ಅಂಕಣ

ಸಂಜಯ್ ಬ್ಯಾನರ್ಜಿ ಎಂಬ ಕಾಮೆಂಟರಿ ಮಾಂತ್ರಿಕ!

ಸಾಮಾನ್ಯವಾಗಿ ಕ್ರಿಕೆಟ್‌ ಕಾಮೆಂಟರಿ ಕೊಡುವವರು ಅಂದರೆ ನಮ್ಮ ಮನಸ್ಸಲ್ಲಿ ಕೆಲವು ಹೆಸರುಗಳು ಬರುತ್ತವೆ. ಇಲಿ ಹೋದರೆ ಹುಲಿ ಹೋಯಿತೆಂಬ ಮಟ್ಟಕ್ಕೆ ವರ್ಣಿಸುವ ಟೋನಿ ಗ್ರೆಗ್, ಆಂಗ್ಲ ಭಾಷೆಯ ಮೇಲೆ ಅತ್ಯುತ್ತಮ ಹಿಡಿತ ಹೊಂದಿರೋ ಹರ್ಷ ಬೋಗ್ಲೆ, ತನ್ನ ಶಾಯರಿಗಳಿಂದಲೇ ಜನಮಾನಸದಲ್ಲಿ ನೆಲೆಯಾಗಿರುವ ನವ್ಜೋತ್ ಸಿಧು, ಎವರ್ ಡೈನಾಮಿಕ್ ಮತ್ತು ರೋರಿಂಗ್ ರವಿಶಾಸ್ತ್ರಿ, ಪಾಕಿಸ್ತಾನ ಪಂದ್ಯ ಸೋಲುವ ಹಂತದಲ್ಲೂ ಪಾಕ್ ಆಟಗಾರರನ್ನು ಹೊಗಳಿ ಅಟ್ಟಕ್ಕೇರಿಸುವ ರಮೀಜ್ ರಾಜಾ, ವೆಸ್ಟ್ ಇಂಡೀಸಿನ ಲೆಜೆಂಡ್ ಇಯಾನ್ ಬಿಷಪ್, ಸಂಜಯ್ ಮಾಂಜ್ರೇಕರ್, ಲಕ್ಷ್ಮಣ್ ಶಿವರಾಮಕೃಷ್ಣನ್, ಸುನಿಲ್ ಗವಾಸ್ಕರ್, ಕಪಿಲ್ ದೇವ್, ಆಕಾಶ್ ಚೋಪ್ರಾ, ವಿಜಯ್ ದಹಿಯಾ, ವಿವಿಎಸ್ ಲಕ್ಷ್ಮಣ್, ಗಂಗೂಲಿ, ಸೆಹ್ವಾಗ್, ಮುರಳಿ ಕಾರ್ತಿಕ್ ಹೀಗೆ ಹೇಳುತ್ತಾ ಹೋದರೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ನೀವು ರೇಡಿಯೋದಲ್ಲಿ ಕ್ರಿಕೆಟ್ ಕಾಮೆಂಟರಿ ಕೇಳುತ್ತಾ ಬಂದವರಾಗಿದ್ದರೆ ಈ ವ್ಯಕ್ತಿಯ ಬಗ್ಗೆ ಗೊತ್ತೇ ಇರುತ್ತದೆ. ಎರಡು ದಶಕಗಳಿಗೂ ಹೆಚ್ಚು ಕಾಲ ಆಲ್ ಇಂಡಿಯಾ ರೇಡಿಯೋ ಮುಖಾಂತರ ದೇಶಾದ್ಯಂತ ರೇಡಿಯೋದಲ್ಲಿ ಕ್ರಿಕೆಟ್‌ ಕಾಮೆಂಟರಿ ಕೇಳುವವರ ಕಿವಿಯಲ್ಲಿ ಇನ್ನೂ ಅನುರಣಿಸುತ್ತಿರುವ ಮಿಂಚಿನ ಕಂಠ ಅವರದ್ದು. ಸಂಗೀತದಲ್ಲಿ ಲತಾ ಮಂಗೇಶ್ಕರ್ ಹೇಗೋ ರೇಡಿಯೋ ಕ್ರಿಕೆಟ್ ಕಾಮೆಂಟರಿಯಲ್ಲಿ ಈ ವ್ಯಕ್ತಿ. ಅವರೇ ಸಂಜಯ್ ಬ್ಯಾನರ್ಜಿ.


