ಅಂಕಣ

ಯಾರಿಗೆ ಹೇಳೋಣ ಟೆಕ್ಕಿಗಳ ಪ್ರಾಬ್ಲಮ್ಮು…

ನಾನು PUC ಓದುತ್ತಿದ್ದ ಸಮಯದಲ್ಲಿ ಯಾವ ಪೋಷಕರನ್ನು ಕೇಳಿದರು ಒಂದೇ ಮಾತು. ನನ್ನ ಮಗ ಇಂಜಿನಿಯರಿಂಗ್ ಮಾಡ್ತಾ ಇದ್ದಾನೆ. ನನ್ನ ಮಗ ದೂರದ ದೇಶದಲ್ಲಿ ಸಾಫ್ಟ್ವೇರ್ ಇಂಜಿನಿಯರ್. ನನ್ನ ಮಗ ಅಮೇರಿಕಾದಲ್ಲಿದ್ದಾನೆ. ಹೀಗೆ ಯಾವುದೇ ಮದುವೆ ಮುಂಜಿ ಕಾರ್ಯಕ್ರಮದಲ್ಲಿ ಒಂದಷ್ಟು ಜನ ತಂದೆ ತಾಯಂದಿರು ಒಟ್ಟಿಗೆ ಸೇರಿದರೆ ಬರಿ ಸಾಫ್ಟ್ವೇರ್ ಉದ್ಯೋಗದ್ದೇ ಮಾತು. ಇದನ್ನು ಬಿಟ್ಟರೆ ಬೇರೆ ಬದುಕೇ ಇಲ್ಲ ಅನ್ನುವಷ್ಟು ಮಹತ್ತ್ವ ಪಡೆದಿತ್ತು ಈ ಕೋಮಲ ತಂತ್ರಜ್ಞಾನಕ್ಕೆ ಸಂಬಂಧ ಪಟ್ಟ ಹುದ್ದೆಗಳು. ಮಗು ಹುಟ್ಟೋಕೆ ಮುಂಚೇನೇ ಇಂಜಿನಿಯರ್ ಆಗಬೇಕೆಂದು ಸೀಲ್ ಒತ್ತಿಬಿಡುತ್ತಿದ್ದರು ತಂದೆ ತಾಯಂದಿರು. ಓದಿಕೊಂಡ ಬುದ್ಧಿವಂತರೇ ನಿಜವಾದ ದಡ್ಡರು ಅನ್ನೋ ಕಾಲವೇ ಈ ಕಲಿಯುಗ. ಜೀವನಕ್ಕೆ ಏನು ಬೇಕು, ಏನು ಬೇಡ, ಯಾವುದು ಅವಶ್ಯಕ ಹಾಗೂ ಯಾವುದು ಅನಿವಾರ್ಯ ಅನ್ನುವಂತಹ ಮೌಲ್ಯಗಳನ್ನ ಬಿಟ್ಟು ಉಳಿದೆಲ್ಲ ಬೇಡದ ವಿಷಯಗಳನ್ನು ಈಗಿನ ಶಿಕ್ಷಣ ಕಲಿಸುತ್ತಿದೆ. ಬದುಕಿನ ಅವಸರ ಕೆಡಿಸಿದೆ ಯುವಕರ ಅನ್ನೋ ಚಿತ್ರಗೀತೆಯ ಹಾಡಿನಂತೆ ಈಗಿನ ಯುವ ಜನತೆಯ ಪಾಡು. ಈಗಿನ ಪೋಷಕರು ಮಕ್ಕಳಿಗೆ ಒಳ್ಳೆ ಜ್ಞಾನವಂತನಾಗು ಅಂತ ಹೇಳೋದೇ ಕಮ್ಮಿ. ಬದಲಿಗೆ SSLC ಮುಗಿದ ಕೂಡಲೇ ಅವರ ತಲೆಗೆ ತುಂಬೋದು, ನೀನು ಸೈನ್ಸ್ ತೆಗೆದುಕೋ ಇಂಜಿನಿಯರ್ ಆಗು ಒಳ್ಳೆ ದುಡ್ಡು ಮಾಡಬಹುದು ಅಂತ. ಈ ಹಂತದಿಂದಲೇ ಅವರ ತಲೆಯೊಳಗೆ ದುಡ್ಡು ಮಾಡು ಅಂತ ಹೇಳಿ ಕೊಟ್ಟರೆ ಅವರ ಗಮನ ಜ್ಞಾನದ ದಿಕ್ಕಿನಲ್ಲಿ ಹರಿಯೋದರ ಬದಲಾಗಿ ಹೇಗಾದರೂ ಮಾಡಿ ಬೇಗ ದುಡ್ಡು ಮಾಡಬೇಕು ಅಂತ ಹಪಹಪಿಸಲು ಪ್ರಾರಂಭಿಸುತ್ತದೆ. ಓದಿ ಮುಗಿದ ಮೇಲೆ ಯಾವುದಾದರು ಕೆಲಸ ಸಿಕ್ಕೇ ಸಿಗುತ್ತದೆ ಸ್ವಾಮಿ, ಆದರೆ ತಾನು ಭಯಸದ ಕ್ಷೇತ್ರದಲ್ಲಿ ಕೇವಲ ದುಡ್ಡಿಗಾಗಿ ಕೆಲಸ ಮಾಡೋದರಿಂದ ನೆಮ್ಮದಿ ಯಾವತ್ತೂ ಸಿಗೋದೇ ಇಲ್ಲ. ಇದನ್ನ ಪೋಷಕರು ಅರ್ಥ ಮಾಡಿಕೊಳ್ಳಬೇಕು. ಅದೇ ಮಕ್ಕಳು ಅವರ ಆಸಕ್ತಿ ವಿಷಯದಲ್ಲಿ ಮುಂದುವರೆದರೆ ಮುಂದೆ ದೊಡ್ಡ ಸಾಧನೆಯನ್ನ ಮಾಡೋದರಲ್ಲಿ ಯಾವುದೇ ಸಂದೇಹವಿಲ್ಲ.

