Featured ಅಂಕಣ

‘ನಿಮ್ಮ ಬದುಕಿಗೆ ನೀವೇ ಲೇಖಕರು ..’

‘ನಿಮ್ಮ ಬದುಕಿಗೆ ನೀವೇ ಲೇಖಕರು. ಕಥೆ ಇಷ್ಟವಾಗದಿದ್ದರೆ ಬದಲಾಯಿಸಿ’ ಇಂಗ್ಲಿಷಿನಲ್ಲಿ ಹೀಗೊಂದು ಮಾತಿದೆ. ನಾವು ಸಾಮಾನ್ಯವಾಗಿ ಯಾರೋ ಬರೆದ ಕಥೆಯಲ್ಲಿ ಬರುವ ಪುಟ್ಟ ಪಾತ್ರ ನಮ್ಮದು ಅಂತ ಅಂದುಕೊಂಡುಬಿಟ್ಟಿರುತ್ತೀವಿ. ಆದರೆ ನಿಜಕ್ಕೂ ನಾವು ಯಾರೋ ಬರೆದ ಕಥೆಯಲ್ಲಿದ್ದೀವಾ ಅಥವಾ ನಮ್ಮ ಕಥೆಯನ್ನ ನಾವು ಬದಲಾಯಿಸಿಕೊಳ್ಳಬಲ್ಲೆವಾ..?!

ಒಬ್ಬ ಪುಟ್ಟ ಹುಡುಗನಿದ್ದ. ಆತನಿಗೆ ಸ್ಟಾರ್’ವಾರ್ ಎಂದರೆ ಬಹಳ ಇಷ್ಟವಾಗುತ್ತಿತ್ತು. ‘ಒಬ್ಬ ಸಾಮಾನ್ಯ ಹುಡುಗ ಮುಂದೊಂದು ದಿನ ಒಬ್ಬ ಅಪ್ರತಿಮ ಸಾಹಸಿಯಾಗುತ್ತಾನೆ. ಆತನ ಬದುಕಲ್ಲಿ ಒಂದು ಬಹುದೊಡ್ಡ ತಿರುವು ಬಂದು ಒಬ್ಬ ಬಹುಮುಖ್ಯ ಪಾತ್ರವಾಗಿಬಿಡುತ್ತಾನೆ’ ಎಂಬ ಕಾರಣಕ್ಕೆ ಆತನಿಗೆ ಸ್ಟಾರ್’ವಾರ್ ಇಷ್ಟವಾಗುತ್ತಿತ್ತು. ತನ್ನ ಬದುಕು ಕೂಡ ಒಂದು ದಿನ ಇದೇ ರೀತಿ ಬದಲಾಗುತ್ತದೆ ಎಂದೆಣಿಸಿದ್ದ. ಆತ ದೊಡ್ಡವನಾದಂತೆಲ್ಲ ಅಂತಹ ಮಹಾನ್ ಬದಲಾವಣೆಯೊಂದು ಬರುತ್ತದೆ ಎಂದು ಕಾಯುತ್ತಲೇ ಹೋದ. ಆತ ತನ್ನ ಶಿಕ್ಷಣ ಪೂರೈಸಿ ಇಂಜಿನಿಯರ್ ಆದ. ನೌಕರಿಯೂ ಸಿಕ್ಕಿತು. ಆದರೆ ಅವನಂದುಕೊಂಡ ಬದಲಾವಣೆ, ಆ ಸಾಹಸಮಯ ಬದುಕು ಮಾತ್ರ ಬರಲೇ ಇಲ್ಲ.  ನೌಕರಿ ಮಾಡುತ್ತಾ ನಾಲ್ಕೈದು ವರ್ಷಗಳೇ ಕಳೆದುಹೋದವು. ಇವತ್ತು, ನಾಳೆ ಎಂದು ಕಾಯುತ್ತಾ ಕೂತವನಿಗೆ ಮಾತ್ರ ನಿರಾಸೆಯಾಗುತ್ತಿತ್ತು. ಆದರೆ ನಿಧಾನವಾಗಿ ಆತನಿಗೆ ಅರ್ಥವಾಗತೊಡಗಿತ್ತು, ಇಷ್ಟು ದಿನ ಕಾಯುವ ಬದಲು, ತನಗೆ ಹೇಗೆ ಬೇಕೋ ಅಥವಾ ತಾನು ಏನಾಗಬೇಕು ಎಂದು ಅಂದುಕೊಂಡಿದ್ದೆನೋ ಅ ನಿಟ್ಟಿನಲ್ಲಿ ಒಂದು ಹೆಜ್ಜೆಯೂ ಇಡಲಿಲ್ಲವಲ್ಲ, ಎಲ್ಲ ತಾನಾಗಿಯೇ ಬರುವುದೆಂದು ಎಷ್ಟು ಸಮಯ ವ್ಯರ್ಥ ಮಾಡಿದೆನಲ್ಲ ಎಂದು. ಈ ವಿಷಯ ಅರ್ಥವಾದ ದಿನವೇ ಆತ ತನ್ನ ಬದುಕನ್ನ ಬದಲಾಯಿಸಲು ಹೆಜ್ಜೆ ಇಟ್ಟ. ತನ್ನ ಯಾಂತ್ರಿಕ ಬದುಕಿನಿಂದ ಹೊರಬರುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟ. ಈಗ ಆತ ‘ದ ಲಿಟಲ್ ಯೆಸ್’ ಎಂಬ ಕೋಚಿಂಗ್ ಸರ್ವಿಸ್ ಆರಂಭಿಸಿದ್ದು ತಾನು ಬದುಕಿನಿಂದ ಕಲಿತದ್ದನ್ನ, ಯಾಂತ್ರಿಕ ಬದುಕಲ್ಲಿ ಸಿಕ್ಕಿಹಾಕಿಕೊಂಡಿರುವವರಿಗೆ, ಹೇಗೆ ತಮ್ಮ ನಿತ್ಯದ ಬದುಕನ್ನ ಸರಳವಾಗಿಸಿಕೊಳ್ಳುವುದು ಎಂದು ಹೇಳಿಕೊಡುತ್ತಿದ್ದಾನೆ.      

