Featured ಅಂಕಣ

ಕ್ವಿಟ್ ಇಂಡಿಯಾ ಕತೆ – 4: ಮಹಾನ್ ನಾಯಕರ ಗೈರುಹಾಜರಿಯಲ್ಲಿ ಜನರೇ ರೂಪಿಸಿದ ಕ್ರಾಂತಿ ಅದು!

ಕ್ವಿಟ್ ಇಂಡಿಯಾ ಕತೆ – 1

ಕ್ವಿಟ್ ಇಂಡಿಯಾ ಕತೆ – 2

ಕ್ವಿಟ್ ಇಂಡಿಯಾ ಕತೆ – 3

ಬ್ರಿಟಿಷರಿಗೆ ಸವಾಲಾದದ್ದು ಯಾರು? ಯಾರು ಅವರನ್ನು ಬೆಂಬಲಿಸಿದರು ಮತ್ತು ಯಾರು ವಿರೋಧಿಸಿದರು ಎಂಬ ವಿಚಾರದಲ್ಲಿ ಇತ್ತೀಚೆಗೆ ಒಂದು ಸುತ್ತಿನ ಚರ್ಚೆ ಎದ್ದವು. ಕ್ವಿಟ್ ಇಂಡಿಯಾ ಚಳವಳಿಯನ್ನು ಕಾಂಗ್ರೆಸ್ ಒಳಗಿನ ಅನೇಕರು – ಸಿ. ರಾಜಗೋಪಾಲಾಚಾರಿ, ಮೌಲಾನಾ ಆಜಾದ್ ಮುಂತಾದ ಹಿರಿಯರು ವಿರೋಧಿಸಿದರು. ಹಿಂದೂ ಮಹಾಸಭಾ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘ ಕ್ವಿಟ್ ಇಂಡಿಯಾ ಚಳವಳಿಯಿಂದ ದೂರ ನಿಂತವು. ಮುಸ್ಲಿಂ ಲೀಗ್ ಕೂಡ ಆ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಲಿಲ್ಲ. ಕಮ್ಯುನಿಸ್ಟ್ ಪಾರ್ಟಿಯಂತೂ ಗಾಂಧಿ ಮತ್ತಿತರರ ಈ ಹೋರಾಟವನ್ನು ಪ್ರಹಸನ ಎಂದು ಕರೆಯಿತು. ಡಾ. ಅಂಬೇಡ್ಕರ್ ಕ್ವಿಟ್ ಇಂಡಿಯಾ ಚಳವಳಿಯ ಬಗ್ಗೆ ಆಸಕ್ತಿ ತೋರಲಿಲ್ಲ. ಹೀಗೆ ಆ ಕಾಲದ ಹಲವು ಸಂಘ-ಸಂಸ್ಥೆಗಳು, ರಾಜಕೀಯ ಪಕ್ಷಗಳು ಮತ್ತು ಜನನಾಯಕರು 1942ರ ಚಳವಳಿಯನ್ನು ಕಟುಶಬ್ದಗಳಲ್ಲಿ ವಿರೋಧಿಸಿದ ಪಟ್ಟಿ ನಮಗೆ ಸಿಗುತ್ತದೆ. ಆದರೆ ಇವರಲ್ಲಿ ಪ್ರತಿಯೊಬ್ಬರಿಗೂ ಕ್ವಿಟ್ ಇಂಡಿಯಾವನ್ನು ವಿರೋಧಿಸಲು ಒಂದಿಲ್ಲೊಂದು ಕಾರಣಗಳಿದ್ದವು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು.

