Featured ಅಂಕಣ

ಡೊಕ್ಲಮ್ ಒಳಗಿರ್ದುಂ ಬೆವರ್ದನಾ ಡ್ರ್ಯಾಗನ್ ಪತಾಕಂ ೨ : ಚೀನಾದೊಂದಿಗೆ ಭಾರತಕ್ಕೆ ಯುದ್ಧ ಬೇಕೆ?

ಡೊಕ್ಲಮ್ ಒಳಗಿರ್ದುಂ ಬೆವರ್ದನಾ ಡ್ರ್ಯಾಗನ್ ಪತಾಕಂ

ಯುದ್ಧವಾಗಲಿದೆ. ಯುದ್ಧಕ್ಕೆ ಸನ್ನದ್ಧ. ಇನ್ನೇನು ಯುದ್ಧ ಆಗೇ ಬಿಟ್ಟಿತು. ನಾಳೆಯೇ ಯುದ್ಧ ಎಂಬಂತಹ ಪರಿಸ್ಥಿತಿಗಳು ಭಾರತಚೀನಾದ ಮಧ್ಯೆ ಉದ್ಭವವಾಗಿರುವುದು ಇದೇ ಮೊದಲೇನಲ್ಲ. ಜನರ ಗಮನಕ್ಕಾಗಿ ಹಾತೊರೆಯುವ ಎರಡೂ ಕಡೆಯ ಆಕ್ರಮಣಕಾರಿ ಮಾಧ್ಯಮಗಳು, ಅವನ್ನೇ ನೆಚ್ಚಿಕೊಂಡು ವಾಸ್ತವತೆಯ ಕನಿಷ್ಟ ಮಾಹಿತಿಯೂ ಇಲ್ಲದ ದೇಶಭಕ್ತರು ಅದಾಗಲೇ ಯುದ್ಧಕ್ಕೆ ರಣಕಹಳೆಯನ್ನು ಮೊಳಗಿಸಿಯಾಗಿದೆ. ಇನ್ನು ಬಾಕಿಯಿರುವುದು ಕೇವಲ ಸೇನೆಗಳ ಗುಂಡಿನ ದಾಳಿಯಷ್ಟೇ! ಮತ್ತು ಭಾರತದ ಗೆಲುವಷ್ಟೇ. ಹೀಗೆ ಆಗಬೇಕೆನ್ನುವುದು ಎಲ್ಲಾ ಭಾರತೀಯರ ಆಸೆಯೂ ಕೂಡ.

ಆದರೆ ಗೆಲುವು ಸುಲಭವಲ್ಲ ಎಂಬುದೂ ಅಷ್ಟೇ ಸತ್ಯ. ನಮ್ಮ ಹೆಚ್ಚಿನ ಪ್ರಮಾಣದ ಸೇನೆಯನ್ನು ನಾವು ಭಾರತಚೀನಾ ಗಡಿ ಪ್ರದೇಶದಲ್ಲಿ ಐಕ್ಯಗೊಳಿಸಿರಬಹುದು. ಆದರೆ ಇಂದಿಗೂ ಚೀನಾ ಗಡಿಯುದ್ಧಕ್ಕೂ ಯಾವುದೇ ಅಡೆತಡೆಯಿಲ್ಲದ ರಸ್ತೆ ಸಂಪರ್ಕ ಸರಿಯಾಗಿಲ್ಲ. ಅಂದರೆ ಎಲ್ಲಾ ಭೂಗಡಿ ಪ್ರದೇಶಗಳನ್ನು ಉತ್ತಮ ಗುಣಮಟ್ಟದ ರಸ್ತೆಯ ಮೂಲಕ ಬೆಸೆಯುವಭಾರತ್ಮಾಲಾಯೋಜನೆ ಇನ್ನೂ ನಿರ್ಮಾಣವಾಗಿಲ್ಲ. ಅದೇ ಕಳೆದ ಹತ್ತು ವರ್ಷಗಳಿಂದ ಚೀನಾ ತನ್ನಗಡಿಯಲ್ಲಿ ಟಿಬೆಟ್ಅರುಣಾಚಲ ಪ್ರದೇಶದುದ್ದಕ್ಕೂ ಸುಲಭವಾಗಿ ಸಂಚರಿಸಬಹುದಾದ ರಸ್ತೆ ಮಾರ್ಗವನ್ನು ಅದಾಗಲೇ ನಿರ್ಮಿಸಿದೆ.