ಬದುಕು ಅಂದರೆ ಏನು? ಬಾಲ್ಯ, ಒಂದಿಷ್ಟು ಆಟ, ಶಾಲೆಯಲ್ಲಿ ಪಾಠ, ಹಾಗೆ ದೊಡ್ಡವರಾಗುತ್ತಾ ಒಂದಷ್ಟು ಜವಾಬ್ದಾರಿಗಳು, ಭವಿಷ್ಯಕ್ಕೆ ತಯಾರಿ, ಒಳೆಯ ನೌಕರಿ ಸಿಗುವುದಕ್ಕಾಗಿ ಒಳ್ಳೆಯ ಕೋರ್ಸ್’ಗಳನ್ನ ಮಾಡುವುದು, ಆಮೇಲೆ ನೌಕರಿ, ಮದುವೆ, ಮಕ್ಕಳು, ರಿಟೈರ್‍’ಮೆಂಟ್ ಆಮೇಲೊಂದು ಇದೆಲ್ಲವನ್ನು ಬಿಟ್ಟು ಹೋಗುವುದು ಇಷ್ಟೇ ತಾನೆ..?? ಇಷ್ಟೇ ಅಂತ ನಾವು ಷರಾ ಬರೆದುಬಿಟ್ಟಿದ್ದೀವಿ. ಆದರೆ ನಿಜಕ್ಕೂ ಇಷ್ಟೇನಾ? ಬದುಕು ಎಂಬುದು ಇಷ್ಟಕ್ಕೆ ಮಾತ್ರಕ್ಕೆ ಸೀಮಿತವಾ? ಬದುಕಿನ ಆಳಕ್ಕೆ ಇಳಿಯದೇ ಉಳಿದವರ ಬದುಕನ್ನ ನೋಡಿ ನೋಡಿ ಇಷ್ಟೇ ಎಂದು ನಾವು ನಿರ್ಧಾರ ಮಾಡಿಬಿಟ್ಟಿದ್ದೀವಿ.

ಪೌಲೋ ಕೊಎಲ್ಹೋ ಎಂಬ ಬ್ರೆಜಿಲಿಯನ್ ಲೇಖಕನೊಬ್ಬನಿದ್ದಾನೆ. ಆತ ಬದುಕಿನ ಸೂಕ್ಷ್ಮತೆಗಳನ್ನು ಎಷ್ಟು ಅದ್ಭುತವಾಗಿ ವಿವರಿಸುತ್ತಾನೆಂದರೆ, ಬದುಕು ಎನ್ನುವುದು ಇಷ್ಟೊಂದು ವಿಶಾಲತೆಯಿಂದ ಕೂಡಿದೆಯಾ ಅನ್ನೋ ಪ್ರಶ್ನೆ ಹುಟ್ಟುತ್ತದೆ.. ಆತನ ಪುಸ್ತಕವನ್ನು ಓದಿದಾಗ ನಾವು ಬದುಕಿನ ಬಗ್ಗೆ ಇಷ್ಟೊಂದು ಆಳವಾಗಿ ಯೋಚಿಸಿಯೇ ಇಲ್ಲವಲ್ಲ ಎನಿಸುತ್ತದೆ. ಬದುಕಿನ ಬಗ್ಗೆ ಅಷ್ಟೇ ಅಲ್ಲದೇ ಬದುಕುಗಳಾಚೆಗೂ ಬರೆಯಬಲ್ಲ ವ್ಯಕ್ತಿ ಆತ. ಆತನ ಒಂದು ಪುಸ್ತಕವಿದೆ ‘ವೆರೋನಿಕಾ ಡಿಸೈಡ್ಸ್ ಟು ಡೈ’ ಅಂತ. ಅದರಲ್ಲಿ ಬರುವ ಮುಖ್ಯ ಪಾತ್ರವಾದ ವೆರೋನಿಕಾ ಕೂಡ ಬದುಕು ಇಷ್ಟೇ ಎಂದು ಭಾವಿಸಿದ್ದಳು. ಆದರೆ ಕೊನೆಗೆಲ್ಲಾ ಬದಲಾಯಿತು.  