ಮುಸ್ಲಿಂ ಲೀಗ್‍ಗೆ ಬ್ರಿಟಿಷರು ಪ್ರತ್ಯೇಕ ರಾಜ್ಯ ಕೊಡುವ ವಾಗ್ದಾನವನ್ನು ಆಗಲೇ ಮಾಡಿಯಾಗಿತ್ತು. ಹಾಗಾಗಿ ಕ್ವಿಟ್ ಇಂಡಿಯಾ ನಡೆದು, ಗಾಂಧಿ ಭಾವಿಸಿದಂತೆ ಬ್ರಿಟಿಷರು ರಾತ್ರೋರಾತ್ರಿ ಈ ನೆಲದಿಂದ ಕಾಲಿಗೆ ಬುದ್ಧಿ ಹೇಳುವ ಪ್ರಸಂಗ ಬಂದರೆ ತನ್ನ ಪಾಕಿಸ್ತಾನದ ಕನಸು ಕನಸಾಗಿಯೇ ಉಳಿಯುತ್ತದೆ ಎಂಬುದು ಜಿನ್ನಾರಿಗೆ ತಿಳಿಯದಿದ್ದ ಸಂಗತಿಯೇನಲ್ಲ. ಹಾಗಾಗಿ ಚಳವಳಿಯಲ್ಲಿ ಭಾಗವಹಿಸದೇ ಹೋದರೂ ಅವರು ಹೋರಾಟದ ಭಾಗವಾದ “ಮಾಡು ಇಲ್ಲವೇ ಮಡಿ” ಎಂಬ ಅಸ್ತ್ರವನ್ನು ಸ್ವತಃ ಗಾಂಧಿಯವರ ಕಾಂಗ್ರೆಸ್ಸಿನ ಮೇಲೇ ಪ್ರಯೋಗಿಸಿದರು! ಕಾಂಗ್ರೆಸ್ ಅನ್ನು ವಿರೋಧಿಸಿ ಮುಸ್ಲಿಂ ಲೀಗ್ ಬ್ರಿಟಿಷರ ಪರವಾಗಿ ನಿಂತಿತು, ತನ್ನ ಬೆಂಬಲ ಬಿಳಿಯರಿಗೆ ಎಂದು ಮುಕ್ತವಾಗಿ ಘೋಷಿಸಿಕೊಂಡಿತು. ಇನ್ನು, ಹಿಂದೂ ಮಹಾಸಭಾ ಮತ್ತು ಆರೆಸ್ಸೆಸ್ ಸಂಘಟನೆಗಳು ಸೈದ್ಧಾಂತಿಕ ಭಿನ್ನಾಭಿಪ್ರಾಯದ ಕಾರಣಕ್ಕಾಗಿ ಕಾಂಗ್ರೆಸ್‍ಪ್ರಣೀತ ಕ್ವಿಟ್ ಇಂಡಿಯಾವನ್ನು ದೂರ ಇಟ್ಟವು. ಕಾಂಗ್ರೆಸ್ ಪಕ್ಷವು ನಡಾವಳಿ ಮಂಡಿಸಿ ಆಂಗೀಕರಿಸಿದ್ದನ್ನು ಒಪ್ಪಿ ಅನುಸರಿಸುವುದು ಕಾಂಗ್ರೆಸ್ ಅನ್ನು ವಿರೋಧಿಸುವ ಅವೆರಡೂ ಸಂಘಟನೆಗಳಿಗೆ ಒಪ್ಪಿತವಾಗುವುದು ಸಾಧ್ಯವಿರಲಿಲ್ಲ. ಅದರ ಜೊತೆಗೆ ಸಾವರ್ಕರರಿಗೆ ಕಾಂಗ್ರೆಸ್ ಅನ್ನು ಈ ಸಂದರ್ಭದಲ್ಲಿ ವಿರೋಧಿಸಲು ಇನ್ನೆರಡು ಕಾರಣಗಳಿದ್ದವು. ಒಂದು – ಕ್ರಿಪ್ಸ್ ಆಯೋಗದ ವರದಿ. ಸರ್ ಸ್ಟಾಫರ್ಡ್ ಕ್ರಿಪ್ಸ್ ಎಂಬ ಬ್ರಿಟಿಷ್ ಸಂಸದ ಭಾರತಕ್ಕೆ ಬಂದು ಇಲ್ಲಿನ ಕಾಂಗ್ರೆಸ್ ನಾಯಕರನ್ನೂ ಮುಸ್ಲಿಂ ಲೀಗಿನ ಮಹಮ್ಮದ್ ಅಲಿ ಜಿನ್ನಾರನ್ನೂ ಪ್ರತ್ಯೇಕವಾಗಿ ಕೂರಿಸಿ ಮಾತಾಡಿಸಿದ. ಎರಡನೇ ಮಹಾಯುದ್ಧದ ವಿಷಮ ಸಂದರ್ಭದಲ್ಲಿ ಭಾರತ ಬ್ರಿಟಿಷರ ಬೆಂಬಲಕ್ಕೆ ನಿಲ್ಲಬೇಕು; ಅದಕ್ಕೆ ಪ್ರತಿಯಾಗಿ ಭಾರತಕ್ಕೆ ಸ್ವಾಯತ್ತ ರಾಷ್ಟ್ರದ ಸ್ಥಾನಮಾನ ಕೊಡುತ್ತೇವೆ ಎಂಬುದು ಕ್ರಿಪ್ಸ್ ಒಡ್ಡಿದ ಆಮಿಷ. ಜೊತೆಗೆ, ಅದೇ ಸಂದರ್ಭದಲ್ಲಿ ಭಾರತವನ್ನು ಎರಡು ಭಾಗ ಮಾಡುವುದು, ಒಂದನ್ನು ಹಿಂದೂಗಳಿಗೆ ಉಳಿಸಿ ಇನ್ನೊಂದನ್ನು ಮುಸ್ಲಿಮರಿಗೆ ಬಿಟ್ಟುಕೊಡುವುದು ಅವನ ಯೋಜನೆಯ ಭಾಗವಾಗಿತ್ತು. ಸಹಜವಾಗಿಯೇ ಕಾಂಗ್ರೆಸ್ ಈ ಸಲಹೆಯನ್ನು ವಿರೋಧಿಸಬೇಕಾಗಿತ್ತು. ವಿರೋಧಿಸಿತು ಕೂಡ. ಆದರೆ ಕಾಂಗ್ರೆಸ್‍ನಲ್ಲಿದ್ದ ರಾಜಗೋಪಾಲಾಚಾರಿ, ಮೌಲಾನಾ ಆಜಾದ್, ವಲ್ಲಭಬಾಯಿ ಪಟೇಲ್ ಮತ್ತು ನೆಹರೂ ಕ್ರಿಪ್ಸ್‍ನ ಯೋಜನೆಗೆ ಆಂಶಿಕವಾಗಿ ಒಪ್ಪಿದರು. ಮಹಾಯುದ್ಧ ಮುಗಿದೊಡನೆ ಬ್ರಿಟಿಷರು ಭಾರತಕ್ಕೆ ಸ್ವಾತಂತ್ರ್ಯ ಘೋಷಿಸುವುದೇ ನಿಜವಾದರೆ ಅವರ ಬೆಂಬಲಕ್ಕೆ ನಿಲ್ಲುವುದು ಮಹಾಪರಾಧವೇನಲ್ಲ ಎಂಬ ಅಭಿಪ್ರಾಯವಿತ್ತು ಇವರೆಲ್ಲರದ್ದೂ. ಕಾಂಗ್ರೆಸ್‍ನ ಒಳಗೆ ಒಮ್ಮತವಿಲ್ಲ; ಎಲ್ಲ ವಿಷಯಗಳಲ್ಲೂ ಅವರಿಗೆ ಎಂದಿನಂತೆ ಗೊಂದಲಗಳೇ. ಕ್ರಿಪ್ಸ್ ಹೇಳಿದ ಭರವಸೆಯನ್ನು ಒಪ್ಪುವುದೇ ಆದರೆ, ಮಹಾಯುದ್ಧ ಮುಗಿದ ಬಳಿಕ ಭಾರತವನ್ನು ಎರಡು ಹೋಳಾಗಿ ತುಂಡರಿಸುತ್ತೇನೆಂಬ ಆತನ ಮಾತನ್ನೂ ನಾವು ಒಪ್ಪಿಕೊಂಡಂತೆಯೇ ಅಲ್ಲವೇ ಎಂದು ಸಾವರ್ಕರರು ಕಾಂಗ್ರೆಸ್ಸಿಗರನ್ನು ಜಾಡಿಸಿದರು. ಅಖಂಡ ಭಾರತದ ಪ್ರತಿಪಾದನೆ ಮಾಡುತ್ತಿದ್ದ ಸಾವರ್ಕರರಿಗೆ ಭಾರತವನ್ನು ಇಬ್ಭಾಗವಾಗಿಸುವುದು ಯಾವ ಕಾರಣಕ್ಕೂ ಸಹ್ಯವಾಗದ ಯೋಚನೆ.