ನಮ್ಮ ಸೈನಿಕರಿಗೆ ಸಿಗಲಿರುವ ಗುಂಡುನಿರೋಧಕ ಜಾಕೆಟ್ಗಳು ಇನ್ನಷ್ಟೇ ಬರಬೇಕಾಗಿವೆ. ಸೆಪ್ಟೆಂಬರ್ 2016ಕ್ಕೆ ಅನ್ವಯವಾಗುವಂತೆ, ಭಾರತೀಯ ಸೇನೆಯಯುದ್ಧ ಸನ್ನದ್ಧತೆ ಕುರಿತು ದೇಶದಮಹಾಲೆಕ್ಕಪರಿಶೋಧಕರು (ಸಿ..ಜಿ.)” ಇತ್ತೀಚೆಗೆ ನೀಡಿರುವ ವರದಿಯಲ್ಲಿಭಾರತ ಕೇವಲ ಹತ್ತು ದಿನಗಳ ಯುದ್ಧಕ್ಕಷ್ಟೇ ಸನ್ನದ್ಧವಾಗಿದೆಎಂಬುದಾಗಿ ಉಲ್ಲೇಖಿಸಲಾಗಿದೆ. ಇದು ಆಂತಕಕಾರಿ ವಸ್ತುಸ್ಥಿತಿ. ಇಸ್ರೇಲ್ ದೇಶಕ್ಕೆ ಭಾರತದಷ್ಟೇ ಚೀನಾ ಕೂಡ ಮಿತ್ರ ಎಂಬುದನ್ನೂ ಗಮನಿಸಬೇಕು. ಭಾರತಕ್ಕಿಂತಲೂ ಎತ್ತರದ ಆಯಕಟ್ಟಿನ ಸ್ಥಾನದಲ್ಲಿರುವ ಚೀನಾಕ್ಕೆ ಯುದ್ಧ ಸುಲಭ. ಆದರೆ ಭಾರತ ಕನಿಷ್ಟವೆಂದರೂ 3-5:1 ಪ್ರಮಾಣದ ಜೀವಹಾನಿಯನ್ನು ಎದುರಿಸಬೇಕಾಗಬಹುದು. ಅಂದರೆ ಅವರ ಒಬ್ಬ ಸೈನಿಕರಿಗೆ ಪ್ರತಿಯಾಗಿ ಕನಿಷ್ಟವೆಂದರೂ ಮೂರರಿಂದ ಐದು ಭಾರತೀಯ ಸೈನಿಕರ ಬಲಿದಾನವಾಗಬಹುದು. ಡೊಕ್ಲಮ್ ಪ್ರದೇಶದಲ್ಲಿ ಭಾರತ ಭದ್ರವಾದ ಸ್ಥಾನದಲ್ಲಿದೆ. ಸಿಕ್ಕಿಂ ಮತ್ತು ಭೂತಾನ್ ಎರಡೂ ಕಡೆಗಳಿಂದ ಡೊಕ್ಲಮ್ನಲ್ಲಿ ಚೀನಾಕ್ಕೆ ಮಣ್ಣುಮುಕ್ಕಿಸುವುದು ಭಾರತಕ್ಕೆ ಸುಲಭ. ಆದರೆ ಉಭಯ ದೇಶಗಳ ನಡುವೆ ಯುದ್ಧವೆಂದ ಮೇಲೆ ಅದು ಒಂದೇ ಪ್ರದೇಶದಲ್ಲಿ ಅದು ನಡೆಯಬೇಕೆಂದಿಲ್ಲವಲ್ಲ. ಅದೇ ಹೊತ್ತಿಗೆ ಭಾರತಚೀನಾ ಗಡಿಯ 4,000 ಕಿಮೀ ವಿಸ್ತೀರ್ಣದ ಅನೇಕ ಕಡೆಗಳಲ್ಲಿ ಎತ್ತರದಲ್ಲಿರುವ ನಿರ್ಣಾಯಕ ಸ್ಥಾನಗಳು ಚೀನಾ ಪ್ರದೇಶದಲ್ಲಿವೆ

