Featured ಅಂಕಣ

ಕಾರ್ಪೊರೇಟ್ ಸಾಗರದಲ್ಲಿ ಶಾರ್ಕ್‍ಗಳ ಜೊತೆ ಏಗುವುದು ಕೂಡ ಕಲೆ!

ಇಂಟರ್‍ವ್ಯೂನಲ್ಲಿ ಕೇಳಿದ ಪ್ರಶ್ನೆಗಳಿಗೆಲ್ಲ ತುಂಬ ಚೆನ್ನಾಗಿ ಉತ್ತರಿಸಿದ್ದ ಅನಿತಾಳಿಗೆ ಕೆಲಸ ಸಿಕ್ಕಿದಾಗ ಅಚ್ಚರಿಯೆನಿಸಲಿಲ್ಲ. “ಸಿಗಬೇಕಾದ್ದೇ! ನನಗಲ್ಲದೆ ಇನ್ಯಾರಿಗೆ ಕೊಡ್ತಾರೆ!” ಎಂದು ಧಿಮಾಕಿನಿಂದ ಕೆಲಸಕ್ಕೆ ಸೇರಿಕೊಂಡಳು. ಮೊದಲೆರಡು ದಿನದ ಪರಿಚಯ ಕಾರ್ಯಕ್ರಮಗಳು ಮುಗಿದ ಮೇಲೆ, ಮೂರನೇ ದಿನದಿಂದ ಕೆಲಸ ಪ್ರಾರಂಭವಾಯಿತು. ಹೊಸ ಅಗಸ ಬಟ್ಟೆಯನ್ನು ಎತ್ತೆತ್ತಿ ಒಗೆದಂತೆ, ಕೆಲಸ ಸಿಕ್ಕಿದ ಹುರುಪಿನಲ್ಲಿ ಅನಿತಾ ತುಂಬ ಅಚ್ಚುಕಟ್ಟಾಗಿ ಕೆಲಸ ಮಾಡುತ್ತಿದ್ದಳು. ಬಾಸ್ ಕೂಡ, ಅವಳನ್ನು ತನ್ನ ಕ್ಯಾಬಿನ್ನಿಗೆ ಒಂದೆರಡು ಸಲ ಕರೆದು, ತುಂಬಾ ಸಮರ್ಥವಾಗಿ ಕೆಲಸ ಮಾಡುತ್ತೀಯಾ ಎಂದು ಶಹಬ್ಬಾಸ್‍ಗಿರಿ ಕೊಟ್ಟದ್ದೂ ಆಯಿತು. ಮೊದಮೊದಲಿಗೆ ಆರು ಗಂಟೆಗೆಲ್ಲ ಆಫೀಸು ಬಿಡುತ್ತಿದ್ದವಳಿಗೆ ಬರಬರುತ್ತಾ ಎಂಟೊಂಬತ್ತು ಗಂಟೆಯಾದರೂ ಸೈನ್ ಔಟ್ ಮಾಡಲಿಕ್ಕೇ ಆಗದಂತಹ ಪರಿಸ್ಥಿತಿ ಬಂತು. ಮುಗಿಯದ ಕೆಲಸವನ್ನು ಮನೆಗೂ ತಂದು ರಾತ್ರಿಯೆಲ್ಲ ಎಚ್ಚರಿದ್ದು ಮುಂದುವರೆಸತೊಡಗಿದಳು.

ಬಹಳ ದಿನಗಳಿಂದ ಇವಳನ್ನೇ ಸೂಕ್ಷ್ಮವಾಗಿ ಗಮನಿಸುತ್ತಿದ್ದ ತಂದೆ, ಒಂದು ದಿನ ಮಗಳನ್ನು ಹತ್ತಿರ ಕರೆದು, “ಚೆನ್ನಾಗಿ ಕೆಲಸ ಮಾಡಿ ಒಳ್ಳೆಯ ಹೆಸರು ಮಾಡಬೇಕು ಎನ್ನುವ ಆಸೆ ಎಲ್ಲರಿಗೂ ಇರುತ್ತದೆ. ಆದರೆ, ಅದನ್ನೇ ಬಳಸಿಕೊಂಡು ಒಂದಕ್ಕೆರಡು ಪಟ್ಟು ಕೆಲಸ ತೆಗೆಯುವ ಚಾಣಾಕ್ಷ ಬಾಸುಗಳೂ, ಕುಟಿಲ ಬುದ್ಧಿಯ ಕಂಪೆನಿಗಳೂ ಇರುತ್ತವೆ ಎನ್ನುವುದನ್ನು ಮರೆಯಬಾರದು” ಎಂದು ಹೇಳಿದಾಗಲೇ ಅವಳಿಗೆ ಜ್ಞಾನೋದಯವಾದದ್ದು. ಇಷ್ಟು ದಿನ, ಹೊಗಳುತ್ತ ನಯವಾಗಿ ಮಾತಾಡುತ್ತ ತಲೆ ಮೇಲೆ ಕೆಲಸದ ಮೂಟೆ ಹೊರೆಸುತ್ತಿದ್ದ ಸಹೋದ್ಯೋಗಿಗಳೆಲ್ಲ ತನ್ನನ್ನು ಎಕ್ಸ್’ಪ್ಲಾಯಿಟ್ ಮಾಡುತ್ತಿದ್ದಾರೆ, ತಮ್ಮ ಬೇಳೆ ಬೇಯಿಸಿಕೊಳ್ಳಲು ದುರುಪಯೋಗಪಡಿಸಿಕೊಂಡಿದ್ದಾರೆ – ಎನ್ನುವುದು ಅನಿತಾಳಿಗೆ ತಿಳಿಯುವಾಗ ಬಹಳ ತಡವಾಗಿತ್ತು.

