ಅಂಕಣ

ಸಂತೆಯಲಿದ್ದೂ ಒಂಟಿ, ನಿರ್ಲಿಪ್ತದೆ ಈ ಜಗಕಂಟಿ..

ಮಂಕುತಿಮ್ಮನ ಕಗ್ಗ ೦೭೩.

ನಂಟು ತಂಟೆಗಳ ಗಂಟೀ ಬ್ರಹ್ಮ ಭಂಡಾರ |
ಅಂಟಿಲ್ಲವೆನಗಿದರೊಳೆನ್ನದಿರದೆಂದುಂ ||
ಒಂಟಿ ನೀನೊಳಜಗಕೆ ಭಂಟ ಹೊರಜಗಕಾಗಿ |
ಒಂಟಿಸಿಕೊ ಜೀವನವ – ಮಂಕುತಿಮ್ಮ || ೦೭೩ ||

ಬ್ರಹ್ಮ ಭಂಡಾರ : ಬ್ರಹ್ಮನ ಸೃಷ್ಟಿಯಾದ ಈ ವಿಶ್ವ, ಜಗತ್ತು, ಭೂಮಿ
ಅಂಟು : ಸಂಬಂಧ, ನಂಟು
ಭಂಟ : ಬಲವಾದ, ಶಕ್ತಿವಂತನಾದ ಕಟ್ಟಾಳು
ಒಂಟಿಸಿಕೊ : ಹೊಂದಿಸಿಕೊ

ಲೌಕಿಕ ಜಗದ ಸಾಂಸಾರಿಕ ಬಂಧನ ಮತ್ತು ಆ ಮಾಯಾಜಗದಲ್ಲಿ ಬದುಕಲಿರಬೇಕಾದ ನಿರ್ಲಿಪ್ತ ದೃಷ್ಟಿಕೋನವನ್ನು ಸೊಗಸಾಗಿ ಸಂಯೋಜಿಸಿದ ಜೀವನಾನುಭವ ಸಾರದ ಮತ್ತೊಂದು ಕಗ್ಗವಿದು.