ಇದು ಮೆಲ್ಪದರದ ಚಿತ್ರಣ. ಅಪಾರ ಸಾವುನೋವುಗಳಿಗೂ ಮೀರಿದ್ದು ಭಾರತದ ಆರ್ಥಿಕತೆ ಇದಕ್ಕೆ ತಯಾರಾಗಿದೆಯೇ? ಎಂಬ ಬಹುದೊಡ್ಡ ಪ್ರಶ್ನೆ. ಜಾಗತಿಕ ಆರ್ಥಿಕತೆಯ ಮಂದಗತಿಯ ಚಲನೆಯಲ್ಲಿ ಭರವಸೆ ಮೂಡಿಸಿರುವುದು ಭಾರತದ ಆರ್ಥಿಕತೆ. ಆದರೆ ವಿಮುದ್ರಿಕರಣ, ಸರಕು ಮತ್ತು ಸೇವಾ ತೆರಿಗೆ, ಅನಾಮತ್ತು ಸಾಲದ ಹೊರೆಯಿಂದ ಬೇಸತ್ತ ಬ್ಯಾಂಕಿಂಗ್ ಕ್ಷೇತ್ರದ ಸುಧಾರಣೆ.. ಇಂತಹ ಅನೇಕ ಆಂತರಿಕ ಸುಧಾರಣೆಗಳು ಭಾರತದಲ್ಲಿ ಸಾಗುತ್ತಿವೆ. ಭಾರತ ಅವನ್ನೆಲ್ಲ ತನ್ನೊಳಗೆ ಜತನಗೊಳಿಸಿಕೊಂಡು ಶಕ್ತವಾಗಿ ಸಮರ್ಥವಾಗಲು ಒಂದಷ್ಟು ಸಮಯ ಅನಿವಾರ್ಯ.

ಇನ್ನು ಚೀನಾದ ಪರಿಸ್ಥಿತಿಯೂ ಉತ್ತಮವಾಗಿಲ್ಲ. ಕಳೆದ ದಶಕದಲ್ಲಿ ಏರುಗತಿಯಲ್ಲಿ ಸಾಗಿದ್ದ ಚೀನಾ ಆರ್ಥಿಕತೆ ಇತ್ತೀಚಿನ 3-4 ವರ್ಷಗಳಿಂದ ಇಳಿಮುಖವಾಗಿದೆ. ನಷ್ಟವನ್ನು ತುಂಬಲು ಚೀನಾದ ಕರೆನ್ಸಿರೆನ್ಮಿಂಬಿಯಮೌಲ್ಯವನ್ನು ಡಾಲರ್ಗೆ ಪ್ರತಿಯಾಗಿ ಇನ್ನಿಲ್ಲದಂತೆ ಇಳಿಸಲಾಗುತ್ತಿದೆ. ಅದೇ ಹೊತ್ತಿಗೆ ಕಮ್ಯುನಿಷ್ಟ್ ಚೀನಾ 19ನೇ ಪಕ್ಷ ಕಾಂಗ್ರೆಸ್ಗೆ ಅಣಿಯಾಗುತ್ತಿದೆ. ಹಿಂದೆಂದಿಗಿಂತಲೂ ತೀವ್ರವಾಗಿ ಚೀನಾದ ಅಧ್ಯಕ್ಷ, ಕ್ಸಿ ಜಿನ್ಪಿಂಗ್ಗೆ ಪೂರ್ಣ ಅಧಿಕಾರವನ್ನು ತಮ್ಮ ಹಿಡಿತಕ್ಕೆ ತಂದುಕೊಳ್ಳುವ ಅನಿವಾರ್ಯತೆಯಿದೆ. ಹಾಗಾಗಿ ಡೊಕ್ಲಮ್ ಕ್ಸಿ ಜಿನ್ಪಿಂಗ್ಗೆ ವೈಯ್ಯಕ್ತಿಕ ಪ್ರತಿಷ್ಟೆ ಹಾಗೂ ಸವಾಲಿನ ವಿಷಯ. ಇಲ್ಲಿ ಪ್ರಾಬಲ್ಯ ಸಾಧಿಸಿ ಬಲಿಷ್ಟ ನಾಯಕತ್ವವನ್ನು ದೃಢಪಡಿಸಬೇಕಿದೆ. ಅದೇ ಹೊತ್ತಿಗೆ ಯುದ್ಧಕ್ಕೆ ತೆರಳಿದರೆ ಗೆಲುವಿನ ಖಾತ್ರಿಯಿಲ್ಲ ಹಾಗೂ ತನ್ನದೇ ನಾಯಕತ್ವದ ಅತಂತ್ರತೆಗೆ ಬೇರೆ ಕಾರಣ ಬೇಕಿಲ್ಲ.