ಇಷ್ಟೆಲ್ಲಾ ಪೀಠಿಕೆ ಹಾಕಿದ್ದು ಪೋಷಕರಿಗೆ ಸ್ವಲ್ಪ ಬುದ್ಧಿ ಬರಲಿ ಅಂತ ಅಲ್ಲ. ಎಷ್ಟೇ ಹೇಳಿದರು ಅವರ ಬುದ್ಧಿಗೆ ಬಡಿದಿರುವ ಮಂಕು ಸರಿ ಆಗೋದೇ ಇಲ್ಲ. ಆದರೆ ನಾನು ಈವತ್ತು ನಿಮ್ಮ ಜೊತೆ ಹಂಚಿಕೊಳ್ಳಲೇಬೇಕಾಗಿರುವ ವಿಷಯ ಹಾಗೂ ವಾಸ್ತವ ಬೇರೇನೇ. ಒಂದೇ ಕ್ಷೇತ್ರವನ್ನು ಎಲ್ಲರು ತಬ್ಬಿಕೊಂಡು ಮುದ್ದಾಡಿದರೆ ಏನಾಗಬಹುದು ಅನ್ನೋದಕ್ಕೆ ಇವತ್ತು IT (ಮಾಹಿತಿ ತಂತ್ರಜ್ಞಾನ) ಕ್ಷೇತ್ರವೇ ಸಾಕ್ಷಿ. ಕೆಲಸ ಯಾವಾಗ ಹೋಗುತ್ತದೋ ? ಯಾವಾಗ ನಿನ್ನ ಅವಶ್ಯಕತೆ ನಮಗೆ ಸಾಕು ಮನೆಗೆ ಹೋಗು ಅನ್ನುತ್ತಾರೋ ಅನ್ನೋ ಭಯ ಅದೆಷ್ಟೋ ಟೆಕ್ಕಿಗಳನ್ನ ಪ್ರತಿ ಕ್ಷಣವೂ ಕಾಡುತ್ತಿದೆ. ಅದು ಇದು ಅಂತ ಹಲವಾರು ಬೇಕಾಗಿರೋದು, ಬೇಡದ್ದು ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ಇದ್ದ ಬದ್ದ ಕಡೆ ಸಾಲ, EMI ಮಾಡಿಕೊಂಡಿರುವ IT ಉದ್ಯೋಗಿಗಳಿಗೆ ಹಠಾತ್ ಕೆಲಸದಿಂದ ಕಿತ್ತು ಹಾಕುತ್ತಾರೆ ಅಂತ ಗೊತ್ತಾದರೆ, ಅಬ್ಬಾ ಆಕಾಶವೇ ಕಳಚಿ ಮೈಮೇಲೆ ಬಿದ್ದಂತೆ. ಹೌಸಿಂಗ್ ಲೋನ್, ಕಾರ್ ಲೋನ್, ಮಕ್ಕಳ ಎಜುಕೇಶನ್ ಲೋನ್, ಜೊತೆಗೆ ಕಟ್ಟದೆ ಹಾಗೆ ಉಳಿದಿರುವ ಕ್ರೆಡಿಟ್ ಕಾರ್ಡ್’ಗಳ ದೊಡ್ಡ ಮೊತ್ತ ಹೀಗೆ ಹಲವಾರು ಪಟ್ಟಿಗಳು. ದೊಡ್ಡ ಸಂಬಳ ಸಿಗತ್ತೆ ಅಂತ ಇಂಜಿನಿಯರಿಂಗ್ ಮುಗಿಸಿ, ಕಷ್ಟಪಟ್ಟು ಕೆಲಸ ಹಿಡಿದು, 12 ಗಂಟೆಗಳಿಗೂ ಹೆಚ್ಚಿನ ಕಾಲ ಕಂಪ್ಯೂಟರ್ ಮುಂದೆ ಕೆಲಸ ಮಾಡುವ ಟೆಕ್ಕಿಗಳ ಕಷ್ಟ ಪಾಪ ಯಾರಿಗೆ ಹೇಳೋದು.