ನಂಟು ತಂಟೆಗಳ ಗಂಟೀ ಬ್ರಹ್ಮ ಭಂಡಾರ |
ಅಂಟಿಲ್ಲವೆನಗಿದರೊಳೆನ್ನದಿರದೆಂದುಂ ||

ಈ ಭುವಿಯಲ್ಲಿ ಜನಿಸಿದ ಪ್ರತಿಯೊಂದು ಚರಾಚರ ವಸ್ತುವೂ ಒಂದಲ್ಲ ಒಂದು ರೀತಿಯ ನಂಟಲ್ಲಿ ಬಂಧಿಸಲ್ಪಟ್ಟಿದೆ ಎಂದು ಹಿಂದಿನ ಕಗ್ಗದಲ್ಲಿ ನೋಡಿದ್ದೆವು. ಈ ಕಗ್ಗದ ಸಾಲುಗಳು ಅದೇ ವಸ್ತುವನ್ನು ಜೀವ ಜಗದ, ಅದರಲ್ಲೂ ಮಾನವ ಜಗದ ನಂಟುಗಳಿಗೆ ಅನ್ವಯಿಸಿ ವಿವರಿಸುತ್ತಿವೆ. ಯಾರೇ ಆಗಲಿ ಈ ಜಗದಲ್ಲಿ ಜನಿಸಿದ ಮೇಲೆ ಹೆತ್ತವರು, ಒಡಹುಟ್ಟಿದವರು,ಬಂಧು,ಬಳಗ,ಸ್ನೇಹಿತರು,ನೆರೆಹೊರೆ ಮತ್ತು ಸಮಾಜದ ಇತರ ಅಂಗಗಳ ಜೊತೆಗೆ ಒಂದಲ್ಲ ಒಂದು ರೀತಿಯಲ್ಲಿ ನಂಟು ಇಟ್ಟುಕೊಳ್ಳಲೇಬೇಕು. ಯಾಕೆಂದರೆ ಈ ಸೃಷ್ಟಿ ಪರಸ್ಪರಾವಲಂಬನೆಯ ಸಮಷ್ಟಿ. ಸೂರ್ಯನ ಬೆಳಕಿಲ್ಲದೆ ಗಿಡ,ಮರಗಳ ಬದುಕಿಲ್ಲ. ಅವು ನೀಡುವ ಗಾಳಿ ಪ್ರಾಣಿ ಜಗದ ಜೀವಾಧಾರ. ಹುಟ್ಟುವ ಶಿಶು ದೊಡ್ಡದಾಗಿ ತನ್ನ ಕಾಲ ಮೇಲೆ ನಿಲ್ಲುವ ತನಕ ಹೆತ್ತವರ ಅವಲಂಬನೆ, ಸಹಕಾರ ಬೇಕು. ವೃದ್ಧಾಪ್ಯದಲ್ಲಿ ಮಕ್ಕಳ ಆಸರೆ ಹೆತ್ತವರಿಗೆ ಬೇಕು. ಬದುಕಿನುದ್ದಕ್ಕು ಒಬ್ಬರಲ್ಲ ಒಬ್ಬರ ಸಹಾಯ, ಅವಲಂಬನೆಯಿಲ್ಲದೆ ಮುಂದುವರೆಯುವುದು ಕಷ್ಟಸಾಧ್ಯ. ಇದೆಲ್ಲ ಅವಲಂಬನೆಗಳನ್ನು ತಾರ್ಕಿಕವಾಗಿ ಜೋಡಿಸಿರುವ ಅಂಶವೇ ನಂಟು. ಆ ನಂಟಿನ ರೀತಿ ವಿವಿಧ ಸ್ತರದಲ್ಲಿ ವಿಭಿನ್ನ ರೂಪದಲ್ಲಿ ಅಸ್ತಿತ್ವದಲ್ಲಿರುತ್ತದೆ.

