ಅಂಕಣ

‘ಮೌಸ್’ಕ ವಾಹನ ಮಹಾತ್ಮೆ

ಎಲ್ಲಾ ವರಿಗಳನ್ನೂ ಕಳೆಯುವ ಗಣನಾಥ ಮಾನವರನ್ನು ಆವರಿಸಿಕೊಂಡಿರುವ ಪರಿ ಅಗಣಿತ. ಗುಡಾಣದಂಥ ಉದರವನ್ನುಳ್ಳ ಈತ ಭಕ್ತ ಗಡಣದ ವಿಘ್ನಗಳನ್ನು ನಿವಾರಿಸುವಲ್ಲಿ ಉದಾರಿ ಎಂಬ ನಂಬಿಕೆಯಿದೆ. ಹಾಗಾಗಿ ಬರವೇ ಬರಲಿ, ದರ ಗಗನನಕ್ಕೇರಲಿ ಚೌತಿಯ ಸಂಭ್ರಮಕ್ಕೆ ಮಾತ್ರ ಚ್ಯುತಿಯಿಲ್ಲ. ಬಡವ-ಬಲ್ಲಿದರೆನ್ನದೆ, ಹಿರಿಯರು ಕಿರಿಯರು ಎಂಬ ಬೇಧ ಭಾವವಿಲ್ಲದೆ ಎಲ್ಲೆಡೆಯಲ್ಲೂ, ಎಲ್ಲರೂ ಆಚರಿಸುವ ಹಬ್ಬವೆಂದರೆ ಗಣೇಶ ಚತುರ್ಥಿ. ಅಷ್ಟೇ ಏಕೆ, ಈ ಹಬ್ಬಕ್ಕೆ ಮಹತ್ವದ ಐತಿಹಾಸಿಕ ಹಿನ್ನೆಲೆಯೂ ಐತಿ.

ಸೂಕ್ತವಾಗಲಿ, ಬಿಡಲಿ ನಮ್ಮಲ್ಲಿ ಬಗೆಬಗೆಯ ಬಿರುದುಗಳನ್ನು ಸಿಕ್ಕಿಸಿಕೊಂಡು ಬೀಗುವವರಿಗೆ ಕಡಿಮೆಯಿಲ್ಲ. ಕೆಲವರ ಸಣ್ಣತನದಿಂದಾಗಿ ಬಿರುದಿನ ಹಿರಿಮೆಯೇ ಬಿರಿಯುವುದಿದೆ. ಎಂದೆದೂ ಮಣ್ಣ ಮೇಲೆ ಕಾಲಿಡದವರೂ “ಮಣ್ಣಿನ ಮಗ” ಎಂದೆಲ್ಲಾ ಕರೆಸಿಕೊಳ್ಳುವುದಿದೆ. ಅದಿರಲಿ! ಆದರೆ ನಿಜವಾದ ಮಣ್ಣಿನ ಮಗನೆಂದರೆ ಅದು ಗಣಪತಿ. ಪುರಾಣದ ಹಿನ್ನೆಲೆಯಲ್ಲಿ ಆತ ಹುಟ್ಟಿದ್ದೂ ಮೈಯ ಮಣ್ಣಿನಿಂದ, ಈಗ ವರುಷ ವರುಷವೂ ಪೂಜಿಸಲ್ಪಡುವ ವಿಗ್ರಹಗಳೂ ಮೈದಳೆಯುವುದೂ ಮಣ್ಣಿನಿಂದಲೇ!

