ಈತ ದೇಶೀ ಚಿತ್ರರಂಗದ ಅತಿ ಹಿರಿಯ ನವತರುಣ! ಸ್ವಾತಂತ್ರ್ಯಪೂರ್ವದಿಂದ ಹಿಡಿದು ಇಂದಿನವರೆಗೂ ಅದೇ ಮಂದಹಾಸದ ನಗೆ, ಅದೇ ಶಾಂತ ನಿರ್ಮಲ ಚಹರೆ ಹಾಗು ಅಷ್ಟೇ ಗಾಢವಾದ ಕಪ್ಪುಗೂದಲು ಈತನ ಹೈಲೈಟ್ಸ್. ವಯಸ್ಸಿನ ಗಡಿಯಾರ 95 ವರ್ಷಗಳನ್ನು ದಾಟಿದೆ ಹಾಗು ತಿರುಗಾಡಲು ಒಂದು ವೀಲ್ ಚೇರ್ ನ ಅವಶ್ಯಕತೆಯಿದೆ ಎಂಬುದನ್ನು ಬಿಟ್ಟರೆ ಬೇರೆಲ್ಲ ಬಗೆಯಿಂದಲೂ ಈತ ನವತರುಣನೇ. ಒಂಚೂರು ಬಣ್ಣ ಬಳಿದು, ಸೂಟು ಬೂಟನ್ನು ಧರಿಸಿ ಕ್ಯಾಮೆರಾದ ಮುಂದೆ ನಿಲ್ಲಿಸಿದರೆ ಸಾಕು ಖಾನ್, ಬಚ್ಚನ್ ಹಾಗು ರೋಷನ್ ಗಳೆಲ್ಲ ತಮ್ಮ ಕಾಂತಿಯನ್ನೇ ಕಳೆದುಕೊಳ್ಳುತ್ತಾರೆ. ಸುಮಾರು ಆರು ದಶಕಗಳ ಕಾಲ ನಟನೆಯಲ್ಲಿ ತೊಡಗಿ, ಹಲವಾರು ಪೀಳಿಗೆಯ ಜನರ ಮೇಲೆ ತನ್ನ ನಟನ ಚಾತುರ್ಯದ ಪ್ರಭಾವವನ್ನು ಬೀರಿ, ಎಂಟು ಫಿಲಂ ಫೇರ್ ಪ್ರಶಸ್ತಿಯನ್ನು ಗೆದ್ದ ದಾಖಲೆಯೊಂದಿಗೆ ಹನ್ನೊಂದು ಬಾರಿ ಅದರಲ್ಲಿ ನಾಮನಿರ್ದೇಶನಗೊಂಡು, ‘ಟ್ರಾಜಿಡಿ ಕಿಂಗ್‘ ಎಂದು ಇಂದಿಗೂ ಜನಮಾನಸದಲ್ಲಿ ಕಂಗೊಳಿಸುತ್ತಿರುವ ಮುಹಮ್ಮದ್ ಯೂಸುಫ್ ಖಾನ್ ಅಥವಾ ಸಿನಿಪ್ರಿಯರ ಪ್ರೀತಿಯ ದಿಲೀಪ್ ಕುಮಾರ್ ನನ್ನು ಯಾರಾದರೂ ಮರೆಯುವುದುಂಟೆ?
