ಅಂಕಣ

ಐನ್ಸ್ಟೀನ್’ನ ಈ ಮಾತುಗಳು ನಿಜವಾಗುವ ಸನಿಹದಲ್ಲಿ..!

ನ್ಯೂಕ್ಲಿಯರ್ ವಾರ್. ಇತ್ತೀಚಿನ ದಿನಗಳಲ್ಲಿ ಈ ಪದಗುಚ್ಛ ಅದೆಷ್ಟು ಪ್ರಸಿದ್ದಿ ಹೊಂದಿದೆ ಎಂದರೆ ಚಡ್ಡಿ ಹಾಕದ ಮಕ್ಕಳೂ ಸಹ ಇತರರನ್ನು ಹೆದರಿಸಲೆತ್ನಿಸಿದಾಗ ಇಂತಹ ಪದವೊಂದನ್ನು ಬಳಸುವುದುಂಟು. ಈ ವಿಚಾರದ ಬಗೆಗಿನ ದೃಶ್ಯ ಮಾಧ್ಯಮಗಳ ವಿಪರೀತ ಪ್ರಚಾರ ಹಾಗು ಏಕಮುಖೇನ ಚರ್ಚೆಗಳು ಪರಮಾಣು ಬಾಂಬ್ ಗಳೆಂದರೆ ಇಂದು ದೀಪಾವಳಿ ಹಬ್ಬದಲ್ಲಿ ಸಿಡಿಸುವ ಲಕ್ಷ್ಮಿ ಪಟಾಕಿಯೋ ಎನ್ನುವಷ್ಟರ ಮಟ್ಟಿಗೆ ಅವನ್ನು ಬಾಲಿಶವಾಗಿಸಿಬಿಟ್ಟಿವೆ. ಅಲ್ಲದೆ ಅವೇ ದೃಶ್ಯಮಾಧ್ಯಮಗಳು ನಮ್ಮಲ್ಲಿರುವ ಪರಮಾಣು ಬಾಂಬ್ ಗಳ ಸಂಖ್ಯೆ ಎಷ್ಟು, ಆ ದೇಶ ಪರಮಾಣು ಶಕ್ತವೇ?, ಪರಮಾಣು ಬಾಂಬ್ ಗಳ ಜಗದ ಅತಿದೊಡ್ಡ ಒಡೆಯನಾರು? ಎಂಬಿತ್ಯಾದಿ ಸುದ್ದಿಗಳನ್ನು ಮನೆಯ ಗೋದಾಮಿನಲ್ಲಿ ಅತಿಹೆಚ್ಚು ಧವಸ ದಾನ್ಯಗಳನ್ನು ಕೂಡಿಟ್ಟ ವ್ಯಕ್ತಿ ಊರಿನ ಶ್ರೀಮಂತನೆಂಬಂತೆ ಪರಮಾಣು ಶಕ್ತ ದೇಶಗಳನ್ನು ಬಿಂಬಿಸುತ್ತವೆ. ತಾತಪ್ಪನ ಕಾಲದಲ್ಲಿ ಅಮೇರಿಕ ಅದ್ಯಾವುದೋ ದೇಶದಲ್ಲಿ ಅಣುಬಾಂಬ್ ಒಂದನ್ನು ಸಿಡಿಸಿ ಅದೆಷ್ಟೋ ಸಾವಿರ ಜನರನ್ನು ಸುಟ್ಟು ಹಾಕಿತು ಎಂಬ ವಿಚಾರಕ್ಕಿಂತ, ಊರಿನಲ್ಲಿ ಸಣ್ಣದೊಂದು ಪಟಾಕಿ ಅಂಗಡಿ ಸುಟ್ಟು ಪಕ್ಕದ ಕೋಳಿ ಅಂಗಡಿಯ ಹತ್ತು ಕೋಳಿಗಳು ಭಸ್ಮವಾದವು ಎಂಬ ಸುದ್ದಿಯೇ ಸಾಮಾನ್ಯರಲ್ಲಿ ದಿಗ್ಬ್ರಾಂತಿಯನ್ನು ಮೂಡಿಸುತ್ತದೆ. ಒಟ್ಟಾರೆ ಜನಮಾಧ್ಯಮದಲ್ಲಿಂದು ನ್ಯೂಕ್ಲಿಯರ್ ವಾರ್ ಎಂದರೆ ಅತಿ ಸಾಮಾನ್ಯದ ಸಂಗಾತಿಯಾಗಿಬಿಟ್ಟಿದೆ. ದಶಕಗಳಿಂದಲೂ ಇದರ ಪರ ವಿರೋಧ ಚರ್ಚೆಗಳು ನಡೆದರೂ ಉತ್ತರಕುಮಾರನ ಪೌರುಷದಂತೆ  ಒಮ್ಮೆಯೂ ಸಹ (ದ್ವಿತೀಯ ವಿಶ್ವಯುದ್ಧದ ನಂತರ) ಇಂತಹದೊಂದು ಯುದ್ಧ  ನಡೆಯದ್ದೇ ಇರುವುದೂ ಇದಕೊಂಡು ಹಾಸ್ಯಾಸ್ಪದ ಕಾರಣವೆನ್ನಬಹುದು. ಒಂದು ವೇಳೆ ಈ ದಶಕಗಳ ಚರ್ಚೆಯೊಂದು ನಿಜರೂಪ ತಾಳಿ ನ್ಯೂಕ್ಲಿಯರ್ ವಾರ್ ಎಂಬೊಂದು ಆಧುನಿಕ ಪ್ರಳಯ ಸಂಭವಿಸಿತು ಅಂದಿಟ್ಟುಕೊಳ್ಳಿ, ಅದರ ಮುಂದಾಗುವ ಪರಿಣಾಮವಾದರೂ ಎಂತಹದ್ದು? ಅದ್ಯಾವುದೋ ದೇಶ ಇನ್ನೊಂದು ದೇಶದ ಮೇಲೆ ನ್ಯೂಕ್ಲಿಯರ್ ಬಾಂಬ್ಗಳನ್ನು ಒಗೆದುಕೊಂಡರೆ ನಮ್ಮ ಬ್ರೆಡ್ ಬಟರ್ ಗೇನು ಕುಂದು ಎಂದು ನಾವು ಸುಮ್ಮನೆ ಕೂರಲಾಗುತ್ತದೆಯೇ? ಹಾಗಿದ್ದರೆ ವಿಶ್ವದ ಭೂಪಟದಲ್ಲಿ ಭೂತಕನ್ನಡಿ ಹಿಡಿದು ಹುಡುಕಿದರೂ ಕೆಲವೊಮ್ಮೆ ಕಣ್ಣಿಗೆ ಕಾಣದ ದೇಶವೊಂದು ಖಂಡಾತರ ಕ್ಷಿಪಣಿಯನ್ನು ಆವಿಷ್ಕರಿಸಿಕೊಂಡರೆ ಇತ್ತ ಹತ್ತಾರು ದೇಶಗಳು ಬಾಯಿ ಬಡಿದುಕೊಳ್ಳುವುದೇಕೆ? ಇವೆಲ್ಲ ವಿದ್ಯಮಾನಗಳು ಜರುಗಬಹುದೇನೋ ಎಂಬ ದೂರದೃಷ್ಟಿಯಿದ್ದ  ಆಧುನಿಕ ಜಗತ್ತಿನ ಸೈಂಟಿಫಿಕ್  ಸಂತನೆಂದೇ ಕರೆಯಬಹುದಾದ ಐನ್ಸ್ಟೈನ್ ಅರ್ಧ ಶತಮಾನದ ಹಿಂದೆಯೇ ‘ನನಗೆ ಮೂರನೇ ಮಹಾಯುದ್ಧ ಯಾವ ‘ಆಯುಧ’ಗಳಿಂದ ನೆಡೆಯುತ್ತದೆ ಅನ್ನುವುದಕ್ಕಿಂತ ನಾಲ್ಕನೇ ಮಹಾಯುದ್ಧ ಮಾತ್ರ ಕಲ್ಲು ಮತ್ತು ಕೋಲಿನಿಂದ ನಡೆಯುತ್ತದೆ ಎಂಬುದು ತಿಳಿದಿದೆ’ ಎಂದು ಮಾರ್ಮಿಕವಾಗಿ ಗಂಭೀರವಾದ ವಿಷಯವನ್ನು ಅರಿಯಬಿಡುತ್ತಾನೆ. ಅವನ ಪ್ರಕಾರ ಮೂರನೇ ಮಹಾಯುದ್ದದ ‘ಆಯುಧ’ಗಳು ನ್ಯೂಕ್ಲಿಯರ್ ಬಾಂಬ್ ಗಳು ಎಂಬುದನ್ನು ಬಿಟ್ಟರೆ ಬೇರೇನೂ ಆಗಿರಲಿಲ್ಲ. ಇಂದು ಆ ಐನ್ಸ್ಟೈನ್  ತಾತನ ಮಾತುಗಳು ನಿಜವಾಗುವ ಸನಿಹದಲ್ಲಿವೆ. ಅರ್ಥಾತ್ ನ್ಯೂಕ್ಲಿಯರ್ ಬಾಂಬ್ ಗಳ ಯುದ್ಧಗಳಿಂದ ಮಾನವ ಒಂದು ವೇಳೆ ಬದುಕುಳಿದರೆ ಆತ ಮತ್ತೊಮ್ಮೆ ಶಿಲಾಯುಗದ ಅನುಭವವನ್ನು ಪಡೆಯಬೇಕಾಗುತ್ತದೆ! ಹಾಗಾದರೆ ನ್ಯೂಕ್ಲಿಯರ್ ಯುದ್ಧಗಳಿಂದ ಅಥವಾ ವಿಕಿರಣಶೀಲತೆಯಿಂದ (Radioactivity) ಪರಿಸರದ ಹಾಗು ಅದರ ಜೀವಜಂತುಗಳ ಮೇಲೆ ಆಗುವ ಪ್ರಭಾವವಾದರೂ ಎಂತಹದ್ಹು? ನ್ಯೂಕ್ಲಿಯರ್ ಯುದ್ಧದ ನಂತರ ಜನಜೀವನ ಹೇಗಿರಬಹುದು ಅಥವಾ ಹೇಗಾಗಬಹುದು?

ದಟ್ಟ ಹೊಗೆಯ ಕಪ್ಪು ಮೋಡಗಳು –

ದ್ವಿತೀಯ ವಿಶ್ವಯುದ್ಧದ ಕೊನೆಯಲ್ಲಿ ರೊಚ್ಚಿಗೆದ್ದ ಅಮೇರಿಕ, ಜಪಾನಿನ ಹಿರೋಶಿಮಾ ಹಾಗೂ ನಾಗಸಾಕಿ ನಗರಗಳ ಮೇಲೆ ಇಳಿಬಿಟ್ಟ ಬಾಂಬ್ ಗಳ ವಿಡಿಯೋ ತುಣುಕುಗಳನ್ನೋ ಅಥವಾ ಚಿತ್ರಗಳನ್ನು ನೋಡಿದರೆ ಅಣಬೆಯಾಕಾರದ ದಟ್ಟ ಹೊಗೆಯ ಗೋಲವೊಂದು ಕೆಂಪು ಬಣ್ಣದ ಹಿನ್ನಲೆಯೊಂದಿಗೆ ನಮಗೆ ಕಾಣಸಿಗುತ್ತದೆ. ಕಿಲೋಮೀಟರ್ಗಟ್ಟಲೆ ವಿಸ್ತೀರ್ಣವಿರುವ ಈ ಅವಶೇಷಗಳ ಹೊಗೆ ಅಕ್ಷರಸಹ ಮಳೆಗಾಲದ ದಟ್ಟ ಮೋಡದಂತೆ ಕಾಣುವುದಲ್ಲದೆ ಸೂರ್ಯನೆಂಬ ಒಂದು ಬೆಂಕಿಯ ಚೆಂಡೇ ಮಾಯವಾಯಿತೇನೋ ಎಂಬಂತೆ ಹರಡಿಕೊಂಡಿರುತ್ತದೆ. ಮಳೆಗಾಲದ ಮೋಡಗಳೇನೋ ಕರಗಿ ಭೂಮಿಯನ್ನು ತಣಿಸುತ್ತವೆ ಆದರೆ ದೂಳಿನ ಕಣಗಳ ಈ ಮೋಡದ ರಾಶಿ ಹೋಗುವುದಾದರೂ ಎಲ್ಲಿಗೆ? ಪರಿಣಾಮ  