ಎಕ್ಸ್’ಪ್ಲಾಯಿಟ್ ಎನ್ನುವ ಪದವನ್ನು ಇತ್ತೀಚೆಗೆ ಕಾರ್ಪೋರೇಟ್ ಜಗತ್ತಿನಲ್ಲಿ ದಿನನಿತ್ಯ ಎನ್ನುವಂತೆ ಕೇಳುತ್ತಿದ್ದೇವೆ. ಹಣ, ಹೊಗಳಿಕೆ, ಲಾಭ, ಉನ್ನತ ಹುದ್ದೆ – ಹೀಗೆ ಏನಾದರೊಂದು ಆಮಿಷ ತೋರಿಸಿ ಒಬ್ಬ ವ್ಯಕ್ತಿ ಅವನ ಇಚ್ಛೆಗೆ ವಿರುದ್ಧವಾಗಿ ಹೋಗುವಂತೆ ಮಾಡುವ, ಆ ಮೂಲಕ ತನ್ನ ಬೇಳೆ ಬೇಯಿಸಿಕೊಳ್ಳುವ ನಯವಂಚಕತನಕ್ಕೆ ಈ ಹೆಸರು. “ನೀನಿನ್ನೂ ಹೊಸಬ ಕಣಯ್ಯ. ನಿನ್ನ ಪ್ರಾಯದಲ್ಲಿ ನಾವು ಏನೆಲ್ಲ ಕೆಲಸ ಮಾಡ್ತಿದ್ದೆವು ಗೊತ್ತಾ? ನೌಕರಿಯ ಆಳ ಅಗಲ ತಿಳಿದುಕೊಳ್ಳಬೇಕಾದರೆ ಎಲ್ಲಾ ಕೆಲಸವನ್ನು ನಿಷ್ಠೆಯಿಂದ, ಒಂದೂ ದೂರು ಹೇಳದೆ ಮಾಡಿ ಮುಗಿಸಬೇಕು” ಎಂದು ಸೀನಿಯರ್ ಅಂದುಕೊಂಡವರು ತಮ್ಮ ಜ್ಯೂನಿಯರ್‍ಗಳಿಗೆ ಹಿತೋಪದೇಶ ಕೊಡುತ್ತಾರೆ. ಕಾನ್‍ಸ್ಟೇಬಲ್ ಕೈಯಲ್ಲಿ ಪೋಲೀಸ್ ಅಧಿಕಾರಿ ಮನೆಗೆ ತರಕಾರಿ ಹಾಕಿಸುವುದು, ವಿದ್ಯಾರ್ಥಿಗಳ ಕೈಯಲ್ಲಿ ಶಿಕ್ಷಕ ಊಟದ ಡಬ್ಬ ತರಿಸಿಕೊಳ್ಳುವುದು, ಬೇಕುಬೇಕೆಂದೇ ಸುಂದರ ಸೆಕ್ರೆಟರಿಯನ್ನು ಬಾಸು ತಡರಾತ್ರಿಯವರೆಗೆ ನಿಲ್ಲಿಸಿಕೊಳ್ಳುವುದು, ಇದೇ ರೀತಿ ಪ್ರಾಮಾಣಿಕವಾಗಿ ದುಡಿದರೆ ಮುಂದಿನ ವರ್ಷ ಪ್ರಮೋಶನ್ ಕೊಡಿಸುತ್ತೇನೆ ಎಂದು ಸುಳ್ಳುಭರವಸೆ ಕೊಟ್ಟು ಮ್ಯಾನೇಜರ್ ಬಿಟ್ಟಿ ಚಾಕರಿ ಮಾಡಿಸಿಕೊಳ್ಳುವುದು – ಎಲ್ಲವೂ ಎಕ್ಸ್’ಪ್ಲಾಯಿಟೇಶನ್ ಗುಂಪಿಗೇ ಸೇರುತ್ತವೆ.