ಪರಸ್ಪರ ಪೂರಕವಾಗಿರುವ ನಂಟಿನ ಕಥೆ ಇಷ್ಟೇ ಆಗಿದ್ದರೆ ಚೆನ್ನಿತ್ತೇನೊ? ಆದರೆ ನೈಜದಲ್ಲಿ ನಂಟಿನ ಜತೆಗೆ ಅಂಟಿಕಂಡು ಬರುವುದಂತೆ ತಂಟೆ. ನಂಟೆಂದ ಮೇಲೆ ಅಲ್ಲಿ ಕಂಡೂ ಕಾಣದಂತೆ ಅಂತರ್ಗತವಾದ ವಿಷಯವೆಂದರೆ – ಅಲಿಖಿತ ನಿರೀಕ್ಷೆ. ಆ ನಿರೀಕ್ಷೆಯನುಸಾರ ಎಲ್ಲವೂ ನಡೆಯದಿದ್ದಲ್ಲಿ ಅಸಹನೆ, ಮುನಿಸು, ದ್ವೇಷ, ಸಿಟ್ಟು ಇತ್ಯಾದಿಗಳ ಮೂಲ ಆ ನಂಟಿನ ನಿರೀಕ್ಷೆಗಳಿಂದಲೇ ಬರುವಂತದ್ದು. ಅದು ಉಂಟು ಮಾಡುವ ತಂಟೆ, ತಕರಾರುಗಳನ್ನು ನಂಟಿನ ಜತೆಯೆ ಸಹಿಸಿಕೊಳ್ಳಬೇಕಾಗುತ್ತದೆ. ಜೀವಜಗದ ಆಹಾರ ಸರಪಳಿಯ ನಂಟನ್ನೆ  ಪರಿಗಣಿಸಿದರೆ, ಒಂದು ಮತ್ತೊಂದನ್ನು ಕಬಳಿಸುವ ತಂಟೆಯಿಂದಲೆ ತಮ್ಮನ್ನು ಜೀವಂತವಾಗಿರಿಸಿಕೊಂಡಿರುತ್ತದೆ. ಹುಲ್ಲು ಸಿಗುವ ಬಯಲಿನ ನಂಟು ಬೇಕೆಂದರೆ, ಮೇಲೆ ಬಂದೆರಗುವ ಹುಲಿಯ ಭೀತಿಯನ್ನು, ಕಾಟವನ್ನು ಸಹಿಸಿಕೊಂಡೆ ಬದುಕಿರಬೇಕು ಜಿಂಕೆ, ಕಡವೆಗಳು. ಮಾನವ ಜಗದಲ್ಲಂತೂ ತಮಗಿರುವ ಬುದ್ಧಿಶಕ್ತಿಯ ದುರುಪಯೋಗ ಮಾಡಿಕೊಂಡು ತಂಟೆಯ ಸ್ತರವನ್ನೆ ನೆಮ್ಮದಿಯನ್ನು ಹಾಳುಗೆಡವುವ ಮಟ್ಟಕ್ಕೆ ಏರಿಸಿಬಿಡುವುದು ಅಪರೂಪವಲ್ಲ. ಅಷ್ಟೇಕೆ, ಹತ್ತಿರದ ನಂಟಲ್ಲೆ ತಂಟೆ ತಕರಾರುಗಳಿರುವುದು, ಗೋಜಲು ಗೊಂದಲಗಳಿರುವುದು ನಮ್ಮೆಲ್ಲರ ಅನುಭವವೆ. ಸ್ಥೂಲದಿಂದ ಸೂಕ್ಷ್ಮದತನಕ ಇದೆಲ್ಲವನ್ನು ನೋಡಿದರೆ ಇಡೀ ಬ್ರಹ್ಮ ಭಂಡಾರವೆ (ಸೃಷ್ಟಿಯೆ) ನಂಟು ತಂಟೆಗಳ ಕಲಸಿಟ್ಟ ಮಿಶ್ರಣದಿಂದ ಮಾಡಿದ ಸರಕಿನಂತೆ ಕಾಣುತ್ತದೆ. ಯಾರು ಅದರ ಸಮತೋಲನದ ಲೆಕ್ಕ ಸರಿಯಾಗಿ ಗ್ರಹಿಸುತ್ತಾರೊ ಅವರು ಹೆಚ್ಚು ಸಮರ್ಥವಾಗಿ ನಿಭಾಯಿಸಿಕೊಳ್ಳುತ್ತಾರೆ; ಆಗದವರು ನಿರಂತರ ತೊಳಲಾಡಬೇಕಾಗುತ್ತದೆ.

ಆದರೆ ಯಾರಿಗೆ ಆಗಲಿ, ಯಾವುದಕ್ಕೇ ಆಗಲಿ ಈ ನಂಟು-ತಂಟೆಗಳ ಜತೆ ಹೆಣಗಾಡಿಕೊಂಡು ಬದುಕುವುದಷ್ಟೇ ಸಾಧ್ಯವಿದೆಯೇ ಹೊರತು ನಾನೀ ನಂಟಿನಿಂದ ಅಂಟಿಕೊಳ್ಳದೆ ದೂರವಿರುತ್ತೇನೆ ಎನ್ನಲು ಸಾಧ್ಯವಿಲ್ಲ. ಸರ್ವಸಂಗ ಪರಿತ್ಯಾಗಿಗಳಾದ ಋಷಿಮುನಿಗಳು ಕೂಡ ಸಾಂಸಾರಿಕವಲ್ಲದ, ಆಧ್ಯಾತ್ಮಿಕ ಬಂದದೊಡನೆ ಬೆಸುಗೆ ಹಾಕಿಕೊಳ್ಳಬೇಕಾಗುತ್ತದೆ. ‘ಬಿಟ್ಟೆನೆಂದರೂ ಬಿಡದೀ ಮಾಯೆ’ ಎನ್ನುವ ಹಾಗೆ ನಾವು ಅಂಟಿಕೊಳ್ಳಲಿ ಬಿಡಲಿ ಅದು ಮಾತ್ರ ನಮಗಂಟಿಕೊಂಡೆ ಇರುತ್ತದೆ. ಹೀಗಿರುವಾಗ ಯಾರೂ ಸಹ ತಮಗೀ ಜಗದೊಡನೆ ಯಾವ ನಂಟೂ, ಸಂಬಂಧ ಇಲ್ಲ – ಬೇಕಿಲ್ಲ ಎನ್ನುವ ಅಸಾಧುವಾದ, ಅಸಾಧ್ಯವಾದ ತರ್ಕಕ್ಕೆ ಅಂಟಿಕೊಳ್ಳುವುದು ಮುರ್ಖತನವಾಗುತ್ತದೆ. ಅನಿವಾರ್ಯವನ್ನು ಒಪ್ಪಿಕೊಂಡು, ಅನುಸರಿಸಿಕೊಂಡು ಹೋಗುವುದು ಜಾಣತನವೆನ್ನುವುದು ಇಲ್ಲಿನ ಸರಳ ಇಂಗಿತ.

