ಧರ್ಮಗುರು “ಭಾರತದ ಬಾವುಟವನ್ನೇ ತೆಗೆದುಕೊಳ್ಳಿ. ಕೇಸರಿ ಬಿಳಿ ಹಸಿರುಗಳು ಹಿಂದೂ ಕ್ರಿಶ್ಚಿಯನ್ ಮತ್ತು ಮುಸ್ಲಿಂ ಧರ್ಮಗಳನ್ನು ಸಾರುವಂತೆ ಕಾಣುವುದಿಲ್ಲವೇ?” ಎಂದರೆ ನಾವೆಲ್ಲ ಹೊಸ ಅರ್ಥ ತಿಳಿದ ಖುಷಿಯಲ್ಲಿ ಜೋರಾಗಿ ಚಪ್ಪಾಳೆ ತಟ್ಟುತ್ತಿದ್ದೆವು. ಸರ್ವಜನಾಂಗದ ಶಾಂತಿಯತೋಟ ಎನ್ನುವಾಗ ಭಾವುಕರಾಗುತ್ತಿದ್ದೆವು; ಹಿಂದೂ ಕ್ರೈಸ್ತ ಮುಸಲ್ಮಾನಾ ಪಾರಸಿಕ ಜೈನರುದ್ಯಾನಾ.. ಎಂದು ಹಾಡುವಾಗ ದನಿ ಎತ್ತರಿಸುತ್ತಿದ್ದೆವು. “ಎಲ್ಲ ಧರ್ಮಗಳ ಸಾರ ಒಂದೇ. ಮನುಷ್ಯಕುಲ ಒಂದೇ ಎಂದು ಪಂಪನ ಕರ್ಣ ಕೂಡ ಹೇಳಿದ್ದಾನೆ” ಎಂಬ ಬೋಧನೆ ಶಾಲೆಯಲ್ಲಾಗುತ್ತಿತ್ತು. “ರಾಮ ಬೇರೆಯಲ್ಲ ರಹೀಮ ಬೇರೆಯಲ್ಲ. ಪ್ರೀತಿ, ಸೌಹಾರ್ದ, ದಯೆ, ಕರುಣೆ, ಸಹಬಾಳ್ವೆಯೇ ಎಲ್ಲ ಧರ್ಮಗಳ ಸಂದೇಶ” ಎಂದು ಹೇಳಿದ ಗಾಂಧಿ ಈ ದೇಶದ ಮಹಾನ್ ನಾಯಕರಾದರು. ಈಶ್ವರ ಅಲ್ಲಾ ತೇರೋ ನಾಮ್ ಎಂದು ಅವರು ಹೇಳಿದಾಗ ಇಡೀ ದೇಶವೇ ಆ ಮಾತನ್ನು ಹೃದ್ಗತ ಮಾಡಿಕೊಂಡಿತ್ತು.

ಅವೆಲ್ಲವೂ ಆಯಿತು, ಆಗಿ ಗತಕ್ಕೆ ಸೇರಿತು. ಆದರೆ ಮುಂದೆ… ನಾವು ಕಲಿತದ್ದು, ಓದಿದ್ದು, ಉರುಹೊಡೆದದ್ದು, ಭಾಷಣ ಕುಟ್ಟಿ ಪ್ರೈಜ್ ಹೊಡೆದದ್ದು ಎಲ್ಲವೂ ಲೊಳಲೊಟ್ಟೆ ಎಂಬುದು ಗೊತ್ತಾದಾಗ ನನಗೆ ಮೂವತ್ತರ ಹರೆಯ! ಧರ್ಮ ಬೇರೆ, ಮತ ಬೇರೆ. ಮತ ಬೇರೆ, ರಿಲಿಜನ್ ಬೇರೆ. ಧರ್ಮ ಮತ್ತು ರಿಲಿಜನ್‍ಗಳ ಅಂತರ ಅಪಾರ ಎಂಬ ತಿಳಿವಳಿಕೆಯ ಮೊಳಕೆ ಮೂಡುವಷ್ಟರ ಹೊತ್ತಿಗೆ ನಾನು ಬದುಕಿನ ಮೂರನೇ ಒಂದು ಭಾಗವನ್ನು ಕಳೆದಾಗಿತ್ತು. ಈ ದೇಶದಲ್ಲಿ ಕಮ್ಯುನಿಸ್ಟ್ ಎಂಬ ಸಿದ್ಧಾಂತ ಇದೆ; ಅದು ಸಮಾಜದೊಳಗೆ ಹಾಸುಹೊಕ್ಕಾಗಿದೆಯೆಂಬ ಅರಿವು ಮೂಡಬೇಕಾದರೆ ನನಗೆ ಬಹಳ ಕಾಲವೇ ಹಿಡಿಯಿತು. ಶಾಲೆಯಲ್ಲಿ ಎಂದೆಂದೂ ಮೊದಲ ಮೂರು ರ್ಯಾಂಕುಗಳೊಳಗೆ ಗುರುತಿಸಿಕೊಳ್ಳುತ್ತಿದ್ದ ನಾನು ಬುದ್ದು ಆಗಿರಲಿಲ್ಲ ಎಂಬುದಂತೂ ನನಗೇ ಖಚಿತವಿದ್ದ ಸಂಗತಿ. ಹಾಗಿದ್ದರೆ ನಾನು ಸಮಾಜದ ಸೂಕ್ಷ್ಮಗಳಿಗೆ ಕುರುಡಾಗಿದ್ದೆನೆ? ನಾನು ಓದಿದ ಪುಸ್ತಕಗಳಲ್ಲಿ ಯಾಕೆ ನನಗೆ ಧರ್ಮ-ಮತ ಭೇದಗಳ ವಿಚಾರ ಸಿಗಲಿಲ್ಲ? ಮತಧರ್ಮಗಳ ಸೂಕ್ಷ್ಮವ್ಯತ್ಯಾಸಗಳನ್ನು ಯಾಕೆ ಯಾರೂ ನನಗೆ ಹೇಳಲಿಲ್ಲ? ಈ ಗೊಂದಲ, ಬೇಸರ, ಆಘಾತಗಳು ಎಲ್ಲ ಒಂದರೊಳಗೊಂದು ಸೇರಿಕೊಂಡು ನನ್ನನ್ನು ಅಲುಗಿಸಿಹಾಕಿದಾಗ ನಾನು ಆ ಎಲ್ಲವನ್ನೂ ಒಂದು ಆದಿಬಿಂದುವಿನಿಂದ ಓದಿಕೊಂಡು ಬರಬೇಕು ಎಂದು ನಿರ್ಧರಿಸಿದೆ. ಕ್ರಿಶ್ಚಿಯನ್ ಮತ್ತು ಇಸ್ಲಾಂ ರಿಲಿಜನ್‍ಗಳ ಹೋಲಿಬುಕ್‍ಗಳನ್ನು ಓದಿಮುಗಿಸಿದ ಮೇಲೆ ರಿಲಿಜನ್ ಮೇಲೆ ಅಸ್ಪಷ್ಟವಾದ, ಆದರೆ ನೈಜ ತಿಳಿವಳಿಕೆ ಮೂಡಿತು. ಈ ಎರಡು ರಿಲಿಜನ್‍ಗಳ ವಿಷಯ ಓದುತ್ತಿದ್ದಾಗಲೇ ಕಮ್ಯುನಿಸಮ್ ಬಗ್ಗೆಯೂ ಮೇಲಿಂದ ಮೇಲೆ ಪ್ರಸ್ತಾಪ ಬಂದಾಗ, ಅದರ ಸ್ಥೂಲಸ್ವರೂಪವನ್ನೂ ಅರಿಯಬೇಕೆಂಬ ಬಯಕೆಯಾಯಿತು. ಮ್ಯಾನಿಫೆಸ್ಟೋ ಓದಿದ ಮೇಲೆ ರಿಲಿಜನ್ ಎಂಬ ಪರಿಕಲ್ಪನೆಯ ಒಟ್ಟಾರೆ ಸ್ವರೂಪ ಅರ್ಥವಾಯಿತು. ಇಸ್ಲಾಂನ ಹೊಡಿ-ಬಡಿ-ಕಡಿ ಎಂಬ ದಾರಿಯನ್ನೂ ಕ್ರಿಶ್ಚಿಯಾನಿಟಿಯ ಓಲೈಕೆಯ ಮಾರ್ಗವನ್ನೂ ಏಕತ್ರಗೊಳಿಸಿಕೊಂಡು ಯಾವಾಗ ಯಾವುದು ನಡೆಯುತ್ತದೋ ಅದನ್ನು ಪ್ರಯೋಗಿಸುತ್ತ ನಡೆದಿರುವ ರಿಲಿಜನ್ ಕಮ್ಯುನಿಸಮ್ ಎಂಬುದು ಓದುತ್ತ, ತಿಳಿವಳಿಕೆ ಪಡೆಯುತ್ತ ಹೋದಂತೆ ಮನದಟ್ಟಾಯಿತು. ಕಮ್ಯುನಿಸಮ್ ಒಂದು ಸಿದ್ಧಾಂತ ಅಲ್ಲ; ಅದು ಸಿದ್ಧಾಂತದ ಮುಖವಾಡ ಹೊತ್ತ ರಿಲಿಜನ್ ಎಂಬ ನನ್ನ ನಂಬಿಕೆಯನ್ನು ಅಲುಗಿಸುವಂಥ, ಬದಲಾಯಿಸುವಂಥ ಯಾವ ಅಂಶಗಳೂ ನನಗೆ ಎಲ್ಲೂ ಸಿಗದೇ ಹೋದ್ದರಿಂದ, ಅದನ್ನೊಂದು ರಿಲಿಜನ್ ಆಗಿಯೇ ಪರಿಗಣ ಸಿ ನಾನು ಲೇಖನಗಳನ್ನು ಬರೆಯತೊಡಗಿದೆ. ಓದುತ್ತ ಬರೆಯುತ್ತ ಬರೆಯುತ್ತ ಓದುತ್ತ ಹೋದಂತೆ ನನಗೆ ಅತ್ಯಂತ ಖಚಿತವಾದ ವಿಷಯವೇನೆಂದರೆ ಇಸ್ಲಾಂ ಮತ್ತು ಕ್ರಿಶ್ಚಿಯಾನಿಟಿಗಳನ್ನಾದರೂ ಒಂದು ಮಟ್ಟಕ್ಕೆ ಸಹಿಸಬಹುದು ಇಲ್ಲವೇ ಕ್ಷಮಿಸಬಹುದು; ಆದರೆ ಈ ದೇಶದ ಅಸ್ಮಿತೆಗೆ ಬಹುದೊಡ್ಡ ಹೊಡೆತ ಕೊಡುವಂಥ ಘಟಸರ್ಪ ಇದ್ದರೆ ಅದು ಕಮ್ಯುನಿಸಮ್ ಮಾತ್ರ. ಕಮ್ಯುನಿಸ್ಟರು ಈ ದೇಶದ ಬೌದ್ಧಿಕ, ಸಾಮಾಜಿಕ, ಧಾರ್ಮಿಕ, ಆರ್ಥಿಕ ಸ್ತಂಭಗಳನ್ನೇ ಮುರಿದುಹಾಕಬಲ್ಲ ಒರಲೆಗಳು. ಕಮ್ಯುನಿಸ್ಟ್ ಪಟ್ಟುಗಳನ್ನು, ತಂತ್ರ-ಕುತಂತ್ರಗಳನ್ನು ಅರ್ಥೈಸಿಕೊಳ್ಳುವಲ್ಲಿ ನಾವು ವಿಫಲರಾದೆವೆಂದರೆ ಈ ದೇಶವನ್ನು ಭವಿಷ್ಯದಲ್ಲಿ ಯಾವ ಪುಣ್ಯಾತ್ಮನಿಗೂ ರಕ್ಷಿಸಲು ಸಾಧ್ಯವಿಲ್ಲ. ಸರ್ವಧರ್ಮಗಳ ಸಾರ ಒಂದೇ, ಎಲ್ಲ ಧರ್ಮಗಳ ಬೋಧನೆ ಒಂದೇ, ದೇವರೊಬ್ಬನೇ ಎಂಬುದೇ ಅವುಗಳ ಸಂದೇಶ, ವಿಶ್ವಶಾಂತಿಯೇ ಅವುಗಳ ಗುರಿ ಎಂಬೆಲ್ಲ ಹಸಿಹಸಿ ಸುಳ್ಳುಗಳನ್ನು ಸೆಕ್ಯುಲರಿಸಂ ಎಂಬ ಛತ್ರಿಯಡಿ ಪಾಠಪುಸ್ತಕಗಳಲ್ಲಿ ತುಂಬಿಸಿ ನಮಗೆಲ್ಲ ಓದಿಸಿದ್ದು, ಹಾದಿತಪ್ಪಿಸಿದ್ದು ಇದೇ ಕಮ್ಮಿನಿಷ್ಠರ ಬಳಗ ಎಂಬುದನ್ನು ಅರಿತಾಗ ಆ ಬಾಲ್ಯದ ಮುಗ್ಧತೆ ಮತ್ತು ಮೊದ್ದುತನಗಳನ್ನು ನೆನೆಸಿಕೊಂಡು ಅತ್ಯಾಚಾರಕ್ಕೊಳಗಾದ ಕನ್ಯೆಯಂತೆ ಅಸಹ್ಯಪಟ್ಟಿತ್ತು ಮನಸ್ಸು. ಶೀಲ ಕೆಡಿಸಿಕೊಂಡ ಹೆಣ್ಣು ಏನು ಮಾಡುವುದೋ ತಿಳಿಯದೆ ತಲೆಗೆ ಕೊಡದಿಂದ ಭುಸಭುಸನೆ ನೀರು ಸುರುವಿಕೊಂಡಂತೆ ನಾನು ಆಗ ಓದತೊಡಗಿದ್ದು ಸೀತಾರಾಮ ಗೋಯಲ್‍ರ ಪುಸ್ತಕಗಳನ್ನು.