ಇದರಲ್ಲೇ ಇನ್ನೊಂದು ವಿಧವೂ ಉಂಟು. ತನ್ನ ಕೆಲಸಗಾರರಿಗೆ, ಪೂರ್ಣಗೊಳಿಸಲು ಸಾಧ್ಯವೇ ಆಗದ ಗುರಿಗಳನ್ನು ನಿಗದಿಪಡಿಸಿ, ಅವರನ್ನು ಕತ್ತೆಯಂತೆ ದುಡಿಸಿಕೊಳ್ಳುವುದು ಕೂಡ ಇಂಥಹ ಕಾರ್ಪೋರೇಟ್ ಅತ್ಯಾಚಾರವೇ. ಉದಾಹರಣೆಗೆ, ಕೆಲವು ಕಂಪೆನಿಗಳಲ್ಲಿ ಮೂರು ಅಥವಾ ಆರು ತಿಂಗಳಿಗೊಮ್ಮೆ ‘ಅಪ್ರೈಸಲ್’ ಎಂಬ ವರದಿಯನ್ನು ನೌಕರ ಒಪ್ಪಿಸಬೇಕೆಂಬ ನಿಯಮವಿದೆ. ತಾನು ಆ ಅವಧಿಯಲ್ಲಿ ಮಾಡಿದ ಸಾಧನೆಯೆಲ್ಲವನ್ನು ಕಡಿಮೆಯೂ ಅಲ್ಲದೆ ತುತ್ತೂರಿಯೂ ಆಗದಂತೆ ಬಹಳ ವಸ್ತುನಿಷ್ಠವಾಗಿ ಬರೆದು ಸಲ್ಲಿಸುವ ವರದಿ ಅದು. ಅದನ್ನು ಓದಿ, ತನ್ನ ಕೈ ಕೆಳಗಿನ ನೌಕರ ಮಾಡಿದ ಕೆಲಸದ ಪ್ರಮಾಣ ಮತ್ತು ಗುಣಮಟ್ಟವನ್ನು ಅರಿತುಕೊಂಡು ಅದಕ್ಕೆ ತಕ್ಕ ಮೌಲ್ಯಾಂಕನ ಮಾಡುವುದು ಮೇಲಾಧಿಕಾರಿಯ ಕೆಲಸ. ಎಷ್ಟೇ ಕೆಲಸ ಮಾಡಿದರೂ, ತನ್ನ ತನುಮನಗಳನ್ನೆಲ್ಲ ಅರ್ಪಿಸಿ ಕಂಪೆನಿಗಾಗಿ ದುಡಿದರೂ ಅಂಥವರ ಕೆಲಸಕ್ಕೆ ಏನೋ ಕೊಂಕು ಮಾತಾಡಿ, ಸಿಗಬೇಕಾದ ಬಡ್ತಿ – ಸಂಬಳಕ್ಕೆ ಕತ್ತರಿ ಹಾಕುವ ಅಧಿಕಾರಿಗಳು ಇರುತ್ತಾರೆ. ತಮ್ಮ ಮಾತನ್ನು ಕೇಳದ ಅಥವಾ ಎದುರಾಡುವ, ತನ್ನ ಜೊತೆ ಭಿನ್ನಾಭಿಪ್ರಾಯವಿರುವ ನೌಕರರ ಓಟಕ್ಕೆ ತಡೆಹಾಕುವುದಕ್ಕೆ ಈ ಅಧಿಕಾರಿಗಳಿಗೆ ಅಪ್ರೈಸಲ್ ಒಳ್ಳೆಯ ಸಬೂಬಾಗಿ ಒದಗಿಬರುತ್ತದೆ. ಬೆಣ್ಣೆ ಹಚ್ಚಿ ಚೂರಿ ಇರಿಯುವ ಕಾರ್ಪೋರೇಟ್ ಜಗತ್ತಿನ ಶೋಷಣೆಗೆ ಇದೂ ಒಂದು ಉದಾಹರಣೆ.