ದಿಲೀಪ್ ಜನಿಸಿದ್ದು 1922ರ ಡಿಸೆಂಬರ್ ನಲ್ಲಿ. ಪ್ರಸ್ತುತ ಪಾಕಿಸ್ತಾನದ ಪೇಶಾವರ್ ಈತನ ಜನ್ಮಭೂಮಿ. ಕಾಕತಾಳೀಯವೆಂಬಂತೆ ಹಿಂದಿ ಚಿತ್ರರಂಗದ ಮತ್ತೊಬ್ಬ ದಿಗ್ಗಜ ರಾಜಕಪೂರ್ ಸಹ ಈತನ ನೆರೆಮನೆವಾಸಿ ಕಮ್ ಚಡ್ಡಿ ದೋಸ್ತ್. ರಾಜ್ ನ ಕುಟುಂಬ ಅದಾಗಲೇ ಚಿತ್ರರಂಗದಲ್ಲಿ ಹೆಸರನ್ನು ಮಾಡತೊಡಗಿದ್ದರಿಂದ ಸ್ವಾಭಾವಿಕವಾಗಿ ದಿಲೀಪ್ ಮೇಲೂ ಇದರ ಪ್ರಭಾವ ಬಿದ್ದಿರಬಹುದು. ಅಲ್ಲಿಂದ ಮುಂದೆ ದಿಲೀಪ್ ರ ತಂದೆ ಜೀವನ ನಿರ್ವಹಣೆಗಾಗಿ ಸಂಸಾರ ಸಮೇತ ಬಾಂಬೆಗೆ ಬಂದಿಳಿದರು. ಮುಂದೆ ಅಲ್ಲಿಯೇ ಹಣ್ಣಿನ ವ್ಯಾಪಾರವನ್ನು ಮಾಡುತ್ತಾ ಜೀವನ ಸಾಗಿಸುತ್ತಿದ್ದ ಅವರಿಗೆ ಮುಂದೊಂದು ದಿನ ಮಗನೊಟ್ಟಿಗಿನ ಒಂದು ವಿರಸ ಬಹುವಾಗಿ ಬಾದಿಸಿತು. ತನ್ನ ಹದಿನೆಂಟನೆ ವಯಸ್ಸಿಗೆ ಅಪ್ಪನೊಟ್ಟಿಗೆ ಮುನಿಸಿಕೊಂಡು ಮನೆಬಿಟ್ಟು ಹೊರಟ ದಿಲೀಪ್ ಹೋದದ್ದಾದರೂ ಎಲ್ಲಿಗೆ? ನೂರಾರು ಮೈಲು ದೂರದ ಪುಣೆಗೆ!. ಮತ್ತೆಂದೂ ಹಿಂಬರಬಾರದು, ಕಷ್ಟ ಪಟ್ಟು ದುಡಿದು ಸ್ವಂತ ಕಾಲ ಮೇಲೆ ನಿಲ್ಲಬೇಕೆಂಬ ಹಠ ಅಂದು ಬಿಸಿರಕ್ತದ ಶಾಂತರೂಪಿ ದಿಲೀಪ್ ನದ್ದಾಗಿದ್ದಿತು. ಅಂದು ಹೋಟೆಲ್ ನ ನೌಕರನಾಗಿ ಚಾಕರಿ ಶುರುಮಾಡುವ ಆತನಿಗಿದ್ದ ಏಕೈಕ ಗುರಿ ತಾನೇ ಖುದ್ದಾಗಿ ಹೋಟೆಲೊಂದನ್ನು ಸ್ಥಾಪಿಸುವುದು. ಆದರೆ ಆ ಗುರಿಯೆಡಗಿನ ಹಾದಿ ಆತನನ್ನು ಕರೆದುಕೊಂಡು ಹೋಗಿದ್ದು ಮಾತ್ರ ಕನಸಿನ ಊಹೆಗೂ ನಿಲುಕದ ಸ್ಥಳವೊಂದಕ್ಕೆ!
ಆಗೆಲ್ಲ ಬಾಂಬೆ ಟಾಕೀಸ್ ಎಂದರೆ ಒಂಥರಾ ಕನಸಿನ ಕೋಟೆ. ಯಾರೋಬ್ಬನೇ ಆಗಲಿ ಅದರೊಳಗೆ ಒಮ್ಮೆ ಹೊಕ್ಕರೆ ದಾರಿದ್ರ್ಯವನ್ನು ಕೆಳಗಿಳಿಸಿಯೇ ಹೊರಬರುತ್ತಾನೆ ಎಂಬೊಂದು ನಂಬಿಕೆ ಬಲವಾಗಿದ್ದ ಕಾಲವದು. ದೇವಿಕಾ ರಾಣಿ ಆ ಬಾಂಬೆ ಟಾಕೀಸ್ ನ ಒಡೆಯಳಾಗಿದ್ದಳು. ಮಧುಬಾಲ, ಅಶೋಕ್ ಕುಮಾರ್, ಮುಮ್ತಾಜ್ ರಂತಹ ದಿಗ್ಗಜರನ್ನು ಸಿನಿಮಾ ಕ್ಷೇತ್ರಕ್ಕೆ ನೀಡಿದ ಹಿರಿಮೆ ಬಾಂಬೆ ಟಾಕೀಸ್ ಹಾಗು ದೇವಿಕಾ ರಾಣಿಯದು. ಈ ಹೆಸರಿನ ಸಾಲುಗಳಿಗೆ ಮತ್ತೊಂದು