ಅತ್ಯಂತ ಸ್ವಾರಸ್ಯದ ವಿಷಯವೆಂದರೆ ಪ್ರೊ. ಬಾಲಗಂಗಾಧರ ಮತ್ತು ಸೀತಾರಾಮ ಗೋಯಲ್ – ಈ ಇಬ್ಬರ ಕೃತಿಗಳನ್ನು ನಾನು ಓದಿದ್ದು ಅವರು ಹೇಳಿದ್ದ ವಿಚಾರಗಳನ್ನೇ ನನ್ನ ಬಾಲಭಾಷೆಯಲ್ಲಿ ನಾನು ಬರೆದುಕೊಂಡ ಮೇಲೆಯೇ. ಆ ದೃಷ್ಟಿಯಿಂದ ನೋಡಿದರೆ ನನಗೆ ಈ ಇಬ್ಬರ ಕೃತಿಗಳು ನನ್ನಲ್ಲಿ ಹೊಸದೊಂದು ಚಿಂತನೆಯನ್ನು ಮೊಳೆಯಿಸುವ ಪ್ರಾರಂಭಿಕ ಮೆಟ್ಟಿಲುಗಳಾಗದೆ, ಅದಾಗಲೇ ಅಸ್ಪಷ್ಟವಾಗಿ ಮೂಡಿದ್ದ ನನ್ನ ಚಿಂತನೆಯನ್ನು ಪಾಲಿಶ್ ಕಾಗದದಿಂದ ಉಜ್ಜಿ ಸ್ಪಷ್ಟಗೊಳಿಸಿ ಅಧಿಕೃತತೆಯ ಮುದ್ರೆಯೊತ್ತುವ ಕೆಲಸ ಮಾಡಿದವು ಎಂದು ಹೇಳಬೇಕಾಗುತ್ತದೆ. ಭಾರತ, ಭಾರತೀಯತೆಯ ಪರಿಕಲ್ಪನೆಗಳನ್ನು ಸರಿಯಾಗಿ ಅರ್ಥೈಸಿಕೊಂಡವನು ತನ್ನ ಅನಿಸಿಕೆಗಳನ್ನು ಯಾವ ಇಸಮ್ಮುಗಳಿಗೂ ಒಳಗಾಗದೆ ಪ್ರಾಮಾಣ ಕವಾಗಿ ದಾಖಲಿಸುತ್ತ ಹೋದರೆ ಆತನ ಮಾತುಗಳು ಬಾಲು ಮತ್ತು ಗೋಯಲ್‍ರ ಅನಿಸಿಕೆಗಳ ಪಡಿಯಚ್ಚುಗಳೇ ಆಗಿರುತ್ತವೆ ಅನ್ನಿಸುತ್ತದೆ. ಯಾಕೆಂದರೆ ಇವರಿಬ್ಬರೂ ತಮ್ಮ ಅಭಿಪ್ರಾಯಗಳನ್ನು ತಮ್ಮೊಳಗಿನ ಬೌದ್ಧಿಕತೆಯೊಂದಕ್ಕೇ ನಿಷ್ಠವಾಗಿ ಬರೆದರು. ಇಸ್ಲಾಮ್, ಕ್ರಿಶ್ಚಿಯಾನಿಟಿ, ಕಮ್ಯುನಿಸಮ್ ಹಾಗೂ ಹಿಂದೂತ್ವಗಳ ಮೇಲೆ ನಾನು ಇದುವರೆಗೆ ಬರೆದಿರುವ ಅಷ್ಟೂ ಬರಹಗಳನ್ನು ಬರೆದ ಮೇಲೆಯೇ ನನಗೆ ಸೀತಾರಾಮ ಗೋಯಲ್‍ರ ಪುಸ್ತಕಗಳನ್ನು ಓದುವ ಭಾಗ್ಯ ಸಿಕ್ಕಿತೆಂಬುದು ಒಂದು ರೀತಿಯಲ್ಲಿ ಖುಷಿಯ ವಿಚಾರವೇ ನನಗೆ. ಯಾಕೆಂದರೆ ಮೊದಲೇ ಗೋಯಲ್‍ರ ಬರಹಗಳನ್ನು ಓದಿಬಿಟ್ಟಿದ್ದರೆ ನನಗೂ ಅಂಥ ಚಿಂತನೆಗಳನ್ನು ಸ್ವಯಂ ಮೂಡಿಸಿಕೊಳ್ಳುವ ಸಾಮಥ್ರ್ಯವಿತ್ತೆಂಬ ಅರಿವೇ ಆಗುವ ಸಂಭವ ಇರಲಿಲ್ಲ. ಇರಲಿ, ಏನೇ ಆದರೂ ಅದು ಒಳಿತೇ ಆಯಿತು. ಈಗ ನಾನು ಬರೆಯಹೊರಟಿರುವುದು ಗೋಯಲ್‍ರ ಜೀವನದ ಸಂಕ್ಷಿಪ್ತ ಚಿತ್ರಣ ಆದರೂ ಒಂದು ರೀತಿಯಲ್ಲಿ ನನಗದು ನಾನು ಅರ್ಪಿಸಬಹುದಾದ ಪುಟ್ಟ ಗುರುಕಾಣಿಕೆ ಕೂಡ.