ವೆರೊನಿಕಾಳ ಬದುಕಲ್ಲಿ ಸಮಸ್ಯೆಗಳೇನೂ ಇರಲಿಲ್ಲ. ಜೀವನ ಚೆನ್ನಾಗಿಯೇ ಇತ್ತು. ಆದರೆ ಜೀವನ ಇಷ್ಟೇ ತಾನೆ ಎಂಬ ಭಾವ ಇತ್ತು, ತಾಯಿ ಈಕೆಯನ್ನು ಪೋಷಿಸಿ ದೊಡ್ಡವಳನ್ನಾಗಿ ಮಾಡಿದ್ದಳು. ಸದ್ಯ ಒಂದು ನೌಕರಿಯೂ ಇತ್ತು. ಮುಂದೆ ಮದುವೆಯೂ ಆಗುಬಹುದು. ಮೊದಲು ಸ್ವಲ್ಪ ದಿನ ಪ್ರೀತಿ ಇರುತ್ತದೆ ನಂತರ ಕಡಿಮೆಯಾಗುತ್ತಾ ಹೋಗುತ್ತದೆ. ಆಮೇಲೆ ಮಕ್ಕಳು, ಅವರ ಪೋಷಣೆ ಮಾಡುವುದು, ಅವರಿಗಾಗಿಯೇ ಬದುಕುವುದಾಗಿ ಬಿಡುತ್ತದೆ. ಇಷ್ಟೇ ತಾನೆ ಬದುಕು, ಇದರಲ್ಲಿ ಯಾವ ಸ್ವಾರಸ್ಯವಿದೆ. ಎಂಬ ಯೋಚನೆ ವೆರೋನಿಕಾಳದ್ದಾಗಿತ್ತು.  ನಮ್ಮೆಲ್ಲರ ಯೋಚನೆಯೂ ಇದೇ ಆಗಿರುತ್ತದೆ. ಆದರೆ ಅವಳೊಂದು ಹೆಜ್ಜೆ ಮುಂದೆ ಯೋಚಿಸಿದ್ದಳು. ‘ಬದುಕು ಇಷ್ಟೇ ಅಂತಾದಮೇಲೆ ಯಾವ ಪುರುಷಾರ್ಥಕ್ಕೆ ಬದುಕಲಿ’ ಎಂದು ಯೋಚಿಸಿದ್ದಳು. ಆತ್ಮಹತ್ಯೆ ಮಾಡಿಕೊಳ್ಳಬೇಕೆಂದು ನಿರ್ಧಾರ ಕೂಡ ಮಾಡಿಬಿಡುತ್ತಾಳೆ. ಆತ್ಮಹತ್ಯೆ ಮಾಡಿಕೊಳ್ಳಲು ನಿಜವಾಗಿಯೂ ಏನಾದರೂ ಕಾರಣವಿತ್ತಾ ಎಂದರೆ, ಬದುಕಲು ಯಾವುದೇ ಕಾರಣವಿಲ್ಲ ಎಂಬುದೇ ಕಾರಣವಾಗಿತ್ತು. ಏನಾದರೊಂದು ಕಾರಣ ಡೆತ್’ನೋಟಿನಲ್ಲಿ ಬರೆಯಬೇಕಲ್ಲ. ಮ್ಯಾಗಜೀನ್’ ಒಂದರಲ್ಲಿ ‘ಸ್ಲೊವೆನಿಯಾ ಎಲ್ಲಿದೆ?’ ಎಂಬ ಶೀರ್ಷಿಕೆಯ ಲೇಖನ ಓದುತ್ತಾಳೆ. ಲೇಖನದ ಉದ್ದೇಶ ಏನೇ ಆಗಿದ್ದರೂ, ‘ಸ್ಲೊವೇನಿಯಾ ಎಲ್ಲಿದೆ ಎಂಬುದು ಇವರಿಗೆ ಗೊತ್ತಿಲ್ಲದಿದ್ದದ್ದು ನನಗೆ ಬಹಳ ದುಃಖ ತಂದಿದೆ ಅದಕ್ಕಾಗಿ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಪತ್ರ ಬರೆದು ನಿದ್ದೆ ಮಾತ್ರೆ ತೆಗೆದುಕೊಳ್ಳುತ್ತಾಳೆ.’

