ಅವನು ಲಷ್ಕರ ಸಂಘಟನೆ ಸೇರಿದಾಗ 17 ವರ್ಷ. ತೀರಿಹೋದಾಗ 27 ವರ್ಷ ಅಲ್ಲಿಗೆ ಬದುಕಿದ್ದೆ ಬರೋಬ್ಬರಿ ತೀರ ಅರೆವಯಸ್ಸು. ಅದರಲ್ಲೂ ಇದ್ದಷ್ಟು ದಿನವೂ ಕದ್ದು ಬದುಕುವ ಜೀವನವೇ ನಡೆಸುತ್ತಿದ್ದ ಪಾತಕಿಯೊಬ್ಬನ ಅಂತ್ಯ ಇದಕ್ಕಿಂತ ಭಿನ್ನವಾಗಿರಲು ಸಾಧ್ಯವೇ ಇರಲಿಲ್ಲ. ಅದರಲ್ಲೂ ಮೂವತ್ತು ಲಕ್ಷದಷ್ಟು ದೊಡ್ಡ ಮೊತ್ತದ ಬಹುಮಾನ ಎಂಥದ್ದೇ ಮನುಷ್ಯನ ನಿಯತ್ತನ್ನು ಹಾಳು ಮಾಡುತ್ತದೆ. ಮುಸ್ಲಿಂನಾದರೇನು ಮನುಷ್ಯನೇ ಅಲ್ಲವೇ. ಇದು ಗೊತ್ತಿದ್ದೂ ಪುಲ್ವಾಮ ಪಕ್ಕದ ಹಳ್ಳಿ ಹರ್ಕಿಪೊರಾಗೆ ಆ ಪಾತಕಿ ಕಾಲಿಕ್ಕಿ ತಪ್ಪು ಮಾಡಿಬಿಟ್ಟಿದ್ದ. ಅಷ್ಟಕ್ಕೂ ಆ ಹಳ್ಳಿ ಅವನ ಪ್ರೇಯಸಿಯ ಊರಾಗಿದ್ದು ಭೇಟಿಯಾಗಲು ಬಂದಿದ್ದ. ಹೆಂಡತಿಯಾಗಿದ್ದ ರುಕ್ಸಾನ್ ದಾರ್ ಸಿಕ್ಕಿದಳೋ ಇಲ್ಲವೋ ಗೊತ್ತಿಲ್ಲ ಅದರೆ ಕಾಶ್ಮೀರ ಪೊಲೀಸರ ಪಾಲಿಗೆ ಮಾತ್ರ ಅವನು ಪ್ರೈಜ್ ಕ್ಯಾಚ್ ಆಗಿದ್ದ. ಅವನನ್ನು ಅಬು ದುಜಾನ್ ಎಂದು ಗುರುತಿಸಲಾಗಿತ್ತು.
ಆವತ್ತು ಜುಲೈ ಮೂವತ್ತು ಸಂಜೆ ಹೊತ್ತಿಗೆ ಸತತವಾಗಿ ಕಳೆದ ಐದು ವರ್ಷದಿಂದ ಕಾಯುತ್ತಿದ್ದ ಮಾಹಿತಿ ಪೊಲೀಸರಿಗೆ ಸಿಕ್ಕಿದೆ. ಇತ್ತಿಚಿನ ದಿನಗಳಲ್ಲಿ ಪೊಲೀಸರಿಗೆ ಸಿಗುವ ಟಿಪ್ಸುಗಳು ಮಿಸ್ಸಾಗುವ ಚಾನ್ಸೆ ಇಲ್ಲ ಅನ್ನಿಸುತ್ತಿದೆ. ಅದಕ್ಕೆ ಆರೆಂಟು ತಿಂಗಳಲ್ಲಿ ಹೊಡೆದುರುಳಿಸಿರುವ ನೂರಿಪ್ಪತ್ತೂ ಚಿಲ್ರೆ ಉಗ್ರರ ಹೆಣಗಳೆ ಸಾಕ್ಷಿ. ಬಹುಮಾನದ ಹಣ ಏಣಿಸುತ್ತಿರುವ ಅದೇ ಕಾಶ್ಮೀರಿಗಳು ಒಳಗೊಳಗೆ ಹುಳ್ಳಗೇ ನಗುತ್ತಿದ್ದಾರೆ. ಅಲ್ಲೆ ಡ್ರಾ ಅಲ್ಲೆ ಬಹುಮಾನ ಸೂಕ್ತವಾಗಿ ಕೆಲಸ ಮಾಡುತ್ತಿದೆ. ಹಾಗಾಗಿ ಕಣಿವೆ ಸೇರಿ ಮನೆಗಳಲ್ಲಿ ಅಡಗುವ, ಆಶ್ರಯ ಪಡೆಯುವ ಒಬ್ಬೊಬ್ಬ ಉಗ್ರನ ಹೆಣ ಬಿದ್ದಾಗಲೂ ಖಬರಿಗಳ ಜೇಬು ಭರ್ತಿಯಾಗುತ್ತಿದೆ. ಸೈನಿಕರು ಗೆಲುವಿನ ನಗೆ ಬೀರುತ್ತಿದ್ದಾರೆ. ಇತ್ತ ಕಾಶ್ಮೀರದಲ್ಲಿ ಕುಳಿತೇ ದೇಶಾದ್ಯಂತದ ದ್ರೋಹಿಗಳ ಬೆಂಬಲ ಪಡೆಯುತ್ತಿರುವ ಪ್ರತ್ಯೇಕತಾವಾದಿಗಳ ಬುಡ ಅಲ್ಲಾಡತೊಡಗಿದೆ.
ಆವತ್ತು ತನ್ನ ಸಹವರ್ತಿ ಅರಿಫ್ ದಾರ್ನೊಂದಿಗೆ ಹಾರ್ಕಿಪೋರಾದ ಮನೆಯಲ್ಲಿ ಆಶ್ರಯ ಪಡೆದಿರುವ ಮಾಹಿತಿ ಪಕ್ಕಾ ಆಗುತ್ತಿದ್ದಂತೆ ಸಿ.ಆರ್.ಪಿ.ಎಫ್. 182 ಮತ್ತು 183 ಬೆಟಾಲಿಯನ್ ಜತೆ 55 ರಾಜಸ್ತಾನ್ ರೈಫಲ್ಸ್ನ ಸೈನಿಕರು ಮತ್ತು ಜೆ.ಕೆ. ಸ್ಪೆಷಲ್ ಫೋರ್ಸ್ ತುಕಡಿಗಳು ಪೂರ್ತಿ ಹಳ್ಳಿಯನ್ನು ಸುತ್ತುವರೆದು ಸುತ್ತಮುತ್ತಲಿನ ಜನರನ್ನು ಖಾಲಿ ಮಾಡಿಸಿ ಮನೆಯನ್ನು ಹೈಜಾಕ್ ಮಾಡಿಕೊಂಡಿದ್ದಾರೆ. ಅಲ್ಲಿವರೆಗೂ ಅದರ ವಾಸನೆಯೂ ತಗಲದಂತೆ ಸುತ್ತಮುತ್ತಲೆಲ್ಲ ಸೈಲಂಟಾಗಿ ಕೆಲಸ ಮಾಡಿದ ಸೈನಿಕರು ಊರಿನ ಒಳಗೂ ಯಾರೂ ಪ್ರವೇಶಿಸದಂತೆ ಬಂದೋಬಸ್ತು ಮಾಡಿಕೊಂಡಿದ್ದಾರೆ. ಎಂದಿನಂತೆ ಕಲ್ಲೆಸೆಯುವ ದೇಶ ದ್ರೋಹಿಗಳ ಪುಂಡರ ಪಡೆ ಕಲ್ಲಿಗೆ ಕೈ ಹಾಕುವ ಮೊದಲೇ ಅವರನ್ನೆಲ್ಲಾ ಎಬ್ಬಿಕೊಂಡು ಗಡಿಯಾಚೆಗೆ ನೂಕಿದ್ದಾರೆ ಸ್ಥಳೀಯ ಪೊಲೀಸರು. ಹಾಗಾಗಿ ಉಗ್ರನ ಅಡುಗುತಾಣದ ಸುತ್ತ ಕೋಟೆ ನಿರ್ಮಿಸಿದ್ದ ಫೋರ್ಸಿಗೆ ಯಾವ ಎರಾನೆ ಯೋಚನೆ ಇರಲಿಲ್ಲ. ಎಲ್ಲಾ ತಯಾರಿ ಮಾಡಿಕೊಂಡು ಅಬುದುಜಾನೆಯನ್ನು ಶರಣಾಗುವಂತೆ ಹಲವು ಬಾರಿ ಎಚ್ಚರಿಕೆ ಕೊಟ್ಟಿದ್ದಲ್ಲದೆ ಗಾಳಿಯಲ್ಲಿ ಕೆಲವು ಸುತ್ತು ಗುಂಡನ್ನೂ ಹಾರಿಸಿದ್ದಾರೆ. ಅಂತಿಮವಾಗಿ ಭಾರತದ ಅಧಿಕಾರಿ ಮನ್ಸೂರ್ ಅಲಿಖಾನ್, ಅವನ ಕೊನೆಯ ಕ್ಷಣದಲ್ಲಿ ಅವನಿಗೊಂದು ಫೋನೊಂದನ್ನು ಕೊಟ್ಟು “…ಇಲ್ಲಿವರೆಗೆ ಆಗಿದ್ದಾಯಿತು ಇನ್ನು ಮುಂದಾದರೂ ನೆಮ್ಮದಿಯಿಂದ ಬದುಕಲು ಶರಣಾಗು. ನೀನು ಮತ್ತು ನಾನು ಇಷ್ಟಪಡುವ ಮತ್ತು ಆರಾಧಿಸುವ ಅಲ್ಲಾನೇ ಇಂತಹದನ್ನು ಮೆಚ್ಚುವುದಿಲ್ಲ. ಪ್ರವಾದಿಗಳ ಉದ್ದೇಶ ಮತ್ತು ಆಶಯವೇ ಬೇರೆಯಾಗಿದ್ದು ನೀನು ಮಾಡುತ್ತಿರುವುದು ಅಪ್ಪಟ ಧರ್ಮದ ವಿರುದ್ಧವೇ ಆದ್ದರಿಂದ ಬಂದು ಬಿಡು. ತೆರ ವಯಸ್ಸಿನಲಿರುವ ಹೆಂಡತಿ ಇಳಿ ವಯಸ್ಸಿನ ತಂದೆ ತಾಯಿಯರಿದ್ದಾರೆ ಅವರನ್ನೆಲ್ಲಾ ರಸ್ತೆಗಿಳಿಸಬೇಡ. ನಿನ್ನ ಬದುಕಿಗೆ ನಾನು ಸಹಾಯ ಮಾಡುತ್ತೇನೆ..” ಎಂಬಿತ್ಯಾದಿಯಾಗಿ ಅವನನ್ನು ಹಾದಿಗೆ ತರಲು ಪ್ರಯತ್ನಿಸಿದರಾದರೂ ಪಾತಕಿ ಅಬು ದುಜಾನೆ ಅವರನ್ನೇ, “..ನೀನೆ ಒಳಕ್ಕೆ ಬಾ. ಇಲ್ಲೇ ಕೂತು ಮಾತಾಡೊಣ. ನಾನು ಜೇಹಾದ್ ಭಾಗವಾಗಿ ಸಾಯಲೆಂದು ಗಿಲ್ಗಿಟ್ ಬಿಟ್ಟಾಗಲೇ ಎಲ್ಲಾ ನಿರ್ಧರಿಸಿದ್ದೇನೆ. ಇವತ್ತು ನಾನು ಹೋಗುತ್ತೇನೆ…ಸ್ವಲ್ಪ ತಡವಾಗಿ ನೀವು ಎಲ್ಲಾ ಹೋಗಬೇಕಾದವರೇ..” ಎಂದೆಲ್ಲಾ ಮಾತಾಡಿದ್ದಾನೆ.