ಗೋಯಲ್ ಅವರು ಬರೆದದ್ದೇನು ಎಂಬುದನ್ನು ನೋಡುವ ಮೊದಲು ಅವರ ಜೀವನದ ವಿವರಗಳನ್ನು ಚಿಕ್ಕದಾಗಿ ನೋಡೋಣ. ಹುಟ್ಟಿದ್ದು 1921ರಲ್ಲಿ; ಹರ್ಯಾಣದ ಒಂದು ಬಡ ಕುಟುಂಬದಲ್ಲಿ. ಅಗರ್ವಾಲ್ ಎಂಬ ಜಾತಿಸೂಚಕವಿದ್ದರೂ ಆ ಜಾತಿಯವರಿಗೆ ಸಹಜವಾಗಿ ಒಲಿಯುವ ವರ್ತಕಗುಣ ಮತ್ತು ಶ್ರೀಮಂತಿಕೆಯ ಹಿನ್ನೆಲೆ ಸೀತಾರಾಮರಿಗೆ ಇರಲಿಲ್ಲ. ಬಾಲ್ಯದಲ್ಲಿ ವೈಷ್ಣವ ಭಕ್ತಿಪಂಥದಿಂದ ಆಕರ್ಷಿತರಾದ ಅವರು ಕಾಲಾನುಕ್ರಮ ಆರ್ಯಸಮಾಜದ ಪ್ರಭಾವಕ್ಕೆ ಬಿದ್ದರು. ಸ್ವಾತಂತ್ರ್ಯ ಹೋರಾಟದ ದಿನಗಳಾದ್ದರಿಂದ ಸಹಜವಾಗಿಯೇ ಗಾಂಧಿಯ ಪ್ರಭಾವವೂ ತಕ್ಕಮಟ್ಟಿಗೆ ಆಯಿತು. ಶಾಲೆ ಮತ್ತು ಕಾಲೇಜು ದಿನಗಳಲ್ಲಿ ಗೋಯಲ್ ಗಾಂಧೀವಾದಿ ಎಂದು ಕರೆಸಿಕೊಳ್ಳಲು ಹೆಮ್ಮೆಪಡುತ್ತಿದ್ದರು. ಹರಿಜನ ಆಶ್ರಮವೊಂದರಲ್ಲಿ ಕೆಲವು ತಿಂಗಳು ಸ್ವಯಂಸೇವಕನಾಗಿ ದುಡಿದದ್ದೂ ಉಂಟು. ಓದಿನಲ್ಲಿ ಮುಂದಿದ್ದದ್ದರಿಂದ ದೆಹಲಿ ವಿಶ್ವವಿದ್ಯಾಲಯದಲ್ಲಿ ಇತಿಹಾಸದಲ್ಲಿ ಎಂ.ಎ. ಮಾಡುವಂತಾಯಿತು. ಗಾಂಧಿ ಮತ್ತು ಅವರ ಇಡೀ ಹಿಂಬಾಲಕರ ಪಡೆ 1940ರ ದಶಕದಲ್ಲಿ ಸೋಷಿಯಲಿಸಮ್ ಅನ್ನು ಅಪ್ಪಿಕೊಂಡಾಗ ಅದರಿಂದ ದೂರನಿಂತವರು ಗೋಯಲ್. ಸಮಾಜವಾದವೆಂಬುದು ಎಷ್ಟೇ ಸ್ವತಂತ್ರ ಚಿಂತನೆ ಎಂದು ಹೇಳಿಕೊಂಡರೂ ಮೂಲದಲ್ಲಿ ಕಮ್ಯುನಿಸಮ್ಮಿನ ನೆರಳು ಅಷ್ಟೇ. ಹಾಗಾಗಿ ಅದನ್ನು ಅನುಸರಿಸುವ ಬದಲು ಮೂಲದ ಸಿದ್ಧಾಂತವನ್ನೇ ನೆಚ್ಚಿಕೊಳ್ಳುವುದು ಒಳ್ಳೆಯದು ಎಂಬ ಭಾವನೆಯಿಂದ ಗೋಯಲ್ ಕಮ್ಯುನಿಸಮ್ ಅನ್ನು ಆಳವಾಗಿ ಅಧ್ಯಯನ ಮಾಡುವುದಕ್ಕೆ ಕೂತುಬಿಟ್ಟರು. ಮಾಕ್ರ್ಸ್‍ನ ಮ್ಯಾನಿಫೆಸ್ಟೋ ಓದಿದ ಮೇಲಂತೂ ಭಾರತದ ಎಲ್ಲ ಸಮಸ್ಯೆಗಳಿಗೆ ತಕ್ಷಣದ ಪರಿಹಾರವಾಗಿ ಬೇಕಾಗಿರುವುದು ಇದೇ ಅನ್ನಿಸಿಬಿಟ್ಟಿತು ಅವರಿಗೆ. ಮಾರ್ಕ್ಸ್ ಹೇಳಿದ ಎಲ್ಲ ಅನಿಷ್ಟಗಳೂ ತನ್ನ ಸುತ್ತಮುತ್ತಲಿನ ಸಮಾಜದಲ್ಲಿವೆ; ಅವನ್ನೆಲ್ಲ ತೊಡೆದುಹಾಕಬೇಕು; ಶ್ರೇಣೀಕೃತ ವ್ಯವಸ್ಥೆಯನ್ನು ತೊಡೆದುಹಾಕಿ ಸರ್ವಸಮಾನತೆ ಮೂಡಿಸಬೇಕು ಎಂಬ ಹೆಬ್ಬಯಕೆ ಹುಟ್ಟಿತು. ಬಾಲ್ಯದಲ್ಲಿ ಗರೀಬ್‍ದಾಸರಂಥ ಹರಿದಾಸರ ಭಕ್ತಿಚಳವಳಿಗೆ ಮಾರುಹೋಗಿದ್ದ ಯುವಕ ಈಗ ಕಮ್ಯುನಿಸಮ್‍ನ ಪ್ರಭಾವದಲ್ಲಿ ಅಪ್ಪಟ ನಾಸ್ತಿಕರಾಗಿಬಿಟ್ಟರು. ಸಮಾಜವಾದವನ್ನು ಒಪ್ಪಿಕೊಂಡು ರಾಮನ ಭಜನೆಯನ್ನು ಮಾಡುವ ಗಾಂಧಿಯ ವರ್ತನೆ ಬೂಟಾಟಿಕೆಯದು ಅನ್ನಿಸತೊಡಗಿತು ಅವರಿಗೆ.