ಹಾಗಿದ್ದೂ ಭಾರತವನ್ನು ಸದಾಕಾಲ ವಿರೋಧಿಸುವ ಪಾಕಿಸ್ತಾನ ಮೊದಲೇ ಚೀನಾ ಮಿತ್ರ. ಮೇಲಾಗಿ ನವಾಜ್ ಷರೀಪ್ ಪದಚ್ಯುತಿಯಿಂದ ಪಾಕಿಸ್ತಾನದ ನಿಜವಾದ ಅಧಿಕಾರ ಪಾಕಿಸ್ತಾನ ಸೇನೆಯ ಹಿಡಿತದಲ್ಲಿದೆ. ಅಂದರೆ ಚೋರ ಯುದ್ಧತಂತ್ರಗಳಿಗೆ ಅದೀಗ ಸಮಯ ಕಾಯುತ್ತಿದೆ. ಅಮೆರಿಕ, ಉತ್ತರ ಕೊರಿಯಾ ಸಮಸ್ಯೆಯಿಂದ ದೂರಬಂದು ಭಾರತದ ಜೊತೆಯಲ್ಲಿ ನಿಲ್ಲಲಿದೆಯೇ? ಹಾಗೊಂದು ವೇಳೆ ನಿಂತರೂ ಅದರ ಷರತ್ತುಗಳು ಏನಿರಬಹುದು? ಇಂತಹ ನೂರಾರು ಪ್ರಶ್ನೆಗಳು ಒಂದೆಡೆ.

ಏತನ್ಮಧ್ಯೆ ಯಾವುದೇ ದೇಶ ಭಾರತದ ಮೇಲೆ ದಾಳಿ ಮಾಡಿದರೆ ಯುದ್ಧದಿಂದ ಬೆನ್ನು ತೋರಿಸಿ ಹಿಂದೆ ಸರಿಯಬೇಕೆ? ಅದು ಸಾಧ್ಯವಿಲ್ಲದ ಮಾತು. ಆದರೆ ಯುದ್ಧವನ್ನು ಬಯಸುವುದೂ ಅತ್ಯಂತ ಮೂರ್ಖತನದ ನಡೆ. ಯಾಕೆಂದರೆ ಪ್ರತಿಯೊಂದು ಸಮಸ್ಯೆಗೂ ಯುದ್ಧವೇ ಪರಿಹಾರವಾದರೆ ಜಗತ್ತು ಆಧುನಿಕ ಕಾಲದಿಂದ ಪ್ರಾಚೀನ ಕಾಲಕ್ಕೆ ಹಿಂತಿರುಗುವ ಅಪಾಯವಿದೆ. ಅದಕ್ಕಾಗಿಯೇ ಇರುವ ಪರಿಹಾರರಾಜತಾಂತ್ರಿಕತೆ“. ಮಾತುಕತೆಯ ಮೂಲಕ ಸಮಸ್ಯೆಯ ಪರಿಹಾರ ಸುಲಭ. ಸಮಯ ಹಿಡಿಯಬಹುದು ಆದರೆ ಉತ್ತಮ ಫಲಿತಾಂಶ ಅದರ ಗುರಿ. ಅದನ್ನೇ ಭಾರತ ಹಾಗೂ ಚೀನಾ ಮಾಡುತ್ತಿರುವುದು. ಅನವಶ್ಯಕ ಯುದ್ಧ ಇಬ್ಬರಿಗೂ ಬೇಕಿಲ್ಲ.