ಬೇರೆ ದಾರಿ ಇಲ್ಲದೆ ಮನೆಯ ನಿರೀಕ್ಷೆಯ ಪಾಯಿಂಟ್ ಮೇಲೆ ಮುಗಿಬಿದ್ದ ಸೈನಿಕರು ಶರಂಪರ ಕಾದಾಟ ಮಾಡಿದ್ದಾರೆ. ಅವನ ಬಲಗೈ ಬಂಟ ಅರಿಫ್ ದಾರ್ ಕೂಡಾ ಮೊದಲು ಕೂಗಾಡುತ್ತಾ ಬಿದ್ದ ಸದ್ದು ಕೇಳಿಸಿದೆ. ಆದರೆ ಕೆಲವೇ ಸಮಯದಲ್ಲಿ ಅವನ ಸದ್ದು ನಿಂತುಹೋಗಿ ಒಂದೇ ಬಂದೂಕು ಗುಂಡು ಹಾರಿಸುವುದು ಗೊತಾಗುತ್ತಿದ್ದಂತೆ ಉಳಿದದ್ದು ಅಬು ದುಜಾನೆ ಮಾತ್ರ ಎಂದು ಖಾತರಿಯಾಗಿದೆ. ಅದರೆ ಶರಣಾಗಲೊಲ್ಲದ ಅಬು ಎಲ್ಲಾ ಕಿಟಕಿಗಳಿಂದ ಸಂದುಗಳಿಂದ ನಿರಂತರ ಕಾದಾಟ ಜಾರಿ ಇಡಲು ಪ್ರಯತ್ನಿಸಿದ್ದಾನೆ. ಆದರೆ ಎಲ್ಲಾ ದಿಕ್ಕಿನಲ್ಲೊ ಯಮದೂತರಂತೆ ಕಾಲೂರಿ ನಿಂತು ಬಡಿದಾಡುವ ರೈಫಲ್ಸ್ ಪಡೆಯ ಸೈನಿಕರು ಪಕ್ಕದ ಕಟ್ಟಡದ ಮೇಲೇರಿ ಸಣ್ಣ ಸಂದಿನಿಂದ ಗುಂಡು ನುಗ್ಗಿಸಿ ಕೆಡುವಿಹಾಕಿದ್ದಾರೆ. ಪಾತಕಿಯೊಬ್ಬ ಉಸಿರೆಳೆದುಕೊಳ್ಳಲೂ ಆಗದೆ ಬಿದ್ದು ಸತ್ತುಹೋಗಿದ್ದಾನೆ. ಹಗ್ಗ ಕಟ್ಟಿ ದರದರನೆ ರಸ್ತೆಗೆ ಹೆಣ ಎಳೆತಂದಿದ್ದಾರೆ. ಕೊನೆಗೆ ಅವನ ಹೆಣ ದಫನು ಮಾಡುವವರೂ ಗತಿ ಇಲ್ಲದೆ ಆರ್ಮಿಯ ಜವಾನರೇ ಹೊತ್ತೊಯ್ದು ಬರಾಮುಲ್ಲಾ ಜಿಲೆಯ ಗಂಟಾಮುಲ್ಲಾ ಸ್ಮಶಾನದಲ್ಲಿ ಹೂತಾಕಿ ಬಂದಿದ್ದಾರೆ. ಯಾವ ದೇಶದ ಮಾತುಕೇಳಿ, ಯಾವ ಕಾಶ್ಮೀರದ ನೆಲದಲ್ಲಿ ಹಿಂಸೆಯನ್ನು ಪ್ರಚೋದಿಸಿ ಕಮಾಂಡರ್ ಎಂದು ಘೋಷಿಸಿಕೊಂಡು ಮೆರೆಯಲು ಯತ್ನಿಸಿದ್ದನೋ, ಅವನ ಕೊನೆಯ ಕಾಲದಲ್ಲಿ ಸರಿಯಾಗಿ ಕಟ್ಟಿಕೊಂಡ ಪ್ರೇಯಸಿಯ ಜತೆಗೆ ಒಂದು ವರ್ಷ ಕೂಡಾ ಸಂಸಾರ ಮಾಡಲಾಗದೆ ನೆಗೆದು ಬಿದ್ದಿದ್ದಾನೆ. ಪಾತಕಿಯೊಬ್ಬನ ಬದುಕು ಇದಕ್ಕಿಂತ ಭಿನ್ನವಾಗಿ ಕೊನೆಯಾಗಲು ಸಾಧ್ಯವೇ ಇರಲಿಲ್ಲ. ಇವನೊಬ್ಬನೆ ಅಲ್ಲ ಇದೇ ವರ್ಷದಲ್ಲೇ ಹತ್ಯೆ ಮಾಡಲ್ಪಟ್ಟ ಸಾಲು ಸಾಲು ನಾಯಕರೆನಿಸಿಕೊಂಡ ಉಗ್ರರ ಹೆಣಗಳಿಗೆ ಇದಕ್ಕಿಂತ ವಿಭಿನ್ನ ದಾರಿ ಯಾವುದೂ ಇರಲೇ ಇಲ್ಲ. ಆದರೂ ಪಾಕಿ ಪಾತಕಿಗಳಿಗೆ ಬುದ್ಧಿ ಬರುತ್ತಿಲ್ಲ.