ಆದರೆ ಆ ಕಾಲದ ಭಾರತದ ಕಮ್ಯುನಿಸ್ಟ್ ಪಾರ್ಟಿಯ ನಿಲುವುಗಳ ಜೊತೆಗೂ ಅವರ ಸಹಮತ ಇರಲಿಲ್ಲ. ರಿಲಿಜನ್ ಈಸ್ ಓಪಿಯಮ್ ಎಂದಿದ್ದ ಮಾರ್ಕ್ಸ್’ನ ಭಕ್ತರೆಂದು ಹೇಳಿಕೊಂಡು, ಭಾರತದಲ್ಲಿ ರಿಲಿಜನ್ ಆಧಾರದಲ್ಲಿ ಪ್ರತ್ಯೇಕ ದೇಶದ ಬೇಡಿಕೆಯಿಟ್ಟಿದ್ದವರಿಗೆ ಬೆಂಬಲ ಕೊಡುತ್ತಿದ್ದ ಕಮ್ಯುನಿಸ್ಟ್ ಪಾರ್ಟಿಯ ದ್ವಿಮುಖನೀತಿ ಗೋಯಲ್‍ರಿಗೆ ಇಷ್ಟವಾಗಲಿಲ್ಲ. ಪ್ರತ್ಯೇಕ ರಾಷ್ಟ್ರದ ಬೇಡಿಕೆ ಇಟ್ಟಿದ್ದ ಮುಸ್ಲಿಮ್ ಲೀಗ್, ತನ್ನ ಬೇಡಿಕೆಗೆ ದೊಡ್ಡಮಟ್ಟದ ರಾಜಕೀಯ ಸಹಮತ ಸಿಗಬೇಕೆಂದು 1946ರ ಆಗಸ್ಟ್ 16ರಂದು “ಡೈರೆಕ್ಟ್ ಆಕ್ಷನ್ ಡೇ” ಹೆಸರಲ್ಲಿ ಬಂಗಾಳದಲ್ಲಿ ವ್ಯಾಪಕ ಹಿಂಸಾಚಾರ ನಡೆಸಿತು. ಹಿಂದೂಗಳನ್ನು ರುಂಡ-ಮುಂಡ ಕಡಿದು ರಸ್ತೆಗಳಲ್ಲಿ ಚೆಲ್ಲಲಾಯಿತು. ಹಿಂದೂಗಳ ಮನೆ-ಅಂಗಡಿಗಳಿಗೆ ಬೆಂಕಿ ಕೊಡಲಾಯಿತು. ಹಿಂದೂಗಳ ಮನೆಗಳಿಗೆ ನುಗ್ಗಿ ಅವರ ಹೆಂಗಸರು-ಮಕ್ಕಳನ್ನು ಬೀದಿಗೆ ತಂದು ಎಳೆದಾಡಲಾಯಿತು. ಕೇವಲ 72 ಗಂಟೆಗಳ ಅವಧಿಯಲ್ಲಿ 4,000 ಹಿಂದೂಗಳು ಕೋಲ್ಕತ್ತದ ಗಲ್ಲಿಗಲ್ಲಿಗಳಲ್ಲಿ ಹೆಣವಾಗಿ ಬಿದ್ದರು; ಲಕ್ಷಕ್ಕೂ ಹೆಚ್ಚುಮಂದಿ ಜೀವಭಯದಿಂದ ನಗರ ಬಿಟ್ಟೋಡಿದರು. ಈ ಎಲ್ಲ ಹಿಂಸಾಚಾರಗಳನ್ನು ಗೋಯಲ್ ಕೋಲ್ಕತ್ತದಲ್ಲಿದ್ದು ನೋಡಿದರು. ನಾಸ್ತಿಕನಾದರೂ ಆ ಕ್ಷಣಕ್ಕೆ ಉಳಿದೆಲ್ಲ ಹಿಂದೂಗಳಂತೆ ಅವರು ಕೂಡ ತನ್ನ ಹೆಂಡತಿ ಮತ್ತು ಒಂದು ವರ್ಷದ ಮಗುವನ್ನು ಎತ್ತಿಕೊಂಡು ಗಲ್ಲಿಯಿಂದ ಗಲ್ಲಿಗೆ, ಕೇರಿಯಿಂದ ಕೇರಿಗೆ ಜೀವಭಯದಿಂದ ಓಡಬೇಕಾಯಿತು. ಆ ದಿನದ ಘಟನಾವಳಿಗಳು ಅವರ ಬದುಕು ಮತ್ತು ಬೌದ್ಧಿಕತೆಯ ಮೇಲೆ ಅಳಿಸಲಾಗದ ಪರಿಣಾಮವನ್ನು ಮಾಡಿದವು. ಹಿಂಸಾಚಾರ ನಡೆದ ಮರುವರ್ಷ ಭಾರತ ಸ್ವತಂತ್ರವಾಯಿತು; ಜೊತೆಗೆ ಇಬ್ಭಾಗವೂ ಆಯಿತು. ಅದಾಗಿ ಒಂದು ವರ್ಷದಲ್ಲಿ ಗೋಯಲ್ ಅವರು ಕೋಲ್ಕತ್ತದಲ್ಲಿ ಕಮ್ಯುನಿಸ್ಟ್ ಪಾರ್ಟಿಯನ್ನು ಸೇರುವ ದೃಢನಿಶ್ಚಯ ಮಾಡಿ ಅದರ ಕಚೇರಿಗೆ ಹೋಗಿ ಹೆಸರು ನೋಂದಾಯಿಸಿಕೊಳ್ಳುವವರಿದ್ದರು. ಆದರೆ ಅದೇನು ದೈವಲೀಲೆಯೋ, ಅವರು ಅಲ್ಲಿಗೆ ಹೋಗಬೇಕಿದ್ದ ದಿನವೇ ಸರಕಾರ, ಶಸ್ತ್ರಾಸ್ತ್ರಸಹಿತ ಹಿಂಸಾಚಾರದಲ್ಲಿ ತೊಡಗಿದೆಯೆಂಬ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಕಮ್ಯುನಿಸ್ಟ್ ಪಾರ್ಟಿಯನ್ನು ನಿಷೇಧಿಸಿತು! ಕಮ್ಯುನಿಸ್ಟ್ ಪಕ್ಷಕ್ಕಾದ ನಷ್ಟ ಭಾರತದ ಬೌದ್ಧಿಕಜಗತ್ತಿಗಾದ ಲಾಭವಾಗಿ ಪರಿಣಮಿಸಿತು.

ಪಕ್ಷದ ಸದಸ್ಯತ್ವ ಸಿಗದೆ ಹೋದರೂ ಗೋಯಲ್ ಕಮ್ಯುನಿಸ್ಟ್ ಸಿದ್ಧಾಂತಗಳಿಂದ ಹೆಚ್ಚೇನೂ ದೂರ ಹೋಗಿರಲಿಲ್ಲ. ಆದರೆ ಅದೇ ಸಮಯದಲ್ಲಿ ಕೋಲ್ಕತ್ತದಲ್ಲಿ ಕೆಲವು ದಿನಗಳ ಕಾಲ ಇರಲು ಬಂದ ರಾಮ್‍ಸ್ವರೂಪ್ ಎಂಬ ಗೆಳೆಯನಿಂದಾಗಿ ಗೋಯಲ್ ತನ್ನ ಚಿಂತನೆಯ ಧಾಟಿಯನ್ನು ಬದಲಾಯಿಸಿಕೊಳ್ಳುವಂತಾಯಿತು.