ಸಾವರ್ಕರ್ ಕಾಂಗ್ರೆಸ್‍ನ ವಿರುದ್ಧ ತಿರುಗಿಬೀಳಲು ಇನ್ನೊಂದು ಕಾರಣವೆಂದರೆ 1942ರ ಜುಲೈ 14ರಂದು ಕಾಂಗ್ರೆಸ್ ಪಕ್ಷವು ಪಾಸು ಮಾಡಿದ ಇನ್ನೊಂದು ನಡಾವಳಿ. ಅದರಲ್ಲಿ ಕಾಂಗ್ರೆಸ್ ಬರೆದುಕೊಂಡದ್ದು: “In making the proposal for the withdrawal of the British rule from India, the Congress has no desire whatsoever to embarrass Great Britain or the allied powers in their prosecution of the war, or in any way to encourage aggression on India. Nor does the Congress intend to jeopardize the defensive capacity of the allied powers. The Congress is therefore agreeable to the stationing of the armed forces of the Allied in India, should they so desire in order to ward off and resist and protect and keep China.” (ಬ್ರಿಟಿಷರು ಭಾರತವನ್ನು ಸ್ವತಂತ್ರಗೊಳಿಸಬೇಕು ಎಂದು ಕಾಂಗ್ರೆಸ್ ಬೇಡಿಕೆ ಇಡುತ್ತಿದೆಯೇನೋ ನಿಜ; ಆದರೆ ಯಾವ ಕಾರಣಕ್ಕೂ ನಾವು ಬ್ರಿಟಿಷರ ಅಭಿಪ್ರಾಯಗಳಿಗೆ ಧಕ್ಕೆ ತರುವ ಕೆಲಸವನ್ನು ಮಾಡಬಯಸುವುದಿಲ್ಲ. ಮಹಾಯುದ್ಧದಲ್ಲಿ ತೊಡಗಿಕೊಂಡಿರುವ ಬ್ರಿಟನ್ ಮತ್ತು ಅದರ ಮಿತ್ರಪಕ್ಷಗಳಿಗೆ ಯಾವೊಂದು ಮುಜುಗರವನ್ನೂ ಯಾವ ಸಂದರ್ಭದಲ್ಲೂ ಮಾಡಲು ಇಚ್ಛಿಸುವುದಿಲ್ಲ. ಹಾಗೆಯೇ ಭಾರತದೊಳಗೆ ಪ್ರಕ್ಷುಬ್ಧತೆ ಹೆಚ್ಚಿಸುವ ಕೆಲಸವನ್ನೂ ನಾವು ಮಾಡುವುದಿಲ್ಲ. ಮಿತ್ರರಾಷ್ಟ್ರಗಳ ರಕ್ಷಣಾವ್ಯವಸ್ಥೆಯಲ್ಲಿ ವ್ಯತ್ಯಾಸ ಮಾಡಲು, ದೊಡ್ಡ ಪ್ರಮಾಣದ ಋಖಾತ್ಮಕ ಸಂಗತಿಗಳು ನಡೆಯಲು ನಾವು ಕಾರಣರಾಗುವುದಿಲ್ಲ. ಮಿತ್ರರಾಷ್ಟ್ರಗಳು ತಮ್ಮನ್ನು ರಕ್ಷಿಸಿಕೊಳ್ಳಲು ಅಥವಾ ಶತ್ರುಗಳನ್ನು ಹೊಡೆದೋಡಿಸಲು ಬೇಕಾಗಿ ತಮ್ಮ ಸೇನೆಯನ್ನು ಭಾರತದಲ್ಲಿ ನಿಯೋಜಿಸಲು ಬಯಸಿದರೆ ಅದಕ್ಕೆ ನಮ್ಮ ಅಭ್ಯಂತರ ಇಲ್ಲ.) ಇದೊಂದು ವಿರೋಧಾಭಾಸ; ಬ್ರಿಟಿಷರನ್ನು ಭಾರತ ಬಿಟ್ಟುತೊಲಗಿ ಎಂದು ಹೇಳುತ್ತಿರುವ ಸಾಲುಗಳಲ್ಲೇ ಅವರ ಸೇನಾತುಕಡಿಗಳನ್ನು ಇಲ್ಲಿ ನಿಯೋಜಿಸಬಹುದೆಂದು ಹೇಳುವುದು ಶುದ್ಧ ಅತಾರ್ಕಿಕ ಎಂದರು ಸಾವರ್ಕರ್. ಕಾಂಗ್ರೆಸ್ ಇಡುತ್ತಿರುವ ಇಂಥ ವಿಚಿತ್ರ ನಡೆಗಳು ಭಾರತವನ್ನು ಕ್ವಿಟ್ ಇಂಡಿಯಾದಿಂದ ಮೊದಲುಗೊಂಡು ಸ್ಪ್ಲಿಟ್ ಇಂಡಿಯಾ (ಹೋಳಾದ ಭಾರತ)ದವರೆಗೆ ಕೊಂಡೊಯ್ಯುತ್ತವೆ ಎಂದು ಅವರು ನಂಬಿದ್ದರು. ಹಾಗಾಗಿ ಕ್ವಿಟ್ ಇಂಡಿಯಾ ಎಂಬ ಚಳವಳಿಯನ್ನು ಕಾಂಗ್ರೆಸ್ ಹಮ್ಮಿಕೊಂಡಾಗ ಅದರಿಂದ ಅಂತರ ಕಾಯ್ದುಕೊಳ್ಳುವುದು ಸಾವರ್ಕರ್ ಅವರಿಗೆ ಅನಿವಾರ್ಯವೇ ಆಗಿತ್ತು. ಅದೂ ಅಲ್ಲದೆ ಮುಸ್ಲಿಂ ಲೀಗ್ ಬ್ರಿಟಿಷರಿಗೆ ಬೆಂಬಲ ಕೊಟ್ಟ ಮೇಲೆ ಹಿಂದೂ ಮಹಾಸಭಾ ಸುಮ್ಮನಿರುವುದು ಸಾಧ್ಯವಿರಲಿಲ್ಲ. ಮುಸ್ಲಿಂ ನಾಯಕರು ಬ್ರಿಟಿಷರನ್ನು ಬುಟ್ಟಿಗೆ ಹಾಕಿಕೊಂಡು ತಮ್ಮ ಪಾಕಿಸ್ತಾನದ ಕನಸನ್ನು ಹೇಗಾದರೂ ನನಸು ಮಾಡಿಕೊಳ್ಳುವ ಸಾಧ್ಯತೆ ದಟ್ಟವಾಗಿದ್ದುದರಿಂದ ಸಾವರ್ಕರ್ ಅವರ ಮಹಾಸಭಾ ಕೂಡ ತನ್ನ ಕಾಯಿಗಳನ್ನು ಚಾಣಾಕ್ಷತೆಯಿಂದ ನಡೆಸಬೇಕಾಗಿತ್ತಲ್ಲ?