ಅಬುದುಜಾನೆ ಎನ್ನುವ ಮೋಸ್ಟ್ ವಾಂಟೆಡ್ ಪಾತಕಿ ಕಣಿವೆಯ ಪೊಲೀಸರಿಗೆ ಕಳೆದ ಹಲವು ಎನ್ಕೌಂಟರ್’ಗಳಲ್ಲಿ ಮಿಸ್ಸಾಗಿದ್ದ ಬೇಟೆ. ಅದರಲ್ಲೂ ಪಾಕಿ ಆಕ್ರಮಿತ ಕಾಶ್ಮೀರದ ಗಿಲ್ಗಿಟ್ ಪ್ರಾಂತ್ಯದ ಉಗ್ರ ದಕ್ಷಿಣ ಕಾಶ್ಮೀರದ ಕಮಾಂಡರ್ ಆಗಿ ಝಕೀರ್ ಮೂಸಾನ ನಿರ್ದೇಶನದಲ್ಲಿ ಕೆಲಸ ಮಾಡುತ್ತಿದ್ದವನು. ಕಾಶ್ಮೀರದ ರ್ಯಾಲಿಗಳಿಗೆ ದೂರದಲ್ಲಿದ್ದೇ ಜನರನ್ನೂ ಗಲಾಟೆಗೆ ಹುಡುಗರನ್ನು ಪ್ರಚೋದಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದವನು ಇದೇ ದುಜಾನ್. ಅಕ್ಟೋಬರ್ 29, 2015 ಸೇರಿದಂತೆ, ಪಾಂಪೊರ್ ಮತ್ತು ಉಧಮ್ಪುರ ಸೇನಾ ಗುಂಪಿನ ಮೇಲೆ ನಡೆದ ದಾಳಿಯಲ್ಲಿ ಸೈನಿಕರನ್ನು ಹತ್ಯೆ ಮಾಡಿದ ನೇರ ಆರೋಪ ಅವನ ಮೇಲಿತ್ತು. ಮಹಮ್ಮದ್ ನಾವೆದ್ ಎಂಬ ಉಗ್ರನೊಬ್ಬ ಸೈನಿಕರ ಕೈಗೆ ಜೀವಂತವಾಗಿ ಸಿಕ್ಕಿದಾಗ ಇದೆಲ್ಲಾ ಕತೆಗಳ ಹಿಂದಿನ ಮಾಸ್ಟರ್ ಮೈಂಡ್ ಎಂಬ ಮಾಹಿತಿಯನ್ನು ಅತ್ಯಂತ ಸ್ಪಷ್ಟವಾಗೇ ಕೊಟ್ಟಿದ್ದ. ಕಳೆದ ವರ್ಷ ಬುರಾನ್ ವಾನಿಯನ್ನು ಹತ್ಯೆ ಮಾಡಿದಾಗ ಅವನ ಶವ ಸಂಸ್ಕಾರಕ್ಕೆ ಆಗಮಿಸಿದ್ದು ನೂರಾರು ಯುವ ಕಾಶ್ಮೀರಿಗಳ ಆಕರ್ಷಣೆಯ ಕೇಂದ್ರವಾಗಿದ್ದ. ಅವನ ಒಂದು ಪ್ರಸ್ತುತತೆಯೇ ಮತ್ತೆ ಉಗ್ರರ ಕ್ಯಾಂಪನ್ನು ಸೇರುವ ಹುಡುಗರ ಸಂಖ್ಯೆಯನ್ನು ಹೆಚ್ಚು ಮಾಡಿತ್ತು.
ಕೊನೆಯ ಬಾರಿ ಸರಹದ್ದಿನಲ್ಲಿ ನಡೆದ ಚಕಮಕಿಯಲ್ಲಿ ಅವನನ್ನು ರಕ್ಷಿಸಿ ಉಳಿದವರು ಬಲಿಯಾಗಿದ್ದಾಗ ಎಡಗಾಲಿನ ಮಂಡಿಚಿಪ್ಪು ಹಾರಿ ಹೋಗಿತ್ತು. ಹಾಗಾಗಿ ಅವನಲ್ಲಿ ಇತ್ತೀಚೆಗೆ ಮೊದಲಿನ ಸಂಚಲನೆ ಉಳಿದಿರಲಿಲ್ಲವಾದರೂ ಸುಧಾರಿಸಿಕೊಂಡಿದ್ದ ದುಜಾನೆ, ಎಲ್ಲಾ ದುರುಳರು ಮಾಡುವ ತಪ್ಪಿನಂತೆ ತನ್ನ ಪ್ರೇಯಸಿ ಹೆಂಡತಿಯ ಭೇಟಿಗಾಗಿ ಭಾರತದ ಗಡಿಯೊಳಗೆ ಕಾಲಿಟ್ಟು ಸೀದಾ ಹಾರ್ಕಿಪೋರಾದ ಮಾವನ ಮನೆಯಲ್ಲಿ ಆಶ್ರಯ ಪಡೆದಿದ್ದ.
ಹಾರ್ಕಿಪೋರಾ, ಪುಲ್ವಾಮದ ಚಿಕ್ಕಹಳ್ಳಿ ಅದು. ಪುಲ್ವಾಮಾ ಮುಖ್ಯ ಕೇಂದ್ರದ ಸುತ್ತ ಮುತ್ತಲೆಲ್ಲಾ ಇರುವ ಊರೂಗಳೂ ಬರೀ ಪೋರಾಗಳೇ, ತೀರ ಕೇಂದ್ರದಲ್ಲಿ ಚಾಂಗ್ಧಾಮನ ಪಕ್ಕದಲ್ಲಿ ದರಿಪೋರಾ, ಮೇಲ್ಗಡೆ ಬಾರಾಪೋರಾ ಅದರೆ ಎಡಕ್ಕೆ ಖಾಪೆರ್Çೀರಾ, ಅದಕ್ಕೂ ಕೊಂಚ ಕೆಳಗೆ ಜರುಗಿದರೆ ಹರ್ದಾಪೋರಾ ಮತ್ತು ಶಾಂಘ್ಪೋರಾ, ತೀರ ಕೆಳಗೆ ಚಿತ್ರಿಪೋರಾ ಮತ್ತು ಎಡಭಾಗದ ದಂಡೆಯಲ್ಲಿ ಅಪ್ಪರ್ ಫಾರ್ಸಿಪೋರಾ ಮತ್ತು ಕೆಳಗಿನ ಬಡಾವಣೆ ಲೋವರ್ಫಾರ್ಸಿ ಪೋರಾ ಹೀಗೆ ಇದರ ಸುತ್ತಮುತಲ್ಲೆಲ್ಲಾ ಇರುವ ಊರುಗಳೆಂದರೆ ಪೋರಾಗಳ ಸಂತೇಯೆ. ಇಲ್ಲಿನ ಗದ್ದೆಗಳ ಮಧ್ಯೆ ಕಿಷ್ಕಿಂದೆಯಂತಹ ಹಳ್ಳಿ ಹಾರ್ಕಿಪೋರಾ ಊರಿನಲ್ಲೀಗ ಸ್ಮಶಾನ ಜತೆಗೆ ಗನ್ ಪೌಡರ್ಗಳ ಘಾಟು. ಕಣಿವೆ ಖಾಲಿಯಾಗದೆ ಏನು ಮಾಡೀತು.