ಒಂಟಿ ನೀನೊಳಜಗಕೆ ಭಂಟ ಹೊರಜಗಕಾಗಿ |
ಒಂಟಿಸಿಕೊ ಜೀವನವ – ಮಂಕುತಿಮ್ಮ ||

ಇದೆಲ್ಲವನ್ನು ನೋಡಿದಾಗ ‘ನಾನು, ನಾನಾಗಿ ನನ್ನ ಪಾಡಿಗೆ ಇರಲು ಸಾಧ್ಯವೇ ಇಲ್ಲವೆ? ‘ ಎನ್ನುವ ಪ್ರಶ್ನೆ ಮನದಲ್ಲಿ ಮೂಡುವುದು ಸಹಜ. ‘ಯಾರ ಹಂಗೂ ಇಲ್ಲದೆ ನನ್ನಿಷ್ಟದನುಸಾರ ಯಾರಿಗೂ ತೊಂದರೆ ಕೊಡದೆ ಇರಲು ಅಸಾಧ್ಯವೆ ?’ ಎನ್ನುವ ಸಂಶಯ ಬರುವುದೂ ನಿಜವೆ. ಆ ಗೊಂದಲಕ್ಕೆ ಉತ್ತರಿಸುವ ಯತ್ನ ಈ ಮುಂದಿನೆರಡು ಸಾಲುಗಳಲ್ಲಿವೆ. ಹಿಂದಿನ ಸಾಲಲ್ಲಿ ಅನಿವಾರ್ಯದ ಕುರಿತು ವಿವರಿಸಿದ್ದಾಯ್ತು; ಇಲ್ಲಿ ಅದನ್ನು ಛಾತಿಯಿಂದ ನಿಭಾಯಿಸಿಕೊಳ್ಳುವ ಬಗೆಯನ್ನು ಉಲ್ಲೇಖಿಸಲಾಗಿದೆ. ನಾವೇನಾದರು ಒಬ್ಬಂಟಿಯಾಗಿ , ಏಕಾಂತವಾಗಿ ಇರಬೇಕೆಂದರೆ ಅದು ಸಾಧ್ಯವಿರುವುದು ನಮ್ಮಿಳಗಿನ ಜಗದೊಂದಿಗೆ ಮಾತ್ರ ಸಾಧ್ಯ. ಅಂತರಾತ್ಮದ ಜತೆ ಸಖ್ಯ ಮಾಡಿಕೊಂಡು, ಆಧ್ಯಾತ್ಮದ ತಾತ್ವಿಕ ನೆಲೆಗಟ್ಟಿನಲ್ಲಿ ಪಕ್ವತೆ ಪರಿಪಕ್ವತೆಯನ್ನು ರೂಢಿಸಿಕೊಂಡು ನಮ್ಮೊಳಗೆ ನಮ್ಮದೇ ಆದ ಪ್ರಶಾಂತ, ವೈಯಕ್ತಿಕ ಜಗವನ್ನು ಸೃಜಿಸಿಕೊಳ್ಳಬೇಕು. ಆದರೆ ಇದೆಲ್ಲ ಕೇವಲ ಆಂತರ್ಯದಲ್ಲಿ ಮಾತ್ರವಷ್ಟೆ. ನಮಗೇನೇ ಕಷ್ಟ ಎದುರಾಗಲಿ ಅದನ್ನು ಒಬ್ಬಂಟಿಯಾಗಿ ಎದುರಿಸುವ ಮನಃಶಕ್ತಿಯನ್ನು , ಸ್ಥೈರ್ಯವನ್ನು ಒದಗಿಸುವ ಆತ್ಮಶಕ್ತಿ ಇಲ್ಲಿಂದಲೆ ಬರಬೇಕು. ಅದೆಲ್ಲ ಕೋಟಲೆಗಳನ್ನು ನಗುನಗುತ್ತಾ ಏದುರಿಸಿತ್ತಲೇ ಹೊರಗಿನ ಜಗದ ಕಷ್ಟಾನಿಷ್ಠಗಳಿಗೆ ಭುಜಗೊಟ್ಟು ನಿಲ್ಲುವ ಭಂಟರಾಗಬೇಕು. ಪರರಿಂದ ನಮಗೇನು ನಿರೀಕ್ಷಿಸದ, ಪರರ ಕಷ್ಟಕ್ಕೆ ಆಸರೆಯಾಗಿ ನಿಲ್ಲುವ ಬಲವಾದ ಆಳುಗಳಾಗಬೇಕು. ಹೀಗೆ ನಮ್ಮ ಒಳಗಿನ ಮತ್ತು ಹೊರಗಿನ ಜಗದ ಜೊತೆಯಲ್ಲಿ ಸಂತುಲಿತ ಸಂಬಂಧವನ್ನು ಏರ್ಪಡಿಸಿಕೊಂಡು ಈ ಜೀವನ ವ್ಯಾಪಾರವನ್ನು ನಿಭಾಯಿಸಬೇಕು ಎನ್ನುತ್ತಾನೆ ಮಂಕುತಿಮ್ಮ.