“ನಮಸ್ಕಾರ್! ಡೆಲ್ಲಿ ಕೀ ಫಿರೋಜ್ ಶಾ ಕೋಟ್ಲಾ ಮೈದಾನ್ ಸೇ ಮೇ ಸಂಜಯ್ ಬ್ಯಾನರ್ಜಿ ಆಪ್ ಸಬ್ ಕೋ ಸ್ವಾಗತ್ ಕರ್ ರಹಾ ಹೂ ಮೇರಾ ಸಾಥೀ ಕಾಮೆಂಟ್ರೇಟರ್ ವಿನೀತ್ ಗರ್ಗ್ ಕೇ ಸಾತ್” ಹೀಗೆ ತನ್ನ ರಫ್ ಆಂಡ್ ಟಫ್ ಸ್ವರದಲ್ಲಿ ಸಂಜಯ್ ಬ್ಯಾನರ್ಜಿ ಹೇಳುತ್ತಿದ್ದಾಗ ರೇಡಿಯೋ ಹಿಡಿದುಕೊಂಡು ಕೂತಿರುತ್ತಿದ್ದ ನಮಗೇನೋ ರೋಮಾಂಚನ.  ಹಲವಾರು ರೋಚಕ ಪಂದ್ಯಗಳನ್ನು ಅಷ್ಟೇ ರೋಚಕವಾಗಿ ಕೇಳುಗರ ಕಣ್ಣಿಗೆ ಕಟ್ಟುವಂತೆ ಕಾಮೆಂಟರಿ ಕೊಡುತ್ತಿದ್ದವರು ಸಂಜಯ್. ಭಾರತ ತಂಡ ಗಂಗೂಲಿ ನಾಯಕತ್ವದಲ್ಲಿ ನಾಟ್ವೆಸ್ಟ್ ಸರಣಿ ಗೆದ್ದದ್ದನ್ನು ಮರೆಯಲಾದೀತೇ? ಮೊಹಮದ್ ಕೈಫ್ ಮತ್ತು ಯುವರಾಜ್ ರೋಚಕ ಹೋರಾಟವನ್ನು ಲಕ್ಷಾಂತರ ಶ್ರೋತೃಗಳಿಗೆ ರಸವತ್ತಾಗಿ ಉಣಬಡಿಸಿದ್ದ ತಂಡದಲ್ಲಿ ಸಂಜಯ್ ಬ್ಯಾನರ್ಜಿ ಕೂಡಾ ಇದ್ದರು. ಸಂಜಯ್ ಕೇಳುಗರನ್ನು ತುದಿಗಾಲಿನ ಮೇಲೆ ನಿಲ್ಲುವಂತೆ ಹಿಂದಿ ಕಾಮೆಂಟರಿ ಕೊಡುತ್ತಿದ್ದದ್ದು ಸುಳ್ಳಲ್ಲ.  ನಿಜ ಹೇಳಬೇಕೆಂದರೆ ಹಿಂದಿ ಕಲಿಯುವ ಹಂಬಲ ಶುರುವಾಗಿದ್ದು ಸಂಜಯ್ ಬ್ಯಾನರ್ಜಿ ನಿರರ್ಗಳವಾಗಿ ಹಿಂದಿ ಕಾಮೆಂಟರಿ ಕೊಡುವುದನ್ನು ನೋಡಿ!