ರಾಮ್‍ಸ್ವರೂಪ್, ಗೋಯಲ್‍ರಿಗಿಂತ ಒಂದು ವರ್ಷ ದೊಡ್ಡವರು. ದೆಹಲಿ ವಿಶ್ವವಿದ್ಯಾಲಯದಲ್ಲಿ ಇಬ್ಬರಿಗೂ ಮೂರು ವರ್ಷಗಳ ಅಂತರ. ಪ್ರಾರಂಭದಿಂದಲೂ ಹಿಂದೂ ಧರ್ಮದ ಹಿನ್ನೆಲೆಯಲ್ಲಿ ಜಾಗತಿಕ ವಿದ್ಯಮಾನಗಳನ್ನು ವಿಶ್ಲೇಷಿಸುತ್ತಿದ್ದ ರಾಮ್‍ಸ್ವರೂಪ್ ಅವರಿಗೂ ಹೊರನೆಲದ ಕಮ್ಯುನಿಸ್ಟ್ ಸಿದ್ಧಾಂತದ ಹಿನ್ನೆಲೆಯಲ್ಲಿ ಭಾರತದ ಸಮಸ್ಯೆಗಳನ್ನು ಚರ್ಚಿಸುತ್ತಿದ್ದ ಗೋಯಲ್ ಅವರಿಗೂ ಭಿನ್ನಾಭಿಪ್ರಾಯಗಳು ಇದ್ದೇಇತ್ತು. ಆದರೂ ಹೊಚ್ಚಹೊಸ ವಿಚಾರಗಳನ್ನು ಮಥಿಸಿ ತೆಗೆಯಬಲ್ಲ ಸಾಮಥ್ರ್ಯವಿರುವ ವ್ಯಕ್ತಿಗಳೆಂಬ ಕಾರಣಕ್ಕೆ ಇಬ್ಬರಿಗೂ ಪರಸ್ಪರರ ಬಗ್ಗೆ ಗೌರವಾದರ ಇದ್ದವು. ಕೋಲ್ಕತ್ತದಲ್ಲಿ ಮುಸ್ಲಿಂ ಲೀಗ್ ವತಿಯಿಂದ ಹತ್ಯಾಕಾಂಡ ನಡೆದಾಗ ಸೀತಾರಾಮ ಗೋಯಲ್ “ದ ಡೆವಿಲ್ ಡ್ಯಾನ್ಸ್ ಇನ್ ಕಲಕತ್ತಾ” ಎಂಬ ದೀರ್ಘ ಲೇಖನ ಬರೆದರು. ಅದರಲ್ಲಿ ಅವರು ಹತ್ಯಾಕಾಂಡಕ್ಕೆ ಹಿಂದೂ ಮತ್ತು ಮುಸ್ಲಿಂ ಎರಡೂ ಸಮುದಾಯಗಳು ಕಾರಣ ಎಂದು ಆರೋಪಿಸಿದರು. ರಾಮ್‍ಸ್ವರೂಪ್ ಈ ಲೇಖನವನ್ನು ವಿರೋಧಿಸಿ, ಅದರ ವಾದಗಳು ಎಲ್ಲೆಲ್ಲಿ ತಪ್ಪಿವೆ ಎಂಬುದನ್ನು ಸೋದಾಹರಣ ವಿವರಿಸಿದರು. ಬಹುಶಃ ಅದುವೇ ಪ್ರಾರಂಭ ಬಿಂದುವಾಗಿ ಗೋಯಲ್ ಹಿಂದೂ ಮತ್ತು ಮುಸ್ಲಿಮ್ ಸಮುದಾಯಗಳ ನಡುವಿನ ಭಿನ್ನತೆಗಳನ್ನು ಗುರುತಿಸಲು ಮೊದಲುಮಾಡಿದರು. ಅಲ್ಲಿಂದ ಮುಂದುವರೆದು ಇಬ್ಬರ ನಡುವೆ ದಿನನಿತ್ಯ ಚರ್ಚೆ-ವಾಗ್ವಾದಗಳು ನಡೆಯತೊಡಗಿದವು. ರಾಮ್‍ಸ್ವರೂಪರ ಪ್ರಖರ ಚಿಂತನೆಗೆ ಮನಸೋತ ಸೀತಾರಾಮ ಗೋಯಲ್ ಹಂತಹಂತವಾಗಿ ತನ್ನ ಕಮ್ಯುನಿಸಮ್ ಪೊರೆಗಳನ್ನು ಕಳಚುತ್ತ, ಸ್ವಂತ ಚಿಂತನೆಗಳನ್ನು ಬೆಳೆಸಿಕೊಳ್ಳುತ್ತ ಕೊನೆಗೆ ಅಪ್ಪಟ ರಾಷ್ಟ್ರೀಯ ಚಿಂತಕರಾಗಿ ಬದಲಾದರು. ಆರ್ಯರು ಭಾರತಕ್ಕೆ ಬಂದರು; ಇಲ್ಲಿನವರನ್ನು ಉದ್ಧರಿಸಿದರು; ಅವರಿಲ್ಲಿಗೆ ಬರುವವರೆಗೂ ಭಾರತ ಕಾಡುಮನುಷ್ಯರ ಬೀಡಾಗಿತ್ತು ಎಂದೇ ದಶಕಗಳಿಂದ ಹೇಳಿಕೊಂಡು ಬಂದಿದ್ದ ಬ್ರಿಟಿಷರು ಮತ್ತು ಕಮ್ಯುನಿಸ್ಟರ ಅಸಲಿಯತ್ತನ್ನು ರಾಮ್‍ಸ್ವರೂಪ್ ತೆರೆದುತೋರಿಸಿದಾಗ ಗೋಯಲ್ ಸ್ತಂಭೀಭೂತರಾದರು. ಆಘಾತಕ್ಕೊಳಗಾದರು. ಕೆಲವೊಮ್ಮೆ ಜ್ಞಾನಾನ್ವೇಷಣೆಗೆ ಆಘಾತವೇ ಪ್ರಾರಂಭಬಿಂದುವಾಗುತ್ತದೆ. ತಾನು ಇದುವರೆಗೆ ಕಲಿತೆದ್ದಲ್ಲವೂ ಸುಳ್ಳಿನ ಕಂತೆ, ಉತ್ಪ್ರೇಕ್ಷೆಯ ಬೊಂತೆ, ಕಮ್ಯುನಿಸ್ಟರು ತಮ್ಮ ಸಿದ್ಧಾಂತ ಪ್ರಸಾರಕ್ಕಾಗಿ ಸೃಷ್ಟಿಸಿದ ಕಟ್ಟುಕತೆಗಳಷ್ಟೇ ಎಂಬುದನ್ನು ತಿಳಿದ ಮೇಲೆ ಗೋಯಲ್ ತನ್ನ ಅಜ್ಞಾನಕ್ಕೆ ಮರುಗಿ ಹೊಸದಾಗಿ ಅಧ್ಯಯನಕ್ಕೆ ಕೂತರು. ಕಾಲೇಜಿನಲ್ಲಿದ್ದಾಗ ಬರೆಯಲು, ಮಾತಾಡಲು ಕಲಿತಿದ್ದ ಸಂಸ್ಕೃತ ಈಗ ಅವರ ಉಪಯೋಗಕ್ಕೆ ಬಂತು. ಭಾರತದ ಪ್ರಾಚೀನ ಸಾಹಿತ್ಯದ ಅಧ್ಯಯನಕ್ಕೆ ಗೋಯಲ್ ತೊಡಗಿದರು. ಜೊತೆಗೆ, ಕಾಲೇಜು ದಿನಗಳಲ್ಲಿ ಕಲಿತಿದ್ದ ಉರ್ದು, ಪರ್ಷಿಯನ್ ಭಾಷೆಗಳ ಬಲದಿಂದ ಇಸ್ಲಾಂ ರಿಲಿಜನ್‍ನ ಗ್ರಂಥಗಳನ್ನು ಓದಲು ಪ್ರಾರಂಭಿಸಿದರು. ಹಾಗೆಯೇ ಯುರೋಪಿನ ಕ್ರಿಶ್ಚಿಯನ್ ಧರ್ಮಸಂಸ್ಥೆಗಳ ಪ್ರಚಾರಪತ್ರಗಳನ್ನು ಆಳವಾಗಿ ಅಭ್ಯಾಸ ಮಾಡಿದರು. ಕ್ರಿಶ್ಚಿಯನ್ ಮಿಷನರಿಗಳು ಭಾರತದ ಬಗ್ಗೆ ಬರೆದದ್ದನ್ನು ಓದಿದರು. ಭಾರತಕ್ಕೆ ಒಮ್ಮೆಯೂ ಭೇಟಿಕೊಡದೆ, ಭಾರತೀಯರನ್ನು ಕಣ್ಣಲ್ಲಿ ಕಾಣದೆ ಇದ್ದ ಕಾರ್ಲ್ ಮಾಕ್ರ್ಸ್ ಈ ದೇಶದ ಬಗ್ಗೆ ಅದೆಷ್ಟು ಅದ್ಭುತವಾದ ಸುಳ್ಳುಗಳನ್ನು ರಮಣೀಯವಾಗಿ ಪೋಣಿಸಿದ್ದಾನೆಂಬುದನ್ನು ನೋಡಿದರು. ಹೀಗೆ ಅತ್ಯಂತ ವಿಸ್ತಾರವಾದ ಅಧ್ಯಯನಕ್ಕೆ ತೊಡಗಿಕೊಂಡದ್ದರಿಂದ ಅವರಿಗೆ ಭಾರತದಲ್ಲಿ ನಿಜವಾಗಿಯೂ ನಡೆಯುತ್ತಿರುವುದೇನು ಎಂಬುದರ ಸ್ಪಷ್ಟ ಚಿತ್ರಣ ಸಿಕ್ಕಿತು. ತಾನು ಕಣ್ಣಾರೆ ಕಂಡಿದ್ದ ಇಸ್ಲಾಂ ಪ್ರಣೀತ ಹಿಂಸೆಗೂ ತಾನು ಇದುವರೆಗೆ ಆರಾಧಿಸಿದ್ದ ಕಮ್ಯುನಿಸಮ್ ಸಿದ್ಧಾಂತದ ಪ್ರಾಯೋಜಿತ ಹಿಂಸೆಗೂ ವ್ಯತ್ಯಾಸವಿಲ್ಲ ಎಂಬುದು ಗೋಯಲ್‍ರಿಗೆ ಅರ್ಥವಾಯಿತು. ಆ ಕ್ಷಣವನ್ನು ಬೌದ್ಧಿಕ ಪುನರ್ಜನ್ಮ ಎನ್ನಬಹುದೇನೋ.

ಅಲ್ಲಿಂದ ಮುಂದಕ್ಕೆ ತನ್ನ ಬೌದ್ಧಿಕ ಸಂಪತ್ತನ್ನು ಯಾರಿಗೂ ಒತ್ತೆಯಿಡದೆ ಅತ್ಯಂತ ನಿರ್ಭೀತಿಯಿಂದ ತಾನು ಕಂಡುಂಡ ಸತ್ಯಗಳನ್ನು ಬರೆಯುತ್ತ ಹೋದ ಗೋಯಲ್ ಮತ್ತು ರಾಮ್‍ಸ್ವರೂಪ್ ಜೋಡಿ ಭಾರತದಲ್ಲಿ ಅದುವರೆಗೆ ಮುಸುಕಿದ್ದ ಬೌದ್ಧಿಕ ಕತ್ತಲಿಗೆ ಮೊತ್ತಮೊದಲ ಅರುಣೋದಯವಾಗಿ ಒದಗಿಬಂತು ಎನ್ನಬಹುದು. ಸೀತಾರಾಮ ಗೋಯಲ್‍ರು ಸತ್ಯ ಹೇಳಲು ನೆಚ್ಚಿಕೊಂಡದ್ದು ಭಾವನಾತ್ಮಕ ಆವೇಶವಿಲ್ಲದ ಸರಳ ನೇರ ಶೈಲಿಯ ಬರವಣ ಗೆಯನ್ನು. ಅಲ್ಲದೆ ಅದುವರೆಗೆ ಇಸ್ಲಾಂ ಮತ್ತು ಕ್ರಿಶ್ಚಿಯನ್ ರಿಲಿಜನ್‍ಗಳ ವಿಷಯ ಬಂದಾಗೆಲ್ಲ ಮೆತ್ತಗಾಗುತ್ತಿದ್ದ ಉಳಿದ ಬರಹಗಾರರಂತೆ ಗೋಯಲ್ ಮುಖವಾಡ ಹಾಕಿಕೊಂಡು ಬರೆಯಲಿಲ್ಲ. ಇದ್ದದ್ದನ್ನು ಇದ್ದ ಹಾಗೆ ಜನರ ಮುಂದೆ ಇಡುತ್ತಾ ಹೋದರು. ತಮ್ಮ ಲೇಖನಗಳ ಒಂದೊಂದು ವಾಕ್ಯಕ್ಕೂ ಆಧಾರ ತೋರಿಸಿದರು. ಅದುವರೆಗೆ ಯಾವ ಆಧಾರಗಳೂ ಇಲ್ಲದೆ ಗಾಳಿಯಲ್ಲಿ ಅರಮನೆ ಕಟ್ಟಿ ಜನರನ್ನು ಮಂಗ ಮಾಡುತ್ತಿದ್ದ ಬ್ರಿಟಿಷ್ ಮತ್ತು ಕಮ್ಯುನಿಸ್ಟ್ ಚಿಂತಕರಿಗೆ ಇದರಿಂದ ಕರೆಂಟ್ ಶಾಕ್ ಕೊಟ್ಟಂತಾಯಿತು. ಒಂದೇ ಒಂದು ಸಣ್ಣ ಉದಾಹರಣೆ ಹೇಳಬೇಕೆಂದರೆ, ಕೇರಳದಲ್ಲಿ ಕ್ರಿಶ 1ನೇ ಶತಮಾನದಲ್ಲಿ ಯೇಸುಕ್ರಿಸ್ತನ ನೇರ ಶಿಷ್ಯರು ಬಂದರು; ಅವರ ಸಂದೇಶಗಳನ್ನು ಕೇಳಿ ಮೆಚ್ಚಿ ನಂಬೂದಿರಿ ಬ್ರಾಹ್ಮಣರು ಕ್ರಿಶ್ಚಿಯನ್‍ಗಳಾಗಿ ಮತಾಂತರವಾದರು – ಎಂಬ ವಾದ ಲಾಗಾಯ್ತಿನಿಂದ ಇತ್ತು. ಗೋಯಲ್, ಇದು ತಪ್ಪು; ಯೇಸುವಿನ ನೇರ ಶಿಷ್ಯನಾದ ಸೈಂಟ್ ಥಾಮಸ್ ಎಂಬಾತ ಕೇರಳಕ್ಕೆ (ಅಥವಾ ಭಾರತಕ್ಕೆ) ಬಂದಿದ್ದ ಎಂಬುದಕ್ಕಾಗಲೀ, ಕ್ರಿಶ 1-2ನೇ ಶತಮಾನದಲ್ಲಿ ಕೇರಳದಲ್ಲಿ ನಂಬೂದಿರಿಗಳು ಇದ್ದರೆಂಬುದಕ್ಕಾಗಲೀ ಆಧಾರಗಳೇ ಇಲ್ಲ; ಹಾಗಾಗಿ ಸಿರಿಯನ್ ಕ್ರಿಶ್ಚಿಯನ್ನರು ಮುಂದಿಡುತ್ತಿರುವ ವಾದ ಆಧಾರರಹಿತ ಕಪೋಲಕಲ್ಪಿತ ಕತೆ – ಎಂದು ಹೇಳಿದರು. ಕೇರಳಕ್ಕೆ ಸೈಂಟ್ ಥಾಮಸ್ ಬಂದದ್ದು ಹೌದು ಎಂದು ಬರೆದುಕೊಂಡಿದ್ದ ಖುಷ್‍ವಂತ್ ಸಿಂಗ್ ಜೊತೆ ಗೋಯಲ್ ಇದೇ ಕಾರಣಕ್ಕೆ ಭಿನ್ನಾಭಿಪ್ರಾಯ ವ್ಯಕ್ತಪಡಿಸಿದಾಗ ಇಬ್ಬರ ನಡುವೆ ಪತ್ರವಾಗ್ವಾದ ಪ್ರಾರಂಭವಾಯಿತು. ಒಂದಾದ ಮೇಲೊಂದರಂತೆ ಇತಿಹಾಸದ ಆಧಾರಗಳನ್ನು ಗೋಯಲ್ ಮುಖಕ್ಕೆ ಹಿಡಿಯುತ್ತಿದ್ದರೆ ಖುಷ್‍ವಂತ್ ಅವರಿಗೆ ಕಕ್ಕಾಬಿಕ್ಕಿಯಾಗಿತ್ತು. ದಾಖಲೆಗಳಿಲ್ಲದೆ ಈ ಮನುಷ್ಯನನ್ನು ಸೋಲಿಸುವುದು ಸಾಧ್ಯವಿಲ್ಲವೆಂಬುದು ಖಚಿತವಾದ ಮೇಲೆ ಖುಷ್‍ವಂತ್, ವಾದದ ಘನತೆಯನ್ನು ಪಕ್ಕಕ್ಕಿಟ್ಟು ವೈಯಕ್ತಿಕ ದಾಳಿಗೆ ಇಳಿದುಬಿಟ್ಟರು! ಕೊನೆಗೂ ಅವರಿಗೆ ತನ್ನ ಹೇಳಿಕೆಯನ್ನು ಪುಷ್ಟೀಕರಿಸುವ ಒಂದಾದರೂ ದಾಖಲೆಯನ್ನು ಗೋಯಲ್ ಮುಂದೆ ಪ್ರಸ್ತುತಪಡಿಸಲು ಆಗಲೇ ಇಲ್ಲ.