ಇಲ್ಲಿ ಕೊನೆಯ ಸಾಲಲ್ಲಿ ಬರುವ ‘ಒಂಟಿಸಿಕೊ ಜೀವನವ’ ಕೂಡ ಗಮನಾರ್ಹ. ನಾವೆಷ್ಟೇ ನಂಟು, ಸಂಬಂಧವೆಂದು ಲಾಗ ಹಾಕಿದರೂ, ಈ ಜಗದ ಅಂತಿಮ ಸತ್ಯವೆಂದರೆ – ‘ಯಾರಿಗೆ ಯಾರೂ ಇಲ್ಲ’ ಅನ್ನುವುದೆ. ಅದಕ್ಕಾಗಿ ಯಾವುದೇ ನಿರೀಕ್ಷೆ ಇಟ್ಟುಕೊಳ್ಳದೆ ನಮ್ಮೊಳಗಿನೊಡನೆ ತಾದಾತ್ಮ್ಯಕತೆಯನ್ನು ಸಾಧಿಸಿಕೊಳ್ಳುತ್ತಲೆ ಒಂದು ಬಗೆಯ ಹೊಂದಾಣಿಕೆ, ನಿರ್ಲಿಪ್ತತೆ, ಆಧ್ಯಾತ್ಮಿಕ ಮತ್ತು ಸೈದ್ಧಾಂತಿಕ ಒಬ್ಬಂಟಿತನವನ್ನು ಸಾಧಿಸಿಕೊಳ್ಳಬೇಕು (ಒಂಟಿಸಿಕೊಳ್ಳುವುದು). ಯಾವಾಗ ನಿರೀಕ್ಷೆಗಳಿಲ್ಲದ ನಿರ್ಲಿಪ್ತತೆ ಸಾಧ್ಯವಾಗುತ್ತದೆಯೊ, ಆಗ ಬದುಕಿನೆಲ್ಲಾ ಗೊಂದಲ, ಗೋಜಲಿನ ಜತೆಯೂ ಆಪ್ತತೆಯಿಂದ ಬದುಕಲು ಸಾಧ್ಯವಾಗುತ್ತದೆ. ನಗುನಗುತ್ತಲೆ ಎಲ್ಲವನ್ನು ಎದುರಿಸಿ ಬದುಕುವ ಕಲೆ ಸಿದ್ದಿಸುತ್ತದೆ.