ಮುಸ್ಲಿಂ ಲೀಗ್ ಪಾಕಿಸ್ತಾನವೆಂಬ ಹೊಸ ರಾಷ್ಟ್ರವನ್ನು ಹುಟ್ಟುಹಾಕುವ ಆಸೆಯಿಂದ ಬ್ರಿಟಿಷರ ಬೆಂಬಲಕ್ಕೆ ನಿಂತರೆ, ಸಾವರ್ಕರ್ ಭಾರತ ದೇಶವನ್ನು ಅಖಂಡವಾಗಿಯೇ ಉಳಿಸಿಕೊಳ್ಳುವ ಹಂಬಲದಿಂದ ಬ್ರಿಟಿಷರ ಸ್ನೇಹ ಸಂಪಾದಿಸುವ ಕೆಲಸ ಮಾಡಿದರು. ಆದರೆ ಕಮ್ಯುನಿಸ್ಟರು ಕ್ವಿಟ್ ಇಂಡಿಯಾ ಚಳವಳಿಯ ವಿರುದ್ಧ ನಿಂತದ್ದು ಪಾಕಿಸ್ತಾನದಂಥ ಹೊಸ ರಾಷ್ಟ್ರಕ್ಕಾಗಿಯೂ ಅಲ್ಲ; ಅಖಂಡ ಭಾರತದ ಮೇಲಿನ ಪ್ರೀತಿಯಿಂದಲೂ ಅಲ್ಲ. ಅವರಿಗೆ ಮುಖ್ಯವೆನಿಸಿದ್ದು ಭಾರತಕ್ಕೆ ಸಂಬಂಧಪಡದ ಇನ್ನೊಂದು ಘಟನೆ. ಒಂದು ವರ್ಷದ ಹಿಂದೆ, ಅಂದರೆ – 1941ರ ಜೂನ್‍ನಲ್ಲಿ ಹಿಟ್ಲರ್ ತನ್ನ ನಾಝಿ ಪಡೆಯನ್ನು ಸೋವಿಯೆಟ್ ರಷ್ಯದತ್ತ ತಿರುಗಿಸಿದ್ದರಿಂದ ರಷ್ಯವು, ಬ್ರಿಟನ್ ಫ್ರಾನ್ಸ್ ಮುಂತಾದ ಮಿತ್ರರಾಷ್ಟ್ರಗಳ ಜೊತೆ ಕೈಜೋಡಿಸುವ ಸಂದರ್ಭ ಬಂತು. ಸೋವಿಯೆಟ್ ರಷ್ಯ ತನ್ನ ಹಳೆಯ ವೈಷಮ್ಯಗಳನ್ನೆಲ್ಲ ಮರೆತು ಬ್ರಿಟನ್ ಜೊತೆ ಕೈ ಜೋಡಿಸಿದ್ದೇ ತಡ, ಅಲ್ಲಿನ ಯಾವ ಮಹಾಪುರುಷನಿಗೂ ಸಂಬಂಧಿಕರಲ್ಲದ, ಆದರೆ ತಾವೆಲ್ಲ ರಷ್ಯದಿಂದ ಉದುರಿಬಿದ್ದ ಕಾಮ್ರೇಡುಗಳೆಂದು ತಿಳಿದಿದ್ದ ಭಾರತದ ಕಮ್ಯುನಿಸ್ಟ್ ಪಾರ್ಟಿಯ ಸದಸ್ಯರು ಸಂಭ್ರಮಾಚರಣೆ ನಡೆಸಿದರು! ಸೋವಿಯೆಟ್ ರಾಷ್ಟ್ರ ಬ್ರಿಟನ್ ಜೊತೆ ಮೈತ್ರಿ ಮಾಡಿಕೊಂಡಿತು ಎಂಬ ಒಂದೇ ಕಾರಣಕ್ಕೆ ಕಮ್ಯುನಿಸ್ಟರು ಭಾರತದಲ್ಲಿ ಬ್ರಿಟಿಷರ ಪರವಾಗಿ ನಿಂತರು. ಸೋವಿಯೆಟ್ ರಾಷ್ಟ್ರ ಜರ್ಮನಿಯ ಜೊತೆ ಹೋರಾಡುತ್ತಿದೆ ಎಂಬ ಕಾರಣಕ್ಕೆ ಎರಡನೆ ಮಹಾಯುದ್ಧ ಅವರ ಪಾಲಿಗೆ ಗ್ರೇಟ್ ಪೇಟ್ರಿಯಾಟಿಕ್ ವಾರ್ ಆಗಿಬಿಟ್ಟಿತು!