ತಾನಿನ್ನೆಂದೂ ಕಣ್ತೆರೆಯುವುದಿಲ್ಲ ಎಂದುಕೊಂಡವಳು ಕಣ್ಣು ತೆರೆಯುವುದು ಮಾತ್ರ ಹುಚ್ಚಾಸ್ಪತ್ರೆಯಲ್ಲಿ. ಅದನ್ನ ಆಕೆಯ ಅದೃಷ್ಟವೆನ್ನಬೇಕೋ ಅಥವಾ ದುರಾದೃಷ್ಟವೆನ್ನಬೇಕೋ ಗೊತ್ತಿಲ್ಲ. ಆಕೆ ಬದುಕಿದ್ದಳು. ಆದರೆ ಡಾಕ್ಟರ್ ಹೇಳುವುದು ‘ಅತಿಯಾಗಿ ನಿದ್ರೆ ಮಾತ್ರೆ ಸೇವಿಸಿದ್ದು ದೇಹದ ಮೇಲೆ ವ್ಯತಿರಿಕ್ತ ಪರಿಣಾಮ ಆಗಿರುವುದರಿಂದ ಇನ್ನೊಂದು ಹತ್ತುದಿನವಷ್ಟೇ ಬದುಕಬಲ್ಲೆ’ ಎಂದು. ಒಂದೇ ಸಲ ಸಾಯುವುದಕ್ಕೂ, ಪ್ರತಿದಿನ ಪ್ರತಿಕ್ಷಣ ಸಾವಿಗಾಗಿ ಕಾಯುವುದಕ್ಕೂ ವ್ಯತ್ಯಾಸವಿದೆ. ಒಂದೆಡೆ ಹತ್ತು ದಿನಗಳವರೆಗೆ ಸಾವು ಬರುವುದೆಂದು ಕಾಯುವುದು, ಇನ್ನೊಂದೆಡೆ ತಾನು ಹುಚ್ಚಿಯಲ್ಲ, ತನಗೆ ಮಾನಸಿಕ ಖಾಯಿಲೆ ಇಲ್ಲ ಎಂಬುದನ್ನ ಅಲ್ಲಿರುವವರಿಗೆ ಖಚಿತಪಡಿಸುವುದು ದೊಡ್ಡ ಸಮಸ್ಯೆಯಾಗಿತ್ತು. ಆದರೆ ಅಲ್ಲಿ ಸಿಕ್ಕ ಕೆಲ ವ್ಯಕ್ತಿಗಳು ಆಕೆಯ ಯೋಚನೆಯನ್ನು ಬದಲಾಯಿಸಿಬಿಡುತ್ತಾರೆ.    

ಹುಚ್ಚಾಸ್ಪತ್ರೆಯಿಂದ ಹೊರಗೆ ಹೋಗಿ ಮಾಡುವುದಾದರೂ ಏನು? ಎಂದು ಯೋಚಿಸಿ ವೆರೋನಿಕಾ ಅಲ್ಲೇ ಉಳಿಯುತ್ತಾಳೆ. ಆಸ್ಪತ್ರೆಯದೇ ಒಂದು ರೂಮಿನಲ್ಲಿದ್ದ ಪಿಯಾನೋವನ್ನು ನೋಡಿ ಇಷ್ಟು ವರ್ಷಗಳಲ್ಲಿ ಮಾಡದಿದ್ದನ್ನು ಈ ಹತ್ತು ದಿನಗಳಲ್ಲಿ ಮಾಡಬೇಕೆಂದುಕೊಳ್ಳುತ್ತಾಳೆ. ವೆರೋನಿಕಾ ಚಿಕ್ಕಂದಿನಿಂದ ಪಿಯಾನಿಸ್ಟ್ ಆಗಬೇಕೆಂದು ಬಯಸಿದ್ದಳು ಆದರೆ ಅವರ ಅಮ್ಮನ ಬಯಕೆ ಬೇರೆಯದೇ ಆಗಿತ್ತು. ಸ್ವಲ್ಪ ಕಾಲದವರೆಗೆ ಕಲಿತಿದ್ದ ವೆರೋನಿಕಾ ಅದನ್ನ ಬಿಡಬೇಕಾಗಿ ಬಂದಿತ್ತು. ಆದರೀಗ ಯಾರು ಕೇಳುವವರು?! ಪ್ರತಿದಿನ ಆಕೆ ಪಿಯಾನೋ ನುಡಿಸುತ್ತಿದ್ದಳು. ಮುಕ್ತವಾಗಿ ನಗುತ್ತಿದ್ದಳು, ಮುಕ್ತವಾಗಿ ಅಳುತ್ತಿದ್ದಳು. ತನಗೆ ಅನಿಸಿದ್ದನ್ನ ಮಾಡಿಬಿಡುತ್ತಿದ್ದಳು. ಯಾರು ಏನಂದುಕೊಳ್ಳುತ್ತಾರೋ ಎಂಬ ಭಯವಿರಲಿಲ್ಲ. ಎಷ್ಟಂದರೂ ಹುಚ್ಚಾಸ್ಪತ್ರೆ ತಾನೇ..?! ವೆರೋನಿಕಾಗೆ ಜೀವನದ ಬಗ್ಗೆ ಪ್ರೀತಿ ಹುಟ್ಟಲಾರಂಭಿಸಿತ್ತು. ಅಲ್ಲೇ ಇದ್ದ ಒಬ್ಬನನ್ನು ಪ್ರೀತಿಸಲಾರಂಭಿಸಿದ್ದಳು. ಇನ್ನೊಂದೆಡೆ ಆತ್ಮಹತ್ಯೆಯಂತಹ ನಿರ್ಧಾರ ತೆಗೆದುಕೊಂಡಿದ್ದಕ್ಕೆ ಪಶ್ಚಾತ್ತಾಪವಾಗುತ್ತಿತ್ತು. ತನ್ನ ಆ ನಿರ್ಧಾರದಿಂದ ಬದುಕು ಕೊನೆಯ ಘಟ್ಟ ತಲುಪಿತ್ತು. ಆದರೆ ಅದಕ್ಕೂ ಕೂಡ ಆಕೆಗೆ ಸಮಯವಿರಲಿಲ್ಲ.        

