- ಭಾಷಣವೇ ಭೂಷಣವೇನೊ ಎಂಬಂತೆ ಸ್ವಾತಂತ್ರ್ಯ ದಿನಾಚರಣೆಯೆಂದ ಮೇಲೆ ಭಾಷಣ ಇರಲೇಬೇಕು. ಅಂತಕ್ಕಂತದ್ದು, ಏನಪ್ಪಾ ಅಂದ್ರೆ, ಅದಾಗಬೇಕು, ಇದಾಗಬೇಕು ಎನ್ನುತ್ತಲೇ ಭಾಷಣ ಮಾಡುವವರದ್ದು ಒಂಥರಾ ಭೀಷಣವೇ ಸರಿ. ಆದರೆ ಸ್ವಾತಂತ್ರ್ಯೋತ್ಸವದ ಭಾಷಣ ಮಾಡಲೆಂದೇ ಶ್ರದ್ಧೆಯಿಂದ ಸಿದ್ಧರಾಗುವವರೆಂದರೆ ಶಾಲಾಮಕ್ಕಳು. ಅಲ್ಲಿ ಹೋಗಿ ತಡಬಡಾಯಿಸುವ ಕಂಟಕದಿಂದ ಪಾರಾಗಲು ಎಲ್ಲವನ್ನೂ ಕಂಠಸ್ಥಗೊಳಿಸಿಕೊಂಡು ಸಜ್ಜಾಗಿರುತ್ತಾರೆ. ತುಸು ತಡವರಿಸಿದರೂ ತಡಮಾಡದೇ ಚೀಟಿ ಹೊರಗೆಳೆಯುವ ಮಕ್ಕಳ ಆ ಮುಗ್ಧ ಸನ್ನದ್ಧತೆಯನ್ನು ನೋಡುವುದೇ ಚೆಂದ.
- ಧ್ವಜವನ್ನು ಸರಿಯಾಗಿ ಕಟ್ಟಿದರಷ್ಟೇ, ಗಣ್ಯರು ದಾರವನ್ನು ಎಳೆದಾಕ್ಷಣ ಅದು ಅರಳುವುದು. ಅತ್ತ ಗಂಟೂ ಸರಿಯಾಗಿ ಬಿದ್ದಿರಬೇಕು ಇತ್ತ ಬೇಕೆಂದಾಗ ಸುಲಭವಾಗಿ ಬಿಡಿಸಿಕೊಳ್ಳುವಂತೆಯೂ ಇರಬೇಕು. ಗಂಟು ಬಿಗಿದು ಎರಡೆರಡು ಸಲ ಎಳೆದು ಪರೀಕ್ಷಿಸುವಾಗ ಸಲೀಸಾಗಿ ತೆರೆದುಕೊಳ್ಳುವ ಧ್ವಜ ಕಂಬದ ಮೇಲೇರಿದ ಮೇಲೆ ಬಿಡಿಸಿಕೊಳ್ಳದೆ ಗಡಿಬಿಡಿಗೆ ಕಾರಣವಾಗುತ್ತದೆ. ದಾರ ಹಿಡಿದು ಎಷ್ಟೇ ಜಗ್ಗಿದರೂ ಅದರ ಗಂಟು ಒಂದಿನಿತೂ ಜಗ್ಗದು. ಯಶಸ್ವಿಯಾಗಿ ಆರೋಹಣಗೊಳ್ಳುವ ಧ್ವಜದ ಹಿಂದೆಯೂ ಒಬ್ಬ ಅನುಭವಿ ಪಿ.ಟಿ ಮಾಸ್ಟರ್ ಇರುತ್ತಾರೆ ಎನ್ನಬಹುದು.
- ಕೆಸರಿ, ಬಿಳಿ, ಹಸಿರು ಎಂಬ ವರ್ಣವಿನ್ಯಾಸ ಮನಸ್ಸಲ್ಲಿ ಅಚ್ಚೊತ್ತಿದ್ದರೂ ಅದೇಕೋ ಒಮ್ಮೊಮ್ಮೆ ಧ್ವಜ ತಲೆಕೆಳಗಾಗಿ ಹಾರುವುದಿದೆ. ಧ್ವಜಕಟ್ಟುವವರು ಈ ಬಗ್ಗೆ ತೀರಾ ಆತಂಕಿತರಾಗಿರುತ್ತಾರೆ. ಇನ್ನು ಮಾಧ್ಯಮಗಳಿಗಂತೂ ಧ್ವಜ ಸರಿಯಾಗಿ ಹಾರಾಡಿದಕ್ಕಿಂತಲೂ ಅದು ವೇಳೆ ಮೀರಿ ಹಾರಿದ್ದು, ತಲೆಕೆಳಗಾಗಿ ಹಾರಿದ್ದೇ ಪ್ರಮುಖ ಸುದ್ದಿ. ಅಂತದ್ದೊಂದು ಸುದ್ದಿ ಸಿಕ್ಕಿದರಷ್ಟೇ ವರದಿಗಾರಿಕೆ ಸಂಪೂರ್ಣ.
- ಈ ಉಚ್ಛಾರ ದೋಷಕ್ಕೆ ಉಚ್ಛ ನೀಚವೆಂಬ ಬೇಧ ಭಾವವಿಲ್ಲ ನೋಡಿ. ಹಾಗೆಯೇ ಸ್ವಾತಂತ್ರ್ಯೋತ್ಸವ ಎನ್ನುವುದು ಕೆಲವರ ಬಾಯಿಗೆ ಸಿಕ್ಕಿ ಸ್ವಾತಂತ್ರ್ಯೋಸ್ತವ ಎಂದಾಗುವ ಅಸ್ತವ್ಯಸ್ತತೆಯು ಕೇಳುಗರನ್ನು ಬೇಸ್ತು ಬೀಳಿಸುತ್ತದೆ. ಹಾಗಾಗಿ ಈ ಸಮಸ್ಯೆಯುಳ್ಳವರು ಮೈಕ್ ಮುಂದೆ ನಿಲ್ಲುವುದನ್ನು ಯಾರೂ ಲೈಕ್ ಮಾಡಲ್ಲ. ಇದು ಒಂಥರಾ ಅವರ ವಾಕ್ ಸ್ವಾತಂತ್ರ್ಯಕ್ಕೆ ಉಂಟಾಗುವ ಅಡ್ಡಿಯೇ ಸರಿ. ಇದನ್ನೇ ಕೇಳಿಸಿಕೊಂಡರೂ ಸಾಕು ಕೆಲವು ಹೋರಾಟ ಜೀವಿಗಳು ‘ವಾಕ್ ಸ್ವಾತಂತ್ರ್ಯ ಅಪಾಯದಲ್ಲಿದೆ, ಬನ್ನಿ ಧ್ವನಿ ಎತ್ತೋಣ’ ಎಂದು ಪ್ರತಿಭಟನೆಗೇ ನಿಂತುಬಿಟ್ಟಾರು ಮಾರಾಯ್ರೆ!
- ಪ್ರತಿ ಜಿಲ್ಲಾ ಕೇಂದ್ರಗಳಲ್ಲಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಗುತ್ತದೆ. ಸರ್ಕಾರದ ವತಿಯಿಂದ ಮಂತ್ರಿ, ಸ್ಥಳೀಯ ಜನಪ್ರತಿನಿಧಿಗಳು ಅಲ್ಲಿ ಹಾಜರಿರುತ್ತಾರೆ. ಸಮಯಕ್ಕೆ ಸರಿಯಾಗಿ ಧ್ವಜ ಹಾರಿಸಬೇಕಾಗಿರುವುದರಿಂದ ರಾಜಕಾರಣಿಗಳಿಗೆ ತಮ್ಮ ‘ವಿಳಂಬ ನೀತಿ’ಯನ್ನು ಅನುಸರಿಸುವ ಸ್ವಾತಂತ್ರ್ಯವಿರದು. ಇನ್ನು ಕೆಲವು ನಾಯಕರಿಗೆ ಈ ಕಾರ್ಯಕ್ರಮದ ಭಾಷಣದಲ್ಲೂ ಸ್ವಾತಂತ್ರ್ಯ ಹೋರಾಟಗಾರರು, ದೇಶಭಕ್ತ ನಾಯಕರ ಬಗ್ಗೆ ಪ್ರಸ್ತಾಪಿಸುವ ಸ್ವಾತಂತ್ರ್ಯವಿಲ್ಲ, ಏಕೆಂದರೆ ಅವರೆಲ್ಲ ತಮ್ಮ ತಮ್ಮ ಪಕ್ಷದ ನಾಯಕರು, ಪಕ್ಷಕ್ಕೆ ಪೂರಕವಾದ ಖೊಟ್ಟಿ ಹೋರಾಟಗಾರರ ಬಗ್ಗೆ ಮಾತನಾಡಲು ನಿರ್ದೇಶಿತರಾಗಿರುತ್ತಾರೆ ನೋಡಿ.