ಕರಗದ ಮೋಡಗಳಾಗಿ ಅಲೆಯುವ ಇವುಗಳು ಸೂರ್ಯನ ಕಿರಣಗಳನ್ನು ತಡೆದು ತಿಂಗಳುಗಳ ಕಾಲ ಮೋಡಕವಿದ ವಾತಾವರಣವನ್ನು ಸೃಷ್ಟಿಸಿಬಿಡುತ್ತವೆ. ಬೇಸಿಗೆಕಾಲ ಬಂದರೆ ಬಿಸಿಲನ್ನು ನಿಂದಿಸುವ ಖಯಾಲಿಯ ನಮಗೆ ಒಂದು ಪಕ್ಷ ಸೂರ್ಯನ ಕಿರಣಗಳೇನಾದರೂ ಕೆಲದಿನಗಳ ಮಟ್ಟಿಗೆ ಭೂಮಿಯನ್ನು ಚುಂಬಿಸದೇ ಇದ್ದರೆ ಅದರಿಂದಾಗುವ ಪರಿಣಾಮವನ್ನು ಊಹಿಸಿಕೊಳ್ಳಲೂ  ಸಾಧ್ಯವಿಲ್ಲ.  ಮೊದಲನೆಯದಾಗಿ ಸೂರ್ಯನ ಕಿರಣಗಳ ಕೊರತೆಯಿಂದ ಭೂಮಿಯ ತಾಪಮಾನ ಎಕ್ದಮ್ ಕಡಿಮೆಯಾಗುವುದಲ್ಲದೆ ಚಲನಚಿತ್ರಗಳಲ್ಲಿ ಕಾಣುವ ‘ಐಸ್-ಏಜ್’ ನ ಸ್ಥಿತಿಗೆ ಭೂಮಿಯ ಮೇಲ್ಪದರ ಬಂದು ನಿಲ್ಲುತ್ತದೆ ಎಂದು ಸಂಶೋಧನೆ ತಿಳಿಸುತ್ತದೆ. ಅತ್ತಕಡೆ ಸೂರ್ಯನ ಕಿರಣಗಳೇ ಸಕಲ ಸಸ್ಯಗಳ ದ್ಯುತಿಸಂಶ್ಲೇಷಣೆಗೆ ಅಗತ್ಯವಾಗಿರುವುದರಿಂದ ಸಸ್ಯಗಳ ಆಹಾರೋತ್ಪತ್ತಿಯ ಪ್ರಮಾಣವೂ ಕ್ಷೀಣಿಸತೊಡಗುತ್ತದೆ ಅಲ್ಲದೆ ಇಂಗಾಲದ ಡೈ ಆಕ್ಸೈಡ್ ನ ಪ್ರಮಾಣ ಹೆಚ್ಚಾಗಿ ಉಸಿರಾಡಲು ಬೇಕಾದ ಆಮ್ಲಜನಕದ ಪ್ರಮಾಣವೂ ಕುಸಿಯತೊಡಗುತ್ತದೆ. ಇನ್ನು ಅತಿಯಾದ  ಇಂಗಾಲದ ಡೈ ಆಕ್ಸೈಡ್ ನಿಂದಾಗುವ ಹಸಿರುಮನೆ ಪರಿಣಾಮ (Greenhouse Effect) ಯಾವುದೇ ಅಡೆ ತಡೆ ಇಲ್ಲದೆ ಜರುಗುತ್ತದೆ. ಇಷ್ಟೆಲ್ಲಾ ಆಗುವುದು ಕೇವಲ ಸೂರ್ಯನ ಕಿರಣಗಳ ತಡೆಯುವಿಕೆಯಿಂದ. ನಾಲ್ಕಾರು ದೇಶಗಳು ಒಂದೇ ಸಮಯದಲ್ಲಿ ಇಂತಹ ನೂರಾರು ಬಾಂಬ್ ಗಳ ಎರಚಾಟದಲ್ಲಿ ತೊಡಗಿದರೆ ಶಾಶ್ವತವಾಗಿ ಸೂರ್ಯನಿಗೊಂದು ವಿದಾಯವನ್ನು ನಾವು ಹೇಳಬೇಕಾಗುತ್ತದೆ.