ಯಾವುದೇ ದೇಶ ಬೆಳೆಯುವ, ಅಭಿವೃದ್ಧಿ ಹೊಂದುವ ಹಂತದಲ್ಲಿ ತನ್ನ ಏಳಿಗೆಯ ಕುರಿತು ಯೋಚಿಸಬೇಕೇ ಹೊರತು, ಚೀನಾದಂತಹ ದೇಶದೊಂದಿಗೆ ಸಮರಕ್ಕಿಳಿಯುವುದರಲ್ಲಿ ಅರ್ಥವಿಲ್ಲ. ಇದರಿಂದ ಚೀನಾಕ್ಕೇನು ನಷ್ಟ ಎಂಬುದಕ್ಕಿಂತ ಭಾರತಕ್ಕೂ ಲಾಭವಿಲ್ಲ. ಯಾಕೆಂದರೆ ಯುದ್ಧ ದೇಶವೊಂದನ್ನು ಕನಿಷ್ಟ ಕೆಲವು ವರ್ಷಗಳಷ್ಟು ಹಿಂದಕ್ಕೆ ಕರೆದುಕೊಂಡು ಹೋಗುತ್ತದೆ. ಇದರಿಂದ ಜನರ ಮೇಲಿನ ಹೊರೆಯೇ ಹೆಚ್ಚಾಗುತ್ತದೆ. ಇಂತಹ ಅನೇಕ ಸಮಸ್ಯೆಸವಾಲುಗಳು ಯುದ್ಧವನ್ನರಸಿ ಜೊತೆಗೇ ಬರುತ್ತವೆ. ಈಗ ಹೇಳಿ ನಮಗೆ ನಿಜಕ್ಕೂ ಯುದ್ಧ ಬೇಕೆ? ಆದ್ದರಿಂದಲೇ ನೇರ ಯುದ್ಧಕ್ಕಿಂತ ಸುಲಭವಾಗಿ ಚೀನಾವನ್ನು ಆರ್ಥಿಕವಾಗಿ ಮಣಿಸಬೇಕಿದೆ. ಇದನ್ನು ಜನರಷ್ಟೇ ಮಾಡಲು ಸಾಧ್ಯವಿಲ್ಲ. ಸರಕಾರದ ಅನೇಕ ನೀತಿಗಳು, ಕಾನೂನುಗಳು ನಿಟ್ಟಿನಲ್ಲಿ ಕಠಿಣವಾಗಿ ಜಾರಿಯಾಗಬೇಕಿವೆ. ಹೇಗೆ? ಇದಕ್ಕೊಂದು ಸಣ್ಣ ಉದಾಹರಣೆ: ಭಾರತದ ಕೈಗಾರಿಕೆಗಳು ತಾವು ತಯಾರಿಸುವ ಉತ್ಪನ್ನಗಳ ತಯಾರಿಕೆಗೆ ಆಮದುಮಾಡಿಕೊಳ್ಳುವ ಕಚ್ಚಾ ಹಾಗೂ ಅಗತ್ಯ ವಸ್ತುಗಳ ಬೆಲೆಗಿಂತ, ಸಿದ್ಧವಸ್ತುಗಳನ್ನು ಆಮದು ಬೆಲೆ ತುಂಬಾ ಕಡಿಮೆ. ಇದಕ್ಕೆಇನ್ವರ್ಟೆಡ್ ಡ್ಯೂಟಿ ಸ್ಟ್ರಕ್ಚರ್“(ತಲೆಕೆಳಗಾದ ತೆರಿಗೆ ಪದ್ಧತಿ) ಎನ್ನಲಾಗುತ್ತದೆ. ವಾಸ್ತವವಾಗಿ ಹೆಸರಿಗೆ ತಕ್ಕಂತೆ ಯಾವುದರ ಬೆಲೆ ಕಡಿಮೆಯಾಗಬೇಕೋ ಅದರ ಬೆಲೆ ಹೆಚ್ಚು. ಯಾವುದು ಹೆಚ್ಚಾಗಬೇಕು ಅದರ ಬೆಲೆ ಕಡಿಮೆ. ಇದು ಇಂಗ್ಲೀಷರು ಭಾರತದ ಗುಡಿಕೈಗಾರಿಕೆಯನ್ನು ನಾಶಪಡಿಸಿದ ಯೋಜನೆಯ ಮುಂದುವರೆದ ಭಾಗ. ಬ್ರಿಟೀಷರು ಇಂತಹ ಪದ್ಧತಿಯ ಮೂಲಕ ಭಾರತವನ್ನು ಕೇವಲ ಕಚ್ಚಾವಸ್ತುಗಳ ರಫ್ತುದಾರ ದೇಶವಾಗಿಯೂ ಹಾಗೂ ಸಿದ್ಧವಸ್ತುಗಳ ಆಮದು ದೇಶವನ್ನಾಗಿ ಮಾಡಿತು. ಸ್ವಾತಂತ್ರ್ಯ ಬಂದ ತರುವಾಯವೂ ಅಂತರಾಷ್ಟ್ರೀಯ ಒಪ್ಪಂದಗಳ ಮೂಲಕ ಹೊಸರೀತಿಯಲ್ಲಿ ಹಳೆಯ ವಿನಾಶಕಾರಿ ಯೋಜನೆಯನ್ನೇ ಮುಂದುವರೆಸಲಾಗುತ್ತಿದೆ. ಇದು ಸೊರಗುತ್ತಿರುವ ಕೈಗಾರಿಕೆಗಳನ್ನು ಲಾಭತರುವ ಮಾರಾಟಗಾರರನ್ನಾಗಿ ಪರಿವರ್ತಿಸುತ್ತದೆ. ಕಳೆದ ಹತ್ತು ವರ್ಷಗಳ ಭಾರತದ ಅನೇಕ ಉತ್ಪಾದಕರು ಮಾರಾಟಗಾರರಾಗಿ ಪರಿವರ್ತನೆ ಹೊಂದಿದ್ದು ಇದಕ್ಕೆ ಜ್ವಲಂತ ವಾಸ್ತವ. ಇಂತಹ ಯೋಜನೆಯಲ್ಲಿನ ಕಂದಕದ ನೇರ ಲಾಭವನ್ನು ಚೀನಾ ಪಡೆಯುತ್ತಿದೆ