1942ರ ಆಗಸ್ಟ್’ನ ಎರಡನೇ ವಾರ. ಕಾಂಗ್ರೆಸ್‍ನ ದೊಡ್ಡ ನಾಯಕರೆಲ್ಲ ಜೈಲಿನಲ್ಲಿದ್ದರು. “ಆಗಸ್ಟ್ ಕ್ರಾಂತಿ ಮೈದಾನ”ದಲ್ಲಿ ಗಾಂಧಿ, “ಮಾಡು ಇಲ್ಲವೇ ಮಡಿ” ಎಂದು ಘೋಷಿಸಿದ ಇಪ್ಪತ್ತನಾಲ್ಕು ತಾಸುಗಳ ಒಳಗಾಗಿ ಬ್ರಿಟಿಷ್ ಸರಕಾರ ಮೌಲಾನಾ ಆಜಾದ್, ಗಾಂಧಿ, ನೆಹರೂ, ಪಟೇಲ್ ಮುಂತಾದವರನ್ನು ಬಂಧಿಸಿ ಜೈಲಿಗಟ್ಟಿತು. ಅಂದು ಒಳಹೋದ ಗಾಂಧಿ ಬಿಡುಗಡೆಯಾಗಿ ಬಂದದ್ದು 1944ರ ಮೇ 6ರಂದು. ಬಹುತೇಕ ಕಾಂಗ್ರೆಸ್ ನಾಯಕರ ಕತೆ ಇದೇ ಆಗಿತ್ತು. ಆದರೆ ಈ ಅವಧಿಯಲ್ಲೇ ಭಾರತದಲ್ಲಿ ಕ್ವಿಟ್ ಇಂಡಿಯಾದ ಬಿಸಿ ಆಕಾಶ ಮುಟ್ಟಿದ್ದು. ಸೋಷಲಿಸ್ಟ್ ಪಕ್ಷದ ಜಯಪ್ರಕಾಶ ನಾರಾಯಣ, ಪೊಲೀಸರಿಗೆ ಸಿಗದೆ ತಪ್ಪಿಸಿಕೊಂಡು ಭೂಗತರಾಗಿ ಹೋರಾಟವನ್ನು ಮುಂದುವರಿಸಿದರು. ಅವರ ಜೊತೆ ಜೊತೆಗೇ ಕ್ವಿಟ್ ಇಂಡಿಯಾ ಎಂದಾಗೆಲ್ಲ ನಾವು ಮರೆಯದೆ ನೆನೆಯಬೇಕಾದ ಇನ್ನೊಂದು ಹೆಸರೆಂದರೆ ನೇತಾಜಿ! ಜಪಾನೀಯರು ದಾಳಿ ಮಾಡುತ್ತ ಮುಂದುವರೆಯುತ್ತ ಸೈನ್ಯದ ಸಾಮರ್ಥ್ಯ ಹೆಚ್ಚಿಸಿಕೊಳ್ಳುತ್ತ ಭಾರತ ಮತ್ತು ಆಗ್ನೇಯ ಏಷ್ಯದ ಭೂಭಾಗಗಳನ್ನು ಕಬಳಿಸುತ್ತ ಬರುತ್ತಿದ್ದಾರೆ ಎಂದಾಗ ಅದೇ ಜಪಾನೀಯರ ಮುಂದೆ ಹೋಗಿ, ನಿಮ್ಮ ಸಹಾಯ ನಮಗೆ ಬೇಕು ಎಂದು ಹೇಳಿದವರು ಸುಭಾಸ್ ಚಂದ್ರ ಬೋಸ್ ಒಬ್ಬರೇ! ಅವರಿಗೆ ಹೆಗಲೆಣೆಯಾಗಿ ನಿಂತವರು 1930ರ ದಶಕದಲ್ಲೇ ಜಪಾನ್‍ಗೆ ಹೋಗಿ ಅಲ್ಲಿ ಹಿಂದೂ ಮಹಾಸಭಾದ ಶಾಖೆಯಾದ ಜಪಾನ್ ಹಿಂದೂ ಸಭಾವನ್ನು ಸಂಘಟಿಸಿ, ಅದರ ಸಂಚಾಲಕನಾಗಿ ದುಡಿದ ರಾಸ್ ಬಿಹಾರಿ ಬೋಸ್. ಸುಭಾಸ್‍ರನ್ನು ನಾಯಕ ಎಂದು ಒಪ್ಪಿಕೊಂಡ ಜಪಾನ್ ಸರಕಾರ, ತಾನು ಆಗ್ನೇಯ ಏಷ್ಯದಲ್ಲಿ ಹಿಡಿದುಹಾಕಿದ (ಬ್ರಿಟಿಷ್ ಸೈನ್ಯದಲ್ಲಿದ್ದ) ಭಾರತೀಯ ಯೋಧರನ್ನೆಲ್ಲ ನೇತಾಜಿಯವರ ಆಜಾದ್ ಹಿಂದ್ ಫೌಜ್‍ಗೆ ಕೊಡಲು ಒಪ್ಪಿಕೊಂಡಿತು. ಅಂಡಮಾನ್ ನಿಕೋಬಾರ್ ದ್ವೀಪಗಳಲ್ಲಿ ಜಪಾನೀ ಸೇನೆ ಹಿಡಿದುಹಾಕಿದ್ದ ಸಾವಿರಗಟ್ಟಲೆ ಭಾರತೀಯ ಯೋಧರು ಯಾವುದೇ ದೈಹಿಕ-ಮಾನಸಿಕ ಚಿತ್ರಹಿಂಸೆಗಳಿಗೆ ಒಳಗಾಗದೆ ನೇತಾಜಿಯವರ ಸೈನ್ಯ ಸೇರಿದರು. ಬ್ರಿಟಿಷರಿಗೆ ತಲೆನೋವಾಗಿದ್ದದ್ದು ಗಾಂಧಿ, ನೆಹರೂಗಳಲ್ಲ; ತನ್ನ ಸೈನ್ಯದ ಯೋಧರನ್ನು ಬಳಸಿಕೊಂಡು ಅವರ ಬಂದೂಕುಗಳನ್ನು ತನ್ನೆಡೆಗೆ ತಿರುಗಿಸುತ್ತಿದ್ದ ಸುಭಾಸ್ ಚಂದ್ರ ಬೋಸ್ ಮಾತ್ರ! ಬೋಸ್ ಅವರನ್ನು ಶತಾಯಗತಾಯ ಹಿಡಿದುಹಾಕುವುದು ಬ್ರಿಟಿಷರ ಒಂದಂಶದ ಕಾರ್ಯಕ್ರಮ ಆಗಿತ್ತೆನ್ನಬಹುದು.