ಜಗತ್ತು ಮುಂದುವರಿದಂತೆ, ಆಧುನಿಕವಾದಂತೆ ನಾವೆಲ್ಲ ಚರ್ಚೆಗಳಿಗೆ ಮುಕ್ತರಾಗಬೇಕಿತ್ತು. ನಮ್ಮ ರಿಲಿಜನ್‍ಗಳು ತಮ್ಮ ಹಳೆಯ ಕಂದಾಚಾರಗಳನ್ನು ಬಿಟ್ಟು ಶುದ್ಧಗೊಳ್ಳಬೇಕಿತ್ತು. ಈಗಿನ ಜಮಾನಕ್ಕೆ ಹೊಂದದ ಕಟ್ಟುಪಾಡುಗಳನ್ನು ಕಳಚಿಕೊಂಡು ಆಧುನಿಕವಾಗಬೇಕಿತ್ತು. ಆದರೆ ಅದಕ್ಕೆ ವಿರುದ್ಧವೆನ್ನುವಂತೆ ಅವು ಹೆಚ್ಚು ಹೆಚ್ಚು ಮೂಲಭೂತವಾದಿಗಳಾಗುವತ್ತ ಸಾಗುತ್ತಿವೆ. ಯಾವುದೋ ಶಿಲಾಯುಗದ ಷರಿಯತ್ ಕಾನೂನು ಬೇಕು ಎಂದು ಯುರೋಪಿನ ದೇಶಗಳಲ್ಲಿ ಹಕ್ಕೊತ್ತಾಯಗಳು ನಡೆಯುತ್ತಿವೆ. ರಿಲಿಜನ್‍ಗಳ ಬಗ್ಗೆ ಮಾತಾಡುವುದೇ ಅಪರಾಧ ಎಂಬ ಪರಿಸ್ಥಿತಿ ಉದ್ಭವವಾಗುತ್ತಿದೆ. ಮತಗ್ರಂಥಗಳ ಬಗ್ಗೆ ಮಾತಾಡಿದರೆ ಸಾಕು ಕೊರಳಿಗೆ ಕತ್ತಿ ಇಡುವ ಮಂದಿ ಹುಟ್ಟಿಕೊಂಡಿದ್ದಾರೆ. ಹಾಗಿರುವಾಗ, ಆ ಕಾಲದಲ್ಲಿ ಗೋಯಲ್ ಒಂದು ವಾಕ್ಯವಲ್ಲ, ಒಂದು ಪುಸ್ತಕವಲ್ಲ, ಪುಸ್ತಕಗಳ ಸಾಲುಸಾಲನ್ನೇ ರಿಲಿಜನ್‍ಗಳ ವಿಶ್ಲೇಷಣೆಗೆ ಮೀಸಲಿಟ್ಟರು ಎಂದರೆ ಅವರ ಧೈರ್ಯವನ್ನು ಮೆಚ್ಚಲೇಬೇಕಲ್ಲ! ಉದಾಹರಣೆಗೆ 1987ರಲ್ಲಿ ಗೋಯಲ್ ಅವರು ತನ್ನ ಪುಸ್ತಕ ಪ್ರಕಾಶನದ ಮೂಲಕ “ದ ಕಲಕತ್ತಾ ಕುರಾನ್ ಪೆಟಿಷನ್” ಎಂಬ ಪುಸ್ತಕ ಪ್ರಕಟಿಸಿದರು. ಕುರಾನ್‍ನಲ್ಲಿ ಸಮಾಜದ ಸ್ವಾಸ್ಥ್ಯ ಕದಡುವಂಥ ಹಲವು ಉಲ್ಲೇಖಗಳಿವೆ. ಸಮಾಜದಲ್ಲಿರುವ ಹಲವು ಮತಧರ್ಮಗಳ ನಡುವೆ ದ್ವೇಷ ಹುಟ್ಟಿಸುವ, ಹಿಂಸೆಗೆ ಪ್ರಚೋದಿಸುವ ಭಾಗಗಳಿವೆ. ಹಾಗಾಗಿ ಅಂಥ ಪುಸ್ತಕ ಚಲಾವಣೆಯಲ್ಲಿದ್ದರೆ ಸಮಾಜದಲ್ಲಿ ಅಶಾಂತಿ ಭುಗಿಲೇಳುತ್ತದೆ. ಅದನ್ನು ಮುಟ್ಟುಗೋಲು ಹಾಕಬೇಕು – ಎಂದು ಚಾಂದ್‍ಮಲ್ ಚೋಪ್ರಾ ಎಂಬವರು 1985ರ ಮಾರ್ಚ್ 29ರಂದು ಕೋಲ್ಕತ್ತಾ ಹೈಕೋರ್ಟ್‍ನಲ್ಲಿ ರಿಟ್ ಅರ್ಜಿ ಸಲ್ಲಿಸಿದರು. ಊಹಿಸಿದ್ದಂತೆಯೇ, ಸಮಾಜದ ಒಂದು ಸಮುದಾಯದಿಂದ ತೀವ್ರ ವಿರೋಧ ಭುಗಿಲ್ಲೆದ್ದಿತು. ಚೋಪ್ರಾ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಯಿತು. ರಿಟ್ ಅರ್ಜಿಯ ವಿಚಾರಣೆ, ಪೊಲೀಸ್ ಪ್ರಕರಣಗಳು, ಚೋಪ್ರಾ ಬಂಧನ, ಅನಂತರ ಸಮಾಜದ ನಿರ್ದಿಷ್ಟ ಸಮುದಾಯದಿಂದ ಬಂದ ಬೆದರಿಕೆ – ಇವೆಲ್ಲವನ್ನೂ ಇಟ್ಟುಕೊಂಡು ಚೋಪ್ರಾ ಬರೆದ ಪುಸ್ತಕವನ್ನು ಗೋಯಲ್ 87ರಲ್ಲಿ ಪ್ರಕಟಿಸಿದಾಗ ಆ ಪುಸ್ತಕವನ್ನು ಮುಟ್ಟುಗೋಲು ಹಾಕಬೇಕೆಂದು ಕೂಗು ಎದ್ದಿತು! “ನಾನು ಈ ದೇಶದಲ್ಲಿ ಯಾವ ಪುಸ್ತಕದ ನಿಷೇಧದ ಪರವಾಗಿಯೂ ಇಲ್ಲ. ಆದರೆ, ಒಂದು ನಿರ್ದಿಷ್ಟ ಸಮುದಾಯ ಮತ್ತು ಅದರ ಸಿದ್ಧಾಂತಗಳು ಸಮಾಜ ಮತ್ತು ದೇಶಕ್ಕೆ ಎಷ್ಟು ಭಯಾನಕವಾಗಿವೆ; ಹೇಗೆ ಅವು ಕೇವಲ ಭಯೋತ್ಪಾದನೆ ಮಾಡಿಯೇ ನ್ಯಾಯಾಂಗವನ್ನು ಕೂಡ ತಮಗೆ ಬೇಕಾದಂತೆ ಬಗ್ಗಿಸಿಕೊಳ್ಳುತ್ತವೆ ಎಂಬುದನ್ನು ತೋರಿಸಲೆಂದೇ ನಾನು ಆ ಪುಸ್ತಕ ಪ್ರಕಟಿಸಿದೆ” ಎಂದು ಗೋಯಲ್ ಮುಂದೊಮ್ಮೆ ಬರೆದುಕೊಂಡರು.

ಗೋಯಲ್ ಮಾಡಿದ ಇನ್ನೊಂದು ಹಿರೋಯಿಕ್ ಕೆಲಸ ಎಂದರೆ ರಾಮ್‍ಸ್ವರೂಪ್ ಅವರ “ಅಂಡರ್‍ಸ್ಟ್ಯಾಂಡಿಂಗ್ ಇಸ್ಲಾಮ್ ಥ್ರೂ ಹದೀಸ್” ಪುಸ್ತಕವನ್ನು ಪ್ರಕಟಿಸಿದ್ದು. ಮುಹಮ್ಮದರ ಸಂದೇಶಗಳೆಂದು ಭಾವಿಸಲಾದ ಹದೀಸ್‍ನ ಮೂಲ ವಾಕ್ಯಗಳನ್ನೇ ಎತ್ತಿಕೊಂಡು ರಾಮ್‍ಸ್ವರೂಪ್ ಅವರು ಅಲ್ಲಿ ಎಂತೆಂಥ ಸಂದೇಶಗಳನ್ನೆಲ್ಲ ಬರೆಯಲಾಗಿದೆ ಎಂಬುದನ್ನು ಬಹುಶಃ ಮೊತ್ತಮೊದಲ ಬಾರಿಗೆ ಭಾರತದಲ್ಲಿ ಸಾರ್ವಜನಿಕರ ಮುಂದಿಟ್ಟಾಗ ದೊಡ್ಡ ಕೋಲಾಹಲವೇ ಎದ್ದಿತು. ರಾಮ್‍ಸ್ವರೂಪ್ ಅವರು ಹದೀಸ್‍ನಲ್ಲಿದ್ದ ವಾಕ್ಯಗಳನ್ನಷ್ಟೇ ಎತ್ತಿಕೊಂಡಿದ್ದರು. ಯಾವ ಅಕ್ಷರವನ್ನೂ ಬಿಡಲಿಲ್ಲ; ಯಾವುದನ್ನೂ ಸೇರಿಸಲಿಲ್ಲ. ಆ ಹದೀಸ್‍ಗಳಿಗೆ ಅವರು ಅರ್ಥವನ್ನು ಇಂಗ್ಲೀಷ್‍ನಲ್ಲಿ ಕೊಟ್ಟರು. ಅವರು ಕೊಟ್ಟ ಅರ್ಥಗಳು ಸರಿಯೋ ತಪ್ಪೋ ಎಂಬುದನ್ನು ನಿರ್ಧರಿಸಲು ಕೋರ್ಟು ಎಂಟು ಜನ ತಜ್ಞರ ತಂಡ ರಚಿಸಿತು. ಆ ಎಂಟೂ ಜನ, ಆ ಅರ್ಥಗಳು ಮೂಲಕ್ಕೆ ನಿಷ್ಠವಾಗಿವೆ; ಯಾವ ಅರ್ಥವನ್ನೂ ಬಿಟ್ಟಿಲ್ಲ; ಯಾವುದನ್ನೂ ಹೊಸದಾಗಿ ಸೇರಿಸಿಲ್ಲ – ಎಂದು ತಮ್ಮ ಅಂತಿಮ ನಿರ್ಣಯ ಕೊಟ್ಟರು. ಅಷ್ಟಾಗಿಯೂ ಆ ಪುಸ್ತಕವನ್ನು ಕೇಂದ್ರ ಸರಕಾರ, ಮುಸ್ಲಿಮ್ ಸಮುದಾಯದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಲಾಗಿದೆ ಎಂಬ ಸಬೂಬು ಹೇಳಿ ನಿಷೇಧಿಸಿತು! ಬಹುಶಃ ಈ ದೇಶದಲ್ಲಿ ಇದಕ್ಕಿಂತ ಹಾಸ್ಯಾಸ್ಪದ ಸಂಗತಿ ನಡೆದಿರಲಾರದೇನೋ! ಮುಸ್ಲಿಮರು ಪವಿತ್ರ ಎಂದು ಭಾವಿಸುವ ಗ್ರಂಥದ ವಾಕ್ಯಗಳಿಗೆ ಇಂಗ್ಲೀಷ್‍ನಲ್ಲಿ ಅರ್ಥ ಬರೆದ ಏಕೈಕ ಕಾರಣಕ್ಕೆ ಮುಸ್ಲಿಮರಿಂದಲೇ ಒತ್ತಾಯಿಸಲ್ಪಟ್ಟು ನಿಷೇಧ ಹಾಕಿಸಿಕೊಂಡ ಪುಸ್ತಕ ಅದೇ ಇರಬೇಕು! ಅದಷ್ಟೇ ಸಾಕಾಗದು ಎಂಬಂತೆ ಪುಸ್ತಕ ಬರೆದ ರಾಮ್‍ಸ್ವರೂಪ್ ಮತ್ತು ಪ್ರಕಟಿಸಿದ ಸೀತಾರಾಮ ಗೋಯಲ್, ಇಬ್ಬರನ್ನೂ ಕೋರ್ಟುಕಚೇರಿ ಅಲೆಸಿ ಹಣ್ಣುಗಾಯಿ ನೀರುಗಾಯಿ ಮಾಡಲು ಯತ್ನಿಸಲಾಯಿತು. ಅಖಂಡ ಹದಿನೈದು ವರ್ಷಗಳ ಕಾಲ ನಡೆದ ಕೋರ್ಟು ಕೇಸಿನಲ್ಲಿ ಕೊನೆಗೆ 1997ರಲ್ಲಿ ಜಯ ಗೋಯಲ್ ಅವರದ್ದೇ ಆದರೂ ಕೃತಿ ನಿಷೇಧ ಮಾತ್ರ ಮುಂದುವರಿಯಿತು!