ಸೇರ್ಪಡೆಯೆ ದಿಲೀಪ್ ಕುಮಾರ್. ಒಮ್ಮೆ ಪರಿಚಯದವರೊಬ್ಬರನ್ನು ಬಾಂಬೆ ಟಾಕೀಸ್ ಗೆ ಬಿಡಲು ಬಂದಾಗ ಅಚಾನಕ್ಕಾಗಿ ದೇವಿಕಾ ರಾಣಿಯ ಪರಿಚಯವಾಗುತ್ತದೆ. ತದನಂತರ ತಿಂಗಳಿಗೆ 1250 ರೂಪಾಯಿಗಳ ಸಂಬಳದ ಕೆಲಸವನ್ನು ಆಕೆ ದಿಲೀಪ್ ಗೆ ನೀಡುತ್ತಾಳೆ. ದಿನವಿಡೀ ಹೋಟೆಲ್ನಲ್ಲಿ ದುಡಿದು ನಲುಗಿದ್ದ ದಿಲೀಪ್ ದೊರೆತ ಈ ಅವಕಾಶದ ಮೇಲೇರಿ ಬಾಂಬೆ ಟಾಕೀಸ್’ನ ಭಾಗವಾಗಿಬಿಡುತ್ತಾನೆ. ತನ್ನ ಉರ್ದು ಬರವಣಿಗೆ ಹಾಗು ಉಚ್ಚಾರಣೆಯಲ್ಲಿ ಬಲವಾಗಿದ್ದ ಈತ ಮೊದಮೊದಲು ಹೆಚ್ಚಾಗಿ ಚಿತ್ರಕಥೆ, ಸಂಭಾಷಣೆಗಳ ವಿಭಾಗದಲ್ಲಿ ಕೆಲಸ ನಿರ್ವಹಿಸುತ್ತಾನೆ. ಆದರೆ ನಾಯಕನ ದೇಹಕಾಯ, ಲಲನೆಯರು ನಾಚಿ ನೀರಾಗುವಂತಹ ನಗು, ಆದರ್ಶ ವ್ಯಕ್ತಿತ್ವ ಹಾಗು ಕೆಲಕಾಲದ ಚಿತ್ರರಂಗದ ಅನುಭವ 1944 ರಲ್ಲಿ ಈತನನ್ನು ನಾಯಕನಾಗಿ ಮಾಡುತ್ತದೆ. ದೇವಕಿ ರಾಣಿಯ ಸೂಚನೆಯ ಮೇರೆಗೆ ಮೊಹಮೂದ್ ಯೂಸುಫ್ ಖಾನ್ ನ ಹೆಸರು ಅಂದು ದಿಲೀಪ್ ಕುಮಾರ್ ಆಗಿ ಬದಲಾಯಿತು ಮತ್ತು ದೇಶದೆಲ್ಲೆಡೆ ಚಿರಪರಿಚಿತವಾಯಿತು.
ಹೀಗೆ ಸುಮಾರು ಐವತ್ತರ ದಶಕದಷ್ಟರಲ್ಲಿ ದಿಲೀಪ್ ಜನಮಾನಸದಲ್ಲಿ ಬೆರೆತುಹೋಗುತ್ತಾನೆ. ಕುಡಿ ಮೀಸೆಯ ತರುಣರಾದ ದಿಲೀಪ್ ಕುಮಾರ್, ರಾಜ್ ಕಪೂರ್ ಹಾಗು ದೇವಾನಂದ್ ರೆಂದರೆ ಜನ ಹುಚ್ಚೆದ್ದು ಕುಣಿಯುತ್ತಿದ್ದ ಜಮಾನವದು. ಬೆಳೆಯುತ್ತಿದ್ದ ಜನಪ್ರಿಯತೆಗೆ ತಕ್ಕಂತೆ ಕ್ಲಾಸಿಕ್ ನಟನೆಗಳನ್ನು ನೀಡುತ್ತಿದ್ದ ದಿಲೀಪ್ ಅಕ್ಷರ ಸಹ ತಮ್ಮನ್ನು ಆ ನಟನೆಯಲ್ಲಿ ಒಂದಾಗಿಸಿಕೊಂಡುಬಿಡುತ್ತಿದ್ದರು. ಅದೆಷ್ಟರ ಮಟ್ಟಿಗೆಂದರೆ ‘ದೇವದಾಸ್’ ಚಿತ್ರದ ಅಭಿನಯದ ನಂತರ ಚಿತ್ರದ ನಾಯಕನ ಖಿನ್ನತೆಯ ಸ್ವಭಾವದಿಂದ ಹೊರಬರಲು ಮನಶಾಸ್ತ್ರಜ್ಞರೊಬ್ಬರನ್ನು ಕಂಡು ಚಿಕಿತ್ಸೆಯನ್ನು ಪಡೆಯುವ ಮಟ್ಟಿಗೆ! ಇವರ ಈ ಅಮೋಘ ನಟನೆಯ ಸ್ಫೂರ್ತಿಯಿಂದಲೇ ಹಿಂದಿ ಚಿತ್ರರಂಗದ ದಿಗ್ಗಜರಾದ ಅಮಿತಾಬ್ ಬಚ್ಚನ್, ಧರ್ಮೇಂದ್ರ ಹಾಗು ಮನೋಜ್ ಕುಮಾರ್’ರಂತಹ ನಟರು ಮುನ್ನೆಲೆಗೆ ಬಂದದ್ದು.