ನಮ್ಮ ದೇಶದಲ್ಲಿ ನಿಜವಾಗಿಯೂ ಒಂದು ವಿಷಯದ ಬಗ್ಗೆ ಆಳವಾದ ಅಧ್ಯಯನ ಮಾಡುವವರ ಸಂಖ್ಯೆ ಬಹಳ ಕಮ್ಮಿ. ಜೊತೆಗೆ ನಮ್ಮ ದೇಶದಲ್ಲಿರುವ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಓದಿ ಹೊರ ಬರುವ ಇಂಜಿನಿಯರ್’ಗಳು ಅದೆಷ್ಟು ಸಮರ್ಥರು ? ನಾಲ್ಕು  ವರ್ಷ ಇಂಜಿನಿಯರಿಂಗ್ ಕಾಲೇಜಿನಲ್ಲಿ ಓದಿದ ಮೇಲೆಯೂ ಮತ್ತೆ ಯಾಕೆ ಅವರಿಗೆ ಪ್ರತಿಷ್ಠಿತ ಕಂಪನಿಗಳು ವರ್ಷಗಟ್ಟಲೆ ತರಬೇತಿ ಕೊಟ್ಟ ನಂತರ ಕೆಲಸಕ್ಕೆ ತೆಗೆದುಕೊಳ್ಳೋದು? ಹಾಗಾದರೆ 4 ವರ್ಷ ಸಾಲ ಸೋಲ ಮಾಡಿ ಓದೋ ಓದಿಂದ ಪ್ರಯೋಜನವಾದರೂ ಏನು? ಈ ಪ್ರಶ್ನೆಗಳು ಹೊಸತೇನಲ್ಲ. ಆದರೆ ಉತ್ತರ ಸಿಗದೇ ಉಳಿದು, ಜೊತೆಗೆ ಇನ್ನೂ ಹಲವಾರು ಪ್ರಶ್ನೆಗಳು ಈ ಸಾಲಿಗೆ ಸೇರಿಕೊಳ್ಳುತ್ತಿದ್ದಾವೆ. ಒಂದೊಂತು ನಿಜ ಈ ವಿಷಯವಾಗಿ ಪೋಷಕರು, ವಿದ್ಯಾಸಂಸ್ಥೆಗಳು ಹಾಗೂ ಯುವಜನತೆ ಅವಶ್ಯವಾಗಿ ಚಿಂತನೆ ಮಾಡಬೇಕಿದೆ.