ಮಧ್ಯಪ್ರದೇಶದಲ್ಲಿ ಜನಿಸಿದ ಸಂಜಯ್ ಬ್ಯಾನರ್ಜಿಯ ತಂದೆ ಐಎಎಸ್ ಅಧಿಕಾರಿಯಾಗಿದ್ದರು. ಐಎಎಸ್ ಅಧಿಕಾರಿಯಾಗಿದ್ದರಿಂದ ತನ್ನ ಮಗನೂ ಅದೇ ದಾರಿಯಲ್ಲಿ ಹೋಗಬೇಕೆಂಬ ಇಚ್ಛೆಯನ್ನು ಸಂಜಯ್ ತಂದೆ ಹೊಂದಿದ್ದರು. ಆದರೆ ಸಂಜಯ್’ಗೆ ಬಾಲ್ಯದಿಂದಲೇ ಕಾಮೆಂಟ್ರಿ ಹೇಳೋ ಹುಚ್ಚು. ಸಣ್ಣವನಿದ್ದಾಗ ಕ್ರಿಕೆಟ್ ಆಡೋ ಸಂದರ್ಭದಲ್ಲಿ ತನ್ನ ಬ್ಯಾಟಿಂಗ್ ಆದ ಮೇಲೆ ಇನ್ನುಳಿದ ಸಮಯದಲ್ಲಿ ಕಾಮೆಂಟ್ರಿ ಹೇಳುತ್ತಿದ್ದರಂತೆ. ಆಸ್ಟ್ರೇಲಿಯಾದಲ್ಲಿ ಭಾರತದ ಪಂದ್ಯಗಳಿದ್ದಾಗ ಬೆಳ್ಳಂಬೆಳಗ್ಗೆ ಎದ್ದು ರೇಡಿಯೋ ಮುಂದೆ ಕುಳಿತು ಕಾಮೆಂಟರಿ ಕೇಳುತ್ತಿದ್ದರು. ಜಬಲ್ಪುರ್ ವಿಶ್ವವಿದ್ಯಾಲಯದಲ್ಲಿ ಎಂ.ಎ. ಮಾಡಿ, ನಂತರ ಭಾರತೀಯ ವಿದ್ಯಾ ಭವನ ಮುಂಬೈನಲ್ಲಿ ಡಿಪ್ಲೋಮಾ ಮಾಡಿ, ಪತ್ರಿಕೋದ್ಯಮ ಪದವಿಯನ್ನೂ ಪಡೆದು ಫ್ಯಾಕ್ಟರಿಯೊಂದರಲ್ಲಿ ಕೆಲಸಕ್ಕೆ ಸೇರಿದ ಸಂಜಯ್’ಗೆ ಕಾಮೆಂಟ್‌ರೇಟರ್ ಆಗಬೇಕು ಅನ್ನೋ ಹಂಬಲ ಇನ್ನೂ ದೂರವಾಗಿರಲಿಲ್ಲ. ಪರೀಕ್ಷೆ ಪಾಸು ಮಾಡಿ 1985ರಲ್ಲಿ ಆಕಾಶವಾಣಿ ರಾಂಚಿಗೆ ಸೇರ್ಪಡೆಯಾಗುತ್ತಾರೆ ಸಂಜಯ್ ಬ್ಯಾನರ್ಜಿ.