ಇವೆಲ್ಲದರ ಜತೆಗೆ ಬ್ರಿಟಿಷರ ಪ್ರತಿಷ್ಠೆ, ಸೊಕ್ಕುಗಳನ್ನು ಮುರಿದುಹಾಕಿದ ಇನ್ನೊಂದು ಸಂಗತಿಯೆಂದರೆ ಅಟ್ಲಾಂಟಿಕ್ ಒಪ್ಪಂದ. ಮಹಾಯುದ್ಧದಲ್ಲಿ ಗೋಣು ಮುರಿದುಕೊಂಡು ಇನ್ನೇನು ಸೋಲಿಗೆ ಬಹಳ ಹತ್ತಿರದಲ್ಲಿದ್ದೇನೆಂಬ ಭೀತಿಯಲ್ಲಿ ಥರಥರ ನಡುಗುತ್ತಿದ್ದ ಇಂಗ್ಲೆಂಡ್ ಕೊನೆಗೆ ಮನಸ್ಸಿಲ್ಲದ ಮನಸ್ಸಿಂದ ಅಮೆರಿಕಾ ಸಂಯುಕ್ತ ಸಂಸ್ಥಾನವನ್ನು ಯುದ್ಧದಲ್ಲಿ ಕೈ ಜೋಡಿಸಲು ಬೇಡಿಕೊಂಡಿತು. ಆರಡಿ ಮೀರಿದ ದೇಹದ ಚರ್ಚಿಲ್ ತನ್ನ ದೇಹವನ್ನು ಮೂರಡಿ ಮಾಡಿಕೊಂಡು ಅಮೆರಿಕಾದ ಅಧ್ಯಕ್ಷ ರೂಸ್‍ವೆಲ್ಟ್‍ನಿಗೆ ಪತ್ರ ಬರೆದು ಸಹಾಯ ಕೋರಿಕೊಂಡರು. ಆಗ ಅಮೆರಿಕಾ, ತಾನೇನೋ ಸಹಾಯ ಮಾಡಲು ತಯಾರು. ಆದರೆ ಯುದ್ಧ ಮುಗಿಯುತ್ತಲೇ ಬ್ರಿಟನ್ ತನ್ನ ಕೈಯಲ್ಲಿರುವ ಎಲ್ಲ ವಸಾಹತುಗಳಿಗೂ ಸ್ವಾತಂತ್ರ್ಯ ಕಲ್ಪಿಸಬೇಕು. ಇಲ್ಲವಾದರೆ ಪರಿಣಾಮ ನೆಟ್ಟಗಿರುವುದಿಲ್ಲ – ಎಂಬ ಷರಾ ಸೇರಿಸಿತು. ನುಂಗಲಿಕ್ಕೂ ಆಗದ ಉಗುಳಲಿಕ್ಕೂ ಆಗದ ಬಿಸಿತುಪ್ಪವನ್ನು ಬಾಯಲ್ಲಿ ಹಾಕಿಕೊಂಡಂಥ ಸನ್ನಿವೇಶವಾಯಿತು ಬ್ರಿಟನ್ನಿನದ್ದು. ವಸಾಹತುಗಳ ಕತೆ ಅತ್ತಲಾಗಿರಲಿ, ಎಲ್ಲಕ್ಕಿಂತ ಮುಖ್ಯವಾಗಿ ಹಿಡಿಯಷ್ಟಿರುವ ಮಾತೃಭೂಮಿಯನ್ನು ಉಳಿಸಿಕೊಳ್ಳಲೇಬೇಕಾದ ಅನಿವಾರ್ಯತೆಗೆ ಬಿದ್ದ ಬ್ರಿಟಿಷರು ಅಮೆರಿಕಾದವರ ಬೇಡಿಕೆಗಳಿಗೆ ಬೇಗ ಹ್ಞೂ ಹ್ಞೂ ಎಂದು ಅವರ ನೆರವು ಪಡೆದು ಯುದ್ಧ ಮುಂದುವರಿಸಬೇಕಾಯಿತು. ಹೀಗೆ ಇಬ್ಬರು ರಾಷ್ಟ್ರಮುಖ್ಯಸ್ಥರ ನಡುವೆ ನಡೆದ ಅಟ್ಲಾಂಟಿಕ್ ಒಪ್ಪಂದದ ಪ್ರಕಾರವೂ ಇಂಗ್ಲೆಂಡ್ ಮಹಾಯುದ್ಧದ ಬಳಿಕ ಭಾರತವನ್ನು ಬಿಟ್ಟುಕೊಡಲೇಬೇಕಾದ, ಸ್ವಾತಂತ್ರ್ಯ ಘೋಷಿಸಲೇಬೇಕಾದ ಅನಿವಾರ್ಯತೆಗೆ ಸಿಲುಕಿಕೊಂಡಿತು. (ಈ ಅಟ್ಲಾಂಟಿಕ್ ಒಪ್ಪಂದದ ಪ್ರಕಾರ ಫ್ರಾನ್ಸ್ ಕೂಡ ಮಹಾಯುದ್ಧದ ನಂತರ ತನ್ನ ವಸಾಹತುಗಳನ್ನು ಸ್ವತಂತ್ರಗೊಳಿಸಬೇಕಾದ ಇಕ್ಕಟ್ಟಿಗೆ ಸಿಕ್ಕಿತು. ಇಂಗ್ಲೆಂಡಿನ ಕೈಕೆಳಗಿದ್ದ ಜೋರ್ಡಾನ್ 1946ರಲ್ಲಿ, ಪ್ಯಾಲೆಸ್ಟೈನ್ 1947ರಲ್ಲಿ, ಶ್ರೀಲಂಕ ಮತ್ತು ಮ್ಯಾನ್ಮಾರ್ 1948ರಲ್ಲಿ, ಈಜಿಪ್ಟ್ 1952ರಲ್ಲಿ ಮತ್ತು ಮಲೇಶ್ಯ 1957ರಲ್ಲಿ ಸ್ವಾತಂತ್ರ್ಯ ಪಡೆದವು. ಫ್ರೆಂಚ್ ಆಡಳಿತವಿದ್ದ ಲಾವೋಸ್ 1949ರಲ್ಲಿ, ಕಾಂಬೋಡಿಯ 1953ರಲ್ಲಿ, ವಿಯೆಟ್ನಾಮ್ 1954ರಲ್ಲಿ ಸ್ವತಂತ್ರವಾದವು. ಇವಿಷ್ಟು ದೇಶಗಳು ಅಹಿಂಸಾಮಾರ್ಗವನ್ನು ಹಿಡಿಯದಿದ್ದರೂ ಸ್ವಾತಂತ್ರ್ಯ ಪಡೆದವು ಎನ್ನುವುದು ವಿಶೇಷ!)