ಕೆಲವು ಕಂಪೆನಿಗಳು ಹೊಸದಾಗಿ ಕೆಲಸಕ್ಕೆ ಸೇರಿಸಿಕೊಳ್ಳುವಾಗ ಉದ್ಯೋಗಿಗಳಿಗೆ ಬಹಳ ಮಜಬೂತಾದ ಸಂಬಳದ ಭರವಸೆ ಕೊಡುತ್ತವೆ. ಆದರೆ, ಬಳಿಕ ತಿಂಗಳ ಸಂಬಳದಲ್ಲಿ ದೊಡ್ಡ ಮೊತ್ತವನ್ನು ಹಿಡಿದಿಡತೊಡಗುತ್ತವೆ. ಇದೇಕೆ ಹೀಗೆ ಎಂದು ಕೇಳಲು ಹೋದರೆ, “ಇದು ನಮ್ಮ ಕಂಪೆನಿಯ ಕ್ರಮ. ಈಗ ಹಿಡಿದಿಟ್ಟ ಮೊತ್ತವನ್ನು ವರ್ಷದ ಕೊನೆಗೆ ನಿಮಗೇ ಕೊಡುತ್ತೇವೆ” ಎಂಬ ಸಕ್ಕರೆಗುಳಿಗೆ ಕೂಡ ಹಾಕುತ್ತವೆ. ಕಂಪೆನಿಯೊಳಗೆ ಬಂದ ಬಕ್ರನನ್ನು ವರ್ಷದ ಕೊನೆಯವರೆಗೆ ಉಳಿಸಿಕೊಳ್ಳುವ, ವರ್ಷಾಂತ್ಯಕ್ಕೆ ಸಿಗುವ ತನ್ನದೇ ಸಂಬಳದ ಮೊತ್ತವನ್ನು ಪಡೆಯಲು ಬಾಯಿಕಳೆದು ಕೂತ ಅವನಿಂದ ಬೇಕುಬೇಕಾದ ಕೆಲಸ ಮಾಡಿಸಿಕೊಳ್ಳಲು ಕಂಪೆನಿಗಳು ಹೂಡಿದ ಮೋಸದ ಆಟ ಇದು. ಬೆಂಗಳೂರಿನ ಕೆಲ ಸಂಸ್ಥೆಗಳು, ಹೊಸಬರು ವೃತ್ತಿಗೆ ಸೇರುವ ಹೊತ್ತಿನಲ್ಲಿ ಏನೂ ಕಂಡೀಷನ್ ಹಾಕದೆ, ಅವರು ಸೇರಿದ ಮೇಲೆ ಒಪ್ಪಂದ ಬರೆಸಿಕೊಂಡು, ಅವರ ಶೈಕ್ಷಣ ಕ ಸರ್ಟಿಫಿಕೇಟುಗಳ ಮೂಲಪ್ರತಿಗಳನ್ನು ಬಲವಂತದಿಂದ ತೆಗೆದುಕೊಂಡು ತಮ್ಮ ಕಪಾಟುಗಳಲ್ಲಿ ಭದ್ರಪಡಿಸಿಕೊಳ್ಳುತ್ತವೆ. ಯಾವ ಕಾನೂನಿನಲ್ಲೂ ಇಲ್ಲದ ಇಂತಹ ನಿಯಮಗಳು, ಕಂಪೆನಿಗಳು ಉದ್ಯೋಗಿಗಳನ್ನು ತಾವು ಆಡಿಸಿದಂತೆ ಕುಣ ಸಲು ಹೂಡಿದ ದಾಳಗಳಲ್ಲದೆ ಬೇರೇನೂ ಅಲ್ಲ. ಉದ್ಯೋಗಿ ಒಮ್ಮೆ ಇಂತಹ ಕಪಟ ಒಪ್ಪಂದಕ್ಕೆ ಸಹಿಹಾಕಿ ತನ್ನ ದಾಖಲೆಪತ್ರಗಳನ್ನು ಅಡವಿಟ್ಟನೋ, ಎಕ್ಸ್’ಪ್ಲಾಯಿಟೇಶನ್ ಪರ್ವಕ್ಕೆ ತಲೆಯೊಡ್ಡಿ ಬಲಿಯಾದನೆಂದೇ ಅರ್ಥ.