ಈಗಿನ ಕೇಂದ್ರ ಸರಕಾರವೂ 2015ರಲ್ಲಿ ತಿಳಿದೋ, ತಿಳಿಯದೆಯೋ ಅಥವಾ ಕಾರ್ಯಕ್ರಮದ ವೆಚ್ಚ ತಗ್ಗಿಸುವ ಉದ್ದೇಶದಿಂದಲೋ ಪ್ರಮಾದವೊಂದನ್ನು ಮಾಡಿತ್ತು. ಪ್ರಾಯಶಃ ಸರಕಾರಿ ಮಟ್ಟದಲ್ಲಿ ಜನರ ಅರಿವಿಗೆ ಬಾರದೆ ಇಂತಹ ಅದೆಷ್ಟೋ ಘಟನೆಗಳು ಮುಚ್ಚಿಹೋಗುತ್ತವೆ ಅಥವಾ ಅನಿವಾರ್ಯವಾಗುತ್ತವೆ?. ಸರಕಾರದ ಯೋಗ ದಿನಾಚರಣೆಗೆ 37,500ಕ್ಕೂ ಅಧಿಕಮೇಡ್ ಇನ್ ಚೈನಾಚಾಪೆಗಳನ್ನು ಖರೀದಿಸಿತ್ತು. (ವರದಿ: ಜೂನ್ 20, 2015, ದಿ ಇಂಡಿಯನ್ ಎಕ್ಸ್ಪ್ರೆಸ್, ದೆಹಲಿಯಲ್ಲಿ ಕೇಂದ್ರ ಸರಕಾರ ಆಯೋಜಿಸಿದ್ದ ಯೋಗದಿನಾಚರಣೆಗೆಮೇಡ್ ಇನ್ ಚೈನಾಯೋಗಾ ಕಾರ್ಪೆಟ್ಗಳು.) ಜಾಗೃತೆ ವಹಿಸಬೇಕು. ಆದ ಪ್ರಮಾದವನ್ನು ತಿದ್ದಿಕೊಂಡ ಕೇಂದ್ರ ಸರಕಾರ 2016 ವಿಶ್ವ ಯೋಗ ದಿನಾಚರಣೆಗೆಸ್ವದೇಶಿಚಾಪೆಗಳನ್ನೇ ಬಳಸಲು ಆದೇಶಿಸಿತ್ತು. ಇಂತಹ ಅನೇಕ ಉದಾಹರಣೆಗಳು ನಮಗೆ ಕಾಣಸಿಗುತ್ತವೆ. ಕೇವಲ ಕಡಿಮೆ ದರಕ್ಕೆ ದೊರೆಯುತ್ತವೆ ಎಂಬ ಕಾರಣಕ್ಕೆ ಗುಣಮಟ್ಟದ ಪರೀಕ್ಷೆಗಳಿಲ್ಲದೆ, ಅವು ಉಗಮವಾಗುವ ಸ್ಥಳ, ಪರಿಸರ, ಬಳಸುವ ಸಾಮಾಗ್ರಿ, ಮಾನವಹಕ್ಕು, ಅಗತ್ಯತೆ ಇತ್ಯಾದಿ ಯಾವುದರ ಬಗ್ಗೆಯೂ ಕಾಳಜಿ ವಹಿಸದೆ, ಯಾವ ಷರತ್ತೂ ಹಾಕದೆ ನಮ್ಮ ದೇಶೀಯ ಮಾರುಕಟ್ಟೆಗಳು, ಗುಡಿ ಕೈಗಾರಿಕೆಗಳು ನಾಶವಾಗುವಷ್ಟರ ಮಟ್ಟಿಗೆ ಚೀನಾ ಉತ್ಪನ್ನಗಳನ್ನು ದೇಶದೊಳಗೆ ಬಿಟ್ಟುಕೊಂಡು ಕೇವಲ ಜನರಲ್ಲಿ ಚೀನಾ ಸಾಮಾಗ್ರಿಗಳನ್ನು ತಿರಸ್ಕರಿಸಿ ಎಂದು ವಿನಂತಿಸುವುದು ಇಬ್ಬಗೆ ನೀತಿಯ ಪ್ರಸನ್ನ ಭ್ರಷ್ಟಾಚಾರವಲ್ಲದೆ ಇನ್ನೇನು?