ಯಾವುದಾದರೊಂದು ಕಾರ್ಯಕ್ಕೆ ತಮ್ಮನ್ನು ತಾವು ತೊಡಗಿಸಿಕೊಂಡರೆ ಕಾಯ ವಾಚಾ, ಮನಸ್ಸ ಅದರಲ್ಲಿ ಕರಗಿಸಿಕೊಳ್ಳುವುದು ದಿಲೀಪ್ರ ಹಲವು ವಿಶಿಷ್ಟತೆಗಳಲ್ಲೊಂದು. ಅದು ಕೇವಲ ನಟನೆಯಲ್ಲಲ್ಲದೆ ಪೀತಿ ಪ್ರೇಮದ ವಿಷಯದಲ್ಲಿಯೂ. ಇಲ್ಲಿ ದಿಲೀಪ್ ಕಾಯ.ವಾಚಾ, ಮನಸ್ಸ ತಮ್ಮನ್ನು ಅರ್ಪಿಸಿಕೊಂಡಿದ್ದು ಆಗಿನ ಜನಪ್ರಿಯ ನಟಿ ಮಧುಬಾಲಾಳಿಗೆ. ಆನ್ ಸ್ಕ್ರೀನ್ ಹಾಗು ಆಫ್ ಸ್ಕ್ರೀನ್ ಎರಡರಲ್ಲೂ ಜನರ ಮೋಡಿ ಮಾಡಿದ್ದ ಈ ಜೋಡಿ ಜೀವನದ ತೂಗುಯ್ಯಾಲೆಯಲ್ಲಿ ಕೂಡಿ ಬಾಳುವ ಮುನ್ನವೇ ಕಾರಣಾನಂತರಗಳಿಂದ ಬೇರಾಯಿತು. ಹೀಗೆ ಬೇರಾದ ಮಧುಬಾಲರನ್ನು ಮನಸ್ಸಿನಾಳದಲ್ಲಿ ವಿಪರೀತವಾಗಿ ಪ್ರೀತಿಸುತ್ತಿದ್ದ ದಿಲೀಪ್ ಆಕೆಯ ಸಾವಿನ ನಂತರ ಅಕ್ಷರ ಸಹ ಅಲುಗಾಡಿಹೋದರು. ತಮಗಾಗಿ ತನ್ನೆಲ್ಲಾ ಸರ್ವಸ್ವವನ್ನೂ ಧಾರೆ ಎರೆಯುವ ತ್ರಿಪುರ ಸುಂದರಿಯರ ಉಪಸ್ಥಿತಿಯಲ್ಲೂ ತಮ್ಮ 44 ವಯಸ್ಸಿನವರೆಗೂ ಮದುವೆಯಾಗದೆ ಉಳಿದ ದಿಲೀಪ್ ನ ಕಣ ಕಣದಲ್ಲೂ ಅಂದು ಮಧುಬಾಲಳ ನೆನಪೇ ತುಂಬಿರುತ್ತದೆ. ಚಿತ್ರದಲ್ಲಷ್ಟೇ ಅಲ್ಲದೆ ನಿಜ ಜೀವನದಲ್ಲೂ ದೇವದಾಸನ ಕಾರ್ಮೋಡ ಆವರಿಸಿಕೊಳ್ಳುತ್ತದೆ.