ಆ ಸಂದರ್ಭದಲ್ಲಿ ಭಾರತ ಮತ್ತು ನ್ಯೂಜೆಲೆಂಡ್ ಮಹಿಳಾ ತಂಡದ ನಡುವೆ ಪಂದ್ಯವೊಂದು ಜಾರ್ಖಂಡಿನಲ್ಲಿ ನಡೆಯುತ್ತಿತ್ತು. ಆಕಾಶವಾಣಿಯ ರಾಂಚಿ ಕೇಂದ್ರದ ನಿರ್ದೇಶಕರು ಕಾಮೆಂಟರಿ ಮಾಡಬಲ್ಲಿರಾ ಎಂದು ಸಂಜಯ್ ಬಳಿ ಕೇಳಿದರು. ಮೊದಲೇ ಕಾಮೆಂಟರಿ ಮಾಡಲು ಹಾತೊರೆಯುತ್ತಿದ್ದ ಸಂಜಯ್ ಸಿಕ್ಕಿದ ಅವಕಾಶವನ್ನು ಎರಡೂ ಕೈಯಲ್ಲಿ ಬಾಚಿಕೊಂಡರಲ್ಲದೇ ಕೇಂದ್ರದ ನಿರ್ದೇಶಕರ ಮೆಚ್ಚುಗೆಗೆ ಪಾತ್ರರಾಗುತ್ತಾರೆ. ನಂತರ ಭಾರತದ ರೇಡಿಯೋ ಕ್ರಿಕೆಟ್ ಕಾಮೆಂಟರಿ ಪ್ಯಾನೆಲ್’ಗೆ ಆಯ್ಕೆಯಾಗುತ್ತಾರೆ. ಭಾರತದ ಪ್ರಮುಖ ರೇಡಿಯೋ ಕಾಮೆಂಟ್‌ರೇಟರ್ ಒಬ್ಬರಾಗುತ್ತಾರೆ. ಭಾರತ ಪುರುಷರ ತಂಡದ ಪಂದ್ಯಗಳಿಗೆ ಸಂಜಯ್ ಕಾಮೆಂಟರಿ ಹೇಳಲು ಶುರು ಮಾಡಿದ್ದು 1993ರಲ್ಲಿ. ಭಾರತ ಮತ್ತು ಇಂಗ್ಲೆಂಡ್ ನಡುವೆ ಜೆಮ್ಶೆಡ್ಪುರದಲ್ಲಿ ನಡೆದ ಪಂದ್ಯದಲ್ಲಿ ಹರ್ಷ ಬೋಗ್ಲೆ ಜೊತೆ ಕಾಮೆಂಟರಿ ಆರಂಭಿಸಿದ ಸಂಜಯ್ ಬ್ಯಾನರ್ಜಿ ಆಮೇಲೆ ಹಿಂತಿರುಗಿ ನೋಡಲಿಲ್ಲ. ಟಿವಿ ಇಲ್ಲದ ಸಮಯದಲ್ಲಿ ಹಳ್ಳಿ ಪ್ರದೇಶಗಳಲ್ಲಿ ಕ್ರಿಕೆಟ್ ಜನಪ್ರಿಯಗೊಳಿಸಿದ್ದು ರೇಡಿಯೋವೇ ಮತ್ತು ಬಹುಮುಖ್ಯವಾಗಿ ಸಂಜಯ್ ಬ್ಯಾನರ್ಜಿಯಂತವರ  ಕಾಮೆಂಟರಿ ಎಂದರೆ ತಪ್ಪಾಗಲಾರದು.