ಭಾರತದ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಉಂಟಾಗುತ್ತಿರುವ ಏರುಪೇರಿಗೆಲ್ಲ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಾರಣ ಎಂದು ಐಟಿ ಕಂಪನಿಗಳು ಎಲ್ಲ ಸಮಸ್ಯೆಗೂ ಇದೊಂದೇ ಕಾರಣ ಎಂದು ಕುಂಟು ನೆಪ ಕೊಡುತ್ತಿದ್ದಾವೆ. ಕೆಲಸಗಾರರನ್ನು ವಜಾ ಯಾಕೆ ಮಾಡುತ್ತಿದ್ದಾರೆ ಅನ್ನುವುದರ ಸತ್ಯ ಒಂದೊಂದಾಗಿ ತಿಳಿಯುತ್ತಿದೆ. ಕಾಸ್ಟ್ ಕಟ್ಟಿಂಗ್ ಎಂಬ ಆಯುಧವೊಂದನ್ನು ಹಿಡಿದುಕೊಂಡು ಈ ಐಟಿ ಕಂಪನಿಗಳು ತಮಗೆ ಬೇಕಾದ ರೀತಿಯಲ್ಲಿ ಕೆಲಸಗಾರರನ್ನು ಆಟಾಡಿಸುವಲ್ಲಿ ನಿಪುಣರು. ಹಾಗಾದರೆ ಇತ್ತೀಚಿನ ದಿನಗಳಲ್ಲಿ ಐಟಿ ಕಂಪೆನಿಗಳಲ್ಲಿ ಕಂಡು ಬರುತ್ತಿರುವ ಬಿಕ್ಕಟ್ಟಿಗೆ ಪ್ರಮುಖ ಕಾರಣಗಳಾದರು ಏನು? ಕಾರಣ ಹಲವಾರಿವೆ, ಒಂದೊಂದೇ ನೋಡುತ್ತಾ ಹೋಗೋಣ ಬನ್ನಿ.

ಪ್ರತಿಷ್ಠಿತ ಜಾಗತಿಕ ಸಲಹಾ ಸಂಸ್ಥೆ ಇತ್ತೀಚಿಗೆ NASSCOM ಗೆ ಸಲ್ಲಿಸಿರುವ ಮಾಹಿತಿ ನಿಜವಾಗಿಯೂ ಆತಂಕವನ್ನು ಹುಟ್ಟಿಸುತ್ತದೆ. ಭಾರತದ ಐಟಿ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಅರ್ಧದಷ್ಟು ಮಾನವ ಸಂಪನ್ಮೂಲ ಮುಂದಿನ 3 – 4 ವರ್ಷಗಳಲ್ಲಿ ಸಂಪೂರ್ಣ ಅಸಂಬದ್ಧವಾಗಿಬಿಡುತ್ತವಂತೆ. ಪ್ರತಿಷ್ಠಿತ ಐಟಿ ಕಂಪನಿ ಒಂದರ CEO ಇದೆ ತೆರನಾದ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ. ಅವರ ಪ್ರಕಾರ ಐಟಿ ಕ್ಷೇತ್ರದಲ್ಲಿರುವ  60 – 65  ಶೇಕಡಾ ಉದ್ಯೋಗಿಗಳಿಗೆ ಹೊಸ ತಂತ್ರಜ್ಞಾನದ ಬಗ್ಗೆ ತರಬೇತಿ ನೀಡುವುದೇ ಅಸಾಧ್ಯ.

ಇನ್ನೊಂದು ಕಡೆ ಪ್ರತಿ ವರ್ಷ ಇಂಜಿನಿಯರಿಂಗ್ ಮುಗಿಸಿ ಹೊರ ಬರುವ ಸಾಫ್ಟ್ವೇರ್ ಇಂಜಿನಿಯರ್’ಗಳಲ್ಲಿ(B.Tech) 90 ರಿಂದ 93 ಶೇಖಡಾ ವಿದ್ಯಾರ್ಥಿಗಳಿಗೆ ಕೋಡಿಂಗ್ ಮಾಡುವ ಕೌಶಲ್ಯವೇ ಇಲ್ಲ. ಇನ್ನು ಕೆಲ ಸಾಫ್ಟ್ವೇರ್ ಇಂಜಿನಿಯರ್’ಗಳಿಗೆ ಕೋಡಿಂಗ್’ನಲ್ಲಿ ಆಸಕ್ತಿಯೇ ಇರುವುದಿಲ್ಲ. ಹಾಗಾದರೆ ನಾಲ್ಕು ವರ್ಷ ಕಂಪ್ಯೂಟರ್ ಸೈನ್ಸ್ ಎಂದು ಹಣೆಪಟ್ಟಿ ಹೊತ್ತು ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಮಾಡಿದ್ದಾದರೂ ಏನು? ವಿದ್ಯಾರ್ಥಿಗಳು ಹಾಗೂ ಇಂಜಿನಿಯರಿಂಗ್ ಕಾಲೇಜುಗಳೇ ಇದಕ್ಕೆ ಉತ್ತರ ಕೊಡಬೇಕು ಅಷ್ಟೇ. ಬಿ.ಟೆಕ್  ಮಾಡಿ ಕೋಡಿಂಗ್ ಮಾಡಲು ಆಸಕ್ತಿ ಇಲ್ಲ ಎಂದು ಹೇಳಿದರೆ, ಪ್ರತಿವರ್ಷ ಇಂಜಿನಿಯರಿಂಗ್ ಮುಗಿಸಿ ಬರುವ ಇಂತಹ ಬಳಗಕ್ಕೆ ಎಲ್ಲಿಂದ ಕೆಲಸ ತರೋದು ಹೇಳಿ. ಇದರ ಜೊತೆ ಜೊತೆಗೆ ಪ್ರತಿ ದಿನ ಹೊಸ ತಂತ್ರಜ್ಞಾನಗಳು ಹುಟ್ಟಿಕೊಳ್ಳುತ್ತಿವೆ. ಅಂತೆಯೇ ಗ್ರಾಹಕರ ಮನೋಭಾವವೂ ಬದಲಾಗಿದೆ.