“ಕಿರಣ್ ಕೂಡ ಸರಿಸುಮಾರು ನಿನ್ನ ಜೊತೆಗೇ ಕೆಲಸಕ್ಕೆ ಸೇರಿದವನು. ಆದರೆ ಅವನು ಮಾಡಿ ಮುಗಿಸುತ್ತಿರುವ ಕೆಲಸ ಎಷ್ಟು! ಅವನೆದುರು ನಿನ್ನ ಪರಫಾರಮೆನ್ಸ್ ಏನೇನೂ ಅಲ್ಲ!” ಎಂದು ಉದ್ಯೋಗಿಗಳನ್ನು ಮೂದಲಿಸಿ, ಇನ್ನೊಬ್ಬನನ್ನು ಅವನೆದುರು ಎತ್ತಿಕಟ್ಟಿ ಕೆಲಸ ತೆಗೆಯುವುದು ಇನ್ನೊಂದು ಬಗೆ. “ನೋಡಿ, ಈ ಪೋಸ್ಟಿಗೆ ನಮಗೆ ನಿಜವಾಗಿಯೂ ಬೇಕಾದವರು ಒಬ್ಬರು ಮಾತ್ರ. ಆದರೆ, ಹೃದಯವಂತಿಕೆಯಿಂದ ಇಬ್ಬರಿಗೆ ಜಾಗ ಕೊಟ್ಟಿದ್ದೇವೆ. ಇನ್ನಾರು ತಿಂಗಳಲ್ಲಿ ನಿಮ್ಮಲ್ಲಿ ಶ್ರೇಷ್ಠರು ಯಾರು ಎನ್ನುವುದನ್ನು ನೀವೇ ಪ್ರೂವ್ ಮಾಡಿತೋರಿಸಬೇಕು. ಅಷ್ಟರಲ್ಲಿ, ಯಾರ ಕೆಲಸ ಕಳಪೆ ಎಂದು ತೋರುತ್ತದೋ ಅಂತಹವರನ್ನು ಕೆಲಸದಲ್ಲಿ ಮುಂದುವರೆಸಲು ಬರುವುದಿಲ್ಲ.” ಎಂದು ಹೇಳಿ ಎರಡು ಎತ್ತುಗಳನ್ನು ಬಂಡಿಗೆ ಸಿಕ್ಕಿಸಿ ಸವಾರಿಯ ಮಜಾ ತೆಗೆದುಕೊಳ್ಳುವವರೂ ಇದ್ದಾರೆ. “ಒಂದು ವಾರ ಬನ್ನಿ. ನಿಮ್ಮ ಕೆಲಸ ನೋಡ್ತೇವೆ. ತೃಪ್ತಿದಾಯಕ ಅನ್ನಿಸಿದರೆ ಮುಂದೆ ಕೆಲಸಕ್ಕೆ ಸೇರಿಸಿಕೊಳ್ತೇವೆ” ಎನ್ನುವ ಜಾಣ, ವರ್ಷಕ್ಕೆ ಅಂತಹ ಐವತ್ತು ಅಮಾಯಕರನ್ನು ಬಲೆ ಹಾಕಿ ಹಿಡಿದು ತನ್ನ ಇಡೀ ವರ್ಷದ ಕೆಲಸವನ್ನು ಬಿಟ್ಟಿಯಾಗಿಯೇ ಪೂರೈಸಿಕೊಂಡುಬಿಡುತ್ತಾನೆ!

ಆದಿಶೇಷನಂತೆ ನೂರಾರು ಹೆಡೆಗಳನ್ನು ಬಿಚ್ಚಿ ಕುಣಿಯುವ ಈ ಕಾರ್ಪೋರೇಟ್ ಶೋಷಣೆಗೆ ಪರಿಹಾರ ಇದೆಯೇ? ಹೊಸದಾಗಿ ಕೆಲಸಕ್ಕೆ ಸೇರಿದವನನ್ನು ನಡುಬಗ್ಗಿಸಿ ಕೂರಿಸುವ ಈ ರಾಗಿಂಗ್ ಅನ್ನು ತಡೆಗಟ್ಟುವುದು ಮತ್ತು ತಪ್ಪಿಸುವುದು ಹೇಗೆ? ಉಪಯೋಗವಾಗಬಲ್ಲ ಒಂದಷ್ಟು ಟಿಪ್ಸ್ ಇಲ್ಲಿವೆ:

▪ವಶೀಲಿಬಾಜಿಗೆ ಬಲಿಬೀಳದಷ್ಟು ಎಚ್ಚರ, ಸ್ವನಿಯಂತ್ರಣ, ಆತ್ಮವಿಮರ್ಶೆ ಮಾಡಿಕೊಳ್ಳುವ ಬುದ್ಧಿ ಇರಬೇಕಾದದ್ದು ಮುಖ್ಯ. ಕೆಲಸ ಮಾಡುವ ಸ್ಥಳದಲ್ಲಿ, ಸಹೋದ್ಯೋಗಿಗಳು ತನ್ನನ್ನು ತುಂಬ ವಿಶೇಷವಾಗಿ ಹೊಗಳುತ್ತಿದ್ದಾರೆ, ಅಟ್ಟಕ್ಕೇರಿಸುತ್ತಿದ್ದಾರೆ, ಅಗತ್ಯಕ್ಕಿಂತ ಹೆಚ್ಚೇ ಗೌರವ ತೊರಿಸುತ್ತಾರೆ ಎಂದರೆ, ಯಾವುದಾದರೂ ಕೆಲಸ ಸಾಧಿಸುವುದಕ್ಕಾಗಿ ಅವರು ತನ್ನನ್ನು ಬಳಸಿಕೊಳ್ಳುತ್ತಿದ್ದಾರೆಯೇ – ಎಂದು ಅರಿಯುವ, ವಿಮರ್ಶಿಸುವ ತರ್ಕಶಕ್ತಿ ಬೆಳೆಸಿಕೊಳ್ಳಬೇಕು. ಹೊಗಳಿಕೆಗೆ ಉಬ್ಬದ, ತೆಗಳಿಕೆಗೆ ತಗ್ಗದ ಆತ್ಮಸ್ಥೈರ್ಯ, ಮನೋನಿಯಂತ್ರಣವೂ ಬೇಕು.