1944ರ ಮೇ ಹೊತ್ತಿಗೆ ಕ್ವಿಟ್ ಇಂಡಿಯಾ ಅಂತೂ ಇಂತೂ ಮುಗಿಯಿತು. 1942ರ ಆಗಸ್ಟ್ 8ರಂದು ಪ್ರಾರಂಭಗೊಂಡು ಒಂದೂವರೆ ವರ್ಷಗಳ ಕಾಲ ಇಡೀ ಭಾರತ ಹೊತ್ತಿ ಉರಿಯಿತು ಎಂದೇ ಹೇಳಬೇಕು! ಯಾವುದೇ ಮಹಾನ್ ನಾಯಕರ ಸಾರಥ್ಯವಿಲ್ಲದೆ ಜನಸಾಮಾನ್ಯರ ಹೋರಾಟವಾಗಿ ನಡೆದುಹೋದ ಒಂದು ಮರೆಯಲಾರದ ಅಧ್ಯಾಯ ಇದು. ಈ ಕಾಲಘಟ್ಟದಲ್ಲಿ ಯಾರು ಯಾವ ರೀತಿ ವರ್ತಿಸಿದರು, ಯಾಕೆ ಹಾಗೆ ವರ್ತಿಸಿದರು ಎಂಬುದನ್ನೆಲ್ಲ ಇಂದು ವಿಶ್ಲೇಷಿಸುತ್ತ, ಕೂದಲು ಸೀಳುವಂಥ ತರ್ಕಗಳನ್ನು ಹಾಕುತ್ತ ಕೂರುವುದರಲ್ಲಿ ಅರ್ಥವಿಲ್ಲ. ಆ ಕಾಲದ ಪರಿಸ್ಥಿತಿ ನಿಜವಾಗಿ ಹೇಗೆ ಇತ್ತೆಂಬುದನ್ನು ಸರಿಯಾಗಿ ವಿಮರ್ಶಿಸಬಲ್ಲ ಸಾಮರ್ಥ್ಯವಿರುವುದು ಆ ಕಾಲದ ವ್ಯಕ್ತಿಗಳಿಗೇ ಹೊರತು ನಮಗಲ್ಲವಲ್ಲ! ಹಾಗಾಗಿ ಕ್ವಿಟ್ ಇಂಡಿಯಾ ಹೋರಾಟ ಯಶಸ್ವಿಯಾಯಿತೋ ಸೋತಿತೋ ವಾದ ಪಕ್ಕಕ್ಕಿಡೋಣ. ಗಾಂಧಿ ಮಾಡಿದ್ದು ಸರಿಯೋ ತಪ್ಪೋ ವಾದ ಪಕ್ಕಕ್ಕಿಡೋಣ. ಕಾಂಗ್ರೆಸ್, ಮಹಾಸಭಾ, ಮುಸ್ಲಿಂ ಲೀಗ್ ಮುಂತಾದ ಸಂಘಟನೆಗಳ ನಡೆಯ ಔಚಿತ್ಯಗಳನ್ನು ವಿಮರ್ಶಿಸುವ ಕೆಲಸವನ್ನೂ ಪಕ್ಕಕ್ಕಿಡೋಣ. ಕ್ವಿಟ್ ಇಂಡಿಯಾ ಚಳವಳಿ ಭಾರತದ ಸ್ವಾತಂತ್ರ್ಯ ಹೋರಾಟದ ಇತಿಹಾಸಲ್ಲಿ ಎಂದೆಂದೂ ಅಳಿಸಲಾರದ ಗುರುತುಗಳನ್ನು ಉಳಿಸಿಹೋಗಿದೆ ಎಂಬುದು ಮಾತ್ರ ಅಲ್ಲಗಳೆಯಲಾರದ ವಾಸ್ತವ. ಅದು ನಮಗೆ ಇಂದು ಕಲಿಸಬಹುದಾದ ಪಾಠಗಳಷ್ಟೇ ನಮಗೆ ಮುಖ್ಯವಾಗಬೇಕು. ಯಾವ ಗುರುತರ ನಾಯಕತ್ವ ಇಲ್ಲದೇ ಇದ್ದಾಗಲೂ ಈ ಭರತಭೂಮಿ ಸಾಮಾನ್ಯ ನಾಗರಿಕರಲ್ಲಿ ರಾಷ್ಟ್ರೀಯತೆಯ ಕಿಚ್ಚನ್ನೂ ಕೆಚ್ಚನ್ನೂ ಉದ್ದೀಪಿಸಿ ಮಹಾನ್ ಅನ್ನುವಂಥ ಕೆಲಸಗಳನ್ನು ಮಾಡಿಸಬಲ್ಲುದು ಎಂಬುದು ಬಹುಶಃ ಕ್ವಿಟ್ ಇಂಡಿಯಾ ನಮಗೆ ಕಲಿಸುವ ಎಲ್ಲಕ್ಕಿಂತ ದೊಡ್ಡ ಪಾಠ.