ಈಗಾಗಲೇ 10 – 12 ವರುಷ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡಿರುವ ಟೆಕ್ಕಿಗಳಿಗೆ ಹೊಸ ತಂತ್ರಜ್ಞಾನವನ್ನು ಕಲಿಯೋದು ಕಬ್ಬಿಣದ ಕಡಲೆಯಂತಾಗಿದೆ. ಹಾಗು ಒಮ್ಮೆ ಮ್ಯಾನೇಜ್ಮೆಂಟ್ ಕೆಲಸಗಳಿಗೆ ತಮ್ಮನ್ನು ಒಗ್ಗಿಸಿಕೊಂಡ ಸಾಫ್ಟ್ವೇರ್ ಇಂಜಿನಿಯರ್’ಗಳು ಹೊಸ ತಂತ್ರಜ್ಞಾನವನ್ನು ಕಲಿಯೋದು ಕಷ್ಟ. ಇನ್ನು ಇವರುಗಳಿಗೆಲ್ಲ ದೊಡ್ಡ ಮೊತ್ತದ ವೇತನ ಕೊಟ್ಟು ಕಂಪನಿಯಲ್ಲೇ ಇರಿಸಿಕೊಳ್ಳೋದು ಬಹಳ ಕಷ್ಟ. ಇದು ಐಟಿ ಕಂಪನಿಗಳಿಗೆ ದೊಡ್ಡ ತಲೆನೋವು. ಇದರಿಂದ ಕಂಪನಿಗಳಿಗೆ ಬಹಳಾ ವೆಚ್ಚವಾಗುತ್ತದೆ. ಹಾಗಾಗಿ ಇಂತಹ ಸಂಪನ್ಮೂಲಗಳನ್ನು ಬದಲಿಸುವ ಸಲುವಾಗಿ ಐಟಿ ಕಂಪನಿಗಳು ವಿಧ ವಿಧವಾದ ತಂತ್ರಗಳನ್ನು ಅನುಸರಿಸುತ್ತವೆ. ಒಬ್ಬ ಸೀನಿಯರ್ ಇಂಜಿನಿಯರ್’ನನ್ನು ತೆಗೆದು, ಬದಲಿಗೆ 4 – 5 ಹೊಸಬರನ್ನು ಕಡಿಮೆ ಸಂಬಳಕ್ಕೆ ಒಳಕ್ಕೆ ತೆಗುದುಕೊಂಡು ಕೆಲಸ ಮಾಡಿಸೋದು ಐಟಿ ಕಂಪನಿಗಳ ಹೊಸತೇನು ಅಲ್ಲದ ಹಳೆಯ ವಿಧಾನವೇ.

ಆದರೆ ನಿಜವಾಗಿಯೂ ಟೆಕ್ಕಿಗಳು ತಲೆಕೆಡಿಸಿಕೊಳ್ಳಬೇಕಾಗಿರುವ ವಿಷಯಗಳು ಇನ್ನೂ ಹಲವಾರಿವೆ. ಭವಿಷ್ಯದಲ್ಲಿ ಐಟಿ ಕ್ಷೇತ್ರದಲ್ಲಿ ಕೆಲಸದ ಭದ್ರತೆ ಬಹಳಾನೇ ಕಮ್ಮಿ ಆಗುತ್ತದೆ ಎಂಬ ವಿಷಯವನ್ನು ಹಲವಾರು ಅಧ್ಯಯನಗಳು ಸಾರಿ ಹೇಳುತ್ತಿವೆ. ಒಬ್ಬ ಟೆಕ್ಕಿ ದಿನದಿಂದ ದಿನಕ್ಕೆ ಅಪ್ಡೇಟ್ ಆಗದಿದ್ದರೆ ಆತನ ಕೆಲಸ ಸಧ್ಯದಲ್ಲೇ ಹೋಗುತ್ತದೆ ಅನ್ನೋದು ಈಗಿನ ವಾಸ್ತವ. ಆಟೋಮೇಷನ್, ಕೃತಕ ಬುದ್ಧಿವಂತಿಕೆ, ಮಷೀನ್ ಲರ್ನಿಂಗ್ ಹಾಗು ರೊಬೊಟಿಕ್ಸ್ ಗಳ ಪಾದಾರ್ಪಣೆಯಿಂದ ಮನುಷ್ಯನಿಗೆ ಬೆಲೆ ಕಮ್ಮಿ ಆಗುತ್ತಿರುವುದಂತೂ ನಿಜ. ಭವಿಷ್ಯದಲ್ಲಿ ಈ ಆಟೋಮೇಷನ್ ಎಂಬ ಭೂತಕ್ಕೆ ಭಾರತದ 6 ಲಕ್ಷಕ್ಕೂ ಹೆಚ್ಚು ಟೆಕ್ಕಿಗಳು ಬಲಿಯಾಗಲಿದ್ದಾರೆ. ಅಷ್ಟಕ್ಕೂ ಈ ತಂತ್ರಗಳನ್ನು ಕಂಡುಹಿಡಿದದ್ದು ಮನುಷ್ಯನೇ, ಒಬ್ಬ ಮನುಷ್ಯ ಇನ್ನೊಬ್ಬ ಮನುಷ್ಯನಿಗೆ ಮುಳುವಾಗೋದು ಅಂದರೆ ಹೀಗೇನೆ. ನಮ್ಮ ದೇಶದಲ್ಲಿ ಮಾನವ ಸಂಪನ್ಮೂಲ ಚೆನ್ನಾಗಿಯೇ ಇದೆ. ಅಂದ ಮೇಲೆ ಈ ಆಟೋಮೇಷನ್ , ಮಷೀನ್ ಲರ್ನಿಂಗ್, ರೊಬೊಟಿಕ್ಸ್ ಹಾಗೂ ಕೃತಕ ಬುದ್ಧಿವಂತಿಕೆಗಳ ಅವಶ್ಯಕತೆಯಾದರೂ ನಿಜವಾಗಿಯೂ ಇದೆಯಾ ಅನ್ನೋದೇ ನನ್ನ ಪ್ರಶ್ನೆ. ಇನ್ನೇನಿದ್ದರೂ ಬರಿ ಮಷಿನ್’ಗಳದ್ದೇ ಕಾರುಬಾರು ಅಷ್ಟೇ.