ಓಜೋನ್ ಪದರದ ಮಂಗಮಾಯ-

ವಾಹನಗಳು ಉಗುಳುವ ಹೊಗೆ ಹಾಗು ಇನ್ನಿತರ ವಿಷಾನಿಲಗಳಿಂದಲೇ ಭಾಗಶಃ ಕಣ್ಮರೆಯಾಗುತ್ತಿರುವ ಓಜೋನ್ ಪದರ ಪರಮಾಣು ಬಾಂಬ್ಗಳ ಸಿಡಿಯುವಿಕೆಯಿಂದ ಇಂಚ್ಚಷ್ಟೂ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳದೇ  ಪೂರ್ಣವಾಗಿ ನಶಿಸಿ ಹೋದರೂ ಆಶ್ಚರ್ಯಪಡಬೇಕಿಲ್ಲ.  ಆದರೆ ಸೂರ್ಯನಿಂದ ಹೊರಬರುವ ನೇರಳಾತೀತ (Ultraviolet Rays) ಕಿರಣಗಳ ಸೋಸುವಿಕೆಯ ಕಾರ್ಯವನ್ನು ಇಂದಿನವರೆಗೂ ಅಚ್ಚುಗಟ್ಟಾಗಿ ಮಾಡಿಕೊಂಡು ಬಂದಿರುವ ಕಾಣದ ಪದರವೊಂದು ಒಮ್ಮಿಂದೊಮ್ಮಲೆ ಕಾಣೆಯಾಗಿ ಹೋದರೆ ನೆಲದ ಮೇಲಿನ ಜೀವಿಗಳ ಮೇಲೆ ಆಗುವ ಪರಿಣಾಮವಾದರೂ ಎಂತಹದ್ದು? ಅತಿಯಾದ ನೇರಳಾತೀತ ಕಿರಣಗಳು ದೃಷ್ಟಿ ದೋಷ, ಅಲ್ಲದೆ ಚರ್ಮದ ಕ್ಯಾನ್ಸರ್ ಗೂ ಕಾರಣವಾಗುತ್ತದೆ. ಬದುಕುಳಿಯುವುದೇ ಕಷ್ಟಸಾಧ್ಯವಾಗಿರುವಾಗ ಇನ್ನು ಚರ್ಮದ ಕಾಯಿಲೆಯ ಬಗ್ಗೆ ವಿಶ್ವಸುಂದರಿಯೂ ಅಂದು ತಲೆಕೆಡಿಸಿಕೊಳ್ಳಲಾರಳು ಬಿಡಿ.

ಭೂಗರ್ಭದಾಳದಲ್ಲಿನ  ವಾಸ!

ಯುದ್ಧ ಸಂಭವಿಸುವ ಮುಂಜಾಗೃತ ಕ್ರಮದ ಬಗ್ಗೆ ಮಾನವನೇನಾದರೂ ಯೋಚಿಸತೊಡಗಿದರೆ ಆತನಿಗೆ ಇರುವ ಒಂದೇ ಮಾರ್ಗ ಇರುವೆಗಳಂತೆ ಭೂಮಿಯ ಆಳದಲ್ಲಿ ಅಡಗಿಕೊಂಡು ವಾಸಿಸಿಸುವುದು! ಆದರೆ ವಿಕಿರಣಗಳು ಅಲ್ಲಿಗೂ ಬರುವುದಿಲ್ಲವೆಂಬ ಗ್ಯಾರೆಂಟಿ ಮಾತ್ರ ಯಾರಿಗೂ ಕೊಡಲಾಗದು. ಉತ್ತರ ಕೊರಿಯಾ ಹಾಗು ಇನ್ನಿತರ ಯುದ್ಧಭೀತಿ ಇರುವ ದೇಶಗಳು ಅದಾಗಲೇ ವಿಕಿರಣ ಆಶ್ರಯಗಳೆಂಬ (Fallout Shelter) ಭೂಮಿಯಾಳದ ನೆಲೆಗಳನ್ನು ರೆಡಿಮಾಡಿಕೊಂಡಿವೆ ಎಂದರೆ ಕೆಲ ದೇಶಗಳು ಅದ್ಯಾವ ಮಟ್ಟಿಗೆ ನ್ಯೂಕ್ಲಿಯರ್ ಯುದ್ಧಕ್ಕೆ ಸನ್ನದ್ಧವಾಗುತ್ತಿದೆ ಎಂದು ಅರಿಯುತ್ತದೆ. ಆದರೆ ಅದೆಷ್ಟು ದಿನ ತಾನೇ ಭೂಮಿಯ ಅಂತರಾಳದಲ್ಲಿ ಮಾನವಜೀವಿ ಹುದುಗಿಗೊಳ್ಳಲು