ಹಾಗೆ ನೋಡಿದರೆ ಸರಳತೆಯ ವಿಷಯದಲ್ಲಿ ವಿಘ್ನೇಶ್ವರನನ್ನು ಮೀರಿಸುವವರು ಯಾರಿದ್ದಾರೆ ಹೇಳಿ. ಜನರು ನಖಶಿಖಾಂತ ದ್ವೇಷಿಸುವ ಮೂಷಿಕವೇ ವಾಹನ, ಉರಗವೇ ಉದರಪಟ್ಟಿ, ಗರಿಕೆಯ ಎಳೆಗೆ ಮೀರಿದ ಹರಕೆಯಿಲ್ಲ, ಮಣ್ಣಿನ ನಾಲ್ಕು ಮುದ್ದೆಯಿದ್ದರೆ ಸುಲಭವಾಗಿ ರೂಪು ಕೊಡಬಹುದಾದ ದೇಹರಚನೆ, ನದಿ ಕೆರೆಗಳಷ್ಟೇ ಅಲ್ಲಾ ಒಂದು ಸಣ್ಣ ಬಕೆಟ್ ನೀರಲ್ಲೂ ಮುಳುಗಿ ಲೀನವಾಗುವಾತ. ರಾಜಕಾರಣಿಗಳು ತಮ್ಮ  ಅಧಿಕಾರದ ಪಟ್ಟ ಬದಲಾಗುತ್ತಾಹೋದಂತೆ  ತಮ್ಮನ್ನು ಹೊತ್ತೊಯ್ಯುವ ವಾಹನವನ್ನು ಪಟ್ಟು ಹಿಡಿದು ಬದಲಾಯಿಸಿಕೊಳ್ಳುವವರ ನಡುವೆ, ಧಡೂತಿ ದೇಹ ಹೊಂದಿದ್ದರೂ ಅದೇ ಸಣ್ಣ ಇಲಿಯನ್ನೇ ಇನ್ನೂ ವಾಹನವನ್ನಾಗಿ ಹೊಂದಿದ್ದಾನೆಂದರೆ, ಸರಳತೆಗೆ ಬೇರೆ ಉದಾಹರಣೆ ಬೇಕಿಲ್ಲ ಬಿಡಿ.

ವಿಘ್ನನಿವಾರಕನಷ್ಟೇ ಅಲ್ಲಾ, ಗಣಪ ವಿಘ್ನಸಂತೋಷಿಗಳ ದ್ವೇಷಿ ಕೂಡಾ! ಆದ್ದರಿಂದಲೇ ಅಲ್ಲವೇ ತಾನು ಉರುಳಿ ಬಿದ್ದು ಉದರ ಹರಿದುಕೊಂಡಾಗ ಅಲ್ಲೇ ಹರಿದಾಡುತ್ತಿದ್ದ ಹಾವನ್ನೇ ಬಿಗಿದುಕೊಳ್ಳುವ ಮೂಲಕ ಸ್ವಯಂಚಿಕಿತ್ಸೆಗಿಳಿದವನೆಡೆಗೆ ಕುಹಕದ ನಗೆಬೀರಿದ್ದಕ್ಕೆ ಚಂದ್ರನಿಗೇ ಶಾಪ ಕೊಟ್ಟಿದ್ದು.

ತಿಲಕರು ಎಲ್ಲರನ್ನೂ ಒಗ್ಗೂಡಿಸಿ, ಒಗ್ಗಟ್ಟು ಮೂಡಿಸಲು ಈ ಹಬ್ಬದ ಆಚರಣೆಯನ್ನು ಪ್ರಾರಂಭಿಸಿದ್ದರಂತೆ. ಆದರೆ ಈಗ ಅದರಲ್ಲಿ ಏನೇನೊ ಬದಲಾವಣೆಗಳಾಗಿ ಒಗ್ಗಟ್ಟು ಕಾಣಬೇಕಾದಲ್ಲಿ ಆಚರಣೆಯ ಕಾರಣಕ್ಕೇ ಬಿಕ್ಕಟ್ಟುಗಳು, ಪರಸ್ಪರ ಟೀಕೆ ಟಿಪ್ಪಣಿಯ ಕುಟುಕು, ಕಟಕಿಗಳು ಗೋಚರಿಸುತ್ತಿವೆ. ಎಲ್ಲರೂ ಒಂದಾಗಿ ಆಚರಿಸುವುದರ ಬದಲಾಗಿ, ಬೀದಿಗೊಂದು ರಸ್ತೆಗೊಂದರಂತೆ ಗಣಪತಿಯನ್ನು ಕೂರಿಸಲಾಗುತ್ತಿದೆ.