ಕೊನೆಯ ದಿನ ಆಕೆ ತಾನು ಇಷ್ಟಪಟ್ಟ ವ್ಯಕ್ತಿಯೊಂದಿಗೆ, (ತನ್ನ ಮನೋರೋಗದಿಂದ ಗುಣವಾಗಿದ್ದರೂ ಹೊರಜಗತ್ತಿಗೆ ಹೋಗಲು ಇಚ್ಛಿಸದೇ ನಾಟಕವಾಡುತ್ತಾ ಅಲ್ಲೇ ಉಳಿದುಕೊಂಡಿದ್ದ) ಹುಚ್ಚಾಸ್ಪತ್ರೆಯಿಂದ ತಪ್ಪಿಸಿಕೊಂಡು ಹೋಗುತ್ತಾಳೆ. ಆ ದಿನವಿಡೀ ಇಬ್ಬರೂ ಸಂತೋಷದಿಂದ ಕಾಲ ಕಳೆಯುತ್ತಾರೆ. ಆಕೆಯ ಇಡೀ ಜೀವನದಲ್ಲಿ ಆ ಹತ್ತುದಿನಗಳು ಮಾತ್ರ ಬದುಕನ್ನ ಆಸ್ವಾದಿಸಿದ್ದು. ಆ ದಿನ ರಾತ್ರಿ ಇನ್ನೆಂದೂ ತಾನು ಕಣ್ಣು ತೆರೆಯಲು ಸಾಧ್ಯವಿಲ್ಲ ಎಂದುಕೊಂಡು ಕಣ್ಣು ಮುಚ್ಚುತ್ತಾಳೆ. ಆದರೆ ಆಕೆ ಮತ್ತೆ ಕಣ್ಣು ತೆರೆಯುತ್ತಾಳೆ ಮರುದಿನ ಬೆಳಿಗ್ಗೆ.. ಪವಾಡ!! ಅದರ ನಂತರದ ಪ್ರತಿದಿನ ಆಕೆಗೆ ಪವಾಡವೆಂದೇ ಅನಿಸುತ್ತಿತ್ತು. ಡಾಕ್ಟರ್ ಹೇಳಿದ ಒಂದು ಸುಳ್ಳು ಆಕೆಯಲ್ಲಿ ಜೀವನಪ್ರೀತಿಯನ್ನ ಹುಟ್ಟುಹಾಕಿತ್ತು.     

ನಮಗೂ ಕೂಡ ಪ್ರತಿದಿನವೂ ಒಂದು ಪವಾಡವೇ ಅಲ್ಲವೇ..?! ರಾತ್ರಿ ಮಲಗುವಾಗ ಬೆಳಿಗ್ಗೆ ಏಳುತ್ತೇವೋ ಇಲ್ಲವೋ ಗೊತ್ತಿರುವುದಿಲ್ಲ. ಆ ರೀತಿ ಯೋಚಿಸಿದರೆ ಪ್ರತಿದಿನವೂ ಒಂದು ಪವಾಡವೇ.. ಪ್ರತಿದಿನವೂ ನಿನ್ನೆ ಮಾಡಲಾಗದ್ದನ್ನು ಮಾಡಲು ಸಿಕ್ಕಿರುವ ಒಂದು ಅವಕಾಶವೇ ತಾನೆ..?!     

‘ಜೀವನದ ಬಗೆಗಿನ ದೊಡ್ಡ ದೊಡ್ಡ ಮಾತುಗಳು ಪುಸ್ತಕಗಳಲ್ಲಿ ಅಷ್ಟೇ ಚನ್ನಾಗಿರುತ್ತದೆ. ಆತ್ಮಸ್ಥೈರ್ಯದ ಮಾತುಗಳು, ಮನೋಬಲದ ಮಾತುಗಳು ಎಲ್ಲರಿಗೂ ಅನ್ವಯಿಸುವುದಿಲ್ಲ. ಕೆಲವರಿಗೆ ಮಾತ್ರ ಅದು ಸಾಧ್ಯ. ನಮ್ಮಂತವರಿಗಲ್ಲ’ ಎನ್ನುವವರು ಸಾಕಷ್ಟು ಜನ ಇದ್ದಾರೆ.  ಅವರೆಲ್ಲ ಯಾರೋ ಬರೆದ ಕಥೆಯಲ್ಲಿನ ಪುಟ್ಟ ಪಾತ್ರವಾಗಿಯೇ ಇರುವುದಕ್ಕೆ ಬಯಸುತ್ತಾರೆ. ಅದನ್ನ ದಾಟುವುದಕ್ಕೆ, ನಮ್ಮದೇ ಕಥೆಯ ಎಲ್ಲಾ ಸಮಸ್ಯೆಗಳನ್ನ ಮೀರಿ ನಿಲ್ಲುವಂತಹ ಹೀರೋ ಆಗುವುದಕ್ಕೆ ಎಂದೂ ಬಯಸುವುದೇ ಇಲ್ಲ. ಹಾಗಾಗಲು ಸಾಧ್ಯವೇ ಇಲ್ಲ ಎಂದು ನಮ್ಮನ್ನ ನಾವೇ ನಂಬಿಸಿಕೊಂಡುಬಿಟ್ಟಿದ್ದೇವೆ. ಹಾಗಾಗಿ ಪ್ರಯತ್ನವನ್ನೇ ಮಾಡುವುದಿಲ್ಲ. ನಮ್ಮ ಸುತ್ತ ಹಾಕಿಕೊಂಡಿರುವ ಬೇಲಿಯನ್ನ ನಾವು ಎಂದೂ ದಾಟುವುದೇ ಇಲ್ಲ.