ಸಾಧ್ಯವುಂಟು? ಶೇಖರಿಸಿಟ್ಟ ಆಹಾರ ಪದಾರ್ಥಗಳೆಲ್ಲ ಖಾಲಿಯಾದ ಮೇಲೆ ಮಾನವ ನೆಲದ ಮೇಲೇ ಪುನಃ ಬರಲೇಬೇಕಲ್ಲವೇ? ಅಂದು ಯಾವುದೇ ಯುನಿವರ್ಸಿಟಿಯ ಆದ್ಯಾವುದೇ ಉನ್ನತ ಡಿಗ್ರಿಗಳೂ ಪ್ರಯೋಜನಕ್ಕೆ ಬಾರವು. ಆಂದು ಪ್ರತಿಯೊಬ್ಬ ಮಾನವ ಜೀವಿಯೂ  ರೈತನಾಗಲೇ ಬೇಕಾಗುತ್ತದೆ! ನೆಲವನ್ನು ಅಗೆದು ತನ್ನ ಅನ್ನವನ್ನು ತಾನೇ ಬೆಳೆಯಬೇಕಾಗುತ್ತದೆ. ಆದರೆ ಬಾಂಬುಗಳಿಂದ ಸಿಡಿಯುವ ವಿಕಿರಣಗಳು ಅದೆಂದಿನವರೆಗೆ ಭೂಮಿಯ ಮೇಲ್ಮೈಯಲ್ಲಿ ಸಂಚರಿಸುತ್ತಿರುತ್ತವೆ ಎಂಬುದರ ಮೇಲೆ ಮುಂದಿನ ಎಲ್ಲ ಅಂಶಗಳು ನಿರ್ಧರಿತವಾಗಿರುತ್ತವೆ.

ಅಲ್ಲದೆ, ಚಲನಚಿತ್ರಗಳಲ್ಲಿ ಕಾಣಸಿಗುವ ಹಸಿರು ಬಣ್ಣದ ವಸ್ತ್ರ, ಕಣ್ಣು  ಕಿವಿ ಹಾಗು ಮೂಗುಗಳ ಸುತ್ತ ಕಪ್ಪಗಿನ ಯಂತ್ರಗಳಿಂತಿರುವ ಭಯಹುಟ್ಟಿಸುವ ಹೆಲ್ಮೆಟ್ ಆಗ ಮಾನವನ ಸಮವಸ್ತ್ರವಾಗಿರುತ್ತವೆ. ಕೊಹಿನೂರ್ ವಜ್ರವೇ ಅಂದು ದಾರಿಯಲ್ಲಿ ಬಿದ್ದಿದ್ದರೂ ಮುಟ್ಟುವ ಗೋಜಿಗಂತು ಯಾವೊಬ್ಬ ನರಪಿಳ್ಳೆಯೂ ಹೋಗದಿಹ ಸ್ಥಿತಿ ನಿರ್ಮಾಣವಾಗುತ್ತದೆ ಎಂದರೆ ನಂಬಬಹುದೇ? ಕುತೂಹಲಕಾರಿ ವಿಷಯವೆಂದರೆ ಹಲವಾರು ಕೀಟರಾಶಿಗಳು ವಿಕಿರಣಶೀಲತೆಗೆ ಪ್ರತಿರೋಧವನ್ನು ಒಡ್ಡುವ ಗುಣವನ್ನು ಹೊಂದಿರುವುದು. ಚೇಳು, ಜಿರಳೆ, ನೀರ್ಕರಡಿ ಇನ್ನಿತರೇ ಜೀವಿಗಳ ದೇಹದ ಮೇಲೆ ವಿಕಿರಣಗಳು ಒಂದಿಷ್ಟೂ ಪರಿಣಾಮವನ್ನು ಬೀರದು. ಹಾಗಾಗಿ ಇಂತಹ ಹಲವಾರು ಜೀವಿಗಳು ಭೂಮಿಯ ಮೇಲೆ ತಮ್ಮ ಅಸ್ತಿತ್ವವನ್ನು ಹೆಚ್ಚಾಗಿ ತಾಳಿ ಇಂದು ಮಾನವ ಹೇಗೆ ಭೂಮಿಯೇ ತನ್ನದೆನುತ ಅವುಗಳನ್ನು ಹಿಂಸಿಸುತ್ತಿದ್ದಾನೋ ಅಂತೆಯೇ ಅವುಗಳೂ ನಮ್ಮನ್ನು ಹಿಂಸಿಸುವ ಕಾಲ ದೂರವೇನಿಲ್ಲ. ಅಲ್ಲದೆ ವಿವಿಧ ಬಗೆಯ ಕ್ಯಾನ್ಸರ್ ಹಾಗು ಅಂಗವಿಕಲತೆಯಿಂದ ಕುರೂಪಿಯಾಗಿ ಹೋಗುವ ಮಾನವನನ್ನು ಕಂಡರೆ ಅಂದು ಏಲಿಯನ್ ಗಳೂ ಹೆದರಿ ಓಟಕೀಳಬಹುದು.