ಆಧುನಿಕತೆಯ ಅತಿರೇಕದಲ್ಲಿ ಆಚರಣೆಯ ವೈಖರಿಗಳು ಬದಲಾಗಿದ್ದು ಖುದ್ದು ಗಣೇಶನಿಗೂ ಕಿರಿ ಕಿರಿ ಉಂಟುಮಾಡುವಂತಿದೆ. ಅಬ್ಬರದ ಹಾಡು, ಅಶ್ಲೀಲ ನೃತ್ಯಗಳಿಗೆ ಈತ ಮೂಕಪ್ರೇಕ್ಷಕ. ಅಂದು ತನ್ನ ಗತಿಯನ್ನು ನೋಡಿ ನಕ್ಕಿದ್ದಕ್ಕೇ ಚಂದಿರನಿಗೆ ಶಾಪವಿಕ್ಕಿ, ಚೌತಿಯ ದಿನದಂದು ಮನುಷ್ಯರೆಲ್ಲ ತಲೆತಗ್ಗಿಸಿಕೊಂಡೇ ತಿರುಗಾಡುವಂತೆ ಮಾಡಿದ ಕೋಪಿಷ್ಟನಿಗೆ ಆಚರಣೆಯ ಹೆಸರಲ್ಲಿ ನಡೆಯುವ ಹುಚ್ಚಾಟಗಳೂ ಕ್ರುದ್ಧಗೊಳಿಸಬಹುದು. ‘ಏನು ಮಾಡುವುದು ನನ್ನ ಭಕ್ತರಲ್ಲವೇ?’ ಎಂದು ವಿನಾಯಕನೂ ತುಸು ವಿನಾಯತಿ  ತೋರುತ್ತಿರಬಹುದು.

ಪಾಪ್ ಮ್ಯೂಸಿಕ್, ಅಪಾರ್ಥಗಳ ಹೊಲಸು ಸಿನಿಮಾ ಗೀತೆಗಳ ಕಿವಿಗಡಚಿಕ್ಕುವ ಶಬ್ಧವನ್ನು ಕೇಳಿಸಿಕೊಂಡೂ ಸಹಿಸಿಕೊಂಡಿರಲೂ ಒಂದು ಕಾರಣವಿದೆ. ಅದೆಂದರೆ –

“ಸದ್ದು ಗದ್ದಲಗಳ ಪ್ರಲಾಪ

ಆದರೂ, ಬೆಚ್ಚಿಬೀಳ ಗಣಪ

ಇಗೋ ಇಲ್ಲಿದೆ ಅದಕ್ಕೆ ಕಾರಣ,

ಅವನದ್ದು ಚಾಮರ ಕರ್ಣ!”

ಇನ್ನು ಕೆಲವರು ಗಣೇಶೋತ್ಸವಕ್ಕಾಗಿ ದೇಣಿಗೆ ಕೇಳುತ್ತಾರೋ ಅಥವಾ ದೇಣಿಗೆಗೋಸ್ಕರ ಗಣೇಶನನ್ನು ಕೂರಿಸುತ್ತಾರೋ ಎಂಬುವುದೇ ಸಂಶಯ.

ರಾತ್ರಿಯಾಗುತ್ತಲೇ, ಗಣೇಶನನ್ನು ಪೆಂಡಾಲಿನೊಳಗೆ ಏಕಾಂಗಿಯಾಗಿ ಬಿಟ್ಟು, ಆಯೋಜಕರೆಲ್ಲಾ ಮನೆ ಸೇರಿ ನಿದ್ದೆಗೆ ಜಾರುತ್ತಾರೆ. ಗಾಳಿ, ಮಳೆ, ಚಳಿಯೆನ್ನದೇ ರಾತ್ರಿಯೆಲ್ಲಾ ಜಾಗರಣೆ ಕೂರುವ ಗಣೇಶ ಆ ಹೊತ್ತಲ್ಲಿ ತನ್ನ ವಾಹನದ ಸಂತತಿಯವರ ಜೊತೆ ನೆಮ್ಮದಿಯಿಂದ ಲೋಕಾಭಿರಾಮ ಹರಟುತ್ತಾ ಆರಾಮವಾಗಿರಬಹುದು.
ಓವರ್ ಡೋಸ್: ಗಣೇಶ ಚತುರ್ಥಿಗೂ ರಜೆಯಿಲ್ಲದೆ ದುಡಿಯುವ ಟೆಕ್ಕಿಗಳ ಪಾಲಿಗೆ ‘ಮೌಸೇ’ ಇಲಿ, ಕಂಪ್ಯೂಟರೇ ಗಣಪತಿ.

Facebook ಕಾಮೆಂಟ್ಸ್

ಲೇಖಕರ ಕುರಿತು

Sandesh H Naik

ಉಡುಪಿ ಜಿಲ್ಲೆ, ಕುಂದಾಪುರ ತಾಲೂಕಿನ ಹಕ್ಲಾಡಿ ಹುಟ್ಟೂರು. ಪ್ರಸ್ತುತ ಶಿಕ್ಷಕರಾಗಿ ಕಾರ್ಯನಿರ್ವಹಣೆ.  ಬರವಣಿಗೆ ಮೆಚ್ಚಿನ ಪ್ರವೃತ್ತಿಗಳಲ್ಲೊಂದು.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!