ಮನೋಬಲದಿಂದ ಸಾಧನೆ ಮಾಡಿದವರೆಲ್ಲ ನಮ್ಮಂತೆಯೇ ಸಾಮಾನ್ಯ ಮನುಷ್ಯರೇ ಆಗಿರುತ್ತಾರೆ. ಆದರೆ ಅವರು ತಮ್ಮ ಕನಸುಗಳಿಗೆ ಬೇಲಿ ಹಾಕಿಕೊಳ್ಳುವುದಿಲ್ಲ. ಅವರು ತಮ್ಮ ಕಥೆಯ ಹೀರೋ ಆಗಲು ಪ್ರಯತ್ನಿಸುತ್ತಾರೆ. ಒಂದು ವೇಳೆ ಅವರೂ ಕೂಡ ನಮ್ಮಂತೆಯೇ ಯೋಚಿಸಿದ್ದರೆ..?!

ಕೆಲ ವರ್ಷಗಳ ಹಿಂದೆ ೧೩ ವರ್ಷದ ಹುಡುಗನೊಬ್ಬ ತನ್ನ ಬಾಥ್’ರೂಮಿನಲ್ಲಿ ಶವರ್ ಹಾಕಿಕೊಂಡು ಬಿಕ್ಕಿ ಬಿಕ್ಕಿ ಅಳುತ್ತಿದ್ದ, ಆತನಿಗೆ ಕ್ಯಾನ್ಸರ್ ಉಂಟಾಗಿತ್ತು, ಡಾಕ್ಟರ್ ಭರವಸೆಯೇ ನೀಡಿರಲಿಲ್ಲ. ಆದರೆ ಆತ ಸೋಲೊಪ್ಪಿಕೊಳ್ಳಲು ತಯಾರಿರಲಿಲ್ಲ. ಆತನ ಮನೋಬಲ ಹೇಗಿತ್ತೆಂದರೆ ಅದರ ಮುಂದೆ ಎವೆರೆಸ್ಟ್ ಕೂಡ ಚಿಕ್ಕದಾಯಿತು. ಈಗ ಆತನನ್ನ  ಜಗತ್ತಿನ ಟಾಪ್ ಮೋಸ್ಟ್ ಸ್ಪೂರ್ತಿದಾಯಕ ವ್ಯಕ್ತಿಗಳಲ್ಲಿ ಒಬ್ಬನನ್ನಾಗಿ ಪರಿಗಣಿಸಲಾಗುತ್ತದೆ. ಆತನ ಹೆಸರು ಶಾನ್ ಸ್ವಾರ್ನರ್. ನಾವೆಲ್ಲಾ ೧೩ ವರ್ಷದವರಿದ್ದಾಗ ಹೇಗಿದ್ದೆವೋ ಆತ ಕೂಡ ಹಾಗೆ ಇದ್ದ, ನಮ್ಮ ಬದುಕು ಆ ವಯಸ್ಸಿನಲ್ಲಿ ಹೇಗಿತ್ತೋ ಆತನದು ಕೂಡ ಹಾಗೆ ಇತ್ತು. ಆತ ಬಹುದೊಡ್ಡ ಶ್ರೀಮಂತ ಕೂಡ ಆಗಿರಲಿಲ್ಲ. ಹಾಗೆ ನೋಡಿದರೆ ಆತನ ಸಮಸ್ಯೆ ಕೂಡ ಎಲ್ಲದಕ್ಕಿಂತ ದೊಡ್ಡದಾಗಿತ್ತು. ಆದರೂ ಆತ ಸಾಧಿಸಲು ಹೇಗೆ ಸಾಧ್ಯವಾಯಿತು.? ನಮ್ಮಲ್ಲಿರುವ ಕೊರತೆಯಾದರೂ ಏನು…?! ಬಹುಶಃ ಅವರು ನಮ್ಮಂತೆ ತಮ್ಮ ಕಲ್ಪನೆಗಳಿಗೆ, ಕನಸುಗಳಿಗೆ ಮಿತಿಯನ್ನು ಹಾಕುವುದಿಲ್ಲ.    