ಕಂಡುಹಿಡಿದವರಿಗೇ ನಾಚಿಕೆ ಹಾಗು ಜಿಗುಪ್ಸೆಯನ್ನು ಉಂಟುಮಾಡಿದ ಅವಿಷ್ಕಾರಗಳಲ್ಲಿ ನ್ಯೂಕ್ಲಿಯರ್ ಬಾಂಬ್ ಕೂಡ ಒಂದು. ನ್ಯೂಕ್ಲಿಯರ್ ಬಾಂಬ್ಗಳ ಜನಕರಲ್ಲಿ ಒಬ್ಬನಾದ ಅಮೇರಿಕಾದ ವಿಜ್ಞಾನಿ ಆಫೆನೇಮಾರ್ ಇದರಿಂದ ಸಂಭವಿಸಿದ ಹಾಗು ಮುಂದೆ ಸಂಭವಿಸಬಹುದಾದ ಅನಾಹುತಗಳನ್ನು ಗಮನಿಸಿ ವಿಶ್ವದ ಮುಂದಿನ ದಿನಗಳ ಉಳಿಗಾಲ ಒಬ್ಬರನೊಬ್ಬರು ಅರಿತು ಬಾಳುವುದರಲ್ಲಿ ಮಾತ್ರ ಇದೆ ಎನ್ನುತ್ತಾನೆ! ಅಂದು ಅವನ ಮಾತುಗಳಲ್ಲಿ ಹತಾಶೆ ಹಾಗು ನೋವುಗಳು ಒಟ್ಟೊಟಿಗೆ ಮೂಡುತ್ತವೆ. ತಾನೊಬ್ಬ ಇಂತಹ ಆವಿಷ್ಕಾರದ ಕಾರಣೀಕರ್ತ ಎಂಬುದನ್ನು ನೆನೆದು ಆತ ತಲೆತಗ್ಗಿಸಿ ಈ ಮಾತುಗಳನ್ನು ಹೇಳುತ್ತಾನೆ. ಇಂದು ಪ್ರಪಂಚದಾದ್ಯಂತ ಅಧಿಕೃತವಾಗಿ ಸುಮಾರು 23,000 ನ್ಯೂಕ್ಲಿಯರ್  ಬಾಂಬುಗಳಿವೆ ಎನ್ನಲಾಗುತ್ತದೆ. ಅನಧಿಕೃತವಾಗಿ ಇರುವ ಬಾಂಬುಗಳು ಅದೆಷ್ಟೋ?! ಒಟ್ಟಿನಲ್ಲಿ ಇಷ್ಟೆಲ್ಲಾ ಬಾಂಬುಗಳು ಒಮ್ಮಿಂದೊಮ್ಮೆಲೆ ಉಡೀಸ್ ಆದರೆ ಮಾನವ ಜೀವಿಗಳ ಸಂಪೂರ್ಣ ವಿನಾಶ ಎಂಬುದು ಕಟ್ಟಿಟ್ಟ ಬುತ್ತಿ. ಸರಕಾರಗಳೇನೋ ನೀತಿ ನಿಯಮಗಳನ್ನು ಪಾಲಿಸುತ್ತ ಇಂದು ಯುದ್ಧರಹಿತ ವಿಷಯಗಳಿಗೆ ಮಾತ್ರ ಪರಮಾಣು ಶಕ್ತಿಯನ್ನು ಬಳಸಬೇಕೆಂದು ವಾದಿಸುತ್ತವೆ. ಆದರೆ ಗನ್ನು ಬಾಂಬುಗಳನ್ನೇ ಅಪ್ಪ ಅಮ್ಮರೆಂದು ನಂಬಿ ಬಾಳುವ ಭಯೋತ್ಪಾದಕರಿಗೇನಾದರೂ ನ್ಯೂಕ್ಲಿಯರ್ ಬಾಂಬುಗಳ ಟ್ರಿಗರ್ ದೊರೆತರೆ ಕತೆ ಏನಾಗಬಹುದು? ಹೆಂಡ ಕುಡಿದ ಮಂಗನ ಕೈಗೆ AK 47 ನನ್ನು ಕೊಟ್ಟು ಕಾಡನ್ನು ಕಾಯುವಂತೆ ಹೇಳಿದಂತಾಗಬಹುದು. ಇಂತಹ ಕಂಠಕದ ದಿನಗಳು ಬಹಳ ದೂರವೇನಿಲ್ಲ. ಇಂದು ಅದೆಷ್ಟೋ ದೇಶಗಳಿಗೆ ಭಯೋತ್ಪಾದಕರ ವಿರುದ್ದ ಹೋರಾಡುವುದಕ್ಕಿಂತ ಅಂತವರ ಕೈಗೆ ಇಂತಹ ಸಣ್ಣ ಪುಟ್ಟ ಬಾಂಬುಗಳು ದೊರೆಯದಂತೆ ಕಾಪಾಡುವುದೇ ಹರಸಾಹಸವಾಗಿದೆ. ನ್ಯೂಕ್ಲಿಯರ್ ಬಾಂಬ್ ಎಂಬ ವಿನಾಶಕಾರಿಯನ್ನು ಇನ್ನು ತಡೆದು ನಿಲ್ಲಿಸಲು ಸಾಧ್ಯವೇ ಇಲ್ಲ ಎಂಬಂತಾಗಿದೆ. ಒಂದು ದೇಶ ಪರಮಾಣು ಸಶಕ್ತವಾದರೆ ಅನಿವಾರ್ಯವಾಗಿ ಪಕ್ಕದ ದೇಶವೂ ಆ ನಿಟ್ಟಿನಲ್ಲಿ ಚಿಂತಿಸಬೇಕಾಗುತ್ತದೆ. ದೇಶದ ಎಕಾನಮಿ ಅದೆಷ್ಟೇ ಪಾತಾಳ ಮುಟ್ಟಿರಲಿ, ಒಂದು ಪಕ್ಷ ಆ ದೇಶವೇನಾದರೂ ಪರಮಾಣು ಸಶಕ್ತ ಎಂದೆನಿಸಿದರೆ ಸಾಕು ಅದರ ಮೇಲೆ ದಬ್ಬಾಳಿಕೆ ನೆಡೆಸುವ ದೇಶಗಳೆಲ್ಲವೂ ಬಾಲ ಮುದುಡಲೇ ಬೇಕಾಗುತ್ತದೆ. ಆದ ಕಾರಣಕ್ಕೆ ಇಂದು ಉತ್ತರ ಕೊರಿಯಾ ಖಂಡಾಂತರ ಕ್ಷಿಪಣಿಯೊಂದನ್ನು ತಯಾರಿಸಿಕೊಂಡರೆ ನೀರಿನಿಂದ ಹೊರಬಿದ್ದ ಮೀನಿನಂತೆ ಅಮೇರಿಕ ಒದ್ದಾಡತೊಡಗಿರುವುದು. ಪ್ರಸ್ತುತ ಕಾಲದಲ್ಲಿ ರಾಷ್ಟ್ರರಕ್ಷಣೆಯ ನಿಟ್ಟಿನಲ್ಲಿ ಪರಮಾಣು ಶಕ್ತತೆ ಎಂಬುದು ಪ್ರತಿಯೊಂದು ದೇಶದ ಅತಿ ಅನಿವಾರ್ಯವಾರ್ಯತೆಯಲ್ಲೊಂದಾಗಿದೆ. ಆದರೆ ಹೆಂಡತಿಯ ರುಚಿಗೆಟ್ಟ ಮನೆಯೂಟದ ಮೇಲಿನ ಸಿಟ್ಟಿಗೆ ತನ್ನ ಕೆಳಗಿರುವ ನೌಕರನನ್ನು ವಜಾಗೊಳಿಸಿದಂತೆ ಯಾರದೋ ವರ್ಚಸ್ಸಿನ ಚರ್ಚೆಗೆ ಇನ್ಯಾರೋ ಸಾವಿರ ಜನ ನೆಲಸಮವಾಗುವುದು  ಅದ್ಯಾವ ಮಾನವ ಧರ್ಮ ?

Facebook ಕಾಮೆಂಟ್ಸ್

ಲೇಖಕರ ಕುರಿತು

Sujith Kumar

ಹವ್ಯಾಸಿ ಬರಹಗಾರ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!