2003ರ ವಿಶ್ವಕಪ್ ಕಾಮೆಂಟರಿ ಮಾಡಲು ದಕ್ಷಿಣ ಆಫ್ರಿಕಾಗೆ ಆಕಾಶವಾಣಿ ತಂಡದ ಜೊತೆ ತೆರಳಿದ್ದರು. ಮೊದಲ ಪಂದ್ಯದ ಸಮಯದಲ್ಲಿ ಆಕಾಶವಾಣಿ ತಂಡಕ್ಕೆ ಸಿದ್ಧತೆ ಮಾಡಲು ಸಮಯಾವಕಾಶದ ಕೊರತೆಯಿಂದ ಕಾಮೆಂಟರಿ ಮಾಡಲು ಕ್ಯಾಬಿನ್ ಸಿಗದೇ ಇದ್ದಾಗ ಕೊರೆಯುತ್ತಿದ್ದ ಚಳಿಯಲ್ಲಿ ಮೆಟ್ಟಿಲುಗಳಲ್ಲಿ ಕುಳಿತು ಕಾಮೆಂಟರಿ ಮಾಡಿದ್ದರಂತೆ. ತನ್ನ ವೃತ್ತಿ ಬದುಕಿನ ಆರಂಭದ ದಿನಗಳಲ್ಲಿ ಹರ್ಷ ಭೋಗ್ಲೆ ಮಾಡಿದ ಸಹಾಯವನ್ನು ಸಂಜಯ್ ಯಾವತ್ತೂ ನೆನಪಿಸುತ್ತಾರೆ. ವಿನೀತ್ ಗರ್ಗ್, ಮಿಲಿಂದ್ ಟಿಪ್ನಿಸ್, ಸುರೇಶ್ ಸರಯ್ಯಾ ಮುಂತಾದ ಘಟಾನುಗಟಿಗಳ ಜೊತೆ ಜೊತೆಗೆ ಕಾಮೆಂಟರಿ ಮಾಡಿರುವ ಅನುಭವ ಸಂಜಯ್’ಗಿದೆ. ಸಂಜಯ್ ಪ್ರಕಾರ ಅಂಪೈರ್ಗಳ ರೀತಿ ಕಾಮೆಂಟ್ರೇಟರ್ಗಳೂ ಯಾವುದೇ ತಂಡದ ಪರವಾಗಿರಬಾರದು‌. ಆದರೂ ಭಾರತ ತಂಡ ಗೆದ್ದಾಗ ಕಾಮೆಂಟರಿ ಮಾಡೋವಾಗ ಸಿಗುತ್ತಿದ್ದ ಮಜಾನೇ ಬೇರೆಯದಂತೆ. ಕ್ರಿಕೆಟ್, ಹಾಕಿ, ಕಬಡ್ಡಿ, ಫುಟ್‌ಬಾಲ್ ಹೀಗೆ ಎಲ್ಲಾ ಕ್ರೀಡಾ ಮಾದರಿಗಳಲ್ಲಿ ಕಾಮೆಂಟರಿ ಮಾಡಿದ ಏಕೈಕ ವ್ಯಕ್ತಿ ಪ್ರಾಯಶ ಸಂಜಯ್ ಬ್ಯಾನರ್ಜಿ ಒಬ್ಬರೇ ಇರಬೇಕು. ಮಾಡಿದ್ದು ಜಾಸ್ತಿ ಕ್ರಿಕೆಟ್ ಕಾಮೆಂಟರಿ ಆದರೂ ಸಂಜಯ್’ಗೆ ಹಾಕಿ ಕಾಮೆಂಟರಿ ಹೇಳುವುದೆಂದರೆ ಇಷ್ಟವಂತೆ. ಹಿಂದಿ ಭಾಷೆಯ ಮೇಲಿನ ಹಿಡಿತ, ಸ್ಪಷ್ಟ ಉಚ್ಚಾರಣೆ, ರಫ್ ಆಂಡ್ ಟಫ್ ಸ್ವರ, ಬೇಕಾದ ರೀತಿಯಲ್ಲಿ ವಾಯ್ಸ್ ಮಾಡ್ಯುಲೇಶನ್ ಸಂಜಯ್ ಬ್ಯಾನರ್ಜಿಯ ಪ್ಲಸ್ ಪಾಯಿಂಟ್.