▪ಕೆಲಸಕ್ಕೆ ಸೇರುವ ಸಮಯದಲ್ಲಿ, ಕಂಪೆನಿ ಅಥವಾ ಸಂಸ್ಥೆಯ ನೀತಿನಿಯಮಗಳ ಬಗ್ಗೆ ಸರಿಯಾಗಿ ತಿಳಿದುಕೊಳ್ಳಿ. ನೌಕರಿ ಬೇಕೇಬೇಕು, ಅದಕ್ಕಾಗಿ ಏನು ತ್ಯಾಗ ಬೇಕಾದರೂ ಮಾಡಲು ಸಿದ್ಧ ಎಂಬ ಹಪಹಪಿ ತೋರಿಸಬೇಡಿ. ನಿಮಗೆ ಉದ್ಯೋಗ ಎಷ್ಟು ಅಗತ್ಯವೋ, ಸಂಸ್ಥೆಗೂ ಒಳ್ಳೆಯ ಉದ್ಯೋಗಿಯ ಅಗತ್ಯ ಅಷ್ಟೇ ಇದೆ ಎನ್ನುವುದನ್ನು ಮರೆಯದಿರಿ.

ನೀವು ಮುಂದೆ ನೌಕರಿ ಸೇರಿದರೆ ಯಾರ ಜೊತೆ ದೀರ್ಘವಾಗಿ ಕೆಲಸ ಮಾಡಬೇಕಾಗುತ್ತದೋ ಅಂಥವರನ್ನು ಸಂದರ್ಶನದ ಸಮಯದಲ್ಲಿ ಭೇಟಿಯಾಗಲು ಪ್ರಯತ್ನಿಸಿ. ಅವರ ಜೊತೆ ಕೆಲಸಮಯ ಕಳೆಯಿರಿ. ಅವರ ಜೊತೆ, ಕೆಲಸಕ್ಕೆ ಸಂಬಂಧಪಟ್ಟ ವಿಷಯಗಳ ಬಗ್ಗೆ ಮುಕ್ತವಾಗಿ ಚರ್ಚಿಸಿ. ಆ ವ್ಯಕ್ತಿಯೊಂದಿಗೆ ಕೆಲವರ್ಷ ಕೆಲಸ ಮಾಡಬಹುದು ಎಂದು ನಿಮಗನ್ನಿಸಿದರೆ ಮಾತ್ರ ಮುಂದಿನ ಹೆಜ್ಜೆ ಇಡಿ. ಒಂದು ಕಂಪೆನಿಯ ಛೇರ್‍ಮನ್ ಯಾರು ಅನ್ನುವುದಕ್ಕಿಂತಲೂ ಆ ಸಂಸ್ಥೆಯನ್ನು ಸೇರಿದರೆ, ನೀವು ಯಾರ ಜೊತೆ ಕೆಲಸ ಮಾಡಬೇಕಾಗುತ್ತದೆ ಎನ್ನುವುದು ಮುಖ್ಯ.

▪ಕೆಲಸಕ್ಕೆ ಸೇರಿದ ಪ್ರಾರಂಭದಲ್ಲಿ (ಮತ್ತು ಮುಂದೆಯೂ) ಸಹೋದ್ಯೋಗಿಗಳೊಂದಿಗೆ ಚೆನ್ನಾಗಿ ವ್ಯವಹರಿಸಿ. ವೃಥಾ ಕಾಲುಕೆರೆದು ಜಗಳ ಕಾಯಬೇಡಿ! ಯಾರನ್ನೇ ಆಗಲಿ, ತುಂಬ ಕೆಟ್ಟವರೆಂದೋ ಸುಗುಣಸಂಪನ್ನರೆಂದೋ ಒಂದೆರಡು ದಿನಗಳಲ್ಲಿ ನಿರ್ಣಯಿಸಬೇಡಿ. ನಿಮ್ಮ ಜೊತೆ ಕೆಲಸ ಮಾಡುವವರು ಆಡುವ ಎಲ್ಲ ಮಾತನ್ನೂ ಭಗವದ್ಗೀತೆ ಎನ್ನುವಂತೆ ವಿವೇಚಿಸದೆ ಸ್ವೀಕರಿಸಬೇಡಿ. ಯಾರೋ ಮೂರನೆಯವರು ಹೇಳಿದ ಅನ್ನಿಸಿಕೆಗಳ ಆಧಾರದ ಮೇಲೆ ಯಾವುದೇ ವ್ಯಕ್ತಿಯನ್ನು ಬೆಲೆಕಟ್ಟಬೇಡಿ.