- ಹೊಸ ವರ್ಷ ಕಾಲಿಡಲು ತಿಂಗಳು ಬಾಕಿಯಿರುವಾಗಲೇ ಅದರ ಆಚರಣೆಯ ಸಿದ್ಧತೆಗಳು ಗರಿಗೆದರಲಾರಂಭಿಸುತ್ತವೆ. ಡಿ.31ರ ಮಧ್ಯರಾತ್ರಿ 12 ಗಂಟೆಗೇ ಸರಿಯಾಗಿ ಹೊಸವರ್ಷವನ್ನು ಸ್ವಾಗತಿಸಬೇಕು ಇಲ್ಲವಾದರೆ ಅದು ಮುನಿಸಿಕೊಂಡು ವಾಪಾಸು ಹೋಗುತ್ತದೇನೊ ಎಂಬಂತೆ ರಾತ್ರಿಯೆಲ್ಲಾ ಎಚ್ಚರವಾಗಿರುತ್ತಾರೆ. ಹಾಗೆಯೇ ಆಗಸ್ಟ್ 14ರ ಮಧ್ಯರಾತ್ರಿಯೇ ನಮಗೆ ಸ್ವಾತಂತ್ರ್ಯ ಸಿಕ್ಕಿದ್ದು, ಅದನ್ನು ಸ್ಮರಿಸುವ ಕಾರ್ಯಕ್ರಮ ಮಾಡೋಣ ಬನ್ನಿ ಎಂದರೆ ಮಾತ್ರ ಅವರೆಲ್ಲ ನಾಪತ್ತೆ. ಮೇಲಾಗಿ, 15ಕ್ಕೆ ಶಾಲೆ, ಕಾಲೇಜುಗಳಲ್ಲಿ ಆಚರಿಸುತ್ತಾರಲ್ಲಾ ಸಾಕು ಎಂಬ ಅವಜ್ಞೆ.
- ಇನ್ನು ಈಗೀಗಲಂತೂ ಎಲ್ಲರೂ ತ್ರಿವರ್ಣ ಧ್ವಜವನ್ನು ಏರಿಸುವವರೇ ಆದರೆ ತಮ್ಮ ತಮ್ಮ ವಾಟ್ಸಪ್, ಫೇಸ್ ಬುಕ್ ಡಿ.ಪಿಯನ್ನಾಗಿ. ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಒಂದಷ್ಟು ಜನರನ್ನು ಸೇರಿಸದಿದ್ದರೂ ಫೇಸ್ ಬುಕ್, ವಾಟ್ಸಪ್ ಗಳಲ್ಲಿ ಸ್ಟೇಟಸ್ ಗಳನ್ನಂತೂ ಸಿಕ್ಕಾಪಟ್ಟೆ ‘ಶೇರ್’ಇಸುತ್ತಾರೆ. ಆ ಮೂಲಕ ಕಾರ್ಯಕ್ರಮದಲ್ಲಿ ಅವರ ‘ಶೇರ್’ ಸ್ವಲ್ಪ ಜಾಸ್ತಿಯೇ ಎಂಬ ಭ್ರಮೆ ಅಂತವರದ್ದು!
ಓವರ್ ಡೋಸ್: ಸುದೀರ್ಘ ಹೋರಾಟ ಯಶಸ್ವಿಯಾಗಿ ನಮಗೆ ಸ್ವಾತಂತ್ರ್ಯ ದೊರಕಿತು. ಏಕೆಂದರೆ ಆಗ, ಈಗಿನಂತೆ ‘ಮಾಧ್ಯಮ’ ಹಾಗೂ ‘ಸಾಮಾಜಿಕ ಮಾಧ್ಯಮ’ಗಳ ಉಪಟಳ ಇರಲಿಲ್ಲ.