(ಮುಗಿಯಿತು)

Facebook ಕಾಮೆಂಟ್ಸ್

ಲೇಖಕರ ಕುರಿತು

Rohith Chakratheertha

ಓದಿದ್ದು ವಿಜ್ಞಾನ, ಮುಖ್ಯವಾಗಿ ಗಣಿತ. ಬೆಂಗಳೂರಿನಲ್ಲಿ ನಾಲ್ಕು ವರ್ಷ ಉಪನ್ಯಾಸಕನಾಗಿ ಕಾಲೇಜುಗಳಲ್ಲಿ ಪಾಠ ಮಾಡಿದ್ದ ಇವರು ಈಗ ಒಂದು ಬಹುರಾಷ್ಟ್ರೀಯ ಕಂಪೆನಿಯಲ್ಲಿ ಉದ್ಯೋಗಿ. ಹವ್ಯಾಸವಾಗಿ ಬೆಳೆಸಿಕೊಂಡದ್ದು ಬರವಣಿಗೆ. ಐದು ಪತ್ರಿಕೆಗಳಲ್ಲಿ ಸದ್ಯಕ್ಕೆ ಅಂಕಣಗಳನ್ನು ಬರೆಯುತ್ತಿದ್ದು ವಿಜ್ಞಾನ, ಗಣಿತ, ವ್ಯಕ್ತಿಚಿತ್ರ, ಮಕ್ಕಳ ಕತೆ ಇತ್ಯಾದಿ ಪ್ರಕಾರಗಳಲ್ಲಿ ಇದುವರೆಗೆ ೧೩ ಪುಸ್ತಕಗಳ ಪ್ರಕಟಣೆಯಾಗಿವೆ. ಉದ್ಯೋಗ ಮತ್ತು ಬರವಣಿಗೆಯಿಂದ ಬಿಡುವು ಸಿಕ್ಕಾಗ ತಿರುಗಾಟ, ಪ್ರವಾಸ ಇವರ ಖಯಾಲಿ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!