ಹೊಸ ತಂತ್ರಜ್ಞಾನಗಳನ್ನು ತ್ವರಿತವಾಗಿ ಕಲಿಯೋದು ಕಷ್ಟ. ಕಲಿಯದಿದ್ದರೆ ಕೆಲಸ ನಷ್ಟ. ಸಾಂಪ್ರದಾಯಿಕ ಕೋಡಿಂಗ್ ವಿಧಾನ ಈಗ ನಡೆಯೋದೆ ಇಲ್ಲ. ಈಗೇನಿದ್ದರೂ ಆಟೋಮ್ಯಾಟಿಕ್ ಕೋಡಿಂಗ್. ಜೊತೆಗೆ ಈಗ ಎಲ್ಲವೂ ಕ್ಲೌಡ್. ಕ್ಲೌಡ್ ಕಂಪ್ಯೂಟಿಂಗ್ ಸದ್ಯ ಎಲ್ಲೆಡೆಯೂ ಹರಿದಾಡುತ್ತಿರುವ ಹೊಸ ತಂತ್ರಜ್ಞಾನ. ಯಾವುದನ್ನ ಕಲಿಯೋದು ಅನ್ನೋದರಲ್ಲೇ ಪಾಪ ಟೆಕ್ಕಿಗಳ ಜೀವ ಕೊರಳಿಗೆ ಬಂದಿರುತ್ತದೆ. ಇವತ್ತು ಬಹಳ ಬೇಡಿಕೆಯಲ್ಲಿದ್ದ ತಂತ್ರಜ್ಞಾನ ನಾಳೆಗೆ ಬೇಡಿಕೆಯೇ ಇಲ್ಲದಂತೆ ಮೂಲೆ ಸೇರಿಬಿಡುತ್ತವೆ, ಯಾರಿಗೂ ಬೇಡವಾಗಿಬಿಡುತ್ತದೆ. ಐಟಿ ಕ್ಷೇತ್ರದಲ್ಲಿ ಮಾತ್ರ ದಿನದಿಂದ ದಿನಕ್ಕೆ ಅಪ್ಡೇಟ್ ಆಗಲೇಬೇಕು ಅನ್ನುವುದು ತಪ್ಪು. ಪ್ರಸ್ತುತ ದಿನಗಳಲ್ಲಿ ಪ್ರತಿಯೊಂದು ಕ್ಷೇತ್ರಕ್ಕೂ ಅಪ್ಡೇಟ್ ಅನ್ನೋ ಮಂತ್ರ ಇದ್ದೆ ಇರುತ್ತದೆ. ಐಟಿ ಕ್ಷೇತ್ರದಲ್ಲಿ ಸ್ವಲ್ಪ ಜಾಸ್ತಿ.