ಹೀಗೆ ಸರಕಾರಿ ಮಟ್ಟದಲ್ಲಿ ಸಾಂಸ್ಥಿಕವಾಗಿ ಹಾಗೂ ಸಾಮಾಜಿಕ ವಲಯದಲ್ಲಿ ವೈಯ್ಯಕ್ತಿಕ ನೆಲೆಯಲ್ಲಿ ಚೀನಾಕ್ಕೆ ಆರ್ಥಿಕ ಪೆಟ್ಟನ್ನು ನೀಡಲೇಬೇಕು. ಇದು ನಿಜಕ್ಕೂಮೇಕ್ ಫಾರ್ ಇಂಡಿಯಾ“(ಭಾರತದ ಬಳಕೆಗಾಗಿ ಉತ್ಪನ್ನಗಳನ್ನು ತಯಾರಿಸಬೇಕಾದ) ಕಾಲವಾಗಬೇಕಿದೆ. ಅದೇ ಚೀನಾದ ಆಕ್ರಮಣಕಾರಿ ಅಹಂಕಾರ ಮತ್ತು ದಬ್ಬಾಳಿಕೆಯ ಪ್ರಭುತ್ವಕ್ಕೆ ನೀಡಬಹುದಾದ ನಿಜವಾದ ಪೆಟ್ಟು. ಒಮ್ಮೆ ನಮ್ಮ ದೇಶ ಆರ್ಥಿಕವಾಗಿ ಸದೃಢವಾದರೆ ಚೀನಾವನ್ನೇನು, ಪಾಕಿಸ್ತಾನ ಸೇರಿದಂತೆ ಭಾರತಕ್ಕೆ ಹಾನಿಯುಂಟುಮಾಡುವ ಯಾರನ್ನು ಬೇಕಾದರೂ ಮಣಿಸಬಹುದು. ಈಗ ಹೇಳಿ ಭಾರತಕ್ಕೆ ಯುದ್ಧ ಬೇಕೆ?

 

Shreyanka S Ranade

shreyanka.sr1857@gmail.com

 

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!