▪ಋಣಾತ್ಮಕ ಚಿಂತನೆ ಮಾಡುವ, ಸದಾ ಇನ್ನೊಬ್ಬರ ಬಗ್ಗೆ ಚಾಡಿ ಹೇಳಿಕೊಂಡು ತಿರುಗುವ, ಕೆಟ್ಟ ಅಭಿಪ್ರಾಯ ಬರುವಂತೆ ಮಾತಾಡುವ, ದ್ವಂದ್ವಾರ್ಥದ ಸಂಭಾಷಣೆಯಲ್ಲಿ ತೊಡಗುವ, ಕೆಲಸದಲ್ಲಿ ಕಳ್ಳತನ ಮಾಡುವ, ಪ್ರಾಮಾಣಿಕನಾಗಿರಬೇಕಿಲ್ಲ ಎನ್ನುವ, ಪ್ರತಿ ಗಂಟೆಗೆ ಐದಾರು ಬಾರಿ ಆಫೀಸಿನ ಹೊರಗೆ ಹೋಗಿ ಕಾಲಕಳೆಯುವ, ಕೆಲಸ-ಮಾತು-ವ್ಯವಹಾರಗಳಲ್ಲಿ ಶಿಸ್ತು ತೋರಿಸದ, ಸಮಯಪ್ರಜ್ಞೆ ಇಲ್ಲದ – ವ್ಯಕ್ತಿಗಳನ್ನು ವೃತ್ತಿಯಲ್ಲಿ ದೂರವಿಡಿ. ಅಂಥವರ ಜೊತೆಗಿನ ಸ್ನೇಹ ನಿಮ್ಮ ಭವಿಷ್ಯತ್ತಿಗೆ ದುಬಾರಿಯೂ ಮಾರಕವೂ ಆಗಬಹುದು.

▪ನೌಕರಿಗೆ ಸೇರಿದ ಮೊದಲ ಒಂದು ವಾರ, ನಿಮ್ಮ ಸುತ್ತಲಿನವರು ನಿಮ್ಮನ್ನು ತುಂಬ ಸೂಕ್ಷ್ಮವಾಗಿ ಗಮನಿಸುತ್ತಿರುತ್ತಾರೆ. ನೀವು ಎಂತಹ ವ್ಯಕ್ತಿತ್ವದವರು ಎನ್ನುವ ಬಗ್ಗೆ ಅಪ್ರಜ್ಞಾಪೂರ್ವಕವಾಗಿಯೂ ಅರ್ಥೈಸಿಕೊಳ್ಳಲು ಪ್ರಯತ್ನಿಸುತ್ತಿರುತ್ತಾರೆ. ನೀವು ವಾಚಾಳಿಯೋ ಗುಮ್ಮನಗಸುಕರೋ ವರ್ಕೋಹಾಲಿಕ್ಕೋ ಕೆಲಸಕಳ್ಳರೋ – ಹೀಗೆ ಪ್ರತಿಯೊಂದು ವಿಚಾರದ ಬಗ್ಗೆಯೂ ಸುತ್ತಲಿನ ಪರಿಸರ ತನ್ನ ಅಭಿಪ್ರಾಯವನ್ನು ರೂಪಿಸಿಕೊಳ್ಳುತ್ತಿರುತ್ತದೆ. ವೃತ್ತಿಜೀವನ ಪ್ರಾರಂಭಿಸಿದ ಮೊದಲ ದಿನಗಳಲ್ಲಿ ನೀವು ಹೇಗೆ ನಡೆದುಕೊಳ್ಳುತ್ತೀರಿ ಎನ್ನುವುದು ಮುಂದಿನ ಎರಡು ಮೂರು ವರ್ಷ ಅಲ್ಲಿ ನಿಮ್ಮ ಗೆಳೆಯರು ಯಾರಾಗಿರುತ್ತಾರೆ ಎನ್ನುವುದನ್ನು ನಿರ್ಧರಿಸುತ್ತದೆ.