ಮಾರ್ಕ್ಸ್ ಕಡಿಮೆ ಬಂದಿತು ಎಂದು, ಯಾವುದೋ ಸ್ಪರ್ಧೆ ಸೋತೆವು ಎಂದು, ತಮ್ಮ ಆಸೆ ಪೂರೈಸಲಿಲ್ಲವೆಂದು ಆತ್ಮಹತ್ಯೆ ಮಾಡಿಕೊಳ್ಳುವವರನ್ನ ನೋಡಿದಾಗ, ಯಾವುದೋ ಆಸ್ಪತ್ರೆಯಲ್ಲಿ ಅಪಘಾತಕ್ಕೊಳಗಾಗಿ ಜೀವನ್ಮರಣದ ಮಧ್ಯೆ ಹೋರಾಡುವವರು, ಮಾರಣಾಂತಿಕ ಖಾಯಿಲೆಗೊಳಗಾಗಿ ಇನ್ನೊಂದು ದಿನ ಹೆಚ್ಚಿಗೆ ಸಿಕ್ಕಿದ್ದರೆ ಎಂದುಕೊಳ್ಳುವವರು ನೆನಪಾಗುತ್ತಾರೆ. ನಾಳೆ ಎಂಬ ಪುಟದಲ್ಲಿ ಏನಿದೆ ಎಂದು ನೋಡುವುದರೊಳಗೆ ಕಥೆ ಮುಗಿಸಿಬಿಟ್ಟರೆ ಹೇಗೆ? ಯಾರಿಗೆ ಗೊತ್ತು, ಅತ್ಯಂತ ಸಂತಸದ ಕ್ಷಣಗಳು ಆ ಪುಟಗಳಲ್ಲಿದ್ದವೋ ಏನೋ..ಆದರೆ ನಮ್ಮ ದುಡುಕಿನ ನಿರ್ಧಾರ ಅದೆಲ್ಲವನ್ನೂ ಹಾಳುಗೆಡವಿರಬಹುದು.

       

ನಿಜ…ಜೀವನದಲ್ಲಿ ಎಲ್ಲವೂ ಅಂದುಕೊಂಡಷ್ಟು ಸುಲಭವಾಗಿರುವುದಿಲ್ಲ. ಹಾಗೆ ನೋಡಿದರೆ ಜೀವನದಲ್ಲಿ ಸುಲಭವಾಗಿರುವುದಾದರೂ ಏನು? ಊಟ ಮಾಡುವುದು ಸುಲಭ ಅಂತ ಉತ್ತರ ಕೊಡಬಹುದು ಕೆಲವರು. ಆದರೆ ನಾವು ಚಿಕ್ಕವರಿದ್ದಾಗ ಅದೂ ಕೂಡ ಕಷ್ಟವಾಗುತ್ತಿತ್ತು, ಎಲ್ಲೆಂದರಲ್ಲಿ ಚೆಲ್ಲಿಕೊಂಡು, ಮೂತಿಗೆಲ್ಲಾ ಮೆತ್ತಿಕೊಂಡು ದೊಡ್ಡ ಸಾಹಸ ಮಾಡಿದವರಂತೆ ಮಾಡುತ್ತಿದ್ದೆವು. ಈಗ ಅಭ್ಯಾಸವಾಗಿದೆ ಅದಕ್ಕೆ ಸುಲಭ. ನರದೌರ್ಬಲ್ಯವೋ ಅಥವಾ ಯಾವುದಾದರೂ ರೋಗದಿಂದ ಬಳಲುತ್ತಿರುವವರನ್ನು ಕೇಳಿ, ಅಷ್ಟೆಲ್ಲಾ ಯಾಕೆ ಬಾಯಿಯಲ್ಲಿ ಒಂದು ಸಣ್ಣ ಹುಣ್ಣಾದರೂ ಊಟ ಮಾಡುವುದು ಕಷ್ಟವಾಗುತ್ತದೆ. ಹಾಗಾದರೆ ಸುಲಭ ಯಾವುದು..?! ನಮಗೆ ಅಭ್ಯಾಸವಾಗಿದ್ದೆಲ್ಲಾ ಸುಲಭವಾಗುತ್ತದೆ ಅಷ್ಟೆ.. ಅದು ಊಟ ಮಾಡುವುದಿರಲಿ ಅಥವಾ ಸವಾಲುಗಳನ್ನ ಎದುರಿಸುವುದಿರಲಿ. ನಾವು ಊಟ ಮಾಡುವ ಪ್ರಯತ್ನವನ್ನೇ ಮಾಡದಿದ್ದರೆ ಈಗಲೂ ಅದು ಕಷ್ಟವಾಗಿಯೇ ಇರುತ್ತಿತ್ತು. ಹಾಗೆಯೇ ಸವಾಲುಗಳನ್ನು ಎದುರಿಸುವ ಪ್ರಯತ್ನವನ್ನೇ ಮಾಡದೇ, ಸಾಧ್ಯವೇ ಇಲ್ಲ, ನಮ್ಮಂತವರಿಗಲ್ಲ ಎಂದರೆ..?!!

      