ಸೀತಾರಾಮ ಗೋಯಲ್ ಸ್ವತಂತ್ರ ಭಾರತದಲ್ಲಿ ಆಗಿಹೋದ ಹಿಂದೂ ಚಿಂತಕರಲ್ಲಿ ಅತಿಮುಖ್ಯರಾಗುವುದು ಯಾವ ಕಾರಣಕ್ಕೆ ಎಂದರೆ, ಸತ್ಯ ಎಂದು ತಾನು ನಂಬಿದ್ದನ್ನು ಹೇಳಲು ಅವರು ಯಾವತ್ತೂ ಮುಜುಗರಪಡಲಿಲ್ಲ; ಹಿಂದೇಟು ಹಾಕಲಿಲ್ಲ; ಚೌಕಾಶಿ ಮಾಡಲಿಲ್ಲ. ಪುಸ್ತಕಗಳನ್ನು ಬರೆದ ಮೇಲೆ ಅವುಗಳಿಂದ ತನಗೊದಗಬಹುದಾದ ಎಲ್ಲ ಅಪಾಯಗಳ ಅರಿವಿದ್ದೂ ಸತ್ಯ ಹೇಳಲು ತಯಾರಿದ್ದ ಧೀಮಂತ ಅವರು. ಬಹುಶಃ ಅದೇ ಕಾರಣಕ್ಕೆ ಅವರ ಲೇಖನಗಳನ್ನು ಪ್ರಕಟಿಸಲು ಪತ್ರಿಕೆಗಳು ಮುಂದೆ ಬರಲಿಲ್ಲ. ಪುಸ್ತಕ ಪ್ರಕಟಿಸಲು ಪ್ರಕಾಶಕರು ಸಿಗಲಿಲ್ಲ. ಗೋಯಲ್ ತಮ್ಮ ಪುಸ್ತಕಗಳನ್ನು ತಾವೇ ದುಡ್ಡು ಹಾಕಿ ಪ್ರಕಟ ಮಾಡಿದರೂ ಅವುಗಳನ್ನು ಯಾವೊಂದು ಪತ್ರಿಕೆಯೂ ಸಾದರ ಸ್ವೀಕಾರದ ಅಂಕಣದಲ್ಲಿ ಕೂಡ ಪ್ರಸ್ತಾಪಿಸಲಿಲ್ಲ. ಹಠ ಬಿಡದ ವಿಶ್ವಾಮಿತ್ರನಂತೆ ಬ್ರಹ್ಮಕ್ಷತ್ರಿಯ ಗೋಯಲ್ ಒಂಟಿ ಸಲಗವಾಗಿ ಬದುಕಿದರು, ಬರೆದರು. ನೆಹರೂ ಬಗ್ಗೆ ನಿರಂತರವಾಗಿ ಬರೆದ, ಕನಸಲ್ಲಿ ಕೂಡ ಬೆಚ್ಚಿಬೀಳುವಷ್ಟು ನೆಹರೂ ಅನ್ನು ಕಾಡಿದ ಚಿಂತಕ ಭಾರತದಲ್ಲಿ ಗೋಯಲ್ ಬಿಟ್ಟರೆ ಇನ್ನೊಬ್ಬರಿಲ್ಲ. ನೆಹರೂ ಅವರ ರಷ್ಯಾ ನಿರ್ದೇಶಿತ ಸೋಷಲಿಸಮ್ ಮತ್ತು ಆರ್ಥಿಕ ನೀತಿಗಳು ದೇಶವನ್ನು ತಪ್ಪುದಾರಿಯಲ್ಲಿ ಎಳೆದೊಯ್ಯುತ್ತಿವೆ ಎಂದು ಮೊದಲ ಬಾರಿಗೆ ವಿರೋಧಪಕ್ಷವನ್ನೂ ಜನರನ್ನೂ ಎಚ್ಚರಿಸಿದ್ದವರು ಗೋಯಲ್. ಅವರ ಬಗ್ಗೆ ನೆಹರೂ ಅವರಿಗೆ ಅದೆಷ್ಟು ಉರಿ ಇತ್ತೆಂದರೆ 1962ರಲ್ಲಿ ಚೀನಾ ಜೊತೆಗೆ ಯುದ್ಧ ಮಾಡುತ್ತಿದ್ದಾಗ, ನೆಹರೂ ಇತ್ತ ಗೋಯಲ್‍ರನ್ನು ಜೈಲಿಗೆ ಹಾಕಿದರು! 1955ರಲ್ಲಿ ಗೋಯಲ್ ಪಾಸ್‍ಪೋರ್ಟ್‍ಗಾಗಿ ಅರ್ಜಿ ಹಾಕಿದಾಗ ಅದು ತಿರಸ್ಕೃತವಾಯಿತು. ಆಗ ಅಧಿಕಾರಿಗಳು ಕೊಟ್ಟ ಕಾರಣ – ನಿಮ್ಮ ಪಾಸ್‍ಪೋರ್ಟ್ ಅರ್ಜಿಯನ್ನು ತಿರಸ್ಕರಿಸಬೇಕೆಂದು ಪ್ರಧಾನಿ ನೆಹರೂ ಅವರ ಆದೇಶ ಬಂದಿದೆ – ಎಂದು!

ಗೋಯಲ್ ಅದೆಂಥ ಬೆಂಕಿ ಚೆಂಡಾಗಿದ್ದರು ಎಂಬುದಕ್ಕೆ ಇದಕ್ಕಿಂತ ದೊಡ್ಡ ಸರ್ಟಿಫಿಕೇಟು ಬೇಕಿಲ್ಲ ಅಲ್ಲವೆ?

(ಮುಂದುವರಿಯುವುದು)

Facebook ಕಾಮೆಂಟ್ಸ್

ಲೇಖಕರ ಕುರಿತು

Rohith Chakratheertha

ಓದಿದ್ದು ವಿಜ್ಞಾನ, ಮುಖ್ಯವಾಗಿ ಗಣಿತ. ಬೆಂಗಳೂರಿನಲ್ಲಿ ನಾಲ್ಕು ವರ್ಷ ಉಪನ್ಯಾಸಕನಾಗಿ ಕಾಲೇಜುಗಳಲ್ಲಿ ಪಾಠ ಮಾಡಿದ್ದ ಇವರು ಈಗ ಒಂದು ಬಹುರಾಷ್ಟ್ರೀಯ ಕಂಪೆನಿಯಲ್ಲಿ ಉದ್ಯೋಗಿ. ಹವ್ಯಾಸವಾಗಿ ಬೆಳೆಸಿಕೊಂಡದ್ದು ಬರವಣಿಗೆ. ಐದು ಪತ್ರಿಕೆಗಳಲ್ಲಿ ಸದ್ಯಕ್ಕೆ ಅಂಕಣಗಳನ್ನು ಬರೆಯುತ್ತಿದ್ದು ವಿಜ್ಞಾನ, ಗಣಿತ, ವ್ಯಕ್ತಿಚಿತ್ರ, ಮಕ್ಕಳ ಕತೆ ಇತ್ಯಾದಿ ಪ್ರಕಾರಗಳಲ್ಲಿ ಇದುವರೆಗೆ ೧೩ ಪುಸ್ತಕಗಳ ಪ್ರಕಟಣೆಯಾಗಿವೆ. ಉದ್ಯೋಗ ಮತ್ತು ಬರವಣಿಗೆಯಿಂದ ಬಿಡುವು ಸಿಕ್ಕಾಗ ತಿರುಗಾಟ, ಪ್ರವಾಸ ಇವರ ಖಯಾಲಿ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!