ಹೀಗೆ ‘ಬರುವಾಗ ಒಂಟಿ ಹೋಗುವಾಗಲೂ ಒಂಟೀ – ಅನ್ನುವುದರ ಜತೆಗೆ ಸಂತೆಯಲ್ಲಿ ಎಲ್ಲರ ಜತೆಯಲಿದ್ದೂ ‘ಒಂಟಿ’ಯಾಗಿ ಬದುಕುವ ಕಲೆ ಅರಿತು ಜೀವನವನ್ನು ಸಾರ್ಥಕಪಡಿಸಿಕೊಳ್ಳಬೇಕೆನ್ನುವುದು ಈ ಕಗ್ಗದ ಒಟ್ಟಾರೆ ತಾತ್ಪರ್ಯ.

# ಕಗ್ಗ_ಟಿಪ್ಪಣಿ
#ಕಗ್ಗಕೊಂದು_ಹಗ್ಗ

Facebook ಕಾಮೆಂಟ್ಸ್

ಲೇಖಕರ ಕುರಿತು

Nagesha MN

ನಾಗೇಶ ಮೈಸೂರು : ಓದಿದ್ದು ಇಂಜಿನಿಯರಿಂಗ್ , ವೃತ್ತಿ - ಬಹುರಾಷ್ಟ್ರೀಯ ಸಂಸ್ಥೆಯೊಂದರಲ್ಲಿ.  ಪ್ರವೃತ್ತಿ - ಪ್ರಾಜೆಕ್ಟ್ ಗಳ ಸಾಂಗತ್ಯದಲ್ಲೆ ಕನ್ನಡದಲ್ಲಿ ಕಥೆ, ಕವನ, ಲೇಖನ, ಹರಟೆ ಮುಂತಾಗಿ ಬರೆಯುವ ಹವ್ಯಾಸ - ಹೆಚ್ಚಾಗಿ 'ಮನದಿಂಗಿತಗಳ ಸ್ವಗತ' ಬ್ಲಾಗಿನ ಅಖಾಡದಲ್ಲಿ . 'ಥಿಯರಿ ಆಫ್ ಕನ್ಸ್ ಟ್ರೈಂಟ್ಸ್' ನೆಚ್ಚಿನ ಸಿದ್ದಾಂತಗಳಲ್ಲೊಂದು. ಮ್ಯಾನೇಜ್ಮೆಂಟ್ ಸಂಬಂಧಿ ವಿಷಯಗಳಲ್ಲಿ ಹೆಚ್ಚು ಆಸಕ್ತಿ. 'ಗುಬ್ಬಣ್ಣ' ಹೆಸರಿನ ಪಾತ್ರ ಸೃಜಿಸಿದ್ದು ಲಘು ಹರಟೆಗಳ ಉದ್ದೇಶಕ್ಕಾಗಿ. ವೈಜ್ಞಾನಿಕ, ಆಧ್ಯಾತ್ಮಿಕ ಮತ್ತು ಸೈದ್ದಾಂತಿಕ ವಿಷಯಗಳಲ್ಲಿ ಆಸ್ಥೆ. ಸದ್ಯದ ಠಿಕಾಣೆ ವಿದೇಶದಲ್ಲಿ. ಮಿಕ್ಕಂತೆ ಸರಳ, ಸಾಧಾರಣ ಕನ್ನಡಿಗ

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!