▪ಒಂದು ಕೆಲಸವನ್ನು ಒಪ್ಪಿಕೊಳ್ಳುವ ಮೊದಲು, ಅದು ನಿಜವಾಗಿಯೂ ನೀವು ಮಾಡಿಮುಗಿಸಬೇಕಾದ ಕೆಲಸವೇ, ಅದನ್ನು ಮುಗಿಸಲು ಎಷ್ಟು ಸಮಯ ಬೇಕಾಗಬಹುದು, ಆ ಕೆಲಸಕ್ಕೆ ನ್ಯಾಯ ಒದಗಿಸಲು ನಿಮಗೆ ಸಾಧ್ಯವೇ – ಎಂಬುದನ್ನೆಲ್ಲ ಯೋಚಿಸಿ. ನಿಮ್ಮ ಸಾಮರ್ಥ್ಯಕ್ಕೆ ಮೀರಿದ ಜವಾಬ್ದಾರಿಗಳನ್ನು ಒಪ್ಪಿಕೊಳ್ಳದೆ “ಸಾಧ್ಯವಿಲ್ಲ” ಎನ್ನುವುದು ಎಷ್ಟೋ ಸಮಸ್ಯೆಗಳನ್ನು ತಡೆಗಟ್ಟುತ್ತದೆ.

ತನ್ನ ಕೆಲಸಕ್ಕೆ ಬೇಕಾದ ಹಾಗೆ ಕೆಲಸಗಾರರನ್ನು ಬಗ್ಗಿಸಿ ಬಲಿಹಾಕುವುದರಲ್ಲಿ ಮಾಸ್ಟರ್ ಡಿಗ್ರಿ ಮಾಡಿದ ಬಾಸ್ ಕೆಳಗೆ ದುಡಿಯುವ ಅನಿವಾರ್ಯತೆ ಸೃಷ್ಟಿಯಾಗಿದೆ ಎಂದುಕೊಳ್ಳೋಣ. ಉದ್ಯೋಗಿ ಏನೇ ಮಾಡಿದರೂ, ಅದಕ್ಕೆ ತಕ್ಕ ಪ್ರತಿತಂತ್ರ ಹೂಡಿ ಅವನನ್ನು ಕಟ್ಟಿ ಹಾಕುವ ಕಲೆ ಈ ಬಾಸಿಗೆ ಕರಗತ. ಇಂತಹವನ ಜೊತೆ ಏಗುವುದಕ್ಕಿಂತ ಕೆಲಸ ಬಿಡುವುದೇ ಎಷ್ಟೋ ವಾಸಿ ಎಂದು ದಿನನಿತ್ಯ ಮನಸಲ್ಲೇ ಗೋಳಾಡುವ ಪರಿಸ್ಥಿತಿ ನಿಮ್ಮದು ಎಂದುಕೊಳ್ಳೋಣ. ಏನು ಮಾಡುತ್ತೀರಿ? ಮರುಯೋಚನೆ ಮಾಡದೆ ಆ ನೌಕರಿಗೆ ಬೈ ಬೈ ಹೇಳಿ ಹೊರಬಂದು ಹೊರಜಗತ್ತಿನ ಆಹ್ಲಾದಕರ ಗಾಳಿಯನ್ನು ಎದೆತುಂಬಿಸಿಕೊಳ್ಳಿ!

 

Facebook ಕಾಮೆಂಟ್ಸ್

ಲೇಖಕರ ಕುರಿತು

Rohith Chakratheertha

ಓದಿದ್ದು ವಿಜ್ಞಾನ, ಮುಖ್ಯವಾಗಿ ಗಣಿತ. ಬೆಂಗಳೂರಿನಲ್ಲಿ ನಾಲ್ಕು ವರ್ಷ ಉಪನ್ಯಾಸಕನಾಗಿ ಕಾಲೇಜುಗಳಲ್ಲಿ ಪಾಠ ಮಾಡಿದ್ದ ಇವರು ಈಗ ಒಂದು ಬಹುರಾಷ್ಟ್ರೀಯ ಕಂಪೆನಿಯಲ್ಲಿ ಉದ್ಯೋಗಿ. ಹವ್ಯಾಸವಾಗಿ ಬೆಳೆಸಿಕೊಂಡದ್ದು ಬರವಣಿಗೆ. ಐದು ಪತ್ರಿಕೆಗಳಲ್ಲಿ ಸದ್ಯಕ್ಕೆ ಅಂಕಣಗಳನ್ನು ಬರೆಯುತ್ತಿದ್ದು ವಿಜ್ಞಾನ, ಗಣಿತ, ವ್ಯಕ್ತಿಚಿತ್ರ, ಮಕ್ಕಳ ಕತೆ ಇತ್ಯಾದಿ ಪ್ರಕಾರಗಳಲ್ಲಿ ಇದುವರೆಗೆ ೧೩ ಪುಸ್ತಕಗಳ ಪ್ರಕಟಣೆಯಾಗಿವೆ. ಉದ್ಯೋಗ ಮತ್ತು ಬರವಣಿಗೆಯಿಂದ ಬಿಡುವು ಸಿಕ್ಕಾಗ ತಿರುಗಾಟ, ಪ್ರವಾಸ ಇವರ ಖಯಾಲಿ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!