ಇಂದು ದಿಲೀಪ್ ಕುಮಾರ್ ರೆಂದರೆ ದೇಶೀ ಚಿತ್ರರಂಗದ ರೂಲ್ ಬುಕ್ ನಂತೆ ಕಾಣಲಾಗುತ್ತದೆ. ಶಹೀದ್, ಅಂದಾಜ್, ಅಮರ್, ದೇವದಾಸ್, ಮೊಘಲ್-ಎ-ಆಝಮ್ , ಸೌದಾಗರ್ ನಂತಹ ಹಲವಾರು ಲೆಜೆಂಡರಿ ಚಿತ್ರಗಳಲ್ಲಿ ನಟಿಸಿ, ತಲೆತಲಾಂತರದ ಜನಜೀವನವನ್ನು ಹಾಸುಹೊಕ್ಕಾಗಿ ಬಿಂಬಿಸಿ, ಜನರನ್ನು ರಂಜಿಸಿದ ದಿಲೀಪ್ ನ ನಟನ ಕಲೆಗೆ ಮನಸೋತವರೇ ಇಲ್ಲ. ತಮ್ಮೆಲ್ಲ ಗೆಲುವು, ಏಳಿಗೆಯನ್ನು ತಮಗೆ ದೊರೆತ ಪಾತ್ರಗಳಿಗೆ ಹಾಗು ಅವನ್ನು ಸೃಷ್ಟಿಸಿದ ಕಲಾವಿದರಿಗೆ ಅರ್ಪಿಸುವ ಈತನಿಗೆ ಭಾರತ ಸರ್ಕಾರ ಪದ್ಮಭೂಷಣ ಪದ್ಮವಿಭೂಷಣ ಹಾಗು ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗಳನ್ನು ನೀಡಿ ಗೌರವಿಸಿದೆ.
ಒಮ್ಮೆ ದಿಲೀಪ್ ತಮ್ಮ ಚಿತ್ರವೊಂದಕ್ಕೆ 20ರ ಹರೆಯದ ಹುಡುಗಿಯೊಬ್ಬಳನ್ನು ತಮ್ಮೊಟ್ಟಿಗೆ ನಟಿಸುವುದು ಬೇಡವೆನ್ನುತ್ತಾರೆ. ಆ ನಟಿಗಂತೂ ದಿಲೀಪ್ ಕುಮಾರರೇ ಆರಾಧ್ಯ ದೈವ. ಆಕೆ ಚಿತ್ರರಂಗಕ್ಕೆ ಕಾಲಿಡಲು ಆತನ ನಟನೆಯೇ ಸ್ಪೂರ್ತಿಯ ಸಿಂಚನ. ಆದರೆ ಆ ಪುಟ್ಟ ಹುಡುಗಿಯೊಟ್ಟಿಗೆ ನಾನೇನು ನಟಿಸುವುದು ಎಂದು ಹಿರಿತ್ವದ ಮಾತನ್ನು ದಿಲೀಪ್ ಅಂದು ಹೇಳುತ್ತಾರೆ. ಆದರೆ ವಿಧಿಲೀಲೆ ಬೇರೊಂದೇ ಯೋಚಿಸಿರುತ್ತದೆ, ನಟಿಯೊಬ್ಬಳನ್ನು ತಮ್ಮ ವಯಸ್ಸಿಗೆ ಸಮಪ್ರಾಯದವಳೆಂದು ನಿರಾಕರಿಸಿದ್ದ ದಿಲೀಪ್ ಆಕೆಯನ್ನೇ 1966 ರಲ್ಲಿ ವರಿಸುತ್ತಾರೆ! ಅವರಿಗಾಗ ಬರೋಬ್ಬರಿ 44 ವರ್ಷ. ಅಂದಿನಿಂದ ಇಂದಿನವರೆಗೂ ಜೀವನದ ಸಾಕಷ್ಟು ಏಳುಬೀಳುಗಳ ನಡುವೆ ಕೈಹಿಡಿದು ಸಂಬಾಳಿಸಿಕೊಂಡು ಬಂದಿರುವ ಆ ನಟಿಯೇ ಸಾಹೇರಾ ಬಾನು.