ಕೆಲ ಸವಾಲುಗಳು ತುಂಬಾ ದೊಡ್ದದಾಗಿರುತ್ತದೆ. ಕೆಲ ಕಷ್ಟಗಳು, ನೋವುಗಳು ಸಹಿಸಿಕೊಳ್ಳಲು ಇನ್ನು ಸಾಧ್ಯವೇ ಇಲ್ಲ ಎಂಬಷ್ಟು ತೀವ್ರವಾಗಿರುತ್ತದೆ. ಅದಕ್ಕೆ ಯಾರೋ ಒಬ್ಬರು ಹೇಳುವುದನ್ನ ಕೇಳಿದ್ದೆ, ‘ಇನ್ನು ಸಹಿಸಿಕೊಳ್ಳಲು ಸಾಧ್ಯವೇ ಇಲ್ಲ ಎನ್ನುವ ಕ್ಷಣ ಬರುತ್ತದೆಯಲ್ಲ, ಆ ಕ್ಷಣ ನಮ್ಮನ್ನ ನಾವು ಇನ್ನೊಂದು ಸ್ವಲ್ಪ ಮುಂದಕ್ಕೆ ನೂಕುವ ಕ್ಷಣವಾಗಿರುತ್ತದೆ.’ ಒಂದು ಸಲ ಆ ಕ್ಷಣ ದಾಟಿಬಿಟ್ಟರೆ, ಮತ್ತೆ ಅದನ್ನ ಎದುರಿಸುವ ಬಲ ಬಂದಿರುತ್ತದೆ. ಆ ಕ್ಷಣವನ್ನು ಮೀರುವುದಕ್ಕೆ ಸಾಧ್ಯವಾ ಎಂದು ಕೇಳಬೇಡಿ.. ನೋಡಿ… ಅಂತಹ ಸಾಕಷ್ಟು ನೋವು, ಸವಾಲುಗಳನ್ನು ದಾಟಿ, ಅವುಗಳನ್ನ ಮೀರಿ ನಿಂತವರು ನಮ್ಮ ಆಸುಪಾಸಿನಲ್ಲಿ ಸಾಕಷ್ಟು ಜನರಿರುತ್ತಾರೆ. ನಾವು ಅವರಿಂದ ಕಲಿಯುವ ಬದಲು ಕಣ್ಣುಮುಚ್ಚಿಕೊಂಡು ಕೂತಿರುತ್ತೇವೆ ಅಷ್ಟೇ..!        

ಬದುಕಿನಲ್ಲಿ ಕೆಲವೊಮ್ಮೆ ಅನಿರೀಕ್ಷಿತ ಘಟನೆಗಳಾಗುವುದು ನಿಜ. ಇಲ್ಲ ಎಂದೇನಲ್ಲ. ಅದರೆ ಅದನ್ನ ಹೇಗೆ ಎದುರಿಸುತ್ತೀವಿ, ಅದರ ಪರಿಣಾಮವನ್ನ ಯಾವ ರೀತಿ ಸ್ವೀಕರಿಸುತ್ತೇವೆ ಎನ್ನುವುದು ನಮ್ಮ ಆಯ್ಕೆಯಾಗಿರುತ್ತದೆ. ನಮ್ಮ ಬದುಕನ್ನ ಯಾವ ದಿಕ್ಕಿನಲ್ಲಿ ಕೊಂಡೊಯ್ಯುತ್ತೇವೆ ಎನ್ನುವುದು ನಮ್ಮ ನಿರ್ಧಾರವಾಗಿರುತ್ತದೆ. ಅಲ್ಲದೇ, ಅನಿರೀಕ್ಷಿತ ಘಟನೆಗಳಿಂದಲೇ ತಾನೆ ಕಥೆ ರೋಚಕವಾಗುವುದು. ಇನ್ನು ಕಥೆಯ ಮುಖ್ಯ ಪಾತ್ರ ಆ ಅನಿರೀಕ್ಷಿತ ಸವಾಲುಗಳನ್ನ ಯಶಸ್ವಿಯಾಗಿ ಎದುರಿಸಿಬಿಟ್ಟರೆ ರೋಚಕತೆಗೆ ಇನ್ನಷ್ಟು ಗಟ್ಟಿತನ ಬರುವುದು.  ಬದುಕನ್ನೂ ಯಾವ ಕ್ಷಣದಲ್ಲಾದರೂ ಬದಲಾಯಿಸಬಹುದು. ನಮ್ಮ ಬದುಕಿನ ಕಥೆಯಲ್ಲಿ ನಾವು ಹೆಮ್ಮೆ ಪಡುವಂತಹ, ಗೌರವಿಸುವಂತಹ ಪಾತ್ರ ನಾವೇ ಆಗಬಹುದು. ನಮ್ಮ ಕಥೆಯ ಹೀರೋ ಆಗುವುದು ನಮ್ಮ ಕೈಯ್ಯಲ್ಲೇ ಇರುವುದು. ನೀವೂ ಕೂಡ ನಿಮ್ಮ ಬದುಕನ್ನ ಒಮ್ಮೆ ಗಮನಿಸಿ ನೋಡಿ, ಕಥೆ ಚನ್ನಾಗಿಲ್ಲವೆಂದರೆ, ಬದುಕನ್ನ ಸ್ವಲ್ಪ ಸಾಹಸಮಯ, ಸ್ವಲ್ಪ ಕುತೂಹಲಕಾರಿಯಾಗಿ, ಸ್ವಲ್ಪ ಉಲ್ಲಾಸದಾಯಕವಾಗಿ ಮಾಡಿಕೊಳ್ಳಿ.                  

(ವಿಕ್ರಮ ಪತ್ರಿಕೆಯ ವಿಜಯದಶಮಿ ವಿಶೇಷಾಂಕದಲ್ಲಿ ಪ್ರಕಟವಾದ ಲೇಖನ)

Facebook ಕಾಮೆಂಟ್ಸ್

ಲೇಖಕರ ಕುರಿತು

Shruthi Rao

A cancer survivor dwells in a village of hosanagara. Author of Kannada book 'Baduku dikku badalisida osteosarcoma', and recepient of Karnataka sahitya academy award.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!