ಕ್ಷೇತ್ರ ಯಾವುದೇ ಇರಲಿ , ಯಾವಾಗಲೂ ಲಾಭವೇ ಆಗುತ್ತದೆ ಅನ್ನೋದು ತಪ್ಪು. ಏರಿಳಿತಗಳು ಸರ್ವೇ ಸಾಮಾನ್ಯ. ಇಷ್ಟು ದಿನ ಐಟಿ ಕ್ಷೇತ್ರವನ್ನು ತಬ್ಬಿಕೊಂಡು ಮುದ್ದಾಡಿ ಈಗ ಈ ಕ್ಷೇತ್ರದಲ್ಲಿ ಭವಿಷ್ಯವಿಲ್ಲ ಅಂತ ಒಮ್ಮೆಲೇ ದೂರೋದು ಸರಿಯಲ್ಲ. ಈಗಾಗಲೇ ಕೆಲಸ ಕಳೆದುಕೊಂಡೆ ಅಂತ ಹೇಳಿ ಹಲವಾರು ಮಂದಿ ತಮ್ಮ ಪ್ರಾಣ ತೆಗೆದುಕೊಂಡಿದ್ದಾರೆ. ಆತ್ಮಹತ್ಯೆಗೆ ಶರಣಾಗಿದ್ದಾರೆ. ಕೆಲಸ ಕಳೆದುಕೊಂಡೆ ಅಂತ ಜೀವವನ್ನು ತೆಗೆದುಕೊಳ್ಳೋ ಅವಶ್ಯಕತೆ ಇಲ್ಲ. ಈಸಬೇಕು ಇದ್ದು ಜೈಸಬೇಕು. ಬದುಕಲಿಕ್ಕೆ ನಾನಾ ವಿಧಾನಗಳಿವೆ. ಇಂಜಿನಿಯರಿಂಗ್ ಮಾಡಿ ಕೆಲಸ ಸಿಗುತ್ತಿಲ್ಲ. ಇಷ್ಟು ದಿನ ಇದ್ದ ಕೆಲಸ ಕೈತಪ್ಪಿ ಹೋಯಿತು. ಅಯ್ಯೋ ಇನ್ನು ನಮಗೆ ಭವಿಷ್ಯವೇ ಇಲ್ಲ ಎಂದುಕೊಂಡು ಆತ್ಮಹತೆ ಮಾಡಿಕೊಳ್ಳುವ ನಿರ್ಧಾರ ಯಾರೂ ತೆಗೆದುಕೊಳ್ಳಬೇಡಿ ಅಷ್ಟೇ. ಏನಾದರು ಹೊಸತನ್ನು ಮಾಡೋದರಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳಿ. ಹಲವಾರು ಬೇರೆ ಕ್ಷೇತ್ರಗಳಲ್ಲಿ ಅವಕಾಶಗಳು ಬೇಕಾದಷ್ಟಿವೆ.

Facebook ಕಾಮೆಂಟ್ಸ್

ಲೇಖಕರ ಕುರಿತು

Manjunath Madhyasta

ಹೆಸರು ಮಂಜುನಾಥ್ ಮಧ್ಯಸ್ಥ. ಓದಿದ್ದು ವಿಜ್ಞಾನ. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ವೃತ್ತಿ. ಸಾಹಿತ್ಯ ಹಾಗೂ ಅಧ್ಯಾತ್ಮದಲ್ಲಿ ಬಹಳ ಆಸಕ್ತಿ. ಬರೆಯೋದು ನೆಚ್ಚಿನ ಹವ್ಯಾಸ. ಭೌತಶಾಸ್ತ್ರ ಹಾಗೂ ಖಗೋಳ ಶಾಸ್ತ್ರ ನನ್ನ ನೆಚ್ಚಿನ ವಿಷಯಗಳು.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!