ಟೀವಿಯಲ್ಲಿ ಈಗ ಬರೋ ಹಿಂದಿ ಕಾಮೆಂಟರಿಗೂ ರೇಡಿಯೋ ಕಾಮೆಂಟರಿಗೂ ಅಜಗಜಾಂತರ ವ್ಯತ್ಯಾಸವಿತ್ತು. ರೇಡಿಯೋ ಕಾಮೆಂಟರಿ ಅಂದರೆ ಅಷ್ಟು ಸುಲಭವಲ್ಲ. ಎಲ್ಲೋ ದೂರದ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯವನ್ನು ಇನ್ನೆಲ್ಲೋ ಕುಳಿತು ರೇಡಿಯೋ ಮೂಲಕ ಕೇಳುವ ಜನರಿಗೆ ಕಣ್ಣಿಗೆ ಕಟ್ಟುವಂತೆ ಪಂದ್ಯದ ಇಂಚಿಂಚೂ ಮಾಹಿತಿಯನ್ನು ಕೊಡುವುದು ಬಹಳ ಕಷ್ಟ. ಟಿವಿ ಕಾಮೆಂಟರಿಯಾದರೆ ಜನರಿಗೆ ಕ್ರಿಕೆಟ್ ಪಂದ್ಯದ ದೃಶ್ಯವೂ ಕಾಣುವುದರಿಂದ ಎಲ್ಲವನ್ನೂ ಹೇಳುವ ಅಗತ್ಯವಿಲ್ಲ. ಆದರೆ ರೇಡಿಯೋ ಕಾಮೆಂಟರಿಯಲ್ಲಿ ಹಾಗಲ್ಲ. ವಿಕೆಟ್ ಬಿದ್ದರೆ ಬಾಲ್ ಎಷ್ಟು ವೇಗದಲ್ಲಿ ಎಸೆಯಲಾಗಿತ್ತು, ಬ್ಯಾಟ್ಸ್‌ಮನ್ ಆ ಬಾಲನ್ನು ಯಾವ ರೀತಿ ಎದುರಿಸಿದ, ಯಾವ ಕ್ಷೇತ್ರಕ್ಕೆ ಹೊಡೆದ, ಅಲ್ಲಿ ಇದ್ದ ಫೀಲ್ಡರ್ ಯಾರು, ಕ್ಯಾಚ್ ಹಿಡಿದಿದ್ದರೆ ರನ್ನಿಂಗ್ ಕ್ಯಾಚೋ ಅಥವಾ ಡೈವ್ ಹೊಡೆದು ಹಿಡಿದ ಕ್ಯಾಚೋ, ಅದಲ್ಲದೇ ಪ್ರತೀ ಆಟಗಾರನ ದಾಖಲೆಗಳು ಹೀಗೆ ಹತ್ತು ಹಲವು ಸಣ್ಣ ಸಣ್ಣ ವಿಷಯಗಳನ್ನು ಕೇಳುಗರಿಗೆ ವಿವರಿಸಬೇಕಾಗುತ್ತದೆ. ಈ ಎಲ್ಲಾ ವಿಷಯಗಳೂ ಸಂಜಯ್ ಬ್ಯಾನರ್ಜಿಗೆ ಕರತಲಾಮಲಕ. ಇಂದು ಕ್ರಿಕೆಟ್‌ ನೋಡೋ ವಿಧಾನವೇ ಬದಲಾಗಿದೆ. ರೇಡಿಯೋ ಬಿಟ್ಟು ಟಿವಿ ಮೂಲಕ ಕ್ರಿಕೆಟ್‌ ನೋಡೋರೂ ಕಮ್ಮಿಯಾಗಿದ್ದಾರೆ. ಅಂತರ್ಜಾಲ ಮೂಲಕ ಸ್ಕೋರ್ ನೋಡೋರೇ ಜಾಸ್ತಿ. ಇಲ್ಲವೋ ಲೈವ್ ಆಗಿ ಅಂತರ್ಜಾಲದಲ್ಲಿ ಕ್ರಿಕೆಟ್ ನೋಡುತ್ತಾರೆ. ಒಮ್ಮೊಮ್ಮೆ ಹಿಂದಿ ಕಾಮೆಂಟರಿ ಬೋರು ಅನ್ನಿಸುತ್ತದೆ ಅಲ್ಲ ಆಗ ಸಂಜಯ್ ಬ್ಯಾನರ್ಜಿ ನೆನಪಾಗುತ್ತಾರೆ. ಸದ್ಯ ಪ್ರೋ ಕಬಡ್ಡಿ ಲೀಗಿನಲ್ಲಿ ಕೆಲವು ಪಂದ್ಯಗಳಲ್ಲಿ ಸಂಜಯ್ ಬ್ಯಾನರ್ಜಿ ಕಾಮೆಂಟರಿ ಹೇಳುವುದನ್ನು ನೋಡಿದ ಮೇಲೆ ಇಷ್ಟೆಲ್ಲಾ ಬರೆಯಬೇಕಾಯಿತು. ನಿಜ. ಅವರೊಬ್ಬ ಕಾಮೆಂಟರಿ ಮಾಂತ್ರಿಕನೇ!

Facebook ಕಾಮೆಂಟ್ಸ್

ಲೇಖಕರ ಕುರಿತು

Sudeep Bannur

Working as an Engineer, Loves being a Writer. Finds interest in Politics, Cricket, Acting, Mimicry, Cooking, Travelling.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!